ದೃಶ್ಯ

[ಕಾಡಿನ ನಡುವಣ ಚಂಡಿಕಾಲಯ. ಕಗ್ಗತ್ತಲೆ ಕವಿದಿದೆ. ಕಾಳಿಕಾ ವಿಗ್ರಹದ ಮುಂದೆ ಒಂದು ಹಣತೆ ಉರಿಯುತ್ತಿದೆ. ಅದರ ನಸುಬೆಳಕಿನಲ್ಲಿ ದೇವಿಗೆ ಮುಡಿಸಿರುವ ಹೂವುಗಳೂ ಕೆಂಪುದಾಸವಾಳದ ಮಾಲೆಯೂ ಬಯಂಕರವಾಗಿವೆ. ಒಂದೆಡೆ ಜಾಗಟೆಯನ್ನು ನೇತುಹಾಕಿದ್ದಾರೆ. ಅದನ್ನು ಬಾರಿಸುವಾ ಕಿರಿಯ ಲಾಳವಿಂಡಿಗೆಯೂ ಪಕ್ಕದಲ್ಲಿದೆ. ಹೊರಗೆ ಸನ್ನಿಹಿತವಾದ ಬಿರುಮಳೆಯ ಸೂಚನೆ ಗಾಳಿಯ ಭೋರಾಟದಿಂದಲೂ ಸಿಡಿಲು ಮಿಂಚು ಗುಡುಗುಗಳ ಆರ್ಭಟದಿಂದಲೂ ರೌದ್ರವಾಗಿದೆ. ಹಣತೆಯ ಮಂದಕಾಂತಿಯಲಿ ವಿಗ್ರಹದ ಹಿಂದೆ ಅವಿತಿರುವ ಕಾಳನ ಮೋರೆಯಾಕಾರ ಆಗಾಗ ಇಣುಕುತ್ತಿರುತ್ತದೆ. ಮಾರ, ಭೀಷಣ ಇಬ್ಬರೂ ಕಗ್ಗತ್ತಲೆಯಲ್ಲಿ ಅಡಗಿ ಕಾಣುತ್ತಿಲ್ಲ.]

ಭೀಷಣ:(ಕತ್ತಲ್ಲಲ್ಲಿ ಕಾಣಿಸದೆ, ಗಟ್ಟಿಯಾದ ಪಿಸುದನಿಯಲ್ಲಿ ಭರ್ತ್ಸನೆ ಮಾಡುವಂತೆ ಆಜ್ಞೆ ಮಾಡುತ್ತಾನೆ.)
ಏ ಕಾಳ, ಮತ್ತೆ ಮತ್ತೆ ಹಾಗೆ ತಲೆಯಿಣುಕದಿರೊ, ಮುಟ್ಠಾಳ.

ಮಾರ:(ಕತ್ತಲೆಯ ಗರ್ಭದಿಂದಲೆ ಮತ್ತೊಂದು ದಿಕ್ಕಿನಿಂದ ಮಾತನಾಡುತ್ತಾನೆ)
ಈ ಗುಡುಗು ಮಿಂಚು ಬೇರೆ ಮೊದಲಾಗಿದೆ. (ಮಿಂಚು ಬೆಳಗುತ್ತದೆ.)
ಇವತ್ತೇನು ಬರುತ್ತಾರೊ ಇಲ್ಲವೊ?

ಕಾಳ: – ದೂರದಲಿ ಯಾರನೊ ಕಂಡಂತಾಯಿತು, ಮಿಂಚಿನ ಬೆಳಕಿನಲ್ಲಿ.

ಭೀಷಣ: – ಅಡಗಿ ನಿಲ್ಲಿ! ಅಡಗಿ ನಿಲ್ಲಿ! ಏ ಕಾಳ, ಏ ಮಾರ,
ಕೆಲಸದಲಿ ಎಡವಿದಿರೊ ನಿಮಗಿಂದು ತಲೆದಂಡ! ತಿಳಿಯಿತೆ?
[ಮೂವರೂ ಮಾತು ನಿಲ್ಲಿಸಿ ಹುದುಗುತ್ತಾರೆ. ಹೊರಗಡೆ ಗಾಳಿ ಮಿಂಚು ಗುಡುಗು ಜೋರಾಗುತ್ತದೆ. ಒಂದೆರಡು ತೋರ ಮಳೆಹನಿಗಳೂ ಬಿದ್ದ ಸದ್ದಾಗುತ್ತದೆ, ಮದನನು ವಿಗ್ರಹಕ್ಕೆ ಅಭಿಮುಖವಾದ ಬಾಗಿಲಿಂದ, ಕೈಯಲ್ಲಿ ಪೂಜಾ ಸಾಮಗ್ರಿಯಿರುವ ಹರಿವಾಣದೊಂದಿಗೆ, ಪ್ರವೇಶಿಸುತ್ತಾನೆ. ಗಾಳಿಗೆ ತಲೆಕೂದಲು ತುಸು ಕೆದರಿದಂತಿದೆ. ಸ್ವಲ್ಪ ಓಡೋಡಿ ಬಂದ ಅವಸರದ ಭಾವ ತೋರುತ್ತದೆ.]

ಮದನ: – ಇದೇನಿದು? ಇದ್ದಕಿದ್ದಂತೆ ತೆಕ್ಕನೆಯೆ
ಆಕಾಲ ಮೇಘಗಳ್ ಕವಿಯುತಿವೆ ಗಗನಮಂ?
ತಿವಿಯುತಿವೆ ಮಿಂಚುಗಳ್ ಕಣ್ಗೆ ಕಾಂತಿಯ ಖಡ್ಗಮಂ!
ಗಾಳಿ, ಕಾಳಿಯೆ ಧಿಮಿ ಧಿಮಿಯೆ ತಾಂಡವಂ ಕುಣಿವಂತೆ,
ಭೋರೆಂದು ಬೀಸತೊಡಗಿದೆ, ಮರದ ಮಂಡೆಯಂ
ತಿರುಪ್ಪಿ ಮುರಿದು ಆಗಮಿಸಿದಂತಿಹುದು ದುರ್ದಿನಂ!

ಕಾಳ:(ವಿಗ್ರಹದ ಹಿಂದೆ ಹಣತೆಯ ಮಂದಕಾಂತಿಯ ನಸುಗತ್ತಲೆಯಲ್ಲಿ ತಲೆಯಿಣುಕಿ, ಆಶ್ವರ್ಯ ಚಕಿತನಾಗಿ ಕಣ್ಣರಳಿಸಿ, ತನ್ನಲ್ಲಿ ತಾನೆ)
ಅಯ್ಯೊ ಏನಚ್ಚರಿ!
ಮದನ ಒಡೆಯರ ಮೊಗದ ಹೋಲಿಕೆಯೆ ಈತನದೂ?
ಇಲ್ಲದಿರೆ, ಹಣತೆ ಬೆಳಕಿನ ಮಸುಗು ಮಾಯೆಯೊ?
ಇಲ್ಲ, ಇಲ್ಲ, ಮದನ ಒಡೆಯರೆ ದಿಟ!
ಛೆ! ಛೆ! ಅಲ್ಲ, ಅಲ್ಲ, ಅಲ್ಲವೆ ಅಲ್ಲ;
ಒಬ್ಬರಂತೊಬ್ಬರಿರಬಾರದೇನು?
ಇಲ್ಲ, ಇಲ್ಲ. ದಿಟಕೂ ಮದನ ಒಡೆಯರೆ! ಹೌದು!
ಇವರನೆಲ್ಲಿಯಾದರೂ ಇರಿದು ಕೊಲ್ಲುವುದುಂಟೆ?
[ಅನಿತರಲ್ಲಿ ಮದನನು ಹಣತೆ ಬಳಕಿಗೆ ಇನ್ನೂ ಹತ್ತಿರನಾಗಿ, ತೂಗುಹಾಕಿದ್ದ ಜಾಗಟೆ ಬಾರಿಸಲು ಪಕ್ಕದಲ್ಲಿಟ್ಟಿದ್ದ ಲಾಳವಿಂದಿಗೆಯನ್ನು ಕೈಗೆ ತೆಗೆದುಕೊಂಡು ಒಂದು ಸಾರಿ ಹೊಡೆಯುತ್ತನೆ, ನಾದ ಗುಡಿಯನೆಲ್ಲ ತುಂಬುವಂತೆ. ಎರಡನೆ ಸಾರಿ ಬಾರಿಸಲು ಕೈಯೆತ್ತುತ್ತಿದ್ದ ಹಾಗೆಯೆ]

ಭೀಷಣ: – ಹೊಯ್, ಮಾರ! (ಎಂದು ಅಬ್ಬರಿಸಿ ಕೂಗಿ, ನುಗ್ಗಿ. ಇರಿಯುತ್ತಾನೆ.)

ಮಾರ: –  ಇರಿ! ಕಡಿ! (ಕತ್ತಲೆಯಿಂದ ಕೂಗು ಕೇಳಿಸುತ್ತದೆ.)
[
ಭೀಷಣನು ಕೂಗಿ ನುಗ್ಗಿ ಇರಿದೊಡನೆ ಮದನನ ಕೈಲಿದ್ದ ಹರಿವಾಣ ಸಶಬ್ಧವಾಗಿ ಕೆಳಗೆ ಬಿದ್ದು ಪೂಜಾಸಾಮಗ್ರಿ ಚೆಲ್ಲಾಪಿಲ್ಲಿಯಾಗುತ್ತದೆ. ಜಾಗಟೆ ಬಾರಿಸಲು ಎತ್ತಿದ್ದ ಲಾಳವಿಂಡಿಗೆಯಿಂದಲೆ ಭೀಷಣನ ಮೋರೆಗೆ ಬಲವಾಗಿ ಹೊಡೆಯುತ್ತಾನೆ ಕೂಗಿಕೊಳ್ಳುತ್ತಾ…]

ಮದನ: – ಅಯ್ಯೊ ದುಷ್ಟರಿರಾ! (ಎಂದು ತತ್ತರಿಸಿ) ಶ್ರೀಹರಿ! ಶ್ರೀಹರಿ!
[ಎಂದು ಕೆಳಗೆ ಬೀಳುತ್ತಾನೆ.]

ಭೀಷಣ:(ಬೀಳುತ್ತಾ) ಸತ್ತೆನಲ್ಲೋ, ಮಾರ, ಕಾಳ! (ಭೀಷಣನ ಕೈಲಿದ್ದ ಖಡ್ಗವೂ ಝಣತ್ಕಾರದಿಂದ ಮದನನ ಪಕ್ಕಕ್ಕೆ ಬೀಳುತ್ತದೆ.)

ಕಾಳ:(ವಿಗ್ರಹದ ಹಿಂದಿನಿಂದ ನುಗ್ಗಿಬಂದು) ನಿಲ್! ನಿಲ್! ನಿಲ್!
[ಎಂದು ಇರಿಯಲು ನುಗ್ಗುತ್ತಿದ್ದ ಮಾರನನ್ನು ತಡೆಯುತ್ತಾನೆ, ಕ್ಷಣಮಾತ್ರಕೆಬಂತೆ ಮಂದಿರದ ಒಳಗೆ ನೀರವವಾಗುತ್ತದೆ. ಹೊರಗಡೆಯೆ ಗಾಳಿ ಮಳೆ ಗುಡುಗಿನ ಸದ್ದು ಕೇಳಿಸುತ್ತದೆ.]

ಮಾರ:(ಕಾಳನಿಗೆ ) ಏಕೊ ನಿನಗೀ ದ್ರೋಹ, ನೀಚ?

ಕಾಳ:(ಸಂಕಟದ ದನಿಯಿಂದ) ಅಯ್ಯೋ ಏನಾಗಿ ಹೋಯ್ತು!

ಮಾರ: – ಆಗುತ್ತದೆ ನಿನಗೆ, ದ್ರೋಹಿ!

ಕಾಳ:(ಕೆಳಗೆ ನೋಡುತ್ತಾ) ಮದನ ಒಡೆಯರೊ ಇವರು!

ಮಾರ: – ಹುಸಿಯಾಡಬೇಡ, ಸುಳ್ಳ!
[ಕಾಳ ವಿಗ್ರಹದ ಬಳಿಯ ಹಣತೆಯನ್ನು ತರುತ್ತಾನೆ. ಅದರ ಬೆಳಕಿನಲ್ಲಿ ರಕ್ತಮಯವಾಗಿ ಬಿದ್ದಿದ್ದ ಮಂತ್ರಿಕುಮಾರನನ್ನು ಗುರುತಿಸುತ್ತಾರೆ. ಬೇಗಬೇಗನೆ ಹಣತೆಯನ್ನು ಹಿಂದಿದ್ದಲ್ಲಿಯೆ ಇಡುತ್ತಾನೆ.)

ಕಾಳ: – ಅವನಲ್ಲ ಕಣೋ, ಮಾರ. ಅಂದು ತಪ್ಪಿದಂತೆಯೆ ಅವನು ಇಂದು ತಪ್ಪಿದನಲ್ಲೋ! ಶನಿ! ನಮಗೆ ಹಿಡಿದಿರುವ ಶನಿ! ಇವರು ಮಂತ್ರಿಯ ಮಕ್ಕಳಲ್ಲವೇನೋ? ಕೆಟ್ಟೆವಲ್ಲೋ, ಮಾರ!

ಮಾರ: – ಎಲ್ಲಿಗಾದರೂ ಓಡಿ ತಪ್ಪಿಸಿಕೊಳ್ಳುವ, ಬಾ! ತಡೆದರೆ ತಲೆಗೇಡು!

ಕಾಳ: – ಭೀಷಣ?

ಮಾರ: – ಅವನು ಹಾಳಾಗಲಿ!
[ಇಬ್ಬರೂನಮ್ಮಮ್ಮಾ ,ಕಾಪಾಡು, ತಾಯಿ“, ಎಂದು ವಿಗ್ರಹಕ್ಕ್ಕೆ ಕೈಮುಗಿದು ಓಡಿಹೊಗುತ್ತಾರೆ.]

[ತುಸು ಹೊತ್ತಿನ ಮೇಲೆ ಮದನನು ಹೊರಳುತ್ತಾ ಏಳಲು ಪ್ರಯತ್ನಿಸಿ ಮತ್ತೆ ಬೀಳುತ್ತಾನೆ.]

ಮದನ:(ಹೊರಳುತ್ತಾ)
ಅಯ್ಯೊ, ತಂದೆ! ವಿಷಯೆ, ತಂಗಿ! ಚಂದ್ರಹಾಸ!
ತಪ್ಪ ಮನ್ನಿಸು, ತಾತ, ಅಪರಾಧವೆಸಗಿದೆನೆ?
ತಪ್ಪಾಯ್ತು! ಕ್ರೂರವಿದು! ಕ್ರೂರವಿದು, ಈ ಶಿಕ್ಷೆ!
ಚಂದ್ರಹಾಸನೆ, ಬಾ, ಮದನ ಕರೆವನು ನಿನ್ನ.
ಪುಣ್ಯವಂತನು ನೀನು; ಪುಣ್ಯವಂತನು ನೀನು.
ನೀನಲ್ಲ ಸಾಯುವನು: ನನಗದೇ ಶಾಂತಿ!
ಅಯ್ಯೊ ಇರಿಯುತಿದ್ದರು ನಿನ್ನನಿವರು!
ನೀನುಳಿದೆ, ಶ್ರೀಹರಿಯ ಕೃಪೆಯಿಂದೆ:
ತಂಗಿ, ನಿನ್ನ ಓಲೆಯ ಭಾಗ್ಯ ಚಿರವಾಗಲಿ!
ಓ ಚಂದ್ರಹಾಸ, ನಿನ್ನ ಭಕ್ತಿಯೆ ನಿನ್ನ ರಕ್ಷಿಸಿತು!
ಅದಕಾಗಿ ನಾ ಧನ್ಯ. ನನ್ನ ಸಾವೂ ಧನ್ಯ!
ಶ್ರೀಹರಿ! ಶ್ರೀಹರಿ! ಶ್ರೀಹರಿ! ಶ್ರೀಹರಿ!
(ಧ್ವನಿ ಕ್ಷೀಣಿಸಿ ನಿಶ್ಯಬ್ದನಾಗುತ್ತಾನೆ)

[ದುಷ್ಟಬುದ್ಧಿ ಓಡೋಡಿ ಬಂದು ಏದುತ್ತಾ ನಿಲ್ಲಿತಾನೆ . ಉಟ್ಟಬಟ್ಟೆ ಮಳೆಯಲ್ಲಿ ತೊಪ್ಪನೆ ತೊಯ್ದಿದೆ. ಕೂದಲೆಲ್ಲ ಕೆದರಿ ತೊಯ್ದು ತೊಟ್ಟಿಕ್ಕಿ ಮುಖದ ಮೇಲೆ ಬಿದ್ದಿದೆ. ಉಟ್ಟ ವಸನ ಅಸ್ತವ್ಯಸ್ತ. ಅಲ್ಲಲ್ಲಿ ಎಡವಿ ಬಿದ್ದುದರಿಂದಲೆಂಬಂತೆ ಮೈಗೆ ಬಟ್ಟೆಗೆ ಕೆಸರು ಮೆತ್ತಿದೆ. ಬುದ್ಧಿಗೆಟ್ಟವನಂತೆ ಉನ್ಮಾದವೇರಿದವನಂತೆ ಹೆಗ್ಗಣ್ಣಾಗಿ ಮುಖ ವಿಕಾರವಾಗಿದೆ.]

ದುಷ್ಟಬುದ್ಧಿ: – ಬೇಡ! ಬೇಡ! ಚಂಡಾಲರಿರ, ಬೇಡ!
ನಿಮಗೇನು ಬೇಕಾದರೂ ನೀಡುವೆನು: ಬೇಡ!
ಎನ್ನ ಮಗನನ್ನುಳುಹಿ! ನಿಮ್ಮ ಅವಿಧೇಯತೆಗೆ
ಇಂದು ನಿಮಗೀಯುವೆನು ಅನರ್ಘ್ಯಬಹುಮಾನಮಂ!
ಮದನಾ! ಮದನಾ! ಓ ಮದನಾ, ಎಲ್ಲಿರುವೆ?
ಎಲೆ ಘೋರತಿಮಿರವೇ, ಒಂದು ನಿಮಿಷಕೆ ಮಾತ್ರ
ಹಿಂದೆ ಸರಿ; ಬೆಳಕ ಬಿಡು.ಹೊಳೆದು ನಿಲ್ಲಲ್ಲೆ, ಮಿಂಚೆ:
ತೋರೆನ್ನ ಮದನನಂ (ಮೋರೆಯ ಮೇಲೆ ಬಿದ್ದಿದ್ದ ಕೂದಲನ್ನು ಹಿಂದಕ್ಕೆ ಸರಿಸಿ,
ಕಣ್ಣಿನ ಮೇಲೆ ಸೋರುತ್ತಿದ್ದ ನೀರನ್ನು ಒರೆಸಿಕೊಂಡು ಸುತ್ತಲೂ ನೋಡಿ ಒಂದು ಹೆಜ್ಜೆ
ಮುಂಬರಿದು ಬೆಚ್ಚಿ, ಕಾಲಿಗೇನೊ ಸಿಕ್ಕಿದುದರಿಂದ, ಕೆಳಗೆ ನೋಡುತ್ತಾನೆ.)
ಏನಿದು? ಓ ಹಾಳು ಹಣತೆಯ ಸೊಡರೆ,
ಏನ ತೋರುತಿಹೆ? ಏನಿದು ಕೆಸರು? ನೆತ್ತರ್ಗೆಸರ್!
ಆರಿಲ್ಲಿ? ಮದನ? ಅಯ್ಯೊ ನನ್ನ ಮದನ! (ಚೀರುತ್ತಾನೆ)
(
ಪಕ್ಕದಲ್ಲಿ ಬಿದ್ದಿದ್ದ ಖಡ್ಗವನ್ನೆಡವಿ ಮದನನ ಮೇಲೆ ಬೀಳುತ್ತಾನೆ)
ಮದನ! ಮದನ! ಮದನ! (ಅರ್ಧ ಎದ್ದು ಮೊಳಕಾಲೂರಿ)
ನೀಚರಿರಾ, ನೀಚರಿರಾ, ಓ ನೀಚರಿರಾ,
ನಿಮ್ಮ ಕಣ್ಣಿಂಗಿಹೋಗಿತ್ತೆ? ಗುರುತಿಸದೆ ಹೋದಿರಾ
ದಿನದಿನವು ಸಾಕಿ ಸಲುಹಿದ ನಿಮ್ಮ ಈ ಒಡೆಯನಂ?
ಓ ಮಿಂಚೆ, ಬೆಳಗದಿರು ಈ ಘೋರಮಂ;
ನಿಲ್ಲಿ, ಓ ಮಳೆಗಾಳಿ ಮೊಳಗುಗಳೆ, ನಿಲ್ಲಿ,
ಆಲಿಸಲಿ ಲೋಕವೆಲ್ಲಂ ಪಾಪಿಯೀ ಗೋಳಾಟವಂ.
ಕತ್ತಲೆಯೆ ಕವಿ, ಮುತ್ತು; ಮನಕೆ ಮರೆಹವನೊತ್ತು.
ಪರಮಾತ್ಮ , ಕ್ಷಮಿಸೆನ್ನ… ಬೇಡ, ಮನ್ನಿಸಬೇಡ!…
ನರಕವೇ, ಬಾಯಿತೆರೆ! ನುಂಗೆನ್ನ ಜೀವಮಂ!
ನಿನಗಿಂತಲೂ ಘೋರತರವೀ ಘೋರಭೂತಲಂ!
ಓ ಚಂದ್ರಹಾಸ, ಓ ವಿಷಯೆ, ಪಾಪಿಯಂ ಕ್ಷಮಿಸಿ.
ಮತ್ಸರದಿ ಬಾಳುವವರು, ಕರುಬುವವರು,
ಆತ್ಯಾಶೆ ಮಾಡುವವರೆಲ್ಲ ಬಂದೆನ್ನ ನೋಡಿ…
ಮನ್ನಿಪೆನು, ಮದನ. ಓ ಏಳು, ಮೇಲೇಳು.
ನಿನಗಾಗಿ ಬಾಳಿದೆನ್, ನಿನಗಾಗಿ ಆಳಿದೆನ್,
ನಿನಗಾಗಿ ರಕ್ತದೀ ನರಕದಲಿ ಮುಳುಗಿಹೆನ್.
ಬಾಳೆಂಬುದಿದು ಬಿದಿಯ ಮೂದಲಿಕೆ. ಓ ಬಾಳೆ,
ನಿನ್ನ ಬಲೆಗೊಳಗಾಗುವೀ ಜೀವನಿಗೆ ಮರುಳಲ್ತೆ?
ಮದನನೊಡಲಿಂದಿಳಿಯುತಿಹ ಬಿಸುನೆತ್ತರೇ,
ಕಂಪಿಸಳೆ ಭೂತಾಯಿ ನಿನ್ನ ಸೋಂಕಿಂದೆ?
ಸರ್ವವಿಧ್ವಂಸನಂಗೆಯ್ಯಬಾರದೆ – ಪ್ರಕಂಪಿಸಿ!
ಓ ಗಾಲವಾ, ಬಾ ಇಲ್ಲಿ, ನಿನ್ನ ಮುದ್ದಿನ ಶಿಷ್ಯನ್
ಏನಾಗಿಹನು, ನೋಡು! ನಿನ್ನ ಮಂತ್ರದಿ ಶಕ್ತಿ
ಇರೆ ಇವನನೆಚ್ಚರಿಸು. ಕುಂತಳೇಂದ್ರನೆ ಬಾ:
ಮದನನೇಳುವ ತೆರದಿ ಆಣತಿಯ ನೀಡು!
ಹೇ ದುಷ್ಟಬುದ್ಧಿ, ನಿನ್ನ ಮಂತ್ರಿಯ ಯುಕ್ತಿ
ಈಗೆಲ್ಲಿ? ತೋರು! ತಾರಕಾಕ್ಷಿಯೆ, ಬಾ,
ತಾಯಿಯೊಲ್ಮೆಯ ಬಲದಿ ನಿನ್ನ ಮುದ್ದಿನ ಮಗುವ
ಎಚ್ಚರಿಸು!… ಕ್ರೂರಪರಿಹಾಸ್ಯವೀ ಭೂಮಿ;
ಕ್ರೂರಪರಿಹಾಸ್ಯವೀ ಬಾಳು; ಕ್ರೂರರೊಳ್
ಕ್ರೂರಿ ಆ ಪರಮಾತ್ಮನೆಂಬುವಂ! ಕ್ರೂರವಿಧಿ,
ನಿನ್ನ ಕ್ರೌರ್ಯದ ಮುಂದೆ ನನ್ನದೊರ್ ಸೀರ್ಪುಲ್!
ಮಗನ ಒಡಲನು ಇರಿದ ಕೂರಸಿಯೆ, ಬಾ ಇಲ್ಲಿ,
ತಂದೆಯ ಎದೆಯ ನೆತ್ತರ್ಸವಿದು ಕರುಣೆಯಿಂ ಬಾಳ್!
(ಮದನನ ಪಕ್ಕದಲ್ಲಿ ಬಿದ್ದಿದ್ದ ಖಡ್ಗವನ್ನೆತ್ತಿಕೊಳ್ಳುತ್ತಾನೆ)
ಓ ನರಕ, ಬಾಯಿ ತೆರೆ, ಹಿಂದೆಂದೂ ನಿನ್ನೆಡೆಗೆ
ಬಂದಿರದ ನರನೊಬ್ಬನಿಂದು ಬರುತಿಹನು!
ಬೆದರದಿರು! (ದೇವಿಯ ವಿಗ್ರಹದ ಕಡೆ ಉಗ್ರವಾಗಿ ನೋಡಿ)
ಓ ಕಾಳಿ, ಕರಾಳಿ,
ನೀನು ತಾಮಸ ದೇವತೆ,
ನನಗಿಂತಲೂ ಕೇಡಿ!
ಪಡೆವೆನೇನಂ ನಿನ್ನಂ ಬೇಡಿ?
ಕೊಳ್ ನನ್ನನುಂ ಬಲಿಯ ಮಾಡಿ!
[ಖಡ್ಗದಿಂದ ಇರಿದುಕೊಂಡು ಸಾಯುತ್ತಾನೆ.]

[ಗುಡಿಯ ಒಳಗಿನ ಕತ್ತಲೆ ಕಡಮೆಯಾಗುತ್ತಾ , ಹೊರಗಡೆಯ ಮಳೆ ಗಾಲಿಯ ಸದ್ದು ನಿಂತಂತಾಗಿ, ಯಾರೊ ಬರುತ್ತಿರುವವರ ಬೇಗದ ಸದ್ದು ಕೇಳಿಸಿ, ದೀವಿಗೆ ಹಿಡಿದವರೊಡನೆ ಚಂದ್ರಹಾಸ, ಗಾಲವ, ವೀರಸೇನ, ರಣಸಿಂಹ ಬೇಗಬೇಗನೆ ಬರುತ್ತಾರೆ. ಬೆರಗು ಬಡಿದು ದಿಟ್ತಿಸುತ್ತಾರೆ.]

ಗಾಲವ: – ಶಶಿಹಾಸ, ಮಿಂಚಿಹೋಯಿತು ಕಾರ್ಯ: ಮುಂದಾಗಿ
ಬರಲಿಲ್ಲ ನಾವು.

ಚಂದ್ರಹಾಸ:(ಮುಖದಲಿ ಅಸಹಾಯಕತೆ, ಸಂಕಟ ತೋರಿ ಬಿಸುಸುಯ್ದು)
ಶ್ರೀಹರಿ!  ಶ್ರೀಕೃಷ್ಣ!…
ತಳುವಿ ಕಳುಹಿದಲ್ತೆ ವಿಷಯೆ ವಿಷವಾರ್ತೆಯಂ?
ಮೊದಲೆ ಬಂದಿದ್ದರದು ಮಥಿಸುತಿತ್ತಮೃತಮಂ!

ರಣಸಿಂಹ: – ಗಾಲವರೆ, ಇದರರ್ಥವೇನು?

ಗಾಲವ: – ನಾನರಿಯೆ. ಶ್ರೀಹರಿಯೆ ಬಲ್ಲ.

ಭೀಷಣ:(ಮೂರ್ಛೆ ತಿಳಿದು ಕೂಗುತ್ತಾನೆ)

ಅಯ್ಯೊ, ಮಾರ! ಕಾಳ!

ವೀರಸೇನ: – ಇವನಾರೊ ಬದುಕಿಹನು!
ಕ್ರೂರ ಕಾರ್ಯಕೆ ಬಂದ ಚಂಡಾಲನಿರಬೇಕು.

ಗಾಲವ:(ನೋಡಿ ಬೆರಗಾಗಿ ತನ್ನಲ್ಲಿಯೆ)
ಭೀಷಣ! (ಬಹಿರಂಗವಾಗಿ ) ಭೀಷಣಾ!

ಭೀಷಣ: – ಸಾಯುತಿಹೆ! ಅಯ್ಯೋ ನೀರು!

ಗಾಲವ: – ಬೀಷಣ, ಇದೇನು?

ಭೀಷಣ: – ಎಲ್ಲ ಹೇಳುವೆನೊಡೆಯಾ ! ನೀರು! ನೀರು!
(ರಣಸಿಂಹನು ನೀರು ಕುಡಿಸುತ್ತಾನೆ)
ಮಂತ್ರಿವರ್ಯರ ಅಜ್ಞೆಯಂತೆ ಕೊಲೆಮಾಡಿದೆವು!

ವೀರಸೇನ: – ಏನಂತೆ?

ಚಂದ್ರಹಾಸ: – ಸುಮ್ಮನಿರು ಹೇಳಲಿ.

ಭೀಷಣ:(ತಡೆದು ತಡೆದು ಉಸಿರೆಳೆಯುತ್ತಾ ಹೇಳುತ್ತಾನೆ.)
ಕಾಳಿಕಾಲಯಕೆ… ಸಂಜೆಯಲಿ… ಪೂಜೆಗೆ… ಬರುವವನ… ಕೊಲೆಮಾಡಬೇಕೆಂದು ಬೆಸಸಿದರು… ನಾನವನನ್ … ಇರಿವಾಗ ಲಾಳವಿಂಡಿಗೆಯಿಂದೆನ್ನ ಹೊಡೆದನಯ್ಯೋ… ಸಾಯುವೆನು… ಸಾಯುವೆನು… ಮಾರ! ಕಾಳ!…
(ಸಾಯುತ್ತಾನೆ)
[
ಎಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡುತ್ತಾರೆ. ಅರ್ಥಪೂರ್ಣವಾಗಿ].

ಗಾಲವ: – ಶಶಿಹಾಸ, ಶ್ರೀಹರಿಯೆ ಕಾಪಾಡಿದನು ನಿನ್ನ!…
ಕರ್ಮಫಲ ತಪ್ಪುವುದೆ?… ದೈವವನು ಮೀರುವರೆ?… ದೇವರಿಗಿದಿರ್ವೋಗೆ
ವಂಚಕರೆ ವಂಚಿತರ್!
(ಚಂದ್ರಹಾಸನು ಭಾವಾವೇಶದಿಂದ ದೇವಿಯ ಮೂರ್ತಿಯನ್ನೆ ಎವೆಯಿಕ್ಕದೆ ನೋಡತೊಡಗುತ್ತಾನೆ. ತೂಣಗೊಂಡವನಂತೆ ವಿಗ್ರಹದ ಕಡೆಗೆ ಎರಡು ಹೆಜ್ಜೆಯಿಟ್ಟು ಕೈಮುಗಿದು ನಿಲ್ಲುತ್ತಾನೆ. ಅದನ್ನು ಕಂಡು ಗಾಲವನು ಅವನನ್ನು ಬೀಳದಂತೆ ಹಿಡಿದುಕೊಳ್ಳಲೆಂಬಂತೆ ಮುಂಬರಿಯುತ್ತಾನೆ)
ಶಶಿಹಾಸ! ಶಶಿಹಾಸ! ಜಾರದಿರು, ಜಾರದಿರು,

ರಣಸಿಂಹ:(ಗಾಲವನನ್ನು ತಡೆದು ಕಿವಿಯಲ್ಲಿ)
ಗಾಲವರೆ, ಸುಮ್ಮನಿರಿ! ಚಂದ್ರಹಾಸನಿಗಿಂತು
ದೆವಸಾನ್ನಿಧ್ಯದಲಿ ಭಕ್ತಿಭಾವಾವೇಗದಿಂ
ಒಮ್ಮೊಮ್ಮೆ…

ಚಂದ್ರಹಾಸ:(ಸ್ವಗತ) ತಾಯಿ, ಜಗನ್ಮಾತೆ, ಸರ್ವಶಕ್ತೆ,
ಆರ ಪಾಪಕೆ ಆರ ಬಲಿಕೋಳುವೆ?
ನನ್ನ ಭಕ್ತಿಗೆ ಶಕ್ತಿಯಿರ್ಪೊಡೆ
ನಿನ್ನ ಕೃಪೆಯಿಂ
ನನ್ನನುಳುಹಿದ ಇವನು ಬದುಕಲಿ!

ಗಾಲವ:(ರಣಸಿಂಹನಿಗೆ)
ಏನನಾಡುತ್ತಿಹನು ? ನುಡಿ ತೊದಲಿದಂತಿಹುದು!

ರಣಸಿಂಹ: – ತಾಯಿಗೇನನೊ ಹೇಳುತಿರುವಂತೆ ತೋರುತಿದೆ.
[ಚಂದ್ರಹಾಸನು ಭಾವಾವಿಷ್ಟನಾಗಿಯೆ ಮದನನ ಕಳೇಬರದ ಬಳಿಗೆ ಹೋಗಿ ಮೊಳಕಾಲೂರಿ ಕುಳಿತು, ಅವನ ಹಣೆ ಮುಟ್ತುತ್ತಾನೆ. ಮತ್ತೆ ಗಾಲವಾದಿಗಳ ಕಡೆ ಮೊಗದಿರುಹಿ]

ಚಂದ್ರಹಾಸ: – ಪುರೋಹಿತರೆ, ಮದನಗಿನ್ನೂ ಹರಣ ಹೋದಂತಿಲ್ಲ!

ಗಾಲವ:(ಬಂದು ಮುಟ್ಟಿನೋಡಿ)
ಹೌದು, ರಕ್ತಸ್ರಾವದಿಂ ಪ್ರಜ್ಞೆ ತಪ್ಪಿಹನೆಂದೆ
ತೋರುತಿದೆ. ಮಂತ್ರೌಷಧಿಗಳೀಂ, ಭಿಷಗ್ವರರ
ವೈದ್ಯೋಪಚಾರದಿಂ ನಿಷ್ಪಾಪನೀತನಂ
ಬದುಕಿಸಲ್ ಭಗವತ್ ಕೃಪಾಶಕ್ತಿ ಸಾಧ್ಯಂ!
[ತೆಕ್ಕನೆ ಅಂತರಿಕ್ಷದಲ್ಲಿ ಎಂಬಂತೆ ಸುಮಧುರ ಗಾನ ಕೇಳಿಸುತ್ತದೆ. ಚಂದ್ರಹಾಸನಂತೆ ಇತರರೂ ತಲೆಯೆತ್ತಿ ಆಲಿಸುತ್ತಿರುವಂತೆಯೆ ತೆರೆ ಇಳಿಯುತ್ತದೆ.]

*

ದೃಶ್ಯ೧೦

[ಅಂತರಿಕ್ಷದಲ್ಲಿ ಮೇಘಪಂಕ್ತಿಯ ಮಧ್ಯೆ ಕಾಣಿಸಿಕೊಂಡು ಭಕ್ತಿ, ಪ್ರಾರ್ಥನಾ ಮತ್ತು ಕೃಪಾದೇವಿಯರು ಹಾಡುತ್ತಿರುತ್ತಾರೆ.]

ಭಕ್ತಿದೇವಿ: – ಯಲ್ಲಬ್ಧ್ವಾಪುಮಾನ್ ಸಿದ್ಧೋ ಭವತಿ,

ಪ್ರಾರ್ಥನಾದೇವಿ: – ಅಮೃತೋ ಭವತಿ,

ಕೃಪಾದೇವಿ: – ತೃಪ್ತೋ ಭವತಿ!

ಭಕ್ತಿದೇವಿ: – ಯತ್ ಪ್ರಾಪ್ಯ ನ ಕಿಂಚಿದ್ ವಾಂಛತಿ,

ಪ್ರಾರ್ಥನಾದೇವಿ: – ನ ಶೋಚತಿ, ನ ದ್ವೇಷ್ಟಿ,

ಕೃಪಾದೇವಿ: – ನ ರಮತೇ, ನೋತ್ಸಾಹೀ ಭವತಿ!

ಭಕ್ತಿದೇವಿ: – ಯತ್ ಜ್ಞಾತ್ವಾ ಮತ್ತೋ ಭವತಿ

ಪ್ರಾರ್ಥನಾದೇವಿ: – ಸ್ತಬ್ದೋ ಭವತಿ

ಕೃಪಾದೇವಿ: – ಆತ್ಮರಾಮೋ ಭವತಿ!

ಭಕ್ತಿದೇವಿ: – ತೀರ್ಥೀಕುರ್ವನ್ತಿ ತೀರ್ಥಾನಿ,

ಪ್ರಾರ್ಥನಾದೇವಿ: – ಸುಕರ್ಮೀಕುರ್ವನ್ತಿ ಕರ್ಮಾಣಿ,

ಕೃಪಾದೇವಿ: – ಸಚ್ಛಾಸ್ತ್ರೀಕುರ್ವನ್ತಿ ಶಾಸ್ತ್ರಾಣಿ!

ಭಕ್ತಿದೇವಿ: – ಮೋದಂತೇ ಪಿತರೋ,

ಪ್ರಾರ್ಥನಾದೇವಿ: – ನೃತ್ಯಂತಿ ದೇವತಾಃ,

ಕೃಪಾದೇವಿ: – ಸನಾಥಾ ಚೇಯಂ ಭೂರ್ಭವತಿ!

[ಮೂವರೂ ಒಟ್ಟಿಗೆ ನರ್ತಿಸುತ್ತಾ ಹಾಡುತ್ತಾರೆ:
ಮೊದಂತೇ ಪಿತರೋ ನೃತ್ಯಂತಿ ದೇವತಾ:
ಸನಾಥಾ ಚೇಯಂ ಭೂರ್ಭವತಿ!”]

ಪರದೆ ಬೀಳುತ್ತದೆ.

*