ದೃಶ್ಯ

[ಕುಂತಳನಗರದ ಬಾಹ್ಯೋಪವನ. ವೀರಸೇನ. ರಣಸಿಂಹ, ಚಂದ್ರಹಾಸ ಬರುತ್ತಾರೆ ಕುದುರೆಸವಾರಿ ಮಾಡಿ ಬುಹದೂರ ಪಯಣ ಬೆಳೆಸಿದ ಚಿಹ್ನೆಗಳೆಲ್ಲ ಕಾಣುತ್ತವೆ.]

ಚಂದ್ರಹಾಸ: – ಮಿತ್ರಿರಿರ, ಇದೆ ಕುಂತಳನಗರಿಯ ಬಾಹ್ಯೋಪವನಂ
ತಾನೆಂಬ ದೂರಭಾವನೆ ನನ್ನ ನೆನಹಿನ
ದಿಗಂತದಲಿ ಸುಳಿಯುತಿದೆ. ನಯಸರದ ಕೋಗಿಲೆಯ
ಸಾದರದ ನುಡಿ ನಮ್ಮನಾದರಿಸಿ ಕರೆಯುತಿದೆ ಕೇಳಿ!
[
ಕೋಗಿಲೆಯ ಉಲಿಹ ಕೇಳಿಸುತ್ತದೆ.]

ರಣಸಿಂಹ: – ಈ ಒಂದೆಡೆಯೊಳೆಯೆ ಅಲ್ತು. ಎಲ್ಲೆಡೆಯೊಳುಂ
ದಾರಿಯುದ್ದಕೂ ಶುಭದ ಮಳೆ ಕರೆದುದೆಮ್ಮಮೇಲೆ.
ದಿನವೆರಡರಲಿ ಮುಗಿಯಿಸುವ ಪಯಣಮಂ
ಒಂದೆ ದಿನದಲಿ ಬಂದೆವೈಸೆ ಪೂರೈಸಿ!
ಎಲ್ಲೆಡೆ ಸುಖಾಗಮನ! ಸರ್ವರಿಂ ಸುಸ್ವಾಗತ!
ನಿನ್ನ ಮೇಲಿಹ ಸದಾ ಭಗವತ್ ಕೃಪೆಗೆ
ಬೇರೆ ಏತಕೆ ಸಾಕ್ಷಿ, ಚಂದ್ರಹಾಸ?

ವೀರಸೇನ: – ಮೊದಲು
ಕುಂಕುಮ ಸುರಂಜಿತ ಹರಿದ್ರಾಂಗದಿಂ ಮೆರೆವ
ನೂತನ ವಧೂವರರು ಬಂದರಿದಿರಾಗಿ!

ಚಂದ್ರಹಾಸ: – ಆಮೇಲೆ ಸಮ ಸದಾಕಾರದಿಂ ಬರುತಿರ್ದ
ಋಷಿವರ್ಯರಿರ್ವರಂ ಕಂಡು ನಮಿಸಿದೆವು!

ರಣಸಿಂಹ: – ಇರ್ದುದವರಾಶೀರ್ವಾದದೊಳ್
ಅದೆಂತಪ್ಪ ಮಂಗಳಧ್ವನಿ!

ವೀರಸೇನ: – ತರುವಾಯ ರಮಣೀಯ ಕುಸುಮ ಫಲಮಂ ಕೊಂಡು
ನಿನಗೀಯಲೈತಹ ವನಾಧಿಪರ ನೋಡಿದೆವು!

ರಣಸಿಂಹ: –  ಆಮೇಲೆ ಇದಿರು ಬಂದಳು ಕಣ್ಗೆ ಚೆಲ್ವಾಗೆ
ಎಳಗರುವೆರಸಿ ಬರ್ಪ ಗೋಮಾತೆ!

ಚಂದ್ರಹಾಸ: – ಇಲ್ಲಿ, ಕುಂತಳನಗರಲಕ್ಷ್ಮಿ ಸುಸ್ವಾಗತಿಸೆ
ಚಾಚಿರುವ ಹಸುರು ಹೂವಿನ ನೀಳ್ದ ತೋಳ್ಗಳೋಲ್
ತಳಿತ ಬನವೆಮ್ಮನೆದುರುಗೊಂಡಿರ್ಪುದೈಸೆ!…
ಕೆಳೆಯರಿರ, ಹರಿಗಳಿಗೆ ನೀರ್ಕುಡಿಸಿ,
ಎಳೆವುಲ್ಲಿನಾಹಾರಮಂ ಕೊಯ್ದಡಕಿ,
ತಣ್ಣೆಳಲಲ್ಲಿ ಆಯಸವ ಪರಿಹರಿಸಿಕೊಳ್ಳಿ, ಹೋಗಿ.
ನಾನಿಲ್ಲೆ ಬನದಲ್ಲಿ ಅಡ್ಡಾಡಿ, ಬೇಗನೆಯೆ
ನಿಮ್ಮೆಡೆಗೆ ಬರುವೆ.

ರಣಸಿಂಹ: – ಈ ಉದ್ಯಾನ ಶೋಭೆಗೆ ರಸೋದ್ದೀಪನಂಗೊಂಡು
ಮೈಮರೆಯದಿರು ಭಕ್ತಿಮೂರ್ಛೆಗೆ ಸಂದು!

ವೀರಸೇನ: – ಅರಣಾದ್ರಿ ಸೃಷ್ಟಿಸೌಂದರ್ಯದಿಂ ಭಾವವಶನಾಗುವಾ
ನಿನ್ನ ರೂಢಿಯ ನೆನೆದು ನಮಗಿನಿತು ಆಶಂಕೆ!

ಚಂದ್ರಹಾಸ: – ಬೇಡ ನಿಮಗಾ ಭಯಂ, ಇಲ್ಲಿ. (ವೀರಸೇನ, ರಣಸಿಂಹ ಹೋಗುತ್ತಾರೆ.)
ಅಃ ಈ ಉದ್ಯಾನ ಶೋಭಾರತಿ
ಪಂಕ್ತಿ ಪಂಕ್ತಿಯೆ ದೀರ್ಘವಂಕಿಮಂ ಮೆರೆವಸಂಖ್ಯೇಯ
ತನ್ನ ಬಹು ಪುಷ್ಪಬಾಹುಗಳಿಂದೆ
ನನ್ನನಕ್ಕರೆಯಿನಪ್ಪುತಿಹಳಲ್ತೆ?…
ಮನವ ತೇಳಿಸುತಿಹುದು ನೆನಪಿನ ದೋಣಿ
ಕಾಲವಾಹಿನಿಯ ಆ ದೂರತೀರಕ್ಕೆ.
ವಿಸ್ಮೃತಿಯ ವೈತರಣಿಯೊಳ್ ಮುಳುಗಿದ್ದ ಆ ಅನುಭವಂ
ಪೂರ್ವಜನ್ಮ ಸ್ಮರಣೆಯಂತೆ ಮೈದೋರುತಿಹುದಿಂದು.
(ದೂರನೋಡಿ)
ಆ ತರಂಗಿಣಿಯ ಸೈಕತದೊಳಲ್ತೆ
ಅಂದೆನಗೆ ದೊರೆತುದಾ ದಿವ್ಯೋಪಲಂ
ಪುಟ್ಟ ಸಾಲಗ್ರಾಮದೊಂದು ರಮಣೀಯ ಶೀಲೆ,
ಶ್ರೀಹರಿ ಕೃಪಾ ಪ್ರತೀಕಂ!.. (ಭಕ್ತಿಭಾವದಿಂದ ನಿಲ್ಲುತ್ತಾನೆ.)
ಭಗವಂತನ ಕೃಪೆ ಒಮ್ಮೊಮ್ಮೆ ಎನಿತು ಕಠೋರ!
ಎನಿತು ಘೋರ?….
ತಳಿತೆಸೆವ ಈ ಮಾಮರದ ಕರಿಯ ತಣ್ಣೆಳಲಲ್ಲಿ
ಹಸುರ ಮೇಲ್ಮಲಗಿ ಮಾರ್ಗಶ್ರಮವ ಕಳೆಯುವೆನು.
(ತೋಳನ್ನು ತಲೆಗಿಂಬುಮಾಡಿ ಮಲಗುತ್ತಾನೆ. ವಿಷಯೆ, ಚಂಪಕಮಾಲಿನಿ, ಪಂಕಜೆ ಪ್ರವೇಶಿಸುತ್ತಾರೆ.)

ಪಂಕಜೆ: – ಬನದ ಪೆಂಪೆಂತು ಮೋಹಿಪುದು ಮನವ,
ನೋಡಿದೆಯಾ, ಕೆಳದಿ.

ವಿಷಯೆ: – ಬನದೇವಿ ತನ್ನಿನಿಯನಾಗಮನಮಂ ಬಯಸಿ,
ಪಸುರುಡೆಯನುಟ್ಟು, ಪೊಂದೊಡವೆಗಳ ತೊಟ್ಟು,
ನವಕುಸುಮ ಮಾಲೆಯಂ ಮುಡಿದು,
ಪೊಳೆವ ಪೂಗೆಂಪಿನಿಂ ಪಣೆಗೆ ಬೊಟ್ಟಿಟ್ಟು,
ಮೆಯ್ಗೆ ಬಿರಿದಲರ ಪರಿಮಳಂಗಳ ಪೂಸಿ,
ಕಾಣಿಕೆಯ ಕೊಡಲೆಂದು ಕೈಯಲ್ಲಿ ಹಣ್ಣುಗಳ
ಗೊಂಚಲುಗಳಂ ಪಿಡಿದು ಕಾದಿಹಳೊ ಎಂಬಂತೆ
ತೋರುತಿದೆ!

ಚಂಪಕಮಾಲಿನಿ: – ನಿನ್ನಂತೆ ಅಲ್ತೆ ನಿನ್ನ ಬನದೇವಿಯುಂ?

ಪಂಕಜೆ: – ವಿಷಯೆ ಯಾರನು ಬಯಸಿ ಕಾದಿಹಳು,ಚಂಪಕಾ?

ಚಂಪಕಮಾಲಿನಿ: – ಅವಳ ಪೊಸ ಜೌವ್ವನವ ನೋಡಿದರೆ ತೋರುವುದು
ಯಾರನೋ ಕಾಯುತಿಹಳೆಂದು!

ವಿಷಯೆ: – ಕಾಯುತಿರುವವಳು ನಾನಲ್ಲ; ನೀನು!

ಚಂಪಕಮಾಲಿನಿ:(ಕೈ ತೋರಿಸುತ್ತಾ) ಅಕ್ಕ, ನಿನ್ನೆ ನೀನಾ ಕೊಳದ
ಮಣಿಶಿಲಾ ಸೋಪಾನದಲೊಬ್ಬಳೆಯೆ ಕುಳಿತು
ಆವ ಸುಂದರ ಮೂರ್ತಿಯಂ ನೆನೆಯುತಿದ್ದೆ?
ನಾನು ಬಳಿ ಸಾರ್ದರೂ ನೀನರಿಯಲೆಯೆ ಇಲ್ಲ;
ನಾನು ಕರೆದರೂ ನಿನಗೆ ಕೇಳಿಸಲೆ ಇಲ್ಲ.
ಬಾಹ್ಯಲೋಕವ ಮರೆತು ಏಕಾಗ್ರಚಿತ್ತದಿಂ
ಜಾನಿಸುವ ಜೋಗಿಯಂತಾಗಿಬಿಟ್ಟಿದ್ದೆ!
ಆರೊ ಆ ಪುಣ್ಯಾತ್ಮ, ನಿನ್ನ ಧ್ಯಾನದ ಪರಮಪುರುಷ?

ವಿಷಯೆ: – ಧ್ಯಾನಿಗಳ್ ಬೇರೆವೇರೆಯಾದೊಡಂ
ಧ್ಯೇಯಮಾ ಪರಮಪುರುಷಂ ಸರ್ವರ್ಗಂ ಒರ್ವನಲ್ತೆ?
ನಮ್ಮಿರ್ವರ್ಗಮಂತೆ! ಬೇರೆವೇರೆಯೆ?

ಚಂಪಕಮಾಲಿನಿ: – ಅಬ್ಬ! ಪಂಡಿತೋತ್ತಮೆ,
ಪರಮಾತ್ಮ ನಲ್ತು ನನ್ನಾ ಕುತೂಹಲಂ!
ಆ ಕೊಳದ ಮಣಿಶಿಲಾ ಸೋಪಾನದೊಳ್
ಒರ್ವಳೆಯೆ ತಳ್ತು ಕುಳ್ತು
ಆವ ಚೆಲುವನಂ ಜೀವಾತ್ಮನಂ ನೆನೆಯುತಿದ್ದೆ?
ಎಂಬುದೆನ್ನಯ ಪ್ರಕೃತ ಪ್ರಶ್ನೆ!

ವಿಷಯೆ:(ನಕ್ಕು) ತಂಗಿ, ಕೇಳ್, ಪೇಳ್ವೆನ್: ತೆಂಬೆಲರ ಸೊಗಸಿಂದ
ತಲೆದೂಗುವಂಬುಜಗಳೆಡೆಯಲ್ಲಿ
ಮಂಜುಳ ನಿನಾದದಿಂ ಮೊರೆದಿರ್ದ
ತುಂಬಿಗಳ ಬಿನದಮಂ ಪರಿಕಿಸುತಲಿದ್ದೆ.

ಚಂಪಕಮಾಲಿನಿ: – ಒಚ್ಚೇರೆಗಣ್ಣ ಕೋಮಲೆಯೆ,
ಮನಸಿಜನ ಮಸೆದಂಬೆ,
ನಿನ್ನ ಕಂಗಳಲೇಕೆ ನಾನು ಬಳಿಸಾರೆ
ಕಂಬನಿಗಳಾಡಿದುವು?
ಕಲಕೀರವಾಣಿಯೇ, ಕಂಠ ಗದ್ಗದವಾದುದೇಕೆ?
ಏಕೆ ಕಂಪಿಸಿತು ತೊಂಡೆವಣ್ತುಟಿ?
ಕೆಂದಾವರೆಯ ಮೊಗದಿ ಮಲ್ಲಿಗೆ ಮಲರ್ದ್ದುದೇಕೆ?
ನಳನಳಿಪ ಹೂಗೆನ್ನೆಯಲಿ ಬೆಮರಿಳಿಯಿತೇಕೆ?….

ಪಂಕಜೆ:(ಚಂಪಕಮಾಲಿನಿಗೆ)
ನೀನಿಲ್ಲಿಗೈತರುವ ಮುನ್ನವಳು, (ವಿಷಯೆಯ ಕಡೆ ತಿರುಗಿ)
ಹೇಳಲೆ, ಸಖೀ?….
ಹಾಡುತಿದ್ದಳು ಪ್ರೆಮಗೀತಿಕೆಯೊಂದನಿಂಪಾಗಿ!…
ನಾನು ಮಾಮರವನಪ್ಪಿರುವ ಮಲ್ಲಿಗೆಯ ಹೊದರ
ಬಳ್ಳಿಯಲಿ ಹೂಕೊಯ್ಯುತಿದ್ದಾಗ ಆಲಿಸಿದೆ. (ವಿಷಯೆಗೆ)
ಹಾಡಲಿಲ್ಲವೆ, ದೇವಿ? ನಿಜವನೊರೆ.

ವಿಷಯೆ: – ಪಂಕಜೆ, ನಿನಗೇಗಳೂ ಹಾಡುವುದೆ ಹುಚ್ಚು.
ನೀನಂದು ಬೃಂದಾವನದಿ ಗೋಪಿಯಾಗಿದ್ದೆಯೋ
ಏನೋ?

ಪಂಕಜೆ: – ನೀ ರಾಧೆಯಾಗಿದ್ದಿದ್ದರೆ!…
ಏಗಳುಂ ನೀನಾವನೊಬ್ಬನ ನೆನೆದು ಚಿಂತಿಸಿಹೆ!

ಚಂಪಕಮಾಲಿನಿ: – ವಿಷಯೆ, ಅದು ಇರಲಿ. ಆ ಹಾಡ ಹಾಡೀಗ.
(ವಿಷಯೆ ಸುತ್ತಲೂ ನೋಡುತ್ತಳೆ.)
ಸುತ್ತ ನೋಡುವುದೇಕೆ? ಯಾರೂ ಇಲ್ಲಿಲ್ಲ.

ವಿಷಯೆ: – ಅದಕಲ್ಲ, ಅಂಗಜನ ಸೊಕ್ಕಾನೆ!
ಆ ಕೊಳದೊಳಿದ್ದ ಅರಸಂಚೆಗಳು ಗುಂಪಾಗಿ
ಮಾಲೆಮಾಲೆಗಳಾಗಿ ಹಾರುತಿಹವೇಕೆಂದು
ಬೆರಗಾಗಿ ನೋಡಿದೆನು…

ಪಂಕಜೆ: – ಅದಕೇಕೆ ಬೆರಗು?
ನಿನ್ನ ನಡೆಯ ವಿಲಾಸಮಂ ಕಂಡು
ಕಲಹಂಸಗಳು ನಾಚಿ ಹಾರಿದವು ನಭಕೆ
ಕಾಲಿಂದೆ ನಡೆಯಲೊಲ್ಲದೆ…

ಚಂಪಕಮಾಲಿನಿ: – ಅಲ್ಲದೆಯೆ
ನೀರ ಮೇಲಕೆ ನೆಗೆದು ಮಿಂಚಿ ಮುಳುಗುವ ಮೀನು
ಈ ಲೋಲಲೋಚನೆಯ ದಿಟ್ಟಿಗಳ ಕಂಡು
ತಮ್ಮಾಟ ಪಾಸಟಿಯಾಗದಿರೆ
ಲಜ್ಜೆಯಿಂದಾಳಕ್ಕೆ ಮುಳುಗೆ, ಪಾಪ,
ನೀರಿನಾಹಾರ ದೊರಕದೆ ಬಾನ್ಗೆ ಹಾರಿದುವೊ
ಏನೊ?

ವಿಷಯೆ: – ರಸಿಕತೆಯ ಕಡಲ ಕಡೆಯಲು ಮದನ,
ಕವಿಯ ರಸಲಕ್ಷ್ಮಿ ನೀನುದಿಸಿ ಬಂದೆಯಲ್ತೆ?

ಪಂಕಜೆ: – ವಿಷಯೆ, ಆ ಹಾಡು?

ಚಂಪಕಮಾಲಿನಿ: – ಅಹುದಹುದು ಮರೆತಿದ್ದೆ.
ಈ ಕಲ್ಮಣೆಯ ಮೇಲ್ಕುಳಿತು ಗೀತೆಯನು ಕೇಳುವೆವು…
[ಎಲ್ಲರೂ ಕುಳಿತುಕೊಳ್ಳುತ್ತಾರೆ.]

ವಿಷಯೆ: – ನಾ ಹಾಡಲೊಲ್ಲೆ.

ಚಂಪಕಮಾಲಿನಿ:(ವಿನೋದವಾಗಿ) ಬಿಂಕವೇತಕೆ ನಿನಗೆ? ಹಾಡಬಾರದೆ, ರಮಣಿ?

ವಿಷಯೆ:(ವಿನೋದವಾಗಿ)  ಬರಿದೆ ಪೀಡಿಪೆ ಏಕೆ? ಹಾಡಲೊಲ್ಲೆನು, ರಮಣ?

ಚಂಪಕಮಾಲಿನಿ: – ಓಹೊ, ನಿಜದ ನಾಟಕಕೆ ಅಭ್ಯಾಸ ಪೀಠಿಕೆಯೊ?

ಪಂಕಜೆ: – ಹಾಗಲ, ಕವಿಗಳನು ರಸಿಕರು ಕೆಣಕಿಲ್ಲದೆ
ನಮಗೆ ಲಾಭವೆಲ್ಲಿ? ತಮ್ಮ ಸರಕಿನ ಮೂಟೆಯನು
ಸುಮ್ಮನೆಯೆ ಬಿಚ್ಚುವರೆ? ರಸತುಂಬಿ ಬಿರಿಯುತಿಹ
ಕರಿಯ ಕಬ್ಬನು ಬರಿದೆ ಬೇಡಿದೊಡೆ ತನ್ನೆದೆಯ
ಸವಿವೊನಲ ನೀಡುವುದೆ? ಹಿಂಡಿದರೆ ತಾನೆ
ದೊರಕುವುದು ರಸ?

ವಿಷಯೆ: – ಸಾಕು ನಿನ್ನುಪಮಾನ.

ಪಂಕಜೆ: – ಸಾಕು ನಿನ್ನುಪಮಾನ!

ಚಂಪಕಮಾಲಿನಿ: – ಹಾಡಕ್ಕ, ಸಾಕು ನಿನ್ನಭಿಮಾನ!

ವಿಷಯೆ:(ಹಾಡುತ್ತಾಳೆ)
ಬನದ ತಣ್ಣೆಳಲಿನಲಿ
ತಳಿರ ಶಯನದಿ
ಇನಿಯನೆಮ್ಮ ಕಾಯುತಿಹನು;
ಬಾರಲೆ ಕೆಳದಿ!

ಚಂಪಕಮಾಲಿನಿ:(ಸುತ್ತ ಹುಡುಕಿ ನೋಡುವಳಂತೆ ನಟಿಸುತ್ತಾ)
ಎಲ್ಲಿ, ಪಂಕಜೆ, ಕಾಯುತಿಹನಂತೆ?

ಪಂಕಜೆ: – ನೋಡಲ್ಲಿ
ತಳಿತೆಸೆವ ಚಂಪಕವೆ ಅವಳಿನಿಯನಿರಬೇಕು!

ವಿಷಯೆ:(ಸರಸದ ಮುನಿಸಿನಿಂದ)
ಸಾಕು , ಬಾಯ್ಮುಚ್ಚು, ಪಂಕಜೆ. ನಿನ್ನ ಮನದನ್ನ
ಗೊಣಗುತ್ತ ಮುದುಕನಂತೆಲರಿನಲಿ ತಲೆಯೊಲೆಯುವಾ
ಬಿದಿರಮೆಳೆಯಿರಬೇಕು. (ಕೈದೋರುತ್ತಾಳೆ.)

ಚಂಪಕಮಾಲಿನಿ: – ಬಿಡು, ತಂಗಿ; ಸಿಗ್ಗೇಕೆ?
ನಿನ್ನೈನಿದನಿಯನಾಲಿಸೆ ಮೌನವಾಂತಿದೆ ಬನಂ;
ನೋಡು!…. ಹಾಡು!

ವಿಷಯೆ: – ನಾನೊಲ್ಲೆ. ನೀವೆಲ್ಲ
ಪರಿಹಾಸ್ಯ ಮಾಡುವಿರಿ.

ಚಂಪಕಮಾಲಿನಿ: – ಇನ್ನು ಮಾಡುವುದಿಲ್ಲ.
ಹಾಡು.

ವಿಷಯೆ:(ಹಾಡುತ್ತಾಳೆ)

ಬನದ ತಣ್ಣೆಳಲಿನಲಿ
ತಳಿರ ಶಯನದಿ
ಇನಿಯನೆಮ್ಮ ಕಾಯುತಿಹನು;
ಬಾರಲೆ ಕೆಳದಿ!
ಅಲ್ಲಿ ಕಲಕಂಠಗಳು
ಹಾಡುತಿರುವುವು;
ಅಲ್ಲಿಗಿಳಿವಿಂಡುಗಳು
ಕೂಗುತಿರುವುವು.

ಪಂಕಜೆ: – ಗಾನವೆನಿತಿಂಪು! ಎದೆ ಉಬ್ಬಿ ಹಾರುತಿಹುದೆನಗೆ!

ಚಂಪಕಮಾಲಿನಿ: – ಗಾನಕ್ಕೆ ಮನಸೋಲದವರುಂಟೆ?
ಇದ್ದರವನತಿಪಾಪಿ. ಅವನೆದೆಯೆ ನರಕ…
ನೋಡಲ್ಲಿ, ಬಯಲೊಳಿಹ ಗೋವು ತಲೆಯೆತ್ತಿ
ಕಿವಿಯ ನೆಟ್ಟಗೆ ನಿಮಿರಿ, ಪುಲ್ಮೇವನೆಯೆ ಮರೆತು,
ಮೆಯ್ಮರೆತು, ಆಲಿಸುತ್ತಿಹವು ನಟ್ಟಾಲಿಯಾಗಿ!

ಪಂಕಜೆ: – ಹಾಡೆನ್ನ ಸರತಿಯ ಬೀಣೆ, ಓ, ಹಾಡು!

ವಿಷಯೆ:(ಹಾಡುತ್ತಾಳೆ)
ಎಳದಳಿರೊಳು ನಲಿನಲಿಯುತ
ಮಂದ ಮಾರುತ
ಮೆಲುನಡೆಯಲಿ ಸುಳಿದಲೆವನು
ಮದುವ ಸಾರುತ!
ಬನದ ತಣ್ಣೆಳಲಿನಲಿ
ತಳಿರ ಶಯನದಿ
ಇನಿಯನೆಮ್ಮ ಕಾಯುತಿಹನು;
ಬಾರಲೆ ಕೆಳದಿ!

ಪಂಕಜೆ: – ಇದೇನು ನಿಲ್ಲಿಸಿದೆ?

ವಿಷಯೆ: – ಹಾಡು ಪೂರೈಸಿತು.

ಪಂಕಜೆ: – ಸುಳ್ಳಾಡುತಿಹೆಯಲ್ಲ; ಮುಂದಿಹುದು ನಾ ಬಲ್ಲೆ.

ಚಂಪಕಮಾಲಿನಿ: – ಹೇಳು ನಾಚಿಕೆಯೇಕೆ, ಅಕ್ಕ? ನಾವೆಲ್ಲ
ನಿನ್ನಂತೆ! ತರಳೆಯರು, ಮುಗ್ಧೆಯರು,
ಜೌವ್ವನೆಯರು!

ವಿಷಯೆ:(ಹಾಡುತ್ತಾಳೆ)
ಸುಮಗಳನು ಕೊಯ್ದು ನೆಯ್ದು
ಮಾಲೆ ಸೂಡುವಾ!
ಮನಸಿಜನ ಕಣೆಗಳಂತೆ
ತೇಲಿ ತಾಗುವಾ!
ಬನದ ತಣ್ಣೆಳಲಿನಲಿ
ತಳಿರ ಶಯನದಿ
ಇನಿಯನೆಮ್ಮ ಕಾಯುತಿಹನು;
ಬಾರಲೆ ಕೆಳದಿ!

ಪಂಕಜೆ: – ನೀನಿನಿತು ರಸಿಕಳೆಂದು ನಾನು ತಿಳಿದಿರಲಿಲ್ಲ.

ವಿಷಯೆ: – ಹೊಗಳಿಕೆಯಿರಲಿ, ನೀನೊಂದು ಹಾಡು ಹಾಡಲೆಬೇಕು.

ಪಂಕಜೆ: – ನೀನು ಹಾಡಿದ ಮೇಲೆ ನಾನು ಹಾಡುವುದೆ?
ಹೊತ್ತಾಯ್ತು, ನಾಳೆ ಹಾಡುವೆ ನಾನು. ಈಗ
ಹೂಕೊಯ್ದುಕೊಂಡು ಹೋಗೋಣ ಬೇಗ.

ಚಂಪಕಮಾಲಿನಿ: – ಹೌದು. ಹೊತಾಯ್ತು. ಮೇಲೇಳಿ.

ವಿಷಯೆ: – ನೀವೆಲ್ಲ ಜಾಣೆಯರು.
ನನ್ನಂತಹರು ನಿಮ್ಮೊಡನೆ ಬರಬಾರದು.

ಪಂಕಜೆ: – ನಾನು ಆ ಸುರಗಿ ಮರವನು ಹತ್ತಿ ಹೂಕೊಯ್ಯುವೆ.
[ಹೊರಡುತ್ತಾಳೆ]

ಚಂಪಕಮಾಲಿನಿ: – ನಾನಲ್ಲಿ ಅರಳಿರುವ ಜಾತಿಗಳ ಕುಯ್ವೆ.
[ಹೊರಡುತ್ತಾಳೆ]

ವಿಷಯೆ: – ನಾನಿಲ್ಲೆ ಮಾಮರದ ಬಳಿಸೇರಿ, ಮಲ್ಲಿಗೆಯ
ಮೊಗ್ಗುಗಳ ಕೊಯ್ಯುವೆನು!
(ಎಂದು ಮುಂಬರಿದು ಮಲಗಿರುವ ಚಂದ್ರಹಾಸನನ್ನು ನೋಡಿ, ಬೆರಗುವೋಗಿ ಹಿಂಜರಿದು, ನಟ್ಟನೋಟವಾಗಿ ನಿಲ್ಲುತ್ತಾಳೆ)
ಆರಿವನು? ಆ.. ರಿ.. ವ.. ನು?
ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ
ತಂಗಾಳಿಗೊಡ್ದಿದ ಮೆಯ್ಯ ಸೊಗಸಿಂದೆ ಮೆರೆದು,
ನಿದ್ರಾಲೋಲನಾಗಿಲ್ಲಿ ಮಲಗಿಹನ್! ಆ.. ರಿ.. ವ.. ನು?
(ಒಂದೆರಡು ಹೆಜ್ಜೆ ಮುಂದೆ ಸರಿಯುತ್ತಾಳೆ)
ಲೋಕತ್ರಯಂ ತನಗೆ ವಶವರ್ತಿಯಾದುದು;
ಇನ್ನೇಕೆ ಧಾವತಿಯೆಂದು ಸುಖದಿಂದೆ ಪವಡಿಸಿಹ
ಕರ್ವುವಿಲ್ಲನೆನೆ ನಿದ್ರಿಪನು ಸರ್ವಸ್ವಮಂ ಮನಮಂ
ಶೃಂಗಾರದಿಂ ಸೂರೆಗೈದು! ಆ.. ರಿ.. ವ.. ನು?
(ಒಂದು ಹೆಜ್ಜೆ ಮುಂಬರಿದು, ಮೆಚ್ಚಿನೋಡುತ್ತಾಳೆ)
ಬೇಸರದೆ ಬಾಂದಳದೊಳಾವಗಂ ತಿರುಗಿ ತೊಳಲಿ,
ಸಾಕಾಗಿ, ಇಳೆಗಿಳಿದು ಪವಡಿಸಿಹ ಚಂದ್ರನೆಯೆ
ಅಕಂಳಂಕ ಛದ್ಮರೂಪದೊಳಿಂತು…( ತಟಕ್ಕನೆ ಹಿಂದೆ ಸರಿದು)
ಎಚ್ಚರುತಿಹನೆ?…
ನಿದ್ದೆಯೊಳೆ ನಗುತಿಹನೆ? ನಟಿಸಿ ನಿದ್ರಿಸುತಿಹನೊ?
ಇಲ್ಲ, ಇಲ್ಲ, ಕೈತವವನರಿಯದೀ ಮುಗ್ಧಮುಖ!
(ಮತ್ತೆ ಹತ್ತಿರ ಹೋಗಿ ನೋಡುತ್ತಾಳೆ; ನಾಚುತ್ತಾಳೆ; ತುಟಿಗೆ ಕೈಯಿಟ್ಟು ಮೆಲ್ಲಗೆ ನಗುತ್ತಾಳೆ.)
ನಮ್ಮ ಸಲ್ಲಾಪಗಳನೆಲ್ಲಿ ಕೇಳಿದನೊ ಏನೊ?
ಎನ್ನ ಕೆಳದಿಯರೆಲ್ಲಿ? (ಸುತ್ತಲೂ ಕದ್ದು ನೋಡುತ್ತಾಳೆ)
ಹಾರುತಿದೆ ನನ್ನೆದೆ!
ಏದುತಿದೆ ಏಕಿಂತು ತಪ್ಪು ಮಾಡಿದ ಮಗುವಿನಂತೆ?
ಒರ್ವರ್ ಒರ್ವರನ್ ಅಗಲರ್ ಅಶ್ವಿನೀದೇವರ್ಕಳ್;
ಉರ್ವ ನಳಕೂಬರ ಜಯಂತಾದಿ ಸುರತನುಜರ್
ಉರ್ವರೆಗದೇಕೆ ಬಹರ್?… ಅವರಲ್ತು…
ಯಕ್ಷಕಿನ್ನರ ಸಿದ್ಧ ಗರುಡ ಗಂಧರ್ವಾದಿ
ಗೀರ್ವಾಣರೊಳಗಾವನೋ ದಿಟಂ: ಮನುಜನಲ್ಲೀತನ್!
(ಸುತ್ತ ನೋಡುವಳೊಮ್ಮೆ; ನೂಪುರವಲುಗದಂತೆ ಹತ್ತೆ ಸಾರುವಳೊಮ್ಮೆ; ಸೋಂಕಲೆಂತಹುದೆಂದು ಮತ್ತೆ ಮುರಿದಪಳೊಮ್ಮೆ; ಹಜ್ಜೆ ಹಜ್ಜೆಯ ಮೇಲೆ ಸಲ್ವಳಮ್ಮದೆನಿಲ್ವಳು! ಚಿತ್ತದೊಳ್ ನಿಚ್ಚಯ್ಸಿ ನೆರೆಯಲೆಳಸುವಳೊಮ್ಮೆ; ಹೊತ್ತಲ್ಲದನುಚಿತಕೆ ಬೆದರಿ ಹಿಂಗುವಳೊಮ್ಮೆ; ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ನಿಂದಿರ್ದಳಾತನ ಪೊರೆಯೊಳು!
ಮುತ್ತಿಡುವೆನೆಂದೊಡಿವನೀ ನಿದ್ದೆಗಾಗುವುದು
ಭಂಗ! ಗಾಢದಿಂದಪ್ಪುವೆನೆ ಹೊತ್ತಲ್ಲ!
ಎನ್ನ ಕೆಳದಿಯರಿಲ್ಲಿಗೈತಂದು ಕಂಡರೆ?
ಕರುಬುವರು! (ಕಂಚುಕದ ಸೆರಗಿನಲ್ಲಿ ಪತ್ರಿಕೆಯನ್ನು ನೋಡಿ)
ಕಂಚುಕದ ಸೆರಗಿನಲಿ ಪತ್ರಿಕೆಯಿದೇನು?
ಬಿಚ್ಚಿ ಮುದ್ರೆಯನೊಡೆದೆ ನೋಡುವೆನ್!
(ಹಾಗೆ ಮಾಡಿ, ವಿಸ್ಮಯದಿಂದ)
ಏನಿದೆನ್ನಯ ತಂದೆಯಕ್ಷರಂ? ಆತನೆಯೆ
ಬರೆದ ಪತ್ರಿಕೆ ಇದು! ಇರಲಿ, ಓದುವೆನ್:
(ಓದುತ್ತಾಳೆ)
“ಶ್ರೀಮತ್ ಸಚಿವ ಶಿರೋಮಣಿ ದುಷ್ಟಬುದ್ಧಿ
ಸುಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ
ನೇಮಿಸಿದ ಕಾರ್ಯಮ್:
ಈ ಚಂದ್ರಹಾಸಂ ಮಹಾಹಿತನೆಮಗೆ
ಮೇಲೆ ನಮ್ಮ ಸೀಮೆಗರಸಾದಪಂ;
ಸಂದೇಹಮಿಲ್ಲಿದಕೆ. ಸಾಮಾನ್ಯದವನಲ್ಲ;
ನಮಗೆ ಮುಂದಕೆ ಸರ್ವಥಾಮಿತ್ರನಾಗುವನ್
ಎಂದೀತನಂ ಕಳುಹಿದೆವು ನಿನ್ನ ಬಳಿಗೆ:
ಇದನರಿವುದು! ಹೊತ್ತುಗಳೆಯದೆ,
ಬಂದ ಬಳಿಕಿವನ ಕುಲ ಶೀಲ ವಿತ್ತ ವಿದ್ಯಾ
ವಯೋ ವಿಕ್ರಮಂಗಳನೀಕ್ಷಿಸುತ್ತಿರದೆ
ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನ್!
ಇದರೊಳೆಮಗೆ ಉತ್ತರೋತ್ತರಮಪ್ಪುದು.
ಆಂ ಬೇಗ ಚಂದನಾವತಿಯಿಂದ ರಾಜಕಾರ್ಯವ ಮುಗಿಸಿ
ಬರ್ಪೆನ್. ಎನ್ನ ಚಿತ್ತಮಂ ನೀನರಿತು
ಹಿಂಜರಿಯದೆಲ್ಲಮಂ ಪೂರೈಸು ಯುಕ್ತಿಯಿಂದ!”
(ಓದಿ ಚಿಂತಾಕ್ರಾಂತಳಾಗಿ ನಿಲ್ಲುತ್ತಾಳೆ. ಆಶ್ಚರ್ಯ, ಶೋಕ, ಕ್ರೋಧ, ಸಂಶಯಾದಿಭಾವಗಳು ತರಂಗಿತವಾಗುತ್ತವೆ ಅವಳ ಮೊಗದಲ್ಲಿ.)
ವಿಷವ ಮೋಹಿಸುವಂತೆ! ಇದರರ್ಥವೇನು?
ಮನ್ಮಥನ ಮೀರುತಿಹ ಗಾಡಿಯಿಂದೆಸೆವಿವಗೆ
ವಿಷವನೂಡುವುದುಂಟೆ? ಪುಸಿ! ಪುಸಿ! ತೆಗೆತೆಗೆ!
ಈತಂ ತಮಗೆ ಮಹಾ ಹಿತನೆಂದು;
ನಮ್ಮ ಧರೆಗೀತನರಸನಹನೆಂದು;
ಕುಲ ಶೀಲ ವಿದ್ಯೆಗಳನ್ ಈತನೊಳ್ ಅರಸಬೇಡ,
ಮುಂದಕೀತಂ ನಮಗೆ ಸರ್ವಥಾ ಮಿತ್ರನಹನೆಂದು;
ನೀನೀತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂದು,
ತಂದೆ ಅಣ್ಣಗೆ ಬರೆಸಿ ಕಳುಹಿದ ಪತ್ರವೇ ತಪ್ಪದಿದು!
ಕಡು ಚೆಲ್ವನಾದ ವರನಂ ಕಂಡು, ನಿಶ್ಚಯ್ಸಿ,
ತಡೆಯದೀತಂಗೆ ನಾಂ ಮೋಹಿಸುವ ತೆರದಿಂದೆ
ಕಡುವುದೆಂದೆನ್ನ ಪಿತನೀತನಂ ಕಳುಹಿಸಿರ್ಪನ್.
ಒಡಗೂಡದಿರದು ಎನ್ನ ಮನದೆಣೆಕೆ.
ಪತ್ರಿಕೆಯೊಳ್ ಎಡಹಿ ಬರೆದಕ್ಕರದ ಬೀಳಿರ್ದೊಡೆ
ಅದರಿಂದೆ ಕೆಡುವುದಗ್ಗದ ಕಜ್ಜಂ.
ತಪ್ಪಿರ್ದ ಲಿಪಿಯೊಳ್ ‘ವ’ ಕಾರಮಂ ತೊಡೆದು
ಅಲ್ಲಿಗೊಪ್ಪುವ ‘ಯೆ’ ಕಾರಮಂ
ಈ ಮಾಮರದೊಳಿಪ್ಪ ನಿರ್ಯಾಸಮಂ ತೆಗೆದು
ಕಿರುವೆರಳ ಉಗುರ ಕೊನೆಯಿಂದೀಗಳೆಯೆ
ತಿದ್ದಿ ಒರೆದೆಪೆನ್….
(ಮಾಮರದ ನಿರ್ಯಾಸದಿಂದ ಉಗುರ ಕೊನೆಯಿಂದ ತಿದ್ದಿ ಮೊದಲಿನಂತೆಯೆ ಕಟ್ಟುವಳು. ದೂರದಿಂದ ವಿಷಯೆ! ವಿಷಯೆ! ಎಂಬ ಸಖಿಯರ ಕರೆ ಕೇಳಿಸುತ್ತಿದೆ.)
ಸಖಿಯರೆನ್ನಂ ಕೂಗುತಿಹರು; ಮನಮಿವನ
ರೂಂಪಿಗೆ ಸೆರೆಸಿಕ್ಕಿ ಚಲಿಸಲೊಲ್ಲದು; ದಿಟ್ಟಿ
ಮುರಿಯದಿದೆ; ನಡೆಯಲಡಿ ಅಚಲವಾಗುತಿದೆ!
[ಹಿಂದೆ ನೋಡುತ್ತಾ ನೋಡುತ್ತಾ ನೂಪುರಧ್ವನಿಮಾಡುತ್ತಾ ಹೋಗುತ್ತಾಳೆ. ಚಂದ್ರಹಾಸನು ನಿದ್ರೆಯಿಂದೆಚ್ಚತ್ತು ಸುತ್ತಲೂ ನೋಡಿ ಮೇಲೇಳುತ್ತಾನೆ.]

ಚಂದ್ರಹಾಸ: – ಅಃ ಅದೆಂತೆಪ್ಪ ಜೇನ್ಗನಸಿನಿಂದೆಳ್ಚರ್ತೆನಾಂ!
ಕನಸಿನೊಳೆ ಕೇಳಿದುದೆ ಅವ್ಯಕ್ತಮಧುರಮಾ ಗಾನಂ?
ಕನಸಿನೊಳ್ ಕಂಡೆನೆ ಆ ದಿವ್ಯ ಸುಂದರ ಮೂರ್ತಿಯಂ?
ಕನಸಲ್ಲ. ಕನಸನಿತು ತಿಳಿಯಾಗಿ ತೋರ್ಪುದೇನ್?
ಏನ್ ಅಲೌಕಿಕಮೊ ಆ ಅನುಭವಂ?
ಲಾವಣ್ಯವೇ ಮೂರ್ತಿಮತ್ತಾದಂತೆ ದಿವ್ಯಾಕಾರೆಯೊರ್ವಳ್
ಎನ್ನೆಡೆಯೆ ಸುಳಿದಾಡಿದಂತಾಯ್ತು. ಇನುಮಿದೆ
ಕಿವಿಗಳೊಳ್ ಆ ನೂಪುರಧ್ವನಿಯಿಂಚರಂ!
ಮುಂದೆ ಎಂದಾದೊಡಂ ಆ ಸ್ವಪ್ನ ಸಾಮ್ರಾಜ್ಯದಲಿ
ಮತ್ತೆ ಸಂಚರಿಪ ಭಾಗ್ಯಮೆನಗೊದಗುವುದೆ?
ಆ ಕನಸನುಳಿದೆನ್ನ ಹೃದಯಮಂದಿರವೀಗ
ರಿಕ್ತಮೆನೆ ಬಿಮ್ಮನಿದೆ. ಹಾ ಮಧುರಸ್ವಪ್ನವೆ!…
ಓ! ರಣಸಿಂಹನೇಕೆ ಓಡೋಡಿ ಬರುತಿಹೆನ್?
(ರಣಸಿಂಹನ ಪ್ರವೇಶ)
ಏಕೆ ಓಡೋಡಿ ಬಂದೆ!

ರಣಸಿಂಹ: – ಒಳ್ಳೆಯ ಪ್ರಶ್ನೆ!
ನಿನಗಾಗಿ ಪಾಥೇಯಮಂ ಬಿಚ್ಚಿ ಕಾದು ಕಾದು
ಸಾಕಾಗಿ ಹೋಯ್ತು. ಬೈಗಾಗಿ ಹೊತ್ತಿಳಿಯುತಿದೆ,
ನೋಡು : ಪಿರಿದೆನಿಪ ಕತ್ತೆಲೆಯ ರಾಶಿಯಂ
ಪೊತ್ತಿಕೊಂಡುರಿವ ವೆಂಕೆಯ ಕಡೆಯೊಳುಳಿದ
ಕೆಂಗೆಂಡಮೆನೆ ತರಣಿಮಂಡಲಮೆಸೆಯುತಿಹುದು
ಅಪರ ದಿಗ್ಭಾಗದಲ್ಲಿ!

ಚಂದ್ರಹಾಸ: – ಬಳಲಿಕೆಯ ನೀಗಲೆಂದಿಲ್ಲಿ ಮಲಗಿದೆನು.
ಒಯ್ಯನೆಯೆ ತೀಡುತೈತಂದೆಲರ ಸಂಗದಲಿ
ನಿದ್ದೆವೆಣ್ಣೆಯ್ತಂದು ಕದ್ದೊಯ್ದಳೆನ್ನಂ!…
ವೀರಸೇನನೆಲ್ಲಿ?

ರಣಸಿಂಹ: – ಆ ಎಡೆಯ ಕಾದಿಹನ್. ಪೋಗುವಂ ಬಾ.

ಚಂದ್ರಹಾಸ: – ಮೃದು ಮಧುರ ಸಂಗೀತಮಂ ಕೇಳಿದಿರ ನೀವು?

ರಣಸಿಂಹ: – ಹೌದು, ಕೇಳಿದೆವು; ಬಹುದೂರದಿಂ ತೇಲಿ
ಪೆಣ್ದನಿಯವೋಲಿಳಿದು ಬಂದಂತಿತ್ತು.( ಕೆಳಗೆನೋಡಿ)
ಅರ ಹಜ್ಜೆಗಳಿವು? ನಿನ್ನವಲ್ಲ!
ಪೂಗಳ ಪರಾಗದಿಂದಿಡಿದ ಪಸಿರ್ನೆಲದಲ್ಲಿ
ಚಿತ್ರಕಾರನು ಮುದ್ರಿಸಿದ ತೆರದಿ ತೋರುತಿವೆ.
(ಚೆನ್ನಾಗಿ ಬಾಗಿನೋಡಿ)
ಕೋಮಲೆಯರಡಿಗಳಿವು ದಿಟಂ!

ಚಂದ್ರಹಾಸ: – ಎಂತರಿತೆ, ಈ ಪಜ್ಜೆವಿನ್ಯಾಸ ವಿಜ್ಞಾನಮಂ?

ರಣಸಿಂಹ: – ನೋಡಲ್ಲಿ; ಚಿಗುರಿದೆಳವುಲ್ಲು ಕೂಡ
ಮುರಿಯದಿವೆ: ಪಾದಸಂಸ್ಪರ್ಶದಿಂದೆ
ಮುದವಾಂತು ನಲಿಯುವಂತಿದೆ ನೋಡು!

ಚಂದ್ರಹಾಸ: – ನಿನ್ನದಿದು ಕವಿಯ ವಿಜ್ಞಾನಮೆ ದಿಟಂ!
ನಾನೊ? ಏನನೂ ಅರಿಯೆ; ಮಲಗಿದ್ದೆ.

ರಣಸಿಂಹ:(ನಗುತ್ತಾ) ಅದರೊಳೇನೂ ಸಂದೇಹವಿಲ್ಲ. ಆದರೆ…

ಚಂದ್ರಹಾಸ:(ಮುಗುಳ್ನಗೆವೆರಸಿ) ಏನ್ ಆದರೆ?

ರಣಸಿಂಹ: –  ನಿನ್ನ ಮೊಗದೊಳಗೇನೊ ಸಂತಸದ ಕಳವಳಂ?
ತೋರದೆನಗಲ್ಲಿ ನಿದ್ದೆಯಿಂ ಬಹ ಮುಗ್ಧ ಶಾಂತಿ!

ಚಂದ್ರಹಾಸ: – ವೀರಸೇನನದೊ ಕರೆವಂತಿದೆ!

[ಇಬ್ಬರೂ ಅವಸರವಸರವಾಗಿ ಹೊರಡುತ್ತಾರೆ.]

ಪರದೆ ಬೀಳುತ್ತದೆ.

*