ರಾಜಭೂಪಾಲನಿಗೆ ಚಂದ್ರಾವತಿ ಕಲಾವತಿ ಎಂಬ ರಾಣಿಯರು. ಚಂದ್ರಾವತಿ ಗರ್ಭಿಣಿಯಾದಾಗ ಸಂಭ್ರಮದಿಂದ ಸೀಮಂತಕಾರ‌್ಯ ನಡೆಸಲಾಯಿತು. ಇದರಿಂದ ಮತ್ಸರಗೊಂಡ ಸವತಿ ಕಲಾವತಿ ಚಡಪಡಿಸುತ್ತಾಳೆ. ಸಾಧು ಒಬ್ಬನು ಚಂದ್ರಾವತಿಯೊಂದಿಗೆ ಮಂಚದ ಮೇಲೆ ಮಲಗಿದ್ದನ್ನು ಕಂಡಿದ್ದೇನೆಂದು ಚಾಡಿ ಹೇಳಿ ರಾಜಭೂಪಾಲನ ಮನಸ್ಸು ಕೆಡಿಸುವಳು. ಚಂದ್ರಾವತಿಯನ್ನು ಅಡವಿಗೆ ಒಯ್ದು ಕೊಂದುಬರಲು ರಾಜನು ಚಾಂಡಾಲರನ್ನು ನೇಮಿಸುತ್ತಾನೆ. ಚಾಂಡಾಲರ ಕೃಪೆಯಿಂದ ಬದುಕಿ ಬಾಳೋಜಿ ಎಂಬ ಗೌಳಿಗನ ಮನೆಯಲ್ಲಿ ಉಳಿಯುತ್ತಾಳೆ. ಗಂಡು ಮಗನನ್ನು ಹಡೆಯುವಳು. ಆ ಮಗನಿಗೆ ಚಂದ್ರಶಿರೋಮಣಿ ಎಂದು ಹೆಸರಿಡಲಾಯಿತು. ಬಾಳೋಜಿ ಅವನಿಗೆ ಬಿಲ್ಲು ವಿದ್ಯೆ ಕಲಿಸಿದ. ಜಗನ್ನಾಥ ರಾಜನಿಗೆ ಕೆಲವು ರಾಕ್ಷಸರ ಕಾಟವಿತ್ತು. ಚಂದ್ರಶಿರೋಮಣಿ ಆ ರಾಕ್ಷಸರನ್ನು ಕೊಂದು ಕಂಟಕ ನಿವಾರಣೆ ಮಾಡಿದ್ದರಿಂದ ಜಗನ್ನಾಥರಾಜನು ಅವನಿಗೆ ತನ್ನ ಮಗಳನ್ನು ಕೊಟ್ಟು ಲಗ್ನಮಾಡಿದ. ದೇವೀಂದ್ರ ಎಂಬ ರಾಜನು ರಾಜ ಭೂಪಾಲನ ರಾಜ್ಯದ ಮೇಲೆ ದಾಳಿ ಮಾಡಿದ. ಅವನು ಜಗನ್ನಾಥರಾಜನ ನೆರವು ಕೇಳಿದ. ಜಗನ್ನಾಥರಾಜ ಅಳಿಯ ಚಂದ್ರಶಿರೋಮಣಿಯನ್ನು ಕಳಿಸಿದ. ಅವನು ದೇವೀಂದ್ರನನ್ನು ಸೋಲಿಸಿ ಅಟ್ಟಿದ. ರಾಜಭೂಪಾಲನಿಗೆ ಬಹಳ ಸಂತೋಷವಾಯಿತು. ಆಗ ಅಲ್ಲಿಗೆ ಬಂದ ಚಂದ್ರಾವತಿ ರಾಜಭೂಪಾಲನಿಗೆ ನಾನು ಸತ್ತಿಲ್ಲ. ಚಂದ್ರಶಿರೋಮಣಿ ನಿನ್ನ ಮಗ ಎಂದು ತಿಳಿಸುತ್ತಾಳೆ.

ಈ ಸಣ್ಣಾಟ ರಚಿಸಿದವನು ಕವಿ ಸಿದ್ಧಪ್ರಭು (1872 : 1977). ಬೀದರ ಜಿಲ್ಲೆಯ ಹುಮನಾಬಾದ್ ಇವನ ಊರು. ಅಲ್ಲಿಯ ಹಸ್ತಪ್ರತಿಯೇ ಪ್ರಸ್ತುತ ಪಠ್ಯ.

 ಸ್ತುತಿಪದ

ಚಂದ್ರಶಿರೋಮಣಿ ಆಟದ ಹೆಸರ ನಾಜೂಕ
ಛಂದ ಚಿತ್ತವಿಟ್ಟು ಕೇಳರೆಪ್ಪಾ ಸತ್ವದ ತೂಕ ॥ಪಲ್ಲ ॥

ಸರ್ವರಿಗೆ ಸಾಷ್ಟಾಂಗ ಗಪ್ಪ ಕೂಡದಕಾ
ನಮ್ಮಡಪ್ಪ ತಬಲಾ ತಾಳ ಪೇಟಿ ಗತ್ತ್ ಕೇಳದಕಾ ॥1 ॥

ಬಲಭೀಮನ ದಯದಿಂದ ಕಲತೆವು ನಾಟಕ
ಇಂದು ಬೈಲಾಟ ಹೂಡಿದೆವು ಎಲ್ಲರೂ ನೋಡದಕಾ ॥2 ॥

ಮಾತು : ನಮೋ ನಮೋ, ಚಂದ್ರಶಿರೋಮಣಿ ಆಟ ನೋಡಲಿಕ್ಕೆ ಬಂದ ಹಿಂದೂ ಮುಸಲ್ಮಾನ ಬಾಂಧವರಿಗೆ ಸಾಷ್ಟಾಂಗ ನಮಸ್ಕಾರ. ಈ ಆಟವು ಅಲ್ಪ ವಿದ್ಯಾ ಇದ್ದ ಹುಡುಗರು ಕಲಿತಿದ್ದ ಕಾರಣ ಸ್ವಲ್ಪ ಅಶುದ್ಧನುಡಿ ನುಡಿದರೆ, ತಮ್ಮ ಬಾಲಕರು ಎಂದು ತಿಳಿದು, ಹುಣ್ಣಿಮೆಯ ಚಂದ್ರನಂತೆ ಸಮಾಧಾನವಾಗಿ ನಮ್ಮ ಮಾನ ಆಟಕ್ಕೆ ಮಾನ ಕೊಡಬೇಕು.

[ರಂಭಾ ಪದ ಹಾಡುತ್ತ ಬರುವಳು]

ಕಲಗಿಕೀ ತೂಕ ಹೆಚ್ಚಿನ ತಾರೀಫ ಕಂಡಾ
ಹೆಚ್ಚಿನ ತಾರೀಫ ಕಂಡಪುಂಡರೆಲ್ಲಾ ರಂಡಾ ॥ಪಲ್ಲ ॥

ವಿಚಾರ ಎಷ್ಟು ಇಲ್ಲಾ
ಆಚಾರ ಹೇಳತಾರಲ್ಲಾ
ಸುಚಾರ ಬರದಾರಲ್ಲಾ
ನಾಚಿಕೇನು ಇಲ್ಲಾ ॥1 ॥

ಇದು ಹೆಂತಾ ದಿವಸ
ಬಿದ್ದಂಗ ಹಗಲ ಕನಸ
ಸಣ್ಣ ಇಲ್ಲಾ ಮನಸ
ಎಲ್ಲರಲ್ಲಿ ವಿರಸ ॥2 ॥

ದುಂಧಾಗುವದಲ್ಲಾ
ಸದಾ ಸಂದ್ಯಾಗೆಲ್ಲಾ
ದಿಕ್ಕ ತಪ್ಪಿತಲ್ಲಾ
ಲೆಕ್ಕ ಚುಕ್ಕಿತಲ್ಲಾ॥3 ॥

ಕಾಣಲಾರದೆ ಕಂಡಾ
ಉಣಲಾರದೆ ಉಂಡಾ
ಬಲಭೀಮ ಪುಂಡಾ
ತಿರಂಗೀ ಝಂಡಾ॥4 ॥

[ಮಂತ್ರಿ ಬರುವನು]

ಮಂತ್ರಿ : ಹೇ ರಂಭಾವತಿ ನಿನಗೆ ಇಷ್ಟೋತನಕ ಹುಡುಕಿ ದಣಿದೆನು. ಏಕೆಂದರೆ ಇವೊತ್ತಿನ ದಿವಸ ರಾಜಾ ಭೂಪಾಲನ ಸಣ್ಣ ಸತಿಯಾದ ಚಂದ್ರವತಿಗೆ ಕುಬಸ ಮಾಡುತ್ತಾರೆ. ಆದಕಾರಣ ಬೇಗ ನಡಿಯಬೇಕು.

ರಂಭಾ : ತಮ್ಮ ಅಪ್ಪಣೆಯಂತೆ ಆಗಲಿ.

[ಎಲ್ಲರೂ ಹೋಗುವರು]

[ರಾಜಾ ಭೂಪಾಲ, ಚಂದ್ರವತಿ, ಕಲಾವತಿ, ಒಬ್ಬ ಸಾಧು ಮತ್ತು ದಾಸದಾಸಿಯರೆಲ್ಲಾ
ನೆರೆಯುವರು]

ರಂಭಾ :

ಕುಬಸ ಮಾಡೋಣ ಬನ್ನಿರೆ
ಶಿವಲೋಕ ಚೆನ್ನೇರೆ ॥ಪಲ್ಲ ॥

ಕುಬಸ ಮಾಡೋಣ ಬನ್ನಿರಿ
ಅರಸ ಭೂಪಾಲನ ಪತ್ನಿಗಿ
ಹರುಷ ಶಿವ ಮಂತ್ರದ ಕುಬಸ
ಪರುಷ ಪಂಚ ಕನ್ನೇಯರೆ ॥1 ॥

ಎಲ್ಲಿ ನೋಡಿದರೆ ಕಾಣವಲ್ಲ ದೇವರ
ಬಣ್ಣವಿಲ್ಲದ ಕುಬ್ಬಸ ಎಷ್ಟು ಸೌಭಾಗ್ಯ ನೈದಾರ
ಬೆಲಿಯ ನಿಲ್ಲದೆ ಕೊಟ್ಟರ ರಕಮಾ
ಕುಬುಸ ಹೆಂತಾದು ಇದು ನೋಡು ರಂಗಮ್ಮ
ಸೃಷ್ಟಿದೊಳಗ ಇದು ಕಾಲಾನು ಕಾಲ
ಎಷ್ಟು ಹರೆಯೊದಿಲ್ಲ ಕುಬಸದ ಕೊನಿರೆ ॥2 ॥

ನಮೋ ನಮೋ ಮಹಾರಾಜರೆ ಈ ಕುಬಸದ ಮಹಿಮಾ ಸರ್ವರಿಗೆ ಗುರುತಿರುವದಿಲ್ಲಾ. ಹಿಂಥಾ ಮಹಾ ಸತ್ಪುರುಷರಿಗೆ ಗೊತ್ತು.

[ಪದ ಮುಂದುವರೆಯುವದು]

ಪಂಚಾಕ್ಷರಿ ಷಡಾಕ್ಷರಿ ಮಂತ್ರ
ಪಂಚಾಂಗದ ಗುಣಗಳು ಅಳಿವಲ್ಲದು ಸ್ವತಂತ್ರ
ಕುಲದೇವರ ಪೂಜಿ ಯಾತಕ
ಕುಬಸ ನೈಯವನ ತಿಳಿವಲ್ಲದ ಬಳಿಕ
ಗಜರಿ ಪುಂಗಿ ಎಲ್ಲಿತನ ಊದಬೇಕ
ಹೆಜ್ಜೆ ಹೆಜ್ಜಿಗಿ ಬಲಭೀಮನ ನೆನಿರೆ ॥3 ॥

ಸಾಧು : ಆನಂದವಾಯಿತು. ಇಂದ್ರ ಪದವಿದೊಳು ಗಾಯನ ಮಾಡುವಂತ ರಂಭಾನ ಕುಬಸದ ಪದಕೇಳಿ ಧನ್ಯನಾದೆ. ತಾಯಿ ಚಂದ್ರವತಿ ನಿಮ್ಮ ರಾಜ್ಯ ಐಶ್ವರ್ಯಕ್ಕೆಲ್ಲಾ ಆಶೀರ್ವಾದ. ಮುಂದ ಏನೇ ರಾಜ್ಯ ಕಾರಭಾರದೊಳಗೆ ತೊಂದರೆ ಬಂದರೆ ಸಾಧು ಸತ್ಪುರುಷರ ಸದ್ಗತಿ ಇರಲಿ. ರಾಜ ಭೂಪಾಲ ನನ್ನ ಗುಂಪಕ್ಕೆ ಹೊರಡುವೆನು.

ಚಂದ್ರಾವತಿ : ಸದ್ಗುರುನಾಥ ರಾಜಸ್ಥಾನಕ್ಕೆ ನಿನ್ನ ಆಶೀರ್ವಾದ ಇರಲಿ.

ಭೂಪಾಲ : ತಮ್ಮಾ ಮಂತ್ರಿಯೆ ಕಚೇರಿ ಕೆಲಸ ಇರುವದು ನಡಿವಂತವನಾಗು. ಈ ರಂಭಾಗೆ ಆಕಿನ ಮನಸಿನ ತಕ್ಕ ಬಹುಮಾನ ಕೊಡುವಂತವನಾಗು.

[ಬಹುಮಾನ ಕೊಡುವರು]

ದೂತಿ : ಅಕ್ಕಾ ರಂಭಾವತಿ ಇನಾಮ ತೆಗೆದುಕೊಂಡು ಹೋಗುವುದು ಇದು ನ್ಯಾಯವೇನು. ಇನ್ನೊಂದು ನಾಚ ಮಾಡಿ ಹೋಗಮ್ಮ.

ರಂಭಾ :

ಹಾರಹಾಕುವೆ ನವಲಿನ ನಾಚ ಮಾಡುತ
ನಾಚ ಮಾಡಿ ಘೆಜ್ಜಿ ಗಿಲ್ ಗಿಲ್ ಎನಿಸುತ ॥ಪಲ್ಲ ॥

ಕಣ್ಣಲಿಂದ ಕರಿವೆ ಕೈಯ ಮಾಡಿ ಕುಣಿವೆ
ಒಳ್ಳ ಒಳ್ಳೇರ ಮನಸಿನೊಳು ಒಮ್ಮಗೆಬ್ಬಿಸುವೆ ॥1 ॥

ಕೃಷ್ಣಾ ನಾಚ ಮಾಡಿದ ಗೋಪೆರಗೆಲ್ಲಾ ಎಳಸಿದ
ದೇವಿದಾಸ ಬರದಿದ ಬಲಭೀಮನ ನೆನಸಿದ ॥2 ॥

[ಜಯಘೋಷ ಮಾಡಿ ಎಲ್ಲರೂ ಹೋಗುವರು]

[ದೂತಿ ಕಲಾವತಿ ಇರುವರು]

ದೂತಿ : ಬಹಳ ಸಂಭ್ರಮ ನೋಡಿ ಹುಚ್ಚನಾದೆನಮ್ಮ ಕಲಾವತಿ.

ಕಲಾವತಿ : ಏನು ದೂತೆಮ್ಮ ಚಂದ್ರಾವತಿಗೆ ಗಂಡು ಮಗು ಹುಟ್ಟಿದರೆ ನನ್ನ ಜೀವಕ್ಕೆ ಮೂಲಾಗುವದು. ಇದಕ್ಕೇನು ಉಪಾಯವು?

ದೂತಿ : ಅಕ್ಕಾ ಕಲಾವತಿ, ನಿನ್ನ ವಿಚಾರವೇನಿರುವದು ಅದೇ ನನ್ನ ವಿಚಾರ.

ಕಲಾವತಿ :

ಇದಕ್ಕೇನು ಉಪಾಯ ಮಾಡಬೇಕಾ
ಚಂದ್ರವತಿಗೆ ತೆಗಿಬೇಕು ಮನಿ ಹೊರಕಾ ॥ಪಲ್ಲ ॥
ದೂತೆಮ್ಮ ಹೇಳಕ್ಕಾ ಇದರ ಮಸಲಾ
ನಮ್ಮ ರಾಜಾಗ ಬರಬೇಕು ಭೇದ ಅಸಲಾ
ನಾವು ನೀವು ಪ್ರೀತಿಲಿ ಇರುಬೇಕಾ
ಇದರ ಬಗಿ ಹೇಳಮ್ಮಾ ಮಾಡಿ ತರ್ಕಾ ॥1 ॥

ದೂತೆಮ್ಮಾ ಏನಾದರೊಂದು ಭಾರಿ ಅಪರಾಧ ತಂದರೆ ನಮ್ಮ ರಾಜೆರು ಕೋಪಕ್ಕೆ ಬರುವರು.

ದೂತಿ : ಭಾರಿ ಅಂದರೆ ಒಂದು ಗುಡ್ಡದಂತ ಅಪರಾಧ ಹಾಕಿದರೆ ಒಳ್ಳೆಯದೇ ಕಲಾವತಿ.

[ಪದ ಮುಂದುವರೆಯುವುದು]

ಜಾರತನದ ಸುದ್ದಿ ಹೇಳಬೇಕ
ರಾಜಾ ಭೂಪಾಲಗ ಸಿಟ್ಟಿಗಿ ತರಬೇಕ
ಖರೇ ಮನುಷ್ಯಗ ಮಾತಿಂದು ಹತ್ತುವದು ಪೆಟ್ಟ
ಸುಳ್ಳ ಸುದ್ದಿ ಕೇಳಿ ಸೀತಾಗ ರಾಮ ಬಿಟ್ಟ
ಹಿಂಢಾ ಸಾಕ್ಷೀಗಿ ನಡೆಯಮ್ಮಾ ದೂತೆಕ್ಕ
ನಿನ್ನಗ ಉಡಿಯಕ್ಕಿ ಹಾಕುವೆ ಮಾಣಿಕ ॥2 ॥

ಕಲಾವತಿ : ದೂತೆಮ್ಮ ಇದರ ಬಗಿ ನಿನಗ ಚೆನ್ನಾಗಿ ಪೇಳುವೆನು.

ದೂತಿ : ಅಮ್ಮಾ ನನ್ನ ಕಡೆ ಹೂಂ ಅನ್ನುವದೆ ಲಾಭವು.

[ಮತ್ತು ಪದಾ ಮುಂದುವರೆಯುವುದು]

ಸಾಧುನ ಸೋಬತಿ ಬದನಾಮ ಮಾಡಬೇಕ
ಹಿಂಥಾ ಯುಕ್ತಿ ತೆಗದಿನಿ ದೂತೆಕ್ಕ
ಅಕಿಗಿ ಹುಟ್ಟಿದರೆ ನನ್ನ ಜೀವಕ ಅದೆ ಮೂಲ
ಛಂದ ಮಾಡಿ ಕೊಡಸಾಮಿ ನಡಿ ಸೂಲ
ಇಷ್ಟ ಮಾಡೋತನ ಸಮಾಧಾನ ಇಲ್ಲ ಜೀವಕ
ಬಲಭೀಮ ಎಲ್ಲರಿಗೆ ಒಲಿಬೇಕ ॥3 ॥

ಕಲಾವತಿ : ತಂಗಿ ದೂತೆಮ್ಮ ಈ ಮಾತು ನಿನ್ನ ಮನಸಿಗೆ ಬರುವದೋ ಇಲ್ಲವೋ ಹೇಳು ನೋಡೋಣ.

ದೂತಿ : ಅಮ್ಮಾ ಕಲಾವತಿ ಸುಳ್ಳು ಮಾತಿಗೆ ಸುದರಾಸಿ ಹೇಳೋಣ ನಡಿರಿ.

[ಹೋಗುವರು]

[ಭೂಪಾಲರಾಜನ ಆಸ್ಥಾನ, ರಾಜ ಹಾಗು ಮಂತ್ರಿ ಕುಂತಿರುವರು]

ಭೂಪಾಲ : ತಮ್ಮಾ ಮಂತ್ರಿವ್ಯನೇ, ಈ ವರ್ಷ ಮಳೆಗಾಲ ಕಮ್ಮಿಯಾದ ಕಾರಣ ಪ್ರಜೆಗಳಿಗೆ ಚಿಂತಿ ಬಹಳ ಆಗಿರಬಹುದು.

ಮಂತ್ರಿ : ಮಹಾರಾಜರೆ, ಈ ಭೂಲೋಕದವರಿಗೆ ಏನೇನು ಕಷ್ಟ ಇರುವದು ಆ ಪರಬ್ರಹ್ಮನೇ ಬಲ್ಲ.

[ದೂತಿ, ಕಲಾವತಿ ಬರುವರು]

ಕಲಾವತಿ :

ಪ್ರಾಣಕಾಂತ ನಮ್ಮ ಪ್ರಾಣ ಹೋಗಬೇಕು
ಇನ್ನೂ ಇರಬಾರದು ಭೂಮಿಯ ಮ್ಯಾಗ
ಅಣ್ಣ ಮಂತ್ರಿ ಅನ್ಯಾಯ ಆಯಿತೋ ಮನ್ಯಾಗ
ರಾಜಾ ಕೇಳೋ ಬೇಜಾ ಆಯಿತೋ ಈಗ ॥1 ॥

ಭೂಪಾಲ : ಹೇ ಪ್ರಾಣಪ್ರಿಯಳೆ ಇಷ್ಟೊಂದು ಮಾತು ಏನು ಬೇಜಾ ಆಗಿರಬಹುದು ಲಗೂ ತಿಳಿಸು.

[ಮತ್ತೆ ಪದಾ ಮುಂದುವರಿಸುವುದು]

ಹಿಂಥಾ ಕಾಲಕ ಸಾಧು ಸಂತರ ನೆಂಬುಬಾರದು
ನೆಂಬಿ ಆಯಿತು ಮಾತು ಧಗಾ
ಚಂದ್ರಾವತಿ ಸಾಧು ನಿಮ್ಮ ಪಲಂಗ ಮ್ಯಾಗ
ಏಕಾಂತ ಕಂಡು ಘಾಬ್ರಿಯಾಗಿ ಬಂದ ಇಲ್ಲಿಗಾ ॥2 ॥

ಅಕ್ಕ ದೂತೆಮ್ಮಾ ನಾನು ಕಣ್ಣಮುಟ್ಟ ಕಂಡೇವು
ಕೇಳ ರಾಜಾ ನೀನು ಈಕೀಗಾ
ಅಪಮಾನ ಆಯಿತು ನಮದು ಜಗದೊಳಗ
ಭಂಡಿ ತುಂಬಾ ಮಾನಯಿಲ್ಲಾ ತಿಳದಿದವರಿಗಾ ॥3 ॥

ಕಲಾವತಿ : ರಾಜರ ಎಷ್ಟಂತ ವರ್ಣನ ಮಾಡಲಿ ಆ ಹೆಣ್ಣಿಂದು ಆ ಸಾಧುನ ನೆಲಿ ಇವತ್ತೇ ತಿಳಿಯಿತು.

ದೂತಿ : ಹೇ ರಾಜೇಂದ್ರ ಈ ಮಾತು ಅಪ್ಪಟ ಖರೆ.

ಭೂಪಾಲ :

ಮಂತ್ರಿವರ್ಯನೇ ಲಗೂ ಕರತಾರೋ ಆಕೀಗಾ
ಚಂಡಾ ಮುಂಡ ಚಂದ್ರಾವತಿಗಾ
ತುಂಡ ಮಾಡಿ ಬಿಡುವೆ ಒಂದು ಘಳಗ್ಯಾಗ
ಭಂಡ ಮಾತು ಆಯಿತು ನಮ್ಮ ಮನಿಯೊಳಗ
ಲಗೂ ಹೋಗಿ ಎಳಿತಾರೋ ಇಬ್ಬರಿಗಾ ॥1 ॥

ತಡಿಯದೆ ಹೋಗು ನೀನು ಸುಡು ಸುಡು ರಾಜಸ್ಥಾನು
ಬಡಿವಾರ ನಮದು ಇಳಿತು
ಕೇಳ ಮಂತ್ರಿ ಹೆಂತಾ ಮಾತು ಎದುರು ಬಂತು
ತಡಿಯದೆ ಲಗೂ ಕರತಾರೋ ತುರ್ತು
ದೂತಿ ಕೇಳೆ ಅಭಿಮಾನ ಎಲ್ಲಿ ಉಳಿತು ॥3 ॥

ತಮ್ಮಾ ಮಂತ್ರಿ ಸುಡು ಈ ರಾಜದರ್ಬಾರ ಲಗೂ ಕರೆದುಕೊಂಡು ಬಾ.

[ಇಬ್ಬರೂ ಹೋಗುವರು]

[ಚಂದ್ರಾವತಿ ಮಂದಿರಕ್ಕೆ ಮಂತ್ರಿ ಬರುವನು]

ಮಂತ್ರಿ : ಅಮ್ಮಾ ಚಂದ್ರಾವತಿ ತಮಗೆ ರಾಜೆರು ಕರೆದುಕೊಂಡು ಬರಲಿಕ್ಕೆ ಹೇಳಿದ್ದಾರೆ. ಆದ ಕಾರಣ ತಡಮಾಡದೆ ನಡೀರಮ್ಮ ತಾಯಿ.

ಚಂದ್ರಾವತಿ : ಅಣ್ಣಾ ಮಂತ್ರಿ ಇಷ್ಟು ಆತುರದಿಂದ ಕರಸಿದ ಕಾರಣವೇನಿರುವದು?

ಹೇಳಬೇಕು ಮಂತ್ರಿ ಎನಗ
ಮುಚ್ಚಿ ಇಡಬ್ಯಾಡ ನಿನ್ನ ಮನದೊಳಗ
ಸಾಕ್ಷಿ ಹೇಳುವೆ ನಿನಗ
ಬಲಗಣ್ಣ ಹಾರಿತು ಎನಗ ॥1 ॥

ಸುಮ್ಮನ ಹೇಳಿ ಕರದೊಯ್ಯಬ್ಯಾಡ
ಖಮ್ಮನ ಊಟ ಒಂದಿನ ಕೇಡಾ
ತಪ್ಪಲಾರದು ಭೋಗದ ಪೀಡಾ
ಖರ್ಮದ ಸುದ್ದಿ ಇರುವದು ದೌಡಾ ॥2 ॥

ಮಂತ್ರಿ : ಅಮ್ಮಾ ಇನ್ನೇನು ಸುದ್ದಿ ಹೇಳಲಿ, ನಿಮ್ಮ ಮೇಲೆ ಕಲಾವತಿ ದೊಡ್ಡ ಅಪರಾಧ ತಂದಿದ್ದಾಳೆ. ಜಾರತನದ ಸುದ್ದಿ ಏನಂತ ಹೇಳಲಿ ತಾಯಿ.

ದೇವರು ಮುನಿದ ನಿನ್ನ ಮೇಲೆ
ಚಂದ್ರಾವತಿಯೇ ॥ಪಲ್ಲ ॥

ಅಗಸನ ಮಾತಿಗೆ ನೆಂಬಗಿಟ್ಟು
ಸೀತಾಗ ವೈದು ಆರ‌್ಯಾಣ ಬಿಟ್ಟು
ಅದರಂತೆ ಸುಳ್ಳೆ ಸಿಟ್ಟು
ನಿನ್ನ ಮೇಲೆ ಬಂದಿತು ಪೆಟ್ಟು ॥1 ॥

ಚಂದ್ರಾವತಿ : ಮಂತ್ರಿವರನೇ ಇದು ಹೆಂಥಾ ಅಪರಾಧ?

ಅರೆ ಬುದ್ಧಿ ರಾಜೇರು
ಅರ್ಥ ಅರಿಯದೆ ಸಿಟ್ಟ ಆಗುವರು
ವ್ಯರ್ಥ ತಾನೇ ಕೆಟ್ಟು ಹೋಗುವರು
ಸಾರ್ಥಕ ಮಾಡುವಾ ಮಾರುತಿ ದೇವರು ॥1 ॥

ಅಣ್ಣಾ ಮಂತ್ರಿ, ಇನ್ನು ಮಾತ್ರ ನಿಲ್ಲಲಿಕ್ಕೆ ಭಾಗ ಇಲ್ಲದಂಗಾಯಿತು ಒಳ್ಳೇದು ದೇವಾ ನೀನೇ ಸದ್ಗತಿ.

[ಇಬ್ಬರು ಹೋಗುವರು]

[ರಾಜಾ ಭೂಪಾಲನ ಆಸ್ಥಾನ. ರಾಜಾ ಕುಳಿತಿದ್ದಾನೆ. ಚಂದ್ರಾವತಿ, ಮಂತ್ರಿ ಬರುವರು]

ಭೂಪಾಲ : ಛೀ ದುಷ್ಟಳೇ, ನನ್ನ ಎದುರು ನಿಲ್ಲಬೇಡ. ತಮ್ಮಾ ಮಂತ್ರಿ ಲಗೂ ಹೋಗಿ ಸಂಭಾಜಿ, ಬುದ್ಧಾಜಿ ಎಂಬ ಇಬ್ಬರು ಚಾಂಡಾಲರಿಗೆ ಕರೆದುಕೊಂಡು ಬಾ.

ಮಂತ್ರಿ : ತಮ್ಮ ಆಜ್ಞೆಯಂತೆ ಆಗಲಿ.

ಚಂದ್ರಾವತಿ : ಹೇ ಪ್ರಾಣನಾಥಹೆಂಥದು ಎನ್ನ ಹಣಿಬಾರ ಲಿಖಿತಾ ॥ಪಲ್ಲ ॥

ಕಳ್ಳ ಗುಣ ನನ್ನಲ್ಲಿ ಇಲ್ಲಾ
ಸುಳ್ಳ ಮಾತಿಗೆ ತಂದಿ ಸೂಲಾ
ನ್ಯಾಯ ಅನ್ಯಾಯ ತಿಳಿಲಿಲ್ಲಾ ॥1 ॥

ಭೂಪಾಲ : ಎಲಾ ಅಧಮಳೆ ಸಾಕು ಸಾಕು ನಿನ್ನ ನ್ಯಾಯವು. ನಿನಗೆ ಈಗಿಂದೀಗೆ ಶಿರ ಛೇದಿಸಿದರೆ ನನ್ನ ಸಿಟ್ಟು ಹೋಗಲಾರದು. ನಾನು ರಾಜಾ ಭೂಪಾಲನೆಂದು ತಿಳಿಯಲಿಲ್ಲವೇ ಹೇಸಿಯೇ.

ಚಂದ್ರಾವತಿ :

ಕ್ಷಮಾ ಮಾಡೋ ಹೇ ಮಹಾರಾಜಾ
ನನ್ನ ಕಡೆ ಇಲ್ಲಾ ಬೇಜಾ
ಕಲವಿಕಿ ಕಲತಿ ತೇಜಾಹೇ ಪ್ರಾಣನಾಥ ॥2 ॥

ನಿನ್ನ ಎದುರ ಅಗ್ನಿ ಕೂಡು
ಸತ್ವ ಪರೀಕ್ಷೆ ಇಲ್ಲೆ ಮಾಡು
ಬಲಭೀಮ ನೀನೇ ನೋಡು ॥3 ॥

ಹೇ ಪ್ರಾಣನಾಥ, ನಿನ್ನ ಹಸ್ತದಿಂದ ನನ್ನ ಶಿರ ಛೇದಿಸು. ಆ ಚಾಂಡಾಲರ ಕೈದೊಳಗ ಕೊಡುವುದು ಅನ್ಯಾಯವು. ಇಷ್ಟೇ ನಾನು ಉಡಿ ಚಾಚಿ ಬೇಡಿಕೊಳ್ಳುವೆನು.

ಭೂಪಾಲ :

ಛೀ ನಡಿ ನಡಿ ಅಧಮಳೆ
ಉಡಿ ಚಾಚಿ ಬೇಡುವಳೆ
ನಡಿ ನುಡಿ ಸರಿಯಿಲ್ಲದ ಹೆಣ್ಣು
ಅಡವಿ ಆರ‌್ಯಾಣ ಹೊಳ್ಳವೆ ॥1 ॥

ಸುದ್ದಿ ಕೇಳಿ ಹತ್ತೋ ಭೆಂಕಿ
ಖಳದಾಗ ತುಳಸುವೆ ಕಂಕಿ
ಹದ್ದಿನ ಪಾಲ ಆಗು ಡಂಕಿ
ಮಾಲ ಕಿಮ್ಮತ ಹೀನವೆ ॥2 ॥

ಶಬ್ದವೇ ಸೂತಕ ತಂತು
ಶಬ್ದವೇ ಜೀವದ ಧಾತು
ಬಲಭೀಮ ಗುರುವಿಗೆ ಗೊತ್ತು
ನ್ಯಾಯವೇ ಅನ್ಯಾಯವೆ ॥3 ॥

ಚಂದ್ರಾವತಿ : ಹೇ ಪ್ರಾಣದೊಲ್ಲಭ ನನ್ನ ಮನಸಿನ ಮಾತು ತಿಳಿಲಿಲ್ಲ ಏಕೆ ? ನಿಮ್ಮಲ್ಲಿ ಬುದ್ಧಿ ಹೆಂತಾದು ಇರಬೇಕು. ಪ್ರಾಣನಾಥ ಕಣ್ಣಿಲಿ ನೋಡಿ ಕಿಂವಿಲಿ ಕೇಳಿ ಬಾಯಿಲಿ ಆಡುವುದೆ ಸತ್ಯ. ಇಲ್ಲದಿದ್ದರೆ ನೀನೇ ಅಸತ್ಯ. ನೀನೇ ಚಾಂಡಾಲ. ನೀನೇ ಪಾಪಿಷ್ಟ. ಈಗ ನೀನೇ ಬೇಕಾದ್ದು ಮಾಡು.

ಚಂಡಾಲರು :

ಕರಸಿದ ಕಾರಣವೇನು ರಾಜಾ
ರವಿ ತೇಜಾ, ಮಹಾರಾಜಾ
ಭೂಪಾಲ ರಾಜಾ ॥ಪಲ್ಲ ॥

ಸೊಕ್ಕಿದವರಿಗೆ ಹಕ್ಕಿ ಪ್ರಕಾರ
ದಿಕ್ಕು ದಿಕ್ಕಿಗೆ ಓಡಿಸಿ ಬಿಡುವೆ
ಫಕ್ಕನೆ ನಮ್ಮ ಕೈಯಾಗ ಸಿಕ್ಕರೆ
ರೆಕ್ಕಿ ಮುರಿದು ಕುಕ್ಕಿಬಿಡುವೆ ॥1 ॥

1ನೇ ಚಾಂಡಾಲ : ದಂಡವತ ಮಹಾರಾಜರೇ ಕರಸಿದ ವರ್ತಮಾನ ತಿಳಿಹೇಳಿರಿ.

2ನೇ ಚಾಂಡಾಲ : ನಮೋ ನಮೋ ಸಾಷ್ಟಾಂಗ ಮಹಾರಾಜಾ, ತಮ್ಮ ಆಜ್ಞಾ ಏನಿರುವದು ?

ನಿಮ್ಮ ಗಿಲ್ಲಾ ಮಾಡಿದವಗೆ
ಹುಲಿ ಪ್ರಕಾರ ಭಾರಿಸಿ ಬಿಡುವೆ
ಹಮ್ಮ ಬಂದವರಿಗೆ ಜಾಮ ಇಳಿಸುವೆ
ಭೀಮನ ದಯದಿಂದ ಧುಮಾಳಿ ಕಡಿಸುವೆ ॥2 ॥

ಭೂಪಾಲ ರಾಜಾ : ಶಹಬ್ಬಾಸ ಬುದ್ಧಾಜಿ ಸಂಬಾಜಿ ಚಾಂಡಾಲರೆ, ಮಹಾ ಚಾಂಡಾಲಿಯಾದ ಚಂದ್ರಾವತಿಗೆ ಈಗಿಂದೀಗೆ ಅರಣ್ಯಕ್ಕೆ ಒಯ್ದು ಶಿರ ಛೇದಿಸಿ ರಕ್ತ ತರಬೇಕು. ಇದೇ ನನ್ನ ಶಾಹಿ ಹುಕುಂ. ತಡಾ ಮಾಡದೆ ಎಳದು ವೈಯ್ಯುವಂತವರಾಗಿರಿ.

ಬುದ್ಧಾಜಿ : ಏನೋ ಸಂಬಾಜಿ ನಿನ್ನೆ ಕುಬಸಾ ಮಾಡಿ ಇವತ್ತೆ ಹಿಂತಾ ಹುಕುಂ ಆದ ಮೇಲೆ ರಾಜನೀತಿ ನಿನಗೆ ಗೊತ್ತು.

ಸಂಬಾಜಿ : ಎಲಾ ಬುದ್ಧಾಜಿ ಹಿಂದಕ್ಕೆ ವಶಿಷ್ಟ, ನಾರದ, ವಿಶ್ವಾಮಿತ್ರ ಹಿಂತಾ ಮುನಿಗಳು ಕೂಡಿ ದಶರಥ ರಾಜರ ಮನಿದೊಳು ರಾಮನ ಪಟ್ಟಾಭಿಷೇಕ ಸಮಯಕ್ಕೆ ಕೈಕೈರಾಣಿ ಹುಕುಂಲಿಂದ ರಾಮನು ವನವಾಸಕ್ಕೆ ಹೋಗಲಿಲ್ಲವೆ? ರಾಜಾ ಭೂಪಾಲ ತಮ್ಮ ಅಪ್ಪಣೆ ಪ್ರಕಾರ ಮಾಡುವೆನು.

[ಕಲಾವತಿ ಬರುವಳು]

ಚಂದ್ರಾವತಿ : ಅಕ್ಕ ಕಲಾವತಿ ನನ್ನ ಕಡೆ ಏನೂ ಅಪರಾಧವಿಲ್ಲ. ತಾಯಿ ಕ್ಷಮಾ ಮಾಡಿ ಈ ಚಾಂಡಾಲರ ಸೂಲ ತಪ್ಪಿಸು. ನಿನಗೆ ಉಡಿಚಾಚಿ ಬೇಡಿ ಕೊಂಬುವೆ.

ಕಲಾವತಿ : ಛೀ ದುಷ್ಟಳೇ ನೀನು ಉಡಿಚಾಚಿ ಬೇಡಿಕೊಂಡರೆ ಎನಗೆ ಕರುಣೆ ಬರುವದಿಲ್ಲ. ಛೀ ನಡಿ ಹಿಂದಕ್ಕೆ. ಸರಿ.

ಚಂದ್ರಾವತಿ : ತಾಯೆಮ್ಮಾ ಈ ಕಲವಿಕಿದೊಳು ನಿಮ್ಮಂಥವರಿಗೆ ಸುಳ್ಳಾಡುವದಕ್ಕೆ ದೇವರು ಬಾಯಿ ಕೊಟ್ಟಿದ್ದಾನೆ. ಆಡಿರಿ.

ಭೂಪಾಲ : ಎಲಾ ಚಾಂಡಾಲರೇ ತಡಾ ಯಾತಕ್ಕೆ ನನ್ನ ಎದುರಿಂದ ಈಕೆಗೆ ತೆಗೆಯಿರಿ.

ಚಂದ್ರಾವತಿ : ಅಕ್ಕಾ ಖೊಟ್ಟಿ ಇಷ್ಟೊಂದು ಯಾಕೆ ನಿಮ್ಮಲ್ಲಿ. ನಿನ್ನಂಥ ರಾಣಿ ಇವರಂಥ ರಾಜಾ ಇದ್ದ ಕಾರಣ ಈ ಪ್ರಜೆಗಳಿಗೆ ಪೀಡಾ ಸುತ್ತುವುದು.

ಕಲಾವತಿ : ಎಲಾ ಹುಚ್ಚ ಮರುಳೆ ಕೇಳು ಬರೇ ಶಾಸ್ತ್ರ ಹೇಳಬ್ಯಾಡ.

ಖೊಟ್ಟಿನೆ ಅಳಿರೋ ಖೊಟ್ಟಿನೆ ತೂಗರೋ
ಖೊಟ್ಟಿ ಅಳದು ನೀವು ಮೇಲ ಮಾಡ್ಯಾ ಕಟ್ಟರೋ
ಮಾಡ್ಯಾದ ಕುಂತು ಜೋಗುಳ ನೀವು ಪಾಡರೋ ॥1 ॥

ಚಂದ್ರಾವತಿ :

ಖೊಟ್ಟಿನೆ ಅಳದರ ನೆಟ್ಟನೆ ಸಾಯತದರೋ
ಖೊಟ್ಟಿ ಅಳದಿದ ಕಲ್ಲಾ ಯಮನ ಕಚೇರಿಗೆ ಹೊತಾವರೋ
ಕಟ್ಟಿ ಕಟ್ಟಿ ಬಡಿವಾಗ ವಿಶ್ವಾಮಿತ್ರ ಯಾರು ಇಲ್ಲರೋ ॥1 ॥

ಕಲಾವತಿ :

ಕೆಟ್ಟ ವಾಲಿಗೆ ಶ್ರೇಷ್ಟ ಮಾಡ್ಯಾದೆ
ಕಲಿಯುಗದೊಳು ನಿಷ್ಠಿಲಿ ಇದ್ದವರ ಕುಟ್ಯಾದೆ
ಛೀ ನಡಿ ಮೂಳಾ ಶಾಸ್ತ್ರ ಪುರಾಣ ಕಟ್ಯಾದೆ ॥2 ॥

ಚಂದ್ರಾವತಿ :

ಸತ್ಯದವರಿಗೆ ಸ್ವರ್ಗಕ ವೈದಾದೆ
ನಿಮ್ಮಂಥ ಮೂಳಾಗೆ ಪಾತಾಳಕ ತುಳದಾದೆ
ಸಂತ ತುಕಾರಾಮಗ ಮುತ್ತಿನ ಪಾಲಕಿ ಮೆರದಾದೆ ॥2 ॥

ಚಾಂಡಾಲರು : ಅಮ್ಮಾ ಚಂದ್ರಾವತಿ ನಮ್ಮ ರಾಜೇರ ಹುಕುಮ ಆದ ಬಳಿಕ ಇನ್ನು ತಡ ಮಾಡಲಿಬ್ಯಾಡ.

ಭೂಪಾಲ : ಎಲಾ ಚಾಂಡಾಲರೇ ತಡಮಾಡದೆ ಶಿರಛೇದಿಸಿ ಬರುವಂತವರಾಗಿರಿ.

ಕಲಾವತಿ : ಎಲಾ ದುಷ್ಟಳೇ ನೀನು ಎಷ್ಟು ಹೇಳಿ ಫಲವಿಲ್ಲ. ಇಲ್ಲಿಂದ ನಡಿ.

[ಎದ್ದು ನೂಕಿಬಿಡುವಳು]

[ರಾಜಾ, ಕಲಾವತಿ ಹೋಗುವರು. ಚಾಂಡಾಲರು ಚಂದ್ರಾವತಿಗೆ ಹಿಡಕೊಂಡು ಅರಣ್ಯಕ್ಕೆ ಒಯ್ಯುವರು.]

[ದೇವೀಂದ್ರ ರಾಜನ ಆಸ್ಥಾನ, ಮಂತ್ರಿ ಬರುವನು]

ದೇವೀಂದ್ರ : ತಮ್ಮಾ ಮಂತ್ರಿವರನೆ, ಈ ರಾಜಗಾದಿಗೆ ಕುಂತಬಳಿಕ ರಾಜನೀತಿ ಹ್ಯಾಂಗಿರುವದು ಗೊತ್ತಾಗುತ್ತದೆ. ಒಂದು ವೇಳೆ ಯಾವುದಾದರೂ ರಾಜ್ಯ ಸಂಪಾದನೆ ಮಾಡಬೇಕಾದರೆ ಈ ಭೂಮಿಯ ಮೇಲೆ ಭೂಪಾಲ ರಾಜನ ರಾಜ್ಯ ಗೆದಿಯಬೇಕು. ಮದ್ದು, ಗುಂಡು, ಸೈನ್ಯ ಎಷ್ಟು ಇರುವದು ತಿಳಿಸು.

ಮಂತ್ರಿ :

ಮಹಾರಾಜನಾದ ದೇವೀಂದ್ರನೆ, ಹೇಳುವೆ ಕೇಳುವಂತವರಾಗಿರಿ.
ರಾಜಾ ರಾಜೇಂದ್ರನೆ ರಾಜಾ ದೇವೀಂದ್ರನೆ
ತಡವಿಲ್ಲಾ ಭೂಪಾಲನ ಗಾದಿ ಗೆದಿವದಕಾ
ಮದ್ದು ಗುಂಡು ಸೈನ್ಯವುಂಟು ಕೈಲಾಕಾ ॥1 ॥

ಮೂರು ಲೋಕದಲ್ಲಿ ದೊರಿಯೆ
ಯಾರು ಇಲ್ಲ ನಿನ್ನ ಸರಿಯೇ
ಋಸಿಮುನಿ ಮಹಾಯೋಗಿ
ದುಡಿತಾರ ದಾಸ ದಾಸರಾಗಿ
ಬೇಡಿದ ಭಾಗ್ಯ ಕೊಟ್ಟಾನ ಮಾಲೀಕ
ಚಿಂತಿ ಮಾಡಬ್ಯಾಡ ರಾಜಾ ಗೆದಿವದಕ ॥2 ॥

ಮಹಾರಾಜರೆ ತಮ್ಮ ನುಡಿಯಂತೆ ದಂಡು ದಾಳೆ ಸರ್ವ ತೈಯಾರ ಇರುವುದು. ತಮ್ಮ ಹುಕುಂ ಪ್ರಕಾರ ಮಾಡುವೆನು.

ದೇವೀಂದ್ರ :

ಮಂತ್ರಿವರನೆ ಕೇಳು ಯಂತ್ರ ಮಾರ್ಗದಿಂದ ಹೋಗಿ
ಸ್ವತಂತ್ರ ಮಾಡಬೇಕು ತಡಾ ಯಾತಕೋ
ಪುಷ್ಟಿ ತಿಂದ ಮಿಲ್ಟ್ರಿಗೆಲ್ಲಾ ಖಳುಬೇಕೋ
ಸೃಷ್ಟಿಯೆಲ್ಲಾ ನಡುಗುವಂತೆ ನಿಷ್ಟಬಾಮ್ ತೊಗೊ ಅದರಂತೆ
ರಾಜಾ ಭೂಪಾಲ ಹೆದರಿ ಬರಬೇಕು ಕೈಸೆರಿ
ಜೈಸಿಂಗನಗರ ಬಲಭೀಮನ ಪಾದಕೋ
ನಮಸ್ಕಾರ ಮಾಡಿ ನಡಿಬೇಕೊ ಮುಂದಕೋ ॥

ತಮ್ಮಾ ಮಂತ್ರಿ, ತಡಾ ಮಾಡದೆ ರಾಜಾ ಭೂಪಾಲನ ದೇವಡಿಗೆ ದಾಳಿ ಇಡುವಂತವನಾಗು ನಡಿ.

ಮಂತ್ರಿ : ತಮ್ಮ ಆಜ್ಞೆಯಂತೆ ಈಗಿಂದೀಗೆ ಹೋಗುವೆನು. [ಹೋಗುವರು]

[ಅರಣ್ಯದಲ್ಲಿ ಚಂದ್ರಾವತಿ ಹಾಗೂ ಚಾಂಡಾಲರು ಬರುವರು]

ಚಾಂಡಾಲರು : ಅಮ್ಮಾ ತಾಯಿ ರಾಜೇರ ಹುಕುಂನಂತೆ ನಡೆಯುವ ಯಾಳೆ ಬಂತು. ತಾವು ಬಾಗಿ ನಿಲ್ಲಬೇಕು.

ಚಂದ್ರಾವತಿ : ಅಣ್ಣಾ ಚಾಂಡಾಲರೆ, ಸ್ವಲ್ಪ ತಡೆಯಿರಿ. ನಾನು ದೇವರ ಸ್ತೋತ್ರ ಮಾಡತಿನಿ. ಆಮೇಲೆ ಈ ಕೊರಳು ನಿಮ್ಮ ಪಾಲಾಗಲಿ.