ದೃಶ್ಯ

[ಅಂತರಿಕ್ಷದಲ್ಲಿ ಮೇಘಪಂಕ್ತಿಯ ಮಧ್ಯೆ ಬೆಳ್ಳಿಯುಡೆಯ ದೇವಿಯೊರ್ವಳು ಮೈದೋರಿ ಹಾಡುತ್ತಾಳೆ. ಭಕ್ತಿದೇವತಾರೂಪಿಗೆ ಅನುರೂಪವಾದ ವಸನಭೂಷಣ ಕುಸುಮಮಾಲಾದಿ ಚಿಹ್ನೆಗಳಿಂದ ಶೋಭಿಸುತ್ತಾಳೆ. ಭಕ್ತಿ ನೃತ್ಯಭಂಗಿಯನ್ನಭಿನಯಿಸುತ್ತಾಳೆ.]

ಭಕ್ತಿದೇವಿ: – ಲೋಕವನು ನಾಕಕ್ಕೆ ಬೆಸೆಯೆ
ನಾಕವನು ಲೋಕಕ್ಕೆ ಹೊಸೆಯೆ
ಐತಂದೆ ನಾ ಭಕ್ತಿದೇವಿ!
[ಭಕ್ತಿದೇವಿ ಬೂಲೋಕದ ಕಡೆ ನೋಡತೊಡಗುತ್ತಾಳೆ. ಅವಳ ಕೆಳಗಡೆಯಿಂದ ಗಾನ ಕೇಳಿಬರುತ್ತದೆ. ಪಚ್ಚೆಯುಡೆಯ ಪ್ರಾರ್ಥನಾದೇವಿ ಮೇಲಕ್ಕೇರಿ ಬಂದು ಹಾಡುತ್ತಾಳೆ.]

ಪ್ರಾರ್ಥನಾದೇವಿ: – ಪೃಥಿವಿಕೌಯಿಂದುದಿಸಿ ಏರಿ
ಭಗವಂತನಡಿಯರಸಿ ಹಾರಿ
ಬಂದೆ ನಾ ಪ್ರಾರ್ಥನಾದೇವಿ!
[ಭಕ್ತಿ ಮತ್ತು ಪ್ರಾರ್ಥನಾದೇವಿಯರಿಬ್ಬರೂ ಕತ್ತೆತ್ತಿ ಮೇಲೆ ನೋಡತೊಡಗುತ್ತಾರೆ. ಅತ್ತಣಿಂದ ಗಾನ ಕೇಳಿಸುತ್ತದೆ. ಚಿನ್ನದುಡೆಯ ಕೃಪಾದೇವಿ ಮೇಲುಗಡೆಯಿಂದ ಅವತರಿಸಿ ಬಂದು ಹಾಡುತ್ತಾಳೆ.]

ಕೃಪಾದೇವಿ: – ಭಗವಂತನಡಿಯಿಂದೆ ಹೊಮ್ಮಿ
ಪೃಥಿವಿಯೆಡೆಗವತರಿಸೆ ಚಿಮ್ಮಿ
ಇಳಿದೆನೈ ನಾ ಕೃಪಾದೇವಿ!
[ಮೂವರು ಒಬ್ಬರೊಬ್ಬರ ಕೈವಿಡಿದು ವರ್ತುಲನೃತ್ಯವೆಸಗುತ್ತಾರೆ.]

ಭಕ್ತಿದೇವಿ: – ಜನ್ಮವನಾಂತಿದೆ ವಿಭೂತಿಯೊಂದು
ಭಕುತಿಯ ಮೆರೆಯಲು ಭೂಮಿಯೊಳಿಂದು!

ಪ್ರಾರ್ಥನಾದೇವಿ: – ಒದಗಿಹ ಅಳಲನು ದೇವನಿಗರುಹೆ
ತಿರೆಯಿಂದೇರುತ ನಾನೈತರುವೆ!

ಕೃಪಾದೇವಿ: – ಭಗವತ್ ಕೃಪಾಶಕ್ತಿಯನಾಂತು
ಇಳಿದೆನ್ ವಿಭೂತಿರಕ್ಷೆಗೆ ನೋಂತು!
[ನರ್ತನ ವಿರಾಮವಾಗುತ್ತದೆ.]

ಪ್ರಾರ್ಥನಾದೇವಿ: – ಅಕ್ಕ, ಅವನಿಂದು ಮಹಾರೌದ್ರಸಂಕಟಕೆ
ಸಿಲುಕುವನು ಎಂದರಿತು ದುಃಖಕಾತರೆಯಾಗಿ
ನಿನ್ನ ಬೇಡಲು ಓಡಿಬಂದೆ.

ಕೃಪಾದೇವಿ: – ತಂಗಿ, ಅಳಲ್ವೇಡ; ಈಶ್ವರಕೃಪೆಗೆ
ನಾನಾ ಮುಖಂಗಳೊಳವು; ನಖಂಗಳುಂ ಒಳವು!
ಧರೆಗೆ ಮೈದೋರಲಾತನಾ ಭಕ್ತಿವಿಭೂತಿ
ಕ್ಲೇಶಮುಂ ಕಷ್ಟಮುಂ ದುಃಖಮುಂ ದಾರಿದ್ರ್ಯಮುಂ
ನೆರಮಪ್ಪುವಲ್ತೆ? ರಕ್ಷೆ ನಾನಿಹೆ; ಭಯಂ ಮಾಣ್;
ತೋರ್ಪೆನ್ ಬಾ; ಮುಂದಪ್ಪುದನ್ ಕಾಣ್!

ಭಕ್ತಿದೇವಿ: – ಕೇರಳದವನಿಪನ ಸಿರಿವಸಿರಿನಲಿ ಬಂದು,
ತಂದೆ ತಾಯ್ ನೆಲ ಸಿರಿಗಳೆಲ್ಲಮಂ ಕಳೆದುಕೊಂಡು,
ದಾದಿಯೊರ್ವಳ ಅಕ್ಕರೆಯ ಸಾಹಸದಿ ರಕ್ಷೆವೆತ್ತು,
ಅರಿನೃಪರ ಖಡ್ಗದಿಂ ಪಾರಾಗಿ,
ಕಡೆಗೆ ಕುಂತಳನಗರ ವೀಧಿಯಲಿ ಮುಗಿಯುವುದೆ
ಅವನ ಬಾಳ್? ವಿಧಿಲೀಲೆಯಂ ಕಾಣ್.
ಅವನನೆಂತು, ಎಲ್ಲಿಂದಮೆಲ್ಲಿಗೆ, ಒಯ್ಯುವ
ಉಪಾಯಮಂ ತಂದೊಡ್ಡುತಿರ್ಪುದಪಾಯದೋಲ್?

ಕೃಪಾದೇವಿ: – ಬನ್ನಿ, ಕುಂತಳನಗರಕಿಳಿಯುವಂ ಭಕ್ತಸನ್ನಿಧಿಗೆ;
ಅರಳಿಸೆ ವಿಭೂತಿಯಂ ನೆರವಾಗುವಂ ವಿಧಿಗೆ!
[ಮೂವರು ದೇವಿಯರೂ ನೃತ್ಯಭಂಗಿಯಲ್ಲಿ ಹಾಡುತ್ತಾ ಕೆಳಗಿಳಿದು ಮರೆಯಾಗುತ್ತಾರೆ.]

ಪರದೆ ಬೀಳುತ್ತದೆ.

*

ದೃಶ್ಯ

[ಕುಂತಳನಗರದಲ್ಲಿ ಒಂದು ಉದ್ಯಾನದ ಬೀದಿ. ತುಸು ದೂರದಲ್ಲಿ ಹರಿಯುತ್ತಿರುವ ತೊರೆಯೊಂದರ ದೃಶ್ಯ ಕಾಣುತ್ತದೆ. ಒಂದು ಮಾವಿನಮರದ ನೆರಳಿನಲ್ಲಿ ಹರವಿದ್ದ ಮಳಲ ರಾಶಿಯಮೇಲೆ ಕೆಲವು ಹುಡುಗರು ಮಳಲಾಟವಾಡುತ್ತಿರುತ್ತಾರೆ. ಬೇರೆ ಬೇರೆ ಗುಂಪುಗಳಾಗಿ, ಒಂದು ಗುಂಪಿನಲ್ಲಿ ಮೂವರು ಹುಡುಗರು ಮಳಲಿನಲ್ಲಿ ಬರೆಯುತ್ತಿದ್ದಾರೆ. ಅದರಲ್ಲಿ ಒಬ್ಬನು ಮಳಲನ್ನು ಗುಡ್ಡೆಹಾಕಿ ಗೋಪುರದ ಹಾಗೆ ಮಾಡಿ, ಎಲೆ ಹೂವು ಮುಡಿಸುತ್ತಿರುತ್ತಾನೆ.]

೧ನೆಯ ಬಾಲಕ: – ನಾನೊಂದು ಮಾವಿನಹಣ್ಣು ಬರೆದೆ; ನೋಡಿ ಬನ್ನಿ.

೨ನೆಯ ಬಾಲಕ: – ನಾನೊಂದು ಹಕ್ಕಿ ಬರೆದೆ; ಹಾರಿಹೋಗುತ್ತಿದೆ.
ನೋಡಿ, ನೋಡಿ! ಓಡಿಬನ್ನಿ!

೩ನೆಯ ಬಾಲಕ: – ನಾನೊಂದು ಗುಡಿ ಕಟ್ಟಿದ್ದೇನೆ. ಪೂಜೆಗೆ ಬನ್ನಿ!

೧ನೆಯ ಬಾಲಕ: – ಮೊದಲು ನನ್ನ ಹಣ್ಣು ನೋಡು ಬಾ.

೨ನೆಯ ಬಾಲಕ: – ನನ್ನ ಹಕ್ಕಿ?
[ಮೂರನೆಯ ಬಾಲಕನು ಬಂದು ಅವರಿಬ್ಬರ ಚಿತ್ರಗಳನ್ನೂ ನೋಡಿ]

೩ನೆಯ ಬಾಲಕ: – ನಿನ್ನ ಹಕ್ಕಿಗೆ ಕಣ್ಣೆ ಇಲ್ಲ; ಅವನ ಹಣ್ಣಿಗೆ ಬಣ್ಣವೆ ಇಲ್ಲ.

೧ನೆಯ ಬಾಲಕ: – ನಿನ್ನ ಗುಡಿಗೆ ದೇವರೆ ಇಲ್ಲ.

೩ನೆಯ ಬಾಲಕ: – ದೇವರು ನಮ್ಮ ಹೊಸ ತಮ್ಮನ ಬಾಯಲ್ಲಿಯೆ ನೆಲಸಿದ್ದಾನೆ. ಅವನು ಬಂದೊಡನೆ ಆ ಬಟ್ಟಕಲ್ಲನಿಟ್ಟು ಪೂಜೆಮಾಡಿದರೆ ನಮಗೆಲ್ಲ ಸಿಹಿ ನೈವೇದ್ಯ ದೊರೆಯುತ್ತದೆ.

೨ನೆಯ ಬಾಲಕ: – ನೈವೇದ್ಯ ಯಾರು ಕೊಡುತ್ತಾರೆ?

೩ನೆಯ ಬಾಲಕ: – ಅವನು ಭಕ್ತಿಯಿಂದ ಕೈನೀಡಿದರೆ ನೈವೇದ್ಯ ಬರುತ್ತದೆಕಣೊ!

೧ನೆಯ ಬಾಲಕ: – ಯಾರು ಹಾಕುತ್ತಾರೊ, ಅವನ ಕೈಗೆ?

೩ನೆಯ ಬಾಲಕ: – ಯಾರು ಹಾಕುತ್ತಾರೊ, ನನಗೆ ಗೊತ್ತಿಲ್ಲ. ಅಂತೂ ಮೊನ್ನೆ ನಾವು ಪೂಜೆ  ಮಾಡಿ ಕೀರ್ತನೆ ಹಾಡಿದಮೇಲೆ ಅವನು ಆಕಾಶಕ್ಕೆ ಕೈನೀಡಿ ನಮಗೆಲ್ಲ ಸಿಹಿ ಹಂಚಿದನೊ!

೧ನೆಯ ಬಾಲಕ:(ಹಾದಿಯ ಕಡೆ ನಿರೀಕ್ಷಿಸುತ್ತ) ಅವನು ಯಾಕೊ ಇನ್ನೂ ಬರಲಿಲ್ಲ? ನಮ್ಮೆಲ್ಲರಿಗಿಂತಲೂ ಮೊದಲೆ ಬಂದಿರುತಿದ್ದ ಈ ಮಳಲದಿಣ್ಣೆ!

೩ನೆಯ ಬಾಲಕ: – ಪಾಪ, ಅವನ ಅಜ್ಜಿಗೆ ಏನೊ ರುಜೆಯಂತೆ ಕಣೊ! ಅವಳ ಶುಶ್ರೂಷೆ ಮುಗಿಸಿಬರುವುದೆ ಹೊತ್ತಾಗುತ್ತದೆ.
[ಹಾದಿಯ ಕಡೆ ನೋಡುತ್ತ ನಿಲ್ಲುತ್ತಾನೆ.]

೨ನೆಯ ಬಾಲಕ: – ಅವನಿಗೆಲ್ಲಿ ಸಿಕ್ಕಿತೊ ಆ ದೇವರು?

೩ನೆಯ ಬಾಲಕ: – ಅಂದು, ಓ ಅಲ್ಲಿ, ಆ ಹೊಳೆಯ ಮರಳಲ್ಲಿ, (ಕೈ ತೋರಿಸುತ್ತಾ) ನಾವೆಲ್ಲ ಒಟ್ಟಿಗೆ ಆಟವಾಡುತ್ತಿದ್ದಾಗ ಸಿಕ್ಕಿತು. ದುಂಡಗಿದೆ, ನುಣ್ಣಗಿದೆ, ಕರ್ರಗಿದೆ, ಕತ್ತಲೆ ಮೊಟ್ಟೆಹಾಗೆ! ಅವನಿಗೆ ಅದನ್ನಿಟ್ಟುಕೊಳ್ಳಲೂ ಎಡೆಯಿಲ್ಲ. ಕೌಂಕುಳಲ್ಲಿಡುತ್ತಾನೆ. ಬಾಯಲ್ಲಿಯೂ! ಅದು ಸಾಲಗ್ರಾಮ ಶಿಲೆಯಂತೆ ಕಣೋ!

೨ನೆಯ ಬಾಲಕ: – ನನಗೂ ಒಂದು ಸಿಕ್ಕಿದ್ದರೆ! ಬೇಕುಬೇಕಾದಾಗ, ತುಡು ಬಂದಕೂಡಲೆ, ಸಿಹಿ ತರಿಸಿ. . . .(ದೂರ ನೋಡಿ ಕಣ್ಣರಳಿಸಿ) ಓ ಅಲ್ಲೆ ಬರುತಿದಾನೆ!

ಎಲ್ಲರೂ: – ಬಂದಾ ಬಂದಾ ಹೊಸತಮ್ಮ!
ಬಂದಾ ಬಂದಾ ಹೊಸತಮ್ಮ!
(ಕುಣಿಯುತ್ತಾ ಚಪ್ಪಾಳೆ ಹಾಕುತ್ತಾರೆ.)

[ಕೋಗಿಲೆಗಳೆರಡು ಕೂಗತೊಡಗುತ್ತವೆ. ಒಂದಕ್ಕೊಂದು ಮಾರುತ್ತರ ಉಲಿಯುವಂತೆ. ಚಂದ್ರಹಾಸನು ಹುಡುಗರೆಲ್ಲರೂ ನೋಡುತ್ತಿದ್ದ ದಿಕ್ಕಿನ ಕಡೆಯಿಂದಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!’ ಎಂದು ಕುಣಿಯುತ್ತ ಹಾಡುತ್ತಾ ಕೈಚಪ್ಪಾಳೆ ತಟ್ಟುತ್ತಾ ಓಡೋಡಿ ಬರುತ್ತಾನೆ. ಹುಡುಗರೆಲ್ಲರೂ ಅವನನ್ನು ನೋಡಿ ಸಂತೋಷವುಕ್ಕಿ ಮುತ್ತುತ್ತಾರೆ. ಎಲ್ಲರೂ ಅವನನ್ನೆ ಅನುಕರಿಸಿಗೋವಿಂದ ಶ್ರೀಹರಿ ಮುಕುಂದ ಮುರಾರಿಎಂದು ಹಾಡುತ್ತ ಕುಣಿಯುತ್ತಾರೆ; ಚಪ್ಪಾಳೆ ಹಾಕುತ್ತ ಸುತ್ತುತ್ತಾರೆಇದ್ದಕ್ಕಿದ್ದಹಾಗೆ ಬಾಲಕರೆಲ್ಲ ಸ್ತಬ್ದರಾಗಿ ನಿಂತು ಅಚ್ಚರಿಯ ಬಿಚ್ಚುಗಣ್ಣುಗಳಿಂದ ಬೀದಿಯ ಕಡೆಗೆ ನೋಡತೊಡಗುತ್ತಾರೆ. ರಾಜಭಟರಿಬ್ಬರು ಬೀದಿಯಲ್ಲಿ ಹಾದು ಹೋಗುತ್ತಾರೆ. ಅವರ ಹಿಂದೆ ಸ್ವಲ್ಪ ದೂರದಲ್ಲಿ, ದುಷ್ಟಬುದ್ಧಿ, ಬಾಲಕ ಮದನ, ಬಾಲಿಕೆ ವಿಷಯೆ, ಪರೋಹಿತ ಗಾಲವ ಇವರು ಇನ್ನೂ ರಂಗಪ್ರವೇಶ ಮಾಡದೆಯೆ ಕಾಣಿಸುತ್ತಾರೆ  – ಚಂದ್ರಹಾಸಾದಿ ಬಾಲಕರಿಗೆ.]

ಚಂದ್ರಹಾಸ: – ಯಾರೊ ಅವರು? ಏಕೆ ಎಲ್ಲರೂ ಸುಮ್ಮನೆ ನಿಂತುಬಿಟ್ಟಿರಿ?

೧ನೆಯ ಬಾಲಕ:(ಕೆಳದನಿಯಿಂದ) ದುಷ್ಟಬುದ್ಧಿಯೊ, ದುಷ್ಟಬುದ್ಧಿ!

ಚಂದ್ರಹಾಸ: – ಹಾಗೆಲ್ಲ ಬೈಯಬಾರದು, ಅಣ್ಣ.

೨ನೆಯ ಬಾಲಕ: – ಅವನ ಹೆಸರು ಕಣೊ ಅದು; ಬಯ್ಗುಳವಲ್ಲ.

೩ನೆಯ ಬಾಲಕ: – ಅವರು ನಮ್ಮ ರಾಜ್ಯದ ಮಂತ್ರಿ ಕಣೊ. ಅವರ ಹೆಸರೇ ದುಷ್ಟಬುದ್ಧಿ. ನಮ್ಮಯ್ಯ ಅವರ ಬಳಿ ಕರಣಿಕರೊ. ಅವರೆಂದರೆ ಎಲ್ಲರೂ ಹೆದರಿ ಸಾಯುವರಂತೆ.

೨ನೆಯ ಬಾಲಕ: – ಅವನ ಹೆಸರು ಮಾತ್ರವಲ್ಲೋ, ನಿಜವಾಗಿಯೂ ದುಷ್ಟಬುದ್ಧಿಯಂತೆ ಕಣೊ ಅವನು.

೩ನೆಯ ಬಾಲಕ: – ಹಾಗೆಲ್ಲ ಹೇಳದಿರೊ? ಎಲ್ಲಿಯಾದರೂ ಕೇಳಿದರೆ ನಿನ್ನ ಸೀಳಿಸಿ ತೋರಣ ಕಟ್ಟಿಸಿಬಿಡುತ್ತಾರೆ; ತಿಳಿಯಿತೆ?

ಚಂದ್ರಹಾಸ: – ಅವರ ಬೆಂಬಳಿ ಬರುವ ಆ ಅಣ್ಣ ತಂಗಿ? ಅವರ ಮಕ್ಕಳೆ? ಕರೆದರೆ ನಮ್ಮೊಡನೆ ಬರುವರೇನೊ ಆಟಕ್ಕೆ?

೧ನೆಯ ಬಾಲಕ:(ತುಟಿಗೆ ಕೈವೆರಳಿಟ್ಟು ಬೆರಗುಬಡಿದಂತಾಗಿ) ಅವರು? ನಮ್ಮೊಡನೆ? ಆಟಕ್ಕೆ? ಎಂದಾದರೂ ಉಂಟೆ? ಮಂತ್ರಿಯ ಮಕ್ಕಳು ಬೀದಿಯ ಹುಡುಗರೊಡನೆ ಆಟಕ್ಕೆ ಬರುತ್ತಾರೆಯೆ?

೩ನೆಯ ಬಾಲಕ: – ಮದನ ಅಂತೆ ಕಣೊ ಅವನ ಹೆಸರು; ಅವನ ತಂಗಿಯ ಹೆಸರು ವಿಷಯೆ ಅಂತೆ. ನಮ್ಮಯ್ಯ ಹೇಳಿದರೊ ನನಗೆ.

೧ನೆಯ ಬಾಲಕ: – ದೊಡ್ಡವರ ಹೆಸರು ಹೇಳಬಾರದಂತೆ ಕಣೊ. ಅವರಿಗೆ ಮೈಲಿಗೆಯಾಗುತ್ತದಂತೆ.

ಚಂದ್ರಹಾಸ: – ಅವರು ಯಾರೊ ಎಲ್ಲರಿಗೂ ಹಿಂದೆ ಬರುವವರು?

೨ನೆಯ ಬಾಲಕ: – ಗಾಲವ ಅಂತ ಕಣೊ ಅವರ ಹೆಸರು. ರಾಜರ ಪುರೋಹಿತರು.

[ದುಷ್ಟಬುದ್ಧಿ, ಮದನ, ವಿಷಯೆ, ಗಾಲವ ಬರುತ್ತಾರೆ. ದುಷ್ಟಬುದ್ಧಿ ಅತ್ತಿತ್ತ ದಿಟ್ಟಿ ಹಾಯಿಸದೆ ಶ್ರೀಮದ್ಗಾಂಭೀರ್ಯಕ್ಕೆ ಊನ ಬರಬಾರದೆಂಬಂತೆ ಬಾಲಕರ ಗುಂಪನ್ನು ನೋಡಿಯೂ ಗಮನಿಸದೆ ನಿರ್ಲಕ್ಷಿಸಿ ಮುಂಬರಿಯುತ್ತಾನೆ. ಮದನ. ವಿಷಯೆ ಇಬ್ಬರೂ ಗಾಲವ ನಿಂತುದನ್ನು ನೋಡಿ ನಿಲ್ಲುತ್ತಾರೆ. ಗಾಲವನು ಕಣ್ಣರಳಿಸಿ ನಟ್ಟ ನೋಟದಿಂದ ಹುಡುಗರ ಗುಂಪಿನ ನಡುವೆ ನಿಂತಿದ್ದ ಚಂದ್ರಹಾಸನನ್ನು ನೋಡುತ್ತಿರುತ್ತಾನೆ. ದುಷ್ಟಬುದ್ಧಿ ನಿಂತು ತಿರುಗಿನೋಡಿ ಪ್ರಶ್ನಿಸುತ್ತಾನೆ.]

ದುಷ್ಟಬುದ್ಧಿ: – ನಿಂತೇನ ನೋಡುತಿರುವಿರಿ, ಪುರೋಹಿತರೆ?

ಗಾಲವ: – ಅಲ್ಲಿ ನಿಂತು ನಮ್ಮನೆ ನೋಡುತಿಹ ಬಾಲಕರ
ಗುಂಪಿನಲಿ, ತಿಂಗಳನೆ ನಗುವ ಕಾಂತಿಯ ಮೊಗದ
ಬಾಲಕನದೊರ್ವನಂ, ನೋಡು, ಅರಿಲ್ಗಳ ನಡುವೆ
ಎಸೆವ ತಣ್ಗದಿರನೊಲು ನಿಂತಿಹನು ಮನಮೋಹಿಸಿ!

ದುಷ್ಟಬುದ್ಧಿ: – ಅದರೊಳೇನತಿಶಯಂ, ಪುರೋಹಿತರೆ?

ಗಾಲವ: – ಆರ ಸುತನೀ ತರಳ? ಎಲ್ಲಿಂದ ಬಂದಿಹನೊ?
ಹಿಂದಾವಗಂ ಕಂಡ ನೆನಹಿಲ್ಲವೆನಗೆ.

ದುಷ್ಟಬುದ್ಧಿ: – ಈ ಪರಿಯೊಳೆನಿತಿಲ್ಲ
ಅನಾಥರಾಗಿಹ ಬಾಲರೀ ಮಹಾಪುರದಲ್ಲಿ?
ಎತ್ತಣವನಕ್ಕೆ! ಆರ ಸುತನಕ್ಕೆ!
ರಾಜಕಾರ್ಯದೊಳಿರ್ಪ ನಮಗೇಕದರ ಚಿಂತೆ?

ಗಾಲವ: – ಅನಾಥ ಮಾತ್ರನೆಂದೆಣಿಸದಿರು ನೀನಾತನಂ. ಕಾಣ್,
ರಾಜಚಿಹ್ನೆಗಳೆಂತು ಶೋಭಿಪುವು ಮೆಯ್ಯಲ್ಲಿ?
ಮೊಗದ ತೇಜವ ನೋಡು. ಪಾರ್ವನಾಂ ಪಾರ್ದು ಪೇಳ್ವನ್:
ಎಂದಿರ್ದೊಡಂ ಈ ಪೊಳಲ್ಗೆ, ಈ ಕುಂತಳಾಧೀಶನ್
ಆಳ್ವ ನಮ್ಮೀ ಪೊಡವಿಗೆ, ಒಡೆಯನಹನ್ ಈತನ್.
ಚಾರುತರ ಲಕ್ಷಣಗಳಿಂ ಮೆರೆಯುತಿರ್ಪ್ಪೀತನಂ
ನೀನಿರಿಸಿಕೊಂಡು ರಕ್ಷಿಪುದು; ದರೆಗೊಳ್ಳಿತಕ್ಕುಂ.

ದುಷ್ಟಬುದ್ಧಿ:(ಚಿಂತಿಸಿ, ಹುಬ್ಬುಗಂಟಿಕ್ಕಿ, ಮತ್ತೆ ಪ್ರಸನ್ನವದನಾಗಿ)
ಕರೆದು ಕೇಳಿಮ್, ಆತನಾರ್ಗೆಂದು.

[ಮಕ್ಕಳೆಲ್ಲ ದುಷ್ಟಬುದ್ಧಿ ತಮ್ಮನ್ನು ಗಮನಿಸಿ, ತಮ್ಮ ಕಡೆಗೆ ತಿರುಗಿದುದನ್ನು ನೋಡಿ ಹೆದರಿ ಹಿಂಜರಿಯುತ್ತಾರೆ. ಚಂದ್ರಹಾಸನು ಮಾತ್ರ ಮುಗುಳುನಗೆಮೊಗನಾಗಿ ನಿಂತಲ್ಲಿಯೆ ನಿಂತಿರುತ್ತಾನೆ.]

ಗಾಲವ: – ಮಗೂ, ಇಲ್ಲಿ ಬಾ (ಎಂದು ಕೈಸನ್ನೆ ಮಾಡುತ್ತಾನೆ.)
[
ಚಂದ್ರಹಾಸ ಹತ್ತಿರಕ್ಕೆ ಬರುತ್ತಾನೆ. ವಿಷಯೆ ಮದನರು ಅವನನ್ನು ಪ್ರಶಂಸೆಯಿಂದ ನೋಡುತ್ತ ಸುತ್ತುಗಟ್ಟಿ ನಿಲ್ಲುತ್ತಾರೆ.]
ಮಗೂ, ನೀನಾರವಂ?

ಚಂದ್ರಹಾಸ: – ನಾನರಿಯೆ.

ಗಾಲವ: – ನಿನ್ನ ಹೆಸರು?

ಚಂದ್ರಹಾಸ: – ನನಗೆ ಗೊತ್ತಿಲ್ಲ.

ಗಾಲವ: – ನಿನ್ನ ತಂದೆ?

ಚಂದ್ರಹಾಸ:(ತಲೆಯಲ್ಲಾಡಿಸುತ್ತಾನೆ.)

ಗಾಲವ: – ತಾಯಿ?

ಚಂದ್ರಹಾಸ:(ಮತ್ತೆ ತಲೆಯಲ್ಲಾಡಿಸಿ ಕಣ್ಣೊರಸಿಕೊಳ್ಳುತ್ತಾನೆ.)

ಮದನ:(ವಿಷಯೆಯ ಕಿವಿಯಲ್ಲಿ) ಯಾರೂ ಇಲ್ಲವಂತೆ ಕಣೇ ಅವನಿಗೆ!

ವಿಷಯೆ: – ನಮ್ಮೊಡನೆ ಬರುವಂತೆ ಹೇಳೊ.

ಮದನ: – ಸುಮ್ಮನಿರೆ; ಅಪ್ಪಯ್ಯನಿಗೆ ಕೇಳಿಸೀತು!

ವಿಷಯೆ:(ತನ್ನೊಳಗೆ) ಛೆ, ಪಾಪ! (ಎಂದು ತನ್ನ ಕೈಯಲ್ಲಿದ್ದ ರತ್ನಾಭರಣ ನೋಡುತ್ತಾಳೆ.)

ಗಾಲವ:(ಅವನ ತಲೆಸವರಿ ಸಂತೈಸುತ್ತಾ) ನಿನಗುಣಿಸನಿಕ್ಕುವರಾರು?

ಚಂದ್ರಹಾಸ: – ನನ್ನಜ್ಜಿ.

ಗಾಲವ: – ಆರಾಕೆ? ಎಲ್ಲಿಹಳು?

ಚಂದ್ರಹಾಸ:(ದೂರಕ್ಕೆ ಕೈತೋರಿಸಿ) ಓ ಅಲ್ಲಿ!

ದುಷ್ಟಬುದ್ಧಿ: – ಪುರೋಹಿತರೆ, ಈಗಿರಲಿ. ವಿಚಾರಿಸಿದರಾಯ್ತು ಆಮೇಲೆ ಹೊತ್ತಾಯ್ತು ರಾಜಕಾರ್ಯಕೆ, ಬನ್ನಿ. (ಎಂದು ಸರ್ರನೆ ತಿರುಗಿ ಹೊರಡುತ್ತಾನೆ.)

ಮದನ: – ಬಾ, ತಂಗಿ; ಅಪ್ಪಯ್ಯ ಹೋದರು. (ಓಡುತ್ತಾನೆ.)

ವಿಷಯೆ:(ಬೇಗನೆ ತನ್ನ ಕೈಯ ರತ್ನದ ಹೂವನ್ನು ಚಂದ್ರಹಾಸನ ಕೈಗಿತ್ತು ಓಡುತ್ತಾಳೆ ಅಣ್ಣಯ್ಯನ ಹಿಂದೆ.)

ಗಾಲವ:(ಮುಗುಳುನಗೆಯಿಂದ ಎಲ್ಲವನ್ನೂ ನೋಡುತ್ತಾ)
ವತ್ಸ, ನಿನಗೆ ಶ್ರೀಹರಿಯ ರಕ್ಷೆಯಿದೆ!
ನಿನ್ನ ಮುಖಕಮಲದಲಿ ಭಕ್ತಿ ಮನೆಮಾಡಿಹಳು!
ಭಗವತ್ ಕೃಪೆ ಕಾಪಾಡಲಿ!
[ಎಂದು ನಿಂತಿದ್ದ ಚಂದ್ರಹಾಸನನ್ನೆ ನೋಡುತ್ತಾ ನೋಡುತ್ತಾ ಹೊರಡುತ್ತಾನೆ.]

೧ನೆಯ ಬಾಲಕ:(ಓಡಿಬಂದು) ಆರಿತ್ತರೀ ಹೂವ?

ಚಂದ್ರಹಾಸ: – ಆ ಹುಡುಗಿ.

೨ನೆಯ ಬಾಲಕ: – ರನ್ನದಲಿ ಕೆತ್ತಿಹುದೊ!

ಚಂದ್ರಹಾಸ:(ತಟಕ್ಕನೆ ಏನನ್ನೊ ಆಲಿಸಿದಂತೆ ಕಿವಿಗೊಟ್ಟು ಕೇಳುತ್ತಾನೆ.)
ಅದೇನದಾ ಗಾನ? ಎತ್ತಣಿಂ ಬರುತಿಹುದು?
ಕೋಗಿಲೆಯ ದನಿಮೀರಿ, ಗಿಳಿಗಳುಲಿಯಂ ಮೀರಿ?
ಆಃ ಏನಿಂಪು! (ಬಾನೆಡೆಗೆ ಮೊಗವೆತ್ತಿ ನಿರ್ನಿಮೇಷನಾಗಿ ನಿಲ್ಲುತ್ತಾನೆ.)

೩ನೆಯ ಬಾಲಕ: – ಆವ ಗಾನವೊ? ನಮಗೇನೂ ಕೇಳಿಸದು!

೧ನೆಯ ಬಾಲಕ:(ಚಂದ್ರಹಾಸ ನಿಷ್ಪಂದನಾಗಿ ಬಾನತ್ತ ಮೊಗನಾಗಿ ಎವೆಯಿಕ್ಕದೆ ನಿಂತುದಕ್ಕೆ ಬೆಚ್ಚಿ)
ಏನಾಯಿತೊ ನಿನಗೆ? ಏಕಿಂತು ನಿಂತೆ?

೨ನೆಯ ಬಾಲಕ: – ಆಗಸದೊಳೇನನೋ ನೋಡುತಿಹನು!

ಚಂದ್ರಹಾಸ:(ತಟಕ್ಕನೆ ಎಚ್ಚತ್ತವನಂತೆ ಸಾಮಾನ್ಯಸ್ಥಿತಿಗೆ ಬಂದು)
ಹೆದರದಿರಿ, ಅಣ್ಣಂದಿರ, ನನಗೇನೂ ಆಗಿಲ್ಲ.
ಅಂಬರದಿ ಕಾಣಿಸಿದರೆನಗೆ ದೇವಿಯರ್ ಮೂವರ್.
ಅಂಬುದಗಳೆಡೆ ಪಾಡುತಿರ್ದರ್ ನೃತ್ಯಂಗೆಯ್ದು.
ನನ್ನ ನಾಶೀರ್ವದಿಸಿದರ್, ಆ ಪುರೋಹಿತರಂತೆ!
ಚಿನ್ನದುಡೆಯವಳೊರ್ವಳ್! ಬೆಳ್ಳಿಯುಡೆಯವಳೊರ್ವಳ್!
ಪಚ್ಚೆನೀಲಿಯನುಟ್ಟ ರನ್ನದುಡೆಯವಳೊರ್ವಳ್!
ನಿಮಗಾರಿಗೂ ಕಾಣಲಿಲ್ಲವೆ ಅವರು?

ಎಲ್ಲರೂ: – ಇಲ್ಲ ಇಲ್ಲ, ನನಗೆ ಕಾಣಿಸಲಿಲ್ಲ!

ಚಂದ್ರಹಾಸ: – ಬನ್ನಿ ಅಣ್ಣಂದಿರ.
ನಾವೂ ಅವರಂತೆಯೆ ಹಾಡಿ ಕುಣಿಯುವ:
(ಚಂದ್ರಹಾಸನನ್ನನುಸರಿಸಿ ಎಲ್ಲರೂ ಕುಣಿಯುತ್ತಾರೆ.)
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
(ಕುಣಿಯುತ್ತಲೆ ಇರುತ್ತಾರೆ.)

ಪರದೆ ಬೀಳುತ್ತದೆ.

*