ವ|| ಅಂತು ತಳರ್ದು ನಡೆಗೊಂಡು ಮೊದಲೊಳ್ ಮಿಳಿಸುತ್ತಿಂಗಗ್ಗಳಮಾಗಿ ಕಡುಗೊರ್ಬಿಂ ಬಳೆದ ಪೆರ್ಮರಂಗಳ ತಿಂತಿಣಿಯೊಳಂ ಕಾಡಾನೆಗಳೊತ್ತಿ ಕೀೞ್ತಡೆಗೆಡೆದ ಮರಂಗಳಿಂ ಕೊಂಕುವೆತ್ತ ಬಟ್ಟೆಗಳೊಳಂ ಪೆರ್ಮರಂಗಳ ಮೊದಲೊಳ್ ಕಂಡರಿಸಿದ ಚಂಡಿಕಾಪ್ರತಿಮೆಗಳೊಳ ಮತಿವಿಸ್ಮಯಕರಮಾಗಿ ತಡಿವಿಡಿದು ಮಂದೈಸಿ ನಿಂದ ಕರಂಜದ ಪೂಗೊಂಚಲುಗಳುಮಂ ಬಟ್ಟೆವೋಪರ್ ಬೞಲ್ಕೆಗೞೆದುದನಱಪುವ ಬಾಡುಂದಳಿರ ಪಾಸಿಕೆಗಳುಮಂ ಪಲವುಂ ಬಣ್ಣದೆಲೆಗೊಳೆಯನೀರ್ಗಳು ಮನಪ್ಪುಕೆಯ್ದು ನಿಡುಮರದ ತುದಿಗೋಡುಗಳೊಳ್ ಕಟ್ಟಿದ ತೃಣಪುಲೀ ಚಿಹ್ನಂಗಳಿನಱಯಲಾದ ಕಾಡ ಪೞವಾವಿಗೆಗಳೊಳಂ ಬಿಡದೆ ಬಂಡನುಗುೞ್ವಲರ್ದುಱುಗಲಿಂ ಮಂದೈಸಿದ ಸಿಂಧುವಾರ ವನರಾಜಿಯಿಂ ನಸುಬೆಳರ್ತ ತಡಿಗಳುಮಂ ಮರದ ತುದಿಗೋಡುಗಳೊಳುಲಿವ ಪಕ್ಕಿಗಳುಮಂ ಲತೆಯ ಪೊದಱ ಪುದುವಿಂ ಪೆಣೆದ ಮಣಲ್ದಾಣಂಗಳುಮಂ ಪಥಿಕರಱಲ್ಗೊಂಡು ತೋಡಿದಱುಂಬನೀರ ಬಗರಗೆಗಳುಮನೊಳಕೆಯ್ದ ಬತ್ತಿದ ಪಳ್ಳಂಗಳೊಳಮತಿರೌದ್ರಮಾದ ಪೇರಡವಿಯೊಳಗೆ ಬರ್ಪಾಗಳ್

ದೆಸೆದೆಸೆಯೊಳ್ ಪಸರಿಸುತಿರೆ
ಪೊಸತೊಂಡೆಯ ಪಣ್ಣ ಬಣ್ಣಮಂ ಮಸುಳಿಪ ಕೆಂ
ಬಿಸಿಲ ಮಿಸುಪಿನಿಸು ಪಡುವಣ
ದೆಸೆಗವಲಂಬಿಸಲೊಡರ್ಚಿದತ್ತಿನಬಿಂಬಂ       ೧

ದಿನಕೃದ್ಬಿಸುರದ್ದರ್ಪಣಕಲಿತಕರಾಳತ್ರಿಶೂಲಂ ಕನತ್ಕಾಂ
ಚನ ಚಂದ್ರಾರ್ಧಾವಳೀಪ್ರಾಂಚಿತ ಶಿಖರಮಯಶೃಂಖಲಾಬದ್ಧ ಘಂಟಾ
ಘನಘೋಷಂ ರಕ್ತಸಿಕ್ತಾಸಿತಚಮರರುಹೋಚ್ಚಾವಚೂಲಂ ಬೃಹಚ್ಚಂ
ದನಶಾಖಾಬದ್ಧ ರಕ್ತಧ್ವಜವಿನಿಸಿನಿಸುಂ ಕಾಣಲಾದತ್ತದಾಗಳ್     ೨

ವ|| ಅಂತಾ ಧ್ವಜಮಂ ಕಂಡದನೆಯ್ದೆವಂದು ಲೋಹದ ತೋರಗಂಭಗಳೊಳಗೆ ಮುರಿಗೇಶದಿನೆಸೆವ ಶಬರರ ತಲೆಗಳೋಳಿಯಂತೆ ರಕ್ತಚಾಮರಂಗಳನೊಳಕೆಯ್ದ ಕರ್ಬೊನ್ನ ಕನ್ನಡಿಯ ತೋರಣಂಗಳೊಳಮಗುರ್ವಿಸುವ ಚಂಡಿಕಾಗೋಪುರದ್ವಾರಪುರೋಭಾಗದೊಳ್ ಚಂದ್ರಚೂಡಾಹ್ವಯನಿಂದ್ರಾಯುಧದಿಂದವನಿತಳಕ್ಕವತರಿಸಿ ಪುಗುವಲ್ಲಂಜನಶಾಲಾವೇದಿಕೆಯೊಳ್ ನೆತ್ತರಿಂ ಪೊರೆದ ಕೆಯ್ಗಳಿಂ ಜವನಪ್ಪಳಿಸಿದಂತಿರ್ದ

ವ|| ಹಾಗೆ ಹೊರಟು ಪ್ರಯಾಣಮಾಡುತ್ತಾ ಬುಡದಲ್ಲಿ ಚರ್ಮದ ಹಗ್ಗದ ಅಳತೆಯನ್ನೂ ಮೀರಿ ( ಬಹಳ ದಪ್ಪನಾಗಿರುವುದರಿಂದ ಕುದುರೆಗಳನ್ನು ಕಟ್ಟಲು ಹಗ್ಗ ಬಿಗಿಯಲು ಆಗದಿರುವ) ಬಹಳ ದಪ್ಪವಾಗಿ ಬೆಳೆದಿರುವ ಹೆಮ್ಮರಗಳ ಗುಂಪುಗಳಿಂದಲೂ, ಕಾಡಾನೆಗಳು ತಳ್ಳಿ ಕಿತ್ತುಹಾಕಿರುವುದರಿಂದ ದಾರಿಗೆ ಅಡ್ಡಲಾಗಿ ಬಿದ್ದಿರುವ ಮರಗಳ ದೆಸೆಯಿಂದ ಬಳಸು ಬಳಸಾದ ದಾರಿಗಳಿಂದಲೂ, ದೊಡ್ಡ ದೊಡ್ಡ ಮರಗಳ ಬುಡದಲ್ಲಿ ಕೊರೆದಿರುವ ವನದುರ್ಗಾದೇವಿಯ ಪ್ರತಿಮೆಗಳಿಂದಲೂ, ಬೆರಗನ್ನುಂಟುಮಾಡುವ ಮತ್ತು ದಡವನ್ನೇ ಅನುಸರಿಸಿ ದಟ್ಟವಾಗಿ ಬೆಳೆದಿರುವ ಹುಲುಗಿಲಿಮರದ (ಕರಂಜ ವೃಕ್ಷ) ಹೂಗೊಂಚಲುಗಳಿಂದಲೂ, ದಾರಿಗರು ಆಯಾಸ ಪರಿಹಾರ ಮಾಡಿಕೊಂಡಿರುವುದನ್ನು ಸೂಚಿಸುವ ಬಾಡಿದ ಚಿಗಿರುಗಳ ಹಾಸಿಗೆಗಳಿಂದಲೂ ಕೂಡಿಕೊಂಡಿರುವ ಮತ್ತು ಎಲೆಗಳು ಬಿದ್ದು ಕೊಳೆತು ಬಣ್ಣಬಣ್ಣವನ್ನು ಹೊಂದಿರುವ ನೀರುಳ್ಳ, ದಾರಿಗರು ನೀರು ಸೇದುವುದಕ್ಕಾಗಿ ಮಾಡಿಕೊಂಡಿದ್ದು ಮರದ ತುದಿಗೊಂಬೆಗಳಿಗೆ ಕಟ್ಟಿ ಹೋಗಿರುವ ಮಡಕೆಯೊಂದಿಗಿರುವ ಹುಲ್ಲಿನ ಉಕ್ಕಡಗಳಿಂದ ಗೊತ್ತುಹಚ್ಚಬಹುದಾದ ಕಾಡಿನ ಹಳೆಬಾವಿಗಳಿಂದಲೂ, ಒಂದೇಸಮನೆ ಹೂವಿನ ರಸವನ್ನು ಸುರಿಸುವ ಹೂವುಗಳ ಗುಂಪಿನಿಂದ ದಟ್ಟವಾದ ಲಕ್ಕಿಮರದ ಸಾಲುಗಳಿಂದ ನಸುಬಿಳುಪಾದ ದಡಗಳುಳ್ಳ, ಮರದ ತುದಿಗೊಂಬೆಗಳಲ್ಲಿ. ಧ್ವನಿಮಾಡುತ್ತಿರುವ ಹಕ್ಕಿಗಳುಳ್ಳ, ಬಳ್ಳಿಯ ಪೊದರುಗಳ ಸಮೂಹದಿಂದ ಹೆಣೆದುಕೊಂಡಿರುವ ಮರಳುನೆಲಗಳುಳ್ಳ, ದಾರಿಗರು ಬಾಯಾರಿಕೆಯ ಪರಿಹಾರಕ್ಕಾಗಿ ತೋಡಿದ ಚಿಲುಮೆನೀರಿನ ಬಾವಿಗಳನ್ನು ಒಳಕೊಂಡಿರುವ ಬತ್ತಿದ ಕಿರುಹೊಳೆಗಳಿಂದ ಕೂಡಿದ ಭಯಂಕರವಾದ ದೊಡ್ಡಕಾಡಿನಲ್ಲಿ ಬರುತ್ತಿದ್ದನು. ೧. ಹೊಸದಾದ ತೊಂಡೆಯಹಣ್ಣಿನ ಬಣ್ಣವನ್ನು ಕಳೆಗುಂದಿಸುವ (ತೊಂಡೆಯ ಹಣ್ಣಿನಂತೆ ಕೆಂಪಾದ) ಕೆಂಬಿಸಿಲು ದಿಕ್ಕುದಿಕ್ಕುಗಳಲ್ಲೆಲ್ಲಾ ಹರಡುತ್ತಿರಲಾಗಿ ಸೂರ್ಯಮಂಡಲವು ಪಶ್ಚಿಮದಿಕ್ಕನ್ನು ಸೇರಲು ಪ್ರಾರಂಭವಾಯಿತು. ೨. ಆಗ ದೊಡ್ಡದಾದ ಗಂಧದ ಮರದ ಕೊಂಬೆಗೆ ಕಟ್ಟಿದ್ದ ಒಂದು ಕೆಂಬಣ್ಣದ ಬಾವುಟ ಸ್ವಲ್ಪ ಸ್ವಲ್ಪ ಕಣ್ಣಿಗೆ ಬೀಳುತ್ತಿತ್ತು. ಅದು ಸೂರ್ಯಬಿಂಬದಂತೆ ಪ್ರಕಾಶಿಸುವ ಕನ್ನಡಿಯಿಂದಲೂ ಭಯಂಕರವಾದ ತ್ರಿಶೂಲದಿಂದಲೂ ಕೂಡಿಕೊಂಡಿತ್ತು. ಮತ್ತು ಅದರ ತುದಿಯಲ್ಲಿ ತಳತಳಿಸುವ ಚಿನ್ನದಿಂದ ಮಾಡಿದ ಅರ್ಧಚಂದ್ರಪ್ರತಿಮೆಗಳು ಶೋಭಿಸುತ್ತಿದ್ದುವು. ಅದರ ಮೇಲೆ ಕಬ್ಬಿಣದ ಸರಪಣಿಗೆ ಬಿಗಿದಿರುವ ಘಂಟೆಯು ದೊಡ್ಡದಾಗಿ ದನಿಗೈಯ್ಯುತ್ತಿತ್ತು. ಮತ್ತು ಅದು ಅಲಂಕಾರಕ್ಕಾಗಿ ಕಟ್ಟಿರುವ ನೇಲುವ ಕುಚ್ಚುಳ್ಳ ರಕ್ತದಿಂದ ತೊಯಿದ ಕರಿಯ ಚಾಮರದಿಂದ ಕೂಡಿಕೊಂಡಿತ್ತು. ವ|| ಆ ಧ್ವಜವನ್ನು ಕಂಡು ಹತ್ತಿರಕ್ಕೆ ಬಂದನು. ಅಲ್ಲಿ ಕಬ್ಬಿಣದ ಹೆಬ್ಬಾಗಿಲಲ್ಲಿ ಗುಂಗುರುಕೂದಲುಗಳಿಂದ ಶೋಭಿಸುವ ಬೇಡರ ತಲೆಗಳ ಸಾಲುಗಳೊ ಎಂಬಂತಿರುವ ಕೆಂಬಣ್ಣದ ಚಾಮರಗಳನ್ನು ಹೊಂದಿರುವ, ಕಬ್ಬಿಣದ ಕನ್ನಡಿಗಳ ತೋರಣಗಳಿಂದ ಶೋಭಿಸುವ, ಚಂಡಿಕಾಲಯದ ಹೆಬ್ಬಾಗಿಲಿನ ಮುಂದೆ ಚಂದ್ರಾಪೀಡನು ಇಂದ್ರಾಯುಧದಿಂದ ನೆಲಕ್ಕಿಳಿದು ಒಳಹೊಕ್ಕನು. ಅಲ್ಲಿ ಕಪ್ಪು ಶಿಲೆಯ ವೇದಿಕೆಯ

ರಕ್ತಚಂದನಚರ್ಚೆಗಳಂ ನೆತ್ತರೆಗೆತ್ತು ನೆಕ್ಕುವ ಬಳ್ಳುಗಳುಮನತಿರೌದ್ರದೇಹನಪ್ಪ ಲೋಹದ ಮಹಾಮಹಿಷನುಮನೊಂದೊಂದೆಡೆಯೊಳ್ ಬೇಡರರ್ಚಿಸಿದ ಕಾಡೆಮ್ಮೆವೋರಿಗಳ ಕಣ್ಗಳಂತಿರ್ದ ರಕ್ತೋತ್ಪಲಂಗಳು ಮನೊಂದೊಂದೆಡೆಯೊಳ್ ಸಿಂಗದುಗುರ್ಗಳಿನರ್ಚಿಸಿದಂತಿರ್ದ ಕೆನ್ನಗಸೆಯ ಮುಗುಳ್ಗಳುಮನೊಂದೊಂದೆಡೆಯೊಳ್ ಕಾಡೆಮ್ಮೆವೋರಿಗಳ ತಿಂತಿಣಿಯುಮನೊಂದೊಂದೆಡೆಯೊಳ್ ಕೊಯ್ದಿರ್ದ ನಾಲಗೆಯ ರಾಶಿಗಳು ಮನೊಂದೊಂದೆಡೆಯೊಳ್ ಕಳೆದಿರ್ದ ಕಣ್ಣಾಲಿಗಳ ಪುಂಜಂಗಳು ಮನೊಂದೊಂದೆಡೆಯೊಳರಿ ದಿಕ್ಕಿದ ಪಂದಲೆಗಳ ಸಂದಣಿಗಳುಮಂ ಕೊಂಬುಕೊಂಬುದಪ್ಪದೆಱಗಿದ ರಕ್ತಕುಕ್ಕುಟಂಗಳಿಂ ಭಯದೊಳಕಾಲಕುಸುಮಸ್ತಬಕಮಂ ತೋಱುವಂತಿರ್ದ ರಕ್ತಾಶೋಕಾನೋಕಹಂಗಳುಮಂ ಶಂಕಾಜ್ವರಕಂಪಿತಮೆನಿಸಿದ ಕದಳಿಕಾವನಮುಮಂ ಚಂಡಿಕಾಪರಿಗ್ರಹಪ್ರಚಂಡಂಗಳಪ್ಪ ಕೀಶೋರಕೇಸರಿಗಳುಮನವಲೋಕಿಸುತ್ತಂ ಪೋಗೆವೋಗೆ

ನೆಗೆದೆತ್ತಂ ಧೂಪಧೂಮಂ ಪಸರಿಸೆ ನಸುಗಂದಿರ್ದ ಕೆಂಬಟ್ಟೆಯಿಂ ಗಂ
ಟೆಗಳಿಂ ಮಾಯೂರಕಂಠಾವಳಿಯಿನೆಸೆದಿರಲ್ ತೋರಣಂ ಕೂಡೆ ಕಣ್ಗು
ಬ್ಬೆಗಮಂ ತಾಳ್ದಿರ್ದ ದಂತಾರ್ಗಳಕಲಿಕ ಕವಾಟಂಗಳಿಂ ಚಂಡಿಕಾಗ
ರ್ಭಗೃಹದ್ವಾರಪ್ರದೇಶಂ ಜನಪನ ಬಗೆಗಾಶ್ಚರ್ಯಮಂ ಮಾಡಿತಾಗಳ್     ೩

ವ|| ಅದಂ ನೋಡುತ್ತೆ ಪೋಗೆವೋಗೆ

ಲಲಿತ ರಗಳೆ|| ಕರಿಗೊರಡನುಡುವಡರ್ದವೆನಿಪ ಸೆರೆಗಾಲ್ಗಳಿಂ
ಬಿಡದೆ ಪೊಡೆವಡೆ ದಡ್ಡುಗಟ್ಟಿದ ನೊಸಲ್ಗಳಿಂ
ಕುಮತಿ ಸಿದ್ಧಾಂಜನದಿನೊಡೆದೊಂದು ಕಣ್ಗಳಿಂ
ತಱದುಕೊಳೆ ದೋಣಿವೋಗಿರ್ದ ಪೆರ್ಬುಣ್ಗಳಿಂ

ಕೆಮ್ಮನಿಟ್ಟಿಗೆಗಳಿಂದಿಡಲುಡಿದ ಕೆಯ್ಗಳಿಂ
ಸೆರೆದೆಗೆಯ ಸೂಜಿಯಿಂ ಪೊಲ್ತಿರ್ದ ಕೈಯ್ಗಳಿಂ
ಅಱಯದೆಸಗಿದ ರಸಾಯನದ ಸೇವನೆಯಿಂದೆ
ಭೋಂಕೆನಲಕಾಲದೊಳ್ ಸಂಸಿದ ಜರೆಯಿಂದೆ
ಧೂಮರಕ್ತಾಲಕ್ತಕಂಗಳ ರಸಂಗಳಿಂ
ಬರೆದ ಬಹುಕುಹಕ ಮಂತ್ರದ ಪುಸ್ತಕಂಗಳಿಂ
ಯಕ್ಷಿಣಿಯರಂ ಬಯಸಿ ಮಾಡುವ ಜಪಂಗಳಿಂ
ಬಿಲದುರ್ಗಮಂ ಪೊಕ್ಕು ಪಡೆವ ಶಾಪಂಗಳಿಂ

ಮೇಲೆ ಪ್ರತಿಷ್ಠಿಸಿರುವ ಬಹಳ ಭಯಂಕರವಾದ ಆಕಾರವುಳ್ಳ ಕಬ್ಬಿಣದ ಕೋಣನ ಪ್ರತಿಮೆಯನ್ನು ಕಂಡನು. ಅದರ ಬೆನ್ನ ಮೇಲೆ ಕೆಂಬಣ್ಣದ ಹಸ್ತಚಿಹ್ನೆಗಳನ್ನು ಹಾಕಿದ್ದರು. ಅದು ಯಮನು ಬೇಗ ಹೋಗುವಂತೆ ತನ್ನ ರಕ್ತಸಿಕ್ತವಾದ ಕೈಗಳಿಂದ ಅದರ ಬೆನ್ನನ್ನು ತಟ್ಟಿದ್ದಾನೋ ಎಂಬಂತೆ ಕಾಣುತ್ತಿತ್ತು! ಆ ಕೆಂಪು ಹಸ್ತಚಿಹ್ನೆಗಳನ್ನು ರಕ್ತವೆಂದು ಭ್ರಮಿಸಿ ನರಿಗಳು ನೆಕ್ಕುತ್ತಿದ್ದುವು. ಮತ್ತೊಂದು ಕಡೆಯಲ್ಲಿ ಬೇಡರು ದೇವರಿಗೆ ಒಪ್ಪಿಸಿದ ಕಾಡುಕೊಣಗಳ ಕಣ್ಣುಗಳಂತಿರುವ ಕೆಂಪುಕಮಲಗಳಿದ್ದುವು. ಮತ್ತೊಂದು ಕಡೆಯಲ್ಲಿ ದೇವಿಗೆ ಅರ್ಪಿಸಲು ತಂದಿರುವ ಸಿಂಹದ ಉಗುರುಗಳಂತಿದ್ದ ಕೆಂಪು ಅಗಸೆಯ ಹೂವುಗಳಿದ್ದುವು. ಮತ್ತೊಂದು ಕಡೆಯಲ್ಲಿ ದೇವಿಗೆ ಬಲಿಗೊಡಲು ತಂದಿರುವ ಕಾಡುಕೋಣಗಳ ಗುಂಪಿದ್ದಿತು. ಇನ್ನೊಂದು ಕಡೆಯಲ್ಲಿ ಕೊಯ್ದಿದ್ದ ನಾಲಿಗೆಗಳ ರಾಶಿಯಿದ್ದಿತು. ಬೇರೊಂದು ಕಡೆ ಕಿತ್ತು ತೆಗೆದಿದ್ದ ಕಣ್ಣುಗುಡ್ಡೆಗಳ ಗುಂಪಿದ್ದಿತು. ಒಂದು ಕಡೆ ಕತ್ತರಿಸಿ ಒಟ್ಟಿರುವ ಹಸಿತಲೆಗಳ ಸಮೂಹವಿದ್ದಿತು. ಅಂಗಳದಲ್ಲಿದ್ದ ಕೆಂಪು ಅಶೋಕವೃಕ್ಷದ ಕೊಂಬೆಕೊಂಬೆಗಳಲ್ಲೂ ಕೆಂಪುಕೋಳಿಗಳು (ನಾಯಿಗಳ ಭಯದಿಂದ) ಏರಿ ಕುಳಿತಿದ್ದುವು ! ಅದರಿಂದ ಆ ಮರವು ಆಗ ಹೂವಿನ ಗೊಂಚಲುಗಳನ್ನು ಬಿಟ್ಟಿದೆಯೊ ಎಂಬಂತೆ ತೋರುತ್ತಿತ್ತು ! ತಮ್ಮನ್ನೆಲ್ಲಿ ಬಲಿಕೊಡುತ್ತಾರೋ ಎಂಬ ಹೆದರಿಕೆಯಿಂದ ಉಂಟಾದ ಜ್ವರದಿಂದಲೋ ಎಂಬಂತೆ ಅಲ್ಲಿನ ಬಾಳೆಗಿಡಗಳು ಗಾಳಿಯಿಂದ ತೊನೆದಾಡುತ್ತಿದ್ದುವು. ಚಂಡಿಕಾದೇವಿಯು ತಮ್ಮ ಜಾತಿಯ ಸಿಂಹವೊಂದನ್ನು ವಾಹನ ಮಾಡಿಕೊಂಡಿರುವ ಜಂಭದಿಂದಲೋ ಎಂಬಂತೆ ಸಿಂಹದ ಮರಿಗಳು ಸ್ವೇಚ್ಛೆಯಾಗಿ ಓಡಾಡುತ್ತಿದ್ದುವು. ಇವುಗಳೆನ್ನೆಲ್ಲ ನೋಡುತ್ತಾ ಮುಂದೆ ಹೋಗಲಾಗಿ ೩. ಧೂಪದ ಹೊಗೆಯು ಮೇಲಕ್ಕೇರಿ ಹರಡುತ್ತಿರಲು ಮಾಸಲಾಗಿದ್ದ ಕೆಂಪುಬಟ್ಟೆಯಿಂದಲೂ ಗಂಟೆಗಳಿಂದಲೂ ನವಿಲುಗಳ ಕೊರಳುಗಳನ್ನು ಪೋಣಿಸಿ ಕಟ್ಟಿರುವ ಮಾಲಿಕೆಯಿಂದಲೂ ತೋರಣವನ್ನು ಕಟ್ಟಿದ್ದ, ಕಣ್ಣಿಗೆ ಭಯವನ್ನುಂಟುಮಾಡುವ ದಂತದ ಅಗಳಿಗಳಿಂದ ಕೂಡಿದ ಬಾಗಿಲುಳ್ಳ ಆ ಚಂಡಿಕಾದೇವಾಲಯದ ಗರ್ಭಗೃಹದ್ವಾರಪ್ರದೇಶವು ಚಂದ್ರಾಪೀಡನ ಮನಸ್ಸಿಗೆ ಬಹಳ ಆಶ್ಚರ್ಯವನ್ನುಂಟುಮಾಡಿತು. ವ|| ಅದನ್ನು ನೋಡುತ್ತ ಮುಂದೆ ಹೋಗಲು ೪. ಲಲಿತರಗಳೆ|| ದ್ರಾವಿಡ ದೇಶದಿಂದ ಬಂದಿರುವ ವೃದ್ಧರಾದ ಉಪಾಸಕರನ್ನು ಕಂಡನು. ಅವರು ಹೇಗಿದ್ದರೆಂದರೆ; ನರಗಳು ಉಡಿದುಕೊಂಡಿರುವ ಅವರ ಕಾಲುಗಳು ಉಡು ಹತ್ತಿರುವ ಸುಟ್ಟು ಕಪ್ಪಾದ ಮರದ ಕೊರಡಿನಂತೆ ಕಾಣುತ್ತಿದ್ದುವು ! ನಮಸ್ಕಾರ ಮಾಡುವಾಗ ನೆಲಕ್ಕೆ ಹೊಡೆದು ಹೊಡೆದೂ ಅವರ ಹಣೆ ಜಡ್ಡು ಕಟ್ಟಿಕೊಂಡಿತ್ತು. ಮೋಸಗಾರರಾದ ವೈದ್ಯರು ಮಾಡಿಕೊಟ್ಟ ಕಣ್ಣುಕಪ್ಪನ್ನು ಉಪಯೋಗಿಸಿದ್ದರಿಂದ ಅವರ ಒಂದು ಕಣ್ಣು ಹಾಳಾಗಿಹೋಗಿತ್ತು. ದೇವಿಗೆ ತಮ್ಮ ರಕ್ತವನ್ನು ಒಪ್ಪಿಸುವುದಕ್ಕಾಗಿ

ಶ್ರೀಪರ್ವತಾದ್ಭುತ ಕಥಾಪ್ರಕಥನಂಗಳಿಂ
ಜಧ್ವಗೋದ್ವೇಗಕರ ವೀಣಾಸ್ವನಂಗಳಿಂ
ಲಿಖಿತ ದುರ್ಗಾಸ್ತೋತ್ರ ಪಟ್ಟಿಕಾವ್ರಾತದಿಂ
ತಲೆದೂಗಿ ಬಿಕ್ಕಿರಿವವೊಲ್ಮೊರೆವ ಗೀತದಿಂ
ವಿಧೃತ ತುರಗಬ್ರಹ್ಮಚರ್ಯಯಯ ಮಸಕದಿಂ
ಮುದುಪರೆಳವೆಂಡಿರಂ ಬಯಸಿಪೊಂದೆಸಕದಿಂ
ಬಿಡದೆ ಪಥಿಕರ್ಕರೊಳ್ ಪೋರ್ದುಡಿದ ಬೆಂಗಳಿಂ
ಪೂಮರನನೇಱ ಕೆಡೆದುಡಿದವಯವಂಗಳಿಂ
ಕೆಣಕಿ ಗೋವುಗಳೊದೆಗೆ ಬೆನ್ನೊಳತಿಕೋಪದಿಂ
ಪರಿದೆಡಪಿ ಕೆಡೆದುಡಿದ ಪುಸ್ತಕಕಳಾಪದಿಂ
ಬಿಡೆ ಬಾದುಗೆಯ್ದೊಡರಿಸುವ ತಮ್ಮ ಕಡುಪಿಂದೆ
ಓರೊರ್ವರಂ ತಿವಿಯೆ ನೆಗ್ಗಿರ್ದ ಕದಪಿಂದೆ
ಹಾಸ್ಯ ಬೀಭತ್ಸಾದಿ ನಾನಾರಸಂಗಳಿಂ
ದೊಂದಿದ ಜರದ್ದ ವಿಳ ಧಾರ್ಮಿಕಜನಂಗಳಿಂ
ಬೆಳಸಿ ನೆರೆಬೆಳೆದ ನಿಡುಧೂಪಧೂಮಂಗಳಿಂ
ಪರಶು ಪಟ್ಟಸ ಮಂಡಲಾಗ್ರಧಾಮಂಗಳಿಂ
ಪಾತಾಳಗುಹೆಯೊಳಗೆ ತೋಱುವಂತಿರ್ದಳಂ
ಕೃಷ್ಣಚಾಮರಚಯಂ ಪೊಳೆಲೊಪ್ಪಿರ್ದಳಂ
ರಕ್ತಚಂದನಕುಸುಮಕಲಿಕಾಸಮೂಹದಿಂ
ಪ್ರಾಲಂಬರಕ್ತಾಮ್ರಗುಚ್ಛಸಂದೋಹದಿಂ
ಕನಕಪಟ್ಟಗ್ರಥಿತ ಪೃಥುಫಾಲಫಲಕದಿಂ

ದೇಹವನ್ನು ಇರಿದುಕೊಳ್ಳುವುದರಿಂದ ಕುಳಿಬಿದ್ದುಹೋಗಿದ್ದ ದೊಡ್ಡ ಹುಣ್ಣುಗಳು ಮೈಮೇಲೆ ಕಾಣುತ್ತಿದ್ದುವು ! (ವಾಯುರೋಗಪರಿಹಾರಕ್ಕಾಗಿ) ಸಮ್ಮನೆ ಇಟ್ಟಿಗೆಯ ಶಾಖವನ್ನು ಕೊಡುವಾಗ ಅಕ್ರಮವಾಗಿ ಕೊಟ್ಟಿದ್ದರಿಂದ ಅವರ ಒಂದು ತೋಳಿನ ಚಲನೆಯೇ ಉಡುಗಿಹೋಗಿದ್ದಿತು ! ಮತ್ತೊಂದು ಕೈಯಲ್ಲಿ ನರಗಳು ಸೆಳೆದುಕೊಂಡಿರಲು ಸೂಜಿಯಿಂದ ಹೊಲೆದುಕೊಂಡಿದ್ದರು. ತಿಳಿಯದೆ ಯಾವುದೋ ರಸಾಯನವನ್ನು ತಿಂದುದರಿಂದ ಅವರಿಗೆ ಅಕಾಲದಲ್ಲಿ ಮುಪ್ಪು ಅಡಸಿತ್ತು. ಅರಗಿನ ರಸದಿಂದ ಬರೆದು ಹೊಗೆ ಹಾಕಿಟ್ಟುಕೊಂಡಿರುವ ಅನೇಕ ಬಗೆಯ ಇಂದ್ರಜಾಲಮಂತ್ರದ ಪುಸ್ತಕಗಳು ಅವರಲ್ಲಿದ್ದುವು. ಯಕ್ಷಿಣಿಗಳನ್ನು ಕೈವಶಪಡಿಸಿಕೊಳ್ಳಲು ಅವರು ಅನೇಕ ಜಪಗಳನ್ನು ಮಾಡಿದ್ದರು, (ಪಾತಾಳಲೋಕಕ್ಕೆ ಹೋಗಿ ರಾಕ್ಷಸನನ್ನು ಕೈವಶಪಡಿಸಿಕೊಳ್ಳಬೇಕೆಂಬ ಹುಚ್ಚಿನಿಂದ) ದುರ್ಗಮವಾದ ಗುಹೆಗಳಿಗೆ ನುಗ್ಗಿ ಅಲ್ಲಿ ತಪಸ್ಸು ಮಾಡುತ್ತಿರುವ ಯೋಗಿಗಳಿಂದ ಶಾಪ (ನಿಂದೆ)ವನ್ನು ಪಡೆಯುತ್ತಿದ್ದರು. ಅಲ್ಲದೆ ಶ್ರೀಶೈಲದಲ್ಲಿ ಸಿದ್ಧಿ ಪಡೆದ ಸಾಧಕರ ಅದ್ಭುತವಾದ ಬಗೆಬಗೆಯ ದಂತಕಥೆಗಳನ್ನು ಬಣ್ಣಿಸುವುದರಲ್ಲಿ ನಿಸ್ಸೀಮರಾಗಿದ್ದರು. ಅಪಸ್ವರದಿಂದ ವೀಣೆಯನ್ನು ಬಾರಿಸುತ್ತ ದಾರಿಗರಿಗೆಲ್ಲ ಬಹಳ ಬೇಜಾರನ್ನುಂಟುಮಾಡುತ್ತಿದ್ದರು. ದುರ್ಗಾಸ್ತೋತ್ರಗಳನ್ನು ಬರೆದಿರುವ ತಾಳೆಗರಿಗಳ ದೊಡ್ಡ ಸಂಗ್ರಹವೇ ಅವರಲ್ಲಿತ್ತು. ಸೊಳ್ಳೆಯಂತೆ ಗುಂಯ್ ಗುಂಯ್ ಗುಟ್ಟುತ್ತಾ ತಲೆಯನ್ನು ತೂಗಿ ತೂಗಿ ಕುರುಪದಗಳನ್ನು ಹಾಡುತ್ತಿದ್ದರು. ಅವರು ತಾಳಿದ್ದ ತುರಗಬ್ರಹ್ಮಚರ್ಯದ (ಹೆಣ್ಣು ಕೊಡುವವರಿಲ್ಲದುದರಿಂದ ಗತಿಯಿಲ್ಲದೆ ಬ್ರಹ್ಮಚಾರಿಯಂತಿರುವುದು) ಪ್ರಭಾವದಿಂದ ಮುದುಕರ ಹೆಂಡತಿಯಾದ ತರುಣಿಯರನ್ನು ಕಾಮಿಸುವ ಚಟವನ್ನಿಟ್ಟುಕೊಂಡಿದ್ದರು. ದೇವಾಲಯಕ್ಕೆ ಬಂದ ದಾರಿಗರೊಡನೆ ಕೀಟಲೆ ಮಾಡಿದಾಗ ನಡೆದ ಹೊಡೆದಾಟದಿಂದ ಅವರ ಬೆನ್ನು ಒಡೆದುಹೋಗಿದ್ದಿತು ! ಹಸುಗಳನ್ನು ಹಿಂದುಗಡೆ ಕೆಣಕಲಾಗಿ ಅವು ಕೋಪದಿಂದ ಒದೆಯಲು, ಹಿಂದಕ್ಕೆ ಸರಿಯುವಾಗ ಪುಸ್ತಕಗಳನ್ನು ಎಡವಲು ಅವು ಕೆಳಗೆ ಬಿದ್ದು ಹರಿದುಹೋಗುತ್ತಿದ್ದುವು ! ಬಂದವರೊಂದಿಗೆ ಜಗಳವಾಡುವಾಗ ಉಂಟಾದ ಕ್ರೂರತನದ ತಿವಿದಾಟದಲ್ಲಿ ಇವರ ಕೆನ್ನೆಗಳು ಗಾಯಗೊಂಡಿದ್ದುವು ! ಹೀಗೆ ಅವರ ವೃತ್ತಾಂತವು ಹಾಸ್ಯ ಬೀಭತ್ಸ ಮೊದಲಾದ ರಸಗಳಿಗೆ ಆಸ್ಪದವಾಗಿದ್ದಿತು. ಇಂತಹ ದ್ರಾವಿಡರಾದ ಉಪಾಸಕಜನಗಳಿಂದ ಕೂಡಿಕೊಂಡಿರುವ ಚಂಡಿಕಾದೇವಿಯನ್ನು ಯುವರಾಜನು ಕಂಡನು. ಟಿ. ಮೂಲಕಾದಂಬರಿಯಲ್ಲಿ ಒಬ್ಬನೇ ಉಪಾಸಕನೆಂದು ಹೇಳಿದೆ. ನಾಗವರ್ಮನು ಮಾತ್ರ “ಧಾರ್ಮಿಕಜನಂಗಳಿಂ” ಎಂದಿದ್ದಾನೆ. ಆ ದೇವಿಯು ಮೇಲಕ್ಕೆ ಅಡರಿ ಗರ್ಭಗುಡಿಯಲ್ಲೆಲ್ಲ ಹರಡಿಕೊಂಡಿರುವ ಧೂಪದ ಹೊಗೆಯಿಂದಲೂ, ಕೈಯಲ್ಲಿ ಹಿಡಿದಿರುವ ಕೊಡಲಿ, ಈಟಿ ಮೊದಲಾದ ಆಯುಧಗಳ ಕಪ್ಪುಪ್ರಭೆಯಿಂದಲೂ ಆವೃತಳಾಗಿ ಪಾತಾಳಗುಹೆಯಲ್ಲಿ ನೆಲೆಸಿರುವಳೋ ಎಂಬಂತೆ ತೋರುತ್ತಿದ್ದಳು. ಕೆಂಪು ಗಂಧದ ಮರದ ಹೂವು ಮೊಗ್ಗುಗಳಿಂದಲೂ, ಕೆಂಬಣ್ಣದ ಮಾವಿನ ಎಲೆಯ ಗೊಂಚಲುಗಳಿಂದಲೂ ಕಟ್ಟಿರುವ ಇಳಿಬಿದ್ದಿರುವ ಮಾಲಿಕೆಯನ್ನು ಧರಿಸಿದ್ದಳು. ಚಿನ್ನದ ತಗಡನ್ನು ಜೋಡಿಸಿರುವ ವಿಶಾಲವಾದ

ಶಬರಕಾಂತಾರಚಿತ ಸಿಂಧೂರರತಿಲಕದಿಂ
ದಾಡಿಮೀಕುಸುಮಕೃತ ನವಕರ್ಣಪೂರದಿಂ
ರಕ್ತೋತ್ಪಲಪ್ರತಿಮ ನೇತ್ರವಿಸ್ತಾರದಿಂ
ಭ್ರುಕುಟಿಕುಟಿಲ ಭ್ರೂಲತಾ ಬಭ್ರುರೋಚಿಯಿಂ
ರುಚಿರ ತಾಂಬೂಲಾರುಣಾಧರ ಮರೀಚಿಯಿಂ
ಕೌಸುಂಭಶುಂಭದ್ದುಕೂಲಕಲಿತಾಂಗದಿಂ.
ಕಣ್ಗೆಸೆದು ತೋಱುವ ಕರಾಳತ್ರಿಭಂಗಿಯಿಂ
ರೌದ್ರಭಾವಂ ನೆಲಸಿ ನಿಲೆ ತನ್ನೊಳೆಸೆದಳಂ
ಮಾಕಳದೇವನಭಿಸಾರಿಕೆವೊಲೆಸೆದಳಂ
ಲಂಬಕೂರ್ಚಾಕಳಾಪಚ್ಛಾಗನಿಕರದಿಂ
ಸುರದಧರಪುಟಧವಳ ಮೂಷಕಪ್ರಕರದಿಂ
ಕೃಷ್ಣಾಜಿನಪ್ರಾವೃತೈಣ ನಿಕರಂಗಳಿಂ
ಸೊಡರ್ವಾವೆನಿಪ್ಪ ಪೆಡೆವಣಿಯ ಸರ್ಪಂಗಳಿಂ
ದಾರಾಧ್ಯಮಾನೆಯವೊಲಂತೆಸೆದು ತೋರ್ಪಳಂ
ಸಾಧಕಜನಾಭೀಷ್ಟಸಿದ್ಧಿಯಂ ಮಾೞ್ಪಳಂ
ಚಂಡಿಕಾದೇವಿಯಂ ಕಂಡನುರ್ವೀಶ್ವರಂ
ಸದ್ಭಕ್ತಿಪೂರ್ವಂ ಪ್ರತಾಪಲಂಕೇಶ್ವರಂ                     ೪

ವ|| ಅಂತು ಕಂಡು ಪೂಜಾಪುರಸ್ಸರಂ ಪೊಡಮಟ್ಟು ಕೃತಪ್ರದಕ್ಷಿಣನಾಗಿ ನಮಸ್ಕಾರಂಗೆಯ್ದು ತದನಂತರಂ ಬೀಡಂ ಬಿಡಲ್ವೇೞ್ದಲ್ಲಿಯ ಮೂರ್ಖದ್ರವಿಡಧಾರ್ಮಿಕಜನಂಗಳಂ ಜನ್ಮ ಭೂಮಿಜಾತಿವಿದ್ಯಾಕಳತ್ರಮುಮಂ ತಪೋನಿಮಿತ್ತಮುಮಂ ಹಾಸವಿಳಾಸಂ ಬೆಸಗೊಳ್ವುದುಮವಂದಿರ್ ಪಸರಂಬಡೆದು ತಂತಮ್ಮ ಕಲಿತರೂಪಶೌರ್ಯವಿಭವಂಗಳಂ ವಾಚಾಲರಾಗಿ ಬಣ್ಣಿಸುತ್ತಮಿರೆ ವಿರಹವಿಧುರಹೃದಯನಾಗಿಯುಮವಂ ಕೇಳುತ್ತಂ ಕಿೞದುಂಪೊೞ್ತು ಕಳೆದುಮವಂ ದಿರ್ಗಳ್ಗುಪಜಾತಪರಿಚಯದಿಂ ತಂಬುಲಂಗುಡಲ್ವೇೞ್ದಲ್ಲಿಂದಮೆೞ್ದು ಬೀಡಿಂಗೆವಂದು ನೇಸರ್ ಪಡಲೊಡಂ ಕೃತಸಂಧ್ಯಾವಂದನನಾಗಿ ಕಿೞದುಬೇಗಮೋಲಗಂಗೊಟ್ಟರ್ದು ಸಕಲ ರಾಜಲೋಕಮಂ ವಿಸರ್ಜಿಸಿ ಸೆಜ್ಜೆಗೆ ಬಿಜಯಂಗೆಯ್ದು ಪಸಾಯಿತರೊಳಂ ನುಡಿಯದುನ್ಮೀಲಿ ತಲೋಚನನಾಗಿ ಗಂಧರ್ವರಾಜನಂದನೆಯಿರ್ದ ಹೇಮಕೂಟಮಂ ನೆನೆಯುತ್ತಮಿರ್ದಾಯಿರುಳಂ ಕಳೆದು ಪ್ರಭಾತ ಸಮಯದೊಳಖಿಲ ದ್ರವಿಡಧಾರ್ಮಿಕಜನಂಗಳ್ಗುಡಲಂ ತೊಡಲುಂ ಕೊಟ್ಟು ಚಂಡಿಕಾದೇವಿಯಂ ಬೀೞ್ಕೊಂಡು ರಮಣೀಯಪ್ರದೇಶಂಗಳೊಳ್

ಹಣೆಯಿಂದಲೂ, ಆ ಹಣೆಗೆ ಬೇಡತಿಯರು ಇಟ್ಟಿರುವ ಚಂದ್ರದ ಬೊಟ್ಟಿನಿಂದಲೂ, ದಾಳಿಂಬಿಹೂವಿನಿಂದ ಮಾಡಿರುವ ಕಿವಿಯೋಲೆಯಿಂದಲೂ, ಕೆಂದಾವರೆಯಂತಿರುವ ಅಗಲವಾದ ಕಣ್ಣುಗಳಿಂದಲೂ ಶೋಭಿಸುತ್ತಿದ್ದರು. ಗಂಟಿಕ್ಕಿದ ಹಾಗೂ ವಕ್ರವಾದ ಕಂದುಬಣ್ಣದ ಹುಬ್ಬುಗಳಿಂದಲೂ, ತಾಂಬೂಲದಿಂದ ಕೆಂಬಣ್ಣವನ್ನು ತಾಳಿ ರಂಜಿಸುವ ತುಟಿಗಳಿಂದಲೂ ಶೋಭಿಸುತ್ತಿದ್ದರು. ಕುಸುಬೆಹೂವಿನಂತೆ ಕೆಂಪುಬಣ್ಣವುಳ್ಳ ಪಟ್ಟೆಸೀರೆಯುಡಿಸಿದ ಶರೀರದಿಂದಲೂ, ಒಪ್ಪಿತೋರುವ ಭಯಂಕರವಾದ ತ್ರಿಭಂಗಿಯಿಂದಲೂ ರೌದ್ರಭಾವವು ನೆಲೆಸಿರಲು, ಮಹಾಕಾಳೇಶ್ವರನನ್ನು ಅಭಿಸರಣ ಮಾಡಲು ಹೊರಟಿರುವವಳಂತೆ ತೋರುತ್ತಿದ್ದಳು. ನೀಳವಾದ ಗಡ್ಡಗಳುಳ್ಳ (ಋಷಿಗಳಂತಿರುವ) ಹೋತಗಳ ಗುಂಪಿನಿಂದಲೂ, (ಜಪ ಮಾಡುವುದಕ್ಕಾಗಿಯೋ ಎಂಬಂತೆ) ತುಟಿ ನಡುಗುತ್ತಿರುವ ಬಿಳಿ ಇಲಿಗಳ ಸಮೂಹದಿಂದಲೂ, (ಜಿಂಕೆ ಚರ್ಮವನ್ನು ಹೊದ್ದುಕೊಂಡು ಮುನಿಗಳಂತೆ ಕಾಣುವ) ಜಿಂಕೆಗಳಿಂದಲೂ, (ವ್ರತಕ್ಕಾಗಿ ದೀಪವನ್ನು ತಲೆಯ ಮೇಲೆ ಇಟ್ಟುಕೊಂಡಿರುವಂತೆ ಕಾಣುವ) ತಲೆಮಣಿಯಿಂದ ಕೂಡಿದ ಸರ್ಪಗಳಿಂದಲೂ ಸೇವಿಸಲ್ಪಡುವವಳಂತೆ ಸುತ್ತುವರಿಯಲ್ಪಟ್ಟಿದ್ದಳು. ಹೀಗೆ ಶೋಭಿಸುತ್ತಿರುವ ಮತ್ತು ಸಾಧಕರ ಇಷ್ಟಾರ್ಥವನ್ನು ನೆರವೇರಿಸುವ ಆ ಚಂಡಿಕಾಪರಮೇಶ್ವರಿಯನ್ನು ಪರಾಕ್ರಮಶಾಲಿಯಾದ ರಾಜಕುಮಾರನು ಭಕ್ತಿಪೂರ್ವಕವಾಗಿ ದರ್ಶನಮಾಡಿದನು. ವ|| ಹಾಗೆ ದರ್ಶನಮಾಡಿ ಆ ದೇವಿಗೆ ಅಡ್ಡಬಿದ್ದು ಪ್ರದಕ್ಷಿಣ ನಮಸ್ಕಾರವನ್ನು ಮಾಡಿದನು. ಬಳಿಕ ಅಲ್ಲಿಯೆ ಬಿಡಾರ ಮಾಡುವಂತೆ ಸೈನಿಕರಿಗೆ ಆಜ್ಞಾಪಿಸಿ, ಅಲ್ಲಿದ್ದ ಮುರ್ಖರಾದ ದ್ರಾವಿಡ ಸಾಧಕರನ್ನು ಅವರ ಊರು, ಜಾತಿ, ವಿದ್ಯೆ, ಹೆಂಡತಿ, ಮಕ್ಕಳು  –  ಮುಂತಾದ ವಿಷಯಗಳನ್ನೂ, ಮನೆ ಬಿಟ್ಟು ದುರ್ಗಾದೇವಿಯ ಉಪಾಸನೆಗೆ ಬರಲು ಕಾರಣವನ್ನೂ ಹಾಸ್ಯಚತುರನಾದ ರಾಜಕುಮಾರನು ಕೇಳಿದನು. ಆಗ ಅವರು ಸದರ ಸಿಕ್ಕಿತೆಂದು ತಮ್ಮ ತಮ್ಮ ರೂಪು ಶಕ್ತಿ ಸಾಹಸ ಮೊದಲಾದುವನ್ನು ನಿರರ್ಗಳವಾದ ಶೈಲಿಯಿಂದ ಬಣ್ಣಿಸುತ್ತಿರಲು ಕಾದಂಬರಿಯ ವಿರಹದಿಂದ ಖಿನ್ನಮನಸ್ಸುಳ್ಳವನಾದರೂ ವಿನೋದಕರವಾಗಿದ್ದುದರಿಂದ ಕೇಳುತ್ತ ಸ್ವಲ್ಪ ಕಾಲವನ್ನು ಕಳೆದನು. ಚೆನ್ನಾಗಿ ಪರಿಚಯವುಂಟಾದುದರಿಂದ ಅವರಿಗೆ ವೀಳೆಯವನ್ನು ಕೊಡುವಂತೆ ಆಜ್ಞಾಪಿಸಿ ಅಲ್ಲಿಂದ ಎದ್ದು ಬಿಡಾರಕ್ಕೆ ಬಂದನು. ಸೂರ್ಯನು ಮುಳುಗಲಾಗಿ ಸಂಧ್ಯಾವಂದನೆಯನ್ನು ಮಾಡಿ, ಸ್ವಲ್ಪಕಾಲ ದರ್ಬಾರು ನಡೆಸಿ ರಾಜರನ್ನೆಲ್ಲ ಕಳುಹಿಸಿ ಹಾಸಿಗೆಯಲ್ಲಿ ಮಲಗಿದನು. ಬಹಳ ಪ್ರೀತಿಪಾತ್ರರಾದವರೊಂದಿಗೂ ಮಾತನಾಡದೆ ಕಣ್ಣುಮುಚ್ಚಿಕೊಂಡು ಗಂಧರ್ವರಾಜಪುತ್ರಿಯಿದ್ದ ಹೇಮಕೂಟವನ್ನೇ ನೆನೆಸಿಕೊಳ್ಳುತ್ತಾ ಇದ್ದು ಆ ರಾತ್ರಿಯನ್ನು ಕಳೆದನು. ಬೆಳಗಿನ ಜಾವದಲ್ಲಿ ಅಲ್ಲಿದ್ದ ದ್ರವಿಡ

ಬೀಡಂ ಬಿಡುತುಂ ಕೆಲವಾನುಂ ದಿವಸದಿಂ ನಿಜರಾಜಧಾನಿಯಪ್ಪುಜ್ಜೈನಿಯಂ ಪೊಕ್ಕಾಕಸ್ಮಿಕಾಗಮನ ಸಂಜಾತಹರ್ಷರಾಗಿ ಪೌರಜನಂಗಳ್ ಪೊಡವಡುತಿರೆ ಭೋಂಕನೆ. ರಾಜಭವನಮನೆಯ್ದೆವರ್ಪಾಗಳ್
ಯುವರಾಜಂ ಬಂದೀಗಳ್
ತಮಂಗದಲ್ಲಿರ್ದನೆಂದು ಪರಮೋತ್ಸವದಿಂ
ತವತವಗೆ ಪರಿದು ಪರಿಜನ
ನಿವಹಂ ಬಿನ್ನವಿಸೆ ಕೇಳ್ದು ತಾರಾಪೀಡಂ        ೫

ಸುರಿಯುತ್ತಿರ್ದ್ದತ್ತು ಮುಕ್ತಾಫಲದ ಸರಿಗಳಂ ಕಲ್ಲಭೂಜಾತಮೆಂಬಂ
ತಿರಲೆತ್ತಂ ಹರ್ಷವಾರ್ಬಿಂದುಗಳುಗುತರೆ ಭೋರೆಂಬಿನಂ ಪಾಲ ಮುನ್ನೀರ್
ತೆರೆಯಂತಿರ್ದುತ್ತರೀಯಂ ನೆಲದೊಳಲೆಯಿಸುತ್ತಿರ್ದ ಮೂರ್ಧಾಭಿಷಿಕ್ತರ್
ಬೆರಸಾನಂದಾತಿಭಾರಾಲಸಪದನಿದಿರೊಳ್ ಬಂದನಾ ಸಾರ್ವಭೌಮಂ   ೬

ವ|| ಅಂತು ಬರ್ಪ ತನ್ನ ತಂದೆಯಂ ಕಂಡು ಕುದುರೆಯಿಂದಿೞದು ಪಲವೆಡೆ ಪೊಡವಡುತ್ತಮೆಯ್ದೆವಂದು ಕಾಲ ಮೇಲೆ ಮುೞದ ವಿನಯಾಭಿರಾವನಂ ತೆಗೆದು ತೞುಸಿ ಪರಸಿ ಕೆಲದೊಳ್ ಕುಳ್ಳಿರ್ದರಸುಮಕ್ಕಳೆಲ್ಲರುಮಂ ಪೊಡಮಡಿಸಿ ನಿಜಾಂತಪುರಕ್ಕೊಡಗೊಂಡುವೋಪುದುಂ ವಿಳಾಸವತಿಮಹಾದೇವಿ ಸಮಸ್ತಾಂತಪುರಪರಿವಾರಂಬೆರಸಿದಿರ್ವಂದು ಕೃತಪ್ರಣಾಮನಾದ ಮಗನಂ ಪರಸಿ ಸಕಲಮಂಗಳಾಚಾರಮಂ ಮಾಡಿ ತಂದು ಕುಳ್ಳಿರಿಸಿ ದಿಗ್ವಿಜಯಸಂಬಂಯಪ್ಪ ವಾರ್ತೆಯಂ ಕೇಳೆ ಪೇೞುತ್ತಂ ಕಿಱದುಬೇಗಮಿರ್ದು ವೈಶಂಪಾಯನಂ ಬೀಡನೊಡಗೊಂಡು ಬಂದಪನೆಂದಾರ್ಯಶುಕ ನಾಸಂಗೆ ಪೇೞ್ದು ನಿಜಜನನೀಗೃಹದೊಳ್ ಮಜ್ಜನ ಭೋಜನಾದಿಗಳಂ ಮನವಲ್ಲದ ಮನದೊಳಗೆ ಮಾಡಿ
ಬೈಗುಂಬೊೞ್ತಪ್ಪುದುಂ ನಿಜಭವನಕ್ಕೆ ಬಂದು
ಅರಮನೆಯುಮವಂತಿಯುಮು
ರ್ವರೆಯುಂ ರಾಜ್ಯಮುಮಿವೆಲ್ಲಮೇವುದೊ ಕಾದಂ
ಬರಿಯಿಲ್ಲದೆಂದು ೞರಹಾ
ತುರಹೃದಯಂ ನೃಪತನೂಭವಂ ಚಿಂತಿಸಿದಂ            ೭

ಧಾರ್ಮಿಕರಿಗೆ ಉಡಿಗೆ ತೊಡಿಗೆಗಳನ್ನು ಕೊಟ್ಟು ಚಂಡಿಕಾದೇವಿಯ ಸನ್ನಿಧಾನದಿಂದ ಮುಂದಕ್ಕೆ ಪ್ರಯಾಣ ಮಾಡಿದನು. ರಮಣೀಯವಾದ ಸ್ಥಳಗಳಲ್ಲಿ ಬಿಡಾರ ಮಾಡುತ್ತ, ಕೆಲವು ದಿನಗಳಲ್ಲಿ ತನ್ನ ರಾಜಧಾನಿಯಾದ ಉಜ್ಜಯಿನಿಯನ್ನು ತಲುಪಿದನು. ಹೀಗೆ ಅನಿರೀಕ್ಷಿತವಾಗಿ ಬಂದ ರಾಜಕುಮಾರನ ಆಗಮನದಿಂದ ಸಂತೋಷಗೊಂಡ ಪಟ್ಟಣಿಗರು ನಮಸ್ಕರಿಸುತ್ತಿರಲು ಕೂಡಲೆ ಅರಮನೆಗೆ ಬಂದನು, ೫. ‘ಯುವರಾಜನು ಈಗ ಬಂದು ಬಾಗಿಲು ಜಗಲಿಯಲ್ಲಿದ್ದಾನೆ’ ಎಂದು ಪರಮೋತ್ಸಾಹದಿಂದ ಪರಿಜನರು ನಾನು ಮುಂದು ತಾನು ಮುಂದೆ ಎಂದು ಬಂದು ಅರಿಕೆ ಮಾಡಿದರು. ತಾರಾಪೀಡನು ಅದನ್ನು ಕೇಳಿದಾಗ, ೬. ಕಲ್ಪವೃಕ್ಷವು ಮುತ್ತಿನ ಮಳೆಗಳನ್ನು ಸುರಿಸುತ್ತಿದೆಯೊ ಎಂಬಂತೆ ಅವನ ಕಣ್ಣುಗಳಿಂದ ಆನಂದಾಶ್ರುಬಿಂದುಗಳು ಗಳಗಳನೆ ಸುರಿಯುತ್ತಿದ್ದುವು. ಕ್ಷೀರಸಮುದ್ರದ ಅಲೆಯಂತಿರುವ ಉತ್ತರೀಯವು ಸಂಭ್ರಮದಿಂದ ಜಾರಿ ನೆಲದ ಮೇಲೆ ಬೀಳುತ್ತಿದ್ದರೂ, ಅದನ್ನು ಹಾಗೆಯೆ ಎಳೆದುಕೊಂಡೇ ಹೋಗುತ್ತಿರುವ ಸಾಮಂತರಾಜರೊಂದಿಗೆ ಚಕ್ರವರ್ತಿಯು ಆನಂದದ ಬಲು ಹೊರೆಯಿಂದ ಮಂದಗಮನವುಳ್ಳವನಾಗಿ ಮಗನನ್ನು ಎದುರುಗೊಳ್ಳಲು ಬಂದನು. ವ|| ಹಾಗೆ ಬರುತ್ತಿರುವ ತಂದೆಯನ್ನು ಕಂಡು ಕುದುರೆಯಿಂದ ಇಳಿದು ದೂರದಲ್ಲೆ ನಮಸ್ಕರಿಸಿ ಹತ್ತಿರಕ್ಕೆ ಬಂದು ಕಾಲಿಗೆ ತಲೆ ತಗ್ಗಿಸಿದ ವಿನಯದಿಂದ ಶೋಭಿಸುವ ಕುಮಾರನನ್ನು ತಾರಾಪೀಡನು ಬಾಚಿ ತಬ್ಬಿ ಆಶೀರ್ವದಿಸಿದನು. ತಾರಾಪೀಡನ ಜೊತೆಯಲ್ಲಿದ್ದ ಸಾಮಂತರಾಜಕುಮಾರರು ಚಂದ್ರಾಪೀಡನಿಗೂ ನಮಸ್ಕರಿಸಿದರು. ಬಳಿಕ ಮಹಾರಾಜನು ಮಗನನ್ನು ತನ್ನ ರಾಣಿವಾಸಕ್ಕೆ ಕರೆದುಕಂಡು ಹೋದನು. ಅಲ್ಲಿ ವಿಲಾಸವತಿ ಮಹಾರಾಣಿಯು ರಾಣೀವಾಸದ ಸಮಸ್ತ ಪರಿವಾರದಿಂದ ಸಮೇತಳಾಗಿ ಎದುರುಗೊಳ್ಳಲು ಬಂದಳು. ಚಂದ್ರಾಪೀಡನು ತಾಯಿಗೆ ನಮಸ್ಕಾರ ಮಾಡಲು ಅವನನ್ನು ಹರಸಿ ಸಂಪ್ರದಾಯದಂತೆ ಮಂಗಳವಿಗಳನ್ನೆಲ್ಲ ನೆರವೇರಿಸಿ ಕರೆದುಕೊಂಡು ಬಂದು, ತನ್ನ ಹತ್ತಿರದಲ್ಲೆ ಕುಳ್ಳಿರಿಸಿಕೊಂಡು ದಿಗ್ವಿಜಯಕ್ಕೆ ಸಂಬಂಧಪಟ್ಟ ಸಮಾಚಾರವನ್ನು ವಿಚಾರಿಸಿದಳು. ರಾಜಕುಮಾರನು ಎಲ್ಲವನ್ನೂ ಹೇಳಿ ಕೆಲವುಕಾಲ ಅಲ್ಲಿದ್ದು ಶುಕನಾಸನಿಗೆ ವೈಶಂಪಾಯನನು ಪಾಳೆಯದೊಂದಿಗೆ ಹಿಂದೆ ಬರುತ್ತಿರುವನೆಂಬ ಸಂಗತಿಯನ್ನು ತಿಳಿಸಿ, ತನ್ನ ತಾಯಿಯ ಮನೆಯಲ್ಲಿ ಸ್ನಾನ ಊಟ ಮೊದಲಾದುವನ್ನು ಮನಸ್ಸಿಲ್ಲದ ಮನಸ್ಸಿನಿಂದ ಮಾಡಿ ಸಾಯಂಕಾಲವಾಗಲೂ ತನ್ನ ಮನೆಗೆ ಬಂದು. ೭. ಅಲ್ಲಿ ವಿರಹಪೀಡಿತನಾದ ರಾಜಕುಮಾರನು “ಈ ಅರಮನೆ ಈ ಉಜ್ಜಯನಿ ಈ ಭೂಮಿ ಈ ರಾಜ್ಯ ಇವೆಲ್ಲವೂ ಕಾದಂಬರಿಯಿಲ್ಲದ ಮೇಲೆ ಏತಕ್ಕೆ?” ಎಂದು

ಅರಸನಿರುಳಾಗೆ ಪಗಲಿನ
ಬರವಂ ಪಗಲಾಗಲಿರುಳ ಬರವಂ ಪಾರು
ತ್ತಿರುಳುಂ ಪಗಲುಂ ಗಂಧ
ರ್ವರಾಜನಂದನೆಯ ವಿರಹದಿಂ ಚಿಂತಿಸಿದಂ ೮

ವ|| ಮತ್ರಂ ಚಿತ್ರರಥನಂದನೆಯ ವಾರ್ತೆಯಂ ಕೇಳಲುತ್ಕಂಠಿತನಾಗಿ ಪತ್ರಲೇಖೆ ಬರ್ಪ ಸೈಪನೇ ಬಯಸುತ್ತಮಿರಲಾಕೆಯಂ ಕೆಲವಾನುದಿವಸಕ್ಕೊಡಗೊಂಡು ಬಂದು ಮೇಘನಾದಂ ಪ್ರಣಾಮಪುರಸ್ಸರಂ ಕಾಣಿಸೆ ನೃಪರೂಪಚಂದ್ರನಿದಿರೇೞ್ವುದುಂ ಪತ್ರಲೇಖೆ ತದಂಘ್ರಿಕಮಲ ಕ್ಕೆಱಗಿದಾಗಳ್

ಜನಪತಿ ಸಾಜದಿಂದಮೆ ಪಸಾದಮನಾದಮೆ ಮಾಡುತಿರ್ದನಾ
ವನಿತೆಯ ಮೇಲೆ ಚಿತ್ರರಥನಂದನೆಯತಣಿನಾಗಳೆೞ್ತರಲ್
ಮನದ ಪಸಾದಮುಂ ಪದಪುಮೊರ್ಮೆಯೆ ನೂರ್ಮಡಿಯಾಗೆ ಸಸ್ಮಿತಾ
ನನನಮರ್ದಪ್ಪಿದಂ ತೆಗೆದು ನಿರ್ಭರಹರ್ಷದೆ ಪತ್ರಲೇಖೆಯಂ    ೯

ನ|| ಅನಂತರಮಾಕೆಯಂ ಕುಳ್ಳಿರವೇೞ್ದು

ನಿರುಪಮ ಚಾರಿತ್ರಾಲಂ
ಕರಣೆ ಮಹಾಶ್ವೇತೆಗಂ ಸಪರಿಜನ ಕಾದಂ
ಬರಿಗಂ ಕುಶಲಮೆ ಪೇೞೆಂ
ದರಸಂ ತಾಂ ಪತ್ರಲೇಖೆಯಂ ಬೆಸಗೊಂಡಂ             ೧೦

ವ|| ಅಂತು ಬೆಸಗೊಳ್ವುದುಮಾಕೆ ದೇವರ್ ಬೆಸಸಿದಂದದೊಳೆಲ್ಲರುಂ ಕುಶಲದಿನಿರ್ದರಲ್ಲದೆಯುಂ ಕಾದಂಬರೀದೇವಿ ಪರಿಜನಂಬೆರಸು ನಿಮಗೆ ತನ್ನ ಪೊಡವಡಿಕೆಯಂ ಬಿನ್ನವಿಸಲ್ ಪೇೞ್ದಟ್ಟಿದಳೆಂಬುದುಂ ತತ್ಸಂಬಂಯಪ್ಪ ವಾರ್ತೆಯಂ ಕೇಳಲತಿಕುತೂಹಲನಾಗಿ ಮೇಘನಾದಂಗೆ ಮೆಚ್ಚುಗೊಟ್ಟಾತಂಬೆರಸು ರಾಜಲೋಕಮಂ ವಿಸರ್ಜಿಸಿ ದೂರೋತ್ಸಾರಿತ ಪರಿಜನಂ ಪತ್ರಲೇಖಾದ್ವೀತೀಯನಾಗಿ ವಲ್ಲಭಬಾಲೋದ್ಯಾನಮಂ ಪೊಕ್ಕು

ಅರೆದುಱುಗಿರ್ದ ಬಯಲ್ಲಾ
ವರೆಯೆಲೆಗೊಡೆಯಿಡುವಿನಲ್ಲಿ ಸುಖದಿಂ ಕಣ್ಗೆ
ಯ್ದಿರೆ ಹಂಸಮಿಥುನಮಂ ನಿಜ
ಚರಣಾಬ್ಜದೆ ನೂಂಕಿ ನೃಪಸುತಂ ಕುಳ್ಳಿರ್ದಂ ೧೧

ಚಿಂತಿಸುತ್ತಿದ್ದನು. ೮. ಚಂದ್ರಾಪೀಡನು ರಾತ್ರಿಯಾದರೆ ಹಗಲಾಗಲೆಂದೂ ಹಗಲಾದರೆ ರಾತ್ರಿಯಾಗಲೆಂದೂ ನೋಡುತ್ತಾ ರಾತ್ರಿಯೂ ಹಗಲೂ ವಿರಹದಿಂದ ಕಾದಂಬರಿಯನ್ನೇ ನೆನಸಿಕೊಳ್ಳುತ್ತಿದ್ದನು. ವ|| ಮತ್ತು ಕಾದಂಬರಿಯ ಸಮಾಚಾರವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಪತ್ರಲೇಖೆಯು ಬರುವ ಭಾಗ್ಯವನ್ನೇ ಬಯಸುತ್ತಾ ಇದ್ದನು. ಹೀಗೆ ಹಲವು ದಿನಗಳು ಕಳೆಯಲು ಮೇಘನಾದನು ಪತ್ರಲೇಖೆಯನ್ನು ಕರೆದುಕೊಂಡು ಬಂದು ನಮಸ್ಕಾರಪೂರ್ವಕವಾಗಿ ಭೇಟಿಮಾಡಿಸಲು ಚಂದ್ರಾಪೀಡನು ಕೂಡಲೆ ಸ್ವಾಗತಿಸಿದನು. ಪತ್ರಲೇಖೆಯು ಅವನ ಪಾದಕಮಲಗಳಿಗೆ ಎರಗಿದಳು. ೯. ಚಂದ್ರಾಪೀಡನು ಪತ್ರಲೇಖೆಯ ಮೇಲೆ ಸಹಜವಾಗಿಯೆ ಮಮತೆಯನ್ನಿಟ್ಟಿದ್ದನು. ಈಗ ಅವಳು ಕಾದಂಬರಿಯ ಜೊತೆಯಲ್ಲಿದ್ದು ಬಂದದ್ದರಿಂದ ಅವನ ಮನಸ್ಸಿನ ಅನುಗ್ರಹವೂ ಪ್ರೀತಿಯೂ ಒಟ್ಟಿಗೆ ನೂರ್ಮಡಿಯಾದಂತಾಗಿ, ಮಂದಹಾಸದಿಂದ ಕೂಡಿದವನಾಗಿ ಅತಿಶಯವಾದ ಸಂತೋಷದಿಂದ ಅವಳನ್ನು ಗಾಢವಾಗಿ ತಬ್ಬಿಕೊಂಡನು. ವ|| ಬಳಿಕ ಅವಳನ್ನು ಕುಳಿತುಕೊಳ್ಳುವಂತೆ ಹೇಳಿ ೧೦. “ಸಾಟಿಯಿಲ್ಲದ ಪರಿಶುದ್ಧವಾದ ನಡವಳಿಕೆಯಿಂದ ಶೋಭಿಸುತ್ತಿರುವ ಮಹಾಶ್ವೇತೆಯೂ ಪರಿಜನರಿಂದ ಕೂಡಿಕೊಂಡಿರುವ ಕಾದಂಬರೀದೇವಿಯೂ ಕ್ಷೇಮದಿಂದಿದ್ದಾರೆಯೆ? ಹೇಳು” ಎಂದು ಚಂದ್ರಾಪೀಡನು ಪತ್ರಲೇಖೆಯನ್ನು ಕೇಳಿದನು, ವ|| ಹಾಗೆ ಕೇಳಲಾಗಿ ಅವಳು “ತಾವು ಕೇಳಿದಂತೆ ಅವರೆಲ್ಲರೂ ಕ್ಷೇಮದಿಂದಿದ್ದಾರೆ. ಅಲ್ಲದೆ ಕಾದಂಬರೀದೇವಿಯು ಪರಿಜನರೊಂದಿಗೆ ತನ್ನ ನಮಸ್ಕಾರವನ್ನು ನಿಮಗೆ ಅರಿಕೆ ಮಾಡುವಂತೆ ಹೇಳಿ ಕಳುಹಿಸಿದ್ದಾಳೆ” ಎಂದಳು. ಚಂದ್ರಾಪೀಡನಿಗೆ ಕಾದಂಬರಿಗೆ ಸಂಬಂಸಿದ ಸಮಾಚಾರವನ್ನು ಕೇಳಲು ಬಹಳ ಕುತೂಹಲವುಂಟಾಯಿತು. ಕೂಡಲೆ ಮೇಘನಾದನಿಗೆ ಇನಾಮು ಕೊಟ್ಟು ಅವನನ್ನೂ ಸಾಮಂತರಾಜರನ್ನೂ ಕಳುಹಿಸಿ, ಪರಿಜನರನ್ನೂ ಹೊರಕ್ಕೆ ಹೋಗುವಂತೆ ಆಜ್ಞಾಪಿಸಿ ಪತ್ರಲೇಖೆಯನ್ನು ಮಾತ್ರ ಕರೆದುಕೊಂಡು ತನಗೆ ಇಷ್ಟವಾದ ಹೊಸ ಕೈದೋಟಕ್ಕೆ ಬಂದನು. ೧೧. ಅಲ್ಲಿ ಅರ್ಧಭಾಗದಿಂದ ಮೇಲೆ ಛತ್ರಿಯಂತೆ ಹರಡಿಕೊಂಡಿದ್ದ ನೆಲದಾವರೆ ಎಲೆಗಳ ಮಧ್ಯದಲ್ಲಿ ಸುಖವಾಗಿ ಮಲಗಿದ್ದ

ವ|| ಅಂತು ಕುಳ್ಳಿರ್ದು ಪತ್ರಲೇಖೆಯ ಮೊಗಮಂ ನೋಡಿ

ಎನಿಸು ದಿನಮಿರ್ದೆ ಗಂಧ
ರ್ವನ ನಂದನೆಯೊಂದು ಪದಪದೆಂತುಟು ನುಡಿಗಳ್
ಮನಮೊಸೆದು ನಮ್ಮ ದೆಸೆಯಂ
ನೆನೆವವರಾರಲ್ಲಿ ಗೋಷ್ಠಿಯೇನಿಂದುಮುಖೀ    ೧೨

ವ|| ಎಂದು ನೃಪರೂಪಚಂದ್ರಂ ಬೆಸಗೊಳ್ವುದುಂ ದೇವ ತಾತ್ಪರ್ಯದಿನವಧಾರಿಸುವುದೆಂದು ನೀವಿತ್ತ ಬಿಜಯಂಗೆಯ್ಯಲೊಡನೆಯಾ ಕೇಯೂರಕನೊಡನೆ ಪೋಗಿ ಮುನ್ನಿನಂದದೊಳೆ ಪಟ್ಟಿರ್ದ ಕಾದಂಬರೀದೇವಿಯ ಕೆಲದೊಳ್ ಕುಳ್ಳಿರ್ದು ಪೊಸತೆನಿಸಿದ ಪಸಾದಮನನು ಭವಿಸುತ್ತಮಿರ್ದೆ ನಲ್ಲದೆಯುಂ

ಪದಪಿನ ಮಾತುಗಳ್ ಪಲವುಮಂ ಬಿಡದಾಡಿದೊಡಲ್ಲಿ ಬರ್ಪುದಾ
ವುದು ಗಡ ದೇವ ಮನ್ನಯನದೊಳ್ ನಯನಂ ಕರದೊಳ್ ಕರಾಬ್ಜವಂ
ಗದೊಳೆಸೆವಂಗಯಷ್ಟಿ ಪೆಸರಕ್ಕರದೊಳ್ ನಿಜವಾಣಿ ಕೂರ್ಮೆಯೊಳ್
ಹೃದಯವದೊರ್ಮೆಯಂ ನೆಲಸಲಂಗನೆಗಿಂತಿರೆ ಪೋದುದಾದಿನಂ         ೧೩

ವ|| ಅಂತು ಬೈಗುಂಬೊೞ್ತಪ್ಪುದುಮೆನ್ನ ಕೆಯ್ಯಂ ಪಿಡಿದು ಹಿಮಗೃಹದಿಂ ಪೊಱಮಟ್ಟು ಸುಯ್ವುತ್ತಂ ಬಂದು ನಿಷಿದ್ಧಾಶೇಷಪರಿಜನೆಯಾಗಿ ವಲ್ಲಭಬಾಲೋದ್ಯಾನಮಂ ಪೊಕ್ಕು ಮರಕತಸೋಪಾನಶೋಭಿತಮುಂ ಸುಧಾಧವಳಿತಮುಮಪ್ಪ ರಮಣೀಯ ಪ್ರಮದವನ ಮಧ್ಯವೇದಿಕೆಯ ಮಣಿಸ್ತಂಭಮಂ ನೆಮ್ಮಿ

ಅವರಿಸಿ ಮನದೊಳೇನಾ
ನುವನಾಗಳ್ ಕನ್ನೆ ನುಡಿಯಲೊಡರಿಸಿ ನಿಷ್ಕಂ
ಪವೆನಿಪ್ಪ ತಾರೆಗಳ್ವೆರ
ಸೆರೆಯಿಕ್ಕದೆ ನೋಡುತಿರ್ದಳೆನ್ನಯ ಮೊಗಮಂ         ೧೪

ವ|| ಅಂತು ನೋಡಿ ಬೆವರೊಳ್ ಮುೞುಂಗಿ ನಡುಗುತ್ತಂ ವಿಷಾದ ಮನವಲಂಬಿಸಿರ್ಪುದುಮಾಂ ವಿದಿತಾಭಿಪ್ರಾಯೆಯಾಗಿ ತನ್ಮುಖವಿನಿವೇಶನಿಷ್ಪಂದಿತನಯನೆಯೆಂ ಬೆಸನಾವುದೆನಗೇಗೆಯ್ವುದೆಂದು ಬಿನ್ನವಿಸೆ

ತೊಲಗಿಪಳೊ ರಹಸ್ಯಶ್ರವ
ಣಲಜ್ಜೆಯಿಂ ತನ್ನ ಪೊಳೆವ ನೆೞಲುಮನೆನೆ ನಿ
ರ್ಮಲ ಮಣಿಕುಟ್ಟಿಮಮಂ ಕೋ
ಮಲೆ ಚರಣಾಂಗುಷ್ಠದಿಂದೆ ಬರೆಯುತ್ತಿರ್ದಳ್ ೧೫

ಹಂಸದಂಪತಿಗಳನ್ನು ತನ್ನ ಪಾದಕಮಲದಿಂದ ತಳ್ಳಿ ಅಲ್ಲಿ ರಾಜಕುಮಾರನು ಕುಳಿತುಕೊಂಡನು. ವ|| ಹಾಗೆ ಕುಳಿತುಕೊಂಡು ಪತ್ರಲೇಖೆಯ ಮುಖವನ್ನು ನೋಡಿ ೧೨. “ಎಲೈ ಚಂದ್ರಮುಖಿ, ನೀನು ಅಲ್ಲಿ ಎಷ್ಟು ದಿನಗಳವರೆಗೆ ಇದ್ದೆ? ಕಾದಂಬರಿಯ ಪ್ರೀತಿಯು ಹೇಗಿದೆ? ಮಾತು ಹೇಗಿದೆ? ಅಲ್ಲಿ ನಮ್ಮನ್ನು ಯಾರು ಯಾರು ಮನಸಾರೆ ನೆನಸಿಕೊಳ್ಳುತ್ತಾರೆ? ಪರಸ್ಪರ ಮಾತುಕತೆಗಳು ಹೇಗೆ ನಡೆಯಿತು?” ವ|| ಎಂದು ಚಂದ್ರರೂಪನಾದ ಚಂದ್ರಾಪೀಡನು ಕೇಳಲಾಗಿ “ಸ್ವಾಮಿ ಮುಖ್ಯಾಂಶವನ್ನು ಅರಿಕೆ ಮಾಡುತ್ತೇನೆ, ಚಿತ್ತಯಿಸಬೇಕು. ನೀವು ಈ ಕಡೆ ದಯಮಾಡಿಸಿದ ಮೇಲೆ ನಾನು ಕೇಯೂರಕನೊಡನೆ ಹೋಗಿ ಮೊದಲಿನಂತೆಯೆ ಮಲಗಿದ್ದ ಕಾದಂಬರೀದೇವಿಯ ಪಕ್ಕದಲ್ಲಿ ಕುಳಿತುಕೊಂಡು ಹೊಸದಾದ ಅನುಗ್ರಹವನ್ನು ಅನುಭವಿಸುತ್ತಿದ್ದೆನು. ಅಲ್ಲದೆ ೧೩. ಸ್ವಾಮಿ, ಅವಳು ಹೇಗೆ ಪ್ರೀತಿಯನ್ನು ತೋರಿಸಿದಳೆಂಬುದನ್ನು ಅನೇಕ ಮಾತುಗಳಿಂದ ಒಂದೇ ಸಮನೆ ಹೇಳುವುದೇತಕ್ಕೆ? ನನ್ನ ಕಣ್ಣಿನಲ್ಲಿ ಅವಳ ಕಣ್ಣು, ನನ್ನ ಕೈಯಲ್ಲಿ ಅವಳ ಕರಕಮಲ. ನನ್ನ ಮೈಯಲ್ಲಿ ಅವಳ ತೆಳುವಾದ ಮೈ, ನನ್ನ ಹೆಸರಿನಲ್ಲಿ ಅವಳ ಮಾತು, ನನ್ನ ಪ್ರೀತಿಯಲ್ಲಿ ಅವಳ ಹೃದಯ ನೆಲಸಿರಲು ಹಾಗೆಯೆ ಆ ಹಗಲೆಲ್ಲ ಕಳೆಯಿತು. ವ|| ಹಾಗೆಯೆ ಸಾಯಂಕಾಲವಾಗಲು ನನ್ನ ಕೈಯನ್ನು ಹಿಡಿದುಕೊಂಡು ಹಿಮಗೃಹದಿಂದ ಹೊರಟು ನಿಟ್ಟುಸಿರು ಬಿಡುತ್ತಾ ಬಂದು, ಪರಿಜನರಾರನ್ನೂ ಬರದಂತೆ ಮಾಡಿ ತನಗೆ ಇಷ್ಟವಾದ ಬಾಲೋದ್ಯಾನಕ್ಕೆ ಬಂದಳು. ಅಲ್ಲಿ ಹೂದೋಟದ ಮಧ್ಯದಲ್ಲಿರುವ ಪಚ್ಚೆಯ ಮೆಟ್ಟಿಲುಗಳಿಂದ ಶೋಭಿಸುವ ಸುಣ್ಣ ಬಳಿದು ಬೆಳ್ಳಗಿರುವ ರತ್ನದ ಕಂಭವನ್ನು ಒರಗಿಕೊಂಡು, ೧೪. ಮನಸ್ಸಿನಲ್ಲಿ ಆಲೋಚಿಸಿ ಏನನ್ನೋ ಹೇಳಲು ಹೊರಟು ಚಲಿಸದಿರುವ ಗುಡ್ಡೆಗಳುಳ್ಳ ಕಣ್ಣುಗಳಿಂದ ಎವೆಯಿಕ್ಕದೆ ನನ್ನ ಮುಖವನ್ನೇ ನೋಡುತ್ತಿದ್ದಳು. ವ|| ಹಾಗೆ ನೋಡಿ ಬೆವರಿನಲ್ಲಿ ಮುಳುಗಿ ನಡುಗುತ್ತಾ ಖೇದವನ್ನನುಭವಿಸುತ್ತಿರಲು, ನಾನೂ ಅವಳ ಆಶಯವನ್ನು ತಿಳಿದುಕೊಂಡು ಅಲುಗಾಡದ ದೃಷ್ಟಿಯಿಂದ ಅವಳ ಮುಖವನ್ನು ನೋಡುತ್ತಾ ‘ನಾನು ಏನು ಮಾಡಬೇಕೆಂಬುದನ್ನು ಅಪ್ಪಣೆ ಮಾಡಿ’ ಎಂದು ಅರಿಕೆ ಮಾಡಿದೆನು. ೧೫. ಆಗ ಅವಳು