ಯುವರಾಜಪಟ್ಟಬಂಧೋ
ತ್ಸವಮಂ ಮಾಡಲ್ಕೇವೇೞ್ಕುಮಿನ್ನಿರದೆ ವಿಲಾ
ಸವತೀಸುತಂಗೆನುತ್ತಂ
ದವನೀಶಂ ಸಚಿವನೊಳ್ ಸಮಾಲೋಚಿಸಿದಂ           ೬೧

ವ|| ಅಂತಾ ಮಹಾಮಾತ್ಯನೊಳ್ ಸಮಾಲೋಚಿಸಿ ತತ್ಕಾರ್ಯನಿಶ್ಚಯಂಗೆಯ್ದು ಗೃಹಮಹತ್ತರರಂ ಕರೆದಲ್ಲಿಗೆ ತಕ್ಕ ಮಂಗಳೋಪಕರಣಂ ಗಳಂ ಸಮಕಟ್ಟಿಮೆಂದು ಬೆಸಸಿದಾಗಳವರಂತೆಗೆಯ್ವೆವೆಂದವರ್ಗಳ್ ನೆಗೞುತ್ತಮಿರ್ದರ್ ಇತ್ತ ಯುವರಾಜಾಭಿಷೇಕಂ ಸಮೀಪಮೆನಲ್ಕೆಂದಿನಂದ ದಿನೋಲಗಿಸಲೆಂದು ಬಂದ ವಿನಯರತ್ನಾಕರನನೞ್ಕಱಂ ತೆಗೆದು ತೞೈಸಿ ಕೆಲಕ್ಕೆ ಕರೆದು ಕುಳ್ಳಿರಿಸಿ

ವಿನಯಾರ್ಣವನಂ ಮಂದಾ
ಕಿನಿ ಕೂಡಿದುದೆನಿಸಿ ವಿಶದದಶನದ್ಯುತಿ ತ
ಳ್ತನವರತಂ ಬೆಳಗಲ್ ಮಂ
ತ್ರನಿಧಾನಂ ನುಡಿದನಾ ನರೇಂದ್ರಾತ್ಮಜನಂ             ೬೨

ವ|| ಅದೆಂತೆನೆ ವಿದಿತವೇದಿತವ್ಯನುಮತ ಸಕಲ ಶಾಸ್ತ್ರನುಮೆನಿಪ್ಪ ನಿನಗುಪದೇಶಿಸಲ್ವೇೞ್ವುದೊಂದುಮಿಲ್ಲದೊಡಂ

ಕೇಯ್ದೀವಿಗೆಗಳ ಬೆಳಗಿಂ
ಕಾಯ್ದೆಸೆವ ಸಹಸ್ರಕಿರಣನಿಂ ಭೇದಿಸಲೇ
ಗೆಯ್ದುಂ ಬಾರದು ದಲ್ ತವೆ
ಮಾಯ್ದೀ ಜವ್ವನದೊಳೊಡಲೊಳಿಡಿದಿರ್ದ ತಮಂ       ೬೩

ಸಿರಿಯೆಂಬ ಸೊರ್ಕು ತಿಳಿಯದು
ಪರಿಣಾಮದಿನಂಜನಂಗಳಿಂದಮದೆಂತುಂ
ಪರಿಹರಿಸಲರಿದೆನಿಪ್ಪುದು
ಪರಮೈಶ್ವರ್ಯಪ್ರಭೂತ ತಿಮಿರಾಂಧತ್ವಂ             ೬೪

ಶಿಶಿರೋಪಚಾರದಿಂದಂ
ವಶಮಲ್ಲದು ತೀವ್ರಮಪ್ಪ ದಾಹಜ್ವರಮಂ
ಕುಶಸಾಧ್ಯಮಲ್ಲದಿಂದ್ರಿಯ
ದಿಶಾಗಜಪ್ರಕರಮೆಂದುಮವಿನಯ ನಿಯತಂ             ೬೫

೬೧. ಹೀಗಿರಲು ಚಕ್ರವರ್ತಿಯು ತನ್ನ ಪಟ್ಟದ ರಾಣಿಯ ಪುತ್ರನಾದ ಇವನಿಗೆ ಇನ್ನು ವಿಳಂಬಮಾಡದೆ ಯುವರಾಜಪಟ್ಟಾಭಿಷೇಕವನ್ನು ಮಾಡಿಬಿಡಬೇಕೆಂದು ಮಂತ್ರಿಯೊಂದಿಗೆ ಆಲೋಚಿಸಿದನು. ವ|| ಹೀಗೆ ಮುಖ್ಯಮಂತ್ರಿಯೊಂದಿಗೆ ಮಂತ್ರಾಲೋಚನೆಯನ್ನು ಮಾಡಿ ಆ ಕಾರ್ಯವನ್ನು ನಿಶ್ಚಯಿಸಿ, ಮನೆ ವಾರ್ತೆಗಾರರನ್ನು ಕರೆದು ಪಟ್ಟಾಭಿಷೇಕಕ್ಕೆ ಬೇಕಾದ ಮಂಗಳಪದಾರ್ಥಗಳನ್ನೆಲ್ಲಾ ಅಣಿಮಾಡಬೇಕೆಂದು ಆಜ್ಞಾಪಿಸಿದನು. ಅವರು “ಅಪ್ಪಣೆ” ಎಂದು ಬಿನ್ನವಿಸಿ ಹಾಗೆಯೆ ಏರ್ಪಾಡು ಮಾಡುತ್ತಿದ್ದರು. ಹೀಗೆ ಚಂದ್ರಾಪೀಡನ ಯುವರಾಜ ಪಟ್ಟಾಭಿಷೇಕದ ಶುಭದಿವಸವು ಸಮೀಪಿಸುತ್ತಿತ್ತು. ಒಂದು ದಿನ ಎಂದಿನಂತೆ ಭೇಟಿಗಾಗಿ ಬಂದ ವಿನಯಗುಣಕ್ಕೆ ಸಮುದ್ರಪ್ರಾಯನಾದ ಚಂದ್ರಾಪೀಡನನ್ನು ಮಂತ್ರಿಯಾದ ಶುಕನಾಸನು ಪ್ರೀತಿಯಿಂದ ಬಾಚಿ ತಬ್ಬಿಕೊಂಡು ಹತ್ತಿರಕ್ಕೆ ಕರೆದು ಕುಳ್ಳಿರಿಸಿ, ೬೨. ವಿನಯಗುಣಕ್ಕೆ ಸಮುದ್ರವಾದ ಈ ರಾಜಕುಮಾರನನ್ನು ಗಂಗಾನದಿಯು ಸಂಗಮಿಸುತ್ತಿದೆಯೋ ಎಂಬಂತೆ ಶುಭ್ರವಾದ ಹಲ್ಲುಗಳ ಕಾಂತಿಯು ಹೊರಹೊಮ್ಮಿ ಒಂದೇಸಮನೆ ಪ್ರಕಾಶಿಸುತ್ತಿರಲು ರಾಜನೀತಿಜ್ಞನಾದ ಮುಖ್ಯಮಂತ್ರಿಯು ರಾಜಪುತ್ರನನ್ನು ಕುರಿತು ಹೀಗೆ ಹೇಳಲಾರಂಭಿಸಿದನು. ವ|| “ಅಪ್ಪ! ಚಂದ್ರಾಪೀಡ! ನೀನು ತಿಳಿದುಕೊಳ್ಳಬೇಕಾದುದನ್ನೆಲ್ಲ ಚೆನ್ನಾಗಿ ತಿಳಿದುಕೊಂಡಿರುವೆ. ನಿನಗೆ ಉಪದೇಶಿಸಬೇಕಾದುದೇನೂ ಇಲ್ಲ. ಆದರೂ ೬೩. ಯiವನ ಕಾಲದಲ್ಲಿ ಒಂದು ಬಗೆಯ ಕೆಟ್ಟ ಕತ್ತಲೆಯು ಶರೀರದೊಳಗೆಲ್ಲ ತುಂಬಿಕೊಳ್ಳುತ್ತದೆ. ಅದನ್ನು ಪರಿಹರಿಸಲು ಕೈದೀವಿಗೆಗಳ ಬೆಳಕಿನಿಂದಾಗಲಿ ಉರಿಯುತ್ತಿರುವ ಸೂರ್ಯನಿಂದಾಗಲಿ ಏನು ಮಾಡಿದರೂ ಖಂಡಿತವಾಗಿಯೂ ಆಗುವುದಿಲ್ಲ! ಟಿ. ಇಲ್ಲಿ ಕತ್ತಲೆಯೆಂದರೆ ಅಜ್ಞಾನ. ೬೪. ಐಶ್ವರ್ಯಮದವು ಮನುಷ್ಯನ ಕೊನೆಯ ಗಳಿಗೆಯವರೆಗೂ ಇಳಿಯುವುದಿಲ್ಲ ಮತ್ತು ಸಿರಿಯಿಂದಾಗಿ ಕಣ್ಣಿಗೆ ಬರುವ ಈ ಹೊಸ ಪರೆಯ ಕತ್ತಲೆಯು ಯಾವ ಅಂಜನಚಿಕಿತ್ಸೆಯಿಂದಲೂ ನಿವಾರಣೆಯಾಗುವುದಿಲ್ಲ. ೬೫. ಸಿರಿತನದಿಂದ ಬರುವ ಭಯಂಕರವಾದ ದರ್ಪವೆಂಬ ದಾಹಜ್ವರವು ಯಾವ ಶೈತ್ಯೋಪಚಾರದಿಂದಲೂ ಹತೋಟಿಗೆ

ವಿಪಮವಿಷಂಗಳ್ಗಂ ಪ್ರತಿ
ವಿಷಮೆನಿಸುವ ಮಂತ್ರನಿಚಯದೊಳಮಾರ್ಗೆಂದುಂ
ವಿಷಯಮೆ ಮಾಣಿಸಲಿಂತೀ
ವಿಷಯ ವಿಷಾಸ್ವಾದಮೋಹಮಂ ನಿರ್ವಿಷಯಂ          ೬೬

ಅರಸಾಗಲೊಡಂ ಮೆಯ್ಮ
ದು ರಾಜ್ಯಸುಖಸನ್ನಿಪಾತನಿದ್ರೆಯ ಕೆಯ್ಕೊಂ
ಡಿರುಳುಂ ಪಗಲುಂ ಜಾಡ್ಯದೆ
ಮರವಟ್ಟೆಚ್ಚಱುವರಲ್ಲವೆಂತುಂ ಭೂಪರ್                   ೬೭

ವ|| ಅದಲ್ಲದೆಯುಂ

ಪಿತೃಗಳುಪಾರ್ಜಿಸಿಟ್ಟ ಸಿರಿ ಜವ್ವನದೇೞ್ಗೆ ಪೆಱಂಗಿದಿಲ್ಲೆನಿ
ಪ್ಪತಿಶಯರೂಪು ಶಕ್ತಿಗಳಿಲ್ಲವಲ್ಲವೆ ಹಾನಿಯ ಬಳ್ಳಿವಳ್ಳಿ ನಿ
ಶ್ಚಿತಮಿವನೊಂದನೊಂದನೆ ವಿಚಾರಿಪೊಡುಳ್ಳ ವಿನೀತಿಗೆಲ್ಲಮಾ
ಯತನಮೆನಿಪ್ಪುದೋರ್ವನೊಳಿವೆಲ್ಲಮಿರಲ್ ಬೞಕೇನನೆಂಬುದೋ         ೬೮

ಇರದೊಯ್ದುದು ತನ್ನಿಚ್ಛೆಗೆ
ವರಯವ್ವನದಂದು ಪುರುಷನಂ ಪ್ರಕೃತಿ ರಜಂ
ಬೊರೆದು ತಿರುಪುತ್ತೆ ಸುಟ್ಟು
ತೆರಳ್ಚಿ ತಱಗೆಲೆಯನುಯ್ವ ತೆಱದಿಂದೆತ್ತಂ                      ೬೯

ವಿಷಯಮೆನಿಪುಪ್ಪುನೀರುಂ
ಕಷಾಯಿತಾಸ್ಯಂಗೆ ಮಧುರತರಮಪ್ಪಂತಾ
ವಿಷಯಂಗಳೆ ನವಯೌವನ
ಕಷಾಯಿತಾತ್ಮನ ಮನಕೃತಿಮಧುರಂಗಳ್               ೭೦

ಮಿಗೆ ತೃಷ್ಣೆ ಪುಟ್ಟಲಿಂದ್ರಿಯ
ಮೃಗಂಗಳಂ ಬೋಗಮೆಂಬ ಮೃಗತೃಷ್ಣಿಕೆ ಮೆ
ಯ್ದೆಗೆಯಲ್ಕೆ ಬಾರದಂತಿರೆ
ತೆಗೆದೊಡಗೊಂಡೊಯ್ವುದೆಂಬುದೊಂದಚ್ಚರಿಯೇ        ೭೧

ಬರುವುದಿಲ್ಲ. ಅಲ್ಲದೆ ಸ್ವೇಚ್ಛಾಚಾರದಿಂದ ಕೂಡಿರುವ ಇಂದ್ರಿಯಗಳೆಂಬ ದಿಗ್ಗಜಗಳು ಎಷ್ಟು ಪ್ರಯಾಸಪಟ್ಟರೂ ಯಾವ ಅಂಕುಶಕ್ಕೂ ಜಗ್ಗತಕ್ಕವುಗಳಲ್ಲ. ೬೬. ಬಹಳ ಭಯಂಕರವಾದ ಕಾಲಕೂಟವೇ ಮೊದಲಾದ ವಿಷಗಳನ್ನು ಮೀರಿಸಿರುವ ಈ ಸಂಸಾರಸುಖವೆಂಬ ವಿಷವನ್ನು ಪಾನ ಮಾಡುವುದರಿಂದ ಉಂಟಾಗುವ ಮೈಮರವೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಯಾರಿಗೂ ಯಾವಾಗಲೂ ಸಾಧ್ಯವೇ ಇಲ್ಲ. ೬೭. ರಾಜರಿಗೆ ಅರಸುತನ ಬಂದುಬಿಟ್ಟರೆ ಸಾಕು, ಶರೀರದ ಮೇಲೆ ಪ್ರeಯೇ ತಪ್ಪಿಹೋಗುತ್ತದೆ. ರಾಜ್ಯ ಸುಖಾನುಭವವೆಂಬ ಗಾಢನಿದ್ರೆಯನ್ನು ಹೊಂದಿ ಹಗಲೂ ರಾತ್ರಿಯೂ ಜಡತನದಿಂದ ನಿಶ್ಚೇಷ್ಟಿತರಾಗಿ ಎಚ್ಚರಗೊಳ್ಳುವುದೇ ಇಲ್ಲ. ವ|| ಅದಲ್ಲದೆ ೬೮. ಪ್ರಿತ್ರಾರ್ಜಿತವಾಗಿ ಬಂದ ಐಶ್ವರ್ಯ, ಏರುತ್ತಿರುವ ಯವ್ವನ ಬೇರೆ ಯಾರಿಗೂ ಇಲ್ಲವೆನಿಸಿರುವ ಅತಿಶಯವಾದ ಸೌಂದರ್ಯ ಮತ್ತು ಪರಾಕ್ರಮ ಇವುಗಳು ಕೆಡಕಿನ ಪರಂಪರೆ, ವಿಚಾರಮಾಡಿ ನೋಡಿದರೆ ಇವುಗಳಲ್ಲಿ ಒಂದೊಂದೂ ದುರಭ್ಯಾಸ ಗಳಿಗೆಲ್ಲಕ್ಕೂ ಮನೆಯಂತಿವೆ. ಹೀಗಿರಲು ಒಬ್ಬನಲ್ಲೇ ಇವೆಲ್ಲವೂ ಇದ್ದುಬಿಟ್ಟರೆ ಆಮೇಲೆ ಹೇಳಬೇಕಾದ್ದೇ ಇಲ್ಲ. ೬೯. ಸುಂಟರಗಾಳಿಯು ಧೂಳಿಯೆಬ್ಬಿಸಿ ತರಗೆಲೆಯನ್ನು ತಿರುಗಿಸಿ ಎಲ್ಲಿಗೋ ಕೊಂಡೊಯ್ಯುವಂತೆ ಹೊಸಯವ್ವನದಲ್ಲಿ ಸ್ವಭಾವವು ಮನುಷ್ಯನನ್ನು ರಜೋಗುಣದಿಂದ ಉಂಟಾಗುವ ಭ್ರಮೆಯನ್ನು ಹೆಚ್ಚಿಸಿ, ತನಗೆ ತೋರಿದ ಕಡೆಗೆ ತೂರಿಕೊಂಡು ಹೋಗುತ್ತದೆ. ಟಿ. ರಜ=ಧೂಳು; ರಜೋಗುಣ.

೭೦. ನೆಲ್ಲಿಕಾಯಿ ಮೊದಲಾದುವನ್ನು ತಿಂದು ಒಗರಾಗಿರುವ ಬಾಯುಳ್ಳವನಿಗೆ ರುಚಿಯಿಲ್ಲದ ಉಪ್ಪುನೀರೂ ಬಹಳ ಸಿಹಿಯಾಗಿ ಕಾಣುವುದಿಲ್ಲವೆ? ಅದೇರೀತಿ ಹೊಸಪ್ರಾಯದಿಂದ ವಿಕಾರಗೊಂಡ ಮನಸ್ಸುಳ್ಳವನಿಗೆ ಹುರುಳಿಲ್ಲದೆ ಆ ವಸ್ತುಗಳೇ ಬಹಳ ಸವಿಯಾಗಿ ಕಾಣುತ್ತೇವೆ. ೭೧. ನೀರಡಿಕೆಯುಂಟಾದರೆ ಜಿಂಕೆಗಳನ್ನು ಬಿಸಿಲ್ಗುದುರೆಯು ಬಹಳ ದೂರ ಒಯ್ಯುವಂತೆ ಅತ್ಯಾಸಕ್ತಿಯುಂಟಾದರೆ ಇಂದ್ರಿಯಗಳನ್ನು (ಸಂಗೀತ ಮೊದಲಾದ) ವಿಷಯಗಳ ಅಭಿಲಾಷೆಯು ತಪ್ಪಿಸಿಕೊಳ್ಳುವುದಕ್ಕೆ ಆಗದಂತೆ ಸೆಳೆದುಕೊಂಡುಹೋಗುತ್ತದೆ.

ಅಱವುಗೆಡಿಸುತ್ತುಮೆಲ್ಲಾ
ತೆಱದಿಂ ದೆಸೆಗೆಡಿಸದಿರದು ವಿಷಯಸಮೂಹ
ಕ್ಕೆಱಗಿ ಬಿಡದಂತೆ ಪತ್ತುವ
ಮಱುಕಂ ದಿಙ್ಮೋಹದಂದದಿಂ ಮಾನಿಸರಂ                   ೭೨

ವ|| ಅದಱಂ ಸದುಪದೇಶಂಗಳ್ಗೆ ನಿನ್ನೊಂದಿಗರೆ ಭಾಜನಮಪ್ಪರದಂತೆನೆ

ತೊಳಗುವ ಚಂದ್ರಾಂಶುಗಳಾ
ಪಳುಕಿನ ಶಿಲೆಯೊಳಗೆ ಪೊಳೆದು ಪುಗುವಂತಿರೆ ನಿ
ರ್ಮಳಹೃದಯದೊಳಗೆ ಪುಗುಗುಂ
ವಿಳಸಚ್ಛಿಷ್ಟೋಪದೇಶಗುಣನಿವಹಂಗಳ್                        ೭೩

ವ|| ಅದಲ್ಲದೆಯುಂ

ಗುರುಗಳ ವಚನಂ ನಿರ್ಮಳ
ತರಮಾಗಿಯುಮಚ್ಛಸಲಿಲದಂತಿರೆ ಭವ್ಯೇ
ತರನಪ್ಪನ ಕಿವಿಯೊಳ್ ಪುಗೆ
ಪಿರಿದೆನಿಸುವ ಕರ್ಣಶೂಲೆಯಂ ಪುಟ್ಟಿಸುಗುಂ                      ೭೪

ವಿನಯಮನಾಗಿಸಲ್ ನೆಯದನ್ವಯಮುಂ ಶ್ರುತಮುಂ ಸ್ವಭಾವದು
ರ್ಜನನೆನಿಪಂಗದಂತುಟೆ ವಲಂ ಶಿಶಿರೈಕನಿಧಾನಮಪ್ಪ ಚಂ
ದನದೊಳೆ ಪುಟ್ಟಿ ಕಿಚ್ಚು ಸುಡದಿರ್ಪುದೆ ತತ್ಪ್ರಶಮೈಕಕಾರಣಂ
ವನನಿಯಾದೊಡೇನುರಿಯದಿರ್ಪುದೆ ದಳ್ಳಿಸಿ ಬಾಡಬಾನಲಂ      ೭೫

ಜನಪತಿಗಳ್ ನುಡಿಯಲ್ ಮಾ
ರ್ದನಿಯಂತನುವದಿಸಿ ಬರ್ದುಕಲೊಲ್ಲದೆ ಮಾರ್ಕೊಂ
ಡನುಚಿತಮಿದೆಂದು ಮಾಣಿಪ
ಮನುಜೋತ್ತಮರೆಲ್ಲಿಯಾನುಮಿರ್ಪರೆ ಜಗದೊಳ್                    ೭೬

ವ|| ಎತ್ತಲಾನುಮುಪದೇಶಿಸುವರುಳ್ಳೊಡೆ

ಅಲರಂಬಿಂ ಬಿರಿದೆರ್ದೆಯೊಳ್
ನಿನಲಲಱಗುಮೆ ಸದ್ಗುರೂಪದೇಶಾಮೃತಮೇಂ
ಸಲೆ ತೀವುತಿರ್ದೊಡಂ ಪೇೞು
ನಿಲಲಱಗುಮೆ ಭಿನ್ನಭಾಂಡದೊಳ್ ನೀರಿನಿತುಂ                         ೭೭

ಇದೇನೂ ಆಶ್ಚರ್ಯವಲ್ಲ. ೭೨. ಕಾಮಿನಿ, ಕಾಂಚನ ಮೊದಲಾದ ವಿಷಯಗಳ ಸಮೂಹಗಳಿಗೆ ಬಿದ್ದು ಬಿಡದಂತೆ ಅಂಟಿಕೊಳ್ಳುವ ಮೋಹವು ಮನುಷ್ಯರನ್ನು ದಿಗ್ಭ ಮೆಯಂತೆ ತಿಳಿವಳಿಕೆಯನ್ನು ಹಾಳುಮಾಡಿ ಎಲ್ಲಾ ಬಗೆಯಿಂದಲೂ ದಿಕ್ಕೆಡಿಸದೆ ಇರುವುದಿಲ್ಲ. ವ|| ಆದ್ದರಿಂದ ಸದುಪದೇಶಕ್ಕೆ ನಿನ್ನಂತಹವರೇ ಅರ್ಹರು. ಹೇಗೆಂದರೆ ೭೩. ಪ್ರಕಾಶಿಸುವ ಚಂದ್ರಕಿರಣಗಳ ಸಟಿಕಶಿಲೆಯಲ್ಲಿ ಪ್ರತಿಬಿಂಬಿಸಿ ಹೊಳೆಯುವಂತೆ ಉತ್ತಮವಾದ ಗುರುಹಿರಿಯರ ಉಪದೇಶದ ಗುಣಗಳು ಪರಿಶುದ್ಧವಾದ ಮನಸ್ಸಿಗೆ ಬಹಳ ಚೆನ್ನಾಗಿ ಹಿಡಿಯುತ್ತವೆ. ವ|| ಅದಲ್ಲದೆ, ೭೪. ನೀರು ಎಷ್ಟು ಸ್ವಚ್ಚವಾಗಿದ್ದರೂ ಕಿವಿಯೊಳಕ್ಕೆ ಸೇರಿದರೆ ನೋವನ್ನುಂಟುಮಾಡುವಂತೆ ಗುರುಗಳ ಉಪದೇಶವು ಯಾವ ದೋಷವೂ ಇಲ್ಲದಿದ್ದರೂ ದುರ್ಜನರ ಕಿವಿಗೆ ಬಿದ್ದರೆ ಮಾತ್ರ ಕಿವಿನೋವನ್ನೇ ಉಂಟುಮಾಡುತ್ತದೆ. ಟಿ. ನೀಚರಿಗೆ ಗುರೂಪದೇಶವು ಹಿಡಿಸುವುದಿಲ್ಲ ಎಂದು ಅಭಿಪ್ರಾಯ. ೭೫. ಕೆಟ್ಟ ಸ್ವಭಾವವುಳ್ಳವನಿಗೆ ಅವನ ಕುಲವಾಗಲಿ ವಿದ್ಯೆಯಾಗಲಿ ವಿನಯವನ್ನುಂಟುಮಾಡಲು ಕಾರಣವಾಗುವುದಿಲ್ಲ. ಇದು ಖಂಡಿತ. ಹೇಗೆಂದರೆ ಬಹಳ ತಂಪಿಗೆ ಆಧಾರಭೂತವಾದ ಚಂದನಮರದಲ್ಲಿ ಹುಟ್ಟಿದ ಮಾತ್ರಕ್ಕೆ ಬೆಂಕಿಯು ಸುಡದೆ ಇರುತ್ತದೆಯೆ? ಹಾಗೆಯೇ ಬಡಬಾಗ್ನಿಯು ಬೆಂಕಿಯನ್ನು ಆರಿಸಲು ಮುಖ್ಯ ಸಾಧನವಾದ ನೀರಿಗೆ ನೆಲೆಯೆನಿಸಿದ ಸಮುದ್ರದಲ್ಲಿ ಹುಟ್ಟಿದ್ದರೂ ಅಲ್ಲೆ ಧಗಧಗನೆ ಉರಿಯುತ್ತಲೇ ಇರುವುದಿಲ್ಲವೆ? ೭೬. ರಾಜರುಗಳು ಏನನ್ನಾದರೂ ಹೇಳಿದರೆ ಪ್ರತಿಧ್ವನಿಯಂತೆ ಅದನ್ನೇ ಅನುವಾದಮಾಡಿ, ಅಂದರೆ ‘ಅದೇ ಸರಿ, ಮಹಾಸ್ವಾಮಿ’ ಎಂದು ಹೇಳುತ್ತಾ ಹೊಟ್ಟೆ ಹೊರೆಯುವುದನ್ನು ಬಿಟ್ಟು, ಎದುರಿಸಿ ಇದು ಸರಿಯಲ್ಲ ಎಂದು ಪ್ರತಿಭಟಿಸಿ (ಕೆಟ್ಟದಾರಿಯಿಂದ) ತಪ್ಪಿಸುವ ರನಾದ ನರಶ್ರೇಷ್ಠನು ಈ ಲೋಕದಲ್ಲಿ ಎಲ್ಲಿಯಾದರೂ ಇದ್ದಾನೆಯೆ? ವ|| ಎಲ್ಲಾದರೂ ಉಪದೇಶ ಮಾಡುವವರಿದ್ದರೂ, ೭೭. ಮನ್ಮಥನ ಹೂವಿನ ಬಾಣದಿಂದ ಸೀಳಿಹೋಗಿರುವ