ಬೆಸನಂಗಳ್ ತನುವಿಚ್ಚೆಗೊಯ್ವುವದಱಂ ಲಕ್ಷಿ ವಿಡಂಬಂ ವಿಡಂ
ಬಿಸದಂತಾಗಿರೆ ಮಾನ್ಯರೆಲ್ಲ ತೆಱದಿಂದಂ ಪೊಕ್ಕು ನಿನ್ನಂ ಚಟೂ
ರಿಸದಂತಾಗಿರೆ ಕಾಮಿನೀತತಿ ವಿಲಾಸಾಪಾಂಗದಿಂದಂ ಪ್ರತಾ
ರಿಸದಂತಾಗಿರಲಾತ್ಮವಂತನೆನಿಸೆಂದುಂ ರಾಜವಿದ್ಯಾಧರಾ             ೧೦೪

ವ|| ಅದಲ್ಲದೆಯುಂ ಯುವರಾಜ್ಯಾಭಿಷೇಕಮಂ ಕೆಯ್ಕೊಂಡು ಕುಲಕ್ರಮಾಗತ ರಾಜ್ಯಭಾರಧೌರೇಯನಾಗಿ ಸಕಲದಿಗ್ವಿಜಯೋದ್ಯೋ ಗಂಗೆಯ್ದು ಸಪ್ತದ್ವೀಪಾಲಂಕಾರೆಯಪ್ಪ ವಸುಂಧರೆಯನೇಕಚ್ಚತ್ರಮಪ್ಪಂತಿರಾಳ್

ನಗದಂತು ಜಗಂ ಗುರುಗಳ್
ಪೊಗೞ್ವಂತನುಜೀವಿಗಳ್ಗೆ ಶುಭಮಪ್ಪಂತು
ಬ್ಬೆಗಮಾಗದಂತು ನಂಟ
ರ್ಗಗಣಿತಗುಣನೆನಿಸಿ ನಿಲ್ವುದಾಕಲ್ಪಾಂತಂ                        ೧೦೫

ವ|| ಎಂದು ನುಡಿದ ಶುಕನಾಸೋಪದೇಶ ವಚನಾಮೃತನಿಚಯದಿಂ ಪ್ರಕ್ಷಾಳಿತನಾದಂತೆಯುಂ ಕಣ್ದೆದಂತೆಯುಮಲಂಕೃತನಾದಂತೆಯುಂ ಪವಿತ್ರೀಕೃತನಾದಂತೆಯುಮತಿಪ್ರೀತಿಹೃದಯನಾಗಿ ಕಿಱದುಬೇಗಮಿರ್ದು ನಿಜಮಂದಿರಕ್ಕೆ ಚಂದ್ರಾಪೀಡಂ ಪೋಪುದುಮಿತ್ತಲ್ ಗೃಹಮಹತ್ತರರ್ ಮುನ್ನಮೆ ಸಮಕಟ್ಟಿದ ಮಣಿಕುಟ್ಟಿಮದ ನಟ್ಟನಡುವೆ ಪೊಳೆವ ಪಟ್ಟವಣೆಯ ನಾಲ್ದೆಸೆಯೊಳೆಸೆವ ರತ್ನಭೃಂಗಾರುಘಟಂಗಳಿಂ ಪಸುರ್ಪೆಸೆದು ನಿಮಿರ್ದ ಜಾಗರಂಗಳಿಂ ತೊಳಗುವ ಮಣಿದರ್ಪಣಾಲಂಕೃತಗಳಪ್ಪ ಕಾಂಚನದ್ರೋಣಿಗಳಿಂ ಸುರಭಿಸಲಿಲ ಪರಿಮಳಕ್ಕೆಱಪ ಮಱದುಂಬಿಯ ಬಂಬಲಿಂ ನೀಲಾಂಬರದಿಂ ಬಾಸಣಿಸಿದಂತಿರ್ದ ಶಾತಕುಂಭ ಕಲಶಂಗಳಿನಭಿಷೇಕವಿಲಾಸಮಂ ನೋಡಲೆಂದಿೞತಂದ ವಿದ್ಯಾಧರವಿಳಾಸವತಿ ಯರೆನಿಪ ವಾರವಿಳಾಸಿನಿಯರಿಂ ಬಳಸಿದ ಗಾಯಕ ವಾದಕ ವಾಂಶಿಕ ವೈಣಿಕ ವೈತಾಳಿಕ ವಾಗ್ಮಿಕನಿಕಾಯಂದಿದೆಸೆವಭಿಷೇಕಮಂಟಪದೊಳ್ ಸಕಲ ರಾಜಲೋಕಮುಂ ಮಂತ್ರಿಮಂಡಲಮುಂ ಸಾಮಂತನಿಕಾಯಮುಂ ಮೌಹೂರ್ತಿಕಪ್ರಕರಮುಂ ನೆದಿರೆ

ಮಾಡಿಸುವ ಮಹಾಪಾಪಿಷ್ಠನೇ ಶ್ರೇಷ್ಠಮಂತ್ರಿ ಎನಿಸುತ್ತಾನೆ. ಆದ್ದರಿಂದ ಈ ಪರಿಯಾದ ಸಾವಿರಾರು ದುರ್ವ್ಯವಹಾರಗಳಿಂದ ಭಯಂಕರವಾದ ರಾಜಕೀಯದಲ್ಲಿ ಎಂತಹವನಾದರೂ ಭ್ರಾಂತನಾಗದಿರುವುದಿಲ್ಲ. ಆ ಕಾರಣದಿಂದ ೧೦೪. ಎಲೈ ರಾಜನೀತಿಜ್ಞನೆ, ಕೆಟ್ಟ ಚಟಗಳು (ಮನುಷ್ಯನನ್ನು) ಶರೀರದ ವಿಷಯಭೋಗಗಳ ಕಡೆಗೆ ಸೆಳೆಯುತ್ತವೆ. ಆದ್ದರಿಂದ ಸಿರಿಯ ಅಣಕವು ನಿನ್ನನ್ನು ಮೋಸಗೊಳಿಸದಂತೆ ನೋಡಿಕೊ. ಅಯೋಗ್ಯರು ನಾನಾ ರೀತಿಯಿಂದ ಒಳಗೆ ಸೇರಿ ನಿನ್ನನ್ನು ಮುಖಸ್ತುತಿ ಮಾಡುವುದಕ್ಕೆ ಅವಕಾಶವನ್ನು ಕೊಡಬೇಡ. ಹೆಂಗಸರ ಗುಂಪು ತಮ್ಮ ಬಿನ್ನಾಣದ ಕುಡಿನೋಟದಿಂದ ನಿನ್ನನ್ನು ಮೋಸಗೊಳಿಸದಂತೆ ಯಾವಾಗಲೂ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಿರು. ವ|| ಅದಲ್ಲದೆ ಯುವರಾಜಪಟ್ಟಾಭಿಷೇಕವನ್ನು ಮಾಡಿಸಿಕೊಂಡು, ವಂಶಪರಂಪರೆಯಿಂದ ಬಂದ ರಾಜ್ಯದ ಹೊರೆಯನ್ನು ಹೊತ್ತು, ದಿಕ್ಕುಗಳನ್ನೆಲ್ಲಾ ಗೆದ್ದುಕೊಂಡು ಬರಲು ವಿಜಯಪ್ರಯಾಣ ಬೆಳಸಿ ಏಳು ಕಡಲುಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಭೂಮಿಯನ್ನೆಲ್ಲಾ ನಿನ್ನ ಸಾಮ್ರಾಜ್ಯಕ್ಕೆ ಒಳಪಡಿಸಿಕೊಂಡು ಆಳು. ೧೦೫. ಲೋಕವು ನಗದಂತೆಯೂ, ಗುರುಹಿರಿಯರು ಹೊಗಳುವಂತೆಯೂ, ಪರಿಜನರಿಗೆ ಶುಭವಾಗುವಂತೆಯೂ, ನೆಂಟರಿಷ್ಟರಿಗೆ ವ್ಯಥೆಯಾಗದಂತೆಯೂ ಇದ್ದುಕೊಂಡು ಬಹಳ ಒಳ್ಳೆಯವನೆನಿಸಿಕೊಂಡು ಬಹಳ ಕಾಲ ಸುಖವಾಗಿ ರಾಜ್ಯಭಾರ ಮಾಡಿಕೊಂಡಿರು.” ವ|| ಹೀಗೆ ಹೇಳಿದ ಶುಕನಾಸನ ಉಪದೇಶವಚನಗಳೆಂಬ ಅಮೃತದಿಂದ ತೊಳೆಯಲ್ಪಟ್ಟವನಾದಂತೆಯೂ, ಕಣ್ಣು ಬಿಟ್ಟವನಂತೆಯೂ, ಅಲಂಕರಿಸಲ್ಪಟ್ಟವನಂತೆಯೂ, ಪವಿತ್ರನಾದಂತೆಯೂ ಬಹಳ ಸಂತೋಷಗೊಂಡ ಮನಸ್ಸುಳ್ಳವನಾಗಿ ಸ್ವಲ್ಪ ಕಾಲವಿದ್ದು ಚಂದ್ರಾಪೀಡನು ತನ್ನ ಮನೆಗೆ ಹೋದನು. ಈ ಕಡೆ ಮೊದಲೆ ಏರ್ಪಡಿಸಿದ್ದ ರತ್ನಮಯವಾದ ನೆಲಗಟ್ಟಿನ ನಟ್ಟನಡುವೆ ಶೋಭಿಸುತ್ತಿರುವ ಸಿಂಹಾಸನದ ನಾಲ್ಕು ದಿಕ್ಕುಗಳಲ್ಲೂ ಪ್ರಕಾಶಿಸುವ ರತ್ನಖಚಿತವಾದ ಸುವರ್ಣಕುಂಭಗಳಿಂದಲೂ, ಹಸುರಿನಿಂದ ಶೋಭಿಸುತ್ತಾ ಬೆಳೆದು ಹರಡಿಕೊಂಡಿರುವ ಅಂಕುರಾರ್ಪಣದ ಸಸಿಗಳಿಂದಲೂ ಪ್ರಕಾಶಿಸುವ ಮತ್ತು ರನ್ನಗನ್ನಡಿಗಳಿಂದ ಸಿಂಗರಿಸಲ್ಪಟ್ಟಿರುವ ಚಿನ್ನದ ದೊನ್ನೆಗಳಿಂದಲೂ, ಸುವಾಸನೆಯಾದ ನೀರಿನ ವಾಸನೆಗೆ ಮುತ್ತುವ ಮರಿದುಂಬಿಗಳ ಗುಂಪಿನಿಂದ ಕಪ್ಪುಬಟ್ಟೆಯಿಂದ ಮುಚ್ಚಿದಂತಿರುವ ಸುವರ್ಣಕಲಶಗಳಿಂದಲೂ, ಪಟ್ಟಾಭಿಷೇಕದ ವಿನೋದವನ್ನು ನೋಡುವುದಕ್ಕಾಗಿ ಇಳಿದುಬಂದಿರುವ ವಿದ್ಯಾಧರರಮಣಿಯರಂತಿರುವ ಗಣಿಕೆಯರಿಂದಲೂ, ಸುತ್ತುವರಿದಿರುವ ಹಾಡುಗಾರರು, ವಾದ್ಯಗಾರರು, ಕೊಳಲೂದುವವರು, ವೀಣೆ ಬಾರಿಸುವವರು, ಹೊಗಳುಭಟ್ಟರು, ವಾಚಾಳಿಗಳು ಮುಂತಾದವರಿಂದ ಶೋಭಿಸುತ್ತಿರುವ ಪಟ್ಟಾಭಿಷೇಕಮಂಟಪದಲ್ಲಿ ಸಮಸ್ತ ರಾಜ ಸಮೂಹವೂ, ಅನ ರಾಜರೂ ಜೋಯಿಸರ ತಂಡವೂ ನೆರದಿರಲಾಗಿ,

ತಾರಪೀಡಂ ನರೇಂದ್ರಪ್ರಕರಪರಿವೃತಂ ಯೌವರಾಜ್ಯಾಭಿಷೇಕ
ಪ್ರಾರಂಭಪ್ರೀತಿಯಿಂದಟ್ಟಿದ ಬೞಗೆ ಮಗಂ ಬರ್ಪುದುಂ ಮಂಗಳವ್ಯಾ
ಪಾರಂ ಪಾರ್ದಿರ್ಪುದುಂ ತಂದೆಯ ಪದಯುಗಮಂ ಬಂದು ಕಂಡಂ ಮನೋಜಾ
ಕಾರಂ ಮುಗ್ಧಾಂಗನಾಪೀವರಕುಚವಿಲಸತ್ತಾರಹಾರಂ ಕುಮಾರಂ                         ೧೦೬

ವ|| ಅಂತು ಬಂದ ನಿಜನಂದನನಂ ಶುಭಲಗ್ನೋದಯದೊಳನೇಕ ಮಂಗಳಭೇರೀ ಮೃದಂಗಪಟಹಪಟುರವಂಗಳೆಸೆಯೆ ನೃಪೇಂದ್ರಂ ಮಜ್ಜನಪೀಠಮನಲಂಕರಿಸಿದಾಗಳ್

ನವರತ್ನವ್ರಾತ ಸರ್ವೌಷಫಲಮಿಳಿತಾಂಭೋತೀರ್ಥಾಪಗಾ ವಾ
ರಿವಿರಾಜಚ್ಚಂದ್ರಕಾಂತೋಪಲಕಲಶಮನಂದೆತ್ತಿ ಭೂಪಾಲಕಂಠೀ
ರವನಾನಂದಾಶ್ರುಧಾರಾತತಿ ನಿಮಿರ್ವಿನೆಗಂ ಯೌವರಾಜ್ಯಾಭಿಷೇಕೋ
ತ್ಸವಮಂ ಪುತ್ರಂಗಮಾತ್ಯಪ್ರಕರಪರಿವೃತಂ ಮಾಡಿದಂ ಸಾರ್ವಭೌಮಂ                ೧೦೭

ಮರದಿಂ ಮರಕ್ಕೆ ದಾಂಗುಡಿ
ವರಿವೆಳಲತೆಯಂತೆ ನೀತಿಮಾಂಧಾತನೊಳಾ
ವರಿಸಿರ್ದು ರಾಜವಿದ್ಯಾ
ಧರನಲ್ಲಿಗೆ ರಾಜ್ಯಲಕ್ಷಿ  ನಿಲುಕಿದಳಾಗಳ್                      ೧೦೮

ಪುದಿದೆಳೆಮಿಂಚುಗಳ್ ಪೊಳೆದವೋಲ್ ಸುಲಿಪಲ್ಗಳ ಕಾಂತಿ ಪೊಣ್ಮಿ ಪೂ
ಸಿದ ಸಿರಿಕಂಡಮುಜ್ಜಳಿಪ ಲೋಚನಮುಟ್ಟ ಸಿತಾಂಬರಂ ತುಱುಂ
ಬಿದ ನವಮಾಲಿಕಾಕುಸುಮವಿಕ್ಕಿದ ಮುತ್ತಿನ ಲಂಬಣಂ ತೊಡ
ರ್ಚಿದ ಕುಸುಮಾವತಂಸಮಮರಲ್ಕೆಸೆದಂ ನೃಪರೂಪಚಂದ್ರಮಂ           ೧೦೯

ಜನತಾಶೀರ್ವಾದಮುಂ ಮಂಗಳಪಟಹರವಾಟೋಪಮುಂ ವಿಪ್ರವೇದ
ಧ್ವನಿಯುಂ ಭೋರೆಂದು ಪೊಣ್ಮುತ್ತಿರೆ ನಿಜಜನಕಾದೇಶದಿಂ ಬಂದು ಸಿಂಹಾ
ಸನದೊಳ್ ಕುಳ್ಳಿರ್ದನಾನಂದಿತ ಗುರುನಿಕರಂತರ್ಪಿತಾಶೇಷ ವಿದ್ವ
ಜ್ಜನನತ್ಯುತ್ಸಾಹಿ ತೋರ್ವೀ ಭುವನಪತಿ ಸಭಾಂಭೋಜಿನೀರಾಜಹಂಸಂ              ೧೧೦

೧೦೬. ರಾಜಸಮೂಹದಿಂದ ಕೂಡಿಕೊಂಡಿರುವ ತಾರಾಪೀಡಮಹಾರಾಜನು ಯುವರಾಜಪಟ್ಟಾಭಿಷೇಕ ವಿಯನ್ನು ಪ್ರಾರಂಭಿಸಿಬೇಕೆಂಬ ಅಭಿಲಾಷೆಯಿಂದ ಬರುವಂತೆ ದೂತರ ಮೂಲಕ ಹೇಳಿಕಳುಹಿಸಲು, ಮಂಗಳಕಾರ್ಯಗಳು ನಡೆಯಲು ಅವನನ್ನೇ ನಿರೀಕ್ಷಿಸುತ್ತಿರಲಾಗಿ ಸುಂದರಿಯರ ತೋರಮೊಲೆಗಳ ಮೇಲೆ ವಿಶೇಷವಾಗಿ ಶೋಭಿಸುವ ಶುಭ್ರವಾದ ಹಾರವುಳ್ಳ ಮನ್ಮಥನಂತಿರುವ ರಾಜಕುಮಾರನು ಬಂದು ತಂದೆಯ ಚರಣಗಳನ್ನು ಕಂಡನು, ವ|| ಹಾಗೆ ಬಂದ ತನ್ನ ಮಗನನ್ನು ಸುಮೂಹರ್ತದಲ್ಲಿ ಅನೇಕವಾದ ಮಂಗಳಕರವಾದ ನಗಾರಿ, ಮೃದಂಗ, ತಮಟೆಗಳ ದೊಡ್ಡಧ್ವನಿಯು ವ್ಯಾಪಿಸುತ್ತಿರಲು ಚಂದ್ರಾಪೀಡನು ಅಭಿಷೇಕಪೀಠವನ್ನು ಅಲಂಕರಿಸಿದಾಗ,

೧೦೭. ರಾಜಾರಾಜನಾದ ತಾರಾಪೀಡ ಚಕ್ರವರ್ತಿಯು ಮಂತ್ರಿಗಳಿಂದ ಕೂಡಿಕೊಂಡವನಾಗಿ ಆನಂದಬಾಷ್ಪಧಾರೆಗಳು ಕಣ್ಣುಗಳಿಂದ ಇಳಿಯುತ್ತಿರಲು, ಒಂಭತ್ತು ಬಗೆಯ ರತ್ನಗಳು, ಬಗೆಬಗೆಯಾದ ಗಿಡಮೂಲಿಕೆಗಳು ಮತ್ತು ಫಲಗಳಿಂದ ಕೂಡಿಕೊಂಡಿರುವ ಸಮುದ್ರ ಮತ್ತು ಗಂಗಾದಿ ಮಹಾನದಿಗಳ ನೀರುಗಳಿಂದ ತುಂಬಿರುವ, ಚಂದ್ರಕಾಂತಶಿಲಾನಿರ್ಮಿತವಾದ ಕುಂಭಗಳನ್ನು ಎತ್ತಿ ತನ್ನ ಮಗನಿಗೆ ಯುವರಾಜ ಪಟ್ಟಾಭಿಷೇಕವನ್ನು ಮಾಡಿದನು. ೧೦೮. ಒಂದು ಮರದಲ್ಲಿ ಹಬ್ಬಿದ್ದು ಆ ಮರವನ್ನೂ ಬಿಡದೆ ಮತ್ತೊಂದು ಮರಕ್ಕೆ ಹಬ್ಬುವ ಎಳೆಬಳ್ಳಿಯಂತೆ, ಮಾಂಧಾತಚಕ್ರವರ್ತಿಗೆ ಸಮಾನವಾದ ನೀತಿವಂತನೆಂದು ಹೆಸರಾಂತ ತಾರಾಪೀಡನಲ್ಲಿ ನೆಲೆಸಿದ್ದ ರಾಜ್ಯಲಕ್ಷಿ ಯು ಅವನನ್ನೂ ತ್ಯಜಿಸದೆಯೇ ವಿದ್ಯಾಧರನಿಗೆ ಸಮಾನನೆನಿಸಿದ ಚಂದ್ರಾಪೀಡನನ್ನು ಬಂದು ಸೇರಿದಳು. ೧೦೯. ಹರಡುತ್ತಿರುವ ಬಳ್ಳಿ ಮಿಂಚುಗಳು ಹೊಳೆಯುವಂತೆ ಶುಭ್ರವಾದ ಹಲ್ಲುಗಳ ಹೊಳಪು ಹರಡುತ್ತಿರಲು, ಮೈಗೆ ಲೇಪಿಸಿರುವ ಚಂದನವೂ, ಉಟ್ಟುಕೊಂಡಿರುವ ಬಿಳಿಯ ರೇಷ್ಮೆ ಪಂಚೆಯೂ, ಮುಡಿದುಕೊಂಡಿರುವ ಹೆಜ್ಜಾಜಿಯ ಹೂವೂ, ಧರಿಸಿಕೊಂಡಿರುವ ಮುತ್ತಿನ ಹಾರವೂ, ಕಿವಿಯಲ್ಲಿ ಮುಡಿದುಕೊಂಡಿರುವ ಹೂವೂ ಹೊಂದಿಕೊಂಡಿರಲಾಗಿ ಚಂದ್ರನಿಗೆ ಸಮಾನನಾದ ರಾಜಪುತ್ರನು ಶೋಭಿಸುತ್ತಿದ್ದನು. ೧೧೦. ಪ್ರಜಾಸಮುದಾಯದ ‘ಜಯ! ಜಯ!’ ಎಂಬ ಆಶೀರ್ವಾದಧ್ವನಿಯೂ, ಮಂಗಳಕ್ಕಾಗಿ ಬಾರಿಸುತ್ತಿರುವ ತಮಟೆಗಳ ಆಡಂಬರವೂ, ಬ್ರಾಹ್ಮಣರ ವೇದಘೋಷವೂ ಭೋರೆಂದು ಹರಡುತ್ತಿರಲಾಗಿ, ಗುರುಹಿರಿಯರಿಗೆ ಆನಂದವನ್ನುಂಟುಮಾಡುವ, ನೆರೆದಿದ್ದ ವಿದ್ವಾಂಸರನ್ನೆಲ್ಲಾ ಯಥೋಚಿತ ಸಂಭಾವನೆಗಳಿಂದ ತೃಪ್ತಪಡಿಸಿದ, ಉತ್ಸಾಹಭರಿತರಾದ ಭೂಮಂಡಲದ ಸಮಸ್ತ ರಾಜರ

ವ|| ಅಂತು ಕಿಱುದುಬೇಗಮಿರ್ಪುದುಂ ಆಗಳ್ ದಿಗ್ವಿಜಯಪ್ರಯಾಣಸೂಚಕಮು ಮರಿಕುಲಪ್ರಳಯನಿವೇದಕಮುಮೆನಿಸಿ

ಪೊಡೆದತ್ತುರ್ವರೆಯುಂ ಯುಗಾಂತರ ಸಿಡಿಲ್ಮೇಘಂ ತಟಿದ್ದಂಡದಿಂ
ಬಡಿದತ್ತಾದಿವರಾಹಘೋಣಹತಿಯಿಂ ಪಾತಾಳಗರ್ಭಂ ಸಿಡಿ
ಲ್ದೊಡೆದತ್ತಬ್ಧಿಯೊಳಿಂದು ಮಂದರನಗಂ ಬಿರ್ದತ್ತೆನಲ್ ಲೋಕದೊಳ್
ಬಿಡದುಣ್ಮಿತ್ತು ಸುವರ್ಣಕೋಣಹತಿಯಿಂ ಪ್ರಸ್ಥಾನಭೇರೀರವಂ               ೧೧೧

ವ|| ಅಂತಾ ತ್ರೈಲೋಕ್ಯಕ್ಷೋದಕಾರಿಯಪ್ಪ ಭೇರೀರವಂ ಪೊಣ್ಮಲೊಡನೆ

ದೆಸೆದೆಸೆಯೊಳ್ ಭೇರೀರವ
ಮೆಸೆವುತ್ತಿರೆ ರತ್ನರಚಿತ ಸಿಂಹಾಸನದಿಂ
ವಸುಧಾಪನೆೞ್ದಂ ರಿಪು
ವಸುಧಾಪತತಿಯ ಲಕ್ಷಿ ಯೊಡನೇೞನೆಗಂ                            ೧೧೨

ವ|| ಅಂತೇೞ್ವುದುಮಾಗಳ್ ಸರಭಸದಿಂದೊಡನೇೞ್ವ ರಾಜಲೋಕದ ಪರಸ್ಪರಸಂಘಟ್ಟನದಿಂ ವಿಘಟಿತಮಾಗಿ ದಿಗ್ವಿಜಯದೊಳ್ ಸೂಸುವ ಮಂಗಳಲಾಜವರ್ಷದಂತೆ ಹಾರನಿಕರಂಗಳಿಂದುಚ್ಚಳಿಸುತ್ತು ಮಲ್ಲೊಗುವ ಮೌಕ್ತಿಕನಿಕಾಯದ ನಡುವೆ

ಬಿಳಿಯ ಮುಗುಳ್ಗಳಂ ಸುರಿವ ಕಲ್ಪಮಹೀರುಹಮಾಲೆ ಸುತ್ತಿ ಕ
ಣ್ಗೊಳಿಸುವ ಪಾರಿಜಾತಮೆನೆ ಸೀಕರಮುಣ್ಮುವ ದಿಗ್ಗಜವ್ರಜಂ
ಬಳಸಿದ ದಿವ್ಯದಂತಿಯೆನೆ ನೀರ್ವನಿಯಂ ಸುರಿವಂಬುದಾಳಿ ಮಂ
ಡಳಿಸಿದ ಮೇಘಕಾಲಮೆನೆ ಕಣ್ಗೆಸೆದಂ ನೃಪರೂಪಚಂದ್ರಮಂ                  ೧೧೩

ವ|| ಅನಂತರಂ ನಿಜಜನನೀಜನಕರ ಚರಣಕಮಲಕ್ಕೆಱಗಿ ಪರಮಾಶೀರ್ವಾದಗಳನಾಂತು ಪತ್ರಲೇಖಾಸಮಾಧ್ಯಾಸಿತಾಂತರಾಸನೆಯುಂ ಪ್ರಸ್ಥಾನೋಚಿತ ಮಂಗಳಾಲಂಕಾರೆಯುಮಪ್ಪ ಪಿಡಿಯಂ ಚಂದ್ರಾಪೀಡನೇಱದಾಗಳ್

ಮಂದರದಿಂ ಕಡೆದಿಂಗಡ
ಲಿಂದುಣ್ಮಿದ ಸುೞಯಿದೆನೆ ದಶಾಸ್ಯನ ಕರದೊಳ್
ನಿಂದ ರಜತಾದ್ರಿಯೆನೆ ನೃಪ
ನಂದನಧವಳಾಪತ್ರಮೆಸೆದತ್ತಾಗಳ್                   ೧೧೪

ಸಮೂಹವೆಂಬ ತಾವರೆಗೊಳದಲ್ಲಿ ರಾಜಹಂಸದಂತೆ ವಿರಾಜಮಾನವಾದ ಯುವರಾಜ ಚಂದ್ರಾಪೀಡನು ತಂದೆಯ ಅಪ್ಪಣೆಯಂತೆ ಬಂದು ಸಿಂಹಾಸನದಲ್ಲಿ ಮಂಡಿಸಿದನು. ವ|| ಹೀಗೆ ಸ್ವಲ್ಪ ಕಾಲವಿರಲಾಗಿ ದಿಗ್ವಿಜಯ ಪ್ರಯಾಣಕ್ಕೆ ಸೂಚಕವಾದ, ಶತ್ರುಗಳ ಸಮೂಹಕ್ಕೆ ಪ್ರಳಯಕಾಲವು ಸನ್ನಿಹಿತವಾಗಿರುವುದನ್ನು ಸೂಚಿಸುವಂತಿರುವ ೧೧೧. ಪ್ರಳಯಕಾಲದಲ್ಲಿ ಸಿಡಿಲು ಭೂಮಿಗೆ ಬಿದ್ದಂತೆಯೂ, ಮಿಂಚೆಂಬ ಕೋಲಿನಿಂದ ಮೇಘವು ಹೊಡೆಯಲ್ಪಟ್ಟಂತೆಯೂ, ಆದಿವರಾಹನ ಮೂಗಿನ ಹೊಡೆತದಿಂದ ಪಾತಾಳದ ಮಧ್ಯ ಪ್ರದೇಶವು ಭೇದಿಸಲ್ಪಟ್ಟಂತೆಯೂ, ಸಮುದ್ರದಲ್ಲಿ ಮಂದರಪರ್ವತವು ಬಿದ್ದಂತೆಯೂ ಚಿನ್ನದ ಕೋಲಿನಿಂದ ಹೊಡೆಯಲ್ಪಟ್ಟ ಪ್ರಯಾಣಕಾಲದ ನಗಾರಿಯ ಶಬ್ದವು ಒಂದೇ ಸಮನೆ ಭೂಮಿಯಲ್ಲಿ ಹೊರಹೊಮ್ಮಿ ಹರಡುತ್ತಿತ್ತು. ವ|| ಹಾಗೆ ಮೂರುಲೋಕವನ್ನೂ ಅಲ್ಲೋಲ ಕಲ್ಲೋಲಗೊಳಿಸುವ ನಗಾರಿಧ್ವನಿಯು ಹರಡುತ್ತಿರಲಾಗಿ ಕೂಡಲೆ, ೧೧೨. ದಿಕ್ಕು ದಿಕ್ಕುಗಳಲ್ಲೂ ಭೇರೀಶಬ್ದವು ಮೊಳಗುತ್ತಿರಲು ಯುವರಾಜನು ರತ್ನಖಚಿತವಾದ ಸಿಂಹಾಸನದಿಂದ ಶತ್ರುಗಳ ರಾಜ್ಯಲಕ್ಷಿ ಯೂ ಜೊತೆಯಲ್ಲಿಯೇ ಮೇಲಕ್ಕೇಳುತ್ತಿರಲು ಎದ್ದನು. ಟಿ. ಇವನು ಎದ್ದು ದಂಡಯಾತ್ರೆ ಮಾಡುವುದರಿಂದ ಶತ್ರುಗಳ ರಾಜ್ಯಲಕ್ಷಿ ಯು ಅಲ್ಲಿಂದ ಎದ್ದುಹೊರಡುತ್ತಾಳೆ. ಅಂದರೆ ಕೈಬಿಟ್ಟುಹೋಗುತ್ತಾಳೆ ಎಂದು ಅಭಿಪ್ರಾಯ. ವ|| ಹಾಗೆ ಏಳಲು ಆಗ ಬೇಗಬೇಗನೆ ಜೊತೆಯಲ್ಲೇ ಏಳುತ್ತಿರುವ ರಾಜರುಗಳ ಗುಂಪಿನ ಪರಸ್ಪರ ತಿಕ್ಕಾಟದಿಂದ ಕಿತ್ತುಹೋಗಿರುವ, ಹಾರಗಳಿಂದ ಹೊರಬಿದ್ದು ಚೆಲ್ಲಾಡುತ್ತಿರುವ, ಅದರಿಂದಲೇ ದಿಗ್ವಿಜಯ ಕಾಲದಲ್ಲಿ ಮಂಗಳಾರ್ಥವಾಗಿ ಎರಚುವ ಅರಳಿನ ಮಳೆಯೊ ಎಂಬಂತೆ ಕಾಣುತ್ತಿರುವ ಮುತ್ತಿನ ಸಮೂಹದ ಮಧ್ಯದಲ್ಲಿ ೧೧೩. ಬಿಳಿಯ ಹೂವುಗಳನ್ನು ಸುರಿಸುವ ಕಲ್ಪವೃಕ್ಷಗಳ ಸಾಲಿನಿಂದ ಸುತ್ತುವರಿಯಲ್ಪಟ್ಟು ಕಂಗೊಳಿಸುತ್ತಿರುವ ಪಾರಿಜಾತವೃಕ್ಷದಂತೆಯೂ, ನೀರಿನ ತುಂತುರುಗಳನ್ನು ಹೊರಸೂಸುವ ದಿಗ್ಗಜಗಳ ಗುಂಪಿನಿಂದ ಸುತ್ತುವರಿಯಲ್ಪಟ್ಟ ಐರಾವತದಂತೆಯೂ, ಹಾಗೆಯೇ ನೀರಿನ ಹನಿಗಳನ್ನು ಸುರಿಸುವ ಮೋಡಗಳ ಸಾಲಿನಿಂದ ಸುತ್ತುವರಿಯಲ್ಪಟ್ಟ ವರ್ಷಕಾಲದಂತೆಯೂ ಚಂದ್ರಾಪೀಡನು ಶೋಭಿಸಿದನು. ವ|| ಬಳಿಕ ತನ್ನ ತಂದೆತಾಯಿಗಳ ಅಡಿದಾವರೆಗಳಿಗೆ ಪ್ರಣಾಮವನ್ನು ಮಾಡಿ ಶ್ರೇಷ್ಠವಾದ ಆಶೀರ್ವಾದಗಳನ್ನು ಪಡೆದು, ಒಳಗಿನ ಪೀಠದಲ್ಲಿ ಪತ್ರಲೇಖೆಯು ಕುಳಿತುಕೊಳ್ಳಲು ಮಂಗಳಾ ಲಂಕಾರದಿಂದ ಶೋಭಿಸುತ್ತಿರುವ ಹೆಣ್ಣಾನೆಯನ್ನು ಏರಿದನು. ೧೧೪. ಮಂದರಪರ್ವತವನ್ನು ಕಡೆದಾಗ ಉತ್ಪನ್ನವಾದ ಕ್ಷೀರಸಮುದ್ರದ

ವ|| ಅಂತು ಬಿಜಯಂಗೆಯ್ವುತ್ತಮಿರೆ ರಾಜಮಂದಿರದ್ವಾರದಿಂ ಪೊಱಗೆ

ಭುವನಾಶಪ್ರತಾಪಾನಲಬಹಳಶಿಖಾಜಾಲಮೋ ವೈರಿನಾಶೋ
ದ್ಭವ ಸರ್ವವ್ಯಾಪಿದಿಗ್ದಾಹಮೊ ನೃಪವರನಾನಂದದಿಂ ಬರ್ಪದೊಂದು
ತ್ಸವದಿಂ ಭೂಕಾಂತೆ ರಾಗಾತ್ಮಿಕೆಯೆನಿಸಿದಳೋ ಪೇೞಮೆಂಬಂತೆ ಭೂಭೃ
ನ್ನಿವಹವ್ಯಾಕೀರ್ಣ ನಾನಾ ಮಕುಟಮಣಿಗಣದ್ಯೋತಿ ಪರ್ವಿತ್ತದಾಗಳ್                  ೧೧೫

ವ|| ಅನಂತರಂ ನರೇಂದ್ರನಂದನಪ್ರಕರಂ ಚಂದ್ರಾಪೀಡಂಗಹಮಹಮಿಕೆಯಿಂ ಪ್ರಣಾಮಲಾಲಸರಾಗೆ

ವಿನಯದಿನೆಱಗುವ ಭೂಪಾ
ಲನಿಚಯಚೂಡಾಮಣಿಪ್ರಭಾಮಂಡಳಮಂ
ದಿನಮಂಡಲ ಸಮುದಯದಿಂ
ದೆ ನಿಮಿರ್ವ ಕೆಂಗದಿರ್ಗಳೆಸಕಮಂ ಮಸುಳಿಸುಗುಂ               ೧೧೬

ವ|| ಅಂತೆಱಗಿದ ನರಪತಿಸಹಸ್ರಮಂ ನಿಮ್ಮ ನಿಮ್ಮ ವಾಹನಂಗಳನೇಱಮೆಂದು ಬೆಸಸಿ ಬಿಜಯಂಗೆಯ್ವಲ್ಲಿ ಪೆಱಗೆ ಢಕ್ಕಾರವದಿಂ ಬರಿತ ದಿಗಂತರಾಳಮೆನಿಸಿ ಬರುತ್ತಂ

ಎಳವಿಸಿಲಿಂದಲಂಕರಿಸಿ ಬಾಂದೊಯೊಳ್ವೊನಲಿಂದಮೊಂದಿ ಮಂ
ಡಳಿಸಿದ ಧಾರೆಯಿಂ ತೊಳಪ ಶೃಂಗದಿನೊಪ್ಪುವ ಮೇರುವಿಲ್ಲಿ ಬಂ
ದೆಳಸಿತೆನಲ್ಕೆ ಸಿಂಧುರದ ಹಾರದ ಮಾಲೆಯ ಕಾಂತಿ ತಳ್ತು ಪ
ಜ್ವಳಿಸುವ ಕುಂಭಮಂ ತಳೆದು ಪಿಂತೆಸೆದಿರ್ದುದು ಗಂಧಸಿಂಧುರಂ        ೧೧೭

ವ|| ಅದಲ್ಲದೆಯುಂ

ತೊಳಗುವ ರತ್ನಾಭರಣಂ
ಗಳ ರುಚಿ ನಿಜರೋಮಕಾಂತಿಯೊಳ್ ತಳ್ತು ತೆಱಂ
ಬೊಳೆಯಲ್ಕಿಂದ್ರಾಯುಧಮೇಂ
ಪೊಳೆದುದೊ ನೃಪಸುತನ ಮುಂದೆ ತೆಗೆದುಬರುತ್ತಂ                 ೧೧೮

ಸುಳಿಯಂತೆಯೂ, ರಾವಣನು ಕೈಯಲ್ಲಿ ಎತ್ತಿಹಿಡಿದಿದ್ದ ಕೈಲಾಸಪರ್ವತದಂತೆಯೂ ಇರುವ ಬಿಳಿಯ ಛತ್ರಿಯು ಅವನ ತಲೆಯ ಮೇಲೆ ಶೋಭಿಸುತ್ತಿತ್ತು. ವ|| ಹಾಗೆ ಬಿಜಯ ಮಾಡುತ್ತಿರಲಾಗಿ ಅರಮನೆಯ ಬಾಗಿಲಿನ ಹೊರಗೆ, ೧೧೫. ಹೊರಗಡೆ ದರ್ಶನಕ್ಕಾಗಿ ಕಾದುಕೊಂಡಿರುವ ರಾಜರುಗಳ ಗುಂಪಿನ ಕಿರೀಟಗಳಲ್ಲಿ ಶೋಭಿಸುವ ನಾನಾಬಗೆಯ ರತ್ನಗಳ ಕಾಂತಿಯು ಹರಡುತ್ತಿತ್ತು. ಅದು ಯುವರಾಜನ ಪ್ರತಾಪವೆಂಬ ಅಗ್ನಿಯ ಅತ್ಯಕವಾದ ಜ್ವಾಲೆಗಳ ಸಮೂಹದಂತೆಯೂ, ಸನ್ನಿಹಿತವಾಗುತ್ತಿರುವ ಶತ್ರುನಾಶವನ್ನು ಸೂಚಿಸುವ ಎಲ್ಲಾ ಕಡೆಯಲ್ಲೂ ಹರಡಿರುವ ದಿಕ್ಕುಗಳಲ್ಲಿ ಏಳುತ್ತಿರುವ ಬೆಂಕಿಯಂತೆಯೂ ಮತ್ತು ಪಟ್ಟಾಭಿಷೇಕವಾದ ಮೇಲೆ ಅವನನ್ನು ಸೇರಲು ಸಂತೋಷದಿಂದ ಬರುವ ಭೂಮಿಯೆಂಬ ರಮಣಿಯು ಆನಂದದಿಂದ ರಾಗ (ಪ್ರೀತಿ ಕೆಂಪು)ವನ್ನು ತಾಳಿಬಿಟ್ಟಳೋ ಎಂಬಂತೆ ಕಾಣುತ್ತಿತ್ತು. ವ|| ಬಳಿಕ ರಾಜಪುತ್ರರ ಸಮೂಹವು ಚಂದ್ರಾಪೀಡನಿಗೆ ನಾನು ಮುಂದೆ ತಾನು ಮುಂದೆ ಎಂದು ನಮಸ್ಕಾರ ಮಾಡಲು ಆಸಕ್ತಿಯುಳ್ಳವರಾಗುತ್ತಿರಲಾಗಿ ೧೧೬. ವಿನಯಪೂರ್ವಕವಾಗಿ ನಮಸ್ಕರಿಸುವ ರಾಜರುಗಳ ತಲೆಮಣಿಗಳ ಕಾಂತಿಮಂಡಲದಿಂದ, ಸೂರ್ಯಮಂಡಲದಿಂದ ಹೊರಡುತ್ತಿರುವ ಕೆಂಬೆಳಗುಗಳ ಪ್ರಸಾರವು ಮುಚ್ಚಿಹೋಗುತ್ತಿತ್ತು. ವ|| ಹಾಗೆ ನಮಸ್ಕರಿಸುವ ಸಾವಿರಾರು ಅರಸುಗಳನ್ನು ನಿಮ್ಮ ನಿಮ್ಮ ವಾಹನಗಳನ್ನು ಹತ್ತಿರಿ ಎಂದು ಅಪ್ಪಣೆ ಮಾಡಿ ಪ್ರಯಾಣ ಮಾಡುತ್ತಿರುವಲ್ಲಿ ಹೊರಗೆ ಢಕ್ಕೆಗಳ ಧ್ವನಿಯಿಂದ ದಿಕ್ಕುಗಳ ಮಧ್ಯಪ್ರದೇಶವೆಲ್ಲ ಕಿವುಡುಬಿದ್ದಂತೆ ಆಗುತ್ತಿರಲು ಮುಂದುವರಿಯುತ್ತ ಇರಲಾಗಿ.

೧೧೭. ಹಿಂಭಾಗದಲ್ಲಿ ಒಂದು ಮದ್ದಾನೆಯು ಬರುತ್ತಿತ್ತು. ಅದರ ಕುಂಭಸ್ಥಳವು ಚಂದ್ರದ ಲೇಪನದಿಂದಲೂ, ಶುಭ್ರವಾದ ಮುತ್ತಿನ ಸರದಿಂದಲೂ, ಬಿಳಿಯ ಹೂವಿನ ಮಾಲಿಕೆಯಿಂದಲೂ ಪ್ರಕಾಶಿಸುತ್ತಿತ್ತು. ಇದರಿಂದ ಆ ಆನೆಯು ಎಳೆಯ ಬಿಸಿಲಿನಿಂದ ಶೋಭಿಸುವ ಮತ್ತು ದೇವಗಂಗಾನದಿಯ ಪ್ರವಾಹಧಾರೆಗಳಿಂದ ಸುತ್ತುವರಿಯಲ್ಪಟ್ಟಿರುವ ಶಿಖರವುಳ್ಳ ಮೇರುಪರ್ವತವೇ ಬಯಸಿ ಬಂದು ಹಿಂಬಾಲಿಸುತ್ತಿರುವಂತೆ ಕಾಣುತ್ತಿತ್ತು. ವ|| ಅದಲ್ಲದೆ, ೧೧೮. ನಿಗಿನಿಗಿಗುಟ್ಟುವ ರತ್ನಾಭರಣಗಳ ಬೆಳಕು ತನ್ನ ರೋಮರಾಜಿಯ ಕಾಂತಿಯೊಂದಿಗೆ ಕೂಡಿ ಚೆನ್ನಾಗಿ ಪ್ರಕಾಶಿಸುತ್ತಿರಲು ರಾಜಕುಮಾರನ ಮುಂದುಗಡೆ ಹೋಗುತ್ತಿರುವ ಇಂದ್ರಾಯುಧವು ಬಹಳ ಚೆನ್ನಾಗಿ

ವ|| ಅನಂತರಮೆರಡನೆಯ ಯುವರಾಜನಂತೆ ಪಿಡಿಯನೇಱ ಬಲಗೆಲದೊಳಿರ್ದ ವೈಶಂಪಾಯನಂ ನಾಲ್ವೆಸೆಯೊಳಂ ಮದಗಜಾರೂಢರಾಗಿ ಪರಿವೇಷ್ಟಿಸಿರ್ದ ನರಪತಿಸಹಸ್ರಂಬೆರಸು ನೃಪರೂಪಚಂದ್ರಂ ಚಂದ್ರಾಪೀಡದೇವಂ ಪಿಡಿಯನೇಱ ಇಂದ್ರದಿಶಾಭಿಮುಖನಾಗೆ

ಎಡವಿಡದೆ ನೂಂಕಿ ಗಜಘಟೆ
ನಡೆಯಲ್ ಮೇಲೆಸೆದುವಾಂತ ಬೆಳ್ಗೊಡೆಗಳ್ ಪೆ
ರ್ಗಡಲ ತೆರೆದುಱುಗಲೊಳ್ ನೂ
ರ್ಮಡಿಯೆನೆ ಮಾರ್ತೊಳಗುವಿಂದುಮಂಡಲತತಿವೋಲ್              ೧೧೯

ತುರಗಮಯಂ ನೆಲಂ ಚಮರಜಾಲಮಯಂ ದಿನಮಾತಪತ್ರ ಪಾಂ
ಡುರಮಯಮಂತರಿಕ್ಷಮಿಭವಯೂಧಮಯಂ ದೆಸೆ ಸೃಷ್ಟಿಭೂತಳೇ
ಶ್ವರಮಯಮಾತಪಂ ಮಣಿಕಿರೀಟಮಯಂ ಭುವನತ್ರಯಂ ಜಯ
ಸ್ವರಮಯಮಂಬರಂ ಧ್ವಜಮಯಂ ಮದಗಂಧಮಯಂ ಸಮೀರಣಂ       ೧೨೦

ವ|| ಆಗಳಾ ನರೇಂದ್ರನಂದನನ ಮುಂದೆ ಪರಿವ ಪಲತೆಱದ ಪಡೆದು ಬಹಳ ಕೋಲಾಹಲಂಗಳುಂ ಎಡೆಯೆಡೆಯೊಳೆಸೆವ ಬಹುವಿಧಕಹಳಾರವಂಗಳುಂ ತಮ್ಮ ನೆೞಲ್ಗೆ ತಾವೆ ಪೆಳಱ ಬೆರ್ಚಿ ಪೊಳೆದುಚ್ಚಳಿಸುವ ತುರಂಗಮಂಗಳ ಹೇಷಾರವಂಗಳುಂ ಕುಲಪರ್ವತಂ ಗಳೆನಿಪ ಗಜಂಗಳ ಬೃಂಹಿತಂಗಳುಂ ಗತಿವಶನುಣ್ಮುವ ಘಣಘಣಾಯಮಾನ ಘಂಟಾರವಂಗಳುಂ ಜಯಘಂಟಾರವಸಮ್ಮಿಳಿತ ಢಕ್ಕಾರವಂಗಳುಂ ಪಾಂಚಜನ್ಯಾನುಕಾರಿ ಶಂಖರವಸಂರ್ವತ ಪ್ರಯಾಣಪಟಹರವಂಗಳುಮೊಂದೊಂದಳ್ ತಳ್ತು ಸಕಲ ಭುವನಮುಂ ಶಬ್ದಾತ್ಮಕ ಮಾದಂತಿರ್ದುದಾಗಳ್

ಒಂದೆಡೆ ಜೀರ್ಣಮೀನತನುಧೂಮ್ರದೊಂದೆಡೆ ರಲ್ಲಕಾಭಮಂ
ತೊಂದೆಡೆಯೂರ್ಣತಂತು ಪರಿಪಾಂಡುರಮುಷ್ಪ್ರಸಟಾವಭಾಸಿ ಮೇ
ಣೊಂದೆಡೆ ಮತ್ತಮೊಂದೆಡೆ ಜರತ್ಕಪಿಕೇಸರಜಾಲಪಿಂಗಮಾ
ಗಂದೊಗೆದತ್ತನೇಕವಿಧವರ್ಣ ಧರಾತಲರೇಣುಸಂಚಯಂ               ೧೨೧

ಕಾಣುತ್ತಿತ್ತು. ವ|| ಬಳಿಕ ಎರಡನೆಯ ಯುವರಾಜನೋ ಎಂಬಂತೆ ಹೆಣ್ಣಾನೆಯನ್ನು ಹತ್ತಿ ಬಲಗಡೆಯಲ್ಲೇ ಬರುತ್ತಿರುವ ವೈಶಂಪಾಯನನಿಂದಲೂ ನಾಲ್ಕು ಕಡೆಗಳಲ್ಲೂ ಮದ್ದಾನೆಗಳನ್ನೇರಿ ಸುತ್ತುಗಟ್ಟಿ ಬರುತ್ತಿರುವ ಸಾವಿರಾರು ರಾಜರುಗಳಿಂದಲೂ ಕೂಡಿಕೊಂಡು ಚಂದ್ರಾವತಾರನಾದ ಚಂದ್ರಾಪೀಡನು ಹೆಣ್ಣಾನೆಯನ್ನೇರಿ ಪೂರ್ವದಿಕ್ಕಿಗೆ ಹೊರಟನು. ೧೧೯. ಆನೆಗಳ ಗುಂಪು ಒಂದೇ ಸಮನೆ ಮುಂದುವರಿದು ಪ್ರಯಾಣ ಮಾಡುತ್ತಿತ್ತು. ಅವುಗಳ ಮೇಲೆ ಕಟ್ಟಿರುವ ಬಿಳಿಯ ಕೊಡೆಗಳು ಸಾಗರದ ತೆರೆಗಳ ಸಮೂಹದಲ್ಲಿ ನೂರುಮಡಿಯಾಗಿ ಮಾರ್ಪೊಳೆವ ಚಂದ್ರಮಂಡಲದ ಪ್ರತಿಬಿಂಬಗಳ ಸಮೂಹದಂತೆ ಶೋಭಿಸುತ್ತಿದ್ದುವು. ೧೨೦. ನೆಲವೆಲ್ಲವೂ ಕುದುರೆಗಳಿಂದ ತುಂಬಿರುವಂತೆಯೂ, ಹಗಲೆಲ್ಲ ಚಾಮರಗಳಿಂದ ತುಂಬಿರುವಂತೆಯೂ, ಆಕಾಶವೆಲ್ಲ ಛತ್ರಿಗಳ ಬಿಳುಪಿನಿಂದ ತುಂಬಿರುವಂತೆಯೂ, ದಿಕ್ಕುಗಳೆಲ್ಲ ಆನೆಗಳ ಹಿಂಡಿನಿಂದ ತುಂಬಿರುವಂತೆಯೂ, ಸೃಷ್ಟಿಯೆಲ್ಲ ಬರೀ ರಾಜರುಗಳಿಂದಲೇ ತುಂಬಿರುವಂತೆಯೂ, ಬಿಸಿಲೆಲ್ಲ ರತ್ನಕಿರೀಟಗಳಿಂದ ತುಂಬಿರುವಂತೆಯೂ, ಮೂರುಲೋಕವೆಲ್ಲ ಜಯಕಾರದಿಂದ ತುಂಬಿರುವಂತೆಯೂ, ಆಕಾಶವೆಲ್ಲ ಬಾವುಟಗಳಿಂದ ತುಂಬಿರುವಂತೆಯೂ ಆಗಿಬಿಟ್ಟಿತು. ವ|| ಆಗ ಆ ರಾಜಕುಮಾರನ ಮುಂದೆ ಚಲಿಸುತ್ತಿರುವ ಹಲವು ಬಗೆಯ ಸೈನ್ಯದ ಅತ್ಯಕವಾದ ಗದ್ದಲಗಳೂ, ಅಲ್ಲಲ್ಲಿ ನಾದಿಸುವ ಬಗೆಬಗೆಯ ಕಾಳೆಯ ಧ್ವನಿಗಳೂ, ತಮ್ಮ ನೆರಳಿಗೆ ತಾವೆ ಹೆದರಿ ಲಕ್ಷಣವಾಗಿ ನೆಗೆದು ಮುಂದುವರಿಯುವ ಕುದುರೆಗಳ ಕೆನೆಯುವ ಧ್ವನಿಗಳೂ, ಕುಲಪರ್ವತಗಳಂತಿರುವ ಆನೆಗಳ ಘೀಂಕಾರಗಳೂ, ಪ್ರಯಾಣದ ಅಲುಗಾಟದಿಂದ ಘಣಘಣ ಧ್ವನಿಮಾಡುವ ಗಂಟೆಗಳ ಶಬ್ದಗಳೂ, ಜಯಘಂಟೆಗಳ ಧ್ವನಿಯಿಂದ ಮಿಳಿತವಾದ ಢಕ್ಕೆಗಳ ಧ್ವನಿಗಳೂ ಪಾಂಚಜನ್ಯಕ್ಕೆ ಸಮಾನವಾದ ಶಂಖಧ್ವನಿಯಿಂದ ಹೆಚ್ಚಿಸಲ್ಪಟ್ಟ ಪ್ರಯಾಣಕಾಲದಲ್ಲಿ ಬಾರಿಸುವ ತಮ್ಮಟೆಗಳ ಧ್ವನಿಗಳೂ ಒಂದರೊಳಗೊಂದು ಸೇರಿಕೊಂಡು ಇಡೀ ಜಗತ್ತೇ ಶಬ್ದಮಯವಾದಂತಿದ್ದಿತು. ಆಗ, ೧೨೧. ನಾನಾ ಬಣ್ಣದ ಭೂಮಿಯ ಬಗೆಬಗೆಯ ಧೂಳುಗಳ ಗುಂಪು ಒಂದು ಕಡೆ ಮುದಿಮೀನಿನ ದೇಹದಂತೆ ಧೂಮ್ರವರ್ಣವಾಗಿಯೂ, ಒಂದು ಕಡೆ ರಲ್ಲಕವೆಂಬ ಜಿಂಕೆಯ ಕೂದಲಿನಂತೆ ಶ್ಯಾಮವರ್ಣವಾಗಿಯೂ, ಮತ್ತೊಂದು ಕಡೆ ಉಣ್ಣೆಯ ದಾರದಂತೆ ಶುಭ್ರವಾಗಿಯೂ, ಇನ್ನೊಂದು ಕಡೆ ಒಂಟೆಯ ಕೂದಲಿಗೆ ಸಮಾನವಾಗಿಯೂ ಬೇರೊಂದು ಕಡೆ ಮುದಿಕೋತಿಯ ಕೊರಳಕೂದಲಿನಂತೆ ಬಿಳುಪುಮಿಶ್ರವಾದ ಕೆಂಬಣ್ಣವುಳ್ಳದ್ದಾಗಿಯೂ

ವ|| ಮತ್ತಂ

ಕ್ಷೀರೋದಫೇನಮಾಲಾ
ಗೌರಕ್ಷಿತಿರೇಣುಗಣದಿನಿಡಿದಂಬರಮೇಂ
ರಾರಾಜಿಸಿದುದೊ ವಿಕಸಿತ
ಕೈರವವನದಂತಿರೀಕ್ಷಿಪರ್ಗಿರದಾಗಳ್                   ೧೨೨

ವ|| ಇಂತೊಗೆದು ಪರೆದ ಪಾಂಸುಪಟಲಂ ಕರಿಕರಾಗ್ರಶೀಕರಾಸಾರದೊಳಮೊಸರ್ವ ದಾನಧಾರೆಯೊಳಮೊಕ್ಕ ಕುದುರೆಗಳ ಲಾಲಾಜಲ ಜಾಲಕದೊಳಂ ಪರಿಪಡಲೊಡಂ ಕಡಲನಡುವಿಂದೊಗೆತಂದಂತಿರಳವಿಗೞದ ದಳಮನವಲೋಕಿಸಿ ವಿಸ್ಮಯಂಬೆತ್ತು ವೈಶಂಪಾಯನಂ ಚಂದ್ರಾಪೀಡಂಗಿಂತೆಂದಂ

ಆಡಲದೇಂ ನರಪತಿಕುಲ
ಚೂಡಾಮಣಿಯೆನೆ ನೆಗೞ್ತೆವೆರಸಿದ ತಾರಾ
ಪೀಡಂ ನೀಡುಂ ಜೈಸದ
ನಾಡೊಳವೆ ಅದಾವ ನಾಡ ಗೆಲಲಾಟಿಸುವೈ                      ೧೨೩

ಮಣಿಯದ ಮಾನವಾಪರದಾರ್ ತಲೆಯೊಳ್ ತಳೆದಬ್ಜಕುಟ್ಮಲ
ಕ್ಕೆಣೆಯೆನೆ ರಂಜಿಪಂಜಲಿಯ ಸೇವಿಸದಿರ್ಪರಸರ್ಕಳಾರ್ ಶಿಖಾ
ಮಣಿಗಣಮಂ ತ್ವದಂಘ್ರಿಯುಗಪೀಠದೆ ಸಾಣೆಯನಿಕ್ಕದಿರ್ದ ಧಾ
ರಿಣಿಯೆರೆಯರ್ಕಳಾರೊಳರಿಳಾತಳದೊಳ್ ಯುವರಾಜಶೇಖರಾ            ೧೨೪

ಉಸಿರಲ್ಕರಿದೆನೆ ಪತ್ತುಂ
ದೆಸೆಗಳನಾವರಿಸಿ ಮಸಗುವೀ ನೃಪಸೇನಾ
ಪ್ರಸರಂ ತಳ್ತೋಲಗಿಸುಗು
ಮೆಸಕಂ ಮಿಗೆ ನಿನ್ನನವನಿಪಾಲಲಲಾಮಾ            ೧೨೫

ಕುಲಶೈಲಸಂಬಂಧಂ
ಕಳಚದುದುಂ ಸೈನ್ಯಭರದಿನಿಳೆದಳೆದಾ ಕುಂ
ಡಲಿಪನ ವಿಪುಲಫಣಾಮಂ
ಡಲಿ ಬಿರಿಯದುದುಂ ಸಮಂತು ಚಿತ್ರಮಿದಲ್ತೇ            ೧೨೬

ಬಲಭರ ಸಂಕ್ಷೋಭಭಯಂ
ದಳೆದಂಬರಕೊಗೆದ ನದಿಗಳೆನೆ ನಿಖಿಲ ದಿಶಾ
ಕುಲಮಂ ಬಾಸಣಿಸುಗುಮು
ತ್ಪಲಬಾಂಧವಧವಳಮೆನಿಸಿದೀ ಧ್ವಜಪಟಲಂ ೧೨೭

ಶೋಭಿಸುತ್ತಿತ್ತು. ವ|| ಮತ್ತು ೧೨೨. ಕ್ಷೀರಸಮುದ್ರದ ನೊರೆಗಳ ಸಾಲಿನಂತೆ ಶುಭ್ರವಾದ ಧೂಳುಗಳ ಗುಂಪಿನಿಂದ ಪರಿಪೂರ್ಣವಾದ ಆಕಾಶವು ನೋಡುವವರಿಗೆ ಅರಳಿರುವ ಬಿಳಿಯ ತಾವರೆಯ ಗುಂಪಿನಂತೆ ವಿರಾಜಿಸುತ್ತಿತ್ತು. ವ|| ಹೀಗೆ ಮೇಲಕ್ಕೆದ್ದು ಹರಡುತ್ತಿರುವ ಧೂಳುಗಳ ಸಮೂಹವು ಆನೆಗಳ ಸೊಂಡಿಲಿನ ತುದಿಯಿಂದ ಸುರಿಯುವ ತುಂತುರುಗಳ ಧಾರೆಗಳಲ್ಲೂ ಮತ್ತು ಸುರಿಯುತ್ತಿರುವ ಮದೋದಕದ ಪ್ರವಾಹದಲ್ಲೂ ಕುದುರೆಗಳ ಬಾಯಿಂದ ಹೊರಬೀಳುತ್ತಿರುವ ಜೊಲ್ಲುಗಳ ಸಮೂಹದಲ್ಲೂ ಬಿದ್ದು ಅಡಗಲಾಗಿ ಆಗತಾನೆ ಸಮುದ್ರದ ಮಧ್ಯದಿಂದ ಹೊರಕ್ಕೆ ಬಂದಂತೆ ಮುಚ್ಚಿಹೋಗಿರುವ ಸೈನ್ಯವು ಕಣ್ಣಿಗೆ ಬೀಳಲು ಗಣನೆಗೆ ಸಿಲುಕದ ಮಹಾಸೈನ್ಯವನ್ನು ನೋಡಿ ಆಶ್ಚರ್ಯಪಟ್ಟು ವೈಶಂಪಾಯನನು ಚಂದ್ರಾಪೀಡನನ್ನು ಕುರಿತು ಹೀಗೆ ಹೇಳಿದನು. ೧೨೩. “ಯುವರಾಜ, ಭೂಪತಿಗಳ ಸಮೂಹಕ್ಕೆ ತಲೆಮಣಿಯೆನಿಸಿ ಹೆಸರುವಾಸಿಯಾದ ತಾರಾಪೀಡಮಹಾರಾಜರಿಂದ ಜಯಿಸಲ್ಪಡದಿರುವ ದೇಶವು ಯಾವುದಿದೆ? ನಾನು ಯಾವ ದೇಶವನ್ನು ಗೆಲ್ಲಬೇಕಾಗಿದೆ? ಅದನ್ನು ಹೇಳಬೇಕಾದ್ದೇ ಇಲ್ಲ. ೧೨೪. ಯುವರಾಜ, ನಿನಗೆ ತಲೆಭಾಗದ ಅರಸರು ಯಾರಿದ್ದಾರೆ? ತಮ್ಮ ತಲೆಯಲ್ಲಿ ಮುಡಿದುಕೊಂಡಿರುವ ತಾವರೆಯ ಮೊಗ್ಗಿಗೆ ಸಮಾನವೆನಿಸಿ ಶೋಭಿಸುವ ಪ್ರಣಾಮಾಂಜಲಿಯಿಂದ ಕೂಡಿ ನಿನ್ನನ್ನು ಓಲೈಸದ ರಾಜರು ಯಾರಿದ್ದಾರೆ? ೧೨೫. ಎಲೈ ರಾಜಶ್ರೇಷ್ಠನೆ, ಬಣ್ಣಿಸಲು ಅಸಾಧ್ಯವೆನಿಸಿ, ಹತ್ತು ದಿಕ್ಕುಗಳನ್ನೂ ಆವರಿಸಿ ವಿಜೃಂಭಿಸುತ್ತಿರುವ ಈ ರಾಜಸೈನ್ಯವು ಒಟ್ಟುಗೂಡಿ ನಿನ್ನನ್ನು ಶಕ್ತಿಮೀರಿ ಸೇವಿಸುತ್ತಿದೆ. ೧೨೬. ಈ ಮಹಾಸೈನ್ಯದ ಭಾರದಿಂದ ಕುಲಪರ್ವತಗಳ ಕೀಲು ಕಳಚಿ ಬೀಳದಿರುವುದೂ, ಭೂಮಿಯನ್ನು ಹೊತ್ತಿರುವ ಆದಿಶೇಷನ ವಿಶಾಲವಾದ ಹೆಡೆಗಳ ಸಮೂಹವು ಒಡೆದುಹೋಗದಿರುವುದೂ ಬಹಳ ಆಶ್ಚರ್ಯಕರವಾಗಿದೆ. ೧೨೭. ದೊಡ್ಡ ಸೈನ್ಯದಿಂದ ಉಂಟಾಗುವ ಕಲಕಾಟಕ್ಕೆ ಹೆದರಿ ಆಕಾಶಕ್ಕೆ

ವ|| ಇಂತುಸಿರ್ದುದನಾಲಿಸುತ್ತಮೆ ಸಮುಚ್ಛಿ ತತೋರಣಮುಮನೇಕಪಟಮಂಟ ಪೋಪಶೋಭಿತಮುಮಪ್ಪ ನಿವಾಸಭೂಮಿಯಂ ಪೊಕ್ಕರಸುಗಜ್ಜಮಂ ತೀರ್ಚಿ ಪಿತೃವಿಯೋಗಖಿನ್ನ ಮಾನಸಂ ಚಂದ್ರಾಪೀಡನಮಾತ್ಯ ನರಪತಿಗಳ್ವೆರಸು ಬಿನದಂ ಮಿಗೆ ಪಗಲಂ ಕಳೆದಾಯಿರುಳೆಡೆ ವಟ್ಟಿರ್ದ ವೈಶಂಪಾಯನನೊಳಂ ಪತ್ರಲೇಖೆಯೊಳಂ ಜನನೀಜನಕರ

ಸಂಬಂಯಪ್ಪಾಲಾಪಂಗೆಯ್ಯುತ್ತಮಿರ್ದು ಕಿಱದು ನಿದ್ರೆಗೆಯ್ದು ಬೆಳಗಪ್ಪುದುಮೆೞ್ದು

ಧರೆಯಂ ಪೊಳ್ಳಾಗಿಸುತ್ತಂ ನಡುಗಿಸುತಮಗವ್ರಾತಮಂ ತುಳ್ಕಿಸುತ್ತಂ
ತೊರೆಯಂ ದುರ್ಗಂಗಳಂ ಪಾೞ್ಗೊಳಿಸುತಮಟವೀವ್ರಾತಮಂ ಚೂರ್ಣಿಸುತ್ತಂ
ನೆರಪುತ್ತಂ ನಿಮ್ನಮಂ ನಿಮ್ನಮತೆಮರನೊಡರ್ಚುತ್ತಮಾತ್ಮೀಯಸೈನ್ಯೋ
ತ್ಕರದಿಂದಂ ರಾಜವರ್ಗಂ ಬೆರಸಿರೆ ಪೊಱಮಟ್ಟಂ ಮಹೀಭೃನ್ಮಹೇಂದ್ರಂ          ೧೨೮

ದುರುಳರನೊಕ್ಕಲಿಕ್ಕಿ ಮವೊಕ್ಕರ ರಕ್ಷಿಸಿ ದೇಶದೇಶದೋ
ಳರಗುವರರ್ಗೊಡರ್ಚಿ ನೃಪಪಟ್ಟವನಾರ್ಜಿಸಿ ರತ್ನರಾಶಿಯಂ
ನಿರವಿಸಿ ನಾಡನೇರ್ಪ ನಿಜಮುದ್ರೆಯನೇಱಸಿ ಶಾಸನಂಗಳಂ
ಬರಸಿ ಬುಧರ್ಗೆ ಬಿತ್ತಿರಿಸಿದಂ ಜಸಮಂ ಯುವರಾಜಚಂದ್ರಮಂ                 ೧೨೯

ನೆಲನೆಲ್ಲಂ ಬಲವಂದು ಗೆಲ್ದಖಿಲಧಾತ್ರೀನಾಥರಂ ತನ್ನ ದೋ
ರ್ಬಲದಿಂ ಪೂರ್ವಸಮುದ್ರತೀರದೆ ನಿವಾಸಂಗೆಯ್ದರಂ ವ್ಯಾಧರಂ
ಪಲರಂ ಪೊಂದಿಸಿ ತತ್ಸುವರ್ಣಪುರಮಂ ಕೈಲಾಸಶೈಲಾಂತರ
ಸ್ಥಲದೊಳ್ ಶೋಭಿಸುತಿರ್ಪುದಂ ನೃಪಸುತಂ ಕೈಕೊಂಡನುತ್ಸಾಹದಿಂ             ೧೩೦

ಜಲನಿಪರಿವೃತ ಧಾತ್ರೀ
ತಲಮಂ ಬಲವಂದು ಪಿರಿದುವಾಸತ್ತಬಲಂ
ನೀಲವೇೞ್ಕುಮೆಂದು ನೃಪಕುಲ
ಲಲಾಮನಂತಲ್ಲಿ ಪಲವು ದಿವಸಮನಿರ್ದಂ             ೧೩೧

 

ಚಂದ್ರಾಪೀಡನ ಜೈತ್ರಯಾತ್ರೆ ಸಮಾಪ್ತ

ನೆಗೆದುಹೋಗಿರುವ ನದಿಗಳಂತಿರುವ ಈ ಚಂದ್ರನಂತಿರುವ ಬಾವುಟಗಳು ದಿಕ್ಕುಗಳನ್ನೆಲ್ಲಾ ಮುಚ್ಚಿಬಿಟ್ಟಿವೆ” ವ|| ಹೀಗೆ ವೈಶಂಪಾಯನನು ಹೇಳಿದ್ದನ್ನು ಕೇಳುತ್ತಾ ಚಂದ್ರಾಪೀಡನು ಎತ್ತರವಾದ ಹೆಬ್ಬಾಗಿಲುಗಳುಳ್ಳ ಅನೇಕ ಡೇರೆಗಳಿಂದ ಶೋಭಿಸುತ್ತಿರುವ ಪಾಳೆಯನ್ನು ಸೇರಿ ರಾಜಕಾರ್ಯಗಳನ್ನು ಮುಗಿಸಿದನು. ಹಾಗೆಯೇ ತಾಯಿತಂದೆಗಳ ಅಗಲುವಿಕೆಯಿಂದ ಬೇಜಾರುಗೊಂಡಿದ್ದ ಆ ಚಂದ್ರಾಪೀಡನು ಮಂತ್ರಿಗಳಿಂದಲೂ ಸಾಮಂತರಾಜರುಗಳಿಂದಲೂ ಕೂಡಿಕೊಂಡು ಬೇಜಾರು ಕಳೆಯುವಂತೆ ವಿನೋದವಾಗಿದ್ದು ರಾತ್ರಿ ಜೊತೆಯಲ್ಲೇ ಮಲಗಿದ್ದ ವೈಶಂಪಾಯನನೊಂದಿಗೂ ಪತ್ರಲೇಖೆಯೊಂದಿಗೂ ತನ್ನ ತಾಯಿ ತಂದೆಗಳಿಗೆ ಸಂಬಂಸಿದ ಮಾತುಗಳನ್ನಾಡುತ್ತಾ ಇದ್ದು ಸ್ವಲ್ಪ ನಿದ್ರೆ ಮಾಡಿ ಬೆಳಗಾದ ಕೂಡಲೆ ಎದ್ದು, ೧೨೮. ಸೈನ್ಯದ ಭಾರದಿಂದ ಭೂಮಿಯನ್ನು ಶಿಥಿಲಗೊಳಿಸುತ್ತಲೂ, ಬೆಟ್ಟಗಳ ಸಮೂಹವನ್ನು ನಡುಗಿಸುತ್ತಲೂ, ನದಿಗಳನ್ನು ತುಳುಕಾಡಿಸುತ್ತಲೂ, ಶತ್ರುಗಳ ಕೋಟೆಗಳನ್ನು ಹಾಳುಗೆಡವುತ್ತಲೂ, ಕಾಡುಗಳನ್ನು ಇಡಿಪುಡಿ ಮಾಡುತ್ತಲೂ, ಹಳ್ಳವನ್ನು ತಿಟ್ಟುಮಾಡುತ್ತಲೂ, ಬೆಟ್ಟಗಳನ್ನು ಹಳ್ಳಗೆಡುವುತ್ತಲೂ, ತನ್ನ ದೊಡ್ಡ ಸೈನ್ಯದಿಂದಲೂ ರಾಜರ ಸಮೂಹದಿಂದಲೂ ಕೂಡಿಕೊಂಡು ಆ ರಾಜೇಂದ್ರನು ವಿಜಯಯಾತ್ರೆಯನ್ನು ಬೆಳೆಸಿದನು. ೧೨೯. ಚಂದ್ರಾಪೀಡನು ದುಷ್ಟರನ್ನು ಮಟ್ಟಹಾಕಿ ಶರಣುಬಂದವರನ್ನು ಕಾಪಾಡಿ, ದೇಶದೇಶಗಳಲ್ಲಿ ರಾಜಕುಮಾರರಿಗೆ ಪಟ್ಟಗಟ್ಟಿ ರತ್ನರಾಶಿಯನ್ನು ಸಂಗ್ರಹಿಸಿ, ದೇಶಗಳಲ್ಲಿ ಸುವ್ಯವಸ್ಥೆಯನ್ನು ಕಲ್ಪಿಸಿ ತನ್ನ ರಾಜಚಿಹ್ನೆಯನ್ನು ಸ್ಥಾಪಿಸಿ, ವಿದ್ವಾಂಸರಿಗೆ ಶಾಸನಗಳನ್ನು ಬರೆಸಿ ತನ್ನ ಕೀರ್ತಿಯನ್ನು ವಿಸ್ತರಿಸಿದನು. ೧೩೦. ಹೀಗೆ ಭೂಪ್ರದಕ್ಷಿಣೆ ಮಾಡಿ ರಾಜರೆಲ್ಲರನ್ನೂ ತನ್ನ ಬಾಹುಬಲದಿಂದ ಗೆದ್ದು ಪೂರ್ವ ಸಮುದ್ರತೀರದಲ್ಲಿ ವಾಸವಾಗಿದ್ದ ಕಿರಾತರನ್ನು ಗೆದ್ದು ಕೈಲಾಸಪರ್ವತದ ಸಮೀಪದಲ್ಲಿ ಶೋಭಿಸುತ್ತಿದ್ದ ಸುವರ್ಣಪುರವೆಂಬ ಪಟ್ಟಣವನ್ನು ಉತ್ಸಾಹದಿಂದ ಸಾಸಿದನು. ೧೩೧. ರಾಜವಂಶದಲ್ಲಿ ಶ್ರೇಷ್ಠನಾದ ಚಂದ್ರಾಪೀಡನು ಹೀಗೆ ಸಮುದ್ರಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಭೂಮಂಡಲವನ್ನು ಪ್ರದಕ್ಷಿಣೆ ಮಾಡಿ ಬಹಳ ಆಯಾಸಗೊಂಡಿರುವ ತನ್ನ ಸೈನ್ಯಕ್ಕೆ ವಿಶ್ರಾಂತಿಯನ್ನು ಕೊಡಬೇಕೆಂದು ಕೆಲವು ದಿನಗಳು ಅಲ್ಲಿ ಬಿಡಾರ ಮಾಡಿದನು.

ಚಂದ್ರಾಪೀಡನ ಜೈತ್ರಯಾತ್ರೆ

ಮುಗಿಯಿತು.