ದೃಶ್ಯ

[ದುಷ್ಟಬುದ್ಧಿಯ ಅರಮನೆ. ಸಾಲಂಕೃತ ಸುಸಜ್ಜಿತ ಕೊಠಡಿಯೊಂದರಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದಾನೆ]

ದುಷ್ಟಬುದ್ಧಿ: –  ಈ ಕುಂತಳೇಂದ್ರಂಗೆ ಸುತರಿಲ್ಲ.
ರಾಜ್ಯವೆನಗೇಕಾಧಿಪತ್ಯಮಾಗಿರ್ದಪುದು….
ಮುಂದಿವಂ ಭೂ ಕಾಂತನಾದಪಂ ಗಡ!
ವಿಪ್ರರೆಂದ ನುಡಿ ತಪ್ಪದು…. (ತಟಕ್ಕನೆ ಎದ್ದು ತಿರುಗಾಡುತ್ತಾ)
ನನ್ನಾತ್ಮಜರ್ಗೆ ಬೇಕಾದ ಸಂಪದಂ ಬಯಲಾಗುವುದೆ?
ಏನೆಂದನಾ ಗಾಲವ ಪುರೋಹಿತನ್?….
ದುಷ್ಟಬುದ್ಧಿಯ ನಾಮವನ್ವರ್ಥವಾಗದಿರೆ
ನನ್ನ ಬಾಳಿದು ದಿಟಂ ವ್ಯರ್ಥಂ!…. ನನ್ನಿಳೆಗೆ,
ನನ್ನಾತ್ಮಜರ್ಗೆ ಮುಡುಪಾದ ಈ ಪೊಳಲಿಂಗೆ
ಅವನೊಡೆಯನಾಗುವನೆ? ಇಲ್ಲ, ಎಂದೂ ಇಲ್ಲ!
ವಿಪ್ರನಾಡಿದ ಮಾತು ಪುಸಿಯಪ್ಪುವಂತೆಸಗೆ
ಚಾಂಡಾಲರಿಂದಾ ತರಳನಂ ಕೊಲ್ಲಿಪೆನ್!….
(ಮತ್ತೆ ತಟಕ್ಕನೆ ಕೂರುತ್ತಾನೆ. ಆಲೋಚಿಸಿ)
ಅರಸುಕುವರಿಯನೆನ್ನ ಮದನಂಗೆ ಕೈವಿಡಿಸಿ,
ಪಟ್ಟಗಟ್ಟುವೆನವಗೆ……… (ಮತ್ತೆ ಎದ್ದು ಅಸ್ಥಿರನಾಗಿ ತಿರುಗುತ್ತಾ)
ಕಿಂಕರನು ಕಟುಕರಂ
ಅದೇಕಿನ್ನುಂ ಕರೆದುತರಲಿಲ್ಲ….. ಶೀಘ್ರಮೆ ಶುಭಂ!….
ನನ್ನ ಬಾಳಿನ ಶಾಂತಿ ಆ ಬಾಲಕನ ಕೊಲೆಯಲ್ಲಿ
ಪಟ್ಟಿಹುದಲಾ!…. (ತೆಲೆಯೆತ್ತಿ ದೂರ ನೋಡುತ್ತಾನೆ. ಮುಖ
ಭಂಗಿಯೆ ಬದಲಾಯಿಸುತ್ತದೆ. ಹಸನ್ಮುಖನಾಗುತ್ತಾನೆ.)
ಓಹೊ ವಿಷಯೆ, ಮದನ……

[ಬಾಲೆ ವಿಷಯೆ ಬಾಲಕ ಮದನ ಕೇಕೆಹಾಕುತ್ತಾ ಓಡಿಬರುತ್ತಾರೆ. ತನ್ನನ್ನು ತಬ್ಬಿದ ಮಗಳನ್ನೊಂದು ಕೈಯಲ್ಲಿಯೂ ಮಗನನ್ನು ಇನೊಂದು ಕೈಯಲ್ಲಿಯೂ ಹಿಡಿದುಕೊಂಡು]
ಏನಿನಿತು ಹಿಗ್ಗು ನಿಮ್ಮಿಬ್ಬರಿಗೆ?

ವಿಷಯೆ: – ಅಪ್ಪಯ್ಯ, ಅ…. ಅ….ಅಣ್ಣಯ್ಯ ಜಾರಿ ನೀರಿಗೆ ಬಿದ್ದು ಎದ್ದೋಡಿ ಬಂದಿಹನು

ದುಷ್ಟಬುದ್ಧಿ:(ಒದ್ದೆಯಾದ ಮದನನಿಗೆ) ಅಯ್ಯಯೊ ಏನಿದೀ ಒದ್ದೆ! ನಾ ಗಮನಿಸಲೆ ಇಲ್ಲ.
ಇಸ್ಸಿ ದೂರ ನಿಲ್ಲು! (ಅರ್ಧಪರಿಹಾಸ್ಯದಿಂದ ಮದನನನ್ನು ದೂರ ತಳ್ಳಿ)

ಮದನ:(ತಳ್ಳುತ್ತಿದ್ದುದನ್ನು ಲೆಕ್ಕಿಸದೆ ತಂದೆಯ ಬಳಿಗೆ ಒತ್ತಿಬಂದು)
ಅಪ್ಪಯ್ಯ ಈ ತಂಗಿ ಮರವೇರಿದಳು!

ದುಷ್ಟಬುದ್ಧಿ: – ಹೌದೆ? ಅಯ್ಯೊ ಗಂಡುಬೀರಿ!

ವಿಷಯೆ: – ಮತ್ತೆ? ಅಣ್ಣಯ್ಯ ಮೊಟ್ಟೆ ಏಕೆ ತೋರಿಸಲಿಲ್ಲ?
ಅದಕ್ಕೇ ಹತ್ತಿದೆ! ಹತ್ತಿ ನಾನೇ ನೋಡಿದೆ, ಅಪ್ಪಯ್ಯ!

ದುಷ್ಟಬುದ್ಧಿ: – ಏನು ಮೊಟ್ಟೆಯೊ, ಮದನ?

ಮದನ: – ಹಿತ್ತಲು ಕಡೆಯ ಮಾವಿನಮರದಲ್ಲಿ
ಪಿಕಳಾರವೊಂದು ಗೂಡು ಕಟ್ಟಿದೆ, ಅಪ್ಪಯ್ಯ.
ನಾ ಹತ್ತಿ ಅದನು ನೋಡಿದೆ, ಮೂರು ಮೊಟ್ಟೆ!…
ಇವಳು ಅವನ್ನೆತ್ತಿ ತೋರಿಸು ಎಂದಳಲ್ಲ, ಅಪ್ಪಯ್ಯ?
ನಾವು ಮನುಷ್ಯರು ಮುಟ್ಟಿದರೆ ಹಕ್ಕಿ
ಕಾವು ಕೂರುವುದಿಲ್ಲವಂತೆ! ಬಿಟ್ಟು ಓಡುವುದಂತೆ,
ಮೈಲಿಗೆ ಎಂದು! ನಾನು ಮುಟ್ಟುವುದಿಲ್ಲ
ಎಂದಿಳಿದುಬಿಟ್ಟೆ…. ಆಮೇಲೆ ಇವಳೆ ಹತ್ತುವುದೆ!

ವಿಷಯೆ: – ನಾನೂ ನೋಡಿಯೆಬಿಟ್ಟೆ, ಅಪ್ಪಯ್ಯ.
ಏನು ಮುದ್ದಾಗಿವೆ! ನೀಲಿ ಚುಕ್ಕಿಯಮೊಟ್ಟೆ,
ಬೆಳ್ಳಗಿವೆ, ಮೂರು!… ನೀನೂ ನೋಡಪ್ಪಯ್ಯಾ!
ಅಷ್ಟೇನೂ ಎತ್ತರವಿಲ್ಲ; ಸುಲಭವೆ ಹತ್ತಿ ಕಾಣಲಹುದಪ್ಪಯ್ಯ!
(ದುಷ್ಟಬದ್ಧಿ ಗಟ್ಟಿಯಾಗಿ ನಗುತ್ತಾನೆ.)

ಮದನ: – ಅಮ್ಮ ಬಂದಳು ಅಮ್ಮ!
(ದುಷ್ಟಬುದ್ಧಿಯ ಹೆಂಡತಿ ತಾರಕಾಕ್ಷಿ ಬರುತ್ತಾಳೆ.)

ತಾರಕಾಕ್ಷಿ: – ಇದೇನು ತುಂಬ ಗದ್ದಲವಾಗುತಿಹುದಲ್ಲ?
ಇಷ್ಟೊಂದು ಅಟ್ಟಹಾಸ ತಂದೆಮಕ್ಕಳಿಗೆ!

ದುಷ್ಟಬುದ್ಧಿ: – ನಿನ್ನ ಮಗಳ ಸಾಹಸವ ಕೇಳಿದೆಯಾ?
ಹಕ್ಕಿಮೊಟ್ಟೆಯ ಕಂಡಳಂತೆ, ಮಾಮರವೇರಿ!
ನನ್ನನೂ ಹತ್ತಿನೋಡು ಎನುತಿಹಳು, ಈ
ಗಂಡುಬೀರಿ. (ಎಂದು ಮುದ್ದಿಸುತ್ತಾನೆ.)

ತಾರಕಾಕ್ಷಿ: – ಮರವನೇರುವುದೊಂದೆ ಅಲ್ಲ ಅವಳ ಸಾಸ.
ಕೊಡುಗೈಯ ಕರ್ಣನನೆ ಮೀರಿಹಳು ದಾನದಲಿ
ನಮ್ಮ ವಿಷಯೆ: ಇಂದೊಂದು ರನ್ನದಲರನೆ
ದಾರಿಯಲಿ ಆರಿಗೋ ಕೊಟ್ಟು ಬಂದಿಹಳು.

ವಿಷಯೆ: – ಆರಿಗಲ್ತಪ್ಪಯ್ಯ, ಆತನಿಗೆ! ಆ ಚೆಲ್ವನಿಗೆ!
ನೀ ಕರೆದು ದಾರಿಯಲಿ ಮಾತನಾಡಿಸಿದೆಯಲ್ಲಾ
ಆತನಿಗೆ (ದುಷ್ಟಬುದ್ಧಿಯ ಮುಖಭಂಗಿ ಸಂಪೂರ್ಣ ಬದಲಾಯಿಸುತ್ತದೆ. ಮಕ್ಕಳಿಬ್ಬರೂ ಸರಿದು ತಾಯೆಡೆಗೆ ಹೋಗುತ್ತಾರೆ. ದುಷ್ಟಬುದ್ಧಿ ಬದ್ಧಭ್ರುಕುಟಿಯಾಗಿ ಅರೆ ಎದ್ದು ಮತ್ತೆ ಕುಳಿತುಕೊಳ್ಳುತ್ತಾನೆ. ತಾಯಿ ಸನ್ನೆಮಾಡಿ ಮಕ್ಕಳಿಬ್ಬರನ್ನೂ ಕಳುಹುತ್ತಾಳೆ.)

ತಾರಕಾಕ್ಷಿ: – ಏನು ತೆಕ್ಕನೆ ಚಿಂತಾಗ್ರಸ್ತರಾದಿರಿ?

ದುಷ್ಟಬುದ್ಧಿ:(ಉಗ್ರಧ್ವನಿಯಲ್ಲಿ) ಕೇಳಿದೆಯ, ತಾರಾ, ಗಾಲವ ಪುರೋಹಿತನು
ಪೇಳ್ದುದನು? ಬೀದಿಯಲಿ ಸಂಚರಿಪ ದಿಕ್ಕಿಲ್ಲದಾ
ಪರದೇಶಿ ನಮ್ಮ ನಾಡಿಗೆ ಅರಸನಹನಂತೆ!

ತಾರಕಾಕ್ಷಿ: – ಗಾಲವ ಪುರೋಹಿತರು ಕಟ್ಟುಕತೆಗಳ ಕಟ್ಟಿ,
ತಮ್ಮ ಕಲ್ಪನೆಯ ಕನಸನೆ ನನಸಿನ ನನ್ನಿ
ಎಂಬಂತೆ ಏನೇನೊ ಕಣಿವೇಳುತಿಹುದವರ
ಚಾಳಿ. ನಾವದಕ್ಕಿನಿತು ಚಿಂತಿಸಲೇಕೆ?
ಮೊನ್ನೆ ವಿಷಯೆಯ ಕುರಿತು, ಮದನನಂ ಕುರಿತು,
ನನ್ನ ನಿಮ್ಮನು ಕುರಿತು ಏನೇನೊ ಕಣಿ ಹೇಳಿದರು….

ದುಷ್ಟಬುದ್ಧಿ: – ವಿಪ್ರರೆಂದಾ ಮಾತು ತಪ್ಪುವುದೆ ಹೇಳು?
ನೀನು ಭಾವಿಸುವನಿತು ಗಾಲವನು ಪ್ರಾಕೃತನೆ?

ತಾರಕಾಕ್ಷಿ: – ಅವರವರ ಹಣೆಬರೆಹದಂತಾದರೇನೆಮಗೆ?
ಬಿದಿಯ ತಿದ್ದಲು ನಾವು ಗೆಯ್ವಾ ಪ್ರಯತ್ನವೇ
ತಳ್ಳುವುದು ನಮ್ಮನಾ ಬಿದಿಯ ಒಡ್ಡಿದ ಬಲೆಗೆ!

ದುಷ್ಟಬುದ್ಧಿ: – ನೀನು ಆಲೋಚಿಸದೆ ಆಡುತಿಹೆ. ಬಹುದೂರ
ಇಹುದೆನ್ನ ದೃಷ್ಟಿ. ಹೆಂಗಸು ನೀನು. ನಿನಗೇನು
ಗೊತ್ತು? ಈ ಕುಂತಳೇಂದ್ರಂಗೆ ಸುತರಿಲ್ಲ.
ಅರಸುಕುವರಿಯನ್ನೆಮ್ಮ ಮದನಂಗೆ ತಂದು,
ನಮ್ಮ ಸಂತತಿಗರಸುತನವಪ್ಪುದೆನ್ನಾಸೆ.
ನನ್ನ ನಿನ್ನೊಳಗಿರಲಿ; ಬಯಲಾಗದಿರಲಿ ಇದು….

ತಾರಕಾಕ್ಷಿ: – ನಿಮ್ಮಾಸೆಯನ್ನೆ ಗಾಲವ ಪುರೋಹಿತರೂ
ನನಗೆ ಕಣಿವೇಳ್ದರೈಸೆ. ನಮ್ಮ ಸಂತಾನಕ್ಕೆ
ಇರ್ಪುದೆಂದರ್ ಕುಂತಳ ಕಿರೀಟಯೋಗಂ!

ದುಷ್ಟಬುದ್ಧಿ: – ಅವನ ಕಣಿಗೆರಡು ನಾಲಗೆ! ನನ್ನೊಡನೆ ಬೇರೆ
ನುಡಿದನಲಾ? ಆ ನಾಡಾಡಿ ಬೀದಿಬಾಲಕನೆಮ್ಮ
ನಾಡಿಂಗೆ ದೊರೆಯಪ್ಪನೆಂದು?…. ಏನಾದರಕ್ಕೆ,
ದೈವಚಿತ್ತಂ; ಪುರುಷಪ್ರಯತ್ನಮಂ ಮಾಳ್ಪೆನಾನ್!
ನಿನಗೊರೆದ ಗಾಲವನ ನುಡಿ ನನ್ನಿಯಪ್ಪಂತೆ,
ನನಗೊರೆದವನ ನುಡಿಯ ವಿಘ್ನಮಂ ಪರಿಹರಿಸಿ,
ನಮ್ಮ ಸಯ್ಪಿನ ಬಿದಿಯ ನಡೆಗೆ ತೊಡರೊದಗದೊಲ್
ಸರ್ವಮಂ ಪುರುಷಪ್ರಯತ್ನಮಂ ಮಾಳ್ಪೆನಾನ್!
(ತಟಕ್ಕನೆ ನಿಂತು)
ಮಾಳ್ಪ ಕಜ್ಜಂ ಬೆಟ್ಟತಿಹುದೆನಗೆ, ನೀಂ ಪೊರಡು.
(ತಾರಕಾಕ್ಷಿ ಹೊರಡುತ್ತಾಳೆ)
ಚೇಳು ಮರಿಯಾದೊಡೇನ್? ಪುಲಿ ಪಸುಳೆಯಾದೊಡೇನ್?
ಬೆಳೆವ ಮುಳ್ಳನು ಮೊಳೆಯುವಾಗಲೆ ಮುರಿಯುವುದು
ಮತಿವಂತರಿಗೆ ದಾರಿ; ಕೆಮ್ಮನಿದ್ದರೆ ಕೇಡು
ಮುಂದೆಮಗೆ ಕಟ್ಟಿಟ್ಟ ಬುರ್ತ್ತಿ. (ಕಿಂಕರನು ಬೀಷಣ, ಕಾಳ , ಮಾರ ಮೂವರು ರಕ್ತ ಸಿಕ್ತ ಚಂಡಾಲರನ್ನು ಕರೆತರುತ್ತಾನೆ.)
ಏಕಿನಿತು ತಳುವಿದಿರಿ?
ನೆತ್ತರಿನ ಕಲೆ ಇದೇನ್ ನಿಮ್ಮ ಮೆಯ್ ಕೈಗಳಲಿ?

ಭೀಷಣ: – ಸೆರೆದಿಡಿದ ಬೇಹುಗಾರನನೀಗಳೆಯ ಕೊಂದು
ಬಂದಿಹೆವು, ಜೀಯ. ತೊಳೆಯಲೂ ಸಮಯವಿರಲಿಲ್ಲ.
ಇನ್ನಾವುದಾಜ್ಞೆ?  

ದುಷ್ಟಬುದ್ಧಿ:(ಕಿಂಕರನಿಗೆ) ನೀನಾಚೆಯಿರು. (ಅವನು ಹೋಗುತ್ತಾನೆ.)
ಬೀಷಣಾ, ಬಾ ಬಳಿಗೆ ಇಂದೊಂದು ಕೊಲೆಯಿಹುದು.
ಆಯಸದ ಕೊಲೆಯಲ್ಲ. ಅದರೂ ಮಹತ್ತಿನದು.
ರಾಜ್ಯವನೆ ಆಕ್ರಮಿಸೆ ಸಂಚುಹೂಡಿಹನವನು;
ಬಾಲರೂಪದೊಳಿಹನು ಆ ವಿಧಿಯ ವಿದ್ರೋಹಿ.

ಭೀಷಣ: – ಬೆಸಸಿದೊಡೆ ಕಾರ್ಯ ಕೈಗೂಡುವುದು. ಜೀಯ.
ಆರವನು? ಎಲ್ಲಿಹನು?

ದುಷ್ಟಬುದ್ಧಿ: –  (ಗಟ್ಟಿಪಿಸುದನಿಯಲ್ಲಿ) ಎಚ್ಚರಿಕೆ! ಪತ್ತನದ
ಜನದ ಚಿತ್ತವನೆಲ್ಲ ಸೂರೆಗೊಂಡಿಹನವನು.
ಮನೆಮನೆಯ ಮುದ್ದಾಗಿ ಬೆಳೆದಿಹನು, ಪರದೇಶಿ
ತಾನಾದೊಡಂ, ನೀಂ ಮಾಳ್ಪುದೆಲ್ಲಂ ಮಹಾ
ಗೋಪ್ಯಮಾಗಿರ್ಕೆ. ಏನಾದನೆತ್ತವೋದನ್
ಎಂದಾರುಮರಿಯದಿರ್ಕೆ. ತಂದೆ ತಾಯಿಲ್ಲದ
ಅನಾಥನ್ , ಅಜ್ಜಿಯೊಡನಿಹನಂತೆ, ಆ ಪಾಳ್ಗುಡಿಯ
ಬಳಿಯ ಪುಳ್ಗುಡಿಸಲಲ್ಲಿ. ನೀವವನ ನೆಲೆಯರಿತು,
ಈ ಇರುಳೆ, ಆರುಮರಿಯದಂತೆ, ಮುದುಕಿಯಂ
ಕೊಂದು, ಕಾನನಾಂತರದೊಳಾ ತರಳನಂ
ಸಂಹರಿಸಿ, ಕುರುಪು ತಂದೆನಗೆ ತೋರವೇಳ್ಕುಂ,
ತಿಳಿಯಿತೇ?

ಭೀಷಣ: – ಕುಂದಿಲ್ಲದಂತೆ ನಡೆಯುವೆವು, ಜೀಯ.  

ದುಷ್ಟಬುದ್ಧಿ: – ಅರುಮರಿಯದಂತೆ!…. ತರಳನಂದವ ಕಂಡು
ಎದೆಗರಗದಿರಿ!

ಭೀಷಣ: (ವಿಕಟನಗೆ ನಕ್ಕು)  ಎದೆಗರಗುವುದೆ, ಜೀಯ?
ಅನಿತು ಹೇಡಿಗಳಲ್ಲ ನಾವು.

ದುಷ್ಟಬುದ್ಧಿ: – ಬಾಲರೋದನಕೆ
ಮರುಳಾಗಬೇಡಿ.

ಭೀಷಣ: –  ರೋದನವ ಕೇಳಿಕೇಳಿ
ನಮ್ಮ ಕಿವಿ ಕಿವುಡೆದ್ದುವೊಗಿವೆ, ಜೀಯ.

ದುಷ್ಟಬುದ್ಧಿ: – ಕೊಳ್ಳಿ ಮುಂಗಡವಿದನು. ಕೊಲೆಗೈದು
ಕುರುಪು ತಂದೆನಗೆ ತೋರ್ದಾಮೇಲೆ
ಬಹುಮಾನವಿದೆ ನಿಮಗೆ ಇದಕಿಂ ಮಿಗಿಲ್.
ಮತ್ತೆಲ್ಲಿಯಾದೊಡಂ ತಪ್ಪಿನಡೆದಿರೊ?… ನಿಮಗೆ
ಕಾದಿಹುದು ನರಕಕಂಪನಕಾರಿ ಘೋರಶಿಕ್ಷೆ!
ಸಾವಲ್ಲ , ತಿಳಿಯಿತೆ? ಘೋರಶಿಕ್ಷೆ!

[ಮೂವರಿಗೂ ಬೆಲೆಯ ಹೊನ್ನೀಯುತ್ತಾನೆ. ಅವರು ಕಣ್ಣರಳಿಸಿ, ಹಿಗ್ಗಿ, ನೆಲಮುಟ್ಟಿ ಮಣಿದು ಹೋಗುತ್ತಾರೆ. ಅವರು ಹೋಗುವುದನ್ನ ತುಟಿಗಚ್ಚಿ, ಮುಖಸುಕ್ಕಿ ನೋಡುತ್ತಾ ನಿಲ್ಲುತ್ತಾನೆ.]

ಪರದೆ ಬೀಳುತ್ತದೆ.

*

ದೃಶ್ಯ

[ಕುಂತಳನಗರದ  ಒಂದು ಬೀದಿಯ ಮೂಲೆಯಲ್ಲಿ ಒಂದು ಮುರುಕಲು ಗುಡಿಸಲು. ಮುದುಕಿಯೊಬ್ಬಳು ನರಳುತ್ತಾ ಹಾಸಗೆಯಮೇಲೆ ಕುಳಿತಿದ್ದಾಳೆ. ಅವಳ ಬಳಿ ಹೆಂಗಸೊಬ್ಬಳು ಕುಳಿತಿದ್ದಾಳೆ.]

ಹೆಂಗಸು: – ಆಮೇಲೆ?

ಮುದುಕಿ: – ಅರಿನೃಪರು ಕೇರಳವ ಮುತ್ತಿದರು. ದೊರೆ ರಣದಿ
ಕಾದಾಡಿ ಮಿತ್ತುವಿಗೆ ತುತ್ತಾದ. ಅವನ ಪತಿವ್ರತೆ,
ರಾಣಿ, ಈ ಬಾಲಕನ ತಾಯಿ, ಸಹಗಮಿಸಿದಳು.
ಹಗೆಯವರು ಆರಸುಕುವರನ ಕೊಲ್ಲಲೆಂದರಸಿದರು;
ದೂತರನಟ್ಟಿ ಎಲ್ಲಿಲ್ಲಿಯುಂ ಸೋದಿಸಿದರು.
ನಾನು ಮೊದಲೆಯೆ ಅರಿತು, ಬಾಲಕನ ಬೈತಿಟ್ಟ
ತಾವಿಂದೆ, ಕತ್ತಲಲಿ ತೊಟ್ಟಿಲನು ಹೊತ್ತು,
ಅವರ ಕಣ್ಣಿಗೆ ಬೀಳದಂತೆ, ಕಾಡುಮಲೆಗಳಲಿ
ಅಲೆದಲೆದು, ಅನ್ನವಿಲ್ಲದೆ ಹಗಲಿರುಳು ನಡೆದು,
ತೊಳಲಿ, ಕಡೆಗೀ ನಗರಿಗೈತಂದೆ. ಇಲ್ಲಿ ದಿನವೂ
ತಿರಿದು ಸಲಹಿದೆ ಕಂದನಂ.(ಕಣ್ಣೊರಸಿಕೊಳ್ಳುತ್ತಾಳೆ.)

ಹೆಂಗಸು: – ಅಳುವುದೇಕಮ್ಮಾ?
ಶ್ರೀಹರಿಯೆ ಕಾಯುವನು.

ಮುದುಕಿ: – ನನಗಾತನೆಯೆ ಕಣ್ಣು;
ನನಗಾತನೆಯೆ ಹೃದಯ; ನನಗಾತನೇ ಜೀವ!
ನಾನಿನ್ನು ಹೋಗುವೆನು. ಇನ್ನವನ ರಕ್ಷಣೆಯ
ಬಾರ ಇದುವರೆಗೆ ಸಲಹಿದ ಶ್ರೀಹರಿಯ ಮೇಲೆ!
(ತಡೆಯಾಲಾರದೆ ಬಿಕ್ಕಿ ಬಿಕ್ಕಿ ಅಳುತ್ತಾಳೆ.)

ಹೆಂಗಸು: (ಮುದುಕಿಯ ತಲೆ ಎಳವಿ ಸಂತೈಸುತ್ತಾ)
ಬಾಲಕನು ಹರಿಭಕ್ತನೆಂದೊರೆದೆ. ತಾಯೀ,
ಭಕ್ತವತ್ಸಲನಲ್ತೆ ಶ್ರೀಹರಿ? ಭಯವೇಕೆ?

ಮುದುಕಿ: –  (ತಟಕ್ಕನೆ ಪ್ರಶಾಂತಲಾದಂತೆ ಹೆಂಗಸನ್ನೆ ನೋಡುತ್ತಾ)
ಆರಮ್ಮಾ ನೀನು? ನಿನ್ನ ಕೈ ಸೋಂಕಿಂದೆ
ನನ್ನ ಅಳಲಿಕೆಯೆಲ್ಲ ನೀಗಿದಂತಾಯ್ತಲಾ!

ಹೆಂಗಸು: (ನಸುನಕ್ಕು) ನಾನಿಲ್ಲೆ ಗುಡಿಯ ಗುಡಿಸುವ ದಾಸಿ.
ನೀನಿಲ್ಲಿಗೈತಂದ ದಿನದಿಂದ ನಿನ್ನನಾ
ಗುಡಿಯೊಡೆಯ, ನೀನರಿಯದಂತೆ, ರಕ್ಷಿಸುತಿಹನು
ನಿಮ್ಮಿರ್ವರನು. ಅವನೆ ಕಳುಹಿದನಿಂದು ನನ್ನನ್
ನಿನ್ನೆಡೆಗೆ. ಎದೆಗೆಡದಿರಜ್ಜೀ. ಭಗವಂತನಿಗೆ
ಸೇರಿಹುದು ನಿನ್ನ ಕಂದನ ಕಾಪು.

ಮುದುಕಿ: – ತಂಗೀ,
ಭಗವಂತನಿಲ್ಲದಿರೆ ನಾನೇಸರವಳು? ಅವನೆ
ಕಾಪಾಡಿಹನು ದಿಟ: ನಾನೇಂ ಬರಿ ನಿಮಿತ್ತ!
ಎಷ್ಟೊ ಕಷ್ಟವ ಸಹಿಸಿ ಪಾಲಿಸಿದೆ ಮಗುವ.
ಇಡೆ ತೊಟ್ಟಿಲಿಲ್ಲ; ಆಡಿಸುವರಿಲ್ಲ; ಮನೆಯಿಲ್ಲ;
ಉಡುಗೆ ತೊಡುಗೆಗಳಿಲ್ಲ; ಎರೆಯೆ ನೀರಿಲ್ಲ;
ಕುಡಿಸೆ ಹಾಲಿಲ್ಲ; ಎಣ್ಣೆ ಬೆಣ್ಣೆಗಳಿಲ್ಲ; ಮುದ್ದಿಸಲು
ತಾಯ್ತಂದೆಯರುಮಿಲ್ಲ. ಅದನ್ನೆಲ್ಲ ಕಂಡೆನ್ನ
ಕರುಳುರಿದು, ಎದೆ ಬೇಯುತ್ತಿತ್ತು. ಆದರೂ
ಮೊಳೆವಲ್ಲು, ಉಗುವ ಜೊಲ್ಲು, ದಟ್ಟಿತಡಿ, ತೊದಲನುಡಿ,
ತೊಳತೊಳಗುತಿಹ ಸೊಬಗು, ಮೆರೆವ ನಗುಮೊಗದ ಬಗೆ,
ಪೊಳೆವ ಕಣ್, ನುಣ್ ಕದಪು, ಚೆಲ್ವ ಪಣೆ, ಇವೆಲ್ಲಮಂ
ನೋಡಿ, ಬಾಲಕನ ಲೀಲೆಯಂ ಕಂಡು ಹಿಗ್ಗಿ
ಸುಖಿಯಾದೆ…. ಶ್ರೀಹರಿ! ಗೋವಿಂದ! ಭಕ್ತವತ್ಸಲ!
ದೀನಬಂಧು! ಕಂದನಂ ಕಾಪಾಡು. ತೆರಳುವೆನು
ನಿನ್ನ ತೊಡೆಮೇಲಿಟ್ಟು!…. ತಂಗೀ, ಬಾಯಾರುತಿದೆ.
(ಹೆಂಗಸು ನೀರುಕುಡಿಸುತ್ತಾಳೆ. ಮುದುಕಿ ನಿಡುಸುಯ್ದು)
ಅಯ್ಯೊ, ನನ್ನ ಕಂದಮ್ಮನೆಲ್ಲಿ?

ಹೆಂಗಸು: – ಹೊರಗೆಲ್ಲಿಯೊ ಆಡಲು ಹೋಗಿಹನು….
ಹುಡುಕಿ ಕಳುಹಿಸುವೆ. (ಎದ್ದು ನಿಲ್ಲುತ್ತಾಳೆ.)
ಅಜ್ಜೀ, ಭಗವತ್ ಕೃಪೆ ಸುಖದ ಗುರಿಗೆಮ್ಮನೊಯ್ಯಲ್
ಒಮ್ಮೊಮ್ಮೆ ನಿರ್ಮಿಪುದು ಕ್ಲೇಶಕಷ್ಟದ ಸೇತುವಂ.
ಧೈರ್ಯಗೆಡದಿರು, ತಾಯಿ. ಸಲ್ಲದಿಲ್ಲಿ ನಿರಾಶೆ.
ಕಾಣ್ ಕೃಪಾನಿಧಿಯ ಕೈಯನೀ ದುರ್ವಿಧಿಯೊಳುಂ.
(ಹೆಂಗಸಿನ ಮುಖದಮೇಲೆ ಜ್ಯೋತಿಯಾಡಿದಂತಾಗಿ ಅವಳ ದೇವತಾರೂಪದ ಛಾಯೆ ಕಾಣಿಸಿಕೊಳ್ಳುತ್ತದೆ. ಮುದುಕಿ ಬೆರಗಾಗಿ ಕೈಮುಗಿಯುವಾಗಲೆ ಆಕೆ ಹೋಗುತ್ತಾಳೆ.]

ಮುದುಕಿ: (ಸ್ವಗತ) ನೀನ್ ಬಣ್ಣಿಸಿದ ಭಗವಂತನಾ ಕೃಪೆಯೆ
ನೀನೆಂದು ತೋರುತಿದೆ. ತಂಗಿ. ಇಲ್ಲದಿರೆ
ನನಗಿದೇನೀ ಶಾಂತಿ, ನನ್ನ ಮುದ್ದಿನ ಕಂದನಂ
ತೊರೆದಗಲುವೀ ಕಡೆಗಾಲದೊಳ್?…. ಕಂದಾ,
ನನ್ನ ಜೀವಾನಂದಾ, ಎಲ್ಲಿರುವೆ ಬಾ ಬೇಗ,
ನಿನ್ನ ಸಿರಿಮೊಗವನೀಸುತೆ ಕಣ್ ಮುಚ್ಚುವೆ.
(ಚಂದ್ರಹಾಸನು ಓಡಿಬರುತ್ತಾನೆ.)
ಬಂದೆಯಾ, ಕಂದ, ಸುಖವಾಗಿ ಆಡಿದೆಯಾ?

ಚಂದ್ರಹಾಸ: – ಅಜ್ಜೀ, ನೀನೆನ್ನ ಕೂಗಿದೆಯಾ?

ಮುದುಕಿ: – ನಿನಗಾರು ಹೇಳಿದರು, ಮಗೂ?

ಚಂದ್ರಹಾಸ: – ಅರಿಲ್ಲ, ಅಜ್ಜಿ ಗಾಳಿ ಮರದಲಿ ಸುಳಿಯೆ
ಕೋಗಿಲೆಯ ದನಿಯಲ್ಲಿ ನೀನೆನ್ನ ಕರೆದಂತೆ
ಆಯ್ತು. ತೊರೆಯ ಎಡೆ ನಾ ನಿಂತು
ಸುಳಿಸುಳಿದು ಸುತ್ತಿ, ನೆಗೆದು, ಕಲ್ಗಳನೊತ್ತಿ,
ಮೊರೆವ ತೆರೆಗಳನು ನೋಡುತಲಿದ್ದೆ.
ನೀನೆನ್ನ ಕರೆದವೋಲಾಯ್ತು. ಓಡುತ ಬಂದೆ.

ಮುದುಕಿ: – ಕಂದ, ಹತ್ತಿರಕೆ ಬಾ, ಕುಳಿತುಕೊ.
(ಚಂದ್ರಹಾಸನು ಹಾಸಗೆಯಮೇಲೆ ಮುದುಕಿಗೆ ಒತ್ತಿ ಕುಳಿತುಕೊಳ್ಳುತ್ತಾನೆ. ಮುದುಕಿ ಅವನ ಕೆನ್ನೆಗಲ್ಲಗಳನ್ನು ಸವರುತ್ತಾ)
ಸದಾ ಶ್ರೀಹರಿ ನಿನಗೆ ಕೃಪೆಮಾಡಲಿ! (ಆಶೀರ್ವದಿಸುತ್ತಾಳೆ.)

ಚಂದ್ರಹಾಸ: (ತೋರಿಸುತ್ತಾ) ನೋಡಜ್ಜೀ, ಬಟ್ಟೆಯೆಡೆ ತೊರೆಯ ಮಳಲಲ್ಲಿ ಆಟವಾಡುತಿರೆ
ಬಟ್ಟಗಲ್ಲೊಂದೆನಗೆ ದೊರೆಯಿತು.
ಅಜ್ಜೀ, ಸೋಜಿಗದ ಕಲ್ಲು; ರಮಣೀಯವಾಗಿದೆ.
ಕತ್ತಲೆಯ ಕರಗಿಸಿ ಎರಕ ಹೊಯ್ದಂತೆ ಮಿರುಗುತಿದೆ.

ಮುದುಕಿ: (ಅದನ್ನು ತೆಗೆದುಕೊಂಡು ನೋಡಿ ಹಣೆಗೆ ಮುಟ್ಟಿಸಿಕೊಂಡು)
ಮಂಗಳದ ಸೂಚನೆಯ ಹರಳು, ಮಗೂ.
ನೀನಿದನು ಅಗಲದೆ ಆವಗಂ ಪೂಜೆಗೆಯ್.
ಮುರಹರನ ಬೆಂಬಲ, ಕೃಪೆ, ಒಲವು
ಎಲ್ಲ ದೊರಕುವುದು ನಿನಗೆ….
[ಚಂದ್ರಹಾಸನು ಅದನ್ನು ತೆಗೆದಿಟ್ಟುಕೊಂಡು ಮತ್ತೊಂದನ್ನು ತೆಗೆದು ತೋರುತ್ತಾ]

ಚಂದ್ರಹಾಸ: –  ಇದು ರನ್ನದಲರು. ಈ ತೆರನ ನೋಡಿಹೆಯಾ, ಅಜ್ಜೀ?

ಮುದುಕಿ: (ನೋಡಿ ಬೆರಗುವಟ್ಟು) ಎಲ್ಲಿ ಸಿಕ್ಕಿತು, ಕಂದ, ಈ ಅರಸೊಡವೆ?

ಚಂದ್ರಹಾಸ: – ಬೀದಿಯೆಡೆ ಮಳಲ ದಿಣ್ಣೆಯ ಮೇಲೆ
ನಾನು ಗೆಳೆಯರ ಕೂಡಿ ಆಡುತಿರೆ,
ಮಂತ್ರಿಯ ಮಗಳಂತೆ ಅವಳು, ಪುಟ್ಟಚೆಲುವೆ,
ತನ್ನ ತಂದೆಯ ಹಿಂದೆ ಅಣ್ಣನೊಡಗೂಡಿ
ಹೋಗುತ್ತಿದ್ದವಳು ನನ್ನೊಡನೆ ಮಾತಾಡಿ
ಕೊಟ್ಟಳಜ್ಜೀ ಇದನು… (ಮುದುಕಿ ಅನ್ಯಮನಸ್ಕಳಾಗುತ್ತಾಳೆ.)

ಮುದುಕಿ: (ಸ್ವಗತ) ಇಂತಪ್ಪ ರನ್ನದೊಡವೆಯ ರಾಸಿಯೊಳೆ
ನೀ ಹುಟ್ಟಿ ಬಂದೆ… ಅರಿಯದೆಯೆ ಸುಖಿ ನೀನು;
ಅರಿತೆನಗೊ ಉರಿನೋವು… ಅರವಸಿರಿನಲಿ ಬಂದೂ
ಹೆರರ ಬಿಕ್ಕಿಗೆ ನೀನು ಕೈನೀಡುವಂತಾಯ್ತೆ?
[ಸುಯ್ದು ಕಂಬನಿಗರೆಯುತ್ತಾಳೆ.]

ಚಂದ್ರಹಾಸ: – ಏಕಳುವೆ, ಅಜ್ಜಿ?
ನಾನಿದನು ತೆಗೆದುಕೊಂಡುದು ತಪ್ಪೆ? ಮನ್ನಿಸಜ್ಜೀ!
ಅರಿಯದೆಯೆ ಮಾಡಿದೆನು; ಇನ್ನು ಮಾಡುವುದಿಲ್ಲ.
ನಿನಗೆ ನೋವಾಗುವುದನೆಂದಿಗೂ ನಾನೆಸಗೆ.

ಮುದುಕಿ: (ಮುದ್ದಿಸಿ ಸಂತೈಸುತ್ತ) ತಪ್ಪೇನು ಅದರಲ್ಲಿ? ತಪ್ಪಲ್ಲ, ಕಂದ.

ಚಂದ್ರಹಾಸ: – ಮತ್ತೆ? ನೀನಕೆ ಕಣ್ಣೀರ ಕರೆಯುತಿಹೆ?…
ಅಜ್ಜೀ, ನೀನು ಯಾವಾಗಲೂ ಕಣ್ಣೊರಸಿಕೊಳುತಿರುವೆ.
ಏತಕೋ ನಾನರಿಯೆ. ಎನಿತೆನಿತು ಕೇಳಿದರೂ
ನೀನು ಹೇಳುವುದಿಲ್ಲ… ಕಂಡಕಂಡವರೆಲ್ಲ,
ಅಜ್ಜೀ, ನನ್ನ ತಂದೆತಾಯ್ಗಳ ಹೆಸರ ಕೇಳುವರು.
ಇಂದು ಮಂತ್ರಿಯು ಕೂಡ ಕೇಳಿದನು.

ಮುದುಕಿ: –  ಏನೆಂದೆ?

ಚಂದ್ರಹಾಸ: – ನಾನರಿಯೆ ಎಂದೆ.

ಮುದುಕಿ: (ಸ್ವಗತ) ತಿಳಿಯದಿರೆ ಸುಖವಿರಲು ತಿಳಿವೆ ಸಂಕಟಕರ!
ತಿಳಿಸಿದರೆ, ಕತ್ತಲಲಿ ಮಿಂಚು ಹೊಳೆದಂತಾಗಿ,
ಬಟ್ಟೆಗೆಡುವುದು, ಕುರುಡು ದಟ್ಟೈಸಿ! ನಿನಗರುಹಿ
ನಿನ್ನ ಹಿಂದಣ ಸಿರಿಯ, ನಾನೇಕೆ ಕೊರಗಿಸಲಿ?
[ಚಂದ್ರಹಾಸನಿಗೆ ಬಹಿರಂಗವಾಗಿ]
ಕಂದಾ, ಶ್ರೀಹರಿಯೆ ನಿನಗೆ ತಂದೆ.
ನಿನ್ನನಾತನೆ ಕಾಯ್ದು ಸಲಹುವನು.
ಕಷ್ಟದಲಿ ಅವನ ಕರೆ; ಅವಗಂ ಮರೆಯದಿರು.
[ತುಂಬ ದಣಿದು ನಿಟ್ಟುಸಿರಿಡುತ್ತಾಳೆ. ಉಸಿರು ಕಟ್ಟಿತೊ ಎಂಬಂತೆ ಕೆಮ್ಮುತ್ತಾಳೆ. ತಡೆಯಲಾರದೆ ಹಾಸಗೆಗೊರಗುತ್ತಾಳೆ. ಚಂದ್ರಹಾಸನು ಹೆದರಿ  ಅಳುದನಿಯಿಂದ]

ಚಂದ್ರಹಾಸ: – ಅಜ್ಜೀ, ಅಜ್ಜೀ, ಏನಾಯ್ತು, ಅಜ್ಜಿ?
ಹಿಡಿದುಕೊಳ್ಳಲೆ ನಿನ್ನ? (ಎಂದು ಅವಳನ್ನು ಆತುಕೊಳ್ಳಲು
ಪ್ರಯತ್ನಿಸಿ ಸೋಲುತ್ತಾನೆ.)

ಮುದುಕಿ: (ತಡೆ ತಡೆದು ಮೆಲುದನಿಯಲ್ಲಿ) ಕಂದ, ನಾನು ಹೋಗುತ್ತೇನೆ.
ನನಗೆ ಕರೆ ಬಂದಿದೆ.

ಚಂದ್ರಹಾಸ: (ಶೋಕಿಸುತ್ತ) ಹೋಗಬೇಡ, ಅಜ್ಜೀ. ನಿನ್ನ ಮಾತನು
ಎಂದೂ ಮಿರುವುದಿಲ್ಲ.
[ಬಿಕ್ಕಿಬಿಕ್ಕಿ ಅಳುತ್ತಾನೆ.]

ಮುದುಕಿ: (ನಿದಾನವಾಗಿ) ಮಗೂ, ಆ ಗುಡಿಯ ಗುಡಿಸುವ ದಾಸಿಯಂತೆ; ಬಂದಿದ್ದಳಿಲ್ಲಿ. ಇನ್ನು ನಿನಗವಳೆ ಅಜ್ಜಿ. ಹೆದರದಿರು, ಕಂದ…. ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ! (ಸಾಯುತ್ತಾಳೆ.)

ಚಂದ್ರಹಾಸ: (ದಟ್ಟವಾಗಲು ಪ್ರಾರಂಭಿಸಿದ ಮುಂಗತ್ತಲೆಯಲ್ಲಿ ಅಜ್ಜಿಯ ನಿಶ್ಚಲ ಮುಖ ನೋಡಿ ಹೆದರಿ)
ಅಜ್ಜೀ, ಮಾತಾಡು. ಕತ್ತಲಾಗುತಿದೆ.
ನನಗೆ ಹೆದರಿಕೆ. ಹಣತೆ ಹೊತ್ತಿಸಲೇ?
ಎಸರಿಡಲು ಬೆಂಕಿ ಹೊತಿಸಲೇ?
ನೀರು ತರಬೇಕೇನು? ಹೇಳು, ಅಜ್ಜೀ ಅಜ್ಜೀ! (ಅಳುತ್ತಾ)
ಹೊರಗೆ ಯಾರೊ ಬಂದರು, ಅಜ್ಜೀ!
ಹೆಜ್ಜೆ ಸದ್ದಾಗುತಿದೆ! ಗದ್ದಲವಾಗುತಿದೆ!
[ಬೀಷಣ, ಕಾಳ, ಮಾರ ಮೂವರು ಚಂಡಾಲರು ಬರುತ್ತಾರೆ.]
ಅಜ್ಜೀ, ಬಂದರು, ಬಂದರು, ಬಂದರು! ಅಯ್ಯೊ!
[ಚಂದ್ರಹಾಸನು ಭಯಂಕರಾಕಾರರನ್ನು ನೋಡಿ ಹೆದರಿ ಕೂಗಿ ಅಜ್ಜಿಯ ಮೇಲೆ ಬಿದ್ದು ಅಪ್ಪಿ ಮೂರ್ಛೆಹೋಗುತ್ತಾನೆ.]

ಭೀಷಣ: – ಹುಡುಕಿ ಸಾಕಾಯ್ತು ಇವನಿಗಾಗಿ…. ಏನು ನೋಡುವೆ?
ಎತ್ತಿಕೊ, ಮಾರ.

ಮಾರ: – ಅಯ್ಯೊ ಈ ಮಗುವನ್ನೆ ನಾವು ಕೊಲೆಮಾಡುವುದು?

ಕಾಳ: – ಕೈಯುಗುರ ಕೆಲಸಕ್ಕೆ ಕೊಡಲಿ ತಂದಂತೆ!

ಮಾರ: (ಚಂದ್ರಹಾಸನನ್ನು ಎತ್ತಿಕೊಳ್ಳಲು ಎಳೆಯುತ್ತಾನೆ.)
ಬಿಗಿಯಾಗಿ ಹಿಡಿದಿದ್ದಾನೆ ಅಜ್ಜಿಯನ್ನು!
(ಬಲವಾಗಿ ಎಳೆದು ಹೆಗಲಮೇಲೆ ಹಾಕಿಕೊಳ್ಳುತ್ತಾನೆ.)

ಕಾಳ: – ನಮ್ಮ ನೋಡಿಯೆ ಜೀವ ಹಾರಿತೊ ಈ ಹುಡುಗನಿಗೆ?

ಭೀಷಣ: – ಏನು ಕಾಲ ಕಂಡಿದ್ದಾಳೊ ಈ ಮುದುಕಿ?
ಇನ್ನೂ ನಿದ್ದೆ ಮಾಡುತ್ತಿದ್ದಾಳಲ್ಲ! ಇರಿ ಅವಳೆದೆಗೆ, ಕಾಳ.
ಅವಳು ಬದುಕ್ಕಿದ್ದರೆ ಈ ಕಾರ್ಯ ಬಹಿರಂಗವಾದೀತು.
ಜನರಾರೂ ಅರಿಯದಿರಲೆಂದು ಮಂತ್ರಿಯ ಕಟ್ಟಾಣೆ.
(ಕಾಳ ಇರಿಯುತ್ತಾನೆ.)

ಮಾರ: – ಎಲ್ಲಿಗೊಯ್ಯುವುದಿವನ?

ಕಾಳ: – ವರ್ತಕನ ಕೊಲೆಮಾಡಿದಾ ಕಾಡಿಗೆ.

ಭೀಷಣ:– ಬೇಡ, ಸೈನ್ಯಾಧಿಕಾರಿಯನು ಕತ್ತರಿಸಿದಾ ದರಿಮಲೆಗೆ.
ದೂರವಾದರೂ ಗೋಪ್ಯ ರಕ್ಷಣೆಯಾಗಲಿ!

ಮಾರ:– ಮಲ್ಲಿಗೆಯ ಹೂ ಹಗುರ ಈ ಹಸುಳೆ. ದೂರ ಎಷ್ಟಾದರೇನು?
(ಗೂಬೆ ಕೂಗುತ್ತದೆ.)

ಕಾಳ: – ಏಕೊ ಗೂಬೆ ಕೂಗುವುದಿಲ್ಲ!

ಭೀಷಣ: – ಮತ್ತೇನು ಕೋಗಿಲೆ ಕೂಗಬೇಕ್ಕಿತ್ತೇನು, ನಿನ್ನ ಈ
ಶುಭಕಾರ್ಯಕೆ?…. ಬನ್ನಿ ಬೇಗ. (ಹೊರಡುತ್ತಾನೆ.)
[ಕಾಳ ಭೀಷಣನನ್ನು ಹಿಂಬಾಲಿಸುವ ಅವಸರದಲ್ಲಿ ಎಡವಿಬೀಳುತ್ತಾನೆ. ಅವನ ಕೈಗೆ ವಿಷಯೆಯಿತ್ತಿದ್ದ ರನ್ನದೊಡವೆ ತಗುಲಿ ಸಿಕ್ಕುತ್ತದೆ. ಅದನ್ನು ಮಾರನಿಗೆ ತೋರಿ]

ಕಾಳ: – ದಿಟಕ್ಕೂ ಶುಭಕಾರ್ಯವೆ ಕಣಾ!
(ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾನೆ. ಚಂದ್ರಹಾಸನನ್ನು ಎತ್ತಿಕೊಂಡು ಮಾರನೂ ಅವನ ಹಿಂದೆ ಕತ್ತಿಹಿಡಿದು ಕಾಳನೂ ಹೊರಡುತ್ತಾರೆ.)

ಪರದೆ ಬೀಳುತ್ತದೆ.

*