ಮದನೋಗ್ರಾಗ್ನಿ ಮನಕ್ಕೆ ಮಾೞ್ಪುದು ಮಹಾಸಂತಾಪಮಂ ಜ್ವಾಲೆಯಿ
ಲ್ಲದೆಯುಂ ಕಣ್ಮಲರ್ಗಳ್ಗೆ ಪೊಣ್ಮೆಸುವುದಂಭೋಧಾರೆಯಂ ಧೂಮವಿ
ಲ್ಲದೆಯುಂ ಮೆಯ್ಗೊಗೆಯಿಪ್ಪುದಗ್ಗಲಿಪ ಪಾಂಡುಚ್ಛಾಯೆಯಂ ಭಸ್ಮಮಿ
ಲ್ಲದೆಯುಂ ತಾನೆನಿಸಲ್ ವಿಚಿತ್ರಮಿದನಂತಿಂತುಂತೆನಲ್ ಬರ್ಕುಮೇ      ೩೧

ವ|| ಅಂತೆನಿಸಿದ ಮನಸಿಜನ ನನೆಯಂಬಿನ ಕೋಳ್ಗೆ ಪಕ್ಕಾಗಲೊಡನೆ

ಇನಿಯರ ಕೂಟಮಂ ನೆನೆಯುಂತಿರ್ಪೊಡೆ ಕಾಮಿನಿಯರ್ಗೆ ಪದ್ಮಗ
ರ್ಭನ ದಿನಮಂತದುಂ ಕಿಱದು ರೂಪನೆ ಚಿತ್ರಿಸಿ ನೋಡುತಿರ್ಪೆವಾ
ವನುದಿನವೆಂದೊಡೀ ನೆಲನುಮೆಯ್ದದದಲ್ಲದೆ ತದ್ಗುಣಪ್ರಶಂ
ಸನಮನೆ ಕೇಳ್ವೆನೆಂಬೊಡೆ ಸರಸ್ವತಿಯುಂ ಜಡೆಯಾಗಿ ತೋಱುವಳ್     ೩೨

ವ|| ಎಂದು ಬಿನ್ನವಿಸೆ ನೀನೆಂದುದೆಲ್ಲ ಮಾತಿನೊಳ್ ನೆಯುಂಟು ಮನುಜೇಂದ್ರನೊಳ್ ಮನೋಭವಂ ಪಕ್ಷಪಾತಮಂ ನೆಗೞ್ದೆನ್ನೊಳೆ ಕಾಯ್ಪಂ ತೋಱ ನಿತ್ತರಿಸಲಿತ್ತನಿಲ್ಲ ನಿಮ್ಮಡಿಯ ಹೃದಯದಿನತ್ಯನುರಕ್ತೆಯಾದೆನಗೆರಡಿಲ್ಲದೆ ಕೂಡಿರ್ಪೆಯೆಂಬುದನಿಂಟಾಗಱದೆನಿಲ್ಲಿಗು ಪಾಯಮಾವುದೆಂಬುದುಂ

ಇಲ್ಲಿಗೆ ಮನುಜಮನೋಜನೆ
ಬಲ್ಲನುಪಾಯಮನದರ್ಕೆ ನೀನೀಗಳ್ ತ
ಳ್ವಿಲ್ಲದೆ ಬೆಸಸೆನ್ನಂ ಭೂ
ವಲ್ಲಭನುಮನಿಂದೆ ತಂದಪೆಂ ಚಂದ್ರಮುಖೀ ೩೩

ವ|| ಎಂದು ಬಿನ್ನವಿಸೆ

ಮನುಜಮನೋಜ ನಿನ್ನ ಪೆಸರ್ಗೇೞಲೊಡಂ ಬೆಮರಿಂದೆ ಕಣ್ಣಲಾ
ಗೆನೆ ನೆನಾಂದು ಪತ್ತಿದ ನಿಜಾಂಶುಕಮಂ ಪುಳಕಂಗಳೆತ್ತೆ ಕಾ
ಮನ ಸರದಿಂದೆ ಲಜ್ಜೆ ಪರಿಯಲ್ ಪದವೆತ್ತನುರಾಗವಿಭ್ರಮಂ
ಜನಿಯಿಸಲಾಗಳಾಕುಲತೆಯಂ ತಳೆದೆನ್ನನೊಱಲ್ದು ನೋಡಿದಳ್            ೩೪

ವ|| ಅನಂತರಮೆನ್ನನಿಂತೆಂದಳ್ ನೀನೆನಗೆರಡಿಲ್ಲದೆ ಕೂಡಿರ್ಪೆಯೆಂಬುದನಿಂಬಾಗಱದೆ ನಾದೊಡಮ ಕಠೋರಶಿರೀಷಪುಪ್ಪಸು ಕುಮಾರ ಪ್ರಕೃತಿಯಪ್ಪ ನಾರೀಜನಕೆ ಪ್ರಾಗಲ್ಭ ಂ ದೊರೆಕೊಳ್ವುದಲ್ಲೆನೆ ವಿಶೇಷದಿಂ ಬಾಲಭಾವಮನಪ್ಪುಕೆಯ್ದ ಕುಮಾರೀಜನಕ್ಕೆ ಮುನ್ನಮೆ ದೊರೆಕೊಳದು ತಾನೆ ಪೇೞ್ದಟ್ಟುವುದುಂ ಸಾಹಸಮದೆಂತೆನೆ

ಇವನು ಆಕಾರವಿಲ್ಲದ ಬೆಂಕಿ!’ ಎಂದು ಹೇಳಿ ಮತ್ತೆ ಹೀಗೆಂದೆನು. ೩೧. “ಈ ಮನ್ಮಥನೆಂಬ ತೀಕ್ಷ ವಾದ ಬೆಂಕಿಯು ಜ್ವಾಲೆಯಿಲ್ಲದಿದ್ದರೂ ಮಹಾಸಂತಾಪ ವನ್ನುಂಟುಮಾಡುತ್ತದೆ! ಹೊಗೆಯಿಲ್ಲದಿದ್ದರೂ ಕಣ್ಣಿನಲ್ಲಿ ನೀರು ಸುರಿಯುವಂತೆ ಮಾಡುತ್ತದೆ! ಬೂದಿಯಿಲ್ಲದಿದ್ದರೂ ಶರೀರಕ್ಕೆ ಅತ್ಯಕವಾದ ಬಿಳುಪನ್ನುಂಟುಮಾಡುತ್ತದೆ! ಹೀಗೆ ಆಶ್ಚರ್ಯಕರವಾದ ಇದನ್ನು ಹೀಗೆಂದು ವರ್ಣಿಸುವುದಕ್ಕೆ ಸಾಧ್ಯವೇ ಇಲ್ಲ. ವ|| ಹೀಗಿರುವ ಮದನನ ಹೂವಿನ ಬಾಣದ ಹೊಡೆತಕ್ಕೆ ಪಾತ್ರರಾದ ಕೂಡಲೆ, ೩೨. ಕಾಮಿನಿಯರಿಗೆ ನಲ್ಲರ ಸಮಾಗಮವನ್ನು ನೆನೆಯುತ್ತಿದ್ದರೆ ಬ್ರಹ್ಮನ ದಿನಮಾನವೂ ಕಮ್ಮಿಯಾದಂತೆ ಆಗುತ್ತವೆ. ಪ್ರತಿದಿನವೂ ಅವನ ರೂಪನ್ನು ಚಿತ್ರದಲ್ಲಿ ಬರೆದು ನೋಡಬೇಕೆಂದರೆ ಬರೆಯಲು ಈ ಭೂಮಿಯು ಸಾಕಾಗುವುದಿಲ್ಲ. ಅಲ್ಲದೆ ಅವನ ಗುಮಪ್ರಶಂಸೆಯನ್ನು ಕೇಳೋಣವೆಂದರೆ, ಈ ವಿಷಯದಲ್ಲಿ ಸರಸ್ವತಿಯೂ ವರ್ಣಿಸಲಾರದೆ ಮೂಕಳಾಗುತ್ತಾಳೆ” ವ|| ಎಂದು ಅರಿಕೆ ಮಾಡಿದೆನು. ಅವಳು “ನೀನು ಹೇಳುವುದೆಲ್ಲ ಆ ಮನ್ಮಥನಲ್ಲಿ ಸಂಪೂರ್ಣವಾಗಿ ಉಂಟು. ಅವನು ಚಂದ್ರಾಪೀಡನಲ್ಲಿ ಪಕ್ಷಪಾತವನ್ನು ಮಾಡಿ ನನ್ನಲ್ಲಿ ಮಾತ್ರ ಬಹಳ ಕಾರ್ಯವನ್ನು ತೋರಿಸಿದ್ದಾನೆ! ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ನಾನು ನಿನ್ನಲ್ಲಿ ಬಹಳ ಪ್ರೀತಿಯನ್ನಿಟ್ಟಿದ್ದೇನೆ. ನೀನು ನನ್ನ ಮನಸ್ಸಿನಲ್ಲಿ ಪರಸ್ಪರ ಭೇದವಿಲ್ಲದಂತೆ ಸೇರಿಕೊಂಡಿರುವೆ. ಇದನ್ನು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಪ್ರಕೃತ ಈ ವಿಷಯದಲ್ಲಿ ಸರಿಯಾದ ಉಪಾಯವಾವುದು?” ಎಂದು ಕೇಳಿದಳು. ೩೩. “ಚಂದ್ರಮುಖಿ, ಇದಕ್ಕೆ ಉಪಾಯವು ಮನ್ಮಥಾಕಾರನಾದ ಚಂದ್ರಾಪೀಡನಿಗೆ ಗೊತ್ತು. ಆದ್ದರಿಂದ ಈಗ ನೀನು ನನಗೆ ಕೂಡಲೆ ಅಪ್ಪಣೆಕೊಡು. ಈಗಲೆ ಹೋಗಿ ಯುವರಾಜನನ್ನು ಕರೆತರುತ್ತೇನೆ. ವ|| ಎಂದು ನಾನು ಅರಿಕೆ ಮಾಡಿದೆನು. ೩೪. ಎಲೈ ಮನುಷ್ಯರೂಪಿನ ಕಾಮನೆ, ನಿನ್ನ ಹೆಸರನ್ನು ಕೇಳಿದ ಕೂಡಲೆ ಕ್ಷಣಮಾತ್ರದಲ್ಲಿ ಅವಳ ಶರೀರವೆಲ್ಲ ಬೆವರಿನಿಂದ ಬಹಳವಾಗಿ ನೆಂದು ಸೀರೆಯು ಅಂಟಿಕೊಳ್ಳಲು, ಎದ್ದ ರೋಮಾಂಚಗಳು ಅದನ್ನು ಮೇಲಕ್ಕೆ ಎತ್ತುವಂತೆ ಕಾಣುತ್ತಿತ್ತು. ಮನ್ವಥನ ಬಾಣದಿಂದ ನಾಚಿಕೆಯು ಓಡಿಹೋಗಲು, ಅವಕಾಶವನ್ನು ಪಡೆದು ಪ್ರೀತಿಯ ವಿಲಾಸಗಳು ಉಂಟಾದವು. ಮನಸ್ಸು ಚಂಚಲತೆಯನ್ನು ಪಡೆಯಿತು. ಹಾಗೆಯೆ ಅವಳು ನನ್ನನ್ನು ಪ್ರೀತಿಯಿಂದ ನೋಡಿದಳು”. ವ|| ಬಳಿಕ

ಪದದೆನ್ನಂ ಕಾಮನಿತ್ತಂ ತನಗೆನಲದು ಪೊರ್ದಲ್ ನೆವಂ ಕೂರ್ಪೆ ನಾನೆಂ
ಬುದು ವೇಶ್ಯಾಲಾಪವಾಂ ತನ್ನಯ ವಿರಹದೆ ಸತ್ತಪ್ಪೆನೆಂಬುದು ದೃಷ್ಟ
ಕ್ಕದಸತ್ಯಂ ಬರ್ಪೆ ನಾನೆಂಬುದು ಚಪಲತೆ ತಾಂ ಬರ್ಪುದೆಂದಂದು ಸೌಭಾ
ಗ್ಯದ ಗರ್ವಂ ಮೇಲೆ ಬಿೞ್ದೂನೆಳಸಿದಪೆನೆನಲ್ ಬಂಧಕೀಧಾಷ್ಟ ಮಲ್ತೇ      ೩೫

ವ|| ಅದೞನೊಂದುಮಂ ಪೇೞ್ದಟ್ಟಲಱಯೆನಿತ್ತ ಚಿತ್ರಜನುಂ ನಿತ್ತರಿಸಲಿತ್ತಪ ನಿಲ್ಲೆಂತಾನುಮಖಿಲ ಜನಾವಿಭಾವ್ಯನಾಗಿ ಸಿದ್ಧನಂತೆನಗೆಡೆವಿಡದೆ ರೂಪುದೋೞಸುವ ಸಂಕಲ್ಪಮಯನಪ್ಪ ಯುವರಾಜನೆ ಮದೀಯ ವಿರಹಮರಣಭಯಹರಣನಪ್ಪುದಕ್ಕೆ ಕಾರಣನೆಂದು ಕಾದಂಬರಿ ನುಡಿದುಸಿರದಿರ್ಪುದುಂ

ಬರಪಾರದೆ ದೂದವಿಯರ
ಹರಿಸದೆ ಮೞೆ ಮಂಜು ಕಾಳಗತ್ತಲೆಯೆಂದೋ
ಸರಿಸದೆ ಮನವೊಲ್ದಾಗಳ್
ನೆರೆಯಲ್ ದೊರೆಕೊಳ್ವ ರತಮೆ ಸಂಕಲ್ಪರತಂ           ೩೬

ವ|| ಎಂದು

ಒಸೆದಪ್ಪಲ್ ತಾನದಿಲ್ಲಂ ಕುಚಯುಗಳ ತಿರೋಧಾನಜಾತಶ್ರಮಂ ಚುಂ
ಬಿಸುವಾಗಳ್ ಶಬ್ದಮಿಲ್ಲ ವ್ರಣನಖಮುಖದಂತಕ್ಷತಂ ನಾಣ್ಗೆ ಪಕ್ಕಾ
ಗಿಸದೆಂತುಂ ಕುಂತಳೋತ್ಕರ್ಷಣಮಳಕೆಗಳು ಸೂಸದೆಂಬೊಂದು ಸಂಕ
ಲ್ಪ ಸಮಾಯೋಗಂ ವಿಯೋಗಾಕುಲಕುಲಲಲನಾಜೀವನಾಧಾರಮಲ್ತೇ ೩೭

ವ|| ಇಂತೆನ್ನೊಳ್ ಬಗೆಯುತ್ತಿರ್ಪನ್ನೆಗಂ ದಿವಸಾವಸಾನಸಮಯದೊಳನುರಕ್ತಯಾದ ಕಾದಂಬರೀದೇವಿಯ ಹೃದಯಮೆ ಪೋದಪುದೆಂಬಂತೆ ರವಿಬಂಬಮಪರಾಂಬುವಿಲಂಬಿಯಾಗೆ

ಅವಳು ನನ್ನನ್ನು ಕುರಿತು ಹೀಗೆ ಹೇಳಿದಳು. “ಪತ್ರಲೇಖೆ, ನೀನು ನನ್ನಲ್ಲಿ ಏಕದೇಹದಂತೆ ಕೂಡಿಕೊಂಡು ಪ್ರೀತಿಯಿಟ್ಟಿರುವುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಆದರೂ ಮೃದುವಾದ ಬಾಗೆಹೂವಿನಂತೆ ಕೋಮಲವಾದ ಸ್ವಭಾವವುಳ್ಳ ಹೆಂಗಸರಿಗೆ ಸಾಮಾನ್ಯವಾಗಿ ತಾನಾಗಿಯೇ ಹೇಳಿಕಳುಹಿಸುವಷ್ಟು ದಿಟ್ಟತನವಿರುವುದಿಲ್ಲ. ಹೀಗಿರಲು ವಿಶೇಷವಾಗಿ ಇನ್ನೂ ಎಳೆತನದಲ್ಲೆ ಇರುವ ಕನ್ನಿಕೆಯರಿಗಂತೂ ಮೊದಲೇ ಇರುವುದಿಲ್ಲ. ಅಲ್ಲದೆ ತಾನೇ ಹೇಳಿ ಕಳುಹಿಸುವುದು ಸಾಹಸವೇ ಸರಿ. ಹೇಗೆಂದರೆ ೩೫. ‘ಮನ್ಮಥನು ನ್ನನ್ನನ್ನು ನಿನಗೆ ಪ್ರೀತಿಯಿಂದ ಒಪ್ಪಿಸಿದ್ದಾನೆ’ ಇದು ಹೇಳಿ ಕಳುಹಿಸೋಣವೆಂದರೆ, ಅವನನ್ನು ಸೇರಿಕೊಳ್ಳಲು ನೆವ ಹೇಳಿದಳೆಂಬ ಭಾವನೆಯುಂಟಾಗುತ್ತದೆ. ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದರೆ ಅದು ಸೂಳೆ ಹೇಳುವ ಮಾತಾಗುತ್ತದೆ. ‘ನಾನು ನಿನ್ನಯ ವಿರಹವ್ಯಥೆಯಿಂದ ಸಾಯುವೆನೆ’ಂದರೆ ಅದು ಕಣ್ಣೆದುರಿಗೇ ಬದುಕಿರುವುದರಿಂದ ಸುಳ್ಳು ಹೇಳಿದಂತಾಗುತ್ತದೆ. ‘ನಾನು ನೀನು ಇರುವ ಕಡೆಗೇ ಬಂದುಬಿಡುತ್ತೇನೆ’ ಎಂದರೆ ನನ್ನ ಚಾಪಲ್ಯವನ್ನು ತೋರಿಸಿಕೊಂಡಂತಾಗುತ್ತದೆ. “ನೀನೇ ನನ್ನಲ್ಲಿಗೆ ಬರಬೇಕೆಂದು’ ಹೇಳಿದರೆ ಅವನು ನನ್ನ ಕೈವಶದಲ್ಲಿರುವನೆಂಬ ಜಂಭವನ್ನು ತೋರಿಸಿಕೊಂಡಂತಾಗುತ್ತದೆ! ‘ನಾನೇ ನಿನ್ನನ್ನು ಬಯಸಿದ್ದೇನೆ’ ಎಂದರೆ ಅದು ಜಾರೆಯರ ದಿಟ್ಟತನದ ಮಾತಾಗುತ್ತದೆ. ವ|| ಆದ್ದರಿಂದ ನನಗೆ ಏನು ಹೇಳಿಕಳುಹಿಸುವುದಕ್ಕೂ ತಿಳಿಯುವುದಿಲ್ಲ. ಈ ಕಡೆ ಮನ್ಮಥನು ನನ್ನನ್ನು ಸಹಿಸಿಕೊಂಡಿರಲು ಬಿಡುವುದಿಲ್ಲ. ಹೇಗೋ ಯಾರ ಕಣ್ಣಿಗೂ ಕಾಣದಂತೆ ಯೋಗಿಯ ಹಾಗೆ ಏಕಪ್ರಕಾರವಾಗಿ ರೂಪವನ್ನು ತೋರಿಸುತ್ತಿರುವ ಭಾವನಾಮಯನಾದ ಯುವರಾಜನೇ ನನಗೆ ವಿರಹದಿಂದ ಉಂಟಾಗಿರುವ ಮರಣಭೀತಿಯನ್ನು ಪರಿಹರಿಸುವುದಕ್ಕೆ ಕಾರಣನಾಗಿದ್ದಾನೆ” ಎಂದು ಹೇಳಿ ಕಾದಂಬರಿ ಮಾತು ನಿಲ್ಲಿಸಿದಳು. ೩೬. ಆಗ ನಾನು “ವಿರಹಪೀಡಿತರಾದಕಾಮಿನಿಯರು ಕಾಂತನನ್ನು ಮನಸ್ಸಿನಲ್ಲೇ ಪ್ರೀತಿಸಿ ಮನಸ್ಸಿನಲ್ಲೇ ಬೆರೆತರೆ ಉಂಟಾಗುವ ಸಂಭೋಗವೆ ಸಂಕಲ್ಪಸಂಭೋಗ. ಅದರಲ್ಲಿ ನಾಯಕನ ಆಗಮನವನ್ನು ನಿರೀಕ್ಷಿಸಬೇಕಾದ್ದಿಲ್ಲ. ದೂತಿಯರನ್ನು ಕಳುಹಿಸಬೇಕಾಗಿಲ್ಲ, ಮಳೆ, ಮಂಜು, ಕಗ್ಗತ್ತಲೆ ಎಂಬುದಾಗಿ ಹಿಂಜರಿಯಬೇಕಾದ್ದಿಲ್ಲ. ವ|| ಎಂದು ೩೭. ಸಂಕಲ್ಪಸುರತದಲ್ಲಿ ಪ್ರೀತಿಯಿಂದ ತಬ್ಬಿಕೊಳ್ಳುವಾಗ ಮಧ್ಯೆ ಎರಡು ಕುಚಗಳು ಅಡ್ಡಬಂದು ಶ್ರಮವನ್ನುಂಟುಮಾಡುವುದಿಲ್ಲ. ಚುಂಬಿಸುವಾಗ ಶಬ್ದವುಂಟಾಗುವುದಿಲ್ಲ. ಮತ್ತು ನಖಕ್ಷತ ದಂತಕ್ಷತಗಳುಂಟಾಗಿ ನಾಚಿಕೆಯನ್ನುಂಟು ಮಾಡುವುದಿಲ್ಲ. ಕೂದಲುಗಳನ್ನು ಎಳೆಯುವ ಪ್ರಸಂಗವಿಲ್ಲದ್ದರಿಂದ ಮುಂಗುರುಳು ಚದರುವುದಿಲ್ಲ. ಇಂತಹ ಸಂಕಲ್ಪಸಮಾಗಮವು ವಿರಹಪೀಡಿತರಾದ ಕುಲಸ್ತ್ರೀಯರಿಗೆ ಜೀವನಾಧಾರವಾಗಿದೆ” ಎಂದುಕೊಂಡೆನು. ವ|| ಹೀಗೆ ನಾನು ಮನಸ್ಸಿನಲ್ಲೇ ಆಲೋಚಿಸುತ್ತಿರುವಾಗ ಸಾಯಂಕಾಲವಾಯಿತು. ಅನುರಕ್ತಳಾದ ಕಾದಂಬರಿಯ

ತರುಣಿಯ ವಿಯೋಗತಾಪ
ಕ್ಕೆ ರಜನಿಯಂ ಕೆಳದಿಯಂತೆ ತಳಿರ್ವಾಸಂ ಬಿ
ತ್ತರಿಸುತ್ತಮಿರ್ದಳೆಂಬಂ
ತಿರೆ ಬಿತ್ತರಿಸಿತ್ತು ಸಾಂದ್ರ ಸಂಧ್ಯಾರಾಗಂ      ೩೮

ವ|| ಅಂತಾ ಸಮಯದೊಳ್ ಗಂಧರ್ವರಾಜನಂದನೆ ಸುರಭಿಗಂಧೋದ್ಗಾರಿಗಳಪ್ಪ ದೀವಿಗೆಗಳಂ ಪಿಡಿದು ದೀಪಧಾರಿಣಿಯರ್ವಂದು ನಿಜನಿಯೋಗಾಶೂನ್ಯಾರ್ಥಮಾಗಿ ಗೆಂಟಱಳೆ ಬಳಸಲವಂ ಸೈರಿಸದೆ ನಿವಾರಿಸುತ್ತಮಿರ್ದು

ಒದವಿದ ತನುರುಚಿಯೊಳ್ ಪೊಳೆ
ಯೆ ದೀಪಿಕಾಪ್ರಕರಮತನುಶರಸಂತತಿಯಿಂ
ಪುದಿದವೊಲಿರ್ದಳ್ ಮುಗುಳೇ
ಱದ ಚಂಪಕಲತೆವೊಲಿರ್ದಳಂತಾ ಕ್ಷಣದೊಳ್            ೩೯

ವ|| ಅಂತು ಕಿಱದುಬೇಗಮಿರ್ದು ಪೊಱಗಿರ್ದೆಮ್ಮಂ ಕಾದಂಬರಿ ಬೆಸಗೊಳ್ವುದು ಮಾವಿರ್ದಪೆವೆಂಬಂತೆ ಕಲಹಂಸಕಲಾಲಾಪ ಮೃದುರವಂಗಳಪ್ಪ ನೂಪುರರವಂಗಳುಣ್ಮೆ ಬೆಸನಂ ಪಾಱುತ್ತಿರ್ದ ಪರಿಜನಂಗಳು ನೋಡಿ ತರಳಿಕೆಯ ಕೆಯ್ಯ ತಂಬುಲಮಂ ತಳೆದುಕೊಂಡೆನಗೆ ಪಿರಿದನುಗ್ರ ಹದಿನಿತ್ತು ಕೇಯೂರಕ ನೀಂ ಪತ್ರಲೇಖೆಯ ನೊಡಗೊಂಡು ಪೋಗಿ ಕಟಕಮಂ ಪುಗಿಸೆಂದು ತನ್ನ ತೊಟ್ಟ ತೊಡಿಗೆಗಳೆಲ್ಲಮನೆನಗಂಗಚಿತ್ರಮನಿತ್ತೆಂತಾನುಂ ಬೀೞ್ಕೊಳಿಸಿ ಕಳಿಪಿ ತ್ವದೀಯಪ್ರೇಮಪ್ರಸಾರಿತದೃಷ್ಟಿಗಳಿನೆನ್ನಂ ಕಿಱದಂತರಮಂ ಕಳುಪುತ್ತಂ ಬರೆ ಕೇಯೂರಕಂಬೆರಸು ಮೇಘನಾದನಲ್ಲಿಗೆವಂದಾಗಳಾತಂ ದೇವರ್ ಬೆಸಸಿದಂದದೊಳೆ ಕೇಯೂರಕಂಗೆ ಪೇೞ್ವುದುಮದೆಲ್ಲಮಂ ಕೇಳ್ದಾತಂ ಹೇಮಕೂಟಕ್ಕೆ ಪೋದನಾನುಂ
ಮೇಘನಾದನೊಡನಿತ್ತಂ ಬಂದೆನಲ್ಲದೆಯುಂ
ನಿನ್ನಯ ವಿರಹೋದ್ರೇಕದಿ
ನಿನ್ನುಂ ತಳಿರ್ವಸೆಯ ಮೇಲೆಪೊರಳುತ್ತಿರ್ದಾ
ಕನ್ನೆಯ ರೂಪೆನ್ನಿದಿರೊಳ್
ಸನ್ನಿದಮಾದಂತೆ ತೋಱುತಿರ್ದಪುದೀಗಳ್   ೪೦

ವ|| ಮತ್ತಮಾ ಚಿತ್ರರಥನಂದನೆಯ ಮದನಾನಲಂ ದಿನಕರೋದಯಂ ಮೊದಲ್ಗೊಂಡು ಸೂರ್ಯಕಾಂತೋ ಪಲಾನಲನಂತೆ ಗಾಳಿಯಿಲ್ಲದುರಿಯುತಂ ಪರಿಜನಂಗಳ ಕೆಯ್ಯ ಕೆಂದಳಿರ ಸಂದಣಿಯೊಳಂ ನಾಂದ ಬೀಸುವ ಬಿಜ್ಜಣಿಗೆಗಳ ತೋರ ಸೀರ್ಪನಿಯ ಸರಿಯೊಳಂ ನಂದನಹರಿಚಂದನಚ್ಛಟಾಚ್ಛುರಣದೊಳಮೆಡವಱಯದೆ ಪುಡಿಗುಟ್ಟಿದ ಮುತ್ತಿನ ಮಳಲ್ಗೆದಱದ ಮಣಿಕುಟ್ಟಮದೊಳಂ ಮಾಣದುತ್ಕೀಲಿತ

ಹೃದಯವೇ ಹೋಗುತ್ತಿರುವಂತೆ ಸೂರ್ಯಬಿಂಬವು ಪಶ್ಚಿಮಸಮುದ್ರಕ್ಕೆ ಜೋತು ಬೀಳಲಾರಂಭಿಸಿತು. ೩೮. ರಾತ್ರಿಯು ತಾನೂ ಒಬ್ಬಳು ಗೆಳತಿಯಾಗಿ ಕಾದಂಬರಿಯ ವಿರಹತಾಪ ಪರಿಹಾರಕ್ಕಾಗಿ ಚಿಗುರಿನ ಹಾಸಿಗೆಯನ್ನು ಹಾಸುತ್ತಿರುವಳೋ ಎಂಬಂತೆ ದಟ್ಟವಾದ ಸಂಜೆಗೆಂಪು ವ್ಯಾಪಿಸಿತು. ವ|| ಆ ವೇಳೆಯಲ್ಲಿ ಸುವಾಸನೆಯನ್ನು ಬೀರುತ್ತಿರುವ ದೀವಟಿಗೆಗಳನ್ನು ಹಿಡಿದುಕೊಂಡು. ದೀವಟಿಗೆಯವರು ಬಂಧು ತಮ್ಮ ಊಳಿಗವನ್ನು ಮಾಡುವುದಕ್ಕಾಗಿ ಹತ್ತಿರದಲ್ಲೇ ಸುತ್ತುವರಿಯಲು ಕಾದಂಬರಿಯು ಅವುಗಳನ್ನು ತಾಳಲಾರದೆ ತಡೆಯುತ್ತಿದ್ದಳು. ೩೯. ಆಗ ಅವಳ ಕಾಂತಿಮಯವಾದ ಶರೀರದಲ್ಲಿ ದೀಪಗಳು ಪ್ರತಿಬಿಂಬಿಸಿರಲು, ಮನ್ಮಥನ ಬಾಣಗಳು ದೇಹದಲ್ಲೆಲ್ಲಾ ನಾಟಿಕೊಂಡಿರುವಂತೆ ಕಾಣುತ್ತಿತ್ತು. ಆಗ ಅವಳು ಮೊಗ್ಗುಗಳಿಂದ ಭರಿತವಾದ ಸಂಪಿಗೆಗಿಡದಂತೆ ಕಾಣುತ್ತಿದ್ದಳು. ವ|| ಹಾಗೆ ಸ್ವಲ್ಪಕಾಲವಿದ್ದು ಹೊರಗಿದ್ದವರನ್ನು ಕರೆದಾಗ “ನಾವು ಇಲ್ಲೇ ಇದ್ದೇವಮ್ಮ” ಎಂದು ಹೇಳುವಂತೆ ಕಲಹಂಸಗಳ ಇಂಪಾದ ಧ್ವನಿಯಂತೆ ಮಧುರವಾದ ಕಾಲ್ಗಡಗಗಳ ಧ್ವನಿಗಳು ಹೊಮ್ಮುತ್ತಿರಲು, ಅವಳ ಅಪ್ಪಣೆಯನ್ನೇ ನಿರೀಕ್ಷಿಸುತ್ತಿರುವ ಪರಿಜನರನ್ನು ನೋಡಿ ತರಳಿಕೆಯ ಕೈಯಲ್ಲಿದ್ದ ತಾಂಬೂಲವನ್ನು ತೆಗೆದುಕೊಂಡು ನನಗೆ ಬಹಳ ಅನುಗ್ರಹದಿಂದ ಕೊಟ್ಟಳು. ಬಳಿಕ ಕೇಯೂರಕನನ್ನೂ ಕರೆದು “ಕೇಯೂರಕ ನೀನು ಪತ್ರಲೇಖೆಯನ್ನು ಕರೆದುಕೊಂಡು ಹೋಗಿ ಯುವರಾಜನ ಶಿಬಿರಕ್ಕೆ ಮುಟ್ಟಿಸಿ ಬಾ” ಎಂದು ಅಪ್ಪಣೆ ಮಾಡಿದಳು. ನನಗೆ ತಾನು ಧರಿಸಿದ್ದ ಒಡವೆಗಳನ್ನು ಉಡುಗೊರೆಯನ್ನಾಗಿ ಕೊಟ್ಟು, ನಿನ್ನ ಮೇಲಿನ ಪ್ರೀತಿಯಿಂದ ಅಗಲವಾದ ಕಣ್ಣುಗಳಿಂದ ನನ್ನನ್ನೇ ನೋಡುತ್ತಾ ಇಷ್ಟವಿಲ್ಲದಿದ್ದರೂ ಬಹಳ ಕಷ್ಟದಿಂದ ಪ್ರಯಾಣ ಮಾಡಿಸಿದಳು. ನಾನು ಕೇಯೂರಕನೊಂದಿಗೆ ಪ್ರಯಾಣ ಮಾಡುತ್ತಾ ಮೇಘನಾದನಿದ್ದಲ್ಲಿಗೆ ಬಂದೆನು. ಮೇಘನಾದನು ತಾವು ಹೇಳಿದುದನೆಲ್ಲ ಅವನಿಗೆ ತಿಳಿಸಿದನು. ಕೇಯೂರಕನು ಅದನ್ನೆಲ್ಲ ಕೇಳಿಕೊಂಡು ಹೇಮಕೂಟಕ್ಕೆ ಹೋದನು. ನಾನು ಮೇಘನಾದನ ಜೊತೆಯಲ್ಲಿ ಈ ಕಡೆ ಬಂದೆನು. ಅಲ್ಲದೆ. ೪೦. ನಿನ್ನ ವಿರಹವ್ಯಥೆಯಿಂದ ಚಿಗುರಿನ ಹಾಸಿಗೆಯ ಮೇಲೆ ಹೊರಳಾಡುತ್ತಿರುವ ಆ ಕಾದಂಬರಿಯ ಆಕಾರವು ಈಗಲೂ ನನ್ನ ಎದುರಿಗೆ ಕಣ್ಣಿಗೆ ಕಟ್ಟಿದಂತೆ ತೋರುತ್ತದೆ. ವ|| ಮತ್ತು ಆ ಕಾದಂಬರಿಯ ವಿರಹಾಗ್ನಿಯು ಸೂರ್ಯೋದಯದಿಂದ ಪ್ರಾರಂಭವಾಗಿ ಸೂರ್ಯಕಾಂತಶಿಲೆಯ ಬೆಂಕಿಯಂತೆ ಗಾಳಿಯಿಲ್ಲದೆ ಉರಿಯುತ್ತಿರುತ್ತದೆ. ಪರಿಜನರ ಕೈಯಲ್ಲಿರುವ ಕೆಂದಳಿರುಗಳಿಂದಲೂ,

ದಂತಮಯ ಕಲಹಂಸಪಂಕ್ತಿ ಮುಕ್ತಾಂಬುಧಾರೆಗಳಪ್ಪ ಧಾರಾಗೃಹಂಗಳಿನುಪಶಮಿಸದಂತೆಂತು ವಿಚಲಿತ ಜಲಯಂತ್ರವಿನಿರ್ಗಳಿತಂಗಳಪ್ಪ ಶಿಶಿರಶೀಕರನಿಕರ ತಾರಕಿತ ವಾರಿಧಾರೆಗಳಿಂ ತಳ್ಪೊಯ್ವುದಂತಂತೆ ಸಿಡಿಲ ಕಿಚ್ಚಿನವೊಲಗ್ಗಳಮುರಿವುದಂತುಮಲ್ಲದೆಯುಂ

ಅಳುರುತ್ತಮಿರ್ಪ ಮದನಾ
ನಳನಿಂದೆಂತೆಂತು ಬೇವುದನಿತಂತತಿನಿ
ರ್ಮಳಮಪ್ಪುದು ಲಾವಣ್ಯಂ
ನಳಿನಾನನೆಗಗ್ನಿಶೌಚವಸ್ತ್ರದ ತೆಱದಿಂ          ೪೧

ವ|| ಅಂತುಮಲ್ಲದೆಯುಂ

ಮೆಲ್ಲಿದುವಪ್ಪ ವಾರಿಕಣಜಾಲದೆ ಮೌಕ್ತಿಕಜಾಲಮಪ್ಪವೊಲ್
ಮೆಲ್ಲೆರ್ದೆಯುಂ ವಿಯೋಗಿಜನಕಂತದು ಕಲ್ಲೆರ್ದೆಯಪ್ಪುದಲ್ತೆ ಅಂ
ತಲ್ಲದೊಡಾವಗಂ ಕರಗದಿರ್ಪರೆ ಪೆರ್ಚಿದ ತಾಪದಿಂದೆ ಮೇಣ್
ನಲ್ಲರ ಕೂಡುವಾಸೆಯೆ ಬರ್ದುಂಕುವುದರ್ಕೆ ನಿಮಿತ್ತಮಾಗದೇ    ೪೨

ವ|| ಅಂತಾ ಕಾಂತೆಗಾದ ಸಂತಾಪಮಂ ಕನಸಿನೊಳಾದೊಡಂ ಬರ್ದುಂಕುವುದರ್ಕರಿದೆಂಬುದಂ ನೀಂ ಕಂಡುದಿಲ್ಲ ನಿನಗದೇನೆಂದು ಪೇೞ್ದೆನಾವುದುಪಾಯದಿಂ ಪ್ರತ್ಯಕ್ಷಂ ಮಾಡಿ ತೋಱುವೆಂ ಪ್ರಚಂಡಕಿರಣಾತಪಸಹಸ್ರಂಗಳುಮಂ ಸೈರಿಸುವ ಸರಸಿಜಂಗಳುಮಾಕೆಯ ಮೆಯ್ ಸೋಂಕಿತನಿತಳೆ ಕಱಂಗಿ ಕರಿಯಪ್ಪುವದುಕಾರಣದಿನಕಾರಣದಾರುಣನಪ್ಪ ಮನ್ಮಥನಿನೆಡೆವಿಡದೆ ಬೇವಸಂಬಡುತಿರ್ದಳ ದಲ್ಲದೆಯುಂ

ತರುಣಿಗೆ ದೇವ ನಿಜಾನು
ಸ್ಮರಣದೆ ಮಂದೈಸಿ ಮೆಯ್ಯೊಳುಣ್ಮಿದ ಪುಳಕಾಂ
ಕುರನಿಕರಂ ಕುಸುಮಾಯುಧ
ಶರಪಾತಕ್ಕಗಿದು ತೊಟ್ಟ ಕವಚಮಿದೆನಿಕುಂ   ೪೩

ಚಕಿತಮೃಗೀವಿಲೋಚನೆಯ ಸುಯ್ಯೆಲರಿಂದೆ ತೆರಳ್ದು ಪಾಱುವಂ
ಶುಕಮನದೊರ್ಮೆಯಾ ಪುಳಕಿತೋದ್ಘಕುಚದ್ವಯದೊಳ್ ತಗುಳ್ಬುತಂ
ಪ್ರಕಟಿಸಿದಂತೆ ತೋಱುವುದು ನಿನ್ನಯ ಕೆಯ್ವಿಡಿಯಲ್ಕೆವೇಡಿ ಕಂ
ಟಕಶಯನವ್ರತಾಚರಣಮಂ ತಳೆದೊಂದಿರವಂ ಕರಾಂಬುಜಂ   ೪೪

ನೀರಿನಿಂದ ತೋಯಿಸಿ ಬೀಸುತ್ತಿರುವ ಬೀಸಣಿಗೆಗಳ ದಪ್ಪವಾದ ನೀರಿನ ಹನಿಯ ಧಾರೆಯಿಂದಲೂ, ನಂದನವನದ ಶ್ರೀಗಂಧದ ಲೇಪನದಿಂದಲೂ ಶಾಂತವಾಗುವುದಿಲ್ಲ. ಚೂರ್ಣ ಮಾಡಿದ ಮುತ್ತಿನ ಮರಳುಗನ್ನು ದಟ್ಟವಾಗಿ ಹರಡಿರುವ ರತ್ನದ ನೆಲಗಟ್ಟುಗಳಿಂದಲೂ ಪರಿಹಾರವಾಗುವುದಿಲ್ಲ. ಸ್ಥಾಪಿಸಿರುವ ದಂತಮಯವಾದ ಯಂತ್ರದ ಕಲಹಂಸಪಂಕ್ತಿಗಳಿಂದ ಚಿಮ್ಮುತ್ತಿರುವ ಜಲಧಾರೆಗಳುಳ್ಳ ಸ್ನಾನದ ಮನೆಗಳಿಂದಲೂ ನಿವಾಹಣೆಯಾಗುವುದಿಲ್ಲ. ಅಲ್ಲದೆ ಕಾರಂಜಿಗಳಿಂದ ಸುರಿಯುತ್ತಿರುವ ತಂಪಾದ ಹನಿಗಳಿಂದ ಕೂಡಿಕೊಂಡಿರುವ ಜಲಧಾರೆಗಳಿಂದ ಎಷ್ಟೆಷ್ಟು ಹೊಡೆದರೂ ಸಿಡಿಲಿನ ಬೆಂಕಿಯಂತೆ ಹೆಚ್ಚು ಹೆಚ್ಚಾಗಿ ಉರಿಯುತ್ತಲೇ ಇರುತ್ತದೆ. ಅದಲ್ಲದೆ ೪೧. ವ್ಯಾಪಿಸುತ್ತಿರುವ ವಿರಹಾಗ್ನಿಯಿಂದ ಎಷ್ಟೆಷ್ಟು ಮಟ್ಟಿಗೆ ಅವಳ ಶರೀರಸೌಂದರ್ಯವು ಬೇಯುತ್ತದೆಯೋ ಅಷ್ಟಷ್ಟು ಹೆಚ್ಚಾಗಿ ಅದು ಉಬ್ಬೆಗೆ ಹಾಕಿದ ಬಟ್ಟೆಯಂತೆ ಸ್ವಚ್ಛವಾಗುತ್ತನೆ. ವ|| ಅದಲ್ಲದೆ

೪೨. ನೀರು ಸ್ವಭಾವವಾಗಿ ಮೃದುವಾದುದು, ಅದು ಕಪ್ಪೆಯ ಚಿಪ್ಪಿನಲ್ಲಿ ಬಿದ್ದು ಕಠಿನವಾದ ಮುತ್ತಾಗುತ್ತದೆ. ಹಾಗೆಯೆ ಹೆಂಗಸರ ಕೋಮಲವಾದ ಹೃದಯವು ವಿರಹಾವಸ್ಥೆಯಲ್ಲಿ ಕಲ್ಲೆದೆಯಾಗಿಬಿಡುತ್ತದೆ. ಹಾಗಲ್ಲದಿದ್ದರೆ ಆಗಿನ ಹೆಚ್ಚಾದ ಸಂತಾಪದಿಂದ ಅದು ಕರಗಿಹೋಗದೆ ಇರುತ್ತಿತ್ತೆ? ಮತ್ತು ಪ್ರಿಯರೊಂದಿಗೆ ಸಮಾಗಮವಾಗುವುದೆಂಬ ಆಸೆಯೇ ಅವರು ಬದುಕಿರುವುದಕ್ಕೆ ಅವಲಂಬನವಾಗಿರುತ್ತವೆ. ವ|| ಹಾಗೆ ಆ ಕಾದಂಬರಿಯು ಅನುಭವಿಸುತ್ತಿರುವ ಸಂತಾಪವನ್ನೂ ಅವಳು ಬದುಕುವುದು ಅಸಾಧ್ಯವೆಂಬುದನ್ನೂ ನೀವು ಕನಸಿನಲ್ಲೂ ಕಂಡುಕೊಂಡಿಲ್ಲ. ನಿಮಗೆ ನಾನು ಅದನ್ನು ಹೇಗೆ ತಿಳಿಸಲಿ? ಯಾವ ಉಪಾಯದಿಂದ ಕಣ್ಣಿಗೆ ಕಟ್ಟುವಂತೆ ಮಾಡಲಿ? ಸೂರ್ಯನ ತೀಕ್ಷ ವಾದ ಸಹಸ್ರಾರು ಕಿರಣಗಳ ಬಿಸಿಲನ್ನು ತಾಳಿಕೊಳ್ಳಬಲ್ಲ ತಾವರೆಗಳು ಅವಳ ದೇಹಕ್ಕೆ ಸೋಕಿದ ಕೂಡಲೆ ಬಾಡಿ ಕರಿಕಾಗುತ್ತವೆ. ಆ ಕಾರಣದಿಂದ ನಿಷ್ಕಾರಣವಾಗಿ ಕ್ರೂರನಾದ ಮನ್ಮಥನಿಂದ ಒಂದೇಸಮನೆ ತಳಮಳಗೊಳ್ಳುತ್ತಿದ್ದಾಳೆ. ಅದಲ್ಲದೆ, ೪೩. ಎಲೈ ಪ್ರಭುವೆ, ಆ ಕಾದಂಬರಿಗೆ ನಿನ್ನ ಸ್ಮರಣೆಯಿಂದ ಶರೀರದಲ್ಲೆಲ್ಲಾ ದಟ್ಟವಾಗಿ ರೋಮಾಂಚನವುಂಟಾಗುತ್ತದೆ. ಅದು ಮನ್ಮಥನ ಬಾಣಕ್ಕೆ ಹೆದರಿ, ಅವಳು ತೊಟ್ಟುಕೊಂಡಿರುವ ಕವಚನದಂತೆ ತೋರುತ್ತದೆ. ೪೪. ಹೆದರಿದ ಜಿಂಕಿಯಂತೆ ಕಣ್ಣುಳ್ಳ ಕಾದಬಂರಿಯು ನಿಟ್ಟುಸಿರಿನ ಗಾಳಿಯಿಂದ ಜಾರಿ ಹಾರುವ ಬಟ್ಟೆಯನ್ನು ಒಮ್ಮೆಮ್ಮೆ ರೋಮಾಂಚನದಿಂದ ಮುಳ್ಳು ಹಾಸಿದಂತಿರುವ ತನ್ನ ತೋರಮೊಲೆಗಳ ಮೇಲೆ ಬಲಗೈಯಿಂದ ಇರಿಸುತ್ತಿದ್ದಳು. ಇದರಿಂದ ಅವಳ ಬಲಗೈ

ಅರುಣಮಣಿವಲಯರುಚಿ ಪ
ರ್ವಿರಲಂತರ್ಜ್ವಲಿತ ಮದನಶಿಖಿ ಪರ್ವಿದುದೆಂ
ದಿರದೆ ಬಿದಿರ್ವಳ್ ಕದಪಿನ
ಭರದಿಂ ಜೋವೇಱದೊಂದು ಕರಕಿಸಲಯಮಂ          ೪೫

ವ|| ಅದಲ್ಲದೆಯುಂ

ಚರಣದೆ ಕಾಂಚಿಯಂ ಗುರುನಿತಂಬದ ಪರ್ವುಗೆಯಿಂದೆ ಮಧ್ಯಮಂ
ನೆರೆವತಿತೃಷ್ಣೆಯಿಂ ಹೃದಯಮಂ ಕುಚದೊಳ್ ನಳಿನೀದಳಂಗಳಂ
ಕೊರಲೊಳೆ ಜೀವಮಂ ಕರಸರೋರುಹದೊಳ್ ಕದಪಂ ಲಲಾಟದೊಳ್
ಪರೆದ ಕುರುಳ್ಗಳಂ ವಿರಹವಿಹ್ವಲೆಯಾಗಿ ಲತಾಂಗಿ ತಾಳ್ದುವಳ್ ೪೬

ವ|| ಅದಲ್ಲದೆಯುಮೋರೊರ್ಮೆ ರಣರಣಕವ್ಯಥಾವ್ಯಜನ ಪಲ್ಲವಭಂಗವಾದಪ್ಪುದೆಂದಂಜಿ ನಡುಗುವಂತೆ ನಿಡುಸುಯ್ಯ ಗಾಳಿಯಿಂ ನಡುಗುವ ಲತಾಮಂಟಪದೊಳಿರ್ಪಳೋರೊರ್ಮೆ ವಿರಹದ ತೊಡಿಗೆಗಳ್ಗುಳ್ಳ ಮೃಣಾಳಂಗಳೆಲ್ಲಮಂ ಮುಱಯಿಸದಿರೆಂದು ಕೆಯ್ಮುಗಿವಂತೆ ಮುಗಿವ ಬಯಲ್ದ್ವಾವರೆಗಳೊಳಿರ್ಪಳೋರೊರ್ಮೆ ಪೂವಾಸಿಗೆ ತಿಱವರೆಂಬ ಭಯದಿಂ ಮುಱುಗಿಂದ ಚೆನ್ನಯ್ದಿಲ್ಗಳಂತಿರೆ ನಿರಂತರಾಶ್ರುಪಾತದಿಂ ಕೆಂಪುದಳೆದ ಕಣ್ಮಲರನೊಳಕೆಯ್ದುಪವನದ ತಿಳಿಗೊಳಂಗಳಂ ಪುಗುವಳೋರೊರ್ಮೆ ತಳಿರ್ ಪೇಱದ ತಮಾಲವೀಗೆವಂದು ಸೆಳೆಗೊಂಬಂ ಪಿಡಿದು ನೇಲ್ದು ನಿಮೀಲಿತನಯನೆಯಾಗಿ ಕಿಱದುಬೇಗಮಿರ್ಪಳೋರೊರ್ಮೆ ಸಂಗೀತಗೃಹಕ್ಕೆ ಬಂದು ಮಧುರ ಮುರಜ ಲಯಗತಿಲಾಸ್ಯಜನಿತ ಖೇದದಿಂ ಮಯೂರಿಯಂತೆ ಧಾರಾಗೃಹಕ್ಕೆ ವಂದ್ವು ಕದಂಬಕಲಿಕೆಯಂತೆ ಘನಜಲಧಾರಾಶೀಕರಾಸಾರದಿಂ ಪುಲಕಿತಾಂಗಿಯಾಗಿ ನಡುಗುತ್ತಿರ್ಪಳೋರೊರ್ಮೆ ಶುದ್ಧಾಂತ ಕಮಲಿನೀತೀರಕ್ಕೆವಂದು ನಿನ್ನ ಮೆಯ್ವೆಂಕೆಯಿಂದೆಮಗಾಹಾರಮಪ್ಪಲ್ಲಿಯ ಮೃಣಾಳಂಗಳೆಲ್ಲಮಂ ಕೊರಗಿಸದಿರೆಂದು ಚಪ್ಪರಿಸುವಂತಿರ್ದ ಹಂಸಚಕ್ರವಾಕಂಗಳುಲಿಪಕ್ಕೆ ಬೆಗಡುಗೊಂಬಳೋರೊರ್ಮೆ ರಮಣೀಯ ಪ್ರಮದವನಕ್ಕೆವಂದು ಶಿಶಿರೋಪಚಾರನಿಮಿತ್ತದಿನುಳ್ಳಲರ್ಗಳೆಲ್ಲಮಂ ತಿಱದು ಕಿಡಿಸಿದಳೀಕೆಯೆಂದು ಜಿನುಗುವಂತಿರ್ದ ಮಧುಕರನಿವಹಕ್ಕೆ ಪಿರಿದುಮುಬ್ಬೆಗಂಬಡು ವಳೋರೊರ್ಮೆ ಭವನಾಂಗಣಸಹಕಾರಭೂರುಹಕ್ಕೆವಂದು ತನ್ನ ಪಾಡುವಿಂಚರದಿಂದೆಮ್ಮೆ ಪಾಟವಂ ಕೀೞ್ಮಾಡಿದಳಿವಳೆಂದು ಮುಳಿಸಿಂ ಗಜಱ ಗರ್ಜಿಸುವಂತಿರ್ದ ಕೋಗಿಲೆಗಳ ಜಡಿಪಕ್ಕೆ ಬೆದಱುವಳಿಂತು ಪಲತೆಱದೆ ಮದನದುಶ್ಚೇಷ್ಟಿತಾಯಾಸಂಗಳಿಂದಮೆ ಪಗಲ್ಗಳಂ ಕೞಪುವಳಂತುಮಲ್ಲದೆಯುಂ

ನಿನ್ನ ಪಾಣಿಗ್ರಹಣ ಮಾಡಬೇಕೆಂಬ ಉದ್ದೇಶದಿಂದ ಮುಳ್ಳಿನ ಹಾಸಿಗೆಯ ಮೇಲೆ ಮಲಗುವ ವ್ರತವನ್ನು ಆಚರಿಸುತ್ತಿರುವಂತೆ ತೋರುತ್ತಿತ್ತು. ೪೫. ಅವಳು ಕೆಂಪುರತ್ನದ ಕಡಗವನ್ನು ಹಾಕಿಕೊಂಡಿರುವ ತನ್ನ ಎಡಗೈಯನ್ನು ಕೆನ್ನೆಯ ಮೇಲೆ ಇಟ್ಟುಕೊಂಡಿದ್ದಳು. ಕಡಗದ ಕೆಂಬೆಳಗು ಸುತ್ತಲೂ ಹರಡಿಕೊಂಡಿತ್ತು. ಇದರಿಂದ ಅವಳು ಒಳಗೆ ಉರಿಯುತ್ತಿರುವ ಕಾಮಾಗ್ನಿಯು ಹೊರಹೊಮ್ಮಿಕೈ ಸುಡುವಂತಾಗಲು, ಅದನ್ನು ಕೊಡಹುತ್ತಿರುವಳೋ ಎಂಬಂತೆ ಕೆನ್ನೆಯ ಭಾರದಿಂದ ಬೆಂಡಾದ ಆ ಮೃದುವಾದ ಕೈಯನ್ನು ಕೊಡಹುತ್ತಿದ್ದಳು. ಟಿ. ರತ್ನದ ಕೆಂಬೆಳಗು ಅಗ್ನಿಜ್ವಾಲೆಯಂತೆ ಕಾಣುತ್ತಿದ್ದುದರಿಂದ ಅದನ್ನು ಕಾಮಾಗ್ನಿಯ ಜ್ವಾಲೆಯೆಂದು ವರ್ಣಿಸಿದ್ದಾನೆ. ವ|| ಅದಲ್ಲದೆ ೪೬. ವಿರಹಪೀಡಿತಳಾದ ಕಾದಂಬರಿಯು (ಬಹಳ ಕೃಶಳಾಗಿದ್ದುದರಿಂದ) ಸೊಂಟದಿಂದ ಜಾರಿಬೀಳುತ್ತಿರುವ ಡಾಬನ್ನು ಕಾಲುಗಳಿಂದ ಹಿಡಿದು ನಿಲ್ಲಿಸುತ್ತಾಳೆ. ಹಾಗೆಯೇ ಆ ಸೊಂಟವನ್ನು ದಪ್ಪ ನಿತಂಬಗಳಿಂದ ಹಿಡಿದಿದ್ದಾಳೆ. ನಿನ್ನನ್ನು ಕೂಡುವ ಆಸೆಯಿಂದ ಹೃದಯವನ್ನು ಹಿಡಿದಿದ್ದಾಳೆ. ಸ್ತನಗಳಲ್ಲಿ ತಾವರೆಯೆಲೆಯನ್ನೂ ಕೊರಳಲ್ಲಿ ಪ್ರಾಣವನ್ನೂ, ಅಂಗೈ ಮೇಲೆ ಕೆನ್ನೆಯನ್ನೂ, ಹಣೆಯಲ್ಲಿ ಚದುರಿದ ಕೂದಲನ್ನೂ ತಾಳಿದ್ದಾಳೆ.

ವ|| ಅದಲ್ಲದೆ ಒಮ್ಮೊಮ್ಮೆ ವಿರಹಸಂತಾಪದ ಪರಿಹಾರಕ್ಕಾಗಿ ಬೀಸಣಿಗೆಯನ್ನು ಮಾಡಿಕೊಳ್ಳಲು ತನ್ನ ಚಿಗುರುಗಳನ್ನೆಲ್ಲ ಕೊಯ್ದುಬಿಡುತ್ತಾರೆಂದು ಹೆದರಿ ನಡುಗುತ್ತಿರುವುದೋ ಎಂಬಂತೆ ತನ್ನ ನಿಟ್ಟುಸಿರಿನ ಗಾಳಿಯಿಂದ ಕಂಪಿಸುತ್ತಿರುವ ಲತಾಮಂಟಪದಲ್ಲಿರುತ್ತಾಳೆ. ಒಮ್ಮೆ ವಿರಹಸಂತಾಪ ಪರಿಹಾರಕ್ಕೆಂದು ಇಲ್ಲಿರುವ ದಂಟುಗಳನ್ನು ಮುರಿದುಹಾಕಿಸಬೇಡವೆಂದು ಕೈಮುಗಿಯುತ್ತಿರುವಂತೆ ಕಾಣುತ್ತಿರುವ ಮೊಗ್ಗುಗಳಿಂದ ಕೂಡಿರುವ ನೆಲದಾವರೆಯ ಪೊದರಿನಲ್ಲಿರುತ್ತಾಳೆ. ಮತ್ತೊಮ್ಮೆ ಹೂವಿನ ಹಾಸಿಗೆಯನ್ನು ಮಾಡುವುದಕ್ಕಾಗಿ ಎಲ್ಲಿ ಕೊಯ್ದುಬಿಡುತ್ತಾರೋ ಎಂಬ ಭಯದಿಂದ ಮುಳುಗಿರುವ ಕೆಂಪುಕಮಲಗಳನ್ನು ಹೋಲುವ, ಒಂದೇಸಮನೆ ಅತ್ತು ಅತ್ತು ಕೆಂಪಾದ ಕಣ್ಣುಗಳಿಂದ ಕೂಡಿದವಳಾಗಿ ಉದ್ಯಾನವನದ ತಿಳಿನೀರಿನ ಸರೋವರಕ್ಕೆ ಇಳಿಯುತ್ತಾಳೆ. ಮತ್ತೊಮ್ಮೆ ಚಿಗುರುಗಳಿಂದ ಭರಿತವಾದ ಹೊಂಗೆಮರಗಳ ಸಾಲಿಗೆ ಬಂದು ಒಂದು ಸಣ್ಣ ಕೊಂಬೆಯನ್ನು ಹಿಡಿದು ತೂಗಾಡುತ್ತ ಕಣ್ಣುಮುಚ್ಚಿಕೊಂಡು ಸ್ವಲ್ಪಕಾಲವಿರುತ್ತಾಳೆ. ಮತ್ತೊಮ್ಮೆ ಸಂಗೀತಶಾಲೆಗೆ ಬಂದು ಇಂಪಾದ ಮದ್ದಳೆಯ ಲಯಕ್ಕೆ ಅನುಸಾರವಾಗಿ ಮಾಡುತ್ತಿರುವ ಲಾಸ್ಯನೃತ್ಯವನ್ನು ಕಂಡು, ಗುಡುಗುಧ್ವನಿಯನ್ನು ಕೇಳಿದ ಹೆಣ್ಣುನವಿಲಿನಂತೆ ತಳಮಳಗೊಂಡು ಸ್ನಾನಗೃಹಕ್ಕೆ ಬರುತ್ತಾಳೆ. ಅಲ್ಲಿ ದಟ್ಟವಾಗಿ ಸುರಿಯುತ್ತಿರುವ ಜಲಧಾರೆಗಳ ಹನಿಗಳ ಮಳೆಯಿಂದ ಕದಂಬವೃಕ್ಷದ ಮೊಗ್ಗುಗಳಂತೆ ರೋಮಾಂಚನವನ್ನು ಹೊಂದಿ ನಡುಗುತ್ತಾಳೆ. ಮತ್ತೊಮ್ಮೆ ರಾಣೀವಾಸದ ತಾವರೆಗೊಳದ ದಡಕ್ಕೆ ಬಂದು ನಿನ್ನ ದೇಹಕ್ಕೆ ಬಳೆ ಮಾಡಿಕೊಳ್ಳುವುದಕ್ಕಾಗಿ ಬಂದು ನಮಗೆ ಆಹಾರವಾದ ತಾವರೆದಂಟುಗಳೆಲ್ಲವನ್ನೂ ಕೊಯ್ದು ಬಳಲಿಸಬೇಡವೆಂದು ಗದರಿಸುವಂತಿರುವ