ಸಂಗೀತ ಕ್ಷೇತ್ರದಲ್ಲಿ ಸಂಗೀತಗಾರರಿಗೆ ಸಿಗುವ ಪ್ರಾಮುಖ್ಯತೆಯಲ್ಲಿ ಸಂಗೀತ ವಾದ್ಯಗಳನ್ನು ತಯಾರಿಸುವವರಿಗೆ ಪಾಲು ಸಿಗಬೇಕಾದುದು ನ್ಯಾಯವಾದುದೇ. ಅದರಲ್ಲೂ ಸಂಪ್ರದಾಯ ಶುದ್ಧವಾದ ರೀತಿಯಲ್ಲಿ ವಾದ್ಯಗಳನ್ನು ತಯಾರಿಸುವುದೂ ಒಂದು ಮುಖ್ಯ ಕಲೆಯೇ. ಈ ಕಲಾ ಪ್ರಕಾರದಲ್ಲಿ ವೀಣೆಯ ತಯಾರಕರಾಗಿ ಒಳ್ಳೆಯ ಹೆಸರು ಗಳಿಸಿರುವವರು ಚಂದ್ರಶೇಖರಾಚಾರ್.

೧೯೨೮ ರಲ್ಲಿ ಜನಿಸಿದ ಚಂದ್ರಶೇಖರಾಚಾರ್ ಅವರ ತಂದೆ ಪರಮೇಶ್ವರಾಚಾರ್ ಅವರೇ ಮಗನಿಗೆ ಈ ವಾದ್ಯ ತಯಾರಿಕೆಯಲ್ಲಿ ಶಿಕ್ಷಣ ನೀಡಿದ ಗುರುಗಳು. ಸುಪ್ರಸಿದ್ಧ ವೈಣಿಕ ಪರಂಪರೆಯ ಶೇಷಣ್ಣ – ಸುಬ್ಬಣನವರ ಮನೆತನದ ಎಲ್ಲಾ ವೀಣೆಗಳೂ ರೂಪತಳೆದದ್ದೇ ಇವರ ಗೃಹದಲ್ಲಿ, ಚಂದ್ರಶೇಖರಾಚಾರ್ ಆರ್. ಎಸ್. ಕೇಶವಮೂರ್ತಿಯವರಲ್ಲಿ ಅಭ್ಯಾಸ ಮಾಡಿ ವೀಣಾವಾದನದಲ್ಲೂ ಪರಿಣತಿ ಪಡೆದವರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ವೀಣೆಗಳು ಇವರಿಂದ ನಿರ್ಮಾಣವಾಗಿ ದೇಶದಾದ್ಯಂತ ಉಪಯೋಗಿಸಲ್ಪಡುತ್ತಿವೆ. ಇವರು ಮೊಟ್ಟಮೊದಲ ಬಾರಿಗೆ ತಯಾರಿಸಿದ ೨೪ ತಂತಿಗಳ “ಘೋಷವತಿ” ವೀಣೆಯ ಇವರ ಕಲಾತ್ಮಕತೆಗೆ ನೈಪುಣ್ಯಕ್ಕೆ ಸಾಕ್ಷಿಯಾಗಿದೆ.

“ವೀಣಾಶಿಲ್ಪಿ” “ವೀಣಾಶಿಲ್ಪ ಮಾರ್ಕಾಂಡ” ಇತ್ಯಾದಿ ಪುರಸ್ಕಾರಗಳನ್ನು ಹೊಂದಿರುವ ಶ್ರೀಯುತರನ್ನು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯು ೧೯೯೮-೯೯ರ ಸಾಲಿನಲ್ಲಿ “ಕರ್ನಾಟಕ ಕಲಾಶ್ರೀ’ ಎಂದು ಸನ್ಮಾನಿಸಿದೆ.