ಭವನಮರಾಳಮಂಡಲಮುಮಂ ನಿಜಪಾದಪಯೋಜದಿಂದೆ ನೂಂ
ಕುವ ಕುಮುದಾವತಂಸ ಮಧುಪಂಗಳುಮಂ ಕರದಿಂದೆ ಪಿಂಗೇ ಬೀ
ಸುವ ವಂನದೇವತಾಶ್ರವಣಶಂಕಿತೆಯಾದವೊಲತ್ತಮಿತ್ತ ನೋ
ಡುವ ಪಿರಿದಪ್ಪ ಬೇವಸಮನಾವರಿಸಿರ್ದಳದೊಂದು ಬೇಗಮಂ   ೧೬

ಮದನಾಗ್ನಿಜ್ವಾಲೆಯಿಂ ಮಗ್ಗಿದುದೊ ಬಹುಳ ಬಾಷ್ಪಾಂಬುಪೂರಂಗಳಿಂದ
ೞ್ದುದೊ ನಿಶ್ವಾಸಂಗಳಿಂ ಪಾಱದುದೊ ಕುಸುಮಬಾಣಂಗಳಿಂ ನುಚ್ಚುನೂಱ
ದುದೊ ಸುಯ್ಗೇೞ್ತಂದ ಭೃಂಗಾವಳಿಯಿನಿರದೆ ಪೀರ್ತಂದುದೋ ಪೇೞಮೆಂಬಂ
ದದೆ ಲಜ್ಜಾಮಗ್ನೆಗೇನುಂ ನುಡಿ ಪೊಱಮಡದಾಯ್ತೆಂತುಮಾ ಕಾಂತೆಗಾಗಳ್          ೧೭

ಅನುಭವಿಸಿದ ಕೋಟಲೆಗಳ
ನಿನಿಸೆಂದೆಣಿಸಲ್ಕೆ ಮೌಕ್ತಿಕಾಕ್ಷಾವಳಿಯಂ
ವನಜದಳನಯನೆ ಸಮೆದಪ
ಳೆನೆ ಸುರಿದುವು ತರದೆ ತೋರ ಕಣ್ಣನಿದುಱುಗಲ್       ೧೮

ಸಮಸಂದೊಂದಿದ ಲಜ್ಜೆಯುಜ್ಜುಗಮೆ ಲಜ್ಜಾಭಾವಮಂ ಬಾಲಭಾ
ವಮೆ ಬಾಲ್ಯೋದಯಮಂ ವಿಷಾದಮೆ ವಿಷಾದೋದ್ರೋಕಮಂ ಭೀತಿಭಾ
ವಮೆ ಭೀತಿಕ್ರಮಮಂ ವಿಳಾಸಮೆ ವಿಳಾಸೋಲ್ಲಾಸಮಂ ಮುಗ್ಧಭಾ
ವಮೆ ಮುಗ್ಧತ್ವಮಹತ್ವಮಂ ನೆಯೆ ಕಲ್ತಂತಾದುದಾ ಕನ್ನೆಯೊಳ್            ೧೯

ಪ|| ಆಗಳಿದೇನೆಂದಾಂ ಮಗುೞೆ ಮಗೞೆ ಬಿನ್ನಪಂಗೆಯ್ವುದುಮುಸಿರಲ್ ನಾಣ್ಚಿ ರಹಸ್ಯಾಲಾಪಮನೆನಗೆ ಬರೆದು ತೋರ್ಪಂತೆ ನಖಮುಖದಿಂ ಕೇತಕೀದಳಮಂ ಬರೆಯುತ್ತಂ ಕ್ಷಿತಿತಳನಿಹಿತ ನಿಶ್ಚಲನಯನೆಯಾಗಿ ಪಿರಿದುಬೇಗಮಿರ್ದನಂತರಮೊಯ್ಯನೆನ್ನ ಮೊಗವಂ ನೋಡಿ

ಮದನಾನಲಧೂಮಸ್ತೋ
ಮದೆ ದೂಸರಮಾದ ವಚನಮಂ ತೊಳೆಯಲ್ ಪೊ
ಣ್ಮೆದುವೆನೆ ಮತ್ತಂ ಪೊಱಪೊ
ಣ್ಮಿದುವೆಳೆಯಳ ಬಾಷ್ಪವಾರಿಧಾರಾಪೂರಂ   ೨೦

ತಾನು ನನಗೆ ಈಗ ಹೇಳಲಿರುವ ಗುಟ್ಟನ್ನು ತನ್ನ ನೆಳಲೂ ಕೇಳಬಾರದೆಂದು ನಾಚಿಕೆಯಿಂದ ಅದನ್ನು ಅಳಿಸುತ್ತಿರುವಳೊ ಎಂಬಂತೆ ನಿರ್ಮಲವಾದ ರತ್ನದ ಜಗಲಿಯನ್ನು ತನ್ನ ಕಾಲಿನ ಹೆಬ್ಬೆರಳಿಂದ ಬರೆಯುತ್ತಿದ್ದಳು. ೧೬. ಯಾರೂ ಕೇಳಬಾರದೆಂಬ ಅಭಿಪ್ರಾಯದಿಂದಲೋ ಎಂಬಂತೆ ಸಾಕಿದ ಹಂಸಗಳ ಗುಂಪನ್ನು ತನ್ನ ಪಾದಕಮಲದಿಂದ ನೂಕುತ್ತಿದ್ದಳು. ಕಿವಿಯ ಮೇಲಿರುವ ಕನ್ನೆ ದಿಲೆಗೆ ಮುತ್ತಿರುವ ದುಂಬಿಗಳನ್ನು ಹಿಂದಕ್ಕೆ ಹೋಗುವಂತೆ ಕೈಯಿಂದ ಬೀಸುತ್ತಿದ್ದಳು. ವನದೇವತೆಗಳು ಎಲ್ಲಿ ಕೇಳಿಬಿಡುತ್ತಾರೋ ಎಂಬ ಅಳುಕಿನಿಂದಲೋ ಎಂಬಂತೆ ಆ ಕಡೆ ಈ ಕಡೆ ನೋಡುತ್ತಿದ್ದಳು. ಹೀಗೆ ಸ್ವಲ್ಪಕಾಲ ಹೆಚ್ಚಾದ ದುಮ್ಮಾನವನ್ನು ಅನುಭವಿಸುತ್ತಿದ್ದಳು. ೧೭. ನಾಚಿಕೆಯಲ್ಲಿ ಮುಳುಗಿರುವ ಕಾದಂಬರಿಯ ವಾಕ್ಕು ವಿರಹಾಗ್ನಿಜ್ವಾಲೆಯಿಂದ ಸುಟ್ಟುಹೋದಂತೆಯೂ ಅತ್ಯಕವಾದ ಕಣ್ಣೀರುಗಳ ಪ್ರವಾಹದಲ್ಲಿ ಮುಳುಗಿಹೋದಂತೆಯೂ ನಿಟ್ಟುಸಿರುಗಳಿಂದ ಹಾರಿಹೋದಂತೆಯೂ ಮನ್ಮಥನ ಬಾಣಗಳಿಂದ ಚೂರು ಚೂರು ಮಾಡಲ್ಪಟ್ಟಂತೆಯೂ ಉಸಿರಿನ ಸುವಾಸನೆಗಾಗಿ ಬಂದಿರುವ ಗುಂಪಿನಿಂದ ಕುಡಿಯಲ್ಪಟ್ಟಂತೆಯೂ ಆಗಿ ಏನಾದರೂ ಅದು ಹೊರಡಲೇ ಇಲ್ಲ. ೧೮. ಕಾದಂಬರಿಯು ತಾನು ವಿರಹದಿಂದ ಅನುಭವಿಸುತ್ತಿರುವ ಕಷ್ಟಗಳು ಎಷ್ಟೆಂದು ಎಣಿಸುವುದಕ್ಕೆ ಒಂದು ಮುತ್ತಿನ ಜಪಸರವನ್ನು ನಿರ್ಮಾಣ ಮಾಡುತ್ತಿರುವಳೋ ಎಂಬಂತೆ ದಪ್ಪದಪ್ಪ ಕಂಬನಿಗಳು ಒಂದೇಸಮನೆ ಸುರಿಯುತ್ತಿದ್ದುವು. ೧೯. ಅವಳು ನಾಚಿಕೆಗೆ ನಾಚಿಕೆಯನ್ನೂ ಎಳೆತನಕ್ಕೆ ಎಳೆತನವನ್ನೂ ದುಖಕ್ಕೆ ದುಖಾತಿಶಯವನ್ನೂ ಭಯಕ್ಕೆ ಭಯವನ್ನೂ ಬೆಡಗಿಗೆ ಬೆಡಗನ್ನೂ ಮೊದ್ದುತನಕ್ಕೆ ಮೊದ್ದುತನವನ್ನೂ ಚೆನ್ನಾಗಿ ಕಲಿಸುಕೊಡುತ್ತಿರುವಂತೆ ಕಾಣುತ್ತಿದ್ದಳು. ವ|| ಆಗ ನಾನು ಇದೇನೆಂದು ಮತ್ತೆ ಮತ್ತೆ ಅರಿಕೆ ಮಾಡುತ್ತಿರಲು, ಹೇಳಲು ನಾಚಿ ಗುಟ್ಟುಮಾತನ್ನು ನನಗೆ ಬರೆದು ತೋರಿಸುವಂತೆ ಉಗುರಿನ ತುದಿಯಿಂದ ಕೇದಗೆಹೂವಿನ ಎಸಳನ್ನು ಗೀರುತ್ತಾ, ನೆಟ್ಟ ಕಣ್ಣುಗಳಿಂದ ನೆಲವನ್ನೇ ನೋಡುತ್ತಾ ಬಹಳ ಹೊತ್ತು ಹಾಗೆಯೆ ಇದ್ದಳು. ಬಳಿಕ ಮೆಲ್ಲನೆ ನನ್ನ ಮುಖವನ್ನು ನೋಡಿದಳು. ೨೦. ಕಾಮಾಗ್ನಿಯ ಹೊಗೆಯ ಗುಂಪಿನಿಂದ ಮಲಿನವಾದ ಮಾತನ್ನು ತೊಳೆಯಲು

ಉಸಿರ್ವುಜ್ಜುಗದಿಂದಧರಂ
ನಸುಗೆತ್ತಲ್ ಶ್ವಾಸಮಧುಪಮಾಲೆಗೆ ಸಂದೇ
ಶಿಸಿದಪಳೊ ರಹಸ್ಯಮನೆನ
ಲೆಸೆದೆಂತೆಂತಾನುಮುಸಿರಲುದ್ಯುತೆಯಾದಳ್           ೨೧

ವ|| ಅದೆಂತೆನೆ

ಎನಗೀಗಳ್ ನಿಕ್ಕುವಂ ವಲ್ಲಭತೆಯೆಡೆಯೊಳೆಮ್ಮಬ್ಬೆಯಿಂದಯ್ಯನಿಂದ
ಕ್ಕ ನೀನೀ ಪ್ರಾಣಂಗಳಿಂದತ್ಯಕಮೆನಿಸಿ ಮೆಚ್ಚಿತ್ತದೊಳ್ ನಿಂದೆ ನೀಂ ನಿ
ನ್ನನದೆಂದಾಂ ಕಂಡೆನಂದಿಂ ಬೞಕೆ ಸಖಿಯರಂ ಪತ್ತುವಿಟ್ಟೀ ಮನಂ ನಿ
ನ್ನನೆ ನೀಡುಂ ನಾಡೆ ನಂಬಿರ್ದಪುದಱಯೆನಿದಿನ್ನೆಂತುವಾಂ ಪತ್ರಲೇಖೇ   ೨೨

ಎನಗಾದದೊಂದು ಪರಿಭವ
ಮನಾರ್ಗೆ ದೂಱದಪೆನಾರ್ಗೆ ಪೇೞ್ದಪೆನಿದನಾಂ
ನಿನಗುಸಿರ್ದನಂತರಂ ಸುಖ
ದಿನೆನ್ನ ತನುವಿಂದೆ ಪತ್ತುವಿಡಿಸುವೆನಸುವಂ   ೨೩

ವ|| ಎಂದು ಚಿತ್ರರಥನಂದನೆ

ನಿನಗೆನ್ನಂದಮನೇನೆಂ
ದು ನುಡಿವೆನೆನ್ನೊಂದು ತಪ್ಪುನಱದತ್ತೆಂದೀ
ಮನಕಂ ಪಿರಿದುಂ ಲಜ್ಜಿಸು
ವೆನೆನಲ್ ಪೇೞು ಪೆಱರ್ಗದಾಗಳುಂ ಲಜ್ಜಿಸೆನೇ          ೨೪

ಪಿರಿದೆನಿಸಿದ ಪೞಗೆಡೆಯಾ
ಗಿರಲೆನ್ನನದಾರುಮಿಲ್ಲಮಿತರೆಯರೆನ್ನಂ
ತಿರೆ ಗರ್ವದಿಂದೆ ಪಿರಿದುಂ
ಪರಿಭವಿಸಿದನಿಂದಕಾರಣಂ ನೃಪತನಯಂ    ೨೫

ಪಿರಿಯರ್ಗಿದು ಗುಣಮೋ ಪೇೞು
ಪರಿಚಯಕಿದು ಫಲವೊ ತರುಣಿ ಬಿಸತಂತುವಿನೊಳ್
ದೊರೆಯೆನಿಪೆಳಮನದೆನ್ನಂ
ಪರಿಭವಿಪುದೆ ಕಂಡು ಕನ್ನೆಯಂ ಯುವರಾಜಂ            ೨೬

ಹೊರಹೊಮ್ಮುತ್ತಿವೆಯೊ ಎಂಬಂತೆ ಮತ್ತು ಆ ಬಾಲಿಕೆಯ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ೨೧. ಮಾತನಾಡುವ ಪ್ರಯತ್ನದಿಂದ ಕೆಳದುಟಿಯು ಸ್ವಲ್ಪ ಮಟ್ಟಿಗೆ ಅದುರುತ್ತಿರಲು, ಉಸಿರಿನ ವಾಸನೆಗೆ ಎರಗುವ ಭ್ರಮರಪಂಕ್ತಿಗೆ. ತನ್ನ ಗುಟ್ಟನ್ನು ತಿಳಿಸಲು ಆಸೆಪಡುತ್ತಿರುವಳೋ ಎಂಬಂತೆ ಕಾಣುತ್ತಿದ್ದಳು. ಹಾಗೆಯೆ ಅವಳು ಬಹಳ ಪ್ರಯಾಸದಿಂದ ಹೇಳಲು ತೊಡಗಿದಳು. ವ|| ಅದು ಹೇಗೆಂದರೆ, ೨೨. ಪತ್ರಲೇಖೆ, ನನಗೆ ನಿಜವಾಗಿಯೂ ನನ್ನ ತಾಯಿಗಿಂತಲೂ ತಂದೆಗಿಂತಲೂ ಮಹಾಶ್ವೇತೆಗಿಂತಲೂ ಈ ಪ್ರಾಣಗಳಿಗಿಂತಲೂ ಈಗ ನೀನೇ ಹೆಚ್ಚು ಪ್ರೀತಿಗೆ ಪಾತ್ರಳಾಗಿ ನನ್ನ ಮನಸ್ಸಿನಲ್ಲಿ ನೆಲಸಿದ್ದೀಯೆ. ನಿನ್ನನ್ನು ನೋಡಿದ ಮೇಲೆ ಗೆಳತಿಯರನ್ನೆಲ್ಲಾ ಬಿಟ್ಟು ನನ್ನ ಮನಸ್ಸು ನಿನ್ನನ್ನೇ ನಂಬಿಬಿಟ್ಟಿದೆ. ಇದೇಕೆ ಎಂಬುದು ನನಗೆ ತಿಳಿಯದು!” ೨೩. ಈಗ ನನಗೆ ಒದಗಿರುವ ಅವಹೇಳನವನ್ನು ಯಾರಲ್ಲಿ ದೂರಿಕೊಳ್ಳಲಿ? ಯಾರಲ್ಲಿ ಹೇಳಿಕೊಳ್ಳಲಿ? ಇದನ್ನು ಈಗ ನಿನಗೆ ಹೇಳಿ ಬಿಟ್ಟು ಬಳಿಕ ನೆಮ್ಮದಿಯಿಂದ ಪ್ರಾಣವನ್ನು ಬಿಡುತ್ತೇನೆ” ವ|| ಎಂದಳು. ಆಮೇಲೆ ಕಾದಂಬರೀದೇವಿಯು. ೨೪. “ನಿನಗೆ ನನ್ನ ಈ ಅವಸ್ಥೆಯನ್ನು ಏನೆಂದು ಹೇಳಲಿ? ನನ್ನ ಮನಸ್ಸು ಈ ತಪ್ಪನ್ನು ತಿಳಿದುಕೊಂಡುಬಿಟ್ಟಿತಲ್ಲ ಎಂದು ನನಗೇ ಬಹಳ ನಾಚಿಕೆಯಾಗಿದೆ. ಹೀಗಿರಲು ಇನ್ನೊಬ್ಬರಿಗೆ ತಿಳಿದರೆ ನಾಚಿಕೆಯಾಗುವುದಿಲ್ಲವೆ? ೨೫. ಅಹಂಕಾರದಿಂದ ಇದ್ದ ನನ್ನನ್ನು ಯುವರಾಜನು ನಿಷ್ಕಾರಣವಾಗಿ ಬಹಳವಾಗಿ ಅವಮಾನಗೊಳಿಸಿದ್ದಾನೆ. ಅದರಿಂದ ಮಿಗಿಲಾದ ಜನಾಪವಾದಕ್ಕೆ ಗುರಿಯಾಗಿಬಿಟ್ಟೆ. ೨೬. ಪತ್ರಲೇಖೆ, ತಾವರೆದಂಟಿನ ಎಳೆಯಂತೆ ಕೋಮಲವಾದ ಮನಸ್ಸುಳ್ಳ ಕನ್ನಿಕೆಯಾದ ನನ್ನನ್ನು ನೋಡಿ ಯುವರಾಜನು ಹೀಗೆ ಅವಮಾನಗೊಳಿಸಬಹುದೆ?

ಇನ್ನೆನ್ನನಿಂತು ನ್ಕಪನೆಸ
ಕಂ ನಿತ್ತಿರಿಸಲ್ಕೆ ಕುಡದು ಮಱುವುಟ್ಟನೊಳಂ
ನಿನ್ನೊಡನೆ ಕೂಟವೆನಗ
ಕ್ಕೆನ್ನೆಯ ತಪ್ಪಿಂಗೆ ಸತ್ತು ಶುದ್ಧೆಯೆನಪ್ಪೆಂ       ೨೭

ವ|| ಎಂದು ಚಿತ್ರರಥನಂದನೆ ನುಡಿದು ಮಾಣ್ಪುದುಮಾನತಿಭೀತೆಯೆನಾಗಿ ದೇವಿ ನಿನ್ನ ಯುವರಾಜಂ ನಿನ್ನ ಕುಸುಮಸುಕುಮಾರಮಪ್ಪ ಮನವನೇತೞಂ ನೋಯಿಸಿದನದಾವುದಪರಾಧಂ ಮಾಡಿದನಾನೆ ಮುನ್ನೆನ್ನ ಜೀವಮಂ ಬಿಡುವೆಂ ಬೆಸಸೆಂದು ಬಿನ್ನವಿಸುವುದುಮಾ ಕಾಂತೆಯಿಂತೆಂದಳ್

ಕನಸಿನೋಳಾವನಾಂ ಮದು ನಿದ್ರೆಗೆಯುತ್ತಿರೆ ಬಂದುವಂದು ಕೆ
ಮ್ಮನೆ ಕಿವಿಯೋಲೆಯಲ್ಲಿ ಕುರುಪಂ ಬರೆವಂ ಛಲದಿಂದ ಬೇಡವೇ
ಡೆನೆ ನಡೆನೋಡುವಂ ಭವನನಂದನದೊಳ್ ಸುೞಯುತ್ತಿರಲ್ಕೆ ಪಿಂ
ತನೆ ಮಯಿಕ್ಕಿ ಎಂದು ಕಡುಗೂರ್ತವೊಲೆನ್ನಯ ಬೆನ್ನನಪ್ಪುವಂ ೨೮

ಶ್ವಸಿತಾನೀಕಂಗಳಿಂದಂ ಕದಪಿನ ಬೆಮರಂ ನಾಡೆ ಕೂರ್ತಂದದಿಂದಾ
ರಿಸುವಂ ಕಸ್ತೂರಿಯಿಂದೆನ್ನಯ ಮೊಲೆಗೆಲದೊಳ್ ಪತ್ರಭಂಗಂಗಳಂ ಚಿ
ತ್ರಿಸುವಂ ಕಂಕೆಲ್ಲಿಯಂ ಲೀಲೆಯಿನೊದೆವೆಡೆಯೊಳ್ ಮಾಣದಾತ್ಮಾಂಗಮಂ ಸಂ
ದಿಸುವಂ ಪೇೞುವೆನೆಂತಾಂ ನಿಯಮಿಸಿದಪೆನಾ ಧೂರ್ತನಂ ಪತ್ರಲೇಖೇ             ೨೯

ವ|| ಎಂದು ಗಂಧರ್ವರಾಜನಂದನೆ ನುಡಿಯೆ ಕೇಳ್ದೀಕೆ ಮನುಜಮಕರಧ್ವಜಂಗಿಕ್ಕು ವಟ್ಟಳೆಂಬುದನಱದು ಸಕಲಭುವನಮಂ ಧವಳಿಸುವ ನಿನ್ನ ಸೌಭಾಗ್ಯಯಶಕ್ಕೆ ಸಂತಸಂಬಟ್ಟು ಮಲಯಾನಿಲನ ಸೋಂಕುಂ ಮಧುಮಾಸಕುಸುಮೃದ್ಧಿಯುಂ ಚಂದ್ರೋದಯಸೌಂದರ್ಯಮುಂ ಸಫಲಮಾದುದೆಂದು ಮನದೊಳ್ ಬಗೆದು ನಸುನಗುತ್ತಮಾ ಕಾಂತೆಯನಿಂತೆಂದೆಂ

ಮುನಿಯಲ್ಕಾಗದು ಯುವರಾ
ಜನ ದೋಷಮಿದಲ್ತು ಕಮಲಮುಖಿ ಕೇಳಿದು ಕಾ
ಮನ ದೋಷಮೆಂಬುದುಂ ಕಾ
ಮನೆಂಬನಾರೆಂದುಮಱಯೆನಿಂತಿರೆ ನೆಗೞ್ದಂ             ೩೦

ವ|| ಎಂದು ಮತ್ತಮಾ ಕಾಂತೆ ನೀನೆಂಬ ಕಾಮನ ರೂಪೆಂತುಟೆಂದು ಟೆಸಗೊಳ್ವುದು ಮನಂಗಂಗೆ ರೂಪೆಂಬುದೆಲ್ಲಿ ಬಂದುದು ಈತಂ ತನುವಿಲ್ಲದನಲನೆಂದು ಪೇೞ್ದು ಮತ್ತಮಿಂತೆಂದೆಂ

ಇದು ದೊಡ್ಡವರಿಗೆ ತಕ್ಕ ನಡವಳಿಕೆಯೆ? ಅಥವಾ ಸ್ನೇಹಕ್ಕೆ ತಕ್ಕ ಪ್ರತಿಫಲವೆ? ೨೭. ಹೀಗೆ ಯುವರಾಜನು ಮಾಡಿದ ಕೃತ್ಯವನ್ನು ಸಹಿಸಿಕೊಳ್ಳುವುದಕ್ಕೆ ನನಗೆ ಇನ್ನು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲಿ ನಾವಿಬ್ಬರೂ ಮತ್ತೆ ಸೇರೋಣ. ಈಗ ನಾನು ಮಾಡಿದ ತಪ್ಪಿಗಾಗಿ ಸತ್ತು ಪರಿಶುದ್ಧಳಾಗುತ್ತೇನೆ” ವ|| ಕಾದಂಬರಿಯು ಹೀಗೆ ಹೇಳಿ ಸುಮ್ಮನಾದಳು. ಆಗ ನಾನು ಬಹಳ ಭಯಪಟ್ಟು “ರಾಜಪುತ್ರಿ, ಯುವರಾಜನು ನಿನ್ನ ಹೂವಿನಂತೆ ಕೋಮಲವಾದ ಮನಸ್ಸನ್ನು ಹೇಗೆ ನೋಯಿಸಿದ್ದಾನೆ? ನಿನಗೆ ಅವನು ಯಾವ ತಪ್ಪನ್ನು ಕೋಮಲವಾದ ಮನಸ್ಸನ್ನು ಹೇಗೆ ನೋಯಿಸಿದ್ಧಾನೆ? ನಿನಗೆ ಅವನು ಯಾವ ತಪ್ಪನ್ನು ಮಾಡಿದ್ದಾನೆ? ತಿಳಿಸು. ಅದನ್ನು ಕೇಳಿ ನಿನಗಿಂತ ಮೊದಲು ನಾನೇ ಪ್ರಾಣವನ್ನು ಬಿಡುತ್ತೇನೆ” ಎಂದು ಅರಿಕೆ ಮಾಡಲಾಗಿ ಅವಳು ಹೀಗೆ ಹೇಳಿದಳು. ೨೮. “ನಾನು ಮೈಮರೆತು ನಿದ್ರೆ ಮಾಡುತ್ತಿರಲು ಕನಸಿನಲ್ಲಿ ಕಾಣಿಸಿಕೊಂಡು ಕಿವಿಯ ದಂತದ ಓಲೆಯ ಮೇಲೆ ಗುರುತನ್ನು ಬರೆಯುತ್ತಾನೆ. ನಾನು ಬೇಡ! ಬೇಡ! ಎಂದು ಹೇಳಿದರೂ ಕೇಳದೆ ನನ್ನನ್ನೇ ಹಟದಿಂದ ನಿಟ್ಟಿಸಿ ನೋಡುತ್ತಾನೆ. ನಾನು ಉದ್ಯಾನವನದಲ್ಲಿ ಓಡಾಡುತ್ತಿದ್ದರೆ ಹಿಂದುಗಡೆಯಿಂದ ನನಗೆ ಗೊತ್ತಾಗದಂತೆ ಬಂದು ಬಹಳ ಪ್ರೀತಿಯನ್ನು ತೋರಿಸುವವನಂತೆ ನನ್ನ ಬೆನ್ನನ್ನು ತಬ್ಬಿಕೊಳ್ಳುತ್ತಾನೆ. ೨೯. ನನ್ನ ಕೆನ್ನೆಯ ಮೇಲೆ ಮೂಡಿರುವ ಬೆವರನ್ನು ಬಹಳ ಪ್ರೀತಿಯನ್ನು ತೋರಿಸುವವನಂತೆ ಬಾಯಿಂದ ಊದುತ್ತಾ ಉಸಿರುಗಳಿಂದ ಆರಿಸುತ್ತಾನೆ. ನನ್ನ ಸ್ತನಗಳ ಎಡೆಯಲ್ಲಿ ಕಸ್ತೂರಿಯಿಂದ ಚಿತ್ರಗಳನ್ನು ಬರೆಯುತ್ತಾನೆ. ಕಸಿಮಾಡಲು ಅಶೋಕಮರವನ್ನು ನಾನು ಒದೆಯಲು ಹೋದರೆ, ತಾನೂ ಹೇಗೋ ಬಂದು ತನಗೇ ನನ್ನ ಕಾಲಿನ ಒದೆತ ಬೀಳುವಂತೆ ದೇಹವನ್ನು ಒಡ್ಡುತ್ತಾನೆ! ಪತ್ರಲೇಖೆ, ನೀನೇ ಹೇಳು. ನಾನೂ ಈ ಧೂರ್ತನನ್ನು ಹೇಗೆ ಹತೋಟಿಗೆ ತರಲಿ?” ವ|| ಹೀಗೆ ಗಂಧರ್ವರಾಜಕುಮಾರಿಯು ಹೇಳಲು ಅದನ್ನು ಕೇಳಿ ಇವಳು ಮನುಷ್ಯರೂಪಿನ ಮನ್ಮಥನಂತಿರುವ ನಿನ್ನಲ್ಲಿ ಮೋಹಿತಳಾಗಿದ್ದಾಳೆ –  ಎಂಬುದನ್ನು ತಿಳಿದು, ಜಗತ್ತನ್ನು ಬೆಳ್ಳಗೆ ಮಾಡುತ್ತಿರುವ ನಿನ್ನ ಸೌಂದರ್ಯದ ಕೀರ್ತಿಗೆ ಬಹಳ ಸಂತೋಷಪಟ್ಟು, ಮಲಯಮಾರುತವು ಬೀಸುವುದೂ, ವಸಂತಕಾಲದ ಪುಷ್ಪಸಂಪತ್ತೂ ಚಂದ್ರೋದಯದ ಸೌಂದರ್ಯವೂ ಇದೀಗ ಸಾರ್ಥಕವಾಯಿತೆಂದು ಮನಸ್ಸಿನಲ್ಲಿ ಆಲೋಚಿಸಿ ನಗುತ್ತಾ ಅವಳನ್ನು ಕುರಿತು ಹೀಗೆ ಹೇಳಿದೆನು. ೩೦. “ಕಮಲಮುಖಿ, ಕೇಳು, ಕೋಪಿಸಿಕೊಳ್ಳಬೇಡ, ಇದು ಯುವರಾಜನ ತಪ್ಪಲ್ಲ, ಇದು ಮನ್ಮಥನ ದೋಷ”ವೆಂದು ನಾನು ಹೇಳಿದೆನು. ಅದಕ್ಕೆ ಅವಳು “ಹೀಗೆಲ್ಲ ಮಾಡುವ ಕಾಮನಾರೆಂಬುದು ನನಗೆ ತಿಳಿಯದು” ವ|| ಎಂದವಳೆ ಮತ್ತೆ “ನೀನು ಹೇಳುವ ಮನ್ಮಥನ ಆಕಾರವು ಹೇಗಿದೆ?” ಎಂದು ಕೇಳಿದಳು. ಅದಕ್ಕೆ ನಾನು ಮನ್ಮಥನಿಗೆ ರೂಪವೆಲ್ಲಿ ಬಂತು?