ಮೊದು ಹಿತೋಪದೇಶಮನೆ ಕೇಳಲೊಡಂ ಸಿಡಿಲೇೞ್ಗೆಯೆರ್ದು ಮೆ
ಯ್ಮಱುಗಿ ನಯಂ ಕಿಡಲ್ಗಜನಿಮೀಲನದಿಂದವರಿಸುತ್ತೆ ತ
ಮ್ಮಱತಮಿದೇತಕೆಂದು ಗುರುಸಂಕುಳಮಂ ಮದಿಂತು ಮಮ್ಮಲಂ
ಮಱುಗಿಪರಲ್ತೆ ತಮ್ಮ ನಿಜಗರ್ವದೆ ಮಾಯ್ದ ನೃಪರ್ ಧರಿತ್ರಿಯೊಳ್       ೭೮

ಸ್ಥಿರೆಯಲ್ಲದವಳನತಿನಿ
ಷ್ಠುರೆಯಂ ಭಟಖಡ್ಗಮಂಡಲೋತ್ಪಲವನದೊಳ್
ತಿರುಪಾಱಡಿಯಂ ನಚ್ಚಿನ
ಸಿರಿಯಂ ಭಾವಿಪುದು ಮುನ್ನಮೇ ಶುಭಕಾಮಂ                         ೭೯

ವ|| ಅದೆಂತೆಂದೊಡೆ

ಸುರೆಯಿಂ ಸೊರ್ಕುಂ ಸುರೋರ್ವೀರುಹಕಿಸಲಯದಿಂ ರಾಗಮಂ ಕೌಸ್ತುಭಪ್ರ
ಸ್ತರದಿಂ ನೈಷ್ಠುರ್ಯಮಂ ದುರ್ವಿಷಮವಿಷದಿನುನ್ಮೋಹಮಂ ಮುಗ್ಧದೋಷಾ
ಕರನಿಂ ವಕ್ರತ್ವಮಂ ದುಶ್ಚ ವನನ ಹಯದಿಂ ವೇಗಮಂ ತಾಳ್ದಿ ನೀರಾ
ಕರದಿಂದೇೞ್ತಂದಳಂತಾ ಸಿರಿ ಸಹಭವರಂ ಪೋಲ್ವುದೇಂ ಚೋದ್ಯಮಾಯ್ತೇ         ೮೦

ವಾರಿಯೊಳ್ ಮಂದರಗಿರಿ
ಭೋರೆನೆ ತಿರುಗುತ್ತಿರಲ್ಕೆ ಪುಟ್ಟಿದ ಬಹುಸಂ
ಸ್ಕಾರಮದಿನ್ನುಂ ಬಿಡದವೊ
ಲೋರಂತಿರೆ ಕೂಡೆ ಲಕ್ಷಿ  ತಿಱಱನೆ ತಿರುಪಳ್                            ೮೧

ಶ್ರುತಮಂ ಕೆಯ್ಕೊಳ್ಳಳಾಚಾರಮನವಧರಿಸಳ್ ಸತ್ಯಮಂ ಬಾರ್ತೆಗೆಯ್ಯಳ್
ಮತಿಯಂ ಬಿಪ್ಪಂಡಿಪಳ್ ಲಕ್ಷಣಮನೆಣಿಸಳೌದಾರ್ಯಮಂ ಚಿಂತಿಸಳ್ ಸಂ
ಗತಿಯಂ ವಿಶ್ವಾಸಿಸಳ್ ಸುಂದರತರವಪುವಂ ನೋಡಳೆಂತುಂ ವಿಶೇಷ
ಜ್ಞತೆಯಂ ತಾನೇತಕೆಂಬಳ್ ಸಿರಿಯನಱವುತಂ ಬಣ್ಣಿಪಂ ಗಾಂಪನಲ್ತೇ            ೮೨

ಎದೆಯಲ್ಲಿ ಸದ್ಗುರುಗಳ ಉಪದೇಶಾಮೃತವು ಉಳಿಯಲು ಸಾಧ್ಯವಾಗುತ್ತದೆಯೇ? ಒಡೆದ ಮಡಕೆಯಲ್ಲಿ ಎಷ್ಟು ತುಂಬುತ್ತಿದ್ದರೂ ನೀರು ಏನಾದರೂ ಸ್ವಲ್ಪ ನಿಲ್ಲಲು ಸಾಧ್ಯವೆ? ವ|| ಆದ್ದರಿಂದ ಪ್ರಭುಗಳು ಏನುಮಾಡಿದರೂ ಕೇಳುವವರೇ ಇಲ್ಲ. ೭೮. ಈ ಭೂಮಿಯಲ್ಲಿ ನೀಚರಾದ ರಾಜರು ಗುರುಹಿರಿಯರು ಒಂದು ವೇಳೆ ಹಿತೋಪದೇಶವನ್ನು ಮಾಡಿದರೆ ಅದನ್ನು ಕೇಳಿದ ಕೂಡಲೆ ಸಿಡಿಲಂತೆ ಆರ್ಭಟಿಸಿ ಎದ್ದು ಸಿಡಿಮಿಡಿಗೊಳ್ಳುತ್ತಾರೆ; ಇಲ್ಲವೆ ಅವಿನಯವನ್ನು ತೋರ್ಪಡಿಸಿ ದುರಹಂಕಾರದಿಂದ ಆನೆಯಂತೆ ಕಣ್ಣುಮುಚ್ಚಿಕೊಂಡು ತಿರಸ್ಕರಿಸಿ “ನಾನೇಕೆ ತಿಳುವಳಿಕೆಯಿಲ್ಲದೆ ಇವನಿಗೆ ಬುದ್ಧಿ ಹೇಳಲು ಹೊರಟೆ?” ಎಂದು ಅವರು ಮನಸ್ಸಿನಲ್ಲಿ ಬಹಳ ಮಟ್ಟಿಗೆ ನೊಂದುಕೊಳ್ಳುವಂತೆ ಮಾಡುತ್ತಾರೆ. ೭೯. ತನ್ನ ಶ್ರೇಯಸ್ಸನ್ನು ಬಯಸತಕ್ಕವನು ಚಂಚಲಳಾದ, ಬಹಳ ಕಠಿನಸ್ವಭಾವದವಳಾದ ಹಾಗೂ ವೀರಯೋಧರ ಕತ್ತಿಗಳ ಸಮೂಹವೆಂಬ ನೈದಿಲೆಯ ಗುಂಪಿನಲ್ಲಿ ಅತ್ತ ಇತ್ತ ಅಲೆಮಾರಿ ದುಂಬಿಯಂತಿರುವ, ವಿಶ್ವಾಸಪಾತ್ರಳೆಂದು ತಾನು ನಂಬಿಕೊಂಡಿರುವ ಲಕ್ಷಿ ಯ ವಿಷಯವನ್ನು ಮೊದಲು ಪರ್ಯಾಲೋಚಿಸಬೇಕು. ವ|| ಅದು ಹೇಗೆಂದರೆ, ೮೦. ಈ ಲಕ್ಷಿ ಯು ಸಮುದ್ರದಲ್ಲಿ ಹುಟ್ಟಿದವಳು. ಅಲ್ಲಿ ಅವಳು ಇದ್ದಾಗ ತನ್ನ ಒಡಹುಟ್ಟಿದವರಲ್ಲಿ ಒಬ್ಬೊಬ್ಬರಿಂದ ಒಂದೊಂದು ಗುಣವನ್ನು ಕಲಿತುಕೊಂಡು ಮೇಲಕ್ಕೆ ಬಂದಿದ್ದಾಳೆ! ಹೇಗೆಂದರೆ ಮದ್ಯದಿಂದ ಸೊಕ್ಕನ್ನೂ ಕಲ್ಪವೃಕ್ಷದ ಚಿಗುರಿನಿಂದ ರಾಗವನ್ನೂ (ಕೆಂಪು, ಅನುರಾಗ) ಕೌಸ್ತುಭಮಣಿಯಿಂದ ನೈಷ್ಠುರ್ಯವನ್ನೂ (ಕಠಿನತ್ವ, ದಯಾಹೀನತೆ) ಬಹಳ ತೀಕ್ಷ ವಾದ ವಿಷದಿಂದ ಉನ್ಮೋಹವನ್ನೂ (ಮೂರ್ಛೆ, ಇತರರನ್ನು ಮರುಳುಮಾಡುವಿಕೆ) ಸುಂದರನಾದ ಚಂದ್ರನಿಂದ ವಕ್ರತ್ವವನ್ನೂ (ಡೊಂಕು, ಕುಟಿಲತನ) ಉಚ್ಛೆ ಶ್ರವಸ್ಸೆಂಬ ಕುದುರೆಯಿಂದ ವೇಗವನ್ನೂ (ಜೋರು, ಚಂಚಲತ್ವ) ತೆಗೆದುಕೊಂಡು ಮೇಲಕ್ಕೆ ಎದ್ದಿದ್ದಾಳೆ. ಲೋಕದಲ್ಲಿ ಸಹೋದರರ ಹೋಲಿಕೆ ಇರುವುದು ಆಶ್ಚರ್ಯವೇನೂ ಅಲ್ಲ. ೮೧. ಸಮುದ್ರದಲ್ಲಿ ಮಂದರ ಪರ್ವತವು ಭೋರೆಂದು ತಿರುಗುವಾಗ ಉಂಟಾದ ಒಂದು ದೊಡ್ಡ ಸಂಸ್ಕಾರವನ್ನು ಇನ್ನೂ ಬಿಟ್ಟಿಲ್ಲವೋ ಎಂಬಂತೆ ಒಂದೇಸಮನಾಗಿ ತಿರುಗುತ್ತಲೇ ಇರುತ್ತಾಳೆ! ೮೨. ಈ ಲಕ್ಷಿ ಯು ತಾನು ಒಲಿಯುವಾಗ ಶಾಸ್ತ್ರಜ್ಞಾನವನ್ನು ಅಂಗೀಕರಿಸುವುದಿಲ್ಲ. ಆಚಾರವನ್ನು ಮನಸ್ಸಿಗೆ ತಂದುಕೊಳ್ಳುವುದಿಲ್ಲ. ಸತ್ಯವನ್ನು

ವ|| ಅಂತುಮಲ್ಲದೆಯುಂ

ಅಕ್ಕರ|| ರನಪ್ಪನುಮಂ ಹಾಸ್ಯಂ ಮಾೞ್ಪಳ್ ಮರುಳೆಂಬಿನಂ ಪಾವೆಂದು ದಾಂಟುವಳ ಭಿಜಾತನಂ
ವೀರನರಿಗುಮೆಂದೊಲ್ಲಳುದಾರನಪ್ಪನಂ ಗೞಪನೆಂದಿೞಪಳ್ ಪುರುಡಿಂ
ಭಾರತೀಶನಂ ಸೋಂಕಳ್ ದಾನಿಯಂ ಮುಟ್ಟಳಸ್ಪೃಶ್ಯನೆಂದು ವಿನೀತನಂ
ದೂರದಿಂ ನೋಡಿ ಪಾತಕನಿವನೆಂದು ತಿಳಿದು ಪೋಗಳಿಂದಿರೆ ನಂಬದಿರ್            ೮೩
ವ|| ಮತ್ತಂ ಪಯೋರಾಶಿಯೊಳ್ ಪುಟ್ಟಿಯುಂ ತೃಷ್ಣಾಕರೆಯುಂ ಅಮರ್ದಿನೊಡವುಟ್ಟಿಯುಂ ಕಟುವಿಪಾಕೆಯುಂ ಪುರುಷೋತ್ತಮ ರತೆಯಾಗಿಯುಂ ದುರ್ಜನಪ್ರಿಯೆಯುಮೆನಿಸಿ ಪರಸ್ಪರವಿರೋಯಪ್ಪ ನಿಜಚರಿತ್ರಮಂ ಇಂದ್ರಜಾಲಮಂ ತೋರ್ಪಂತೆ ಮೆಯುತ್ತಿರ್ಪಳಂತು ಮಲ್ಲದೆಯುಂ

ಎಂತೆಂತು ತೊಳಗಿ ಬೆಳಗುವ
ಳಂತಂತತಿಮಲಿನಕಜ್ಜಳೋಪಮ ಕರ್ಮ
ಭ್ರಾಂತಿಯ ಮಾೞ್ಪಳ್ ಲಕ್ಷಿ
ಕಾಂತೆ ಕರಂ ಚಪಳೆ ಸೊಡರ ಕುಡಿಯಂ ಪೋಲ್ವಳ್                             ೮೪

ವ|| ಅದಲ್ಲದೆಯುಂ

ಪಿರಿಯಕ್ಕರ|| ಎಸೆವ ಗುಣವೆಂಬ ಕಳಹಂಸನಿಕರಕ್ಕಕಾಲದ ಪೆರ್ಮೞೆ ವಿಷಯೇಂದ್ರಿಯ
ಪ್ರಸರಮೆಂಬ ಮೃಗಪ್ರಕರಕ್ಕೆ ಗೋವಿಯದನಿ ಸಚ್ಚರಿತ್ರಂಗಳೆಂಬ
ಮಿಸುಪ ಚಿತ್ರಕ್ಕೆ ಕಂದಿಪ ಕರ್ವೊಗೆ ಧರ್ಮಮೆಂಬಿಂದುಮಂಡಲಕ್ಕೆ
ಮುಸುಕುವ ಕಾಳರಾಹುವಿನ ನಾಲಿಗೆಯೆನಿಪ ಸಿರಿಯಂ ಬಣ್ಣಿಪಂ ಗಾಂಪನಲ್ತೇ       ೮೫

ಲೆಕ್ಕಿಸುವುದಿಲ್ಲ, ಬುದ್ಧಿಯನ್ನು ದೂಷಿಸುತ್ತಾಳೆ. ಲಕ್ಷಣ೧ವನ್ನು ಲಕ್ಷ ಮಾಡುವುದಿಲ್ಲ. ಔದಾರ್ಯವನ್ನು ಯೋಚಿಸುವುದಿಲ್ಲ. ಪರಿಚಯ ನ್ನು ನಂಬುವುದಿಲ್ಲ, ಬಹಳ ಸುಂದರವಾದ ಶರೀರವನ್ನು ಕಣ್ಣೆತ್ತಿಯೂ ನೋಡುವುದಿಲ್ಲ, ಸರ್ವಕಲಾಸಂಪನ್ನತೆಯನ್ನು ಇದೇತಕ್ಕೆ? ಎನ್ನುತ್ತಾಳೆ. ಆದ್ದರಿಂದ ಲಕ್ಷಿ ಯನ್ನು ತಿಳಿದೂ ತಿಳಿದೂ ಹೊಗಳುವುದಕ್ಕೆ ಹೊರಡುವವನು ದಡ್ಡನೇ ಸರಿ. ವ|| ಅದಲ್ಲದೆ ೮೩. ಲಕ್ಷಿ ಯು ಧೈರ್ಯವಂತನನ್ನು ಹುಚ್ಚನೆಂದು ಹಾಸ್ಯಮಾಡುತ್ತಾಳೆ, ಸತ್ಕುಲಪ್ರಸೂತನನ್ನು ಹಾವೆಂದು ದಾಟಿಹೋಗುತ್ತಾಳೆ, ಶೂರನನ್ನು ಕತ್ತರಿಸಿ ಬಿಡುವನೆಂಬ ಶಂಕೆಯಿಂದ ಒಪ್ಪುವುದಿಲ್ಲ, ಮಹಾಶಯನನ್ನು ತಲೆಹರಟೆಯವನೆಂದು ಹೀಯಾಳಿಸುತ್ತಾಳೆ, ಸರಸ್ವತಿಯ ಒಡೆಯನನ್ನು (ವಿದ್ವಾಂಸನನ್ನು) ಅವಳ ಮೇಲಿನ ಅಸೂಯೆಯಿಂದ ಮುಟ್ಟುವುದೂ ಇಲ್ಲ, ದಾನಿಯನ್ನು ಅಸ್ಪ ಶ್ಯನೆಂದು ಭಾವಿಸಿ ಸ್ಪರ್ಶಮಾಡುವುದಿಲ್ಲ, ವಿನಯವಂತನನ್ನು ದೂರದಿಂದಲೇ ನೋಡಿ ಪಾಪಿಷ್ಠನೆಂದು ಹತ್ತಿರಕ್ಕೆ ಸುಳಿಯುವುದಿಲ್ಲ! ಇವಳನ್ನು ನಂಬಬೇಡ ವ|| ಮತ್ತು ಇವಳು ಜಲನಿಯಲ್ಲಿ ಹುಟ್ಟಿದ್ದರೂ ಬಾಯಾರಿಕೆಯನ್ನು ಹೆಚ್ಚಿಸುತ್ತಾಳೆ (ದುರಾಸೆಯನ್ನು ಹೆಚ್ಚಾಗಿ ಉಂಟುಮಾಡುತ್ತಾಳೆ), ಅಮೃತದ ಜೊತೆಯಲ್ಲಿ ಹುಟ್ಟಿದ್ದರೂ ಕಹಿಯಾದ ರಸವನ್ನುಂಟುಮಾಡುತ್ತಾಳೆ. (ಕೆಟ್ಟ ಪರಿಣಾಮವನ್ನುಂಟುಮಾಡುತ್ತಾಳೆ.) ಪುರುಷೋತ್ತಮನಲ್ಲಿ (ಶ್ರೀಮನ್ನಾರಾಯಣನಲ್ಲಿ, ಶ್ರೇಷ್ಠನಾದ ಮನುಷ್ಯನಲ್ಲಿ) ಅನುರಕ್ತಳಾಗಿದ್ದರೂ ದುರ್ಜನರನ್ನು ಪ್ರೀತಿಸುತ್ತಾಳೆ. ಈ ರೀತಿ ಪರಸ್ಪರ ವಿರೋಯಾದ ತನ್ನ ನಡವಳಿಕೆಯನ್ನು ಇಂದ್ರಜಾಲವನ್ನು ತೋರಿಸುವಂತೆ ತೋರ್ಪಡಿಸುತ್ತಾಳೆ. ಅದಲ್ಲದೆ, ೮೪. ಈ ಲಕ್ಷಿ ಯೆಂಬ ಹೆಂಗಸು ಬಹಳ ಚಂಚಲಳು. ದೀಪದ ಕುಡಿಯನ್ನು ಹೋಲುತ್ತಾಳೆ. ಹೇಗೆಂದರೆ –  ದೀಪದ ಕುಡಿಯು ಎಷ್ಟು ಎಷ್ಟು ಹೆಚ್ಚಾಗಿ ಪ್ರಕಾಶಮಾನವಾಗಿ ಉರಿಯುತ್ತದೆಯೊ ಅಷ್ಟು ಅಷ್ಟು ಹೆಚ್ಚಾಗಿ ಬಹಳ ಕಪ್ಪಾದ ಕಾಡಿಗೆಯನ್ನು ಹೊರಕ್ಕೆ ಹಾಕುತ್ತದೆ. ಅದೇ ರೀತಿ ಲಕ್ಷಿ ಯು ಎಷ್ಟು ಎಷ್ಟು ಹೆಚ್ಚಾಗಿ ಒಂದು ಕಡೆ ಸೇರಿ ಬೆಳಕಿಗೆ ಬರುತ್ತಾಳೋ ಅಷ್ಟು ಅಷ್ಟು ಹೆಚ್ಚಾಗಿ ಅಲ್ಲಿ ಪರಹಿಂಸೆ ಪರಸ್ತ್ರೀಹರಣ ಮೊದಲಾದ ಹೇಸಿಗೆಕೆಲಸವನ್ನು ಮಾಡಿಸುತ್ತಾ ತಾವು ಮಾಡುವುದು ಸರಿಯೆಂಬ ಭ್ರಾಂತಿಯನ್ನು ಹುಟ್ಟಿಸುತ್ತಾಳೆ. ವ|| ಅದಲ್ಲದೆ

೮೫. ಇವಳು ಪ್ರಕಾಶಮಾನವಾದ ಸದ್ಗುಣಗಳೆಂಬ ಹಂಸಗಳ ಗುಂಪಿಗೆ ಅಕಾಲದಲ್ಲಿ ಬರುವ ದೊಡ್ಡ ಮಳೆಯಂತಿದ್ದಾಳೆ. ಚಪಲಸ್ವಭಾವದ ಇಂದ್ರಿಯಗಳೆಂಬ ಜಿಂಕೆಗಳಿಗೆ ಕೊಳಲಿನ ದನಿಯಂತಿದ್ದಾಳೆ. ಒಳ್ಳೆಯ ನಡತೆಯೆಂಬ ಪ್ರಕಾಶಮಾನವಾದ ಚಿತ್ರಕ್ಕೆ ಕಳೆಗುಂದಿಸುವ ಕಪ್ಪು ಹೊಗೆಯಂತಿದ್ದಾಳೆ. ಧರ್ಮವೆಂಬ ಚಂದ್ರಬಿಂಬಕ್ಕೆ ಆವರಿಸುವ ಭಯಂಕರವಾದ ರಾಹುವಿನ ನಾಲಿಗೆಯಂತಿದ್ದಾಳೆ. ಇಂತಹ ಲಕ್ಷಿ ಯನ್ನು

೧. ಲಕ್ಷಣ – ಸಾಮುದ್ರಿಕಶಾಸ್ತ್ರದಲ್ಲಿ ಹೇಳಿರುವ ಮಹಾಪುರುಷ ಲಕ್ಷಣ ; ಛತ್ರ, ಚಾಮರಾದಿ ರೇಖೆಗಳು.

ಲಲಿತರಗಳೆ|| ಗಂಧರ್ವನಗರಲೇಖೆಯ ತೆಱದೆ ಕಂಡಂತೆ

 

ಕಾಣಲ್ಕೆ ಬಾರಳಿರ್ದಾಯೆಡೆಯೊಳಿರ್ದಂತೆ
ವಿಷಯವಿಷವಲ್ಲಿಯಂ ಪೆರ್ಚಿಸುವ ಜಳಧಾರೆ
ಸಾಧುತ್ವಮಂ ಕೆಡಿಸಿ ನಡಸುವ ದುರಾಚಾರೆ
ಕಪಟನಾಟಕತತಿಗೆ ತಾನೆ ನೆಲೆಯೆನಿಸುವಳ್
ಕೋಪಗ್ರಹಾವೇಶ ಜನ್ಮನಿಯೆನಿಸುವಳ್
ಶಾಸ್ತ್ರದೃಷ್ಟಿಗೆ ತಿಮಿರಪಟಲತತಿಯೆನಿಸುವಳ್
ದೋಷಮೆಂಬಾಶೀವಿಷಕ್ಕೆ ಪುತ್ತೆನಿಸುವಳ್
ಚಿತ್ರಗತಿಯಾಗಿಯುಂ ನೋಡೆ ಸಂಚರಿಸುವಳ್

ಕರುವಿಟ್ಟೊಡಂ ನಿಲಿಸಲರಿದೆನಿಸಿ ಚೆದಱುವಳ್
ಕಂಡರಸಿದೊಡಮಲ್ಲಿ ನಿಲಲಾಱಳೆನಿಸುವಳ್
ಕೇಳ್ದೊಡಂ ತನ್ನನನುಭವಿಪುದರಿದೆನಿಸುವಳ್
ಒಲ್ದು ಜಾನಿಸಿದೊಡಂ ತಕ್ಷಣದೆ ವಂಚಿಪಳ್                             ೮೬

ವ|| ಇಂತು ಚಂಚಲೆಯಪ್ಪ ಸಿರಿ ತಮಗೆ ವಿವಶದಿನೆತ್ತಲಾನುವಪ್ಪುದುಂ

ಮೊದಲೊಳ್ ರಾಜ್ಯಾಭಿಷೇಕಪ್ರಬಲಜಲಮೆ ಕರ್ಚಿತ್ತು ದಾಕ್ಷಿಣ್ಯಮಂ ಹೋ
ಮದ ಧೂಮಂ ಚಿತ್ತದೊಳ್ ತೊಟ್ಟನೆ ಮಲಿನತೆಯಂ ಪೊರ್ದಿಸಿತ್ತೊಪ್ಪಿರಲ್ ಕ
ಟ್ಟಿದ ಪಟ್ಟಂ ಬರ್ಪ ಮುಪ್ಪಂ ಮಯಿಸಿತಕಕ್ಷಾಂತಿಯಂ ವಿಪ್ರವರ್ಗಾ
ಸ್ಪದ ದರ್ಭಾನೀಕ ಸಮ್ಮಾರ್ಜನಿ ಕಳೆದುದೆನಲ್ ದುಷ್ಟರಪ್ಪರ್ ನೃಪಾಲರ್            ೮೭

ಪರಲೋಕಾಲೋಕನಮಂ
ಪರಿಹರಿಸಿದೆವಲ್ತೆ ನೋಡಿಮೆಂದೀಗಳುದಾ
ಹರಿಸುವ ತೆಱದಿಂ ಪಿಡಿಯಿಪ
ರರಸುಗಳೆಡೆವಿಡದೆ ಮೇಘಡಂಬರತತಿಯಂ ೮೮

ಪಡೆವಳ್ಳರ್ ನೃಪಗುಣಮಂ
ಬಿಡೆ ನಾಳ್ಗಡಿಗಳೆವ ತೆಱದೆ ನಡೆನಡೆಯೆಂಬರ್
ಜಡಿವರ್ ಸಾಧೂಕ್ತಿಗಳಂ
ನುಡಿವವರಂ ಮಾಣಿಪಂದದಿಂ ಪಡಿಯಾಱರ್                           ೮೯

ಹೊಗಳುವವನು ಶುದ್ಧ ಮುಠ್ಠಾಳನಲ್ಲವೆ? ೮೬. ಇವಳು ಆಕಾಶದಲ್ಲಿ ಕಾಣಬರುವ ಗಂಧರ್ವನಗರದ ಸಾಲಿನಂತೆ ಒಂದು ಕಡೆ ಕಂಡಂತೆ ಕಾಣುವುದಿಲ್ಲ, ಇದ್ದಂತೆ ಇರುವುದಿಲ್ಲ. ಇವಳು ಕಾಮಿನಿ ಕಾಂಚನವೇ ಮೊದಲಾದುವುಗಳ ಆಸೆಯೆಂಬ ನಂಜಿನ ಬಳ್ಳಿಯನ್ನು ಬೆಳೆಸುವ ಜಲಧಾರೆಯಂತೆ ಇದ್ದಾಳೆ. ಇವಳು ಒಳ್ಳೆಯತನವನ್ನು ಕೆಡಿಸಿ ಹಾಳುಮಾಡುವ ಕೆಟ್ಟ ನಡತೆಯುಳ್ಳವಳು. ಬೂಟಾಟಿಕೆಯೆಂಬ ನಾಟಕಗಳಿಗೆ ರಂಗಮಂಟಪದಂತಿದ್ದಾಳೆ. ಕೋಪವೆಂಬ ಪಿಶಾಚಿಯು ಹಿಡಿಯುವುದಕ್ಕೆ ತೌರುಮನೆಯಂತಿದ್ದಾಳೆ. ಶಾಸ್ತ್ರವೆಂಬ ಕಣ್ಣಿನ ದೃಷ್ಟಿಯನ್ನು ಹಾಳುಮಾಡುವ ತಿಮಿರವೆಂಬ ಬೇನೆಯಂತಿದ್ದಾಳೆ. ದೋಷವೆಂಬ ಹಾವಿಗೆ ಹುತ್ತದಂತಿದ್ದಾಳೆ. ನೋಡಿದರೆ ಚಿತ್ರದಲ್ಲಿ ಬರೆದಿಟ್ಟಿದ್ದರೂ ಮತ್ತೆಲ್ಲಿಗೋ ಹೊರಟುಬಿಡುತ್ತಾಳೆ. ಎರಕಹೊಯ್ದು ನಿರ್ಮಾಣ ಮಾಡಿದ್ದರೂ ಒಂದು ಕಡೆ ನಿಲ್ಲದೆ ಬೇರೆ ಕಡೆಗೆ ಕಾಲುಕೀಳುತ್ತಾಳೆ. ಕೊರೆದು ಪ್ರತಿಮೆ ಮಾಡಿಸಿಟ್ಟಿದ್ದರೂ ಬಂದು ನಿಲ್ಲಲಾರಳೆನಿಸಿದ್ದಾಳೆ. ಹೆಸರು ಕೇಳಿದರೂ ಸಾಕು ದಕ್ಕತಕ್ಕವಳಲ್ಲ ಎನಿಸಿರುವಳು. ಪ್ರೀತಿಯಿಂದೊಮ್ಮೆ ನೆನೆಸಿಕೊಂಡರೂ ವಂಚಿಸುತ್ತಾಳೆ. ವ|| ಹೀಗೆ ಒಂದು ಕಡೆ ನಿಲ್ಲದ ಸಿರಿಯು ತಮಗೆ ಅದೃಷ್ಟವಶದಿಂದ ಎಲ್ಲಾದರೂ ಒದಗಿಬಿಟ್ಟರೆ ೮೭. ರಾಜರಿಗೆ ಮೊದಲು ಪಟ್ಟಾಭಿಷೇಕಕಾಲದಲ್ಲಿ ಅಭಿಷೇಕ ಮಾಡುವ, ಮೇಲಿಂದ ವೇಗವಾಗಿ ಇಳಿಯುವ ನೀರೇ ಅವರ ದಾಕ್ಷಿಣ್ಯಗುಣ (ಇನ್ನೊಬ್ಬರ ಮನಸ್ಸಿಗೆ ನೋವನ್ನುಂಟುಮಾಡಬಾರದೆಂಬ ಮನೋಭಾವ)ವನ್ನು ತೊಳೆದುಬಿಡುತ್ತದೆ. ಪಟ್ಟಾಭಿಷೇಕ ಸಮಯದಲ್ಲಿ ಮಾಡುವ ಹೋಮದ ಹೊಗೆಯೆ ತಟ್ಟನೆ ಮನಸ್ಸಿನಲ್ಲಿ ಮಲಿನತೆಯನ್ನುಂಟುಮಾಡುತ್ತದೆ. ಚಂದವಾಗುವಂತೆ ತಲೆಗೆ ಕಟ್ಟಿರುವ ರೇಷ್ಮೆಯ ವಸ್ತ್ರವೇ ಮುಂದೆ ಬರುವ ಮುಪ್ಪನ್ನು ಮರೆಸುತ್ತದೆ. ಬ್ರಾಹ್ಮಣರ ಕೈಯಲ್ಲಿರುವ ದರ್ಭೆಯ ಕಂತೆಯೆಂಬ ಕಸಪರಿಕೆಯು ಕ್ಷಮಾಗುಣವನ್ನು ತೊಡೆದುಹಾಕುತ್ತದೆ. ಹೀಗಾಗಿ ರಾಜರು ದುಷ್ಟರಾಗುತ್ತಾರೆ. ೮೮. ಇನ್ನು ನಾವು ಮೇಲಿರುವ ಪರಲೋಕವನ್ನು ನೋಡಬೇಕಾದ್ದಿಲ್ಲ. ಅದನ್ನು ಮುಚ್ಚಿಬಿಟ್ಟಿದ್ದೇವೆ. ನೋಡಿ ಈಗ ಎಂದು ತೋರಿಸುವುದಕ್ಕೋ ಎಂಬಂತೆ ಅರಸುಗಳು ತಮ್ಮ ತಲೆಯಮೇಲೆ ಒಂದೇಸಮನೆ ಶ್ವೇತಚ್ಛತ್ರಗಳನ್ನು ಹಿಡಿಸಿಕೊಳ್ಳುತ್ತಾರೆ! ೮೯. ದಳಪತಿಗಳು ರಾಜನ

ಬಿಡೆ ಬಿಡಿಸುವಂತೆ ನೃಪರೊ
ಳ್ನುಡಿಯಂ ಬೀಸುವುದು ಚಾಮರಾವಳಿ ಜನಮಂ
ತೊಡೆವಂತೆ ವೈಜಯಂತಿಗ
ಳೆಡೆವರಿಯದೆ ಮುಂದೆ ಮಿಳಿರ್ದು ಮೇಳಿಸಿ ತೋರ್ಕುಂ                       ೯೦

ವ|| ಮತ್ತಂ

ಪಲತೆಱದ ವಿಷಯದತ್ತಲ್
ತಲೆವಟ್ಟಿರ್ದಿಂದ್ರಿಯಂಗಳೈದಾಗಿರ್ದುಂ
ಸಲೆ ಶತಸಹಸ್ರಸಂಖ್ಯೆಯಿ
ನಲೆಯದೆ ಮಾಣ್ದಪುವೆ ಮಾಯ್ದ ಸಿರಿಯುಳ್ಳವರಂ                               ೯೧

ತನಗೆಡವಿಡದತಿಚಪಲಂ
ಮನಮದು ನೋಡೊಂದೆ ನೂಱು ನೂರ್ಚ್ಛಾಸಿರಮಾ
ಯ್ತೆನೆ ಬಿಡದೆ ಪಿಡಿದು ನೃಪರಂ
ಕನಲ್ಚಿ ತನ್ನಿಚ್ಚೆಗೊಯ್ವುದೊಂದಚ್ಚರಿಯೇ                                 ೯೨

ಪಿರಿದುಮಧರ್ಮದೆ ಗತಿಗೆ
ಟ್ಟರಸುಗಳೆಲೆ ಪೆಳವುಗೊಂಡರೆಂಬಂತೆ ವಲಂ
ಕರವಿಡಿದು ಸಾರ್ಚುವೆತ್ತುವ

ತುರಿಪದೆ ಕೆಯ್ಗುಡುವುದಕ್ಕೆ ಲಜ್ಜಿಸರರೆಬರ್                        ೯೩

ಇರದೀಗಳ್ ಸತ್ತಪರೆನಿ
ಪರವೋಲ್ ನಂಟರುಮನಱವರಲ್ಲರ್ ಭೂಪರ್
ಪಿರಿದುಂ ಕಣ್ಗಾಣದರಂ
ತಿರೆ ಕಾಣಲ್ಕಾಱರಲ್ತೆ ತೇಜಸ್ವಿಗಳಂ                              ೯೪

ಪುಸಿನುಡಿಯ ವಿಷವಿಪಾಕದ
ಮಸಕದೆ ಮುಖರೋಗಮಾದವೋಲಿನಿತಾನುಂ
ಬಸವಲ್ಲದುಸಿರ್ವರೆಂದುಂ
ಪೊಸಸಿರಿಯಿಂ ಮೈಮೆವೆತ್ತ ಮಾಯ್ದ ಮನುಷ್ಯರ್                ೯೫

ಗುಣಗಳನ್ನು ಪುನ ಮರಳದಂತೆ ರಾಷ್ಟ್ರದ ಗಡಿಯಿಂದಾಚೆಗೆ ಓಡಿಸಿಬಿಡುವರೊ ಎಂಬಂತೆ ‘ನಡೆಯಿರಿ, ನಡೆಯಿರಿ’ ಎಂದು ದಾರಿಬಿಡಿಸುವಾಗ ಕೂಗುತ್ತಿರುತ್ತಾರೆ! ಒಳ್ಳೆಯ ಮಾತುಗಳನ್ನು ಆಡಲು ಬಂದವರನ್ನು ತಡೆಯುವವರಂತೆ ದ್ವಾರಪಾಲಕರು ಗದರಿಸುತ್ತಿರುತ್ತಾರೆ! ೯೦. ರಾಜರುಗಳ ಒಳ್ಳೆಯ ಮಾತುಗಳನ್ನು ಸಂಪೂರ್ಣವಾಗಿ ಹಾರಿಸಿಬಿಡುವಂತೆ ಚಾಮರಗಳು ಬೀಸುತ್ತಿರುತ್ತವೆ! ಅವರ ಕೀರ್ತಿಯನ್ನು ತೊಡೆದುಬಿಡುವಂತೆ ಬಾವುಟಗಳು ತಡೆಯಿಲ್ಲದೆ ಒಟ್ಟಿಗೆ ಹಾರಾಡುತ್ತಿರುತ್ತವೆ! ವ|| ಮತ್ತೆ ೯೧. ಅನೇಕ ವಿಧವಾದ ವಿಷಯಗಳ ಕಡೆಗೆ ಆಸಕ್ತವಾಗಿರುವ ಮತ್ತು ಹೆಸರಿಗೆ ಐದೇ ಆಗಿದ್ದರೂ ಲಕ್ಷಾಂತರ ಸಂಖ್ಯೆಯನ್ನು ಪಡೆದಂತಿರುವ ಇಂದ್ರಿಯಗಳು ನೀಚರಾದ ಶ್ರೀಮಂತರನ್ನು ಹಿಂಸೆಮಾಡದೆ ಬಿಡುತ್ತವೆಯೆ? ೯೨. ವಿಚಾರ ಮಾಡಿದರೆ ಬಹಳ ಚಪಲಸ್ವಭಾವದ ಮನಸ್ಸು ತಾನು ಒಂದೇ ಆದರೂ ನೂರಾರು ಸಾವಿರವಾಗಿ ಬಿಟ್ಟಿದೆಯೋ! ಎಂಬಂತೆ ತೋರುತ್ತಾ ರಾಜರನ್ನು ತಪ್ಪಿಸಿಕೊಳ್ಳಲು ಅವಕಾಶವನ್ನೇ ಕೊಡದೆ ಕಾಡಿಸಿ ತನ್ನ ಇಷ್ಟಕ್ಕೆ ಒಳಪಡಿಸಿಕೊಳ್ಳುತ್ತದೆ. ಇದೇನೂ ಆಶ್ಚರ್ಯವಲ್ಲ. ೯೩. ಮತ್ತೆ ಕೆಲವರು ಬಹಳ ಪಾಪ ಮಾಡುವುದರ ಫಲವಾಗಿ ನಡಗೆ ಉಡುಗಿಹೋಗಿ ನಿಜವಾಗಿಯೂ ಹೆಳವರಾಗಿಬಿಟ್ಟರೋ ಎಂಬಂತೆ ಅಯ್ಯೊ ಪಾಪ! ಬೇರೆಯವರು ಕೈಹಿಡಿದು ಬೇಗನೆ ನಡೆಸಲೆಂದು ಅವರಿಗೆ ತಮ್ಮ ಕೈಯನ್ನು ಕೊಡುವುದಕ್ಕೂ ನಾಚಿಕೆಪಡುವುದಿಲ್ಲ! ಟಿ. ರಾಜರುಗಳನ್ನು ಪರಿಜನರು ಹಸ್ತಲಾಘವ ಕೊಟ್ಟು ಕರೆದುಕೊಂಡು ಹೋಗುತ್ತಾರೆ. ಅದನ್ನು ಕವಿ ಈ ರೀತಿ ಪರಿಹಾಸ್ಯ ಮಾಡಿದ್ದಾನೆ. ೯೪. ಅರಸರು ಈಗಲೆ ಮರಣಕಾಲವೊದಗಿ ಬಂದವರಂತೆ ನೆಂಟರಿಷ್ಟರನ್ನೂ ಗುರುತಿಸಲಾರರು ಮತ್ತು ತೇಜಸ್ವಿಗಳನ್ನು ನೋಡುವುದಕ್ಕೆ ಕುರುಡರಂತೆ ಅಸಮರ್ಥರಾಗುತ್ತಾರೆ. ಟಿ. ಇಲ್ಲಿ ಸಂಸ್ಕೃತಮೂಲಕ್ಕೆ ಅನುಸಾರವಾಗಿ “ಕಣ್ಣುಬೇನೆ ಬಂದವರಂತೆ” ಎಂದು ಭಾವಿಸಬೇಕು.

೯೫. ಸುಳ್ಳುಮಾತೆಂಬ ವಿಷದ ದೊಡ್ಡದಾದ ಕೆಟ್ಟ ಪಾಪದಿಂದ ಬಾಯಿಬೇನೆ ಬಂದವರಂತೆ ಹೇಗೋ ಕಷ್ಟಪಟ್ಟು ತೊದಲುತ್ತಾ

ಪೊಡೆದುದು ಗರವತಿಕೋಪದೆ
ಪಿಡಿದುದು ಪುಲಿ ಗಾಳಿ ಸೋಂಕಿದತ್ತು ಪಿಶಾಚಂ
ತೊಡರ್ದುದು ಭೂತಂ ಬನ್ನಂ
ಬಡಿಸಿದುದೆನೆ ಸಿರಿಯೊಳರಸುಗಳ್ ಮೆಯ್ಯಱಯರ್              ೯೬

ಜನಪತಿಗಳ್ ನೋಡಲ್ಕತಿ
ಮನೋಹರಾಕೃತಿಗಳಾಗಿಯುಂ ನಾಡೆ ಜಗ
ಜ್ಜನಸಂಕುಲಕ್ಕೆ ಪಿರಿದುಂ
ವಿನಾಶಹೇತುಗಳಕಾಲಫಲಕುಸುಮದವೊಲ್                          ೯೭

ವ|| ಅಂತು ಗರ್ವಪರ್ವತಾರೂಢಪ್ಪುರ್ವರಾಶ್ವರರ ಸರ್ವಸ್ವಮಂ ವಂಚಿಸಿ ಕೊಳಲೆಂದವರ್ಗಳ ಸಮೀಪದೊಳಗಾಮಿಷಕೆಱಗುವ ಪರ್ದುಗಳುಮಾಸ್ಥಾನಮೆಂಬ ಕೊಳದೊಳಗೆ ಪಾರ್ವ ಬಕಂಗಳುಮೆನಿಪಂತಿರ್ದು ತಮ್ಮ ಕಜ್ಜಕ್ಕೆ ಕೆಲರ್ ಧೂರ್ತರರಸುಗಳಂ ಪ್ರತಾರಿಸುತಿರ್ಪ ರದೆಂತೆನೆ

ಪಿರಿಯಕ್ಕರ|| ಗುರುವನಿದಿರಿಪುದೆ ನಿಜಪ್ರಭುತೆ ಜೂದು ವಿನೋದಂ ಕಳ್ಕುಡಿವುದೆ ವಿಲಾಸಂ
ಪಿರಿದು ಬೇಂಟೆಯಾಡುವುದೆ ಶಕ್ತಿಗೆ ಹೇತು ಕುಲವಧೂತ್ಯಾಗಮೆ ನಿರ್ವ್ಯಸನಂ
ನೆರೆದು ಪರದಾರಮಂ ಕಲಿವುದೆ ಚತುರತ್ವಂ ಸೊಕ್ಕುವುದೆ ಬಂಟುತನವನ್ಯರ್
ಪರಿಭವಿಸಿದೊಡಂಜುವುದೆ ಸೈರಣೆ ತರಳತೆಯೆ ನೋಡುತ್ಸಾಹಮೆಂಬರ್ ಧೂರ್ತರ್          ೯೮

ವ|| ಅದಲ್ಲದೆಯುಂ ಪಲವುಂ ದೋಷಂಗಳಂ ಗುಣಂಗಳಾಗೇಱಸಿ ತಮ್ಮೊಳ್ ಕೈವೊಯ್ದು ನಗುತ್ತಂ ಪ್ರತಾರಣಕುಶಲರಪ್ಪ ವಂಚನಾಕಾರರ ಮಾನುಷೋಚಿತಮಪ್ಪ ಪೊಗೞ್ತೆಯಿಂ ಪೊಗೞುತ್ತಮಿರಲದನವಿತಥಮೆಂದು ಬಗೆದು ಮಿಥ್ಯಾಮಾಹಾತ್ಮ ಗರ್ವನಿರ್ಭರರಾಗಿ

ಮುನಿದೊಡೆ ಭಸ್ಮವಾದಪುದು ಲೋಕಮೆನಲ್ ನೊಸಲೊಳ್ ತೃತ್ತೀಯಲೋ
ಚನಮೆಮಗುಂಟು ತೋಲಮಯಿಂದದು ತೋಱಪುದಿಲ್ಲೆನುತ್ತಮೀ
ಮನುಜರ ಗೆಯ್ತಮಂ ಬಿಸುಟು ದೇವರೆಮೆಂಬಭಿಮಾನನಮೇ ಮು
ಯ್ವೊನೆಗಳ ನೋೞ್ಪರಿನ್ನೆರಡು ತೋಳೊಳವೆಂಬವೋಲುರ್ವರೇಶ್ವರರ್                ೯೯

ತೊದಲುತ್ತಾ ಮಾತನಾಡುತ್ತಾರೆ. ೯೬. ಗ್ರಹ ಬಡಿದವರಂತೆಯೂ ಹುಲಿಯು ಬಹಳ ಕೋಪದಿಂದ ಹಿಡಿದಂತೆಯೂ ದೆವ್ವ ಹಿಡಿದಂತೆಯೂ ಪಿಶಾಚಿ ಅಮರಿಕೊಂಡಂತೆಯೂ ಭೂತವು ಉಪದ್ರವ ಕೊಡುತ್ತಿರುವಂತೆಯೂ ಅರಸುಗಳು ಐಶ್ವರ್ಯದಿಂದ ಮೈಮರೆಯುತ್ತಾರೆ. ೯೭. ರಾಜರು ನೋಡುವುದಕ್ಕೇನೋ ಬಹಳ ರಮ್ಯವಾದ ಆಕಾರವುಳ್ಳವರಾಗಿ ತೋರುತ್ತಾರೆ. ಆದರೂ ಅಕಾಲಪುಷ್ಪದಂತೆ ಪ್ರಜಾವರ್ಗದ ವಿನಾಶಕ್ಕೆ ಬಹಳಮಟ್ಟಿಗೆ ಕಾರಣರಾಗುತ್ತಾರೆ. ಟಿ. ಯಾವುದಾದರೂ ಗಿಡಮರಗಳಲ್ಲಿ ಅಕಾಲದಲ್ಲಿ ಹೂಬಿಟ್ಟರೆ ಅದು ದೇಶಕ್ಕೆ ಅನಿಷ್ಟಸೂಚನೆಯೆಂದು ಹೇಳಲ್ಪಟ್ಟಿದೆ. ವ|| ಹೀಗೆ ಅಹಂಕಾರವೆಂಬ ಪರ್ವತವನ್ನು ಏರಿ ಕುಳಿತಿರುವ ರಾಜರುಗಳ ಸರ್ವಸ್ವವನ್ನೂ ಮೋಸಮಾಡಿ ಸುಲಿದುಕೊಳ್ಳಬೇಕೆಂದು ಅವರ ಹತ್ತಿರದಲ್ಲಿ ಮಾಂಸಕ್ಕೆ ಎರಗುವ ಹದ್ದುಗಳಂತೆಯೂ ಆಸ್ಥಾನವೆಂಬ ಕೊಳದೊಳಗೆ ಹಾರಾಡುವ ಬಕಗಳಂತೆಯೂ ಇರುವ ಕೆಲವರು ಧೂರ್ತರು ಸ್ವಾರ್ಥಕ್ಕಾಗಿ ರಾಜರುಗಳನ್ನು ಮೋಸಗೊಳಿಸುತ್ತಿರುತ್ತಾರೆ. ಹೇಗೆಂದರೆ ೯೮. ಆ ಮೋಸಗಾರರು ಗುರುಗಳನ್ನು ಎದುರಿಸಿನಿಲ್ಲುವುದನ್ನು ಸ್ವಾತಂತ್ರ ವೆನ್ನುತ್ತಾರೆ. ಜೂಜನ್ನು ವಿನೋದವೆನ್ನುತ್ತಾರೆ. ಹೆಂಡ ಕುಡಿಯುವುದಕ್ಕೆ ವಿಲಾಸ ಎನ್ನುತ್ತಾರೆ. ಹೆಚ್ಚು ಹೆಚ್ಚು ಬೇಟೆಯಾಡುವುದನ್ನು ಶಕ್ತಿವರ್ಧಕವೆನ್ನುತ್ತಾರೆ. ಕೈಹಿಡಿದ ಕುಲೀನಳಾದ ಪತ್ನಿಯನ್ನು ತೊರೆಯುವುದನ್ನು ವೈರಾಗ್ಯವೆನ್ನುತ್ತಾರೆ. ಪರಸ್ತ್ರೀಯೊಂದಿಗೆ ಬೆರೆಯುವ ಭಂಡತನವನ್ನು ನಿಪುಣತನವೆನ್ನುತ್ತಾರೆ. ಕೊಬ್ಬುವುದನ್ನು ಪರಾಕ್ರಮವೆನ್ನುತ್ತಾರೆ, ಇತರರು ಅವಮಾನ ಮಾಡಿದಾಗ ಹೆದರಿಕೊಂಡು ಸುಮ್ಮನಾಗುವುದನ್ನು ಸೈರಣೆಯೆನ್ನುತ್ತಾರೆ. ಚಪಲತೆಯನ್ನು ಉತ್ಸಾಹವೆನ್ನುತ್ತಾರೆ ನೋಡಪ್ಪ! ವ|| ಅಲ್ಲದೆ ಅವರ ಕೆಲವು ದೋಷಗಳನ್ನೇ ಗುಣಗಳೆಂದು ಹೊಗಳಿ, ಹಿಂದುಗಡೆಯಲ್ಲಿ ಚಪ್ಪಾಳೆ ತಟ್ಟಿಕೊಂಡು ನಗುತ್ತಾ ಮೋಸದಲ್ಲಿ ನಿಪುಣರಾದ ವಂಚಕರು ತಾವು ಮಾನವನ ಶಕ್ತಿಗೂ ಮೀರಿರುವ ಮಹಿಮೆಯುಳ್ಳ ಪವಾಡಪುರುಷರೆಂದು ಹೊಗಳುತ್ತಿದ್ದರೆ ಅದೆಲ್ಲವನ್ನೂ ನಿಜವೆಂದೇ ನಂಬಿ ಈ ಆರೋಪಿತವಾದ ಪವಾಡದ ಜಂಭದಿಂದ ತುಂಬಿದವರಾಗಿ, ೯೯. ‘ನಾವು ಕೋಪಿಸಿಕೊಂಡರೆ ಲೋಕವೆಲ್ಲವೂ ಸುಟ್ಟು ಬೂದಿಯಾಗುವುದು. ನಮಗೆ ಪರಮೇಶ್ವರ ನಿಗಿರುವಂತೆ ಹಣೆಯಲ್ಲಿ ಮೂರನೆಯ ಕಣ್ಣು ಇದೆ! ಅದು ಚರ್ಮದ ಅಡಿಯಲ್ಲಿರುವುದರಿಂದ ಕಾಣಿಸುವುದಿಲ್ಲ!’ ಎಂದು ಭಾವಿಸಿಕೊಳ್ಳುತ್ತ, ಸಾಮಾನ್ಯಮನುಷ್ಯರಂತೆ ಕೆಲಸಕಾರ್ಯಗಳನ್ನು ಮಾಡುವುದನ್ನು ಬಿಟ್ಟು, ಅಮಾನುಷಕಾರ್ಯಗಳನ್ನು ಮಾಡಲು ತೊಡಗುತ್ತಾರೆ. ನಾವೇ

ಮೊದಲೊಳ್ ತಮ್ಮನೆ ನೋಡಲಿತ್ತ ಪದದೊಳ್ ಕೈಕೊಂಡವರ್ ತಾಮೆ ನೋ
ಡಿದೊಡೋರಂತುಪಕಾರವಂ ಮೆದವರ್ ಮಾತಾಡಿದಂದರ್ಧರಾ
ಜ್ಯದ ಪೆಂಪಂ ದಯೆಗೆಯ್ದವರ್ ಬೆಸಸಿದಂದಾಗಳ್ ವರಂಗೊಟ್ಟವರ್
ಪದಪಿಂ ಮುಟ್ಟಿದರೈದೆ ರಕ್ಷಿಸಿದವರ್ ಭೂಪರ್ ಧರಾಚಕ್ರದೊಳ್              ೧೦೦

ವ|| ಅಂತುಮಲ್ಲದೆಯುಂ

ಗುರುಗಿದಿರೇಳ್ವರೆ ಪೊಡವಡು
ವರೆ ದೇವರನರ್ಚಿಸುವರೆ ಪಾವರ್ರ‍ರನಱದಾ
ದರಿಪರೆ ಮಾನ್ಯರ ಮನ್ನಿಸು
ವರೆ ಪೂಜ್ಯರ ಪಿರಿದೆನಿಸುವ ಗರ್ವದೆ ಭೂಪರ್            ೧೦೧

ಮಯದಹೋರಾತ್ರಂ ಕ
ಯ್ಮದಿಲ್ಲದ ಗುಣಮನಂತೆ ಬಿಡದೇಱಸಿ ಪೊ
ಚ್ಚಱಸುತ್ತಮಿರ್ಪ ಷಿಡ್ಗ
ರ್ಗೆಱಗುವರಱವಿಲ್ಲದವನಿಪಾಲರ್ ಜಗದೊಳ್            ೧೦೨

ಅವರನೆ ಪೊರೆವರ್ ಪೆರ್ಚಿಪ
ರವರನೆ ಸಾರಿರಿಪರವರನವರೊಳೆ ನುಡಿ ನೋ
ಡವರ್ಗಳೆ ನಂಟರ್ ಕೂಡುವ
ರವರೊಳೆ ಮನ್ನಿಪುದುಮವರನವರೊಳೆ ಕೂಟಂ         ೧೦೩

ವ|| ಅಂತೆನಿಸಿದರಸುಮಕ್ಕಳ್ಗತಿನೃಶಂಸಮಪ್ಪ ಕೌಟಿಲ್ಯಶಾಸ್ತ್ರ ಪ್ರಮಾಣದಿನುಪಾಂಶು ವಧೋಪದೇಶಮಂ ಮಾೞ್ದ ನಿಪುಣನೇ ಪರಮಪಂಡಿತನೆನಿಸುಗುಂ ಅಭಿಚಾರಕ್ರಿಯಾಕ್ರೂರ ಪ್ರಕೃತಿಯಪ್ಪ ಪುರೋಹಿತನೆ ಗುರುವೆನಿಸುಗುಂ ಪರದಾರಾಭಿಗಮನಮಂ ನಿಯೋಜಿಸುವ ದುಷ್ಟನೇ ವಿಶ್ವಾಸಭೂಮಿಯೆನಿಸಿದ ಮಿತ್ರನೆನಿಸುಗುಂ ಸ್ನೇಹಾರ್ದ್ರಹೃದಯ ನಿರ್ಮಲರುಮಪ್ಪ ಸಹೋದರರುಮಂ ನಿನಗವರ್ ಪಗೆವರೆಂದ ವರ್ಗೆ ಭಂಗಮಂ ಮಾಡಿ ಕಿೞ್ತು ಕಳೆಯಿಸುವ ಮಹಾಪಾತಕನೇ ಸಚಿವೋತ್ತಮನೆನಿಸುಗುಂ ಅದಱನಿಂತಪ್ಪ ದುಷ್ಟಚೇಷ್ಟಾಸಹಸ್ರದಾರುಣಮಪ್ಪ ರಾಜ್ಯತಂತ್ರದೊಳೆಂತಪ್ಪನುಂ ಮೋಹಿಸದಿರನದು ಕಾರಣದಿಂ

ದೇವರು ಎಂಬ ದುರಭಿಮಾನವು ಹೆಚ್ಚಲಾಗಿ ತಮಗೂ ಶ್ರೀಮನ್ನಾರಾಯಣನಂತೆ ಇನ್ನೂ ಎರಡು ತೋಳುಗಳಿವೆಯೋ ಎಂಬಂತೆ ತಮ್ಮ ಹೆಗಲುಗಳನ್ನು ತೂಗಾಡಿಸುತ್ತ ನೋಡಿಕೊಳ್ಳುತ್ತಾರೆ! ೧೦೦. ಮೊದಲು ಯಾರಿಗಾದರೂ ಭೇಟಿಗೆ ಅವಕಾಶವನ್ನು ಕೊಟ್ಟುಬಿಟ್ಟರೆ ಸಾಕು, ಅವರಿಗೆ ದೊಡ್ಡ ಅನುಗ್ರಹಮಾಡಿಬಿಟ್ಟೆವೆಂದು ಭಾವಿಸಿಕೊಳ್ಳುತ್ತಾರೆ. ತಾವು ಅವರನ್ನು ನೋಡಿಬಿಟ್ಟರೆ ಪರಮೋಪಕಾರವನ್ನು ಮಾಡಿಬಿಟ್ಟೆವೆಂದು ಭಾವಿಸುತ್ತಾರೆ. ಯಾರೊಂದಿಗಾದರೂ ಮಾತಾಡಿಬಿಟ್ಟರೆ ಅವರಿಗೆ ಅರ್ಧರಾಜ್ಯದ ವೈಭವವನ್ನು ದಾನಮಾಡಿಬಿಟ್ಟವರಂತೆ ತಿಳಿದುಕೊಳ್ಳುತ್ತಾರೆ. ಯಾರಿಗಾದರೂ ಅಪ್ಪಣೆಮಾಡಿದರೆ ವರವನ್ನೇ ಕೊಟ್ಟಂತೆ ತಿಳಿದುಕೊಳ್ಳುತ್ತಾರೆ. ಒಂದು ವೇಳೆ ಪ್ರೀತಿಯಿಂದ ಮುಟ್ಟಿದರೆ ಅವರನ್ನು ಉದ್ಧಾರ ಮಾಡಿಬಿಟ್ಟೆವೆಂದು ತಿಳಿದುಕೊಂಡುಬಿಡುತ್ತಾರೆ. ವ|| ಅದಲ್ಲದೆ ೧೦೧. ಮಿಗಿಲಾದ ಅಹಂಕಾರದಿಂದ ಕೂಡಿದ ರಾಜರು ಗುರುಹಿರಿಯರು ಬಂದರೆ ಎದ್ದು ನಿಲ್ಲುತ್ತಾರೆಯೆ? ದೇವರಿಗೆ ನಮಸ್ಕಾರ ಮಾಡುತ್ತಾರೆಯೆ? ಬ್ರಾಹ್ಮಣರನ್ನು ಅವರ ಯೋಗ್ಯತೆಯನ್ನು ತಿಳಿದು ಪೂಜಿಸುತ್ತಾರೆಯೆ? ಮಾನ್ಯರನ್ನು ಆದರಿಸುತ್ತಾರೆಯೆ? ಪೂಜ್ಯರನ್ನು ಮನ್ನಿಸುತ್ತಾರೆಯೆ? ೧೦೨. ಕೆಲವರು ವಿಟರು ಹಗಲೂ ರಾತ್ರಿ ಅದೇ ಜ್ಞಾನದಿಂದ ಆಶ್ಚರ್ಯವನ್ನು ಸೂಚಿಸುತ್ತಾ ಇಲ್ಲದ ಗುಣವನ್ನು ಆರೋಪಿಸಿ ಅವರನ್ನು ಉಬ್ಬಿಸುತ್ತಾರೆ. ಈ ಪ್ರಪಂಚದಲ್ಲಿ ತಿಳುವಳಿಕೆಯಿಲ್ಲದ ರಾಜರು ಅಂತಹವರಿಗೇ ಉಬ್ಬಿಸುತ್ತಾರೆ. ೧೦೩. ಅಂತಹವರನ್ನೇ ಕಾಪಾಡುತ್ತಾರೆ. ಅವರನ್ನೇ ಹೆಚ್ಚಿಸುತ್ತಾರೆ. ಅವರನ್ನೇ ಸಮೀಪದಲ್ಲಿರಿಸಿಕೊಳ್ಳುತ್ತಾರೆ. ಅವರೊಡನೆಯೇ ಮಾತನಾಡುತ್ತಾರೆ. ಅವರೇ ಇವರಿಗೆ ನಂಟರು. ಅವರೊಂದಿಗೇ ಬೆರೆಯುತ್ತಾರೆ. ಅವರನ್ನೇ ಗೌರವಿಸುತ್ತಾರೆ. ಅವರೊಂದಿಗೇ ಸ್ನೇಹದಿಂದಿರುತ್ತಾರೆ. ನೋಡಪ್ಪ! ವ|| ಇಂತಹ ರಾಜಪುತ್ರರಿಗೆ ಕೌಟಿಲ್ಯನಿಂದ ರಚಿಸಲ್ಪಟ್ಟಿರುವ ಪರಹಿಂಸೆಯನ್ನೇ ಬೋಸುವ ಅರ್ಥಶಾಸ್ತ್ರದ ಪ್ರಮಾಣದಿಂದ ನಿಗೂಢಕೊಲೆಯನ್ನು ಉಪದೇಶಿಸುವ ನಿಪುಣನೇ ಉದ್ದಾಮಪಂಡಿತನೆನಿಸಿಕೊಳ್ಳುತ್ತಾನೆ. ಮಾಟ ಕೂಟಗಳನ್ನು ಮಾಡಿಸುವ ಸ್ವಭಾವತ ನಿರ್ದಯನಾದ ಪುರೋಹಿತನೇ ಗುರುವೆನಿಸಿ ಕೊಳ್ಳುತ್ತಾನೆ. ಹಾದರವನ್ನು ಬೋಸುವ ದುಷ್ಟನೇ ನಚ್ಚಿನ ಗೆಳೆಯನೆನಿಸಿಕೊಳ್ಳುತ್ತಾನೆ. ಸಹೋದರ ಸ್ನೇಹದಿಂದ ಮೃದುವಾದ ಹಾಗೂ ಕಲ್ಮಷವಿಲ್ಲದ ಮನಸ್ಸುಳ್ಳ ಅಣ್ಣತಮ್ಮಂದಿರನ್ನು ಅವರು ನಿಮಗೆ ಶತ್ರುಗಳೆಂದು ಹೇಳಿಕೊಟ್ಟು ತೊಂದರೆಗೀಡುಮಾಡಿಸಿ ಸ್ಥಾನಭ್ರಷ್ಟರನ್ನಾಗಿ