ಸುರತಸ್ವೇದೋದಬಿಂದುಚ್ಯುತ ಮೃಗಮದಪತ್ರಂ ರದಸ್ವಷ್ಟದಷ್ಟಾ
ಧರಬಿಂಬಂ ಪ್ರಸ್ಖಲತ್ಕಂಕಣರಣಿತ ಕಚಾಕರ್ಷಣೋತ್ಕೀರ್ಣ ಕರ್ಣಾ
ಭರಣಂ ಕಣಪ್ಪಿ ಕಾಂತಾತತಿಯೊಳೆಸೆಯೆ ಸಂಭೋಗಮಂ ರಾಗದಿಂ ಬಿ
ತ್ತರಿಪಂ ಪ್ರೇಮಪ್ರಕೋಪಾತಿಚರಣತಳಾಲಕ್ತಲೇಖಾಲಲಾಮಂ                               ೨೭

ವ|| ಅದಲ್ಲದೆಯುಂ

ತರುಣೀಸಂಕುಲಹಸ್ತಯಂತ್ರವಿಗಳತ್ಕಾಶ್ಮೀರಧಾರಾಪರಂ
ಪರೆಗಳ್ ಮನ್ಮಥಮುಕ್ತಹೇಮಮಯ ನಾರಾಚಾಳಿವೊಲ್ ಚೆಲ್ವನಾ
ವರಿಸಲ್ ಚಂದನವಾರಿಬಿಂದು ವಿಲಸತ್ಕಸ್ತೂರಿಕಾಸೌರಭೋ
ತ್ಕರ ಚಂಚತ್ತನು ಹೇಮಶೃಂಗಜಳಕೇಳೀಲೀಲೆಯಂ ತಾಳ್ದಿದಂ                               ೨೮

ವ|| ಮತ್ತಂ

ಲಲನಾಲಕ್ತಕಸಿಕ್ತ ಹಂಸಯುಗಳಂ ನೈತಂಬವಿಕ್ಷೋಭ ಸಂ
ಚಳಮುಚ್ಚಸ್ತನ ಚಂದನೋಜ್ಜಳಮುದಂಚತ್ಕರ್ಣಪೂರೋತ್ಪಳಾ
ವಿಳಮಾಕೀರ್ಣಕಚಪ್ರಸೂನಶಬಳಂ ಮಾೞ್ಪಂ ಸರೋಜಾಕರಂ
ಗಳನಂತಪುರಕಾಮಿನೀಪರಿವೃತಂ ನೀಡುಂ ಜಳಕ್ರೀಡೆಯೊಳ್                               ೨೯

ತಡೆದೈ ವಂಚಕ ಕೂರ್ತವೊಳ್ ಕುಱುಪುವೇೞ್ದೆಲ್ಲಿರ್ದೆಯೆಂದೊರ್ಮೊದಲ್
ನಡುಗುತ್ತುಂ ಪ್ರಣಯಪ್ರಕೋಪಭರದಿಂದೆಯ್ತಂದು ಕಾಂತಾಜನಂ
ಪಿಡಿತಂದೊರ್ಮೆಯೆ ಕಂಕಣಂಗಳುಲಿಯಲ್ ಪೂಮಾಲೆಯಿಂ ಸೋಲೆ ಪೊ
ಯ್ವಡೆವಂ ಕೇಸರದಾಮಬದ್ಧಚರಣಂ ಶೃಂಗಾರಸಾರೋದಯಂ                                        ೩೦

ಮಂದಹಾಸವೆಂಬ ಗಂಧೋದಕದಿಂದ ಸ್ನಾನ ಮಾಡುತ್ತಿದ್ದನು. ಅವರ ರತ್ನಾಭರಣಗಳ ಕಾಂತಿಸಮೂಹವೆಂಬ ಸುಗಂಧದ ಪುಡಿಯು ಇವನ ಮೈಮೇಲೆ ಪಸರಿಸುತ್ತಿತ್ತು. ಅವರು ಬಳ್ಳಿತೋಳುಗಳಿಂದ ಇವನನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತಿದ್ದರು. ಅವರ ಕನ್ನೆ ದಿಲೆಯಂತಿರುವ ದೃಷ್ಟಿಯು ಇವನ ಮೇಲೆ ಬೀಳುತ್ತಿದ್ದುದರಿಂದ ಇವನ ಮೈ ಬಣ್ಣವು ಕಪ್ಪಾಗುತ್ತಿತ್ತು. ೨೭. ಈತನು ರಾಣೀವಾಸದ ಚೆಲುವೆಯರೊಂದಿಗೆ ಬಹಳ ಪ್ರೀತಿಯಿಂದ ಸಂಭೋಗಸುಖವನ್ನು ಅನುಭವಿಸುತ್ತಿದ್ದನು. ಅವರ ಮೈಮೇಲೆ ಬರೆದಿದ್ದ ಕಸ್ತೂರಿ ವರ್ಣಚಿತ್ರಗಳು ಸುರತಕಾಲದ ಬೆವರುಹನಿಗಳಿಂದ ಅಳಿಸಿಹೋಗುತ್ತಿದ್ದುವು. ಅವರ ಕೆಳದುಟಿಗಳು ದಂತಕ್ಷತಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಕೈಬಳೆಗಳು ಕೆಳಗೆ ಜಾರಿ ಬಿದ್ದು ಧ್ವನಿಗೈಯುತ್ತಿದ್ದುವು. ಕೂದಲನ್ನು ಎಳೆಯುವಾಗ ಅವರ ಕರ್ಣಾಭರಣಗಳು ಒಡೆದುಹೋಗುತ್ತಿದ್ದುವು. ಅವರು ಪ್ರಣಯಕೋಪದಿಂದ ಇವನನ್ನು ಒದ್ದಾಗ ಅವರ ಕಾಲಿನಲ್ಲಿ ಲೇಪಿಸಿಕೊಂಡಿರುವ ಅರಗಿನ ರಸದಿಂದಾದ ಕಲೆಗಳಿಂದ ಅವನ ಹಣೆಯು ಶೋಭಿಸುತ್ತಿತ್ತು! ವ|| ಅದೂ ಅಲ್ಲದೆ ೨೮. ಆ ರಾಜನು ಅಂತಪುರದ ಕಾಮಿನೀಜನರೊಂದಿಗೆ ಕೂಡಿಕೊಂಡು ಚಿನ್ನದ ಜೀರ್ಕೊಳವೆಗಳಿಂದ ಜಲಕ್ರೀಡೆಯಾಡುತ್ತಿದ್ದನು. ತರುಣಿಯರ ಕೈಗಳಲ್ಲಿರುವ ಜಲಯಂತ್ರದಿಂದ ಹೊರಬರುತ್ತಿರುವ ಕುಂಕುಮರಸದ ಧಾರಾಪರಂಪರೆಗಳು ಮನ್ಮಥನಿಂದ ಬಿಡಲ್ಪಟ್ಟ ಚಿನ್ನದ ಬಾಣಗಳಂತೆ ಶೋಭಿಸುತ್ತಿದ್ದುವು. ಅವನ ಅಂಗಾಂಗಗಳು ಗಂಧೋದಕದ ಹನಿಗಳಿಂದ ಚಂದಗಾಣುತ್ತಿದ್ದುವು. ಅವನ ಶರೀರವು ಕಸ್ತೂರಿಯ ಕಂಪಿನಿಂದ ರಂಜಿಸುತ್ತಿತ್ತು. ೨೯. ಆ ತರುಣಮಹಾರಾಜನು ಅಂತಪುರದ ಸುಂದರಿಯರಿಂದ ಪರಿವೃತನಾಗಿ ತಾವರೆಗೊಳದಲ್ಲಿ ನೀರಾಟವಾಡುತ್ತಿದ್ದನು. ಆಗ ಅಲ್ಲಿದ್ದ ಹಂಸಪಕ್ಷಿಗಳು ಹೆಂಗಸರ ಕಾಲಿನ ಅರಗಿನರಸದಿಂದ ತೊಯ್ದು ಕೆಂಬಣ್ಣವನ್ನು ಪಡೆಯುತ್ತಿದ್ದುವು, ಆ ಕೊಳವು ಸುಂದರಿಯರ ನಿತಂಬಗಳ ಹೊಡೆತದಿಂದ ಕಲಕಿಹೋಗುತ್ತಿತ್ತು. ಅವರ ತೋರಮೊಲೆಗಳ ಬಿಳಿಚಂದನದಿಂದ ನೀರು ಧವಳವರ್ಣದಿಂದ ಪ್ರಕಾಶಿಸುತ್ತಿತ್ತು. ಅವರು ಕಿವಿಯಲ್ಲಿ ಮುಡಿದಿದ್ದ

ಕನ್ನೆ ದಿಲೆಗಳು ನೀರಿನಲ್ಲಿ ಬೀಳುತ್ತಿದ್ದುದರಿಂದ ನೀರು ಕಪ್ಪುಬಣ್ಣವನ್ನು ತಾಳುತ್ತಿತ್ತು. ಅವರ ತಲೆಗೂದಲುಗಳಿಂದ ಉದುರಿದ ಹೂವುಗಳಿಂದ ಸರೋವರವು ನಾನಾ ಬಣ್ಣವನ್ನು ತಾಳುತ್ತಿತ್ತು. ೩೦. ಅಂತಪುರದ ನಲ್ಲೆಯರು ಇವನನ್ನು ಹಿಡಿದುಕೊಂಡು ಎಲಾ ಎಲಾ ಮೋಸಗಾರ! ಇಷ್ಟು ಹೊತ್ತು ಏಕಾಯಿತು? ಬಹಳ ಪ್ರೀತಿಯುಳ್ಳವನಂತೆ ಗುರುತುಗಳನ್ನು ಹೇಳಿಬಿಟ್ಟೆ? ಇದುವರೆಗೂ ಎಲ್ಲಿದ್ದೆ? ಎಂದು ಮೂದಲಿಸುತ್ತಾ ವಕುಳಪುಷ್ಪದ ಮಾಲಿಕೆಯಿಂದ ಇವನನ್ನು ಕಟ್ಟಿ, ಪ್ರಣಯಕೋಪಾತಿಶಯದಿಂದ ನಡುಗುತ್ತಾ ಕೈಬಳೆಗಳು ಉಲಿಯುತ್ತಿರಲಾಗಿ ಹೂವಿನ

ವ|| ಮತ್ತಮಶೋಕತರುವಿನಂತೆ ತರುಣೀಪದಪ್ರಹಾರಸಂಕ್ರಾತಾಲಕ್ತಕರಾಗಮಂ ತಾಳ್ದಿಯುಂ ಹಂಸನಂತೆ ರಮಣೀಯ ನೂಪುರ ನಿನಾದಾನಂದಿತ ಮಾನಸಸರೋವರದೊಳ್ ಚರಿಸಿಯುಂ ಭ್ರಮರದಂತೆ ಕುಸುಮಮಂಜರೀರಂಜಿತ ಲತಾಭವನಂಗಳೊಳ್ ಭ್ರಮಿಸಿಯುಂ ಕಾಮಿನೀಜನದತ್ತ ಸಂಕೇತಸದನಂಗಳೊಳ್ ಭ್ರಮಿಸಿಯುಂ ಬಹುಳನಿಶಾಪ್ರದೋಷಂಗಳೊಳ್ ವಿಘಟಿತ ಕನನಕವಾಟವಾತಾಯನಂಗಳಪ್ಪ ಮಹಾಪ್ರಾಸಾದನಂಗಳೊಳ್ ಸುೞದುಂ ಪರಿಮಿತಾಪ್ತಜನದೊಡನಂತಪುರಕಾಮಿನೀಪರಿವೃತನನೇಕ ವೀಣಾ ವೇಣು ಮುರಜಮನೋಹರಂಗಳಪ್ಪ ಸಂಗೀತಂಗಳಿಂ ವಿಸ್ತರಿಸಿಯುಂ ಅತಿರಮಣೀಯಮಭಿತಮವಿರುದ್ಧವೆನಿಪ ವಿಷಯಸುಖಾರ್ಣವದೊಳ್ ಮೂಡಿ ಮುೞುಡುತ್ತಮಿರ್ದನಂತು ಮಲ್ಲದೆಯುಂ

ಪ್ರತಿಪಾಲಿಸಿ ವಸುಮತಿಯಂ
ಕೃತಾರ್ಥರೆನಲಿಂತು ವಿಷಯತತಿಗೆಳಸಲ್ ಭೂ
ಪತಿಗಳ ಭೂಷಣಮೆನಿಸುಗು
ಮಿತರರ್ಗಾ ವಿಷಯತತಿವಿಡಂಬನಮಲ್ತೇ                                  ೩೧

ಎನಿತೊಳವು ವಿಷಯಸಮುದಯ
ಮನಿತೆಳಂದಂದು ಪರಮಸುಖಮಂ ಪಡೆದುಂ
ತನಯಮುಖಾಲೋಕನಸುಖ
ಮನದೊಂದನೆ ಪಡೆದನಿಲ್ಲ ತಾರಾಪೀಡಂ                                    ೩೨

ಧರಣೀಪಾಲಸಹಸ್ರಸಂವೃತನೆನಲ್ ಸಂದಿರ್ದುಮೇಕಾಕಿಯಂ
ತಿರೆ ಪೃಥ್ವೀವಲಯಾವಲಂಬನೆನೆ ಸಂದಿರ್ದು ನಿರಾಲಂಬನಂ
ತಿರೆ ಕರ್ಣಾಂತ ವಿಶಾಲಲೋಚನನೆನಲ್ ಸಂದಿರ್ದುಮಂದಂಧನಂ
ತಿರೆ ತನ್ನಂ ಬಗೆವಂ ತನೂಜರಹಿತಂ ವಿಶ್ವಂಭರಾವಲ್ಲಭಂ                   ೩೩

ವ|| ಮತ್ತಮಾ ಧರಾಶ್ವರಂಗೆ ಹರಜಟಾಕಲಾಪಕ್ಕೆ ಚಂದ್ರಲೇಖೆಯಂತೆ ನಾರಾಯಣ ವಕ್ಷಸ್ಥಲಕ್ಕೆ ಕೌಸ್ತುಭಪ್ರಭೆಯಂತೆ ದಿಗ್ಗಜಕ್ಕೆ ಮದಲೇಖೆಯಂತೆ ವಸಂತಸಮಯಕ್ಕೆ ಕುಸುಮೋದ್ಗಮದಂತೆ ಮಾನಸಸರೋವರಕ್ಕೆ ಹಂಸಮಾಲೆಯಂತೆ ಮಲಯಾಚಲಕ್ಕೆ ಚಂದನರಾಜಿಯಂತೆ ವಿಲಾಸವತಿಯೆಂಬಳಂತಪುರಪ್ರಧಾನೆಯೆನಿಸಿದ ಮಹಾದೇವಿಯರಮನೆಗೆ ದಿನದಿನಂ ತಾರಾಪೀಡನರೇಂದ್ರಂ ಬರುತ್ತಮಿರಲನ್ನೆಗಂ

ಮಾಲೆಯಿಂದ ಹೊಡೆಯುತ್ತಿರಲು ಆ ರಾಜನು ಶೃಂಗಾರರಸದ ಸಾರವೇ ಉಕ್ಕುತ್ತಿರಲಾಗಿ ಪೆಟ್ಟುಗಳನ್ನು ತಿನ್ನುತ್ತಿದ್ದನು. ವ|| ಮತ್ತು ತಾರಾಪೀಡನು ಅಶೋಕವೃಕ್ಷದಂತೆ ತರುಣಿಯರ ಕಾಲಿನ ಒದೆತದಿಂದ ಅಂಟಿಕೊಂಡಿರುವ ಅರಗಿನ ರಸದ ಕೆಂಪನ್ನು ತಾಳಿದವನಾಗಿಯೂ, ಹಂಸಪಕ್ಷಿಯಂತೆ ಮನೋಹರವಾದ ಕಾಲ್ಗಡಗದ ಧ್ವನಿಯಿಂದ ಆನಂದವನ್ನು ಅನುಭವಿಸುವ ಮನಸ್ಸೆಂಬ ಮಾನಸಸರೋವರದಲ್ಲಿ ಸಂಚರಿಸುತ್ತಲೂ, ಹಾಗೆಯೆ ದುಂಬಿಯಂತೆ ಹೂವಿನ ಗೊಂಚಲುಗಳಿಂದ ರಂಜಿತವಾದ ಬಳ್ಳಿಮನೆಗಳಲ್ಲಿ ಸಂಚರಿಸುತ್ತಿರಲೂ, ಕೃಷ್ಣಪಕ್ಷದ ರಾತ್ರಿಗಳಲ್ಲಿ ನಲ್ಲೆಯರಿಂದ ಸೂಚಿಸಲ್ಪಟ್ಟ ಸಂಕೇತಗೃಹಗಳಲ್ಲಿ ಸಂಚರಿಸುತ್ತಲೂ, ತೆರೆಯಲ್ಪಟ್ಟ ಚಿನ್ನದ ಬಾಗಿಲು ಮತ್ತು ಕಿಟಕಿಗಳುಳ್ಳ ದೊಡ್ಡ ದೊಡ್ಡ ಮಹಡಿಮನೆಗಳಲ್ಲಿ ಸುಳಿದಾಡುತ್ತಲೂ ಪರಿಮಿತವಾದ ಆಪ್ತಜನರೊಂದಿಗೆ ಬಗೆಯ ವೀಣೆ, ಕೊಳಲು, ಮೃದಂಗ ಮೊದಲಾದವುಗಳಿಂದ ಇಂಪಾದ ಸಂಗೀತಗಳನ್ನು ಹೆಚ್ಚಿಸುತ್ತಲೂ, ಬಹಳ ರಮಣೀಯವಾದ, ಹಾಗೂ ಇಷ್ಟವಾದ, ಧರ್ಮಕ್ಕೆ ವಿರುದ್ಧವಲ್ಲದ ಸಂಸಾರಸುಖವೆಂಬ ಸಮುದ್ರದಲ್ಲಿ ಮುಳುಗಿ ಓಲಾಡುತ್ತಿದ್ದನು. ಅದಲ್ಲದೆ, ೩೧. ಭೂಮಿಯನ್ನು ಚೆನ್ನಾಗಿ ಆಳುತ್ತಾ ಕೃತಾರ್ಥರೆನಿಸಿಕೊಂಡಿರುವ ಮಹಾರಾಜರಿಗೆ ಈ ಬಗೆಯ ಸಂಸಾರಸುಖದಲ್ಲಿ ಓಲಾಡುವುದು ಭೂಷಣವೆನಿಸುತ್ತದೆ. ಆದರೆ ಇತರ ರಾಜರಿಗೆ ಅದು ಅಪಹಾಸ್ಯಕರವಾಗುತ್ತದೆ. ೩೨. ಈ ತಾರಾಪೀಡನು ಪ್ರಪಂಚದಲ್ಲಿ ಸಂಸಾರಸುಖಗಳು ಎಷ್ಟಿವೆಯೋ ಅಷ್ಟನ್ನೂ ಅನುಭವಿಸುತ್ತಾ ಪರಮಸುಖವನ್ನು ಪಡೆದಿದ್ದರೂ ಮಕ್ಕಳ ಮುಖವನ್ನು ನೋಡುವ ಭಾಗ್ಯವೊಂದನ್ನು ಅವನು ಇನ್ನೂ ಪಡೆದಿರಲಿಲ್ಲ. ೩೩. ಆದ್ದರಿಂದ ಆ ಚಕ್ರವರ್ತಿಯು ಸಾವಿರಾರು ರಾಜರುಗಳಿಂದ ಓಲೈಸಲ್ಪಡುತ್ತಿದ್ದರೂ ಒಬ್ಬಂಟಿಗನಂತೆ ಆಗಿದ್ದನು. ಇಡೀ ಭೂಮಂಡಲಕ್ಕೆ ಆಶ್ರಯಭೂತನಾಗಿದ್ದರೂ ತಾನು ನಿರಾಶ್ರಯನಂತಿದ್ದನು. ಕಿವಿಯವರೆಗೂ ಹರಡಿಕೊಂಡಿರುವ ವಿಶಾಲವಾದ ಕಣ್ಣುಗಳಿದ್ದರೂ ಕುರುಡನಂತಾಗಿದ್ದನು. ವ|| ಮತ್ತು ಆ ಮಹಾರಾಜನಿಗೆ ಪರಮೇಶ್ವರನ ಜಡೆಯ ಗಂಟಿಗೆ ಚಂದ್ರನ ಕಳೆಯಂತೆಯೂ, ಶ್ರೀಮನ್ನಾರಾಯಣನ ವಕ್ಷಸ್ಥಳಕ್ಕೆ ಕೌಸ್ತುಂಭಮಣಿಯ ಕಾಂತಿಯಂತೆಯೂ, ದಿಗ್ಗಜಕ್ಕೆ ಮದೋದಕದ ಧಾರೆಯಂತೆಯೂ, ವಸಂತಕಾಲಕ್ಕೆ ಹೂವುಗಳ ಉತ್ಪತ್ತಿಯಂತೆಯೂ, ಮಾನಸಸರೋವರಕ್ಕೆ ಹಂಸಮಾಲೆಯಂತೆಯೂ, ಮಲಯಾಚಲಕ್ಕೆ ಗಂಧದ ಮರಗಳ ಪಂಕ್ತಿಯಂತೆಯೂ ಅವನ ರಾಣಿವಾಸಕ್ಕೆ ವಿಲಾಸವತಿ ಎಂಬವಳು ಪ್ರಧಾನೆಯಾಗಿದ್ದಳು. ಪಟ್ಟದ ರಾಣಿಯಾದ ಅವಳ ಅಂತಪುರಕ್ಕೆ ತಾರಾಪೀಡನು

ಪಡಿಯಱಕೆಯ ಸೀಗುರಿವಿಡಿ
ವಡಪದ ಕನ್ನಡಿಯ ಪಡಿಗದಾಕೆಗಳೆಲ್ಲಂ
ಮಿಡುಕಲಣಮಱಯದಿರ್ದಿ
ರ್ದೆಡೆಯೊಳ್ ಬೆಱಗಾಗಿ ಮೂಗರಂದದಿನಿರ್ದರ್                          ೩೪

ವ|| ಆಗಳಂತಪುರವೃದ್ಧಾಂಗನಾಶ್ವಾಸ್ಯಮಾನೆಯುಮವಿರಳಾಶ್ರುಬಿಂದುಧಾರಾರ್ದ್ರೀಕೃತ

]ಕೂಲೆಯುಮನಳಂಕೃತೆಯುಂ ವಾಮಕರತಳ ವಿನಿಹಿತಮುಖಕಮಳೆಯುಂ ಪರ್ಯಂಕೋಪವಿಷ್ಟೆಯುಮಾಗಳುತ್ತಿರ್ದ ವಿಳಾಸವತಿಮಹಾದೇವಿಯಂ ತಾರಾಪೀಡನರೇಂದ್ರಂ ಕಂಡು ಕೃತಪ್ರತ್ಯುತ್ಥಾನೆಯಾದ ನಲ್ಲಳಂ ಮೆಲ್ಲನೆ ಕುಳ್ಳಿರಿಸಿ ಮೆಲ್ಲನೆ ಕುಳ್ಳಿರ್ದಜ್ಞಾತ ಕಾರಣಂ ಬಾಷ್ಪವಿದೆಂದಾತ್ಮಕರತಳದಿಂದಾ ಕುಟಿಲಾಳಕಿಯ ನಯನಜಲಂಗಳಂ ತೊಡೆದು

ನಸುದೆಯುತ್ತಮಿರ್ದ ಪೊಸಮುತ್ತಿನ ಸಿಂಪಿನ ಸಂಪುಟಂಗಳಿಂ
ನುಸುಳ್ದು ಸುಪಾಣಿಯಾಗಿ ಪೊಱಪೊಣ್ಮುವ ಮುತ್ತಿನ ಮಾಲೆಯಂದದಿಂ
ಮಿಸುಗಿ ನಿರಂಜನಂಗಳೆನಿಪಕ್ಷಿಪುಟಾಂತರದಿಂದಮೇಕೆ ಪೇೞು
ಪಸರಿಸಿ ನೀಳ್ದು ಪೊಣ್ಮಿದುವು ಕಣ್ಬನಿಗಳ್ ತರಳಾಯತೇಕ್ಷಣೇ            ೩೫

ಕೆಂದಾವರೆ ಚೆಂಬಿಸಿಲಿಂ
ದೊಂದುವ ತೆಱದಿಂದೆ ನಿನ್ನ ಮೃದುಪದಯುಗಮೆಂ
ದೆಂದಿನವೊಲಲಕ್ತಕರಸ
ದಿಂದಂ ಪೇೞೊಂದಿತಿಲ್ಲಿದೇನಿಂದುಮುಖೀ                                 ೩೬

ಸ್ಮರರಾಜಿಕೇಳಿಕಮಲಾ
ಕರಕಳಹಂಸಗಳೆನಿಸಿ ಸೊಗಯಿಪ ಮಣಿನೂ
ಪುರಯುಗಳಂ ನಿನ್ನ ಪದಾಂ
ಬುರುಹಮನೊಂದಲ್ಕೆ ಪಡೆಯದಿಂದಿನ ತೆಱನೇಂ                         ೩೭

ಊರುಯುಗಸ್ತಂಭೋದ್ಗತ
ತೋರಣಮೆಂಬಂತೆ ಮಿಸುಗುವುಡಿನೂಲಿಂದೇಂ
ಕಾರಣದಿಂ ಕಟ್ಟದು ನೀ
ರೇರುಹದಳನಯನೆ ನಿಜನಿತಂಬಸ್ಥಳದೊಳ್                                 ೩೮

ಪ್ರತಿನಿತ್ಯವೂ ಬಂದು ಹೋಗುತ್ತಿದ್ದನು. ೩೪. ಹೀಗಿರಲು ಒಮ್ಮೆ ರಾಜನು ಬಂದಾಗ ಬಾಗಿಲುಕಾಯುವ, ಚಾಮರವನ್ನು ಹಿಡಿಯುವ, ತಾಂಬೂಲದ ಚೀಲವನ್ನು ಹಿಡಿಯುವ ಊಳಿಗದ ಹೆಂಗಸರೆಲ್ಲರೂ ಅಲುಗಾಡಲೂ ತಿಳಿಯದವರಾಗಿ ಇದ್ದ ಇದ್ದ ಸ್ಥಳದಲ್ಲೇ ಮೂಗರಂತೆ ಇದ್ದರು. ವ|| ಆಗ ರಾಣೀವಾಸದ ವೃದ್ಧ ಸ್ತ್ರೀಯರಿಂದ ಸಮಾಧಾನಗೊಳಿಸಲ್ಪಡುತ್ತಿರುವ, ಒಂದೇಸಮನೆ ಹರಿಯುತ್ತಿರುವ ಕಣ್ಣೀರಿನ ಹನಿಗಳ ಧಾರೆಯಿಂದ ಒದ್ದೆಯಾದ ರೇಷ್ಮೆಸೀರೆಯುಳ್ಳವಳಾದ, ಅಲಂಕಾರ ಮಾಡಿಕೊಳ್ಳದಿರುವ ತನ್ನ ಎಡ ಅಂಗೈಮೇಲೆ ಕಮಲದಂತಿರುವ ಮುಖವನ್ನು ಇಟ್ಟುಕೊಂಡಿರುವ, ಮಂಚದ ಮೇಲೆ ಕುಳಿತುಕೊಂಡಿರುವ, ಹಾಗೂ ಆಳುತ್ತಿರುವ ವಿಲಾಸವತಿ ಮಹಾರಾಣಿಯನ್ನು ತಾರಾಪೀಡಮಹಾರಾಜನು ಕಂಡು ತನ್ನನ್ನು ಕಂಡೊಡನೆ ಮೇಲಕ್ಕೆ ಎದ್ದುನಿಂತ ಮಡದಿಯನ್ನು ಮೆಲ್ಲಗೆ ಕುಳ್ಳಿರಿಸಿ ತಾನೂ ಕುಳಿತುಕೊಂಡು ಈ ಕಣ್ಣೀರಿಗೆ ಕಾರಣವೇ ತಿಳಿಯದೆಂದು ಹೇಳುತ್ತ ತನ್ನ ಕೈಯಿಂದ ಕೊಂಕುಕುರುಳಿನ ನಲ್ಲೆಯ ಕಣ್ಣೀರನ್ನು ತೊಡೆದು ಹೀಗೆಂದನು. ೩೫. “ಎಲೌ, ಚಂಚಲವಾಗಿಯೂ ಅಗಲವಾಗಿಯೂ ಇರುವ ಕಣ್ಣುಳ್ಳವಳೆ, ಸ್ವಲ್ಪ ಮಟ್ಟಿಗೆ ಬಾಯಿಬಿಡುತ್ತಿರುವ ಹೊಸದಾದ ಮುತ್ತಿನ ಚಿಪ್ಪಿನ ಸಂಪುಟಗಳಿಂದ ನುಸುಳಿ ಮಿಂಚುತ್ತ ಹೊರಹೊಮ್ಮುತ್ತಿರುವ ಮುತ್ತಿನ ಮಾಲಿಕೆಯಂತೆ ಪ್ರಕಾಶಿಸುವ ಈ ಕಣ್ಣೀರುಗಳು ಕಾಡಿಗೆಯನ್ನು ಹಚ್ಚಿಕೊಳ್ಳದಿರುವ ಕಣ್ಣುಗಳಿಂದ ಏಕೆ ಹೀಗೆ ದೀರ್ಘವಾಗಿ ಹೊರಹೊಮ್ಮಿ ಹರಿಯುತ್ತಿವೆ? ೩೬. ಎಲೌ ಚಂದ್ರಮುಖಿಯೆ, ಕೆಂದಾವರೆಯು ಎಳೆಬಿಸಿಲಿನಿಂದ ಕೂಡಿಕೊಳ್ಳುವಂತೆ ನಿನ್ನ ಮೃದುವಾದ ಪಾದಗಳು ಎಂದಿನಂತೆ ಅರಗಿನ ರಸದ ಲೇಪನದಿಂದ ಏಕೆ ಕೂಡಿಕೊಂಡಿಲ್ಲ? ೩೭. ಮನ್ಮಥನ ಕ್ರೀಡಾಸರೋವರದಲ್ಲಿ ಇರುವ ರಾಜಹಂಸಗಳಂತಿರುವ ರತ್ನದ ಕಾಲ್ಕಡಗಗಳು ನಿನ್ನ ಪಾದಕಮಲವನ್ನೇಕೆ ಇಂದು ಅಲಂಕರಿಸಿಲ್ಲ, ಇದೇಕೆ ಹೀಗೆ? ೩೮. ನಿನ್ನ ತೊಡೆಗಳೆಂಬ ಕಂಭಗಳಿಗೆ ಕಟ್ಟಿರುವ ತೋರಣದಂತೆ ಶೋಭಿಸುವ ಒಡ್ಯಾಣವನ್ನು

ಮೃಗಲಾಂಛನಮಂಡಳದೊಳ್
ಮೃಗತನು ಮಿಸುಪಂತೆ ನಿನ್ನ ಕುಚಮಂಡಳದೊಳ್
ಮೃಗಮದ ವಿಚಿತ್ರಪತ್ರಂ
ಮೃಗಲೋಚನೆ ಬರೆಯದಿರ್ದುದಿಂದಿನ ತೆಱನೇಂ                         ೩೯

ಲಲಿತ ಲತಾಂಗುಲಿದಳಸಂ
ಕಲಿತಂ ಕರತಳಮಿದೇಕೆ ಕೋಮಳೆ ಕದಪಂ
ತಳೆದು ದರದಳಿತ ರಕ್ತೋ
ತ್ಪಲದಂದದೆ ಕರ್ಣಪೂರಮಾದತ್ತೀಗಳ್                                   ೪೦

ಒಗೆತರ್ಪ ಬಹುಳಬಾಷ್ಪಾಂ
ಬುಗಳಿಂದಂ ಧೌತಮಾದುವೇಕೆಯೊ ನಿನ್ನೀ
ಸೊಗಯಿಪ ಕಪೋಲಪಾಳೀ
ಯುಗಳದ ಕಾಶ್ಮೀರಮಕರಿಕಾಪತ್ರಂಗಳ್                                           ೪೧

ಪೊಳೆವೆಳೆವೆಯಂ ತನ್ನೊಳ್
ತಳೆಯದ ಕಾರಿರುಳ ತೆಱದ ಕುಸುಮಾವಳಿಯಂ
ತಳೆಯದ ನಿನ್ನ ಬಳಲ್ಮುಡಿ
ಬಳಯಿಸಿದಪುದೆನ್ನ ಮನಕೆ ಖೇದಮನೀಗಳ್                                        ೪೨

ಒದವಿದ ನಿಜಖೇದಕ್ಕಾ
ವುದು ಕಾರಣಮತಿವಿರಕ್ತಮೆನಿಸಿರ್ದೆನ್ನೀ
ಹೃದಯಂ ನವಪಲ್ಲವದಂ
ದದೆ ಕಂಪಿಸಿದಪುದು ಕಂಡು ನಿನ್ನೀ ತೆಱನಂ                                        ೪೩

ಎನ್ನಿಂದಾದತ್ತೊ ಮೇಣೆನ್ನಯ ಪರಿಜನದಿಂದಾದುದೊ ನೋವು ನೋೞ್ಪಂ
ತೆನ್ನೊಳ್ ತಪ್ಪಪ್ಪೊಡೆಂದುಂ ಸಮನಿಸಿದುದನಾನೇನುಮಂ ಕಾಣೆನಿಂತಿ
ರ್ದೆನ್ನೀ ಸಾಮ್ರಾಜ್ಯಮುಂ ಜೀವಿತಮುಮಿವು ನಿನಗಾಯತ್ತಮಾಗಿರ್ದೊಡಂ ಪೇೞು
ನಿನ್ನೀ ಶೋಕಕ್ಕಿದೇಂ ಕಾರಣಮಱದಪೆನಿಲ್ಲೀಗಳಂಭೋಜನೇತ್ರೇ                  ೪೪

ಇಂದು ನಿನ್ನ ಸೊಂಟಕ್ಕೆ ಕಟ್ಟಿಲ್ಲವಲ್ಲ, ಇದಕ್ಕೆ ಕಾರಣವಾದರೂ ಏನು? ೩೯. ಎಲೌ ಜಿಂಕೆಗಣ್ಣಿನ ನಲ್ಲೆ! ನಿನ್ನು ಸ್ತನಗಳ ಮೇಲೆ ಕಸ್ತೂರಿಯಿಂದ ವಿಚಿತ್ರವಾದ ಚಿತ್ರಗಳನ್ನು ಬರೆದಿದ್ದರೆ ಚಂದ್ರಮಂಡಲದಲ್ಲಿ ಜಿಂಕೆಯಂತಿರುವಂತೆ ಪ್ರಕಾಶಿಸುತ್ತಿತ್ತು. ಇಂದು ಅದನ್ನು ಬರೆದಿಲ್ಲ ಅದೇಕೆ? ೪೦. ಎಲೌ ಕೋಮಲಾಂಗಿ, ನಿನ್ನ ಸುಂದರವಾದ ಬೆರಳುಗಳುಳ್ಳ ಈ ಅಂಗೈಯನ್ನು ಕೆನ್ನೆಯ ಮೇಲೆ ಏಕೆ ಇಟ್ಟುಕೊಂಡಿರುವೆ? ಇದು ಸ್ವಲ್ಪ ಅರಳಿರುವ ಕೆಂದಾವರೆಯಂತೆ ಶೋಭಿಸುತ್ತ ನಿನ್ನ ಕಿವಿಗೆ ಒಡವೆಯಂತೆ ಆಗಿದೆ. ೪೧. ಕೆನ್ನೆಯ ಮೇಲೆ ಕುಂಕುಮಕೇಸರಿಯಿಂದ ಬರೆದಿರುವ ಮಕರಿಕಾಪತ್ರರಚನೆಯು ಒಂದೇಸಮನೆ ಸುರಿಯುತ್ತಿರುವ ಹೆಚ್ಚಾದ ಕಣ್ಣೀರುಗಳಿಂದ ತೊಳೆದುಹೋಗಿಬಿಟ್ಟಿದೆ. ಇದಕ್ಕೇನು ಕಾರಣ? ಟಿ. ಹಿಂದಿನ ಕಾಲದಲ್ಲಿ ಹೆಂಗಸರ ಎದೆ, ಕೆನ್ನೆಗಳ ಮೇಲೆ ಕುಂಕುಮಕೇಸರಿ ಮೊದಲಾದ ಬಣ್ಣಗಳಿಂದ ಮೊಸಳೆ, ಮೀನು ಮೊದಲಾದ ಚಿತ್ರಗಳನ್ನು ಬರೆಯುತ್ತಿದ್ದರು. ಇದಕ್ಕೆ ಮಕರಿಕಾಪತ್ರರಚನೆ, ಪತ್ರರಚನೆ ಎಂದು ಹೆಸರು. ೪೨. ಚಂದ್ರನಿದ್ದರಲ್ಲವೆ ರಾತ್ರಿಗೆ ಶೋಭೆ. ಹೂವಿನ ದಂಡೆಯನ್ನು ಮುಡಿದುಕೊಳ್ಳದಿರುವ ನಿನ್ನ ನೀಳವಾದ ಕೇಶಪಾಶವು ಹೊಳೆ ಹೊಳೆಯುತ್ತಿರುವ ಬಾಲಚಂದ್ರನು ಹುಟ್ಟದಿರುವಾಗ ಕಗ್ಗತ್ತಲೆಯಾಗುವ ರಾತ್ರಿಯಂತೆ ನನ್ನ ಮನಸ್ಸಿಗೆ ಖೇದವನ್ನುಂಟುಮಾಡುತ್ತಿದೆ. ೪೩. ಈಗ ನಿನಗೆ ಉಂಟಾಗಿರುವ ಮನೋವ್ಯಥೆಗೆ ಕಾರಣವೇನು? ಹೊಸ ಚಿಗುರಿನಂತೆ “ವಿರಕ್ತವಾಗಿರುವ” (೧. ಕೆಂಪಗಿರುವ, ೨. ಬೇಸರಿಕೆಯಿಂದ ಕೂಡಿರುವ) ನನ್ನ ಮನಸ್ಸು ನಿನ್ನ ಈ ಬಗೆಯನ್ನು ಕಂಡು ನಡುಗುತ್ತಿದೆ. ೪೪. ನಿನ್ನ ಈ ಮನೋವ್ಯಥೆಯು ನನ್ನ ದೆಸೆಯಿಂದ ಒದಗಿದೆಯೊ? ಅಥವಾ ನನ್ನ ಪರಿಜನರ ದೆಸೆಯಿಂದ ಒದಗಿದೆಯೊ? ನೋಡಿದರೆ ನನ್ನಿಂದ ನಿನ್ನ ವಿಷಯದಲ್ಲಿ ಎಂದೂ ಯಾವ ತಪ್ಪೂ ಉಂಟಾಗಿರುವಂತೆ ನನಗೆ ಕಂಡುಬರುವುದಿಲ್ಲ. ಈ ನನ್ನ ಚಕ್ರಾಪತ್ಯವೂ ನನ್ನ ಪ್ರಾಣವೂ ನಿನಗೆ ಅನವಾಗಿದೆ.

ವ|| ಎಂದು ಶೋಕಕಾರಣಮನೆಂತುಂ ಬೆಸಗೊಂಡೊಡಂ ಪೇೞದೆ ವಿಳಾಸವತಿಮಹಾದೇವಿ ಬಾಷ್ಪಾಂಬುಸಂತತಿಯನೆ ಸುರಿಯುತ್ತು ಮಿರ್ಪುದುಂ ಕೆಲದೊಳಿರ್ದ ಸಖೀಕದಂಬದ ಮೊಗಮಂ ನೋಡೆ ಸಂತತಸನ್ನಿಹಿತೆಯಪ್ಪ ತಾಂಬೂಲಕರಂಕವಾಹಿನಿ ಮಕರಿಕೆಯೆಂಬಳಿಂತೆದಳ್

ಅರಸಿಯ ನೆಗೞ್ತೆ ನೋಡಲ್
ಪಿರಿದುಂ ವಿಸ್ಮಯಮನಾಗಿಪುದು ದೇವ ಮನೋ
ಹರವೆನಿಪ ರಾಜ್ಯವಿಭವದ
ಪರಮಸುಖಂ ತನಗೆವಿಫಳಮಾದವೊಲೀಗಳ್                             ೪೫

ಮನೆಯೊಳ್ ಮಱುಗುತ್ತಿರೆ ಮ
ಜ್ಜನಭೋಜನಭೂಷಣಂಗಳೆಂಬಿವುಮಂ ಪ್ರಾ
ರ್ಥನೆಗೆಯ್ದು ದೇವ ನಿಚ್ಚಮು
ಮನುವಿಸಿ ನೆಗೞಪುದು ಪರಿಜನಂ ಮಾನಿನಿಯಾ                          ೪೬

ವ|| ಅದಲ್ಲದೆಯುಮಿಂದುವರಂ ದೇವರ ಮನಂ ನೊಂದಪುದೆಂದು ಮನಂದೋಱದಿರ್ಪಳಿಂದು ಮಹಾಕಾಳದೇವರಂ ಪೂಜಿಸುತ್ತ ಮಿರ್ಪಲ್ಲಿ ಭಾರತಕಥಾಶ್ರವಣದೊಳ್ ಪುನ್ನಾಮೋ ನರಕಾತ್ತ್ರಾಯತ ಇತಿ ಪುತ್ರ ಅಪುತ್ರಾಣಾಂಕಿಲ ಗತಿರ್ನಾಸ್ತಿ ನವಾಸಂತಿ ಲೋಕಾ ಶುಭಾ ಎಂಬೀ ವಾಕ್ಯಾರ್ಥಮಂ ಕೇಳ್ದು

ಅಂತು ಮನೆಗಾಗಳೇ ಬಂ
ದಂತಸ್ಸಂತಾಪಮೊದವೆ ಬಾಷ್ಪಾಂಬುವನೋ
ರಂತೆ ಸುರಿಯುತ್ತಮಿರ್ದಪ
ಳೆಂತುಂ ಸಂತೈಸಲಾರ್ತೆನಿಲ್ಲವನೀಪತೀ                           ೪೭

ಇಲ್ಲಿಂದಿತ್ತಲ್ ದೇವರ್
ಬಲ್ಲಿರೆನುತ್ತುಸಿರದಿರ್ಪುದುಂ ಮಕರಿಕೆ ಭೂ
ವಲ್ಲಭನಱದಾಗಳ್ ನಿಜ
ವಲ್ಲಭೆಯಂ ನೋಡಿ ದುಖದಿಂ ಬಿಸುಸುಯ್ದಂ                                ೪೮

ನಮಗಿಂತಾದುದು ದೈವಮಾತ್ಮಜಪರಿಷ್ವಾಂಗಾಮೃತಾಸ್ವಾದ ಸೌ
ಖ್ಯಮದೆಂತುಂ ದೊರೆಕೊಂಡಿತಿಲ್ಲ ಹೃದಯಕ್ಕೋರಂತೆ ಮುಂ ಪುಣ್ಯಕ
ರ್ಮಮನಂತಾಗಿರೆ ಮಾಡದೀಗಳೞಲಿಂ ಪೇೞಂತೞುತ್ತಿರ್ದಳ
ಕ್ಕುಮೆ ಬೇಡಂಗನೆ ಮಾಣ್ಪುದೆಂದುಸಿರ್ದಂ ತಾರಾಪೀಡಚಕ್ರೇಶ್ವರಂ        ೪೯

ಎಲೈ ಕಮಲನೇತ್ರೆ! ನಿನ್ನ ಶೋಕಕ್ಕೆ ಏನು ಕಾರಣ ಎಂಬುದನ್ನು ನನಗೆ ತಿಳಿಯಪಡಿಸು.” ವ|| ಎಂದು ದುಖಕ್ಕೆ ಕಾರಣವನ್ನು ಎಷ್ಟು ಕೇಳಿದರೂ ಹೇಳದೆ ವಿಲಾಸವತಿ ಮಹಾರಾಣಿಯು ಕಣ್ಣೀರಿನ ಧಾರೆಯನ್ನು ಸುರಿಸುತ್ತಾ ಪಕ್ಕದೊಳಿದ್ದ ಗೆಳತಿಯರ ಮುಖವನ್ನು ನೋಡಲಾಗಿ ಯಾವಾಗಲೂ ಜೊತೆಯಲ್ಲೇ ಇರುವ ಹಡಪದವಳತಿಯಾದ ಮಕರಿಕೆ ಎಂಬುವಳು ಹೀಗೆ ಹೇಳಿದಳು. ೪೫. “ಪ್ರಭುವೆ, ರಾಣಿಯ ಕೆಲಸವನ್ನು ನೋಡಿದರೆ ಬಹಳ ಆಶ್ಚರ್ಯವುಂಟಾಗುತ್ತದೆ. ಈ ಮನೋಹರವಾದ ರಾಜ್ಯಸಂಪತ್ತಿನ ಪರಮಸೌಖ್ಯವೆಲ್ಲವೂ ತನಗೆ ವ್ಯರ್ಥವಾದಂತೆ ಅವಳು ಭಾವಿಸಿದ್ದಾಳೆ. ೪೬. ಹೀಗೆ ಅವಳು ಅರಮನೆಯಲ್ಲಿ ಮರುಗುತ್ತಾ ಇರುತ್ತಾಳೆ. ಅವಳಿಗೆ ಯಾವುದರಲ್ಲೂ ಆಸಕ್ತಿಯಿಲ್ಲ. ಪರಿಜನರು ಪ್ರತಿನಿತ್ಯವೂ ಪ್ರಾರ್ಥಿಸಿ ಸಮಾಧಾನಪಡಿಸಿ, ಸ್ನಾನ, ಊಟ, ಅಲಂಕಾರಗಳನ್ನು ಮಾಡಿಸುತ್ತಾರೆ. ವ|| ಅದಲ್ಲದೆ ಇಲ್ಲಿಯವರೆಗೂ ಮಹಾಸ್ವಾಮಿಯವರ ಮನಸ್ಸಿಗೆ ನೋವಾಗುವುದೆಂದು ತನ್ನ ವ್ಯಥೆಯನ್ನು ತಮ್ಮೆದುರಿನಲ್ಲಿ ತೋರ್ಪಡಿಸಿ ಕೊಳ್ಳುತ್ತಿರಲಿಲ್ಲ. ಆದರೆ ಈ ದಿನ ಮಹಾಕಾಳೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿರಲಾಗಿ ಅಲ್ಲಿ ಮಹಾಭಾರತ ಕಥಾಶ್ರವಣದಲ್ಲಿ “ಪುತ್ ಎಂಬ ಹೆಸರುಳ್ಳ ನರಕದ ದೆಸೆಯಿಂದ ಕಾಪಾಡುವವನೇ ಪುತ್ರ. ಮಕ್ಕಳಿಲ್ಲದವರಿಗೆ ಸದ್ಗತಿ ಎಂಬುದಿಲ್ಲ ಮತ್ತು ಮಂಗಳಕರವಾದ ಪರಲೋಕವೂ ಇಲ್ಲ” ಎಂಬ ವಾಕ್ಯದ ಅರ್ಥವನ್ನು ಕೇಳಿ, ೪೭. ಕೂಡಲೆ ಅಲ್ಲಿ ಒಂದು ಕ್ಷಣವೂ ನಿಲ್ಲದೆ ಅರಮನೆಗೆ ಬಂದು ಮನದೊಳಗೆ ಬೇಗುದಿಯುಂಟಾಗಲು ಒಂದೇಸಮನೆ ಕಣ್ಣೀರು ಸುರಿಸುತ್ತಾ ಇದ್ದಾರೆ. ಏನಾದರೂ ಸಮಾಧಾನಪಡಿಸಲು ಸಾಧ್ಯವಾಗುತ್ತಿಲ್ಲ, ಮಹಾಸ್ವಾಮಿ, ೪೮. ಇಲ್ಲಿಂದ ಮುಂದೆ ಪ್ರಭುಗಳ ಚಿತ್ತ” ಎಂದು ಮಕರಿಕೆ ಹೇಳುತ್ತಿರಲಾಗಿ ತಾರಾಪೀಡನು ವಿಷಯವನ್ನು ತಿಳಿದುಕೊಂಡು ತನ್ನ ಮಡದಿಯನ್ನು ನೋಡಿ ದುಖದಿಂದ ನಿಟ್ಟುಸಿರು ಬಿಟ್ಟನು. ೪೯. “ನಮ್ಮ ಅದೃಷ್ಟವೇ ಹೀಗಿದೆ ರಾಣಿ. ಮಕ್ಕಳನ್ನು ಎತ್ತಿ ತಬ್ಬಿಕೊಂಡು ಆನಂದವನ್ನು ಸವಿಯುವ ಭಾಗ್ಯವು ನಮ್ಮ ಹೃದಯಕ್ಕೆ ಲಭ್ಯವಾಗಿಲ್ಲ. ಹಿಂದೆ ಪುಣ್ಯಕರ್ಮಗಳನ್ನು ಮಾಡದೆ ಈಗ

ಗುರುಜನದಲ್ಲಿ ಮಾಡಕಭಕ್ತಿಯನರ್ಚಿಸು ದೇವರಂ ಮುನೀ
ಶ್ವರ ಪರಿಚರ್ಯೆಯೊಳ್ ಪಿರಿದುಮಾದೃತೆಯಾಗು ದಿಟಿಕ್ಕೆ ದಲ್ ಮುನೀ
ಶ್ವರರ್ಗಳೆ ದೈವಮೆಂದವರ ಪಾದಪಯೋರುಹಸೇವೆಯಲ್ಲಿ ತ
ತ್ಪರರೆನಿಪರ್ಗೆ ಪೇೞು ಪಡೆಯಲಾಱದುದೇಂ ತರಳಾಯತೇಕ್ಷಣೇ         ೫೦

ದನುಜಾರಿರುಪು ಜರಾಸಂ
ಧನೆಂಬ ಸುತನತಿರಥಂ ಬೃಹದೃಥನಾಮಾ
ವನಿಪಂಗೆ ಚಂಡಕೌಶಿಕ
ಮುನೀಂದ್ರನಿಂದಾದನೆಂಬುದಂ ಕೇಳ್ದಱಯಾ                                ೫೧

ಶರನ್ವಿಯಂದದಿಂದತಿಗಭೀರಗುಣೋನ್ನತಿಯಿಂ ಸಂದ ಮಂ
ದರಧರಬಾಹುಗಳ್ ವಸುಮತೀತಳರಕ್ಷಣದಕ್ಷರಪ್ಪ ನಾ
ಲ್ವರುಮವನೀಶರಂ ದಶರಥಂ ಪಡೆದಂ ತನುಜಾತರಂ ವಯ
ಷರಿಣತಿಯೊಳ್ ವಿಭಾಂಡಕಮಹಾಮುನಿಮುಖ್ಯವರಪ್ರಸಾದದಿಂ           ೫೨

ವ|| ಎನುತ್ತೆ ವಿಶ್ವಾನಂದಭವನನಪ್ಪಾತ್ಮಸಂಭವನನಾ ಮಹಾನುಭಾವಂ ಬಿಡದೆ ಭಾವಿಸಿ ನಿಜಪ್ರಾಣೇಶ್ವರಿಯ ಮೊಗಮಂ ನೋಡಿ

ಅಮೃತಕರನುದಯಮಾಗಲ್
ಸಮನಿಸೆ ತಳ್ತಿಂದ್ರದಿಗ್ವಧೂಮುಖದೊಳ್ ಬೆ
ಳ್ಪಮರ್ದಂತೆ ಗರ್ಭದಿಂದಂ
ಹಿಮಕರಮುಖಿಮುಖದೊಳೊಂದು ಬೆಳ್ಪೆಸೆದಪುದೋ ೫೩

ನಂದನಜನ್ಮೋತ್ಸವದೊದ
ವಿಂದಂ ಪರಿತಂದು ಪೂರ್ಣಪಾತ್ರಮನತ್ಯಾ
ನಂದಮೊದವಲ್ಕೆ ಪರಿಜನ
ಮೆಂದೆಳೆಕುಳಿಗೊಳ್ವ ಸೈಪು ಸಮನಿಸಿದಪುದೋ                                ೫೪

ಇನಬಿಂಬಂ ಕಣ್ಗಳುಂಬಂ ತೊಳಗಿ ಬೆಳಗೆ ಬಾಲಾತಪಂ ಸುತ್ತಲುಂ ಕಂ
ಪಿನ ಸೊಂಪಂ ಬೀ ಕಣ್ಗಿಟ್ಟಳವೆನಿಪ ನಭೋಲಕ್ಷಿ ಯೆಂಬಂತಿರುತ್ಸಂ
ಗನಿಷಣ್ಣಂ ನಂದನಂ ಕಣ್ಗೊಳಿಸುತಿರೆ ಹರಿದ್ರಾಂಶುಕಾಲಿಂಗಿತಾಂಗಂ
ತನಗೊಪ್ಪಲ್ಕೆಂದು ಮದ್ವಲ್ಲಭೆ ಮನಕೆ ಮಹೋತ್ಸಾಹಮಂ ಮಾಡಿದಪ್ಪಳ್            ೫೫

ಅಳಲಿನಿಂದ ಅಳುತ್ತಿದ್ದರೆ ಫಲವೇನು? ಹೇಳು. ಬೇಡ, ಅಳುವುದನ್ನು ನಿಲ್ಲಿಸು” ಎಂದು ತಾರಾಪೀಡ ಚಕ್ರವರ್ತಿಯು ಹೇಳಿದನು. ೫೦. “ಚಂಚಲವಾದ ಹಾಗೂ ಅಗಲವಾದ ಕಣ್ಣುಳ್ಳ ಸುಂದರಿ, ಗುರುಹಿರಿಯರಲ್ಲಿ ಹೆಚ್ಚು ಭಕ್ತಿಯನ್ನು ಮಾಡು. ದೇವರನ್ನು ಭಕ್ತಿಯಿಂದ ಪೂಜಿಸು. ಮಹರ್ಷಿಗಳ ಸೇವೆಯಲ್ಲಿ ಹೆಚ್ಚು ನಿರತಳಾಗು. ಏಕೆಂದರೆ ನಿಜವಾಗಿಯೂ ಋಷಿಗಳೇ ದೇವರು. ಅವರ ಪಾದಕಮಲ ಸೇವೆಯಲ್ಲಿ ಆಸಕ್ತರಾದವರಿಗೆ ಪಡೆಯಲಾಗದುದು ಯಾವುದೂ ಇಲ್ಲ. ೫೧. ಹಿಂದೆ ಬೃಹದ್ರಥನೆಂಬ ರಾಜನಿಗೆ ಚಂಡಕೌಶಿಕನೆಂಬ ಮುನೀಶ್ವರನ ವರದಿಂದ ಬಹಳ ಪರಾಕ್ರಮಶಾಲಿಯಾದ ಶ್ರೀಕೃಷ್ಣನನ್ನು ಗೆದ್ದಿದ್ದ ಜರಾಸಂಧನೆಂಬ ಮಗನು ಹುಟ್ಟಿದ್ದು ನಿನಗೆ ಗೊತ್ತಿಲ್ಲವೇ? ೫೨. ದಶರಥ ಮಹಾರಾಜನು ಮುಪ್ಪಿನಲ್ಲಿ ವಿಭಾಂಡಕಮುನಿಗಳ ಪುತ್ರನಾದ ಋಷ್ಯಶೃಂಗ ಮಹರ್ಷಿಗಳ ವರಪ್ರಸಾದದಿಂದ ಸಮುದ್ರದಂತೆ ಬಹಳ ಗಂಭೀರವಾದ ಗುಣಗಳ ಸಮೃದ್ಧಿಯಿಂದ ಕೂಡಿರುವ, ವಿಷ್ಣುವಿನ ನಾಲ್ಕು ತೋಳುಗಳಂತಿರುವ, ಭೂಮಿಯನ್ನು ಕಾಪಾಡುವುದರಲ್ಲಿ ಸಮರ್ಥರಾದ ನಾಲ್ಕುಜನ ರಾಜಪುತ್ರರನ್ನು ಮಕ್ಕಳಾಗಿ ಪಡೆದನು” ವ|| ಎಂದು ಹೇಳುತ್ತಾ ಸಮಸ್ತ ಸಂತೋಷಕ್ಕೂ ನೆಲೆಯಂತಿರುವ ಮಗನನ್ನು ಮಹಾನುಭಾವನಾದ ತಾರಾಪೀಡನು ಬಿಡದೆ ನೆನೆಸಿಕೊಳ್ಳುತ್ತಾ ತನ್ನ ಪ್ರಾಣಕಾಂತೆಯ ಮುಖವನ್ನು ನೋಡಿ,

೫೩. “ಚಂದ್ರೋದಯವಾದಾಗ ಪೂರ್ವದಿಕ್ಕೆಂಬ ಕಾಮಿನಿಯ ಮುಖದಲ್ಲಿ ಬಿಳುಪು ಹರಡುವಂತೆ ಗರ್ಭಧಾರಣೆಯಿಂದ ನಿನ್ನ ಮುಖದಲ್ಲಿ ಬಿಳುಪು ಯಾವಾಗ ಉಂಟಾಗುವುದೋ ಎಂದು ಚಿಂತಿಸುತ್ತಿದ್ದೇನೆ. ೫೪. ಪುತ್ರಜನ್ಮೋತ್ಸವವು ಸಂಭವಿಸಿರಲಾಗಿ ಅತ್ಯಾನಂದ ಭರಿತರಾದ ಪರಿಜನರು ಓಡಿಬಂದು ನನ್ನಿಂದ ಬಹುಮಾನವನ್ನು ಪಡೆದುಕೊಳ್ಳಲು ತವಕಿಸುತ್ತಿರುವುದನ್ನು ನೋಡುವ ಭಾಗ್ಯವು ನನಗೆ ಎಂದು ಒದಗುತ್ತದೆಯೋ? ೫೫. ಸೂರ್ಯಮಂಡಲವು ಆಗತಾನೆ ಉದಯಿಸಿ ಕಣ್ಣಿಗೆ ಆನಂದವಾಗುವಂತೆ ಚೆನ್ನಾಗಿ ಪ್ರಕಾಶಿಸುತ್ತಿರಲು