ಈ ನಾಟಕ ಅಥವಾ ಈ ಹೆಸರಿನ ನಾಟಕ ೧೯೨೯ರಲ್ಲಿ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ರಂಗಭೂಮಿ’ ಮಾಸ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅಚ್ಚುಮಾಡುವವರು ‘ಮಧ್ಯರಂಗ’ಕ್ಕೆ ಸೇರಿದ್ದ ಸ್ವಲ್ಪ ಭಾಗವನ್ನೆ ಕೈಬಿಟ್ಟಿದ್ದರು. ಸಾಲದ್ದಕ್ಕೆ ಬೇರೆ ಅವರು ತೆಗೆದು ಕೊಂಡು ಹೋಗಿದ್ದ ಏಕಮಾತ್ರವಾಗಿದ್ದ ಹಸ್ತಪ್ರತಿಯೂ ಕಳೆದುಹೋಗಿದೆ ಎಂದು ತಿಳಿಸಿಬಿಟ್ಟರು.

ಹಸ್ತಪ್ರತಿಯನ್ನು ಅದರ ಕೊನೆಯ ಪಂಕ್ತಿಯ ಮಸಿ ಆರುವ ಮುನ್ನವೆ ನನ್ನಿಂದ ಕೊಂಡೊಯ್ದಿದ್ದರು. ನಾಟಕವನ್ನು ಒಂದು ಸಾರಿ ನಾನೆ ಸರಿಯಾಗಿ ಓದಿದ್ದೇನೊ ಇಲ್ಲವೊ? ತಿದ್ದುವ ಮಾತಂತಿರಲಿ! ಇನ್ನು ಅಚ್ಚಿನಲ್ಲಿ ಬಿಟ್ಟು ಹೋಗಿದ್ದ ಭಾಗವನ್ನು ಮತ್ತೊಮ್ಮೆ ಕಲ್ಪಿಸಿ ಸೇರಿಸಿ ಪ್ರಕಟಿಸುವ ಮನಸ್ಸಿದ್ದರೂ ಆಲಸ್ಯದಿಂದಲೊ ಮತ್ತೇನು ಕಾರಣದಿಂದಲೊ ಆ ಕೆಲಸ ಮಾಡಲಾಗಲಿಲ್ಲ. ಕ್ರಮೇಣ ನಾಟಕ ಮೂಲೆಗೆ ಬಿದ್ದು ಮರೆತುಹೋಯಿತೊ ಎನ್ನುವಂತಾಗಿತ್ತು.

ಅಂತೂ ‘ಚಂದ್ರಹಾಸ’ ಆಗ ಪುಸ್ತಕರೂಪದಲ್ಲಿ ಅಚ್ಚು ಕಾಣಲಿಲ್ಲ. ಹಾಗಾದದ್ದು ವಾಗ್ದೇವಿಯ ಕೃಪೆಯೆಂದೇ ಈಗ ಭಾಸವಾಗುತ್ತಿದೆ.

ಮೂವತ್ತೆರಡು ವರ್ಷಗಳ ತರುವಾಯ ನಾನು ೧೦೬೦ ರಲ್ಲಿ ನಿವೃತ್ತನಾದಮೇಲೆ, ಉನ್ನತ ಸ್ಥಾನದಲ್ಲಿರುವ ಬೆಂಗಳೂರಿನ ಹಿರಿಯ ಮಿತ್ರರೊಬ್ಬರು ಈ ನಾಟಕದ ಒಂದು ಪ್ರತಿಯನ್ನು ಪತ್ತೆಹಚ್ಚಿ ಕಳುಹಿಸಿಕೊಟ್ಟರು. ಆ ಪ್ರತಿಯಲ್ಲಿ ಅಚ್ಚುಮಾಡದೆ ಬಿಟ್ಟುಹೋಗಿದ್ದ ಭಾಗದ ಹಾಳೆಗಳು ದೊರೆತು ನನಗವರು ಕಳುಹಿಸಿದ್ದಾರೆ ಎಂದುಕೊಂಡು ಹಿಗ್ಗಿದೆ. ಆದರೆ ಓದಿ ನೋಡಿದಾಗ ನನ್ನ ಆಶೆಗೆ ಆಧಾರವಿರಲಿಲ್ಲ. ಆಗಲೂ ಅದನ್ನು ನನಗೆ ಮುಟ್ಟಿಸಲು ನಿಮಿತ್ತರಾದ ಇನ್ನೊಬ್ಬ ಮಿತ್ರರು ಏನಾದರು ತಿದ್ದುವುದಿದ್ದರೆ ತಿದ್ದಿ, ಬಿಟ್ಟಿದ್ದನ್ನೂ ಸೇರಿಸಿ, ನಾಟಕವನ್ನು ಅಚ್ಚುಹಾಕಿಸಿ ಎಂದು ಉತ್ಸಾಹಿಸಿದರು. ಆದರೆ ನಾಟಕವನ್ನು ತಿದ್ದುವ ದೃಷ್ಟಿಯಿಂದ ಓದಿದಾಗ ನನಗೆ ನಾಚಿಕೆಯಾಗುವ ಮಟ್ಟಿಗೆ ಜುಗುಪ್ಸೆಯುಂಟಾಯಿತು. ಸದ್ಯಃ ದೇವರ ದಯೆಯಿಂದ ಇದು ಆಗ ಇದ್ದ ರೂಪದಲ್ಲಿಯೆ ಪುಸ್ತಕವಾಗಿ ಪ್ರಕಟವಾಗಲಿಲ್ಲವಲ್ಲಾ ಎಂದು ಹರ್ಷಪಟ್ಟೆ: ಅಷ್ಟು ಹಸಿಹಸಿಯಾಗಿತ್ತು. ಲಕ್ಷ್ಮೀಶನ ಜೈಮಿನಿಭಾರತದ ಚಂದ್ರಹಾಸೋಪಾಖ್ಯಾನದ ಪದ್ಯ ಮತ್ತು ಪದ್ಯಭಾಗಗಳನ್ನು ಉಪಯೋಗಿಸಿಕೊಂಡಿದ್ದ ರೀತಿಯಂತೂ ಕೆಲವೆಡೆಗಳಲ್ಲಿ ಅತ್ಯಂತ ಹಾಸ್ಯಾಸ್ಪದವಾಗಿತ್ತು. ಅಲ್ಲದೆ ಷೇಕ್ಸ್ಪಿಯರ್ ಕವಿಯ ದುರಂತ ನಾಟಕಗಳ ಪ್ರಭಾವಾತೀರೇಕಕ್ಕೆ ಒಳಗಾಗಿ ಕಥೆಯಲ್ಲಿ ಸಂಭವಿಸಿದ್ದ ಮಾರ್ಪಾಡುಗಳಲ್ಲಿ ಬಹುಬಾಳು ನನ್ನ ಈಗಿನ ‘ದರ್ಶನ’ಕ್ಕೆ ಹುಡುಗುಹುಡುಗಾಗಿ ನಗೆಗೀಡಾಗಿ ಅಭಾರತೀಯವಾಗಿ ತೋರಿತು.

ಈ ಎಲ್ಲಾ ಕಾರಣಗಳಿಂದ ನಾಟಕವನ್ನು ತಿದ್ದುವ ಭಯಂಕರ ಗೋಜಿಗೆ ಹೋಗದೆ, ಒಡವೆಯನ್ನು ತೇಪೆಹಾಕಿದಂತೆ ರಿಪೇರಿಮಾಡುವ ವೃಥಾ ಶ್ರಮವನ್ನು ತೊರೆದು, ಅದನ್ನು ಪ್ರತಿಭಾಜ್ವಾಲೆಯ ಮೇಲೆ ಕಲ್ಪನೆಯ ಮೂಷೆಯಲ್ಲಿಟ್ಟು ಕರಗಿಸಿ, ನನ್ನ ಈಗಿನ ‘ದರ್ಶನ’ಕ್ಕೆ ಒಪ್ಪುವ ಭಾವಾಂಶ ಚಿಂತನಾಂಶ ಕಲ್ಪನಾಂಶ ರೂಪಾಂಶಗಳಲ್ಲಿ ಎರಕಹೊಯ್ದು. ಅದನ್ನೊಂದು ಹೊಸ ಕೃತಿಯಾಗಿಯೆ ಮಾಡಿದ್ದೇನೆ. ಈ ‘ಚಂದ್ರಹಾಸ’ ಆ ‘ಚಂದ್ರಹಾಸ’ದ ಸಾರಸಂಸ್ಕಾರ ಗಳನ್ನೊಳಗೊಂಡು ಮೂಡಿರುವ ಪುನರ್ಜನ್ಮೋಪಮ ಕೃತಿಯಾಗಿದೆ.

ಹಾಗೆ ಮಾಡಿದುದರ ಫಲವಾಗಿ ಅನೇಕ ಪರಿವರ್ತನೆಗಳಾಗಿವೆ, ದೃಶ್ಯ ಸಂಖ್ಯೆಯಲ್ಲಿ, ಭಾಷೆಯಲ್ಲಿ, ನಾಟ್ಯಛಂದಸ್ಸಿನಲ್ಲಿ; ಸಂವಾದವಿಧಾನದಲ್ಲಿ, ಲಕ್ಷ್ಮೀಶನ ಜೈಮಿನಿಭಾರತದ ಉಪಾಖ್ಯಾನದ ಭಾಗಗಳನ್ನು ಉಪಯೋಗಿಸಿಕೊಳ್ಳುವ ಔಚಿತ್ಯದಲ್ಲಿ; ಉದ್ದೇಶದಲ್ಲಿ, ಧ್ಯೇಯದಲ್ಲಿ, ದರ್ಶನದಲ್ಲಿ.

ನಾಟಕದ ಕೊನೆಯ ಅಂತರಿಕ್ಷ ದೃಶ್ಯದಲ್ಲಿ ‘ನಾರದ ಭಕ್ತಿಸೂತ್ರ’ಗಳಲ್ಲಿರುವ ಭಕ್ತಿಲಕ್ಷಣ ಮತ್ತು ಭಕ್ತಮಹಿಮೆಯನ್ನು ಕುರಿತ ಅತ್ಯಂತ ಸುಮಧುರ ಸುಂದರಭವ್ಯವಾದ ಐದು ಸೂತ್ರಗಳನ್ನು ಭಕ್ತಿ, ಪ್ರಾರ್ಥನಾ ಮತ್ತು ಕೃಪಾದೇವಿಯರ ವಾಣಿಯಲ್ಲಿ ಹಂಚಿ ಅಳವಡಿಸಿದೆ. ಬಹುಶಃ ಆ ಹಂಚಿಕೆಯಲ್ಲಿಯೂ ಆಯಾ ದೇವಪಾತ್ರಗಳಿಗೆ ಅನ್ವಯವಾಗುವ ದರ್ಶನಧ್ವನಿಯನ್ನು ಸಹೃದಯೋತ್ತಮರು ಗುರುತಿಸಬಹುದೆಂದು ಭಾವಿಸುತ್ತೇನೆ.

ಕುವೆಂಪು
ಮೈಸೂರು
೨೭ – ೦೬ – ೧೯೬೩