ದೃಶ್ಯ

[ಸೇನಾಶಿಬಿರದ ಬಳಿಯ ಹಕ್ಕಲಿನಲ್ಲಿ ದಳಪತಿಗಳಾದ ವೀರಸೇನ ರಣಸಿಂಹರು ತಿರುಗಾಡುತ್ತಾ ಬರುತ್ತಾರೆ. ಬಂಡೆಗಳಿವೆ, ಗಿಡ ಮರ, ಪೊದೆಗಳಿವೆ. ದೂರ ಸುತ್ತಲೂ ಕಾಡು ಅಂಚುಕಟ್ಟಿದಂತಿದೆ: ಸಂಧ್ಯಾಕಾಲ.]

ರಣಸಿಂಹ: – ಕಾಳೆಗದ ಬಳಲಿಕೆಯ ಪರಿಹರಿಸಲೆಂಬಂತೆ
ಬೀಸುತಿದೆ ತಂಗಾಳಿ.

ವೀರಸೇನ: – ಏನು ಶಾಂತಿಯ ಸಂಜೆ!
ಗಗನಮಣಿ ಪಶ್ಚಿಮಾಂಗನೆಯ ಬೈತಲೆಯ
ರಂಗುಮಾಣಿಕದಂತೆ ಪಡುವೆಟ್ಟದಂಚಿನಲಿ
ಕಂಗೊಳಿಸುತಿಹನೆಂತು!

ರಣಸಿಂಹ: – ಸಂಜೆವೆಣ್ಣುಟ್ಟ
ರಕ್ತಾಂಬರವೊ ಎಂಬಂತೆ ಬೈಗುಗೆಂಪೆಸೆಯುತಿದೆ!

ವೀರಸೇನ: – ಕಾಳೆಗದ ದಿನದ ಸಂಜೆಗೀ ನೆತ್ತರ್ಗೆಂಪು
ಸಹಜಮಲ್ತೆ?… ಈ ದಿನದ ಕಾಳೆಗದಿ ನಾಳೆಯ ಗೆಲ್
ನಮ್ಮದಾದಂತಾಯ್ತು, ಅಲ್ಲವೆ, ರಣಸಿಂಹ?

ರಣಸಿಂಹ: – ಹಾಗೆಂದೆ ತೋರುತಿದೆ… ಇನ್ನೇನು ನಮ್ಮವರ್
ಸೋತು ಹಿಮ್ಮೆಟ್ಟುವೆರೊ ಎಂದಿರ್ದ್ದೆ. ಅನಿತರೊಳ್
ಕೇಳ್ದತ್ತು ಸೇನಾನಿ ಚಂದ್ರಹಾಸನ ವೀರ ಅಟ್ಟಹಾಸಂ.
ಕಂಡುದೆ ತಡಂ ತಮ್ಮ ನೆಚ್ಚಿನ ವೀರಮೂರ್ತಿಯಂ,
ಪಡೆಗೆ ಪಡೆ ಉಘೇ ಬೊಬ್ಬಿರಿದು,
ಭಕ್ತಿಯಾವೇಶದಿಂ ಶಕ್ತಿಯುಕ್ಕಿತೊ ಎನಲ್
ನುಗ್ಗಿದರ್ ಮುಂಗಾರ ಬಿರುಗಾಳಿಯಂತೆವೋಲ್.
ಹಿಮ್ಮೆಟ್ಟುತೋಡಿದಾ ಶತ್ರುಸೇನೆ
ಕಳೆದುಕೊಂಡುದು ತನ್ನ ಬಹಳ ಸಂಖ್ಯೆಯಂ.

ವೀರಸೇನ: – ನಮ್ಮ ಪಡೆಯೂ ಕಳೆದುಕೊಂಡಿಹುದು ತನ್ನಾಳ್ಗಳಂ.

ರಣಸಿಂಹ: – ಕಳೆದಿದುಹು. ಆದೊಡಂ ಬಹಳ ಜನ ಮಡಿದಿಲ್ಲ.
ಇಂದಾದ ಕಾಳೆಗಂ ಸಮಗೈಯ ಸಮರಂ.
ಆದೊಡಂ ಶತ್ರುಪಕ್ಷದ ಮುಂದೆ ನಮ್ಮ ನಷ್ಟಂ
ಕಿರಿದೆ. ಸೇನಾನಿಯೊಂದು ಎಣೆಯಿಲ್ಲದಿಹ
ಯುದ್ಧಕೌಶಲದಿಂದೆ ನಾಳೆಯ ಜಯಂ
ನಮ್ಮದೆಂಬುದಕೆ ಸಂದೇಹಮಿಲ್ಲ.

ವೀರಸೇನ: – ಸೇನಾನಿ ಚಂದ್ರಹಾಸಂ ಕ್ಷೇಮದಿಂದಿರ್ಪನಲ್ತೆ?

ರಣಸಿಂಹ: – ಆತಂಗದೇನೊ ಅಲೌಕಿಕ ರಖ್ಷೆಯಿರ್ಪಂತೆ
ತೋರುತಿದೆ. ಕೈದುಗಳ್ ಸೋಂಕಲಂಜುವುವವನ!

ವೀರಸೇನ: – ಈಗಳೆಲ್ಲಿಹನು? ನೋಳ್ಪಮಾತನಂ.

ರಣಸಿಂಹ: – ತನ್ನ ಗೂಡಾರದಲ್ಲಿಹನು. ನಾಳೆಯ ಸಮರ
ಸನ್ನಾಹವಂ ಚಿಂತಿಸುತಲಿಹನೆಂದು ತೋರುವುದು.
ನಾನ್ ಕಾಣೆ ಅವನ ಮೀರಿಹ ಯೋಧನಿಹನೆಂದು.
ಸರಳನೆಸೆವುದರಲಿ ಅವನ ಮುಂದಾರಿಲ್ಲ.
ನಾನೆ ಕಂಡಿಹೆನು: ಅವನ ಬಾಣಗಳೆಂತು
ಕಾರ್ಗಾಲ ಮಳೆಯಂತೆ ಅರಿಭಟರ ಮುಚ್ಚುವುವು!
ಅವನ ಕೂರಸಿಮಿಂಚೊ? ಜವನ ಸಂಚು!
ಕಳೆದಿಹೆನು ಹನ್ನೆರಡುವರ್ಷಂಗಳನ್ ಆನ್
ಅವನ ಸಂಗಾತಿಯಾಗಿ, ಅವನೆಣೆಯ ವೀರರಂ,
ಅವನೆಣೆಯ ಭಕ್ತರಂ, ಕಂಡಿಲ್ಲ, ಕೇಳಿಲ್ಲ.
ಕ್ಷಮೆಯೊಳುಂ ಕ್ಷಮೆಯನ್ನೆ ಮೀರಿಹನು.
ಎನಿತೊ ಅರಸರ ಗೆಲ್ದನಾದರೂ ಒಮ್ಮೆಯೂ
ಕ್ರೌರ್ಯಮಂ ಕ್ಷಾತ್ರಮೆಂದವನು ಭ್ರಮಿಸಲಿಲ್ಲ.

ವೀರಸೇನ: – ಅಹುದು. ಅವನ ದನಿ ಸುಭಟರೆದೆಗಾವೇಶ.
ಅವನಿರಲು ಸಾವೆಂಬುವಂಜಿಕೆಯನರಿಯರಾ
ಸೈನಿಕರ್. ನಾನೆ ನೋಡಿದೆನಿಂದು. ಅರಿಭಟರ
ಮುತ್ತಿಗೆ ಸಬಲವಾಗಲೆಮ್ಮವರು ಹಿಂಜರಿಯ
ತೊಡಗಿದರ್. ಚಂದ್ರಹಾಸನ ಅಮೃತವಾಣಿಯಂ
ಉತೇಜಕದ ನುಡಿಗಳಂ ಕೇಳಿದುದೆ ತಡಂ
ಮುಗ್ಗಿದರ್ ಮುಗಿಲ ಮೊಗ್ಗರದಂತೆ;
ಹಿಗ್ಗಿದರ್, ಪೆರ್ಚ್ಚಿದರ್ ಭೈರವ ರಣಾವೇಶದಿಂ!

ರಣಸಿಂಹ: – ಜಯರಮಾ ಜೀವಿತೇಶ್ವರನವನ್!

ವೀರಸೇನ: – ಅವನ ಕಂಠದೊಳೊಂದು ಸಾಲಗ್ರಾಮದುಪಲಂ
ಪೊನ್ನಮನೆ ಮಾಡಿಕೊಂಡೆಸೆಯುತಿಹುದಂತೆ!
ಆತನ ವಿಚಿತ್ರ ಕಥೆಗದೆ ಮೂಲವಂತೆ!
ಆ ಮೈಮೆಯಿಂದವನಿಗೆಲ್ಲಿಯುಂ ಗೆಲ್ಲಂತೆ!
ನಿಜವೆ?

ರಣಸಿಂಹ: – ಅಹುದು. ಆದರಾತನ ಗೆಲವಿಗಾ
ಬಟ್ಟಗಲ್ಲೊಂದು ಬರಿ ನಿಮಿತ್ತಮಾತ್ರಂ.
ಭಕ್ತಿಸತ್ವದೊಳಿರ್ಪುದಾತನಾ ಮಹಾಶಕ್ತಿ.
[ಇಬ್ಬರೂ ನಡೆಯುತ್ತಾ ಒಂದು ಬಂಡೆಯ ನೆತ್ತಿಯನ್ನೇರಿ  ಕೂರುವರು]

ವೀರಸೇನ: – ಅದೊ, ಎನಿತು ಸುಂದರಂ ಈ ಚಂದ್ರೋದಯಂ!

ರಣಸಿಂಹ: – ಶಾಂತಿಮಂದಿರನಾಗಿ ಶೀತಕಾಂತಿಯ ಸುಧಾ
ವರ್ಷದಿಂದಿಳೆಗೆ ಹರ್ಷದ ತಣ್ಪನೆರಚುತ್ತೆ
ಬರುತಿಹನು, ರಣದ ದಣಿವಂ ಕಳೆಯಲೆಂಬಂತೆ.

ವೀರಸೇನ: – ಹೋಮಾಗ್ನಿಧೂಮವಂ ಭೇದಿಸುತಲೇಳುವಾ
ಇಷ್ಟದೇವತೆಯಂತೆ, ಕತ್ತಲೆಯನಟ್ಟುತ್ತ
ಮೂಡಿ ಮೆರೆಯುತಿಹನಾ ಇಂದ್ರದಿಗ್ವೇದಿಯಲಿ.

ರಣಸಿಂಹ: – ನಮ್ಮೆಲ್ಲ ಸಮರ ಸನ್ನಾಹವನೆ ಮೂದಲಿಸಿ
ನಗುವಂತೆ ತೋರುತಿದೆ ಈ ಚಂದ್ರಹಾಸಂ!

ವೀರಸೇನ: – ಆದರೆಮಗೊಡೆಯನ್ ಆ ಚಂದ್ರಹಾಸನಲ್ತೆ?
[ಇಬ್ಬರೂ ನಗುತ್ತಾರೆ.]
ನಾಳೆ ಆತನ ಸನ್ನೆಯಲಿ ನಡೆವ ಸಮರದಲಿ
ನಮ್ಮ ಗೆಲ್ಲನೆ ಸೂಚಿಸುವ ಹೊನ್ನಲೇಪಮಂ
ತಳೆದೆಸೆವ ಜೊನ್ನವೆಳ್ಳಿಯ ಗುರಾಣಿಯೆನಲ್ಕೆ
ಶೋಭಿಸುತ್ತಿಹನೀ ನಿಶಾಜೀವಿತೇಶ್ವರಂ!

ರಣಸಿಂಹ: – ಕುಳಿತಿಲ್ಲಿ ಒಂದಿನಿತುವೊಳ್ತು ಮೆಯ್ ಮರೆಯುವಂ
ಸೌಂದರ್ಯತೀರ್ಥದಲಿ ಮುಳುಗುತಾನಂದದಿಂ!

ಪರದೆ ಬೀಳುತ್ತದೆ,

*

ದೃಶ್ಯ

[ಚಂದನಾವತಿಯ ಒಂದು ಬೀದಿ. ಕುಂತಳನಗರದ ನಿವಾಸಿಯೊಬ್ಬನು ಬರುತ್ತಾನೆ.]

ಕುಂತಳನಿವಾಸಿ: – ಹಿಂದೆ ನಾನಿಲ್ಲಿಗೈತಂದಾಗಳ್ ಈ ನಾಡು
ಕಾಡು ಬೀಡಾಗಿತ್ತು. ಇಂದೊ ಹೊಸತೊಂದು
ನೋಟ! ಸಸ್ಯಸಮೃದ್ಧಿಯಿಂ, ಪುರಗಳಿಂ,
ಉದ್ಯಾನವನಗಳಿಂ ಸಿರಿಯ ನೆಲೆವೀಡಾಗಿ
ಶೋಭಿಸಿದೆ. ಈ ನಾಡ ಜನರೆನಿತು ಪುಣ್ಯಾತ್ಮರೊ!…
ಈ ಚಂದನಾವತಿಯೊ ಸೊಬಗಿನಾಲಯದಂತೆ
ಮೆರೆಯುತಿದೆ. ಮುಗಿಲ ಮುಟ್ಟುವ ಸೌಧಶಿಖರಗಳೇನ್
ಮಣಿಶಿಲಸೋಪಾನದಿಂದೆಸೆವ ಕೊಳಗಳೇನ್,
ಮೊರೆಮೊರೆದು ಪರಿವ ಪರಿಕಾಲ್ಗಳೇನ್, ತಿಳಿಯನೀರ್
ತುಂಬಿತುಳುಕುವ ಬಿತ್ತರದ ಸರೋವರಗಳೇನ್,
ಕೆರೆಗಳೇನ್!… ಮಣಿಕೃತ ಶೈಲಗಳೊ,
ದುರ್ಗಮದ ಕೋಟಿಕೊತ್ತಳಗಳೊ,
ಶಿಲ್ಪಕಲೆ ಬಲೆನೆಯ್ದ ಗುಡಿಗಳೊ,
ಕಣ್ಣಿಟ್ಟ ಕಡೆ ಕಂಗೊಳಿಪವೈಸೆ!…
ಎಲ್ಲಿ ಕಿವಿಗೊಟ್ಟೊಡಂ ಸಾಮರವದಿಂಚರಂ;
ಲಲನೆಯರ ಮೆಲ್ಲುಲಿಗಳಿಂಪು. ಹೂ ಗಂಧ
ಧೂಪ ಧೂಮದ ಕಂಪು… ಅಃ ಪೈರು ಪಚ್ಚೆಯ ಸೊಬಗೊ!…
ಈ ನಾಡೊಳೊಂದು ಮರಿದುಂಬಿಯಾಗುದಿಸಿ ಬರೆ,
ಒಂದು ಕೋಗಿಲೆಯಾಗಿ ಪುಟ್ಟಿ ಬರೆ ಪರಮಪುಣ್ಯಂ!…
ನಮ್ಮ ಕುಂತಳನಗರಿದು ಸಗ್ಗಮೆ ದಿಟಂ!
[ಇಬ್ಬರು ಪುರಜನರು ಬರುತ್ತಾರೆ. ಕುಂತಳನಿವಾಸಿಯನ್ನು ನೋಡಿ]

ಮೊದಲನೆಯ ಪೌರ: – ಆವನೊ ಹೊಸಬನಿರುವಂತೆ ತೋರುತಿದೆ.

ಎರಡನೆಯ ಪೌರ: – ಸೋದರನೆ, ನಾಡಾವುದುದು ನಿನ್ನ ಜನ್ಮದಿಂ
ಪುನೀತಮಾಗಿಹುದು, ಪೇಳ್. ಧನ್ಯರಪ್ಪೆವು ಕೇಳ್ದು.

ಕುಂತಳನಿವಾಸಿ: (ತನಲ್ಲಿಯೆ)
ಏನ್ ವಿನಯಮೀ ನಾಡವರ್ಗೆ!… (ಪ್ರಕಾಶ)
ಅಣ್ಣ , ನಾನು ಕುಂತಳನಗರದಿಂ ಬಂದಿಹೆನು;
ನಿಮ್ಮ ನಾಡಿನ ಸೊಬಗು ಸಿರಿ ವಿಭವಗಳನೆಲ್ಲ
ಕೇಳ್ದು, ಕಣ್ಣಿಂ ಕಂಡು ಧನ್ಯನಾಗಲ್ಕೆ
ಯಾತ್ರಿಕನವೋಲ್ ಇಲ್ಲಿಗೈತಂದೆ.
ನಿಮ್ಮ ನಾಡಿನ ಸಿರಿಯ, ನಿಮ್ಮ ನಗರದ ಸೊಬಗ
ಕಂಡು ಬೆರಗಾಗಿ ಹೋದೆನ್. ಹಿಂದೆ ಇಂತಿರಲಿಲ್ಲ.

ಮೊದಲನೆಯ ಪೌರ: – ನಮನಾಳುವ ಪುಣ್ಯಪುರುಷನ ಮಹಿಮೆಯಿಂ
ನಮ್ಮ ನೆಲಕಿಳಿದಿಹುದು ಆ ವೈಕುಂಠ ಕೃಪೆ!

ಕುಂತಳನಿವಾಸಿ: – ನಿಮ್ಮನಾಳುವ ಪುಣ್ಯ ಪುರುಷನಾರು?

ಎರಡನೆಯ ಪೌರ: – ಕೇಳ್ದರಿಯೆಯೇ ನೀಂ ಚಂದ್ರಹಾಸನ ಕೀರ್ತಿಯಂ?

ಕುಂತಳನಿವಾಸಿ: – ಆತನೇಂ ನಿಮ್ಮರಸನೇ?

ಮೊದಲನೆಯ ಪೌರ: – ದತ್ತುಮಗನಾತನೈ ನಮ್ಮರಸು ಕುಳಿಂದಂಗೆ.
ಆತನಿಂದಲೆ ನಮ್ಮ ಪೊಳಲ ಸಿರಿ ಇಂತು
ಪೆರ್ಚಿಹುದು. ರಾಜ್ಯವನು ಬಿತ್ತರಿಸಿ, ಅರಿನೃಪರ
ಮುರಿದಿಕ್ಕಿ, ಪ್ರಜೆಗಳೆದೆಯಲಿ ದೈವಭಕ್ತಿಯಂ
ಬಿತ್ತಿ, ಬೆಳೆದಿಹನು ಸೊಗವನೆಲ್ಲೆಲ್ಲಿಯುಂ.

ಎರಡನೆಯ ಪೌರ: – ಬೇಂಟೆಯಾಡುತ್ತೆಮ್ಮ ನೃಪನಡವಿಯೊಳ್
ತಿರುಗುತಿರೆ ವನದೇವತೆಯೆ ಆ ಶಿಶುವನಾತಂಗೆ
ತಂದಿತ್ತಳಂತೆ! ನಮ್ಮೀ ನಗರಿಗಾ ಬಾಲಕಂ
ಬಂದ ದಿನದಂದು ನಭದೊಳ್ ದೇವದುಂದುಭಿ
ಮೊಳಗಿತಯ್; ಅಭ್ರದಿಂ ಬಿಳ್ದುದು ಕನಕವೃಷ್ಟಿ!

ಕುಂತಳನಿವಾಸಿ: – ನೀಂ ಪೇಳ್ದುದಂ ಕೇಳ್ದೆನಗೆ ಉಕ್ಕುತಿದೆ ಕರುಬು.
ನಮ್ಮ ನಾಡಿನ ಗೋಳನೇನೆಂಬೆನೋ!

ಮೊದಲನೆಯ ಪೌರ: – ನಿಮ್ಮ ನಾಡೆಂತಿಹುದು? ನಿಮ್ಮರಸನೆಂತು?
ಮಳೆಬೆಳೆಗಳೆಂತು? ಧರ್ಮಭಕ್ತಿಗಳೆಂತು?
ನಾಡ ಜನರೆಲ್ಲ ಸಿರಿಸೊಗವನನುಭವಿಸಿಹರೆ?

ಕುಂತಳನಿವಾಸಿ: – ನಮ್ಮ ನಾಡಿನ ಕಥೆಯ ಕೇಳಿದರೆ
ವ್ಯಥೆಯಾಗದಿರದು ನಿಮಗೆ.
ನಮ್ಮರಸನೊಳ್ಳಿದಂ. ಮಳೆಬೆಳೆಗಳೆಲ್ಲ
ಎಂದಿನಂತೆಯೆ ಇಹವು. ರೋಗರುಜೆಬಾಧೆಯುಂ
ಎಲ್ಲಿಯೂ ತೋರಿಲ್ಲ.

ಎರಡನೆಯ ಪೌರ: – ಮತ್ತೇನು ಕೊರತೆ?

ಕುಂತಳನಿವಾಸಿ: – ನಮ್ಮರಸನಿಗೆ ದುಷ್ಟಬುದ್ಧಿ ಎಂಬೊನ್ ಮಂತ್ರಿ.
ವೃದ್ಧನಾಗಿಹ ದೊರೆಯನವನು ಮೂಲೆಗೆ ನೂಂಕಿ
ನಾಡನಾಳುವ ಸೂತ್ರಮಂ ತಾನೆ ಕೈಕೊಂಡು,
ಪ್ರಜೆಗಳಂ ಸುಲಿದು ಸೂಕ್ಷ್ಮ ವಿಧಾನಂಗಳಿಂ,
ತನಗಾಗದವರಂ ನಾನಾ ಉಪಾಯದಿಂ
ಕೊಲಿಸಿ, ಪ್ರೋತ್ಸಾಹಮಂ ಕಳ್ಳಕಾಕರಿಗಿತ್ತು,
ರಾಜ್ಯದಾದಾಯಮಂ ತನ್ನ ಬೊಕ್ಕಸಕಿಟ್ಟು
ಧೂರ್ತನಾಗಿಹನು. ಹೇಳಿಕೇಳುವರಿಲ್ಲ;
ತಾನೆತಾನಾಗಿಹನು… (ದೂರ ನೋಡಿ)
ಅದೇನದಾ ಕೋಲಾಹಲಂ?

ಮೊದಲನೆಯ ಪೌರ: – ಚಂದ್ರಹಾಸನ ದಂಡು ನೆರೆಯ ರಾಜ್ಯದ ಮೇಲೆ
ಸಾಗಿತ್ತು. ಜಯವಾಯ್ತು ಎಂದೆ ತೋರುತಿದೆ.
ಕೇಳುತಿದೆ ಸೈನಿಕರ ವಿಜಯಾಟ್ಟಹಾಸಂ.
ಸೇನೆ ಹಿಂತಿರುಗಿ ಬರುತಿದೆ ನಗರ ಶಿಬಿರಕ್ಕೆ.
(ಸೈನಿಕರ ಒಂದು ಗುಂಪು ಬರುತ್ತದೆ. ಒಬ್ಬನನ್ನು ಕರೆದು ಕೇಳುತ್ತಾನೆ.)
ಪೇಳಣ್ಣ ವಾರ್ತೆಯಂ

ಸೈನಿಕ: – ಮತ್ತಾವ ವಾರ್ತೆ?
ವಿಯಯವೊಂದೇ ನಮ್ಮ ವಾರ್ತೆ!

ಎರಡನೆಯ ಪೌರ: – ಜಯದ ಮೇಲೆ ಜಯ! ನಮ್ಮರಸಗೆಣೆಯಾರು?

ಸೈನಿಕ: – ಮತೊಂದು ಪಯಣ ಕಾದಿದೆ ನಾಳೆ.

ಮೊದಲನೆಯ ಪೌರ: – ಎಲ್ಲಿಗೆ?

ಸೈನಿಕ: – ಕುಂತಳ ನಗರಕ್ಕೆ.

ಕುಂತಳನಿವಾಸಿ: (ಬೆದರಿ) ಏತಕ್ಕೆ?

ಸೈನಿಕ: – ರಾಯಂಗೆ
ವರ್ಷ ವರ್ಷಕೆ ನಾವು ಕೊಡುವ ಸಿದ್ದಾಯಮಂ
ದುಷ್ಟಬುದ್ಧಿಗೆ ಸಲಿಸಲೆಂದು ಹೋಗುವೆವು.

ಕುಂತಳನಿವಾಸಿ: (ತನ್ನೊಳಗೆ) ಬದುಕಿದೆವು!

ಎರಡನೆಯ ಪೌರ: – ಚಂದ್ರಹಾಸನೂ ಹೋಗುವನೆ?

ಸೈನಿಕ: – ಇಲ್ಲ; ದೂತರು, ಮತ್ತು ಅವರ ನೆರವಿಗೆ ಸೈನಿಕರು.
[ಸೈನಿಕರು ಬೇಗ ಬೇಗನೆ ಹೋಗುತ್ತಾನೆ.]

ಎರಡನೆಯ ಪೌರ: (ಕುಂತಳನಿವಾಸಿಗೆ) ಕುಂತಳಕೆ ಎಂದೊಡನೆ
ನಿನಗೆ ಬೆದರಿಕೆಯಾಯ್ತೆ?

ಕುಂತಳನಿವಾಸಿ: – ಮೊದಲೇನೊ ಬೆದರಿದೆನ್, ಮತ್ತೆ ಸಂತಸವಾಯ್ತು.
ಅನಿತರಲಿ ಅವನ ವಿವರಣೆ ಕೇಳಿ ವ್ಯಥೆಯಾಯ್ತು.

ಮೊದಲನೆಯ ಪೌರ: – ಏಕೆ? ನೀನೆಂದುದುರ ಅರ್ಥವೆ ಹೊಳೆಯಲಿಲ್ಲ?

ಕುಂತಳನಿವಾಸಿ: – ಸೇನೆ ಮುತ್ತುವುದೆಂದು ಹೆದರಿದೆನ್. ಮತ್ತೆ,
ಚಂದ್ರಹಾಸನ ಸೇನೆ, ದುಷ್ಟಬುದ್ಧಿಗೆ ಶಿಕ್ಷೆ,
ಎಂದು ಸಂತಸವಾಯ್ತು! ಮತ್ತೆ, ದುಷ್ಟಬುದ್ಧಿಗೆ
ಸಿದ್ದಾಯಮಂ ಕೊಡಲೆಂಬುದನು ಕೇಳಿ ವ್ಯಥೆಯಾಯ್ತು.

ಮೊದಲನೆಯ ಪೌರ: – ಸೋದರನೆ, ಬಾ ನಮ್ಮ ಮನೆಗೆ.
ನಮ್ಮ ಅತಿಥ್ಯವನು ಕೃಪೆಗೈದು ಸ್ವೀಕರಿಸಿ,
ನಮ್ಮೆಲ್ಲರಂ ಧನ್ಯರನ್ನಾಗಿ ಮಾಡು.

ಎರಡನೆಯ ಪೌರ: – ಇಲ್ಲಿ ಸತ್ರಗಳಿಲ್ಲ. ಜನರೆದೆಯೆ ಸತ್ರ!
ನಮ್ಮ ನಾಡಿಗೆ ಬರುವರಾರೂ
ಬಿಸಿಲು ಮಳೆಗಾಳಿ ಪಸಿವು ನೀರಡಿಕೆಗಳ
ಬಾಧೆಯನರಿಯರಯ್ಯಾ!

ಕುಂತಳನಿವಾಸಿ: – ಮತ್ತೆ?
ಚಂದ್ರಹಾಸನ ಪ್ರಜೆಗಳಲ್ಲವೆ ನೀವು!
[ಮೂವರೂ ಹೊರಡುತ್ತಾರೆ.]

ಪರದೆ ಬೀಳುತ್ತದೆ.

*