ನಡಪಲ್ ಮುಂ ಪೆತ್ತೆವಾವೀತನನಿನಿತೆಡರಿಂ ಪುಂಡರೀಕಾಖ್ಯನಂ ಪೇ
ೞ್ವೊಡೆ ವೈಶಂಪಾಯನಂ ತನ್ನಯ ಮಗನದಱಂ ಸ್ನೇಹಮೊಟ್ಟೈಸೆ ತಮ್ಮಿ
ರ್ದೆಡೆಗೀಗಳ್ ಮುಕ್ತಶಾಪಂ ನಿಜತನುರೆರಸಾನಂದದಿಂ ಬಂದನೀತಂ
ಗೊಡೆಯರ್ ತಾವೆಂದು ಪೇೞ್ದಟ್ಟಿದನಿದನೊಲವಿಂ ಶ್ವೇತಕೇತುವ್ರತೀಶಂ    ೮೦

ವ|| ಎಂಬುದುಂ ವಿಯನವಿನಮಿತನಪ್ಪ ಪುಂಡರೀಕನ ಮೇಲೆ ಕೆಯ್ಯನಿಕ್ಕಿ ಶುಕನಾಸನಿಂತೆಂದಂ

ಸಕಲಾರಾಧ್ಯರ್ ತಾವಿಂ
ತು ಕರುಣದಿಂದೆನಗೆ ಬೆಸಸಿಯಟ್ಟಿದರೆಂದಂ
ದು ಕಪಿಂಜಲ ಪೇೞೆನ್ನಿಂ
ದೆ ಕೃತಾರ್ಥರುಮೊಳರೆ ಮತ್ತೆ ಭುವನತ್ರಯದೊಳ್   ೮೧

ವ|| ಎಂದಿವು ಮೊದಲಾಗಿ ಪೂರ್ವಜನ್ಮಸ್ಮರಣಾಲಾಪಂಗಳಿಂದಂ ಪರಸ್ಪರಾಲೋಕನ ಸುಖೋತುಲ್ಲಲೋಚನರಾಗಿ ಕಣ್ಣೊಳೆ ಬೆಳಗಪ್ಪುದುಂ ಪ್ರಭಾತಸಮಯದೊಳಖಿಳಗಂಧರ್ವ ಲೋಕದೊಡನೆ ಬರೆ ಮದಿರಾಮಹಾದೇವಿವೆರಸು ಚಿತ್ರರಥನುಂ ಗೌರಿವೆರಸು ಹಂಸನುಂ ಬಂದು ಜಾಮಾತೃದರ್ಶನೋತುಲ್ಲವದನರ್ ತಾರಾಪೀಡ ಶುಕನಾಸರೊಳತಿ ಶ್ಪಾಘ್ಯಸಂಬಂಧಬಂಧುರ ವಚನಂಗಳಂ ನುಡಿಯುತ್ತವಾನಂದಪರಂಪರೆಯನೆಯ್ದಿ ಕಿಱದುಬೇಗಮಿರ್ದು ರಾಜಾರಾಜನಂ ಗಂಧರ್ವರಾಜನಿಂತೆಂದಂ

ಇವರ್ಗಾತ್ಮೋಚಿತಮಾಗಿ ಮುನ್ನಮೆ ವಿವಾಹಂ ಸಂದುದಿಂ ಲೌಕಿಕ
ವ್ಯವಹಾರಕ್ಕೆಸಗಲೇೞ್ಪುದದಱಂದಂ ಹೇಮಕೂಟಕ್ಕೆವಂ
ದು ವಿವಾಹೋತ್ಸವಮಂ ನೆಗೞ್ಚೆ ಪಿರಿದೊಂದುತ್ಸಾಹಮಂ ಮಾೞ್ಪುದಿ
ನ್ನೆವಗೆಂದೞ್ಕಳಿಂತಿದಂ ನುಡಿದನಾ ಗಂಧರ್ವಲೋಕೇಶ್ವರಂ      ೮೨

ವ|| ಅಂತು ನುಡಿಯೆ ತಾರಾಪೀಡನರೇಂದ್ರನಿಂತೆಂದಂ
ಭವದೀಯ ಶ್ಪಾಘ್ಯಸಂಬಂಧಮೆ ದಲಿದುವೆ ಕೈಸಾರ್ದುದಿಂದೆಂದು ಪೇೞ
ನ್ನೆವಗಿಲ್ಲಂ ಬಿಟ್ಟು ಮತ್ತಂ ಸುಖವೆನಿಪುದದೇಂ ಪುತ್ರನಿಕ್ಷಿಪ್ತ ರಾಜ್ಯ
ರ್ಗೆವಗಿಲ್ಲಂ ಮತ್ತೇೞ್ತರಲ್ಕಾಗದು ಸದನಸುಖಾವಾಪ್ತಿಯಂ ಮಾಡು ನೀನೆ
ಲ್ಲವನತ್ಯುತ್ಸಾಹದಿಂ ನಿನ್ನಳಿಯನನೊಡಗೊಂಡೆಯ್ದು ಗಂಧರ್ವರಾಜಾ     ೮೩

೮೦. ಮಂತ್ರಿಶ್ರೇಷ್ಠ, ಶ್ವೇತಕೇತುಮಹರ್ಷಿಗಳು ಹೀಗೆ ಹೇಳಿ ಕಳಿಸಿದ್ದಾರೆ, ಏನೆಂದರೆ: ಪುಂಡರೀಕನೆಂದು ಹೆಸರುಳ್ಳ ಇವನನ್ನು ಇಷ್ಟು ವಿಪತ್ತುಗಳಿಂದ ತಪ್ಪಿಸಿ ಕಾಪಾಡುವುದಕ್ಕಾಗಿ ಮಾತ್ರ ಮೊದಲು ನಾವು ಮಗನಾಗಿ ಪಡೆದೆವು. ನಿಜವಾಗಿ ಹೇಳಬೇಕಾದರೆ ನಿಮ್ಮ ಮಗನಾದ ವೈಶಂಪಾಯನನೇ ಇವನು. ಈಗ ಶಾಪವಿಮುಕ್ತನಾಗಿ ನಿಜಶರೀರದಿಂದ ಕೂಡಿ, ಆನಂದದಿಂದ ಸ್ನೇಹವು ತುಂಬಿಬರಲು ನೀವು ಇರುವ ಸ್ಥಳಕ್ಕೇ ಬಂದಿದ್ದಾನೆ. ಇನ್ನು ನೀವೇ ಇವನಿಗೆ ಒಡೆಯರು ಎಂದು ಶ್ವೇತಕೇತು ಮಹರ್ಷಿಗಳು ನಿಮಗೆ ಪ್ರೀತಿಯಿಂದ ಹೇಳಿ ಕಳುಹಿಸಿದ್ದಾರೆ” ವ|| ಎಂದು ಹೇಳಲಾಗಿ ವಿನಯದಿಂದ ಬಗ್ಗಿರುವ ಪುಂಡರೀಕನ ಮೇಲೆ ಕೈಯಿಟ್ಟು ಶುಕನಾಸನು ಹೀಗೆ ಹೇಳಿದನು. ೮೧. “ಎಲೈ ಕಪಿಂಜಲಮುನಿಯೆ, ಜಗತ್ಪೂಜ್ಯರಾದ ಶ್ವೇತಕೇತುಮಹರ್ಷಿಗಳು ಹೀಗೆ ಕರುಣೆಯಿಂದ ಹೇಳಿಕಳುಹಿಸಿದ್ದಾರೆ ಎಂದಮೇಲೆ ನನಗಿಂತ ಧನ್ಯರಾದವರು ಈ ಮೂರುಲೋಕಗಳಲ್ಲಿ ಮತ್ತಾರಿದ್ದಾರೆ, ಹೇಳಿ.” ವ|| ಹೀಗೆ ಇವೇ ಮೊದಲಾದ ಪೂರ್ವಜನ್ಮದ ನೆನಪಿನ ಮಾತುಕತೆಗಳಿಂದ ಕೂಡಿ ಪರಸ್ಪರ ಸಂದರ್ಶನದಿಂದುದಾಂಟಾದ ಸುಖದಿಂದ ಅವರು ಅರಳಿದ ಕಣ್ಣುಳ್ಳವರಾಗಿರುವಾಗಲೇ ಬೆಳಗಾಯಿತು. ಬೆಳಗಿನ ಜಾವದಲ್ಲಿ ಮದಿರಾದೇವಿಯೊಂದಿಗೆ ಚಿತ್ರರಥನೂ ಗೌರಿಯೊಂದಿಗೆ ಹಂಸನೂ ಸಮಸ್ತ ಗಂಧರ್ವರೊಂದಿಗೆ ಬಂದರು. ಅವರು ಅಳಿಯಂದಿರನ್ನು ನೋಡಿದ್ದರಿಂದ ಅರಳಿದ ಮುಖವುಳ್ಳವರಾಗಿ ತಾರಾಪೀಡನೊಂದಿಗೂ ಶುಕನಾಸನೊಂದಿಗೂ ಶ್ರೇಷ್ಠವಾದ ನಂಟಿಗೆ ಉಚಿತವಾದ ಲೋಕಾಭಿರಾಮವಾದ ಮಾತುಗಳನ್ನಾಡುತ್ತಾ ಆನಂದಪರಂಪರೆಯನ್ನು ಅನುಭವಿಸುತ್ತಿದ್ದರು. ಸ್ವಲ್ಪಕಾಲ ಕಳೆದ ಮೇಲೆ ತಾರಾಪೀಡಚಕ್ರವರ್ತಿಯನ್ನ್ನು ಕುರಿತು ಗಂಧರ್ವರಾಜನು ಹೀಗೆ ಹೇಳಿದನು. ೮೨. “ಇವರಿಗೆ ಪರಸ್ಪರ ಮನಸ್ಸು ಒಪ್ಪಿ ಅಂತರಂಗದಲ್ಲಿ ಮೊದಲೇ ಮದುವೆಯಾಗಿಬಿಟ್ಟಿದೆ. ಆದರೂ ಲೌಕಿಕ ವ್ಯವಹಾರಕ್ಕಾಗಿ ಬಹಿರಂಗವಾಗಿ ಮಾಡಬೇಕಾಗಿದೆ. ಆದ್ದರಿಂದ ನನ್ನ ಮೇಲಿನ ಪ್ರೀತಿಯಿಂದ ಹೇಮಕೂಟಕ್ಕೆ ಬಂದು ವಿವಾಹಮಹೋತ್ಸವವನ್ನು ನೆರವೇರಿಸಿ ನಮಗೆ ಉಲ್ಲಾಸವನ್ನುಂಟುಮಾಡಬೇಕು” ಎಂದು ಗಂಧರ್ವರಾಜನು ಕೇಳಿಕೊಂಡನು. ವ|| ಅದಕ್ಕೆ ತಾರಾಪೀಡನು ೮೩.“ಗಂಧರ್ವ ರಾಜ, ನಿಮಗೆ ನಿಜವಾಗಿಯೂ ಈ ನಿಮ್ಮ ಉತ್ತಮೋತ್ತಮವಾದ ಬೀಗತನವು ಈಗ ದೊರಕಿತು. ಇಷ್ಟು ಹೇಳಿದ ಮೇಲೆ ನಮಗೆ ಈ

ವ|| ಎಂಬುದುಂ ನಿಮಗೆಂತುಸಂತಸಮಂತೆ ನೆಗೞ್ವೆನೆಂದು ರಾಜೇಂದ್ರಚಂದ್ರಂ ಬೆರಸುತ್ಸಾಹಾನ್ವಿತನಾಗಿ ನಾನಾಧ್ವಜವಿರಾಜಿತ ಕೂಟಮುಮುದ್ಘಾಟಿತ ಸಲಕ ವಾತಾಯನಕವಾಟಮುಮಪ್ಪ ಹೇಮಕೂಟಕ್ಕೆವಂದು ಮಂಗಳಾನಕರವಂಗಳಿಂದೆಸೆವ ವಿವಾಹಮಂಟಪ ಕ್ಕೈತರ್ಪುದುಮಿತ್ತ ಕೃತ ಸಕಲಮಂಗಳವ್ಯಾಪಾರನುಮಾಗಿ

ಎಯಂ ತ್ರೈಲೋಕ್ಯರಾಜ್ಯಕ್ಕೆನಿಸಿದ ವಿಭುವಿಂಗೇನನಿತ್ತೀಗಳೊಲ್ದಾ
ನೆವೆಂ ಕಾದಂಬರೀದೇವಿಗೆ ಬೞವೞ ಗಂಧರ್ವರಾಜ್ಯಂ ದಲೆಂದ
ೞ್ಕಱನಿಂ ಕೈಕೊಳ್ವುದೆಂದಾತ್ಮಜೆಯನೊಲವಿನಿಂದಿತ್ತು ಸಾಕ್ಷ ಕ್ಕೇ ಕೈನೀ
ರೆದಂ ರಾಜೇಂದ್ರಚಂದ್ರಂಗೊದವಿದ ಪದಪಿಂದಂದು ಗಂಧರ್ವರಾಜಂ      ೮೪

ಪಿರಿದುಂ ವಿಭೂತಿಯಿಂ ಚಿ
ತ್ರರಥಾನುಜನೆನಿಪ ಹಂಸನುಂ ನಿಜರಾಜ್ಯಂ
ಬೆರಸು ಮಹಾಶ್ವೇತೆಯನಾ
ದರದಿಂದಂ ಪುಂಡರೀತದೇವಂಗಿತ್ತಂ           ೮೫

ವ|| ಅಂತು ವಿವಾಹಮಹೋತ್ಸವಮಂ ರಾಜೇಂದ್ರಚಂದ್ರನುಂ ಪುಂಡರೀಕನುಮಪ್ಪುಕೆಯ್ದು

ದೊರೆಕೊಂಡುದಮಂ ಬಯಸಿದ
ತರುಣಿಯರೊಳ್ ಕೂಟಮನಿತಱಂದಮೆ ನೋಡಲ್
ಚರಿತಾರ್ಥರಾವೆ ಕಿಂಚಿ
ತ್ಕರವನ್ಯಮೆನುತ್ತಮಾತ್ಮಗತದೊಳ್ ಬಗೆದರ್           ೮೬

ವ|| ಅನಂತರಮಭಿವಾಂಛಿತ ಪ್ರಾಣೇಶ್ವರಪ್ರಾಪ್ತಿಸಮುತ್ಸುಕೆಯುಮಖಿಲ ಪರಿವಾರ ಪರಿವೃತೆಯುಮಪ್ಪ ಕಾದಂಬರಿ ವಿಷಾದಮನಪ್ಪುಕೆಯ್ದು ಮನುಜೇಂದ್ರಚಂದ್ರನಂ ನೋಡಿ

ಜೀವಂ ಬಂದುದು ಸಕಲ
ರ್ಗೇವೇೞ್ವೆಂ ಪತ್ರಲೇಖೆಯಂ ಕಂಡಪೆವಿ
ಲ್ಲಾ ವಧುವೊರ್ವಳದೆಲ್ಲಿದ
ಳಾವೆಡೆಯೊಳ್ ನಿಂದಳರಸ ಪೇೞೆನಗೀಗಳ್           ೮೭

ವಾನಪ್ರಸ್ಥಾಶ್ರಮವನ್ನು ಬಿಟ್ಟು ಬೇರೆ ಸುಖವೆಲ್ಲಿದೆ? ಮಗನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟಮೇಲೆ ನಾವು ಮತ್ತೆ ಪುರಪ್ರವೇಶ ಮಾಡಬಾರದು. ಆದ್ದರಿಂದ ನೀನೆ ನಿನ್ನ ಅಳಿಯನನ್ನು ಕರೆದುಕೊಂಡು ಹೋಗಿ ಮನೆಯನ್ನು ಸುಖವಾಗಿ ಸೇರಿ ನೆರವೇರಿಸಬೇಕಾದುದನ್ನೆಲ್ಲಾ ಉತ್ಸಾಹದಿಂದ ನೆರವೇರಿಸು” ಎಂದನು. ವ|| ತಾರಾಪೀಡನು ಹೀಗೆ ಹೇಳಲಾಗಿ ಚಿತ್ರರಥನು “ನಿಮಗೆ ಹೇಗೆ ಸಂತೋಷವೋ ಹಾಗೆಯೇ ಮಾಡೋಣ” ಎಂದು ಚಂದ್ರಾಪೀಡನೊಂದಿಗೆ ಉತ್ಸಾಹಭರಿತನಾಗಿ ಅನೇಕ ಧ್ವಜಗಳಿಂದ ಶೋಭಿಸುವ ಶಿಖರಗಳುಳ್ಳ, ಎಲ್ಲಾ ಕಿಟಕಿಯ ಬಾಗಿಲುಗಳನ್ನೂ ತೆರೆದಿರುವ ಹೇಮಕೂಟಪರ್ವತಕ್ಕೆ ಬಂದು ಮಂಗಳಕರವಾದ ತಮಟೆಧ್ವನಿಗಳಿಂದ ಶೋಭಿಸುವ ಕಲ್ಯಾಣಮಂಟಪಕ್ಕೆ ಬಂದು ಮಾಡಬೇಕಾದ ಸಮಸ್ತ ಮಂಗಳಕಾರ್ಯಗಳನ್ನೂ ನೇರವೇರಿಸಿದನು. ೮೪.“ಮೂರುಲೋಕಗಳಿಗೂ ಒಡೆಯನೆನಿಸಿರುವ ದೇವರಿಗೆ ಯಾವ ವರದಕ್ಷಿಣೆಯನ್ನು ಕೊಟ್ಟು ಪ್ರೀತಿಯಿಂದ ಧಾರೆಯೆರೆದು ಕೊಡಲಿ? ಅದು ಆಗದ ಮಾತು. ಆದ್ದರಿಂದ ಕಾದಂಬರಿಗೆ ಮಾತ್ರ ಈ ಗಂಧರ್ವರಾಜ್ಯವನ್ನೇ ನಿಜವಾಗಿಯೂ ಬಳುವಳಿಯಾಗಿ ಕೊಟ್ಟಿದ್ದೇನೆ. ಪ್ರೀತಿಯಿಂದ ಪರಿಗ್ರಹಿಸಬೇಕು” ಎಂದು ಹೇಳುತ್ತಾ ಗಂಧರ್ವರಾಜನು ತನ್ನ ಮಗಳಾದ ಕಾದಂಬರಿಯನ್ನು ಆ ರಾಜಾರಾಜನಾದ ಚಂದ್ರಾಪೀಡನಿಗೆ ಪ್ರೀತಿಪೂರ್ವಕವಾಗಿ ಕೊಟ್ಟು ಕೇವಲ ಸಾಕ್ಷೀಭೂತನಾಗಿ ಬಹಳ ಉತ್ಸಾಹದಿಂದ ಶುಭದಿವಸದಲ್ಲಿ ಧಾರೆಯೆರೆದು ಕೊಟ್ಟನು. ೮೫. ಚಿತ್ರರಥನ ತಮ್ಮನಾದ ಹಂಸನು ಬಹಳ ವಿಜೃಂಭಣೆಯಿಂದ ಪುಂಡರೀಕನಿಗೆ ತನ್ನ ರಾಜ್ಯಸಮೇತವಾಗಿ ಮಹಾಶ್ವೇತೆಯನ್ನು ಆದರದಿಂದ ಧಾರೆಯೆರೆದು ಕೊಟ್ಟನು. ವ|| ಈ ರೀತಿಯಲ್ಲಿ ಚಂದ್ರಾಪೀಡಮಹಾರಾಜನೂ ಪುಂಡರೀಕನೂ ವಿವಾಹಮಹೋತ್ಸವದ ಆನಂದವನ್ನು ಅನುಭವಿಸುತ್ತಿದ್ದರು. ೮೬. “ತಮಗೆ ಈಗ ಲಭಿಸಿದ ವರನನ್ನೇ ಪಡೆಯಬೇಕೆಂದು ಹಂಬಲಿಸುತ್ತಿದ್ದ ಯುವತಿಯರೊಂದಿಗೆ ಮದುವೆಯಾಯಿತಲ್ಲ ! ಹಾಗೆ ನೋಡಿದರೆ, ಇಷ್ಟರಿಂದಲೆ ನಾವು ಧನ್ಯರಾಗಿದ್ದೇವೆ. ಉಳಿದ ಈ ಬಳುವಳಿಗಳೆಲ್ಲ ಅಲ್ಪವಿಷಯ !” ಎಂದು ಆ ಅಳಿಯಂದಿರಿಬ್ಬರೂ ಮನಸ್ಸಿನಲ್ಲಿ ಭಾವಿಸಿದರು. ವ|| ಬಳಿಕ, ತಾನು ಬಯಸಿದ ಪ್ರಾಣಕಾಂತನ ಪ್ರಾಪ್ತಿಯಿಂದ ಸಂತೋಷಭರಿತಳಾದ ಸಮಸ್ತ ಪರಿವಾರಸಮೇತಳಾದ ಕಾದಂಬರಿಯು ಚಂದ್ರಾಪೀಡನನ್ನು ನೋಡಿ ವ್ಯಥೆಯಿಂದ, ೮೭. “ಅರಸ, ಎಲ್ಲರಿಗೂ ಹೋದ ಪ್ರಾಣ ಬಂತು, ಪತ್ರಲೇಖೆಯೊಬ್ಬಳು ನಮ್ಮ ಮಧ್ಯೆ ಇಲ್ಲವಲ್ಲ! ಏನು ಹೇಳಲಿ! ಆ ತರುಣಿ ಹಿಂದಿನ ಜನ್ಮದಲ್ಲಿ ಯಾರಾಗಿದ್ದಳು? ಈಗ

ವ|| ಎನೆ ಮನುಜೇಂದ್ರಚಂದ್ರನಿಂತೆಂದಂ

ಸಮಸುಖದುಖಮಂ ತಳೆವ ರೋಹಿಣಿ ತಾನಿವನಿತ್ತ ಶಾಪದಾ
ಕ್ರಮವನೆ ಕೇಳ್ದು ಮಾಣಿಸೆಯುಮೆನ್ನಯ ಮೋಹದೆ ಮರ್ತ್ಯರೂಪದಿಂ
ದಮೆ ಬೞಸಂದಳೊಲ್ದು ಮಗುೞ್ದುಂ ಬರೆ ಪಿಂತೆಯೆ ಮತ್ತೆ ಬಲ್ಪಿನಿಂ
ದಮೆ ನಿಲಿಸಿಟ್ಟೆನೆಯ್ದೆ ನಿಜಲೋಕದೊಳಾಕೆಯನಲ್ಲಿ ಕಂಡಪೈ     ೮೮

ಎಂದು ನರೇಂದ್ರಚಂದ್ರನುಸಿರಲ್ ವಧುರೋಹಿಣಿ ಬೆನ್ನೊಳಂತೆ ಬಂ
ದಂದಮನಾತ್ಮವಲ್ಲಭನೊಳಾದನುರಕ್ತತೆಯಂ ಮಹತ್ವಮಂ
ಸಂದ ಪತಿವ್ರತಾಚರಣಮಂ ಋಜುವೃತ್ತಿಯನಂದು ಭಾವಿಸು
ತ್ತೊಂದುಮನೆಂದಳಿಲ್ಲ ಬೞಯಂ ಪಿರಿದುಂ ತನಗಾದ ಲಜ್ಜೆಯಿಂ             ೮೯

ಎರಡುಂ ಜನ್ಮಂಗಳೊಳ್ ಬೇರ್ವರಿದ ಬಯಕೆ ಕೂಡಿತ್ತದೆಂತಾನುಮೀಗಳ್
ನೆರೆಯಲ್ಕಿಂವೇೞ್ಕುಮೆಂಬಂತನುಚರನವೊಲಾಲೋಕಮಂ ಪತ್ತುವಿಟ್ಟೋ
ಸರಿಸಿತ್ತಾವೇಗದೊಳ್ ವಾಸರಮನುಚರಿಯವೊಲ್ ಸಂಜೆ ಸಂಜಾತರಕ್ತಾಂ
ಬರದಿಂದಂ ಬಾಸಣಿಪ್ಪಂತೆಸೆದುದಸದಳಂ ಸಾಂದ್ರಶೋಣಾಂಶುಜಾಲಂ ೯೦

ವ|| ತದನಂತರಂ

ಅನುರಕ್ತನಿಜಕರಸ್ಪ
ರ್ಶನದಿಂ ವನಿತಾಜನಕ್ಕೆ ರಾಗೋದ್ರೇಕಂ
ಜನಿಯಿಸುತಿರೆ ಕುವಲಯಪತಿ
ಯನುಕ್ರಮೊದಯವಿಲಾಸಮೇನೊಪ್ಪಿದುದೋ           ೯೧

ವ|| ಅಂತಾ ರಜನಿಯೊಳ್ ರಾಜೇಂದ್ರಚಂದ್ರಂ ಸುರತಸುಖಾಂಬೋಯೊಳ್ ಮೂಡಿ ಮುೞುಗಾಡಿ ಮಱುದಿವಸಂ ಮಾವಂದಿರಂ ಬೀೞ್ಕೊಂಡು ವಧೂಸಮೇತಂ ಪರಿತ್ಯಕ್ತ ಸಕಲ ಕಾರ್ಯರಪ್ಪ ಮಾತಾಪಿತೃಗಳಲ್ಲಿಗೆವಂದು ತತ್ಪಾದಪ್ರಣತನಾಗಿ ತದೀಯಶೀರ್ವಾದಶತಸಹಸ್ರಂಗಳಂ ತಲೆಯೊಳಾಂತು ನಿಜಸಮಾನೀಕೃತ ಸಕಲರಾಜಲೋಕಸಮನ್ವಿತಮು ನ್ವು ಜ್ಜಯಿನ್ಯ ಭಿಗಮನಕೃತಾಭ್ಯನುಜ್ಞನಾಗಿ

ಎಲ್ಲಿದ್ದಾಳೆ? ಎಂಬುದನ್ನು ನನಗೆ ತಿಳಿಸು.” ವ|| ಎಂದು ಕೇಳಿಕೊಂಡಳು. ಚಂದ್ರಾಪೀಡನು ಹೀಗೆಂದನು. ೮೮. “ಅವಳು ತನ್ನ ಸುಖದುಖಗಳಿಗೆ ಸಮಾಭಾಗಿನಿಯಾದ ರೋಹಿಣಿ! ನನಗೆ ಈ ಪುಂಡರೀಕನು ಕೊಟ್ಟ ಶಾಪವನ್ನು ಕೇಳಿ, ನಾನು ಎಷ್ಟು ಬೇಡವೆಂದರೂ ಕೇಳದೆ ನನ್ನ ಮೇಲಿನ ಪ್ರೀತಿಯಿಂದ ಮನುಷ್ಯಜನ್ಮವನ್ನೆತ್ತಿ ನನ್ನ ಜೊತೆಯಲ್ಲಿದ್ದಳು. ಈಗಲೂ ಮತ್ತೆ ಅದೇ ಪ್ರೀತಿಯಿಂದ ನನ್ನ ಹಿಂದೆಯೆ ಬರಲು ಹೊರಟಳು. ಮತ್ತೆ ನಾನು ಬಲಾತ್ಕಾರದಿಂದ ನನ್ನ ಲೋಕದಲ್ಲೇ ಅವಳನ್ನು ಇರುವಂತೆ ಹೇಳಿ ಬಂದಿದ್ದೇನೆ. ನೀನು ಅವಳನ್ನು ಅಲ್ಲಿಯೆ ನೋಡಬಹುದು” ೮೯. ಹೀಗೆ ಆ ರಾಜೇಂದ್ರನು ಹೇಳಲು ಕಾದಂಬರಿಯು, ರೋಹಿಣಿಯು ತನ್ನ ಪತಿಯ ಹಿಂದೆಯೇ ಬಂದುದನ್ನೂ, ಅವಳಿಗೆ ಪತಿಯಲ್ಲಿರುವ ಅನುರಾಗವನ್ನೂ, ಅವಳ ಹಿರೆಮೆಯನ್ನೂ, ಪತಿವ್ರತಾಧರ್ಮವನ್ನೂ, ಸರಳ ಸ್ವಭಾವವನ್ನೂ ಅರ್ಥಮಾಡಿಕೊಂಡಳು. ಅನಂತರ ತಾನು ಗುಣಗಳಲ್ಲಿ ಅವಳನ್ನು ಸರಿಗಟ್ಟಲಾರೆನೆಂದು ಬಹಳ ನಾಚಿಕೆಯಿಂದ ಏನೂ ಮಾತಾಡಲಿಲ್ಲ. ೯೦. “ಈ ನೂvನ ದಂಪತಿಗಳಿಗೆ ಎರಡು ಜನ್ಮಗಳಲ್ಲಿ ಬೇರು ಬಿಟ್ಟಿದ್ದ ಬಯಕೆಯು ಹೇಗೋ ಈಗ ಕೈಗೂಡಿದೆ. ಇನ್ನು ಮೇಲೆ ಇಬ್ಬರೂ ಸೇರಬೇಕು ಎಂದು ತಿಳಿದುಕೊಂಡು ಚಂದ್ರಾಪೀಡನ ಮನಸ್ಸನ್ನು ಅರಿತುಕೊಂಡ ಸೇವಕನಂತೆ ಆ ಲೋಕವನ್ನು ಬಿಟ್ಟು (೧. ಕಾಣಿಸಿಕೊಳ್ಳುವುದನ್ನು ಬಿಟ್ಟು ೨. ಪ್ರಕಾಶವನ್ನು ಬಿಟ್ಟು) ಹೊರಟುಹೋಯಿತು. ಆಮೇಲೆ ಸಂಜೆ ಸೇವಕಿಯಂತೆ ಕೆಂಪಾದ ಆಕಾಶವೆಂಬ ಬಟ್ಟೆಯಿಂದ ಅವರ ಏಕಾಂತವನ್ನು ಯಾರೂ ನೋಡದಿರಲೆಂದು ಪರದೆ ಹಾಕುತ್ತಾಳೋ ಎಂಬಂತೆ ಬಹಳ ದಟ್ಟವಾದ ಕೆಂಪುಕಾಂತಿಯಿಂದ ಶೋಭಿಸುತ್ತಿತ್ತು. ವ|| ಆಮೇಲೆ ೯೧. ಅನುರಕ್ತನಾದ (೧. ಪ್ರೀತಿಯಿಂದ ಕೂಡಿರುವ ೨. ಕೆಂಪಾದ) ತನ್ನ ಕಿರಣವೆಂಬ ಕೈಗಳ ಸ್ಪರ್ಶದಿಂದ ಸ್ತ್ರೀಯರಿಗೆ ಹೆಚ್ಚಾಗಿ ಕಾಮೋದ್ರೇಕವುಂಟಾಗುತ್ತಿರಲು ಚಂದ್ರನು ಕ್ರಮವಾಗಿ ಉದಯಿಸುತ್ತಿದ್ದನು. ಆ ವೈಖರಿಯು ಬಹಳ ರಮ್ಯವಾಗಿತ್ತು. ವ|| ಆ ರಾತ್ರಿಯಲ್ಲಿ ಚಂದ್ರಾವತಾರನಾದ ಚಂದ್ರಾಪೀಡನು ಸಂಭೋಗಸುಖವೆಂಬ ಸಮುದ್ರದಲ್ಲಿ ಮುಳುಗಾಡಿದನು. ಮರುದಿವಸ ಮಾವನಿಂದ ಬೀಳ್ಕೊಂಡು ಕಾದಂಬರೀಸಮೇತನಾಗಿ ಐಹಿಕವ್ಯಾಪಾರವನ್ನೆಲ್ಲ ತೊರೆದಿರುವ ತಾಯಿ ತಂದೆಗಳ ಸಮೀಪಕ್ಕೆ ಬಂದನು. ಅವರಿಗೆ ನಮಸ್ಕಾರವನ್ನು ಮಾಡಿ, ಅವರ ಅನಂತಾಶೀರ್ವಾದಗಳನ್ನು ತಲೆಯಲ್ಲಿ ಧರಿಸಿ, ದಾನಮಾನಗಳಿಂದ ತನ್ನ ಮಟ್ಟಕ್ಕೆ ಏರಿಸಲ್ಪಟ್ಟ ಸಕಲ ರಾಜಸಮೂಹದಿಂದ ಕೂಡಿದವನಾಗಿ ಉಜ್ಜಯನಿಗೆ ಪ್ರಮಾಣಮಾಡಲು ಅಪ್ಪಣೆಯನ್ನು ಪಡೆದುಕೊಂಡನು.

ನಯದಿಂ ಗಂಧರ್ವರಾಜಾತ್ಮಜೆಯೆಡದೊಳಿರಲ್ ಪುಂಡರೀಕಂ ಮಹಾಶ್ವೇ
ತೆಯ ಸೋಂಕಿಂದಾದಲಂಪಿಂ ಬಲದೊಳಿರೆ ಪೌರಾವನೀಪಾಲಪುತ್ರ
ಪ್ರಯುತಂ ನಾನಾ ವಿಮಾನಾವಳಿ ಮಣಿಕಿರಣವ್ಯಾಪ್ತ ದಿಕ್ಚಕ್ರನುಜ್ಜೈ
ನಿಯನಂದೆಯ್ತಂದು ಪೊಕ್ಕಂ ವಿಬುಧಕುಲಾನಂದಚಂದ್ರಂ ನರೇಂದ್ರಂ     ೯೨

ಅವಿಭಕ್ತಸ್ನೇಹಮಂ ರೋಹಿಣಿಯನೊಸೆಯಿಸಲ್ ಸೋಮಲೋಕಕ್ಕೆಮೊರ್ಮೊ
ರ್ಮೆ ವಯಸ್ಯಂ ಪುಂಡರೀಕಂಬೆರಸಮಳಸರಪಂಕಜಾಮೋದ ಲಕ್ಷಿ
ಭವನಕ್ಕೊರ್ಮೊರ್ಮೆ ಕಾದಂಬರಿಯೊಲವಿನೊಳಂ ಹೇಮಕೂಟಕ್ಕದೊರ್ಮೊ
ರ್ಮೆ ವಿಶೇಷಸ್ನೇಹಮಂ ಮಾಡುವನನುದಿನಮೆೞ್ತಂದು ರಾಜೇಂದ್ರಚಂದ್ರಂ           ೯೩

ಪ್ರಿಯದಿಂ ರಾಜೇಂದ್ರಚಂದ್ರಂ ಪ್ರಿಯತಮೆಯೆನೆ ಸಂದಿರ್ದ ಕಾದಂಬರೀಕಾಂ
ತೆಯೊಳಾ ಕಾದಂಬರೀಕಾಂತೆಯುಮೊಸೆದು ಮಹಾಶ್ವೇತೆಯೊಳ್ ತನ್ಮಹಾಶ್ವೇ
ತೆಯನೊಲ್ದಾ ಪುಂಡರೀಕಾಹ್ವಯನಮಲತರಪ್ರೇಮದಿಂ ಪುಂಡರೀಕಾ
ಹ್ವಯನಂ ರಾಜೇಂದ್ರಚಂದ್ರಾಂಕನುಮಗಲದೆ ಕೂಡಿರ್ದರುತ್ಸಾಹದಿಂದಂ             ೯೪

ಕ್ಷಿತಿಯೊಳ್ ಸೌವರ್ಣಕಾಂತಿಪ್ರಸರಮಸದಳಂ ಪರ್ವೆ ಸಂದಿರ್ದುದಂತಾ
ಕೃತಿ ಮುನ್ನಂ ಬಾಣವಾಣೀಪ್ರಿಯನ ವಚನದಿಂ ಮತ್ತೆ ಕರ್ಣಾಟಭಾಷಾ
ಚತುರತ್ವಂ ಪೊರ್ದಿ ಕಾದಂಬರಿ ಪಸರಿಸಿ ರಾಜೇಂದ್ರಚಂದ್ರಾಂಕನೊಳ್ ಸಂ
ಗತಿವೆತ್ತಾದಂ ತ್ರಿಲೋಕೀ ಸಹಚರಿಯನೆ ತಾಂ ಸಂದುದಾಚಂದ್ರತಾರಂ         ೯೫

ಇವು ಕಾಳಿಂಗಾಭಿಧೇಯಪ್ರವಿದಿತಮಿವು ಕಾಂಭೋಜಬಾಹ್ಲೀಕದೇಶೋ
ದ್ಭವಮಸ್ವಂ ರಾಶಿಯಾಗಿರ್ದಪುವಿವು ನಿಜನಾಮಾಂಕವಿದ್ಯೋತಮಾಗ
ಲ್ಕಿವು ನಾನಾ ಶಾಸನಂ ಸತ್ಕ ತಿವನಿತೆಗಿವೌಚಿತ್ಯಮೆಂದಿತ್ತನತ್ಯು
ತ್ಸವದಿಂ ವಿದ್ವತ್ಸಬಾಮಂಡಲಿ ತಣಿವಿನೆಗಂ ಭೋಜರಾಜಕ್ಷಿತೀಶಂ           ೯೬

೯೨. ವಿನಯದಿಂದ ಕೂಡಿದ ಕಾದಂಬರಿಯು ಎಡಗಡೆಯಿರಲು, ಮಹಾಶ್ವೇತೆಯ ಸ್ಪರ್ಶದಿಂದ ಆನಂದಿತನಾದ ಪುಂಡರೀಕನು ಬಲಗಡೆಯಿರಲು, ಪಟ್ಟಣಿಗರು ಮತ್ತು ಅರಸುಮಕ್ಕಳಿಂದ ಕೂಡಿ, ವಿಮಾನಪಂಕ್ತಿಯ ರತ್ನಕಿರಣಗಳಿಂದ ದಿಗಂತವನ್ನೆಲ್ಲ ತುಂಬುತ್ತಾ, ವಿದ್ವಾಂಸರೆಂಬ ಕನ್ನೆ ದಿಲೆಗಳಿಗೆ ಸಂತೋಷವನ್ನುಂಟುಮಾಡುವ ಚಂದ್ರಸ್ವರೂಪನಾದ ಚಂದ್ರಾಪೀಡ ಮಹಾರಾಜನು ಉಜ್ಜಯನಿಗೆ ಪ್ರಯಾಣ ಬೆಳೆಸಿದನು. (ಟಿ). ಇಲ್ಲಿ ವಿಬುಧ ಎಂಬ ಶಬ್ದಕ್ಕೆ ಶ್ಲೇಷೆಯಿಂದ ದೇವತೆ ಎಂಬ ಅರ್ಥವೂ ತೋರುವುದು. ಚಂದ್ರನು ದೇವತೆಗಳಿಗೆ ಅಮೃತವನ್ನು ಒದಗಿಸುವುದರಿಂದ ಅವರಿಗೆ ಸಂತೋಷವನ್ನುಂಟು ಮಾಡುವುದು ಸಮಂಜಸವಾಗುತ್ತದೆ. ೯೩. ಚಂದ್ರಾವತಾರನಾದ ಚಂದ್ರಾಪೀಡನು ಒಮ್ಮೆ ರೋಹಿಣಿಯನ್ನು ಸಂತೋಷಪಡಿಸಲು ಚಂದ್ರಲೋಕಕ್ಕೂ, ಒಮ್ಮೆ ಗೆಳೆಯನಾದ ಪುಂಡರೀಕನ ಜೊತೆಯಲ್ಲಿ ಸ್ವಚ್ಛವಾದ ಸರೋವರದಲ್ಲಿರುವ ಕಮಲದ ಸುವಾಸನೆಯಿಂದ ಕೂಡಿದ ಲಕ್ಷಿ ಯ ವಾಸಸ್ಥಾನಕ್ಕೂ, ಮತ್ತೊಮ್ಮೆ ಕಾದಂಬರಿಯ ಪ್ರೀತಿಯಿಂದ ಹೇಮಕೂಟಕ್ಕೂ ಬಂದು ಹೆಚ್ಚು ಒಲವನ್ನು ತೋರಿಸಿ ಸಂತತವಾಗಿ ವಿಹರಿಸುತ್ತಿದ್ದನು. ೯೪. ಚಂದ್ರಾಪೀಡನು ಪ್ರೀತಿಯಿಂದ ಪ್ರಿಯತಮೆಯೆನಿಸಿದ ಕಾದಂಬರೀದೇವಿಗೂ, ಆ ಕಾದಂಬರೀದೇವಿಯು ಸಂತೋಷದಿಂದ ಮಹಾಶ್ವೇತೆಯೊಂದಿಗೂ ಕೂಡಿ, ಹಾಗೆಯೆ ಮಹಾಶ್ವೇತೆಯನ್ನು ಪ್ರೀತಿಸಿ ಪುಂಡರೀಕನೂ ಮತ್ತು ಬಹಳ ಪರಿಶುದ್ಧವಾದ ಸ್ನೇಹದಿಂದ ಪುಂಡರೀಕನನ್ನು ಚಂದ್ರಾಪೀಡನೂ ಬಹಳ ಉತ್ಸಾಹದಿಂದ ಕೂಡಿಕೊಂಡು ಅಗಲದೆ ಇರುತ್ತಿದ್ದರು. ೯೫. ಈ ಕಾದಂಬರೀಗ್ರಂಥವು ಸರಸ್ವತೀವಲ್ಲಭನೆಂದು ಹೆಸರುವಾಸಿಯಾಗಿದ್ದ ಬಾಣಮಹಾಕವಿಯ ವಾಣಿಯಿಂದ ಸಂಸ್ಕೃತಭಾಷೆಯಲ್ಲಿ ಸುಂದರವಾದ ವಚನಗಳ ಹೊಳಪನ್ನು ಅತಿಶಯವಾಗಿ ಹರಡುತ್ತಾ ಜಗತ್ತಿನಲ್ಲಿ ಸರ್ವವಿದಿತವಾಗಿದೆ. ಅದೇ ಕಾದಂಬರಿಯು ಮತ್ತೆ ಈಗ ಕರ್ಣಾಟಭಾಷೆಯಲ್ಲಿ ಚಮತ್ಕಾರವನ್ನು ಹೊಂದಿ, ನಾಯಕನಾದ ಚಂದ್ರಾಪೀಡನ ಕಥೆಯಿಂದ ಕೂಡಿ, ಮೂರುಲೋಕಗಳಲ್ಲೂ ಸರ್ವವಿದಿತವಾಗಿ ಪ್ರಸಿದ್ಧಿಯನ್ನು ಪಡೆದು ಚಂದ್ರನೂ ನಕ್ಷತ್ರಗಳೂ ಇರುವವರೆಗೂ ಸ್ಥಿರವಾಗಿರುತ್ತದೆ. (ಟಿ). ಇಲ್ಲಿ “ರಾಜೇಂದ್ರಚಂದ್ರಾಂಕನೊಳ್ ಸಂಗತಿವೆತ್ತು” ಎಂಬ ವಚನದಿಂದ ಕವಿಗೆ ಆಶ್ರಯದಾತನಾದ ಚಂದ್ರನೆಂಬ ಮಹಾರಾಜನ ಅಂಕಿತದಿಂದ ಕೂಡಿಕೊಂಡು ಎಂಬ ಅರ್ಥವೂ ತೋರುತ್ತದೆ. ೯೬. ಇವು ಕಳಿಂಗದೇಶದಲ್ಲಿ ಹುಟ್ಟಿದ ಕುದುರೆಗಳೆಂದು ಪ್ರಸಿದ್ಧವಾಗಿವೆ. ಇಲ್ಲಿ ಕಾಂಭೋಜ ಬಾಹ್ಲೀಕ ದೇಶಗಳಲ್ಲಿ ಹುಟ್ಟಿದ ಕುದುರೆಗಳು ಹಿಂಡುಹಿಂಡಾಗಿವೆ. ಇವೆಲ್ಲ ಕವಿಗಳ ಕವಿತಾರಮಣಿಗೆ ಉಚಿತವಾದ ಬಳುವಳಿ ಎಂದು ಭೋಜಮಹಾರಾಜನು ತನ್ನ ಹೆಸರು ಪ್ರಕಾಶಕ್ಕೆ ಬರುವಂತೆ ಅನೇಕ

ಅತಿಚತುರಕವಿಕದಂಬಂ
ಸ್ತುತಿಯಿಸೆ ಚಾತುರ್ಯವೃತ್ತಿಯಂ ತಳೆದು ಜಗತ್
ಸ್ತುತನಾದ ನಾಗಪೂಜ್ಯಂ
ಕೃತಿಪಂ ತಾಂ ಸುಖದಿನಿರ್ಕೆಯಿನನೞಗೆವರಂ            ೯೭

ಇದು ಚೋದ್ಯಂ ಕವಿಹೃದ್ಗತಂ ನವರಸಂ ನಿರ್ದೋಷಮೆಂದೀಗಳಾ
ದುದು ಕಾದಂಬರಿಸೇವ್ಯಮಾದುದನಿತುಂ ತಾನೆಯ್ದೆ ಭೂಭಾಗದೊಳ್
ವಿದಿತಶ್ರೀಕವಿ ನಾಗವರ್ಮನ ವಚಸ್ಸಂದೋಹದಿಂ ದೋಷಮೊಂ
ದದಲಂಕಾರದ ವಸ್ತುಬಂಧಮಿದು ತಾನೇಂ ಮಾಡದೇಂಗೆಯ್ಯದೋ        ೯೮

ಚಂದ್ರಾಪೀಡ ಕಾದಂಬರಿಯರ ಪುನಸ್ಸಮಾಗಮ

ಸಮಾಪ್ತ

ಕರ್ಣಾಟಕ ಕಾದಂಬರಿ

ಸಂಪೂರ್ಣಂ

 

ದಾನಶಾಸನಗಳನ್ನು ಬರಿದು, ಬಹಳ ಸಂತೋಷದಿಂದ ವಿದ್ವಾಂಸರ ಸಮೂಹಕ್ಕೆ ತೃಪ್ತಿಯಾಗುವವರೆಗೂ ದಾನಮಾಡಿದ್ದಾನೆ.

೯೭. ಬಹಳ ಪ್ರತಿಭಾವಂತರಾದ ಕವಿಗಳ ಗುಂಪು ಸ್ತೋತ್ರಮಾಡುತ್ತಿರಲಾಗಿ, ಒಳ್ಳೆಯ ರಸಿಕತನವನ್ನು ಪಡೆದು ಲೋಕದಲ್ಲೆಲ್ಲಾ ಕೀರ್ತಿವಂತನಾದ ಮತ್ತು ನಾಗವರ್ಮನ ಗೌರವಕ್ಕೆ ಪಾತ್ರನಾದ ಈ ಕಾವ್ಯಕ್ಕೆ ಪೋಷಕನಾಯಕನಾದ ಮಹಾರಾಜನು ಸೂರ್ಯನಿರುವವರೆಗೂ ಸುಖವಾಗಿರಲಿ. ೯೮. ಈ ಕಾವ್ಯವು ಅದ್ಭುತವಾದುದು, ವಿದ್ವಾಂಸರ ಮನಸ್ಸಿಗೆ ಆನಂದವನ್ನುಂಟು ಮಾಡತಕ್ಕದ್ದು, ನವರಸಭರಿತವಾದುದು ಮತ್ತು ಕಾವ್ಯದೋಷಗಳೊಂದೂ ಇಲ್ಲದೆ ನಿರ್ದಿಷ್ಟವೆನಿಸಿರುವುದು. ಆದ್ದರಿಂದ ಈ ಕಾದಂಬರಿಯು ಲೋಕದಲ್ಲಿ ವಿಶೇಷವಾಗಿ ಓದಿ ಆನಂದಿಸಲು ತಕ್ಕುದಾಗಿದೆ. ಸುಪ್ರಸಿದ್ಧ ಕವಿಯಾದ ನಾಗವರ್ಮನ ವಾಗ್ಗುಂಫದಿಂದ (ವಾಕ್ಯರಚನೆ) ಮೆರೆಯವ, ದೋಷರಹಿತವಾದ ಕಾವ್ಯಾಲಂಕಾರಗಳಿಂದ ಶೋಭಿಸುವ ಈ ವಸ್ತುಕಾವ್ಯವು ಕಾವ್ಯದಿಂದ ಜನರಿಗೆ ಉಂಟಾಗುವ ಫಲಗಳನ್ನೆಲ್ಲಾ ನೀಡುತ್ತಾ ಪರಮಾನಂದವನ್ನುಂಟುಮಾಡುತ್ತದೆ.

ಚಂದ್ರಾಪೀಡ ಕಾದಂಬರಿಯರ ಪುನಸ್ಸಮಾಗಮ

ಮುಗಿಯಿತು

ಭದ್ರಂ ಶುಭಂ ಮಂಗಳಂ