ಇತ್ತೀಚಿಗೆ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾದ ‘ಚಂದ್ರ ಕುಗ್ಗುತ್ತಿದ್ದಾನೆ’ ಎಂಬ ಸುದ್ದಿ ಎಲ್ಲರನ್ನೂ ಚಕಿತಗೊಳಿಸಿದೆ. ಚಂದ್ರ ಕುಗ್ಗುವುದು, ಹಿಗ್ಗುವುದು ಸಹಜವೇ ಅಲ್ಲವೆ? ಹುಣ್ಣಿಮೆ, ಆಮಾವಾಸ್ಯೆಗಳು ಸಂಭವಿಸುವುದು ಹೀಗಲ್ಲವೆ ಎಂದು ಪ್ರಶ್ನಿಸುತ್ತೀದ್ದೀರಾ? ಆದರೆ ಇದು ಆ ಬಗೆಯ ಕುಗ್ಗುವಿಕೆ ಅಲ್ಲ. ಚಂದ್ರನ ವಿವಿಧ ದೆಶೆಗಳು, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ಆಕಾರಗಳು ನಮಗೆ ಅಂದರೆ ಭೂಲೋಕದವರಿಗೆ ಚಂದ್ರ ಕಾಣಿಸುವ ರೀತಿಯಷ್ಟೆ. ಅದು ತೋರಿಕೆ ಮಾತ್ರ. ನಿಜವಾಗಿ ಚಂದ್ರನ ಗಾತ್ರದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಈಗ ವಿಜ್ಞಾನಿಗಳು ತಮ್ಮ ಸಂಶೋಧನೆಗಳಿಂದ ಕಂಡುಹಿಡಿದಿರುವುದೇನೆಂದರೆ ನಿಜವಾಗಲೂ ಚಂದ್ರನ ಗಾತ್ರ ಕುಗ್ಗುತಿದೆ ಎಂಬ ಅಂಶ. ಹೋ! ಚಂದ್ರ ಕುಗ್ಗಿ, ಕುಗ್ಗಿ ಒಂದು ದಿನ ನಮ್ಮ ಕಣ್ಣಿಗೆ ಕಾಣಿಸುವುದೇ ಇಲ್ಲ. ಆಕಾಶದಲ್ಲಿ ಕೇವಲ ನಕ್ಷತ್ರಗಳು ಮಾತ್ರವೇ ಕಾಣಿಸುತ್ತವೆ ಎಂಬ ನಿರ್ಣಯಕ್ಕೆ ಬಂದಿರಾ? ಗಾಬರಿಯಾಯಿತೆ?

‘ರವಿಯಾಕಾಶಕೆ ಭೂಷಣಂ ರಜನಿಗಾಚಂದ್ರಂ ಮಹಾ ಭೂಷಣಂ’ ಎಂಬ ಸೋಮೇಶ್ವರ ಶತಕದ ಸಾಲಿನಂತೆ ಪ್ರಾಚೀನಕಾಲದಿಂದಲೂ ಚಂದ್ರನನ್ನು ಕಂಡು ಭೂಲೋಕವಾಸಿಗಳು ಆನಂದಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅಷ್ಟೇಕೆ ಲೋಕೋತ್ತಮ ಪುರುಷನೆಂಬ ಬಿರುದಿಗೆ ಪಾತ್ರನಾಗಿದ್ದ ಶ್ರೀರಾಮ ಮಗುವಾಗಿದ್ದಾಗ ಆಕಾಶದಲ್ಲಿ ಬೆಳಗುತ್ತಿದ್ದ ಚಂದ್ರ ತನಗೆ ಬೇಕೆಂದು ಹಟ ಹಿಡಿದನಂತೆ. ರಾಜ, ರಾಣಿಯರು, ಬುದ್ಧಿವಂತ ಮಂತ್ರಿಗಳು, ಅರಮನೆಯ ಸಕಲ ಪರಿವಾರ, ಎಲ್ಲರೂ ರಾಜಕುಮಾರನಿಗೆ ಚಂದ್ರನನ್ನು ತಂದುಕೊಡಲಾರದೆ ಪರಿತಪಿಸುತ್ತಿದ್ದಾಗ ಗೂನುಬೆನ್ನಿನ ಮಂಥರೆ ತನ್ನ ಜಾಣ್ಮೆಯಿಂದ ಕನ್ನಡಿಯಲ್ಲಿ ಪ್ರತಿಬಿಂಬಿಸಿದ್ದ ಚಂದ್ರನ ಬಿಂಬವನ್ನು ರಾಮನಿಗೆ ತೋರಿಸಿ ಸಮಾಧಾನಪಡಿಸಿದಳಂತೆ. ಈಗಲೂ ಊಟ ಮಾಡಲು ಹಟಮಾಡುವ ಮಕ್ಕಳಿಗೆ ಚಂದ್ರನನ್ನು ತೋರಿಸಿ ಊಟ ಮಾಡಿಸುವುದು,

ಚಂದಕಿ ಮಾಮ ಚಕ್ಕುಲಿ ಮಾಮ
ಮುತ್ತಿನ ಕುಡಿಕೆ ಕೊಡುಮಾಮ ಕೊಡುಮಾಮ

ಎಂದು ಹಾಡಿ ಕುಣಿಸುವುದು ಸಾಮಾನ್ಯ. ಬೆಳದಿಂಗಳ ಅನುಭವವಂತೂ ಅತಿ ರೋಮಾಂಚನೀಯ. ಅದು ಪ್ರೇಮಿಗಳ ಮಾಯಾಲೋಕ. ಕವಿಗಳ ಕನಸಿನ ಲೋಕ. ಬೆಳದಿಂಗಳ ಊಟ ರಸಿಕರಿಗೆ ರಸಕವಳ ಉಣಿಸುವ ಲೋಕ. ಬೆಳದಿಂಗಳಿನಲ್ಲಿ ತಾಜ್‌ಮಹಲ್ ನೋಡಬೇಕೆಂಬುದು ಒಂದು ಲೋಕೋಕ್ತಿ. ಹಲವಾರು ಜನರ ಆಶಯ. ಹಿಂದೂ ಪುರಾಣಗಳಲ್ಲಿಯೂ ಚಂದ್ರನಿಗೆ ಸಾಕಷ್ಟು ಪ್ರಾಶಸ್ತ್ಯವಿದೆ. ವಾರದಲ್ಲಿ ಸೋಮವಾರ ಚಂದ್ರನಿಗೆ ಮೀಸಲು. ೨೭ ನಕ್ಷತ್ರಗಳ ಪತಿ-ಉಡುರಾಜ, ಭಗವಾನ್ ಶಂಕರನ ತಲೆಯ ಆಭರಣ, ವಿನಾಯಕನನ್ನು ಹಾಸ್ಯ ಮಾಡಿ ಅಪಾಯದಲ್ಲಿ ಸಿಲುಕಿದವ. ಹೀಗೆ. ಚಂದ್ರ ಪುರಾಣಕಾಲದಿಂದ ಇಂದಿನವರೆಗೂ ನಮಗೆ ಅತಿಪ್ರಿಯನಾದ ಆಕಾಶಕಾಯ. ಭೂಮಿಗೆ ಮೋಹಕ ಚೆಲುವಿನ ಸಂಗಾತಿ.

ಇಷ್ಟೆಲ್ಲಾ ಭಾವನೆಗಳಿಗೆ ಕಾರಣವಾದ ಚಂದ್ರ ಯಾರು? ಖಗೋಳ ವಿಜ್ಞಾನಿಗಳ ಪ್ರಕಾರ ಚಂದ್ರ ನಮಗೆ ಅಂದರೆ ಭೂಮಿಗೆ ಅತಿ ಹತ್ತಿರವಿರುವ ಆಕಾಶಕಾಯ. ಚಂದ್ರನ ಸೃಷ್ಟಿಯ ಬಗ್ಗೆ ಮುಖ್ಯವಾಗಿ ನಾಲ್ಕು ತತ್ತ್ವಗಳಿವೆ. ಚಂದ್ರನ ಉಗಮವೂ ಉಳಿದ ಗ್ರಹಗಳಂತೆಯೇ ಆಯಿತು ಎಂಬುಂದು ಒಂದು ವಾದ. ಅದರಂತೆ ಸೌರವ್ಯೂಹದ ರಚನೆಯಾಗುವಾಗಲೇ ಕೆಲವು ಅನಿಲಗಳು ಹಾಗೂ ಧೂಳಿನ ಕಣಗಳು ಒಟ್ಟುಗೂಡಿ ಆಕಾರ ಪಡೆದು ಚಂದ್ರನ ಹುಟ್ಟು ಆಯಿತು. ಎರಡನೆಯ ವಾದವೆಂದರೆ ಒಂದು ಕ್ಷುದ್ರ ಗ್ರಹವು ಭೂಗ್ರಹದಿಂದ ಆಕರ್ಷಿತವಾಗಿ ಭೂಮಿಯ ಸುತ್ತ ತಿರುಗಲು ಆರಂಭಿಸಿ, ಅದು ಭೂಮಿಗೆ ಉಪಗ್ರಹವಾಯಿತು ಎಂದು. ಮೂರನೆಯ ತತ್ತ್ವ ಚಂದ್ರನ ಹುಟ್ಟನ್ನು ಹೀಗೆ ವಿವರಿಸುತ್ತದೆ. ಭೂಮಿಯ ಉಗಮವಾದಾಗ ಅದು ಬಹಳ ವೇಗವಾಗಿ ತಿರುಗುತ್ತಿತ್ತು. ಆಗ ಅದು ಇಬ್ಭಾಗವಾಗಿ ಒಡೆದು, ಒಂದು ಭಾಗ ಭೂಮಿಯಿಂದ ಬೇರ್ಪಟ್ಟು ದೂರವಾಯಿತು. ಆದೇ ಭಾಗ ಚಂದ್ರನಾಗಿ ರೂಪಗೊಂಡು ಭೂಮಿಯ ಸುತ್ತ ತಿರುಗಲಾರಂಭಿಸಿದೆ. ಇದನ್ನು ಭೌತವಿಜ್ಞಾನದ ಬೀಜವಿದಳನ ಕ್ರಿಯೆಗೆ ಹೋಲಿಸಬಹುದು. ನಾಲ್ಕನೆಯ ವಾದ ಹೀಗಿದೆ- ಸುಮಾರು ೪.೫ ಬಿಲಿಯನ್ ವರ್ಷಗಳ ಹಿಂದೆ ಹೆಚ್ಚುಕಡಿಮೆ ಮಂಗಳ ಗ್ರಹದಷ್ಟೇ ಗಾತ್ರದ ಒಂದು ಆಕಾಶಕಾಯವು ಭೂಮಿಗೆ ಢಿಕ್ಕಿ ಹೊಡೆಯಿತು. ಅದು ಎಷ್ಟು ವೇಗವಾಗಿ ಢಿಕ್ಕಿ ಹೊಡೆಯಿತೆಂದರೆ ಅದು ನಾಶವಾಯಿತು. ಅದು ಭೂಮಿಯ ಮೂಲಕ ಹಾದು ಹೋಗುವಾಗ ಅದರ ಕೇಂದ್ರದಲ್ಲಿದ್ದ ದ್ರವ ರೂಪದ ಕಬ್ಬಣದ ಅಂಶ ಭೂಮಿಯಲ್ಲಿ ಉಳಿಯಿತು. ಗ್ರಹದ ಉಳಿದ ಭಾಗ ಅಂತರಿಕ್ಷದಲ್ಲಿ ಒಟ್ಟುಗೂಡಿ, ಒಂದು ರೂಪವನ್ನು ಪಡೆದುಕೊಂಡು ಗುರುತ್ವಾಕರ್ಷಣೆಯ ನಿಯಮಾನುಸಾರ ಭೂಮಿಯ ಸುತ್ತ ಸುತ್ತಲು ಆರಂಭಿಸಿತು. ಇದೇ ಇಂದು ಭೂಮಿಯ ಉಪಗ್ರಹವೆಂದು ಗುರುತಿಸಲಾಗುವ ಚಂದ್ರ. ಚಂದ್ರನಲ್ಲಿ ಕಬ್ಬಿಣದ ಅಂಶ ಕಾಣದಿರುವುದಕ್ಕೆ ಇದೇ ಕಾರಣವೆಂದೂ ಊಹಿಸಲಾಗಿದೆ. ಆ ಸಮಯದಲ್ಲಿ ಕೆಲವು ಕ್ಷುದ್ರಗ್ರಹಗಳೊಂದಿಗೂ ಢಿಕ್ಕಿ ಹೊಡೆದು, ಅನೇಕ ವಿಕಿರಣ ವಸ್ತುಗಳು ವಿಭಜನೆಗೊಳ್ಳುತ್ತಿದ್ದುದರಿಂದ ಅದರ ತಾಪಮಾನ ಹೆಚ್ಚಾಯಿತು. ಕ್ರಮೇಣ ತಂಪಾಗುತ್ತಾ ಬಂತು.

ಇದ್ದಕ್ಕಿದ್ದಂತೆ ಈಗ ಚಂದ್ರ ಕುಗ್ಗುತ್ತಿದ್ದಾನೆಂದರೆ ಏನು? ಏಕೆ? ಹೇಗೆ? ಎಷ್ಟು? ಎಂದು ಪ್ರಶ್ನೆಗಳ ಸರಮಾಲೆಯೇ ಏಳುತ್ತದೆ. ಅದಕ್ಕೆಲ್ಲಾ ಸಾಧ್ಯವಾದಷ್ಟು ಸೂಕ್ತ ಉತ್ತರಗಳೂ ವಿಜ್ಞಾನಿಗಳ ಬಳಿ ಇವೆ. ಚಂದ್ರನ ವಾತಾವರಣ, ಮೇಲ್ಮೈಗಳ ಬಗ್ಗೆ ತೀವ್ರತರವಾದ ಅಧ್ಯಯನಗಳು ಪ್ರಾರಂಭವಾಗಿ ನಲವತ್ತು ವರ್ಷಕ್ಕಿಂತ ಹೆಚ್ಚಾಗಿದೆ. ಮೊತ್ತಮೊದಲಿಗೆ ಜುಲೈ ೨೦, ೧೯೬೯ರಲ್ಲಿ ಮಾನವನು ಚಂದ್ರನ ಮೇಲೆ ಕಾಲಿಟ್ಟು ನಡೆದದ್ದೂ ಆಯಿತು. ಈ ಅಧ್ಯಯನಗಳಿಂದ ತಿಳಿದದ್ದೇನೆಂದರೆ ಚಂದ್ರನ ಮೇಲ್ಮೈ ನಮಗೆ ಕಾಣಿಸುವಷ್ಟು ನುಣುಪಾಗಿಲ್ಲ. ಚಂದ್ರನ ಮೇಲೆ ಏರುತಗ್ಗುಗಳೂ ಹಳ್ಳದಿಣ್ಣೆಗಳೂ ಇವೆ ಎಂಬ ಸತ್ಯ. ಅಲ್ಲದೆ ಚಂದ್ರನ ಮಧ್ಯರೇಖೆಯ ಬಳಿ ಕೆಲವು ಸುಕ್ಕುಸುಕ್ಕಾದ ಭಾಗಗಳೂ ಕಂಡು ಬಂದವು. ಈ ಸುಕ್ಕಾದ ಭಾಗಗಳು ಒಣದ್ರಾಕ್ಷಿಯ ಮೇಲೆ ಕಾಣುವ ಸುಕ್ಕುಗಳಂತೆ ಕಾಣುತ್ತವಂತೆ. ಹಲವಾರು ಚಿತ್ರಗಳು ಈ ವಿಚಾರವನ್ನು ಸ್ಪಷ್ಟಪಡಿಸಿದವು. ಅಂದಿನಿಂದ ಕವಿಗಳಿಗೆ ಸುಂದರಿಯರನ್ನು ವರ್ಣಿಸುವಾಗ ‘ಚಂದ್ರವದನ’ ಎಂದು ಸೂಚಿಸಬೇಕೋ, ಬೇಡವೋ ಎಂಬ ಜಿಜ್ಞಾಸೆ ಪ್ರಾರಂಭವಾಯಿತು.

ಇರಲಿ, ಇತ್ತೀಚಿಗೆ ಅಮೆರಿಕದ ನಾಸಾ ಸಂಸ್ಥೆಯ ಲೂನಾರ್ ರಿಕಾನಿಸನ್ಸ್ ಆರ್‌ಬೈಟರ್ (-LRO) ಅಂತರಿಕ್ಷ ನೌಕೆಯಿಂದ ತೆಗೆದ ಕೆಲವು ಚಿತ್ರಗಳನ್ನು ಹಿಂದಿನ ಚಿತ್ರಗಳ ಜೊತೆ ಹೋಲಿಸಿ ನೋಡಿದಾಗ ಚಂದ್ರನ ಧ್ರುವ ಭಾಗದಲ್ಲಿ ಇಂತಹ ೧೪ ಹೊಸ ಸುಕ್ಕುಗಳು ಕಂಡುಬಂದವಂತೆ. ಈ ಸುಕ್ಕುಗಳು ಚಂದ್ರನು ಕುಗ್ಗುತ್ತಿರುವುದರಿಂದಲೇ ಉಂಟಾಗಿವೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಇವುಗಳನ್ನು ‘ಲೋಬೇಟ್ ಸ್ಕ್ರಾಪ್ಸ್’ ಎಂದು ಕರೆಯುತ್ತಾರೆ. ಇವು ತೆಳುವಾಗಿ, ಹಾಲೆಗಳಿಂತಿರುವುದೇ ಈ ಹೆಸರಿಗೆ ಕಾರಣ. ಹೀಗೆ ಚಂದ್ರನು ಸುಕ್ಕುಗಟ್ಟಿದಾಗ ಆತನ ಉದ್ದಗಲಗಳು ಕುಗ್ಗುತ್ತವೆ. ಇದಕ್ಕೆ ಚಂದ್ರನು ಕುಗ್ಗುತ್ತಿದ್ದಾನೆ ಎಂಬ ಸುದ್ದಿ ಎದ್ದಿದೆ.

ಆದರೆ ಹೀಗೇಕಾಗುತ್ತಿದೆ? ಈಗಾಗಲೇ ಹೇಳಿರುವಂತೆ ಚಂದ್ರ ಭೂಮಿಯಿಂದ ಬೇರ್ಪಟ್ಟ ಒಂದು ಭಾಗ. ವಾಷಿಂಗ್‌ಟನ್ ಡಿ.ಸಿ ಯಲ್ಲಿರುವ ಸ್ಮಿತ್‌ಸೋನಿಯನ್ ಸಂಸ್ಥೆಯ ಥಾಮಸ್ ವಾಟರ‍್ಸ್ ಮತ್ತು ಅವರ ಸಹ ವಿಜ್ಞಾನಿಗಳು ಹೇಳುವಂತೆ ಚಂದ್ರ ಭೂಮಿಯಿಂದ ಬೇರ್ಪಟ್ಟಾಗ ಅದರ ತಾಪಮಾನ ಬಹಳ ಹೆಚ್ಚಾಗಿತ್ತು. ಕಾಲಕ್ರಮೇಣ ತಂಪಾದಾಗ ಕುಗ್ಗಲಾರಂಭಿಸಿತು. ಭೌತಶಾಸ್ತ್ರದ ಅರಿವಿದ್ದವರಿಗೆ ಶಾಖವು ವಸ್ತುಗಳನ್ನು ಹಿಗ್ಗಿಸುತ್ತದೆ ಮತ್ತು ಆ ವಸ್ತುಗಳು ತಣ್ಣಗಾದಾಗ ಕುಗ್ಗುತ್ತವೆ ಎಂಬುದು ತಿಳಿದ ವಿಷಯವೇ. ಕಳೆದ ಒಂದು ಬಿಲಿಯನ್ ವರ್ಷಗಳಿಂದ ಚಂದ್ರ ಕುಗ್ಗುತ್ತಲೇ ಇದೆ. ಹೀಗೆ ಕುಗ್ಗಿದಾಗ ಭೂಕಂಪವಾಗುವಂತೆ ಚಂದ್ರಕಂಪನಗಳು ಉಂಟಾಗುವುದನ್ನೂ ಈಗ ಚಂದ್ರನ ಮೇಲೆ ಇರಿಸಿರುವ ಉಪಕರಣಗಳಿಂದ ಅಳೆದಿದ್ದಾರೆ ಖಗೋಳ ವಿಜ್ಞಾನಿಗಳು. ಕೆಲವು ವರ್ಷಗಳ ಹಿಂದೆ ಚಂದ್ರನ ತಂಪಾಗುವ ಪ್ರಕ್ರಿಯೆ ಮುಗಿದಿದೆ. ಸಂಪೂರ್ಣವಾಗಿ ತಣ್ಣಗಾಗಿದೆ ಎಂದು ನಂಬಿದ್ದರು. ಆ ನಂಬಿಕೆಯಿಂದಲೇ ಚಂದ್ರನಿಗೆ ‘ತಂಗದಿರ’ ಅಂದರೆ ತಂಪು ಬೆಳಕನ್ನು ನೀಡುವವನು ಎಂದು ಗುರುತಿಸಲಾಗುತ್ತಿದೆಯೇ?

ಇತ್ತೀಚಿಗೆ ಚಂದ್ರನ ಮೇಲೆ ಉಂಟಾಗಿರುವ ಸುಕ್ಕುಗಳನ್ನು ಅಧ್ಯಯನ ಮಾಡಿದವರು ಇವು ಕೇವಲ ಒಂದು ಬಿಲಿಯನ್ ಅಥವಾ ಒಂದು ನೂರು ಮಿಲಿಯನ್ ವರ್ಷಗಳಷ್ಟು ಮಾತ್ರ ಹಳೆಯವು ಎಂದು ನಿರೂಪಿಸಿದ್ದಾರೆ. ಅಂದರೆ ಈ ಅವಧಿ ಖಗೋಳ ಸಮಯದ ಪ್ರಕಾರ ಬಹಳ ಕಡಿಮೆ. ಅಲ್ಲದೆ ಚಂದ್ರನ ಒಳಭಾಗದಲ್ಲಿ ಹೆಚ್ಚಿನ ಉಷ್ಣತೆ ಇರುವುದರಿಂದ ಅದು ತಣ್ಣಗಾಗುವ ಹಾಗೂ ಕುಗ್ಗುವ ಪ್ರಕ್ರಿಯೆ ಇನ್ನೂ ಸ್ವಲ್ಪ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂಬ ವಿಚಾರವನ್ನು ದೃಢಪಡಿಸಿದ್ದಾರೆ. ಬುಧ ಗ್ರಹದಲ್ಲಿಯೂ ಇಂತಹ ಸುಕ್ಕುಗಳು ಕಂಡು ಬಂದಿವೆ. ಆದರೆ ಅವುಗಳ ಅಧ್ಯಯನದಿಂದ ಬುಧಗ್ರಹವು ಹೆಚ್ಚು ವೇಗವಾಗಿ ತಣ್ಣಗಾಗಿದೆ ಎಂದು ತಿಳಿದು ಬಂದಿದೆ. ಈಗ ಈ ಮೊದಲು ಕೇಳಿದ ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರ ಸಿಕ್ಕಿದ ಹಾಗಾಯಿತಲ್ಲವೆ?

ಕೊನೆಯದಾಗಿ ಮತ್ತೊಂದು ಪ್ರಶ್ನೆ. ಚಂದ್ರನು ಎಷ್ಟು ಕುಗ್ಗಿದ್ದಾನೆಂದು ಅಳೆಯಲಾಗಿದೆಯೇ? ಖಂಡಿತ. ವಿಜ್ಞಾನಿಗಳು ಚಂದ್ರನ ಕುಗ್ಗುವಿಕೆಯನ್ನೂ ಅತಿ ಜಾಣತನದಿಂದ ಅಳೆದು ಅದಕ್ಕೂ ಉತ್ತರ ಸಿದ್ಧವಾಗಿಟ್ಟಿದ್ದಾರೆ. ಕಳೆದ ಬಿಲಿಯನ್ ವರ್ಷದಲ್ಲಿ ಚಂದ್ರನ ತ್ರಿಜ್ಯವು ಕುಗ್ಗಿರುವುದು ೧೦೦ಮೀಟರ್‌ಗಳಷ್ಟು ಮಾತ್ರ.

ಈಗ ಚಂದ್ರನ ಕುಗ್ಗುವಿಕೆಯ ಬಗ್ಗೆ ಸಾಕಷ್ಟು ವಿವರಗಳನ್ನು ತಿಳಿದಹಾಗಾಯಿತು. ಇದೇ ವೇಗದಲ್ಲಿ ಚಂದ್ರ ಕುಗ್ಗಿದರೆ ಮಾನವ ಜನಾಂಗ ಇನ್ನೂ ಹಲವಾರು, ಹಲವಾರು ವರ್ಷಗಳು ಚಂದ್ರನನ್ನು ನೋಡುತ್ತಾ ಸಂತೋಷಪಡಬಹುದು. ಚಂದ್ರ ಮಾಯವಾಗಿಬಿಡುತ್ತಾನೆ ಎಂಬ ಭಯ ಸದ್ಯಕ್ಕಿಲ್ಲ. ವಾಸ್ತವದಲ್ಲಿ ಚಂದ್ರನ ಮೇಲ್ಮೈಯಲ್ಲಿ ಉಬ್ಬುತಗ್ಗುಗಳಿದ್ದರೂ, ಅಲ್ಲಲ್ಲಿ ಸುಕ್ಕುಗಳಿದ್ದರೂ ‘ದೂರದ ಬೆಟ್ಟ ನುಣ್ಣಗೆ’ ಎಂಬಂತೆ ದೂರದಲ್ಲಿದಿರುವ ನಾವು ಚಂದ್ರನ ಸೌಂದರ್ಯವನ್ನು ಮಾತ್ರ, ನೋಡುತ್ತಾ, ಆಸ್ವಾದಿಸುತ್ತಾ

ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ

ಎಂಬ ಗೀತೆಯನ್ನು ಹಾಡುತ್ತಾ ಸಂಭ್ರಮಿಸೋಣ. ಎಷ್ಟೋ ಬಾರಿ ಸತ್ಯಕ್ಕಿಂತ ಇಂತಹ ಮಿಥ್ಯವೇ ಸುಂದರ.

ಚಿತ್ರಕೃಪೆ: ಅಂತರಜಾಲ