ಎಂದಾ ಹಾರೀತನಾಮಪ್ರಮುಖಮುನಿಸಮೂಹಕ್ಕೆ ಜಾಬಾಲಿಗಳ್ ಪೇ
ೞ್ವಂದುಂ ಮಂದಸ್ಮಿತಾಸ್ಯರ್ ಕಥೆಯ ರಸದೊಳೋಲಾಡುತಂ ಪೊೞ್ತೆನಿತ್ತಾ
ಯ್ತೆಂದುಂ ಮಚ್ಚಿತ್ತದೊಳ್ ಭಾವಿಸದೆ ಮೞೆದುಪೇೞುತ್ತಮಿಂತಿರ್ಪಮೇ ಪೇ
ೞೆಂದೆನ್ನಂ ನೋಡಿ ಕೇಳ್ ಶೂದ್ರಕನೃಪ ಕೆಲದೊಳ್ ಕೇಳ್ವವರ್ಗೆಂದರಾಗಳ್         ೧

ವ|| ಅದೆಂತೆನೆ

ಆವೊಂ ಶ್ರೀಶ್ವೇತಕೇತುವ್ರತಿಗೆ ಸುತನೆನಲ್ ಸಂದು ಕಾಮಿತ್ವದಿಂದಂ
ದೇವತ್ವಂಗೆಟ್ಟು ಮರ್ತ್ಯೋದ್ಭವನೆನೆ ಶುಕನಾಸಂಗೆ ಪುಟ್ಟಿರ್ದನೋ ತೋ
ನಾ ವೈಶಂಪಾಯನಂ ತಂದೆಯ ಮುನಿಸಿದ ಬೈಗುಳ್ಗಳಿಂದಂ ಮಹಾಶ್ವೇ
ತಾ ವಾಕ್ಸಾಮರ್ಥ್ಯದಿಂದಂ ಗಿಳಿಯ ಬಸುಳೀಯಂದದಿಂ ಬಂದನಲ್ತೇ       ೨

ಅಂತು ಮುನಿ ಪೇೞಲೆಚ್ಚೆ
ತ್ತಂತೆವೊಲಾನಾಗೆ ಬಾಲ್ಯದೊಳವೆನ್ನಯ ಜ
ನ್ಮಾಂತರದೊಳಾದ ವಿದ್ಯಾ
ಸಂತತಿ ಜಿಹ್ವಾಗ್ರದಲ್ಲಿ ನೆಲಸಿದುದಾಗಳ್       ೩

ವ|| ಅದಲ್ಲದೆಯುಮಖಿಲಕಲಾಪೋಪದೇಶಕೌಶಲಮನೊಳಕೊಂಡಿರ್ಪ ಸ್ಪಷ್ಟವರ್ಣಾಭಿಧಾನಮಪ್ಪ ವಾಣಿಯನಪ್ಪುಕೆಯ್ದು ವಿಜ್ಞಾತ ಸಕಲಾನ್ಯಜನ್ಮವೃತ್ತಾಂತನೆನಾಗಿ ತಾಯಂ ತಂದೆಯಂ ತಾರಾಪೀಡದೇವನುಮಂ ವಿಲಾಸವತೀಮಹಾದೇವಿಯುಮಂ ಚಂದ್ರಾಪೀಡದೇವನುಮಂ ಮುನ್ನೆನ್ನ ಕೆಳೆಯನಪ್ಪ ಕಪಿಂಜಲನುಮಂ ನೆನೆದೆಂ ಮಹಾಶ್ವೇತೆಯೊಳಾದ ಕೂರ್ಮೆ ನೂರ್ಮಡಿಸೆ ತದ್ಗತಚಿತ್ತನಾಗಿ ನೆನೆನೆನೆದೆನ್ನ ಕಾಮಪರತೆಗಾಂ ನೆಲದೊಳ್ ತಲೆಯಂ ಕುತ್ತಿ ಕಿಱದುಬೇಗಮಿರ್ದು ನಿಜಾವಿನಯಶ್ರವಣಲಜ್ಜೆಯಿಂ ಕರಗುವಂತೆಯುಂ ಪಾತಾಳಮಂ ಪುಗುವಂತೆಯುಮಾಗಿಂತೆಂದೆನದೆಂತೆನೆ

ಮುನ್ನಿನ ಭವಮಂ ಬಂಧುಗ
ಳಂ ನೆ ತಿಳಿವಱತಮಾಯ್ತು ಭವದೀಯ ಪದಾ
ಸನ್ನತೆಯಿಂದಾದೊಡಮೇಂ
ಬಿನ್ನವಿಸಿದಪೆಂ ಮುನೀಂದ್ರ ನಾಣ್ಚದೆ ಮತ್ತಂ ೪

೧. ಶೂದ್ರಕಮಹಾರಾಜನೆ ಕೇಳು. ಹೀಗೆ ಜಾಬಾಲಿಮಹರ್ಷಿಗಳು ಹಾರಿತನೇ ಮೊದಲಾದ ಮುನಿಗಳ ಸಮೂಹಕ್ಕೆ ಹೇಳಿ ನಸುನಗೆಯನ್ನು ಬೀರಿದನು. “ಕಥೆಯ ಆನಂದದಲ್ಲಿ ನಲಿದಾಡುತ್ತಾ ಹೊತ್ತು ಎಷ್ಟಾಯಿತು? ಎಂಬುದನ್ನೂ ಗಮನಿಸದೆ ಪರವಶರಾಗಿ ಹೇಳುತ್ತ ಹೀಗೆಯೇ ಇದ್ದುಬಿಟ್ಟೆವಲ್ಲ !” ಎಂದು ಹೇಳುತ್ತಾ, ನನ್ನನ್ನು ನೋಡಿ ಹತ್ತಿರದಲ್ಲಿ ಕೇಳುತ್ತಿರುವವರನ್ನು ಕುರಿತು ಹೀಗೆ ಹೇಳಿದರು. ವ|| ಅದು ಹೇಗೆಂದರೆ ೨. ಯಾರು ಶ್ವೇತಕೇತುಮಹರ್ಷಿಗಳಿಗೆ ಮಗನಾಗಿ ಹುಟ್ಟಿ, ಕಾಮುಕತನದಿಂದ ದೇವತ್ವವನ್ನು ಕಳೆದುಕೊಂಡು ಮನುಷ್ಯಜಾತಿಯಲ್ಲಿ ಶುಕನಾಸನ ಮಗನಾಗಿ ಹುಟ್ಟಿದನೋ ಆ ವೈಶಂಪಾಯನನೇ ಈ ಗಿಳಿ! ತಂದೆಯು ಕೋಪದಿಂದ “ಇವನು ತಿರ್ಯಗ್ವಾತಿಯಲ್ಲಿ ಹುಟ್ಟದಿರುವುದಿಲ್ಲ” ಎಂಬುದಾಗಿ ಬೈದುದರಿಂದಲೂ, ಮಹಾಶ್ವೇತೆಯ ಶಾಪದ ಪ್ರಭಾವದಿಂದಲೂ ಗಿಳಿಯ ಹೊಟ್ಟೆಯಲ್ಲಿ ಹೀಗೆ ಹುಟ್ಟಿಬಂದಿದ್ದಾನೆ. ೩. ಆ ರೀತಿಯಲ್ಲಿ ಮಹರ್ಷಿಯು ಹೇಳಿದ ಕೂಡಲೆ ನಾನು ಮಲಗಿದ್ದು ಎಚ್ಚೆತ್ತವನಂತಾದೆನು. ಹಿಂದಿನ ಜನ್ಮಗಳಲ್ಲಿ ನಾನು ಕಲಿತಿದ್ದ ಎಲ್ಲಾ ವಿದ್ಯೆಗಳೂ ಬಾಲ್ಯದಲ್ಲಿಯೆ ನನ್ನ ನಾಲಿಗೆಯ ತುದಿಯಲ್ಲಿ ಮೂಡಿದುವು. ವ|| ಅದಲ್ಲದೆ ಸಮಸ್ತ ಕಲೆಗಳನ್ನೂ ಹೇಳಿಕೊಡಬಲ್ಲ ಚಾತುರ್ಯವನ್ನು ಪಡೆದಿರುವ ಹಾಗೂ ಸ್ಪಷ್ಟವಾದ ಅಕ್ಷರಗಳನ್ನು ಉಚ್ಚರಿಸಬಲ್ಲ ವಾಣಿಯೂ ಉಂಟಾಯಿತು. ಅಲ್ಲದೆ ಜನ್ಮಂತರಗಳ ಎಲ್ಲಾ ಸಂಗತಿಗಳೂ ಜ್ಞಾಪಕಕ್ಕೆ ಬಂದುವು, ಆಗ ತಾಯಿಯನ್ನೂ, ತಂದೆಯನ್ನೂ, ತಾರಾಪೀಡನನ್ನೂ, ವಿಲಾಸವತಿಯನ್ನೂ, ಚಂದ್ರಾಪೀಡನನ್ನೂ, ಹಿಂದೆ ನನ್ನ ಗೆಳೆಯನಾಗಿದ್ದ ಕಪಿಂಜಲನನ್ನೂ ನೆನೆಸಿಕೊಂಡೆನು. ಮಹಾಶ್ವೇತೆಯ ಮೇಲಿನ ಅನುರಾಗವು ನೂರುಮಡಿಯಾಯಿತು. ಅವಳಲ್ಲೆ ಮನಸ್ಸು ನೆಟ್ಟು, ಅವಳನ್ನೇ ಚಿಂತಿಸಿ ಚಿಂತಿಸಿ, ನನ್ನ ಕಾಮಾತುರತೆಗೆ ನಾನೇ ತಲೆತಗ್ಗಿಸಿ ಸ್ವಲ್ಪ ಕಾಲವಿದ್ದು, ನನ್ನ ದುರ್ವರ್ತನೆಯನ್ನು ಕೇಳಿದುದರಿಂದ ಉಂಟಾದ ನಾಚಿಕೆಯಿಂದ ಪಾತಾಳಕ್ಕೆ ಇಳಿದುಹೋಗುವವನಂತೆ ಆಗಿ ಅವರನ್ನು ಕುರಿತು ಹೀಗೆಂದೆನು. ೪. “ಮಹರ್ಷಿಗಳೆ, ತಮ್ಮ ಚರಣಾನುಗ್ರಹದಿಂದ ಹಿಂದಿನ ಜನ್ಮಗಳನ್ನೂ ಬಂಧುಗಳನ್ನೂ ಚೆನ್ನಾಗಿ

ಜಾತಿಸ್ಮರತೆ ವಿರಕ್ತಿಗೆ
ಹೇತುವೆನುತ್ತಿರ್ಪರದುರೆ ಪುಸಿಯಾಗಿ ಮಹಾ
ಶ್ವೇತೆಯೊಳೊದೊಂದನುರಾ
ಗಾತಿಶಯಂ ಪೆರ್ಚಿದಪುದು ಮುನ್ನಿಂದೀಗಳ್ ೫

ವ|| ಅದಲ್ಲದೆಯಂ ಮದ್ವಿಪತ್ತಿಶ್ರವಣಮಾತ್ರದಿಂ ಸುಟಿತಹೃದಯನಾದ ಚಂದ್ರಾಪೀಡನೆಲ್ಲಿ ಪುಟ್ಟಿಜನೆಂಬುದಂ ಬೆಸಸಲ್ವೇೞ್ಕುಮಾಂ ತಿರ್ಯಗ್ವಾತಿಯಾದೊಡಮಾತನಂ ನೋಡಿ ಕೃತಾರ್ಥನಪ್ಪೆನೆಂಬುದುಮಾ ಮುನೀಂದ್ರನೆನ್ನಂ ಮುನ್ನಿನಂತೆ ನೋಡಿ ನಿಜಸ್ನೇಹವಚನದಿನೆನ್ನ ನಿಂತೆಂದಂ

ಮದೈ ತರಳತೆಯಿಂದೀ
ತೆಱನಾದುದನೆಲೆ ದುರಾತ್ಮ ಪಾಱಲ್ ಮತ್ತಂ
ಮಱುಗುತ್ತಿರ್ದಪೆಯಿನಿಸಂ
ಗಱ ಮೂಡಿದ ಬೞಕ ನೀನೆ ದಲ್ ಪೋದಪ್ಪೈ             ೬

ವ|| ಎಂದು ಜಾಬಾಲಿಗಳ್ ನುಡಿಯೆ ಹಾರೀತನತಿಕುತೂಹಲಿತಾಂತಕರಣನಾಗಿ ತಂದೆಗಿಂತೆಂದಂ

ತನುವಿಂದಂ ಪೋಗೆ ಜೀವಂ ನೆಲೆವಿಡಿಯಲಣಂ ಬಾರದೆಂಬನ್ನೆಗಂ ತ
ನ್ಮುನಿಗಂತಪ್ಪೊಂದು ಕಾಮಾತುರತೆ ಸಮನಿಸಿತ್ತೇತಱಂ ನಾಕಸಂಭೂ
ತನದೇಕಲ್ಪಾಯುವಾದಂ ಬೆಸಸಿಮೆನಗಿದಾಶ್ಚರ್ಯಮಾಗಿರ್ದುದೆಂದಾ
ತನಯಿಂಗಿಂತೆಂದನಾಗಳ್ ಮುನಿಜನಕುಮುದಾನಂದ ಚಂದ್ರಂ ಮುನೀಂದ್ರಂ

ವಿದಿತಮೆನಲ್ ಕಾಮದ ಮೋ
ಹದ ಮೊದಂಲೆಂದೆನಿಸಿದಲ್ಪಸಾರಸ್ತ್ರೀವೀ
ರ್ಯದಿನಲ್ತೆ ಕೇವಲಂ ಪು
ಟ್ಟಿದನೀ ಪಾಪಾತ್ಮನಾತ್ಮಕರ್ಮೋದಯದಿಂ ೮

ಸ್ವಾಗತ|| ವೇದದಲ್ಲಿಯುಮಿದೀ ಪ್ರಕಾರದಿಂ
ದೋದಿತೆಂದಱವೆಯಲ್ತೆ ವತ್ಸ ನೀಂ
“ಯಾದೃಶೋ ಜಗತಿ ಜಾಯತೇ ಪುನ
ಸ್ತಾದೃಶೋ ಭವತಿ” ಯೆಂಬ ವಾಕ್ಯಮಂ        ೯

ನೆನೆಸಿಕೊಳ್ಳುವ ತಿಳಿವಳಿಕೆಯುಂಟಾಯಿತು. ಆದರೆ ನಾಚಿಕೆಯಿಲ್ಲದೆ ಮತ್ತೆ ತಮ್ಮಲ್ಲಿ ಹೇಗೆ ವಿಜ್ಞಾಪಿಸಿಕೊಳ್ಳಲಿ? ೫. ಜನ್ಮಾಂತರಸ್ಮರಣೆಯು ವಿರಕ್ತಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಅದೆಲ್ಲಾ ಸುಳ್ಳಾಗಿ ಮಹಾಶ್ವೇತೆಯ ಮೇಲಿನ ಅತ್ಯಕವಾದ ಅನುರಾಗವು ಹಿಂದಿನಂತೆಯೇ ಈಗಲೂ ಹೆಚ್ಚುತ್ತಿದೆ. ವ|| ಅದಲ್ಲದೆ ನನ್ನ ಮರಣವನ್ನು ಕೇಳಿದ ಮಾತ್ರದಿಂದಲೇ ಎದೆಯೊಡೆದು ಸತ್ತ ಚಂದ್ರಾಪೀಡನು ಎಲ್ಲಿ ಹುಟ್ಟಿದ್ದಾನೆ? ಎಂಬುದನ್ನು ತಿಳಿಸಬೇಕು. ಈ ಹಕ್ಕಿಯ ಜಾತಿಯಲ್ಲೂ ಅವನನ್ನು ನೋಡಿ ಧನ್ಯನಾಗುತ್ತೇನೆ” ಎಂದು ಕೇಳಿಕೊಂಡೆನು. ಅದಕ್ಕೆ ಆ ಮುನೀಂದ್ರನು ನನ್ನನ್ನು ಮೊದಲಿನಂತೆಯೆ ನೋಡಿ ತನ್ನ ವಾತ್ಸಲ್ಯಪೂರ್ಣವಾದ ವಾಣಿಯಿಂದ ಹೀಗೆಂದನು ೬. “ಅಯ್ಯೋ ದುರಾತ್ಮ! ಚಪಲತನದಿಂದಲೇ ಹೀಗಾದುದನ್ನು ಮರೆತುಬಿಟ್ಟೆಯಾ? ಮತ್ತೆ ಹಾರಿಹೋಗಬೇಕೆಂದು ತವಕಿಸುತ್ತಿರುವೆಯಲ್ಲ ! ಆಗಲಿ; ರೆಕ್ಕೆ ಹುಟ್ಟಲಿ. ಆಮೇಲೆ ನೀನೇ ಹೋಗುವೆಯಂತೆ.” ವ|| ಎಂದು ಜಾಬಾಲಿಮುನಿಗಳು ಹೇಳಲಾಗಿ ಹಾರೀತನು ಬಹಳ ಕುತೂಹಲದಿಂದ ಕೂಡಿದ ಮನಸ್ಸುಳ್ಳವನಾಗಿ ತಂದೆಯನ್ನು ಕುರಿತು ಹೀಗೆಂದನು. ೭. “ಶರೀರದಿಂದ ಜೀವವು ಹೋಗುತ್ತಿರಲಾಗಿ ಅದನ್ನು ತಡೆದು ನಿಲ್ಲಿಸಿಕೊಳ್ಳಲೂ ಆಗಲಿಲ್ಲವೆಂಬಷ್ಟು ಮಟ್ಟಿಗೆ ಆ ಪುಂಡರೀಕನಿಗೆ ಏತಕ್ಕೆ ಅಷ್ಟೊಂದು ಕಾಮೋದ್ರೇಕವು ಉಂಟಾಯಿತು? ಸ್ವರ್ಗಲೋಕದಲಿ ಹುಟ್ಟಿದವನಾದರೂ ಏತಕ್ಕೆ ಅಲ್ಪಾಯುವಾದನು? ಅಪ್ಪಣೆಕೊಡಿಸಬೇಕು. ಇದು ನನಗೆ ಬಹಳ ಸೋಜಿಗತವಾಗಿದೆ!” ಎಂದು ಕೇಳಿಕೊಳ್ಳುತ್ತಿರುವ ಮಗನನ್ನು ಕುರಿತು ಮುನಿಗಳೆಂಬ ಕನ್ನೆ ದಿಲೆಗಳಿಗೆ ಚಂದ್ರನಂತಿರುವ ಆ ಮಹರ್ಷಿಯು ಹೀಗೆ ಹೇಳಿದನು.

೮. “ವತ್ಸ, ಇದಕ್ಕೆ ಕಾರಣವು ಸ್ಪಷ್ಟವಾಗಿಯೇ ಇದೆ. ಈ ಪಾಪಿಷ್ಠನು ಸಂಭೋಗಾಭಿಲಾಷೆಗೂ ಮೂಢತನಕ್ಕೂ ಉತ್ಪತ್ತಿಸ್ಥಾನವೆನಿಸಿರುವ ಅಲ್ಪಶಕ್ತಿಯುಳ್ಳ ಹೆಂಗಸಿನ ವೀರ್ಯವೊಂದರಿಂದಲೇ ತನ್ನ ಪ್ರಾಚೀನಕರ್ಮಫಲದಿಂದ ಹುಟ್ಟಿದನು.! ೯. ಮಗು, ವೇದದಲ್ಲೂ, ‘ಪ್ರಪಂಚದಲ್ಲಿ ಯಾವ ರೀತಿ ಹುಟ್ಟಾತ್ತಾನೋ ಅದೇ ರೀತಿ ಆಗುತ್ತಾನೆ! ಎಂಬ ವಚನವು ಹೇಳಲ್ಪಟ್ಟಿರುವುದು ನಿನಗೂ ಗೊತ್ತೇ ಇದೆ.

ವ|| ಅದಲ್ಲದೆಯುಂ ಕಾರ್ಯಂಗಳ್ ಕಾರಣಗುಣಯೋಗಂಗಳದುವಲಮಾಯುರ್ವೇದ ದೊಳಮಲ್ಪಸಾರಸ್ತ್ರೀವೀರ್ಯ ದೊಳಲ್ಪಾಯುವಪ್ಪ ನೆಂಬುದಱನೀತಂಗಿಂತಪ್ಪ ಕಾಮಪರವಶತೆಯುಂ ಮದನಜ್ವರಸಂತಾಪಮಪಣಮುಮಾದುದು

ಇನ್ನುಮಚಿರಾಯುವಕ್ಕುಂ
ಮುನ್ನಿನ ತೆಱದಿಂದಮಾಯುರವಸಾನದೊಳೀ
ತನ್ನೆಟ್ಟನಕ್ಷಯಾಯು
ಷ್ಯೋನ್ನತಿಯಂ ತಳೆದು ಸುಖದಿನಿರ್ಕುಂ ಬೞಯಂ     ೧೦

ವ|| ಎಂಬುದುಮದಂ ಕೇಳ್ದುಮವನಿತಲನಿವೇಶಿತೋತ್ತಮಾಂಗನಾಗಿ ಯತಿಪತಿಯನಿಂತೆಂದೆಂ

ಧೈರ್ಯಂ ಕೆಟ್ಟಿತ್ತು ಸರ್ವಾಕ್ಷಮಮೆನಿಪುದಳ್ ವರ್ತಿಸುತ್ತಿರ್ಪೆನಿಂತೀ
ತಿರ್ಯಗ್ವಾತಿತ್ವದೊಳ್ ನಾಲಗೆಯುಮಿದು ಭವತ್ಸೇವೆಯಿಂದಾದುದಿನ್ನೇಂ
ಕಾರ್ಯಂ ಮತ್ತುಂಟು ಸಾರ್ಗುಂ ತನುವುಮಗಣಿತಾಯುಷ್ಯಯಮುಂ ಮತ್ತೆನಲ್ಕಾ
ಶ್ಚರ್ಯಂಬಟ್ಟಪ್ಪೆನೀಗಳ್ ಬೆಸಸಿಮೆನಗೆನಲ್ ಮುಕ್ತತಂದ್ರಂ ಮುನೀಂದ್ರಂ             ೧೧

ತವುತಿರ್ದತ್ತಲ್ತೆ ತಾರಾಸಮುದಾಯಮಿದೊ ಪಂಪಾಸರಸ್ತೀರ ಸುಪ್ತೋ
ತ್ಥವಿಹಂಗಧ್ವಾನವೀ ಪೊಣ್ಮುವುದು ವನಲತಾಳಿಪ್ರಸೂನಾವಳೀಗಂ
ಧವಹಂ ಮೆಲ್ಪಿಂದೆ ದಲ್ ಮತ್ತಿರದೆಸೆವ ನಿಶಾಸಂಘಸಂಮರ್ದದೊಂದು
ತ್ಸವದಿಂ ತಣ್ಗಂಪನೀ ಬೀಱದಪುದು ಬೆಳಗಾಯ್ತೇನನಿಂ ಪೇೞ್ವೆನೀಗಳ್     ೧೨

ವ|| ಅದಲ್ಲದೆಯುಂ ನಿತ್ಯಕರ್ಮಂ ಪ್ರತ್ಯಾಸನ್ನಮಾಯ್ತೆಂದು

ನಿಷ್ಠಾಪರಂ ಪ್ರಭಾತಾ
ನುಷ್ಠಾನ ನಿಮಿತ್ತಮೆೞ್ದನಲ್ಲಿಂದಂ ತ
ದ್ಗೋಷ್ಠಿಯನುೞದು ಮುನೀಂದ್ರಗ
ರಿಷ್ಠಂ ಜಾಬಾಲಿನಾಮಧೇಯಮುನೀಂದ್ರಂ    ೧೩

ವ|| ಆಗಳಾ ತಪಸ್ವಿಗಳ್ ನೀರಾಗರಾಗಿಯುಂ ಕಥಾರಸವಿಸ್ಮೃತಗುರೂಚಿತಪ್ರತಿಪತ್ತಿಗಳುಂ ಮತ್ತಂ ಕೇಳುತ್ತಮಿರ್ದಂತೆ ಕಂಟಕಿತಕಾಯರುಂ ವಿಸ್ಮಯೋತುಲ್ಲಮಾನಸರುಂ ಯುಗ ಪದಾಗಳಿತ ಶೋಕಾನಂದಜನ್ಮನಯನಸಲಿಲರುಂ ಹಾಕಷ್ಟಶಬ್ದಾನುಬಂಗಳುಂ ಪರವಶರುಮೆನಿಸಿ ಕಿಱದುಬೇಗಮಿರ್ದಲ್ಲಿಂದಮೇೞ್ದು

ವ|| ಅದಲ್ಲದೆ ಕಾರಣಗುಣಗಳು ಕಾರ್ಯದಲ್ಲಿ ಸೇರಿಕೊಂಡೇ ಇರುತ್ತವೆ. (ಕಾರಣಗುಣಾ ಕಾರ್ಯೇ ಸಂಕ್ರಾಮಂತಿ) ಆಯುರ್ವೇದದಲ್ಲಿಯೂ ಅಲ್ಪಸಾರವುಳ್ಳ ಸ್ತ್ರೀವೀರ್ಯದಿಂದ ಹುಟ್ಟಿದವನು ಅಲ್ಪಾಯುವಾಗಿರುತ್ತಾನೆಂದು ಹೇಳಿದೆ. ಅದರಿಂದ ಇವನಿಗೆ ಇಂತಹ ಕಾಮಪರವಶತೆಯೂ ಕಾಮಜ್ವರ ಸಂತಾಪದಿಂದ ಮರಣವೂ ಉಂಟಾಯಿತು ೧೦. ಈಗಲೂ ಇವನು ಮೊದಲಿನಂತೆಯೇ ಅಲ್ಪಾಯುಷ್ಯವುಳ್ಳವನೇ ಆಗಿದ್ದಾನೆ. ಈ ಆಯುಷ್ಯವು ಕಳೆದ ಮೇಲೆ ಇವನು ಅಕ್ಷಯವಾದ ಆಯುಷ್ಯಾಭಿವೃದ್ಧಿಯನ್ನು ಪಡೆದು ಬಳಿಕ ಸುಖವಾಗಿರುತ್ತಾನೆ.” ವ|| ಎಂದು ಹೇಳಲಾಗಿ, ಅದನ್ನು ಕೇಳಿ ನೆಲದವರೆಗೂ ತಲೆಯನ್ನು ತಗ್ಗಿಸಿ ಜಾಬಾಲಿ ಮುನಿಯನ್ನು ಕುರಿತು ಹೀಗೆ ಹೇಳಿದೆನು. ೧೧. “ಪೂಜ್ಯರೆ, ಯಾವ ಕೆಲಸವನ್ನೂ ಮಾಡಲಾಗದ ಈ ಹಕ್ಕಿಯ ಜಾತಿಯಲ್ಲಿ ಹೀಗೆ ಹುಟ್ಟಿರುವ ನನಗೆ ಧೈರ್ಯವೇ ಲುಪ್ತವಾಗಿದೆ. ಮಾತಾಡುವ ಶಕ್ತಿ ಮಾತ್ರ ತಮ್ಮೊಂದು ಅನುಗ್ರಹದಿಂದ ಉಂಟಾಯಿತು. ನನ್ನ ಶರೀರವು ಅಪರಿಮಿತವಾದ ಆಯುಸ್ಸನ್ನು ಪಡೆಯಲು ನಾನು ಯಾವ ಕಾರ್ಯವನ್ನು ಮಾಡಬೇಕು? ನನಗಂತೂ ಈಗ ಬಹಳ ಆಶ್ಚರ್ಯವಾಗಿದೆ. ಅಪ್ಪಣೆ ಕೊಡಿಸಬೇಕು” ಎಂದು ಕೇಳಿಕೊಂಡೆನು. ಆಗ ಕಾಲಹರಣಕ್ಕೆ ಇಷ್ಟಪಡದ ಜಾಬಾಲಿ ಮಹರ್ಷಿಯು ೧೨. “ಇಗೋ, ನಕ್ಷತ್ರಗಳ ಸಮೂಹವು ಮಾಯವಾಗುತ್ತಿದೆ. ಪಂಪಾಸರೋವರದ ದಡದಲ್ಲಿ ಮಲಗಿ ಎಚ್ಚೆತ್ತ ಹಕ್ಕಿಗಳ ಧ್ವನಿಯು ಹರಡುತ್ತಿದೆ. ಕತ್ತಲೆಯ ಗುಂಪು ನಾಶವಾಯಿತೆಂಬ ಸಂತೋಷದಿಂದಲೋ ಎಂಬಂತೆ ತಂಗಾಳಿಯು ವನಲತೆಗಳ ಹೂವಿನ ವಾಸನೆಯನ್ನು ಬೀರುತ್ತಾ ಬೀಸುತ್ತಿದೆ. ಬೆಳಗಾಯಿತು ನಾನು ಈಗ ಏನು ಹೇಳಲಿ?” ಎಂದು ಹೇಳಿದನು. ವ|| “ಅದಲ್ಲದೆ ನಿತ್ಯಕರ್ಮಾನುಷ್ಠಾನ ವೇಳೆಯು ಸಮೀಪಿಸುತ್ತಿದೆ.” ಎಂದು ಹೇಳಿ, ೧೩. ಆಚಾರನಿಷ್ಠನಾದ ಆ ಜಾಬಾಲಿ ಮುನೀಂದ್ರನು ಬೆಳಗಿನ ಜಾವದಲ್ಲಿ ಮಾಡಬೇಕಾದ ಕರ್ಮಾಚರಣೆಗಾಗಿ ಸಭೆಯನ್ನು ಮುಗಿಸಿ ಅಲ್ಲಿಂದ ಎದ್ದನು. ವ|| ಆಗ ಆ ಎಲ್ಲ ತಪಸ್ಸಿಗಳೂ ಸ್ವತ ವಿರಕ್ತರಾದರೂ ಕಥೆಯ ಸ್ವಾರಸ್ಯದಿಂದ ಪರವಶರಾಗಿ ಗುರುಗಳಿಗೆ ನಮಸ್ಕಾರ ಮಾಡುವುದನ್ನೂ ಮರೆತು, ಕೇಳುತ್ತಿದ್ದಂತೆಯೇ ರೋಮಾಂಚಗೊಂಡ ಶರೀರವುಳ್ಳವರಾಗಿಯೂ, ಆಶ್ಚರ್ಯದಿಂದ

ಸಕಲಮುನಿವ್ರಜಮಿರೆ ತಾ
ನೆ ಕರುಣದಿಂ ಕೊಂಡುಪೋಗಿ ಮೆಲ್ಲನೆ ಹಾರೀ
ತಕುಮಾರಂ ತನ್ನಯ ಪ
ರ್ಣಕುಟೀರದ ಶಯನತಳದೊಳಿರಿಸಿದನ್ನೆನ್ನಂ            ೧೪

ವ|| ಅನ್ನೆಗಂ ಪ್ರಾಭಾತಿಕಕ್ರಿಯಾನಿಮಿತ್ತಂ ಹಾರೀತಂ ಪೋದಂ ಇತ್ತ ಸಕಲಕಾರ್ಯಾಕ್ಷಮಮಪ್ಪ ತಿರ್ಯಗ್ಜಾತಿಯೊಳ್ ಬಿೞ್ದು ಚಿಂತಾಪೀಡಿತನಾಗಿ

ಪಡೆಯಲ್ಬಾರದು ಮುನ್ನನಂತಭವದೊಳ್ ಮಾನುಷ್ಯಮಂ ಮತ್ತೆಯುಂ
ಪಡೆಯಲ್ಪರ್ಕುಮೆ ವಿಪ್ರಜಾತಿಯನದಂ ಪೆತ್ತುಂ ಮುನೀಂದ್ರತ್ವಮಂ
ಪಡೆಯಲ್ಬರ್ಕುಮೆ ಮತ್ತಮಾರ್ಗೆ ಪಡೆಯಲ್ ದೇವತ್ವಮಂ ನೋಡದಂ
ಪಡೆದಾನಿಂತಿರೆ ಶಾಪದಿಂದಕಟ ತಿರ್ಯಗ್ಜಾತಿಯೊಳ್ ಬಿೞ್ದೆನೇ ೧೫

ಶೋಕಶತಾಕುಲಮುಂ ದು
ಖಾಕರಮುಮೆನಿಪ್ಪ ಮಾಯ್ದ ಮತ್ಕಾಯಮನಿ
ನ್ನೇಕೆ ಗಡ ಪಿಡಿದಪೆಂ ನಿ
ರ್ವ್ಯಾಕುಲದಿಂ ಬಿಡುವೆನೆಂದು ಚಿಂತಿಸುವಿನೆಗಂ         ೧೬

ಚಿಂತಾಕುಲಿತನನಾಱಸು
ವಂತಿರೆ ಮೊಗಮಲರ್ದು ನಸುನಗುತ್ತಂ ಹಾರೀ
ತಂ ತೊಟ್ಟನೆ ಪರ್ಣಕುಟೀ
ರಾಂತರಮಂ ಪೊಕ್ಕು ಪದಪಿನಿಂದಿಂತೆಂದಂ             ೧೭

ಎಲೆ ವೈಶಂಪಾಯನ ತ
ನ್ನೊಲವಿಂದಂ ಬಂದನೀಗಳರಸುತ್ತೆ ಕಪಿಂ
ಜಲನಿಲ್ಲಿಗೆ ನಿನ್ನಂ ಪಂ
ಬಲಿಸುತ್ತಂ ಶ್ವೇತೆಕೇತುಯತಿಗಳ ಕೆಲದಿಂ     ೧೮

ಅರಳಿದ ಮನಸ್ಸುಳ್ಳವರಾಗಿಯೂ, ಏಕಕಾಲದಲ್ಲಿ ಸುರಿಯುತ್ತಿರುವ ದುಖದ ಮತ್ತು ಸಂತೋಷದ ಕಣ್ಣೀರುಳ್ಳವರಾಗಿಯೂ ಆದರು. ಬಳಿಕ ಶರೀರದ ಮೇಲೆ ಪರಿವೆಯೇ ಇಲ್ಲದೆ ಸ್ವಲ್ಪ ಕಾಲ ಅಲ್ಲಿದ್ದು ‘ಅಯ್ಯೋ, ಕಷ್ಟ! ಪಾಪ’ ಎಂದು ಹೇಳುತ್ತಾ ಎದ್ದು ಹೊರಟುಹೋದರು. ೧೪. ಬಳಿಕ ಹಾರೀತನು ಅಷ್ಟು ಜನ ಮುನಿಗಳ ಗುಂಪೇ ಇದ್ದರೂ ತಾನೇ ಕರುಣೆಯಿಂದ ನನ್ನನ್ನು ಮೆಲ್ಲನೆ ಎತ್ತಿಕೊಂಡು ಹೋಗಿ ತನ್ನ ಪರ್ಣಕುಟೀರದ ಒಳಗೆ ಹಾಸಿಗೆಯ ಮೇಲೆ ಇರಿಸಿದನು. ವ|| ಅಷ್ಟರಲ್ಲಿ ಬೆಳಗಿನ ಜಾವದ ಕರ್ತವ್ಯಕ್ಕಾಗಿ ಹಾರೀತನು ಹೊರಟುಹೋದನು. ಈಕಡೆ ನಾನು ಯಾವ ಕೆಲಸವನ್ನೂ ಮಾಡಲಾರದ ತಿರ್ಯಗ್ಜಾತಿಯಲ್ಲಿ ಬಿದ್ದು ಚಿಂತೆಯಿಂದ ಪೀಡತನಾದೆನು. ೧೫. “ಮೊದಲು ಅನೇಕ ಜನ್ಮಗಳಲ್ಲಿ ಮನುಷ್ಯಜನ್ಮವನ್ನು ಪಡೆಯುವುದು ಬಹಳ ಕಷ್ಟ. ಮತ್ತೆ ಅದರಲ್ಲೂ ಬ್ರಾಹ್ಮಣಜಾತಿಯನ್ನು ಪಡೆಯಲು ಸಾಧ್ಯವೆ? ಒಂದು ವೇಳೆ ಬ್ರಾಹ್ಮಣಿಕೆಯನ್ನು ಪಡೆದರೂ ಮುನೀಂದ್ರನಾಗಿ ಹುಟ್ಟಲು ಸಾಧ್ಯವೇ? ಮತ್ತೆ ಅದರಲ್ಲೂ ದೇವತ್ವವನ್ನು ಪಡೆಯಲು ಯಾರಿಗೆ ತಾನೇ ಸಾಧ್ಯವಾದೀತು? ಹೀಗಿರಲು ನಾನು ಆ ದೇವತ್ವವನ್ನು ಪಡೆದಿದ್ದರೂ, ಅಯ್ಯೋ, ಶಾಪದಿಂದ ಹೀಗೆ ತಿರ್ಯಗ್ಜಾತಿಯಲ್ಲಿ ಬಿದ್ದುಬಿಟ್ಟೆನಲ್ಲ! ೧೬. ನೂರಾರು ದುಖಗಳಿಂದ ಪೀಡಿಸಲ್ಪಡುತ್ತಿರುವ ಮನೋವ್ಯಥೆಗೆ ಗಣಿಯಂತಿರುವ ಈ ನನ್ನ ಹಾಳುದೇಹವನ್ನು ಇನ್ನೇತಕ್ಕೆ ಇಟ್ಟುಕೊಂಡಿರಲಿ? ನಿಶ್ಚಿಂತೆಯಿಂದ ಬಿಟ್ಟೇಬಿಡುತ್ತೇನೆ ಎಂದು ಚಿಂತಿಸುತ್ತಿದ್ದೆನು. ೧೭. ಚಿಂತಾಕ್ರಾಂತನಾಗಿದ್ದ ನನ್ನನ್ನು ಸಮಾಧಾನ ಪಡಿಸುವವನಂತೆ ಅರಳಿದ ಮುಖದಿಂದ ಕೂಡಿದ ಹಾರೀತನು ನಸುನಗುತ್ತ ತಟ್ಟನೆ ಪರ್ಣಕುಟೀರದ ಒಳಕ್ಕೆ ಬಂದು ಪ್ರೀತಿಯಿಂದ ನನ್ನನ್ನು ಕುರಿತು ಹೀಗೆ ಹೇಳಿದನು. ೧೮. “ವೈಶಂಪಾಯನ! ಕಪಿಂಜಲನು ನಿನ್ನನ್ನೇ ಹಂಬಲಿಸುತ್ತಾ, ಪ್ರೀತಿಯಿಂದ ನಿನ್ನನ್ನೇ ಹುಡುಕಿಕೊಂಡು ಶ್ವೇತಕೇತುಮಹರ್ಷಿಗಳ ಕಡೆಯಿಂದ ಈಗ ಬಂದಿದ್ದಾನೆ.” ವ|| ಎಂದು ಹೇಳಲಾಗಿ ಆ ಕ್ಷಣದಲ್ಲಿ ರೆಕ್ಕೆ ಮೂಡಿದವನಂತೆ ನೋಡಲು ಆತುರವುಳ್ಳವನಾಗಿ “ನನ್ನ ಗೆಳೆಯನು ಎಲ್ಲಿ ಯಾವ ಸ್ಥಳದಲ್ಲಿದ್ದಾನೆ?” ಎಂದು ಕೇಳಲಾಗಿ ಹಾರೀತನು “ನಮ್ಮ ತಂದೆಯವರ ಬಳಿಗೆ ಬಂದಿದ್ದಾನೆ” ಎಂದು ಹೇಳಿದನು. ನಾನು ಆ ಕಡೆಗೇ ನೋಡುತ್ತಿರಲಾಗಿ,

ವ|| ಎಂಬುದುಮಾಕ್ಷಣದೊಳ್ ಉತ್ಪನ್ನಪಕ್ಷನಾದಂತೆಗೆಯ್ದು ನೋಡಲುತ್ಕಂಠಿತನಾಗಿ ಮದ್ವಯಸ್ಯನೆಲ್ಲಿರ್ದನಾವೆಡೆಯೆನೆ ಹಾರೀತಂ ಮತ್ತಾತಪಾದಮೂಲದಲ್ಲಿಗೆ ವಂದನೆಂಬುದುಮತ್ತಲೆ ಕಣ್ಣಾಗಿರೆ