ಮೂಲತಃ ಹಾವೇರಿಯವರಾಗಿದ್ದು ತಾಯಿಯ ತವರೂರು ಗದಗ ಜಿಲ್ಲೆಯ ಚಿಂಚಲಿಯಲ್ಲಿ ೨-೧೨-೧೯೨೬ರಂದು ಜನಿಸಿ ದೇಶದೆಲ್ಲೆಡೆ ಸಂಗೀತ ಸಂಚಾರಿಗಳಾಗಿ ಸಂಚರಿಸಿ ಶಿರ್ಶಿ, ಹಾವೇರಿಗಳಲ್ಲಿ ಸಂಗೀತ ಶಿಕ್ಷಕರಾಗಿ, ಧಾರವಾಡ ಆಕಾಶವಾಣಿ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ಧಾರವಾಡದಲ್ಲಿ ನೆಲೆಸಿ ವಿಶ್ರಾಂತ ಜೀವನ ಸಾಗಿಸುತ್ತಿರುವ ಪಂ. ಚಂದ್ರಶೇಖರ ಪುರಾಣಿಕ ಮಠರು ಕರ್ನಾಟಕದ ಹಿರಿಯ ತಲೆಮಾರಿನ ಹಿಂದುಸ್ಥಾನಿ ಗಾಯಕರಲ್ಲೊಬ್ಬರು. ಗ್ವಾಲಿಯರ್ ಘರಾಣೆಯ ಅಗ್ರಮಾನ್ಯ ಗಾಯಕರು.

ಅವರದು ಸಂಗೀತ ಪರಂಪರೆಯ ಮನೆತನ. ತಂದೆ ಪ್ರಭಯ್ಯ ಕೀರ್ತನಕಾರ. ಅಣ್ಣ ಮೃತ್ಯುಂಜಯ ಹಿಂದೂಸ್ಥಾನಿ ಗಾಯಕ. ತಂದೆಯಿಂದ ಪ್ರೇರಣೆ ಪಡೆದು ಅಣ್ಣನಿಂದ ಸಂಗೀತ ದೀಕ್ಷೆ ಪಡೆದು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ, ಪಂ. ಪುಟ್ಟರಾಜಕವಿ ಗವಾಯಿ ಹಾಗೂ ಪಂಢರಪುರದ ಪಂ. ಜಗನ್ನಾಥ ಬುವಾ ಅವರಲ್ಲಿ ದೀರ್ಘ ಕಾಲದ ಸಂಗೀತ ತಾಲೀಮು ಪಡೆದು ಪ್ರಬುದ್ಧ ಗಾಯಕರಾಗಿರುವ ಅವರು ಹದಿನಾಲ್ಕನೇ ವಯಸ್ಸಿನಲ್ಲಿಯೇ ‘ಗಾಯನ ಪಟು’ ಎಂಬ ಅಗ್ಗಳಿಕೆಗೆ ಪಾತ್ರರಾದರು.

ಶಿರ್ಶಿಯ ಶ್ರೀ ಮಾರಿಕಾಂಬಾ ಹೈಸ್ಕೂಲಿನಲ್ಲಿ ಹನ್ನೊಂದು ವರ್ಷ (೧೯೫೧-೧೯೬೨), ಹಾವೇರಿಯಲ್ಲಿ ಹನ್ನೆರಡು ವರ್ಷ (೧೯೬೨-೧೯೭೫) ಸಂಗೀತ ಶಿಕ್ಷಕರಾಗಿ ನಂತರ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ಕಲಾವಿದರಾಗಿ ಹನ್ನೊಂದು ವರ್ಷ (೧೯೭೫-೧೯೮೬) ಸೇವೆ ಸಲ್ಲಿಸಿ ನಿವೃತ್ತರಾಗಿ, ಕೆಲವರ್ಷ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ಅಧ್ಯಯನ ಪೀಠದಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ಅವರಿಗೆ ದಣಿವೆಂಬುದು ಇಲ್ಲವೇ ಇಲ್ಲ. ೮೦ರ ಇಳಿ ವಯಸ್ಸಿನಲ್ಲಿಯೂ ಅವರ ನಾದ ದಾಸೋಹ ನಿತ್ಯ ನಿರಂತರ ನಡೆದಿದೆ. ಅವರ ಮನೆ ಪ್ರಾಚೀನ ಕಾಲದ ಗುರುಕುಲ. ಅದು ಆಧುನಿಕದ ಮುಕ್ತ ವಿದ್ಯಾ ಕೇಂದ್ರ. ಅಲ್ಲಿ ಬೆಳಗಿನ ೫ ರಿಂದ ರಾತ್ರಿ ೧೦ ರವರೆಗೆ ನಾದ ದಾನ ಕ್ರಿಯೆ ನಿರಂತರ.

ಅವರ ಹಾಡುಗಾರಿಕೆಯಲ್ಲಿ ಗ್ವಾಲಿಯರ್ ಘರಾಣೆಯ ವೈಶಿಷ್ಟಗಳೆಲ್ಲ ತುಂಬ ಸಮೃದ್ಧ, ಖಯಾಲ ಹಾಡುಗಾರಿಕೆ ಮೊದಲ್ಗೊಂಡು ಹಿಂದೂಸ್ಥಾನಿ ಸಂಗೀತ ಪದ್ಧತಿಯ ಎಲ್ಲ ಗಾಯನ ಶೈಲಿಗಳು ಅವರ ಕಂಠದಲ್ಲಿ ತುಂಬ ವಿಸ್ತಾರ. ಅಂತೆಯೇ ಶಿಷ್ಯ ಸಂಪತ್ತು ತುಂಬ ವ್ಯಾಪಕ. ಅಂಥವರಲ್ಲಿ ಆರ್.ಡಿ. ಹೆಗಡೆ (ಶೀಗೆಹಳ್ಳಿ), ಪರಮೇಶ್ವರ ಹೆಗಡೆ (ಕಲಬಾನ) ಶ್ರೀಪಾದ ಹೆಗಡೆ (ಸೋಮನ ಮನೆ), ಡಾ. ಶಾಂತಾರಾಮ ಹೆಗಡೆ, ಡಾ. ಶಾರದಾಭಟ್‌, ರಘುಪತಿ ಎನ್‌.ಭಟ್‌, ಎಸ್‌.ಎಂ. ಭಟ್‌ (ಕಟ್ಟಿಗೆ), ಡಾ.ಕೆ. ಗಣಪತಿ ಭಟ್‌, ವೀರೇಶ ಹಿರೇಮಠ, ವಿದ್ಯಾ ಉಡುಪ, ಪ್ರತಿಭಾ ಕವಡಿಮಟ್ಟಿ, ನಾಗರತ್ನಾ ನವಲಗಂದ, ಸಂಗೀತಾ ಕಟ್ಟಿ-ಕುಲಕರ್ಣಿ, ಸೀಮಾರಾಯಕರ, ಪಿ.ಜಿ. ಹೆಗಡೆ, ಎಂ.ಟಿ. ಭಾಗವತ, ಮಹೇಶ ಹಂಪಿ ಹೊಳಿ, ಪ್ರತಿಭಾ ಮೂಲಿಮನಿ, ರಾಧಾ ದೇಸಾಯಿ – ಮುಂತಾದವರು ಉಲ್ಲೇಖನೀಯರಾಗಿದ್ದಾರೆ.