ವಿಲಸತ್ಪ್ರಭಾಳಿಶಶಿಮಂ
ಡಲಮಾ ಕುಮುದಾವಭಾಸಿಯೆನೆ ತಿಳಿಗೊಳದೊಳ್
ನೆಲಸುವ ತೆಱದಿಂ ಗರ್ಭಂ
ನೆಲಸಿದುದು ವಿಳಾಸವತಿಗೆ ಪುಣದರದೊಳ್          ೭೫

ಅಂತು ಕೆಲದಿವಸದೊಳ್ ನಿಜ
ಕಾಂತಪ್ರತಿಬಿಂಬಮಂ ವಿಳಾಸದೆ ತಳೆದಳ್
ಕಾಂತೆ ಮಣಿದರ್ಪಣಶ್ರೀ
ಯಂತಿರೆ ಸಂಕ್ರಾಂತಮಪ್ಪ ಗರ್ಭದ ನೆವದೊಳ್         ೭೬

ಇನಿಸಿನಿಸಾ ಗರ್ಭಂ ಪ್ರತಿ
ದಿನಮೊಯ್ಯನೆ ಬಳೆಯೆ ನಯದೆ ಪುಟವೇಱ ನಿತಂ
ಬಿನಿ ಕಾರೊಳೆಸೆವ ಕಾದಂ
ಬಿನಿಯಂದದೆ ಮಂದಮಂದಗಮನದೆ ನಡೆದಳ್         ೭೭

ಅಲಸಿಕೆ ಮೆಯ್ಗಾದುದು ಕ
ಣ್ಮಲರ್ ಮರಲ್ದೆಸೆದುವೊದವಿತಾಗುಳಿಕೆ ಶತಂ
ಪಲವುಂ ವಸ್ತುಗಳೊಳ್ ತನ
ಗೊಲವರಮಾಯ್ತೆಯ್ದೆ ಕಾಂತೆಗಂದೆಳೆವಸಿಳ್             ೭೮

ಮೞೆಗಾಲದಂತೆ ಕಪ್ಪಂ
ತಳೆದು ಪಯೋಧರಮುಖಂಗಳೆಸೆಯುತ್ತಿರಲಾ
ಲಲನೆ ನವಗರ್ಭಪಾಂಡುರ
ವಿಳಾಸದಿಂ ಕೇತಕೀವಿಳಾಸಮನಾಂತಳ್              ೭೯

ವ|| ಅಂತಚ್ಚರಿವಟ್ಟಿಂಗಿತಕುಶಲೆಯರಪ್ಪ ಪರಿಜನಂಗಳಱಯುತ್ತಿರ್ದಲ್ಲಿ

ವನಿತಾರತ್ನದ ಗರ್ಭಚಿಹ್ನಚಯಮಂ ನಿರ್ವ್ಯಾಕುಳಂ ಕಂಡು ಮ
ತ್ತೆನಗಿಂ ಮಾಣ್ದಿರಲೇಂ ಪ್ರಶಸ್ತಮೆನಿಸಿರ್ದೀ ರಾತ್ರಿಯೊಳ್ ಪೋಗಿ ಭೂ
ವನಿತೇಶಂಗಿದನೆಯ್ದೆ ಬಿನ್ನವಿಪೆನೆಂದಾನಂದದಿಂ ವಂಶವ
ರ್ಧನೆಯೆಂಬಾಕೆ ಮಹಾಮಹತ್ತರ ನರೇಂದ್ರಾಸ್ಥಾನಮಂ ಪೊರ್ದಿದಳ್      ೮೦

ಪರಂಪರೆಯನ್ನು ಅನುಭವಿಸಿದಳು. ಕೆಲವು ದಿವಸಗಳಲ್ಲಿ ೭೫. ಕುಮುದಾವಭಾಸಿಯಾದ (ಕನ್ನೆ ದಿಲೆಗಳನ್ನು ಅರಳಿಸುವ) ಮತ್ತು ಕಾಂತಿಯಿಂದ ಪ್ರಕಾಶಿಸುವ ಚಂದ್ರಮಂಡಲವು ತಿಳಿಗೊಳದಲ್ಲಿ ಪ್ರತಿಬಿಂಬರೂಪವಾಗಿ ನೆಲೆಸುವಂತೆ ಕುಮುದಾವಭಾಸಿಯಾದ (ಪ್ರಪಂಚಕ್ಕೆ ಸಂತೋಷವನ್ನುಂಟುಮಾಡುವ) ಮತ್ತು ಕಾಂತಿಯಿಂದ ಪ್ರಕಾಶಿಸುವ ಗರ್ಭವು ವಿಲಾಸವತಿಯ ಪುಣ್ಯಕರವಾದ ಉದರದಲ್ಲಿ ನೆಲಸಿತು. ೭೬. ಹೀಗೆ ಕೆಲವು ದಿನಗಳಲ್ಲಿ ವಿಲಾಸವತಿದೇವಿಯು ಹೊಳಪಿನಿಂದ ಕೂಡಿದ ಕನ್ನಡಿಯಂತೆ ಗರ್ಭದ ನೆಪದಿಂದ ತನ್ನಲ್ಲಿ ಪ್ರತಿಫಲಿಸಿರುವ ಗಂಡನ ಪ್ರತಿಬಿಂಬವನ್ನು ಲೀಲೆಯಿಂದ ತಾಳಿದಳು (ಗರ್ಭವತಿಯಾದಳು) ಟಿ. “ಆತ್ಮಾವೈಪುತ್ರನಾಮಾಸಿ (ತಾನೇ ಮಗನಾಗಿ ಹುಟ್ಟುತ್ತಾನೆ) ಎಂಬ ಶಾಸ್ತ್ರವು ಪತಿಯು ವೀರ್ಯರೂಪದಿಂದ ಪತ್ನಿಯ ಗರ್ಭವನ್ನು ಪ್ರವೇಶಿಸುತ್ತಾನೆ. ಇದೇ ಗರ್ಭಧಾರಣೆ. ಈ ವೇದಾರ್ಥವು ಇಲ್ಲಿ ವರ್ಣಿಸಲ್ಪಟ್ಟಿದೆ. ೭೭. ಹೀಗೆ ಆ ಗರ್ಭವು ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸ್ಪಷ್ಟವಾಗಿ ಬೆಳೆಯುತ್ತಿರಲಾಗಿ, ಕ್ರಮವರಿತು ದಪ್ಪವಾಗುತ್ತಿರುವ ಆ ರಾಣಿಯು ಮಳೆಗಾಲದಲ್ಲಿ ಶೋಭಿಸುವ ಮೋಡದಂತೆ ಮಂದಗಮನದಿಂದ ನಡೆಯತೊಡಗಿದಳು.

೭೮. ಈ ಎಳೆಬಸುರಿತನದಲ್ಲಿ ಅವಳಿಗೆ ಮೈಯಲ್ಲಿ ಸೋಮಾರಿತನವುಂಟಾಯಿತು. ಹೂವಿನಂತಿರುವ ಕಣ್ಣು ನಿದ್ರಾವೇಶದಿಂದ ವಕ್ರತೆಯನ್ನು ಪಡೆಯಿತು. ಬಹಳವಾಗಿ ಆಕಳಿಕೆಯುಂಟಾಯಿತು. ಕೆಲಕೆಲವು ಪದಾರ್ಥಗಳಲ್ಲಿ ಬಯಕೆಯುಂಟಾಯಿತು. ೭೯. ಅವಳ ಪಯೋಧರ ಮುಖವು (ಸ್ತನಾಗ್ರವು) ಮಳೆಗಾಲದಲ್ಲಿ ಪಯೋಧರಮುಖವು (ಮೋಡವು) ಕಪ್ಪಾಗುವಂತೆ ಕಪ್ಪುಬಣ್ಣಕ್ಕೆ ತಿರುಗಿ ಶೋಭಿಸುತ್ತಿರಲು, ಆ ರಮಣಿಯು ಹೊಸದಾದ ಬಸುರಿನಿಂದ ಉಂಟಾದ ಬಿಳಿಯ ಕಾಂತಿಯಿಂದ ಕೇದಗಿಹೂವಿನ ಸೊಬಗನ್ನು ಪಡೆದಳು. ವ|| ಇದನ್ನು ನೋಡಿ ಆಶ್ಚರ್ಯಪಟ್ಟು ಇಂಗಿತವನ್ನು ಅರಿಯುವುದರಲ್ಲಿ ಕುಶಲರಾದ ಪರಿಜನರು ಗರ್ಭಿಣಿಯಾಗಿರುವಳೆಂದು ತಿಳಿದುಕೊಂಡರು. ಆಗ ೮೦. ವಂಶವರ್ಧನೆ ಎಂಬ ಪ್ರಧಾನ ಪರಿಚಾರಕಳು ರಾಣಿಯ ನಾನಾ ಬಗೆಯಾದ ಗರ್ಭಚಿಹ್ನೆಗಳನ್ನು ಸಂಶಯಕ್ಕೆ ಎಡೆಯಿಲ್ಲದಂತೆ

ಉರಗಾಶಫಣಾಮಣಿಪ್ರಕರದಿಂ ತಳ್ತಿರ್ದ ಲಕ್ಷಿ ಮನೋ
ಹರನೋ ತಾರಕಸಂಕುಳಂ ಬಳಸಿರಲ್ ಚೆಲ್ವಾದ ರಾತ್ರೀಮನೋ
ಹರನೋ ಪೇೞಮೆನಲ್ ಪ್ರದೀಪನಿವಹಂಗಳ್ ಸುತ್ತಲುಂ ಕೂಡಿ ತ
ಳ್ತಿರಲಾಸ್ಥಾನದೊಳಿರ್ದನಂದೆಸೆದು ತಾರಾಪೀಡಚಕ್ರೇಶ್ವರಂ             ೮೧

ವ|| ಅಂತಿರ್ದವನಿಪತಿಯಂ ಕಂಡು ಪೊಱವಟ್ಟು ವಂಶವರ್ಧನೆ ಕುಳ್ಳಿರ್ದು

ಅವಸರವಂ ಪಡೆದು ವಿಳಾ
ಸವತಿಯೊಳಾದೊಂದು ಗರ್ಭವೃತ್ತಾಂತಮನಾ
ಭುವನಾಶಂಗಿನಿಸಂ
ಕಿವಿಯತ್ತಲ್ ಸಾರ್ದು ಮೆಲ್ಲನಱಪಿದಳಾಗಳ್ ೮೨

ಅಗೆವೋದಂತಿರ್ಪಪೂರ್ವಶ್ರುತ  ವಚನಸುಧಾಸಾರದಿಂ ಕಂಟಕಂಗಳ್
ನೆಗೆಲ್ ವಕ್ತ್ರಾಂಬುಜಾತಸ್ಮಿತಮೆಸೆಯೆ ಮನೋಜಾತಸಂತೋಷಮೆತ್ತಂ
ಮೊಗದೊಳ್ ತೋರ್ಪಂತೆ ದಂತಪ್ರಭೆ ಪಸರಿಸಲಾನಂದಬಾಷ್ಪಾಂಬುಗಳ್ ಕ
ಯ್ಮಿಗಲಾ ಲೋಲಾಯತಾಕ್ಷಂ ಸಚಿವನ ಮೊಗಮಂ ನೋಡಿದಂ ಭೂಮಿಪಾಲಂ   ೮೩

 

ವ|| ಅಂತು ನೋೞ್ಪುದುಂ ಶುಕನಾಸಮಂತ್ರಿ ಪೊರ್ದಿ ನರೇಂದ್ರಂಗಿಂತೆಂದಂ

ಮನದನುರಾಗದಿಂದಮಲರ್ದೊಪ್ಪುವ ಕಣ್ಮಲರಾಂತ ವಂಶವ
ರ್ಧನೆಯ ವಚೋಮೃತಶ್ರವಣಕೌತುಕದಿಂದಮೆ ನಿನ್ನ ಲೋಲಲೋ
ಚಿನಮಿವು ನೀಳ್ದು ಕಣ್ಗೊಳಿಸಿ ತೋರ್ಪಸಿತೋತ್ಪಳಕರ್ಣಪೂರಮಂ
ನೆನೆಯಿಸಿದಪ್ಪುವಾ ಕನಸಿನೊಳ್ ಕಿಱದುಂ ದಿಟಮಾಯ್ತೆ ಭೂಪತೀ         ೮೪

ಪವಣಿಲ್ಲದದೊಂದೌತ್ಸು
ಕ್ಯವನೊಳಕೊಂಡೆನ್ನ ಮನಮುಪಾರೂಢ ಮಹೋ
ತ್ಸವಮಂ ಕೇಳಲ್ಪದೆದಪು
ದವನೀಶ ನಿವೇದಿಸೆನಗಿದಂ ಬಿಡದೀಗಳ್                                   ೮೫

ಖಚಿತಪಡಿಸಿಕೊಂಡು, ಇನ್ನು ಮಹಾರಾಜನಿಗೆ ತಿಳಿಸದಿರುವುದು ಸರಿಯಲ್ಲವೆಂದು ಭಾವಿಸಿ ಈ ದಿನ ರಾತ್ರಿಯೇ ಹೋಗಿ ಮಹಾರಾಜನಿಗೆ ವಿಷಯವನ್ನು ತಿಳಿಸಬೇಕೆಂದು ತೀರ್ಮಾನಿಸಿ ಬಹಳ ಸಂತೋಷದಿಂದ ರಾಜನ ಒಡ್ಡೋಲಗಕ್ಕೆ ಬಂದಳು. ೮೧. ಆದಿಶೇಷನ ಸಾವಿರ ಹೆಡೆಗಳಲ್ಲಿರುವ ರತ್ನಸಮೂಹದಿಂದ ಸುತ್ತುವರಿಯಲ್ಪಟ್ಟಿರುವ ಶ್ರೀಮನ್ನಾರಾಯಣನೋ ನಕ್ಷತ್ರಗಳ ಪುಂಜದಿಂದ ಸುತ್ತುಗಟ್ಟಲ್ಪಟ್ಟಿರುವ ಸುಂದರನಾದ ಚಂದ್ರನೋ ಎಂಬಂತೆ ಸುತ್ತಲೂ ದೀಪಗಳ ಗುಂಪಿನಿಂದ ಕೂಡಿರುವ ತಾರಾಪೀಡಚಕ್ರವರ್ತಿಯು ಅಂದು ಒಡ್ಡೋಲಗದಲ್ಲಿ ಶೋಭಿಸುತ್ತಿದ್ದನು. ವ|| ಹಾಗೆ ಇದ್ದ ರಾಜನನ್ನು ನೋಡಿ ನಮಸ್ಕರಿಸಿ ವಂಶವರ್ಧನೆಯು ಕುಳಿತುಕೊಂಡು, ೮೨. ಅವಕಾಶವನ್ನು ಪಡೆದುಕೊಂಡು ರಾಜನ ಕಿವಿಯ ಹತ್ತಿರ ಬಂದು ವಿಲಾಸವತಿಯು ಗರ್ಭಿಣಿಯಾಗಿರುವ ವೃತ್ತಾಂತವನ್ನು ಮೆಲ್ಲನೆ ತಿಳಿಸಿದಳು.

೮೩. ಹೀಗೆ ಅಪೂರ್ವವಾಗಿ ಕೇಳಿದ ಮಾತೆಂಬ ಅಮೃತದ ಧಾರೆಗಳಿಂದ ಮೊಳಕೆ ಹೊರಟಂತಿರುವ ರೋಮಾಂಚಗಳು ಮೇಲಕ್ಕೆ ಏಳಲಾಗಿ, ಮುಖಕಮಲದಲ್ಲಿ ಮಂದಹಾಸವು ಶೋಭಿಸಲು, ಮನಸ್ಸಿನಲ್ಲಿ ಉದಯಿಸಿದ ಸಂತೋಷವು ಬಾಯಿಯಿಂದ ಹೊರಹೊಮ್ಮುವಂತೆ ಹಲ್ಲುಗಳ ಕಾಂತಿಗಳು ಹರಡುತ್ತಿರಲಾಗಿ, ಕಣ್ಣಿನಲ್ಲಿ ಆನಂದಬಾಷ್ಪವು ಅಕವಾಗಿ ಹೊರಡುತ್ತಿರಲು ಚಂಚಲವೂ ವಿಶಾಲವೂ ಆದ ಕಣ್ಣುಗಳುಳ್ಳ ಅರಸನು ಮಂತ್ರಿಯ ಮುಖವನ್ನು ನೋಡಿದನು. ವ|| ಹಾಗೆ ನೋಡಲಾಗಿ ಶುಕನಾಸಮಂತ್ರಿಯು ರಾಜನಿಗೆ ಹೀಗೆ ಹೇಳಿದನು. ೮೪. ಮಹಾರಾಜನೆ, ವಂಶವರ್ಧನೆಯು ತನ್ನ ಮನಸ್ಸಿನಲ್ಲಿ ಉಕ್ಕುತ್ತಿರುವ ಹರ್ಷದಿಂದ ಅರಳಿರುವ ನೇತ್ರಕಮಲವುಳ್ಳವಳಾಗಿ ಹೇಳಿದ್ದಾಳೆ. ಅವಳ ಅಮೃತಕ್ಕೆ ಸಮಾನವಾದ ಮಾತನ್ನು ಆಲಿಸಬೇಕೆಂಬ ಕುತೂಹಲದಿಂದಲೋ ಎಂಬಂತೆ ನಿಮ್ಮ ಚಂಚಲವಾದ ಕಣ್ಣು ಅಗಲವಾಗಿ ಕಿವಿಯವರೆಗೂ ಹರಡಿಕೊಂಡು ಕಿವಿಗೆ ಆಭರಣವಾದ ಕನ್ನೆ ದಿಲೆಯನ್ನು ಜ್ಞಾಪಿಸುತ್ತಿವೆ, ಕನಸಿನಲ್ಲಿ ಏನಾದರೂ ಕೊಂಚ ನಿಜಾಂಶವಿದೆಯೇ? ೮೫. ಅಳತೆ ಮೀರಿದ ಕುತೂಹಲವನ್ನು ತಳೆದಿರುವ ನನ್ನ ಮನಸ್ಸು ಈಗ ಒದಗಿರುವ ಮಹೋತ್ಸವದ ವಿಷಯವನ್ನು ತಿಳಿದುಕೊಳ್ಳಬೇಕೆಂದು ಕುತೂಹಲಗೊಂಡಿದೆ ಪ್ರಭುವೆ! ನನಗೆ ಇದನ್ನು ತಿಳಿಸೋಣವಾಗಲಿ.

 

ವ|| ಅಂತು ಶುಕನಾಸಂ ಬೆಸಗೊಳ್ವುದುಂ ದರಹಸಿತವದನಾರವಿಂದನಾಗಿ ನರೇಂದ್ರ ನಿಂತೆಂದಂ

ಇವಳೀಗಳ್ ಪೇೞ್ದ ಮಾತಾ ಕನಸನವಿತಥಂ ಮಾೞ್ಪ ಮಾತಪ್ಪುವಾಗಿ
ರ್ದುವವಂ ವಿಶ್ವಾಸಿಸಲ್ ಬಂದಪುದೆ ಪಿರಿದುಮಂತಪ್ಪುದಂ ಕೇಳ್ವ ಭಾಗ್ಯಂ
ನವಗೆಂತೀ ಮಾತ ಸಂಭಾವಿತದವೊಲೆನಗಾದಪ್ಪುದಂತಿಲ್ಲ ಸಂದೇ
ಹವಿದೇಕೇೞು ಪೋಗಿ ನಾವಲ್ಲಿಯೆ ದಿಟಮದು ತಾನೆಂಬುದಂ ನೋೞ್ಪಮಲ್ತೇ         ೮೬

ವ|| ಎಂದು ನರೇಂದ್ರಂ ರಾಜಲೋಕಮಂ ವಿಸರ್ಜಿಸಿ ತನ್ನ ವಂಶವರ್ಧನೆಗಂಗಚಿತ್ತ ಮನಿತ್ತು ಶುಕನಾಸಂ ಬೆರಸಾಸ್ಥಾನಮಂಟಪದಿಂ ಪೊಱಮಡುವಾಗಳ್

ಚಲಿಯಿಸಿದಪುದಸಿತೋತ್ಪಲ
ದಳವೆಲರಲೆಪಂಗಳಿಂದೆಂಬಿನೆಗಂ ಕೆ
ತ್ತಲೊಡರ್ಚಿದತ್ತು ಬಲಗ
ಣ್ಮಲರಾ ಭೂಪತಿಗೆ ಪಿರಿದುಮುತ್ಸವಮಾಗಲ್                      ೮೭

ಕರದೀಪಿಕಾನಿಕಾಯಂ
ತರದಿಂದಂ ಮುಂದೆ ತೊಲಗಿಸುತ್ತಿರೆ ಕಕ್ಷಾಂ
ತರತಿಮಿರಮಂ ಧರಾ
ಶ್ವರನೊಯ್ಯನೆ ಪೋಗಿ ಪೊಕ್ಕನಂತಪುರಮಂ                   ೮೮

ವ|| ಅಂತು ತತ್ಸಮಯ ಸೇವಾಸಮುಚಿತ ವಿರಳಪರಿಜನಾನುಗಮ್ಯಮಾನಂ ಶುಕನಾಸಂ ಬೆರಸೊಳಗಂ ಪೊಕ್ಕು ಸುಕೃತರಕ್ಷಾ ಸಂವಿಧಾನಮುಂ ನವಸುಧಾನುಲೇಪನಕಲಿತಮುಂ ಪ್ರಜ್ವಲಿತಮಂಗಳಪ್ರದೀಪಮುಂ ಪೂರ್ಣಕಲಶಾಷ್ಠಿತ ದ್ವಾರಪಕ್ಷಮುಂ ಪ್ರತ್ಯಗ್ರಲಿಖಿತ ಮಂಗಳಾಲೇಖ್ಯೋಜ್ಜಳಭಿತ್ತಿಭಾಗಮುಂ ಉಪರಚಿತ ವಿತತಸಿತವಿತಾನ ಪರ್ಯಂತಸಕ್ತ ಮುಕ್ತಾಗುಣಮುಂ ಮಣಿಪ್ರದೀಪಾವಭಾಸಮುಮೆನಿಸಿದ ನಿವಾಸಭವನದೊಳ್

ಸತತಾಸನ್ನಸ್ಥನಿದ್ರಾ ಕಲಶವಿಲ್ವಸಿತಂ ಭೂತಿಸಿದ್ಧಾರ್ಥರಕ್ಷಾಂ
ಕಿತಮಾಕೀರ್ಣಪ್ರವಾಳಾವಳಿ ಲಲಿತಮಯಪಿಪ್ಪಲೀಪತ್ರಮಾಲಾಂ
ಚಿತಮುದ್ಯತ್ಪಾದಪೀಠಾನ್ವಿತಮತಿಧವಳ ಪ್ರಚ್ಛದಾಚ್ಛಾದಿತಂ ವಿ
ಸ್ತೃತಮಾದುತ್ತುಂಗಗರ್ಭೋಚಿತಶಯನದೊಳಾ ಕಾಂತೆ ಕಣ್ಗೆಡ್ಡಮಾದಳ್             ೮೯

ವ|| ಹೀಗೆ ಶುಕನಾಸನು ಕೇಳಿಕೊಳ್ಳಲಾಗಿ ಮಹಾರಾಜನು ಮಂದಹಾಸದಿಂದ ರಂಜಿಸುವ ಮುಖಕಮಲವುಳ್ಳವನಾಗಿ ಹೀಗೆ ಹೇಳಿದನು. ೮೬. ಇವಳು ಈಗ ಹೇಳಿದ ಮಾತು ಆ ಕನಸನ್ನು ಸತ್ಯವನ್ನಾಗಿ ಮಾಡುವ ಮಾತಾಗಿದೆಯೆ? ಅದನ್ನು ದೃಢವಾಗಿ ನಂಬಲು ಬರುತ್ತದೆಯೆ? ಇದನ್ನು ಕೇಳುವ ಭಾಗ್ಯವು ನಮಗೆ ಇದೆಯೆ? ಇದು ನನಗೆ ನಡೆಯತಕ್ಕದ್ದಲ್ಲವೆನಿಸುತ್ತಿದೆ. ಇಲ್ಲದಿದ್ದರೆ ಈ ಸಂಶಯವೇಕೆ? ಏಳಿ, ನಾವು ಅಲ್ಲಿಗೇ ಹೋಗಿ ಇದು ನಿಜವೆ? ಎಂಬುದನ್ನು ನೋಡಿಕೊಂಡು ಬರೋಣ. ವ|| ಹೀಗೆ ಹೇಳಿ ಮಹಾರಾಜನು ಸಾಮಂತರಾಜರ ಸಮೂಹವನ್ನು ಬೀಳ್ಕೊಟ್ಟು ವಂಶವರ್ಧನೆಗೆ ಉಡುಗೊರೆಯನ್ನು ಕೊಟ್ಟು ಶುಕನಾಸನೊಂದಿಗೆ ಒಡ್ಡೋಲಗ ಶಾಲೆಯಿಂದ ಹೊರಡುತ್ತಿರುವಾಗ ೮೭. ಕನ್ನೆ ದಿಲೆಯ ಎಸಳು ಗಾಳಿ ಬೀಸುವುದರಿಂದ ಅಲುಗಾಡುತ್ತಿದೆಯೋ ಎಂಬಂತೆ ದೊರೆಯ ಅರಳಿರುವ ಹೂವಿನಂತಿರುವ ಬಲಗಣ್ಣು ದೊರೆಗೆ ಆನಂದವಾಗುವಂತೆ ಅದುರತೊಡಗಿತು. ೮೮. ಅರಮನೆಯ ಸೇವಕರು ಹಿಡಿದಿರುವ ಕೈದೀವಿಗೆಗಳು ಮಹಲುಗಳ ಕತ್ತಲೆಯನ್ನು ಪರಿಹರಿಸುತ್ತಿರಲಾಗಿ ಮಹಾರಾಜನು ಮೆಲ್ಲಮೆಲ್ಲನೆ ರಾಣಿವಾಸದೊಳಕ್ಕೆ ಹೋದನು. ವ|| ಹಾಗೆ ಆ ಕಾಲದ ಊಳಿಗಕ್ಕೆ ತಕ್ಕಷ್ಟು ಸೇವಕರುಗಳಿಂದ ಹಿಂಬಾಲಿಸಲ್ಪಟ್ಟವನಾಗಿ ಶುಕನಾಸದೊಂದಿಗೆ ಒಳಕ್ಕೆ ಹೋಗಿ ಸುವ್ಯವಸ್ಥಿತವಾದ ಮಣಿ, ಮಂತ್ರ, ಔಷಧ ಮೊದಲಾದುವುಗಳಿಂದ ಮಾಡಲ್ಪಟ್ಟ ರಕ್ಷೆಯುಳ್ಳ, ಹೊಸದಾಗಿ ಸುಣ್ಣವನ್ನು ಬಳಿದಿರುವ, ಉರಿಯುತ್ತಿರುವ ಮಂಗಳದೀಪಗಳುಳ್ಳ, ಬಾಗಿಲಿನಲ್ಲಿ ಪೂರ್ಣಕುಂಭವನ್ನಿಟ್ಟಿರುವ, ಹೊಸದಾಗಿ ಬರೆದಿರುವ ಮಂಗಳಕರವಾದ ಚಿತ್ರಗಳಿಂದ ಶೋಭಿಸುತ್ತಿರುವ ಗೋಡೆಗಳುಳ್ಳ, ಕಟ್ಟಿರುವ ಅಗಲವಾದ ಮತ್ತು ಶುಭ್ರವಾದ ಮೇಲ್ಕಟ್ಟಿನಲ್ಲಿ ತೂಗಾಡುತ್ತಿರುವ ಮುತ್ತಿನ ಸರವುಳ್ಳ ರತ್ನದೀಪಗಳಿಂದ ಬೆಳಗುತ್ತಿರುವ ವಾಸದ ಮನೆಯಲ್ಲಿ ೮೯. ಯಾವಾಗಲೂ ತಲೆಯ ಹತ್ತಿರದಲ್ಲೇ ಇಟ್ಟಿರುವ ಪೂರ್ಣಕುಂಭದಿಂದ ವಿರಾಜಮಾನವಾದ, ವಿಭೂತಿ ಮತ್ತು ಬಿಳಿಯ ಸಾಸಿವೆಗಳ ರಕ್ಷೆಯಿಂದ ಕೂಡಿಕೊಂಡಿರುವ, ಅಲ್ಲಲ್ಲಿ ಹರಡಿರುವ ಚಿಗುರುಗಳಿಂದ ಸುಂದರವಾದ, ಕಬ್ಬಿಣದ ತುಂಡು ಮತ್ತು ಅರಳಿ ಎಲೆಗಳಿಂದ ಕಟ್ಟಿರುವ ಮೂಲಿಕೆಯಿಂದ ಶೋಭಿಸುತ್ತಿರುವ, ಇರಿಸಿರುವ ಪಾದಪೀಠದಿಂದ

ಕ್ಷಿತಿಧರಗರ್ಭಿತಾವನಿ ಮೃಗಾಪಗರ್ಭಿತ ಮೇರುಮೇಖಳಾ
ಕೃತಿ ಸುರದಂತಿಗರ್ಭಿತಸುರಾಪಗೆ ಪೂರ್ವನಗೋತ್ಥಭಾನುಗ
ರ್ಭಿತ ದಿನಲಕ್ಷಿ  ಪದ್ಮಭವಗರ್ಭಿತ ಪದ್ಮಿನಿ ಚಂದ್ರಬಿಂಬಗ
ರ್ಭಿತ ವರರ್ವಾವೀಚಿಯೆನೆ ಕಣ್ಗೆಸೆದಳ್ ಲಲಿತಾಂಗಿ ಗರ್ಭದಿಂ             ೯೦

ವ|| ಅಂತಿರ್ದಳಂ ಕಂಡು ನಿವಾಸಭವನಮಂ ಪುಗುತರ್ಪಾಗಳ್

ಪರಿಜನವೆೞ್ಪು ಕೆಯ್ಗುಡೆ ನಿತಂಬನಿ ಮೆಲ್ಲನೆ ವಾಮಜಾನುವಂ
ಕರತಳದಿಂದಮೂಱ ವಿಚಳನ್ಮಣಿಭೂಷಣಮಂಜುಳಸ್ವನಂ
ಪರೆಯೆ ತರಂಗಿತಾಂಗಮೆಸೆಯಲ್ಕತಿಸಂಭ್ರಮದಿಂದಮೇೞೆ ಬೇ
ಡಿರಿಮಿರಿಮೆಂದು ಕುಳ್ಳಿರಿಸಿದಂ ಪ್ರಿಯೆಯಂ ವಸುಧಾನಾಯಕಂ                ೯೧

ಒಲವಿಂದರಸಂ ಕಾಂತೆಯ
ಕೆಲದೊಳ್ ಕುಳ್ಳಿರೆ ಸಮೀಪದೊಳ್ ಹೇಮಮಯೋ
ಜ್ವಲಪಾದಮಂಡಿತಾಸನ
ದೊಳಲ್ಲಿ ಶುಕನಾಸಮಂತ್ರಿಯುಂ ಕುಳ್ಳಿರ್ದಂ ೯೨

ವ|| ಅನಂತರಮುಪಾರೂಢಗರ್ಭೆಯಪ್ಪ ನಿಜವಲ್ಲಭೆಯಂ ನೋಡಿ ಹರ್ಷನಿರ್ಭರ ಮಾನಸನರಸಂ ಪ್ರಸ್ತುತಪರಿಹಾರಸವಚನದಿನಿಂತೆಂದಂ

ಮನದೊಂದುತ್ಸವದಿಂದೆ ಪೇೞ್ದಳೆಮಗಿಂದೇನಾನುಮಂ ವಂಶದ
ರ್ಧನೆ ಬಂದಂತುಟದಪ್ಪುದಲ್ತೆ ದಿಟವೆಂದಾನಂದದಿಂ ದೇವಿ ನಿ
ನ್ನನಮಾತ್ಯಂ ಬೆಸಗೊಂಡಪಂ ಬೆಸಸೆನಲ್ ಮಂದಸ್ಮಿತಂ ಪೊಣ್ಮೆ ಮಾ
ನಿನಿ ಲಜ್ಜಾವನತಾಸ್ಯಮಂ ದಶನಕಾಂತಿವ್ಯಾಜದಿಂ ಮುಚ್ಚಿದಳ್                 ೯೩

ಮತ್ತೆಯುಮಂತೆ ಪೇೞೆನಲದೇನಱಯೆಂ ದಿಟದಿಂ ನರೇಂದ್ರ ಕಾ
ಡುತ್ತಿರಲೇಕೆ ಪೇೞೆನಗೆ ಮಾಣದೆ ಲಜ್ಜೆಯನಿಂತಿರಲ್ಕೆ ಮಾ
ಡುತ್ತಿರಲೆಂದು ಮೆಲ್ಲನುಸಿರುತ್ತಮೆ ಸೈರಿಸದಂತೆಗೆಯ್ದು ಭೂ
ಪೋತ್ತಮನಂ ವಿನಮ್ರಮುಖಿ ವಾಮವಿಲೋಚನದಿಂದೆ ನೋಡಿದಳ್            ೯೪

ರಂಜಿಸುತ್ತಿರುವ, ಬಹಳ ಬಿಳುಪಾದ ಹಚ್ಚಡವನ್ನು ಹಾಸಿರುವ, ಅಗಲವಾಗಿಯೂ ಎತ್ತರವಾಗಿಯೂ, ಬಸುರಿತನಕ್ಕೆ ಉಚಿತವಾಗಿಯೂ ಇರುವ ಹಾಸಿಗೆಯಲ್ಲಿ ವಿಲಾಸವತಿಯು ಶೋಭಿಸುತ್ತಿದ್ದಳು. ೯೦. ಪರ್ವತದಿಂದ ಕೂಡಿಕೊಂಡಿರುವ ಭೂಮಿಯಂತೆಯೂ, ಸಿಂಹದಿಂದ ಕೂಡಿಕೊಂಡಿರುವ ಮೇರುಪರ್ವತದ ಮಧ್ಯದಂತೆಯೂ, ಒಳಗೆ ಐರಾವತವಿರುವ ದೇವಗಂಗಾನದಿಯಂತೆಯೂ, ಉದಯಪರ್ವತದ ಮೇಲೆ ಏರುತ್ತಿರುವ ಸೂರ್ಯಮಂಡಲದಿಂದ ಕೂಡಿಕೊಂಡಿರುವ ದಿವಸದ ಶೋಭೆಯಂತೆಯೂ, ಬ್ರಹ್ಮನನ್ನು ಒಳಗೊಂಡಿರುವ ತಾವರೆಬಳ್ಳಿಯಂತೆಯೂ, ಚಂದ್ರಬಿಂಬದಿಂದ ಕೂಡಿಕೊಂಡಿರುವ ಕ್ಷೀರಸಮುದ್ರದ ಅಲೆಯಂತೆಯೂ ಗರ್ಭದಿಂದ ಕೂಡಿಕೊಂಡಿರುವ ಆ ಸುಂದರಾಂಗಿಯು ಕಣ್ಣಿಗೆ ಆನಂದವನ್ನುಂಟುಮಾಡುತ್ತಿದ್ದಳು. ವ|| ಹಾಗೆ ಇರುವವಳನ್ನು ಕಂಡು ಒಳಕ್ಕೆ ಬರುತ್ತಿರಲಾಗಿ

೯೧. ಪರಿಜನರು ಎದ್ದು ಕೈಹಿಡಿದುಕೊಳ್ಳಲಾಗಿ ವಿಲಾಸವತಿಯು ಮೆಲ್ಲನೆ ಎಡಮೊಳಕಾಲಿನ ಮೇಲೆ ಅಂಗೈ ಅನ್ನು ಊರಿ ಚಲಿಸುತ್ತಿರುವ ರತ್ನದ ಒಡವೆಗಳ ಇಂಪಾದ ಧ್ವನಿಯು ಹೊರಡುತ್ತಿರಲಾಗಿ, ಚಂಚಲವಾದ ಹಾಗೂ ಬಳುಕುತ್ತಿರುವ ದೇಹವು ಶೋಭಿಸುತ್ತಿರಲು, ಬಹಳ ಸಡಗರದಿಂದ ಮೇಲಕ್ಕೇಳಲಾಗಿ ‘ಬೇಡ, ಇರಿ’ ಎಂದು ವಿಲಾಸವತಿಯನ್ನು ರಾಜನು ಕುಳ್ಳಿರಿಸಿದನು. ೯೨. ಬಳಿಕ ರಾಜನು ಪ್ರೀತಿಯಿಂದ ಮಡದಿಯ ಪಕ್ಕದಲ್ಲಿ ಕುಳಿತುಕೊಂಡನು. ಸಮೀಪದಲ್ಲೇ ಮಿರುಗುವ ಚಿನ್ನದ ಕಾಲುಗಳಿಂದ ಶೋಭಿಸುವ ಆಸನದಲ್ಲಿ ಶುಕನಾಸನು ಕುಳಿತುಕೊಂಡನು. ವ|| ಅನಂತರ ರಾಜನು ಗರ್ಭಿಣಿಯಾದ ತನ್ನ ಹೆಂಡತಿಯನ್ನು ನೋಡಿ ಸಂತಸದಿಂದ ಹಾಸ್ಯಭರಿತವಾದ ಮಾತುಗಳಿಂದ ಹೀಗೆ ಹೇಳಿದನು. ೯೩. ‘ದೇವಿ! ಈ ದಿನ ವಂಶವರ್ಧನೆಯು ಬಂದು ಮನಸ್ಸಿನಲ್ಲಿ ಉಕ್ಕುತ್ತಿರುವ ಸಂತೋಷದಿಂದ ಏನೋ ಒಂದು ಸಂಗತಿಯನ್ನು ತಿಳಿಸಿದಳು. ಅದು ನಿಜ ತಾನೆ? ಎಂದು ಮಂತ್ರಿಯು ಸಂತೋಷದಿಂದ ಕೇಳುತ್ತಿದ್ದಾನೆ. ಅವನಿಗೆ ಏನು ಹೇಳಬೇಕೋ ಹೇಳು’ ಎಂದು ರಾಜನು ಹೇಳಲಾಗಿ ರಾಣಿಯು ಮುಖದಲ್ಲಿ ಮುಗುಳ್ನಗೆಯು ಹೊರಹೊಮ್ಮುತ್ತಿರಲಾಗಿ ನಾಚಿಕೆಯಿಂದ ತಗ್ಗಿದ ಮುಖವನ್ನು ಹಲ್ಲಿನ ಬೆಳಕೆಂಬ ವಸ್ತ್ರದಿಂದ ಮುಚ್ಚಿದಳು. ೯೪. ರಾಜನು ಮತ್ತೆ ಮತ್ತೆ ಹೇಳು, ಹೇಳು ಎಂದು ಕೇಳುತ್ತಲೇ ಇದ್ದನು. ಆಗ ವಿಲಾಸವತಿಯು ‘ನಿಜವಾಗಿಯೂ ನನಗದೊಂದೂ ಗೊತ್ತಿಲ್ಲ. ನನ್ನನ್ನು ಏತಕ್ಕೆ ಸುಮ್ಮನೆ ಗೋಳುಗುಟ್ಟಿಸುತ್ತೀರಿ?