ಪ್ರಿಯದಿಂದೆ ಮಹಾಕಾಳಾ
ಹ್ವಯನೀಶಂ ನೆಲಸೆ ನಗರಿಯೊಂದಕ ಖ್ಯಾ
ತಿಯಿನೆಸೆದು ತೋರ್ಪುದುಜ್ಜಯಿ
ನಿಯೆಂಬ ಪೆಸರಿಂದವಂತಿವಿಷಯಾಂತರದೊಳ್                          ೧

ಇದು ಕೃತಯುಗಕ್ಕೆ ನೆಲೆಯೆನಿ
ಸಿದ ಬೇಂದವನಿಯೆಂದು ಬಂದಂಬು ಸು
ತ್ತಿದುದೆನಿಸಿ ನಗರಿಯಂ ಬಳ
ಸಿದುದು ರಸಾತಳಗಭೀರ ಪರಿಖಾವಳಯಂ                               ೨

ಭವನಿಕ್ಕೆದಾಣಮೆಂದೊಂ
ದು ವಿಶೇಷಪ್ರೀತಿಯಿಂದೆ ಕೈಲಾಸನಗೇಂ
ದ್ರವೆ ಬಳಸಿದುದೆಂಬಂತಿರೆ
ಧವಳಪ್ರಾಕಾರಮಲ್ಲಿ ಸೊಗಯಿಸಿ ತೋರ್ಕುಂ                             ೩

ಜಲಯನಗಸ್ತ್ಯನೀಂಟಲ್
ತೊಳಗಿದಪುವು ತಳದೊಳಖಿಳ ನಾನಾ ರತ್ನಂ
ಗಳೆನಲ್ಕೆ ಸಕಲರತ್ನಂ
ಗಳ ಪಸರದಿನೆಸೆದುವಲ್ಲಿ ವಿಪಣಿಪದಂಗಳ್                                ೪

ಸುರ ದನುಜ ಸಿದ್ಧ ವಿದ್ಯಾ
ಧರ ಕಿನ್ನರ ಪನ್ನಗೋಪಯುಕ್ತ ವಿಮಾನೋ
ತ್ಕರಮಲ್ಲಿ ಗಗನದಿಂದವ
ತರಿಸಿದುದೆನೆ ಚಿತ್ರಶಾಲೆಗಳ್ ಸೊಗಯಿಸುಗುಂ                          ೫

ಕ್ಷೀರಸಮುದ್ರಮಂಥನದಿಂದೆ ಪಾಂಡುರಮಂ ತಳೆದಿರ್ದ ಮಂದರಾ
ಕಾರಮನಾಂತು ಕಾಂಚನಮಯಾಮಳ ಸಾರಸಶೇಖರಾಗ್ರವಿ
ಸ್ತಾರಿ ಸಿತಧ್ವಜಂಗಳೆಲರಿಂ ನಿಮಿರಲ್ಕಮರಾಪಗಾಪಯ
ಪೂರಮನಾಂತ ಹೈಮನಗದಂತಿರೆ ದೇವಕುಲಂಗಳೊಪ್ಪುಗುಂ           ೬

೧. ಆವಂತಿಯೆಂಬ ದೇಶದಲ್ಲಿ ಉಜ್ಜಯನಿಯೆಂಬ ಪಟ್ಟಣವು ಶೋಭಿಸುತ್ತಿದೆ. ಅಲ್ಲಿ “ಮಹಾಕಾಲೇಶ್ವರ”ನೆಂಬ ಹೆಸರಿನಿಂದ ಪ್ರಸಿದ್ಧನಾದ ಪರಮೇಶ್ವರನು ಬಹಳ ಪ್ರೀತಿಯಿಂದ ಲಿಂಗರೂಪವನ್ನು ತಾಳಿ ನೆಲಸಿದ್ದಾನೆ. ಆದ್ದರಿಂದ ಆ ನಗರವು ಜಗತ್ತಿನಲ್ಲಿ ಸುಪ್ರಸಿದ್ಧವಾಗಿದೆ. ಟಿ. ಭರತಖಂಡದಲ್ಲಿ ಸುಪ್ರಸಿದ್ಧವಾಗಿರುವ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ಲಿಂಗವೂ ಒಂದು. ಆದ್ದರಿಂದ ಅದು ಪುಣ್ಯಕ್ಷೇತ್ರವೆನಿಸಿ ಈಗಲೂ ದೊಡ್ಡ ಯಾತ್ರಾಸ್ಥಳವಾಗಿದೆ, ೨. ಪಾತಾಳದಷ್ಟು ಆಳವಾದ ಕಂದಕವು ಆ ಪಟ್ಟಣವನ್ನು ಸುತ್ತುವರಿದಿದೆ. ಈ ಪಟ್ಟಣವು ಕೃತಯುಗಕ್ಕೆ ಆಶ್ರಯಸ್ಥಾನವಾಗಿದೆ. ಅದರಿಂದ ಬೇರೊಂದು ಭೂಮಿಯೋ ಎಂಬಂತೆ ಕಾಣುತ್ತದೆ ಆದ್ದರಿಂದ ಬೇರೊಂದು ಸಮುದ್ರವೇ ಬಂದು ಇದನ್ನು ಸುತ್ತುಕೊಂಡಿದೆಯೊ ಎಂಬಂತೆ ಈ ಕಂದಕವು ಕಾಣುತ್ತಿದೆ.  ೩. ಇದು ಮಹಾಕಾಲನೆಂಬ ಹೆಸರಿನಿಂದ ಪ್ರಸಿದ್ಧನಾದ ಪರಮೇಶ್ವರನ ವಾಸಸ್ಥಾನವೆಂಬೊಂದು ಮಮತೆಯಿಂದ ಕೈಲಾಸಪರ್ವತವೇ ಬಂದು ಈ ಪುರವನ್ನು ಸುತ್ತುವರಿದಿದೆಯೋ ಎಂಬಂತೆ ಅದರ ಬಿಳುಪಾದ ಕೋಟೆಯು ಬಹಳ ಅಂದವಾಗಿ ಕಾಣಿಸುತ್ತಿದೆ. ೪. ಅಗಸ್ತ್ಯಮಹರ್ಷಿಯು ಸಮುದ್ರವನ್ನು ಕುಡಿದುಬಿಟ್ಟನಲ್ಲ, ಆಗ ಸಮುದ್ರದ ಅಡಿಯಲ್ಲಿರುವ ಬಗೆಬಗೆಯ ರತ್ನಗಳು ಹೊಳೆಯುತ್ತಿವೆಯೋ ಎಂಬಂತೆ ಕಾಣುವ ವ್ಯಾಪಾರಕ್ಕಾಗಿ ಹರಡಿರುವ ವಿಧವಿಧವಾದ ರತ್ನಗಳಿಂದ ಅಲ್ಲಿನ ಅಂಗಡಿಬೀದಿಗಳು ಶೋಭಿಸುತ್ತಿದ್ದವು. ೫. ದೇವತೆಗಳು, ದನುಜರು, ಸಿದ್ಧರು, ವಿದ್ಯಾಧರರು, ಕಿನ್ನರರು, ನಾಗರು ಮೊದಲಾದ ದೇವತೆಗಳಿಗೆ ಉಪಯುಕ್ತವಾದ ವಿಮಾನಗಳ ಸಾಲು ಆಕಾಶದಿಂದ ಭೂಮಿಗೆ ಇಳಿದುಬಂದಿದೆಯೋ ಎಂಬಂತೆ ಇರುವ ಚಿತ್ರಶಾಲೆಗಳು ರಂಜಿಸುತ್ತಿದ್ದವು. ೬. ಕ್ಷೀರಸಮುದ್ರವನ್ನು ಕಡೆಯುವುದರಿಂದ ಬೆಳ್ಳಗಾಗಿರುವ ಮಂದಪರ್ವತದಂತೆ ಅಲ್ಲಿನ ಧವಳವರ್ಣದ ದೇವಸ್ಥಾನಗಳು ಶೋಭಿಸುತ್ತಿದ್ದವು. ಅವುಗಳಿಗೆ

ವಿತತೋದಂಚತ್ಪತಾಕಾವಸನವಿಲಸಿತಂ ವಿದ್ರುಮೋತ್ತಂಭಿತಸ್ತಂ
ಭತತೋದ್ಯಚ್ಚಾಮರೌಘಾಂಚಿತಮನಿಲರಣತ್ಕಾಂತ ಸೌಭಾಗ್ಯ ಘಂಟಾ
ನ್ವಿತಮಾಗಿರ್ದೊಪ್ಪಮಂ ತಾಳ್ದಿದ ಮಕರಪತಾಕಾಳಿಯಿಂ ಕೋದು ದೇವಾ
ಯತನಂಗಳ್ ಸುತ್ತಲುಂ ಕತ್ತಲಿಸುವ ವನದಿಂ ರಂಜಿಸುತ್ತಿರ್ಪುವೆತ್ತಂ     ೭

ಮುರಜಧ್ವಾನಗಭೀರಮಪ್ಪ ರವದಿಂದಂ ರತ್ನಧಾರಾಗೃಹೋ
ತ್ಕರಧಾರಾಳಿಗಳಿಂದ್ರಚಾಪಲತಿಕಾಸಂದೋಹಮೆಂಬಂದದಿಂ
ಸುರಿಯಲ್ ಸೋಗೆಯ ಚೆಲ್ವು ಕಣ್ದದುದೋ ಪೇೞೆಂಬಿನಂ ಪೀಲಿಗಳ್
ತರದಿಂ ಕಣಳಿಸಲ್ಕೆ ನರ್ತಿಸುಗುಮುದ್ಯಾನಂಗಳೊಳ್ ಸೋಗೆಗಳ್       ೮

ಅನಿಮಿಷರಮಣೀಯಂಗಳ್
ವಿನಿದ್ರ ಕುಮುದಾಯುತೋಜ್ಜಳಂಗಳ್ ಕೇಳೀ
ವನದೊಳ್ ಸರೋವರಂಗಳ್
ನೆನೆಯಿಪುವು ಸಹಸ್ರನೇತ್ರನಯನೋತ್ಕರಮಂ                           ೯

ಮಿಸುಪ ಕದಳೀವನಂಗಳ
ಪಸುರಿಂ ಬಾಸಣಿಸಿ ದೆಸೆಗೆ ಪೊಸನುಣ್ಬೆಳಗಂ
ಪಸರಿಸುವ ದಂತವಲಭಿ
ಪ್ರಸರಂಗಳಿನೆಸೆದು ನಗರಿ ಸೊಗಯಿಸಿ ತೋರ್ಕುಂ                        ೧೦

ಪದಪಿಂದಂ ತಾಳ್ದಿ ನಿಂದಳ್ ಗಗನನದಿ ಮಹಾಕಾಳ ದೇವೋತ್ತಮಾಂಗಾ
ಗ್ರದೊಳೊಂಬೊಂದೀರ್ಷೆಯಿಂದಂ ಭ್ರುಕುಟಿಗಳಿವೆ ಪೊಣ್ಮುತ್ತಮಿರ್ದಪ್ಪುವೆಂಬಂ
ದದೆ ಮಾದ್ಯನ್ಮಾಳವೀ ಪೀವರಕುಚಕಲಶಾಲೋಲಕಲ್ಲೋಲದಿಂದಂ
ಪುದಿದೊಪ್ಪಂಬೆತ್ತ ಶಿಪ್ರಾನದಿ ಬಳಸಿರಲುಜ್ಜೈನಿ ಕಣಪ್ಪಿ ತೋರ್ಕುಂ        ೧೧

ಚಿನ್ನದಿಂದ ಮಾಡಿದ ನಿರ್ಮಲವಾದ ಹಾಗೂ ಶ್ರೇಷ್ಠವಾದ ಕಳಶಗಳಿದ್ದುವು. ಕಳಶಗಳ ಮೇಲೆ ಬಿಳಿ ಬಾವುಟಗಳು ಗಾಳಿಯಿಂದ ಅಳ್ಳಾಡುತ್ತಿದ್ದುವು. ಇದರಿಂದ ಆ ದೇವಾಲಯಗಳು ದೇವಗಂಗಾನದಿಯ ಪ್ರವಾಹಗಳಿಂದ ಕೂಡಿಕೊಂಡಿರುವ ಹಿಮಾಲಯ ಪರ್ವತದಂತೆ ರಂಜಿಸುತ್ತಿದ್ದವು. ೭. ಅಲ್ಲಿನ ದೇವಾಲಯಗಳು ಹಾರಾಡುವ ಅಗಲವಾದ ಬಾವುಟಗಳಿಂದ ಶೋಭಿಸುತ್ತಿದ್ದವು. ಕಂಭಗಳಿಗೆ ಬಿಗಿದುಕಟ್ಟಿರುವ ಹವಳಗಳಿಂದ ತುಂಬಿರುವ ಚಾಮರಗಳು ಮೇಲಕ್ಕೆ ಎದ್ದು ಕಾಣುತ್ತ ರಮಣೀಯವಾಗಿದ್ದುವು. ಅವುಗಳಿಗೆ ಮಂಗಳಸೂಚಕವಾದ ಗಂಟೆಗಳನ್ನು ಕಟ್ಟಿದ್ದರು. ಅವು ಗಾಳಿಯಿಂದ ಅಲ್ಲಾಡುತ್ತಾ ರಮ್ಯವಾಗಿ ದನಿಗೈಯುತ್ತಿದ್ದುವು ಮತ್ತು ಮೊಸಳೆಯ ಆಕಾರದಂತಿರುವ ಧ್ವಜಗಳಿಂದ ಕೂಡಿಕೊಂಡಿರುವ ಆ ದೇವಾಲಯಗಳು ಶೋಭಿಸುತ್ತಿದ್ದುವು. ದಟ್ಟವಾದ ದೇವೋದ್ಯಾನಗಳಿಂದ ಅವು ಸುತ್ತುವರಿಯಲ್ಪಟ್ಟಿದ್ದುವು. ೮. ಅಲ್ಲಿನ ಉದ್ಯಾನ ವನಗಳಲ್ಲಿ ರತ್ನನಿರ್ಮಿತವಾದ ಕಾರಂಜಿ ಮನೆಗಳಲ್ಲಿ ಮದ್ದಳೆಧ್ವನಿಯಂತೆ ಗಂಭೀರವಾಗಿ ಧ್ವನಿಗೈಯುತ್ತ ಜಲಧಾರೆಗಳು ಸುರಿಯುತ್ತಿದ್ದುವು. ಆ ಜಲಧಾರೆಗಳು (ಸೂರ್ಯನ ಕಿರಣಗಳ ಸಂಪರ್ಕವನ್ನು ಹೊಂದಿ) ಕಾಮನಬಿಲ್ಲೋ ಎಂಬ ಸಂಶಯವನ್ನು ಉಂಟುಮಾಡುತ್ತಿದ್ದುವು. ಇದರಿಂದ ಮಳೆಗಾಲವು ಪ್ರಾರಂಭವಾಯಿತೆಂಬ ಭ್ರಾಂತಿಯಿಂದ ನವಿಲುಗಳು ಕುಣಿಯುತ್ತಿದ್ದುವು. ಹೀಗೆ ಜಾಗರವಾಡುವಾಗ ಗರಿಗಳನ್ನು ಬಿಚ್ಚಿಕೊಂಡಿದ್ದವು. ಆಗ ಗರಿಯ ಸೊಬಗೇ ಕಣ್ಣು ತೆರೆದುಕೊಂಡಿರುವಂತೆ ಗರಿಯ ಕಣ್ಣುಗಳು ಶೋಭಿಸುತ್ತಿದ್ದುವು. ೯. ಅಲ್ಲಿನ ಕ್ರೀಡಾವನದಲ್ಲಿದ್ದ ಸರೋವರಗಳು ಇಂದ್ರನ ಸಾವಿರಾರು ಕಣ್ಣುಗಳನ್ನು ನೆನಪಿಗೆ ತರುತ್ತಿದ್ದುವು. ಹೇಗೆಂದರೆ, ಎರಡೂ “ಅನಿಮಿಷರಮಣೀಯಂಗಳ್” (೧. ಮೀನುಗಳಿಂದ ಸುಂದರವಾಗಿ, ೨. ರೆಪ್ಪೆಯಿಲ್ಲದೆ ಸುಂದರವಾಗಿ) ಇದ್ದುವು. ಹಾಗೆಯೆ ಎರಡೂ “ವಿನಿದ್ರ ಕುಮುದಾಯುತೋಜ್ವಳಂಗಳ್ (೧. ಇರಳಿರುವ ಅಸಂಖ್ಯಾತ ನೈದಿಲೆಗಳಿಂದ ಪ್ರಕಾಶಮಾನವಾಗಿ, ೨. ಅರಳಿರುವ ಅಸಂಖ್ಯಾತ ನೈದಿಲೆಗಳಂತೆ ಪ್ರಕಾಶಮಾನವಾಗಿ) ಶೋಭಿಸುತ್ತಿದ್ದುವು. ೧೦. ಆ ಪಟ್ಟಣವು ದಂತಮಯವಾದ ಚಂದ್ರಶಾಲೆಗಳಿಂದ ಕೂಡಿಕೊಂಡು ಸೊಗಸಾಗಿ ಕಾಣುತ್ತಿತ್ತು. ಆ ಚಂದ್ರಶಾಲೆಗಳ ಸುತ್ತಲೂ ಬಾಳೆಯ ಮರಗಳು ದಟ್ಟವಾಗಿ ಬೆಳೆದಿದ್ದುವು. ಅವುಗಳ ಹಸಿರುಕಾಂತಿಯಿಂದ ಮಿಳಿತವಾದ ಚಂದ್ರಶಾಲೆಗಳ ಧವಳಕಾಂತಿಯು ಸುತ್ತಲೂ ಪ್ರಸರಿಸಿತ್ತು. ೧೧. ಆ ಉಜ್ಜಯನೀನಗರದ ಸುತ್ತಲೂ ಸಿಪ್ರಾ ಎಂಬ ನದಿಯು ಹರಿಯುತ್ತಿದೆ. ಆ ನದಿಗೆ ಯೌವನದಿಂದ ಕೊಬ್ಬಿದ ಮಾಳವದೇಶದ ಮಹಿಳೆಯರು ಸ್ನಾನಕ್ಕಾಗಿ ಬರುತ್ತಿದ್ದರು. ಅವರ ತೋರಮೊಲೆಗಳಿಂದ ಆಲೋಡಿತವಾದ ಅಲೆಗಳು ಚಲಿಸುತ್ತಿದ್ದುವು. ಅವು ಗಂಗಾನದಿಯು

ತರದಿಂದಂ ವ್ಯೋಮದಿಂ ಬೆಳ್ಮುಗಿಲೊಗೆದುವೆನಲ್ ತೋರ್ಪ ಸೌಧಂಗಳೊಳ್ ಸುಂ
ದರಿಯರ್ ಪಾಡುತ್ತಿರಲ್ ಸೋಲ್ತವೊಲೆಳಸಿ ರಥಾಶ್ವವ್ರಜಂ ಮುಂದೆ ಮುಗ್ಗು
ತ್ತಿರೆ ಚಂಚದ್ವೈಜಯಂತೀಪಟವೆಳಲೆ ಮಹಾಕಾಳದೇವಂಗೆ ನಿಚ್ಚಂ
ಪಿರಿದುಂ ಸದ್ಭಕ್ತಿಯಿಂ ಬಂದೆಱಗುವ ತೆಱದಿಂ ತೋರ್ಪನಂಭೋಜಮಿತ್ರಂ          ೧೨

ಅಗಲವು ಚಕ್ರವಾಕಮಿಥುನಾವಳಿ ದೀಪನಿಕಾಯಕಾಂತಿಗಳ್
ಮಿಗಿಲೆನೆ ವಾರಕಾಂತೆಯರ ಭೂಷಣಕಾಂತಿಯ ಕೆಂಬಿಸಿಲ್ಗಳಾ
ವಗಮೆಸೆಯುತ್ತಿರಲ್ ವಿಷಮಬಾಣನ ತೀವ್ರ ಶರಾನಳಾರ್ಚಿಗಳ್
ತಗುಳ್ದುವೆನಲ್ಕೆ ತೋರ್ಪುವು ತಮಸ್ವಿನಿಗಳ್ ವಿಧುವಿಪ್ರಲಂಭದಿಂ                   ೧೩

ತೊಳಗುವ ಮಾಳವೀಮುಖ ಸರೋರುಹಕಾಂತಿಗೆ ಸೋಲ್ತ ಚಂದ್ರಮಂ
ಡಳದ ಕಳಂಕಮಂ ಕಳೆದಪಳ್ ನಗರೀಲಲಿತಾಂಗಿ ನಿಳ್ಕಿ ತೋ
ಳ್ಗಳಿನೆನೆ ಕೂಡೆ ಕಣಳಿಸಿ ತೋರ್ಪುವು ಮಂದನಿಶಾಸಮೀರ ಸಂ
ಚಳನಚಳದ್ದುಕೂಲಪಟಪಲ್ಲವರಾಜಿತ ಕೇತನಾಳಿಗಳ್                              ೧೪

ಎಳವೆಂಡಿರ್ ನೆಲೆವಾಡದೊ
ಳೆಳಸಿರೆ ನಡೆನೋಡಿ ಸೋಲ್ತವೊಲ್ ಚಂದ್ರಂ ಮಾ
ರ್ಪೊಳೆವ ನೆವದಿಂ ಪೊರಳ್ವಂ
ಮಳಯಜರಸಸಿಕ್ತ ರತ್ನಕುಟ್ಟಿಮತಳದೊಳ್                                         ೧೫

ವ|| ಮತ್ತಂ ತರಳತೆ ಹಾರಂಗಳೊಳ್ ದ್ವಂದ್ವವಿಯೋಗಂ ಜಕ್ಕವಕ್ಕಿಗಳೊಳ್ ವರ್ಣಪರೀಕ್ಷೆ ಕನಕಂಗಳೊಳ್ ಚಂಚಲತ್ವಂ ಧ್ವಜಪತಾಕೆಗಳೊಳ್ ಮಿತ್ರದ್ವೇಷಂ ಕುಮುದಂಗಳೊಳಲ್ಲದಿಲ್ಲಮೆಲ್ಲಿಯುಂ

ಸಂಭ್ರಮದಿಂದ ಮಹಾಕಾಳೇಶ್ವರನ ತಲೆಮೇಲೆ ಮೆರೆಯುತ್ತಿದ್ದಾಳಲ್ಲ! ಎಂಬ ಒಂದು ಸ್ತ್ರೀ ಸಹಜವಾದ ಅಸೂಯೆಯಿಂದ ಸಿಪ್ರಾನದಿಯು ತೋರ್ಪಡಿಸುತ್ತಿರುವ ಹುಬ್ಬುಗಂಟುಗಳೋ ಎಂಬಂತೆ ಕಾಣುತ್ತಿದ್ದುವು. ೧೨. ಅಲ್ಲಿನ ಆಕಾಶದಲ್ಲಿ ಬಿಳಿಮೋಡಗಳು ಗುಡ್ಡೆಗಟ್ಟಿಕೊಂಡು ನಿಂತಿವೆಯೋ ಎಂಬಂತೆ ಕಾಣುತ್ತಿರುವ ಶುಭ್ರವಾದ ಹಾಗೂ ಎತ್ತರವಾದ ಉಪ್ಪರಿಗೆ ಮನೆಗಳಲ್ಲಿ ಸುಂದರಿಯರು ಹಾಡುತ್ತಿದ್ದರು. ಅವರ ಸಂಗೀತಮಾಧುರ್ಯಕ್ಕೆ ಮನಸೋತು ಸೂರ್ಯನ ಕುದುರೆಗಳು ಕೆಳಮುಖವಾಗಿ ಬಗ್ಗುತ್ತಿದ್ದುವು. ಆಗ ಅಲ್ಲಾಡುತ್ತಿರುವ ಬಾವುಟದ ಬಟ್ಟೆಯು ಕೆಳಗೆ ಜೋಲಾಡುತ್ತಿತ್ತು. ಇದರಿಂದ ಸೂರ್ಯದೇವನು ಮಹಾಕಾಳೇಶ್ವರನಿಗೆ ಬಹಳ ಭಕ್ತಿಯಿಂದ ನಮಸ್ಕರಿಸುತ್ತಿರುವಂತೆ ತೋರುತ್ತಿತ್ತು. ೧೩. ಆ ಪಟ್ಟಣದಲ್ಲಿ ರಾತ್ರಿಯ ಕಾಲದಲ್ಲಿ ದೀಪದ ಬೆಳಕು ಅತ್ಯಕವಾಗಿ ಎಲ್ಲೆಲ್ಲೂ ಹರಡಿಕೊಂಡಿತ್ತು. ಇದರಿಂದ ಚಕ್ರವಾಕದಂಪತಿಗಳು ಸೂರ್ಯನು ಇನ್ನೂ ಮುಳುಗಿಲ್ಲವೆಂದು ಭಾವಿಸಿಕೊಂಡು ಒಂದನ್ನೊಂದು ಅಗಲುತ್ತಿರಲಿಲ್ಲ. ಅಲ್ಲಿನ ಸೂಳೆಯರ ಒಡವೆಗಳ ಕೆಂಬಿಸಿಲಿನಂತಿರುವ ಕಾಂತಿ ಒಂದೇ ಸಮನೆ ಹೊಮ್ಮುತ್ತಿರಲಾಗಿ ಚಂದ್ರನ ವಿರಹದಿಂದ ಪರಿತಪಿಸುತ್ತಿರುವ ರಾತ್ರಿಯು ಮನ್ಮಥನ ತೀವ್ರವಾದ ಬಾಣಾಗ್ನಿಯಿಂದ ಆವರಿಸಲ್ಪಟ್ಟಿರುವಂತೆ ಕಾಣುತ್ತಿತ್ತು. ಟಿ. ರಾತ್ರಿಯಲ್ಲಿ ಚಕ್ರವಾಕದಂಪತಿಗಳು ಒಂದನ್ನೊಂದು ಅಗಲಿ ವ್ಯಥೆಯನ್ನು ಅನುಭವಿಸುತ್ತವೆ ಎಂಬುದು ಕವಿಸಮಯ. ೧೪. ಆ ಪಟ್ಟಣದಲ್ಲಿ ರಾತ್ರಿಯ ವೇಳೆಯಲ್ಲಿ ಗಾಳಿಯ ಬೀಸುವಿಕೆಯಿಂದ ಚಿಗುರಿನಂತೆ ನವಿರಾದ ಬಾವುಟದ ಬಟ್ಟೆಗಳು ಅಳ್ಳಾಡುತ್ತಿದ್ದುವು. ಇದನ್ನು ನೋಡಿದರೆ, ಈ ನಗರಿಯೆಂಬ ಮಹಿಳೆಯು ತನ್ನ ಪಟ್ಟಣದಲ್ಲಿ ವಾಸಿಸುತ್ತಿರುವ ಮಾಳವಸುಂದರಿಯರ ಮುಖಕಮಲದ ಶೋಭೆಗೆ ಸೋತು ಕಳಂಕವನ್ನು ಹೊಂದಿರುವ ಚಂದ್ರನ ಆ ಕಳಂಕವನ್ನು ತನ್ನ ತೋಳುಗಳನ್ನು ಚಾಚಿ ಒರೆಸುತ್ತಿದ್ದಾಳೋ ಎಂಬಂತೆ ಕಾಣುತ್ತಿತ್ತು.

೧೫. ಅಲ್ಲಿ ಗಂಧೋದಕವನ್ನು ಚಿಮುಕಿಸಿ, ರತ್ನದ ನೆಲೆಗಟ್ಟುಗಳನ್ನು ಸ್ವಚ್ಛಗೊಳಿಸಿದ್ದರು. ಅವುಗಳಲ್ಲಿ ಚಂದ್ರನ ಬಿಂಬವು ಪ್ರತಿಬಿಂಬಿಸಿತ್ತು. ಇದರಿಂದ ಅಲ್ಲಿನ ಮಹಡಿಗಳಲ್ಲಿ ಮಂಡಿಸಿರುವ ತರುಣಿಯರ ಚೆಲುವಿಗೆ ಪರವಶನಾದ ಚಂದ್ರನು ಕೆಳಗೆ ಬಂದು ಅವರ ಪಾದತಳದಲ್ಲಿ ಹೊರಳಾಡುತ್ತಿದ್ದಾನೋ ಎಂಬಂತೆ ಕಾಣುತ್ತಿತ್ತು. ವ|| ತರಳತೆಯು (೧. ಮಧ್ಯಮಣಿಯಿರುವಿಕೆ, ೨. ಚಪಲಸ್ವಭಾವ) ಹಾರದಲ್ಲಿ ಮಾತ್ರ ಇತ್ತು. ದ್ವಂದ್ವವಿಯೋಗವು (೧. ಹೆಣ್ಣು ಗಂಡು ಪಕ್ಷಿಗಳ ಅಗಲುವಿಕೆ, ೨. ಗಂಡ ಹೆಂಡಿರ ವಿರಹ) ಚಕ್ರವಾಕಪಕ್ಷಿಗಳಲ್ಲಿ ಮಾತ್ರ ಇತ್ತು. ವರ್ಣಪರೀಕ್ಷೆಯು (೧. ಬಣ್ಣವನ್ನು ಒರೆಹಚ್ಚುವುದು. ೨. ಇವನು ಶುದ್ಧಜಾತಿಯವನೆ, ಅಲ್ಲವೆ ಎಂಬ ಚರ್ಚೆ) ಚಿನ್ನದಲ್ಲಿ ಮಾತ್ರ ಇತ್ತು. ಚಂಚಲತ್ವವು (೧. ಅಲುಗಾಡುವಿಕೆ, ೨. ಚಪಲಸ್ವಭಾವ) ಬಾವುಟದಲ್ಲಿ ಮಾತ್ರ ಇತ್ತು. ಮಿತ್ರದ್ವೇಷವು (೧. ಸೂರ್ಯನ ಮೇಲೆ ದ್ವೇಷ, ೨. ಸ್ನೇಹಿತರ ಮೇಲೆ ವೈರ) ಕನ್ನೆ ದಿಲೆಗಳಲ್ಲಿ ಮಾತ್ರ ಇತ್ತು. ಈ ಪಟ್ಟಣದಲ್ಲಿ ಇನ್ನು ಎಲ್ಲೂ ಇರಲಿಲ್ಲ.

ಸ್ಮರಭಸ್ಮಾಲಂಕೃತಾಂಗಂ ರತಿವಲಯಸಮಭ್ಯರ್ಚಿತಾಂಘ್ರಿದ್ವಯಂ ಭೀ
ಕರಶೂಲೋದ್ದಾರಿತಾಂಧಾಸುರ ನಗತನಯಾನೂಪುರೋದ್ಘೃಷ್ಟಜೂಟಂ
ಸುರವಂದ್ಯಂ ಸಂದಂ ಕೈಲಾಸಮುಮನಿಳಿಸಿ ನಿಂದಂ ಮಹಾಕಾಳನಾಮಂ
ಗಿರಿಶಂ ತಾನೆಂದೊಡುಜ್ಜೈನಿಯ ಮಹಿಮೆಯನೇಂ ಬಣ್ಣಿಸಲ್ ಬಲ್ಲನಾವಂ             ೧೬

ವ|| ಅಂತಾ ನಗರಿಯೊಳ್ ನೃಗ ನಹುಷ ಯಯಾತಿ ದುಂದುಮಾರ ಭಗೀರಥಪ್ರತಿಮನುಂ ನಿಜಭುಜಾರ್ಜಿತ ಭೂಮಂಡಲನುಂ ಫಲಿತಶಕ್ತಿತ್ರಯನುಂ ನೀತಿಶಾಸ್ತ್ರಾಭಿಪ್ರಾಯಬುದ್ಧಿಯುಮಗತ ಧರ್ಮಶಾಸ್ತ್ರನುಮನೇಕಸಪ್ತತಂತು ಪೂತಮೂರ್ತಿಯುಮುಪಶಮಿತಜಗದು ಪಪ್ಲವನುಮೆನಿಸಿ ಮಕರಧ್ವಜನಂತೆ ಸದಾಸನ್ನವಿಗ್ರಹನುಂ ದಶರಥನಂತೆ ಸುಮಿತ್ರೋಪೇತನುಂ ನಾಗರಾಜನಂತೆ ಕ್ಷಮಾಗುರುವುಂ ನರ್ಮದಾಪ್ರವಾಹದಂತೆ ಮಹಾವಂಶಪ್ರಭವನುಂ ಧರ್ಮಾವತಾರನುಂ ಪುರುಷೋತ್ತಮಪ್ರತಿನಿಯುಮೆನಿಸಿದ ತಾರಾಪೀಡನಿರ್ಪನಾತನ ಮಹಿಮೆಯಂ ಪೇೞ್ವೊಡೆ

ಬಿಸುಟು ಸರೋಜಿನಿಗಳನೇ
ಳಿಸಿ ಮಾಧವವಿಪುಳವಕ್ಷಮಂ ವೀರನೃಪ
ವ್ಯಸನದಿನಾ ನೃಪನೊಳ್ ಸಂ
ತಸದಿಂದಂ ರಾಜ್ಯಲಕ್ಷಿ  ಸಲೆ ನೆಲಸಿರ್ಪಳ್                             ೧೭

ರಾವಣನೊತ್ತಿ ಕಿೞ್ತ ರಜತಾದ್ರಿಯನಶ್ರಮದಿಂದವಾ ಮಹಾ
ದೇವನದೆಂತು ಮುನ್ನಿರಿಸಿದಂ ಸ್ಥಿರಮಾಗಿರಲಂತಶೇಷ ದೋ
ಷಾವಿಳಮಪ್ಪದೊಂದು ಕಲಿಕಾಲಮದಾದಮೆ ಕೀೞ್ತ ಧರ್ಮಮಂ
ಭೂವರನಾವಗಂ ನಿಲಿಸಿದಂ ನಿಖಿಲಾವನಿರಕ್ಷಣಕ್ಷಮಂ                    ೧೮

೧೬. ಮನ್ಮಥನ ಬೂದಿಯಿಂದ ಅಲಂಕರಿಸಲ್ಪಟ್ಟ ದೇಹವುಳ್ಳ, (ಅಂಗಲಾಚಿ ಬೇಡುತ್ತಿರುವ) ರತಿಯ ಕೈಯಿಂದ ಜಾರುತ್ತಿರುವ ಬಳೆಗಳಿಂದ ಪೂಜಿಸಲ್ಪಟ್ಟ ಪಾದಗಳುಳ್ಳ, ಭಯಂಕರವಾದ ಶೂಲದಿಂದ ಅಂಧಕಾಸುರನನ್ನು ಸೀಳಿದ, (ಪ್ರಣಯಕಲಹದಿಂದ ಮುನಿಸಿ ಕೊಂಡಿರುವ ಪಾರ್ವತಿಯನ್ನು ಸಮಾಧಾನಪಡಿಸಲು ಕಾಲಿಗೆ ಬಿದ್ದಾಗ) ಅವಳ ಕಾಲುಗಡಗದಿಂದ ಮರ್ದಿಸಲ್ಪಟ್ಟ ಜಡೆಗಂಟುಳ್ಳ ದೇವತೆಗಳಿಂದ ನಮಸ್ಕರಿಸಲ್ಪಡುವ ಮಹಾಕಾಳೇಶ್ವರನೆಂಬ ಹೆಸರುಳ್ಳ ಪರಮೇಶ್ವರನ ಕೈಲಾಸವೇ ಕೀಳು ಎಂದು ಭಾವಿಸಿ ಇಲ್ಲಿಗೆ ಬಂದು ನೆಲಸಿದ್ದಾನೆ ಎಂದ ಬಳಿಕ ಈ ಉಜ್ಜಯನಿಯ ಮಹಿಮೆಯನ್ನು ವರ್ಣಿಸಲು ಯಾರಿಗೆ ತಾನೆ ಸಾಧ್ಯವಾದೀತು? ವ|| ಹಾಗಿರುವ ಆ ಪಟ್ಟಣದಲ್ಲಿ ನೃಗ, ನಹುಷ, ಯಯಾತಿ, ದುಂದುಮಾರ, ಭಗೀರಥರಿಗೆ ಸಮಾನನಾದ, ತನ್ನ ಬಾಹುಬಲದಿಂದಲೇ ಭೂಮಂಡಲವನ್ನೆಲ್ಲಾ ಗೆದ್ದಿರುವ, ಪ್ರಭುಶಕ್ತಿ, ಮಂತ್ರಶಕ್ತಿ, ಉತ್ಸಾಹಶಕ್ತಿಗಳೆಂಬ ಮೂರು ಶಕ್ತಿಗಳ ಫಲವನ್ನು ಚೆನ್ನಾಗಿ ಅನುಭವಿಸುತ್ತಿರುವ, ನೀತಿಶಾಸ್ತ್ರಗಳಿಗೆ ಅನುಸಾರವಾದ ಬುದ್ಧಿಯುಳ್ಳ, ಧರ್ಮಶಾಸ್ತ್ರಗಳನ್ನು ಚೆನ್ನಾಗಿ ತಿಳಿದುಕೊಂಡಿರುವ, ಅನೇಕ ಯಜ್ಞಯಾಗಗಳನ್ನು ಮಾಡುವುದರಿಂದ ಪರಿಶುದ್ಧವಾದ ದೇಹವುಳ್ಳ, ಜಗತ್ತಿನ ಕಷ್ಟಕೋಟಲೆಗಳನ್ನು ಪರಿಹರಿಸುವ ಮಹಾನುಭಾವನಾದ ತಾರಾಪೀಡನೆಂಬ ಮಹಾರಾಜನಿದ್ದನು. ಅವನು ಮನ್ಮಥನಂತೆ “ಸದಾಸನ್ನವಿಗ್ರಹ” (೧. ಯಾವಾಗಲೂ ಯುದ್ಧವಿಲ್ಲದವನು, ೨. ಯಾವಾಗಲೂ ಶರೀರವಿಲ್ಲದವನು)ನಾಗಿದ್ದನು. ದಶರಥನಂತೆ “ಸುಮಿತ್ರೋಪೇತ” (೧. ಒಳ್ಳೆಯ ಸ್ನೇಹಿತರಿಂದ ಕೂಡಿಕೊಂಡವನು, ೨. ಸುಮಿತ್ರೆಯೆಂಬ ರಾಣಿಯಿಂದ ಕೂಡಿಕೊಂಡವನು)ನಾಗಿದ್ದನು. ಆದಿಶೇಷನಂತೆ “ಕ್ಷಮಾಗುರು” (೧. ತಾಳ್ಮೆಯಿಂದ ಹಿರಿಮೆಯನ್ನು ಗಳಿಸಿದವನು,

೨. ಭೂಮಿಯನ್ನು ತಲೆಯ ಮೇಲೆ ಹೊತ್ತಿರುವುದರಿಂದ ಬಹಳ ತೂಕವುಳ್ಳವನು)ವಾಗಿದ್ದನು. ನರ್ಮದಾಪ್ರವಾಹದಂತೆ “ಮಹಾವಂಶ ಪ್ರಭವ” (೧. ದೊಡ್ಡವಂಶದಲ್ಲಿ ಹುಟ್ಟಿದವನು, ೨. ದೊಡ್ಡ ಬಿದಿರುಮಳೆಯಿಂದ ಹೊರಡುವುದು)ನಾಗಿದ್ದನು. ಮತ್ತು ಈ ಮಹಾರಾಜನು ಧರ್ಮಪುರುಷನ ಅವತಾರವೋ ಎಂಬಂತಿದ್ದನು. ಶ್ರೀಮನ್ನಾರಾಯಣನ ಪ್ರತಿನಿಯೆನಿಸಿಕೊಂಡಿದ್ದನು. ಅವನ ಮಹಿಮೆಯನ್ನು ಬಣ್ಣಿಸಬೇಕಾದರೆ, ೧೭. ರಾಜಲಕ್ಷಿ ಯು ಪರಾಕ್ರಮಶಾಲಿಯಾದ ರಾಜನನ್ನು ಆಶ್ರಯಿಸಬೇಕೆಂಬ ಆಸಕ್ತಿಯಿಂದ ತಾನು ವಾಸವಾಗಿದ್ದ ಕಮಲವನ್ನು ಬಿಟ್ಟು ಶ್ರೀಮನ್ನಾರಾಯಣನ ವಿಸ್ತಾರವಾದ ವಕ್ಷಸ್ಥಳವನ್ನೂ ತಿರಸ್ಕರಿಸಿ ಈ ಮಹಾರಾಜನಲ್ಲಿ ಬಹಳ ಸಂತೋಷದಿಂದ ಸ್ಥಿರವಾಗಿ ನೆಲೆಸಿದ್ದಾಳೆ. ಟಿ. ರಾಜ್ಯಸಂಪತ್ತನ್ನು ಅದರ ಅದೇವತೆಯಾದ ಲಕ್ಷಿ ಯೊಂದಿಗೆ ಅಭೇದಮಾಡಿ ವರ್ಣಿಸಿದ್ದಾನೆ.

೧೮. ಹಿಂದೆ ರಾವಣನು ಕೈಲಾಸಪರ್ವತವನ್ನು ಕಿತ್ತು ಎತ್ತಿದನು. ಪರಮೇಶ್ವರನು ಅನಾಯಾಸವಾಗಿ ರಾವಣನ ಸೊಕ್ಕನ್ನು ಅಡಗಿಸಿ ಮೊದಲಿನಂತೆಯೇ ಅದನ್ನು ಸ್ಥಿರವಾಗಿರುವಂತೆ ನಿಲ್ಲಿಸಿದನು. ಅದೇ ರೀತಿ ಸಮಸ್ತ ಭೂಮಂಡಲವನ್ನೂ ಆಳಲು ಸಮರ್ಥನಾದ ತಾರಾಪೀಡನು ಬಹಳ ಪಾಪದಿಂದ ಕಲುಷಿತವಾದ ಕಲಿಕಾಲವು ಕಿತ್ತು ಹಾಕಿರುವ ಧರ್ಮವನ್ನು ಶಾಶ್ವತವಾಗಿ ಸ್ಥಿರವಾಗಿ ನಿಲ್ಲುವಂತೆ

ಪತಿಯಗಲ್ದ ವೇಗದಿಂ ದು
ಖಿತೆಯಾಗಿರೆ ಕಂಡು ಕರುಣವಗ್ಗಲಿಸಲುಮಾ
ಪತಿ ಪಡೆದಂ ಮತ್ತಂ ರತಿ
ಪತಿಯನೆನುತ್ತಿರ್ಪುದವನಿ ಜಗದಪತಿಯಂ                       ೧೯

ದಿನಪೇಂದುಪ್ರಚಯಾದ್ರಿಯಿಂದೆ ಜಳದೇವೀವಂದ್ಯರಾಮಕ್ರಮಾಂ
ಕನಿಕಾಯಂಚಿತಸೇತು ಚಕ್ರಧರಕೇಯೂರದ್ವೇಯೋದ್ಘ ಷ್ಟಮಂ
ಥನಶೈಲಂ ಧನದಾಂಗನಾಭರಣಲಕ್ಷಿ ಚಂಕನದ್ಗಂಧಮಾ
ದನಮೆಂಬಿಂತಿವು ಮೇರೆಯಾಗೆ ತಳೆದಂ ಭೂಚಕ್ರಮಂ ಭೂಭುಜಂ        ೨೦

ಮಂದರಗಿರೀಂದ್ರನಿಂದೊಗೆ
ತಂದ ಸುಧಾಸಿಂಧುಲೇಖೆಯೆನೆ ನಿಖಿಳ ಜಗ
ನ್ಮಂಡಳಮಂ ಧವಳಿಸಿದ
ತ್ತಿಂದೂಜ್ವಳಕೀರ್ತಿ ಕೀರ್ತಿನಾರಾಯಣನಾ                      ೨೧

ವನನಿಪರೀತ ವಿಶ್ವಾ
ವನಿಪತಿಯ ಮಹಾಪ್ರತಾಪದಿಂ ಜೀರ್ದಪಳೆಂ
ಬಿನೆಗಂ ಛತ್ರಚ್ಛಾಯೆಯ
ನಿನಿಸಗಲದೆ ರಾಜ್ಯಲಕ್ಷಿ  ಸಲೆ ನೆಲಸಿರ್ಪಳ್                   ೨೨

ವ|| ಅಂತಾ ನರೇಂದ್ರನರಸುತನದೊಳ್ ವಿಪಕ್ಷತೆ ಗಿರಿಗಳೊಳ್ ಪರತ್ವಂ ಪ್ರತ್ಯಯಂಗಳೊಳ್ ಇದಿರಪ್ಪುದು ಕನ್ನಡಿಯೊಳ್ ದುರ್ಗಾಶ್ರಯಂ ಶೂಲಪಾಣಿಯೊಳ್ ಉದ್ವೃತ್ತತೆ ಧ್ವಜಂಗಳೊಳ್ ದುಶ್ಶಾಸನಾಪರಾಧಂ ಭಾರತದೊಳ್ ದಂಡಗ್ರಹಣಂ ವಯಪರಿಣತಿಯೊಳ್ ವಕ್ರತೆ ವನಿತಾಕುಚಪತ್ರಂಗಳೊಳ್ ಬಂಧನಂ ಕುಸುಮಂಗಳೊಳ್ ತುಲಾರೋಹಣಂ ಗ್ರಹಂಗಳೊಳ್ ಆಯತಿಭಂಗಂ ಕೇಶನಖಂಗಳೊಳ್

ಮಾಡಿದ್ದಾನೆ. ೧೯. ಗಂಡನಾದ ಮನ್ಮಥನನ್ನು ಸುಟ್ಟುಹಾಕಲು ಪತಿಯ ವಿರಹದ ಅಳಲಿನಿಂದ ದುಖಿತೆಯಾದ ರತಿಯನ್ನು ನೋಡಿ ಕರುಣೆಯು ಉಕ್ಕಿ ಬರಲು ಆ ಗೌರೀಪತಿಯು ಬೇರೊಬ್ಬ ಮದನನನ್ನು ಸೃಷ್ಟಿಮಾಡಿದ್ದಾನೋ ಎಂದು ಆ ರಾಜನನ್ನು ನೋಡಿದ ಜನರು ಭಾವಿಸುತ್ತಿದ್ದರು. ೨೦. ಪೂರ್ವದಿಕ್ಕಿನಲ್ಲಿ ಸೂರ್ಯ ಚಂದ್ರರು ಉದಯಿಸುವ ಬೆಟ್ಟವೂ (ಉದಯಪರ್ವತವು) ದಕ್ಷಿಣದಲ್ಲಿ ಸಮುದ್ರದೇವತೆಯಿಂದ ನಮಸ್ಕರಿಸಲ್ಪಡುವ ಶ್ರೀರಾಮನ ಹೆಜ್ಜೆಯ ಗುರುತುಗಳಿಂದ ರಮ್ಯವಾದ ಸೇತುವೆಯೂ, ಪಶ್ಚಿಮದಲ್ಲಿ ಸಮುದ್ರವನ್ನು ಕಡೆಯುವಾಗ ಶ್ರೀಮನ್ನಾರಾಯಣನ ತೋಳುಬಂದಿಗಳಿಂದ ತೀಡಲ್ಪಟ್ಟ ಮಂದರಪರ್ವತವೂ, ಉತ್ತರದಲ್ಲಿ ಕುಬೇರನ ಮಹಿಳೆಯರ ಆಭರಣಗಳ ಸಂಪತ್ತಿನಿಂದ ಹೊಳೆಯುತ್ತಿರುವ ಗಂಧಮಾದನಪರ್ವತವೂ ಎಲ್ಲೆಯಾಗಿರುವ ಭೂಮಂಡಲವನ್ನು ಆ ಚಕ್ರವರ್ತಿಯು ಆಳುತ್ತಿದ್ದನು. ೨೧. ಮಂದರಪರ್ವತದ ಕಡೆತದಿಂದ ಹುಟ್ಟಿದ ಚಂದ್ರನ ಕಳೆಯೋ ಎಂಬಂತಿರುವ, ವಿಷ್ಣುವಿನಂತೆ ಕೀರ್ತಿಶಾಲಿಯಾದ ಈ ರಾಜನೆ ಚಂದ್ರನಂತೆ ಬೆಳಗುವ ಕೀರ್ತಿಯು ಈ ಭೂಮಂಡಲವನ್ನೆಲ್ಲಾ ಬೆಳ್ಳಗಾಗಿಸಿತ್ತು. ೨೨. ಸಮುದ್ರದಿಂದ ಸುತ್ತುವರಿಯಲ್ಪಟ್ಟಿರುವ ಈ ಭೂಮಂಡಲಕ್ಕೆ ಅಪತಿಯಾದ ಆ ಮಹಾರಾಜನ ಮಹಾಪ್ರತಾಪವೆಂಬ ಬಿಸಿಲಿನಿಂದ ಹೆದರುತ್ತಾಳೋ ಎಂಬಂತೆ ರಾಜ್ಯಲಕ್ಷಿ ಯು ಅವನ ಬಿಳಿಯ ಕೊಡೆಯ ನೆರಳನ್ನು ಸ್ವಲ್ಪವೂ ಅಗಲದೆ ಚೆನ್ನಾಗಿ ನೆಲೆಸಿದ್ದಳು. ವ|| ಮತ್ತು ಆ ರಾಜನ ರಾಜ್ಯಭಾಗದಲ್ಲಿ “ವಿಪಕ್ಷತೆಯು” (೧. ರೆಕ್ಕೆಗಳಿಲ್ಲದಿರುವಿಕೆ, ೧. ಶತ್ರುತ್ವ) ಪರ್ವತಗಳಲ್ಲಿ ಮಾತ್ರ ಇತ್ತು. “ಪರತ್ವವು” (೧. ಪ್ರಕೃತಿಯ ಮುಂದೆ ಇರುವಿಕೆ,

೨. ಪರಕೀಯವೆಂಬ ಭಾವನೆ) ಅನ್ನು, ಇಂದ ಮುಂತಾದ ಪ್ರತ್ಯಯಗಳಲ್ಲಿ ಮಾತ್ರ ಇತ್ತು. “ಇದಿರಪ್ಪುದು” (೧. ಎದುರಾಗಿ ನಿಲ್ಲುವುದು, ೨. ಎದುರಿಸಿ ನಿಲ್ಲುವುದು) ಕನ್ನಡಿಯಲ್ಲಿ ಮಾತ್ರ ಇತ್ತು. “ದುರ್ಗಾಶ್ರಯವು” (೧. ಪಾರ್ವತಿಯ ಜೊತೆಯಲ್ಲಿರುವಿಕೆ, ೨. ಕೋಟೆಯನ್ನು ಆಶ್ರಯಿಸುವುದು) ಶಿವನಲ್ಲಿ ಮಾತ್ರ ಇತ್ತು. “ಉದ್ವೃತ್ತತೆಯು” (೧. ಎತ್ತರವಾಗಿ ಇರುವಿಕೆ, ೨. ನೀತಿಯನ್ನು ಬಿಟ್ಟು ಇರುವಿಕೆ) ಬಾವುಟಗಳಲ್ಲಿ ಮಾತ್ರ ಇತ್ತು. “ದುಶ್ಶಾಸನಾಪರಾಧವು” (೧. ದುಶ್ಶಾಸನನು ಮಾಡಿದ ತಪ್ಪು, ೨. ಕೆಟ್ಟ ಆಳಿಕೆಯ ದೋಷವು) ಮಹಾಭಾರತದಲ್ಲಿ ಮಾತ್ರ ಇತ್ತು. “ದಂಡಗ್ರಹಣವು” (೧. ಕೋಲು ಹಿಡಿಯುವುದು, ೨. ಶಿಕ್ಷೆ ವಿಸುವುದು) ಮುಪ್ಪಿನಲ್ಲಿ ಮಾತ್ರ ಇತ್ತು. “ವಕ್ರತೆಯು” (೧. ಡೊಂಕು ಡೊಂಕಾಗಿರುವಿಕೆ, ೨. ಕುಟಿಲಸ್ವಭಾವ) ಹೆಂಗಸರ ಸ್ತನಗಳ ಮೇಲೆ ಬರೆದಿರುವ ಚಿತ್ರರಚನೆಯಲ್ಲಿ ಮಾತ್ರ ಇತ್ತು. “ಬಂಧನವು” (೧. ಕಟ್ಟುವುದು, ೨. ಸೆರೆಹಿಡಿಯುವುದು) ಹೂವುಗಳಲ್ಲಿ ಮಾತ್ರ ಇತ್ತು. “ತುಲಾರೋಹಣವು”

(೧. ತುಲಾರಾಶಿಗೆ ಬರುವಿಕೆ, ೨. ಅಪರಾಯೋ ಅಲ್ಲವೋ ಎಂಬುದನ್ನು ಗೊತ್ತುಪಡಿಸಲು ತಕ್ಕಡಿಯಲ್ಲಿ ಕೂರಿಸಿ ತೂಗುವಿಕೆ)

ಮಲಿನಾಂಬರತ್ವಂ ಜಲದಾಗಮದೊಳ್ ತಾರಕೋದ್ಧರಣಂ ಕುಮಾರಸ್ತುತಿಯೊಳ್ ಗ್ರಹಣಂ ಚಂದ್ರಾರ್ಕರೊಳ್ ಶೂನ್ಯಗೃಹದರ್ಶನಂ ನೆತ್ತದೊಳಲ್ಲದಿಲ್ಲವೆಲ್ಲಿಯುಂ

ಆ ತಾರಾಪೀಡಭೂಭೃತ್ಪತಿಗೆ ಸಕಳಶಾಸ್ತ್ರಾನ್ವಿತಂ ವಿಪ್ರವಂಶ
ಖ್ಯಾತಂ ನೀತಿಪ್ರಯೋಗಪ್ರಭು ನಿಖಿಳ ದಯೋದಾರ ಗಾಂಭೀರ್ಯನಾ ಬಾ
ಲ್ಯಾತಿಪ್ರೇಮಾರ್ದ್ರಚಿತ್ತಂ ನಿಶಿತಮತಿ ಮಹಾಸತ್ವವೃತ್ತಂ ತ್ರಿವರ್ಗೋ
ಪೇತಂ ಪಾಡ್ಗುಣ್ಯಶೀಲಂ ವರಬುಧನಿವಹಸ್ತೋತ್ರಪಾತ್ರಂ ಪ್ರಶಸ್ತಂ         ೨೩

ರಾಮಂಗೆ ಕುಶಿಕತನಯಂ
ವೈಮಾನಿಕನಾಯಕಂಗೆ ವಾಚಸ್ಪತಿಯಾ
ಭೀಮಂಗೆ ದಮನನೆನೆ ನಿ
ಸ್ಸೀಮಗುಣಂ ಮಂತ್ರಿಯೆನಿಸಿದಂ ಶುಕನಾಸಂ           ೨೪

ನರಕೋಗ್ರಾಸುರ ಶಾತಶಸ್ತ್ರನಿವಹೋದಗ್ರಪ್ರಹಾರಾತಿ ಭೀ
ಕರಮುಂ ಮಂದರಘರ್ಷಣಾತಿಕಠಿಣೋತ್ತುಂಗಾಸಪೀಠಾತಿಬಂ
ಧುರಮುಂ ತಾನೆನಿಸಿರ್ದ ವಿಷ್ಣುವಿನ ವಕ್ಷೋಭಾಗದೊಳ್ ನಿಂದಳಂ
ಸಿರಿಯಂ ತರ್ಪುದದಾವಗಾನಮೆನಿಕುಂ ಪ್ರಜ್ಞಾಬಳಂ ಮಂತ್ರಿಯಾ          ೨೫

ವ|| ಅಂತಾ ಮಂತ್ರಿಯೊಳ್ ಸಕಲ ರಾಜ್ಯಭಾರಮಂ ತಾರಾಪೀಡಂ ನಿಲಿಸಿ ನವಯವ್ವನೋಚಿತ ಸುಖೋನ್ಮುಖನಾದನೆಂತೆನೆ

ಪುಳಕನಿತಾಂತ ಜರ್ಝರಿತಕರ್ಣವತಂಸೆಯರಪ್ಪ ಕಾಂತೆಯ
ರ್ಕಳ ದರಹಾಸಚಂದನರಸಾಭಿಷವಂ ಮಣಿಭೂಷಣಾಂಶು ಸಂ
ಕುಳ ಪಟವಾಸರೇಣುತತಿ ಬಾಹುಲತಾದೃಢಬಂಧಮೀಕ್ಷಣೋ
ತ್ಪಳಹರಿ ತನ್ನೊಳೊಪ್ಪೆ ತಳೆದಂ ಮದನೋತ್ಸವಮಂ ಮಹೀಭುಜಂ       ೨೬

ಗ್ರಹಗಳಲ್ಲಿ ಮಾತ್ರ ಇತ್ತು. “ಆಯತಿಭಂಗವು” (೧. ಬೆಳೆಯುವುದನ್ನು ಕತ್ತರಿಸುವುದು, ೨. ಭವಿಷ್ಯದ ಸುಖವನ್ನು ಕೆಡಿಸುವುದು) ಕೂದಲು ಉಗುರುಗಳಲ್ಲಿ ಮಾತ್ರ ಇತ್ತು. “ಮಲಿನಾಂಬರತ್ವವು” (೧. ಆಕಾಶವು ಕಾಂತಿಹೀನವಾಗಿರುವಿಕೆ, ೨. ಕೊಳಕು ಬಟ್ಟೆಯನ್ನು ಹಾಕಿಕೊಂಡಿರುವುದು) ಮಳೆಗಾಲದಲ್ಲಿ ಮಾತ್ರ ಇತ್ತು. “ತಾರಕೋದ್ಧರಣ” (೧. ತಾರಕಾಸುರನನ್ನು ಕೊಲ್ಲುವುದು, ೨. ಅಪರಾಧಕ್ಕಾಗಿ ಕಣ್ಣುಗುಡ್ಡೆ ಕೀಳಿಸುವುದು) ಕುಮಾರಸ್ವಾಮಿಯ ಸ್ತೋತ್ರದಲ್ಲಿ ಮಾತ್ರ ಇತ್ತು. “ಗ್ರಹಣವು” (೧. ರಾಹುಕೇತುಗಳು ಹಿಡಿಯುವುದು, ೨. ಸೆರೆಹಿಡಿಯುವುದು) ಸೂರ್ಯ ಚಂದ್ರರಲ್ಲಿ ಮಾತ್ರ ಇತ್ತು. “ಶೂನ್ಯಗೃಹದರ್ಶನವು” (೧. ಖಾಲಿ ಮನೆಯನ್ನು ನೋಡುವುದು, ೨. ಹಾಳುಬಿದ್ದ ಮನೆಯನ್ನು ನೋಡುವುದು) ಪಗಡೆ ಆಟದಲ್ಲಿ ಮಾತ್ರ ಇತ್ತು. ದೇಶದಲ್ಲಿ ಇನ್ನೆಲ್ಲಿಯೂ ಇರಲಿಲ್ಲ. ೨೩. ಆ ತಾರಾಪೀಡಚಕ್ರವರ್ತಿಗೆ ಸಕಲಶಾಸ್ತ್ರಪ್ರವೀಣನಾದ, ಪ್ರಸಿದ್ಧವಾದ ಬ್ರಾಹ್ಮಣವಂಶದಲ್ಲಿ ಹುಟ್ಟಿದ, ರಾಜನೀತಿಯನ್ನು ಕಾರ್ಯಗತ ಮಾಡುವುದರಲ್ಲಿ ನಿಸ್ಸೀಮನಾದ, ಸಂಪೂರ್ಣವಾದ ಕರುಣೆ, ಔದಾರ್ಯ, ಗಾಂಭೀರ್ಯಗುಣಗಳಿಂದ ಕೂಡಿರುವ, ಸಣ್ಣ ವಯಸ್ಸಿನಿಂದಲೇ ಎಲ್ಲರಲ್ಲೂ ಪ್ರೀತಿಯಿಂದ ಮೃದುವಾದ ಚಿತ್ತವೃತ್ತಿಯುಳ್ಳ, ಬಹಳ ಚುರುಕಾದ ಬುದ್ಧಿಯುಳ್ಳ, ಬಹಳ ರಸ್ವಭಾವದವನಾದ, ಪ್ರಭುಶಕ್ತಿ, ಮಂತ್ರಶಕ್ತಿ, ಉತ್ಸಾಹಗಳಿಂದ ಪರಿಪೂರ್ಣನಾದ ಸಂ, ವಿಗ್ರಹ, ಯಾನ, ಆಸನ, ದ್ವೆ ಧ, ಸಂಶ್ರಯಗಳೆಂಬ ರಾಜ್ಯಭಾರಕ್ಕೆ ಬೇಕಾದ ಆರು ಗುಣಗಳಿಂದ ಕೂಡಿರುವ, ಎಲ್ಲಾ ವಿದ್ಯಾವಂತರ ಹೊಗಳಿಕೆಗೆ ಪಾತ್ರನಾದ ಮತ್ತು ಶ್ರೇಷ್ಠನಾದ, ೨೪. ಅಮಿತಿ ಸದ್ಗುಣಗಳಿಂದ ಕೂಡಿದ ಶುಕನಾಸನೆಂಬುವನು ಶ್ರೀರಾಮನಿಗೆ ವಿಶ್ವಾಮಿತ್ರಮಹರ್ಷಿಯಂತೆಯೂ, ಇಂದ್ರನಿಗೆ ಬೃಹಸ್ಪತಿಯಂತೆಯೂ, ಭೀಮನೃಪಾಲನಿಗೆ ದಮನನಂತೆಯೂ ಮುಖ್ಯಮಂತ್ರಿಯಾಗಿದ್ದನು. ೨೫. ಲಕ್ಷಿ ಯು ಇದುವರೆಗೆ ವಾಸವಾಗಿದ್ದುದು ವಿಷ್ಣುವಿನ ವಕ್ಷಸ್ಥಳದಲ್ಲಿ. ಅದು ನರಕನೆಂಬ ಕ್ರೂರನಾದ ರಾಕ್ಷಸನ ಹರಿತವಾದ ಆಯುಧಗಳ ಕಠೋರವಾದ ಹೊಡೆತಗಳಿಂದ ಜಡ್ಡುಗಟ್ಟಿ ಹೆದರಿಕೆಯನ್ನುಂಟುಮಾಡುತ್ತಿತ್ತು. ಮತ್ತು ಸಮುದ್ರಮಥನಕಾಲದಲ್ಲಿ ಮಂದರಪರ್ವತದ ತಿಕ್ಕಾಟದಿಂದ ಬಹಳ ಒರಟಾಗಿಬಿಟ್ಟಿದೆ. ಇಂತಹ ಪ್ರಶಸ್ತವಲ್ಲದ ಕಡೆಯಲ್ಲಿ ವಾಸವಾಗಿರುವವಳನ್ನು ಈ ಸ್ಥಳಕ್ಕೆ ಕರೆತರುವುದು ಏನು ಮಹಾ ದೊಡ್ಡದು? ಎಂಬಂತೆ ಆ ಮಂತ್ರಿಯ ಬುದ್ಧಿಶಕ್ತಿಯು ವಿರಾಜಿಸುತ್ತಿತ್ತು. ವ|| ತಾರಾಪೀಡನು ಅಂತಹ ಮಂತ್ರಿಯಲ್ಲಿ ಸಕಲ ರಾಜ್ಯಭಾರವನ್ನೂ ಇರಿಸಿ ಹೊಸದಾದ ಯೌವನಕ್ಕೆ ಉಚಿತವಾದ ಸುಖಾನುಭವದಲ್ಲಿ ನಿರತನಾಗಿದ್ದನು. ೨೬. ಆ ಅರಸನು ಕಾಮೋತ್ಸವವನ್ನು ಅನುಭವಿಸುತ್ತಿದ್ದನು. ಹೇಗೆಂದರೆ ರಮಣಿಯರ ಕಿವಿಯ ಮೇಲೆ ಮುಡಿದುಕೊಂಡಿರುವ ಚಿಗುರು ರೋಮಾಂಚನದಿಂದ ಜರ್ಝರಿತವಾಗುತ್ತಿತ್ತು. ಅಂತಹ ರಮಣಿಯರ