ಚಂದ್ರಯಾನ ಬರೇ ಯಂತ್ರಗಳಿಗಲ್ಲ. ಇನ್ನೇನು ಭಾರತೀಯರೂ ಚಂದ್ರನ ಮೇಲೆ ಕಾಲಿಡಬಹುದು ಎನ್ನುವ ಭರವಸೆಯನ್ನು ಇಸ್ರೋ ವಿಜ್ಞಾನಿಗಳು ನೀಡುತ್ತಿರುವಾಗಲೇ, ಚಂದ್ರನ ಮೇಲೆ ಮಧುಚಂದ್ರ ನಡೆಸುವ ಕನಸುಗಳನ್ನೂ ಹಲವರು ಕಾಣುತ್ತಿದ್ದಾರೆ. ಈಗಾಗಲೇ ಭೂಮಿಯಾಚೆ ವ್ಯೋಮದಲ್ಲಿ ಪ್ರವಾಸ ನಡೆಸುವ ಕಂಪೆನಿಗಳೂ ಇವೆ. ಎರಡು ವರ್ಷಗಳ ಹಿಂದೆ ಲಕ್ಷಾಂತರ ಡಾಲರ್ ಹಣ ಕೊಟ್ಟು ಶ್ರೀಮಂತನೊಬ್ಬ ವ್ಯೋಮ ಪ್ರವಾಸ ಮಾಡಿ ಮರಳಿ ಬಂದದ್ದು ಸುದ್ದಿಯಾಗಿತ್ತು. ವ್ಯೋಮ ಸುತ್ತಿದ ಮೇಲೆ ಚಂದ್ರನನ್ನು ತಲುಪಲು ಇನ್ನೆಷ್ಟು ದೂರ, ಅಲ್ಲವೇ!  ಆದರೆ ಒಂದೇ ಸಮಸ್ಯೆ. ದೂರದಿಂದ ಸುಂದರವಾಗಿ ಕಾಣುವ ಚಂದ್ರನ ಮೇಲೆ ಕುಡಿಯಲು ನೀರೂ ಇಲ್ಲ, ಉಸಿರಾಡಲು ಗಾಳಿಯೂ ಇಲ್ಲ. ಇವೆರಡೂ ಇಲ್ಲದಿದ್ದರೆ ಬದುಕುವುದು ಹೇಗೆ? ಸದಾ ಬೆನ್ನ ಮೇಲೆ ಆಕ್ಸಿಜನ್ ಸಿಲಿಂಡರ್ ಹೊತ್ತುಕೊಂಡೇ ತಿರುಗುವುದೆಂದಾದರೆ ಮಧುಚಂದ್ರ ಸಾಧ್ಯವಾಗುವುದಾದರೂ ಹೇಗೆ? ಎಂದಿರಾ. ತಾಳಿ. ನೇಚರ್ ನ್ಯೂಸ್ನಲ್ಲಿ ಪ್ರಕಟವಾದ ಸುದ್ದಿಯೊಂದರ ಪ್ರಕಾರ ಚಂದ್ರವಾಸಿಗಳು ಉಸಿರುಗಟ್ಟದಂತೆ ಕಾಯುವ ತಂತ್ರಜ್ಞಾನ ಶೀ್ರದಲ್ಲೇ ದೊರೆಯಲಿದೆ. ಚಂದ್ರಶಿಲೆಗಳಿಂದಲೇ ಆಕ್ಸಿಜನ್ ಉತ್ಪಾದಿಸುವ ತಂತ್ರವನ್ನು ವಿಜ್ಞಾನಿಗಳು ರೂಪಿಸಿದ್ದಾರೆ. ಒಂದೆರಡು ಪುಟ್ಟ ಬ್ಯಾಟರಿಗಳನ್ನು ಬಳಸಿ ಚಂದ್ರಶಿಲೆಯಿಂದ ಆಕ್ಸಿಜನ್ ಖನಿಸುವ ಕನಸನ್ನು ಇಂಗ್ಲೆಂಡಿನ ವಿಜ್ಞಾನಿಗಳು ಕಂಡಿದ್ದಾರೆ.

ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ರಸಾಯನವಿಜ್ಞಾನಿ ಡೆರಿಕ್ ಫ್ರೇ ಮತ್ತು ಸಂಗಡಿಗರು ಚಂದ್ರಶಿಲೆಯಿಂದ ಆಕ್ಸಿಜನ್ ಬೇರ್ಪಡಿಸುವ ಸುಲಭ ವಿಧಾನವನ್ನು ರೂಪಿಸಿದ್ದಾರಂತೆ. ಅಮೆರಿಕೆಯ ವ್ಯೋಮ ಸಂಸ್ಥೆ ನಾಸಾ ರಾಕೆಟ್ ಉಡ್ಡಯಣದ ಶತಮಾನೋತ್ಸವದ ಅಂಗವಾಗಿ ನಾಲ್ಕು ವರ್ಷಗಳ ಹಿಂದೆ ಒಂದು ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿತು. ಚಂದ್ರಶಿಲೆಯಿಂದ ಎಂಟು ಗಂಟೆಗಳ ಅವಧಿಯೊಳಗೆ ಐದು ಕಿಲೋಗ್ರಾಂ ಆಕ್ಸಿಜನ್ ಪ್ರತ್ಯೇಕಿಸುವುದೇ ಈ ಸ್ಪರ್ಧೆಯ ಉದ್ದೇಶ. ಗೆದ್ದವರಿಗೆ ಎರಡೂವರೆ ಲಕ್ಷ ಅಮೆರಿಕನ್ ಡಾಲರ್ಗಳ ಬಹುಮಾನವನ್ನು ನೀಡುವುದಾಗಿಯೂ ಅದು ೋಷಿಸಿತ್ತು.  ಅದೇ ಸಮಯದಲ್ಲಿ ಲೋಹದ ಆಕ್ಸೈಡ್ಗಳಿಂದ ಆಕ್ಸಿಜನ್ ಬೇರ್ಪಡಿಸಿ, ಲೋಹವನ್ನು ಶುದ್ಧೀಕರಿಸುವ ಸುಲಭ ಉಪಾಯವನ್ನು ಡೆರಿಕ್ ಫ್ರೇ ಮತ್ತು ಸಂಗಡಿಗರು ರೂಪಿಸುತ್ತಿದ್ದರು. ಅದಕ್ಕಾಗಿ ತಾವು ಬಳಸುತ್ತಿದ್ದ ವಿಧಾನವನ್ನೇ ತುಸು ಮಾರ್ಪಡಿಸಿ ನಾಸಾದ ಈ ಬಹುಮಾನವನ್ನು ಗೆಲ್ಲಬಹುದೇ ಎಂದು ಆಲೋಚಿಸಿದ ಫ್ರೇ ತಂಡ ಚಂದ್ರಶಿಲೆಯಿಂದ ಆಕ್ಸಿಜನ್ ಬೇರ್ಪಡಿಸುವ ಸಾಹಸ ಮಾಡಿದೆ.

ಮಣ್ಣು ಎಂದರೆ ಮತ್ತೇನಲ್ಲ. ಅಲ್ಯುಮಿನಿಯಂ ಲೋಹದ ಆಕ್ಸೈಡ್. ಮಣ್ಣಾಗಿ ಉದುರುವ ಕಲ್ಲೂ ಅಷ್ಟೆ. ಕ್ಯಾಲ್ಶಿಯಂ, ಸಿಲಿಕಾ, ಅಲ್ಯುಮಿನಿಯಂ, ಕಬ್ಬಿಣ, ಮ್ಯಾಂಗನೀಸ್ ಇತ್ಯಾದಿ ಲೋಹಗಳ ಆಕ್ಸೈಡ್ಗಳ ಮಿಶ್ರಣ. ಲೋಹದ ಜೊತೆಗೆ ಆಕ್ಸಿಜನ್ ಕೂಡಿಕೊಂಡು ಉಂಟಾದ ಸಂಯುಕ್ತವನ್ನೇ ಆಕ್ಸೈಡ್ ಎನ್ನುತ್ತೀವಷ್ಟೆ. ಚಂದ್ರಶಿಲೆಯ ಸ್ವರೂಪವೂ ಅಷ್ಟೇ. ಆದರೆ ಅದರಲ್ಲಿ ಉಳಿದೆಲ್ಲ ಲೋಹಗಳಿಗಿಂತಲೂ ಕ್ಯಾಲ್ಶಿಯಂ ಪ್ರಮುಖವಾಗಿರುತ್ತದೆ.  ಆದ್ದರಿಂದ ಇಲ್ಲಿನ ಪ್ರಯೋಗಶಾಲೆಗಳಲ್ಲಿ ಬಳಸುವ ಉಪಾಯಗಳಿಂದ ಚಂದ್ರನ ಕಲ್ಲನ್ನೂ ಶಿಲಗೊಳಿಸಿ, ಆಕ್ಸಿಜನ್ ಬೇರ್ಪಡಿಸಬಹುದು ಎನ್ನುವುದು ವಿಜ್ಞಾನಿಗಳ ಉಪಾಯ.

ಲೋಹದ ಆಕ್ಸೈಡುಗಳಿಂದ ಆಕ್ಸಿಜನ್ ಬೇರ್ಪಡಿಸಲು ಇಲೆಕ್ಟ್ರಾಲಿಸಿಸ್ ಎನ್ನುವ ತಂತ್ರವನ್ನು ಬಳಸುತ್ತಾರೆ. ಚಿನ್ನದ ಅಂಗಡಿಯಲ್ಲಿ ಆಭರಣಗಳಿಗೆ ಚಿನ್ನದ ಮೆರುಗು ನೀಡಲು ಬಳಸುವುದೂ ಇದೇ ತಂತ್ರವನ್ನು. ವಿದ್ಯುತ್ ಹರಿಯಬಲ್ಲ ದ್ರವದಲ್ಲಿ ಎರಡು ವಿದ್ಯುತ್ ಧ್ರುವಗಳನ್ನು ಅದ್ದಿ, ವಿದ್ಯುತ್ ಹರಿಯಬಿಟ್ಟರೆ, ದ್ರವದಲ್ಲಿರುವ ಧಾತುಗಳು ಬೇರ್ಪಟ್ಟು ಧ್ರುವಗಳಲ್ಲಿ ಶೇಖರಗೊಳ್ಳುತ್ತವೆ. ಉದಾಹರಣೆಗೆ, ನೀರಿನೊಳಗೆ ಇದೇ ರೀತಿ ವಿದ್ಯುತ್ ಹರಿಬಿಟ್ಟರೆ, ನೀರು ಒಡೆದು ಆಕ್ಸಿಜನ್ ಮತ್ತು ಹೈಡ್ರೊಜನ್ ಬೇರ್ಪಡುತ್ತವೆ. ಒಂದು ಧ್ರುವದಲ್ಲಿ ಆಕ್ಸಿಜನ್, ಮತ್ತೊಂದು ಧ್ರುವದಲ್ಲಿ ಹೈಡ್ರೊಜನ್ ಶೇಖರಗೊಳ್ಳುತ್ತವೆ. ಆದರೆ ಶುದ್ಧನೀರಿನಲ್ಲಿ ವಿದ್ಯುತ್ ಹರಿಯುವುದು ಕಷ್ಟವಾದ್ದರಿಂದ, ನೀರಿಗೆ ಉಪ್ಪು ಬೆರೆಸುತ್ತಾರೆ. ಡೆರೆಕ್ ಫ್ರೇಯವರು ಇದೇ ಬಗೆಯಲ್ಲಿ ಕ್ಯಾಲ್ಶಿಯಂ ಕ್ಲೋರೈಡ್ ಲವಣವನ್ನು ಕರಗಿಸಿ, ಆ ದ್ರಾವಣದಲ್ಲಿ ಚಂದ್ರಶಿಲೆಯನ್ನೇ ಒಂದು ಧ್ರುವವನ್ನಾಗಿಯೂ, ಕಾರ್ಬನ್ (ಇಂಗಾಲ)ವನ್ನು ಮತ್ತೊಂದು ಧ್ರುವವನ್ನಾಗಿಯೂ ಬಳಸಿದ್ದಾರೆ. ಚಂದ್ರಶಿಲೆಯಲ್ಲಿರುವ ಲೋಹದ ಆಕ್ಸೈಡ್ಗಳು ವಿಭಜಿಸಿ ಹುಟ್ಟಿದ ಆಕ್ಸಿಜನ್ ಇಂಗಾಲವಿರುವ ಧ್ರುವದಲ್ಲಿ ಶೇಖರಗೊಳ್ಳುತ್ತದೆ.

ಇಷ್ಟು ಸುಲಭೋಪಾಯ ಯಾರಿಗೂ ಹೊಳೆಯಲಿಲ್ಲವೇಕೆ ಎಂದಿರಾ? ಇದು ಸುಲಭವೇನಲ್ಲ. ಏಕೆಂದರೆ ಕ್ಯಾಲ್ಶಿಯಂ ಕ್ಲೋರೈಡ್ ದ್ರವವಾಗಬೇಕಾದರೆ ಅದನ್ನು ಸುಮಾರು 800 ಡಿಗ್ರಿ ಸೆಲ್ಶಿಯಸ್ ಉಷ್ಣತೆಗೆ ಕಾಯಿಸಬೇಕು. ಕಲ್ಲೂ ಕರಗುವ ಆ ಉಷ್ಣತೆಯಲ್ಲಿ ಕಾರ್ಬನ್ನ ಜೊತೆಗೆ ಶಿಲೆಯಿಂದ ಬೇರ್ಪಟ್ಟ ಆಕ್ಸಿಜನ್ ಕೂಡಿಕೊಂಡು ಜೀವಸೆಲೆಯಾದ ಆಕ್ಸಿಜನ್ಗೆ ಬದಲಾಗಿ ಕಾರ್ಬನ್ ಡಯಾಕ್ಸೈಡ್ ಉತ್ಪತ್ತಿಯಾಗಬಹುದು. ಹೀಗಾಗಿ ಕಾರ್ಬನ್ನಂತೆ ಆಕ್ಸಿಜನ್ ಜೊತೆಗೆ ವರ್ತಿಸದಂತಹ ಕಸ್ಥಿರಕಿ ಧ್ರುವದ ಅವಶ್ಯಕತೆ ಇತ್ತು.  ಸಾಮಾನ್ಯವಾಗಿ ವಿದ್ಯುತ್ ವಾಹಕವಲ್ಲದ ಕ್ಯಾಲ್ಶಿಯಂ ರುಥನೇಟ್ಗೆ ತುಸು ಕ್ಯಾಲ್ಶಿಯಂ ಟೈಟನೇಟ್ ಬೆರೆಸಿದರೆ ಅದು ವಾಹಕವಾಗಿ ಪರಿಣಮಿಸುವುದನ್ನು ಫ್ರೇ ಕಂಡಿದ್ದರು. ಆಕ್ಸಿಜನ್ ಜೊತೆಗೆ ಈ ಮಿಶ್ರಣ ವರ್ತಿಸುವುದಿಲ್ಲವಾದ್ದರಿಂದ ಕಾರ್ಬನ್ನ ಬದಲಿಗೆ ಇದನ್ನೇ ಧ್ರುವವನ್ನಾಗಿ ಬಳಸಿದರೆ ಹೇಗೆ ಎನ್ನಿಸಿತು. ಇದನ್ನು ಬಳಸಿದಾಗ ಚಂದ್ರಶಿಲೆಯಿಂದ ಹುಟ್ಟಿದ ಆಕ್ಸಿಜನ್ ಅಷ್ಟೂ ಆ ಧ್ರುವದಲ್ಲಿ ಶೇಖರಣೆಯಾಯಿತು. ಒಂದು ವಾರದ ಕಾಲ ಈ ವ್ಯವಸ್ಥೆ ಕೆಲಸ ಮಾಡಿದ ಮೇಲೂ ಈ ಧ್ರುವ ಕಿಂಚಿತ್ತೂ ಕೊಂಕಿರಲಿಲ್ಲ. ವರ್ಷಗಳ ಕಾಲ ಅದು ಕೆಲಸ ಮಾಡಿದರೂ ಒಂದೆರಡು ಸೆಂಟಿಮೀಟರಿನಷ್ಟು ಮಾತ್ರ ನಷ್ಟವಾದೀತು ಎಂದು ಫ್ರೇ ಲೆಕ್ಕ ಹಾಕಿದ್ದಾರೆ. ಅಂದರೆ, ನಷ್ಟವಾಗುವುದು ಚಂದ್ರಶಿಲೆಯಷ್ಟೆ. ಇನ್ನೇನಲ್ಲ!

ಒಂದು ಮೀಟರು ಎತ್ತರದ ಇಂತಹುದೊಂದು ವ್ಯವಸ್ಥೆಯನ್ನು ಜೋಡಿಸಿದರೆ ಮೂರು ಟನ್ ಚಂದ್ರಶಿಲೆಯನ್ನು ಕರಗಿಸಿ ಒಂದು ಟನ್ ಆಕ್ಸಿಜನ್ ಉತ್ಪಾದಿಸಬಹುದು ಎನ್ನುತ್ತಾರೆ ಫ್ರೇ. ಚಂದ್ರನ ಮೇಲೆ ಈ ವ್ಯವಸ್ಥೆಯನ್ನು ಬಿಸಿ ಮಾಡುವುದೂ ಸುಲಭ. ಅಲ್ಲಿ ಇದನ್ನು ಬಿಸಿಮಾಡಲು ಕಡಿಮೆ ವಿದ್ಯುತ್ ಸಾಕು. ಒಂದು ಬಕೆಟ್ ನೀರು ಬಿಸಿಮಾಡುವಷ್ಟು ವಿದ್ಯುತ್ ಬಳಸಿ ಚಂದ್ರಶಿಲೆಯನ್ನು ಕರಗಿಸಬಹುದು. ಬಿಸಿಯಾದ ಚಂದ್ರಶಿಲೆ ತಣ್ಣಗಾಗದಂತೆ ಉಷ್ಣರೋಧಕ ಹೊದಿಕೆಯನ್ನು ಹೊದಿಸಿದರೆ ಸಾಕು. ಇಷ್ಟು ಪ್ರಮಾಣದ ಸೌರವಿದ್ಯುತ್ ತಯಾರಿಕೆ ಚಂದ್ರನ ಮೇಲೆ ಕಷ್ಟವಲ್ಲ ಎನ್ನುತ್ತಾರೆ ಫ್ರೇ. ಅರ್ಥಾತ್, ಇಂತಹುದೊಂದು ವ್ಯವಸ್ಥೆಯನ್ನು ಸ್ಥಾಪಿಸಿ, ಅದರಿಂದ ಆಕ್ಸಿಜನ್ ತಯಾರಿಸಿ ಬದುಕಬಹುದು ಎನ್ನುವುದು ಅವರ ಕನಸು.