ದೃಶ್ಯ

[ಕುಂತಳನಗರ. ದುಷ್ಟಬುದ್ದಿ ತನ್ನ ಹಜಾರದಲ್ಲಿ ಕುಳಿತು ಏನೊ ಪತ್ರ ನೋಡುತ್ತಿರುತ್ತಾನೆ. ದಂಡನಾಯಕನು ಎದುರುಗಡೆ ತುಸು ದೂರದಲ್ಲಿ ಕುಳಿತಿದ್ದಾನೆ. ಸೇವಕನು ಕೈಕಟ್ಟಿಕೊಂಡು ನಿಂತಿರುತ್ತಾನೆ.]

ದಂಡನಾಯಕ: – ಜೀಯ, ಅವನ ಆಪರಾಧವೇನಿಲ್ಲ.
ನಾನೆ ವಿಚಾರಿಸಿದೆ. ಗುಣವಂತ, ವಿನಯಶೀಲ,
ಕುಲೀನ ವಂಶಜ. ಅನೇಕ ಶಾಸ್ತ್ರಪಾರಂಗತ….

ದುಷ್ಟಬುದ್ಧಿ:(ಜುಗುಪ್ಸೆಯಿಂದ ತಲೆಯೆತ್ತಿ, ದಂಡನಾಯಕನ್ನನ್ನು ದುರದುರನೆ ನೋಡಿ)
ಇಲ್ಲ, ಅವನು ಸಾಯಲೆ ಬೇಕು, ನನ್ನಾಜ್ಞೆ.
[
ಮತ್ತೆ ತಲೆ ತಗ್ಗಿಸಿ ಪತ್ರ ಓದುತ್ತಾನೆ. ದಂಡನಾಯಕ ಚಿಂತಿಸುತ್ತಾನೆ.]

ದಂಡನಾಯಕ: – ಜೀಯ ಅಪರಾಧವಿಲದೆಯೆ ಮರಣದಂಡನೆಯೆ?
ನಾವಾ ನಿರಪರಾಧಿಯಂ ಕೊಲಿಸೆ…

ದುಷ್ಟಬುದ್ಧಿ:(ತಟ್ಟಕ್ಕನೆ ತರೆಯೆತ್ತಿ ಸಿಡುಕಿನಿಂದ)
ನನ್ನಾಜ್ಞೆಯಂ ನಡಸು. ವಾದಮಂ ಮಾಣ್!

ದಂಡನಾಯಕ: – ಅವನ ಕೊಂದರೆ ದಂಗೆಯೇಳುವರು ಜನ.

ದುಷ್ಟಬುದ್ಧಿ:(ದರ್ಪಧ್ವನಿಯಿಂದ)
ನಮ್ಮ ಪಟುಭಟರ ಕೂರಸಿಗಳಿಗೆ ಕಿಲುಬು ಹಿಡಿದಿಲ್ಲ!
ಜನರ ರುಂಡಗಳೇನು ವಜ್ರವಲ್ಲ!
[
ಪುನಃ ತಲೆತಗ್ಗಿಸಿ ಓದತೊಡಗುತ್ತಾನೆ.]

ದಂಡನಾಯಕ: – ಹಿಂದವನು ತಮಗೆ ಮಿತ್ರನಾಗಿದ್ದನಲ್ತೆ?

ದುಷ್ಟಬುದ್ಧಿ:(ಪತ್ರದಿಂದ ತಲೆಯೆತ್ತದೆ)
ಈಗಲ್ಲವಷ್ಟೆ?

ದಂಡನಾಯಕ: – ಅನ್ಯಾಯವಾಗುವುದು, ಜೀಯ.

ದುಷ್ಟಬುದ್ಧಿ:(ತಟಕ್ಕನೆ ತಲೆ ಎತ್ತಿ ಗರ್ಜಿಸುತ್ತಾನೆ)
ಏಕಿಂತು ಪೀಡಿಸುತ್ತಿಹೆ! ಹೊರಡಾಚೆ!
(ದಂಡನಾಯಕ ನೆಲದಕಡೆ ನೋಡತೊಡಗುತ್ತಾನೆ. ದುಷ್ಟಬುದ್ಧಿ ತಲೆಬಾಗಿ ಪತ್ರದ ಕಡೆ ತಿರುಗಿ, ಒಂದು ಚಣ ತಡೆದು, ಮತ್ತೆ ತೆಲೆಯೆತ್ತಿ)
ಏಕೆ ಕುಳಿತಿಹೆ ಇನ್ನೂ? ಹೊರಡು:
ಬೇಗ ಮಾಡೆನ್ನಾಜ್ಞೆಯಂ! (ದಂಡನಾಯಕ ಏಳುತ್ತಾನೆ)
ಕತ್ತಲಾಗುವ ಮುನ್ನ ಅವನ ತಲೆ ತಿರೆಗುರುಳಲಿ!
[ದಂಡನಾಯಕ ಬಾಗಿ ಕೈಮುಗಿದು ಹೊರಗೆ ಹೋಗುತ್ತಾನೆ. ದುಷ್ಟಬುದ್ಧಿ ತಲೆಯಲ್ಲಾಡಿಸಿ ಸೇವಕನಿಗೆ ಸನ್ನೆಮಾಡುತ್ತಾನೆ]

ಸೇವಕ: – ಜೀಯ, ಏನಪ್ಪಣೆ?

ದುಷ್ಟಬುದ್ಧಿ: – ಚಂದನಾವತಿಯ ದೂತರನು ಒಳಗೆ ಬರಹೇಳು.
[ಸೇವಕ ಹೋಗುತ್ತಾನೆ.]
ಏನಿದೆತ್ತಣ ಕೌತುಕದ ಸುದ್ದಿ?
ಕುಳಿಂದಂಗೆ ಸೂನು ಜನಿಸಿರ್ದಪನೆ?
ಬಂಜೆಯಾಗಿಹಳವನ ಮಾನಿನಿ!
ಅತಿ ವಿಚಿತ್ರಮಿದು. ಇರಲಿ;
ಎಲ್ಲವನು ವಿಶದವಾಗರಿಯುವೆನು.
[ಸೇವಕನನು ಮುಂದುಮಾಡಿಕೊಂಡು ಇಬ್ಬರು ಚಂದನಾವತಿಯ ದೂತರು ಬರುತ್ತಾರೆ. ರುದ್ರಾಕ್ಷಿ, ತುಲಸೀ ಮೊದಲಾದ ಮಾಲೆಗಳನ್ನು ಧರಿಸಿರುತ್ತಾರೆ. ಕೈಮುಗಿದು, ದುಷ್ಟಬುದ್ಧಿ ಪೀಠದ ಕಡೆ ಕೈತೋರಿಸಲು ಕುಳಿತುಕೊಳ್ಳುತ್ತಾರೆ.]
(
ಸ್ವಗತ) ಏನಿದೀ ವೇಷ? ಅವಧೂತರಂತಿಹರು!
ಚಂದನಾವತಿಯೆಲ್ಲ ಸನ್ಯಾಸಸ್ವೀಕಾರಮಾಡಿಹುದೊ ಏನೊ? (ನಗೆಯ ತಡೆ ಹಿಡಿದು) ದೂತರಿರ, ತಂದ ಕಪ್ಪಕಾಣಿಕೆಗಳನು ರಾಜ್ಯದ ಬೊಕ್ಕಸಕೆ ಸುರಿದಾಯ್ತೆ?

ಒಂದನೆಯ ದೂತ: – ರಾಣಿಗೆ ಪುರೋಹಿತಗೆ ಸಲ್ಲಿಸುವ ಹಣ ಹೊರತು
ಇನ್ನುಳಿದುದೆಲ್ಲವಂ ಸಲ್ಲಿಸಿದೆವು.

ದುಷ್ಟಬುದ್ಧಿ: – ರಾಣಿಗೆ ಪುರೋಹಿತನಿಗೆ ಸಲ್ಲಿಸುವ ಸಿದ್ದಾಯವಂ
ನಮಗೇ ಸಲ್ಲಿಸುವ ಕಟ್ಟಳೆಯ ಮಾಡಿಹೆವು;
ತಿಳಿಯಿತೆ?

ಎರಡನೆಯ ದೂತ: – ಅಪ್ಪಣೆ.

ದುಷ್ಟಬುದ್ಧಿ: – ನಿಮ್ಮರಸುಕುವರಂಗೆ ಚಂದ್ರಹಾಸಂಗೆ
ಈಗೆನಿತು ವಯಸ್ಸು?

ಒಂದನೆಯ ದೂತ: – ಪದಿನೆಂಟು.

ದುಷ್ಟಬುದ್ಧಿ: – ಕುಳಿಂದಂಗೆ ಮಕ್ಕಳಿರಲಿಲ್ಲವಲ್ಲ!
ಈ ಸುದ್ದಿ ದಿಟವೆ?

ಎರಡನೆಯ ದೂತ: – ಜೀಯ, ಪುಸಿಯಲ್ಲ,
ದೊರೆ ಬೇಂಟೆಯಾಡುತಲಿರಲ್ ಕಾನನದ ಮಧ್ಯದೊಳ್
ಅನಾಥನಾಗಿಹ ಶಿಶುನಿಧಾನಮಿರೆ
ಕಂಡೆತ್ತಿಕೊಂಡು ಬಂದು
ಆತ್ಮಜ ವಿಧಾನದಿಂದೋವಿದನ್.

ದುಷ್ಟಬುದ್ಧಿ:(ವಿಸ್ಮಯದಿಂದ) ಏನು?
ಕಾನನಾಂತರದೊಳವನು ದೊರಕಿದನೆ?

ಒಂದನೆಯ ದೂತ: – ಹೌದು, ಜೀಯ.

ದುಷ್ಟಬುದ್ಧಿ: – ಬಹು ಪರಾಕ್ರಮಿಯೆ?

ಎರಡನೆಯ ದೂತ: – ಬರಿ ಪರಾಕ್ರಮವಲ್ತು: ಭಗವದ್‌ಬಲಂ!
ನಮ್ಮಿಳೆಗೆ ಆತನೈತಂದಂದಿನಿಂ
ಮಂಗಳದ ಮಳೆಹೊಯ್ದ ತೆರನಾಯ್ತು.
ಸಸ್ಯ ಮೃಗ ಪಕ್ಷಿಗಳ್ ಸಂತಸದಿ ಪೆರ್ಚ್ಚಿದುವು;
ಇರ್ಮಡಿಸಿ ಮೂರ್ಮಡಿಸಿ ನೂರ್ಮಡಿಸಿದುದು ಪೈರುಪಚ್ಚೆ;
ಬರಗಾಲವಡಗಿದುದು; ಕಾರ್ಮುಗಿಲು ಕರ್ಮಮಂ
ಕಾಲಕಾಲಕೆ ತಪ್ಪದೆಸಗಿದುದು ಕರ್ತವ್ಯಮಂ;
ಜನಹೃದಯದೊಳ್ ಭಕ್ತಿಯಿಂ ಭವಿಸಿದುದು
ನವಚೇತನಂ. ಸಂತಸದಿ ಕಂಗೊಳಿಸುತಿದೆ ತಿರೆ.
ರೋಗರುಜೆಗಳ ಬಾಧೆಯಡಗಿಹುದು. ಮಿತ್ತುವಿನ
ಸುಳಿವಿಲ್ಲ. ಕಳ್ಳಕಾಕರ ಭೀತಿ ಕಟ್ಟುಕತೆಯಾಯ್ತು….

ದುಷ್ಟಬುದ್ಧಿ: – ಸಾಕು ಬಿಡು; ಗೊತ್ತಾಯ್ತು. (ಸೇವಕನ ಕಡೆ ತಿರುಗಿ)
ಹೊತ್ತಾಯ್ತು. ಭೋಜನಕೆ ಕರೆದೊಯ್ ಇವರನ್‌.

ಒಂದನೆಯ ದೂತ: – ಜೀಯ, ಮನ್ನಿಸಿರಿ, ಇಂದು ಏಕಾದಶಿ!
ಇಂದು ಉಣಿಸೆಮಗೆ ಒಲ್ಲದು.
(ದುಷ್ಟಬುದ್ಧಿ ದುರದುರನೆ ನೋಡುತ್ತಾನೆ.)
ನಾವೆಲ್ಲ ವೈಷ್ಣವರ್!

ದುಷ್ಟಬುದ್ಧಿ:(ತಿರಸ್ಕಾರದಿಂದಲೂ ಪರಿಹಾಸ್ಯದಿಂದಲೂ)
ಹಾಗಾದರೆ ಹೊರಡಿ. (ದೂತರು ಕೈಮುಗಿದು ಹೊರಡಲು ಉದ್ಯುಕ್ತರಾಗುತ್ತಾರೆ).
ನಿಮ್ಮರಸಗೀ ಪತ್ರಮಂ ಕೊಟ್ಟು
ನನ್ನ ಕೃಪೆಯಂ ತಿಳುಹಿ. (ದೂತರು ತೆಗೆದುಕೊಂಡು ಹೊರಡುತ್ತಾರೆ)
ನಹಂಕಾರ! ಈ ಕಿಂಕರಮಾತ್ರರದು?
ನಾವೀವ ಭೋಜನವನುಣಲೊಲ್ಲರಂತೆ!
ಸೇವಕರೆ ಇನಿತು ಸೊರ್ಕಿದಮೇಲೆ
ಅರಸನೆಂತಿರಬೇಕು? (ಆಲೋಚಿಸುತ್ತಾನೆ)
ಪಾಳಡವಿಯೊಳ್ ಪಸುಳೆಯುಂ ಕೊಂದುಬಹುದೆಂದು
ಬೆಸಸಿದೊಡೆ ಚಂಡಾಲರಂದುಳಿಹ ಬಂದರೇ?
ಕಾಲ್ಬರಳನೊಂದಂ ಕತ್ತರಿಸಿ ತಂದರೇ?
ಅವರನ್ ವಿಚಾರಿಸಿಯೆ ದಿಟವನರಿವೆನ್.
ಈ ಚಂದ್ರಹಾಸನಾ ಬಾಲನಾಗಿರಬಹುದೆ?
ಗಾಲವನ ಮಾತು ಸುಳ್ಳಲ್ಲವೆಂದಾಯ್ತು.
ಎಂತಾದರು ಅವನನ್ ಸಂಹರಿಸದಿರೆ ಸುಖವಿಲ್ಲ.
ನಾನೆ ಚಂದನಪುರಕೆ ಪೋಗಿ ಕಾಣ್ಬೆನ್.
ನನ್ನಾಜ್ಞೆಯಿಂ ಮೀರಿ ದತ್ತುಮಗನಂ ಎಂತು
ಪಡೆದಂ ಕುಳಿಂದಕಂ?… ಯಾರಲ್ಲಿ?…. ಹೋಗು,
ಮದನ ಕುಮಾರನಂ ಬರಹೇಳು.
(ಸೇವಕ ಹೋಗುತ್ತಾನೆ.)
ಮದನನಿಗೆ ಮದುವೆಯಪ್ಪಾ ಪೊಳ್ತು ಬಳಿಯಾಯ್ತು.
ಬೇಗನೆಯೆ ಅರಸುಕುವರಿಯನವಗೆ ತಂದುಕೊಳೆ,
ಪುತ್ರ ಸಂತಾನವಿಲ್ಲದೀ ನೃಪನ ರಾಜ್ಯಂ
ಪೆರರ ಕೆಯ್ಯೊಳ್ ಬೀಳದೆಮಗುಳಿಯುವುದು….
ಇರಲಿ, ಮೊದಲೀ ವಿಘ್ನಮಂ ಪರಿಹರಿಸಿ
ಮುಂತೆ ಮುಂದಣ ಬಟ್ಟೆಯಂ ತರಿಸಲ್ವೆನ್.
[ಮದನ ಪ್ರವೇಶಿಸುತ್ತಾನೆ.]

ಮದನ: – ಅಪ್ಪಯ್ಯ, ಏಕೆನ್ನ ಬರಹೇಳಿದುದು?

ದುಷ್ಟಬುದ್ಧಿ: – ಕುಳಿತುಕೊ, ಹೇಳುವೆನು. [ಮದನ ಕೂರುತ್ತಾನೆ]

ಮದನ: – ನಿಮ್ಮ ಮೊಗದೊಳಗೇನೊ ಚಿಂತೆ, ಅಪ್ಪಯ್ಯ?

ದುಷ್ಟಬುದ್ಧಿ: – ಏನಿಲ್ಲ. ರಾಜಕಾರ್ಯಕ್ಕಾಗಿ ಚಂದನಾವತಿಗೆ
ನಾನೀಗಳೆಯೆ ಹೊರಡುವೆನು.
ನಾನಿಲ್ಲಿಗೈತರುವವರೆಗೆ ನೀನೆ
ರಾಜ್ಯದಾಡಳಿತವಂ ನೋಡಿಕೊಂಡಿರಬೇಕು.

ಮದನ: – ಅಪ್ಪಣೆ. ಅಂತಪ್ಪ ರಾಜಕಾರ್ಯವದೇನು?

ದುಷ್ಟಬುದ್ಧಿ: – ಕುಳಿಂದಕನ ರಾಜ್ಯಭಾರವಂ ನೋಡಿ ಬರುವೆ.

ಮದನ:(ಅತ್ತ ನೋಡಿ) ತಂಗಿ ಬಂದಿಹಳು.
[ಅಲಂಕಾರಭೂಷಿತೆಯಾಗಿ ಲಜ್ಜೆಯಿಂದ ಹೆಜ್ಜೆಯಿಡುತ್ತಾ ವಿಷಯೆ ಬರುತ್ತಾಳೆ.]

ದುಷ್ಟಬುದ್ಧಿ: – ಬಾರಕ್ಕ. ಏನಿಷ್ಟು ಲಜ್ಜೆ? ಬಾ ಮುಂದೆ.
(ಮುಂದಕ್ಕೆ ಬರುತ್ತಾಳೆ. ತಂದೆ ಮಗಳ ಯೌವನಲಾವಣ್ಯವನ್ನೂ ಶೃಂಗಾರಮಯ ಸೌಂದರ್ಯವನ್ನೂ ಗಮನಿಸಿ, ಪ್ರಶಂಸನೀಯ ವಾತ್ಸಲ್ಯಾನುಭವದಿಂದ)
ನೀ ಬಂದುದೇಕೆಂದೀಗ ಗೊತ್ತಾಯ್ತು!

ವಿಷಯೆ:(ತಂದೆಯ ಗಮನವನ್ನು ಬೇರೆಯ ವಿಷಯದ ಕಡೆ ತಿರುಗಿಸಲೆಂಬಂತೆ)
ಅಪ್ಪಯ್ಯ, ನಂದನದೊಳಾಂ ನೀರ್ವೊಯ್ದು ಬೆಳೆಯಿಸಿದ
ಚೂತಲತೆ ಪೂತಿಹುದು. ಅದಕೆ… ಅದಕೆ… (ನಸುನಾಚಿ)
ಉದ್ಯಾಪನಂಗೈಸಬೇಕದಕೆ.

ದುಷ್ಟಬುದ್ಧಿ: – ಮದನ, ನೆರವೇರಿಸೀ ನಿನ್ನ ತಂಗಿಯ ನೋಂಪಿಯಂ.

ಮದನ: – ತಂಗೀ, ಆ ಭಾರ ನನ್ನ ಮೇಲಿರಲಿ.

ವಿಷಯೆ: – ಅಪ್ಪಯ್ಯ, (ನಾಚಿಕೆಯಿಂದ ತಡೆತಡೆದು ಹೇಳುತ್ತಾಳೆ.)
ಗೂಡಿನೊಳಗಿಹ ಹೆಣ್ಣುಗಿಳಿಗೊಂದು ಜೊತೆಯಿಲ್ಲ.
ಅದಕೊಂದು ಜೊತೆ ಬೇಕು.

ಮದನ:(ಪರಿಹಾಸ್ಯದಿಂದ) ಪಾಪ! ಕೊರಗುತಿದೆ ಆ ಶುಕತರುಣಿ!

ವಿಷಯೆ:(ನಸುಮುನಿದಂತೆ) ನಿನಗೇನು, ಅಣ್ಣಯ್ಯ?
ಮೂರು ಹೊತ್ತೂ ಕತ್ತಿ, ಕುದುರೆ, ಕಾಡು, ಬೇಟೆ!

ದುಷ್ಟಬುದ್ಧಿ: – ಇರಲಕ್ಕ, ಬಿಡು… ಇನ್ನೇನು ಬೇಕು?

ವಿಷಯೆ: – ಅಪ್ಪಯ್ಯ, ನಾ ಗಿಡಗಳಿಗೆ ನೀರೆರಚುತ್ತಿದ್ದೆ.
ತುಂಬಿಗಳು ಬಂದೆನ್ನ ಮೊಗವೆಲ್ಲವಂ ಮುತ್ತಿ,
ಮುಂಗುರಳ ಮೇಲೆಲ್ಲ ಸುಳಿ ಸುಳಿದು ಝೇಂಕರಿಸಿ,
ಬಹಳ ಭಯಪಡಿಸಿದುವು. ಕೋಗಿಲೆ ಕೂಡ
ಬರಿದೆ ಬಗ್ಗಿಸುತೆನ್ನ ಮೂದಲಿಸುತಿಹುದು!

ದುಷ್ಟಬುದ್ಧಿ: – ಇರಲಮ್ಮಾ ಆ ದುರುಳರಂ ಪಿಡಿದು ಸೆರೆಮೆನಗೆ
ಕಳುಹಿಸಲು ಸಿದ್ಧವಾಗಿದೆ ನಮ್ಮ ಸೇನೆ! (ನಗುತ್ತಾನೆ)

ವಿಷಯೆ: – ಅಪ್ಪಯ್ಯ, ಎಲ್ಲಿಗೆ ಹೊರಡುವುದು ನೀವು?

ದುಷ್ಟಬುದ್ಧಿ: – ಚಂದನಾವತಿಗಮ್ಮಾ. ಕೇಳಿಬಲ್ಲೆಯ ನೀನು?

ವಿಷಯೆ:(ಸಂಭ್ರಮದಿಂದ) ಚಂದ್ರಹಾಸನಿಹ ಪಟ್ಟಣಕ್ಕೇನು?

ದುಷ್ಟಬುದ್ಧಿ:(ಧ್ವನಿಯನ್ನು ತಟಕ್ಕನೆ ಬದಲಾಯಿಸಿ) ಹೌದು.
ನಾನಿನ್ನು ಹೊರಡುವೆನು ಹೊತ್ತಾಯ್ತು.
ಹೆಣ್ಣಗತಿ ಕುತೂಹಲಂ ತಗದು! (ಹೊರಡುತ್ತಾನೆ)

ವಿಷಯೆ:(ತತ್ತರಿಸಿ, ಅವಾಕ್ಕಾಗಿ, ತಂದೆ ಹೂಗುವುದನ್ನೆ ನೊಡುತ್ತಾ ನಿಂತು ಮತ್ತೆ ಅಣ್ಣನ ಕಡೆ ತಿರುಗಿ)
ಅಪ್ಪಯ್ಯ ಸಿಟ್ಟುಗೊಂಡರೇ, ಅಣ್ಣಯ್ಯ?

ಮದನ: – ಏನಿಲ್ಲ, ತಂಗಿ. ಒಮ್ಮೊಮ್ಮೆ ಹಾಗಾಗುತ್ತಾರೆ ಅಷ್ಟೆ.

ವಿಷಯೆ:(ಮತ್ತೆ ಮುನ್ನಿನ ಸರಳತೆ, ಸಲುಗೆ, ವಿಶ್ವಾಸ, ವಿನೋದಭಾವದಿಂದ)
ಅಣ್ಣಯ್ಯ, ಅಪ್ಪಯ್ಯ ಅತ್ತಿಗೆಯ ತರಲೆಂದು
ಚಂದನಾವತಿಗೆ ಹೊರಟಿಹನೆ?

ಮದನ:(ಪ್ರತಿಹಾಸ್ಯಶೀಲನಾಗಿ) ಅಯ್ಯೋ, ನೀನೆಂಥ ಪೆಚ್ಚಿ!
ಅತ್ತಿಗೆಗಲ್ಲ, ಭಾವನನ್ವೇಷಣೆಗೆ!

ವಿಷಯೆ: – ಅಣ್ಣಯ್ಯ, ಸಾಕು ನಿನ್ನೀ ವಿನೋದ… ಅದಿರಲಿ;
ನಿನ್ನ ನಾನೊಂದು ಕೇಳಲೇ?

ಮದನ: – ಒಂದರಿಂದಲೇ ನಿನಗೆ ತೃಪ್ತಿಯೇ? ಆಶ್ಚರ್ಯ!

ವಿಷಯೆ: – ನಾನೆಂದರೆ ನಿನಗಷ್ಟು ತಾತ್ಸಾರ:
ಏಗಳುಂ ಮೂದಲಿಕೆ! (ವಿಷಣ್ಣವಾಗುತ್ತಾಳೆ)

ಮದನ:(ಸಂತೈಸುವಂತೆ) ಎಂದೆಂದಿಗೂ ಅಲ್ಲ. ನೀನಕ್ಕರೆಯ ತಂಗಿ.
ಪ್ರೀತಿಗಾಗಿಯೆ ನಿನ್ನನಿಂತು ಪೀಡಿಪುದು! ಗೊತ್ತಾಯ್ತೆ?

ವಿಷಯೆ:(ಹರ್ಷದಿಂದ)
ಚಂದ್ರಹಾಸನ ನೀನು ನೋಡಿರುವೆ ಏನಣ್ಣಯ್ಯ?
ಆತನ ಯಶೋದೀಪ್ತಿ ಜಗದ ಮೇಲೆಲ್ಲ
ಹಬ್ಬುತಿದೆಯಂತೆ! ಹೌದೇನು?

ಮದನ: – ಹೌದಾದರೇನಂತೆ?
ನಿನಗವನಿನಿಯನಾಗಿ ಕೈಹಿಡಿಯಲಾಸೆಯೆ?

ವಿಷಯೆ: – ಬಿಡು, ಅಣ್ಣಯ್ಯ, ನಿನಗೇಗಳುಂ ಪರಿಹಾಸ್ಯ.

ಮದನ: – ಗೊತ್ತಾಯ್ತು. ಅವನ ಮೇಲಲ್ಲ,
ಅವನ ಕೀರ್ತಿಯ ಮೇಲೆಯೇ ನಿನಗೆ ಕಣ್!
ಚೆಲುವೆಗೆ ಸೊಬಗಿನಾಶೆ!…
ನಿನಗಿಂತ ಮುಂದಾಗಿ ಬಂದವನು ನಾನು:
ನಾನರಿಯೆನೇನು ನನ್ನ ತಂಗಿಯನು?

ವಿಷಯೆ:(ಹುಸಿ ಮುನಿಸಿನಿಂದ)
ನಾನರಿಯೆನೇನು ನನ್ನಣ್ಣನನು?
ನಾ ಬಲ್ಲೆ: ಸರ್ವಜ್ಞಮೂರ್ತಿ ನೀನು!…
ಅಮ್ಮ ಕೂಗುವಳೆನ್ನ: ಹೋಗುವೆನು.

[ಎಂದು ತಟ್ಟಕ್ಕನೆ ತಿರುಗಿ ಓಡುತ್ತಾಳೆ. ಮದನ ಕಡೆಗೇ ಅಕ್ಕರೆಯಿಂದ ನೊಡುತ್ತಿರುತ್ತಾನೆ.]

ಪರದೆ ಬೀಳುತ್ತದೆ.

*

ದೃಶ್ಯ

[ಚಂದನಾವತಿಯ ಅರಮನೆಯ ಒಂದು ವೈಭವದ ಕೊಠಡಿ. ದುಷ್ಟಬುದ್ಧಿ ಕುಳಿತಿರುತ್ತಾನೆ. ಸುತ್ತಲೂ ನೋಡಿ ಕೆಳದುಟಿ ಕಚ್ಚಿಕೊಳ್ಳುತ್ತಾನೆ.]

ದುಷ್ಟಬುದ್ಧಿ: – ಎನಿದೀ ಸಂಪದಂ! ಏನಿದೀ ವೈಭವಂ!
ಏನಿದೀ ಬಿಂಕಂ, ಬೆಡಂಗು! ಚಕ್ರೇಶರ್
ಅನುಭವಿಪ ಸಿರಿ ಇಲ್ಲಿ ಸೂರೆಗೊಂಡಿಹುದಲ್ತೆ!
ಪಳಕುಗಳ ನೆಲಗಟ್ಟು; ಮರಕತಂಗಲ ಜಗಲಿ;
ಪೊಳೆವ ನೀಲದ ಭಿತ್ತಿ; ಬಜ್ಜರದ ಕಂಭಗಳ್;
ತೊಳಪ ವೈಡೂರಿಯದ ಮದನಕ್ಕೆ; ಮಿರು ಮಿರುಪ
ಗೋಮೇಧಿಕದ ಬೋದಿಗೆಗಳ್; ತಳತಳಿಸುತಿಹ
ಪುಷ್ಯರಾಗದ ತೊಲೆಗಳ್; ಎಸೆವ ಮಾಣಿಕಂಗಳ ಲೋವೆ;
ಮುತ್ತುಗಳ ಸೂಸುಕಂ; ಮಿಸುಪ ಪವಳದ ಪುತ್ತಳಿ;
ಪೊನ್ನಪೊದಿಕೆ! ಕಂಗಳಂ ಕುರುಡುಗೈಯುವ ತೆರದಿ
ಉರಿಯುತಿಹುದರಮನೆ! ಈ ಪುರವೊ ಭೂತಳದ
ವೈಕುಂಠದಂತಿಹುದು! ಕಿರಿಯರಸಗೇತಕೀ
ವೈಭವಂ? ಈಗಳೆಯೆ ಇವನ ಬಿಂಕವ ಮುರಿದು,
ನಮ್ಮಧೀನಂಗೊಳಿಸದಿದ್ದರೆ…. ಮುಂದೆ….
ಕೈಮೀರುವನ್…. (ಯಾರೊ ಬರುತ್ತಿರುವುದನ್ನು ಗಮನಿಸುತ್ತಾನೆ.)
ಚಂದ್ರಹಾಸನ ಕೂಡಿ
ಕುಳಿಂದಕನೆ ಬರುತಿಹನು. ಏಂ ಭದ್ರರೂಪಂ
ಆ ತರುಣನಿಗೆ! ಪುಣ್ಯವಂತನೆ ದಿಟಂ ಕುಳಿಂದಕಂ!
[ಕುಳಿಂದಕನು ಚಂದ್ರಹಾಸನೊಡನೆ ಪ್ರವೇಶಿಸಿ ಇಬ್ಬರೂ ದುಷ್ಟಬುದ್ಧಿಗೆ ನಮಸ್ಕರಿಸುತ್ತಾರೆ. ದುಷ್ಟಬುದ್ಧಿ ನಗೆಮೊಗನಾಗಿ ಅರ್ಧ ಎದ್ದು ಪ್ರತಿನಮಸ್ಕಾರ ಮಾಡುತ್ತಾನೆ. ಮೂವರೂ ಕುಳಿತುಕೊಳ್ಳುತ್ತಾರೆ.]

ಕುಳಿಂದಕ: – ಮಂತ್ರಿವರ್ಯಂಗೆ ಸುಖಾಗಮನಮಂ ಬಯಸುವೆನ್.

ಚಂದ್ರಹಾಸ: – ಹಿರಿಯರಿಗೆ ವಂದಿಪೆನ್‌.

ದುಷ್ಟಬುದ್ಧಿ: – ನಿಮಗೊಳ್ಳಿತಕ್ಕೆ!

ಕುಳಿಂದಕ: – ಬಟ್ಟೆಯ ಬಳಲ್ಕೆಯಿಂ ದಣಿದಿಹಿರಿ. ನಾವಿನಿತು
ತುಳಿವಿ ಬಂದಿರ್ದೊಡೆ ಲೇಸಾಗುತಿತ್ತಲ್ತೆ?

ದುಷ್ಟಬುದ್ಧಿ: – ಅಂತಪ್ಪ ದಣಿವದೇನಿಲ್ಲ. ನಿಮ್ಮ ನಾಡಿನ
ಮಾರ್ಗಗಳೊ ದಣಿವಿಗವಕಾಶವನೆ ಕೊಡವು!
ಏನ್ ಸೊಗಸು! ಏನ್ ನುಣ್ಪು! ಸಾಲ್ಮರಗಳೇನು!
ಪಸುರ್ ಮಂಟಪಗಳೇನು! ಅರವಟ್ಟಿಗೆಗಳೇನು!
ತಣಿವನಲ್ಲದೆ ಕಣ್ಗೆ, ದಣಿವೆನಸಗವು ಮೆಯ್ಗೆ.

ಕುಳಿಂದಕ: – ತಮ್ಮ ಈ ಶ್ಲಾಘನೆಯೆ ಪರಮ ಫಲದಂ ನಮಗೆ.
ಈ ಕುಮಾರನ ಮೆಯ್ಮೆಯಿಂದೀ ನಾಡಿಗೀ ಸೊಗಂ.
[ಕುಳಿಂದಕನು ಚಂದ್ರಹಾಸನ ಕಡೆಗೆ ತೋರುಗಣ್ಣಾಗುತ್ತಾನೆ. ದುಷ್ಟಬುದ್ಧಿ ಹಸನ್ಮುಖಿಯಾಗಿ ಚಂದ್ರಹಾಸನನ್ನು ಕುರಿತು,]

ದುಷ್ಟಬುದ್ಧಿ: – ಕೇಳಿರ್ದ್ಧೇನೀತನ ಮಹಾಮಹಿಮೆಯಂ;
ಕಾಣ್ಬ ಸೊಗಮೇ ಈಗಳೊದಗಿಹುದು.
ಏನೇನೊ ಕತೆವೇಳ್ವರೀತನಂ ಕುರಿತು;
ದಿಟದ ಸಂಗತಿಯಂ ನಿನ್ನಿಂದರಿವೆನಿಂದು.
ಈತನೇಂ ನಿನ್ನ ಸುಕುಮಾರನೊ?

ಕುಳಿಂದಕ: – ವಿಪಿನದೊಳ್ ನನಗೀ ಕುಮಾರಕಂ ಮುಂಗೈದ
ತಪದ ಫಲದಿಂ ತಾನೆ ದೊರೆಕೊಂಡನ್. ಈತನಂ
ಕೃಪೆಯಿಂದೆ ನೀವೆ ಪಾಲಿಸವೇಳ್ಪುದು.
[ದುಷ್ಟಬುದ್ಧಿ ಚಂದ್ರಹಾಸನ ಕಾಲುಗಳ ಕಡೆ ಗಮನಿವಿಟ್ಟು ನೋಡಿ ಅನ್ಯಮನಸ್ಕನಾಗುತ್ತಾನೆ.]

ದುಷ್ಟಬುದ್ಧಿ:(ತನ್ನೊಳಗೆ)
ಈತನಹುದಾ ಅನಾಥವಾಲಕಂ! ಕಾಲ್ವೆರಳೆ ಸಾಕ್ಷಿ!
ಚಂಡಾಲರೆನಗಿಂತು ವಂಚನೆಯ ಮಾಡಿಹರೆ?
ನನಗರಿಯದಂದೆನ್ನ ಕುತ್ತಿಗೆ ಕೊಯ್ದಿಹರು!
(ಏಳುತ್ತಿರುವ ತನ್ನ ಭಾವಗಳನ್ನು ತಡೆದು, ಹುಸಿನಗೆ ಬೀರಿ ಕುಳಿಂದಕನ ಕಡೆ ತಿರುಗಿ ಬಹಿರಂಗವಾಗಿ)
ಕುಳಿಂದಕ, ನಿನ್ನ ಈ ಕುಮಾರನಂ ಕಂಡೊಡನೆ
ಮೂಡಿತುತ್ಸವಮೆನಗೆ. ನಿನ್ನ ಸಿಂಹಾಸನಕೆ
ಈತನೆಯೆ ಮುಂದೆ ಮಹಾರ್ಹನಲ್ತೆ? ಆದೊಡಂ….
[ಎಂದು ಸುಮ್ಮನಾಗಿ ದೂರನೋಡಿ ಚಿಂತಿಸುವಂತನಾಗುತ್ತಾನೆ]

ಕುಳಿಂದಕ: – ತಮ್ಮ ವಿಶ್ವಾಸದೊಳೆ ಚಂದ್ರಹಾಸಂಗೀತಂಗೆ
ಅಭ್ಯುದಯ ಸಿದ್ಧಿ.

ದುಷ್ಟಬುದ್ಧಿ:(ತನ್ನೊಳಗೆ) ಬಂಜೆಯಾಗದು ವಿಪ್ರನ್ ಅಂದೆನ್ನೊಳ್
ಆಡಿದಾ ನುಡಿ. ರಾಜಲಕ್ಷಣದಿಂದೆ ಒಪ್ಪುವಿವನನ್
ಭಂಜಿಸದೊಡೆ ಈ ಧರಣಿಗೀತನೆಯೆ ಅರಸಾದಪನ್;
ಬಳಿಕ ಮಗ ಮದನಂಗೆ ದೊರೆತನಂ ಶಶವಿಷಾಣಂ!
ಬಲಶಾಲಿಯಾಗಿಹನ್. ಅಗ್ಗಳಿಕೆಗೀತನ್
ಅಂಜುವವನಲ್ಲ. ನಂಜನೂಡಿಸಿ ಕೊಲುವ
ಉಪಾಯಮಂ ನೆಗಳ್ದೆಪನ್. (ಬಹಿರಂಗವಾಗಿ)

ಕುಳಿಂದಕ,
ನೀನರಸನಾದೊಡಂ ಆಶ್ರಿತಂ. ನಿನಗಿಂ
ದತ್ತುಮಗನಪ್ಪುದಕೆ ಕುಂತಳೇಂದ್ರನ ಆಜ್ಞೆ
ಬೇಕಂದೆ ನನ್ನ ಮತಿ. ಈತನೀ ಭದ್ರರೂಪವೆ
ರಾಜೇಂದ್ರನಂ ಮನವೊಲಿಸಿ. ಆತನನುಮತಿಯ
ಫಲವೀವುದೆಂಬುದೆನ್ನಾಶೆ. ಮಗ ಮದನಂಗೆ
ಅವಸರದ ಪತ್ರವೊಂದನು ಕೊಡುವೆ. ಈಗಳೆಯೆ
ಚಂದ್ರಹಾಸನೆಯೆ ಅದನು ಕೊಂಡೊಯ್ಯಲಾ ಎಡೆಗೆ.

ಕುಳಿಂದಕ: – ತಮ್ಮಾಣತಿ.

ದುಷ್ಟಬುದ್ಧಿ:(ಲಘುಮನಸ್ಸಿನಿಂದೆಂಬಂತೆ ಚಂದ್ರಹಾಸನಿಗೆ)
ರಾಜಕುಮಾರ, ನಿನ್ನವೋಲ್ ಯುವಕರ್ಗೆ
ಪಯಣವೆಂದರೆ ಏನು? ಬರಿಯಾಟವೈಸೆ!

ಚಂದ್ರಹಾಸ: – ಲೇಖನವ ಬರೆದು ಕೊಡಿ. ಶೀಘ್ರದಲ್ಲಿಯೆ ಹೋಗಿ
ಕಾರ್ಯವನು ಕುಂದಿಲ್ಲದಂತೆಸಗಿ ಬಹೆನು.

ಕುಳಿಂದಕ: – ನೀನೊಬ್ಬನೆಯೆ ಹೋಗುವೆಯಾ? ಜೊತೆಗೆ ಕಿಂಕರರು
ಇರಲಿ. ವೀರಸೇನ, ರಣಸಿಂಹರಿಹರಲ್ತೆ?

ದುಷ್ಟಬುದ್ಧಿ: – ಆರವರು?

ಕುಳಿಂದಕ: – ನಮ್ಮ ಸೈನ್ಯಾಧಿಕಾರಿಗಳ್.
ಅಜೀವಸ್ನೇಹಿತರ್ ಚಂದ್ರಹಾಸಂಗೆ.

ದುಷ್ಟಬುದ್ಧಿ: – ಹಾಗೆಯೆ ಮಾಡಲಿ.
ಒಂಟಿಯಾಗಿರೆ ದಾರಿ ದೂರವಾಗುವುದು.

ಚಂದ್ರಹಾಸ: – ತೇಜಿಗಳನಳವಡಿಸಿ ಸಿದ್ಧರಾಗುವೆವು.
[ಎಂದು ಏಳುತ್ತಾನೆ]

ದುಷ್ಟಬುದ್ಧಿ: – ನೀನು ಹೋಗುವ ಕಾರ್ಯ ಗೋಪ್ಯವೆಂದೆಣಿಸು.

ಚಂದ್ರಹಾಸ: – ಹಿರಿಯರಪ್ಪಣೆ. (ತಲೆಬಾಗಿ ಹೊರಡುತ್ತಾನೆ)

ದುಷ್ಟಬುದ್ಧಿ: – ಏನದಮ್ಯ ಉತ್ಸಾಹ ಈ ಕುಮಾರನಿಗೆ!….
ನಾನೀಗಳೆಯೆ ಲೇಖನವ ಸಿದ್ಧಗೊಳಿಸುವೆನು.

[ಕುಳಿಂದಕ ಎದ್ದು ನಮಸ್ಕರಿಸಿ ಹೊರಡಲುದ್ಯುಕ್ತನಾಗುತ್ತಾನೆ. ದುಷ್ಟಬುದ್ಧಿಯೂ ಎದ್ದು ಕೈಜೋಡಿಸಿ ಬೀಳ್ಕೊಡುತ್ತಾನೆ.]

ಪರದೆ ಬೀಳುತ್ತದೆ.

*