೧ ಒಂದು ಬಗೆಯ ವಾದ್ಯ

ಭುವನಜನಮೆಲ್ಲಮೊರ್ಮೆಯೆ
ಕವಿದುದೆನಲ್ ತಮ್ಮ ತಮ್ಮ ನಿಖಿಲವ್ಯಾಪಾ
ರವ್ಲನುೞದ ರಸನ ನೋಡುವ
ತವಕದೆ ಮಿಗೆ ನಗರಲೋಕಮೆಯ್ದಿತ್ತಾಗಳ್                      ೨೩

ಸುದತೀರತ್ನ ಕರೀಂದ್ರರತ್ನ ಹಯರತ್ನಾನೀಕರತ್ನಾದಿರ
ತ್ನದ ಮೇಳಾಪಕದಿಂದ ವೀಕ್ಷಣಸಮುತ್ಥಾನೇಕಸಂಮರ್ದ ಸಂ
ಮದಕೋಲಾಹಲದಿಂದಮಾ ನಗರಿ ನಾನ್ವಾಕ್ಷಾ ಧರಕ್ಷೋಭಮು
ಣ್ಮಿದ ರತ್ನಾಕರಲಕ್ಷಿ ವೋಲ್ ನೃಪವರಂ ಬರ್ಪಾಗಳೇನೊಪ್ಪಿತೋ          ೨೪

ಶರದಭ್ರಾಕಾರ ಸೌಧಪ್ರಕಟವಿಘಟಿತಾಭ್ಯರ್ಣ ನಾನಾ ಗವಾಕ್ಷೋ
ತ್ಕರದಿಂದಂ ನೋಡುವಂತುದ್ಗತ ವಿತತಪತಾಕಾಂಚಲಾನೀಕದಿಂದಂ
ಕರೆವಂತಾಬದ್ಧಶೋಣೋಪಲರುಚಿ ವಿಲಸತ್ತೋರಣಾನೀಕನಿರ್ಯ
ತ್ಕದಿಂದಾಂಲಿಂಗಿಪಂತಾ ನಗರಿ ನೃಪವರಂಗೆಡ್ಡಮಾರ್ಗಿರ್ದುದಾಗಳ್      ೨೫

ವ|| ಅಂತೆಸೆವ ನಗರೀರತ್ನರಚಿತೋತ್ತುಂಗ ಮಂಗಳತೋರಣಂಗಳಂ ನುಸುಳುತ್ತುಂ ಬರ್ಪ ರೂಪವಿದ್ಯಾಧರನಂ ನೋಡಲೆಂದು ನೆಲೆಮಾಡಂಗಳನೇಱದ ನೀಯರಲಕ್ತಕರಾಗರಂಜಿತ ಪದಪಲ್ಲವಂಗಳಿನವನಿತಳಮೆಲ್ಲಂ ಪಲ್ಲವಿಸಿದಂತೆಯುಂ ಆ ನಿತಂಬಿನಿಯರ ವದನೇಂದುಬಿಂಬ ನಿಕುರುಂಬದಿನಂಬರತಳಂ ಚಂದ್ರಮಂಡಲ ಮಾದಂತೆಯುಂ ಆ ಲಾವಣ್ಯವತಿಯರಾತಪಕ್ಕೆತ್ತಿದ ಕೆಂದಳಂಗಳ ಸಂದಣಿಯಿಂ ದಿಕ್ಚಕ್ರಮೆಲ್ಲಂ ಕೆಂದಾವರೆಗೊಳನಲ ರ್ದಂತೆಯುಮಾರಮಣೀಯ ರಮಣಿಯರಾಭರಣಕಿರಣಕಳಾಪಂಗಳಿಂ ತರಣಿಕಿರಣಂಗಳೆಲ್ಲ ಮಿಂದ್ರಚಾಪಲ ತಾವಿತಾನದಂತೆಯುಮಾ ಕಾಮಿನಿಯರ ಕಮನೀಯಲೋಚನಮರೀಚಿಗಳಿಂದಂ ದಿನಂ ವಿಕಸಿತನೀಲ ನೀರಜಾಕರದಂತಿರೆಯುಮತಿ ಕೌತುಕದಿಂದೀಕ್ಷಿಸುವಲ್ಲಿ

ನೆಲೆಮೊಲೆಯಿಂದಂ ಮೇಲುದು
ತೊಲಗಲ್ ಹಾರಾಂಶುವಂ ನಿಜಾಂಶುಕವೆಂದಂ
ದಲಘುಕುಚೆ ಮೇಲ್ಕೊಳುತ್ತಾ
ಕುಲತೆಯನೆಯ್ತಂದು ನೋಡಿದಳ್ ನೃಪವರನಂ            ೨೬

೨೩. ಪ್ರಪಂಚದ ಜನರೆಲ್ಲ ಒಟ್ಟಿಗೆ ಸೇರಿಬಿಟ್ಟರೋ ಎಂಬಂತೆ ಆ ಪಟ್ಟಣದ ಜನರೆಲ್ಲರೂ ತಮ್ಮ ತಮ್ಮ ಕೆಲಸಗಳನ್ನೆಲ್ಲ ಬಿಟ್ಟು ರಾಜಕುಮಾರನನ್ನು ನೋಡಬೇಕೆಂಬ ತವಕದಿಂದ ಕೂಡಿದರು. ೨೪. ರಾಜಕುಮಾರನು ಬರುತ್ತಿರುವಾಗ ಸ್ತ್ರೀರತ್ನ, ಗಜರತ್ನ, ಅಶ್ವರತ್ನ, ಸೈನ್ಯರತ್ನ, ಹೀಗೆ ಅನೇಕ ರತ್ನಗಳು ಒಂದೇ ಕಡೆ ಸೇರುವಿಕೆಯಿಂದಲೂ ರಾಜಕುಮಾರನನ್ನು ನೋಡಬೇಕೆಂಬ ಕುತೂಹಲದಿಂದ ಉಂಟಾದ ನೂಕುನುಗ್ಗಲಿನ ಗದ್ದಲದಿಂದಲೂ ಕೂಡಿದ ಆ ರಾಜಧಾನಿಯು, ಮಂದರಪರ್ವತದಿಂದ ಕಡೆಯುವಾಗ ಬಗೆಬಗೆಯ ಕಲಕಾಟವು ಹೆಚ್ಚುತ್ತಿರುವ ಸಮುದ್ರದ ಚೆಲುವಿನಂತೆ ಶೋಭಿಸುತ್ತಿತ್ತು. ಟಿ. ರತ್ನ=ವಜ್ರ ಮುಂತಾದ ರತ್ನ; ಶ್ರೇಷ್ಠವಸ್ತು. (ಸ್ತ್ರೀರತ್ನ=ಶ್ರೇಷ್ಠಸ್ತ್ರೀ). ೨೫. ಆ ಮಹಾನಗರಿಯು ಶರತ್ಕಾಲದ ಮೇಘದಂತೆ ಶುಭ್ರವಾದ ಮಹಡಿಮನೆಗಳಲ್ಲಿ ವಿಶಾಲವಾಗಿ ತೆರೆದಿರುವ ಅನೇಕ ಕಿಟಕಿಗಳಿಂದ ರಾಜಕುಮಾರನನ್ನು ನೋಡುವಂತೆಯೂ, ಎತ್ತಿಕಟ್ಟಿರುವ ಹಾಗೂ ಹರಡಿಕೊಂಡಿರುವ ಬಾವುಟಗಳ ಅಂಚಿನಿಂದ ಕರೆಯುವಂತೆಯೂ, ಕೆಂಪುಶಿಲೆಗಳಿಂದ ನಿರ್ಮಿತವಾದ ಹೆಬ್ಬಾಗಿಲುಗಳಿಂದ ಹೊರಡುವ ಕಾಂತಿಯಿಂದ ತಬ್ಬಿಕೊಳ್ಳುವಂತೆಯೂ ರಾಜಕುಮಾರನಿಗೆ ಮೋಹಕವಾಗಿ ಕಾಣಿಸಿತು. ಟಿ. ಇಲ್ಲಿ ನಗರಿಯು ರಮಣಿಯೆಂದೂ ಧ್ವಜಪಟ ಮತ್ತು ಕಿರಣಗಳು ಕೈಯೆಂದೂ ವ್ಯಂಗ್ಯವಾಗಿದೆ. ವ|| ಹೀಗೆ ಶೋಭಿಸುತ್ತಿರುವ ಆ ದಿವ್ಯವಾದ ಪಟ್ಟಣದಲ್ಲಿ ಅಲ್ಲಲ್ಲಿ ಕಟ್ಟಿರುವ ಎತ್ತರವಾದ ಮಂಗಳತೋರಣಗಳನ್ನು ಹಾಯ್ದು ಬರುತ್ತಿರುವ ವಿದ್ಯಾಧರನಂತೆ ಪರಮಸುಂದರನಾದ ರಾಜಕುಮಾರನನ್ನು ನೋಡಬೇಕೆಂದು ಮಹಡಿಗಳನ್ನು ಹತ್ತಿರುವ ಮಹಿಳೆಯರ ಅರಗಿನ ಕಂಪಿನಿಂದ ರಂಜಿಸುವ ಹಾಗೂ ಚಿಗುರಿನಂತಿರುವ ಹೆಜ್ಜೆಗಳಿಂದ ಭೂಮಿಯೆಲ್ಲವೂ ಚಿಗುರಿದಂತೆಯೇ ಶೋಭಿಸುತ್ತಿತ್ತು. ಆ ಸುಂದರಿಯರ ಚಂದ್ರಮಂಡಲಕ್ಕೆ ಸದೃಶವಾದ ಮುಖಗಳಿಂದ ಆಕಾಶವೆಲ್ಲವೂ ಚಂದ್ರಮಂಡಲಮಯವಾಗಿ ಕಾಣುತ್ತಿತ್ತು. ಆ ಚೆಲುವೆಯರು ಬಿಸಿಲನ್ನು ತಪ್ಪಿಸಿಕೊಳ್ಳಲು ಮೇಲೆ ಎತ್ತಿ ಹಿಡಿದಿರುವ ಕೆಂಬಣ್ಣದ ಕರತಲಗಳಿಂದ ದಿಕ್ಕುಗಳೆಲ್ಲವೂ ಅರಳಿದ ತಾವರೆಗಳುಳ್ಳ ತಾವರೆಗೊಳದಂತೆಯೂ ಕಾಣುತ್ತಿತ್ತು. ಆ ಸುಂದರಿಯರಾದ ಹೆಂಗಳ ಆಭರಣಗಳ ಕಾಂತಿಪುಂಜದಿಂದ ಸೂರ್ಯಕಿರಣಗಳೆಲ್ಲ ಕಾಮನಬಿಲ್ಲೆಂಬ ಬಳ್ಳಿಯ ರಾಶಿಯಂತೆಯೂ, ಆ ಕಾಮಿನಿಯರ ಸುಂದರವಾದ ಕಣ್ಣುಗಳ ಹೊಳಪಿನಿಂದ ಹಗಲೆಲ್ಲ ಅರಳಿದ ಕನ್ನೆ ದಿಲೆಗಳುಳ್ಳ ಸರೋವರದಂತೆಯೂ ಕಾಣುತ್ತಿತ್ತು. ಹೀಗೆ ಬಹಳ ಕುತೂಹಲದಿಂದ ನೋಡುತ್ತಿರಲಾಗಿ, ೨೬. ಅವರಲ್ಲಿ ತೋರಮೊಲೆಯ ಒಬ್ಬಳು ತನ್ನ ಗಡುಸುಮೊಲೆಗಳಿಂದ

ವ|| ಮತ್ತಮಪರಿಸಮಾಪ್ತಪ್ರಸಾಧನೆಯರಾಗಿ ಬಂದು ನೋಡುವಲ್ಲಿ ಮತ್ತಮೊರ್ವಳ್

ಉಡೆ ಜೋಲಲ್ ನೂಲ್ ಸಡಿಲಲ್
ಮುಡಿ ಪರೆಯಲ್ ಹಾರಲತೆಯನಕ್ಷಾವಳಿಯಂ
ಪಿಡಿದಂತೆ ಪಿಡಿದು ತುರಿಪದೆ
ನಡೆತಂದಳ್ ಕಾಮಯೋಗಿನೀವಿಭ್ರಮದಿಂ                ೨೭

ಪಿರಿದುಮೆರ್ದೆ ಡವಕೆ ವಾಜಿಸು
ತಿರೆ ಭಂಗಂಬೆತ್ತು ಹಾರಲತೆ ಘನಕುಚದೊಳ್
ಕರವಿಕ್ಷೇಪದೆ ನರ್ತಿಸೆ
ನರೇಂದ್ರನಂದನನನೊಲ್ದು ನೋಡಿದಳೊರ್ವಳ್         ೨೮

ಮಂದಾನಿಲ ರಗಳೆ|| ಇನಿತಂ ಪಾನ್ನಂ ತ್ವರಿತಗತಿಕೆ
ಪಿಡಿ ಮೇಲುದನೀಗಳ್ ಲಲಿತಲತಿಕೆ
ಸೋರ್ಮುಡಿಯಂ ಸಾವಗಿಸಕ್ಕ ನಿನ್ನ
ಜೋಲ್ದುಡೆಯಂ ನೋಡೆಲೆ ಮರುಳೆ ಮುನ್ನ

ಆವೊಕ್ಕಪುದೆಲೆ ಮದನಾಂಧೆ ಮುಂದೆ
ಮೌಕ್ತಿಕನಿಕರಂ ನಿಜಹಾರದಿಂದೆ
ಕಾಂಚೀದಾಮಮನೋಸರಿಸು ಮುಗ್ಧೆ
ಬಿಡದೆ ನೀನೆನಿಸೀಕ್ಷಿಸುವೆ ವಿದಗ್ಧ್ವೆ

ತೊಲಗುತ್ತಿದೆ ಘನಕುಚಯುಗಳದಿಂದೆ
ನೋಡಿದೆ ಸಿಚಯಂ ನಿನ್ನಯ ಮುಂದೆ
ಎರ್ದೆ ಪಡಪಡ ಪಾರ್ದಪುದೇಕೆ ಕೆಳದಿ
ತೋಳುಗಳಂ ಪಿಡಿ ಮೃದುಹಸ್ತತಳದಿ

ನೆಡಪಿದಪೆ ತನ್ವಿ ಪೂವಲಿಗಳಲರ
ಅಸವಮದದಿಂ ನಗಿಸಿದಪೆ ಪಲರ
ನವ್ಲಯೌವನೆ ಮರುಳಾದೆಯೀತಂಗೆ
ಗುಱಮಾಡಿದಪೆ ನಿನ್ನ ಮನುಮತಂಗೆ

ಹೊದ್ದುಕೊಂಡಿದ್ದ ಬಟ್ಟೆಯು ಜಾರಿಹೋದರೂ ಮುತ್ತಿನ ಸರದ ಕಾಂತಿಯನ್ನೇ ನಿಜವಾದ ಬಟ್ಟೆಯೆಂದು ಭ್ರಮಿಸಿ, ಅದನ್ನೇ ಮೇಲಕ್ಕೆ ಎಳೆದುಕೊಳ್ಳುತ್ತಾ ಬಹಳ ಗಡಿಬಿಡಿಯಿಂದ ಓಡಿಬಂದು ರಾಜಪುತ್ರನನ್ನು ನೋಡಿದಳು. ವ|| ಆರಂಭಮಾಡಿದ್ದ ಅಲಂಕಾರಗಳನ್ನು ಪೂರ್ತಿಯಾಗಿ ಮಾಡಿಕೊಳ್ಳದೆ ಬಂದು ನೋಡುತ್ತಿರಲಾಗಿ, ೨೭. ಸೀರೆಯು ಜೋಲುತ್ತಿತ್ತು. ಡಾಬು ಸಡಿಲವಾಯಿತು. ತಲೆಗೂದಲು ಚೆದುರಿಹೋಗಿತ್ತು. ಹಾರವನ್ನೇ ಜಪಸರದಂತೆ ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಹೀಗೆ ಕಾಂತನ ವಿರಹದಿಂದ ಯೋಗಿನಿಯಾದಂತೆ ಕಾಣುತ್ತಾ ಮತ್ತೊಬ್ಬಳು ಬಹಳ ಆತುರದಿಂದ ಬಂದಳು. ೨೮. ಮತ್ತೊಬ್ಬಳು ಓಡಿಬಂದ ಆಯಾಸದಿಂದ ಎದೆ ಡವಕೆಯಂತೆ ಬಡಿದುಕೊಳ್ಳುತ್ತಿರಲು, ಬಳ್ಳಿಯಂತಿರುವ ಹಾರವು ಕೈಗಳ ತೂಗಾಟದಿಂದ ತೋರಮೊಲೆಗಳಲ್ಲಿ ಕುಣಿಯುತ್ತಿರಲು ರಾಜಪುತ್ರನನ್ನು ನೋಡಲು ಬಹಳ ಆಸೆಯಿಂದ ಬಂದು ನೋಡಿದಳು. ೨೯. “ಏನೇ ಎಷ್ಟು ಜೋರಾಗಿ ಓಡಿಹೋಗುತ್ತಿದ್ದೀಯೆ? ನಾನೂ ಬರುತ್ತೇನೆ. ಸ್ವಲ್ಪ ನಿಂತುಕೊಳ್ಳೆ. ಲೇ ಲಲಿತಲತಿಕೆ, ನನ್ನ ಉತ್ತರೀಯವನ್ನು ಸ್ವಲ್ಪ ಹಿಡಿದುಕೊಳ್ಳೆ, ಅಕ್ಕ, ನಿನ್ನ ಬಿಚ್ಚಿ ಹೋಗಿ ಜೋಲಾಡುತ್ತಿರುವ ಕೂದಲನ್ನು ಸರಿಪಡಿಸಿಕೊ, ಲೇ! ಹುಚ್ಚಿ! ಜಾರಿಹೋಗುತ್ತಿರುವ ಸೀರೆಯನ್ನು ಮೊದಲು ಸರಿಪಡಿಸಿಕೊಳ್ಳೆ, ಎಲೇ! ಕಾಮಾಂಧಳೆ, ನಿನ್ನ ಸರ ಕಿತ್ತುಹೋಗಿ ಮುತ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತಿವೆಯಲ್ಲೆ, ಲೇ ದಡ್ಡೆ, ನಿನ್ನ ಸೊಂಟದ ಡಾಬನ್ನು ಸರಿಮಾಡಿಕೊ! ಲೇ ರಸಿಕಳೆ, ನೀನೊಬ್ಬಳೆ ಎಷ್ಟು ನೋಡುತ್ತೀಯೆ? ನೋಡೆ, ನಿನ್ನ ಸ್ತನಗಳ ಮೇಲಿನ ಹೊದಿಕೆಯು ಜಾರಿಹೋಗಿದೆ! ಎಲೆ ಗೆಳತಿ! ನಿನ್ನ ಎದೆಯು ಡವ ಡವ ಎಂದು ಏಕೆ ಹೊಡೆದುಕೊಳ್ಳುತ್ತಿದೆ? ನಿನ್ನ ಮೃದುವಾದ ಕೈಗಳಿಂದ ನನ್ನ ತೋಳನ್ನು ಸ್ವಲ್ಪ ಹಿಡಿದುಕೊ. ನೆಲದ ಮೇಲೆ ಚೆಲ್ಲಿರುವ ಹೂವುಗಳನ್ನು ತುಳಿದುಕೊಂಡೇ ಹೋಗುತ್ತಿರುವೆಯಲ್ಲೆ! ಮದ್ಯದ ಅಮಲಿನಿಂದ ಎಲ್ಲರನ್ನೂ ನಗಿಸುತ್ತೀಯಲ್ಲ! ಎಲೆ ಹೊಸಹರೆಯದವಳೆ, ಇವನನ್ನು ನೋಡಿ ಮರುಳಾಗಿಬಿಟ್ಟಿದ್ದೀಯಾ? ನೀನು ಕಾಮಪರವಶಳಾಗಿರುವೆಯಾ? ಮನಸ್ಸಿನಲ್ಲೇ ಇವನೊಂದಿಗೆ ಬೆರೆತಂತೆ ಕಲ್ಪಿಸಿಕೊಂಡು ಸಂಭೋಗಸುಖವನ್ನು ಅನುಭವಿಸುತ್ತಿದ್ದೀಯೆ! ಅದರಿಂದಲೇ ನೋಡು, ನಿನ್ನ ಬಾಯಿ

ಮನದೊಳ್ ಸಂಕಲ್ಪಿತ ಸುರತಸುಖಮ
ನನುಭವಿಸುವೆಯದಱಂ ನೋಡು ಮುಖಮ
ನುಸುರಿಕ್ಕುವುದುಮನೇಂ ಮತೆ ಕಾಂತೆ
ಬಂದಪನದೆ ಮುಂದೆ ಜಯಂತನಂತೆ
ಮುತ್ತಿನ ಬೆಳ್ಗೊಡೆಗಳ ಬಳಗದೊಳಗೆ
ಚಾಮರತತಿ ಕೆಲದೊಳೆ ಮಿಳಿರ್ದು ತೊಳಗೆ
ಸೊಗಯಿಸುತುಂ ಚಂದ್ರಾಪೀಡದೇವ
ನುದಿತಾರ್ಕಸಹಸ್ರಸಮಪ್ರಭಾವ
ನಾ ನೋಡಿದಪನಿತ್ತ ನೃಪಕುಮಾರ
ನಾ ಲಾವಣ್ಯರೂಪ ಜಿತಕುಮಾರ
ನಾ ವೈಶಂಪಾಯನನೊಡನೆ ನೋಡ
ನಸುನಗೆ ದಶನಪ್ರಭೆಯಿಂದ ಕೂಡ

ಲಾ ದೆಸೆ ಧವಳಿಸಿದವೊಲಾಯ್ತು ರಯ್ಯ
ನಾ ವೀಳಯಕೆ ನೀಡಿದಪಂ ಕಯ್ಯ
ನೀ ಕಮಳಾಂಕಿತ ಕರತಳಮನಾವ
ಸುಂದರಿ ಪಿಡಿವಳೊ ಧನ್ಯೆಯವಳೀ ವ
ಸುಂಧರೆಯೊಳೆನುತ್ತಂ ರಾಗದಿಂದೆ
ಮೆಯ್ಯಱಯದೆ ಪಲರುತ್ಕಂಠೆಯಿಂದೆ
ಸವಿಳಾಸಸೋನ್ಮಾದ ಸಾಭ್ಯಸೂಯ
ಸಸ್ಪ ಹ ಸೇರ್ಷ್ಯಾದಿ ರಸಾನುಮೇಯ
ರಮಣೀಯಾಳಾಪಕಳಾಪದಿಂದ
ಮೆಸೆದುದು ರಮಣೀತತಿ ಚೆಲ್ವಿನಿಂದ                    ೨೯

ವ|| ಮತ್ತಲ್ಲಿ

ಕರೆದಪರೊಲ್ದು ಭೂಷಣಗಣಧ್ವನಿಯಿಂ ನವರತ್ನರಂಜಿತಾ
ಭರಣನಿಕಾಯರಶ್ಮಿತತಿಯಿಂ ಬರೆಸುತ್ತಿಪರಾಕುಲೇಕ್ಷಣೋ
ತ್ಕರಪುಟದಿಂದೆ ಪೀರ್ದಪರೆನಲ್ ನಗರಾಂಗನೆಯರ್ ಮಹೋತ್ಸವಂ
ದೊರೆದುದೆನುತ್ತಲಂಪು ಮಿಗೆ ನೋಡಿದರಾ ಮನುಜೇಂದ್ರಚಂದ್ರನಂ       ೩೦

ಏನನ್ನೋ ಗೊಣಗುತ್ತಿದೆ! ಏನನ್ನು ಮರೆತುಬಂದಿರುವೆ? ಚೆಲುವೆ, ಅಲ್ಲಿ ನೋಡು; ಮುಂದೆ ಇಂದ್ರನ ಮಗನಾದ ಜಯಂತನಂತೆ ಮುತ್ತಿನ ಬಿಳಿಯ ಕೊಡೆಗಳ ಗುಂಪಿನೊಡನೆ ಚಾಮರಗಳು ಪಕ್ಕಗಳಲ್ಲಿ ಚಲಿಸುತ್ತಾ ಶೋಭಿಸುತ್ತಿರಲು, ಅನೇಕ ಬಾಲಸೂರ್ಯರಿಗೆ ಸಮಾನನಾದ ಚಂದ್ರಾಪೀಡನು ಬರುತ್ತಿದ್ದಾನೆ! ಆಹಾ! ಲಾವಣ್ಯಭರಿತವಾದ ರೂಪವುಳ್ಳ ಆ ರಾಜಕುಮಾರನು ಈ ಕಡೆಗೇ ನೋಡುತ್ತಿದ್ದಾನೆ! ಆಹಾ! ಲಾವಣ್ಯಪೂರ್ಣವಾದ ರೂಪದಿಂದ ಕುಮಾರಸ್ವಾಮಿಯನ್ನು ಮೀರಿಸಿದ್ದಾನೆ. ಆ ವೈಶಂಪಾಯನನ ಜೊತೆಯಲ್ಲಿದ್ದಾನೆ. ಅಲ್ಲಿ ನೋಡು, ಮಂದಹಾಸವು ಹಲ್ಲಿನ ಕಾಂತಿಯಿಂದ ಕೂಡಿಕೊಂಡಿರಲಾಗಿ ಆ ದಿಕ್ಕಿಗೆ ದಿಕ್ಕೇ ಬೆಳ್ಳಗಾದಂತಾಗಿಬಿಟ್ಟಿದೆ. ಜನರು ನೀಡುವ ವೀಳೆಯಕ್ಕೆ ಎಷ್ಟು ಸೊಗಸಾಗಿ ಕೈ ಚಾಚುತ್ತಿದ್ದಾನೆ! ಈ ಕಮಲರೇಖೆಯಿಂದ ಶೋಭಿಸುವ ಕಯ್ಯನ್ನು ಯಾವ ಸುಂದರಿಯು ಹಿಡಿಯುತ್ತಾಳೋ ಅವಳೇ ಈ ಜಗತ್ತಿನಲ್ಲಿ ಪುಣ್ಯವಂತೆ!” ಇವೇ ಮೊದಲಾದ ಮಾತುಗಳನ್ನಾಡುತ್ತಾ ಬಹಳ ಪ್ರೀತಿಯಿಂದ ಪಟ್ಟಣದ ಮಹಿಳೆಯರು ಪರವಶವಾಗಿದ್ದಾರೆ. ಕೆಲವರು ಹೆಬ್ಬಯಕೆಯಿಂದ ಮೈಮರೆತಿದ್ದಾರೆ. ಹೀಗೆ ಲೀಲೆಯಿಂದ ಕೂಡಿದ, ಪರವಶತೆಯಿಂದ ಕೂಡಿದ, ಅಸೂಯೆಯಿಂದ ಕೂಡಿದ, ಆಸೆಯಿಂದ ಕೂಡಿದ, ಹುರುಡಿನಿಂದ ಕೂಡಿದ, ಹೀಗೆ ನಾನಾ ಮನೋಭಾವಗಳನ್ನು ತೋರ್ಪಡಿಸುವ ಬಹಳ ರಮಣೀಯವಾದ ಮಾತುಗಳಿಂದಲೂ ಸೊಬಗಿನಿಂದಲೂ ಆ ಪಟ್ಟಣದ ಹೆಂಗಸರ ತಂಡವು ಶೋಭಿಸುತ್ತಿತ್ತು. ವ|| ಮತ್ತು ಅಲ್ಲಿ ೩೦. ಆಭರಣಧ್ವನಿಯಿಂದ ಪ್ರೀತಿಸಿ ಕರೆಯುವಂತೆಯೂ ನವರತ್ನಶೋಭಿತವಾದ ಆಭರಣಗಳ ಕಾಂತಿಯಿಂದ ಬರಮಾಡಿಕೊಳ್ಳು ತ್ತಿರುವಂತೆಯೂ ದೊನ್ನೆಗಣ್ಣುಗಳಿಂದ ಕುಡಿಯುತ್ತಿರುವಂತೆಯೂ ಆ ಪಟ್ಟಣದ ಹೆಂಗಸರು ದೊಡ್ಡ ಹಬ್ಬವೇ ಒದಗಿದಂತೆ ಹರ್ಷವು

ಒಲವಿಂ ನೋಡುವ ಭಾವಿಪ
ಲಲನಾಸಂಕುಲದ ಹೃದಯದೊಳ್ ನೆಲಸಿದುದು
ಜ್ವಲಮಣಿದಪರ್ಣತಲದೊಳ್
ನೆಲಸುವವೊಲ್ ರೂಪು ರೂಪವಿದ್ಯಾಧರನಾ                  ೩೧

ವ|| ಮತ್ತಮಾ ಲತಾಂಗಿಯರ್ ಸೂಸುವ ಕುಸುಮಮಿಶ್ರಲಾಜಾಂಜಲಿಗಳನಿದಿರ್ಗೊಳುತ್ತಂ ಜನಗಿರೀಂದ್ರಮಾಲಾಮಲಿನ ಕುಂಜರ ಘಟಾಭಿರಂಜಿತಮುಂ ಉದ್ದಂಡಧವಳಾತಪತ್ರ ಸಂಛನ್ನಮುಮನೇಕ ದ್ವೀಪಾಂತರಾಗತದೂತ ಸಮಾಕುಳಮುಮಪ್ಪ ರಾಜಭವನದ್ವಾರದೊಳಿಂದ್ರಾ ಯುಧದಿಂದವನಿತಳಕ್ಕವತರಿಸಿ ವೈಶಂಪಾಯನ ಕರಕಮಲನಿಷ್ಠಿತಪ್ರಕೋಷ್ಠನುಂ ಬಲಾಹಕೋಪದಿಶ್ಯಮಾನಮಾರ್ಗನುಮಾಗಿ ಪೊಕ್ಕನೇಕ ಸಹಸ್ರಜನಸಂಕುಳಮಪ್ಪ ಸಪ್ತಕಕ್ಷಾ ಂತರಗಳನತಿಕ್ರಮಿಸಿ ಬರ್ಪಲ್ಲಿ

ಸುರಚಾಪಾಕಾರ ನಾನಾ ಮಣಿಮಯವಿಲಸತ್ತೋರಣಂ ಚಿತ್ರ ಚೀನಾಂ
ಬರರಮ್ಯಂ ಚಂದ್ರಶಾಲಾಪ್ರಕರಪರಿವೃತಂ ವೇದಿಕ್ವಾನೀಕ ಶೋಭಾ
ಕರಮಾತ್ತೋದಾತ್ತಕೂಟಂ ವಿಘಟಿತಮಣಿವಾತಾಯನಾತ್ಯಂತಕಾಂತಂ
ಕರುಮಾಡಂ ನಾಡೆ ಚೆಲ್ವಂ ತಳೆದುದು ಪಲವುಂ ಬಳ್ಳಿಮಾಡಂಗಳಿಂದಂ      ೩೨

ಕರುಮಾಡದ ಬಾಗಿಲನೆ
ಯ್ತರೆ ತಂದೆಯ ಕೆಲದೊಳೆಸೆವ ರಾಜಕುಮಾರೋ
ತ್ಕರಮಾ ನರೇಂದ್ರತನಯಂ
ಗಿರದಿದಿರೇೞ್ದತ್ತು ರಭಸಮೊದವಲ್ಕಾಗಳ್            ೩೩

ಅಹಮಹಮಿಕೆಯಿಂದೆಱಗುವ
ಮಹೀಶಶತಮಕುಟಕಾಂತಿ ತನ್ನ ಪದಾಂಭೋ
ರುಹಲಕ್ಷಿ ಯಿಂದೆ ಶೋಭಾ
ವಹಮಾಗೆ ನರೇಂದ್ರನಂದನಂ ಪುಗುತಂದಂ               ೩೪

ಲಲನಾಸಂವೀಜನೋದ್ಯಚ್ಚಮರರುಹಚಯೋದ್ಭಾಸಿತಂ ರಾಜಹಂಸೋ
ಜ್ವಲ ಚೀನಪ್ರಚ್ಛದಾಚ್ಛಾದಿತ ಶಯನತಲಾಲಂಕೃತಂ ಲೋಲವೀಚೀ
ಲುಳಿತ ಸ್ವರ್ವಾಹಿನೀವಾರಿಯೊಳಮರಗಜಂ ಕೇಳಿಯಿಂದಿರ್ಪವೊಲ್ಕಂ
ಗೊಳಿಸಿರ್ದಂ ಚಂಡಬಾಹಾಬಲನಿಭೃತ ಮಹೀಮಂಡಲಂ ಸಾರ್ವಭೌಮಂ            ೩೫

ಹೆಚ್ಚುತ್ತಿರಲು ಆ ರಾಜಕುಮಾರ ಚಂದ್ರನನ್ನು ನೋಡುತ್ತಿದ್ದರು. ೩೧. ಪ್ರೀತಿಯಿಂದ ನೋಡುತ್ತಾ ಮನಸ್ಸಿನಲ್ಲಿ ನೆನೆಸಿಕೊಳ್ಳುತ್ತಾ ಇದ್ದ ಮಹಿಳೆಯರ ಮನಸ್ಸಿನಲ್ಲಿ ರನ್ನಗನ್ನಡಿಯಲ್ಲಿ ಪ್ರತಿಬಿಂಬಿಸುವಂತೆ ಚಂದ್ರಾಪೀಡನ ರೂಪು ನೆಲಸಿತು. ವ|| ಮತ್ತು ಆ ಲಲನೆಯರು ಹೂವುಗಳಿಂದ ಮಿಶ್ರವಾದ ಅರಳುಗಳನ್ನು ಎರಚುತ್ತಿರಲು ಅವುಗಳನ್ನು ತಾಳುತ್ತ, ಅಂಜನಪರ್ವತದ ಶ್ರೇಣಿಯಂತೆ ಕಪ್ಪುಬಣ್ಣವನ್ನು ತಳೆದಿರುವ ಆನೆಗಳ ಗುಂಪಿನಿಂದ ಮನೋಹರವಾದ, ಎತ್ತಿ ಹಿಡಿದಿರುವ ಬಿಳಿಯ ಛತ್ರಿಗಳಿಂದ ಅಮೃತವಾಗಿರುವ, ಅನೇಕ ದ್ವೀಪಾಂತರಗಳಿಂದ ಬಂದಿರುವ ರಾಯಭಾರಿಗಳಿಂದ ತುಂಬಿರುವ, ಅರಮನೆಯ ಬಾಗಿಲಲ್ಲಿ ಇಂದ್ರಾಯುಧದಿಂದ ಭೂಮಿಗೆ ಇಳಿದು ವೈಶಂಪಾಯನನು ಹಸ್ತಲಾಘವವನ್ನು ಕೊಡುತ್ತಿರಲಾಗಿ, ಬಲಾಹಕನು ದಾರಿಯನ್ನು ತೋರಿಸುತ್ತಿರಲಾಗಿ ಒಳಹೊಕ್ಕು ಜನನಿಬಿಡವಾದ ಏಳು ತೊಟ್ಟಿಗಳನ್ನು ದಾಟಿ ಚಂದ್ರಾಪೀಡನು ಬರುತ್ತಿರುವಲ್ಲಿ, ೩೨. ಕಾಮನಬಿಲ್ಲಿನಂತಿರುವ ನಾನಾ ಬಗೆಯ ರತ್ನಗಳಿಂದ ಖಚಿತವಾದ ಹೆಬ್ಬಾಗಿಲು ರೇಷ್ಮೆ ಬಟ್ಟೆಯ ತೋರಣಗಳಿಂದ ಶೋಭಿಸುತ್ತಿರಲು, ಅನೇಕ ಶಿರೋಗೃಹಗಳಿಂದ ಕೂಡಿರುವ ಮತ್ತು ಜಗುಲಿಗಳಿಂದ ಶೋಭಾಕರವಾದ, ಎತ್ತರವಾದ ಶಿಖರಗಳಿಂದ ರಂಜಿಸುವ, ಚೊಕ್ಕವಾಗಿ ಅಲ್ಲಲ್ಲಿ ಇಡಿಸಿರುವ ರತ್ನದ ಚೌಕಟ್ಟಿನ ಕಿಟಕಿಗಳಿಂದ ಬಹಳ ಸುಂದರವಾದ ದೊಡ್ಡ ಉಪ್ಪರಿಗೆ ಮನೆಯು ಅನೇಕ ಕಿರುಮಹಡಿಗಳಿಂದ ಕೂಡಿ ಬಹಳ ಸುಂದರವಾಗಿತ್ತು. ೩೩. ಹೀಗೆ ಆ ಮಹಲಿನ ಬಾಗಿಲಿಗೆ ಬರಲಾಗಿ ತಂದೆಯ ಸಮೀಪದಲ್ಲಿ ಶೋಭಿಸುವ ಅರಸುಮಕ್ಕಳು ಚಂದ್ರಾಪೀಡನನ್ನು ತಟ್ಟನೆ ಎದುರುಗೊಂಡು ಸುತ್ತುಗಟ್ಟಿದರು. ೩೪. ನಾನು ಮುಂದು ತಾನು ಮುಂದು ಎಂದು ನಮಸ್ಕರಿಸುವ ಅನೇಕ ರಾಜರ ಕಿರೀಟಗಳ ಹೊಳಪು ತನ್ನ ಪಾದಕಮಲದ ಕಾಂತಿಯಿಂದ ಅತಿಶಯವಾಗಿ ಶೋಭಿಸುತ್ತಿರಲು ಚಂದ್ರಾಪೀಡನು ಒಳಹೊಕ್ಕನು. ೩೫. ಅಲ್ಲಿ ತನ್ನ ತೀಕ್ಷ ವಾದ ತೋಳಬಲದಿಂದ ಇಡೀ ಭೂಮಂಡಲವನ್ನು ಕೈವಶದಲ್ಲಿಟ್ಟುಕೊಂಡಿರುವ ತಾರಾಪೀಡಚಕ್ರವರ್ತಿಯು, ಹೆಂಗಸರು ಬೀಸುವುದಕ್ಕಾಗಿ ಎತ್ತಿ ಹಿಡಿದಿರುವ ಚಾಮರಗಳ ಸಮೂಹದಿಂದ ಪ್ರಕಾಶಮಾನವಾಗಿ ಅರಸಂಚೆಯಂತೆ ಬಿಳುಪಾದ ಪಟ್ಟೆವಸ್ತ್ರಗಳನ್ನು ಹಾಸಿರುವ ಹಾಸಿಗೆಯಲ್ಲಿ ಚಲಿಸುತ್ತಿರುವ,

ವ|| ಅಂತಿರ್ದ ನಿಜಜನಕನಂ ನಯರತ್ನಾಕರಂ ದೂರದೊಳೆ ಕಂಡವನಿತಳನಿಹಿತ ಚೂಡಾಮಣಿಯಾಗಿ ಪೊಡಮಡುವುದುಂ

ಪರಮಾಶೀರ್ವಾದದಿಂದಂ ಪರಸಿ ಮಗನನಾನಂದದಿಂ ಕಂದ ಬಾಯೆಂ
ದಿರದಾನಂದಾಶ್ರುಬಿಂದುಪ್ರತತಿ ಸುರಿಯೆ ರೋಮೋದ್ಗಮಂ ಕೂಡೆ ಪೊಣ್ಮು
ತ್ತಿರೆ ಬಾಹುದ್ವಂದ್ವದಿಂದಂ ಬರೆತೆಗೆದು ತಳ್ಕೈಸೆಯುಂ ತಾತಪಾದಾಂ
ಬುರುಹಕ್ಕಾನಮ್ರನಾದಂ ನಿಖಿಳನೃಪಸಂಭಾಂಭೋಜಿನೀರಾಜಹಂಸಂ       ೩೬

ವ|| ಅಂತು ವಿನಯೋನ್ನತಿವೆತ್ತ ನಿಜನಂದನನರ್ಧಾಸನದೊಳಾ ನೃಪಂ ಕುಳ್ಳಿರಿಸೆಯು ಮೆಂತುಮೊಲ್ಲದಾತ್ಮೀಯ ತಾಂಬೂಲಕರಂಕ ವಾಹಕ ಪ್ರಸಾರಿತಾಂಬರಾಚಲಮುಮಂ ಚರಣಾಗ್ರದಿಂ ನೂಂಕಿ ಚಂದ್ರಾಪೀಡಂ ನೆಲದೊಳ್ ಕುಳ್ಳಿರೆ

ವಿನಯದಿನಾ ವೈಶಂಪಾ
ಯನನೆಱಗೆ ನರೇಂದ್ರನೞ್ಕಱಂದಪ್ಪಲ್ಕಾ
ತನುಮಾಗಳ್ ತಾರಾಪೀ
ಡನರೇಂದ್ರಾತ್ಮಜನ ಪಕ್ಕದೊಳ್ ಕುಳ್ಳಿರ್ದಂ               ೩೭

ಅಡಿಗಡಿಗಾತ್ಮನಂದನನ ಮುಖೇಂದುವನುತ್ಸವದಿಂದೆ ನೋಡುತಂ
ನುಡಿಯುತಮಾ ನೃಪಂ ಕರಸರೋರುಹದಿಂ ಚುಬುಕಾಗ್ರಭಾಗಮಂ
ಪಿಡಿದು ನಿಜಾಂಬಿಕಾಪದಪಯೋಜಮನೀಕ್ಷಿಸು ಪೋಗು ಸಂತಸಂ
ಬಡಿಸು ವಿಲೋಕನೋತ್ಸುಕೆಯರಂ ವಿನಯಾರ್ಣವ ನಿನ್ನ ತಾಯ್ವಿರಂ      ೩೮
ವ|| ಎಂದು ನಿಜಜನಕಂ ಬೆಸೆಸಲಂತೆಗೆಯ್ವೆನೆಂದು ವೈಶಂಪಾಯನದ್ವಿತೀಯನುಂ ಅಂತಪುರಪ್ರವೇಶಯೋಗ್ಯಪರಿಮಿತ ಪರಿಜೋನಪ ದಿಶ್ಯಮಾನಮಾರ್ಗನುಮಾಗಿ ಶುದ್ಧಾಂತ ಕಾಂತಾಪ್ರಧಾನೆಯಪ್ಪ ನಿಜಾಂಬಿಕೆಯ ಮನೆಯಂ ಪುಗುವಲ್ಲಿ ವಸನಾಭರಣಕುಸುಮಪಟವಾಸ ತಾಂಬೂಲ ತಾಳವೃಂತಾಂಗರಾಗ ಭೃಂಗಾರುಧಾರಿಣಿಯರಪ್ಪ ವಾರವಿಳಾಸಿನಿಯ ರೊಳಂ ಉಭಯ ಪಾರ್ಶ್ವೋದ್ಧೂತ ಧವಳಚಾಮರೆಯರಪ್ಪ ಚಮರೀಜಕಾಂತೆಯರೊಳಂ ಪುರಾಣಕಥಾ ಕಥನತತ್ಪರ ಪರಿವ್ರಾಜಕಾಸಮೂಹದೊಳಮುಪಾಸ್ಯಮಾನೆಯಾರ್ದಳಂತುಮಲ್ಲದೆಯುಂ

ಅಲೆಗಳಿಂದ ಕಲಕಲ್ಪಟ್ಟ ದೇವಗಂಗಾನದಿಯ ನೀರಿನಲ್ಲಿ ಐರಾವತವು ವಿನೋದವಾಗಿರುವಂತೆ ಮಂಡಿಸಿದ್ದನು. ವ|| ಹಾಗೆ ಕುಳಿತಿದ್ದ ತನ್ನ ತಂದೆಯನ್ನು ವಿನಯಗುಣಕ್ಕೆ ಸಮುದ್ರಪ್ರಾಯನಾದ ಚಂದ್ರಾಪೀಡನು ದೂರದಲ್ಲೇ ನೋಡಿ ತಲೆಮಣಿಯು ನೆಲಕ್ಕೆ ತಾಕುವಂತೆ ದೀರ್ಘದಂಡ ನಮಸ್ಕಾರವನ್ನು ಮಾಡಲಾಗಿ ೩೬. ತಂದೆಯು ಮಗನನ್ನು ಅಮೋಘವಾದ ಆಶೀರ್ವಾದಗಳಿಂದ ಹರಸಿ ಆನಂದ ಭರಿತನಾಗಿ ಕಣ್ಣುಗಳಿಂದ ಆನಂದಭಾಷ್ಪ ಬಿಂದುಗಳು ಸುರಿಯುತ್ತಿರಲು, ಮೈನಿಮಿರುತ್ತಿರಲು ‘ಬಾ! ಕಂದ!’ ಎಂದು ಎರಡು ತೋಳುಗಳಿಂದ ಗಟ್ಟಿಯಾಗಿ ಬಾಚಿ ತಬ್ಬಿಕೊಂಡನು. ಆಗ ಆಸ್ಥಾನಮಂಡಪವೆಂಬ ತಾವರೆಗೊಳದಲ್ಲಿ ರಾಜಹಂಸನಂತಿರುವ ಚಂದ್ರಾಪೀಡನು ತಂದೆಯ ಪಾದಕಮಲಗಳಿಗೆ ತಲೆಬಾಗಿ ನಿಂತುಕೊಂಡನು. ವ|| ಹಾಗೆ ವಿನಯವನ್ನು ತೋರ್ಪಡಿಸುತ್ತಿರುವ ತನ್ನ ಮಗನನ್ನು ಮಹಾರಾಜನು ಅರ್ಧಾಸನದಲ್ಲಿ ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸಿದರೂ ಅದಕ್ಕೆ ಒಪ್ಪದೆ ತನ್ನ ವೀಳೆಯಸಂಪುಟವನ್ನು ಹಿಡಿಯುವ ಸೇವಕನು ಹಾಸಿದ ಬಟ್ಟೆಯ ಅಂಚನ್ನು ಕಾಲಿನ ತುದಿಯಿಂದ ಸರಿಸಿ ಚಂದ್ರಾಪೀಡನು ನೆಲದ ಮೇಲೆ ಕುಳಿತುಕೊಂಡನು. ೩೭. ಹಾಗೆಯೆ ವೈಶಂಪಾಯನನೂ ವಿನಯದಿಂದ ನಮಸ್ಕರಿಸಲಾಗಿ ಮಹಾರಾಜನು ಬಹಳ ಅಕ್ಕರೆಯಿಂದ ಅವನನ್ನು ಬಾಚಿ ತಬ್ಬಿಕೊಂಡನು. ಬಳಿಕ ಅವನೂ ರಾಜಕುಮಾರನ ಪಕ್ಕದಲ್ಲೆ ನೆಲದ ಮೇಲೆ ಕುಳಿತುಕೊಂಡನು. ೩೮. ಬಳಿಕ ಮಹಾರಾಜನು ಮಗನ ಚಂದಿರನಂದದ ಮುಖವನ್ನು ಬಹಳ ಸಂತೋಷದಿಂದ ನೋಡುತ್ತಾ, ಅವನನ್ನು ಮಾತನಾಡಿಸುತ್ತಾ, ತನ್ನ ತಾವರೆಯಂದದ ಕೈಗಳಿಂದ ಅವನ ಗಲ್ಲದ ತುದಿಯನ್ನು ಹಿಡಿದುಕೊಂಡು “ಮಗು ನೀನು ವಿನಯಗುಣಕ್ಕೆ ಸಮುದ್ರದಂತಿರುವೆ ಹೋಗಪ್ಪ! ನಿನ್ನ ತಾಯಿಯ ಪಾದಕಮಲವನ್ನು ನೋಡಿಕೊಂಡು ಬಾ! ನಿನ್ನ ತಾಯಂದಿರು ನಿನ್ನನ್ನು ನೋಡಬೇಕೆಂದು ಬಹಳ ಕುತೂಹಲದಿಂದ ಕೂಡಿದ್ದಾರೆ. ಅವರನ್ನೆಲ್ಲಾ ಹೋಗಿ ಸಂತೋಷಪಡಿಸು.” ಟಿ. ರಾಜನಿಗೆ ಚಂದ್ರಾಪೀಡನ ತಾಯಿಯಲ್ಲದೆ ಇನ್ನೂ ಹಲವರು ಪತ್ನಿಯರಿದ್ದರು. ಆದ್ದರಿಂದ ತಾಯಂದಿರೆಂದು ಬಹುವಚನವನ್ನು ಪ್ರಯೋಗಿಸಿದ್ದಾನೆ. ವ|| ಹೀಗೆ ತನ್ನ ತಂದೆಯು ಅಪ್ಪಣೆ ಮಾಡಲಾಗಿ ಚಂದ್ರಾಪೀಡನು ವೈಶಂಪಾಯನನ ಜೊತೆಯಲ್ಲಿ ಅಂತಪುರದ ಒಳಕ್ಕೆ ಹೋಗಲು ಅರ್ಹರಾದ ಮಿತವಾದ ಪರಿಜನರಿಂದ ತೋರಿಸಲ್ಪಡುವ ದಾರಿಯುಳ್ಳವನಾಗಿ ರಾಣಿವಾಸದ ಮಹಿಳಾಜನರಲ್ಲಿ ಪ್ರಧಾನೆಯಿಸಿದ ತನ್ನ ತಾಯಿಯ ವಾಸಭವನಕ್ಕೆ ಬರುವಲ್ಲಿ ಬಟ್ಟೆ, ಒಡವೆ, ಹೂವು, ಸುವಾಸನೆಪುಡಿ, ವೀಳೆಯ, ಬೀಸಣಿಗೆ, ಲೇಪನದ್ರವ್ಯ, ಚಿನ್ನದ ಬಟ್ಟಲು ಮೊದಲಾದವುಗಳನ್ನು ಹಿಡಿದುಕೊಂಡಿರುವ ಗಣಿಕೆಯರಿಂದಲೂ, ಎರಡು ಕಡೆಯಲ್ಲೂ ಚಾಮರವನ್ನು ಬೀಸುತ್ತಿರುವ ಚಾಮರಧಾರಿಣಿ