ಕೇರಳದಲ್ಲಿ ಒಬ್ಬ ರಾಜ. ಆತನ ಹೆಸರು ಮೇಧಾವಿ. ‘ಮೇಧಾವಿ’ ಎಂದರೆ ಬಹಳ ಬುದ್ಧಿವಂತ. ಆತ ಹೆಸರಿಗೆ ತಕ್ಕಂತೆ ಬಹು ಬುದ್ಧಿವಂತನಾಗಿದ್ದ. ತನ್ನ ಪ್ರಜೆಗಳನ್ನು ಪ್ರೀತಿ ವಿಶ್ವಾಸಗಳಿಂದ ಕಾಪಾಡುತ್ತಿದ್ದ. ಆತನ ಹೆಂಡತಿ ಚಿತ್ರಭಾನು. ಅವರಿಗೆ ಬಹುಕಾಲ ಮಕ್ಕಳಿರಲಿಲ್ಲ. ಇದೇ ಅವರಿಗೆ ಚಿಂತೆಯಾಗಿತ್ತು.

ಕೆಲವು ವರ್ಷಗಳ ನಂತರ ಅವರಿಗೆ ಒಂದು ಗಂಡು ಮಗು ಹುಟ್ಟಿತು. ರಾಜ ಮತ್ತು ರಾಣಿಯ ಆನಂದಕ್ಕೆ ಪಾರವೇ ಇರಲಿಲ್ಲ. ಸಂತೋಷದಿಂದ ನಗರದಲ್ಲೆಲ್ಲಾ ಸಕ್ಕರೆ ಹಂಚಿದರು. ಈ ಮಗುವೇ ಚಂದ್ರಹಾಸ. ಮಗುವಿಗೆ ಎಡಗಾಲಿನಲ್ಲಿ ಆರು ಬೆರಳಿತ್ತು.

ಆದರೆ ಮಗು ಹುಟ್ಟಿತೆಂಬ ಸಂತೋಷದ ಜೊತೆಗೆ ದುಃಖವೂ ಬಂದಿತು. ಮಗು ಹುಟ್ಟಿದ ನಕ್ಷತ್ರ ಕೆಟ್ಟದ್ದು ಎಂದು ಅರಮನೆಯ ಜೋಯಿಸರು ಹೇಳಿದರು.

ಕೆಲವು ದಿನಗಳು ಕಳೆದವು. ಮೇಧಾವಿಯ ಶತ್ರುಗಳು ರಾಜ್ಯವನ್ನು ಮುತ್ತಿದರು. ಭಯಂಕರವಾದ ಯುದ್ಧವಾಯಿತು. ಪಾಪ, ಮೇಧಾವಿ ಸತ್ತುಹೋದ. ಈ ಸಂಕಟವನ್ನು ತಾಳಲಾರದೆ ಆತನ ಹೆಂಡತಿಯೂ ಬೆಂಕಿಯಲ್ಲಿ ಬಿದ್ದು ಪ್ರಾಣಬಿಟ್ಟಳು. ಶತ್ರುಗಳು ರಾಜ್ಯವನ್ನು ವಶಮಾಡಿಕೊಂಡರು.

ತಬ್ಬಲಿ ಮಗು

ಚಂದ್ರಹಾಸ ಹೀಗೆ ಬಹು ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು ತಬ್ಬಲಿಯಾಗಿ ಹೋದ. ಅರಮನೆಯಲ್ಲಿದ್ದ ಒಬ್ಬ ಮುದುಕಿಗೆ ಮೊದಲಿನಿಂದಲೂ ಮಗುವಿನಲ್ಲಿ ತುಂಬ ಪ್ರೀತಿ. ರಾಜ ರಾಣಿಯರು ಹೋದ ಮೇಲೆ ಆಕೆಯೇ ಮಗುವನ್ನು ಕರೆದುಕೊಂಡು ಬಂದಳು. ಅವಳಿಗೂ ಶತ್ರುಗಳ ಹೆದರಿಕೆ. ಮಗುವನ್ನೆತ್ತಿಕೊಂಡು ಆ ಊರನ್ನೇ ಬಿಟ್ಟು ಕುಂತಳ ಎಂಬ ನಗರಕ್ಕೆ ಬಂದುಬಿಟ್ಟಳು.

ಮುದುಕಿ ಪಾಪ, ತಿರುಪೆ ಬೇಡಿ ತಂದು ಮಗುವನ್ನು ಸಾಕುತ್ತಾ ಊರಾಚೆಯಿದ್ದ ಒಂದು ಮುರುಕು ಮಂಟಪದಲ್ಲಿದ್ದಳು. ಚಂದ್ರಹಾಸ ಹುಟ್ಟಿದ್ದು ರಾಜಕುಮಾರನಾಗಿ. ಅರಮನೆಯಲ್ಲಿ ಸುಖವಾಗಿ ಬೆಳೆಯಬೇಕಾಗಿತ್ತು. ಸುತ್ತ ದಾಸ-ದಾಸಿಯರಿದ್ದು ನೋಡಿಕೊಳ್ಳಬೇಕಾಗಿತ್ತು. ಬೇಕಾದ ತಿಂಡಿ ತಿಂದುಕೊಂಡು, ಬಗೆಬಗೆಯ ಸೊಗಸಾದ ಬಟ್ಟೆ ಹಾಕಿಕೊಂಡು ಸುಖವಾಗಿ ಆಟವಾಡಿಕೊಂಡಿರಬೇಕಾಗಿತ್ತು. ಆದರೆ ಈಗ ಅವನಿಗೆ ಭಿಕ್ಷೆ ಬೇಡಿ ತಂದ ಊಟ, ಹರಕಲು ಬಟ್ಟೆ, ವಾಸ ಗುಡಿಸಲಿನಲ್ಲಿ.

ಹೀಗೆಯೇ ಕೆಲವು ವರ್ಷಗಳು ಕಳೆದವು. ಮಗು ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಓಡಾಡುವಂತಾಯ್ತು. ಅಷ್ಟರಲ್ಲಿ ಮತ್ತೊಂದು ವಿಪತ್ತು ಎರಗಿತು.

ಚಂದ್ರಹಾಸನನ್ನು ಸಾಕುತ್ತಿದ್ದ ಮುದುಕಿಯೂ ಸತ್ತುಹೋಯಿತು.

ಪಾಪ, ಪುಟ್ಟ ಹುಡುಗನಿಗೆ ದಿಕ್ಕೇ ಇಲ್ಲದಂತಾಯ್ತು.

ಮಗು ಬಹು ಲಕ್ಷಣವಾಗಿತ್ತು. ತಲೆ ತುಂಬ ಸುಳಿ ಗುರುಳು. ಮುದ್ದಾದ ಕಣ್ಣು. ಸದಾ ಹಸನ್ಮುಖ. ಮಗುವನ್ನು ಕುಂತಳ ನಗರದ ಜನರೇ ಬಹಳ ಕರುಣೆಯಿಂದ ಸಾಕಿದರು. ಅವನಿಗೆ ಸ್ನಾನ ಮಾಡಿಸುವವರು ಕೆಲವರು, ಹಣ್ಣುಗಳನ್ನೂ, ಕಜ್ಜಾಯ ಕಡುಬುಗಳನ್ನೂ ಕೊಡುವವರು ಕೆಲವರು, ಊಟಕ್ಕಿಡುವವರು ಕೆಲವರು. ಕೆಲವರು ಬಟ್ಟೆ ತೊಡಿಸಿದರು. ಕೆಲವರು ಅಲಂಇಕಾರ ಮಾಡಿದರು. ಬಾಲಕರೆಲ್ಲರೂ ಇವನನ್ನು ತಮ್ಮ ಜೊತೆಗೆ ಸೇರಿಸಿಕೊಂಡು ಆಟವಾಡುತ್ತಿದ್ದರು. ಹೀಗೆ ಕೆಲವು ದಿನಗಳು ಕಳೆಯಿತು. ಬೆಳೆಯುತ್ತ ಬೆಳೆಯುತ್ತ ಹುಡುಗನಿಗೆ ತಾನು ತಬ್ಬಲಿ ಎಂದು ಗೊತ್ತಾಗುತ್ತಿತ್ತು. ಹುಡುಗರೆಲ್ಲ ಚಿನ್ನಿದಾಂಡು – ಗೋಲಿ – ಬುಗುರಿ ಮುಂತಾದ ಆಟದ ಸಾಮಾನುಗಳನ್ನು  ತರುತ್ತಿದ್ದರು. ಆಗ ಇವನಿಗೆ ಸಂಕಟವಾಗುತ್ತಿತ್ತು. ‘ನನಗೂ ಗೋಲಿ-ಬುಗರಿ ಬೇಕು. ಆದರೆ ಯಾರು ತಂದುಕೊಡುತ್ತಾರೆ?’ ಎಂದು ದುಃಖಪಡುತ್ತಿದ್ದ.

ಕೆಲವು ವರ್ಷಗಳೇ ಕಳೆದವು.

ಒಂದು ದಿನ ಅವನಿಗೆ ರಸ್ತೆಯಲ್ಲಿ ಒಂದು ಕರಿಯ ಗೋಲಿ ಸಿಕ್ಕಿತು. ಪುಟ್ಟದಾಗಿ ದುಂಡಾಗಿ ಇದ್ದ ಅದನ್ನು ಕಂಡು ಸಂತೋಷವಾಯಿತು. ಅದನ್ನು ಛಕ್ಕನೆತ್ತಿಕೊಂಡ. ದೇವರೇ ಕೊಟ್ಟನೆಂದುಕೊಂಡ. ಅದೇ ಅವನ ಆಟದ ಗೋಲಿಯಾಯಿತು.

ಅಂದಿನಿಂದ ಗೋಲಿ ಆಟದಲ್ಲಿ ಅವನಿಗೇ ಜಯ. ಪುಟ್ಟ ಹುಡುಗನಿಗೆ ಋಷಿಯೋ ಋಷಿ. ಆಟದಲ್ಲಿ ಸದಾ ಜಯ ತರುವ ಆ ಗೋಲಿಯನ್ನು ಅವನು ಜೋಪಾನವಾಗಿಡಬೇಕಲ್ಲವೆ? ಅವನಿಗೆ ಸ್ಥಳವೆಲ್ಲಿದೆ? ಅದಕ್ಕಾಗಿ ಅವನು ಅದನ್ನು ತನ್ನ ಬಾಯಲ್ಲೇ ಇಟ್ಟುಕೊಂಡಿರುತ್ತಿದ್ದ.

ನಿಜವಾಗಿ ಅದು ಸಾಮಾನ್ಯ ಗೋಲಿಯಲ್ಲ. ಅದು ಸಾಲಿಗ್ರಾಮ! (ಸಾಲಿಗ್ರಾಮದಲ್ಲಿ ದೇವರಿರುತ್ತಾನೆ ಎಂದು ಪೂಜೆ ಮಾಡುತ್ತಾರೆ.) ಹುಡುಗನಿಗೆ ಪಾಪ, ಇದೇನೂ ತಿಳಿಯದು. ಬಹು ಎಚ್ಚರಿಕೆಯಿಂದ ಅದನ್ನು ಕಾಪಾಡಿಕೊಂಡು ಬಂದ.

ಇವನು ರಾಜನಾಗುತ್ತಾನೆ

ಕುಂತಳ ನಗರದಲ್ಲಿ ಒಬ್ಬ ಮಂತ್ರಿಯಿದ್ದ. ಅವನ ಹೆಸರು ದುಷ್ಟಬುದ್ಧಿ. ಹೆಸರಿಗೆ ತಕ್ಕ ಹಾಗೆ ತುಂಬ ಕೆಟ್ಟವನು. ಭಯಂಕರ ಮನುಷ್ಯ. ಮೋಸಗಾರ.

ಒಂದು ದಿನ. ಅವನ ಮನೆಯಲ್ಲಿ ಆ ಹೊತ್ತು ಯಾವುದೋ ವಿಶೇಷ ಸಮಾರಂಭ. ಅನೇಕ ಜನರು ಊಟಕ್ಕೆ ಬಂದಿದ್ದರು. ಸೊಗಸಾದ ಊಟ ಉಂಡು ಅತಿಥಿಗಳೂ ಮಂತ್ರಿಯೂ ಎಲೆ ಅಡಿಕೆ ಹಾಕಿಕೊಳ್ಳುತ್ತ ಜಗಲಿಯ ಮೇಲೆ ಕುಳಿತಿದ್ದರು. ಅಲ್ಲೇ ಬೀದಿಯಲ್ಲಿ ಕೆಲವು ಹುಡುಗರು ಗೋಲಿಯಾಡುತ್ತಿದ್ದರು. ಅಲ್ಲಿ ಕುಳಿತಿದ್ದ ಕೆಲವರು ಬ್ರಾಹ್ಮಣರು ಆ ಗುಂಪಿನಲ್ಲಿದ್ದ ಒಬ್ಬ ಸುಂದರ ಬಾಲಕನನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವನೇ ಚಂದ್ರಹಾಸ. ಊಟಕ್ಕೆ ಬಂದಿದ್ದ ಆ ಬ್ರಾಹ್ಮಣರು, “ಯಾರೀ ಹುಡುಗ ಮಂತ್ರಿಗಳೇ? ನಿಮಗೆ ಗೊತ್ತೇ?” ಎಂದು ಕೇಳಿದರು.

ದುಷ್ಟಬುದ್ಧಿ, “ಯಾರೋ ದಿಕ್ಕಿಲ್ಲದ ಹುಡುಗ. ಬೀದಿ ಬೀದಿ ಅಲೆಯುತ್ತಿರುತ್ತಾನೆ ಎಂದು ಕಾಣುತ್ತದೆ” ಎಂದ. “ಹಾಗಲ್ಲ, ಅವನ ಮುಖಲಕ್ಷಣಗಳನ್ನು ನೋಡಿದರೆ ರಾಜನಾಗುವ ಅದೃಷ್ಟ ಇದೆ ಎಂದು ಕಾಣುತ್ತದೆ. ಅವನು ಎಂದಾದರೊಂದು ದಿನ ಈ ಕುಂತಳ ರಾಜ್ಯಕ್ಕೆ ರಾಜನಾಗುತ್ತಾನೆ” ಎಂದು ಬ್ರಾಹ್ಮಣರು ಹೇಳಿದರು.

ಮಂತ್ರಿ ಮೊದಲೇ ದುಷ್ಟಬುದ್ಧಿ. ಈ ಮಾತು ಕೇಳಿ ಬಹಳ ಕೋಪ ಬಂದಿತು. ಆ ಹುಡುಗನನ್ನು ದುರು-ದುರು ನೋಡಿದ.

ಬಂದಿದ್ದವರೆಲ್ಲರೂ ದಾನ ದಕ್ಷಿಣೆ ತೆಗೆದುಕೊಂಡು ಹೊರಟುಹೋದರು. ಆಮೇಲೆ ಮಂತ್ರಿಗೆ ಊಟವೂ ಸೇರಲಿಲ್ಲ. ಚಿಂತೆಯಿಂದ ನಿದ್ರೆಯೂ ಬರಲಿಲ್ಲ.

ದುಷ್ಟಬುದ್ಧಿಗೆ ಇಬ್ಬರು ಮಕ್ಕಳು. ಮಗನ ಹೆಸರು ವಿಷಯೆ. ಆ ರಾಜ್ಯದ ದೊರೆಗೆ ಗಂಡುಮಕ್ಕಳಿರಲಿಲ್ಲ. ದುಷ್ಟಬುದ್ಧಿಗೆ ಆಸೆ – ಹೇಗಾದರೂ ಮದನನ್ನೇ ರಾಜ್ಯಕ್ಕೆ ಮುಂದೆ ದೊರೆಯಾಗಿ ಮಾಡಬೇಕು – ಎಂದು. ‘ಈ ಅನಾಥ ಬಾಲಕ ರಾಜನಾಗುತ್ತಾನೆ’ ಎಂದು ಬ್ರಾಹ್ಮಣರು ಹೇಳಿದಾಗ ಅವನಿಗೆ ಸಿಟ್ಟು ಬಾರದೆ ಇರುತ್ತದೆಯೆ?
ಸರಿ, ಯೋಚನೆ ಮಾಡಿದ ದುಷ್ಟಬುದ್ಧಿ: ‘ಈ ಬಾಲಕನನ್ನು ಈಗಲೇ ಕೊಂದು ಹಾಕಿಬಿಟ್ಟರೆ?’

ಸಾವಿನ ದವಡೆಯಿಂದ ಪಾರು

ದುಷ್ಟಬುದ್ಧಿ ಇಬ್ಬರು ಕಟುಕರನ್ನು ಕರೆಸಿದ. ಏನೂ ತಿಳಿಯದೆ ಖುಷಿಯಾಗಿ ರಸ್ತೆಯಲ್ಲಿ ಆಡುತ್ತಿದ್ದ ಹುಡುಗ ಚಂದ್ರಹಾಸನನ್ನು ತೋರಿಸಿದ.

“ನೋಡಿ, ಆ ಹುಡುಗನನ್ನು ಕೊಲ್ಲಬೇಕು. ಕೊಂದು ಹಾಕಿದರೆ ನಿಮಗೆ ಬೇಕಾದಷ್ಟು ಹಣ ಕೊಡುತ್ತೇನೆ” ಎಂದ.

ಹೇಳುತ್ತಿರುವವನು ರಾಜ್ಯದ ಮಂತ್ರಿ. ಹಣ ಕೊಡುತ್ತೇನೆ ಎಂದೂ ಹೇಳುತ್ತಿದ್ದಾನೆ. ಯಾರೂ ದಿಕ್ಕಿಲ್ಲದ ಹುಡುಗ, ಕೊಲ್ಲುವುದೇನು ಕಷ್ಟ?

“ಹೂ” ಎಂದರು ಕಟುಕರು.

“ಯಾರಿಗೂ ತಿಳಿಯಬಾರದು. ಹುಡುಗನನ್ನು ಎತ್ತಿಕೊಂಡು ದೂರ ಹೋಗಿ ಕೊಂದು ಹಾಕಬೇಕು.”

“ಅಪ್ಪಣೆ.”

“ಅವನನ್ನು ಕೊಂದದ್ದಕ್ಕೆ ಗುರುತಾಗಿ ಏನನ್ನಾದರೂ ತಂದು ತೋರಿಸಬೇಕು. ಆಗಲೇ ಹಣ.”

“ಅಪ್ಪಣೆ.”

ಒಂದು ದಿನ ಹುಡುಗ ಚಂದ್ರಹಾಸ ಒಬ್ಬನೇ ಬೀದಿಯಲ್ಲಿ ಹೋಗುತ್ತಿದ್ದಾನೆ. ಕಟುಕರು ಹಿಂದಿನಿಂದ ಬಂದರು. ಪುಟ್ಟ ಹುಡುಗನನ್ನು ಹಿಡಿದುಕೊಂಡು, ಅಳಲು ಕಿರುಚಲು ಅವಕಾಶವಿಲ್ಲದಂತೆ ಅವನ ಬಾಯಿಗೆ ಬಟ್ಟೆ ತುರುಕಿದರು. ಅವನನ್ನು ಎತ್ತಿಕೊಂಡರು. ಕತ್ತಲೆಯಲ್ಲಿ ಕಾಡಿನತ್ತ ಓಡಿದ್ದೇ ಓಡಿದ್ದು ಪಾಪ, ಹುಡುಗನಿಗೆ ಬಹಳ ಭಯವಾಯಿತು. ಕಣ್ಣು ತುಂಬ ನೀರು. ಅಳುವ ಹಾಗೂ ಇಲ್ಲ.

ಕಟುಕರು ಅವನನ್ನು ಕಾಡಿನೊಳಕ್ಕೆ ಬಹುದೂರ ಕರೆದುಕೊಂಡು ಹೋದರು. ಒಂದು ಮರದ ಕೆಳಗಿಳಿಸಿದರು. ಕಟುಕರ ಕೈಯಲ್ಲಿ ಥಳಥಳ ಹೊಳೆಯುವ ಕತ್ತಿಗಳು ಇದ್ದವು. ಕಟುಕರನ್ನು ನೋಡಿ, ಅವರ ಕತ್ತಿಗಳನ್ನು ನೋಡಿ ಚಂದ್ರಹಾಸ ನಡು-ನಡುಗಿದ. ಕೊಂದು ಹಾಕುತ್ತಾರೆ ಎಂದು ಗೊತ್ತಾಯಿತು. ಬಿಕ್ಕಿ ಬಿಕ್ಕಿ ಅಳಲು ಪ್ರಾರಂಬಿಸಿದ.

ಕಟುಕರು, ಬಿಕ್ಕಿ ಬಿಕ್ಕಿ ಅಳುತ್ತಿದ್ದ ಹುಡುಗನನ್ನು ನೋಡಿದರು. ಅವರು ಸ್ವಭಾವದಿಂದ ಕೆಟ್ಟವರು, ಕ್ರೂರಿಗಳು. ಆದರೆ ತೇಜಸ್ವಿಯಾದ ಆ ಮುದ್ದು ಹುಡುಗನನ್ನು ನೋಡಿ ಅವರಿಗೂ ಅಯ್ಯೋ ಎನಿಸಿತು. ತಮ್ಮ ಮಕ್ಕಳ ನೆನಪು ಬಂದಿತು.

ಒಬ್ಬ ಎಂದ: ಮಗು ಎಷ್ಟು ಮುದ್ದಾಗಿದೆ, ಇದನ್ನು ಕೊಲ್ಲಬೇಕಲ್ಲ?

ಇನ್ನೊಬ್ಬ ಹೇಳಿ: ಪಾಪ, ಇಷ್ಟು ಚಿಕ್ಕ ವಯಸ್ಸಿಗೇ ಈ ಸಾವು. ಏನು ತಪ್ಪು ಮಾಡಿದ ಈ ಹುಡುಗ?

ಮೊದಲನೆಯವನು: ನನಗೂ ಇದೇ ವಯಸ್ಸಿನ ಮಗ ಇದ್ದಾನೆ. ಇವನ್ನ ನೋಡಿದರೆ ಆ ಮಗು ನೆನಪು ಬರುತ್ತೆ.

ಎರಡನೆಯವನು : ನನಗೂ ಮಕ್ಕಳಿದ್ದಾರಪ್ಪ ಅವರಿಗೆ ಹೀಗೆ ಆಗಿದ್ದಿದ್ದರೆ? ಅಯ್ಯೋ ಪಾಪ!

ಮೊದಲನೆಯವನು: ಅಲ್ಲಣ್ಣ, ಈ ಮಗೂನ ಕೊಂದರೆ ದೇವರು ಮೆಚ್ಚುತ್ತಾನೆಯೆ? ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತದೆಯೇ?

ನಡು-ನಡುಗತ್ತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಹುಡುಗನನ್ನು ನೋಡಿದಷ್ಟೂ ಕಟುಕರ ಮನಸ್ಸು ಕರಗಿತು, ಅವರಿಗೂ ಕಣ್ಣಿನಲ್ಲಿ ನೀರು ತುಂಬಿತು.

ಆದರೆ ಹುಡುಗನನ್ನು ಕೊಲ್ಲದೆ ಹೋದರೆ ಮಂತ್ರಿಗೆ ಏನು ಹೇಳುವುದು? ಅವನೋ ಬಹು ಪ್ರಬಲ, ಜೊತೆಗೆ ಕೆಟ್ಟವನು. ಹುಡುಗನನ್ನು ಕೊಲ್ಲದೆ ಹಿಂದಕ್ಕೆ ಹೋದರೆ ತಮ್ಮನ್ನೇ ಬಲಿ ಹಾಕಿಯಾನು.

ಕಡೆಗೆ ತೀರ್ಮಾನಿಸಿದರು – ಹುಡುಗನನ್ನು ಅಲ್ಲೇ ಬಿಟ್ಟು – ದುಷ್ಟಬುದ್ಧಿಗೆ ಅವನನ್ನು ಕೊಂದೆವು ಎಂದು ಹೇಳಿಬಿಡುವುದು. ಹುಡುಗನ ಎಡಗಾಲಲ್ಲಿರುವ ಆ ಪುಟ್ಟ ಆರನೆಯ ಬೆರಳನ್ನು ಕತ್ತರಿಸಿ ಗುರುತಿಗಾಗಿ ಕೊಟ್ಟು ಬಿಡುವುದು. ‘ಸರಿ’ ಎಂದುಕೊಂಡು, ಹುಡುಗನಿಗೆ ಹೇಳಿದರು: “ಏ ಹುಡುಗ, ಇವತ್ತು ನಿನ್ನನ್ನು ಬಿಡ್ತಾ ಇದ್ದೇವೆ. ಆದರೆ ಮತ್ತೆ ಈ ಊರಿನ ಕಡೆ ಬರಬೇಡ.” ಅವನ ಬೆರಳನ್ನು ಕಚಕ್ಕನೆ ಕತ್ತರಿಸಿದರು, ತೆಗೆದುಕೊಂಡು ಓಡಿಹೋದರು.

‘ಈ ಮಗೂನ ಕೊಂದರೆ ದೇವರು ಮೆಚ್ಚುತ್ತಾನೆಯೆ?’

ಹುಡುಗನಿಗೆ ನೋವಾಯಿತು. ಹೋ ಎಂದು ಕಿರುಚಿಕೊಂಡ. ಕಾಲಿಂದ ರಕ್ತಧಾರೆ ಹರಿಯುತ್ತಿತ್ತು. ಕಾಡಿನಲ್ಲಿ ನೀನೇ ಎಂದು ವಿಚಾರಿಸುವವರಿಲ್ಲ. ಕಾಡುಪ್ರಾಣಿಗಳು ಕೂಗುವ ಶಬ್ದಗಳು. ಅವನು ಬಿಕ್ಕಿ-ಬಿಕ್ಕಿ ಅತ್ತ.

ಅವನನ್ನು ಸಮಾಧಾನ ಮಾಡಲು ಕಾಡಿನಲ್ಲಿದ್ದ ಮೃಗ ಪಕ್ಷಿಗಳು ಬಂದವು. ನವಿಲು ತನ್ನ ರೆಕ್ಕೆ ಬಿಚ್ಚಿ ಕೊಡೆ ಹಿಡಿಯಿತು. ಜಿಂಕೆಯ ಮರಿಗಳು ಕಾಲಿಂದ ಸುರಿಯುತ್ತಿದ್ದ ನೆತ್ತರನ್ನು ನೆಕ್ಕಿ ಒರೆಸಿದವು. ಕೋತಿಗಳು ಹಣ್ಣು-ಹಂಪನ್ನು ತಂದು-ಕೊಟ್ಟವು. ಗಿಣಿ, ಪಾರಿವಾಳ ಸಾರಸ ಮುಂತಾದ ಪಕ್ಷಿಗಳೆಲ್ಲ ಅವನನ್ನು ಸಂತೈಸಿದವು. ಹುಡುಗ ದೇವರನ್ನು ಸ್ಮರಿಸುತ್ತಾ ಅಳುತ್ತ ಕುಳಿತಿದ್ದ.

ಚಂದನಾವತಿಯ ರಾಜಕುಮಾರ

ಸ್ವಲ್ಪ ಹೊತ್ತಾಯಿತು. ಆ ಕಾಡಿಗೆ ಬೇಡರ ಗುಂಪು ಬೇಟೆಗಾಗಿ ಬಂತು. ಹುಲಿ, ಸಿಂಹ, ಕಾಡಾನೆ, ಕಾಡೆಮ್ಮೆ, ಚಿರತೆ, ಕಿರುಬ, ಕರಡಿ, ಕಾಡುಹಂದಿ ಮುಂತಾದ ನೂರಾರು ಬಗೆಯ ಪ್ರಾಣಿಗಳು ಬೇಟೆಗಾರರ ಸದ್ದುಗದ್ದಲ ಕೇಳಿ ಗಾಬರಿಪಟ್ಟು ತಮ್ಮ-ತಮ್ಮ ಗವಿಗಳಿಂದ ಗುಹೆಗಳಿಂದ ಈಚೆ ಬಂದವು. ನೂರಾರು ಜನ ಬೇಟೆಗಾರರು ಅನೇಕ ಬಗೆಯ ಆಯುಧಗಳನ್ನು ಹಿಡಿದು ಕೂಗುತ್ತಾ, ಕಿರುಚುತ್ತಾ, ಅಬ್ಬರಿಸುತ್ತಾ, ಗಲಭೆಯೋ ಗಲಭೆ ಮಾಡಿದರು. ಅನೇಕ ಪ್ರಾಣಿಗಳು ಸತ್ತವು. ಕೆಲವು ಸೆರೆ ಸಿಕ್ಕಿದವು. ಹೀಗೆ ಬೇಟೆ ನಡೆಯುತ್ತಿರುವಾಗ ಆ ಗುಂಪಿನ ಯಜಮಾನ ಕುದುರೆಯನ್ನೇರಿ ಬಂದವನು ಮರದ ಕೆಳಗೆ ಕುಳಿತಿದ್ದ ಬಾಲಕನನ್ನು ನೋಡಿದ. ಮಗು ಲಕ್ಷಣವಾಗಿದ್ದ. ಆದರೆ ಗಾಬರಿಪಟ್ಟು ಅಳುತ್ತಿದ್ದ. ಮಗುವಿನ ಹತ್ತಿರಕ್ಕೆ ಬಂದು ಅಕ್ಕರೆಯಿಂದ ಮಾತಾಡಿಸಿದ. ಹುಡುಗನಿಗೆ ಮಾತೇ ಹೊರಡದು, ಇನ್ನೂ ಅಳು ಹೆಚ್ಚಾಯಿತು. ಬೇಡನಿಗೆ ತುಂಬ ಕರುಣೆ ಬಂದಿತು. ಆತನಿಗೆ ಮಕ್ಕಳಿರಲಿಲ್ಲ. ದೇವರೇ ಈ ಮಗುವನ್ನು ಕೊಟ್ಟ ಎಂದುಕೊಂಡ. ತುಂಬ ಪ್ರೀತಿಯಿಂದ ಅವನನ್ನು ತನ್ನ ಊರಿಗೆ ತಂದ. ಆತನ ಹೆಸರು ಕುಳಿಂದಕ. ಚಂದನಾವತಿ ಎಂಬ ಊರಿನ ರಾಜ. ಕುಂತಳಪುರದ ಮಹಾರಾಜನ ಕೈಕೆಳಗಿನವನು.

ಕುಳಿಂದಕನ ಹೆಂಡತಿಗೆ ಈ ಮುದ್ದು ಕಂದನನ್ನು ಕಂಡು ಬಹಳ ಸಂತೋಷವಾಯ್ತು. ಅವನನ್ನು ಮುದ್ದಾಡಿ ಸಮಾಧಾನ ಮಾಡಿದಳು. ಆಹಾರ ಕೊಟ್ಟಳು. ಗಾಯಕ್ಕೆ ಔಷಧ ಹಚ್ಚಿದಳು. ಹುಡುಗನಿಗೆ ಭಯ ಹೋಯಿತು. ಸಮಾಧಾನವಾಯಿತು. ಅವನು ಯಾರು, ಕಾಡಿಗೆ ಹೇಗೆ ಬಂದ, ಗಾಯ ಏಕಾಯಿತು ಎಂದು ಗಂಡ ಹೆಂಡತಿ ಕೇಳಿದರು. ಚಂದ್ರಹಾಸನ ಕರುಣ ಕಥೆಯನ್ನು ಕೇಳಿ ಅವರು ಬಹಳ ವ್ಯಥೆಪಟ್ಟರು. ಮಗು ಚಂದ್ರಬಿಂಬದಂತಿದ್ದನಾದ್ದರಿಂದ ಕುಳಿಂದಕ ಅವನಿಗೆ ಚಂದ್ರಹಾಸನೆಂದೇ ನಾಮಕರಣ ಮಾಡಿದ. ಬಹಳ ಅಕ್ಕರೆಯಿಂದ ಸಾಕಿದ, ಸಲಹಿದ.

ಕತ್ತಲೆಯ ಮನೆಗೆ ಮಣಿದೀಪ ಬಂದಂತೆ ಕುಳಿಂದಕನ ಮನೆಗೆ ಚಂದ್ರಹಾಸ ಬಂದ. ಊರಿಗೆ ಊರೇ ಸಂಭ್ರಮ ಪಟ್ಟಿತು. ಚಂದ್ರಹಾಸ ರಾಜಕುಮಾರನಾಗಿ ಬೆಳೆದ. ಅವನ ಮುಖದ ಕಾಂತಿ, ಬುದ್ಧಿಶಕ್ತಿ , ವಿನಯ ಇವು ಎಲ್ಲರನ್ನೂ ಮೆಚ್ಚಿಸಿದವು. ಚಂದ್ರಹಾಸನಿಗೆ ರಾಜ ಯೋಗ್ಯವಾದ ವಿದ್ಯಾಭ್ಯಾಸವಾಯಿತು.

ಯಾರಿವನು ರಾಜಕುಮಾರ?

ಚಂದ್ರಹಾಸನ ಹತ್ತಿರ ಒಂದು ಗೋಲಿಯಿತ್ತು. ಅದೊಂದು ಸಾಲಿಗ್ರಾಮ ಅಲ್ಲವೆ? ಅದರ ಮಹಿಮೆ ಅಪಾರವಾದದ್ದು. ಅದರಿಂದ ಚಂದ್ರಹಾಸನ ಮನಸ್ಸಿನಲ್ಲಿ ದೈವಭಕ್ತಿ ಬೆಳೆಯಿತು. ಅವನು ಸದಾ ಭಗವಂತನ ನಾಮಸ್ಮರಣೆ ಮಾಡುತ್ತಿದ್ದ. ಕಾಲಕ್ರಮೇಣ ಚಂದ್ರಹಾಸ ಬೆಳೆದು ದೊಡ್ಡವನಾದ. ಕುಳಿಂದಕ ಒಂದು ದಿನ ಮಗನನ್ನು ಹತ್ತಿರ ಕೂಡಿಸಿಕೊಂಡು, “ಮಗು, ಚಂದ್ರಹಾಸ, ನನಗೆ ವಯಸ್ಸಾಯ್ತು. ಇನ್ನು ಚಂದನಾವತಿಯ ರಾಜ್ಯ ವ್ಯವಹಾರಗಳನ್ನೆಲ್ಲ ನೀನೇ ನೋಡಿಕೊಳ್ಳಬೇಕು. ಕುಂತಳ ನಗರದ ರಾಜನಿಗೆ ನಾವು ಅಧೀನರಾಗಿದ್ದೇವೆ. ಪ್ರತಿ ವರ್ಷವೂ ಅಲ್ಲಿಗೆ ನಾವು ಕಾಣಿಕೆಗಳನ್ನು ಕಳಿಸಬೇಕು. ಅಧಿಕಾರಿಗಳ ಮುಖಾಂತರ ಆ ಹಣವನ್ನೆಲ್ಲಾ ಸರಿಯಾಗಿ ಅಲ್ಲಿಗೆ ಕಳುಹಿಸಿಕೊಡು” ಎಂದು ತಿಳಿಸಿದ.

ಚಂದ್ರಹಾಸ ಕಾಣಿಕೆಯನ್ನು ಅಧಿಕಾರಿಗಳೊಡನೆ ಕಳುಹಿಸಿಕೊಟ್ಟನು. ಅವರು ನೇರವಾಗಿ ಮಹಾಮಂತ್ರಿಯಾದ ದುಷ್ಟಬುದ್ಧಿಯ ಬಳಿಗೆ ಹೋಗಿ ಒಪ್ಪಿಸಿದರು. ಅಧಿಕಾರಿಗಳು, “ನಮ್ಮ ರಾಜಕುಮಾರರಾದ ಚಂದ್ರಹಾಸರು ಈ ಕಾಣಿಕೆಗಳನ್ನು ಸನ್ನಿಧಾನಕ್ಕೆ ಒಪ್ಪಿಸಿ ಬರುವಂತೆ ಅಪ್ಪಣೆ ಮಾಡಿದ್ದಾರೆ” ಎಂದರು. ಈ ಮಾತುಗಳನ್ನು ಕೇಳಿ ದುಷ್ಟಬುದ್ಧಿಗೆ ಆಶ್ಚರ್ಯವಾಯಿತು. ‘ಕುಳಿಂದಕನಿಗೆ ಮಕ್ಕಳೇ ಇಲ್ಲವಲ್ಲ. ಈ ರಾಜಕುಮಾರ ಚಂದ್ರಹಾಸ ಯಾರು?’ ಎನ್ನಿಸಿತು. ಬಂದ ಅಧಿಕಾರಿಗಳನ್ನೇ ಕೇಳಿದ.

ಅವರು ಹೇಳಿದರು: “ನಮ್ಮ ರಾಜರಿಗೆ ಕಾಡಿನಲ್ಲಿ ಮಗು ಸಿಕ್ಕಿತು. ಆತನನ್ನು ತಂದು ಸಾಕಿ ಸಲಹಿ ಈಗ ರಾಜ್ಯಭಾರದ ವ್ಯವಹಾರವನ್ನೆಲ್ಲ ಆತನಿಗೇ ಒಪ್ಪಿಸಿ ಬಿಟ್ಟಿದ್ದಾರೆ. ಆತ ಬಹಳ ದೈವಭಕ್ತ.”

ದುಷ್ಟಬುದ್ಧಿ ಕೇಳಿದ : “ಯಾರು ಆ ಹುಡುಗ? ಯಾವ ಕಾಡಿನಲ್ಲಿ ಸಿಕ್ಕ? ಎಷ್ಟು ದಿನ ಆಯಿತು?”

ಚಂದನಾವತಿಯ ಅಧಿಕಾರಿಗಳು ಉತ್ತರ ಕೊಡುತ್ತ ಹೋದ ಹಾಗೆಲ್ಲ ದುಷ್ಟಬುದ್ಧಿಗೆ ಅನುಮಾನವಾಯಿತು – ಈ ರಾಜಕುಮಾರ ಚಂದ್ರಹಾಸ ತಾನು ಕಟುಕರಿಗೆ ಒಪ್ಪಿಸಿದ ಹುಡುಗನೇ ಇರಬಹುದೇ?

ಆದರೆ ಹುಡುಗನ ಕಾಲಬೆರಳನ್ನು ತಂದು ತೋರಿಸಿದರಲ್ಲ?

ಅವನ ಅನುಮಾನ, ಯೋಚನೆ ಬಲವಾದವು. ಆದರೆ ಅವನ್ನು ತೋರಿಸಿಕೊಳ್ಳಲಿಲ್ಲ. ಚಂದನಾವತಿಯಿಂದ ಬಂದವರನ್ನು ಗೌರವದಿಂದ ಕಳುಹಿಸಿಕೊಟ್ಟ.

ಕೆಲವು ದಿನಗಳು ಕಳೆದವು. ಚಂದನಾವತಿಯ ರಾಜನನ್ನು ನೋಡುವ ನೆವದಿಂದ ದುಷ್ಟಬುದ್ಧಿ ಅಲ್ಲಿಗೆ ಹೊರಟ.

ಅವನು ಹೊರಟಾಗ ಮಗಳು ವಿಷಯೆ ಬಂದು ನಮಸ್ಕರಿಸಿದಳು. ಸುಂದರಿಯಾದ ಹುಡುಗಿ. ಅವಳಿಗೆ ಮದುವೆಯ ವಯಸ್ಸಾಯಿತು, ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಬೇಕು ಎಂದುಕೊಂಡ ದುಷ್ಟಬುದ್ಧಿ. ಮಗ ಮದನ ಅಲ್ಲಿಯೇ ಇದ್ದ. “ಮಗೂ ಮದನ, ಒಳ್ಳೆಯ ಗಂಡು ಸಿಕ್ಕುವ ಹಾಗೆ ವಿಷಯೆ ದೇವರಿಗೆ ಪೂಜೆ, ವ್ರತ ಎಲ್ಲ ನಡೆಸಲಿ. ಏರ್ಪಾಟು ಮಾಡು” ಎಂದು ಹೇಳಿದ. ಚಂದನಾವತಿಗೆ ಪ್ರಯಾಣ ಪ್ರಾರಂಭಿಸಿದ.

ದುಷ್ಟಬುದ್ಧಿಯ ದೂತ

ಮಂತ್ರಿ ಚಂದನಾವತಿಗೆ ಬಂದ. ಕುಳಿಂದಕನು ಆತನನ್ನು ಬಹಳ ಗೌರವದಿಂದ ಬರಮಾಡಿಕೊಂಡ. ಸ್ವಾಗತಿಸಿದ, ಸತ್ಕರಿಸಿದ. ತನ್ನ ಮಗನಾದ ಚಂದ್ರಹಾಸನನ್ನು ಪರಿಚಯ ಮಾಡಿಸಿದ. ಪಾಪ, ಚಂದ್ರಹಾಸನಿಗೆ ತಿಳಿಯದು-ಈತನೇ ತನ್ನನ್ನು ಕಟುಕರಿಗೆ ಒಪ್ಪಿಸಿದವನು ಎಂದು. ಮಹಾಮಂತ್ರಿಯನ್ನು ಆದರಿಸಿದ.

ದುಷ್ಟಬುದ್ಧಿ ಮಾತಿನಲ್ಲಿ ಚತುರ. ಚಂದ್ರಹಾಸನನ್ನು ಬಹಳ ಅಭಿಮಾನದಿಂದ ಮಾತಾಡಿಸಿದ. ಅವನ ಎಡಗಾಲಿನಲ್ಲಿ ಬೆರಳು ಕತ್ತರಿಸಿದ್ದ ಗುರುತನ್ನು ಬಹು ಸೂಕ್ಷ್ಮವಾಗಿ ಗಮನಿಸಿದ. ಚಂದ್ರಹಾಸನ ಮುಖ, ಅವನ ಕಾಲಿನ ಬೆರಳು ಕತ್ತರಿಸಿರುವುದು ಎಲ್ಲ ನೋಡಿ ಇವನೇ ತಾನು ಕಟುಕರಿಗೆ ಕೊಟ್ಟ ಹುಡುಗ ಎಂದು ಖಚಿತವಾಯಿತು. ‘ಇವನು ಒಂದಲ್ಲ ಒಂದು ದಿನ ಕುಂತಳಕ್ಕೆ ರಾಜನಾಗುತ್ತಾನೆ’ ಎಂದು ಬ್ರಾಹ್ಮಣರು ಹೇಳಿದ್ದ ಮಾತು ಆತನಿಗೆ ಜ್ಞಾಪಕಕ್ಕೆ ಬಂತು.

‘ಇವನು ಅದೇ ಬಾಲಕ, ಅನುಮಾನವೇ ಇಲ್ಲ. ಕಟುಕರು ಹಾಗಾದರೆ ಮೋಸ ಮಾಡಿದರು. ಒಂದು ಬೆರಳನ್ನು ಕತ್ತರಿಸಿ ತಂದು ಗುರುತು ತೋರಿಸಿಬಿಟ್ಟರು. ಎಂತಹ ಕೆಲಸವಾಯ್ತು! ಇರಲಿ, ಇದಕ್ಕೆ ಬೇರೊಂದು ಉಪಾಯ ಮಾಡುತ್ತೇನೆ’ ಎಂದು ದುಷ್ಟಬುದ್ಧಿ ತೀರ್ಮಾನ ಮಾಡಿಕೊಂಡ.

ದುಷ್ಟಬುದ್ಧಿ ಯೋಚಿಸಿ ಕೊನೆಗೊಂದು ತೀರ್ಮಾನ ಮಾಡಿಕೊಂಡ. “ಚಂದ್ರಹಾಸನ ಮುಖಾಂತರ ಮಗನಾದ ಮದನನಿಗೆ ಒಂದು ಕಾಗದ ಕಳಿಸುವುದು. ‘ಈ ಕಾಗದ ತರುವ ಹುಡುಗನಿಗೆ ವಿಷವನ್ನು ಕೊಟ್ಟುಬಿಡು. ಯಾರು? ಏಕೆ? ಎಂದೂ ಏನೂ ವಿಚಾರಿಸುವ ಗೋಜಿಗೆ ಹೋಗಬೇಡ’ ಎಂದು ಬರೆಯುವುದು ಮದನ ನನ್ನ ಮಾತನ್ನು ನಡೆಸುತ್ತಾನೆ. ಚಂದ್ರಹಾಸನ ಕಥೆ ಮುಗಿಯುತ್ತದೆ. ರಾಜ್ಯವೆಲ್ಲ ಮಗನಾದ ಮದನನಿಗೇ ದಕ್ಕುತ್ತದೆ” ಎಂದುಕೊಂಡ.

ದುಷ್ಟಬುದ್ಧಿಯು ನೋಡುತ್ತಾನೆ – ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ರಾಜಕುಮಾರಿಯೊಡನೆ ಚಂದ್ರಹಾಸ!

ಬೆಳಗಾಯಿತು. ದುಷ್ಟಬುದ್ಧಿ ಮಗನಿಗೆ ಕಾಗದ ಬರೆದಿಟ್ಟ. ಚಂದ್ರಹಾಸನನ್ನು ಕರೆದು ಹೇಳಿದ: “ಮಗು ಚಂದ್ರಹಾಸ, ನಾನು ಕೆಲವು ದಿನ ಇಲ್ಲೇ ಇರಬೇಕಾದ ಕೆಲಸವಿದೆ. ಕುಂತಳ ನಗರದಲ್ಲಿ ನನ್ನ ಮಗ ಮದನನಿಗೆ ಒಂದು ಮುಖ್ಯವಾದ ವಿಚಾರ ತಿಳಿಸಬೇಕು. ಕಾಗದ ಬರೆದುಕೊಡುತ್ತೇನೆ. ನೀನು ಅದನ್ನು ತಲುಪಿಸಬೇಕು. ಇದು ಬಹು ರಹಸ್ಯವಾದ ವಿಚಾರ. ನಮ್ಮಿಬ್ಬರಲ್ಲೇ ಇರಲಿ. ಕಾಗದವನ್ನು ಬೇಗ ತಲುಪಿಸು.”

ಚಂದ್ರಹಾಸ ಸಂತೋಷವಾಗಿ ಒಪ್ಪಿಕೊಂಡ. ಮಾರನೇ ದಿನವೇ ತನ್ನ ತಂದೆತಾಯಿಗಳಿಗೆ ನಮಸ್ಕಾರ ಮಾಡಿ, ದುಷ್ಟಬುದ್ಧಿಯ ಕಾಗದವನ್ನು ತೆಗೆದುಕೊಂಡು ಕುಂತಳ ನಗರಕ್ಕೆ ಹೊರಟ.

ಮಹಾಮಂತ್ರಿಗಳೇ ಕಾಗದವನ್ನು ಬೇಗ ತಲುಪಿಸಬೇಕೆಂದಿದ್ದರಲ್ಲವೆ? ಚಂದ್ರಹಾಸ ಕುದುರೆ ಏರಿ ಅತಿ ವೇಗವಾಗಿ ಕುಂತಳ ನಗರದ ಕಡೆ ಹೊರಟ. ಮೂರು ನಾಲ್ಕು ದಿನ ಪ್ರಯಾಣ ಮಾಡಿ ಕುಂತಳನಗರವನ್ನು ತಲುಪಿದ. ಊರಿನ ಮುಂದೆ ಒಂದು ಸುಂದರ ಉದ್ಯಾನ. ಹೂವು ಹಣ್ಣುಗಳಿಂದ ಬೆಳಗುತ್ತಿದ್ದ ವನವನ್ನು ನೋಡಿ ಚಂದ್ರಹಾಸನಿಗೆ ಬಹಳ ಸಂತೋಷವಾಯಿತು. ಕುದುರೆಯನ್ನತ್ತ ಮೇಯಲು ಬಿಟ್ಟ ವೇಗವಾಗಿ ಅಷ್ಟು ಪ್ರಯಾಣ ಮಾಡಿದ್ದ, ಆಯಾಸವಾಗಿತ್ತು. ಅವನಿಗೆ ತುಂಬ ನಿದ್ರೆ ಬಂತು. ಒಂದು ಮರದ ಕೆಳಗೆ ಮಲಗಿಬಿಟ್ಟ.

ತಂದೆಯ ಕಾಗದವನ್ನು ಮಗಳು ಓದಿದಳು

ಸ್ವಲ್ಪ ಹೊತ್ತು ಕಳೆಯಿತು. ರಾಜನ ಮಗಳು ಚಂಪಕಮಾಲಿನಿ ತನ್ನ ಸ್ನೇಹಿತೆಯರೊಂದಿಗೆ ವನಕ್ಕೆ ಬಂದಳು. ಅವಳ ಗೆಳತಿಯರಲ್ಲಿ ದುಷ್ಟಬುದ್ಧಿಯ ಮಗಳು ವಿಷಯೆಯೂ ಒಬ್ಬಳು. ವನದಲ್ಲಿ ಗೆಳತಿಯರ ಸಂಭ್ರಮವೋ ಸಂಭ್ರಮ. ಆಟವಾಡಿದರು, ಓಡಿದರು. ಅನಂತರ ಹೂವುಗಳನ್ನು ಬಿಡಿಸಿಕೊಳ್ಳಲು ಪ್ರಾರಂಭಿಸಿದರು. ಅಲ್ಲಲ್ಲಿ ಓಡಾಡುತ್ತ ದುಷ್ಟಬುದ್ಧಿಯ ಮಗಳು ವಿಷಯೆ ದೊಡ್ಡ ಮಾವಿನ ಮರದ ಹತ್ತಿರವಿದ್ದ ಮಲ್ಲಿಗೆ ಪೊದರಿನ ಕಡೆಗೆ ಬಂದಳು. ಮರದ ಕೆಳಗೆ ಚಂದ್ರಹಾಸ ಮೈಮರೆತು ಮಲಗಿದ್ದ.

ವಿಷಯೆ ಹಾಗೆ ಕ್ಷಣಕಾಲ ನಿಂತು ನೋಡಿದಳು. “ಬಹಳ ಲಕ್ಷಣವಾಗಿದ್ದಾನೆ. ಮುಖದಲ್ಲಿ ಎಂತಹ ಕಳೆ! ಯಾವ ದೇಶದ ರಾಜಕುಮಾರನೋ! ದೈವೇಚ್ಛೆಯಿದ್ದು ಈತ ನನ್ನನ್ನು ಮದುವೆ ಮಾಡಿಕೊಂಡರೆ….’ ಎಂದು ಆಕೆಗೆ ಎನ್ನಿಸಿತು. ಅವನನ್ನು ನೋಡುತ್ತಾ ನಿಂತಳು.

ಆತನ ವಸ್ತ್ರದ ಮಡಿಕೆಯಲ್ಲಿ ಲಕ್ಕೋಟೆಯೊಂದು ಕಾಣಿಸಿತು. ಅದರಿಂದ ಆತ ಯಾರು ಎಂದು ತಿಳಿಯಬಹುದು ಎಂದು ವಿಷಯೆ ಅದನ್ನು ಮೆಲ್ಲಗೆ ಎಳೆದುಕೊಂಡಳು. ‘ಮದನಕುಮಾರನಿಗೆ’ ಎಂದು ವಿಳಾಸವಿತ್ತು. ಕುತೂಹಲವಾಯಿತು. ತಂದೆ ಈತನನ್ನು ಕಳುಹಿಸಿದ್ದಾರೆ, ಏಕಿರಬಹುದು? ಏಕಿರಬಹುದ?

ಕಾಗದವನ್ನು ಒಡೆದು ನೋಡಿದರೆ ತಿಳಯುತ್ತದಲ್ಲ!

ಆದರೆ ಕಾಗದ ಬರೆದಿರುವುದು ಮದನನಿಗೆ. ತಾನು ಒಡೆಯುವುದು ಸರಿಯೆ?

ಆದರೆ ಕುತೂಹಲವನ್ನು ತಡೆಯುವುದು ಕಷ್ಟವಾಯಿತು. ತಡ ಮಾಡಿದರೆ ಯಾರಾದರೂ ಸ್ನೇಹಿತೆಯರು ಬಂದುಬಿಟ್ಟಾರು ಎಂದೂ ತೋರಿತು.

ಮೆಲ್ಲನೆ ಕಾಗದವನ್ನು ಬಿಡಿಸಿ ಓದಿದಳು.

ಓದುತ್ತ ಹುಡುಗಿ ಬೆಚ್ಚಿದಳು.

ಇದೇನು? ‘ಈ ಕಾಗದವನ್ನು ತರುವವನಿಗೆ ತಡ ಮಾಡದೆ ವಿಷವನ್ನು ಕೊಡು. ಇವನು ಯಾರು? ಏಕೆ? ಎಂದೇನೂ ವಿಚಾರಿಸಬೇಡ. ತಡ ಮಾಡಬೇಡ’ ಎಂದು ಬರೆದಿದ್ದಾರೆ ತಂದೆ? ಏನು ತಪ್ಪು ಮಾಡಿರಬಹುದು ಈತ? ವಿಷ ಕೊಡಬೇಕಾದರೆ ಬಹಳ ಕೆಟ್ಟ ಕೆಲಸ ಮಾಡಿರಬೇಕು. ಆದರೆ ನೋಡಿದರೆ ಮುಖದಲ್ಲಿ ಎಂತಹ ಕಳೆ, ಎಷ್ಟು ಒಳ್ಳೆಯತನ! ಈತ ಏನೂ ತಪ್ಪು ಮಾಡಿರಲಾರ.

ಈ ಎಲ್ಲ ಯೋಚನೆಗಳೂ ವಿಷಯೆಯ ಮನಸ್ಸಿನಲ್ಲಿ ಅರೆ ಕ್ಷಣದಲ್ಲಿ ಮಿಂಚಿದವು.

ಇದ್ದಕ್ಕಿದ್ದಂತೆ ಅವಳಿಗೆ ತಂದೆ ಚಂದನಾವತಿಗೆ ಹೊರಡುವಾಗ ಆಡಿದ್ದ ಮಾತುಗಳು ನೆನಪಾದವು. ‘ಓ, ಈತ ತಂದೆ ನನಗಾಗಿ ಆರಿಸಿದ ವರನೇ ಇರಬೇಕು. ಬಹುಶಃ ಬರೆಯುವ ಆತುರದಲ್ಲಿ ಹೀಗಾಗಿದೆ. ವಿಷಯೆಯನ್ನು ಕೊಡು-ಎಂದು ಇರಬೇಕು’ ಎಂದು ಆಕೆ ಯೋಚಿಸಿದಳು. ಕೈಯುಗರನ್ನು ಲೇಖನಿಯಾಗಿ, ಕಣ್ಣ ಕಪ್ಪನ್ನು ಮಸಿಯಾಗಿ ಮಾಡಿಕೊಂಡು ‘ವಿಷವನ್ನು ಕೊಡು’ ಎಂಬ ಮಾತನ್ನು ‘ವಿಷಯೆಯನ್ನು ಕೊಡು’ ಎಂದು ತಿದ್ದಿ ಬಿಟ್ಟಳು. ಮತ್ತೆ ಕಾಗದವನ್ನು ಮೊದಲಿನಂತೆಯೇ ಮಡಿಸಿ, ಲಕ್ಕೋಟೆ ಅಂಟಿಸಿ ಚಂದ್ರಹಾಸನ ವಸ್ತ್ರದ ಮಡಿಕೆಯಲ್ಲಿಟ್ಟು ಸರಸರನೆ ಮನೆಯ ಕಡೆ ಹೊರಟು ಬಂದಳು.

ಮದುಮಗ ಚಂದ್ರಹಾಸ

ಆಯಾಸಪಟ್ಟಿದ್ದುದರಿಂದ ಚಂದ್ರಹಾಸನಿಗೆ ಚೆನ್ನಾಗಿ ನಿದ್ರೆ ಬಂದುಬಿಟ್ಟಿತ್ತು. ತಾನು ನಿದ್ರೆ ಮಾಡುತ್ತಿದ್ದಾಗ ಏನಾಯಿತೆಂದೇ ಅವನಿಗೆ ತಿಳಿಯದು. ಎಚ್ಚರಿಕೆಯಾದಾಗ ಸುತ್ತ ನೋಡಿದ. ಎಷ್ಟು ಹೊತ್ತಾಗಿ ಹೋಗಿದೆ ಎಂದುಕೊಂಡ. ಕೊಳದಲ್ಲಿ ಮುಖ ತೊಳೆದುಕೊಂಡ. ಸರಸರನೆ ನಗರದ ಕಡೆ ಹೊರಟ. ಕುಂತಳ ನಗರದಿಂದ ಅವನನ್ನು ಕಟುಕರು ಎತ್ತಿಕೊಂಡು ಹೋದಾಗ ಅವನಿನ್ನೂ ಎಳೆಯ ಹುಡುಗ. ಊರಿನ ಅಂದಚೆಂದಗಳು ಅವನಿಗೆ ಮರೆತೇ ಹೋಗಿದ್ದವು. ರಾಜಧಾನಿ – ಬಹು ಸುಂದರವಾದ ನಗರ. ಭವ್ಯವಾದ ಮನೆಗಳು. ಅಂಗಡಿ ಬೀದಿಯಲ್ಲಿ ಕಣ್ಣನ್ನು ಬೆರಗುಗೊಳಿಸುವಂತೆ ಬಗೆಬಗೆಯ ವಸ್ತುಗಳು, ವಸ್ತ್ರಗಳು ಹೊಳೆಯುತ್ತಿದ್ದವು. ಅವನ್ನು ನೋಡುತ್ತಾ ಸಂತೋಷದಿಂದ ಚಂದ್ರಹಾಸ ಮಹಾಮಂತ್ರಿಯ ಮನೆಗೆ ತಲುಪಿದ.

ಮದನ ಚಂದ್ರಹಾಸನನ್ನು ಸ್ನೇಹದಿಂದ ಬರಮಾಡಿಕೊಂಡ. ಅವನ ಮುಖದ ತೇಜಸ್ಸು, ಮಾತಿನ ವಿನಯ, ಸೌಜನ್ಯ ಅವನನ್ನು ಸಂತೋಷಗೊಳಸಿದವು. ಚಂದ್ರಹಾಸ ತಾನು ತಂದಿದ್ದ ಕಾಗದವನ್ನು ಕೊಟ್ಟ ಮದನ ಓದಿದ: “ಈ ಕಾಗದವನ್ನು ತರುವವನಿಗೆ ತಡ ಮಾಡದೆ ವಿಷಯೆಯನ್ನು ಕೊಡು.” ಕಾಗದವನ್ನು ಓದಿಕೊಂಡು ಮದನ ಕುಮಾರ ಹಿಗ್ಗಿಹೋದ. ಚಂದ್ರಹಾಸನನ್ನು ರಾಜ ಗೌರವದಿಂದ ಸ್ವಾಗತಿಸಿದ. ಅರಮನೆಯ ಪುರೋಹಿತರನ್ನು ಕರೆಸಿ ತಂಗಿಯ ಮದುವೆಗೆ ಬೇಕಾದ ಏರ್ಪಾಟುಗಳನ್ನು ಮಾಡಿದ.

ಶುಭ ಮುಹೂರ್ತದಲ್ಲಿ ವಿಷಯೆ ಮತ್ತು ಚಂದ್ರಹಾಸರ ವಿವಾಹವು ಅತಿ ವೈಭವದಿಂದ ನಡೆದೇ ಹೋಯಿತು.

ಮಾವ ಅಳಿಯನನ್ನು ಕಂಡ

ಮಹಾಮಂತ್ರಿ ದುಷ್ಟುಬುದ್ಧಿ ಚಂದನಾವತಿಯಿಂದ ಕುಂತಳ ನಗರಕ್ಕೆ ಹೊರಟ. ಈ ವೇಳೆಗೆ ಚಂದ್ರಹಾಸ ಸತ್ತೇ ಹೋಗಿರುತ್ತಾನೆ, ಇನ್ನು ನಮಗೆ ರಾಜ್ಯಾಧಿಕಾರ ದಕ್ಕುವುದು ಎಂದು ದಾರಿಯುದ್ಧಕ್ಕೂ ಸಂತೋಷಪಟ್ಟುಕೊಂಡು ಬರುತ್ತಿದ್ದ.

ನಗರವನ್ನು ಪ್ರವೇಶಿಸಿದ ದುಷ್ಟಬುದ್ಧಿ, ಬೀದಿಗಳೆಲ್ಲ ಅಲಂಕೃತವಾಗಿವೆ! ‘ಇದು ಹೇಗಾಯಿತು? ನನಗೇ ತಿಳಿಯದಂತೆ ಕುಂತಳ ನಗರದಲ್ಲಿ ಇಷ್ಟು ಸಂಭ್ರಮದ ಉತ್ಸವ ಯಾವುದು ನಡೆದಿರಬಹುದು?’ ಎಂದು ಆಶ್ಚರ್ಯ ಪಟ್ಟ ಮುಂದಕ್ಕೆ ಬಂದ. ನೂರಾರು ಜನ ಎದುರಿಗೆ ಬಂದರು. ಅವರ ಕೈಯಲ್ಲಿ ಮದುವೆ ಮನೆಯ ಉಡುಗೊರೆಗಳು. ಮದುವೆ ಗಂಡು ಮತ್ತು ಹೆಣ್ಣಿನ ಕಳೆ, ಕಣ್ಣಿಗೆ ಸಂತೋಷವೆನಿಸುವ ರೂಪ ಇವನ್ನೆಲ್ಲ ಮೆಚ್ಚಿ ಮಾತನಾಡುತ್ತ ಬರುತ್ತಿದ್ದಾರೆ.

ಮಂತ್ರಿ ಅವರಲ್ಲಿ ಕೆಲವರನ್ನು ನಿಲ್ಲಿಸಿ ಪ್ರಶ್ನಿಸಿದ: “ಇದೇನು, ಕುಂತಳ ನಗರವನ್ನೆಲ್ಲಾ ಅಲಂಕಾರ ಮಾಡಿದ್ದಾರೆ? ಸುದ್ದಿಯೇನು?”

ಅವರಿಗೆ ಸ್ವಲ್ಪ ಆಶ್ಚರ್ಯವೇ ಆಯಿತು-ಏನಿದು, ಮಂತ್ರಿಯ ಮಗಳ ಮದುವೆ, ಮಂತ್ರಿಯೇ ಹೀಗೆ ಕೇಳುತ್ತಿದ್ದಾರೆ ಎಂದು. ಆದರೂ ಅವರು ಮದುವೆಯ ಸಂಭ್ರಮವನ್ನು ಸಂತೋಷದಿಂದ ತಿಳಿಸಿದರು.

ದುಷ್ಟಬುದ್ಧಿಗೆ ಚೇಳು ಕುಟುಕಿದಂತಾಯ್ತು. ಕ್ಷಣ ಕಾಲ ದಿಕ್ಕೇ ತೋಚಲಿಲ್ಲ. ಮನಸ್ಸಿಗೆ ತುಂಬ ಕಳವಳವಾಯಿತು. ಸರಸರನೆ ಮನೆಗೆ ಬಂದ.

ಮಂತ್ರಿಯ ಭವ್ಯ ಸೌಧ ಅಲಂಕೃತವಾಗಿದೆ. ಮಂಗಳ ವಾದ್ಯಗಳು ಮೊಳಗುತ್ತಿವೆ. ಎಲ್ಲಿ ನೋಡಿದರೂ ಅಲಂಕಾರ, ಸಂಭ್ರಮ, ಸಂತೋಷ.

ಮಂತ್ರಿ ಕುದುರೆಯಿಂದ ಇಳಿದವನೇ ಅತ್ತಿತ್ತ ಕಣ್ಣು ಹಾಯಿಸದೇ ಮನೆಯನ್ನು ಹೊಕ್ಕ.

ಇದ್ದಕ್ಕಿದ್ದಂತೆ ಬಂದ ತಂದೆಯನ್ನು ಕಂಡು ಮದನಕುಮಾರನಿಗೆ ಆಶ್ಚರ್ಯವಾಯಿತು. ಲಗ್ನದ ದಿವಸವೇ ಇಷ್ಟು ಬೇಗ ಬಂದರು ಎಂದು ಸಂತೋಷವಾಯಿತು. ಸಂಭ್ರಮದಿಂದ ಎದ್ದು ಬಂದು ಸ್ವಾಗತಿಸಿದ.

ವಿಷಯೆಗೂ ಬಹಳ ಹರ್ಷವಾಯಿತು. ಅವಳೂ ಚಂದ್ರಹಾಸನೂ ಮದುಮಕ್ಕಳ ವೈಭವದ ಉಡುಪಿನಲ್ಲೇ ಇದ್ದರು. ಎದ್ದು ಬಂದು ದುಷ್ಟಬುದ್ಧಿಯ ಪಾದಗಳಿಗೆ ನಮಸ್ಕರಿಸಿದರು.

ಮಂತ್ರಿಯ ಕಣ್ಣಿಗೆ ಕೆಂಡ ಸುರಿದಂತಾಯಿತು.

ಮನಸ್ಸು ಹಾವುಗಳ ಹುತ್ತವಾಗಿತ್ತು. ಕೋಪ, ದ್ವೇಷ ಉರಿಯುತ್ತಿದ್ದವು. ಮಗನನ್ನು ಕರೆದು, ‘ಏನೀ ಅವಿವೇಕ, ಎಂತಹ ಅನರ್ಥ ಮಾಡಿದೆ? ನಾನು ಬರೆದಿದ್ದುದೇನು? ನೀನು ಮಾಡಿದ್ದೇನು?” ಎಂದು ಗದರಿಸಿ ಕೇಳಿದ. ಮದನನಿಗೆ ತಂದೆಯ ಮಾತು ಕೇಳಿ ಆಶ್ಚರ್ಯವಾಯಿತು. “ತಮ್ಮ ಕಾಗದದ ಪ್ರಕಾರವೇ ನಡೆದಿದ್ದೇನೆ. ಇದರಲ್ಲಿ ಅಪರಾಧವೇನು?” ಎಂದ.

“ಮೂರ್ಖ, ಸ್ಪಷ್ಟವಾಗಿ ಬರೆದಿದ್ದೆ. ಅಷ್ಟು ಅರ್ಥವಾಗಲಿಲ್ಲವೆ ನಿನಗೆ?” ತಂದೆ ಗುಡುಗಿದ.

“ಅಪ್ಪಾಜಿ, ನನ್ನಿಂದ ತಪ್ಪಿಲ್ಲ. ನೀವು ಬರೆದಂತೆ ಆದಷ್ಟು ಬೇಗನೆ ಮದುವೆ ನಡೆಸಿದ್ದೇನೆ. ಇದೂ ತಡವಾಯಿತು ಎನ್ನಿಸಿದರೆ ಕ್ಷಮಿಸಬೇಕು” ಎಂದ ಮದನ ಕುಮಾರ ಕಾಗದವನ್ನು ತಂದೆಯ ಮುಂದಿಟ್ಟ.

ದುಷ್ಟಬುದ್ಧಿ ಓದಿಕೊಂಡ. ‘ವಿಷಯೆಯನ್ನು ಕೊಡು’ ಎಂದು ಸ್ಪಷ್ಟ ಬರವಣಿಗೆಯಿತ್ತು! ತನ್ನ ಕಣ್ಣನ್ನು ತಾನೇ ನಂಬದಂತಾಯ್ತು. ‘ವಿಷವನ್ನು ಕೊಡು ಎಂದು ಮನಸ್ಸಿನಲ್ಲಿ ಯೋಚನೆ ಮಾಡಿಕೊಂಡು, ವಿಷಯೆಯನ್ನು ಕೊಡು ಎಂದು ನಾನೇ ಬರೆದಿರಬಹುದೇ?’ ಎಂದೂ ಯೋಚನೆ ಬಂದಿತು. ಕಾರ್ಯ ಮಿಂಚಿಹೋಗಿತ್ತು. ದುಷ್ಟಬುದ್ಧಿಯ ಮನಸ್ಸು ಅಲ್ಲೋಲ-ಕಲ್ಲೋಲವಾಗಿ ಹೋಯ್ತು.

ಆದರೂ ದುಷ್ಟಬುದ್ಧಿ ತನ್ನ ದ್ವೇಷ, ಕೋಪ, ದುಃಖಗಳನ್ನು ಅದುಮಿಕೊಂಡ. ಮಗಳು ಅಳಿಯರನ್ನು ವಿಶ್ವಾಸವಾಗಿಯೇ ಮಾತನಾಡಿಸಿದ.

ಆದರೂ ‘ಚಂದ್ರಹಾಸನನ್ನು ಏನಾದರೂ ಮಾಡಿಕೊಂದೇ ತೀರಬೇಕು’ ಎಂಬ ಸೇಡಿನ ಕಿಡಿ ಮಂತ್ರಿಯ ಮನಸ್ಸಿನಲ್ಲಿ ಹೊತ್ತಿತು.

ಕಾಳಿಕಾದೇವಿಯ ಪೂಜೆಗೆ ಹೋಗು

ಚಂದ್ರಹಾಸ ಈಗ ಅವನ ಅಳಿಯ. ಅವನ ಒಬ್ಬಳೇ ಮಗಳು, ಪ್ರೀತಿಯ ಮಗಳು ವಿಷಯೆಯ ಗಂಡ. ಅವನು ಸತ್ತರೆ ಅವಳ ಸೌಭಾಗ್ಯ ಬರಿದಾಗುತ್ತದೆ. ಇದು ದುಷ್ಟಬುದ್ಧಿಗೆ ತಿಳಿಯದ ಸಂಗತಿಯಲ್ಲ, ಆದರೆ ಛಲ ಎನ್ನುವುದು ಕೆಟ್ಟದ್ದು. ಮನುಷ್ಯನ ವಿವೇಕವನ್ನೇ ಸುಟ್ಟುಬಿಡುತ್ತಿದೆ. ‘ಎರಡು ಬಾರಿ ತಾನು ಚಂದ್ರಹಾಸನನ್ನು ಕೊಲ್ಲಲು ಪ್ರಯತ್ನಿಸಿದರೂ ಉಳಿದುಕೊಂಡನಲ್ಲ, ಸಿಂಹಾಸನಕ್ಕೆ ತನ್ನ ಮಗನ ದಾರಿಗೆ ಇವನೊಬ್ಬ ಅಡ್ಡಿಯಾದನಲ್ಲ, ಇವನನ್ನು ನಾಶ ಮಾಡಲೇ ಬೇಕು’ ಎಂಬುದು ಅವನ ಛಲ.

ಗುಟ್ಟಾಗಿ ಕಟುಕರನ್ನು ಕರೆಸಿದ. ‘ಊರಾಚೆಯ ಕಾಡಿನ ಕಾಳೀ ಗುಡಿಯಲ್ಲಿ ಕಾದಿರಿ. ಪೂಜಾದ್ರವ್ಯಗಳನ್ನು ಹಿಡಿದು ಅರ್ಧರಾತ್ರಿ ಸಮಯದಲ್ಲಿ ಒಬ್ಬಾತ ಬರುತ್ತಾನೆ. ಹಿಂದು ಮುಂದು ಯೋಚನೆ ಮಾಡದೆ ಅವನನ್ನು ಕತ್ತರಿಸಿ ಹಾಕಿ’ ಎಂದು ಸೂಚನೆ ಕೊಟ್ಟ ಅವರಿಗೆ ಕೈತುಂಬ ಹಣ ಕೊಟ್ಟು ಕಳುಹಿಸಿದ.

ಅನಂತರ ಚಂದ್ರಹಾಸನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡ. ಬಹು ಪ್ರೀತಿಯಿಂದ ಮಾತನಾಡುತ್ತಾ, “ನೀನು ನನಗೆ ಅಳಿಯನಾಗಿ ದೊರೆತದ್ದು ತುಂಬ ಸಂತೋಷ. ಇದು ನಮ್ಮ ಭಾಗ್ಯ” ಎಂದು ವಿಶ್ವಾಸವಾಗಿ ಹೇಳಿದ. ಕಡೆಯಲ್ಲಿ ಹೇಳಿದ: “ನೋಡು ಚಂದ್ರಹಾಸ, ನಮ್ಮ ಮನೆತನದಲ್ಲಿ ಒಂದು ಪದ್ಧತಿ ಇದೆ. ಈ ಊರಿನಾಚೆ ಕಾಡಿನಲ್ಲಿ ಒಂದು ಕಾಳಿಯ ದೇವಾಲಯವಿದೆ. ಹೊಸದಾಗಿ ಮದುವೆಯಾದ ವರನು ಲಗ್ನದ ದಿನ ಕಾಳೀ ಮಂದಿರಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರಬೇಕು. ಒಬ್ಬನೇ ಹೋಗಬೇಕು. ದೇವೀ ಪೂಜೆಯನ್ನು ಅರ್ಧ ರಾತ್ರಿಯಲ್ಲಿ ಮಾಡಿ ಬರಬೇಕು. ನೀನೂ ಈ ಪದ್ಧತಿಯಂತೆ ನಡೆದುಕೊ. ನಿನಗೆ ಒಳ್ಳೆಯದೇ ಆಗುತ್ತದೆ” ಎಂದ. ಮಾವನ ವಿಶ್ವಾಸದ ಮಾತಿನಿಂದ ಚಂದ್ರಹಾಸನಿಗೆ ತುಂಬ ಸಂತೋಷವಾಯ್ತು. “ಖಂಡಿತ ಹೋಗಿ ಬರುತ್ತೇನೆ. ದೇವೀ ಪೂಜೆಯೆಂದರೆ ನನಗೂ ಇಷ್ಟವೆ. ಮೇಲಾಗಿ ಅದು ಸಂಪ್ರದಾಯವೆಂದಿರಿ. ಸಂತೋಷ. ಈ ರಾತ್ರಿಯೇ ಹೋಗಿ ಬರುತ್ತೇನೆ” ಎಂದ. ದುಷ್ಟಬುದ್ಧಿ ಈ ಬಾರಿಯಾದರೂ ತನ್ನ ಸಂಚು ಫಲಿಸಿತೆಂದು ಕೊಂಡ.

ಮಹಾರಾಜ ಚಂದ್ರಹಾಸ

ಕುಂತಳದ ರಾಜನಿಗೆ ಒಬ್ಬಳೇ ಮಗಳು. ಚಂಪಕ ಮಾಲಿನಿ-ಚಂದ್ರಹಾಸ ವನದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ವಿಷಯೆಯ ಜೊತೆಗೆ ಬಂದವಳು. ರಾಜನಿಗೆ ಗಂಡುಮಕ್ಕಳೇ ಇರಲಿಲ್ಲ. ಅವನಿಗೂ ಮುಪ್ಪು ಬಂದಿತ್ತು. ಆದುದರಿಂದಲೇ ರಾಜ್ಯದ ಅಧಿಕಾರವೆಲ್ಲ ದುಷ್ಟಬುದ್ಧಿ ಮತ್ತು ಮದನಕುಮಾರ ಇವರ ಕೈಯಲ್ಲಿತ್ತು. ಅರಸನು ಮಗಳನ್ನು ಒಳ್ಳೆಯ ವರನಿಗೆ ಕೊಟ್ಟು ಮದುವೆ ಮಾಡಿ, ಅಳಿಯನಿಗೆ ರಾಜ್ಯಭಾರವನ್ನು ವಹಿಸಿ, ತಾನು ತಪಸ್ಸಿಗಾಗಿ ಕಾಡಿಗೆ ಹೋಗಬೇಕು ಎಂದು ಯೋಚಿಸುತ್ತಿದ್ದ. ತನ್ನ ಗುರುಗಳಾದ ಗಾಲವ ಋಷಿಗಳಿಗೆ ನಮಸ್ಕರಿಸಿ, ಅವರ ಮಾರ್ಗದರ್ಶನ ಬೇಡಿದ.

ಅವರು ಹೇಳಿದರು: “ರಾಜ, ನಿನಗೆ ಇನ್ನು ಹೆಚ್ಚು ಆಯಸ್ಸಿಲ್ಲ.”

ರಾಜ ಹೇಳಿದ: “ನನಗೆ ರಾಜ್ಯಭಾರ ಸಾಕಾಗಿದೆ. ಆದರೆ ಮಗಳಿದ್ದಾಳೆ. ರಾಜ್ಯದ ಹೊಣೆ ಇದೆ. ಏನು ಮಾಡಲಿ?”

ಗಾಲವರು, “ಚಂದ್ರಹಾಸ ಕುಮಾರ ತೇಜಸ್ವಿಯಾಗಿದ್ದಾನೆ, ಸದ್ಗುಣಿಯಾಗಿದ್ದಾನೆ. ರಾಜನಾಗಲು ಯೋಗ್ಯ. ಅವನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿ, ರಾಜ್ಯವನ್ನು ಒಪ್ಪಿಸು” ಎಂದು ಹೇಳಿದರು.

ಗುರುಗಳ ಮಾತನ್ನು ಕೇಳಿ ರಾಜನಿಗೆ ಯಾವ ಕ್ಷಣ ಸಾವು ಬರುವುದೋ ಎಂದು ಆತಂಕವಾಗಿತ್ತು. ಗಾಲವರನ್ನು “ಯಾವಾಗ ಮದುವೆ ನಡೆಸಲಿ?” ಎಂದು ಕೇಳಿದ.

ಅವರು ಹೇಳಿದರು : “ಇಂದೇ ದಿನ ಶುಭವಾಗಿದೆ. ಚಂದ್ರಹಾಸನಿಗೆ ಹೇಳಿ ಕಳುಹಿಸಿ ಶುಭಕಾರ್ಯವನ್ನು ನಡೆಸಿಬಿಡು.”

ರಾಜನು ದೂತರಿಗೆ, “ಚಂದ್ರಹಾಸನನ್ನು ಈಗಲೇ ಬರುವಂತೆ ಕರೆ ಕಳುಹಿಸಿದೆ ಎಂದು ಹೇಳಿ ತಡ ಮಾಡದೆ ಅವನನ್ನು ಕರೆದುಕೊಂಡು ಬನ್ನಿ”  ಎಂದು ಹೇಳಿ ಕಳುಹಿಸಿದ. ಅವರು ಮಂತ್ರಿಯ ಮನೆಗೆ ಧಾವಿಸಿದರು.

ಅಲ್ಲಿ ಅವರಿಗೆ ಮೊದಲು ಕಂಡವನು ಮದನ.

ರಾಜದೂತರು ಮದನನಿಗೆ ನಮಸ್ಕಾರ ಮಾಡಿ ಅರಿಕೆ ಮಾಡಿಕೊಂಡರು : “ಚಂದ್ರಹಾಸ ಕುಮಾರರನ್ನು ಕೂಡಲೇ ಕರೆ ತರಬೇಕು, ತಡ ಮಾಡಕೂಡದು ಎಂದು ಪ್ರಭುಗಳು ಅಪ್ಪಣೆ ಮಾಡಿ ನಮ್ಮನ್ನು ಕಳುಹಿಸಿದ್ದಾರೆ.”

ರಾತ್ರಿಯಾಗಿತ್ತು. ಚಂದ್ರಹಾಸ ಪೂಜಾದ್ರವ್ಯಗಳನ್ನು ಚಿನ್ನದ ತಟ್ಟೆಯಲ್ಲಿಟ್ಟುಕೊಂಡು, ಪೀತಾಂಬರವನ್ನುಟ್ಟು ಕಾಳೀ ಮಂದಿರಕ್ಕೆ ಹೊರಡಲು ಅನುವಾದ. ಅಷ್ಟರಲ್ಲಿ ಮದನನು ಓಡಿಬಂದ. “ಅರಮನೆಯಿಂದ ಸುದ್ದಿ ಬಂದಿದೆ, ನೀನು ಈಗಲೇ ಮಹಾಪ್ರಭುಗಳನ್ನು ಕಾಣಬೇಕಂತೆ” ಎಂದ.

ಚಂದ್ರಹಾಸನು, “ಏನು ಮಾಡಲಿ ಈಗ? ಮಧ್ಯ ರಾತ್ರಿಗೆ ಕಾಳೀದೇವಾಲಯಕ್ಕೆ ಹೋಗಿ ಪೂಜೆ ಮಾಡಬೇಕು ಎಂದು ಮಾವನವರು ಅಪ್ಪಣೆ ಮಾಡಿದ್ದಾರೆ. ಅರಮನೆಗೆ ಹೋಗಿ ಬರುವ ಹೊತ್ತಿಗೆ ತಡವಾಗುತ್ತದೆ” ಎಂದ.

ಮದನನು “ಕಾಳೀ ಗುಡಿಗೆ ನಾನು ಹೋಗುತ್ತೇನೆ. ಲಗ್ನದ ದಿನ ಪೂಜೆಯಾಗುವುದು ಮುಖ್ಯ. ಯಾರು ಮಾಡಿದರೇನು? ನೀನು ತಕ್ಷಣ ಮಹಾರಾಜರ ದರ್ಶನಕ್ಕೆ ಹೋಗು” ಎಂದು ಹೇಳಿ ಚಂದ್ರಹಾಸನನ್ನು ಕಳಿಸಿ ತಾನು ಕಾಳೀಮಂದಿರಕ್ಕೆ ಹೊರಟ.

ಚಂದ್ರಹಾಸ ಅರಮನೆಯನ್ನು ತಲುಪಿದ. ಅವನನ್ನು ಕಂಡು ಮಹಾರಾಜನಿಗೆ ಬಹಳ ಸಂತೋಷವಾಯಿತು. ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟ ರಾಜ್ಯದ ಪಟ್ಟಾಭಿಷೇಕವನ್ನು ನೆರವೇರಿಸಿಬಿಟ್ಟ ತಾನು ತಪಸ್ಸಿಗಾಗಿ ಕಾಡಿಗೆ ಹೊರಟ.

ದುಷ್ಟುಬುದ್ಧಿಯ ಆಜ್ಞೆಯಂತೆ

ಮದನನು ಚಂದ್ರಹಾಸನಿಂದ ಪೂಜೆಯ ವಸ್ತುಗಳನ್ನು ತೆಗೆದುಕೊಂಡವನು ಕಾಳಿಕಾದೇವಿಯ ಗುಡಿಯತ್ತ ಹೊರಟ. ಕಗ್ಗತ್ತಲು. ಕಾಡಿನ ಮಧ್ಯೆ, ಮನುಷ್ಯರೇ ಇಲ್ಲದ ಸ್ಥಳದಲ್ಲಿ ಹೋಗಬೇಕು. ಸುತ್ತ ಭಯವಾಗುವಂತಹ ಶಬ್ದಗಳು. ಅವನ ಕೈಯಿಂದ ತಟ್ಟೆ ಜಾರಿ ಬಿದ್ದಿತು. ಮನಸ್ಸಿಗೆ ಏಕೋ ಭಯವಾಯಿತು, ಆತಂಕವಾಯಿತು. ಆದರೆ ಅವನು ಚಂದ್ರಹಾಸನಿಗೆ ಮಾತು ಕೊಟ್ಟಿದ್ದ, ಅವನ ಬದಲು ತಾನು ಕಾಳಿಕಾದೇವಿಯ ಗುಡಿಗೆ ಹೋಗಿ ಪೂಜೆ ಮಾಡುತ್ತೇನೆ ಎಂದು. ಮುಂದಕ್ಕೆ ನಡೆದ.

ಕಾಡಿನ ಒಂದೆಡೆಯಲ್ಲಿ ದೇವಾಯಲದ ಹತ್ತಿರ ಮರಗಳ ಹಿಂದೆ ದುಷ್ಟಬುದ್ಧಿಯು ನೇಮಿಸಿದ್ದ ಕಟುಕರು ಕಾದಿದ್ದರು. ಮದನ ಅತ್ತ ಬಂದ. ‘ನಮ್ಮ ಒಡೆಯರು ಹೇಳಿದ್ದ ಮನುಷ್ಯ ಇವನೇ’ ಎಂದುಕೊಂಡರು. ಅವನ ಹಿಂದೆ ಹೆಜ್ಜೆ ಹಾಕಿದರು. ಅವನು ದೇವಾಲಯವನ್ನು ಪ್ರವೇಶಿಸುತ್ತಲೇ ಅವನ ಮೇಲೆ ಬಿದ್ದರು, ತಮ್ಮ ಕತ್ತಿಗಳಿಂದ ಅವನ ತಲೆಯನ್ನು ಕತ್ತರಿಸಿದರು. ಮದನ ನೆಲಕ್ಕುರುಳಿದ. ಕೊಲೆಪಾತಕರು ಓಡಿಹೋದರು.

ಅಯ್ಯೋ ಕೆಟ್ಟೆ!

ತಾನು ರಾಜನಾದ ವಿಷಯ ಪ್ರಜೆಗಳಿಗೆ ತಿಳಿಯಲೆಂದು ಚಂದ್ರಹಾಸ ಚಂಪಕಮಾಲಿನಿಯೊಡನೆ ಆನೆಯ ಮೇಲೆ ಮೆರವಣಿಗೆ ಹೊರಟ. ಬಹು ವೈಭವದಿಂದ ಮೆರವಣಿಗೆ ಹೊರಟಿತು. ಮೆರವಣಿಗೆಯ ಮಂಗಳ ವಾದ್ಯಗಳ ಶಬ್ದವನ್ನು ಕೇಳಿ ಹೊರಕ್ಕೆ ಬಂದ ದುಷ್ಟಬುದ್ಧಿಯು ನೋಡುತ್ತಾನೆ – ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ರಾಜಕುಮಾರಿಯೊಡನೆ ಚಂದ್ರಹಾಸ!

ಅವನಿಗೆ ಅರ್ಥವಾಯಿತು – ಚಂದ್ರಹಾಸ ರಾಜನಾದ ಎಂದು. ಸಿಟ್ಟನ್ನೂ ದುಃಖವನ್ನೂ ತಡೆಯಾಗಲಿಲ್ಲ.

ಚಂದ್ರಹಾಸರು ಮಾವನನ್ನು ಕಂಡ. ಅಂಬಾರಿಯಿಂದ ಇಳಿದು ಬಂದು ನಮಸ್ಕರಿಸಿದ.

ದುಷ್ಟಬುದ್ಧಿ ಕೇಳಿದ: “ಏನಿದು ಚಂದ್ರಹಾಸ? ನಮ್ಮ ಮನೆಯ ಸಂಪ್ರದಾಯದಂತೆ ಕಾಳೀಗುಡಿಗೆ ಹೋಗಿ ಪೂಜೆ ಮಾಡಬೇಕು ಎಂದರೆ ಒಪ್ಪಿದ್ದೆಯಲ್ಲ, ಹೋಗಲಿಲ್ಲವಲ್ಲ? ಹೀಗೆ ಮಾಡಬಹುದೆ?”

ಚಂದ್ರಹಾಸನು, “ಪೂಜ್ಯರೇ, ನಾನು ಹೊರಡಬೇಕೆಂದು ಸಿದ್ಧನಾಗಿದ್ದೆ. ಆ ಹೊತ್ತಿಗೆ ಮದನಕುಮಾರನು ಬಂದು ರಾಜರು ಕರೆಕಳುಹಿಸಿದ್ದಾರೆ ಎಂದ. ತಾನೇ ನನ್ನ ಬದಲು ದೇವಾಲಯಕ್ಕೆ ಹೋಗುತ್ತೇನೆ ಎಂದು ಪೂಜೆಯ ವಸ್ತುಗಳನ್ನು ತೆಗೆದುಕೊಂಡ” ಎಂದು ಹೇಳಿದ.

ದುಷ್ಟಬುದ್ಧಿಯ ಜೀವವೇ ಹಾರಿ ಹೋದಂತಾಯ್ತು. ಚಂದ್ರಹಾಸನ ಉತ್ತರ ಪೂರ್ತಿಯಾಗುವವರೆಗೆ ಸಹ ನಿಲ್ಲಲಿಲ್ಲ. ಆ ರಾತ್ರಿಯಲ್ಲಿ ಕಾಳೀ ಗುಡಿಯ ಕಡೆಗೆ ಹುಚ್ಚನಂತೆ ಓಡಿಹೋದ. ನೋಡುತ್ತಾನೆ – ಮದನ ಕತ್ತರಿಸಿ ಬಿದ್ದಿದ್ದಾನೆ, ರಕ್ತದ ಮಡುವಿನಲ್ಲಿ ಅವನ ತಲೆ ತೇಲುತ್ತಿದೆ. ಪೂಜಾ ದ್ರವ್ಯಗಳು ಅಲ್ಲೆಲ್ಲಾ ಚೆಲ್ಲಾ-ಪಿಲ್ಲಿಯಾಗಿ ಬಿದ್ದಿವೆ.

ದುಷ್ಟಬುದ್ಧಿಗೆ ಎದೆಯೊಡೆಯಿತು. ‘ಅಯ್ಯೋ ಕೆಟ್ಟೆ’ ಎಂದು ನೆಲಕ್ಕುರುಳಿದ. ಬಿಕ್ಕಿ-ಬಿಕ್ಕಿ ಅತ್ತ. ಗುಡಿಯ ಕಲ್ಲು ಕಂಭಕ್ಕೆ ತಲೆ ಹೊಡೆದು ಅವನೂ ಸತ್ತ.

ಚಂದ್ರಹಾಸನ ಕರುಣೆ

ಬೆಳಗಾಯಿತು. ಊರಿನಲ್ಲಿ ಸುದ್ಧಿ ಹಬ್ಬಿತು. ಮಂತ್ರಿಯೂ ಅವನ ಮಗನು ದೇವಾಲಯದಲ್ಲಿ ಸತ್ತು ಬಿದ್ದಿದ್ದಾರೆ! ಚಂದ್ರಹಾಸನಿಗೆ ದಿಕ್ಕು ತೋಚದೆ ಹೋಯಿತು. ಕಾಳೀಗುಡಿಗೆ ಬಂದ. ಈ ಘೋರವನ್ನು ನೋಡಲು ಸಾವಿರಾರು ಜನ ಗುಂಪು ಸೇರಿಬಿಟ್ಟರು. ಪಾಪ, ವಿಷಯೆ ತಂದೆಯನ್ನೂ ಅಣ್ಣನನ್ನೂ ಏಕಕಾಲದಲ್ಲಿ ಕಳೆದುಕೊಂಡು ಗೋಳಾಡುತ್ತಿದ್ದಳು. ಚಂದ್ರಹಾಸನಿಗೆ ಆ ಪರಿಸ್ಥಿತಿಯಲ್ಲಿ ಏನು ಮಾಡುವುದಕ್ಕೂ ತೋಚಲಿಲ್ಲ. ಲೋಕಮಾತೆಯಾದ ಮಹಾಕಾಳಿಯನ್ನು ಒಂದೇ ಮನಸ್ಸಿನಿಂದ ಪ್ರಾರ್ಥನೆ ಮಾಡಿಕೊಂಡ. “ತಾಯೀ, ಇದೇನು ಅನ್ಯಾಯ? ಇವರನ್ನು ನೀನೇ ಕಾಪಾಡಬೇಕು. ಇಲ್ಲವಾದರೆ ಇಗೋ, ನನ್ನನ್ನೂ ಬಲಿ ತೆಗೆದುಕೊಂಡು ಬಿಡು” ಎಂದು ಸೊಂಟದಲ್ಲಿದ್ದ ಕತ್ತಿಯನ್ನು ಸೆಳೆದುಕೊಂಡ.

ಲೋಕಮಾತೆ ಚಂದ್ರಹಾಸನ ಮುಂದೆ ಪ್ರತ್ಯಕ್ಷಳಾಗಿ ನಿಂತಳು, ಅವನ ಕೈಯನ್ನು ಹಿಡಿದಳು. “ಮಗು ಇದೇನು ಕೆಲಸ ಮಾಡುತ್ತಿದ್ದಿ? ಈ ದುಷ್ಟಬುದ್ದಿಯು ನಿನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ. ತನ್ನ ದುರಾಲೋಚನೆಗೆ ತಕ್ಕ ಫಲವನ್ನು ಪಡೆದ, ಅಷ್ಟೇ. ಈಗ ನಿನಗೆ ಬೇಕಾದ ಅನುಗ್ರಹ ಮಾಡುತ್ತೇನೆ. ಇಷ್ಟಾರ್ಥವೇನು? ಕೋರಿಕೋ” ಎಂದಳು. ಚಂದ್ರಹಾಸ ಜಗನ್ಮಾತೆಗೆ ಕೈಮುಗಿದ. “ತಾಯಿ, ನನಗೇನೂ ಬೇಡ. ನನ್ನ ಮಾವನವರು ಮತ್ತು ಮದನಕುಮಾರ ಇಬ್ಬರೂ ಮತ್ತೆ ಬದುಕಬೇಕು” ಎಂದು ವಿನಯದಿಂದ ಕೇಳಿಕೊಂಡ. ತನಗೆ ಕೇಡು ಬಗೆದವನ ವಿಷಯದಲ್ಲಿ ಚಂದ್ರಹಾಸನು ತೋರಿಸದ ಕರುಣೆಯನ್ನು ಕಂಡು ಕಾಳಿಕಾದೇವಿಗೆ ಸಂತೋಷವಾಯಿತು. ಆ ಲೋಕಮಾತೆಯ ಅನುಗ್ರಹದಿಂದ ಸತ್ತಿದ್ದವರು ಮತ್ತೆ ಜೀವ ಪಡೆದರು.

ಶ್ರೀಕೃಷ್ಣನ ದರ್ಶನ

ದುಷ್ಟಬುದ್ಧಿಗೆ ಈಗ ಒಳ್ಳೆಯ ಬುದ್ಧಿ ಬಂದಿತು. ತಾನು ಮಾಡಿದ ಪಾಪ ಕೆಲಸಗಳಿಗೆ ಪಶ್ಚಾತ್ತಾಪವಾಯಿತು. ಮಗಳು ಅಳಿಯ ಇಬ್ಬರನ್ನೂ ಕ್ಷಮೆ ಬೇಡಿದ. ಎಲ್ಲರೂ ಸಂತೋಷದಿಂದ ಹಿಂದಿರುಗಿದರು.

ಚಂದ್ರಹಾಸ ಬಹು ವರ್ಷಗಳ ಕಾಲ ರಾಜನಾಗಿ ಆಳಿದ. ಧರ್ಮದಿಂದ ರಾಜ್ಯಭಾರ ಮಾಡಿದ. ಪ್ರಜೆಗಳ ಸುಖವೇ ತನ್ನ ಸುಖ ಎಂದು ನಡೆದುಕೊಂಡ. ಅವನಿಗೆ ಶ್ರೀಕೃಷ್ಣನಲ್ಲಿ ಬಹು ಭಕ್ತಿ.

ಚಂದ್ರಹಾಸನಿಗೆ ಇಬ್ಬರು ಮಕ್ಕಳು – ಮಕರಧ್ವಜ ಮತ್ತು ಕಮಲಾಕ್ಷ ಇವರು ವೀರರಾಗಿ ಬೆಳೆದರು.

ಪಾಂಡವರು ಶ್ರೀಕೃಷ್ಣನ ಭಕ್ತರು. ಅವರಲ್ಲಿ ಹಿರಿಯವನು ಧರ್ಮರಾಯ. ಈತನು ಅಶ್ವಮೇಧ ಯಾಗವನ್ನು ಮಾಡಲು ನಿಶ್ಚಯಿಸಿದ. ಈ ಯಾಗ ಮಾಡುವವರು ಒಂದು ಕುದುರೆಯನ್ನು ಪೂಜಿಸಿ, ಸ್ವತಂತ್ರವಾಗಿ ಬಿಡುತ್ತಾರೆ. ಅದು ಎಲ್ಲಿ ಬೇಕಾದರೂ ಹೋಗಬಹುದು. ಅದರೊಂದಿಗೆ ಯಾಗ ಮಾಡುವವನ ಸೈನ್ಯ ಹೋಗುತ್ತದೆ; ಯಾರಾದರೂ ಅದನ್ನು ಕಟ್ಟಿಹಾಕಿದರೆ ಯುದ್ಧ ಮಾಡಿ ಆ ಸೈನ್ಯ ಬಿಡಿಸಿಕೊಳ್ಳಬೇಕು. ಹೀಗೆ ಒಂದು ವರ್ಷ ಕುದುರೆಯನ್ನು ರಕ್ಷಿಸಿದರೆ ಮಾತ್ರ ಯಾಗ ಮಾಡಬಹುದು.

ಧರ್ಮರಾಯರು ಕುದುರೆಯನ್ನು ಕಳುಹಿಸಿದನು. ಅದರ ಕಾವಲಿಗೆ ಶ್ರೀಕೃಷ್ಣನೂ ಧರ್ಮರಾಯನ ತಮ್ಮನಾದ ವೀರ ಅರ್ಜುನನೂ ಹೊರಟರು.

ಕುದುರೆ ಕುಂತಳ ನಗರಕ್ಕೆ ಬಂತು. ಮಕರಧ್ವಜ ಮತ್ತು ಕಮಲಾಕ್ಷರು ಅದನ್ನು ಕಟ್ಟಿ ಹಾಕಿದರು. ತಂದೆಗೆ ಸುದ್ದಿಯನ್ನು ತಿಳಿಸಿದರು, “ಕುದುರೆಯನ್ನು ಬಿಡಿಸಿಕೊಳ್ಳುವವರ ಪರಾಕ್ರಮವನ್ನು ಯುದ್ಧದಲ್ಲಿ ನೋಡುತ್ತೇವೆ” ಎಂದರು.

ಚಂದ್ರಹಾಸನು, “ಮಕ್ಕಳೇ, ನಾನು ಬಾಲ್ಯದಿಂದ ಪೂಜಿಸಿದ ಶ್ರೀಕೃಷ್ಣನ ದರ್ಶನದ ಭಾಗ್ಯವೇ ಸಾಕು. .ಧರ್ಮರಾಯನು ಧರ್ಮಾತ್ಮ, ಅವನ ಕುದುರೆಯನ್ನು ನಾವೇಕೆ ತಡೆಯಬೇಕು? ಆಗಲೇ ವರ್ಷ ಮುಗಿಯುತ್ತಿದೆ. ನೀವೇ ಕುದುರೆಗಳನ್ನು ರಕ್ಷಿಸಿ ಒಪ್ಪಿಸಿ” ಎಂದು ಅವರನ್ನು ಕಳುಹಿಸಿಕೊಟ್ಟನು. ಅರ್ಜುನನೊಡನೆಯೂ, ಸೈನ್ಯದೊಡನೆಯೂ ಶ್ರೀಕೃಷ್ಣನು ಬಂದನು. ಚಂದ್ರಹಾಸನನ್ನು ಕಂಡು ಶಂಖಚಕ್ರಗದಾಪದ್ಮ ಸಹಿತವಾಗಿ ರೂಪ ಧರಿಸಿ ಕಾಣಿಸಿಕೊಂಡನು. ಚಂದ್ರಹಾಸನು ಭಕ್ತಿಯಿಂದ ಅವನ ಪಾದಗಳಿಗೆ ನಮಸ್ಕರಿಸಿದನು. ಶ್ರೀಕೃಷ್ಣನು ಅರ್ಜುನನಿಗೆ, “ಅರ್ಜುನ, ನೋಡು, ಈತನು ಪರಮ ಭಕ್ತ, ಅತಿ ನಿರ್ಮಲ ಮನಸ್ಸಿನಿಂದ ನನ್ನ ಪೂಜೆ ಮಾಡುವವನು” ಎಂದು ಹೇಳಿದ. ಚಂದ್ರಹಾಸನೂ ಅರ್ಜುನನೂ ಗೆಳೆಯರಾದರು.

ಚಂದ್ರಹಾಸನು ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.

 ಚಂದ್ರಹಾಸನು ಮಕರಧ್ವಜನನ್ನು ಕರೆದು, “ನನಗೆ ವಯಸ್ಸಾಯಿತು. ಧರ್ಮರಾಯನ ಯಾಗಕ್ಕೆ ಹೋಗುತ್ತೇನೆ. ಅನಂತರ ಹಿಂದಕ್ಕೆ ಬರುವುದಿಲ್ಲ. ತಪಸ್ಸಿಗೆ ಹೋಗುತ್ತೇನೆ. ನೀನು ರಾಜ್ಯವನ್ನು ವಹಿಸಿಕೊ” ಎಂದು ಹೇಳಿ ಆಶೀರ್ವಾದ ಮಾಡಿ ರಾಜ್ಯವನ್ನು ಕೊಟ್ಟು ಶ್ರೀಕೃಷ್ಣ ಅರ್ಜುನರೊಡನೆ ಹೊರಟುಹೋದನು.