ಬೞಲೆ ಪೆಗಲಿಂ ಚಂಚದ್ವಲ್ಕಾಂಚಲಂ ಪೆಗಲಿಂಗೆ ಬಂ
ದೆೞಲೆ ಜಡೆಗಳ್ ಮುಯ್ಪಿಂ ಯಜ್ಞೋಪವೀತಮದೊಯ್ಯನಂ
ದಿೞಯೆ ಪರಿಪಟ್ಟೋರಂತಾಕಾಶಮಾರ್ಗದೆ ಬಂದು ಪಾ
ಡೞದ ಸಖನಂ ಮುಂದಾಂ ಕಂಡೆಂ ಕಪಿಂಜಲನಂ ನೃಪಾ        ೧೯

ವ|| ಅಂತು ಕಂಡು ಕಣ್ಣ ನೀರ್ಗಳುಣ್ಮೆ ಭೋಂಕನಿದಿರೇೞಲುಜ್ಜುಗಂಗೆಯ್ದೆನ್ನ ಕೆಳೆಯನಪ್ಪ ಕಪಿಂಜಲನನಿಂತೆಂದೆಂ

ದೊರೆಕೊಂಡತ್ತು ಭವದ್ವಯಾಂತರದೊಳೀಗಳ್ ಕಾಣ್ಕೆಕಂಡೇನೊ ಚೆ
ಚ್ಚರಮೆೞ್ದಪ್ಪುವ ಕುಳ್ಳಿರಲ್ ಕುಡುವ ನಿನ್ನೀ ಸೇದೆವಟ್ಟಂಗಮಂ
ಕರದಿಂದೊತ್ತುವ ಶಕ್ತಿಯಂ ತಳೆವುದರ್ಕಾಂ ನೋಂತೆನಿಲ್ಲಣ್ಣ ನೀಂ
ಬರೆಯುಂ ಪಾಪಿಯೆನೇವೆನೆಂದು ಪಿರಿದುಂ ಶೋಕಾಂಧನಾಗಿರ್ಪಿನಂ      ೨೦

ಎತ್ತಿ ಕರಂಗಳಿಂದೆ ನಿಜಬಾಷ್ಟನಿರುದ್ಧಮೆನಿಪ್ಪ ಕಣ್ಗಳಿಂ
ದೊತ್ತಿ ಶರೀರದೊಳ್ ಪುಗಿಸಿಕೊಂಡಪನೆಂಬಿನವಾದಮಪ್ಪುತುಂ
ಚಿತ್ತದಲಂಪಿನಿಂ ಕಿಱುಳನಂತಿರಲೆನ್ನಯ ಮಾಯ್ದ ಕಾಲ್ಗಳಂ
ನೆತ್ತಿಯೊಳಿಟ್ಟುಕೊಂಡೞುತಮಿರ್ದನೞಲ್ದೆನಸುಂ ಕಪಿಂಜಲಂ     ೨೧

ವ|| ಅಂತೞುತಿರ್ದನಂ ವಾಙ್ಮಾತ್ರಪ್ರತೀಕಾರನಿಂತೆಂದೆಂ

ಮೊದಲೊಳ್ ಪಱದೈ ಸಂಸಾ
ರದ ತೊಡರಂ ನಿಂದೆ ಮುಕ್ತಿಪದದೊಳ್ ನಿನಗಿಂ
ತಿದು ತಕ್ಕುದೆ ಮೂಢರ ಮಾ
ರ್ಗದಿನೆನಗೆ ಜಡಂಗಿದೇಕೆ ಸೋಕಂಗೆಯ್ವೈ    ೨೨

ಜನಕಂ ಕುಶಲದಿನಿರ್ದನೆ
ನೆನೆವನೆ ಮಾಯ್ದೆನ್ನ ವಾರ್ತೆಗೇಳ್ದೇನೆಂದಂ
ಮನದೊಳ್ ಖೇದಿಸಿದನೆ ಮುನಿ
ದನೆ ಪೇೞೆಂದೆನ್ನ ಕೆಳೆಯನಂ ಬೆಸಗೊಂಡೆಂ             ೨೩

೧೯. ಎಲೈ ರಾಜನೆ, ಅಲುಗಾಡುತ್ತಿರುವ ನಾರುಮಡಿಯ ಸೆರಗು ಹೆಗಲಿನಲ್ಲಿ ಜಾರುತ್ತಿರಲು, ಜಟೆಗಳು ಹೆಗಲ ಮೇಲೆ ಇಳಿಬಿದ್ದಿರಲು, ಜನಿವಾರವು ಹೆಗಲಿನಿಂದ ಮೆಲ್ಲನೆ ಜೋಲುತ್ತಿರಲು, ಆಕಾಶಮಾರ್ಗದಿಂದ ಒಂದೇಸಮನೆ ವೇಗವಾಗಿ ಬಂದುದರಿಂದ ಆಯಾಸಪಟ್ಟಿರುವ ನನ್ನ ಸ್ನೇಹಿತನಾದ ಕಪಿಂಜಲನನ್ನು ನಾನು ಎದುರುಗಡೆ ಕಂಡೆನು! ವ|| ಹಾಗೆ ಕಂಡು ಕಣ್ಣೀರು ಉಕ್ಕಿಬರಲು ತಟ್ಟನೆ ಎದುರುಗೊಳ್ಳಲು ಪ್ರಯತ್ನಪಟ್ಟು ನನ್ನ ಸ್ನೇಹಿತನಾದ ಕಪಿಂಜಲನನ್ನು ಕುರಿತು ಹೀಗೆಂದನು. ೨೦. “ಗೆಳೆಯ, ಎರಡು ಜನ್ಮ ಕಳೆದ ಮೇಲೆ ಈಗ ನಿನ್ನನ್ನು ಕಂಡೆನು. ಕಂಡರೇನು? ಕಂಡಲೆ ಎದ್ದು ನಿನ್ನನ್ನು ತಬ್ಬಿಕೊಳ್ಳುವುದಕ್ಕೂ, ಕುಳಿತುಕೊಳ್ಳಲು ಆಸನವನ್ನು ಕೊಡುವುದಕ್ಕೂ, ಆಯಾಸಗೊಂಡ ನಿನ್ನ ಅಂಗಗಳನ್ನು ಕೈಯಿಂದ ಒತ್ತುವುದಕ್ಕೂ ಶಕ್ತಿಯನ್ನು ಪಡೆಯುವುದಕ್ಕೆ ನಾನು ಕೇಳಿಕೊಂಡು ಬಂದಿಲ್ಲ! ಪುಣ್ಯ ಮಾಡಿಲ್ಲ). ಅಣ್ಣ! ನೀನು ಬಂದರೂ ಪಾಪಿಯಾದ ನಾನು ಏನು ಮಾಡಬಲ್ಲೆ?” ಎಂದು ಹೇಳುತ್ತಾ ಹೆಚ್ಚಾದ ದುಖದಿಂದ ಅರಿವೇ ಇಲ್ಲದಂತಾದೆನು. ೨೧. ಕಪಿಂಜಲನು ಕೈಗಳಿಂದ ನನ್ನನ್ನು ಎತ್ತಿಕೊಂಡು, ನೀರು ತುಂಬಿದ ಕಣ್ಣುಗಳಿಂದ ನನ್ನನ್ನು ಒತ್ತಿಕೊಂಡು, ತನ್ನ ಶರೀರದಲ್ಲಿ ನನ್ನನ್ನು ಅಡಗಿಸಿಕೊಳ್ಳುವವನಂತೆ ತಬ್ಬಿಕೊಳ್ಳುತ್ತಾ, ಮನಸ್ಸಿನ ಪ್ರೀತಿಯಿಂದ ನನ್ನ ಹಾಳು ಕಾಲುಗಳನ್ನು ತನ್ನ ತಲೆಯ ಮೇಲಿಟ್ಟುಕೊಂಡು ವ್ಯಥೆಯಿಂದ ಸಾಮಾನ್ಯ ಮನುಷ್ಯನಂತೆ ವಿಪರೀತವಾಗಿ ಅಳುತ್ತಿದ್ದನು. ವ|| ಹಾಗೆ ಅಳುತ್ತಿರುವ ಗೆಳೆಯನನ್ನು ಕುರಿತು ಕೇವಲ ಬಾಯಿಮಾತಿನಿಂದಲೆ ಉಪಚಾರದ ಮಾತುಗಳನ್ನಾಡುತ್ತಾ ನಾನು ಹೀಗೆ ಹೇಳಿದೆನು. ೨೨. “ಮಿತ್ರ, ನೀನು ಸಂಸಾರದ ಬಂಧನವನ್ನು ಮೊದಲೆ ಹರಿದು ಹಾಕಿರುವೆ. ಮೋಕ್ಷಮಾರ್ಗದಲ್ಲಿ ನಡೆಯುತ್ತಿರುವೆ, ತಿಳಿಗೇಡಿಯಾದ ನನಗಾಗಿ ಮೂಢರಂತೆ ಏಕೆ ದುಖಪಡುತ್ತಿರುವೆ? ಇದು ನಿನಗೆ ಸರಿಯಲ್ಲ. ೨೩. ನಮ್ಮ ತಂದೆಯವರು ಕ್ಷೇಮದಿಂದಿದ್ದಾರೆಯೇ? ನನ್ನನ್ನು ಜ್ಞಾಪಿಸಿಕೊಳ್ಳುತ್ತಿರುವರೇ? ನನ್ನ

ಹಾಳು ಸಮಾಚಾರವನ್ನು ಕೇಳಿ ಏನು ಹೇಳಿದರು? ಮನಸ್ಸಿನಲ್ಲಿ ದುಖಿಸಿದರೆ? ಅಥವಾ ಕೋಪಿಸಿಕೊಂಡರೆ? ಹೇಳು” ಎಂದು ನನ್ನ

ವ|| ಅನ್ನೆಗಂ ಹಾರೀತಶಿಷ್ಯೋಪನೀತಪಲ್ಲವಾಸನದೊಳ್ ಕುಳ್ಳಿರ್ದು ತನ್ನ ತೊಡೆಯ ಮೇಲೆನ್ನನಿರಿಸಿ

ತಂದೆಗೆ ಕುಶಲಂ ನಮಗಾ
ದಂದಮುಮಂ ದಿವ್ಯಚಕ್ಷುವಱದಿರ್ದಂ ನೀ
ನೊಂದರ್ಕಂ ಚಿಂತಿಸಬೇ
ಡೆಂದು ಕಪಿಂಜಲಕನೆನಗೆ ಮಗುೞ್ದುಂ ನುಡಿದಂ          ೨೪

ವ|| ಆಂ ತುರಂಗತ್ವಮಂ ಪತ್ತುವಿಟ್ಟು ತಂದೆಯಲ್ಲಿಗೆವಂದೆನನ್ನೆಗಮನತಿ ದೂರದೊಳುದ್ಬಾಷ್ಪದೃಷ್ಟಿಯುಂ ವಿಷಣ್ಣದೀನವದನನುಂ ಸಭಯನುಮಾಗಿ ಪೊರ್ದಲೆನ್ನಂ ಕಂಡು

ಬಿಡು ನೀನಂಜಿಕೆಯಂ ಕಪಿಂಜಲಕ ದೋಷಂ ನಿನ್ನದಲ್ತೇಕೆ ಪೇೞು
ಸೆಡೆವೈ ದೋಷಮಿದೆನ್ನದೆಂದು ಮಱುಗುತ್ತಿರ್ದುಂ ಮಗಂ ಪುಟ್ಟಿದಾ
ಗಡೆ ಮಾಡಲ್ ಬಗೆದಂದೆನಿಲ್ಲಿನಿಸುಮಾಯುಷ್ಕಾಮಮಂ ಯಜ್ಞಮಂ
ತಡವಂ ಮಾಡಿದೇನೀಗಳಿಂದೆ ಬಲೆ ನೀಂ ತತ್ಕಾರ್ಯಸಂಸಿದ್ಧಿಯಂ        ೨೫

ವ|| ಇದಱಂ ನೀನೊಂದುಮಂ ಚಿಂತಿಸದಿರೆಂದು ತಂದೆ ಬೆಸಸೆ ಭಯಮಂ ಪತ್ತುವಿಟ್ಟು

ಎನಗೆ ಪಸಾದಿಪೊಡೆ ಸಖಂ
ಜನಿಯಿಸಿದೆಡೆಯತ್ತಲೈದುವಂತೆನಗಾಜ್ಞಾ
ಪನಮೀವುದೊಲವಿನಿಂ ನೀ
ಮೆನೆ ಜನಕಂ ಕೇಳ್ದು ಮಗುೞ್ದು ಬೆಸಸಿದನಾಗಳ್        ೨೬

ಮಗನ ಶುಕದಜಾತಿಯೊಳಗವ
ನೊಗೆದಿರ್ದಪನವನನಱಯಲಾರೈ ನಿನ್ನಂ
ಮಿಗೆ ತಿಳಿಯಲಾಱನವನುಂ
ತೆಗೆಯದಱಂ ಗಮನಚಿಂತೆಯಂ ನೀನೀಗಳ್             ೨೭

ವ|| ಎಂದು ನುಡಿದಿರ್ದಿಂದಿನ ಪೊೞ್ತರೆಯೊಳಯ್ಯನೆನ್ನಂ ಕರೆದು

ಕೇಳೆಲೆ ನೀಂ ಕಪಿಂಜಲ ಭುವತ್ಸುಹೃದಂ ವಿಯೋಗದಿಂದೆ ಜಾ
ಬಾಲಿಮುನೀಂದ್ರನಾಶ್ರಮವನಾ ಶುಕದೇಹದೆ ಸೇರ್ದನಿಂದು ಮೇಣ್
ಮೇಳಿಸಿತೈ ಸಮಂತು ಜನನಾಂತರ ಸಂಸ್ಮರಣಂ ದಲಾತನೊಳ್
ತಾಳುತನೂನಹರ್ಷಮನೆ ಪೋಗವನಂ ನಡೆನೋಡಲೊಪ್ಪದಿಂ             ೨೮

ಗೆಳೆಯನನ್ನು ಕೇಳಿಕೊಂಡೆನು. ವ|| ಅಷ್ಟರಲ್ಲಿ ಹಾರೀತನ ಶಿಷ್ಯನು ತಂದ ಚಿಗುರಿನ ಪೀಠದಲ್ಲಿ ಕಪಿಂಜಲನು ಕುಳಿತುಕೊಂಡು ತನ್ನ ತೊಡೆಯ ಮೇಲೆ ನನ್ನನ್ನು ಇಟ್ಟುಕೊಂಡು, ೨೪. “ಗೆಳೆಯ, ತಂದೆಯವರು ಕ್ಷೇಮವಾಗಿದ್ದಾರೆ. ಜ್ಞಾನದೃಷ್ಟಿಯುಳ್ಳ ಅವರು ನಮಗಾದ ಅವಸ್ಥೆಯನ್ನೆಲ್ಲ ತಿಳಿದುಕೊಂಡಿದ್ದಾರೆ. ನೀನು ಯಾವುದಕ್ಕೂ ಚಿಂತೆಮಾಡಬೇಡ” ಎಂದು ನನಗೆ ಹೇಳಿದನು. ವ|| ನಾನು ಕುದುರೆಯ ಜಾತಿಯನ್ನು ಬಿಟ್ಟು ತಂದೆಯವರ ಹತ್ತಿರಕ್ಕೆ ಹೋದೆನು. ಅವರು ಕಣ್ಣೀರು ಬಿಡುತ್ತಿರುವ, ದುಖದಿಂದ ಕಳೆಗುಂದಿದ ಮುಖವುಳ್ಳ, ಭಯಗೊಂಡಿರುವ, ಹತ್ತಿರಕ್ಕೆ ಬರುತ್ತಿರುವ ನನ್ನನ್ನು ಸಮೀಪದಲ್ಲಿ ನೋಡಿ, ೨೫. “ಕಪಿಂಜಲ, ನೀನು ಹೆದರಬೇಡ. ಇದರಲ್ಲಿ ನಿನ್ನ ತಪ್ಪೇನೂ ಇಲ್ಲ. ಏಕೆ ಅಂಜುತ್ತಿರುವೆ? ಹೇಳು. ಇದು ನನ್ನದೇ ತಪ್ಪೆಂದು ನಾನು ಕೊರಗುತ್ತಲೇ ಇದ್ದೆ! ಆದರೂ ಮಗು ಹುಟ್ಟಿದಾಗ ಆಯುಷ್ಯವನ್ನು ಹೆಚ್ಚಿಸುವ ಯಾವ ಯಜ್ಞವನ್ನೂ ಮಾಡಲಿಲ್ಲ. ಸುಮ್ಮನೆ ಕಾಲಹರಣ ಮಾಡಿಬಿಟ್ಟೆ. ಇನ್ನು ಮೇಲೆ ಆ ಕಾರ್ಯವು ನೆರವೇರಿತೆಂದೇ ತಿಳಿದುಕೊ. ವ|| ಇದರಿಂದ ನೀನೇನೂ ಯೋಚನೆ ಮಾಡಬೇಡ ಎಂದು ತಂದೆಯವರು ಅಪ್ಪಣೆ ಮಾಡಲು ಭಯವನ್ನು ಬಿಟ್ಟು, ೨೬. “ನನಗೆ ಅನುಗ್ರಹ ಮಾಡುವುದಾದರೆ ನನ್ನ ಸ್ನೇಹಿತನು ಎಲ್ಲಿ ಹುಟ್ಟಿದ್ದಾನೋ ಅಲ್ಲಿಗೆ ಹೋಗುವಂತೆ ನನಗೆ ತಾವು ಪ್ರೀತಿಯಿಂದ ಅಪ್ಪಣೆಕೊಡಬೇಕು” ಎಂದು ಕೇಳಿಕೊಂಡೆನು. ಆಗ ಮತ್ತೆ ನನ್ನ ತಂದೆಯವರು ಹೀಗೆ ಹೇಳಿದರು. ೨೭. “ಮಗನೆ, ಈಗ ಅವನು ಗಿಳಿಯ ಜಾತಿಯಲ್ಲಿ ಹುಟ್ಟಿದ್ದಾನೆ. ಅದರಿಂದ ನೀನು ಅವನನ್ನು ಗುರುತಿಸಲಾರೆ. ಹಾಗೆಯೆ ಅವನೂ ನಿನ್ನನ್ನು ಗುರುತಿಸಲಾರನು. ಆದ್ದರಿಂದ ನೀನು ಸದ್ಯಕ್ಕೆ ಅಲ್ಲಿಗೆ ಹೋಗುವ ಯೋಚನೆಯನ್ನು ಬಿಟ್ಟುಬಿಡು.” ವ|| ಮತ್ತೆ ಈ ದಿನ ಮುಂಜಾನೆ ನನ್ನನ್ನು ಕರೆದು, ೨೮. “ಕಪಿಂಜಲ, ಕೇಳಪ್ಪ, ನಿನ್ನ ಸ್ನೇಹಿತನು ಗಿಳಿಯ ದೇಹದಿಂದ ಕೂಡಿ ಈಗ ಅದೃಷ್ಟವಿಶೇಷದಿಂದ ಜಾಬಾಲಿ

ಭರದಿಂದಂ ಸಾರ್ದು ಪುಣ್ಯಾಶ್ರಮವನಿರದೆ ಮತ್ಸ ಸ್ತಿವಾದಂಗಳಂ ಬಿ
ತ್ತರಿಸುತ್ತಂ ದೀರ್ಘಕಾಲಂ ಬದುಕಿಪ ಬಗೆಯಿಂದೀಗಳಾಂ ಮಾಡುವಾಯು
ಷ್ಕರಯಜ್ಞಂ ಪೂರ್ಣಮಪ್ಪನ್ನೆವರಮೊಸೆದು ಜಾಬಾಲಿಸಾಮೀಪ್ಯದೊಳ್ಸಾ
ದರಮಿರ್ ಬೇಂದನಾಲೋಚಿಸದಿರೆನುತೆ ಪೇೞು ನೀನವಂಗೆಂದರಾಗಳ್ ೨೯

ವ|| ಇದಲ್ಲದೆ ಭವದೀಯ ವಿಯೋಗದುಖಸಮಾಕುಲಿತೆಯಾಗಿರ್ಪ ನಿನ್ನ ಜನನಿಯೆನಿಸಿದ ಲಕ್ಷಿ ಯುಮಾ ಕಜ್ಜದೊಳ್ ಪರಿಚಾರಿಣಿಯಾಗಿರ್ದಪಳಾಕೆಯುಮೆನ್ನಂ ಮುದ್ದಿಸಿ ಜನಕನೊರೆದುದನೆ ಮಗುೞ್ದು ಮಗುೞ್ದು ಬೆಸೆಸಿದಳ್

ಇಂತೊರೆದು ಮೃದುಶಿರೀಷಸು
ಮಾಂತದವೋಲ್ ಸೂಕ್ಷ ಮೆನಿಪ ತುಪ್ಪುೞತತಿಯಿಂ
ದಂತುರಮಾದೆನ್ನಂಗಮ
ನಂತರಿಸದೆ ಕರದಿನೆೞವಿದಂ ಮನದೞಲಿಂ   ೩೦

ವ|| ಆಗಳಾತನ ಮನದ ಸಂತಾಪಮನಱದಾನುಂ ದುಖಿತಹೃದಯನಾಗಿ ಮಿತ್ರನಪ್ಪ ಕಪಿಂಜಲ ನೀಂ ನಿರ್ಭಾಗ್ಯನಾದೆನಗೋಸುಗಂ ಕುದುರೆವರಿಜಂ ತಳೆದು ಪರಾನನಾಗಿ ಪಲಕೋಟಲೆಗಳನನುಭವಿಸಿದೆ ಸೋಮಪಾನೋಚಿತಮಪ್ಪೀ ಮೊಗದೊಳ್ ನೊರೆವೆರೆದ ನೆತ್ತರುಗುವ ಬೆಟ್ಟಿತಪ್ಪ ಕಡಿಯಾಣದೇರ್ಗಳುಮಂ ಪೂಗೊಯ್ವ ಪದದೊಳ್ ಮೇಲೆ ಕೆಡೆದೆಳವಳ್ಳಿಯ ಸೋಂಕಿಗಂ ಬೞಲ್ವೊಡದೊಳ್ ಚಮ್ಮಟಿಗೆಗುತ್ತುಗಳುಮಂ ಚೆಂದಳಿರ ಮೆಲ್ವಾಸಿನೊಳ್ ಮಲಂಗುತಿರ್ದ ನಿನ್ನೀ ಬೆನ್ನೆಲುವಿನೊಳಾವಗಂ ಬಿಗಿದಿರ್ದ ಪಲ್ಲಣದೊತ್ತಿನಿಂದೊಗೆದ ದಡ್ಡುಗಳುಮಂ ಜನ್ನಿವಾರಮಂ ತಳೆವೀ ಮೆಯ್ಯೊಳ್ ತೊವಲ್ವೊರಜೆಗಳ ಕಟ್ಟಿಂ ಪುಟ್ಟಿದ ಬೇನೆಯುಮನೆಂತು ಸೈರಿಸಿದೆಯೆಂದೀ ತೆಱದ ಪೂರ್ವವೃತ್ತಾಂತಾಲಾಪಂಗಳಿಂದಾಗಳಾಂ ತಿರ್ಯಗ್ಜಾತಿದುಖಮಂ ಮದು ಸಂತಸದಿನಿರ್ಪನ್ನೆಗಂ

ಗಗನಾಂಗಣಸೌಧಾಗ್ರದೊ
ಳೊಗುಮಿಗೆಯಿಂ ರಾಜಿಸಿರ್ಪ ಮಣಿಕಲಶಂಬೊಲ್
ಸೊಗಯಿಸಿದುದು ಮಿಗೆ ಮಧ್ಯಾ
ಹ್ನಗತಂ ರವಿಬಿಂಬಮಾನಗಳಂಬರತಲದೊಳ್           ೩೧

ವ|| ಆಗಳಾ ಹಾರೀತಂ ಕಪಿಂಜಲಂಗಮೆನಗಮುಚಿತಮಾದಾಹಾರದಿಂ ತಣಿಪಿದನಂತರಂ ಕಪಿಂಜಲಂ ಕಿಱದುಪೊೞ್ತಂ ಕಳೆದೆನ್ನಂ ಕೂರ್ತು ಕೆಳೆಯನೆ ತಾತಂ ತಾನೆಸಗುವಾಯುಷ್ಕರ ಯಜ್ಞಂ ಪೂರ್ಣಮಪ್ಪನ್ನೆಗಮೀ ಪೂಜ್ಯನಪ್ಪ ಜಾಬಾಲಿಯಾಶ್ರಮದಿಂ ಚಲಿಸದಿರಾನುಮಾ

ಮಹರ್ಷಿಗಳ ಆಶ್ರಮವನ್ನು ಸೇರಿದ್ದಾನೆ. ಮತ್ತು ಇಂದು ಅವನಿಗೆ ಹಿಂದಿನ ಜನ್ಮಗಳ ನೆನಪು ಉಂಟಾಗಿದೆ. ಅವನನ್ನು ನೋಡಲು ಸಂತೋಷದಿಂದ ಹೋಗಿ ಬಾ, ೨೯. ಬೇಗನೆ ಹೋಗಿ ಪುಣ್ಯಾಶ್ರಮವನ್ನು ಸೇರಿ ಅವನಿಗೆ ನನ್ನ ಆಶೀರ್ವಾದಗಳನ್ನು ತಿಳಿಸು. ಮತ್ತು ನಾನು ಅವನಿಗೆ ದೀರ್ಘಾಯಸ್ಸುಂಟಾಗಲೆಂದು ಮಾಡುತ್ತಿರುವ ಆಯುಷ್ಯಹೋಮವು ಮುಗಿಯುವವರೆಗೂ ಬೇರೆ ಏನನ್ನೂ ಆಲೋಚಿಸದೆ ಜಾಬಾಲಿಗಳ ಸನ್ನಿಧಾನದಲ್ಲೇ ಸಂತೋಷದಿಂದ ಇರುವಂತೆ ಅವನಿಗೆ ತಿಳಿಸು” ಎಂದು ಅಪ್ಪಣೆ ಮಾಡಿದರು. ವ|| ಇದಲ್ಲದೆ ನಿನ್ನ ಅಗಲಿಕೆಯ ದುಖದಿಂದ ಪೀಡಿತಳಾದ ನಿನ್ನ ತಾಯಿಯಾದ ಲಕ್ಷಿ ಯು ಈ ಕಾರ್ಯದಲ್ಲಿ ಸೇವೆ ಮಾಡುತ್ತಾ ಅಲ್ಲಿಯೇ ಇದ್ದಾಳೆ. ಅವಳೂ ನನ್ನ ಮೇಲೆ ಅಕ್ಕರೆಯನ್ನು ತೋರಿಸಿ ತಂದೆಯವರು ಹೇಳಿದ್ದನ್ನೆ ಮತ್ತೆ ಮತ್ತೆ ಹೇಳಿ ಕಳುಹಿಸಿದ್ದಾಳೆ.” ೩೦. ಹೀಗೆ ಹೇಳಿ ಕಪಿಂಜಲನು ಮೃದುವಾದ ಬಾಗೆಹೂವಿನಂತೆ ಸೂಕ್ಷ್ಮವಾದ ಕೂದಲುಗಳ ಸಮೂಹದಿಂದ ವ್ಯಾಪ್ತವಾದ ನನ್ನ ಅಂಗಗಳನ್ನು ಮತ್ತೆ ಮತ್ತೆ ಮನಸ್ಸಿನ ಅಳಿಲಿನಿಂದ ಕೂಡಿ ಸವರಿದನು. ವ|| ಆಗ ಅವನ ಮನಸ್ಸಿನ ಸಂತಾಪವನ್ನು ತಿಳಿದು ನಾನೂ ದುಖಗೊಂಡ ಮನಸ್ಸುಳ್ಳವನಾಗಿ, “ಗೆಳೆಯ, ಕಪಿಂಜಲ, ನೀನು ಅದೃಷ್ಟಹೀನನಾದ ನನಗೋಸ್ಕರ ಕುದುರೆಯ ಆಕಾರವನ್ನು ತಾಳಿ, ಪರಾನನಾಗಿ ಹಲವಾರು ಕೋಟಲೆಗಳನ್ನು ಅನುಭವಿಸಿಬಿಟ್ಟೆ. ಯಾಗಕಾಲದಲ್ಲಿ ಸೋಮಪಾನಕ್ಕೆ ಉಚಿತವಾದ ಈ ನಿನ್ನ ಬಾಯಲ್ಲಿ ನೊರೆಯಿಂದ ಕೂಡಿದ ರಕ್ತವನ್ನು ಬರಿಸುವ ಕಠಿನವಾದ ಕಡಿವಾಣದ ಗಾಯಗಳನ್ನೂ, ಹೂವುಗಳನ್ನು ಕೊಯ್ಯುವಾಗ ಮೇಲೆ ಬಿದ್ದ ಎಳೆಬಳ್ಳಿಯು ತಗುಲಿದರೂ ತಡೆದುಕೊಳ್ಳಲಾರದ ಈ ದೇಹದಲ್ಲಿ ಚಾವಟಿ ಏಟುಗಳನ್ನೂ, ಎಳೆಯ ಚಿಗುರಿನ ಮೃದುವಾದ ಹಾಸಿಗೆಯ ಮೇಲೆ ಮಲಗುತ್ತಿದ್ದ ನಿನ್ನ ಈ ಬೆನ್ನುಮೂಳೆಯ ಮೇಲೆ ಯಾವಾಗಲೂ ಬಿಗಿದಿದ್ದ ಜೀನು ಒತ್ತಿ ಒತ್ತಿ ಉಂಟಾಗುವ ಜಡ್ಡುಗಳನ್ನೂ, ಜನಿವಾರವನ್ನು ಧರಿಸುವ ಈ ಶರೀರದಲ್ಲಿ ಮಿಣಿಗಳ ಕಟ್ಟುವಿಕೆಯಿಂದ ಉಂಟಾದ ನೋವನ್ನೂ ಹೇಗೆ ಸಹಿಸಿಕೊಂಡೆ?” ಎಂದೆನು. ಈ ಬಗೆಯ ಪೂರ್ವವೃತ್ತಾಂತಗಳ ಮಾತುಕತೆಗಳಿಂದ ಆಗ ನಾನು ಹಕ್ಕಿಯಾಗಿ ಹುಟ್ಟಿರುವ ದುಖವನ್ನು ಮರೆತು ಸಂತೋಷವಾಗಿದ್ದೆನು. ೩೧. ಆಗ ಮಧ್ಯಾಹ್ನವಾಯಿತು. ಆಕಾಶವೆಂಬ ಮಹಡಿಯ ತುದಿಯಲ್ಲಿ ಅತ್ಯಕವಾಗಿ ಪ್ರಕಾಶಿಸುವ ಮಣಿಕಲಶದಂತಿರುವ ಸೂರ್ಯಬಿಂಬವು ಆಕಾಶದಲ್ಲಿ ಚೆನ್ನಾಗಿ ಪ್ರಕಾಶಿಸುತ್ತಿತ್ತು. ವ|| ಆಗ ಹಾರೀತನು ಕಪಿಂಜಲನನ್ನೂ ನನ್ನನ್ನೂ ಉಚಿತವಾದ ಆಹಾರದಿಂದ ತೃಪ್ತಿಬಡಿಸಿದನು.

ಕರ್ಮದೊಳೆ ವ್ಯಗ್ರನಾಗಿರ್ಪೆನ್ನೆಗಮೀ ಪೋಪೆನೆಂದೆನ್ನಂ ತಳ್ಕೈಸಿ ವಿಸ್ಮಯಾವಿಷ್ಟರಾದ ಮುನಿಕುಮಾರರುನ್ನ ಮಿತಾನನರಾಗಿ ನೋಡುತ್ತಿರೆ ಗಗನಕ್ಕೊಗೆದದೃಶ್ಯನಾದಂ ಬೞಕ್ಕಂ ಹಾರೀತನೆನ್ನಂ ಕೆಲವಾನುದಿವಸಂ ಪೋಷಿಸುತ್ತಿರಲೆನಗೆ ಗಱಗಳೊಗೆದು ಪಾಱುವನಿತು ಬಲಮುದಯಿಸೆ ಮನದೊಳಿಂತಾಲೋಚಿಸಿದೆಂ

ಕ್ಷಮನಾದೆಂ ನಭದಲ್ಲಿ ಪಾಱಲುರೆ ಚಂದ್ರಾಪೀಡನುತ್ಪತ್ತಿಯಾ
ಕ್ರಮಮುಂ ಮೇಣ್ ತಿಳಿವಿಂಗೆ ಬಂದುದಱಂದಾ ರಾಜಚಂದ್ರಾಂಕನಂ
ನಿಮಿಷಂ ನೋಡದಿರಲ್ಲಮಾನಹಹಾ ಏನುನಾಮಕ್ಕೀಗಳಾಂ
ಗಮಿಪೆಂ ತಾನವನಲ್ಲಿಗೆಂದು ಮನದೊಳ್ ನಿಶ್ಚೆ ಸಿದೆಂ ಭೂಪತೀ           ೩೨

ವ|| ಅಂತು ನಿಶ್ಚೈಸಿ ಬೞಕೊಂದುದಿನಂ ಪ್ರಾತರ್ವಿಹಾರಾರ್ಥಮುತ್ತರಾಭಿಮುಖನಾಗಿ ಮೆಲ್ಲನೆ ಪೊಱಮಟ್ಟು ಬೞಲ್ಕೆಯಿಂ ಬಸವೞದು ಪಾಱಲಳವಿಲ್ಲದೆ ಸಮೀಪದೊಳಿರ್ದ ಹರಿತಪಲ್ಲವಭರಾನಮ್ರಮಾದೊಂದು ಜಂಬೂವೃಕ್ಷಮನಡರ್ದು ಕಿಱದುಬೇಗಮಿರ್ದು ಚೇತರಿಸಿಕೊಂಡಲ್ಲಿಂ ತಳರ್ದು

ಕುಳಿರುತ್ತಂ ಸುತ್ತಲಂ ಕತ್ತಲಿಪ ತರುತಲಚ್ಛಾಯೆಯಂ ಸಾರ್ದು ಸಾರ್ದು
ತ್ಪಳಗಂಧೋದ್ಗಾರಿ ಪಂಪಾಸರದ ಸಲಿಲಮಂ ಪೀರ್ದಬ್ಜಬೀಜಾ
ವಳಿಯಂ ತಿರದ್ರುಮಾಂದೋಳಿತಫಲತತಿಯಂ ಕಾರ್ದು ಕಾರ್ದೋಯ್ಯನಲ್ಲಿಂ
ತಳರ್ದಾಂ ಮತ್ತೊಂದು ತಣ್ಪಂ ತಳೆದ ತರುತಲಸ್ಕಂಧದೊಳ್ ನಿಂದೆನಾಗಳ್     ೩೩

ವ|| ಅಂದು ನಿಂದು

ಇನ್ನುಮಪರಾಹ್ಣದೊಳ್ ಕಿಱ
ದುಂ ನಡೆನೋಡುತ್ತೆ ಮನದೊಳಾಂ ಚಿಂತಿಸುತಿ
ರ್ಪನ್ನೆಗಮಧ್ವಶ್ರಮದಿಂ
ದಂ ನಡೆ ಮಾಯ್ದೆನಗೆ ನಿದ್ರೆ ಬಂದತ್ತಾಗಳ್   ೩೪

ವ|| ಅಂತು ನಿದ್ರೆಗೆಯ್ದು ಕಿೞದುಬೇಗಕ್ಕೆಂತಾನುಮೆಚ್ಚತ್ತು ನೇಣ್ಬಲೆಯೊಳ್ ಸಿಲುಕಿರ್ದೆನ್ನಂ ಕಂಡಿದೆತ್ತಣಿಂ ಬಂದುದೆಂರದು ನೋೞ್ಪನ್ನೆಗಮುದ್ಬದ್ಧಭೀಷಣಭ್ರುಕುಟಿಯುಮಕಾರಣಕ್ರೋಧಾಂಧಕಾರಿತ ರೌದ್ರಮುಖನು ಮಾರಕ್ತತಾರಕಾಕ್ಷನುಮಾಗಿ ಕೇವಲಕಾಲಾಯಸ ಪರಮಾಣುಗಳಿಂ ನಿರ್ಮಿಸಿದಂತೆ ರೌದ್ರಾಕಾರನಾದ ಕಾಲಪುರುಷನೋರ್ವನಂ ಕಂಡು ಭಯಂಗೊಂಡು ಮೆಲ್ಲನಿಂತೆಂದೆಂ

ಬಳಿಕ ಸ್ವಲ್ಪ ಹೊತ್ತು ಕಳೆದಮೇಲೆ ಕಪಿಂಜಲನು ನನ್ನನ್ನು ಕುರಿತು ಪ್ರೀತಿಯಿಂದ “ಗೆಳೆಯ, ತಂದೆಯವರು ಮಾಡುತ್ತಿರುವ ಆಯುಷ್ಯವರ್ಧಕವಾದ ಯಜ್ಞವು ಪೂರ್ಣವಾಗುವವರೆಗೂ ಈ ಪೂಜ್ಯರಾದ ಜಾಬಾಲಿಮಹರ್ಷಿಗಳ ಆಶ್ರಮದಿಂದ ಹೊರಡಬೇಡ.ನಾನೂ ಅದೇ ಕರ್ಮದಲ್ಲಿ ಭಾಗಿಯಾಗಬೇಕು. ಆದ್ದರಿಂದ ಈಗ ನಾನು ಹೋಗಿಬರುತ್ತೇನೆ” ಎಂದು ನನ್ನನ್ನು ತಬ್ಬಿಕೊಂಡು ಆಶ್ಚರ್ಯಭರಿತರಾದ ಮುನಿಕುಮಾರರು ತಲೆಯನ್ನು ಮೇಲಕ್ಕೆತ್ತಿ ನೋಡುತ್ತಿರುವಂತೆಯೇ ಆಕಾಶಕ್ಕೆ ನೆಗೆದು ಕಣ್ಮರೆಯಾದನು. ಬಳಿಕ ಹಾರೀತನು ನನ್ನನ್ನು ಕೆಲವು ದಿನಗಳು ಪೋಷಿಸುತ್ತಿದ್ದನು. ನನಗೆ ಗರಿಗಳು ಮೂಡಿ ಶಕ್ತಿಯುಂಟಾಯಿತು. ಆಗ ನಾನು ಮನಸ್ಸಿನಲ್ಲಿ ಹೀಗೆ ಯೋಚಿಸಿದೆನು. ೩೨. “ಆಕಾಶದಲ್ಲಿ ಹಾರಲು ಈಗ ನನಗೆ ಚೆನ್ನಾಗಿ ಶಕ್ತಿ ಬಂದಿದೆ. ಮತ್ತು ಚಂದ್ರಾಪೀಡನಿರುವ ರೀತಿಯೂ ತಿಳಿಯಿತು. ಅದರಿಂದ ಆ ರಾಜೇಂದ್ರಚಂದ್ರನನ್ನು ನೋಡದೆ ಒಂದು ನಿಮಿಷವೂ ಬದುಕಲಾರೆ. ಅಯ್ಯೋ, ಏನು ಬೇಕಾದರೂ ಆಗಲಿ. ಈಗ ನಾನು ಅವನಿರುವ ಸ್ಥಳಕ್ಕೆ ಹೋಗಿಯೇ ಹೋಗುತ್ತೇನೆ” ಎಂದು ಎಲೈ ಮಹಾರಾಜನೆ, ಮನಸ್ಸಿನಲ್ಲಿ ತೀರ್ಮಾನಿಸಿದೆ. ವ|| ಹಾಗೆ ತೀರ್ಮಾನಿಸಿ ಬಳಿಕ ಒಂದು ದಿವಸ ಬೆಳಗಿನ ಸಂಚಾರಕ್ಕಾಗಿ ಹೊರಟ ನಾನು ಹಾಗೆಯೆ ಉತ್ತಾರಾಭಿಮುಖವಾಗಿ ಮೆಲ್ಲನೆ ಹೊರಟು ಹಾರಿಹೋಗುತ್ತಾ, ಆಯಾಸದಿಂದ ಶಕ್ತಿಗುಂದಿ ಹಾರಲು ಶಕ್ತಿಯಿಲ್ಲದೆ ಹತ್ತಿರದಲ್ಲಿದ್ದ ಹಸಿರುಬಣ್ಣದ ಚಿಗಿರುಗಳ ಭಾರದಿಂದ ಬಾಗಿದ್ದ ಒಂದು ನೇರಳೆಮರವನ್ನು ಏರಿ ಸ್ವಲ್ಪಕಾಲವಿದ್ದು ಚೇತರಿಸಿಕೊಂಡು ಅಲ್ಲಿಂದ ಹೊರಟೆನು. ೩೩. ತಣ್ಣಗೆ ಕೊರೆಯುತ್ತಿದ್ದ ಸುತ್ತಲೂ ಕತ್ತಲೆಯನ್ನುಂಟುಮಾಡುವ ಮರದ ಬುಡದ ನೆರಳನ್ನು ಸೇರಿ ಸೇರಿ, ನೈದಿಲೆಯ ಸುವಾಸನೆಯನ್ನು ಹೊರಹೊಮ್ಮಿಸುವ ಪಂಪಾಸರೋವರದ ನೀರನ್ನು ಕುಡಿದು ಕುಡಿದು, ಅನೇಕ ತಾವರೆಬೀಜಗಳನ್ನೂ ದಡದ ಮರಗಳಲ್ಲಿ ಜೋಲಾಡುತ್ತಿರುವ ಅನೇಕ ಹಣ್ಣುಗಳನ್ನೂ ತಿಂದು ತಿಂದು, ಮೆಲ್ಲನೆ ಅಲ್ಲಿಂದ ಹೊರಟು ತಂಪಿನಿಂದ ಶೋಭಿಸುವ ಮತ್ತೊಂದು ಮರದ ಬುಡದ ಕವಲಿನಲ್ಲಿ ನಿಂತೆನು. ವ|| ಹಾಗೆ ನಿಂತು, ೩೪. ಇನ್ನು ಅಪರಾಹ್ಣದಲ್ಲಿ ಸ್ವಲ್ಪ ದೂರ ಹೋಗಬೇಕೆಂದು ಉದ್ದೇಶಿಸಿ ಮನಸ್ಸಿನಲ್ಲಿ ಆಲೋಚಿಸುತ್ತಿರುವಷ್ಟರಲ್ಲಿ ಹಾಳಾದ ನನಗೆ ಆಗ ಬಹಳ ನಿದ್ರೆ ಬಂದುಬಿಟ್ಟಿತು. ವ|| ಹಾಗೆ ನಿದ್ರೆ ಮಾಡಿ ಸ್ವಲ್ಪ ಹೊತ್ತಿಗೆ ಹೇಗೋ ಎಚ್ಚರಗೊಂಡು ನೋಡಿದೆನು. ಹಗ್ಗದ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುವೆನೆಂದು ಗೊತ್ತಾಯಿತು. ಇದೆಲ್ಲಿಂದ ಬಂತು? ಎಂದು ನೋಡುವಷ್ಟರಲ್ಲಿ ಭಯಂಕರವಾಗಿ ಹುಬ್ಬು ಗಂಟು

ಎಲೆ ನೀನಾರೆಕಿಕ್ಕಿದೆ
ಬಲೆಯಂ ಪೇೞಣ್ಣ ನಿನಗೆ ಮಾಂಸದೊಳಾದೊಂ
ದೊಲವು ಸಮನಿಸಿದೊಡಲ್ಲಿಯೆ
ಕೊಲಲೊಲ್ಲದೆ ಮಾಣ್ದೆಯೇನಿದಚ್ಚರಿಯಲ್ತೇ     ೩೫

ಕರುಣಿಸಿ ಬಿಡು ವಲ್ಲಭಜನ
ನಿರೀಕ್ಷಣೋತ್ಸುಕನೆನೆನಗೆ ಪೋಪೆಡೆ ದೂರಾಂ
ತರಮುಂತುಂ ಪ್ರಾಣಿಗಳೆ
ಲ್ಲರಾಸೆಯುಂ ಬಗೆವೊಡೊಂದೆ ನೀನಱಯದುದೇ        ೩೬

ವ|| ಎಂಬುದುಮೆನ್ನನಾತನಿಂತೆಂದಂನಾಂ ಕ್ರೂರಕರ್ಮಜಾತಿಯಪ್ಪ ಚಂಡಾಲನೆನಪ್ಪೆನಾದೊಡಂ ಮಾಂಸಲೋ ಭಚಿತ್ತದೊಳ್ ಪಿಡಿದೆನಲ್ತಿಲ್ಲಿಗನತಿದೂರದೊಳ್ ಮಾತಂಗರ ಪಳ್ಳಿಯಿರ್ಪುದಲ್ಲಿಗೆ ನ್ನಾಳ್ದನೊಡೆಯನಾತನ ಮಗಳ್ ಕೌತುಕದಿಂ ನಿನ್ನಂ ಪಿಡಿದುತರಲೆಂದು ಪಲಂಬರ ನಟ್ಟಿದೊಡೆನ್ನ ಪುಣ್ಯದಿಂ ನೀನೆನಗೆ ದೊರೆಕೊಂಡೆ ನಿನ್ನನೆನ್ನಾಳ್ದಿತಿಯಲ್ಲಿಗೊಪ್ಪಿಸುವೆನಲ್ಲಿಂ ಮೇಲೆ ಬಿಡುಗೆ ಬಿಡದಿರ್ಕೆ ನಿನಗಾಯಬ್ಬೆಯೊಡೆಯಳೆಂಬುದಂ ಪೇೞ್ವುದುಮದಂ ಕೇಳ್ದು ತೊಟ್ಟನೆ ನೆತ್ತಿಯಂ ಸಿಡಿಲ್ವೊಡೆದಂತಾಗೆ

ಪಡೆದಳನೇಕಲೋಕನವಂದಿತೆ ಲಕ್ಷಿ ಯೆನಲ್ಕೆ ಮೋಹದಿಂ
ನಡಪಿದನೆನ್ನನಾ ತ್ರಿಭುವನಾರ್ಚಿತನಪ್ಪ ಮುನೀಂದ್ರನೆಂದುಮಿ
ರ್ಪೆಡೆ ಸುರಲೋಕಮಕ್ಕಟೆನಗೀ ಪೊಲೆವಟ್ಟಿನ ಮೇಲೆ ಬೀೞ್ವುದೊಂ
ದಡಸಿದುದಾವ ಷಾಪಮನೆ ಮಾಡಿದೆನಿಂತಿರೆ ಮಂದಭಾಗ್ಯನೆಂ             ೩೭

ಎಲೆಪುಂಡರೀಕ ಬಿಡು ಜ
ನ್ಮಲೋಭಮಂ ನಿನ್ನ ಗೆಯ್ದ ಕರ್ಮಂ ವಿಹಿತಂ
ತಲೆಯೊಳನುಭವಿಸುವೀ ಕೋ
ಟಲೆಯಿಂ ಗರ್ಭದೊಳ್ ಕರಗೆನೇಕೆಯೊ ಮೊದಲೊಳ್            ೩೮

ರಕ್ಷಿಸಲಾಗದೇ ಜಗದಭೀಷ್ಟಫಲಪ್ರದೆ ತಾಯೆ ಲಕ್ಷಿ  ಪೇ
ೞಕ್ಷಮನಾದ ನಿನ್ನ ಮಗನಂ ಪರಿರಕ್ಷಿಪುದಿಲ್ಲಿ ವಿಶ್ವರ
ಕ್ಷಾಕ್ಷಮ ತಾತ ನೀಂ ಮಗುೞ್ದು ಬಂದು ಕಪಿಂಜಲ ಮಾೞ್ಪುದೆನ್ನ ಕ
ರ್ಮಕ್ಷಯಮಂ ಭವಾಂತರದೊಳಾದೊಡಮಕ್ಕುಮೆ ಮತ್ಸಮೀಹಿತಂ        ೩೯

ಹಾಕಿಕೊಂಡಿರುವ, ಕಾರಣವೇ ಇಲ್ಲದೆ ಕೊಪದಿಂದ ಕಪ್ಪಿಟ್ಟ ಕ್ರೂರವಾದ ಮುಖವುಳ್ಳವನೂ, ಕೆಂಪಾದ ಕಣ್ಣುಗುಡ್ಡೆಯಿಂದ ಕೂಡಿಕೊಂಡಿರುವವನೂ ಆಗಿರುವ, ಬರಿಯ ಕಬ್ಬಿಣದ ಪರಮಾಣಗಳಿಂದಲೇ ಸೃಷ್ಟಿಸಲ್ಪಟ್ಟಂತಿರುವ ಭಯಂಕರಾನಾದ ಒಬ್ಬ ಕರಿಯ ಮನುಷ್ಯನನ್ನು ಕಂಡು ಭಯಪಟ್ಟು ಮೆಲ್ಲನೆ ಹೀಗೆಂದನು. ೩೫. “ಅಣ್ಣ, ನೀನು ಯಾರು? ಈ ಬಲೆಯನ್ನು ಏಕೆ ಇಕ್ಕಿದೆ? ನಿನಗೆ ಮಾಂಸದ ಆಸೆಯಿದ್ದರೆ ನಾನು ಮಲಗಿದ್ದಾಗಲೆ ಕೊಲ್ಲದೆ ಏತಕ್ಕೆ ಬಿಟ್ಟೆ? ಇದು ಆಶ್ಚರ್ಯವಾಗಿದೆ ! ೩೬. ದಯಮಾಡಿ ನನ್ನನ್ನು ಬಿಟ್ಟುಬಿಡು. ನಾನು ಆಪ್ತೇಷ್ಟರನ್ನು ನೋಡಲು ಹೋಗುತ್ತಿದ್ದೇನೆ. ಬಹಳ ದೂರ ಹೋಗಬೇಕು. ವಿಚಾರಮಾಡಿದರೆ ಎಲ್ಲಾ ಪ್ರಾಣಿಗಳ ಆಸೆಗಳೂ ಒಂದೇ ಸಮನಾಗಿರುತ್ತವೆ. ಇದು ನಿನಗೆ ಗೊತ್ತಿಲ್ಲವೆ?” ವ|| ಹೀಗೆ ಹೇಳಲಾಗಿ ಅವನು ನನ್ನನ್ನು ಕುರಿತು ಹೀಗೆ ಹೇಳಿದನು. “ನಾನು ಕ್ರೂರಕಾರ್ಯಗಳನ್ನು ಮಾಡುವ ಜಾತಿಯಲ್ಲಿ ಹುಟ್ಟಿದ ಚಂಡಾಲನಾದರೂ ಮಾಂಸದ ಆಸೆಯಿಂದೇನೂ ಹಿಡಿಯಲ್ಲಿಲ್ಲ. ಇಲ್ಲಿಗೆ ಸ್ವಲ್ಪ ದೂರದಲ್ಲಿ ಚಂಡಾಲರ ಹಳ್ಳಿಯಿದೆ. ಅಲ್ಲಿಗೆ ನನ್ನ ಯಜಮಾನನೇ ಒಡೆಯ. ಅವನ ಮಗಳು (ಜಾಬಾಲಿಗಳ ಆಶ್ರಮದಲ್ಲಿ ಜನ್ಮಾಂತರ ಜ್ಞಾನವುಳ್ಳ ಗಿಳಿಯೊಂದಿದೆ ಎಂದು ಕೇಳಿ) ನಿನ್ನನ್ನು ಹಿಡಿದು ತರುವಂತೆ ಹಲವರನ್ನು ಕಳುಹಿಸಿದಳು. ನನ್ನ ಪುಣ್ಯದಿಂದ ನೀನು ನನಗೆ ಸಿಕ್ಕಿದೆ. ನಿನ್ನನ್ನು ನನ್ನ ಒಡತಿಗೆ ಒಪ್ಪಿಸುತ್ತೇನೆ. ಅಲ್ಲಿಂದ ಮುಂದೆ ನಿನ್ನನ್ನು ಬಿಡುವುದಕ್ಕೂ ಬಿಡದಿರುವುದಕ್ಕೂ ಆ ತಾಯಿಯೆ ಒಡೆಯಳು” ಎಂದು ಹೇಳಿದನು. ಅದನ್ನು ಕೇಳಿ ಕೂಡಲೆ ತಲೆ ಸಿಡಿದು ಹೋದಂತಾಯಿತು. ೩೭. “ಅಯ್ಯೋ, ಸಮಸ್ತಲೋಕದ ಜನರಿಂದಲೂ ನಮಸ್ಕರಿಸಲ್ಪಡುವ ಲಕ್ಷಿ ದೇವಿಯ ಗರ್ಭದಲ್ಲಿ ಹುಟ್ಟಿ ಬಂದೆ! ಮೂರು ಲೋಕಗಳಿಗೂ ಪೂಜ್ಯನಾದ ಶ್ವೇತಕೇತುಮಹರ್ಷಿಯು ನನ್ನನ್ನು ಪ್ರೀತಿಯಿಂದ ಬೆಳೆಸಿದನು. ವಾಸಸ್ಥಳವಾದರೋ ಸ್ವರ್ಗ. ಇಂತಹ ನನಗೆ ಚಂಡಾಲರ ಬೀಡಿನಲ್ಲಿ ಇರಬೇಕಾದ ಒಂದು ಪಾಡು ಉಂಟಾಯಿತಲ್ಲ. ಹೀಗಾಗಲು ಮಂದಭಾಗ್ಯನಾದ ನಾನು ಯಾವ ಪಾಪವನ್ನು ಮಾಡಿದ್ದೆನೋ !

೩೮. ಎಲೋ, ಪುಂಡರೀಕ ! ನೀನು ಬದುಕಬೇಕೆಂಬ ಆಸೆಯನ್ನು ಬಿಟ್ಟುಬಿಡು. ನೀನು ಹಿಂದೆ ಮಾಡಿದ ಕರ್ಮಗಳ ಫಲವನ್ನು ಈ ಜನ್ಮದಲ್ಲಿ ಅನುಭವಿಸುವ ಕಷ್ಟಕ್ಕಿಂತಲೂ ಮೊದಲು ತಾಯಿಯ ಬಸುರಿನಲ್ಲಿದ್ದಾಗಲೇ ಏಕೆ ಕರಗಿಹೋಗಲಿಲ್ಲ ! ೩೯. ಜಗತ್ತಿನಲ್ಲಿರುವ

ವ|| ಎಂದಿವು ಮೊದಲಾಗಿ ಪಲವುಮಂ ಪ್ರಲಾಪಿಸುತ್ತುಮಾ ಮಾತಂಗನನಿಂತೆಂದೆಂ