ದೀಪಾವಳಿ!

ದೀಪಾವಳಿ ಬಂದರೆ ಯಾರಿಗೆ ತಾನೆ ಸಂತೋಷ ಆಗೊಲ್ಲ? ಅವತ್ತು ಆ ಹಳ್ಳಿಯ ಮಕ್ಕಳಿಗಂತೂ ಖುಷಿಯೋ ಖುಷಿ. ಅಪ್ಪ-ಅಮ್ಮಂದಿರನ್ನು ಪೀಡಿಸಿ ಕಾಡಿಸಿ ಬಾಣಾ ಬಿರುಸು ತಂದದ್ದೂ ತಂದದ್ದೇ; ಹಚ್ಚಿದ್ದೂ ಹಚ್ಚಿದೇ.

ಆ ಹಳ್ಳಿಯ ಒಂದು ರಸ್ತೆ. ಕತ್ತಲಾಗುತ್ತಿದ್ದಂತೆ ಎಲ್ಲೆಲ್ಲೂ ಬಣ್ಣಬಣ್ಣದ ಮತಾಪಿನ ಬೆಳಕು, ಸುರಸುರ ಬತ್ತಿ, ಹೂವಿನ ಕುಂಡಗಳು ಹಾರಿಸುತ್ತಿದ್ದ ಬೆಳಕಿನ ಹೂಗಳು. ಡಂ ಡಂ ಪಟಾಕಿ ಶಬ್ದ.

ಒಂದು ಕಡೆ ಐದಾರು ಚಿಕ್ಕ ಚಿಕ್ಕ ಹುಡುಗರು ಅಲ್ಲಲ್ಲಿ ನಿಂತು ಮತಾಪು ಹಚ್ಚುತ್ತಿದ್ದರು. ಅವರ ಪೈಕಿ ಎಂಟು ವರ್ಷದ ಒಬ್ಬ ಹುಡುಗ ಅವರನ್ನೆಲ್ಲ ಹತ್ತಿರ ಕರೆದ,

“ಬನ್ರೊ ಬನ್ರೊ… ನಿಮ್ಮ ಹತ್ತಿರ ಇರೋ ಮತಾಪುಗಳನ್ನೆಲ್ಲ ತನ್ನಿ ಗುಡ್ಡೆ ಹಾಕೋಣ. ಬೆಂಕಿ ಹಚ್ಚೋಣ. ಎಷ್ಟು ಬೆಳಕು ಬರುತ್ತೆ ಗೊತ್ತೆ!”

ಹುಡುಗರೆಲ್ಲ ಓಡಿ ಬಂದರು. ಅವನ ಸುತ್ತ ಸೇರಿದರು. ತಮ್ಮ ಮತಾಪುಗಳನ್ನು ಗುಡ್ಡೆ ಹಾಕಿದರು. ಹುಡುಗ ಸರ್ರಂತ ಒಂದು ಒಂದು ಮತಾಪು ಹಚ್ಚಿ ಅದಕ್ಕೆ ಬೆಂಕಿ ಇಟ್ಟ. ಭಗ್ಗೆಂದು ಹತ್ತಿಕೊಂಡಿತು. ಅಬ್ಬಾ! ರಸ್ತೆ ತುಂಬಾ ಕೆಂಪು ಬಣ್ಣದ ಬೆಳಕು. ಹುಡುಗರಿಗೆ ಬಲು ಸಂತೋಷ. ಕುಣಿದು ಕುಪ್ಪಳಿಸಿ ಕೇಕೆ ಹಾಕಿ ನಕ್ಕಿದ್ದೂ ನಕ್ಕಿದ್ದೆ.

“ನೋಡಿದಿರಾ. ಎಲ್ಲರೂ ತಮ್ಮ ತಮ್ಮ ಮತಾಪು ಒಟ್ಟಿಗೆ ಸೇರಿದರೆ ಎಷ್ಟು ಬೆಳಕು!” ಎಂದ ಆ ಹುಡುಗ. ” ಹೌದು ಹೌದು” ಎಂದರು ಹುಡುಗರೆಲ್ಲ.

ಆದರೆ ಆ ಗದ್ದಲದಲ್ಲಿ ಅವನ ಬಲ ಅಂಗೈ ಸುಟ್ಟು ಹೋಗಿತ್ತ. ಒಬ್ಬ ಹುಡುಗ ಅದನ್ನು ನೋಡಿದ. ” ಅಯ್ಯೋ ಅಯ್ಯೋ ನೋಡ್ರೋ ಇವನ ಅಂಗೈ ಸುಟ್ಟು ಹೋಗಿದೆ. ನಡೀರಿ ಇವರಮ್ಮನ್ನ ಕರೆದುಕೊಂಡು ಬರೋಣ” ಎಂದು ಹೇಳಿದ. ಅವರೆಲ್ಲ ಎದ್ದು ಹೊರಡಲು ಸಿದ್ಧವಾದರು. ಆ ಹುಡುಗನೇ ಅವರನ್ನು ತಡೆದ.

“ಅಯ್ಯೋ ಬೆಪ್ಪುತಕ್ಕಡಿಗಳಾ, ಇದೇನು ಗಾಯ ಮಹಾ. ಒಂದೇ ದಿನದಲ್ಲಿ ವಾಸಿ ಆಗುತ್ತೆ. ಇಷ್ಟಕ್ಕೆಲ್ಲ ಅಮ್ಮನಿಗೆ ಯಾಕ್ರೊ ಹೇಳಬೇಕು? ಗಂಡು ಹುಡುಗರಾಗಿ ಇದಕ್ಕೆ ಹೆದರಬೇಕೆ? ಅದು ಹೇಡಿತನ, ಗಂಡಸುತನವಲ್ಲ. ಬನ್ನಿ ಬನ್ನಿ ಪಟಾಕಿ ಹಚ್ಚೋಣ” ಎಂದು ಮತ್ತೆ ಅವರ ಜೊತೇಲಿ ಬಾಣಾಬಿರುಸು ಬಿಡಲಾರಂಭಿಸಿದ.

ಕ್ರಾಂತಿವೀರ

ಅವನೇ ಕ್ರಾಂತಿವೀರ ಚಂದ್ರಶೇಖರ ಆಜಾದ್. ಮುಂದೆ ದೊಡ್ಡ ದೇಶಭಕ್ತನಾಗಿ ಬೆಳೆದು ನಿಂತವನು. ಆಗ ನಮ್ಮನ್ನು ಆಳುತ್ತಿದ್ದ ವಿದೇಶಿ ಶತ್ರುಗಳಾದ ಆಂಗ್ಲರನ್ನು ಸಿಂಹದಂತೆ ಹೆದರಿಸಿ, ಥರ ಥರ ನಡುಗುವಂತೆ ಮಾಡಿದವನು.

ಆ ಹಳ್ಳಿ ಯಾವುದು ಗೊತ್ತೆ?

ಭಾವರಾ ಎಂದು ಅದರ ಹೆಸರು. ಈಗ ಅದು ಮಧ್ಯಪ್ರದೇಶದಲ್ಲಿ ಇದೆ. ಅದರ ಸುತ್ತಲೂ ದಟ್ಟವಾದ ಕಾಡು. ಆ ಕಾಡಿನಲ್ಲಿ ಭಿಲ್ಲರು ಕಾಡುಜನ ವಾಸಿಸುತ್ತಿದ್ದರು. ಬಹಳ ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಅವರು ಬಿಲ್ಲು ಕಟ್ಟಿಬಾಣ ಬಿಡುವುದರಲ್ಲಿ ನಿಸ್ಸೀವರು. ಅವರಿಗೂ ಚಂದ್ರಶೇಖರನಿಗೂ ಅಚ್ಚುಮೆಚ್ಚಿನ ಸ್ನೇಹ. ಅವನಿಗೆ ಕಾಡಿನಿಂದ ಸಿಹಿಯಾದ ಜೇನುತುಪ್ಪ ರುಚಿಯಾದ ಹಣ್ಣು ಹಂಪಲು ತಂದು ಕೊಡುತ್ತಿದ್ದರು. ಅವನನ್ನು ಕಾಡಿನ ಒಳಕ್ಕೆ ಕರೆದುಕೊಂಡು ಹೋಗಿ ಗುರಿ ಇಟ್ಟು ಬಾಣ ಬಿಡುವುದನ್ನು ಕಲಿಸಿದರು. ದೊಡ್ಡ ದೊಡ್ಡ ಹುಲಿಗಳನ್ನು ಬೇಟೆಯಾಡಲು ಚಂದ್ರಶೇಖರ ಅವರ ಜೊತೆ ಹೋಗುತ್ತಿದ್ದ.

ಚಂದ್ರಶೇಖರನ ತಂದೆಯ ಹೆಸರು ಸೀತಾರಾಮ ತಿವಾರಿ. ತಾಯಿಯ ಹೆಸರು ಜಗರಾಣಿದೇವಿ. ಅವನು ಹುಟ್ಟಿದ್ದು ೧೯೦೬ ನೇ ಇಸವಿ ಜುಲೈ ೨೩ ರಂದು. ಅವರದು ಬಹಳ ಬಡ ಕುಟುಂಬ. ಸೀತಾರಾಮ ತಿವಾರಿ ಒಂದು ತೋಟದಲ್ಲಿ ಮಾಲಿಯಾಗಿ ಕೆಲಸ ಮಾಡುತ್ತಿದ್ದರು. ಬಹಳ ಪ್ರಾಮಾಣಿಕರು, ಸತ್ಯವಂತರು. ಅವರು ಯಾರ ಹತ್ತಿರವೂ ಸಾಲ ಮಾಡುತ್ತಿರಲಿಲ್ಲ. ಅನ್ಯಾಯ, ಅಸತ್ಯ, ಮೋಸ, ದ್ರೋಹ ಎಂದರೆ ಅವರಿಗೆ ಮಹಾ ಕೋಪ.

ಜಗರಾಣಿದೇವಿ ಸ್ವಲ್ಪವೂ ಓದು ಬರಹ ಬಲ್ಲವರಲ್ಲ. ಆಕೆಗೆ ದೇವರಲ್ಲಿ ಅಪಾರ ನಂಬಿಕೆ. ಬಡತನದಲ್ಲೂ ಅಚ್ಚುಕಟ್ಟಾಗಿ ಸಂಸಾರ ನಡೆಸುತ್ತಿದ್ದ ಗೃಹಿಣಿ ಆಕೆ.

ಕಾಶಿಗೆ

ಚಂದ್ರಶೇಖರ ಮನೆಗೆ ಸಹಾಯ ಮಾಡಬೇಕೆಂದು ಓದು ನಿಲ್ಲಿಸಿ ಕೆಲಸಕ್ಕೆ ಸೇರಿದ. ಇನ್ನೂ ಹೆಚ್ಚು ಸಂಪಾದಿಸಬೇಕು ಎಂದು ಮುಂಬಯಿಗೆ ಹೋದ. ಅಲ್ಲಿ ಹಡಗಿನ ಬಂದರುಗಳಲ್ಲಿ ಮೂಟೆ ಹೊರುವ ಕೂಲಿಯಾಗಿ ದುಡಿದ. ಕೂಲಿಗಳ ಜೊತೆಯಲ್ಲಿ ವಾಸ ಮಾಡಿದ. ಆದರೆ ಅವನಿಗೆ ಸಮಾಧಾನ ಸಿಗಲಿಲ್ಲ. ತಾನು ಶಾಲೆಗೆ ಹೋಗಬೇಕು, ಚೆನ್ನಾಗಿ ಓದಿ ದೊಡ್ಡ ಸಂಸ್ಕೃತ ವಿದ್ವಾಂಸ ಆಗಬೇಕು ಎನ್ನುವ ಆಸೆ ಇತ್ತು. ಅದಕ್ಕಾಗಿ ಮುಂಬಯಿ ತೊರೆದು ಕಾಶಿಗೆ ಹೋದ.

ಕಾಶಿ ಒಂದು ದೊಡ್ಡ ಪುಣ್ಯಯಕ್ಷೇತ್ರ. ಅಲ್ಲಿ ಗಂಗಾನದಿ ಹರಿಯುತ್ತದೆ. ಗಂಗಾನದಿಯ ದಡದ ಮೇಲೆ ವಿಶ್ವನಾಥನ ಪುರಾತನ ದೇವಸ್ಥಾನ ಇದೆ.

ಸಾವಿರಾರು ವರ್ಷಗಳಿಂದ ವಿದ್ಯಾರ್ಜನೆಗೆ ಪ್ರಸಿದ್ಧ ಕ್ಷೇತ್ರ. ಚಂದ್ರಶೇಖರ ಅಲ್ಲಿಗೆ ಬಂದು ಸಂಸ್ಕೃತ ಪಾಠ ಶಾಲೆಯಲ್ಲಿ ಸೇರಿ ವಿದ್ಯಾಭ್ಯಾಸ ಪ್ರಾರಂಭಿಸಿದ.

‘ಭಾರತ ಮಾತೆಯ ಸೇವೆ ಮಾಡಬೇಕು’

ಅದು ೧೯೨೧ ನೇ ಇಸವಿ. ಆಗ ನಮ್ಮ ದೇಶದಲ್ಲಿ ಸ್ವತಂತ್ರ್ಯ ಹೋರಾಟ ನಡೆಯುತ್ತಿತ್ತು. ಮಹಾತ್ಮ ಗಾಂಧಿ, ಮದನ ಮೋಹನ ಮಾಳವೀಯ, ಮೋತಿಲಾಲ್ ನೆಹರು, ಲಾಲಾ ಲಜಪತ್‌ರಾಯ್ ಮುಂತಾದ ದೊಡ್ಡ ದೊಡ್ಡವರು ನಮ್ಮ ಹೋರಾಟದ ನಾಯಕರು.

ಆ ಹೋರಾಟದ ಒಂದು ಅಂಗವಾಗಿ “ಅಸಹಕಾರ ಆಂದೋಲನ” ಪ್ರಾರಂಭವಾಯಿತು. ಅಸಹಕಾರ ಆಂದೋಲನ ಎಂದರೆ ಆಂಗ್ಲರ ಸರಕಾರದೊಂದಿಗೆ ಸಹಕಾರ ಮಾಡದೆ ಇರುವುದು. ಅವರು ನಡೆಸುತ್ತಿದ್ದ ಕೋರ್ಟು, ಕಛೇರಿ, ಶಾಲೆ, ಕಾಲೇಜುಗಳನ್ನು, ಬಹಿಷ್ಕರಿಸುವುದು. ಮೆರವಣಿಗೆ, ಸಭೆ, ಪ್ರದರ್ಶನ, ಹರತಾಳ ನಡೆಸಿ ಅವರ ಆಳ್ವಿಕೆಯನ್ನು ಪ್ರತಿಭಟಿಸುವುದು. ಆಂಗ್ಲರು ಭಾರತವನ್ನು ಬಿಟ್ಟು ಹೋಗಬೇಕೆಂದು ಬಲವಾಗಿ ಒತ್ತಾಯಿಸುವುದು.

ಗಂಗಾನದಿಯ ಸ್ನಾನ ಘಟ್ಟಗಳ ಮೇಲೆ ಈಡಾಡುತ್ತ ಚಂದ್ರಶೇಖರ ಯೋಚನೆ ಮಾಡಿದ: “ನಾನೂ ಆಂದಲೋನದಲ್ಲಿ ಸೇರಬೇಕು. ಆಂಗ್ಲರ ದಬ್ಬಾಳಿಕೆಯಿಂದ ತಾಯಿನಾಡನ್ನು ಬಿಡುಗಡೆ ಮಾಡಬೇಕು. ಭಾರತಮಾತೆಯ ಸೇವೆ ಮಾಡಬೇಕು.”

ಒಂದು ದಿನ

ಅವನೂ ಆಂದೋಲನದಲ್ಲಿ ಸೇರಿದ. ಒಂದು ದಿನ ಕಾಶಿಯಲ್ಲಿ ನಡೆಯುತ್ತಿದ್ದ ಒಂದು ಸ್ವಾತಂತ್ರ್ಯ ಹೋರಾಗಾರರ ಮೆರವಣಿಗೆ ಮೇಲೆ ಪೊಲೀಸಿನವರು ಲಾಠಿಛಾರ್ಜು ಮಾಡಿದರು. ತ್ರಿವರ್ಣಧ್ವಜ ಹಿಡಿದು ಮೆರವಣಿಗೆಯ ಮುಂಭಾಗದಲ್ಲಿ ಒಬ್ಬ ದಟ್ಟವರನ್ನಂತೂ ಒಬ್ಬ ಪೊಲೀಸ್ ಅಧಿಕಾರಿ ಸಿಕ್ಕಾಪಟ್ಟೆ ಹೊಡೆದು ಹಾಕಿದರು.

ಚಂದ್ರಶೇಖರ ದೂರದಿಂದ ಈ ದೃಶ್ಯವನ್ನು ನೋಡಿದ. ಮೈ ಎಲ್ಲ ಬೆಂಕಿ ಆಯಿತು. ಆ ಪೊಲೀಸ್ ಅಧಿಕಾರಿಗೆ ಗುರಿ ಇಟ್ಟು ಬಂದು ಕಲ್ಲು ಬೀಸಿದ. ಅದು ರೊಂಯ್ ಅಂತ ಬಂದು ಠಪ್ಪಂತ ಪೊಲೀಸ್ ಅಧಿಕಾರಿ ಹಣೆಗೆ ಬಡಿಯಿತು. ಪೊಲೀಸರು ಅವನನ್ನು ಅಟ್ಟಿಸಿಕೊಂಡು ಬಂದರು. ಅವನು ಅಲ್ಲಿಂದ ಒಂದೇ ಓಟ! ಪೋಲೀಸರಿಗೆ ಚೆನ್ನಾಗಿ ಸುಸ್ತು ಹೊಡೆಸಿದ ಮೇಲೆ ಸಿಕ್ಕಿ ಬಿದ್ದ.

‘ಆಜಾದ್’

ಮರುದಿನ ಅವನನ್ನು ನ್ಯಾಯಾಲಯದಲ್ಲಿ ಹಾಜರು ಮಾಡಿದರು. ಅಲ್ಲಿನ ನ್ಯಾಯಾಧೀಶ ಬಹಳ ಕೆಟ್ಟವನು. ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲ ಉತ್ರ ಶಿಕ್ಷೆ ವಿಧಿಸುತ್ತಿದ್ದ. ಅವನು ಚಂದ್ರಶೇಖರನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅಬ್ಬರಿಸಿದ. “ಹೇಳೋ, ಏನೋ ನಿನ್ನ ಹೆಸರು?”

ಅವನನ್ನು ನೋಡಿಯೇ ಚಂದ್ರಶೇಖರನಿಗೆ ಸಿಟ್ಟು ಬಂತು. ಆಂಗ್ಲರು ಎಸೆಯುವ ರೊಟ್ಟಿಯ ತುಣುಕಿಗಾಗಿ ತನ್ನನ್ನೇ ಮಾರಿಕೊಂಡಿರುವ ಈ ಗುಲಾಮನು ದೇಶ ದ್ರೋಹಿ, ಅವನಿಗೆ ಸ್ವಲ್ಪವೂ ಗೌರವ ಕೊಡಬಾರದು ಎಂದು ನಿರ್ಧರಿಸಿಬಿಟ್ಟ.

“ಹೊಂ ನನ್ನ ಹೆಸರು ಆಜಾದ್!” ಎಂದು ಗಟ್ಟಿಯಾಗಿ ಗರ್ಜಿಸಿದ.

ಅವನ ಹೆಸರು ಅಜಾದ್ ಎಂದು ಅಲ್ಲ. ಅಜಾದ್ ಎಂದರೆ “ಸ್ವತಂತ್ರ” ಎಂದು ಅರ್ಥ. ನಾನು ಯಾರಿಗೂ ಗುಲಾಮನಲ್ಲ ಎಂದು ಅರ್ಥ. ನ್ಯಾಯಾಧೀಶ ಇನ್ನೊಂದು ಪ್ರಶ್ನೆ ಕೇಳಿದ:

“ನಿನ್ನಪ್ಪನ ಹೆಸರು?”

“ಸ್ವಾಧೀನತೆ”

“ನಿನ್ನ ವಿಳಾಸ?”

“ನನ್ನ ವಿಳಾಸ ಸೆರೆಮನೆ!”

ಒಂದೊಂದು ಉತ್ತರವೂ ಗುಂಡು ಹೊಡೆದಂತೆ ಹೊರಬಂತು. ಆ ದುಷ್ಟ ನ್ಯಾಯಾಧೀಶನಿಗೆ ದೆಟ್ಟ ಉತ್ತರ ಕೊಟ್ಟ ಪುಟ್ಟ ಬಾಲಕನನ್ನು ನೋಡಿ ಅಲ್ಲಿದ್ದವರೆಲ್ಲ ಖುಷಿಪಟ್ಟರು. ಅಬ್ಬ, ಎಂಥ ಎದೆಗಾರ ಹುಡುಗ ಎಂದು ಮನಸಾರೆಕೊಂಡಾಡಿದರು. ಅವತ್ತಿನಂದ ಅವನ ಹೆಸರು “ಚಂದ್ರಶೇಖರ ಆಜಾದ್” ಆಗಿ ಹೋಯಿತು.

 

"ನನ್ನ ಹೆಸರು ಅಜಾದ್ (ಸ್ವಾತಂತ್ರ್ಯ)"

ಛಡಿ ಏಟು

 

ನ್ಯಾಯಾಧೀಶ ಆಜಾದನಿಗೆ ಏನು ಶಿಕ್ಷೆ ಕೊಟ್ಟ ಗೊತ್ತೆ? ಹನ್ನೆರಡು ಛಡಿ ಏಟು! ರಾಕ್ಷಸನ ಹಾಗೆ ಬೆಳೆದಿದ್ದ ಒಬ್ಬ, ಭಯಂಕರ ಆಳಿನಿಂದ ನೀರಿನಲ್ಲಿ ನೆನೆಸಿದ ಬೆತ್ತದಿಂದ ಏಟುಗಳು!

ಆಜಾದನಿಗೆ ಕಾಶಿಯ ಸೆಂಟ್ರಲ್ ಸೆರೆಮನೆಯಲ್ಲಿ ಹನ್ನೆರಡು ಛಡಿ ಏಟು ಕೊಟ್ಟರು. ಒಂದೊಂದು ಏಟು ಬಿದ್ದಾಗಲೂ ಪ್ರಾಣ ಹೋಗುವಷ್ಟು ನೋವು. ಚರ್ಮ ಕಿತ್ತು ಬರುತ್ತಿತ್ತು. ರಕ್ತ ಹರಿಯುತ್ತಿತ್ತು. ಅಜಾದ್ ಮಾತ್ರ ಒಂದೊಂದು ಏಟಿಗೂ “ವಂದೇ ಮಾತರಂ” “ಭಾರತ ಮಾತೆಗೆ ಜಯವಾಗಲಿ” “ಮಹಾತ್ಮ ಗಾಂಧಿಗೆ ಜಯವಾಗಲಿ” ಎಂದು ಗಟ್ಟಿಯಾಗಿ ಘೋಷಿಸುತ್ತ ನೋವನ್ನು ಸಹಿಸಿಕೊಂಡ. ಅವನ ಧೈರ್ಯ, ದೇಶಭಕ್ತಿ, ಮನೋಬಲ ಕಂಡು ಹೆಮ್ಮೆ ತಾಳಿದ ಕಾಶಿಯ ಜನ ಅವನ್ನು ಸನ್ಮಾನಿಸಿದರು. ಅವತ್ತಿನಿಂದ ದಿನೇ ದಿನೇ ಆಜಾದ್ ದೊಡ್ಡ ಸ್ವಾತಂತ್ರ್ಯ ಯೋಧನಾಗಿ ಬೆಳೆಯುತ್ತಾ ಹೋದ.

ಪೊಲೀಸ್ ಠಾಣೆಗೆ ಭಿತ್ತಿಪತ್ರ

ಆಜಾದ್ ಬಲು ಚೂಟಿ ಹುಡುಗ. ಅವನನ್ನು “ಪಾದರಸ” ಎಂದು ಕರೆಯುತ್ತಿದ್ದರು. ಒಂದು ಸಲ ಸರಕಾರ ವಿರೋಧಿ ಭಿತ್ತಿಪತ್ರ ಒಂದನ್ನು ಕಾಶಿಯಲ್ಲೆಲ್ಲ ಗೋಡೆಗಳ ಮೇಲೆ ಹಚ್ಚುವ ಕೆಲಸ ಬಿತ್ತು. “ನಾನು ಬೇಕಾದರೆ ಅದನ್ನು ಪೊಲೀಸ್ ಠಾಣೆಯ ಮೇಲೆ ಹಚ್ಚಿಬರುತ್ತೇನೆ” ಎಂದ ಆಜಾದ್. ಅದನ್ನು ಕೇಳಿ ಎಲ್ಲರಿಗೂ ಕುತೋಹಲ ಆಯಿತು.

ಆಜಾದ್ ಒಂದು ಭಿತ್ತಿಪತ್ರ ತೆಗೆದುಕೊಂಡು ಅದರ ಎರಡೂ ಕಡೆ ಅಂಟು ಹಚ್ಚಿ ತನ್ನ ಬೆನ್ನಿಗೆ ಅದನ್ನು ಅಂಟಿಸಿಕೊಂಡ. ಪೊಲೀಸ್ ಠಾಣೆಗೆ ಹೋದ. ಒಂದು ಕಂಬದ ಬಳಿ ಒಬ್ಬ ಪೊಲೀಸ್ ಪೇದೆ ನಿಂತಿದ್ದ. ಆಜಾದ್ ಅವನ ಜೊತೆಯಲ್ಲಿ ಕುಶಲ ಸಂಭಾಷಣೆ ನಡೆಸುತ್ತಾ ತನ್ನ ಬೆನ್ನನ್ನು ಕಂಬಕ್ಕೆ ಉಜ್ಜುತ್ತಾ ನಿಂತುಕೊಂಡ. ಭಿತ್ತಿಪತ್ರ ಕಂಬಕ್ಕೆ ಅಂಟಿಕೊಂಡಿತು. ಅಜಾದ್ ಪೊಲೀಸ್ ಪೇದೆಗೆ ನಮಸ್ಕಾರ ಹೇಳಿ ಅಲ್ಲಿಂದ ಕಂಬಿಕಿತ್ತ. ರಸ್ತೆಯಲ್ಲಿ ಹೋಗುತ್ತಿದ್ದ ಜನ ನೋಡುತ್ತಾರೆ. ಪೊಲೀಸ್ ಠಾಣೆಯ ಮೇಲೆ ಭಿತ್ತಿ ಪತ್ರ ಆಶ್ಚರ್ಯವೋ ಆಶ್ಚರ್ಯ.

ಆಜಾದ್ ಸ್ವಾಭಾವಿಕವಾಗಿ ಒಬ್ಬ ಧೀರ ಹೋರಾಟಗಾರ. ಅವನು ಪೃಥ್ವಿರಾಜ ರಾಣಾ ಪ್ರತಾಪ ಸಿಂಹ, ಶಿವಾಜಿ, ಗುರು ಗೋವಿಂದ ಸಿಂಹ, ಫ್ರಾನ್ಸ್ ನೆಪೋಲಿಯನ್, ಇಟಲಿ ದೇಶದ ಮ್ಯಾಜಿನಿ, ಗ್ಯಾರಿಬಾಲ್ಡಿ, ಇಂಗ್ಲೆಂಡಿನ ಕ್ರಾಮ್‌ವೆಲ್ಲರ ಹಾಗೆ ಹುಟ್ಟು ಸೈನಿಕ.

ಬಿಸ್ಮಿಲ್ಲರ ಶಿಷ್ಯ

ಅವನ ಹದಿನಾರನೆ ವಯಸ್ಸಿನ ವೇಳೆಗೆ ಅವನು ಕ್ರಾಂತಿಕಾರಿ ಸೈನಿಕನಾದ. ಆಗ ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿ ಎಂಬ ಕ್ರಾಂತಿಕಾರಿ ಸಂಸ್ಥೆ ಇತ್ತು. ಅದಕ್ಕೆ ರಾಮಪ್ರಸಾದ್ ಬಿಸ್ಮಿಲ್ ಎಂಬ ಒಬ್ಬ ಧೀರರು ನಾಯಕರು. ಆಜಾದ್ ಅವರ ಗುಂಪನ್ನು ಸೇರಿದ. ಕ್ರಾಂತಿ ಚಟುವಟಿಕೆಗಳನ್ನು ಹೇಗೆ ನಡೆಸುವುದು ಎಂಬುದನ್ನು ಕಲಿತ.

ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಗೆ ಬಂದೂಕು, ಪಿಸ್ತೂಲು, ಕಾಡತೂಸು ಮುಂತಾದವು ಬೇಕಾಗಿತ್ತು. ಅದಕ್ಕೆ ಹಣ ಎಲ್ಲಿಂದ ತರುವುದು? ಬಿಸ್ಮಿಲ್ಲರ ನೇತೃತ್ವದಲ್ಲಿ ಒಂಬತ್ತು ಜನರ ದಂಡು ಸಿದ್ಧವಾಯಿತು. ಅದರಲ್ಲಿ ಆಜಾದನೂ ಒಬ್ಬ.

೧೯೨೫ ನೇ ಇಸವಿ ಆಗಸ್ಟ್ ೯ ನೇ ತಾರೀಖು ಉತ್ತರಪ್ರದೇಶದ ರಾಜಧಾನಿ ಲಕ್ನೋ ಬಳಿಯ ಕಾಕೋರಿ ಎಂಬ ರೈಲು ನಿಲ್ದಾಣದ ಹತ್ತಿರ ರೈಲು ನಿಲ್ಲಿಸಿ ಅದರಲ್ಲಿ ರವಾನೆ ಆಗುತ್ತಿದ್ದ ಸರಕಾರಿ ಖಜಾನೆಯನ್ನು ಕ್ರಾಂತಿಕಾರಿಗಳು ಲೂಟಿ ಮಾಡಿದರು. ಆದರೆ ಪೊಲೀಸರು ಬೇಗ ಎಚ್ಚರಗೊಂಡು ಎಲ್ಲರನ್ನೂ ಬಂಧಿಸಿಬಿಟ್ಟರು. ಬಿಸ್ಮಿಲ್ಲರೂ ಸಿಕ್ಕಿಬಿದ್ದರು. ಪೊಲೀಸರು ತಿಪ್ಪರಲಾಗ ಹಾಕಿದರೂ ಹಿಡಿಯಲು ಆಗದೆ ಹೋದದ್ದು ಒಬನನ್ನೇ, ಅವನೇ ಚಂದ್ರಶೇಖರ ಆಜಾದ್.

ಸಂನ್ಯಾಸಿಯ ಹಾಗೆ, ಕೋಲಿಯ ಹಾಗೆ, ಸಾಹುಕಾರನ ಹಾಗೆ, ಡ್ರೈವರನ ಹಾಗೆ, ಕೊನೆಗೆ ಪೊಲೀಸರ ಹಾಗೆ ವೇಷ ಧರಿಸಿಕೊಂಡು ಪೊಲೀಸರಿಗೆ, ಗುಪ್ತಚಾರರಿಗೆ ಮಂಕುಬೂದಿ ಎರಚುತ್ತಾ ಆಜಾದ್ ತಪ್ಪಿಸಿಕೊಳ್ಳುತ್ತಿದ್ದ. ಲಕ್ನೋ, ಕಾನಪುರ, ಝಾನ್ಸಿ, ದಿಲ್ಲಿ, ಲಾಹೋರ್, ಕಾಶಿ ಮುಂತಾದ ಕಡೆಯಲೆಲ್ಲ ಓಡಾಡುತ್ತಿದ್ದ.

ಝಾನ್ಸಿಯಲ್ಲಿ ಆಜಾದ್

ಆಜಾದ್ ಝಾನ್ಸಿಯಲ್ಲಿ ತಲೆತಪ್ಪಿಸಿಕೊಂಸು ಇರುವಾಗ ಒಂದು ಮೋಟಾರ್ ಕಂಪನಿಯಲ್ಲಿ ಸೇರಿಕೊಂಡ. ಅವನಿಗೆ “ಡ್ರೈವಿಂಗ್ ಲೈಸೆನ್ಸ್” ಬೇಕಾಗಿತ್ತು. ಅವನೋ ಪೊಲೀಸರು ಹುಡುಕುತ್ತಿದ್ದ ವ್ಯಕ್ತಿ. ಲೈಸೆನ್ಸ್ ಕೊಡಬೇಕಾದವನು ಸ್ವತಃ ಪೊಲೀಸ್ ಸೂಪರಿಂಟೆಂಡೆಂಟ್! ಸಮಸ್ಯೆ ಬಹಳ ದೊಡ್ಡದು. ಆದರೆ ಆಜಾದನಿಗೇನೂ ಅದು ಬಿಡಿಸಲಾಗದ್ದಲ್ಲ. ಸೂಪರಿಂಟೆಂಡೆಂಟ್‌ನಿಗೆ ಸ್ವಲ್ಪವೂ ಸುಳಿವು ಸಿಗದ ಹಾಗೆ ನಾಟಕ ಮಾಡಿ ಅವನ ಕೈಯಿಂದಲೇ ಲೈಸೆನ್ಸ್ ಗಿಟ್ಟಿಸಿದ! ಅಷ್ಟೆ ಅಲ್ಲ ಆಜಾದನ ವಾಹನ ಚಾಲನೆಯ ಸಾಮರ್ಥ್ಯ ಕಂಡು ಅವನಿಗೆ ಮೆಚ್ಚುಗೆ ಆಯಿತು. ತನ್ನ ಕಾರನ್ನು ನಡಸಲು ಆಗಾಗ ಆಜಾದನನ್ನೇ ಕರೆಸುತ್ತಿದ್ದ ಆ ಪೊಲೀಸ್ ಅಧಿಕಾರಿ!

ಆಜಾದನಿಗೆ ಪೊಲೀಸರನ್ನು ಕೆಣಕಿ ಆಟ ಆಡಿಸುವುದು ಎಂದರೆ ಬಹಳ ಖುಷಿ. ಅವರನ್ನೇ ಸ್ಪರ್ಧೆಗಳಿಗೆ ಕರೆಯುವನು. ಪಗಡೆ ಆಟ ಆಡುವನು. ಪೊಲೀಸ್ ಠಾಣೆಗಳಿಗೆ ನುಗ್ಗಿ ಅವನನ್ನು ಹಿಡಿಯಬೇಕಾಗಿದ್ದ ಪೊಲೀಸರೊಂದಿಗೆ ಹರಟೆ ಕೊಚ್ಚುವನು.

ಕಷ್ಟದಲ್ಲಿರುವವರ ಬಂಧು

ಝಾನ್ಸಿಯಲ್ಲಿದ್ದಾಗಲೇ ಅವನ ಒಂದು ಕೊಳಚೆ ಪ್ರದೇಶದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದನು. ಅವನ ಗುಡಿಸಲಿನ ಪಕ್ಕದಲ್ಲೆ ಒಬ್ಬ ಕಾರ್ಮಿಕ ವಾಸ ಮಾಡುತ್ತಿದ್ದ. ಅವನಿಗೆ ಕಾಯಿಲೆ ಬಂದು ಕೆಲಸಕ್ಕೆ ಹೋಗಿರಲಿಲ್ಲ. ಕೈಯಲ್ಲಿ ಒಂದು ಕಾಸೂ ಇರಲಿಲ್ಲ. ಮನೆಯವರೆಲ್ಲ ಉಪವಾಸದಿಂದ ಬಳಲುತ್ತಿದ್ದರು.

ಇಂಥ ಸಮಯದಲ್ಲಿ ಕಾರ್ಮಿಕನಿಗೆ ಸಾಲಕೊಟ್ಟಿದ್ದ ಒಬ್ಬ ಪಠಾಣ ಬಂದು ಸಾಲ ಹಿಂದಿರುಗಿಸುವಂತೆ ಹಿಂಸೆ ಮಾಡಲಾರಂಭಿಸಿದ. ಬಾಯಿಗೆ ಬಂದ ಹಾಗೆ ಬೈದು ಆ ದುರ್ಬಲ ಕಾರ್ಮಿಕನ ಮೇಲೆ ಕೈಮಾಡಲು ಹೋದ. ಇದನ್ನೆಲ್ಲ ಗಮನಿಸುತ್ತದ್ದ ಆಜಾದ್ ತನ್ನ ಗುಡಿಸಲಿನಿಂದ ಹೊರಗಡೆಗೆ ಬಂದು ಪಠಾಣ ಇವನ ಮಾತನ್ನು ಲೆಖ್ಖಕ್ಕೆ ತೆಗೆದುಕೊಳ್ಳಲಿಲ್ಲ. ಕಾರ್ಮಿಕನ್ನು ಹಿಂಸಿಸುತ್ತಲೇ ಇದ್ದ. ಆಜಾದನಿಗೆ ಕೋಪ ಬಂತು. ಪಠಾಣನ ಕುತ್ತಿಗೆ ಪಟ್ಟಿ ಹಿಡಿದು ಸರಿಯಾಗಿ ನಾಲ್ಕು ಬಾರಿಸಿದ. “ಕುಯ್ಯೋ ಮರೋ” ಅನ್ನುತ್ತಾ ಪಠಾಣ ಅಲ್ಲಿಂದ ಒಂದೇ ಉಸುರಿನಲ್ಲಿ ಓಟಕಿತ್ತ. ಹೀಗೆ ಬಡವರನ್ನು, ಕಷ್ಟಲ್ಲಿದ್ದವರನ್ನು ಕಂಡಾಗಲೆಲ್ಲ ಅವರ ಸಹಾಯಕ್ಕೆ ಬರುತ್ತಿದ್ದ ಆಜಾದ್.

ನಾಯಕ ಗಲ್ಲಿಗೇರಿದ

೧೯೨೭, ಡಿಸೆಂಬರ್ ೧೯ ರಂದು ರಾಮಪ್ರಸಾದ್ ಬಿಸ್ಮಿಲ್ಲರನ್ನು ಸರಕಾರ ಗಲ್ಲಿಗೆ ಹಾಕಿತು. ಅವರ ಜೊತೆಯ ಇನ್ನು ಮೂವರನ್ನು ಅದೇ ರೇತಿ ಗಲ್ಲಿಗೇರಿಸಿತು. ಆಮೇಲೆ ಆಜಾದನ ಹೊಣೆ ಬಹಳ ಹೆಚ್ಚಾಯಿತು. ಅಲ್ಲಲ್ಲಿ ಚದುರಿಹೋಗಿದ್ದ ಕ್ರಾಂತಿಕಾರಿ ಗೆಳೆಯರನ್ನೆಲ್ಲ ಒಂದುಗೂಡಿಸಬೇಕಾಗಿತ್ತ. ಗಲ್ಲುಗಂಬವೇರಿದ ನಾಯಕರು ಅವನಲ್ಲಿ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿತ್ತು. ಹೋರಾಟವನ್ನು ಮುಂದುವರಿಸಬೇಕಾಗಿತ್ತು.

ಅದೇ ಸಮಯದಲ್ಲಿ ಆಜಾದನ ಹಾಗೆಯೇ ಒಬ್ಬ ತರುಣ ಕ್ರಾಂತಿಕಾರಿ ಬೆಳೆಯುತ್ತಿದ್ದ. ಅವನ ಹೆಸರು ಭಗತ್ ಸಿಂಗ್, ಆಜಾದನೊಂದಿಗೆ ಸೇರಿದರೆ ಹೋರಾಟವನ್ನು ಇನ್ನೂ ಬಲಗೊಳಿಸಬಹುದು ಎಂದು ಅವನ ನಂಬಿಕೆ.

ಹೊಸ ಸಂಸ್ಥೆ

ದಿಲ್ಲಿಯಲ್ಲಿ ಇಬ್ಬರದು ಭೇಟಿಯಾಯಿತು. ಮಿಕ್ಕೆಲ್ಲ ಸ್ನೇಹಿತರನ್ನು ಒಟ್ಟುಗೂಡಿಸಿದರು. ೧೯೨೮ ರ ಸೆಪ್ಟೆಂಬರ ೮ ರಂದು ದಿಲ್ಲಿಯ ಪಾಳುಬಿದ್ದ ಕೋಟೆ ಫಿರೋಜ್ ಷಾ ಕೊಟ್ಲಾ ಎಂಬಲ್ಲಿ ಸಭೆ ನಡೆಯಿತು. ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಗೆ ಹೊಸ ರೂಪ ಕೊಟ್ಟು. ಹೆಸರನಲ್ಲೂ ಬದಲಾವಣೆ ಮಾಡಿದರು. ಹಿಂದುಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಷಿಯೇಷನ್ ಎಂದು ಕರೆದರು. ಅದಕ್ಕೆ ಪ್ರಧಾನ ಸೇನಾಧಿಪತಿಯೇ ಚಂದ್ರಶೇಖರ ಆಜಾದ್.

 

ಕಡೆಯ ಹೋರಾಟ

ಲಾಲಾಜಿಯ ಬಲಿ

 

ಆಗಿನ ದಿನಗಳಲ್ಲಿ ಆಂಗ್ಲ ಸರಕಾರ ಒಂದು ಹೊಸ ಯೋಜನೆ ಮಾಡಿತು. ಸೈಮನ್ ಎಂಬ ಒಬ್ಬ ಅಧಿಕಾರಿಯ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಕೆಲವು ಸುಧಾರಣೆಗಳನ್ನು ಮಾಡುವ ನೆಪದಲ್ಲಿ ದೇಶದಲ್ಲಿ ಎಲ್ ಕಡೆ ಓಡಾಡಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಸಡಿಲತೆ ತರುವುದೆಂದು ರಾಷ್ಟ್ರದ ನಾಯಕರು ತೀರ್ಮಾನಿಸಿದರು. ಆದ್ದರಿಂದ ಆ ಸೈಮನ್ ಸಮಿತಿಯನ್ನು ಎಲ್ಲ ಕಡೆ ಬಹಿಷ್ಕರಿಸಬೇಕೆಂದು ರಾಷ್ಟ್ರಕ್ಕೆ ಕರೆ ನೀಡಿದರು.

ಸೈಮನ್ ಸಮಿತಿ ಲಾಹೋರಿಗೆ ಬಂದಾಗ ಅಲ್ಲೊಂದು ಭಾರೀ ಪ್ರದರ್ಶನ ನಡೆಯಿತು. ಅದರ ನಾಯಕರು ಪಂಜಾಬಿನ ಸಿಂಹ ಲಾಲಾ ಲಜಪತ್‌ರಾಯ್. ಅದಕ್ಕೆ ಜನರನ್ನು ಸೇರಿಸಿದವರು ಆಜಾದನ ಗೆಳೆಯರು ಕ್ರಾಂತಿಕಾರಿಗಳೇ. ಪ್ರದರ್ಶನದ ಬೆನ್ನೆಲುಬೇ ಅವರು. ಪೊಲೀಸರಂತೂ ಬಹಳ ಅನಾಗರಿಕವಾಗಿ ವರ್ತಿಸಿದರು. ಸ್ಯಾಂಡರ್ಸ್‌ ಎಂಬ ಅಧಿಕಾರಿ ಲಾಲಾಜಿಯವರನ್ನು ತನ್ನ ಕೈಯಾರ ಚೆನ್ನಾಗಿ ಬಡಿದ. ಆ ಪೆಟ್ಟುಗಳಿಂದ ನರಳಾಡಿ ೧೯೨೮ ರ ನವೆಂಬರ್ ಹದಿನೇಳರಂದು ಲಾಲಾಜಿ ಅಸುನೀಗಿದರು.

ಈ ಘಟನೆಯಿಂದ ಆಜಾದ್, ಭಗತ್‌ಸಿಂಗ್ ಮತ್ತು ಗೆಳೆಯರಿಗೆ ಬಹಳ ದಃಖವಾಯಿತು, ಸಿಟ್ಟುಬಂತು. ಅದು ಮೂವತ್ತು ಮೂರು ಕೋಟಿ ಭಾರತೀಯರ ಎದೆಗೆ ಒದ್ದು ಅವಮಾನ ಮಾಡಿದಂತೆ. ಭಾರತದಲ್ಲಿ ಹಂಡಸುತನ ಉಳಿದಿದೆ ಎಂದು ಸಾಧಿಸಿಬೇಕಾದರೆ ಅದಕ್ಕೆ ಪ್ರತೀಕಾರ ತೋರಿಸಬೇದಿ ಎಂದು ತೀರ್ಮಾನಿಸಿದರು. ಆಜಾದನ ಮಾರ್ಗದರ್ಶನದಲ್ಲಿ ಪ್ರತೀಕಾರದ ಯೋಜನೆ ತಯಾರಾಯಿತು.

ಪ್ರತೀಕಾರ

ಲಾಲಾ ಲಜಪತ್‌ರಾಯ್ ತೀರಿಹೋಗಿ ಒಂದು ತಿಂಗಳಿಗೆ ಸರಿಯಾಗಿ ಆಜಾದ್, ಭಗತ್‌ಸಿಂಗ್, ರಾಜಗುರು ಮುಂತಾದವರು ಲಾಹೋರಿನ ಪೊಲೀಸ್ ಸೂಪರಿಂಟೆಂಡೆಂಟಿನ ಕಛೇರಿಯ ಹತ್ತಿರ ಶಸ್ತ್ರಸಜ್ಜಿತರಾಗಿ ಸೇರಿದರು. ಅವರ ಉದ್ದೇಶ ಒಬ್ಬ ಪೊಲೀಸ್ ಅಧಿಕಾರಿಯನ್ನು ಮುಗಿಸಿಹಾಕಿ ಲಾಲಾಜಿ ಕೊಲೆಗೆ ಪ್ರತೀಕಾರ ತೀರಿಸುವುದು. ಗುಂಡಿಗೆ ಗುಂಡಿನಿಂದಲೇ, ಕತ್ತಿಗೆ ಕತ್ತಿಯಿಂದಲೇ ಉತ್ತರ ಕೊಡಬೇಕು ಎಂಬುದು ಕ್ರಾಂತಿಕಾರಿಗಳಾದ ಅವರ ನಂಬಿಕೆ.

ಲಾಲಾಜಿಯವರನ್ನು ಕೊಂದು ಹಾಕಿದ್ದ ಸ್ಯಾಂಡರ್ಸನು ಕಛೇರಿಯಿಂದ ಹೊರಬರುತ್ತಿದ್ದಂತೆ ಭಗತ್‌ಸಿಂಗ್ ಮತ್ತು ರಾಜಗುರು ಗುಂಡುಹಾರಿಸಿ ಅವನನ್ನು ನೆಲಕ್ಕೆ ಕೆಡವಿದರು ಅವನು ಅಲ್ಲೇ ಪ್ರಾಣಬಿಟ್ಟ. ಆಜಾದ್ ದೂರದಲ್ಲಿ ನಿಂತು ಇದನ್ನೆಲ್ಲ ಗಮನಿಸುತ್ತಿದ್ದ. ಭಗತ್‌ಸಿಂಗ್ ಮತ್ತು ರಾಜಗುರುವನ್ನು ಪೊಲೀಸರು ಅಟ್ಟಿಸಿಕೊಂಡು ಹೋಗಲಾರಂಭಿಸಿದರು. ಇನ್ನೇನು ಒಬ್ಬ ಪೊಲೀಸ್ ಭಗತ್‌ಸಿಂಗನನ್ನು ಹಿಡಿಯಬೇಕು, ಅಷ್ಟರಲ್ಲಿ ಆಜಾದ್ ತಾನು ನಿಂತಲ್ಲಿಂದಲೇ ಗುಂಡು ಹಾರಿಸಿದ, ಆ ಪೊಲೀಸಿನವನು ಕೆಳಕ್ಕೆ ಬಿದ್ದ. ಭಗತ್‌ಸಿಂಗ್ ಅಲ್ಲಿಂದ ಓಡಿಹೋದ. ಆಜಾದ್ ಹೀಗೆ ಇಬ್ಬರು ಗೆಳೆಯರನ್ನೂ ರಕ್ಷಿಸಿದ. ಎಲ್ಲರೂ ಪೊಲೀಸರಿಂದ ಪಾರಾಗಿಹೋದರು.

ಸ್ಯಾಂಡರ್ಸ ಹತನಾದ ಸ್ವಲ್ಪ ಸಮಯದಲ್ಲಿಯೇ ಸುದ್ದಿ ಎಲ್ಲೆಡೆ ಹಬ್ಬಿತು. ಸ್ಯಾಂಡರ್ಸನಿಗೆ ಗುಂಡಿಟ್ಟವರು ಯಾರು ಎಂದು ಎಲ್ಲರೂ ಕುತೂಹಲಗೊಂಡರು. ಮರುದಿನ ಲಾಹೋರಿನಲ್ಲಿ ಭಿತ್ತಿಪತ್ರಗಳು ಕಾಣಿಸಿಕೊಂಡವು. ಕ್ರಾಂತಿಕಾರಿಗಳು ತಾವೇ ಆ ಕೆಲಸ ಮಾಡಿರುವುದಾಗಿಯೂ ಅದು ಪೂಜ್ಯ ಲಾಲಾಜಿಯವರ ಕಗ್ಗೊಲೆಗೆ ಪ್ರತ್ಯುತ್ತರ ಎಂದು ಬರೆದಿದ್ದರು. ಇವೆಲ್ಲ ಪತ್ರಿಕೆಗಳಲ್ಲೂ ಪ್ರಕಟವಾದವು. ಭಾರತದ ಜನತೆ ಹೆಮ್ಮೆ ಪಟ್ಟುಕೊಂಡಿತು. ಪೊಲೀಸರು ಆಜಾದ್ ಮತ್ತು ಗೆಳೆಯರನ್ನು ಹುಡುಕುವುದನ್ನು ತೀವ್ರಗೊಳಿಸಿದರು. ಇಡೀ ಲಾಹೋರಿನಲ್ಲಿ ಎಲ್ಲ ನೋಡಿದರೂ ಪೊಲೀಸ್ ಪಹರೆ ಗುಪ್ತಚರ ಜಾಲ.

ಆಜಾದನು ಒಬ್ಬ ಮಠಧಿಪತಿಯಂತೆ ವೇಷಧರಿಸಿ ಶಿಷ್ಯರ ಜೊತೆ ತೀರ್ಥಯಾತ್ರೆಗೆ ಹೋಗುವವನಂತೆ ಅಭಿನಯಿಸುತ್ತಾ ಲಾಹೋರಿನಿಂದ ಹೊರಕ್ಕೆ ಹೋದ. ಆಜಾದನ ಸಲಹೆಯಂತೆ ಭಗತ್‌ಸಿಂಗ್ ಒಬ್ಬ ಸರಕಾರಿ ಅಧಿಕಾರಿಯಂತೆಯೂ, ರಾಜಗುರುವು ಅವನ ನೌಕರನಂತೆಯೂ, ಕ್ರಾಂತಿಕಾರಿಣಿ ದುರ್ಗದೇವಿ ಭಗತ್‌ಸಿಂಗನ ಪತ್ನಿಯಂತೆಯೂ ನಟಿಸುತ್ತಾ ಲಾಹೋರಿನಿಂದ ರೈಲಿನಲ್ಲಿ ಹೊರಟು ಹೋದರು. ಈ ಇಡೀ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಿದವನು ಆಜಾದ್. ಪೊಲೀಸರಿಗೆ ಸಂಸ್ಥೆಯ ತಲೆ ಯಾವುದು ಬಾಲ ಯಾವುದು ಎನ್ನುವುದೇ ಹೊಳೆಯಲಿಲ್ಲ ಆಜಾದನ ಅದ್ಭುತ ಜಾಣ್ಮೆಗೆ ಇದೊಂದು ಉದಾಹರಣೆಯಾಯಿತು.

ಮೃದು ಮನಸ್ಸು

ಆಜಾದ್ ಹೊರಕಣ್ಣಿಗೆ ಎಷ್ಟು ಕಠೋರ ಮನಸ್ಸಿನವನಾಗಿ ಕಾಣುತ್ತಿದ್ದನೋ ಒಳಗೆ ಅಷ್ಟೇ ಕೋಮಲ ಹೃದಯದವನಾಗಿದ್ದ. ಕೆಲವೊಮ್ಮೆ ಕಣ್ಣೀರು ಸುರಿಸುತ್ತಿದ್ದುದೂ ಉಂಟು.

ಕ್ರಾಂತಿಕಾರಿಣಿ ದುರ್ಗಾದೇವಿಯ ಪತಿ ಭಗವತಿ ಚರಣ್, ಬಹಳ ಬುದ್ದಿವಂತ, ಒಳ್ಳಯ ಕ್ರಾಂತಿಕಾರಿ. ಅವರಿಗೆ ಒಂದು ಮಗು ಇತ್ತು. ಒಮ್ಮೆ ಬಾಂಬು ಪರೀಕ್ಷೆ ಮಾಡುವಾಗ ಅದು ಸ್ಪೋಟಗೊಂಡು ಭಗವತಿ ಚರಣ್ ಹುತಾತ್ಮನಾದ. ಆ ರಾತ್ರಿಯಲ್ಲ ದುರ್ಗಾದೇವಿ ಪ್ರಪಂಚವನ್ನೇ ಮರೆತು ದುಃಖದಲ್ಲಿ ಮುಳುಗಿ ಹೋದಳು. ಮಗು ಒಂದೇ ಸಮನೆ ಗಟ್ಟಿಯಾಗಿ ಅಳುತ್ತಿತ್ತು. ಆಗ ಆಜಾದನೇ ಆ ಮಗುವನ್ನು ಭುಜದ ಮೇಲೆ ಹಾಕಿಕೊಂಡು ಇಡೀ ರಾತ್ರಿಯಲ್ಲ ಸಂತೈಸಿದ. ಆಜಾದನ ಧೃಢಮನಸ್ಸೂ ಕರಗಿಹೋಯಿತು. ಕಣ್ಣು ತೇವವಾಯಿತು. ಮಗುವನ್ನು ಅಪ್ಪಿಕೊಂಡು ಹೇಳಿದ; “ಮಗೂ, ಇನ್ನು ಮೇಲೆ ನೀನು ಸಂಸ್ಥೆಯ ಆಸ್ತಿ. ನೀನು ತಬ್ಬಲಿಯಲ್ಲ. ನಾನು ನಿನ್ನನ್ನು ಕಾಪಾಡುತ್ತೇನೆ.” ಬೆಳಗಿನ ಜಾವದವರೆಗೆ ಹೀಗೆಯೇ ಸಾಗಿತು.

‘ಅಸೆಂಬ್ಲಿ’ಯಲ್ಲಿ ಕ್ರಾಂತಿಕಾರಿಗಳು

೧೯೨೯ ಏಪ್ರಿಲ್ ತಿಂಗಳ ವೇಳೆಗೆ ಸರಕಾರ ಇನ್ನೊಂದು ದುಷ್ಟ ಯೋಜನೆ ಮಾಡಿತು. ಭಾರತದ ಜನರ ಗುಲಾಮಗಿರಿಯ ಬಂಧನವನ್ನು ಮತ್ತಷ್ಟು ಬಿಗಿ ಮಾಡುವ ಸಂಚು ಅದು. ಅಂತಹ ಎರಡು ಮಸೂದೆಗಳನ್ನು ಆಗಿನ ಅಸೆಂಬ್ಲಿಯಲ್ಲಿ ಅದು ಮಂಡಿಸಲು ಸಿದ್ಧತೆ ನಡೆಸಿತು.

ಈ ಕುತಂತ್ರವನ್ನು ಪ್ರತಿಭಟಿಸಲು ಆಜಾದನ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌, ತೀರ್ಮಾನಿಸಿತು. ಆ ಮಸೂದೆಗಳು ಮಂಡನೆ ಆಗುವಾಗ ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ತರು ಅಸೆಂಬ್ಲಿ ಭವನದಲ್ಲಿ (ಈಗಿನ ಪಾರ್ಲಿಮೆಂಟ್ ಭವನ) ಬಾಂಬುಗಳನ್ನು ಸ್ಫೋಟಿಸಿ, ಕೈಹೊತ್ತಗೆಗಳನ್ನು ಎರಚಬೇಕೆಂದು ತಿರ್ಮಾನವಾಯಿತು. ಇದಕ್ಕೆಲ್ಲ ಆಜಾದನದೇ ಮಾರ್ಗದರ್ಶನ. ೧೯೨೯ ರ ಏಪ್ರಿಲ್ ೮ ರಂದು ಅಸೆಂಬ್ಲಿ ನಡಿಯುತ್ತಿದ್ದಾಗಲೇ ಬಾಂಬುಗಳು ಸ್ಫೋಟಗೊಂಡವು. “ಕ್ರಾಂತಿ ಚಿರಾಯುವಾಗಿರಲಿ” ಎಂಬ

ಘೋಷಣೆ ಮೊಳಗಿತು. ಭಗತ್‌ಸಿಂಗ್‌ ಮತ್ತು ಬಟುಕೇಶ್ವರ ದತ್ತರು ಅಲ್ಲಿಯೇ ಬಂಧನಕ್ಕೊಳಗಾದರು. ಯೋಜನೆಯಂತೆ ಆಜಾದ್ ಅಲ್ಲಿಂದ ಮೊದಲೇ ಬಂದು ಬಿಟ್ಟಿದ್ದ. ಭಗತ್‌ಸಿಂಗ್ ಮತ್ತು ದತ್ತರ ಮೇಲೆ ಸರಕಾರ ಮೊಕದ್ದಮೆ ಹೂಡಿತು.

ಆಜಾದನನ್ನು ಹುಡುಕುವ ಪ್ರಯತ್ನವಂತೂ ನೂರು ಪಟ್ಟು ಹೆಚ್ಚಾಯಿತು. ಅವನೇ ಕ್ರಾಂತಿಕಾರಿಗಳ ಸೇನಾಪತಿ. ಅವನೇ ಕ್ರಾಂತಿ ಕಾರ್ಯಚರಣೆಗಳ ಯೋಜಕ. ಅವನೇ ಯಾವಾಗಲೂ ತಮಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಣಕ್ಯ ಎಂದು ಸರಕಾರಕ್ಕೆ ಚೆನ್ನಾಗಿ ಗೊತ್ತಿತ್ತು. ಆದರೆ ಆಜಾದ್ ಅವರ ಕೈಗೆ ಅಷ್ಟು ಸುಭವಾಗಿ ಸಿಕ್ಕಿ ಬೀಳುವ ಮೂರ್ಖನಾಗಿರಲಿಲ್ಲ. ಎಷ್ಟೋ ಸಲ ಅವರ ಕೈಗೆ ಸಿಕ್ಕಿಬಿಟ್ಟಂತೆ ಅವರಿಗೆ ಕಂಡರೂ ಕ್ಷಣಾರ್ಧದಲ್ಲಿ ನುಣುಚಿಕೊಂಡು ಹೋಗಿಬಿಡುತ್ತಿದ್ದ.

ಕಣ್ಣಾಮುಚ್ಚಾಲೆ

ಒಂದು ದಿವಸ ಆಜಾದನನ್ನು ಪೊಲೀಸರು ಗುರುತಿಸಿ ಅಟ್ಟಿಸಿಕೊಂಡು ಹೋಗಲಾರಂಭಿಸಿದರು. ಆಜಾದ್ ಮುಂದೆ ಪೊಲೀಸರು ಹಿಂದೆ. ಇದ್ದಕ್ಕಿದ್ದಂತೆ ಒಂದು ಇದ್ದಿಲು ಅಂಗಡಿ ಒಳಕ್ಕೆ ನುಗ್ಗಿದ, ಅಂಗಡಿ ಯಜಮಾನಿ ಒಬ್ಬಳು ಅಜ್ಜಿ. ಒಂದು ನಿಮಿಷದಲ್ಲಿ ಅವಳ ಮನ ಒಲಿಸಿಕೊಂಡುಬಿಟ್ಟ. ಇನ್ನೂ ಒಳಕ್ಕೆ ಹೋದ. ಆ ವೇಳೆಗೆ ಅಲ್ಲಿಗೆ ಬಂದ ಪೊಲೀಸರು ಅಜ್ಜಿಯನ್ನು ಗದ್ದರಿಸಿ ಪ್ರಶ್ನಿಸಿದರು. ಅವಳು ಏನೂ ಗೊತ್ತಿಲ್ಲ ಎಂದು ಕೈ ಅಲ್ಲಾಡಿಸಿದಳು. ಅಷ್ಟರಲ್ಲಿ ಒಬ್ಬ ಕೂಲಿ ಒಳಗಡೆಯಿಂದ ಒಂದು ಇದ್ದಿಲು ಮೂಟೆ ಹೊತ್ತು ಹೊರಕ್ಕೆ ಬಂದ. ಮೈ ಎಲ್ಲ ಮಸಿ. ಪೊಲೀಸರ ಮುಂದೆಯೇ ಬೀದಿಗೆ ಹೊರಟುಹೋದ. ಪೊಲೀಸರು ಒಳಗಡೆ ನುಗ್ಗಿ ಮನೆಯೆಲ್ಲ ಶೋಧಿಸಿದರು. ಆಜಾದ್ ಸಿಗಲಿಲ್ಲ. ಪೆಚ್ಚು ಮೊರೆಹಾಕಿಕೊಂಡು ಹೊರಟು ಹೋದರು. ಪಾಪ, ಅವರಿಗೇನು ಗೊತ್ತು ಮೂಟೆ ಹೊತ್ತ ಕೂಲಿಯೇ ಆಜಾದ್ ಎಂದು!

ಇನ್ನೊಂದು ಸಲ ಅಲಹಾಬಾದಿನಲ್ಲಿ ಇನ್ನೊಬ್ಬ ಕ್ರಾಂತಿಕಾರಿಯ ಜೊತೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ. ಒಬ್ಬ ಪೊಲೀಸ್ ಅಧಿಕಾರಿ ಹಿಂಬಾಲಿಸಿ ಬರಲಾರಂಭಿಸಿದ. ಆಜಾದ್ ಎಷ್ಟು ಪ್ರಯತ್ನಿಸಿದರು ಅವನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಇದ್ದಕ್ಕಿದಂತೆ ಒಂದು ನಿರ್ಜನ ಪ್ರದೇಶದಲ್ಲಿ ನಿಂತುಬಿಟ್ಟ. ಪೊಲೀಸ್‌ ಅಧಿಕಾರಿಯೂ ನಿಂತ. ಆಜಾದ್‌ ಜೇಬಿಗೆ ಕೈಹಾಕಿದ. ಜೇಬಿನ ಒಳಗೆ “ಕ್ಲಿಕ್” ಎಂಬ ಶಬ್ದವಾಯಿತು. ಅದು ಪಿಸ್ತೂಲು ಸಿದ್ಧಮಾಡಿದ ಶಬ್ದ. ಆ ಪೊಲೀಸ್ ಅಧಿಕಾರಿಗೂ ಅದು ಕೇಳಿಸಿತು. ಅವನ ಎದೆ ಡಬ ಡಬ ಹೊಡೆದುಕೊಳ್ಳಲಾರಂಭಿಸಿತು. ಆಜಾದ್ ಅವನ ಕಡೆ ಒಂದು ಹೆಜ್ಜೆ ಇಟ್ಟು, “ಏಯ್ ಪೊಲೀಸರವನೆ, ನಿನಗೇನಾದರು ಬದುಕೋ ಆಸೆ ಇದೆಯೇ?” ಎಂದು ಪ್ರಶ್ನಿಸಿದ. ಅಷ್ಟೇ ಸಾಕಾಗಿತ್ತು ಆ ಪೊಲೀಸ್ ಅಧಿಕಾರಿಗೆ. ಅಲ್ಲಿಂದ ಒಂದೇ ಉಸುರಿನಲ್ಲಿ ಓಟ ಕಿತ್ತವನು ಮನೆ ಸಿಗುವವರೆಗೂ ನಿಂತಿದ್ದರೆತಾನೆ ಆ ಭೂಪ.

ಹೆಜ್ಜೆ ಹೆಜ್ಜೆಗೂ ಆಜಾದನಿಗೆ ಪೊಲೀಸರ ಕಾಟ ಇದ್ದರೂ ಧೈರ್ಯದಿಂದ, ಬುದ್ಧಿವಂತಿಕೆಯಿಂದ, ಶಕ್ತಿಯಿಂದ ಚಾಕಚಕ್ಯತೆಯಿಂದ, ಸಮಯಸ್ಫೂರ್ತಿಯಿಂದ ಸಮಸ್ಯೆಗಳನ್ನು ಬಿಡಿಸುತ್ತಾ ಮುಂದೆ ಮುಂದೆ ಸಾಗುತ್ತಿದ್ದ. ನೂರಾರು ತರುಣರನ್ನು ಕ್ರಾಂತಿಕಾರಿಗಳನ್ನಾಗಿ ರೂಪಿಸಿದ. ಕಷ್ಟಗಳು ಎದುರು ಬಂದವೆಂದು ಒಂದುಕ್ಷಣವಾದರೂ ರಾಷ್ಟ್ರ ಚಿಂತನೆಯನ್ನು ನಿಲ್ಲಿಸಿದವನಲ್ಲ; ರಾಷ್ಟ್ರಸೇವೆಯಿಂದ ವಿರಾಮ ಪಡೆದವನಲ್ಲ.

ಆದರ್ಶ ಕ್ರಾಂತಿಕಾರಿ

ಅವನ ಜೀವನ ಇಡಿಯಾಗಿ ರಾಷ್ಟ್ರಸೇವೆಗೆ ಮೀಸಲು, ಸ್ವಂತದ ಚಿಂತೆ ಸಾಸಿವೆಯಷ್ಟೂ ಇಲ್ಲ ಅವನಿಗೆ.

ಅವನ ಸಂಸ್ಥೆಗಾಗಿ ಸಂಗ್ರಹಿಸಿದ ಹಣ ಎಂದರೆ ರಾಷ್ಟ್ರದ ಹಣ ಎಂದು ಭಾವನೆ. ರಾಷ್ಟ್ರದ ಸ್ವತ್ತು ಯಾರಾದರೂ ಸ್ವಂತಕ್ಕೆ ಉಪಯೋಗಿಸಿದರೆ ಅದು ಅಕ್ಷಮ್ಯ ಅಪರಾಧ ಎಂದು ನಂಬಿಕೆ. ರಾಷ್ಟ್ರದ ಹಣ ಪವಿತ್ರವಾದ ವಸ್ತು ಎನ್ನುತ್ತಿದ್ದ.

ಆಜಾದ್ ಮನೆ ತೊರೆದು ಹತ್ತು ವರ್ಷಗಳಿಗೂ ಹೆಚ್ಚಾಗಿದ್ದರೂ ಒಂದೇ ಒಂದುಸಲ ಮುದಿ ತಂದೆ ತಾಯಿಯರನ್ನು ಕಾಣಲು ಭಾವರಾಗೆ ಹೋಗಿದ್ದ.

ಆ ಮುದಿ ದಂಪತಿ ಬಹಳ ಬಡತನದಲ್ಲಿ ನರಳಾಡುತ್ತಿದ್ದರು. ಒಪ್ಪತ್ತು ಊಟ ಸಿಕ್ಕರೆ ಇನ್ನು ಮೂರು ನಾಲ್ಕು ದಿನ ಉಪವಾಸ. ಮೈ ಮುಚ್ಚಲು ಚಿಂದಿಯಾಗಿ ಅಲ್ಲಲ್ಲಿ ತೇಪೆ ಹಾಕಿದ ಸೀರೆ, ಪಂಚೆಯೇ ಗತಿ. ಜೊತೆಗೆ ಆಗಾಗ ರೋಗ ರುಜಿನ ಬೇರೆ.

ಇದನ್ನು ಅರಿತ ಆಜಾದನ ಕೆಲವು ಹಿರಿಯ ಹಿತೈಷಿಗಳು ಆಜಾದನಂಥ ಕ್ರಾಂತಿ ಶಿರೋಮಣಿಯನ್ನು ದೇಶಕ್ಕೆ ನೀಡಿದ ಆ ವೃದ್ಧರಿಗಾಗಿ ಸ್ವಲ್ಪ ಹಣ ಸಂಗ್ರಹಿಸಿದರು. ಆ ಸುದ್ದಿ ಆಜಾದನಿಗೆ ತಿಳಿಯಿತು. ಅವನು ಅವರನ್ನು ಕರೆದು ಅವರ ಹತ್ತಿರದಿಂದ ಆ ಹಣವನ್ನು ಕಸಿದುಕೊಂಡು ಹೇಳಿದ:

“ಸ್ವಾಮಿ, ನನ್ನ ತಂದೆ-ತಾಯಿಯರಿಗಾಗಿ ಹಣ ಸಂಗ್ರಹಿಸಿದ್ದೀರಿ. ನನ್ನ ಹೆಸರನ್ನೂ ಬಳಸಿದ್ದೀರಿ. ನನ್ನದು ರಾಷ್ಟ್ರಕ್ಕೆ ಮುಡುಪಿಟ್ಟ ಬಾಳು. ನನ್ನ ಹೆಸರಿನಲ್ಲಿ ಸಂಗ್ರಹಿಸಿದ್ದೆಲ್ಲ ರಾಷ್ಟ್ರಕ್ಕೆ ಸೇರಬೇಕೇ ಹೊರತು ಯಾರ ಸ್ವಂತ ಮನೆ ಖರ್ಚಿಗೂ ಒಂದು ಚಿಕ್ಕಾಸು ಖರ್ಚಾಗಬಾರದು. “ಅವನು ತ್ಯಾಗ ಮಾಡುವುದರಲ್ಲಿ ಯಾವ ಮಟ್ಟಕ್ಕೆ ಏರಿದ್ದನೆಂಬುದನ್ನು ಕಂಡು ಆ ಹಿತೈಷಿಗಳು ಬೊಟ್ಟು ಕಚ್ಚಿದರು. ಎಂಥ ಆದರ್ಶ ಅವನದು!

"ನಾನು ಈ ಹಣ ತೆಗೆದುಕೊಂಡು ಹೋಗಲಾರೆ"

ನಿರ್ಮಲ ಮನಸ್ಸು

 

ಅವನು ರಾಷ್ಟ್ರಸೇವೆ ಮಾಡುತ್ತಾ ಬ್ರಹ್ಮಚಾರಿಯಾಗಿಯೇ ಉಳಿದುಬಿಟ್ಟ. ಎಲ್ಲ ಸ್ತ್ರೀಯರನ್ನು ತಾಯಿಯರಂತೆ ಕಾಣುತ್ತಿದ್ದ ದೊಡ್ಡ ಸಂಸ್ಕೃತಿ ಅವನದು. ಸಂಸ್ಥೆಯ ಯಾವ ಕ್ರಾಂತಿಕಾರಿಯೇ ಆಗಲಿ ಸ್ತ್ರಿಯರನ್ನು ಕೆಟ್ಟದೃಷ್ಟಿಯಿಂದ ನೋಡಿದರೆ ಉಗ್ರಶಿಕ್ಷೆ ವಿಧಿಸುತ್ತಿದ್ದ.

ಒಮ್ಮೆ ಸಂಸ್ಥೆಗೆ ಹಣ ಬೇಕಾಗಿತ್ತು. ಒಂದು ರಾತ್ರಿ ಒಬ್ಬ ಶ್ರೀಮಂತ ಮಹಿಳೆಯ ಮನೆಗೆ ನುಗ್ಗಿದರು. ಅಲ್ಲಿ ತಿಜೋರಿಯಲ್ಲಿದ್ದ ಹಣ ಸಂಗ್ರಹಿಸಿ ಹೊರಬರಲಾರಂಭಿಸಿದರು. ಆಗ ಆಜಾದನ ಕಣ್ಣಿಗೆ ಒಂದು ದೃಶ್ಯ ಕಂಡಿತು. ಒಬ್ಬ ಕ್ರಾಂತಿಕಾರಿ ಅಲ್ಲಿಯೇ ಮಂಚದ ಮೇಲೆ ಮಲಗಿದ್ದ ಆ ಶ್ರೀಮಂತ ಮಹಿಳೆಯ ಮಗಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಆಜಾದನಿಗೆ ತನ್ನ ಕೆಲಸದಲ್ಲಿ ಮಹಾಪಾಪ ತಲೆಹಾಕಿತು ಎಂದು ಅಸಹ್ಯ ಬೇಸರವಾಯಿತು. ಕೂಡಲೆ ಆಜಾದ್ ಶ್ರೀಮಂತ ಮಹಿಳೆ ಮಲಗಿದ್ದ ಕಡೆಗೆ ಹೋಗಿ ಅವಳನ್ನು ಎಬ್ಬಿಸಿದ. ಗಂಟು ಕಟ್ಟಿದ್ದ ಹಣವನ್ನೆಲ್ಲ ಅವಳ ಕೈಗೆ ಕೊಟ್ಟು ಹೇಳಿದ: “ಅಮ್ಮ ನಮ್ಮ ಸಂಸ್ಥೆಗಾಗಿ ಹಣ ಬೇಕಾಗಿತ್ತು. ಅದಕ್ಕಾಗಿ ಇಲ್ಲಿಗೆ ಬಂದು ಹಣ ಸಮಗ್ರಹಿಸಿದೆವು. ಆದರೆ ನನ್ನ ಗೆಳೆಯನೊಬ್ಬ ನಿನ್ನ ಮಗಳನ್ನು ಕೆಟ್ಟ ದೃಷ್ಟಿಯಿಂದ ನೋಡಿದ. ನನ್ನ ಕೆಲಸದಲ್ಲಿ ವಿಘ್ನ ತಲೆಹಾಕಿತು. ನಾನು ಈ ಹಣ ತೆಗೆದುಕೊಂಡು ಹೋಗಲಾರೆ.”

ಆ ಮಹಿಳೆಗೆ ಈ ವಿಚಿತ್ರ “ದರೋಡೆಕೋರ”ನ್ನು ಕಂಡು ಆಶ್ಚರ್ಯವಾಯಿತು. “ಅಪ್ಪ, ನಿನ್ನಂಥವರು ಬಹಳ ವಿರಳ. ನಿನಗೆ ಯಾವಾಗ ಹಣ ಬೇಕಾದರೂ ನನ್ನನ್ನೂ ಕೇಳು ಕೊಡುತ್ತೇನೆ” ಎಂದು ಹೇಳಿದಳು.

ರಾಷ್ಟ್ರ ಗೌರವ ಸಂರಕ್ಷಕ

ರಾಷ್ಟ್ರ ಗೌರವ ಚಿಹ್ನೆಗೆ, ಶ್ರದ್ಧೆಯ ಸಂಕೇತಗಳಿಗೆ ಎಲ್ಲಾದರೂ ಅವಹೇಳನವಾದರೆ ಆಜಾದನಿಗೆ ಬಹಳ ದುಃಖವಾಗುತ್ತಿತ್ತು.

ಒಮ್ಮೆ ಕಾನಪುರದ ಒಂದು ಮೈದಾನದಲ್ಲಿ ಕಾಂಗ್ರೆಸ್ಸಿನ ತ್ರಿವರ್ಣ ಧ್ವಜವನ್ನು ಕಿತ್ತಹಾಕಬೇಕೆಂದು ಪೊಲೀಸರು ನಿರ್ಧರಿಸಿದರು. ಆ ಸುದ್ದಿ ಆಜಾದನಿಗೆ ಮುಟ್ಟಿತು. ಧ್ವಜ ಮಾನ ಸಂರಕ್ಷಣೆ ಮಾಡಬೇಕೆಂದು ಅವನ ಗೆಳೆಯರಿಗೆ ತಿಳಿಸಿದ. ಆದರೆ ಕೆಲವು ಕಾಂಗ್ರೆಸ್ಸಿನ ನಾಯಕರು ಕ್ರಾಂತಿಕಾರಿಗಳನ್ನು “ದೇಶದ್ರೋಹಿ”ಗಳು ಎಂದು ಬಾಯಿಗೆ ಬಂದ ಹಾಗೆ ಬೈಯ್ಯುತ್ತಿದ್ದರು. ಇದರಿಂದ ಕ್ರಾಂತಿಕಾರಿಗಳಿಗೆ ಅಸಮಾಧಾನ ಆಗಿತ್ತು. ಆಜಾದನು ತ್ರಿವರ್ಣಧ್ವಜ ಗೌರವ ಕಾಪಾಡಬೇಕು ಎಂದಾಗ ಕೆಲವು ಗೆಳೆಯರು ಭಿನ್ನಾಭಿಪ್ರಾಯ ತೋರಿಸಿದರು. ಆಗ ಆಜಾದನು  ಹೇಳಿದ, ” ಈಗ ತ್ರಿವರ್ಣಧ್ವಜ ಕೇವಲ ಕಾಂಗ್ರೆಸ್ ಸಂಸ್ಥಯ ಧ್ವಜ ಅಲ್ಲ. ಇಡೀ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ  ಗೌರವ ಪತಾಕೆ ಅದು. ಅದಕ್ಕೆ ಅವಮಾನ ಆದರೆ ಅದು ನಮ್ಮೆಲ್ಲರಿಗೂ ಆದ ಅವಮಾನ”.

ಆಜಾದನ ಕ್ರಾಂತಿ ಸಂಸ್ಥೆಯ ಒಬ್ಬ ಕ್ರಾಂತಿಕಾರಿ ಒಂದು ದಿನ ವೈಸರಾಯ್ ಲಾರ್ಡ್ ಇರ್ವಿನ್ ಪ್ರಯಾಣ ಮಾಡುತ್ತಿದ್ದ ರೈಲಿಗೆ ಬಾಂಬು ಇಟ್ಟು ಸ್ಫೋಟಿಸಿದ. ರೈಲಿಗೆ ಜಖಂ ಆದರೂ ವೈಸ್‌ರಾಯ್‌ಗೆ ಏನೂ ಆಗಲಿಲ್ಲ. ಆದರೆ ಇದರ ಪರಿಣಾಮ ಕೆಟ್ಟದಾಯಿತು. ರಾಷ್ಟ್ರದ ದೊಡ್ಡ ನಾಯಕರೂ “ಕ್ರಾಂತಿಕಾರಿಗಳು ದೇಶದ್ರೋಹಿಗಳು, ಹಿಂಸಾಚಾರಿಗಳು” ಎಂದು ಜರಿದರು. ಆಗ ಕ್ರಾಂತಿ ಸಂಸ್ಥೆಯ ಸೇನಾಧಿಪತಿ ಆಜಾದ್ ಉತ್ತರ ಕೊಡಬೇಕಾಗಿ ಬಂತು. “ಬಾಂಬಿನ ದರ್ಶನ ಶಾಸ್ತ್ರ” ಎಂಬ ಹೆಸರಿನಲ್ಲಿ ಕೈಹೊತ್ತಗೆಯನ್ನು ಹೊರಡಿಸಿದ. “ಕ್ರಾಂತಿಕಾರಿಗಳೂ ದೇಶಭಕ್ತರೇ. ಬ್ರಿಟಿಷರನ್ನು ಭಾರತದಿಂದ ಹೊರಗಟ್ಟಲು ಯಾವ ಮಾರ್ಗವಾದರೂ ಸರಿಯೇ ಎಂದು ನಂಬಿರುವವರು. ಬ್ರಿಟಿಷರಿಗೆ ಅರ್ಥವಾಗುವ ಭಾಷೆಯಲ್ಲೇ ಉತ್ತರಕೊಡಲು ನಿಶ್ಚಯ ಮಾಡಿರುವವರು” ಎಂದು ಅದರ ಒಕ್ಕಣೆ. ಅದನ್ನು ಓದಿದ ಅನೇಕ ಬುದ್ಧಿವಂತರು ಕ್ರಾಂತಿಕಾರಿಗಳನ್ನು ಮೆಚ್ಚಿಕೊಂಡರು.

ಮುಳ್ಳಿನ ಹಾದಿ

ಆಜಾದನಿಗೆ ದೊಡ್ಡ ದೊಡ್ಡ ರಾಷ್ಟ್ರ ನಾಯಕರ ಜೊತೆ ಒಳ್ಳೆ ಅಂತರಂಗದ ಸ್ನೇಹವಿತ್ತು. ಮೋತಿಲಾಲ್ ನೆಹರು, ಮದನ ಮೋಹನ ಮಾಳವೀಯ, ಪುರುಷೋತ್ತಮದಾಸ್ ಟಂಡನ್, ಗಣೇಶ ಶಂಕರ ವಿದ್ಯಾರ್ಥಿ, ಜವಹರಲಾಲ್ ನೆಹರು, ಸಂಪೂರ್ಣಾನಂದ್, ಶ್ರೀಪ್ರಕಾಶ್, ನರೇಂದ್ರದೇವ್ ಮುಂತಾದವರಿಗೆ ಆಜಾದನೆಂದರೆ ಅಭಿಮಾನ.

ಉತ್ತರ ಭಾರತದ ಅನೇಕ ರಾಜರು, ಮಹಾರಾಜರು, ಸರದಾರರು ಇವನ ಸಹವಾಸದಿಂದ ಸ್ವತಂತ್ರ್ಯ ಚಳುವಳಿಗೆ ಸಹಾಯ ಮಾಡುತ್ತಿದ್ದರು. ಹಣ, ಪಿಸ್ತೂಲು, ಬಂದೂಕು, ಕಾಡತೂಸುಗಳನ್ನು ಕೊಡುತ್ತಿದ್ದರು.

ಕ್ರಾಂತಿಕಾರಿಗಳಿಗಂತೂ ಇವನೆಂದರೆ ಪಂಚಪ್ರಾಣ. ಅವರೆಲ್ಲ ಭೈಯಾ ಪಂಡಿತ್‌ಜಿ ಎಂದು ಕರೆಯುತ್ತಿದ್ದರು. ಅವರು ಇವನು ಹಾಕಿದ ಗೆರೆ ದಾಟುತ್ತಿರಲಿಲ್ಲ. ಅನೇಕ ಸ್ತ್ರೀಯರು ಕ್ರಾಂತಿಕಾರಿಣಿಯರಾಗಿ ಹೋರಾಡಿದ್ದು ಆಜಾದನ ಪ್ರೇರಣೆಯಿಂದಲೇ. ಅವನು ಅವರಿಗೆಲ್ಲ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಿದ್ದ: “ನಮ್ಮ ಕ್ರಾಂತಿಕಾರಿ ಜೀವನದಲ್ಲಿ ಸುಖ ಎನ್ನುವುದು ಬರೀ ಕನಸು. ನಮಗೆ ಸಿಗುವುದೆಲ್ಲ ಕಷ್ಟ ಕೋಟೆಲೆಗಳೇ. ನಮ್ಮದು ಹೂವಿನ ಹಾಸಿಗೆಯಲ್ಲ. ಮುಳ್ಳಿನ ಹಾದಿ. ತ್ಯಾಗದ ಹಾದಿ. ಯಾವಾಗಲೂ ನಮ್ಮನ್ನು ನಾವೇ ಬಲಿಕೊಡಲು ಸಿದ್ಧರಾಗಿರಬೇಕು.”

ಮನೆ ಮುರುಕರು

ಇಂಥ ಅಜಾದನಿಗೂ ದ್ರೋಹ ಮಾಡುವ ಗೆಳೆಯರಿದ್ದರು ಎಂದರೆ ಆಶ್ಚರ್ಯ ಆಗುತ್ತೆ ಅಲ್ಲವೇ?

ಹೌದು, ನಮ್ಮ ದೇಶದ ಇತಿಹಾಸವೇ ಹಾಗೆ. ದೇಶಭಕ್ತರು ಹುಟ್ಟಿದ ಕಡೆ ಅವರ ಬೆನ್ನಿಗೆ ಬಾಕು ಹಾಕುವ ದೇಶದ್ರೋಹಿಗಳೂ ಜೊತೆ ಜೊತೆಯಲ್ಲೇ ಹುಟ್ಟಿಕೊಂಡಿದ್ದರು.

ಆಜಾದ್ ಬಹಳ ನಿಷ್ಠೆಯಿಂದ ಪರಿಶ್ರಮದಿಂದ ಕಟ್ಟಿದ ಸಂಸ್ಥೆಯ ಒಳಗೆ ಮನೆ ಮುರುಕರು ಸೇರಿಕೊಂಡರು. ಆಜಾದನು ಬೆಳೆಸಿದ್ದ ಒಳ್ಳೆಯ ಗುಣಗಳನ್ನೂ ಅಭ್ಯಾಸಗಳನ್ನೂ ಹಾಳು ಗೆಡವಿದರು. ನಿಯಮಗಳನ್ನು ಉಲ್ಲಂಘನೆ ಮಾಡಿದರು. ಮಾಡಬಾರದ್ದನ್ನೂ ಮಾಡಿದರು. ಆಜಾದನಿಗೆ ಬಹಳ ಬೇಸರವಾಯಿತು.

ಅತ್ತ ಪೊಲೀಸಿನವರಂತೂ ಆಜಾದನನ್ನು ಹಿಡಿಯಬೇಕೆಂದು ಭೂಮಿ ಆಕಾಶ ಒಂದು ಮಾಡುತ್ತಿದ್ದರು. ಗುಪ್ತಚರರು ದೊಡ್ಡ ಬಲೆ ಬೀಸಿದ್ದರು. ಸಂಸ್ಥೆಯ ಮುಖ್ಯ ವ್ಯಕ್ತಿ ಆಗಿದ್ದ ವೀರಭದ್ರ ತಿವಾರಿ ಎಂಬುವನಿಗೆ ಹಣದ ಆಸೆ ತೋರಿಸಿ ಕೊಂಡುಬಿಟ್ಟರು. ಅವನು ಆಜಾದ್ ಯಾವಾಗ ಏನು ಮಾಡುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂಬುದನ್ನು ಪೊಲೀಸರಿಗೆ ತಿಳಿಸಲಾರಂಭಿಸಿದ.

೧೯೩೧ ನೇ ಇಸವಿ ಫೆಬ್ರವರಿ ೨೭ನೇ ತಾರೀಖು ಬೆಳಗ್ಗೆ ಅಜಾದ್ ಒಬ್ಬರನ್ನು ಭೇಟಿ ಮಾಡಲು ಅಲಹಾಬಾದಿನಲ್ಲಿ ಆಲ್ಫ್ರೆಡ್ ಪಾರ್ಕಿನ ಕಡೆ ಹೆಜ್ಜೆ ಹಾಕಿದ. ಅಲ್ಲಿ ಸಿಕ್ಕಿದ ಅವನೊಂದಿಗೆ ಪಾರ್ಕ್‌ನ ಒಳಗೆ ಒಂದು ಮರದ ಕೆಳಗೆ ಕುಳಿತು ಮಾತನಾಡುತ್ತಿದ್ದ.

ಇದನ್ನು ಮೊದಲಿನಿಂದಲೇ ಗಮನಿಸಿದ ವೀರಭದ್ರ ತಿವಾರಿ ಪೊಲೀಸರಿಗೆ ಸುದ್ದಿ ತಲುಪಿಸಿದ. ಆಜಾದರನ್ನು ಕೊಂದು ಹಾಕಲು ಅದೇ ಸೂಕ್ತ ಸಮಯವೆಂದು ಪೋಲೀಸರು ನಿರ್ಧರಿಸಿದರು.

ಎಂಬತ್ತು ಮಂದಿ ಬಂದೂಕು ಹಿಡಿದ ಪೊಲೀಸರನ್ನು ಹೊತ್ತ ಎರಡು ಪೊಲೀಸ್ ಗಾಡಿಗಳು ರೊಂಯನೆ ಆಲ್ಫ್ರೆಡ್ ಪಾರ್ಕಿನತ್ತ ಬಂದವು. ಪೊಲೀಸರು ಪಾರ್ಕನ್ನು ಸುತ್ತುವರಿದರು.

ಮರೆಯಲಾಗದ ಸಂಗ್ರಾಮ

ಒಂದು ಕಾರಿನಲ್ಲಿ ಬಂದ ನಾಟಬಾಪರ್ ಎಂಬ ಪೊಲೀಸ್ ಅಧಿಕಾರಿ ಕಾರಿನಿಂದ ಇಳಿಯುತ್ತಿದ್ದ ಹಾಗೆಯೇ ಆಜಾದನ ತೊಡೆಗೆ ಗುರಿಯಿಟ್ಟು ಗುಂಡು ಹಾರಿಸಿದ. ಮೊದಲನೇ ಗುಂಡೇ ಆಜಾದನಿಗೆ ಬಡಿಯಿತು. ಆಜಾದನಿಗೆ ಅಪಾಯದ ಅರಿವಾಗಿದ್ದು ಆಗಲೇ. ಆಜಾದ್ ಪೆಟ್ಟು ತಿಂದ ಸಿಂಹದಂತೆ ಎದ್ದು ನಿಂತುಕೊಂಡ.

ಕೈಯಲ್ಲಿ ಪಿಸ್ತೂಲು ಹಿಡಿದು ಒಂದೇ ಸಮನೆ ಗುಂಡು ಹಾರಿಸಲಾರಂಭಿಸಿದ. ಅವನು ಯಾವ ಮರದ ಕೆಳಗೆ ನಿಂತಿದ್ದನೋ ಅದನ್ನೇ ಆಶ್ರಯವನ್ನಾಗಿ ಮಾಡಿಕೊಂಡು, ನಿಂತಲ್ಲಿ ನಿಲ್ಲದೆ ಚಿರತೆಯಂತೆ ಓಡಾಡುತ್ತಾ ಪೊಲೀಸರಿಂದ ಸತತವಾಗಿ ಸುರಿಯುತ್ತಿದ್ದ ಗುಂಡಿನ ಮಳೆಗೆ ಮಾರುತ್ತರ ನೀಡುತ್ತಿದ್ದ.

ಒಂದು ಕಡೆಗೆ ೮೦ ಕ್ಕೂ ಹೆಚ್ಚು ಪೊಲೀಸರು, ಇನ್ನೊಂದು ಕಡೆ ಒಬ್ಬನೇ ಒಬ್ಬ ಆಜಾದ್! ಅಷ್ಟು ಮಂದಿಯ ಎದುರಾಗಿ ಅರ್ಧಗಂಟೆಗೂ ಹೆಚ್ಚು ಸಮಯ ಹೋರಾಡಿದ ಕೇವಲ ಇಪ್ಪತ್ತು ನಾಲ್ಕು ವರ್ಷದ ಆ ಧೀರಕುಮಾರ. ಮಹಾಭಾರತದಲ್ಲಿ ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡ ಅಭಿಮನ್ಯುವೂ ಹೀಗೆಯೇ ಹೋರಾಡಿದ್ದಿರಬೇಕು!

ಹೋರಾಟದ ನಡುವೆಯೇ ಜೊತೆಯಲ್ಲಿದ್ದ ಗೆಳೆಯನನ್ನು ರಕ್ಷಿಸುತ್ತಾ ಅಲ್ಲಿಂದ ಕಳಿಸಿಬಿಟ್ಟ. ಗುಂಡು ಹಾರಿಸುತ್ತಿದ್ದ ಪೊಲೀಸರಿಗೆ ಗಟ್ಟಿಯಾಗಿ ಕೂಗಿ ಹೇಳಿದ, “ಅರೇ ಪೊಲೀಸಿನವರೇ, ನನ್ನ ಮೇಲೆ ಏಕೆ ಗುಂಡುಹಾರಿಸುತ್ತೀರಿ? ನಾನು ನಿಮ್ಮವನೇ, ನಿಮ್ಮ ದೇಶದ ಬಿಡುಗಡೆಗಾಗಿಯೇ ನಾನು ಹೊರಾಡುತ್ತಿರುವುದು.” ಆದರೆ ಆ ಪೊಲೀಸರಿಗೆ ಆಜಾದನ ಈ ಭಾಷೆ ಎಲ್ಲಿ ಅರ್ಥವಾಗಬೇಕು?

ಅವನ ಬಳಿ ಕೊನೆಯಲ್ಲಿ ಒಂದೇ ಒಂದು ಗುಂಡು ಉಳಿದಿತ್ತು. ಅದರ ಲೆಖ್ಖವೂ ಅವನಿಗಿತ್ತು. ಆಗ ಅವನಿಗೆ ಬಾಲ್ಯದ ಪ್ರತಿಜ್ಞೆ ಜ್ಞಾಪಕಕ್ಕೆ ಬಂತು; ಜೀವಂತವಾಗಿ ನಾನು ಎಂದೂ ಸಿಕ್ಕಿ ಬೀಳುವುದಿಲ್ಲ.” ನೆನಪು ಬಂದ ಕೂಡಲೆ ಆ ವೀರ ಆ ಗುಂಡನ್ನು ತನ್ನ ತಲೆಗೇ ಹೊಡೆದುಕೊಂಡು ಧರೆಯನ್ನಪ್ಪಿದ. “ಅಜೇಯ” ಸೇನಾನಿ ಆಜಾದ್ ಅಕ್ಷರಶಃ ಭಾರತಮಾತೆಗೆ ತನ್ನ ರಕ್ತದಿಂದಲೇ ಅಭಿಷೇಕ ಮಾಡಿದ.

ಅವನ ಶವವನ್ನು ನೊಡಿಯೇ ಪೊಲೀಸರಿಗೆ ಭಯವಾಯ್ತು. ಅವನ ಶವಕ್ಕೆ ಮತ್ತೆ ಮತ್ತೆ ಗುಂಡು ಹೊಡೆದು ಅವನು ಬದುಕಿಲ್ಲ ಎಂಬುದು ಖಚಿತ ಮಾಡಿಕೊಂಡು ಮೇಲೆ ಅದನ್ನು ಅಲ್ಲಿಂದ ಸಾಗಿಸಿದರು.

ಆಜಾದನು ಹುತಾತ್ಮನಾದ ಆ ಸ್ಥಳ ಪವಿತ್ರವಾಯಿತು. ಆ ಮರ ಪೂಜಾಕೇಂದ್ರವಾಯಿತು. ಆ ಪಾರ್ಕು ತೀರ್ಥಕ್ಷೇತ್ರವಾಯಿತು. ಜನ ಆ ಮರಕ್ಕೆ ಪೂಜೆ ಆರಂಭಿಸಿದರು. ಕುಂಕುಮ ಹಚ್ಚಿದರು. ಮಾಲೆ ಹಾಕಿದರು, ಸಾವಿರಾರು ಜನ ಅಲ್ಲಿಗೆ ಬಂದು ಹೋಗುವುದು ನೋಡಿ ಪೊಲೀಸರಿಗೆ ಮತ್ತೆ ಭಯ. ಆ ಮರವೇ ಮತ್ತೆ ಎಲ್ಲಿ ಕ್ರಾಂತಿ ಎಬ್ಬಿಸುವುಕೋ ಎಂಬ ಚಿಂತೆ. ರಾತ್ರೋ ರಾತ್ರಿ ಅದನ್ನು ಕಡಿದು ಬೇರು ಸಮೇತ ಅಲ್ಲಿಂದ ಸಾಗಿಸಿಬಿಟ್ಟರು.

ಆದರೆ ಮೂರ್ಖರು ಆ ಆಂಗ್ಲರು! ಆ ಮರವನ್ನು ಕಡಿದರೆ ಆ ಮಹಾಪುರುಷನನ್ನು ಕಡಿದು ಹಾಕಲು ಎಲ್ಲಾದರೂ ಸಾಧ್ಯವೇ? ಅವನು ಕೊಟ್ಯಾಂತರ ಭಾರತೀಯರ ಹೃದಯದಲ್ಲಿ ವಿಜೃಂಭಿಸಿದ.

ಹೊರದೇಶದಿಂದ ವ್ಯಾಪಾರಕ್ಕೆ ಬಂದು, ಮೋಸವನ್ನು ಬಳಸಿ, ಈ ದೇಶವನ್ನೇ ತಮ್ಮ ವಶ ಮಾಡಿಕೊಂಡು ಲೂಟಿ ಹೊಡೆದ ವಿದೇಶಿಯರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಮಹಾಧೀರರಲ್ಲಿ ಆಜಾದ್ ಒಬ್ಬ. ಆತನೂ ಆತನೊಡನೆ ಕೆಲಸಮಾಡಿದ ದೇಶಭಕ್ತರೂ ಹಿಂಸೆಯನ್ನು ಬಳಸಿದ್ದು ವಿದೇಶಿ ಸರ್ಕಾರದ ವಿರುದ್ಧ, ಇಲ್ಲಿ ದಬ್ಬಾಳಿಕೆ ನಡೆಸುತ್ತಿದ್ದ ವಿದೇಶಿಯರ ವಿರುದ್ಧ. ತಮ್ಮ ಸುಖವನ್ನು ತಮ್ಮ ಸಂಸಾರದವರ ಉಳಿವನ್ನು ಬದಿಗೊತ್ತಿ ತಾಯ್ನಾಡಿಗೆ ತಮ್ಮ ಪ್ರಾಣವನ್ನೆ ಅರ್ಪಿಸಿದ ಆ ಧೀರರು ಎಂದೆಂದಿಗೂ ನಮ್ಮ ಸ್ಮರಣೆಯಲ್ಲಿ ಬೆಳಗಬೇಕಾದ ಹುತಾತ್ಮರು.

ಇಂದು ಕೂಡ……

ಇಂದು ಕೂಡ ಆ ಧೀರ ಮಣ್ಣಿನ ಮಗ ಚಂದ್ರಶೇಖರ ಆಜಾದನನ್ನು ನಾವೆಲ್ಲ ನೆನೆಯುತ್ತೇವೆ. ಅವನ ದೇಹದಾರ್ಢ್ಯ, ಸಾಮರ್ಥ್ಯ, ಬುದ್ಧಿವಂತಿಕೆ, ತ್ಯಾಗ ಮನೋಭಾವನೆ, ಮಿತ್ರ ಪ್ರೇಮ, ಸಂಘಟನಾಶಕ್ತಿ, ರಾಷ್ಟ್ರದ ಎಲ್ಲ ಯುವಕರಲ್ಲೂ ಮೂಡಲಿ ಎಂದು ಬಯಸುತ್ತೇವೆ. ಅವನೇ ‘ಆದರ್ಶ ಭಾರತೀಯ ಕ್ರಾಂತಿಕಾರಿ’ ಎಂದು ಕೊಂಡಾಡುತ್ತೇವೆ.