ದೃಶ್ಯ

[ಕುಂತಳನಗರಕ್ಕೆ ಅತಿದೂರದ ಗೊಂಡಾರಣ್ಯ. ಕಗ್ಗತ್ತಲು. ಚಂದ್ರಹಾಸ ನೆಲದ ಮೇಲೆ ಬಿದ್ದಿದ್ದಾನೆ. ಪಕ್ಕದಲ್ಲಿ ಮೂವರು ಚಂಡಾಲರು ನಿಂತಿದ್ದಾರೆ. ಒಬ್ಬನ ಕೈಲಿ ದೀವಿಗೆ, ಇನ್ನಿಬ್ಬರ ಕೈಲಿ ಕತ್ತಿ ಇವೆ.]

ಕಾಳ: – ನೀನು ನೋಡಿದೆಯೇನು, ಭೀಷಣ?

ಭೀಷಣ: – ಇಲ್ಲ, ನಾ ನೋಡಿಲಿಲ್ಲ.

ಕಾಳ: (ಮಾರನಿಗೆ) ನೀನು?

ಮಾರ: – ಏನೊ ಕಂಡ ಹಾಗಾಯ್ತು.

ಕಾಳ: – ನಾನು ದೀವಿಗೆ ಹಿಡಿದು ಮುಂದೆ ಬರುತಿದ್ದೆ.
ದೂರದಲಿ ದೀವಿಗೆಯ ಬೆಳಕಿನಲಿ,
ಒಂದು ಭಯಂಕರಾಕಾರ
ನಮ್ಮ ಮುಂದೆಯೆ ನಡೆದುಹೋದಂತೆ ಕಾಣಿಸಿತು.
ನಿಮಗೆ ತೋರಿಸಬೇಕು ಎನುವಷ್ಟರಲ್ಲಿ
ಮಾಯವಾಗುತಿತ್ತು;…. ಮತ್ತೆ ತೋರುತಿತ್ತು.

ಮಾರ: – ಎಂತಪ್ಪ ಆಕಾರ?

ಕಾಳ: – ಹೆಂಗಸಿನ ಆಕಾರ! ಮುಡಿ ಕೆದರಿಕೊಂಡಿತ್ತು.

ಭೀಷಣ: – ನಾ ಹಿಂದೆ ಬರುತಿದ್ದೆನಷ್ಟೆ?
ಈಗೊಮ್ಮೆ ಆಗೊಮ್ಮೆ ಏನೊ ಒಂದು
ಹಿಂದಿನಿಂದೆಳೆದ ಹಾಂಗಾಗುತಿತ್ತು!
ತಿರುಗಿ ನೋಡಿದಾಗ ಏನೂ ಕಾಣಿಸುತ್ತಿರಲಿಲ್ಲ!
ನನಗೆಂದೂ ಹೀಂಗಾಗಿರಲಿಲ್ಲ.
ನಿಮಗೇ ಗೊತ್ತು, ನಾನೇನು ದೆವ್ವಗಿವ್ವಕ್ಕೆ
ಹೆದರುವಂಥವನಲ್ಲ…. ಹೋಗಲಿ,
ಇನ್ನೆಮ್ಮ ಕೆಲಸ ಪೂರೈಸಲಿ.

ಚಂದ್ರಹಾಸ: (ಅರೆನಿದ್ದೆಯಲ್ಲಿ) ಅಜ್ಜೀ! ಅಜ್ಜೀ! (ನರಳುತ್ತಾನೆ.)

ಮಾರ: (ತನ್ನೊಳಗೆ) ನನ್ನ ಮಗನ ದನಿಯಂತೆ ಕೇಳಿ ಏಕೊ ಮನಸ್ಸು ಮರುಗುತ್ತದೆ.

ಕಾಳ: (ಮಾರನಿಗೆ) ನನಗೇಕೊ ಎದೆ ಕಿವುಚಿದಂತಾಗುತ್ತಿದೆ. ಹಿಂದೆಂದೂ ನನಗೆ ಹೀಂಗಾಗಿರಲಿಲ್ಲ.

ಭೀಷಣ: – ಏ ಮಾರ, ಎಚ್ಚರಾಗುವ ಮೊದಲೆ ಕೊಚ್ಚಿಬಿಡು.
ಪಾಪ, ಹಸುಳೆ ಹೆದರಿದರೆ… ನಮಗೆ… ಆಹಾ!
ಎದ್ದು ಕುಳಿತೆಬಿಟ್ಟನಲ್ಲಾ!

ಚಂದ್ರಹಾಸ: (ಕುಳಿತು, ಕಣ್ಣುಜ್ಜಿಕೊಂಡು, ಸುತ್ತಲೂ ನೋಡಿ, ಕಂಡು, ಹೆದರುಗಣ್ಣಾಗಿ)
ಅಜ್ಜೀ, ಅಜ್ಜೀ!
ನೀ ಹೇಳಿಕೊಂಟ್ಟಂತೆ ಶ್ರೀಹರಿಯ ನೆನೆಯುವೆನು,
ಬಾರಜ್ಜಿ! ಬಿಟ್ಟುಹೋಗದಿರೆನ್ನ.
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!

ಮಾರ: (ಇದ್ದಕ್ಕಿದ್ದಂತೆ ನೆಗೆದುಬಿದ್ದು)
ಯಾರೊ ಹೊಡೆದವರು ನನ್ನ ಬೆನ್ನಿಗೆ?

ಭೀಷಣ: – ನಿನಗೇನು ಮರುಳೊ? ಹದರಿ ಸಾಯುವೆಯಲ್ಲ!

ಮಾರ: – ನಿಜವಾಗಿಯೂ ಯಾರೊ ಹೊಡೆದ ಹಾಂಗಾಯ್ತು.

ಭೀಷಣ: – ಈಗಲ್ಲ; ಇವನ ಕೊಲ್ಲದೆ ಬಿಟ್ಟರೆ ಮುಂದೆ ಹಾಂಗಾಗುವುದು.

ಮಾರ: – ನಾನೊಲ್ಲೆ; ನನಗೇಕೊ ತೊಳ್ಳೆ ನಡುಗುತಿದೆ! ಯಾರು ಬೇಕಾದರೂ ಮಾಡಿ.

ಭೀಷಣ: – ಇಂದು ನೀನೆ ಮಾಡಬೇಕು, ನನ್ನಾಣೆ!

ಮಾರ: – ಕಾಳ ಮಾಡಲಿ.

ಕಾಳ: – ನಾನೊಲ್ಲೆ, ನೀನೆ ಮಾಡು.

ಭೀಷಣ: – ಇದೇನು ಹುಡುಗಾಟವೆಂದು ತಿಳಿದೆಯಾ? ರಾಜಾಜ್ಞೆ! ನನ್ನಾಜ್ಞೆಯಂತೆ ನೀ
ನಡೆಯದಿರೆ, ಇದೊ, ನಿನಗಿಲ್ಲಿಯೆ ಶಿಕ್ಷೆ.
(ಎಂದು ತನ್ನ ಕತ್ತಿಯನ್ನು ಮಾರನ ಕೊರಳಿಗೆತ್ತುತ್ತಾನೆ.)
ಕಡಿ, ಮಾರ! (ಮಾರ ವಿಧೇಯನಾಗಿ ಕತ್ತಿ ಎತ್ತುತ್ತಾನೆ.)

ಚಂದ್ರಹಾಸ: – ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!

ಮಾರ: (ಎತ್ತಿದ ಕತ್ತಿಯನ್ನು ಹಾಗೆಯೆ ಹಿಡಿದುಕೊಂಡು)
ಏನಿದು? ಕತ್ತಿ ಕೆಳಗಿಳಿಯುವುದೆ ಇಲ್ಲ!
ಯಾರೊ ಹಿಡಿದಂತಿದೆ!

ಭೀಷಣ: – ತಡವೇಕೆ? ಹೋಯ್, ಮಾರ, ಹೊಯ್!

ಮಾರ: – ನನ್ನಿಂದಾಗದು, ನನ್ನಿಂದಾಗದು (ಅಳುದನಿಯಿಂದ)
ಹಾಳುಮಂತ್ರಿಯ ಸೇವೆ ಸಾಕೆಂದಿಗೆ.

ಭೀಷಣ: (ಹುಬ್ಬುಗಂಟಿಕ್ಕಿ) ನಿನಗೆ ಕಾದಿದೆ, ಮಾರ, ಶಿಕ್ಷೆ.
(ಕಾಳನ ಕಡೆಗೆ ತಿರುಗಿ)
ಕಾಳ, ಕೊಡು ದೀವಿಗೆಯ ಮಾರನ ಕೈಗೆ.
ಹೊಯ್, ಬೇಗ; ಹೆದರದಿರ್.

ಮಾರ: (ದೀವಿಗೆ ತೆಗೆದುಕೊಳ್ಳುತ್ತಾ) ನನ್ನ ಮಗನ ನೆನಪಾಗುವುದೆನಗೆ.
(ಕಾಳ ಕತ್ತರಿಸಲೆಂದು ಕತ್ತಿ ಎತ್ತುತ್ತಾನೆ)

ಚಂದ್ರಹಾಸ: – ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!

ಕಾಳ: (ಬೆಚ್ಚಿ) ಯಾರೊ ಹಿಡಿದಿದ್ದಾರೆ! ಈ ಕೂರಸಿ ಇಳಿಯುವುದೆ ಇಲ್ಲ. ನಾ ಮೊದಲೆ ಹೇಳಲಿಲ್ಲವೆ? ಈ ಮಗುಗೊಲೆಯ ಕೆಲಸ ಬೇಡ ಎಂದು?

ಭೀಷಣ: – ಎಲವೊ ಹೇಡಿ,
ಅಂದು ಆ ವರ್ತಕನ ಕೊಂದಂದು ಹೇಸಲಿಲ್ಲ;
ಸೈನ್ಯಾಧಿಕಾರಿಯ ಕೊಂದಂದು ಹೆದರಲಿಲ್ಲ;
ಬೇಹುಗಾರನ ಕಡಿದು ಕೊಂದಂದು ಅಳುಕಲಿಲ್ಲ;
ಈ ಹುಡುಗನಿಗೆ ಹೆದರುವೆಯಾ?

ಕಾಳ: – ಇವನು ಅವರಲ್ಲ; ಅದಕ್ಕೇ ಹದರಿಕೆ!

ಚಂದ್ರಹಾಸ: (ಚಂಡಾಲರ ಪಕ್ಕಕ್ಕೆ ದಿಟ್ಟಿಸಿ ನೋಡುತ್ತಾ, ಹರ್ಷಿತನಾಗಿ, ನಗೆಬೀರಿ, ಯಾರನ್ನೋ ಕಂಡವನಂತೆ)
ಅಜ್ಜೀ, ಅಜ್ಜೀ, ಅಜ್ಜೀ, ಕಡೆಗೂ ಬಂದೆಯಲ್ಲ!
ಅಜ್ಜೀ, ಅಲ್ಲೇಕೆ ನಿಂತಿರುವೆ ದೂರ?
ಇಲ್ಲಿ ಬಾ ಹತ್ತಿರಕೆ; ನನ್ನನೆತ್ತಿಕೊ, ಅಜ್ಜೀ,
ಇವರು ಅಂಜಿಸುತಿಹರು!

[ಮೂವರೂ ದಿಕ್ಕಿಗೆ ಬೆರಗುಬಡಿದು ನೋಡುತ್ತಾರೆ. ಕಾಳ ಮಾರರು ಹೆದರಿ ದೂರ ಸರಿಯುತ್ತಾರೆ. ಭೀಷಣನಿಗೂ ಮೈನವಿರೇಳುತ್ತದೆ, ಆದರೆ ಧೈರ್ಯನಟಿಸಿ]

ಭೀಷಣ: (ಚಂದ್ರಹಾಸನಿಗೆ) ಎಲ್ಲಿದಾಳೊ ನಿನ್ನ ಅಜ್ಜಿ?
ಕಳ್ಳ, ಸಳ್ಳಾಡುತೀಯಾ?
ನಿನ್ನ ಪೊಳ್ಳಿಗಂಜಲು ನಾವೇನು ಮಕ್ಕಳೆಂದರಿತೆಯಾ?

ಚಂದ್ರಹಾಸ: – ಕಣ್ಣಿಲ್ಲವೆ ನಿನಗೆ? ಅಲ್ಲೆ ನಿಂತಿಹಳು ಕಾಣ್!….
(ಎಂದು ಅಜ್ಜಿಯ ಕಡೆ ನೋಡಿದಂತೆ ತಿರುಗಿ ಆಲಿಸಿ)
ಏನೆಂದೆ, ಅಜ್ಜಿ? ಈ ಭಯಂಕರಾಕಾರ್
ಆ ಮುಕುಂದನೆ ಮೂರಾಗಿ ಮೊಗವಾಡುವಾಂತಿಹನೆ?
(ಎಂದು ಮೂವರು ಚಂಡಾಲರನ್ನು ದಿಟ್ಟಿಸಿ ನೋಡಿ)
ಅಹುದೆ! ಬರಿದೆ ಬೆದರಿದೆ, ಅಜ್ಜಿ,
ಕನಸಂ ನನಸುಗೆತ್ತು! (ಚಂಡಾಲರಿಗೆ ಕೈಮುಗಿದು)
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
ಗೋವಿಂದ! ಶ್ರೀಹರಿ! ಮುಕುಂದ! ಮುರಾರಿ!
(ಎಂದು ಕೈಚಪ್ಪಾಳೆಯಿಕ್ಕಿ ಹಾಡುತ್ತಾನೆ.)

ಭೀಷಣ: (ಮುಖ ಸಿಂಡರಿಸಿ) ಸಾಕು ಈ ಬಯಲಾಟ! ಅವನ ಈ
ಹುಸಿ ಬಿರಾಂತಿಗೆ ಹೆದರುವೆಯಾ, ಕಾಳ? ಕೊಡು ಇಲ್ಲಿ
ಕತ್ತಿಯ! ಅವನೇನೊ ಮಂತ್ರ ಹೇಳುತ್ತಾನೆ! ಹೇಳದಂತೆ
ಬಾಯಿಗೆ ಬಟ್ಟೆ ಕಟ್ಟು. (ಭೀಷಣ ಕತ್ತಿ ತೆಗೆದುಕೊಳ್ಳುತ್ತಾನೆ.)

ಕಾಳ: – ಏನಾದರೂ ಸಾಯಿ! (ಎಂದು ಬಾಯಿಗೆ ಬಟ್ಟೆ ತುರುಕುತ್ತಾನೆ.)
(
ಭೀಷಣ ಕತ್ತಿಯೆತ್ತಲು ಚಂದ್ರಹಾಸ ಕೈಮುಗಿಯುತ್ತಾನೆ.)

ಭೀಷಣ: (ಬೆರಗು ಬಡಿದು) ಏನಿದು? ಕತ್ತಿ ಕೆಳಗಿಳಿಯದಲ್ಲಾ! ಹಾಳು ಮಂತ್ರಿಯ
ಮಾತು ಕೇಳಿ ಕೆಟ್ಟೆವಲ್ಲಾ! ಬಾಯ್ಗೆ ಕಟ್ಟಿದ ಬಟ್ಟೆ ಬಿಚ್ಚು, ಕಾಳ.

(ಕಾಳ ಸಂತಸದಿಂದ ಬೇಗಬೇಗನೆ ಬಟ್ಟೆ ಬಿಚ್ಚುತ್ತಾನೆ. ಚಂದ್ರಹಾಸ ಗೋವಿಂದ ಶ್ರೀಹರಿ ಎಂದು ಹಾಡುತ್ತಾ ಎದ್ದು ನಿಲ್ಲುತ್ತಾನೆ. ಕಾಳ ಅವನ ಕಾಲಿಗೆ ಬಿದ್ದು ನಮಿಸಿ, ಆರನೆಯ ಬೆರಳನ್ನು ಗಮನಿಸಿ ಅಚ್ಚರಿವಡುತ್ತಾ ಏಳುತ್ತಾನೆ.]

ಕಾಳ: – ನೋಡಿದಿರಾ? ಇವನ ಕಾಲಲ್ಲಿ ಆರು ಬೆರಳುಗಳಿವೆ!

ಭೀಷಣ: – ಎಲ್ಲಿ? ಎಲ್ಲಿ? (ಮೂವರೂ ನೋಡುತ್ತಾರೆ.)
ಏನಾದರೂ ಕುರುಪು ಕೊಂಡೊಯ್ದರಾಯ್ತು. ಇಲ್ಲದಿರೆ ನಮಗೆ ಉಳಿಗಾಲವಿಲ್ಲ. ಮಾರಿಯೆ ಕೊಟ್ಟಳು ಆ ಆರನೆಯ ಬೆರಳ! ಈ ಬೆರಳು ನಮ್ಮನ್ನೂ ಉಳಿಸುತ್ತದೆ; ಅವನನ್ನೂ ಉಳಿಸಿತು!

[ಭೀಷಣ ಬೆರಳನ್ನು ಸರಕ್ಕನೆ ಕತ್ತರಿಸಿಕೊಳ್ಳುತ್ತಾನೆ. ಚಂದ್ರಹಾಸ ಚೀರಿ ಮೂರ್ಛೆ ಹೋಗುತ್ತಾನೆ. ಇದ್ದಕ್ಕಿದ್ದ ಹಾಗೆ ಏನೊ ಹೂಂಕಾರದಿಂದ ಕಾಡು ನಡಗಿದಂತಾಗುತ್ತದೆ. ಮಾರಬಂದಳು ಕಣಾ ಅವಳುಎಂದು ದೀವಿಗೆಯೊಡನೆ ಓಡುತ್ತಾನೆ. ಕಾಳ ಭೀಷಣರಿಬ್ಬರೂ ಹಿಂಬಾಲಿಸಿ ಓಡುತ್ತಾರೆ. ಅಂತರಿಕ್ಷದಲ್ಲಿ ಗಾನ ಕೇಳಿ ಬರುತ್ತದೆ:
ಚಿಂತಿಸುತ್ತೆನ್ನನೆ ಉಪಾಸನಂಗೆಯ್ವರ್ಗೆ
ಹೊಣೆಯಪ್ಪೆನೇಗಳುಂ ಯೋಗಕಕ್ಕೆ ಕ್ಷೇಮಕ್ಕೆ!”]

ಪರದೆ ಬೀಳುತ್ತದೆ.

*

ದೃಶ್ಯ

[ಅದೆ ಅರಣ್ಯದ ಮತ್ತೊಂದೆಡೆ. ಮರುದಿನ ಸೂರ್ಯೋದಯಾನಂತರ ಪುಳಿಂದರ ಪಡೆಯೊಂದು ಬೇಟೆಯಾಡುತ್ತ ಬರುತ್ತದೆ.]

೧ನೆಯ ಪುಳಿಂದ: (ನೆಲವನ್ನು ಪರಿಶೀಲಿಸುತ್ತಾ) ಇದೆ ಪಂದಿ ಕೆದರಿದ ನೆಲಂ.

೨ನೆಯ ಪುಳಿಂದ: (ಇನಿತು ಮುಂಬರಿದು ನೋಡಿ) ಕಾಣ್, ಇದೆ ದಂತಿ ಕದಡಿದ ಕೊಳಂ.

೩ನೆಯ ಪುಳಿಂದ: (ಒಂದೆಡೆ ಬಗ್ಗಿನೋಡಿ) ಇದೊ ಇಲ್ಲಿ ಪುಲಿಯುಗಿದ ಮಿಗದ ಮಿದುಳ್.

೪ನೆಯ ಪುಳಿಂದ: – ಇತ್ತಲಿದೆ ಸಿಂಗಮೆರಗಿದಾನೆಯ ತಲೆಯ ಮುತ್ತು!

೫ನೆಯ ಪುಳಿಂದ: – ಇದೊ ಇಲ್ಲಿ ವನಮಹಿಷನುದ್ದಿಕೊಂಡ ಮರದಿಗುಡು.

೬ನೆಯ ಪುಳಿಂದ: – ಇತ್ತಲಿದೆಕೊ ಸಾರಂಗಮಿಕ್ಕಡಿಗೈದ ಪಾವು!

೪ನೆಯ ಪುಳಿಂದ: – ಇತ್ತಲಿದೆ ಹುಲ್ಲೆಗಳ ಹಕ್ಕೆ; ಮರಿಗಳಿಕ್ಕೆ.

೧ನೆಯ ಪುಳಿಂದ: – ನಡೆ, ಮುಂದೆ ನಡೆ.

೨ನೆಯ ಪುಳಿಂದ: – ಪಜ್ಜೆವಿಡಿ ಪೂಗು.

೬ನೆಯ ಪುಳಿಂದ: (ಹಿಂಜರಿದು ನಿಂತು ಎಚ್ಚರಿಕೆ ಹೇಳುವಂತೆ) ತಡೆ! ನಿಲ್ಲು!

೩ನೆಯ ಪುಳಿಂದ: – ನಿಲ್ಲಲೇಕೆ? ಜಡಿ! ಬೊಬ್ಬೆಗುಡು!
[ಎಲ್ಲರೂ ಸೋವಿನ ಕಾಕು ಹಾಕುತ್ತಾರೆ.]

೬ನೆಯ ಪುಳಿಂದ: – ಎಲೆಲೆ ಪೊದರೊಳಡಗು!

೫ನೆಯ ಪುಳಿಂದ: – ಕೈಗೆಡದಿರ್, ಇಸು!

೪ನೆಯ ಪುಳಿಂದ: – ತುಡು, ನಿಡುಸರಳ!

೧ನೆಯ ಪುಳಿಂದ: – ಕೆಲಕ್ಕೆ ಸಿಡಿಯದಿರ್, ವೊಡೆ, ಸಾರ್ಚು!

೪ನೆಯ ಪುಳಿಂದ: – ಮರಕಡರ್, ಒಡರ್ಚು!

೩ನೆಯ ಪುಳಿಂದ: – ಅಡಗಿ ಪೊಯ್!

೧ನೆಯ ಪುಳಿಂದ: – ಓಡಿ, ತಡೆಗಟ್ಟಿ; ಬಡಿಕೋಲನಿಡಿ!
[, , ೬ನೆಯ ಪುಳಿಂದರು ಹಿಡಿಡಿ ಹಿಡಿಡಿ ಎಂದೋಡುತ್ತಾರೆ.]

೪ನೆಯ ಪುಳಿಂದ: – ನಮ್ಮರಸು ಕುಳಿಂದಕನೆಲ್ಲಿ?

೧ನೆಯ ಪುಳಿಂದ: – ಓಡಿದನ್‌ ಹರಿಣನಂ ಬೆಂಬತ್ತಿ.

೩ನೆಯ ಪುಳಿಂದ: – ನಮ್ಮ ಹೆಂಗಸರ ಗುಂಪೆತ್ತವೋಯ್ತು?

೧ನೆಯ ಪುಳಿಂದ: – ಎಲ್ಲಿಯೊ ನಾ ಕಾಣೆ… (ತುಸು ಪರಿಹಾಸ್ಯದಿಂದ)
ಬಡನಡುವಿನಬಲೆಯರ್ ನಮ್ಮೊಡನೆನಿತು ದೂರ
ಬಂದಪರ್? ನವಿಲ್ಗರಿಗಳಂ, ಚಮರಿವಾಲಂಗಳಂ,
ಕರಿಯ ಕುಂಭಸ್ಥಳದ ಮುಕ್ತಾಫಲಂಗಳಂ
ಹುಡುಕುತ್ತ ಹೆರಕುತ್ತ ಇನ್ನೆಲ್ಲಿಹರೊ ಕಾಣೆ.

೩ನೆಯ ಪುಳಿಂದ: – ಪಾಳ್ ಕುರ್ಕನೊಂದು ನನ್ನ ಮೇಲಗರಿ,
ಪರಚಿ, ಗಂಟಲ್ಮುರಿದು ಕೊಲಲೆಳಸುತಿತ್ತು.
ದೊರೆ ಎಚ್ಚ ಶರದಿಂದ ಮಡಿದುರುಳ್ದುದು.
ನೋಡಿಲ್ಲಿ ನೆತ್ತರೊಸರುವ ಗಾಯ. (ತೋರಿಸುತ್ತಾನೆ.)

೪ನೆಯ ಪುಳಿಂದ: – ಒರ್ ಪಂದಿ ಹೂಂಕರಿಸಿ ಕೋರೆದಾಡೆಯ ಮಸೆದು
ನುಗ್ಗಿಬಂದುದು ಕೊಲಲ್. ಕೈಗೂಡಲಿಯಿಂದಿಕ್ಕಿದೆನ್;
ತುಂಡರಿಸಿ ಕೆಡೆದುದಿಳೆಗೆ. ಇಂದಿನ ಬೇಂಟೆಯೆ ಬೇಂಟೆ!

೧ನೆಯ ಪುಳಿಂದ: – ಬೇಂಟೆ ತಾಂ ಬಿನದಂಗಳರಸಲ್ತೆ?
[ಒಳಗಣಿಂದ ಪುಲಿ! ಪುಲಿ! ಸತ್ತೆನ್! ಅಯ್ಯೋ ಸತ್ತೆನ್! ಎಂಬ ಆರ್ತನಾದವೂ ಜಡಿ, ಬಡಿ, ಪೊಡೆ, ಹೊಯ್ ಎಂಬ ಕೂಗು ಕೇಳಿಬರುತ್ತವೆ.]

೪ನೆಯ ಪುಳಿಂದ: – ಅದೇನದಾ ಹುಳುವಿನವರ ಬೊಬ್ಬೆ?

೩ನೆಯ ಪುಳಿಂದ: – ಆವನೊ ಪುಲಿಯಿಂದ ಮಡಿದನ್!
[೬ನೆಯ ಪುಳಿಂದ ಓಡಿಬರುತ್ತಾನೆ.]

೬ನೆಯ ಪುಳಿಂದ: – ಇಲ್ಲೇನು ಮಾಡುವಿರಿ? ದೊಡ್ಡನರಸನನ್ ಪುಲಿ ಪಿಡಿದುದು!
ನೆರವಿಗೆ ಹೋದ ಸಣ್ಣನರಸನನ್
ಕರುಳೀಚೆಗುರುಳ್ವಂತೆ ಸೀಳಿದುದು ಹೊಟ್ಟೆಯನ್!
ಭಲ್ಲೆಯಿಂದಿರಿದ ಪುಟ್ಟನರಸನನ್
ಮೇಲ್ವಾಯ್ದು ಕಚ್ಚಿ ಬಿಸುಟಿತ್ತು!
ಕಂಡದಂ ನನಗೊ ನಡುಗುತಿದೆ ತೊಳ್ಳೆ!
ಕೊನೆಗೆ ಚಿಕ್ಕನರಸನ ಕೊಡಲಿ ಪೆಟ್ಟಿಂಗೆ
ಆರ್ಭಟಿಸಿ ನೆಗೆದುರಿಳಿ ಬಿಳ್ದುದು ಸತ್ತು!
ಪೆರ್ಬ್ಬುಲಿ! ಇರ್ಪ್ಪತ್ತು ಆಳಿಗೇನ್ ಕಡಿಮೆಯಿಲ್ಲ!

೧ನೆಯ ಪುಳಿಂದ: – ಬನ್ನಿ, ಬನ್ನಿ, ಓಡಿ ಬನ್ನಿ; ಪೊತ್ತದನ್ ಕೊಂಡೊಯ್ದು ದೊರೆಗೊಪ್ಪಿಸಲ್,
ನಮಗೆ ಪೇರೌತಣಂ ಇಂದು!
[೧ನೆಯ ಮತ್ತು ೬ನೆಯ ಪುಳಿಂದರು ಓಡುತ್ತಾರೆ.]

೩ನೆಯ ಪುಳಿಂದ: – ಅಯ್ಯೊ ನಮ್ಮ ದೊಡ್ಡನರಸನ್ ಸತ್ತನೆ! (ಮರುಗುತ್ತಾನೆ)

೪ನೆಯ ಪುಳಿಂದ: – ಪುಲಿಯ ಕೈಯಿಂ ಮಡಿಯೆ ಪೆರ್ಮೆ ಸಾವದು ಕಣಾ!
ಮರುವುಟ್ಟಿನಲ್ಲವಗೆ ದೊರಕುವುದು ದೊರೆತನಂ!

೩ನೆಯ ಪುಳಿಂದ: – ಹಾಂಗಾದರವನೇ ಪುಣ್ಯವಂತನ್!

೪ನೆಯ ಪುಳಿಂದ: – ಮತ್ತೆ? (ಇಬ್ಬರೂ ಹೊರಡುತ್ತಾರೆ)

ಪರದೆ ಬೀಳುತ್ತದೆ.

*

ದೃಶ್ಯ

[ಅರಣ್ಯದ ಮತ್ತೊಂದು ಭಾಗ. ನಾಲ್ವರು ಪುಳಿಂದಿಯರು ಹಂದಿಯ ಕೋರೆ, ಜಿಂಕೆಯ ಕೊಂಬು, ಪುನುಗು, ನವಿಲುಗರಿ, ಮೊದಲಾದ ಅರಣ್ಯಕ ಪದಾರ್ಥಗಳನ್ನು ಸಂಗ್ರಹಿಸುತ್ತಾ ಬರುತ್ತಾರೆ.]

೧ನೆಯ ಪುಳಿಂದಿ: (ನೆಲದಕಡೆ ದೂರ ನೋಡಿ) ಅದೇನದು ಅಲ್ಲಿ ಬಿದ್ದದೆ?

೨ನೆಯ ಪುಳಿಂದಿ: – ಹೌದೆ! ಮಿಗದ ಕೊಂಬು! (ಎಂದು ಓಡಿ ತೆಗೆದುಕೊಳ್ಳುತ್ತಾಳೆ)

೩ನೆಯ ಪುಳಿಂದಿ: – ಏಕಿಂತು ಮೈಮೇಲೆ ನುಗ್ಗುವೆ?
ಆಸೆಬುರುಕಿ! ಕೀಳ್ಪೆಣ್ಣು!

೨ನೆಯ ಪುಳಿಂದಿ: – ನೀನಾರ್ಗೆ, ಕೇಳುವಳ್?

೩ನೆಯ ಪುಳಿಂದಿ: – ಮೊದಲದನ್ ಕಂಡವಳಿಗಾ ಕೊಂಬು ಸೇರ್ದುದು.

೨ನೆಯ ಪುಳಿಂದಿ: – ಕಂಡವಳಿಗಲ್ತು, ಕೊಂಡವಳ್ಗೆ.

೪ನೆಯ ಪುಳಿಂದಿ: – ಅಲ್ಲೇನು ಮಾಡುವಿರಿ? ಓಡಿಬನ್ನಿ.
ನವಿಲುಗರಿಗಳ ಹಿಂಡೆ ಕೆಡೆದಿಹುದಿಲ್ಲಿ;
[ಎಲ್ಲರೂ ಸಂಭ್ರಮದಿಂದ ಸಶಬ್ದವಾಗಿ ಓಡಿ ಆಯುತ್ತಾರೆ]

೧ನೆಯ ಪುಳಿಂದಿ: – ಕಾಣಿಲ್ಲಿ, ಈ ಮರದ ಬೇರ್ಗೆ
ಪುನುಗನೊತ್ತಿದೆ ಪುನುಗುಬೆಕ್ಕು.
[ಅದನ್ನು ಒರೆಸಿ ಕುಡಿಕೆಗೆ ತುಂಬುತ್ತಾಳೆ.]

೩ನೆಯ ಪುಳಿಂದಿ: – ಅಃ ಎಂತಪ್ಪ ಕಂಪು! ( ಆಘ್ರಾಣಿಸುತ್ತಾಳೆ.)

೨ನೆಯ ಪುಳಿಂದಿ: – ನಿನಗೆನಿತೆ ಸಿಕ್ಕಿತು ಮೃಗಸಾರಮೃತ್ತಿಕೆ, ತಂಗಿ?

೪ನೆಯ ಪುಳಿಂದಿ: – ಒಂದು ಅಂಡೆಯ ತುಂಬ.

೧ನೆಯ ಪುಳಿಂದಿ: – ಮಾರಾಣಿ ಬೆಸಸಿಹಳು, ತನಗಿನಿತು ಬೇಕೆಂದು.

೩ನೆಯ ಪುಳಿಂದಿ: – ಹೂವೂ ಬೇಕಂತೆ, ಆವುದೊ ನೋಂಪಿಗೆ.

೨ನೆಯ ಪುಳಿಂದಿ: – ಸೌಭಾಗ್ಯವೇನಿದ್ದರೇನಂತೆ? ಸುತರಿಲ್ಲ.
ಪಾಪ, ಕೊರಗುತಿರುವಳು ತಾಯಿ,
ಪುತ್ರನಂ ಪಡೆಯಲ್ಕೆ ನೋಂತು.

೪ನೆಯ ಪುಳಿಂದಿ: – ಪುತ್ರವತಿಯಹುದು ಜನ್ಮಾಂತರದ ಪುಣ್ಯಂ.
ಮುನ್ನೆ ತಾಂ ನೋಂತುದಲ್ಲದೆ, ಪೇಳ್
ಬರಿದೆ ಬಯಸಿದೊಡೆ ಬಂದಪುದೆ?

೩ನೆಯ ಪುಳಿಂದಿ: – ಪುತ್ರನಂ ಪಡೆಯಲೆಂದೇ ನೋಂಪಿಯಂ
ಕೈಕೊಂಡಿಹಳ್. ಅದಕೋಸುಗವೆ ಬೆಸಸಿಹಳ್
ಫಲಂಗಳಂ ಪುಷ್ಪಂಗಳಂ ತರಲ್.

೧ನೆಯ ಪುಳಿಂದಿ: – ನಮ್ಮರಸಿ ಮೇಧಾವಿನಿಗೆ ತಾನಾದಂದು
ಶುಭದ ಪುತ್ರೋತ್ಸವಂ
ನಮ್ಮ ಸೌಬಾಗ್ಯಕೆಣೆಯಿಲ್ಲದಾಗುವುದು.
ಬನ್ನಿ ಹೂಗಳನಾಯ್ದು ಒಯ್ಯುವಂ…
ನಾ ಕುಯ್ವೆ ಸಂಪಗೆಯನ್.

೨ನೆಯ ಪುಳಿಂದಿ: – ಸುರಗಿಯಂ ನಾನೇರಿ ಕೊಯ್ವೆನ್.

೩ನೆಯ ಪುಳಿಂದಿ: – ಕೇದಗೆಯನಾನ್ ಮುಳ್ಳೆಣಿಸದೆಯೆ ಕೊಯ್ವೆನ್.

೪ನೆಯ ಪುಳಿಂದಿ: – ಸೀತಾಳಿ ದಂಡೆಗಳನಾನ್ ತಂದಪೆನ್.
[ಇದ್ದಕಿದ್ದಂತೆ ಖುರಪುಟ ಧ್ವನಿ ಕೇಳಿಸುತ್ತದೆ.]

೧ನೆಯ ಪುಳಿಂದಿ: – ಅಕೊ ಅಕೊ ಅಕೊ! ಮಿಗ ಮಿಗ ಮಿಗ!

ಎಲ್ಲರೂ: (ನೋಡುತ್ತಾ) ಮಿಗ! ಮಿಗ! ಮಿಗ! ಹೋ! (ಕೂಗುವರು)

೧ನೆಯ ಪುಳಿಂದಿ: – ಅಕ್ಕ, ಮಿಂಚಿನೋಟವ ಮುಂಚಿ ಹಾರಿತಲ್ತೆ?

೨ನೆಯ ಪುಳಿಂದಿ: – ಅಗೊ ಅಗೊ ಅಗೊ
ಬೆನ್ನಟ್ಟಿ ಓಡುತಿಹನೊರ್ವ ಬೇಂಟೆಗಾರಂ.
[ಎಲ್ಲರೂ ವಿಸ್ಮಯದಿಂದ ನೋಡುತ್ತಿರುತ್ತಾರೆ.]

೩ನೆಯ ಪುಳಿಂದಿ: – ಓವೊ ಅವನೆಮ್ಮ ಅರಸು ಕುಳಿಂದಕಂ!

೧ನೆಯ ಪುಳಿಂದಿ: – ಅವನಿಲ್ಲದಿನ್ನಾರು ಮಿಗವನಂತಟ್ಟುವರ್?

೪ನೆಯ ಪುಳಿಂದಿ: – ನೋಡಕ್ಕ, ಆ ಮಿಗಂ ಕೊಂಕುಗೊರಲಿಂ
ಪಿಂತಿರುಗಿ ಹಾರುತಿದೆ!

೩ನೆಯ ಪುಳಿಂದಿ: – ಆಹಾ ಅದರಡಿಗಳಿಳೆಯನೇಂ
ಮುಟ್ಟಿಯುಂ ಮುಟ್ಟದೆಯೆ ಚಲಿಸುತಿವೆ!

೪ನೆಯ ಪುಳಿಂದಿ: – ಅಯ್ಯೊ, ಮತ್ತೆ,
ನಮ್ಮೆಡೆಗೆ ತಿರುಗುತಿದೆ ಸಾರಂಗ.

೨ನೆಯ ಪುಳಿಂದಿ: – ಕಾಣದರ ಬಾಯಲ್ಲಿ ಜೊಲ್ಲನೊರೆ!

೪ನೆಯ ಪುಳಿಂದಿ: – ಹತ್ತೆ ಸಾರ್ದುದು ಕಾಣ್:
ಅಳ್ಳೆಯಂತುಬ್ಬಿ ತಗ್ಗುತ್ತಿದೆ.

೧ನೆಯ ಪುಳಿಂದಿ: – ಬೆಮರಿಳಿದು ಕರ್ಪುಬಣ್ಣಕೆ ತಿರುಗಿಹುದು ಮೈ!

೨ನೆಯ ಪುಳಿಂದಿ: – ಓವೊ ಕಾಣ್, ಬೆನ್ನಟ್ಟಿ ಬಂದನದೊ ನಮ್ಮ ದೊರೆ.
[ಕುಳಿಂದಕನು ಬಿಲ್ಲು ಬಾಣ ಹಿಡಿದು ಧಾವಿಸಿ ಬರುತ್ತಾನೆ. ಪುಳಿಂದಿಯರನ್ನು ಕಂಡುಕೇಳುತ್ತಾನೆ.]

ಕುಳಿಂದಕ: – ಎತ್ತಲೋಡಿತಾ ಜಿಂಕೆ?

೧ನೆಯ ಪುಳಿಂದಿ: – ಇತ್ತಣ್ಗೆ (ಎಂದು ಕೈತೋರಿಸುತ್ತಾಳೆ.)

ಕುಳಿಂದಕ: (ಸ್ವಗತ) ನಾಲ್ಕೈದು ಹರಿದಾರಿಯಿಂ ಬೆಂಕೊಂಡು
ಬಂದುದೂ ಬರಿದಾಯ್ತೆ? ಎಚ್ಚಲಗ ಲೆಕ್ಕಿಸದೆ
ಧಾವಿಸಿತೆ? ನನ್ನನೆಲ್ಲಿಗೊ ಉಯ್ವ ಪಾಂಗಿಂದೆ,
ಮರೆಯಾಗಿ ಮತ್ತೆ ತೋರಿ, ಮತ್ತೆ ಮರೆಯಾಗಿ
ಮಾರೀಚನಾಟಮಂ ಮೆರೆದುದಲ್ತೆ?…
ಇರಲಿ; ನೋಳ್ಪೆನೆಲ್ಲಿಗೆಯ್ದುವುದೆಂದು!
[ಮತ್ತೆ ಧಾವಿಸಿ ಓಡುತ್ತಾನೆ.]

೨ನೆಯ ಪುಳಿಂದಿ: – ಮಿಗವನೇನ್ ಬಿಡುವನೆಂದರಿತೆಯಾ?
ಹೆತ್ತದರ ಹಿಡಿಯ ಹೊಟ್ಟೆಯ ಹೊಕ್ಕರೂ ಬಿಡನು!

೪ನೆಯ ಪುಳಿಂದಿ: – ನಾವೂ ಓಡುವಂ. ಬನ್ನಿ ಹೊತಾಯ್ತ.

೩ನೆಯ ಪುಳಿಂದಿ: – ಓಡಲೇನ್ ನೀನ್ ಗಂಡೇ?

೨ನೆಯ ಪುಳಿಂದಿ: – ಗಂಡಸರ ಮೀರಿಹಳು ಅವಳು!
[ದೂರದಲಿ ಕಲಕಲ ನಿನಾದ ಕೇಳುತ್ತದೆ.]

೧ನೆಯ ಪುಳಿಂದಿ: – ಏನದು ಕೋಲಾಹಲಂ?

೨ನೆಯ ಪುಳಿಂದಿ: – ಪುಲಿ ಪಿಡಿದುದೊ? ಪಂದಿ ತಿವಿದುದೊ?
ನಮ್ಮವರೊಳಾವಂಗೆ ಏನಾದುದೊ? (ಕಳವಳಿಸುತ್ತಾಳೆ)

೪ನೆಯ ಪುಳಿಂದಿ: – ಬನ್ನಿ, ಬನ್ನಿ,; ಬೇಗಬನ್ನಿ; ಓಡಿಬನ್ನಿ!
[ಎಲ್ಲರೂ ಧಾವಿಸುತ್ತಾರೆ]

ಪರದೆ ಬೀಳುತ್ತದೆ.

*