ದೃಶ್ಯ

[ಕಾಳಿಕಾ ದೇವಸ್ಥಾನದ ಸುತ್ತಣ ಕಾಡು. ಹಳುವಿನ ನಡುವೆ ಭೀಷಣ, ಕಾಳ, ಮಾರ ಮೂವರೂ ಬಿಚ್ಚಿದ ಕತ್ತಿಗಳನ್ನು ಹಿಡಿದು ಮಾತನಾಡುತ್ತಿರುತ್ತಾರೆ.]

ಭೀಷಣ: – ಮಾರ, ನೀನು ಬಾಗಿಲ ಹಿಂದೆ ಅವಿತಿರು;
ಕಾಳ, ನೀನು ಮೂರ್ತಿಯ ಹಿಂದೆ ಅಡಗಿರು;
ನಾನಿಲ್ಲಿಯೆ ನಿಂತಡಗಿ, ಅವನು ಬರುವ ಹಾದಿಯನ್ನೆ
ನೋಡುತ್ತಿರುವೆ. ದೂರದಲಿ ಕಂಡೊಡನೆ ಗುಡುಗಿ
ಬಂದವಿತುಕೊಳ್ಳುವೆ, ನಿಮಗೆ ಸೂಚನೆಯಾಗಿ.

ಮಾರ: – ಅಂದವನ ಬಿಟ್ಟಂತೆ ಇಂದು ಬಿಟ್ಟರೆ ನಮ್ಮ ತಲೆ
ಅಟ್ಟೆಗಳ ಮೇಲಿರುವುದಿಲ್ಲ.

ಕಾಳ: – ಇಂದು ಬಿಡುವುದೆ? ಯಾರು ಬಿಟ್ಟರೂ ನಾನು ಬಿಡೆ.

ಭೀಷಣ: – ಒಂದೆ ಏಟಿಗೆ ತುಂಡಾಗುವಂತೆ ಹೊಡೆಯಬೇಕು.
ಯಾರೂ ಹಿಂಜರಿಯಬಾರದು. ಜೋಕೆ! ಅವನು
ಕತ್ತಿಕಾಳೆಗದಿ ಬಲುಗಟ್ಟಿಗನಂತೆ. ರಣಾಂಗಣದಿ
ನೂರು ಕಾಲಾಳುಗಳನೊಮ್ಮೆಗೆ ತುಂಡು ಮಾಡುವ ಜಾಣ್ಮೆ
ಇಹದಂತೆ!

ಮಾರ: – ನಿನಗೇಕೆ ಆ ಚಿಂತೆ? ನಮ್ಮ ಮಾರಿಯ ಮುಂದೆ
ನಾವು ಹೆದರುವುದುಂಟೆ?

ಕಾಳ: – ಇಂದವಳಿಗೆ ಸಿರಿಯ ನರಬಲಿ!

ಮಾರ: – ಒಬ್ಬನೆ ಬರುವನೊ? ಕೂಡಿ ಬರುವನೊ?

ಭೀಷಣ: – ಒಬ್ಬನಾಗಲಿ ಇಬ್ಬರಾಗಲಿ ತುಂಡುಮಾಡುವುದೆ
ನಮ್ಮ ಕರ್ತವ್ಯ. ಏ ಕಾಳ, ಕತ್ತಿಗಳನು ಚೆನ್ನಾಗಿ
ಮಸೆದಿರುವೆಯಷ್ಟೆ?

ಕಾಳ:(ಕತ್ತಿಯ ಬಾಯಿಗೆ ಕೈಹಾಕಿ ತೋರಿಸುತ್ತಾ)
ಓಹೊ, ಕಲ್ಲನೂ ಕತ್ತರಿಸಬಲ್ಲುದು!

ಭೀಷಣ:(ಮೇಲೆ ನೋಡಿ) ಏನಾಗಲೆಯ ಮೋಡ ಕವಿದು
ಮುಂಗಪ್ಪು ಹಬ್ಬಿಬಿಟ್ಟಿದೆ. ಗುಡುಗು ಮಿಂಚು
ಬೇರೆ! (ತೆಕ್ಕನೆ ಚಕಿತನಾಗಿ ದೂರ ನೋಡಿ) ನೋಡಿ, ಓ ಆ
ದೂರದಲ್ಲಾವುದೊ ಆಕೃತಿ ಚಲಿಸಿದಂತೆ ಕಾಣುವುದಿಲ್ಲವೆ?
[ಎಲ್ಲರೂ ಅತ್ತ ನೋಡುತ್ತಾರೆ.]

ಮಾರ: – ನನ್ನ ಕಣ್ಣು ಮಂದ. ನನಗೇನೂ ಕಾಣಿಸುವುದಿಲ್ಲ.

ಕಾಳ:(ನಕ್ಕು) ಕಣ್ಣೊಂದೆ ಏನು? ತಲೆಯೂ ಮಂದವೆ ನಿನಗೆ!
(ಎಂದು ದೂರ ನೋಡಿ) ಹೌದು, ಏನೊ ಚಲಿಸಿದಂತಾಗುತಿದೆ.

ಭೀಷಣ: – ನಿಮ್ಮ ನಿಮ್ಮ ತಾಣಗಳಿಗೆ ಹೋಗಿ ಅಡಗಿರಿ. ಅವನೆ
ಬರುತಿಹನು. ನಾನು ‘ಹೊಯ್ ‘ ಎಂದು ಕೂಡಲೆ ಬಂದು
ಮುತ್ತಬೇಕು ತಿಳಿಯಿತೆ?
[ಮೂವರೂ ಬೇಗ ಬೇಗನೆ ಗುಡಿಯ ಕಡೆ ಓಡಿ ಮರೆಯಾಗುತ್ತಾರೆ. ಬಳಿಕ ಪೂಜಾ ಸಾಮಗ್ರಿಯಿರುವ ಹರಿವಾಣ ಹಿಡಿದು ಮದನ ಪ್ರವೇಶಿಸುತ್ತಾನೆ.]

ಮದನ: – ಯಾರೋ ಮಾತನಾಡಿದ ಹಾಗೆ ಕೇಳಿಸಿತು.
ಯಾರಿರುವರಿಲ್ಲಿ ಈ ಹೊತ್ತಿನಲ್ಲಿ? (ಸುತ್ತನೋಡಿ)
ಕಾಡುಗತ್ತಲೆಗೆ ಮೋಡಗತ್ತಲೆಯೂ ಸೇರಿ
ಮಸಿಮುದ್ದೆಯಾಗಿ ಅಳಸಿಹೋಗಿಹುದೆಲ್ಲ.
ನಾನು ಕೇಳಿದುದು ಕಲ್ಪನೆಯ ಸದ್ದಿರಬೇಕು.
ಗುಡುಗು ಸದ್ದಿನಲಿ ಮರಗಳ ನಡುವೆ ನುಗ್ಗುವೀ
ಗಾಳಿಯೇ ಗೊಣಗಿದಂತಾಯ್ತೆ ಏನೊ?
(ಗೂಬೆ ವಿಕಾರವಾಗಿ ಕೂಗುತ್ತದೆ)
ಏನು ಗೂಗೆಯ ಕೂಗಿನಿತು ಕರ್ಕಶ, ವಿಕಾರ!
ಸುತ್ತಲಿಹ ಪ್ರೇತ ಭೂಮಿಯ ಮಹಿಮೆಯಿರಬೇಕು!
ಎನಿತು ಧೈರ್ಯವನೊತ್ತಿದರು ಎದೆಗೆ, ಮನವೇಕೊ
ಕಳವಳಿಸುತಿಹುದು! ಕತ್ತಲೆಯೆ ಅಂತು!…
ತಂದೆಯಿಂದಿನ ವರ್ತನೆಯ ಕಾರಣವೊ? ಇರಬೇಕು…
ತಂಗಿಯನಂತು ಬೈದುದಂ ಕಂಡೆನಗೆ
ತಂದೆಯನೆ ನಿಗ್ರಹಿಪ ಕೋಪವುರಿದಿತ್ತು!
ಕೋಮಲೆ, ಮುಗ್ಧೆ, ನವವಧು, ಪ್ರೇಮಮೂರ್ತಿ,
ಅವಳನಾಪರಿ ಕಲೆಯುವುದೆ?… ಅಥವಾ,
ಅವಳೆಸದಿದಾ ಕಜ್ಜಗುಟ್ಟು ತಂದೆಗೇನಾದರೂ
ತಿಳಿದಿಹುದೋ? – ಪಾಪ, ಮುದ್ದು ತಂಗಿ!
ಅಪ್ಪಯ್ಯನಂತು ಬೈದುದಕೆ ಹೆದರಿ ಮುದುರಿ
ಬಿಕ್ಕಿ ಬಿಕ್ಕಳುತೆ ನನ್ನೆಡೆಗೆ ಓಡಿಬಂದು
ಪತ್ರವನು ತಾನೆ ತಿದ್ದಿದಾ ಮುಗ್ಧಗೋಪ್ಯವನು
ಒರೆದಳಲ್ತೆ? ತನ್ನ ತಪ್ಪನು ಅಪ್ಪಯ್ಯಗೊಪ್ಪಿಸುವೆ
ಎಂದವಳನೆಂತೊ ನಾನೆ ತಡೆದೆ…. ಆದರೂ
ಎಲ್ಲಿ ಹೇಳಿ ಬಿಡುವಳೊ ಎಂದು ನನಗೆ ಅಳ್ಕು!….
ಏಕಿಂತು ಕ್ರೂರಿಯಾದನೊ ತಂದೆ ನಾನರಿಯೆ.
ನಾನೆ ಕಾರಣವಂತೆ! ಅಂತೆಂಬರನಿಬರೊ!….
ಕುಂತಳೇಂದ್ರನ ರಾಜ್ಯವನು ನನಗೆ ಮಾಡುವುದೊಂದೆ
ಆತನಾ ಕ್ರೌರ್ಯಕ್ಕೆ ಗುರಿಯಂತೆ!….
ದೊರೆಯ ಕುವರಿಯನೆನಗೆ ತಂದುಕೊಂಡು
ಆ ಉಪಾಯವ ಸಾಧಿಸುವುದವನ ಬಯಕೆಯಂತೆ!
ಆದರೀಗಳಾ ಬಟ್ಟೆಯೂ ಕಟ್ಟಿದಂತೆಯೆ:
ಗಾಂಧರ್ವ ವೈವಾಹವಿಧಿಯಿಂ ದೊರೆಯ ಮಗಳಾಗಳೆಯೆ
ನನ್ನ ತಂಗೆಗೆ ತಂಗೆಯಾಗಿಹಳಲ್ತೆ?….
ಅದು ತಿಳಿಯೆ, ತಂದೆಯ ಮುನಿಸಿನುರಿಯನ್
ಆನುವುದೆಂತೊ? ಆರ ಆಹುತಿಯಪ್ಪುದೊ?…
ಎನಿತೊ ಸೂಳ್ ಎನಗೆಯೆ ಒರಲಿ ಸಾವಾದರೂ
ಎಂಬಾಸೆ ಸುಳಿದಿಹುದು ನನ್ನ ಹೃದಯದಲಿ.
ಚಂದ್ರಹಾಸನಿಗೇನು ಕೇಡೊದಗುವುದೊ ಎಂದು
ನನಗಳ್ಕು…. ನನ್ನ ಹರಣವನೊಡ್ಡಿಯಾದರೂ
ಆ ಸಾತ್ವಿಕ ಶಿರೋಮಣಿಯ ಕ್ಷೇಮಕ್ಕೆ ಹೊಣೆ ನಿಲುವೆ….
ಮುದ್ದು ತಂಗಿಗೆ ಅಮಂಗಳಂ ಬರದಿರ್ಕೆ – (ದೂರಕ್ಕೆ ನೋಡಿ)
ಈ ಕಾಡುಗತ್ತಲಲಿ ಆ ಗುಡಿಯ ಹಣತೆಯ ಸೊಡರು
ಎಂತು ಹೋರಾಡುತಿದೆ, ಬೆಳಕಿನ ಬದುಕಿಗೆಳಸಿ!
ಅಂತೆಯೆ ಅಲ್ತೆ ನನ್ನೆದೆಯ ಬೆಳಕೂ!
[ ಬೆಳಕನ್ನೆ ಗುರಿಮಾಡಿ ನಡೆದು ಮರೆಯಾಗುತ್ತಾನೆ]

ಪರದೆ ಬೀಳುತ್ತದೆ.

*

ದೃಶ್ಯ

[ತನ್ನ ಅರಮನೆಯ ಒಂದು ವಿಶಾಲ ಕಕ್ಷೆಯಲ್ಲಿ ದುಷ್ಟಬುದ್ಧಿ ಹಿಂದೆ ಮುಂದೆ ತಿರುಗುತ್ತಿದ್ದಾನೆ. ಸಂಜೆಗಪ್ಪು ಕವಿದಿದೆ. ಕೋಪ ಕ್ರೌರ್ಯ ಶೋಕಾದಿ ನಾನಾ ಭಾವಗಳಿಂದ ಅರೆಮರುಳನಂತೆ ವರ್ತಿಸುತ್ತಿದ್ದಾನೆ]

ದುಷ್ಟಬುದ್ಧಿ: – ಕಟ್ಟಾಣೆಯಿತ್ತಿಹೆನು. ಅಂದಿನಂತಾಗದು.
ಇಂದವನ ಕೊಂದೆ ತೀರ್ಚುವರು!…
(ಸುತ್ತ ನೋಡಿ ಕತ್ತಲಾಗುತ್ತಿರುವುದನು ಗಮನಿಸಿ)
ಏನಿನ್ನೂ ದೀಪಮಂ ಪೊತ್ತಿಸಿಲ್ಲ…ಯಾರಲಿ?

ಸೇವಕ:(ಓಡಿಬಂದು) ಆಜ್ಞೆ ಮಹಾಸ್ವಾಮಿ.

ದುಷ್ಟಬುದ್ಧಿ: – ಕಾಣ್ಬುದಿಲ್ಲವೆ ನಿನಗೆ ಕತ್ತಲಾಗುತ್ತಿಹುದು?

ಸೇವಕ: – ದೀವಿಗೆಯ ಹೊತ್ತಿಸುವ ಸಮಯವಾಗಿಲ್ಲ, ಒಡೆಯ;
ಕರ್ಮೊಡ ಕವಿಯುತಿದೆ. ಅದಕೆ ಈ ಕತ್ತಲೆ!

ದುಷ್ಟಬುದ್ಧಿ: – ಸಾಕು ವಿವರಣೆ. ನಡೆ, ಬೆಳಕ ತಾ.
(ಸೇವಕ ಹೋಗುತ್ತಾನೆ)
ಈ ಬೆಳಕಿನಿಂದೇನಹುದು? ಆ ಬೆಳಕು ನಂದಿದರೆ!
(ಸುಯ್ದು)
ಅಯ್ಯೊ, ಮಗಳ ವೈಧವ್ಯದಿಂ
ಮಗನಭ್ಯುದಯಮಂ ಸಾಧಿಸುವುದಾಯ್ತೆ?
ಛಿಃ ವಿಕಟ ವಿಧಿಯೆ!…
(ಸೇವಕನು ಬೆಳಕು ತಂದಿಟ್ಟು ಹೋಗುತ್ತಾನೆ)
ಎಂತೊದಗಿತಾ ತಪ್ಪು?
‘ವಿಷವ ಮೋಹಿಸುವಂತೆ’ ಎಂಬುದೆಂತಾಯ್ತು
‘ವಿಷಯೆ ಮೋಹಿಸುವಂತೆ’ ?
ವಿಧಿ ಕೃತವೊ? ತನ್ನ ಮೋಸವೊ?
ಬರೆದವನ ಮರೆಹೊ?
ಅಲ್ಲದಿರೆ ಚಂದ್ರಹಾಸನದೆ ಮೃಷೆಯೊ?…
ದಿಟಂ, ಮದನನ ಮೇಲೆ ತಪ್ಪಿಲ್ಲ … ಎಂತೂ
ಅಂದೆನಗೆ ಋಷಿಗಳಾಡಿದ ಮಾತು ಪುಸಿಯದಲ್ತೆ?
ಆದೊಡಂ… ಆದೊಡಂ…. ಆದೊಡಂ…
ಉಪಾಯದಿಂದೀಗಳಾಂ ವಧಿಸದಿರ್ದೊಡೆ
ಹುಸಿಯಹದು ನನ್ನ ಸಂತತಿಗೆ
ಈ ಧರೆಯನಾಳ್ವ ಸಂಪದಂ…(ಮುನಿಸು ಏರಿ)
ಕುಲಘಾತಕಗೆ ಮದುವೆಯಾದಾ ವಿಷಯೆ, –
ತಂದೆ ಪಿಂತಿರುಗುವಾ ಮೊದಲೆ ಏನವಳ್ಗಿರ್ದತ್ತೊ
ಈ ಮದುವೆಯವಸರಂ? – (ಹಹ್ಹಹ್ಹಾ ಹುಚ್ಚುನಗೆ ನಗುತ್ತಾ)
ವಿಧವೆಯಾಗಿರಲಿ… (ಅಳುತುಟಿಯಾಗಿ) ಅಯ್ಯೋ
(ದೈನ್ಯದಿಂದ ದುಃಕಿಸುತ್ತಾನೆ.)
(ಹೊರಗೆ ಬಾಗಿಲು ತಟ್ಟಿದ ಸದ್ದಾಗುತ್ತದೆ.)
ಯಾರಲ್ಲಿ?

ಸೇವಕ:(ಪ್ರವೇಶಿಸಿ ಅವಸರದಿಂದ ಹೇಳುತ್ತಾನೆ)
ಮದನ ಒಡೆಯರು ಅಟ್ಟಿರುವ ಕಿಂಕರಂತೆ!
ಸಮಯವನೆ ಕಾಯುತಿಹರು.

ದುಷ್ಟಬುದ್ಧಿ: – ಬರಹೇಳು.(ಸ್ವಗತ) ನಾನೊರೆದ ಗುಪ್ತಕಾರ್ಯದಲಿ
ವಿಜಯಿಯಾಗಿಹನೊ? ಇಲ್ಲದಿರೆ, ಮತ್ತೆ,
ಮತಿಗೇಡಿತನವನೆ ಮೆರೆದಿಹನೊ?
(ಕಿಂಕರರಿಬ್ಬರು ಪ್ರವೇಶಿಸಿ ನೆಲಮುಟ್ಟಿ ನಮಸ್ಕರಿಸಿ ಕೈಮುಗಿದು ಬಾಗಿ ನಿಲ್ಲುತ್ತಾರೆ. ದುಷ್ಟಬುದ್ಧಿ ಪ್ರಶ್ನದೃಷ್ಟಿಯಾಗಿ ಅವರನ್ನು ದುರುದುರನೆ ನೋಡುತ್ತಾನೆ. ಅವನ ದೃಷ್ಟಿರೋಷಕ್ಕೆ ಆಳುಕಿ ಮಾತನಾಡಲಂಜಿದ್ದ ಕಿಂಕರರ ಮೇಲೆ ರೇಗಿ, ನೆಲಕ್ಕೆ ಕಾಲು ಕುಟ್ಟಿ)
ಮೂಕರೇನ್ ನೀವು? ಏಕಿಂತು ಕೆಮ್ಮನೆಯೆ
ನಿಂತಿಹಿರಿ, ಬೆಪ್ಪುಗಳೆ?

೧ನೆಯ ಕಿಂಕರ:(ಬೆಚ್ಚಿ ಬೆದರಿ ತೊದಲುತ್ತಾನೆ.)
ನಾವು… ತಮ್ಮ… ನಾವು… ಸನ್ನಿಧಿಗೆ…

ದುಷ್ಟಬುದ್ಧಿ: – ಏನದು? ಬೊಗಳೊ ಬೇಗದಿಂ!

೨ನೆಯ ಕಿಂಕರ: – ಮದನ ಒಡೆಯರು ಅವಸರವನರುಹಿ
ನಮ್ಮನಿಲ್ಲಿಗೆ ಕಳುಹಿದರು ತಮ್ಮ ಸನ್ನಿಧಿಗೆ.

ದುಷ್ಟಬುದ್ಧಿ: – ಏನೆಂದು?

೨ನೆಯ ಕಿಂಕರ: – ಗಾಲವರ ಬುದ್ಧಿಯಂ ಕೇಳ್ದು, ಕುಂತಳೇಂದ್ರಂ
ಚಂದ್ರಹಾಸ ಪ್ರಭುಗೆ ತನ್ನ ಕುವರಿಯಂ
ಗಾಂಧರ್ವ ವೈವಾಹ ವಿಧಿಯಿಂ
ರಾಜ್ಯಸಹಿತಂ ಧಾರೆಯೆರೆದಿತ್ತು, ತಾಂ
ಸಕಲ ಸೌಭಾಗ್ಯಮಂ ತ್ಯಜಿಸಿ
ಯೋಗಸಿದ್ಧಿಯಂ ಪಡೆಯೆ
ವನವಾಸಕುದ್ಯೋಗಿಸಿದನೆಂದು.
[ದುಷ್ಟಬುದ್ಧಿಯ ಕಣ್ಣುಗಳೂ ಮುಖಭಂಗಿಯೂ ಕಿಂಕರನ ಒಂದೊಂದು ಮಾತಿಗೂ ಅಚ್ಚರಿ ಮುನಿಸು ಜುಗುಪ್ಸೆ ಮೊದಲಾದ ಭಾವಗಳಿಂದ ವಿಕೃತವಾಗುತ್ತಾ ಹೋಗುತ್ತಾವೆ.]

ದುಷ್ಟಬುದ್ಧಿ: – ನಿಜವನೊರೆವೆಯೊ? ನಿನ್ನ ಮರಣನಾಂದಿಯಂ
ಪಾಡುತಿರುವೆಯೊ? ಒರಲೊ, ಪಿಶಾಚಿ! (ಗರ್ಜಿಸುತ್ತಾನೆ)

೨ನೆಯ ಕಿಂಕರ:(ಮೆಲ್ಲಗೆ ಹಿಂದಕ್ಕೆ ಸರಿದು ಮರೆಯಾದ ಮೊದಲನೆಯ ಕಿಂಕರನನ್ನು ಗಮನಿಸದರೂ ಗಮನಿಸಲೊಲ್ಲದವನಂತೆ)
ಒಡೆಯ, ಕುಮಾರರು ಒರೆದುದನೆ ನಾನೊರೆದಿಹೆನು.
ನನ್ನದೆಂಬುದು ಒಂದಿನಿತೂ ಇಲ್ಲ.

ದುಷ್ಟಬುದ್ಧಿ:(ವ್ಯಂಗ್ಯಧ್ವನಿಯಿಂದ)
ಎಲ್ಲಿಹನೊ? ಕುಮಾರನೆಲ್ಲಿಹನೊ? ಅರಸಂಗೆ
ನೆರವಾಗುತಿಹನೇಂ, ಚಂದ್ರಹಾಸಂಗೆ
ಪಟ್ಟಾಭಿಷೇಕೋತ್ಸವಂ ಗೆಯ್ವ ಸಂಭ್ರಮದಿ?…
(ತನಗೆ ತಾನೆಂಬಂತೆ)
ಮೂಢ! ಮೂಢ! ಮೂಢ!…
ನಾನಿರ್ದೊಡಂ ಸತ್ತನೆಂದೆಯೆ ತಿಳಿದರೇನಾ
ದ್ರೋಹಿಗಳ್? ವಿದ್ರೋಹಿಗಳ್!
ಬಲಿಗೊಳ್ಳದಿರಳು ನನ್ನ ಕೋಪಕಾಳಿ
ಆ ನೀಚರ್ಕಳೆಲ್ಲರಂ!

೨ನೆಯ ಕಿಂಕರ: – ಅಹುದುಹುದು ಜೀಯ,
ಮದನ ಕುಮಾರರಾ ಕಾಳಿಯನೆ ಪೂಜೆಗೈಯಲ್ಕೆ
ತೆರಳಿದರು ಊರ ಹೊರಗಣ ಚಂಡಿಕಾಲಯಕೆ.

ದುಷ್ಟಬುದ್ಧಿ:(ದಿಗ್ ಭ್ರಾಂತನಾಗಿ)
ಆಂ! ಆಂ! ಏನೆಂದೆ?

೨ನೆಯ ಕಿಂಕರ: – ಕುಮಾರರಾ ಚಂಡಿಕಾಲಯಕೆ ತೆರಳಿದರು.

ದುಷ್ಟಬುದ್ಧಿ: – ಚಂದ್ರಹಾಸನೆ?

೨ನೆಯ ಕಿಂಕರ: – ಅಲ್ಲ; ಮದನ ಕುಮಾರರು!
ಪೂಜೆಗಾಗಿಯೆ ಹೋಗುತಿದ್ದಾ ಚಂದ್ರಹಾಸಪ್ರಭುವಂ
ದಾರಿಯಲಿ ಸಂಧಿಸಿ,ಕುಮಾರರವರಂ
ರಾಜಕಾರಣವರುಹಿ ಕಳುಹಿದರು ದೊರೆಯೆಡೆಗೆ.

ದುಷ್ಟಬುದ್ಧಿ: – ಕುಲಾಚಾರಮಂ ಮೀರಿದನೆ ಪಾಪಿ?

೨ನೆಯ ಕಿಂಕರ: – ಕುಲವ್ರತವ ಪಾಲಿಸಲೆಂದೆ ಅಳಿಯಂದಿರ ಕೈಲಿದ್ದ
ಪೂಜಾಸಾಮಗ್ರಿಯಂ ತಾವೆ ಕೈಗೊಂಡು
ಚಂಡಿಕಾಲಯಕೆ ತೆರಳಿದರು, ನಮ್ಮನಿಲ್ಲಿಗೆ ಕಳುಹಿ.

ದುಷ್ಟಬುದ್ಧಿ:(ಹಮ್ಮಯಿಸಿ, ಸುಯ್ದು, ತತ್ತರಿಸಿ, ರೋದನಧ್ವನಿಯಿಂದ)
ಸಾಕು! ಸಾಕು! ಸಾಕು!
ತೊಲಗು! ತೊಲಗು! ತೊಲಗು!
ನೀ ದೂತನಲ್ಲ, ಯಮನ ಭೂತ!
ನಿಲಬೇಡ, ಕಣ್ಣೆದುರು ನಿಲಬೇಡ,
ಓ ವಿಧಿಯ ವಿಕಟ ಪರಿಹಾಸ್ಯರೂಪೀ, ಪಾಪೀ,
ತೊಲಗೋ ಇಲ್ಲಿಂದ!
(ಕಿಂಕರನು ಭಯಗ್ರಸ್ತನಾಗಿ ಹಿಂಜರಿದು ಮರೆಯಾಗುತ್ತಾನೆ)
ಅಯೋ! ಅಯೋ! ಅಯೋ!…
ನಮ್ಮುಪಾಯಮೆ ತಂದುದೆ ನಮಗಪಾಯಮಂ?
ಓ ವಿಧಿ, ಏಕಿಂತು ಮೂದಲಿಸುತಿರುವೆ?
ಇನ್ನೇನಂ ಕಾಯ್ದಿಟ್ಟಿರುವೆ ನೀನೆನಗೆ?…
ಕಜ್ಜ ಮೀರುವ ಮುನ್ನಮೆ ಉಜ್ಜುಗಂಗೆಯ್ಯದಿರೆ…
ಅಯೋ ಅಯೋ ಅಯೋ
ನೆನೆಯಲಾರೆ! ನೆನೆಯಲಾರೆ!
ನೆನೆಯಾಲಾರೆ, ನಡೆವ ಆ ಘೋರಮಂ!…
ಇದೊಮ್ಮಿಂಗೆ ಕ್ಷಮಿಸಿ ನನ್ನಂ
ಪೊರೆಯಲಾರೆಯ ನನ್ನ ಕಂದನಂ, ಓ ನನ್ನ ದುರ್ವಿಧಿ?
ತೋರೆನಗೆ ದಾರಿಯಂ
ಆ ಚಂಡಿಕಾಲಯಕೆ ತೋರೆನಗೆ ದಾರಿಯಂ;
ಬೇಗ! ಬೇಗ!
(ದಿಕ್ಕು ತಪ್ಪಿದವನಂತೆ ಅತ್ತ ಇತ್ತ ತತ್ತರಿಸಿ ಓಡಾಡುತ್ತಾನೆ)
ಕಾಲುಗಳೆ ಸೋಲುತಿಹವಲ್ಲಾ!
ಓಡೋಡಿ ಕೇಡಂ ತಡೆಯಬೇಕಾಗಿರುವ
ಈವೊಳ್ತಿನಲ್ಲಿ? ಕಣ್ಗೆ ಕತ್ತಲ್ಗಟ್ಟುತಿಹುದಲ್ಲಾ!
ಅಯ್ಯೊ! ಅಯ್ಯೊ! ಮದನಾ! ಮದನಾ!
ನಿಲ್ಲು, ನಿಲ್ಲು! ಬಂದೆ, ಬಂದೆ!… ನಿನ್ನ ತಂದೆ!
[ತತ್ತರಿಸುತ್ತಾ ಓಡುತ್ತಾನೆ]

ಪರದೆ ಬೀಳುತ್ತದೆ.

*