ಪನೆಗಳ್ ತೋರದ ಮಂದಹಾಸರುಚಿ ಮುದ್ದಂ ನಾಡೆಯುಂ ಬೀ ರೋ
ಚನದಿಂ ರಂಜಿಪ ನೂಲ ರಕ್ಕೆವಣಿಗಳ್ ಚೆಲ್ವಾಗೆ ವಿಸಾರಲೋ
ಚನಯುಗ್ಮಂ ಮಿಸುಗಲ್ ಮಱಲ್ದೆಸೆವ ತೂಗುಂದೊಟ್ಟಿಲೊಳ್ ಪಟ್ಟ ಪು
ತ್ರನ ವಕ್ತ್ರೇಂದುವನಂಜನಾಂಕಿತಮನಾನಿನ್ನೆಂದು ಪೇೞು ಕಾಣ್ಬೆನೋ      ೫೬

ಹೃದಯದೊಳೊದವಿದ ಕತ್ತಲೆ
ಚೆದುರುವಿನಂ ಮಂಗಳಪ್ರದೀಪದವೋಲ
ಭ್ಯುದಯಕರನೆನಿಪ ನಂದನ
ನದೆಂದು ತೊಳಗುವನೊ ಕಾಂತೆಯರ ಕರತಳದೊಳ್            ೫೭

ಸಂಗಡಿಸಿದ ಕಿಱುಜಡೆಗಳ
ತೊಂಗಲ್ಗಳಿನೊಪ್ಪೆ ಜಾನುಚಂಕ್ರಮಣಂ ಹ
ರ್ಮ್ಯಾಂಗಣದೊಳೆಂದು ಸುೞಗುಮೊ
ಸಿಂಗದ ಮಱಯಂತಿರೆಸೆದು ತೋರ್ಪ ಕುಮಾರಂ                   ೫೮

ಲಲನಾಮಂಜೀರನಾದಕ್ಕೆಳಸುವ ಕಳಹಂಸಂಗಳಂ ಕಂಡು ಬೆಂಬೆ
ನ್ನೊಳೆ ನೀಡುಂ ಪೋಪ ಕಾಂತಾಭವನ ಹರಿಣಶಾಬಂಗಳೆೞ್ತಂದು ಚಂದ್ರೋ
ಪಳಭಿತ್ತಿಪ್ರಾಂತದೊಳ್ ಮಾರ್ಪೊಳೆಯಲೆನಗಿವಂ ತಂದು ನೀನೀವುದೆಂದಾ
ಗಳುಮಾದಂ ದಾದಿಗಾಯಾಸಮನೊಡರಿಪ ಮುದ್ದಾತ್ಮಜಂಗೆಂದು ತೋರ್ಕುಂ        ೫೯

ಮದಲೇಖಾಮಂಡನಂ ಕಣಳಿಸೆ ಕದಪಿನೊಳ್ ನೀಳ್ದ ಕಸ್ತೂರಿಕಾಪಂ
ಕದಿನಂಗುಲ್ಯಂಕುಶಾಕರ್ಷಣಮಮರೆ ಶಿರಂದೂಗುತಂತೆ ತ್ತಿ ಕೆಯ್ಯಂ
ಕೆದಱುತ್ತಂ ಧೂಳಿಯಂ ಪ್ರೀತಿಯನೊದವಿಪ ಗಂಡೋಚ್ಚಲಡ್ಡಿಂಡಿಮಧ್ವಾ
ನದಿನೆಂದೋ ಮುಂದೆ ಮನ್ನಂದನನೆಸೆವ ಗಜಕ್ರೀಡೆಯಿಂದಾಡುತಿರ್ಪಂ ೬೦

ಮತ್ತು ಎಳೆಬಿಸಿಲು ಎಲ್ಲೆಲ್ಲೂ ಕೆಂಬಣ್ಣದ ಸೊಬಗನ್ನು ಹರಡುತ್ತಿರಲು ಕಣ್ಣಿಗೆ ಆಪ್ಯಾಯಮಾನವಾಗಿರುವ ಆಕಾಶದ ಶೋಭೆಯಂತೆ ತೊಡೆಯ ಮೇಲೆ ಮಲಗಿಕೊಂಡಿರುವ ನನ್ನ ಪ್ರಾಣಕಾಂತೆಯು ಎಂದು ನನ್ನ ಮನಸ್ಸಿಗೆ ಹುರುಪನ್ನು ಉಂಟುಮಾಡುತ್ತಾಳೋ!

೫೬. ಹಲ್ಲಿಲ್ಲದ ಬಾಯಿಯಲ್ಲಿ ಕಿರುನಗೆಯ ಕಾಂತಿಯು ಅತಿಶಯವಾದ ಸೊಬಗನ್ನು ಸೂಸುತ್ತಿರಲು, ಗೋರೋಚನದಿಂದ ರಂಜಿಸುತ್ತಿರುವ ರಕ್ಷಾಸೂತ್ರಮಣಿಗಳು ಕಂಠದಲ್ಲಿ ಶೋಭಿಸುತ್ತಿರಲು, ಅಗಲವಾದ ಎರಡು ಕಣ್ಣುಗಳು ಹೊಳೆಯುತ್ತಿರಲು, ತೂಗುವ ತೊಟ್ಟಿಲಿನಲ್ಲಿ ಮಲಗಿರುವ ಮಗುವಿನ ಕಾಡಿಗೆಬೊಟ್ಟಿನಿಂದ ರಂಜಿಸುವ ಮುಖಚಂದ್ರನನ್ನು ಯಾವತ್ತು ನೋಡುತ್ತೇನೊ! ಹೇಳು. ೫೭. ನಮ್ಮ ಹೃದಯದಲ್ಲಿ ಆವರಿಸಿರುವ ನಿರಾಶೆಯೆಂಬ ಕಗ್ಗತ್ತಲೆಯನ್ನು ಪರಿಹಾರ ಮಾಡುವ ಮಂಗಳದೀಪದಂತೆ ನಮಗೆ ಏಳಿಗೆಯನ್ನುಂಟುಮಾಡುವ ಕುಮಾರನು ಅರಮನೆಯ ಹೆಂಗಸರ ಕೈಗಳನ್ನು ಎಂದು ಅಲಂಕರಿಸುತ್ತಾನೊ! ೫೮. ಒಟ್ಟುಗೂಡಿಸಿರುವ ಕಿರುಜಡೆಗಳ ಗಂಟಿನಿಂದ ಶೋಭಿಸುವ, ಅಂಬೆಗಾಲಿಕ್ಕುವ, ಸಿಂಹದ ಮರಿಯಂತೆ ಮೆರೆಯುವ ಗಂಡುಕೂಸು ಅರಮನೆಯ ಹಜಾರದಲ್ಲಿ ಎಂದು ಸುಳಿದಾಡುತ್ತಾನೊ! ೫೯. ಅರಮನೆಯ ಮಹಿಳೆಯರ ಕಾಲ್ಗಡಗಗಳ ಧ್ವನಿಗೆ ಮಾರುಹೋಗಿ ಬಂದಿರುವ ರಾಜಹಂಸಗಳನ್ನು ನೋಡಿ ಅವುಗಳ ಬೆನ್ನುಹತ್ತಿ ಬೆನ್ನುಹತ್ತಿ ಓಡಾಡುವ ಮತ್ತು ರಾಣೀವಾಸದ ಜಿಂಕೆಮರಿಗಳನ್ನು ಎಳೆದುಕೊಂಡು ಬಂದು ಚಂದ್ರಕಾಂತಶಿಲೆಯ ಗೋಡೆಯಲ್ಲಿ ಅವುಗಳ ಪ್ರತಿಬಿಂಬವನ್ನು ನೋಡಿ ಅವುಗಳನ್ನು ಜಿಂಕೆಯೆಂದೇ ಭ್ರಮಿಸಿ ಇವುಗಳನ್ನು ತನಗೆ ಕೊಡಬೇಕೆಂದು ಯಾವಾಗಲೂ ದಾದಿಯನ್ನು ಕಾಡಿಸಿ ಗೋಳುಗುಟ್ಟಿಸುವ ಮಗುವಿನ ಮುದ್ದಾಟವನ್ನು ನಾನು ಯಾವಾಗ ನೋಡುತ್ತೇನೋ ಕಾಣೆ. ೬೦. ಕೆನ್ನೆಯಲ್ಲಿ ಕಸ್ತೂರಿದ್ರವದಿಂದ ಬರೆದಿರುವ ಆನೆಯ ಮದರೇಖೆಯಂದದ ನೀಳವಾದ ಗೆರೆಯು ಕಂಗೊಳಿಸುತ್ತಿರಲು, ದಾದಿಯು ಅಂಕುಶದಂತಿರುವ ತನ್ನ ಕೈಬೆರಳು ಗಳಿಂದ ತಿವಿಯಲು ಬರುವುದಿಲ್ಲವೆಂದು ಅಸಮ್ಮತಿಯನ್ನು ಸೂಚಿಸಲು ತಲೆಯನ್ನು ಅಳ್ಳಾಡಿಸುವ, ಕೈಯನ್ನು ಎತ್ತಿ ಧೂಳನ್ನು ಎರಚುತ್ತಿರುವ ಬಾಯಿಂದ ಹೊರಡುತ್ತಿರುವ ಡಿಂಡಿಮದಂತೆ ಇಂಪಾದ ಟ್ಲಟ್ಲ ಎಂಬ ಧ್ವನಿಯಿಂದ ಪ್ರೀತಿಯನ್ನುಂಟುಮಾಡುವ ಮುದ್ದುಗುವರನು ನನ್ನ ಮುಂದೆ ಆನೆಯ ಲೀಲೆಯನ್ನು ಎಂದು ತೋರಿಸುತ್ತಾನೋ ಟಿ. ಆನೆಯ ಕೆನ್ನೆಯ ಮೇಲೂ ಮದೋದಕದ ಧಾರೆಗಳು ಕಂಗೊಳಿಸುತ್ತವೆ. ಮಾವಟಿಗನು ಚುಚ್ಚುವ ಅಂಕುಶದಿಂದ ಅದೂ ತಲೆಯನ್ನು ಅಲ್ಲಾಡಿಸುತ್ತದೆ. ಅದೂ ಸೊಂಡಿಲನ್ನು ಮೇಲಕ್ಕೆತ್ತಿ ಧೂಳಿಯನ್ನು ಎರಚುತ್ತದೆ. ಅದರ ಬಾಯಿಂದಲೂ ಡಿಂಡಿಮ ಧ್ವನಿಯಂದದ ಶಬ್ದವು ಹೊರಡುತ್ತದೆ. ಹೀಗೆ ಮಗು ಗಜಲೀಲೆಯನ್ನು ಆಡುವುದನ್ನು ತಾನು

ತಳಿರಡಿಯಿಡುತಂ ಕುಟ್ಟಿಮ
ತಳದೊಳ್ ಮಾರ್ಪೊಳೆಯುತಿರೆ ನಿಜಪ್ರತಿಬಿಂಬಂ
ಗಳನೀಕ್ಷಿಸುತುರೆ ಕೌತುಕ
ಚಳನಯನದೆ ತನಯನೆಂದು ಬೞಸಂದಪನೋ                       ೬೧

ಬಾರೆಲೆ ತಂದೆ ಬಾರರಸ ಬಾ ಪೊರೆವಾೞ್ದನೆ ಬಾಯೆನುತ್ತೆ ವಿ
ಸ್ತಾರಿತದೀರ್ಘಬಾಹುಯುಗಳರ್ ಪರಮೋತ್ಸವದಿಂದಶೇಷ ಧಾ
ತ್ರೀರಮಣರ್ ಮರಲ್ದು ಕರೆಯುತ್ತಿರೆಯುಂ ಮಣಿಭೂಷಣಾಂಶು ವಿ
ಸಾರಿತನೇತ್ರನೆಂದು ಸುೞದಪ್ಪನೊ ಮುಂದೆ ಸಭಾಂತರಾಳದೊಳ್       ೬೨

ವ|| ಎಂದಿವು ಮೊದಲಾಗಿ ಪಲವುಂ ಮನೋರಥಂಗಳಂ ಚಿಂತಿಸುತ್ತುಮಿರ್ದು ಮತ್ತಂ ಪ್ರಿಯಮಧುರಂಗಳುಂ ಶೋಕಾಪನೋದ ನಿಪುಣಂಗಳುಂ ಧರ್ಮೋಪದೇಶಗರ್ಭಂಗಳುಮಪ್ಪ ವಚನನಿಚಯಂಗಳಿನೆಂತಾನುಂ ಸಂತೈಸಿ ನಿಜಪರಿಜನಂಬೆರಸರಸಂ ಬಿಜಯಂಗೆಯ್ದನಲ್ಲಿಂ ಬೞಕ್ಕಂ ವಿಳಾಸವತಿಮಹಾದೇವಿ ದುಖಮಂ ಪತ್ತುವಿಟ್ಟೆಂದಿ ನಂತಾಭರಣಂಗಳಂ ತೊಟ್ಟು

ಗುರುದೇವದ್ವಿಜಪೂಜಾ
ಪರಿಚರ್ಯೆಯನೆಸಗಿ ಭಕ್ತಿಯಿಂ ಮತ್ತುಂ ಪೇ
ೞ್ದರ ಮಾತೆಲ್ಲಂ ಕೇಳ್ದಾ
ದರದಿಂದಂ ಗರ್ಭತೃಷ್ಣೆಯಿಂದೊಡರಿಸಿದಳ್                        ೬೩

ವಿವಿಧ ನವಪ್ರಸೂನಫಳಪುಣ್ಯನದೀಜಳ ನೂತರತ್ನಪ
ಲ್ಲವನಿವಹಂಳಿಂದೆಸೆವ ಪೊಂಗಳಸಂಗಳನೆತ್ತಿ ಸುತ್ತುಮು
ತ್ಸವದೊಳೆ ಬಂದು ಗೋಪವನಿತಾನಿಕರಂ ಮಿಸಿಸಲ್ಸವತ್ಸಧೇ
ನುವಿನಡಿಯೊಳ್ ವಿಲಾಸವತಿ ವಿವಳನಾಕುಲ ಗೋಕುಲಂಗಳೊಳ್       ೬೪

ಸಲೆ ನಿಲೆ ಬೇವ ಗುಗ್ಗುಳದ ಕರ್ವೊಗೆಯಿಂದಮಗುರ್ವನಾಳ್ದು ಕ
ತ್ತಲಿಸುವ ಚಂಡಿಕಾಭವನದೊಳ್ ಧವಳಾಂಶುಕೆ ಶುದ್ಧಮೂರ್ತಿ ನಿ
ಶ್ಚಳತರಮಪ್ಪ ಭಕ್ತಿಯಿನುಪೋಷಿತೆಯಾಗಿ ಕುಶೋಪಧಾನಮಂ
ಗಳ ವಸುಧಾತಳೀಶಯನಸುವ್ರತಮಂ ಲಲಿತಾಂಗಿ ತಾಳ್ದಿದಳ್                ೬೫

ನೋಡಬೇಕೆಂದು ರಾಜನು ಹಂಬಲಿಸುತ್ತಾನೆ. ೬೧. ತಪ್ಪು ಹೆಜ್ಜೆಗಳನ್ನಿಡುತ್ತಾ ನೆಲೆಗಟ್ಟಿನಲ್ಲಿ ಪ್ರತಿಫಲಿಸಿರುವ ತನ್ನ ಪ್ರತಿಬಿಂಬವನ್ನು ಕುತೂಹಲದಿಂದ ಚಂಚಲವಾದ ಕಣ್ಣುಗಳಿಂದ ನೋಡುತ್ತಾ ಮಗು ಯಾವಾಗ ನನ್ನ ಹತ್ತಿರಕ್ಕೆ ಬರುತ್ತಾನೋ. ೬೨. ಬಾರೋ ತಂದೆ, ಬಾ ದೊರೆ! ಕಾಪಾಡುವ ಒಡೆಯನೆ ಬಾಪ್ಪ! ಎಂದು ಕರೆಯುತ್ತಾ, ತಮ್ಮ ನೀಳವಾದ ಎರಡು ತೋಳುಗಳನ್ನೂ ಚಾಚಿ ಸಾಮಂತ ರಾಜರೆಲ್ಲರೂ ಬಹಳ ಸಂತೋಷದಿಂದ ಮತ್ತೆ ಮತ್ತೆ ಕರೆಯುತ್ತಿರಲು ರತ್ನದ ಒಡವೆಗಳ ಬೆಳಕಿನಿಂದ ರಾಜರ ಕಣ್ಣುಗಳನ್ನು ಅಗಲವಾಗುವಂತೆ ಮಾಡುವ ಕುಮಾರನು ಆಸ್ಥಾನಮಂಟಪಕ್ಕೆ ಬಂದು ಎಂದು ನನ್ನ ಮುಂದೆ ಸುಳಿದಾಡುತ್ತಾನೋ” ವ|| ಇವೇ ಮೊದಲಾದ ಹಲವಾರು ಮನೋರಥಗಳನ್ನು ಚಿತ್ರಿಸಿಕೊಳ್ಳುತ್ತಿದ್ದು ಮತ್ತೆ ಹಿತವಾಗಿಯೂ ಮಧುರವಾಗಿಯೂ ಇರುವ ಮನೋವ್ಯಥೆಯನ್ನು ನಿವಾರಿಸುವುದರಲ್ಲಿ ಸಮರ್ಥವಾದ ಧರ್ಮೋಪದೇಶದಿಂದ ಕೂಡಿಕೊಂಡಿರುವ ಮಾತುಗಳಿಂದ ರಾಣಿಯನ್ನು ಹೇಗೋ ಸಮಾಧಾನಪಡಿಸಿ ತನ್ನ ಪರಿವಾರದೊಂದಿಗೆ ರಾಜನು ತೆರಳಿದ ಮೇಲೆ ವಿಲಾಸವತಿಮಹಾರಾಣಿ ದುಖವನ್ನು ಬದಿಗೊತ್ತಿ ಎಂದಿನಂತೆ ಆಭರಣಗಳನ್ನು ತೊಟ್ಟು ೬೩. ಮುಂದೆ ಗುರುಗಳ, ದೇವರ, ಬ್ರಾಹ್ಮಣರ ಸೇವೆಯನ್ನು ಬಹಳ ಭಕ್ತಿಯಿಂದ ಮಾಡತೊಡಗಿದಳು. ಅಲ್ಲದೆ ಯಾರು ಏನು ಹೇಳಿದರೂ ಅವೆಲ್ಲವನ್ನೂ ಬಸುರಿಯಾಗಬೇಕೆಂಬ ಹಂಬಲಿನಿಂದ ನೆರವೇರಿಸುತ್ತಿದ್ದಳು. ೬೪. ಬಳಿಕ ವಿಲಾಸವತಿಯು ನಾನಾ ವಿಧವಾದ ಹೂವುಗಳಿಂದಲೂ, ಹಣ್ಣುಗಳಿಂದಲೂ, ಪುಣ್ಯಕರವಾದ ನದೀಜಲಗಳಿಂದಲೂ ಹೊಸರತ್ನಗಳಿಂದಲೂ ಚಿಗುರುಗಳಿಂದಲೂ ಶೋಭಿಸುವ ಸುವರ್ಣಕಳಶಗಳನ್ನು ಎತ್ತಿ ಸುತ್ತಲೂ ಗೊಲ್ಲರ ಹೆಂಗಸರು ಬಹಳ ಸಂಭ್ರಮದಿಂದ ಬಂದು ಸ್ನಾನ ಮಾಡಿಸಲಾಗಿ ಪ್ರಶಾಂತವಾದ ಗೊಲ್ಲರ ಹಳ್ಳಿಗಳಲ್ಲಿ ಕರುವಿನೊಂದಿಗಿರುವ ಗೋವಿನ ಅಡಿಯಲ್ಲಿ ಸ್ನಾನ ಮಾಡಿದಳು. ೬೫. ಅವಿಚ್ಛಿನ್ನವಾಗಿ ಉರಿಯುತ್ತಿರುವ ಗುಗ್ಗುಳದ ಕಪ್ಪು ಹೊಗೆಯಿಂದ ಅತಿಶಯವನ್ನು ಪಡೆದು ಕತ್ತಲಾಗಿರುವ ಚಂಡಿಕಾದೇವಾಲಯದಲ್ಲಿ ಸ್ನಾನದಿಂದ ಪರಿಶುದ್ಧವಾದ ಶರೀರವುಳ್ಳವಳಾಗಿ ಬಿಳಿಯ ಸೀರೆಯನ್ನುಟ್ಟುಕೊಂಡು ನಿಚ್ಚಟವಾದ ಭಕ್ತಿಯಿಂದ ಕೂಡಿದವಳಾಗಿ ಉಪವಾಸ ಮಾಡಿ

ಪತಿಲಿಖಿತಮಂಡಲಸ್ಥಿತೆ
ಕೃತಾಷ್ಟ ದಿಗ್ದೇವತಾರ್ಚನಪ್ರಕರೆ ದೃಢ
ವ್ರತೆ ಬಹುಳ ಚತುರ್ದಶಿಯೊಳ್
ಚತುಷ್ಪಥಸ್ಥಾನವಿಯನಿರುಳೊಳ್ ತಳೆದಳ್   ೬೬

ತಿಲಪಾತ್ರಪ್ರಕರಂಗಳಂ ಕುಡುವಳಶ್ವತ್ಥಾದಿ ಭೂಜಂಗಳಂ
ಬಲವರ್ಪಳ್ ಬಲಿಭುಗ್ವ ಜಕ್ಕೆ ಬಲಿಯಂ ತಾನಿಕ್ಕುವಳ್ ಮಾತೃಮಂ
ಡಳಮಂ ಪೂಜಿಸುವಳ್ ಪ್ರಸಿದ್ಧಮಿವು ಲೋಕಕ್ಕೆಂಬ ನಾಗಹ್ರದಂ
ಗಳೊಳಾ ಮಾನಿನಿ ಮಂಗಳಾಚರಣದಿಂ ಮೀವಳ್ ಮಹೋತ್ಸಾಹದಿಂ    ೬೭

ಬೆಸಗೊಳ್ವಳ್ ಋಷಿಸಂಘಮಂ ನಯದೆ ಸಿದ್ಧಾದೇಶಮಾದಂತೆ ಮ
ನ್ನಿಸುವಳ್ ತಾನೊಲವಿಂ ಸಮಸ್ತಶಕುನಜ್ಞಾನೀಕಮಂ ಕೂಡೆ ನೋ
ಡಿಸುವಳ್ ವೃದ್ಧಪರಂಪರಾಗತ ರಹಸ್ಯಾಚಾರಮಂ ಮಾಣದಾ
ಗಿಸುವಳ್ ವೇದಸಮೂಹಮಂ ಪದಪಿನಿಂ ಕೇಳ್ವಳ್ ಪುರಾಣಂಗಳಂ         ೬೮

ವ|| ಮತ್ತಂ ಗೋರೋಚನಾರಚಿತ ಭೂರ್ಜಪತ್ರಗರ್ಭರಕ್ಷಾಮಣಿಗಳಂ ತಾಳ್ದಿಯುಂ ಓಷಸೂತ್ರಚಯಮಂ ತಳೆದುಂ ಉಪಶ್ರುತಿಗಳಂ ಕೇಳ್ದುಮಧ್ವಂಗಳೊಳ್ ಜಂಬುಕಂಗಳ್ಗೆ ಮಾಂಸಬಲಿ ಸಮನ್ವಿತೋಪಹಾರಂಗಳಂ ಮಾಡಿಸಿಯು ಮಿಂತನೇಕವಿಧದಿಂ ವಿಳಾಸವತಿಮಹಾದೇವಿ ಪುತ್ರೋತ್ಪತ್ತಿನಿಮಿತ್ತಂ ಪಲವು

ದಿವಸಮಾಚರಿಸುತ್ತಮಿರ್ಪುದುಮೊಂದುದಿವಸಂ

ಸುರುಚಿರಸೌಧದೊಳ್ ನೆಲಸಿರಲ್ ನಿಜಕಾಂತೆಯ ವಕ್ತ್ರಬಿಂಬದೊಳ್
ಕರಿಣಿಯ ಸೃಕ್ವಮಂ ಪುಗುವ ನೀರಜಕಾಂಡಮೆನಲ್ಕಿಳಾಮನೋ
ಹರಶಶಿಮಂಡಳಂ ಪುಗುವುದಂ ವಸುಧಾಪನಂದು ಕಂಡನ
ಚ್ಚರಿಯೆನಿಸಿರ್ದುದಂ ನೆನಸುವೊಲ್ ಕನಸಂ ಬೆಳಗಪ್ಪ ಜಾವದೊಳ್       ೬೯

ಅರಸನತಿಹರ್ಷವಿಕಸಿತ
ಸುರಚಿರಲೋಚನನಮಾತ್ಯಮುಖ್ಯನನಾಗಳ್
ಕರೆದು ನಿಜಸ್ವಪ್ನಮನಾ
ದರದಿಂ ಪೇೞಲ್ಕೆ ಪುಳಕಿತಾಂಗಂ ಸಚಿವಂ                          ೭೦

ದರ್ಭೆಯನ್ನು ಹಾಸಿರುವ ಶುಭಕರವಾದ ನೆಲದಲ್ಲಿ ಮಲಗುವ ವ್ರತವನ್ನು ಕೋಮಲಾಂಗಿಯಾದ ರಾಣಿಯು ಮಾಡಿದಳು.

೬೬. ಕೃಷ್ಣಪಕ್ಷದ ಚತುರ್ದಶಿಯ ರಾತ್ರಿಯಲ್ಲಿ ಗಂಡನಿಂದ ಬರೆಯಲ್ಪಟ್ಟ ದುಂಡುಗೆರೆ(ಮಂಡಲ)ಯ ಒಳಗೆ ಕುಳಿತು ಅಷ್ಟದಿಕ್ಪಾಲಕರಿಗೆ ವಿಶೇಷ ಪೂಜೆಯನ್ನು ಮಾಡಿ ನಾಲ್ಕು ಬೀದಿ ಸೇರುವ ಚೌಕದಲ್ಲಿ ಸ್ನಾನ ಮಾಡುವ ನೋಹಿಯನ್ನೂ ಮಾಡಿದಳು. ೬೭. ತಿಲಪಾತ್ರೆಯನ್ನು ಬ್ರಾಹ್ಮಣರಿಗೆ ದಾನ ಮಾಡಿದಳು. ಅಶ್ವತ್ಥವೇ ಮೊದಲಾದ ಪವಿತ್ರವೃಕ್ಷಗಳಿಗೆ ಪ್ರದಕ್ಷಿಣೆ ಮಾಡಿದಳು. ಕಾಗೆಗಳಿಗೆ ಬಲಿಯನ್ನು ಹಾಕುತ್ತಿದ್ದಳು. ಬ್ರಾಹ್ಮೀ, ಮಾಹೇಶ್ವರೀ ಮೊದಲಾದ ಸಪ್ತಮಾತೃಕೆಗಳ ಗುಡಿಗಳಿಗೆ ಹೋಗಿಬರುತ್ತಿದ್ದಳು. ಬಂಜೆತನವನ್ನು ಪರಿಹರಿಸುವ ವಿಷಯದಲ್ಲಿ ಹೆಸರುವಾಸಿಯಾದ ನಾಗರ ಮಡುವುಗಳಲ್ಲಿ ಸ್ನಾನ ಮಾಡಿದಳು. ೬೮. ಬಹಳ ವಿನಯದಿಂದ ಮಹರ್ಷಿಗಳನ್ನು ಪ್ರಶ್ನಿಸುತ್ತಿದ್ದಳು. ಅವರ ಮಾತನ್ನು ಸಿದ್ಧಪುರುಷರ ಭವಿಷ್ಯದಂತೆ ಗೌರವಿಸಿದಳು. ಬಹಳ ಅಕ್ಕರೆಯಿಂದ ಶಕುನಜ್ಞರೆಲ್ಲರನ್ನೂ ಕಂಡು ಶಕುನ ನೋಡಿಸಿದಳು. ವೃದ್ಧಪರಂಪರೆಯಿಂದ ಬಂದ ಬಂಜೆತನದ ನಿವಾರಣೆಗಾಗಿ ಮಾಡುವ ಗುಟ್ಟಾದ ಆಚರಣೆಗಳನ್ನೆಲ್ಲಾ ಒಂದನ್ನೂ ಬಿಡದೆ ಮಾಡಿದಳು. ಬಹಳ ಉತ್ಸಾಹದಿಂದ ವೇದಗಳನ್ನೂ ಪುರಾಣಗಳನ್ನೂ ಕೇಳುತ್ತಿದ್ದಳು. ವ|| ಮತ್ತು ಗೋರೋಚನದಿಂದ ಬರೆಯಲ್ಪಟ್ಟ ಭೂರ್ಜಪತ್ರ ವನ್ನಿಟ್ಟಿರುವ ಯಂತ್ರದ ತಾಯತಿಗಳನ್ನು ಕಟ್ಟಿಕೊಂಡಳು ಮತ್ತು ಮೂಲಿಕೆಗಳನ್ನು ಕಟ್ಟಿರುವ ಮಂಗಳಸೂತ್ರವನ್ನು ಕೈಗೆ ಕಟ್ಟಿಸಿಕೊಂಡಳು. ಉಪಾಸಕರನ್ನು ಕರೆಸಿ ಭವಿಷ್ಯವನ್ನು ಕೇಳಿದಳು. ದಾರಿಯಲ್ಲಿ ನರಿಗಳಿಗೆ ಮಾಂಸಬಲಿಯಿಂದ ಕೂಡಿದ ಆಹಾರವನ್ನು ಇಕ್ಕಿಸಿದಳು. ಹೀಗೆ ಮಕ್ಕಳಾಗುವುದಕ್ಕೆ ಸಾಧಕವಾದ ಬಗೆಬಗೆಯ ವಿಗಳನ್ನೆಲ್ಲಾ ಕೆಲವು ದಿನಗಳು ಆಚರಿಸುತ್ತಿದ್ದಳು. ಹೀಗಿರಲು ಒಂದು ದಿನ, ೬೯. ತಾರಾಪೀಡನಿಗೆ ಕನಸುಬಿತ್ತು. “ವಸುಮತಿದೇವಿಯು ಬಹಳ ಮನೋಹರವಾದ ಉಪ್ಪರಿಗೆಯ ಮೇಲೆ ಕುಳಿತಿದ್ದಳು. ಆಗ ಹೆಣ್ಣಾನೆಯ ಕಟಬಾಯೊಳಕ್ಕೆ ಹೋಗುವ ತಾವರೆಯ ದಂಟೋ ಎಂಬಂತೆ ಜಗತ್ತಿನಲ್ಲೆಲ್ಲಾ ಪರಮಸುಂದರವಾದ ಪೂರ್ಣಚಂದ್ರಮಂಡಲವು ಅವಳ ಬಾಯನ್ನು ಪ್ರವೇಶಿಸಿತು.” ಇಂತಹ ಅತ್ಯಾಶ್ಚರ್ಯಕರವಾದ ನಿಜವಾಗಿಯೂ ನಡೆದಂತೆಯೇ ಇದ್ದ ಸ್ವಪ್ನವನ್ನು ಮಹಾರಾಜನು ಬೆಳಗಿನ ಜಾವದಲ್ಲಿ ಕಂಡನು. ೭೦. ಎಚ್ಚರವಾಯಿತು. ಬಹಳ ಸಂತೋಷದಿಂದ ಅರಳಿದ ಸುಂದರವಾದ ಕಣ್ಣುಳ್ಳ ಅರಸನು ಪ್ರಧಾನ

ಪಲಕಾಲಕ್ಕೆ ಮನೋರಥಪ್ರಕರಮಿಂದೆಮ್ಮೊಂದು ಪುಣದಯಾ
ವಳಿಯಿಂದಂ ದೊರೆಕೊಂಡುದಿಂದು ಭುವನಕ್ಕಾನಂದಮಾದತ್ತು ಮುಂ
ಕೆಲವಾನುಂ ದಿವಸಕ್ಕೆ ದೇವ ಪಡೆವೈ ಶ್ರೀಮಂಡನಕ್ಷಾತ್ರಮಂ
ಡಲಮಾರ್ಗೋಚಿತಗಾತ್ರನಂ ಬಹುಕಳಾಸತ್ಪಾತ್ರನಂ ಪುತ್ರನಂ             ೭೧

ವ|| ಅದಲ್ಲದೆಯುಂ

ಭುವನಾಶ ನಿಶಾವನಸಾನಸಮಯಪ್ರಾಗ್ಭಾಗದೊಳ್ ಶಾಂತರೂ
ಪವಿನುತ್ಯಂ ವಿಲಸದ್ದುಕೂಲವಸನಾಲಂಕಾರನೊರ್ವಂ ದ್ವಿಜ
ಪ್ರವರಂ ಮೌಕ್ತಿಕಮಾಲಿಕಾವಲಯಮಂ ಪೋತುಲ್ಲಮಂ ಪುಂಡರೀ
ಕವನಂದಲ್ತೆ ಮನೋರಮಾಂಕತಳದೊಳ್ ತಂದಿಕ್ಕಿದಂ ಸ್ವಪ್ನದೊಳ್      ೭೨

ವ|| ಅನುಮೀ ಮಾರ್ಗದೊಳ್ ಕಂಡೆನಂತು ನಿಶಾವಸಾನಸಮಯದೊಳ್ ಕಂಡ ಕನಸುಗಳ ವಿತಂಥಗಳಪ್ಪುವದುಕಾರಣದಿಂ ನಿಖಿಳರಾಜಋಷಿಪ್ರಮೋದ ಹೇತುಭೂತನುಂ ರಾಜಮಾಂಧಾತನುಮೆನಿಪ ಜಗತ್ಪ್ರಖ್ಯಾತಂ ಜನಿಯಿಸುಗುಮದಲ್ಲದೆಯುಂ

ನವಕಮಲೋದ್ಗಮದಿಂದು
ತ್ಸವಮಂ ತಾಂ ಗಂಧಗಜಕೆ ಕಮಲಿನಿ ಮಾೞ್ಪಂ
ತವೊಲರಸ ನಿನಗೆ ಪರಮೋ
ತ್ಸವಮಂ ಮಾದೇವಿ ಮಾೞ್ಕುಮೀ ಕನಸಿಂದಂ                  ೭೩

ನಿನ್ನಯ ಸಂತಾನಮವಿ
ಚ್ಛಿನ್ನಂ ಕ್ಷಿತಿಭಾರಧಾರಣೋಚಿತ ಗುಣಸಂ
ಪನ್ನಮೆನಲ್ ನೆಗೞ್ಗುಂ ಭೂ
ಪೋನ್ನತ ದಿಙುಗದಾನದಂದದಿನೆಂದುಂ                         ೭೪

ವ|| ಎಂದು ತಾರಾಪೀಡನರೇಂದ್ರನ ಕೆಯ್ಯಂ ಪಿಡಿದಂತಪುರಕ್ಕೆ ಪೋಗಿ ವಿಳಾಸವತಿ ಮಹಾದೇವಿಗೆ ತಾವಿರ್ವರುಂ ಕಂಡ ಕನಸುಗಳಂ ಪೇೞೆ ಕೇಳ್ದಾನಂದಪರಂಪರೆಯನೆಯ್ದಿ ಕೆಲವಾನುಂ ದಿವಸದೊಳ್

ಮಂತ್ರಿಯಾದ ಶುಕನಾಸನನ್ನು ಕರೆಸಿಕೊಂಡು ತನ್ನ ಸ್ವಪ್ನವನ್ನು ಬಹಳ ಉತ್ಸಾಹದಿಂದ ಹೇಳಿದನು. ಅದನ್ನು ಕೇಳಿ ಸಂತೋಷದಿಂದ ರೋಮಾಂಚಗೊಂಡ ಮಂತ್ರಿಯು, ೭೧. “ಪ್ರಭುವೇ, ನಮ್ಮ ಪುಣ್ಯಪರಂಪರೆಯಿಂದ ಬಹಳ ಕಾಲವಾದ ಮೇಲಾದರೂ ಇಂದು ನಮ್ಮ ದೊಡ್ಡ ಇಷ್ಟಾರ್ಥವು ನೆರವೇರಿದಂತಾಯಿತು. ಈ ದಿನ ಪ್ರಪಂಚಕ್ಕೆ ಆನಂದವಾಗಿದೆ. ಮುಂದೆ ಕೆಲವು ದಿನಗಳಲ್ಲೇ ತೇಜಸ್ಸಿನಿಂದ ಶೋಭಿಸುವ ಮತ್ತು ಕ್ಷತ್ರಿಯಪರಂಪರೆಗೆ ಅನುಗುಣವಾದ ಶರೀರವುಳ್ಳ ಸಕಲ ಕಲಾಪರಿಪೂರ್ಣನಾದ ಸುಪುತ್ರನನ್ನು ಪಡೆಯುವೆ. ವ|| ಅದಲ್ಲದೆ, ೭೨. ಎಲೈ ಮಹಾರಾಜನೆ, ನಾನೂ ಇಂದು ಬೆಳಗಿನ ಜಾವದಲ್ಲಿ ಒಂದು ಕನಸನ್ನು ಕಂಡೆ. ಏನೆಂದರೆ, ಬಹಳ ಪ್ರಶಾಂತವೂ ಪ್ರಶಸ್ತವೂ ಆದ ರೂಪವುಳ್ಳ, ಪ್ರಕಾಶಮಾನವಾದ ರೇಷ್ಮೆಮಗುಟವನ್ನು ಧರಿಸಿ ಮೆರೆಯುತ್ತಿರುವ ಒಬ್ಬ ಬ್ರಾಹ್ಮಣೋತ್ತಮನು ಒಂದು ಮುತ್ತಿನ ಸರವನ್ನೂ ಮತ್ತು ಅರಳಿರುವ ಒಂದು ಬಿಳಿಯ ತಾವರೆಯನ್ನೂ ನನ್ನ ಪತ್ನಿಯಾದ ಮನೋರಮೆಯ ತೊಡೆಯ ಮೇಲೆ ಇರಿಸಿದನು. ವ|| ನಾನೂ ಈ ರೀತಿ ಕನಸನ್ನೂ ಕಂಡೆ. ಬೆಳಗಿನ ಜಾವದಲ್ಲಿ ಕಂಡ ಕನಸುಗಳು ಸುಳ್ಳಾಗುವುದಿಲ್ಲ. ಅದರಿಂದ ಸಮಸ್ತ ರಾಜರ್ಷಿಗಳಿಗೂ ಸಂತೋಷವನ್ನುಂಟುಮಾಡುವ ಮಾಂಧಾತಚಕ್ರವರ್ತಿಗೆ ಸರಿಸಮಾನನೆನಿಸುವ ಜಗದ್ವಿಖ್ಯಾತನಾಗುವ ಕುಮಾರನು ಹುಟ್ಟುವನು. ಅದಲ್ಲದೆ, ೭೩. ಈ ಕನಸಿನಿಂದಾಗಿ ತಾವರೆಬಳ್ಳಿಯ ಹೊಸದಾಗಿ ಬಿಟ್ಟ ಹೂವಿನಿಂದ ಮದ್ದಾನೆಗೆ ಸಂತೋಷವನ್ನುಂಟು ಮಾಡುವಂತೆ ಪಟ್ಟದರಾಣಿಯು ಪುತ್ರಸಂತಾನದಿಂದ ನಿನಗೆ ಪರಮಾನಂದವನ್ನುಂಟು ಮಾಡುತ್ತಾಳೆ. ೭೪. ದಿಗ್ಗಜಗಳ ಮದೋದಕ ಧಾರೆಯಂತೆ ನಿನ್ನ ಸಂತಾನವು ಅವಿಚ್ಛಿನ್ನವಾಗಿ ಹರಿಯುತ್ತದೆ. ಅಲ್ಲದೆ ಭೂಭಾರವನ್ನು ಹೊರಲು ಯೋಗ್ಯವಾದ ಗುಣಗಳಿಂದ ಪರಿಪೂರ್ಣವಾಗಿರುತ್ತದೆ.” ಟಿ. ದಿಗ್ಗಜಗಳ ಮದೋದಕವು ಅವುಗಳ ಶಕ್ತಿವಿಶೇಷವನ್ನು ಸೂಚಿಸುವುದರಿಂದ ಭೂಮಿಯನ್ನು ಹೊರಲು ವಿಶೇಷ ಸಾಮರ್ಥ್ಯವನ್ನು ಅವುಗಳಿಗೆ ಹೇಳಿದಂತಾಯಿತು ಎಂದು ಹೇಳಿ ತಾರಾಪೀಡಮಹಾರಾಜನ ಕಯ್ಯನ್ನು ಹಿಡಿದುಕೊಂಡು ಅಂತಪುರಕ್ಕೆ ಹೋಗಿ ವಿಳಾಸವತಿಮಹಾರಾಣಿಗೆ ತಾವಿಬ್ಬರೂ ಕಂಡ ಕನಸುಗಳನ್ನು ಹೇಳಲಾಗಿ, ಅವಳು ಅದನ್ನು ಕೇಳಿ ಆನಂದ