ದೃಶ್ಯ

[ದುಷ್ಟಬುದ್ಧಿಯ ಮನೆಯ ಒಂದು ಕೋಣೆ. ದುಷ್ಟಬುದ್ಧಿ ಒಂದು ಆಸನದ ಮೇಲೆ ಕುಳಿತಿದ್ದಾನೆ. ಮದನ ಸ್ವಲ್ಪ ದೂರದಲ್ಲಿ ತಲೆತಗ್ಗಿಸಿ ನಿಂತಿದ್ದಾನೆ. ಮಂತ್ರಿ ಕೋಪೋಗ್ರನಾಗಿದ್ದಾನೆ.]

ದುಷ್ಟಬುದ್ಧಿ: – ಮೂರ್ಖ! ಮರುಳ! ನೀಚ! ಕುಲಗೇಡಿ!
ನಾನು ಬರೆದಿಹುದೇನು? ನೀನು ಮಾಡಿಹುದೇನು?
ತಿರುಪೆ ಬೇಡಿನ್ನು, ನಡೆ! ನಾನಿಲ್ಲದಂದು
ನನ್ನ ಮಗಳಿಗೆ ಮದುವೆ ಮಾಡಿದೆಯ, ಮೂರ್ಖ!
ನಿನ್ನ ದೊರೆತನಕಾಗಿ ಜೀವವನೆ ಸಮೆಸಿದೆನು.
ನಿನಗಾಗಿ ನೆತ್ತರಿನ ಕಡಲಲ್ಲಿ ಮುಳುಗಿದೆನು…..
ನಿನಗೇಕೆ ಸಾಮ್ರಾಜ್ಯ? ನಿನಗೇಕೆ ಅರಸುತನ?
ಹುಟ್ಟುತಿರುಕನಿಗೆ? ಬೀದಿಯನಲೆದು ತಿರಿ ಇನ್ನು!
ಹಾ ವಿಧಿಯೆ! (ಮುಖ ಮುಚ್ಚಿಕೊಳ್ಳುತ್ತಾನೆ.)

ಮದನ:(ಶೋಕಧ್ವನಿಯಿಂದ) ಅಪ್ಪಯ್ಯ ನಾನೆಸಗಿದಪರಾಧವೇನು?

ದುಷ್ಟಬುದ್ಧಿ: – ನಿನಗಿನ್ನು ವನವಾಸವೇ ಗತಿ.

ಮದನ: – ಖತಿಯೇಕೆ, ಜೀಯ, ನಿಮ್ಮಡಿಗಳ ನಿರೂಪಮಂ
ಪ್ರತಿಪಾಲಿಸಿಹೆನು. ನಿಮ್ಮ ಆಣತಿಯಂತೆ
ವಿಷಯೆಗೆ ವಿವಾಹಮಂ ವಿರಚಿಸಿದೆ! ತಪ್ಪೇನು?

ದುಷ್ಟಬುದ್ಧಿ: – ನಿನಗಕ್ಕರದ ಗುರುತಿಹುದೆ, ಹೇಳು? ನಿನಗೆ
ಬಿಜ್ಜೆಗಲಿಸಿದ ಬೊಜ್ಜುಹಾರುವ, ಆ ಗಾಲವ,
ಹಾಳಾಗಿಹೋಗಲಿ! ಎಲ್ಲಿ? ಕೊಡು ಪತ್ರಿಕೆಯ,
ನೋಡುವೆನು. (ಮದನ ಹೋಗುತ್ತಾನೆ)

ಆದುದಾಯಿತು. ಇನ್ನು ಜಾಮಾತನಂ
ಕೊಂದು ಹೊರತೆನಗೆ ಸುಖ ಶಾಂತಿ ಸಂಪತ್ತು
ಆವುದೂ ಇಲ್ಲ. ವಿಷಯೆಯ ಓಲೆಭಾಗ್ಯ
ಸುಟ್ಟುರಿದರೇನಂತೆ! ನಿರ್ಭಾಗ್ಯೆ ಹಾಳಾಗಲಿ!
ಊರ ಹೊರ ಬನದೊಳಿಹ ಚಂಡಿಕಾಲಯಕೆ
ಚಂದ್ರಹಾಸನಂ ಕಳುಹಿ ಕಟುಕರಿಂ ಕೊಲ್ಲಿಪೆನ್.
[ನವವಧು ವಿಷಯೆ ಹೆದರಿ ಹೆದರಿ ನಾಚುತ್ತ ಮೆಲ್ಲಮೆಲ್ಲನೆ ಬರುತ್ತಾಳೆ. ದುಷ್ಟಬುದ್ಧಿಗೆ ಮಗಳನ್ನು ನೋಡಿದೊಡನೆ ಅಭ್ಯಾಸಬಲದಿಂದೆಂಬಂತೆ ಸಂತೋಷದ ಮಂದಸ್ಮಿತ ಮುದ್ರೆಯೊಂದು ಸುಳಿದು, ಒಡನೆಯೆ ಮಾಯವಾಗಿ, ಬದ್ಧಭ್ರಕುಟಿಯ ವದನವಿಕಾರತೆಯುಂಟಾಗುತ್ತದೆ. ಅದನ್ನು ಗಮನಿಸಿದ ಮಗಳು ತತ್ತರಿಸಿ ಕೃತಕವಾದ ನಗೆಮೊಗದಿಂದ ಮಾತನಾಡಿಸುತ್ತಾಳೆ.]

ವಿಷಯೆ: – ಅಪ್ಪಯ್ಯ, ವಂದಿಸುವೆ. (ಎಂದು ತಂದೆಯ ಚರಣಗಳಿಗೆ ಎರಗುತ್ತಾಳೆ.)

ದುಷ್ಟಬುದ್ಧಿ:(ತಟಕ್ಕನೆ ಮೇಲೆದ್ದು ಉಗ್ರವಾಗಿ)
ಮುಟ್ಟದಿರು! ಮುಟ್ಟದಿರು!
ನೀನೆಂದು ವಿಷಯೆಯಲ್ಲ, ವಿಷಕನ್ಯೆ!
ನೋಡಲಾರೆನೀ ನಿನ್ನ ನಾಟಕದ ವೇಷಮಂ.
ಹೊರಡಾಚೆ, ನನ್ನೆದುರು ನಿಲ್ಲದಿರು…

ವಿಷಯೆ:(ಅಳುತ್ತಾ) ಅಪ್ಪಯ್ಯ, ತಪ್ಪ ಮನ್ನಿಸು. ಏನು ತಪ್ಪಿದ್ದರೂ ನನ್ನದದು.
ಅಣ್ಣಯ್ಯನದಕೆ ಹೊಣೆಯಲ್ಲ.
ಪಾದಗಳಿಗೆರಗಿ ಬೇಡಿಕೊಳ್ಳುವೆ, ತಂದೆ!
[ಎಂದು ಮತ್ತೊಮ್ಮೆ ಅಡ್ಡಬೀಳಲು ಹವಣಿಸುತ್ತಾಳೆ. ದುಷ್ಟಬುದ್ಧಿ ಮತ್ತೆ ಹಿಂಜರಿದು ನಿಷ್ಟುರನಾಗಿ.]

ದುಷ್ಟಬುದ್ಧಿ: – ತೊಲಗು, ತೊತ್ತಿನ ಮಗಳೆ! ತೊಲಗಾಚೆ! ನನ್ನ
ಕಣ್ಮುಂದೆ ನಿಲ್ಲದಿರು. ಮಿರ್ತುವಡಗಿದೆ ನಿನ್ನ
ನಗೆದಿಂಗಳಾಟವನು ನಟಿಸುವೀ ಮೊಗದಲ್ಲಿ…
ಮುಡಿದಲರ್ಗಂಪಲ್ಲ, ಹೆಣಗಂಪು ಸೂಸುತಿದೆ
ನಿನ್ನ ಮೆಯ್ಯಿಂ. ತೊಲಗು, ನಿರ್ಭಾಗ್ಯೆ, ನಿಲ್ಲದಿರ‍್
ನನ್ನಿದಿರ್. ನೀನು ಹೆಣ್ಣಲ್ಲ, ಹೆಣ್ಣಿನ ವೇಷವನು
ಹೊತ್ತ ಸುಡುಗಾಡು. ತೊಲಗಾಚೆ! ನಿಲ್ಲದಿರ್!…
[ಆರ್ಭಟಿಸುತ್ತಾನೆ. ವಿಷಯೆ ಮರವಟ್ಟಳಂತೆ ಹೆದರಿ ಮುದುರಿ ಕುಗ್ಗಿ ಹೊರಡುತ್ತಾಳೆ. ದುಷ್ಟಬುದ್ಧಿ ಮತ್ತೆ ಮೊದಲಿನ ಆಸನಕ್ಕೆ ಹೋಗಿ ಕುಳಿತು ಕೈಯಿಂದ ಮುಖ ಮುಚ್ಚಿಕೊಂಡು ಸಂಕಟಪಡುತ್ತಾನೆ.]

ಮದನ:(ಪ್ರವೇಶಿಸಿ, ಕಟ್ಟುಗ್ರಭಾವದಿಂದ ನಿಲ್ಲುತ್ತಾನೆ. ತಂದೆ ತಲೆಯೆತ್ತದಿರಲು ಸ್ವಲ್ಪ ಹೊತ್ತು ಕಾದು)
ಅಪ್ಪಯ್ಯ, ಏತಕೀ ವ್ಯರ್ಥ ಉಗ್ರತೆ, ಮಗಳಮೇಲೆ?
ತಪ್ಪು ಏನಿದ್ದರೂ ಮದುವೆ ಮಾಡಿದ ನನ್ನದಲ್ತೆ?
ಏನಾದರೂ ನಿಮ್ಮ ಆಣತಿಯ ಮೀರಿದೆನೆ?
ಇದೊ ಕೊಳ್ಳಿ, ಇಲ್ಲಿರುವುದಾ ಪತ್ರಿಕೆ.
[ಮಂತ್ರಿ ಮೆಲ್ಲಗೆ ತಲೆಯೆತ್ತುತ್ತಾನೆ. ಕಣ್ಣುಗಳಿಂದ ನೀರು ಸುರಿದ ಗುರುತು ಮುಖದ ಮೇಲೆ ತೋರುತ್ತದೆ. ಮುಖಭಂಗಿ ಅತೀವ ದೈನ್ಯವಾಗಿದೆ. ಸೆರಗಿನಿಂದ ಮುಖವೊರಸಿಕೊಂಡು ಕೈ ನೀಡುತ್ತಾನೆ. ಮದನನು ಕೊಟ್ಟ ಪತ್ರಿಕೆಯನ್ನು ಸಾವಧಾನವಾಗಿ ಓದುತ್ತಾನೆ. ಸಂಕಟ ಕ್ರೋಧ ಆಶ್ಚರ್ಯಾದಿಭಾವಗಳ ಸುಳಿದಾಟದಿಂದ ವದನ ತೆರೆತೆರೆಯಾಗುತ್ತದೆ. ಕೊನೆಗೆ ನಿಡಿದಾಗಿ ಸುಯ್ದು ಕನಿಕರಕ್ಕೆ ಅರ್ಹವಾಗಬಹುದಾದ ದೀನಭಾವದಿಂದ ನುಡಿಯುತ್ತಾನೆ.]

ದುಷ್ಟಬುದ್ಧಿ: – ಮದನ, ನಿನ್ನ ತಪ್ಪಿದರೊಳಿನಿತಿಲ್ಲ.
ಮರುಗದಿರು ಬೈದೆನೆಂದು.

ಮದನ: – ತಂದೆ ಬೈದರೆ ಕೋಪವೇಕೆ?…. ಜೀಯ,
ನನ್ನನೀಗಳೆ ಕರೆತರುವುದೆಂದು ದೂತರನ್
ಕಳುಹಿಹನು ಕುಂತಳೇಂದ್ರನ್. ತೆರಳಲೇ?

ದುಷ್ಟಬುದ್ಧಿ: – ತೆರಳು. ನಾನೊರೆದ ರಾಜಕಾರಣ ಗೋಪ್ಯಮಂ
ಮರೆಯದೆಯೆ ಕೈ ಗೂಡಿಸು…. ಮತ್ತೆ…
(ಹೊರಡಲಿರುವ ಮದನ ನಿಲ್ಲುತ್ತಾನೆ. ದುಷ್ಟಬುದ್ಧಿ ಏನನ್ನೊ ಚಿಂತಿಸಿ)
ಕಳುಹಿಸಿಲ್ಲಿಗೆ ಚಂದ್ರಹಾಸನಂ ಬೇಗದಿಂ.

ಮದನ: – ಅಪ್ಪಣೆ.(ಮದನ ಹೋಗುತ್ತಾನೆ.)

ದುಷ್ಟಬುದ್ಧಿ: – ನನ್ನ ಕೋಪವನವಗೆ ಕಾಣಿಸದೆ ಮುಚ್ಚಿಡುವೆ…
ನನ್ನನೇಪರಿ ಮೂದಲಿಸುತಿಹೆ? ಎಲೈ ದುರ್ವಿಧಿಯೆ,
ನಿನ್ನ ವ್ಯೂಹಕೆ ಪ್ರತಿವ್ಯೂಹಮಂ ಒಡ್ಡದಿರೆ
ನಷ್ಟಬುದ್ಧಿಯೆ ನಾ ದಿಟಂ, ದುಷ್ಟಬುದ್ಧಿಯಲ್ತು!
ನನ್ನಾತ್ಮಜೆಯ ಕಣ್ಣನೀರಿನಲಿ ನನ್ನ ಈ
ಪುರುಷಾರ್ಥವನ್ನಿಟ್ಟೆಯಾ?….

ಆ ಕುಳಿಂದನಿಗೆ
ಸೊಕ್ಕಿದವನಿಗೆ ತಕ್ಕುದನೆ ಮಾಡಿ ಬಂದಿಹೆನ್.
ಗುಪ್ತಸೈನ್ಯಾಚರಣೆಯಿಂ ಚಂದನಾವತಿಯಂ
ಅಂಡಲೆದೆನಾ ಕುಳಿಂದನಂ ದಂಡಿಸಿದೆನ್.
ಹಿಂಡಿ ಹಿಳಿದರ್ಥಮಂ, ಸೆರೆಗೆ ನೂಂಕಿದೆನವನ
ಕಾಲ್ಗೆ ನಿಗಳಮಂ ಪೂಡಿ…. ಈ ನಂಟು
ಆ ಸಫಲಪ್ರಯತ್ನಮಂ ವ್ಯರ್ಥಗೈಯಲ್ಕೇಂ
ಬಿಟ್ಟಪೆನೆ? ಏನಾ ಕುಳಿಂದಕನ ಸೊರ್ಕು!
ರಾಜ್ಯಮಂ ಕೊಟ್ಟೊಡೆ, ನನ್ನಂ ಮರೆದು,
ನನಗೆ ತಿಳುಹದೆಯೆ ತನಗೊರ್ವ ಮಗನಂ
ಮಾಡಿಕೊಂಡು…. ದತ್ತುಮಗನಂ ಕೊಂಬುದೇನ್
ಮಕ್ಕಳಾಟಿಗೆಯಾಯ್ತೆ?…. (ದೂರ ನೋಡುತ್ತಾನೆ)
ಅವನೆ? ಹೌದವನೆ!
[ಮದುಮಗನ ವಸನ ಭೂಷಣಗಳಿಂದಲಂಕೃತನಾಗಿ ಚಂದ್ರಹಾಸನು ಪ್ರವೇಶಿಸುತ್ತಾನೆ.]

ಚಂದ್ರಹಾಸ: – ಪೂಜ್ಯರಿಗೆ ವಂದಿಪೆನು.(ಅಡಿಗೆರಗುತ್ತಾನೆ.)

ದುಷ್ಟಬುದ್ಧಿ: – ವೀರವರ, ಬಾರೈ, ಚಂದ್ರಹಾಸ!
ನೀನಿನ್ನೆಗಂ ದೂರದವನಾಗಿರ್ದಯ್;
ಇನ್ನೆಮಗೆ ಅಳಿಯನಾಗಿರುವೆ.
ಕುಳಿತುಕೊ. (ಚಂದ್ರಹಾಸನು ಕುಳಿತುಕೊಳ್ಳುತ್ತಾನೆ.)

ಚಂದ್ರಹಾಸ: – ದೂರದಿಂ ಬಂದ ದಣಿವಿಂ ತಮಗಾಯಸಂ
ತಿಣ್ಣಮಾಯ್ತೆಂಬಂತೆ ತೋರುತಿದೆ. ಪೂಜ್ಯರಿಗೆ
ವಂದನಂಗೈಯ್ಯಲೈತಂದೆ. ತಾವಿನ್ನು
ಒಂದಿನಿತು ವಿಶ್ರಮಿಸಿಕೊಳ್ಳಿ. ನಾನ್ ಬಂದಪೆನ್.
[ಅರ್ಧ ಏಳಲೆಸುತಿದ್ದ ಅವನನ್ನು ಸನ್ನೆಯಿಂದ ಕುಳ್ಳಿರಿಸಿ]

ದುಷ್ಟಬುದ್ಧಿ: – ಅಂತಪ್ಪ ದಣಿವೇನಿಲ್ಲ! ದಣಿವೆಂದೇನ್
ರಾಜ್ಯಾಕಾರ್ಯದಿ ಮುಳುಗಿದಾತಂಗೆ?….ಓಹೊ,
ಮರೆತಿದ್ದೆ ನಾನೊಂದನೆಮ್ಮಯ ಕುಲಾಚಾರಮಂ.
ವಂಶದಾಚಾರಮದು ವರನಾದವಂಗೆ.
ಊರ ಹೊರ ಬನದೊಳಿಹ ಚಂಡಿಕಾಲಯಕೆ ನೀಂ
ನೀರಜಸಖಾಸ್ತ ಸಮಯದೊಳೊರ್ವನೆಯೆ ಪೋಗಿ
ಗೌರಿಯಂ ಪೂಜಿಪುದು, ಸರ್ವಮಂಗಳೆಯಂ.

ಚಂದ್ರಹಾಸ: – ತಪ್ಪದೆಯೆ ಹೋಗುವೆನು ಜಗದಂಬೆಯೆಡೆಗೆ.

ದುಷ್ಟಬುದ್ಧಿ: – ಒರ್ವನೆಯೆ ಪೋಗವೇಳ್ಕುಂ; ಕುಲಾಚಾರಕ್ಕೆ
ಭಂಗಮಪ್ಪುದು, ತಪ್ಪಿದರೆ; ಮುನಿಯುವಳ್ ಚಂಡಿ;
ಕೇಡಹುದು ನಾಡಿಂಗೆ.

ಚಂದ್ರಹಾಸ: – ಸಂಪ್ರದಾಯಕ್ಕಿನಿತು
ಭಂಗ ಬರದಂತೆ ನಡೆಯುವುದೆನ್ನ ಕರ್ತವ್ಯ.

ದುಷ್ಟಬುದ್ಧಿ:(ಹುಸಿನಗುವೆರಸಿ)
ನಿಮ್ಮ ರಾಜ್ಯವ ನೋಡಿ ನನಗೆ ಸಂತಸವಾಯ್ತು.
ನಿನ್ನ ತಂದೆಯ ಕೂಡೆ ನಾಡನೆಲ್ಲವ ಸುತ್ತಿ
ಬಂದಿಹೆನು.

ಚಂದ್ರಹಾಸ: – ಶ್ರೀ ಹರಿಯ ಕೃಪೆ! ಮೇಣ್ ನಿಮ್ಮ ದಯೆ!

ದುಷ್ಟಬುದ್ಧಿ:(ನಗುತ್ತಾ ಎದ್ದು, ತನ್ನೊಡನೆಯೆ ಎದ್ದು ನಿಂತ ಚಂದ್ರಹಾಸನ ಭುಜವನು ಚಪ್ಪರಿಸಿ.)
ಮೇಣ್ ನಿನ್ನೊಂದು ಪರಾಕ್ರಮಂ!…
ನೀನಿನ್ನು ತೆರಳು. ಚಂಡಿಕಾರಾಧನೆಗೆ
ಬೇಕಾದುದೆಲ್ಲವನು ಸಿದ್ಧಪಡಿಸುವ ಮುನ್ನ
ಇನ್ನುಳಿದ ಕಟ್ಟಳೆಗಳೆಲ್ಲವನು ಮುಗಿಸು, ನಡೆ.
(ಚಂದ್ರಹಾಸನು ನಮಸ್ಕರಿಸಿ ಬೀಳ್ಕೊಳ್ಳುತ್ತಾನೆ. ದುಷ್ಟಬುದ್ಧಿಯ ಮುಖ ಮತ್ತೆ ಕರ್ಕಶವಾಗುತ್ತದೆ.
ಕಿಂಕರಾ! [ಕರೆಯುತ್ತಾನೆ]

ಸೇವಕ:(ಪ್ರವೇಶಿಸಿ) ಜೀಯ!

[ದುಷ್ಟಬುದ್ಧಿ ಸೇವಕನ ಕಿವಿಯಲ್ಲಿ ಏನನ್ನೊ ಹೇಳುತ್ತಿರುತ್ತಾನೆ.]

ಪರದೆ ಬೀಳುತ್ತದೆ.

*

ದೃಶ್ಯ

[ಕಾಳಿಕಾಲಯಕ್ಕೆ ಹೋಗುವ ದಾರಿ. ಸಾಯಂ ಸಮಯ. ಚಂದ್ರಹಾಸ, ರಣಸಿಂಹ, ವೀರಸೇನ ಬರುತ್ತಾರೆ. ಚಂದ್ರಹಾಸನ ಕೈಲಿ ಪೂಜೆಯ ಸಾಮಗ್ರಿಯಿರುವ ಹರಿವಾಣವಿರುತ್ತದೆ.]

ಚಂದ್ರಹಾಸ: – ನೀವು ಇಲ್ಲಿಯೆ ನಿಲ್ಲಿ. ನಾನೊರ್ವನೆಯೆ ನಡೆದು
ಪೂಜೆಯಂ ಪೂರೈಸಿ ಬರುವೆ.

ರಣಸಿಂಹ: – ನಾವೂ ಬರುತ್ತೇವೆ ನಿನ್ನೊಡನೆ.

ಚಂದ್ರಹಾಸ: – ಬೇಡ, ಪದ್ಧತಿಯ ಮೀರುವುದು ತರವಲ್ಲ.
ಮಾವನಿಗೆ ತಿಳಿಯೆ ಕೋಪಗೊಳ್ಳದೆ ಇರನು.

ವೀರಸೇನ: – ಮಂತ್ರಿ ಏತಕೆ ಇಂತು ವರ್ತಿಪನೊ ನಾನರಿಯೆ!
ವಿಷಯೆ ಮದನರ ಬೈದು, ತನ್ನ ಸತಿಯಂ
ತಾರಕಾಕ್ಷಿಯಂ ಬಡಿದು , ಸೇವಕರ ನಿಂದಿಸಿ,
ಮದುವೆಗೈತಂದ ಕಮಲಮುಖಿಯರ ದೂರಿ,
ಸಿಟ್ಟಿನಿಂದುರಿದನಂತೆ!

ಚಂದ್ರಹಾಸ: – ರಾಜ್ಯಕಾರ್ಯದೊಳೇನು ಕೋಪವುಂಟಾಗಿಹುದೊ?

ರಣಸಿಂಹ: – ಅವನೊಳೆನಗೇಕೊ ಸಂದೇಹ.
ಹುಚ್ಚನಂತಾಡುವನು!

ವೀರಸೇನ: – ನೋಡಲ್ಲಿ, ಮದನ ಬರುತಿಹನು.
ನುಡಿಯ ಬೇಡಂತು (ಪಡಿಹಾರಿ ಮತ್ತು ಕಿಂಕರರೊಡನೆ ಮದನನ ಪ್ರವೇಶ)

ಮದನ: – ಚಂದ್ರಹಾಸಾಪ್ರಭುಗೆ ಜಯವಾಗಲಿ!

ಚಂದ್ರಹಾಸ: – ಏನಿದೀ ಪರಿಹಾಸ್ಯ, ಮದನ?
ನಿನಗೆ ನಾನೆಂದು ಪ್ರಭುವಾದೆ?

ಮದನ: – ಪರಿಹಾಸ್ಯವಿನಿತಿಲ್ಲ: ಇಂದೆ ಆಗಲಿಹೆ!
ಆಗಳೆಯೆ ಆಗಿರುವೆ ಎಂದರೂ ಸುಳ್ಳಾಗದು!
ನೀವೀಗ ಹೊರಟಿರುವುದೆಲ್ಲಿಗೆ?

ಚಂದ್ರಹಾಸ: – ಪೂಜೆಗೆ, ಚಂಡಿಕಾಲಯಕೆ.

ರಣಸಿಂಹ: – ಮದನ, ನೀನೀಗ ಎಲ್ಲಿಂದ ಬರುತಲಿಹೆ?

ಮದನ: – ತಂದೆಯ ನಿರೂಪಮಂ ಪೊತ್ತು
ಕುಂತಳೇಂದ್ರನ ಬಳಿಗೆ ತೆರಳಿದ್ದೆ.
ಚಂದ್ರಹಾಸನಂ ಈಗಳೆಯೆ ನಾನೊಡಗೊಂಡು ಬರ್ಪುದು
ಎಂದಾಜ್ಞೆ ಇತ್ತೆನ್ನಂ ಕಳುಹಿದನು ಕುಂತಳೇಂದ್ರಂ.

ರಣಸಿಂಹ: – ಏನ್ ಅನಿತೊಂದು ಅವಸರಂ?
ನಿಜ ಶರೀರಚ್ಛಾಯೆ ತಲೆಯಿಲ್ಲದಿರೆ ಕಂಡು
ಗಾಲವ ಪುರೋಹಿತಂಗರಿಪಲ್ ಆತನ್
ಅದು ಮೃತಿಗೆ ಕಾರಣಂ ಎನಲೈ,
ಕುಂತಳೇಂದ್ರಂ ತನ್ನೊರ್ವಳೆಯೆ ಸುತೆಯಂ
ಚಂದ್ರಹಾಸಂಗೆ ಗಾಂಧರ್ವವೈವಾಹ ವಿಧಿಯಿಂ
ಕೊಟ್ಟು, ರಾಜ್ಯಬಾರವನವನ ಕೈಲಿಟ್ಟು,
ಶ್ರೀಹರಿಯ ಜಾನಿಸಲು ಬನಕೆ ಹೊರಡುವನಂತೆ.
(ಚಂದ್ರಹಾಸನಿಗೆ)
ನೀನೀಗಳೆಯೆ, ಒಂದಿನಿತು ತಳುವದೆಯೆ,
ಹೋಗವೇಳ್ಕರಮನೆಗೆ.

ಚಂದ್ರಹಾಸ: – ನಿನ್ನ ಪಿತೃವಾಜ್ಞೆಯಂ ನಡಸುವ ಕುಲವ್ರತದ
ಚಂಡಿಕಾರಾಧನೆಯ ಮಾಡುವವರಾರು?

ಮದನ: – ವಂಶದಾಚಾರವದು ನಾನು ಮಾಡಿದರಾಯ್ತು.
ನೀನೀಗ ರಣಸಿಂಹ ವೀರಸೇನರ ಕೂಡಿ
ರಾಜನಲ್ಲಿಗೆ ತೆರಳು. ನಿನಗಾಗಿ ಕಾದಿಹನು!
ಪೂಜೆಯ ಸುವಸ್ತುಗಳನಿಲ್ಲಿ ತಾ.
ದಾರಿ ತೋರುವನಿವನು ಈ ಪಡಿಹಾರಿ.
[ಚಂದ್ರಹಾಸನು ಹರಿವಾಣವನ್ನು ಕೊಡುತ್ತಿರುವಾಗ ಮದನನ ಕೈಯಿಂದ ಅದು ಬಳುಕಿ ಪೂಜಾಸಾಮಗ್ರಿಯಲ್ಲಿ ಕೆಲವು ಕೆಳಗೆ ಬೀಳುತ್ತವೆ. ಪಡಿಹಾರಿ ಅದನಾಯ್ದು ಹಾಕುತ್ತಾನೆ]

ಚಂದ್ರಹಾಸ: – ಏನಿದಪಶಕುನ? ನಾನೆ ಪೂಜೆಯ ತೀರ್ಚಿ
ಆಮೇಲೆ ಹೋಗುವೆನು ದೊರೆಯೆಡೆಗೆ.

ಮದನ:(ನಗುಮೊಗನಾಗಿ)
ಏನಿದು? ಕೈತೊಡರಿ ಬಿದ್ದುದಕೆ ಶಕುನವೇಂದೇಕೆ
ಅಂಜುತಿಹೆ, ವೀರನಾಗಿಹ ನೀನು?
ನಡೆ, ಚಂದ್ರಹಾಸ; ನೀನು ಭಗವದ್ ಭಕ್ತ!
ನಿನಗೆ ಕೇಡುಂಟೆ? ನಿನಗೊಳ್ಳಿತಕ್ಕೆ!
[ವೀರಸೇನ ರಣಸಿಂಹರೊಡನೆ, ಪಡಿಹಾರಿ ದಾರಿತೋರುತ್ತಿರಲು, ಚಂದ್ರಹಾಸನು ಹೊರಡುತ್ತಾನೆ.]

ಮದನ: –  ನಾನೊಬ್ಬನೆಯೆ ಹೋಗಬೇಕಾ ಚಂಡಿಕಾಲಯಕೆ.
ನೀವೆನ್ನೊಡನೆ ಬರೆ, ಚಂದ್ರಹಾಸಂಗೆ
ಕುಲವ್ರತದ ನನ್ನಿ ಭಂಗವಾಗುವುದು.
ಬೇಗದಿ ಬಂದಪೆನು ಪೂಜೆಯಂ ಪೂರೈಸಿ.
ನೀವೆನ್ನ ಅಯ್ಯನೆಡೆಯಂ ಸಾರ್ದು ತಳ್ವದೆಯೆ
ನಡೆದ ರಾಜಕಾರ್ಯವನೆಲ್ಲಮಂ ಪೇಳ್ವುದು,
ನಿಮಗಾಗಳೆಯೆ ನಾಂ ಪೇಳ್ದವೋಲೆ.
(ಕಿಂಕರರು ಕೈಮುಗಿದು ಹೊರಡುತ್ತಾರೆ)
ಸೂರ್ಯನಾಗಲೆ ಮುಳುಗಿದನು. ಮುಸುಗುತಿದೆ
ಕತ್ತಲೆಯ ಮುಂಗಪ್ಪು. ಹಕ್ಕಿ ಹಾರುತಿವೆ
ಹಿಂಡಾಗಿ ಗೂಡಿಂಗೆ. ಇತ್ತ ನಭದಲಿ ಚುಕ್ಕಿ
ಮೂಡುತಿದೆ…. ಅತ್ತಾ ದಿಗಂತದಿಂದೇಳುತಿಹ
ಕಾರ್ಮೊಡಗಳ್ ಮಿಂಚುತಿವೆ….ಹಾ ಗುಡುಗೂ
ಕೇಳುತಿದೆ!…. ದೂರದೊಳ್ ಆ ಚಂಡಿಕಾಲಯದ
ಪೊಂಗಳಸವೆಂತು, ಕಿಕ್ಕಿರಿದ ಮರದಳಿರ
ಕರ್ನೆತ್ತಿಯಂ ಮೀರಿ, ಮೇಲೆದ್ದು ಮಿನುಗುತಿದೆ,
ಬೈಗುಗೆಂಪಿನ ಛಾಯೆಯಲಿ, ನೆತ್ತರ್ ಸೋರ್ವ
ರುದ್ರಕಾಳಿಯ ಜೋಲ್ವ ಕೆನ್ನಾಲಗೆಯವೋಲ್!

[ಹೊರಡುತ್ತಾನೆ]

ಪರದೆ ಬೀಳುತ್ತದೆ.

*