ದೃಶ್ಯ

[ದಟ್ಟವಾದ ಅರಣ್ಯದ ಮಧ್ಯೆ ಹಸುರು ಹಬಬಿದ ಒಂದು ಕಿರುದಿಬ್ಬದ ಮೇಲೆ ಬಾಲಕ ಚಂದ್ರಹಾಸನು ನಿದ್ರಿಸುವನೆಂಬಂತೆ ಮಲಗಿದ್ದಾನೆ. ಕತ್ತರಿಸಿದ ಕಾಲ್ಬೆರಳಿನಿಂದ ನೆತ್ತರು ಸೋರಿ ಅಲ್ಲಲ್ಲಿ ಕೆಂಪಾಗಿದೆ. ಅವನ ಮೈಮೇಲೆಯೂ ಹಾರಿದ ರಕ್ತದ ಕಲೆಗಳಿವೆ. ಮೂವರು ದಿವ್ಯ ಛಾಯಾಮಮೂರ್ತಿಗಳಾದ ದೇವಿಯರು ಬಾಲಕನ ಕನಸಿನಲ್ಲಿ ಎಂಬಂತೆ ಕಾಣಿಸಿಕೊಳ್ಳುತ್ತಾರೆ. ಅವನ ಸುತ್ತಲೂ ನೃತ್ಯವಿನ್ಯಾಸದಲ್ಲಿ ಸುಳಿಯುತ್ತಾರೆ. ತಮ್ಮ ಪುಷ್ಪಸದೃಶ ಕೈಗಳಿಂದ ಅವನ ಮೇಲೆ ತಮ್ಮ ರಕ್ಷಣಾಶಕ್ತಿಯನ್ನು ಪ್ರೋಕ್ಷಿಸುತ್ತಾರೆ.]

ಮೊದಲನೆಯ ದೇವಿ: – ಪೃಥಿವಿಯೆದೆಯಿಂದುದಿಸಿ ಏರಿ
ಭಗವನ್ತನಡಿಯರಸಿ ಹಾರಿ
ಬಂದೆ ನಾ ಪ್ರಾರ್ಥನಾದೇವಿ!

ಎರಡನೆಯ ದೇವಿ: – ಭಗವಂತನಡಿಯಿಂದೆ ಹೊಮ್ಮಿ
ಪೃಥಿವಿಯೆದೆಗವತರಿಸೆ ಚಿಮ್ಮಿ
ಇಳಿದೆನೈ ನಾ ಕೃಪಾದೇವಿ!

ಮೂರನೆಯ ದೇವಿ: – ಲೋಕವನು ನಾಕಕ್ಕೆ ಬೆಸೆಯೆ
ನಾಕವನು ಲೋಕಕ್ಕೆ ಹೊಸೆಯೆ
ಐತಂದೆ ನಾ ಭಕ್ತಿದೇವಿ!
[ಹಾಡುತ್ತಾ ಹಾಡುತ್ತ ಅದೃಶ್ಯವಾಗುತ್ತಾರೆ.]

ಚಂದ್ರಹಾಸ: (ಮೆಲ್ಲಮೆಲ್ಲಗೆ ಎಚ್ಚತ್ತು ಕುಳಿತು ಸುತ್ತಲೂ ಬೆಬ್ಬಳಿಸಿ ನೋಡಿ)
ಏಗಳುಂ ನನಗೆ ಕನಸಿನಲಿ ಕಾಣುವಾ
ಮೂವರಾ ದಿವ್ಯಮೂರ್ತಿಗಳೆಲ್ಲಿ?
ಇಂಪಾಗಿ ಉಲಿದೆನ್ನ ಸಂತೈಸಿದರ್;
ನೆತ್ತರ್ ಸೋರ್ವ ಗಾಯಕ್ಕೆ ಮದ್ದಿರ್ಕ್ಕಿ
ನೋವನಾರಿಸಿದರ್!…ಅಜ್ಜೀ, ಓ ನನ್ನಜ್ಜೀ, (ಅಳುತ್ತಾನೆ.)
ನೀ ಕಲಿಸಿದಾ ಶ್ರೀಹರಿಯ ನೆನೆಯುವೆನ್.
[ಮೆಲ್ಲನೆಯೆ ಕೀರ್ತನೆ ತೊಡಗುತ್ತಾನೆ]
ಗೋವಿಂದ ಶ್ರೀಹರಿ ಮುಕುಂದ ಮುರಾರಿ!
ಗೋವಿಂದ ಶ್ರೀಹರಿ ಮುಕುಂದ ಮುರಾರಿ!
ಗೋವಿಂದ ಶ್ರೀಹರಿ ಮುಕುಂದ ಮುರಾರಿ!
ಗೋವಿಂದ ಶ್ರೀಹರಿ ಮುಕುಂದ ಮುರಾರಿ…!
[ಬೇಟೆಯ ಉಡುಪಿನ ಕುಳಿಂದಕನು ಬಿಲ್ವಿಡಿದು ಹುಡುಕುನೋಟ ಬೀರುತ್ತಾ ಪ್ರವೇಶಿಸುತ್ತಾನೆ.]

ಕುಳಿಂದಕ: – ಕನಸಿನ ಕುರಂಗದದಿ ಮಾಯವಾಯ್ತಲಾ
ಆ ಮಿಗುಂ! ಎಲ್ಲಿಯಾದರೂ ಅಡಗಿದೆಯೊ ಇಲ್ಲಿ?…
ಅಃ ಏನಿದು? ಆರೊ ಹಾಡಿಹರಿಲ್ಲಿ ಇಂಚರದಿ!(ಆಲಿಸಿ)
ಗೋವಿಂದ ಶ್ರೀಹರಿ ಮುಕುಂದ ಮುರಾರಿ!’
ಈ ದಟ್ಟ ಪಳುವದಲಿ ಮುಕುಂದನಂ ಕರೆವರಾರ್?
ಪಸುಳೆಗೊರಲಿಂ ಪೊಣ್ಮಿದಂತಿಹುದು ಶ್ರೀಹರಿಯ ನಾಮಂ,

[ಆಲಿಸುತ್ತಾ ಮುಂಬರಿದು, ನೋಡಿ, ಕಂಡು]
ಆವನೀ ಸುಕುಮಾರನಿಲ್ಲಿ ಕುಳಿತುಲಿದಿಹನ್?
ಅಯ್ಯೊ ನೆತ್ತರ್ ಮಯಂ ಮೆಯ್ಯೆಲ್ಲ! ನನ್ನ ಆ
ಜಿಂಕೆಗೆಚ್ಚಾ ಬಾಣಮೇನಾದೊಡಂ ಈ
ಬಾಲಕನ ಮೆಯ್ಗೆ ತಗುಲಿದುದೊ? ಶ್ರೀಹರೀ!
ಶ್ರೀಹರೀ! ಕಾಪಾಡು, ಕಾಪಾಡು! ಮಗೂ! ಮಗೂ!…
[ಓಡಿ ಚಂದ್ರಹಾಸನ ಪಕ್ಕದಲ್ಲಿ ಕುಳಿತು ಮೈದಡವಿ ಸಂತೈಸಿ]
ಏನಾದುದಯ್ ನಿನಗೆ ಕಂದ? ಏಕೆ ಈ ನೆತ್ತರ್?
ಆರವನ್? ಎಲ್ಲಿಯನ್? ಇಲ್ಲಿಗೆಂತೈತಂದೆ?
ಬಾಣಮೆಚ್ಚುದೆ ನಿನಗೆ? ಶ್ರೀಹರಿ! ಶ್ರೀಹರಿ!

ಚಂದ್ರಹಾಸ: – ಬಾಣಮಲ್ತು. ಕಾಲ್ ವೆರಲ್! (ತೋರುತ್ತಾನೆ.)

ಕುಳಿಂದಕ: – ಇದೇನ್? ಕೊಯ್ದಿಹುದು ಕಾಲ್ ಬೆರಳ್!
ಆರ ಕಜ್ಜಮಿದು, ಪೇಳ್, ಕುಮಾರ?

ಚಂದ್ರಹಾಸ: – ಅಜ್ಜಿಯೊಡನಿದ್ದೆನ್ನನ್
ಕಾರೊಡಲ ಚಂಡಾಲರೆಳೆತಂದು
ಕೊಲುವ ಯತ್ನವಮಾಡಿ, ಕಜ್ಜ ಕೈಗೂಡದಿರೆ,
ಕಾಲ್ಬೆರಳ ಕೊಯ್ದು ಕೊಂಡೋಡಿದರು!

ಕುಳಿಂದಕ: – ಎಲ್ಲಿಂದ ತಂದರ್ ನಿನ್ನನ್?

ಚಂದ್ರಹಾಸ: – ಅಜ್ಜಿಯೆಡೆಯಿಂ.

ಕುಳಿಂದಕ: – ಅವ ಊರಿಂದೆ? ಆವ ಪೆಸರ್?

ಚಂದ್ರಹಾಸ: – ನಾನರಿಯೆ, ಬಹುದೂರದಿಂ.

ಕುಳಿಂದಕ: – ನೀನಾರವಂ, ಕಂದ?

ಚಂದ್ರಹಾಸ: – ಶ್ರೀಹರಿಯವಂ, ಅಜ್ಜಿ ಪೇಳ್ದಂದದಿಂ.

ಕುಳಿಂದಕ: – ನಿನ್ನ ಪಿತನಾರು?

ಚಂದ್ರಹಾಸ: –  ಶ್ರೀಹರಿ.

ಕುಳಿಂದಕ: – ಊರ ಪೆಸರಂ ಪೇಳಲಾರೆಯಾ?

ಚಂದ್ರಹಾಸ: – ಶ್ರೀಹರಿಯೆ ನನ್ನೂರು.

ಕುಳಿಂದಕ: – ಇರಲಿ, ಮಗು. ನಿನ್ನ ಬೆರಳಂ ತೊಳೆದು ಮರ್ದ್ದಿಕ್ಕುವೆನ್
[ಸಗ್ಗಳೆಯ ನೀರಿಂದೆ ತೊಳೆಯುತ್ತಾನೆ.]

ಚಂದ್ರಹಾಸ: – ಅಯ್ಯೊ ನೋವೊ!

ಕುಳಿಂದಕ: – ಹೆದರದಿರು, ಬಾಲಕನೆ. ನಿನ್ನ ನೆಮ್ಮೂರಿಂಗೆ
ಒಯ್ದು, ಶುಶ್ರೂಷೆಗೆಯ್ದು, ಸಲಹುವೆನ್.
ನಾನುಂ ನಿನ್ನ ಶ್ರೀಹರಿಯ ಕಿಂಕರಂ!
[ಸೊಂಟದಲ್ಲಿ ನೇತಾಡುತ್ತಿದ್ದ ತುತ್ತೂರಿಯನು ಬಾಯ್ಗಿಟ್ಟು ಊದುತ್ತಾನೆ. ತನ್ನ ಧನ್ಯತೆಗೆ ಹರ್ಷಿಸಿ ತನಗೆ ತಾನೆ ಹೇಳಿಕೊಳ್ಳುತ್ತಾನೆ.]
ನೋಡಿದರೆ ರಾಜಪುತ್ರನ ತೆರದಿ ತೇಜಸ್ವಿ;
ಶ್ರೀಹರಿಯ ದಿವ್ಯಪುತ್ರನೆ ದಿಟಂ ಎಂಬಂತೆ
ರಾಜಿಪನು. ನೆನೆಯುತಿಹನಾತನನೆ ಸಂಕಟದ
ಈ ಸಮಯದಲಿ… ಎನ್ನ ಪುಣ್ಯದ್ರುಮಂ
ಫಲಿಸಿತಿಂದು. ಮೇಧಾವಿನಿಯ ಬಂಜೆತನಮಿಂದು
ಪೋದತ್ತು. ಸಫಲಮಾಯ್ತಾಕೆಯ ಮಹಾವ್ರತಂ.
ಕತ್ತಲೆಯ ಮನೆಗಿಂದು ಮಣಿದೀಪವಾಯಿತ್ತು;
ಬತ್ತಿದ ಸರೋವರಕೆ ನವಜಲಮೊದವಿದತ್ತು;
ಸಂತಾನಮಿಲ್ಲದ ಕುಳಿಂದಕನ ಬಾಳ್ಗತ್ತಲೆಗೆ
ಆದುದುತ್ತಮ ಕುಮಾರೋದಯಂ! ಮುಕುಂದ ಕೃಪೆ!
ಮೃಗಯಾವ್ಯಸನದಿಂದೆ ಕಾನನಕೆ ಬಂದು ನಾಂ
ಕೃಷ್ಣಮೃಗಮಂ ಅಟ್ಟಿ ಬೆಂಬತ್ತಿದೊಡೆ
ದೊರೆಕೊಂಡನೀ ಕೃಷ್ಣಮೃಗಬಾವದರ್ಭಕಂ.
ಶ್ರೀಹರಿ, ನಿನ್ನೀ ಕೃಪಾಲೀಲೆಯನರಿವರಾರು?
[ಪುಳಿಂದರ ಒಂದು ಗುಂಪು ಬರುತ್ತದೆ.]

೧ನೆಯ ಪುಳಿಂದ: – ಎತ್ತಣಿಂದಾಲಿಸಿದೆಯೋ ತುತ್ತೂರಿಯನ್?

೨ನೆಯ ಪುಳಿಂದ: – ಇತ್ತಣಿಂದೆಯೆ.

೩ನೆಯ ಪುಳಿಂದ: –  ನಮ್ಮ ದೊರೆಗ ಪಾಯಂ ಒದಗಿದುದೊ?

ಕುಳಿಂದಕ: – ಪುಳಿಂದರಿರಾ! (ಕರೆಯುತ್ತಾನೆ)

೪ನೆಯ ಪುಳಿಂದ: – ಓವೊ ಇಲ್ಲಿಹನ್! ಇಲ್ಲಿಹನ್!

೨ನೆಯ ಪುಳಿಂದ: – ಕಾಣಿಲ್ಲಿ! ಕಾಣಿಲ್ಲಿ!
[ಮುದ್ದು ಸೂಸಿ ಚಂದ್ರಹಾಸನೆಡೆಗೆ ಓಡುತ್ತಾನೆ.]

ಕುಳಿಂದಕ: – ದೂರ ನಿಲ್, ಪುಳಿಂದ. ಅಂಜುವನ್ ಸುಕುಮಾರನ್.

೧ನೆಯ ಪುಳಿಂದ: – ಏನ್ ಚಂದ ಈ ಸಿಸು!

೩ನೆಯ ಪುಳಿಂದ: –  ದೇವಲೋಕದ ಕಂದ!

೪ನೆಯ ಪುಳಿಂದ: – ನಮ್ಮ ದೊರೆ ನಂದವನಕ್ಕೆ ಬೇಂಟೆವೋಗಿ
ತಂದಿರ್ಪನೀ ಕಂದರ್ಪನಂದನನ್!

ಕುಳಿಂದಕ: (ನಗುತ್ತಾ) ನೀನ್ ಪುಳಿಂದಕವಿಯಲ್ತೆ?
ಸನ್ಮಾನಿಸುವೆನ್. ಅದಿರಲಿ. ನೀನಿಗ ಚಂದನಾವತಿಗೆ
ಮುಂದೋಡಿ ಈ ಮಂಗಳದ ಸುದ್ದಿಯಂ
ಪುರಕೆಲ್ಲ ಸಾರು. ಮಾರಾಣಿಗಿದನರುಹು.
ದೊರೆಗಾದ ಪುತ್ರೋತ್ಸವಕೆ ಪಸುರ್ದೋರಣಂಕಟ್ಟಿ
ಪಟ್ಟಣವ ಸಿಂಗರಿಸಿ
ಪ್ರಜೆಗಳೆಲ್ಲರ್ ಸಂತಸದೊಳೋಲಾಡಲಿ!
[೪ನೆಯ ಪುಳಿಂದನೂ ಮತ್ತೊಬ್ಬನೂಅಪ್ಪಣೆಎಂದು ಹೊರಡುತ್ತಾರೆ.]
ಬೇಂಟೆಯಾಡಿದ ಮೃಗಂಗಳಂ ನೀಮೆ ಪಸುಗೆಗೊಂಡು
ಹಬ್ಬಮಂ ಮಾಡಿ ಉಣಿ, ಬೇಡರಿರ.

೨ನೆಯ ಪುಳಿಂದ: – ಅಯ್ಯೊ ಕಾಣಿಲಿ; ಗಾಯಗೊಂಡಿದೆ ಬೆರಳ್!

ಕುಳಿಂದಕ: – ಚಂಡಾಲರೀ ತರಳನಡಿವೆರಳ ಕೊಯ್ದಿಹರು.
ನೋವ ಸೈರಿಸಲಾರದಳುತಿಹನು.

೩ನೆಯ ಪುಳಿಂದ: – ಬಲ್ಲೆನಾಂ
ಮರ್ದ್ದನೊಂದನ್. ಈಗಳೆಯೆ ತಂದಪೆನ್.
[ಎಂದು ಓಡುತ್ತಾನೆ.]

ಕುಳಿಂದಕ: (೧ನೆಯ ಪುಳಿಂದನಿಗೆ)
ನೀನಿವನನ್ ಹೆಗಲ ಮೇಲೇರಿಸಿಕೊ.
[ಚಂದ್ರಹಾಸನನ್ನು ಎಚ್ಚರಿಕೆಯಿಂದ ಎತ್ತಿ ಕೂರಿಸುತ್ತಾನೆ.]
ಕಾಡಿನಿಂದಾಚೆ ಹೆದ್ದಾರಿಯಲಿ ನಿಲ್ಲಿಸಿಹ
ನನ್ನ ತೇರ್ಗವನನೊಯ್.
(ಒಂದನೆಯ ಪುಳಿಂದನನ್ನು ಹಿಂಬಾಲಿಸಿ ಪುಳಿಂದರೆಲ್ಲ ಹೊರಡುತ್ತಾರೆ.)
ಮೇಧಾವಿನಿಯ ಪುಣ್ಯದಿಂದೆಂತಪ್ಪ ಬೇಂಟೆ
ದೊರೆತುದಿಂದು! ಮೇರೆದಪ್ಪುವ ಸುಖಕೆ
ಮುಚ್ಚಿವೋಪಳೊ ಏನೊ ಕಂದನಂ ಕಂಡು?
ಕಂದನನವಳ್ ಕಾಣ್ಬ ಮುನ್ನಮೆ ನಾನ್
ಕಾಣವೇಳ್ಕಾಕೆಯನ್. ಧನ್ಯನಾಂ, ಧನ್ಯೆ ತಾಂ,
ಧನ್ಯಮೆಮ್ಮೀ ನಾಡು! ಧನ್ಯಮೀ ಕಾಡೂ,
ಶ್ರೀಹರಿಯಕಂದನಂ ನನಗಿತ್ತ ಸಗ್ಗವೀಡು!
[ಹೊರಡುಲುದ್ಯುಕ್ತನಾಗುತ್ತಾನೆ.]

ಪರದೆ ಬೀಳುತ್ತದೆ

*

ದೃಶ್ಯ

[ಚಂದನಾವತಿಯ ರಾಜಬೀದಿ. ಪಂಡಿತರಿಬ್ಬರು ದಾನದಕ್ಷಿಣೆಯ ಭಾರಕ್ಕೆ ಕುಸಿದು, ಬಾಗಿ ಹೊರಲಾರದೆ ಹೊತ್ತುಕೊಂಡು ಬರುತ್ತಾರೆ. ಉಸ್ಸೆಂದು ನಿಲ್ಲುತ್ತಾರೆ. ಬೆವರು ಒರೆಸಿಕೊಳ್ಳುತ್ತಾರೆ.]

೧ನೆಯ ಪಂಡಿತ: – ದಾನವೂ ಬಾರವಾದುದು ನನಗೆ ಇದೆ ಮೊದಲ್.
ಆನೆಯನೆ ಕೊಟ್ಟರೂ ದಾನವೆಂದರೆ ನನಗೆ
ಬಲು ಹಗುರವೆಂದು ಹೆಗಲೊಳೆ ಹೊತ್ತು ತಹೆನಲ್ತೆ!

೨ನೆಯ ಪಂಡಿತ: – ಇರಲಿ. ಈಗ ಒಂದಿನಿತು ಹೊರೆ ಇಳುಹಿ,
ಆಮೇಲೆ ಆನೆಯನೆ ಹೊರುವಿರಂತೆ!
[ಇಬ್ಬರೂ ಹೊರೆಗಳನಿಳುಹಿ ನೆಟ್ಟಗೆ ನಿಂತು ಸುಧಾರಿಸಿಕೊಳ್ಳುತ್ತಾರೆ]

೧ನೆಯ ಪಂಡಿತ: – ಈ ಪರಿಯ ದಾನಧರ್ಮಗಳಂ ಹಿಂದಾರೂ
ಮಾಡಿಲ್ಲ. ಮುಂದಾರು ಮಾಡುವರೊ ನಾನರಿಯೆ!

೨ನೆಯ ಪಂಡಿತ: – ಬೆಳ್ಗೊಡೆಯನೊಂದುಳಿದು ಮತ್ತೆಲ್ಲವಂ ಕೊಟ್ಟರ್
ಎಂದೆನೆಗೆ ಹೇಳಿದರು. ಚೆಲ್ಲಿದರು ವಿತ್ತಮಂ
ಕೋಶವೇ ಬರಿದಾಗುವನ್ನೆಗಂ.

೧ನೆಯ ಪಂಡಿತ: – ಬಿಡು, ಬಿಡು;
ಏನ್ ಮಾತು ನಿನ್ನದು? ದೊರೆಗೆ ದೊರೆಕೊಂಡ ಆ
ಪುಣ್ಯಶಿಶುಮಹಿಮೆಯಿಂ ಅರಮನೆಯ ಅಂಗಳಕೆ
ಹೊನ್ನಮಳೆ ಸುರಿದುದಂತೆ! ಬಡಜನರು
ಹೊರಲಾರದಲ್ಲಲ್ಲಿ ಚೆಲ್ಲುತ್ತ ಹೋದುದಂ
ನಾನೆ ಕಣ್ಣಾರೆ ಕಂಡೆನ್; ನನ್ನಾಣೆ!

೨ನೆಯ ಪಂಡಿತ: – ಈ ರಾಜ್ಯದಲ್ಲಿನ್ನು ಹೆಣ್ಣ ನಡುವಲ್ಲದೆಯೆ
ಬಡತನಕೆ ಬೇರೆ ಆಶ್ರಯವಿರದು! ಏನೆಂಬೆ?

೧ನೆಯ ಪಂಡಿತ: – ನಿನ್ನ ಪಾಂಡಿತ್ಯಕೆಲ್ಲಿಂದಮೈತಂದುದೀ
ರಸಿಕತ್ವಂ? ಆ ಶಿಶುಮಹಿಮೆಯೆ ಇರಲ್ವೇಳ್ಕುಂ!
ಶುಷ್ಕಮುಂ ರಸಮಯಂ ತಾನಾದುದಕೆ ನೀನೆ
ಪರಮಂ ನಿದರ್ಶನಂ!

೨ನೆಯ ಪಂಡಿತ: – ಆತನಾ ಮಹಿಮೆಯಿಂ
ಕುಂಟರಿಗೆ ಕಾಲ್ ಬಂದುದಂತೆ; ಕುರುಡರಿಗೆ
ಕಣ್ ಬಂದುದಂತೆ; ಮೂಕರಿಗೆ ಬಾಯ್ ಬಂದು
ಗಳಪತೊಡಗಿದರಂತೆ. ವೈದ್ಯರಿಂ, ಮರ್ದ್ದಿನಿಂ,
ಮಂತ್ರದಿಂ ಗುಣವಡೆಯದಿರ್ದ್ದ ರುಜೆಗಳವೆನಿತೊ
ಗುಣವಾದುವಂತೆ.(ತುಸು ನಕ್ಕು ನಾಚಿದಂತೆ ಮಾಡಿ)
ಇನ್ನೆನಗೆ ನವಯೌವನಂ ಬಂದು
ರಸಿಕತೆಯ ಬುಗ್ಗೆಯುಕ್ಕುವುದೊಂದು ಅಚ್ಚರಿಯೆ?

೧ನೆಯ ಪಂಡಿತ: – ಹರಿಭಕ್ತರಿದ್ದೆಡೆಯೊಳೇನಾಗದಿಹುದೊ!
[ಎದುರಾಗಿ ಮತ್ತೊಬ್ಬ ಪಂಡಿತ ಬರುತ್ತಾನೆ.]

೩ನೆಯ ಪಂಡಿತ: – ಏನಿಲ್ಲಿ ನಿಂತುಬಿಟ್ಟಿರಿ ಮೂಟೆಗಳನಿಳುಹಿ
ನಡುಬೀದಿಯಲ್ಲಿ?

೨ನೆಯ ಪಂಡಿತ: – ಏನು, ಶಾಸ್ತ್ರಿಗಳೆ,
ಹೀಗೆನ್ನುವಿರಿ? ದೇಶದಲ್ಲಿರಲಿಲ್ಲವೇನು ತಾವು?
ದೊರೆಗಿಂದು ದಿವ್ಯಪುತ್ಸೋತ್ಸವಂ!

೩ನೆಯ ಪಂಡಿತ: – ಮಗನ ಹೆತ್ತಳೆ ಮೇಧಾವಿ?

೧ನೆಯ ಪಂಡಿತ: – ಇನ್ನೇನು? ಹೆತ್ತಂತೆಯೆ! ನಮ್ಮರಸು
ಬೇಂಟೆಯ ಬಿನದಕೆಳಸಿ ಕಾನನಕೆ ಹೋಗಿರಲು
ಮುರಹರನನಲ್ಲದೆ ಇನ್ನಾರನೂ ನೆನೆಯದಿಹ
ಮುದ್ದು ಮಗುವೊಂದು ದೊರಕಿದುದು. ಆ ಶಿಶುಗೆ
ನಾಮಕರಣಂಗೆಯ್ಯೆ ಹೋಗಿದ್ದೆವರಮನೆಗೆ.

೩ನೆಯ ಪಂಡಿತ: – ಓಹೊ, ಹೆಸರಿಡಲೆ? ಏನೊ ಹೆಸರು?

೨ನೆಯ ಪಂಡಿತ: – ಚಂದ್ರಹಾಸ!

೩ನೆಯ ಪಂಡಿತ: – ಬಲು ಸೊಗಸು!  ಬಲು ಸೊಗಸು!

೧ನೆಯ ಪಂಡಿತ: – ಬರಿಯ ಅಂಕಿತನಾಮವಲ್ತು!

೨ನೆಯ ಪಂಡಿತ: – ಹೆಸರಿನ ಹಿರಿಮೆ ಉಸಿರಿಗನ್ವಯ! ತಿಳಿಯಿತೆ?

೧ನೆಯ ಪಂಡಿತ: – ಪಾಂಡಿತ್ಯವಾರಿಧಿಯ ಮಥನದಿಂದುದ್ಭವಿಸಿ
ಬಂದ ನವನೀತವದು!

೩ನೆಯ ಪಂಡಿತ: – ಅನ್ವರ್ಥವೆಂತೊ? ತಿಳಿಯಲೆಳಸುವೆನು.
[೧ನೆಯ ಮತ್ತು ೨ನೆಯ ಪಂಡಿತರು ರಾಗವಾಗಿ ಹಾಡಿಯೆ ವಿವರಿಸುತ್ತಾರೆ.]

೧ನೆಯ ಪಂಡಿತ: – ನಿರ್ಮಲಮುಖಾಂಬುಜದೊಳಿಂದುವಂ ಕಳಕಳಿಸಿ
ನಗುವನದರೀಂ…. ಚಂದ್ರಹಾಸನ್!

೩ನೆಯ ಪಂಡಿತ: – ಭಲಾ! ಭಲಾ!

೨ನೆಯ ಪಂಡಿತ: – ಪಸುಳೆತನದಿಂದೆ ವೃದ್ಧಾಪ್ಯದನ್ನೆಗಂ
ಬಿಸಜನಾಭನ ಭಕ್ತಿ ದೊರೆಕೊಳದ ಮನುಜರಂ
ನಸುನಗುವ ಧವಳದೊಳ್ಪಿಂ… ಚಂದ್ರಹಾಸನ್!

೩ನೆಯ ಪಂಡಿತ: – ಭಲಾ! ಭಲಾ! ಭಲಾ! ಬಾಪ್ಪುರೇ!

೧ನೆಯ ಪಂಡಿತ: – ಪಸರಿಸುವ ಜಸದ ಬೆಳ್ಪಿಂ… ಚಂದ್ರಹಾಸನ್!

೧ನೆಯ ಪಂಡಿತ: – ಅಸಮನ್. ಅಕ್ಷೀಣನ್, ಅಕಳಂಕನ್, ಅತಿಶಾಂತನ್
ಎಂಬೆಸೆವ ಸದ್ಗುಣಗಳೇಳ್ಗೆಯಿಂ… ಚಂದ್ರಹಾಸನ್!

೩ನೆಯ ಪಂಡಿತ: – ಘೇ! ಉಘೇ! ಭಲಾ! ಬಾಪ್ಪುರೇ!

೧ನೆಯ ಪಂಡಿತ: – ಮಂಜು ಮಹಿಮಾಸ್ಪದಂ,

೨ನೆಯ ಪಂಡಿತ: – ಮಂಜು ಮಹಿಮಾಸ್ಪದಂ,
[೩ನೆಯ ಪಂಡಿತ ಮೆಚ್ಚಿ ಮೆಚ್ಚಿ ತಲೆದೂಗುತ್ತಿರುತ್ತಾನೆ.]

೧ನೆಯ ಪಂಡಿತ: – ಚಾರು ವೃತ್ತಂ,

೨ನೆಯ ಪಂಡಿತ: – ಚಾರುವೃತ್ತಂ,

೧ನೆಯ ಪಂಡಿತ: – ಕಲಾಪುಂಜಂ,

೨ನೆಯ ಪಂಡಿತ: (೩ನೆಯ ಪಂಡಿತನಿಗೆ) ಅರ್ಥವಾಯಿತು ತಾನೆ, ದ್ವಂದ್ವಾರ್ಥ?

೩ನೆಯ ಪಂಡಿತ: – ವ್ಯರ್ಥವಾದೀತೆ ತಮ್ಮ ಅಲಂಕಾರ?
ಈ ಆಲಂಕಾರರಿಕನ ಮುಂದೆ?…. ಮುಂದೆ?

೧ನೆಯ ಪಂಡಿತ: – ಸ ದಾನ ಭೋಗಂ,

೨ನೆಯ ಪಂಡಿತ: – ಸದಾ ನಭೋ ಗಂ,
[ಮೂರನೆಯ ಪಂಡಿತ ತಲೆದೂಗುತ್ತಾನೆ]

೧ನೆಯ ಪಂಡಿತ: – ಕುವಲಯ ಪ್ರಿಯಂ,

೨ನೆಯ ಪಂಡಿತ: – ಕುವಲಯ ಅಂದರೆ ಭೂಮಿ, ಮತ್ತು ಕೈರವ, ನೈದಿಲೆ.

೩ನೆಯ ಪಂಡಿತ: – ನಾನೇನು ವಿದ್ಯಾರ್ಥಿಯೆ, ತಮ್ಮ ಪ್ರವಚನಕ್ಕೆ?

೨ನೆಯ ಪಂಡಿತ: – ಉಂಟೆ? ಉಂಟೆ? ಉಂಟೆ? ತಪ್ಪಾಯ್ತು!

೧ನೆಯ ಪಂಡಿತ: – ರಂಜಿಸುವ ರಾಜನ್ ಎನ್ನವೊಲಾದೊಡಂ
ಮಿತ್ರ ತೇಜಕಳವಳಿದು,
ಪಗೆಯ ಭಂಜನೆಗೆ ಸಿಲ್ಕಿ,
ಬಡತನವಪ್ಪಿ, ಕಂದಿ,
ಪಳಿವಂ ಜಗವರಿಯೆ ಪೊತ್ತನ್ ಎಂದು
ಅಮೃತಾರ್ಚಿಯಂ ಜರೆದು ನಗುವನ್
ಅದರಿಂ ಚಂದ್ರಹಾಸನಿವನ್!

೩ನೆಯ ಪಂಡಿತ: – ಸತ್ತೆ, ಸತ್ತೆ, ಸತ್ತೆ, ಪಂಡಿತರೆ!
ನವನೀತಮಂ ಸವಿದು ಹೊಡೆ ಸಿಡಿದು ಹೋಯ್ತು!
ಅಲ್ಲಿ ನೋಡಿ: ಏಕೊ ಪುರ ನಿವಾಸಿಗಳ್
ಗುಂಪೆದ್ದು ಬರುತಿಹರ್!

೧ನೆಯ ಪಂಡಿತ: – ಪ್ರಮಾದವಾದೀತು! ಬೇಗಬನ್ನಿ!
[೧ನೆಯ ಮತ್ತು ೨ನೆಯ ಪಂಡಿತರು ಗಂಟುಮೂಟೆ ಎತ್ತಿ ಹೊತ್ತುಕೊಂಡು ಓಡುತ್ತಲೆ ಹೋಗುತ್ತಾರೆ. ೩ನೆಯವನು ಅವರು ಹೋಗುವುದನ್ನೆ ನೋಡಿ ನಗುತ್ತಾ, ತಿರುಗಿ ಎದುರು ದಿಕ್ಕಿಗೆ ಹೋಗುತ್ತಾನೆ. ನಾಲ್ಕು ಜನರು ಬರುತ್ತಾರೆ.]

ಒಂದನೆಯವನು: – ಪುಣ್ಯತ್ಮನಪ್ಪಾ! ಬಹುಕಾಲ ಬಾಳಲಿ!
ಕಣ್ಣಿಲ್ಲದೀ ಪಾಪಿಗೆ ಕಣ್ ಕೊಟ್ಟನಪ್ಪಾ!
ಬೆಳಕೆಂದರೇನೆಂದು ಇಂದು ನಾ ಕಂಡೆ.
[ಸುತ್ತಲೂ ನೋಡುತ್ತಾ ಸುಯ್ಯುತ್ತಾ ಹರ್ಷಿಸುತ್ತಾ]
ಅಃ ಎಂತಪ್ಪ ಲೋಕವಿದು! ಏನಂದ! ಏನ್ ಚಂದ!
ಇದುವರೆಗೆ ಬರಿಯ ಹೆಸರಾಗಿರ್ದುದೀ ಎಲ್ಲ:
ಈ ಆಗಸ, ಈ ಮುಗಿಲು, ಈ  ಹಸುರು, ಈ ಮರ,
ಈ ಹಕ್ಕಿ, ಈ ಹೂವು, ಈ ಕೆಂಪು, ಈ ಬಿಳಿ,
[ಜೊತೆಯಿದ್ದ ಮೂವರನ್ನು ಮೆಚ್ಚಿ ಮುಟ್ಟುತ್ತ]
ಈ ನೀನು, ಈ ನೀನು, ಈ ನೀನು!…
ಏನದ್ಭುತ ಈ ಎಲ್ಲ! ಏನದ್ಭುತ ನೀವೆಲ್ಲ!…
ಕಣ್ಣಿರುವ ನಿಮಗೆ ಕಣ್ಣ ಧನ್ಯತೆಯ ತಿಳಿಯದಲ್ಲಾ!

ಎರಡನೆಯವನು: – ಬರಿಯ ಕಣ್ಣಿದ್ದರೇನು ಭಾಗ್ಯವಯ್ಯಾ?
ಹನ್ನೆರಡು ವರ್ಷಗಳಿಂದ ನರಳಿದೆನಯ್ಯಾ
ಆ ಭಯಂಕರ ರೋಗದಿಂದ! ವೈದ್ಯರಾಯ್ತು,
ಮದ್ಧಾಯ್ತು, ಮಂತ್ರವಾಯ್ತು; ದಾನ, ಧರ್ಮ,
ತೀರ್ಥಯಾತ್ರೆ, ಎಲ್ಲ ಆಯ್ತು.
ಏನಾದರೂ ವಾಸಿಯಾಗಲಿಲ್ಲ.
ಇನ್ನೆನು ನೇಣೊಂದೆ ಉಳಿದಿತ್ತು.
ಮಾರಾಯ ಅವನು ನಮ್ಮಿಳೆಗೆ ಕಾಲಿಟ್ಟ ದಿನವೆ
ಎಲ್ಲ ಗುಣವಾಗಿ ಅರೋಗ ದೃಢಕಾಯನಾದೆ.
ಸಾವಿರ ವರ್ಷ ಬಾಳಲಿ!
ಎಂದೆಂದೂ ನಮ್ಮಿಳೆಯನಾಳಲಿ!
ಪುಣ್ಯಾತ್ಮ್!

ಮೂರನೆಯವನು: – ಕಾಲಿರದೆ ಬೀದಿಯಲಿ ಹೊರಳುತ್ತಿದ್ದೆನಯ್ಯಾ.
ನೋಡೀಗ ನನ್ನ! ಬೆಟ್ಟವನು ಬೇಕಾದರೂ
ನಗುನಗುತ ಏರುವೆನು; ಕಂದಕವ ನೆಗೆಯುವೆನು.
ಕೋಟೆಕೊತ್ತಲಗಳನು ಲಗ್ಗೆ ಹತ್ತುವೆನು!
ನಾನಿನ್ನು ಸೈನ್ಯಕ್ಕೆ ಸೇರಿ, ನಮ್ಮೊಡೆಯನಿಗೆ
ಸೇವೆ ಸಲ್ಲಿಸಿ ಬಾಳ ತೇಯುವೆನು.

ನಾಲ್ಕನೆಯವನು: – ಮೂಕನಾಗಿದ್ದೆ. ಇನ್ನೇನು? ಸಂಗೀತವನೆ
ಕಲಿತು ಆಸ್ಥಾನದಲಿ ವಿದ್ವಾಂಸನಾಗುವೆನು.

ಎಲ್ಲರೂ: – ಜಯವಕ್ಕೆ ಚಂದ್ರಹಾಸಂಗೆ! (ಎಂದು ಹೊರಡುತ್ತಾರೆ.)
[
ಸೆರೆಮನೆಯಿಂದ ಬಿಡುಗಡೆಯಾದ ಇಬ್ಬರು ಬರುತ್ತಾರೆ.]

೧ನೆಯವನು: – ಕೊರಳಾಣೆ, ನನ್ನಾಣೆ, ನಿನ್ನಾಣೆ!
ನಿಜವಾಗಿಯೂ ನಾನಲ್ಲವಪ್ಪಾ ಕದ್ದವನು.
ಸುಮ್ಮನೆ ಸೆರೆಮನೆಯಲಿಟ್ಟಿದ್ದರಯ್ಯಾ.
ಇಂದೆಲ್ಲರನು ಬಿಡುಗಡೆ ಮಾಡಿದರು.

೨ನೆಯವನು: – ಬ್ರಹ್ಮಹತ್ಯೆ ಗೋಹತ್ಯೆ ಮಾಡಿದವರನ್ನೂ?

೧ನೆಯವನು: – ಇದೇನು ಹೀಗೆಂದು ಕೇಳುವೆಯಲ್ಲಾ?
ಇನ್ನು ಮುಂದೆ ನಾಡಿನ ಸೆರೆಮನೆಗಳನ್ನೆಲ್ಲ
ಮುಚ್ಚುವರಂತೆ.

೨ನೆಯವನು: – ಕಳ್ಳರಿಗೆ ಕೊಲೆಪಾತಕರಿಗೆ ಗತಿ?

೧ನೆಯವನು: – ಆ ಪುಣ್ಯಾತ್ಮನೀ ನಾಡಿಗೆ ಕಾಲಿಡಲು
ಹುಲಿಯಾದಿಯಾಗಿ ಕೋಳ್ಮಿಗಗಳೂ
ಸಾಧುವಾದುವಂತೆ! ಇಂತಿರಲು
ಕಳವು ಕೊಲೆಗಳಿಗೆಲ್ಲಿ ಕತ್ತಲೆ, ಬೆಳಕಿರಲು ಮುಂದೆ?

೨ನೆಯವನು: – ಬಾ, ಭಾವ. ಗುಡಿಗೆ ಹೋಗಿ, ಶ್ರೀಹರಿಗೆ
ಹಣ್ಣು ಹೂ ಮುಡಿಪನೊಪ್ಪಿಸಿ, ಮನೆಗೆ ಹೋಗೋಣ.
ನೀನೆಂದು ಸೆರೆಯಿಂದ ಹಿಂದಿರುಗಿ ಬರುವೆಯೋ
ಎಂದು ಉಣದೆಯೆ ಉಡದೆ ಕೊರಗಿಹಳು ಅಕ್ಕ.
ಇಂದು ಅವಳಿಗೆ ಜೀವ ಬಂದಂತಾಗಿದೆ.
[ತೆರಳುತ್ತಾರೆ. ಏಳೆಂಟು ಜನ ಪಟ್ಟಣಿಗರು ಜಯಘೋಷಮಾಡುತ್ತಾ ಪ್ರವೇಶಿಸುತ್ತಾರೆ.]

೧ನೆಯವನು: – ಚಂದ್ರಹಾಸಂಗೆ ಜಯವಾಗಲಿ!

ಎಲ್ಲರೂ: – ಜಯವಾಗಲಿ! ಘೇ! ಉಘೇ!

೨ನೆಯವನು: – ವಿಧುಹಾಸನಿಗೆ ಜಯವಾಗಲಿ!

ಎಲ್ಲರೂ: –  ಜಯವಾಗಲಿ! ಘೇ! ಉಘೇ!

೩ನೆಯವನು: – ಶಶಿಹಾಸನಿಗೆ ಸೊಗವಾಗಲಿ!

ಎಲ್ಲರೂ: – ಸೊಗವಾಗಲಿ! ಘೇ! ಉಘೇ!

೪ನೆಯವನು: – ಶ್ರೀಹರಿ ಕೃಪೆಯಾಗಲಿ!

ಎಲ್ಲರೂ: – ಕೃಪೆಯಾಗಲಿ! ಘೇ! ಉಘೇ!

ಪರದೆ ಬೀಳುತ್ತದೆ

*