ದೃಶ್ಯ೪
[ಚಂದ್ರಶಾಲೆ. ಹಾಲು ಚೆಲ್ಲಿದ ಹಾಗೆ ಬೆಳುದಿಂಗಳು. ಅಲ್ಲಿ ವಿಷಯೆ ಒಬ್ಬಳೆ ಕುಳಿತು ಮೈಮರೆತು ತನಗೆ ತಾನೆ ಕನವರಿಸುವಂತಿದ್ದಾಳೆ ]
ವಿಷಯೆ: – ಎನಿತು ಮಲಗಿಹನು, ಮಾಮರದ ತಣ್ಣೆಳಲಲ್ಲಿ, ಮೂಲೋಕದಾನಂದ ಮೂರ್ತಿಮತ್ತಾದಂತೆ!
ವದನದೆಳನಗೆ ಎಂತು ಸಿಂಚಿಸಿದೆ ಮೋಹವನು?
ಸ್ವಪ್ನಲೋಕದೊಳಾವ ಸಂತಸವ ಸವಿಯುತಿಹನೊ?
ಕನಸಿನಲಿ ಅವ ಚೆಲುವೆಯ ಕಂಡು ನಗುತಿಹನೊ?…
ನಿನ್ನ ಕನಸಿನ ಆ ಕಾಂತೆಯಾದರು ಅಗುವಾ
ಪುಣ್ಯವೆನ್ನದಾಗಬಾರದೇ?… (ಕಣ್ಣೊರಸಿಕೊಳ್ಳುತ್ತಾಳೆ.)
[ರಾಜುಕುಮಾರಿ ಚಂಪಕಮಾಲಿನಿ ಮೆಲ್ಲಗೆ ಹಿಂದಿನಿಂದ ಪ್ರವೇಶಿಸುತ್ತಾಳೆ.]
ಚಂಪಕಮಾಲಿನಿ: – ಹಾಲುಗಲ್ಲಲಿ ಕಡೆದ ಪಡಿಮೆಯೆನೆ ಕುಳಿತಿಹನು!
ಸುಯ್ಯತಿಹಳೇಕೆ? ಕಣ್ಣೊರಸಿಕೊಂಡಳಲ್ತೆ? –
ಇರಲಿ ಕಣ್ಣಮುಚ್ಚಾಟದಲಿ ರಮಿಸುವೆನವಳ.
[ಹಿಂದಿನಿಂದ ಹೋಗಿ ಕಣ್ಣು ಮುಚ್ಚುತ್ತಾಳೆ]
ವಿಷಯೆ: – (ಬೆಚ್ಚಿ, ತನ್ನ ಕಣ್ಣುಗಳನ್ನು ಮುಚ್ಚಿದ್ದ ಎರಡೂ ಕೈಗಳನ್ನು ಮುಟ್ಟಿ ನೋಡುತ್ತಾ)
ಆರದು?
ಚಂಪಕಮಾಲಿನಿ: – (ಕೀರಲು ದನಿಯಿಂದ)
ನೀ ಕಾಣುತ್ತಿದ್ದಾ ಕನಸಿನವ! (ಚಂಪಕಮಾಲಿನಿ ಬೇಕೆಂತಲೆ ತನ್ನ ದನಿಯನ್ನು ಬದಲಾಯಿಸಿದ್ದರಿಂದ ಗುರುತಿಸಲಾರದೆ)
ವಿಷಯೆ: – ಓಹೊ, ನಿನ್ನ ಗುರಿತಿಸಲು ನಿನ್ನ ದನಿ ಬೇಕೆ ನನಗೆ?
ಸಾಲದದೇನೀ ನಿನ್ನ ಕರಕಮಲಗಳ ಸೋಂಕೆ?
ತಂಗಿ ಚಂಪಕೆಗಲ್ಲದಿನ್ನಾರಿಗೀ ಮೆಯ್ಯ ಸೊಂಪು?
ಬಿಡು, ಕೆಳದಿ. (ಕೈ ಬಿಟ್ಟು ಗಟ್ಟಿಯಾಗಿ ನಗುತ್ತಾ ಮುಂದಕ್ಕೆ ಬಂದ ಚಂಪಕಮಾಲಿನಿಗೆ)
ಎಷ್ಟು ಹೆದರಿಸಿಬಿಟ್ಟೆ, ತಂಗಿ?
ಚಂಪಕಮಾಲಿನಿ: – ಈ ಚಂದ್ರಶಾಲೆಯಲಿ, ಈ ಬೆಳ್ದಿಂಗಳಲಿ
ಇಲ್ಲಿಗೈತಹ ಕೆಚ್ಚು ಮನ್ಮಥನಿಗಲ್ಲದೆಯೆ
ಮತ್ತಾರಿಗುಂಟು? ಅವನೆಯೆ ತಾನೆ ನಿನ್ನ ಈ
ಭಯಕೆ ಕಾರಣ? ಅದಿರಿಲಿ, ಹೇಳು, ಸಖಿ:
(ತನ್ನ ಎರಡೂ ಅಂಗೈಗಳನು ಮುಂದೆ ಚಾಚಿ)
ನನ್ನ ಈ ಕೈಗಳೇತಕೆ ಒದ್ದೆಯಾಗಿಹವು?
ವಿಷಯೆ: – (ಚೆನ್ನಾಗಿ ನೋಡಿದಂತೆ ನಟಿಸಿ) ವಿರಹತಾಪದಿ ಬೆಮರಿ!
ಚಂಪಕಮಾಲಿನಿ: – (ಅಣಕಿಸಿ) ಆಹಾ! ತಾಪ ನಿನಗೆ, ಬೆಮರು ನನಗೆ?
ಏನ್ ತರ್ಕಸಿಂಹಿಣಿಯೋ? ತಪ್ಪು ನಿನತಲ್ಲ.
ಆ ಮನ್ಮಥನ ತರ್ಕಶಾಸ್ತ್ರವೆ ಹೀಗೆ! ಇರಲಿ,
ನಾನೆ ಕಾರಣವೊರೆವೆ, ನಿನ್ನ ಕಣ್ಣೀರಿಂದೆ
ನನ್ನ ಕೈ ತೊಯ್ದಿಹುದು. ಏಕೆ ಆ ನೀರು?
ನಿನ್ನ ಕಣ್ಣೇನು ಚಂದ್ರಕಾಂತ ಶಿಲೆಯೆ?
ಬೆಳ್ದಿಂಗಳಿಗೆ ಇಂತು ಸೋರುವುದಕೆ?
ವಿಷಯೆ: – ಆ ಚಂದ್ರನೀ ಹಾಸಕ್ಕೆ ನಿನ್ನ ಮೈಸೋತು…..
ಚಂಪಕಮಾಲಿನಿ: – ಓಹೋ ಅರ್ಥವಾಗುತಿದೆ!
ವಿಷಯೆ: – ಏನೆಂದೆ?
ಚಂಪಕಮಾಲಿನಿ: – (ನಗುತ್ತಾ) ಏನಿಲ್ಲ; ಕೌಮುದಿಯ ಪಾಲ್ಗಡಲು
ಮನಮೋಹಿಸುವ ಶಾಂತಿಯಿಂದೆಸೆಯುತಿದೆ ಎಂದೆ!
ವಿಷಯೆ: – (ಬಿಸಿಸುಯ್ದು) ಇರಬಹುದು.
ಚಂಪಕಮಾಲಿನಿ: – ಆ ಚಂದ್ರಹಾಸದಿಂ
ಮಾಧುರ್ಯದಂಬುಧಿ ಬೆಳ್ದಿಂಗಳೀ ರಾತ್ರಿ.
ವಿಷಯೆ: – (ನಸು ಮುನಿಸು ನಟಿಸಿ) ಇರಬಹುದು!
ಚಂಪಕಮಾಲಿನಿ: – ಕೆಳದಿ, ಇರಬಹುದು ಏಕೆ?
(ಮತ್ತೆ ವಿಷಯೆ ಸುಯ್ಯುತ್ತಾಳೆ)
ಏಕೆ ಬಿಸುಸುಯ್ಯುತಿಹೆ?
ನಿನ್ನೆಯಿಂ ನೀನಿಂತು ಕೊರಗಿ ಕುಗ್ಗಿಹೆ ಏಕೆ?
ಪಂಜರದ ಗಿಳಿಯೊಡನೆ ಸರಸ ಕೇಳಿಯನೇಕೆ
ತೊರೆದಿರುವೆ? ಪೊಂದೊಡವುಗಳನೇಕೆ ಬಿಸುಟಿರುವೆ?
ಸಖಿಯರೊಡಗೂಡಿ ನುಡಿಯದೆ ಮೌನವಾಗಿರುವೆ?
ಹೇಳು, ಮುದ್ದಿನ ಕೆಳದಿ. (ಪಕ್ಕದಲ್ಲಿ ಕುಳಿತು ಸ್ನೇಹದಿಂದ)
ಬಿರುನುಡಿಯನಾಡಿದರೆ?
ಬಯಕೆಯನು ಸಲ್ಲಿಸದೆ ಧಿಕ್ಕರಿಸಿದರೇ ನಿನ್ನ?
ಮೈಯಲ್ಲಿ ಏನಾದರೂ ರುಜೆ ತೋರಿಹುದೆ?
ವಿಷಯೆ: – ಏನಿಲ್ಲ, ತಂಗಿ.
ನಿರ್ವೊಯ್ದ ಸುಣ್ಣ ಮರಳುವ ತೆರದಿ ಬೇಯುತಿದೆ
ಹೃದಯ. ಶೀತಳ ಸುಧಾಮಯೂಖನು ಕೂಡ
ಬೆಂಗದಿರನಂತಿಹನು. ಏತಕೋ ನಾನರಿಯೆ!
ಸೃಷ್ಟಿಯೆಲ್ಲವು ನನ್ನ ಮೂದಲಿಸುವಂತಿಹುದು.
ತಳಿರ ಮರೆಯಲ್ಲಿಡಗಿ ಬಗ್ಗಿಸುವ ಕೋಗಿಲೆಯೂ
ನನ್ನನಣಕಿಸುವಂತೆ ಕೂಗುತಿದೆ.
ಚಂಪಕಮಾಲಿನಿ: – ಅಕ್ಕ,
ಹುದುಗಿರುವ ಯಾತನೆಯ ಹೊರಗೆಳಯಲೊಲ್ಲೆ,
ಬರಿದೆ ಏನೇನೊ ಮಾತುಗಳನಾಡುತಿಹೆ.
ನೀನು ನಿಜ ಹೇಳಿದರೆ ಸರಿ; ಅಲ್ಲದೊಡೆ,
ನಿನಗೆ ನಾ ಬೇಡೆಂದು ಇಲ್ಲಿಂದ ತೆರಳುವೆನು.
(ಹೊರಡುವಂತೆ ನಟಿಸುತ್ತಾಳೆ)
ವಿಷಯೆ: – ಹೋಗದಿರು, ತಂಗಿ. ಹೇಳುವೆನು.
ನಿನಗಲ್ಲದಿನ್ನಾರಿಗೀ ಹೃದಯದೊಳಗುಟ್ಟು?
ಚಂಪಕಮಾಲಿನಿ: – ಹೇಳಕ್ಕ, ನಾನಾರಿಗೂ ಹೇಳೆ.
ವಿಷಯೆ: – ನನ್ನ ಜೀವದ ಜೀವ ನೀನು, ತಂಗಿ,
ಇತ್ತ ಬಾ. (ವಿಷಯೆ ಚಂಪಕಮಾಲಿನಿಯ ಕಿವಿಯಲ್ಲಿ ಹೇಳುತ್ತಿರುತ್ತಾಳೆ. ಅಷ್ಟರಲ್ಲಿ ಪಂಕಜೆ ಓಡೋಡಿ ಬಂದು, ತೆಕ್ಕನೆ ನೋಡಿ ನಿಲ್ಲುತ್ತಾಳೆ)
ಪಂಕಜೆ: – (ವ್ಯಂಗ್ಯ ಧ್ವನಿಯಿಂದ) ಓಹೋ, ತಪ್ಪಾಯ್ತು! ಬಳಿಗೆ ಬರಬಹುದೆ?
ವಿಷಯೆ: – (ಮುಗುಳುನಗುತ್ತಾ) ಏನಿದೀ ದಾಕ್ಷಿಣ್ಯ? ಎಂದಿಲ್ಲದುದು?
ಬಾ, ಪಂಕಜೆ.
ಚಂಪಕಮಾಲಿನಿ: – ಏನು ಅವಸರ, ಕೆಳದಿ? ಏಕೆ ಏದುತ್ತಿರುವೆ?
ಪಂಕಜೆ: – ಏನನೊ ಗುಟ್ಟನಾಡುತಲಿದ್ದಿರಿ?
ವಿಷಯೆ: – ಏನಿಲ್ಲ, ನಿನಗೇಕೆ?
ಪಂಕಜೆ: – ಲೋಕಕ್ಕೆ ಗೊತ್ತುಂಟು! ನಿನಗೊಬ್ಬಳಿಗೆ ಗುಟ್ಟು!
ಚಂಪಕಮಾಲಿನಿ: – ಏನದು ಗೊತ್ತಾಗಿರುವುದು?
ಪಂಕಜೆ: – ಈಗಳಾನರಿತೆ, ಸಖಿ ಏಕೆ ಕೊರಗುತಿದ್ದಳು
ಎಂದು.
ಚಂಪಕಮಾಲಿನಿ: – ನಿನ್ನರಿವನೆಮಗಿನಿತು ಹಂಚಬಾರದೆ,
ಪಂಕಜೆ? ಸವಿಯಬಾರದೆ ನಾವೂ, ರುಚಿನೋಡಿ?
ಪಂಕಜೆ: – (ತುಸು ರಾಗಪೂರ್ವಕವಾಗಿ)
ಪಾವಗಿದುಳಿದುರಂಟೆ? ಹರನ ಕೋಪದೊಳುರಿದು
ಜೀವಿಸಿದರುಂಟೆ? ಕಾಳ್ಗಿಚ್ಚಿನೊಳ್ ಕೆಳೆಗೊಂಡು
ಬೇವುತಸುವಿಡಿದು ಬಾಳ್ದವರುಂಟೆ? ಸುಗ್ಗಿಯಲಿ
ತುಂಬುಪೆರೆ ತೆಂಗಾಲಿ ಹೊಗಣೆಯರೊಡ್ಡಿದುರುಳಿಗೆ
ಸಿಲುಕಿ ಅಳುಕದೆ ಇಹರು ಉಂಟೇ?
ವಿಷಯೆ: – (ನಗುತ್ತಾ) ಏನಿದು ನಿನ್ನ ಗಮಕ ಕಲೆ? ಅದ್ಭುತ!
ಪಂಕಜೆ: – ಚಂಪಕಾ, ಕೇಳಿದೆಯ ಹೊಸಸುದ್ದಿ?
ಚಂಪಕಮಾಲಿನಿ: – ಏನದು
ಪಂಕಜೆ: – ನನಗೊಂದು ಮಂತ್ರ ತಿಳಿದಿಹುದು.
ಚಂಪಕಮಾಲಿನಿ: – ಗುರುವಾರು?
ವಿಷಯೆ: – ಆಕೆಯೋಪನೊ ಏನೊ?
ಪಂಕಜೆ: – ನನ್ನಕ್ಕನದನೆನಗೆ ಹೇಳಿಕೊಟ್ಟಳು ಇಂದೆ.
ಸಿದ್ಧಿವಡೆದಿಹೆನು ತಪಸ್ಸು ಮಾಡಿ!
ಅದನ್ನಿಲ್ಲಿ ಜಪಿಸಿದರೆ… (ಹಿಹಿಹಿ ನಗುತ್ತಾಳೆ)
ಚಂಪಕಮಾಲಿನಿ: – ಜಪಿಸಿದರೆ?
ಪಂಕಜೆ: – ನಡೆವ ಅದ್ಭುತ ಪವಾಡಕ್ಕೆ ಮೈಮರೆಯುವಿರಿ!
ಚಂಪಕಮಾಲಿನಿ: – (ಪರಿಹಾಸ್ಯದಿಂದ) ಅಬ್ಬಬ್ಬ!
ಪಂಕಜೆ: – ಹೆದರದಿರಿ!
ಅದನಿಲ್ಲಿ ಜಪಿಸಿದರೆ ನಮ್ಮ ಕೆಳದಿಯ ತಾಪ
ಅರೆಚಣದಿ ಮಾಯವಾಗುವುದು; ನಾ ಬಲ್ಲೆ.
ಚಂಪಕಮಾಲಿನಿ: – ಜಪಿಸು ಹಾಗಾದರೆ.
ಪಂಕಜೆ: – ಜಪಿಸಲೇ, ವಿಷಯೆ?
ವಿಷಯೆ: – ಏನಾದರೂ ಮಾಡು!
ಪಂಕಜೆ: – ಹೊಸ ಸುದ್ದಿ ಏನೆಂದು
ಕೇಳಿದೆಯಾ? ಚಂದನಾವತಿಯಿಂದ ಬಂದಿಹನು,
ಚಂದ್ರಹಾಸ! ಪಾಪ, ವಿಷಯೆಗೆ ತಿಳಿಯನವನು!
ಅಲ್ಲವೇ, ವಿಷಯೆ?
ವಿಷಯೆ: – ನಿನಗೇಕೆ ಆ ಚಿಂತೆ?
ಪಂಕಜೆ: – ನಾಳೆ ಅವನಿಗೆ ಮದುವೆಯಂತೆ!
ವಿಷಯೆ: – (ದಿಗಿಲು ಬಿದ್ದು) ಆಂ! ಯಾ… ಯಾ… ರೊಡನೆ
ಪಂಕಜೆ: – (ವಿಷಯೆಗೆ) ನಿರ್ಲಿಪ್ತೆ ನಿನಗೇಕೆ? ಆವಳೋ ದುರ್ಭಾಗ್ಯೆಯೊಡನೆ!
ಚಂಪಕಮಾಲಿನಿ: – ಅವಳಿಗಿಂ ಮಿಗಿಲಿಹರೆ ಸೌಭಾಗ್ಯೆಯರ್ ಜಗದಿ?
ಪಂಕಜೆ: – ಓಹೊ, ನನಗೂ?…. ಒಬ್ಬ ಚಂದ್ರನಿಗಿಬ್ಬರಾಸೆ!
ವಿಷಯೆ: – (ಪಂಕಜೆಗೆ) ಮೂದಲಿಸದಿರು ಬರಿದೆ ನೀನೆನ್ನ ತಂಗಿಯನು!
ಅವಳಾತನಂ ನೋಡಿಯೂ ಇಲ್ಲ!….
ಪಂಕಜೆ: – ಓಹೋ,
ನೋಡಿದುದು ನೀನೊಬ್ಬಳೆಯೆ; ಅಂತಾದರೆ….
ಚಂಪಕಮಾಲಿನಿ: – ಸಾಕು ನಿನ್ನಾಟ. ಬೇಗನೊರೆ, ಕೆಳದಿ.
ಪಂಕಜೆ: – (ರಾಗವಾಗಿ) ನಾಳೆ ಅವನಿಗೆ ಮದುವೆಯಂತೆ.
ವಿಷಯೆಯನೆ ಕೇಳಿ ತಿಳಿದುಕೊ ವಿಷಯವಂ.
ವಿಷಯೆ ಎಂಬಾ ಕನ್ಯೆ ಎಲ್ಲಿಹಳೊ ನಾನರಿಯೆ.
ಚಂಪಕಮಾಲಿನಿ: – (ವಿಷಯೆಯ ಕಡೆ ತಿರುಗಿ)
ಅಕ್ಕ, ನಿಜಹೇಳು, ನೀ ಬಲ್ಲೆಯೇನು?
ಪಂಕಜೆ: – ಪಾಪ! ಬಲು ಮುಗ್ಧೆ! ಅವಳಿಗೇನು ಗೊತ್ತು?
ಚಂಪಕಮಾಲಿನಿ: – ಹೇಳಬಾರದೆ ಬೇಗ, ಪಂಕಜಾ?
ಪಂಕಜೆ: – ಇಷ್ಟುದಿನ ನಮ್ಮೊಡನೆ ಇದ್ದವಳು, ಹೇಳದೆಯೆ
ಕೇಳದೆಯೆ ಒಳಸಂಚು ನಡೆಸುತ್ತ. ನಾಳೆ
ಚಂದ್ರಹಾಸನ ಕಟ್ಟಿಕೊಂಡೋಡುವಳು, ನೋಡು!
ವೈವಾಹಕೆಲ್ಲ ಸನ್ನಾಹಗಳು ನಡೆದಿಹವು….
ನಾಳೆ “ಬನದ ತಣ್ಣೆಳಲಿನಲಿ ತಳಿರ ಶಯನದಿ”
ಎಂಬ ಗೀತೆಯ ಹಾಡಬೇಕಿವಳು.
ಚಂಪಕಮಾಲಿನಿ: – (ವಿಷಯೆಗೆ ಪರಿಹಾಸ್ಯದಿಂದ)
ಕೆಳದಿ,
ಸಖಿಯರನು ಕೇಳದೆಯೆ ಹೀಗೆ ಗಂಡನ ಗೊತ್ತು
ಮಾಡುವರೆ? ನಿನಗಾರು ಅಪ್ಪಣೆಯನಿತ್ತವರು?
ಚಂದ್ರಹಾಸನ ನೀನು ಮದುವೆಯಾಗುವುದೆನಗೆ
ಸರಿಯಿಲ್ಲ.
ವಿಷಯೆ: – (ಪ್ರತಿಹಾಸ್ಯ ಧ್ವನಿಯಿಂದ) ನೀನೆ ಆಗು, ಬೇಡವೆಂದೆನೆ ನಾನು?
ಬರಿದೆ ಕರುಬಿದರೆ ಫಲವೇನು?
ಚಂಪಕಮಾಲಿನಿ: – ಬಿನ್ನಾಣಿ, ಸೊಕ್ಕೆಲ್ಲ ಇಳಿಯುವುದು ನಾಳೆ!
ಪಂಕಜೆ: – ಕೇಳಲ್ಲಿ ಮಂಗಳವಾದ್ಯಗಳು!
[ವಾದ್ಯಗಳು ಭೋರ್ಗರೆಯುತ್ತವೆ]
ಚಂಪಕಮಾಲಿನಿ: – ಕೌಮುದಿ ಹೇಗಿರುವುದೀಗ, ಸಖೀ?
ವಿಷಯೆ: – ಚಂದ್ರಮನ ವದನಹಾಸವನೆ ಹೋಲುತಿದೆ!
ಪಂಕಜೆ: – ಚಂದ್ರಮನ ವದನಹಾಸವನೊ?….
ಚಂದ್ರಹಾಸನ ಪದನವನೊ?….
ಮುಗ್ಧೆ ಎಂದವರಾರು ಇವಳ?
ಶೃಂಗಾರದಲ್ಲಿವಳು ವಿದಗ್ಧೆಯರನೂ
ದಗ್ಧಗೈಯುವ ಪ್ರೌಢೆಯಲ್ತೆ?
ಚಂಪಕಮಾಲಿನಿ: – (ವಿಷಯೆಯನ್ನು ಮುದ್ದಾಡುವಂತೆ ಅಭಿನಯಿಸುತ್ತಾ)
ಅಯ್ಯೊ ಬಿಂಕದ ಹೆಣ್ಣೆ; ಕಬ್ಬುವಿಲ್ಲನ ಕಣ್ಣೆ!
[ಎಲ್ಲರೂ ಗಹಗಹಿಸಿ ನಗುತ್ತಿರುತ್ತಾರೆ.]
ಪರದೆ ಬೀಳುತ್ತದೆ.
*
Leave A Comment