ಮನುಮಾರ್ಗದೊಳೇಕಾದಶ
ದಿನದೊಳ್ ತನಯಂಗೆ ವಿಪ್ರಜನಸಮುಚಿತಮಾ
ಯ್ತೆನೆ ಸಚಿವಂ ವೈಶಂಪಾ
ಯನನೆಂಬೀ ಪೆಸರನಿಟ್ಟನಕೋತ್ಸವದಿಂ       ೧೧೮
ವ|| ಅನಂತರಮೇೞ್ಗೆವಡೆದ ಪಾಡಿವದ ಚಂದ್ರಮನಂತೆ ಚಂದ್ರಾಪೀಡಂ ಪ್ರತಿದಿನಂ ಪ್ರವೃದ್ಧಮಾನನಾಗೆ ಚೂಡಾಕರಣಾದಿ ಕ್ರಿಯಾಕಲಾಪ ಮುಮಂ ಮಾಡುತ್ತುಮಿರೆ ಶೈಶವಂ ಪತ್ತುವಿಡುವುದುಂ ಕ್ರೀಡಾವ್ಯಸನಮಗಲ್ವಂತು ಬಹಿರ್ನಗರದೊಳಮರಮಂದಿರಾನುಕಾರಿಯಪ್ಪ ವಿದ್ಯಾನಿಕೇತನಮಂ ಮಾಡಿಸಿ ನಿಖಿಳವಿದ್ಯಾಚಾರ್ಯರುಮಂ ಮಹಾಪ್ರಯತ್ನದಿಂ ನಿಲಿಸಿ ಶುಭದಿನದೊಳ್ ಧವಳಮಂಗಳ ಪ್ರಸಾಧನಾಲಂಕೃತನು ಮಾಚಾರ್ಯಕುಲಪರಿವೃತನುಮಪ್ಪ ನಿಜನಂದನನಂ ವೈಶಂಪಾಯನಂಬೆರಸು ವಿದ್ಯಾಗಮನದೊಳ್ ಸಮರ್ಪಿಸಿ ಪಂಜರಸ್ಥಿತ ಮದಕೇಸರಿ ಕಿಶೋರಕದಂತೆಗೆಯ್ದಖಿಳ ವಿದ್ಯಾಭ್ಯಾಸಂಗೆಯ್ಸುತ್ತಮಿರೆ

ಪೊಳೆದೆಸೆವ ರತ್ನದರ್ಪಣ
ದೊಳಗೆ ತಳತ್ತಳಿಪ ತರಣಿಕಿರಣಾವಳಿವೊಲ್
ತೊಳಗಿ ಬೆಳಗಿದುವು ವಿದ್ಯಾ
ವಳಿ ನಿಜ್ಲನಂದನನ್ವ ವದನಮಣಿದರ್ಪಣದೊಳ್          ೧೧೯

ವ|| ಅಂತು ಸಕಲಕಳಾಕಳಾಪಮನಪ್ಪುಗೆಯ್ದು ಶಸ್ತ್ರಾಶಾಸ್ತ್ರದೊಳತ್ಯಂತಪರಿಣತಾನುಗುತ್ತುಮಿರೆಯಿರೆ

ವಿರಳ ಪರಿವಾರಪರಿವೃತ
ನರಸಂ ಮಾದೇವಿವೆರಸು ನಿಚ್ಚಂ ಬಂದಾ
ದರದಿಂದೆ ನೋಡಿ ಪೋಪಂ
ಗುರುಜನಪರಿವೃತನೆನಿಪ್ಪ ನಿಜನಂದನನಂ    ೧೨೦

ಸಕಲಶ್ರಮಂಗಳಿಂದಂ
ವೃಕೋದರನ ತೆಱದಿನಂದು ಶೈಶವದೊಳ್ ಲೋ
ಕಕೆ ಚಿತ್ರಮಪ್ಪಿನಂ  ರಾ
ಜಕುಮಾರಂ ತಾಳ್ದಿದಂ ಮಹಾಪ್ರಾಣತೆಯಂ             ೧೨೧

ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಸ್ವಪ್ನದ ಸಾಮ್ಯದಿಂದ ಮಹಾರಾಜನು ತನ್ನ ಮಗನಿಗೆ ‘ಚಂದ್ರಾಪೀಡ’ನೆಂದು ನಾಮಕರಣವನ್ನು ಮಾಡಿದನು. ಆಗ ಮಂಗಳಕರವಾದ ತುತ್ತೂರಿಯ ಧ್ವನಿಯು ಮೂರು ಲೋಕಗಳಲ್ಲೂ ಹರಡುತ್ತಿತ್ತು. ೧೧೮. ಶುಕನಾಸನು ಮನುಧರ್ಮ ಶಾಸ್ತ್ರದಂತೆ ಹನ್ನೊಂದನೆಯ ದಿವಸ ಬ್ರಾಹ್ಮಣಜಾತಿಗೆ ಉಚಿತವಾಗುವ ಹಾಗೆ ಬಹಳ ವಿಜೃಂಭಣೆಯಿಂದ ನಾಮಕರಣ ಮಹೋತ್ಸವವನ್ನು ನೆರವೇರಿಸಿ ವೈಶಂಪಾಯನನೆಂಬ ಹೆಸರನ್ನಿಟ್ಟನು. ವ|| ಆಮೇಲೆ ಬೆಳೆಯುತ್ತಿರುವ ಶುಕ್ಲಪಕ್ಷದ ಪಾಡ್ಯದ ಚಂದ್ರನಂತೆ ಚಂದ್ರಾಪೀಡನು ದಿನೇ ದಿನೇ ಬೆಳೆಯುತ್ತಿರಲಾಗಿ ಮಹಾರಾಜನು ಚೌಲವೇ ಮೊದಲಾದ ಸಂಪ್ರದಾಯದ ವಿಗಳನ್ನು ನೆರವೇರಿಸಿದನು. ಹಸುಳೆತನವು ಕಳೆಯಿತು. ಹುಡುಗಾಟಿಕೆಗಳೆಲ್ಲಾ ನಿಂತು ಹೋದುವು. ಆಗ ಚಕ್ರವರ್ತಿಯು ಪಟ್ಟಣದ ಹೊರವಲಯದಲ್ಲಿ ಅರಮನೆಗೆ ಸಮಾನವಾದ ಒಂದು ಪಾಠಶಾಲೆಯನ್ನು ಕಟ್ಟಿಸಿದನು. ಅಲ್ಲಿ ಅನೇಕ ವಿದ್ಯೆಗಳಲ್ಲಿ ಪಾರಂಗತರಾದ ಉಪಾಧ್ಯಾಯರನ್ನು ಬಹಳ ಪ್ರಯತ್ನದಿಂದ ಆರಿಸಿ ಕರೆದುಕೊಂಡುಬಂದು ಅವರಿಗೆ ವಸತಿಯನ್ನು ಕಲ್ಪಿಸಿದನು. ಬಳಿಕ ಒಂದು ಶುಭದಿವಸದಲ್ಲಿ ಶುಭ್ರವಾದ ಹಾಗೂ ಮಂಗಳಕರವಾದ ಉಡಿಗೆ ತೊಡಿಗೆಗಳಿಂದ ಅಲಂಕೃತನಾದ ಮತ್ತು ಗುರುಗಳ ಸಮೂಹದಿಂದ ಕೂಡಿಕೊಂಡಿರುವ ತನ್ನ ಮಗನನ್ನು ವೈಶಂಪಾಯನನ ಜೊತೆಯಲ್ಲಿ ವಿದ್ಯಾಭ್ಯಾಸಕ್ಕೆ ಮೊದಲು ಮಾಡಿಸಿದನು. ಆಗ ರಾಜಕುಮಾರನನ್ನು ಪಂಜರದಲ್ಲಿರುವ ಕೊಬ್ಬಿದ ಸಿಂಹದ ಮರಿಯಂತೆ ಮಾಡಿ ಎಲ್ಲಾ ವಿದ್ಯೆಗಳನ್ನು ಕಲಿಸುತ್ತಿದ್ದನು. ೧೯೯. ಮಿರುಗುತ್ತಿರುವ ರನ್ನಗನ್ನಡಿಯಲ್ಲಿ ತಳತಳಿಸುವ ಸೂರ್ಯಕಿರಣಗಳಂತೆ ಆ ರಾಜಕುಮಾರನ ಬಾಯೆಂಬ ರನ್ನಗನ್ನಡಿಯಲ್ಲಿ ಎಲ್ಲಾ ವಿದ್ಯೆಗಳೂ ಪ್ರತಿಫಲಿಸಿ ಪ್ರಕಾಶಿಸಿದುವು. ವ|| ಹೀಗೆ ಸಮಸ್ತ ಕಲೆಗಳನ್ನೂ ಕಲಿತು ಶಸ್ತ್ರವಿದ್ಯೆಯಲ್ಲಿಯೂ ಶಾಸ್ತ್ರವಿದ್ಯೆಯಲ್ಲಿಯೂ ಬಹಳಮಟ್ಟಿಗೆ ಪಾರಂಗತನಾಗುತ್ತಿರಲಾಗಿ, ೧೨೦. ಮಹಾರಾಜನು ಮಿತಪರಿವಾರ ಸಮೇತನಾಗಿ ಮಹಾರಾಣಿಯೊಂದಿಗೆ ಪ್ರತಿನಿತ್ಯವೂ ಭೇಟಿಕೊಡುತ್ತಾ ಉಪಾಧ್ಯಾಯವರ್ಗದಿಂದ ಕೂಡಿಕೊಂಡಿರುವ ತನ್ನ ಮಗನನ್ನು ನೋಡಿಕೊಂಡು ಹೋಗುತ್ತಿದ್ದನು. ೧೨೧. ರಾಜಕುಮಾರನು ಎಳೆತನದಲ್ಲೇ ಬಗೆಬಗೆಯ ವ್ಯಾಯಾಮಗಳಿಂದ ಜನರೆಲ್ಲರೂ ಆಶ್ಚರ್ಯ

ಲೀಲೆಯೊಳೆ ಪಿಡಿದು ನಿಲಿಪಂ
ವ್ಯಾಳೇಭವಮನೊಂದುಪೊಯ್ಲಿನಿಂ ದಮೆ ಕಡಿವಂ
ತಾಳಗಳ್ವನುರ್ಚಿಸುವಂ
ಶೈಲಶಿಲಾತಳಮನೆಳವೆಯೊಳ್ ನೃಪತನಯಂ        ೧೨೨

ಗುಣಮುಂ ರೂಪುಂ ವಿದ್ಯಾ
ಗುಣಮುಂ ತಳ್ಪೊಯ್ದು ತನ್ನೊಳೆಸೆಯಲ್ ವಿಬುಧಾ
ಗ್ರಣಿಯೆನಿಪ ಕುಮಾರನೊಳಂ
ದೆಣೆಯಾದಂ ಸಚಿವತನಯನಾ ಕ್ರಮದಿಂದಂ            ೧೨೩

ಶುಕನಾಸಾರ್ಯಗುರುತ್ವದಿಂದೆ ಸಹಪಾಂಸುಕ್ರೀಡನಾಭ್ಯಾಸದಿಂ
ದೆ ಕಳಾಜ್ಞಾನವಿಶೇಷದಿಂದುಚಿತಸೇವಾಜಾತಚಾತುರ್ಯದಿಂ
ದೆ ಕರಂ ಚಿತ್ತಮನಪ್ಪುಗೆಯ್ದಖಿಳವಿಸ್ರಂಭಕ್ಕಮಾವಾಸಮಾ
ಗಿ ಕುಮಾರಂಗೆ ಮಹಾಪ್ರಧಾನತನಯಂ ಮಿತ್ರತ್ವಮಂ ತಾಳ್ದಿದಂ          ೧೨೪

ದಿನಪತಿಯುಂ ದಿನಮುಂ ಬಿಡ
ದನುಬಂಧದಿನಗಲದಂತೆವೊಲ್ ಚಂದ್ರಾಪೀ
ಡನುಮಂತಾ ವೈಶಂಪಾ
ಯನನುಂ ಪದಪಿಂದಮೊರ್ವರೊರ್ವರನಗಲರ್         ೧೨೫

ಕಮಲವನಕ್ಕಿನೋದಯಮಿರುಳ್ಗಮೃತಾಂಶುಸಮುದ್ಗಮಂ ಸುರ
ದ್ರುಮಕೆ ನವಪ್ರಸೂನವಿಭವಂ ನವಿಲಿಂಗೆ ಕಲಾಪವರ್ಣಮಂ
ತಮರ್ದ ಮುಗಿಲ್ಗೆ ಶಕ್ರಧನುವೋಲ್ ಭುವನತ್ರಯಮಂಗಳಾಭಿರಾ
ಮಮಿದೆನೆ ರಾಜಸೂನುಗೆಸೆದತ್ತೆನಿಸುಂ ನವಯವ್ವನೋದಯಂ             ೧೨೬

ಅವಸರಮಿದೆನಗೆನುತ್ತಭಿ
ನವಸೇವಕನಂತೆ ಮೆಲ್ಲಮೆಲ್ಲನೆ ಮದನಂ
ನವಯೌವನವಿಶ್ರುತ ಪೂ
ರ್ಣವಿಳಾಸಮನಂದು ಪೊರ್ದಲುದ್ಯತನಾದಂ             ೧೨೭

ಪಡುವಂತೆ ಭೀಮಸೇನನ ಹಾಗೆ ಬಹಳ ಶಕ್ತಿಯನ್ನು ಪಡೆದನು. ೧೨೨. ರಾಜಪುತ್ರನು ಸಣ್ಣ ವಯಸ್ಸಿನಲ್ಲೇ ಕೊಬ್ಬಿದ ಆನೆಯನ್ನು ಅನಾಯಾಸವಾಗಿ ಹಿಡಿದು ನಿಲ್ಲಿಸಿಬಿಡುತ್ತಿದ್ದನು. ತಾಳೆಮರವನ್ನು ಒಂದೇ ಏಟಿನಿಂದಲೇ ತುಂಡರಿಸುತ್ತಿದ್ದನು. ಬೆಟ್ಟದ ಬಂಡೆಗಳನ್ನು ಎಳೆದುಹಾಕುತ್ತಿದ್ದನು. ೧೨೩. ಮಂತ್ರಿಪುತ್ರನಾದ ವೈಶಂಪಾಯನನಲ್ಲಿ ವಿನಯವೇ ಮೊದಲಾದ ಗುಣಗಳೂ, ರೂಪು, ವಿದ್ಯೆಯೂ ಕೂಡಿಕೊಂಡು ಪ್ರಕಾಶಿಸುತ್ತಿದ್ದವು. ಆದ್ದರಿಂದ ಅವನು ಸರ್ವವಿದ್ಯಾಪಾರಂಗತನಾದ ಚಂದ್ರಾಪೀಡನಿಗೆ ಸಮಜೋಡಿಯಾಗಿದ್ದನು. ೧೨೪. ರಾಜಕುಮಾರನಾದ ಚಂದ್ರಾಪೀಡನಿಗೆ ಪ್ರಧಾನಮಂತ್ರಿಯ ಮಗನಾದ ವೈಶಂಪಾಯನನು ಶುಕನಾಸಮಂತ್ರಿಯ ಮೇಲಿರುವ ಪೂಜ್ಯಭಾವನೆಯಿಂದಲೂ, ಒಟ್ಟಾಗಿ ಧೂಳಿನಲ್ಲಿ ಆಡುತ್ತಿದ್ದ ಕಾಲದಿಂದಲೂ ಬಂದ ಒಡನಾಡಿತನದಿಂದಲೂ, ಕಲಾಪ್ರವೀಣತೆಯಿಂದಲೂ ಉಚಿತ ರೀತಿಯಲ್ಲಿ ಓಲೈಸುತ್ತಾ ಬರುವುದರೊಳಗಿದ್ದ ಜಾಣತನದಿಂದಲೂ ಮನಸ್ಸಿಗೆ ವಿಶೇಷವಾಗಿ ಅಚ್ಚುಮೆಚ್ಚಾಗಿದ್ದನು, ಎಲ್ಲಾ ಅಂತರಂಗವಿಷಯಕ್ಕೂ ನೆಲೆಯಾಗಿದ್ದನು. ಹೀಗೆ ಚಂದ್ರಾಪೀಡನಿಗೆ ವೈಶಂಪಾಯನನು ನಚ್ಚಿನ ಗೆಳೆಯನಾಗಿದ್ದನು. ೧೨೫. ಹಗಲಿಗೆ ಒಡೆಯನಾದ ಸೂರ್ಯನೂ ಹಗಲೂ ಪರಸ್ಪರ ಬಿಟ್ಟಿರದೆ ಒಟ್ಟಿಗಿರುವಿಕೆ ಚಂದ್ರಾಪೀಡನೂ ವೈಶಂಪಾಯನನೂ ಪ್ರೀತಿಯಿಂದ ಒಬ್ಬರನ್ನೊಬ್ಬರು ಅಗಲದೆ ಇರುತ್ತಿದ್ದರು. ೧೨೬. ತಾವರೆಯ ಗುಂಪಿಗೆ ಸೂರ್ಯೋದಯವಾದಂತೆಯೂ, ಇರುಳಿಗೆ ಚಂದ್ರೋದಯ ವಾದಂತೆಯೂ, ಕಲ್ಪವೃಕ್ಷಕ್ಕೆ ಹೊಸ ಹೂವುಗಳ ಸಮೃದ್ಧಿಯುಂಟಾದಂತೆಯೂ, ನವಿಲಿಗೆ ಸೋಗೆಗಳು ಮೂಡುವಂತೆಯೂ, ಮೇಘಕ್ಕೆ ಕಾಮನಬಿಲ್ಲು ಮೂಡುವಂತೆಯೂ, ರಾಜಕುಮಾರನಿಗೆ ಮೂರು ಲೋಕಗಳಿಗೂ ಮಂಗಳಕರವಾದ ಸೊಬಗೆನಿಸಿದ ನವತಾರುಣ್ಯವು ರಾಜಕುಮಾರನಿಗೆ ಪ್ರಾರಂಭವಾಗಿ ಕಂಗೊಳಿಸುತ್ತಿತ್ತು. ೧೨೭. ಆಗ ಮನ್ಮಥನು ಹೊಸ ಸೇವಕನಂತೆ ಇದು ಓಲೈಸಲು ಸಕಾಲವೆಂದು ಮೆಲ್ಲಮೆಲ್ಲನೆ ಬಂದು ಕೂಡಿದನು. ಹಾಗೂ ಹೊಸಪ್ರಾಯದಲ್ಲಿ ಸರ್ವವಿದಿತವಾದ ತನ್ನ ಸಂಪೂರ್ಣ ಚಟುವಟಿಕೆಯನ್ನು ಪ್ರದರ್ಶಿಸಲು

ಸಿರಿಯೊಡನೊಂದಿ ಬಿತ್ತಿರಿಸಿದತ್ತಮರಸ್ಥಳಮನ್ಯಭೂಮಿಪೋ
ತ್ಕರದೊಡನಾದಮೊಂದಿ ತನುವಾದುದು ಮಧ್ಯಮುದಾರತಾ ನಿರಂ
ತರತೆಯೊಳೊಂದಿ ನೀಳ್ದುದು ಭುಜದ್ವಿತಯಂ ಭುವನಾವಭಾಸಿ ಸ
ಚ್ಚರಿತದೊಳೊಂದಿ ಚೆಲ್ವನೊಳಕೊಂಡವು ಕಣ್ಮಲರ್ಗಳ್ ಕುಮಾರನಾ      ೧೨೮

ತೊಳತೊಳತೊಳಗುವ ಷೋಡಶ
ಕಳೆಯಿಂ ಕಣ್ಗೊಳಿಪ ಚಂದ್ರನಂದದಿನತ್ಯು
ಜ್ವಳತನು ಷೋಡಶವರ್ಷಂ
ಗಳಿಂದೆ ಕಣ್ಗೆಸೆದನಂದು ಚಂದ್ರಾಪೀಡಂ        ೧೨೯

ಚಂದ್ರಾಪೀಡನ ಜನನ ಮತ್ತು ಬಾಲ್ಯ ಸಮಾಪ್ತ

ಪ್ರಾರಂಭಿಸಿದನು. ೧೨೮. ಆಗ ಚಂದ್ರಾಪೀಡನ ಎದೆಯು ಶರೀರಕಾಂತಿಯೊಂದಿಗೆ ವಿಸ್ತಾರವಾಯಿತು. ಸೊಂಟವು ಶತ್ರುರಾಜರ ಜೊತೆಯಲ್ಲಿ ಕೃಶವಾಗಿ ಬಿಟ್ಟಿತು. ಎರಡು ತೋಳುಗಳು ಔದಾರ್ಯದ ಜೊತೆಯಲ್ಲೇ ನೀಳವಾದವು. ಜಗತ್ತನ್ನು ಬೆಳಗುವ ಸಚ್ಚರಿತ್ರೆ ಯೊಂದಿಗೆ ಕಣ್ಣುಗಳೂ ಸೊಬಗನ್ನೂ ಪಡೆದವು. ಟಿ. ಸಹೋಕ್ತಿ ಎಂಬ ಅಲಂಕಾರ, ಶರೀರಕಾಂತಿಯೂ ಎದೆಯೂ ವಿಸ್ತಾರವಾಯಿತು ಎಂಬುದು ವಿವಕ್ಷಿತಾರ್ಥ. ೧೨೯. ತಳತಳಿಸುತ್ತಿರುವ ಹದಿನಾರು ಕಲೆಗಳಿಂದ ಕಂಗೊಳಿಸುವ ಚಂದ್ರನಂತೆ ಉಜ್ವಳಿಸುವ ಶರೀರವುಳ್ಳ ಚಂದ್ರಾಪೀಡನು ಹದಿನಾರು ವರ್ಷಗಳು ತುಂಬಲು ಬಹಳ ಚೆನ್ನಾಗಿ ಕಂಗೊಳಿಸುತ್ತಿದ್ದನು.

ಚಂದ್ರಾಪೀಡನ ಜನನ ಮತ್ತು ಬಾಲ್ಯ ಮುಗಿಯಿತು.