ಚಾಂಡಾಲರು : ಎಲ್ಲಿ ದೇವರು ಎಲ್ಲಿ ದಿಂಡರು, ಜಲ್ದಿ ಆಗಲಿ ತಡವಾಗುತ್ತದೆ.

ಚಂದ್ರಾವತಿ :

ಕಲ್ಲನಾದೆ ಕಲಿಯುಗದೊಳು ಮಹಾದೇವಾ ॥ಪಲ್ಲ ॥

ಕಣ್ಣು ತೆರೆದು ನೋಡುವಲ್ಲಿ
ಕಿಂವಿ ಕೊಟ್ಟು ಕೇಳುವಲ್ಲಿ ॥1 ॥

ಸತ್ಯದ ಗತಿ ಹಿಂಥಾದು ಏನು
ಮಿಥ್ಯಾಕೆ ನೀನು ವಲತಿಯೇನು ॥2 ॥

ಜಲ್ಮಾ ಬಂದು ಫಲವೇನು
ಬಲಭೀಮ ಕಣ್ಣ ತೆರಿ ನೀನು ॥3 ॥

ಅಣ್ಣಾ ಚಾಂಡಾಲರೇ, ಇನ್ನು ಮೇಲೆ ನಿಮ್ಮ ಖಡ್ಗವು ಎತ್ತಿ ಒಮ್ಮಿಗೆ ಹೊಡಿವಂತವರಾಗಿರಿ.

ಸಂಬಾಜಿ : ಅಣ್ಣಾ ಬುದ್ಧಾಜಿ ನನ್ನ ಕೈಮಾತ್ರ ಏಳೇವಲ್ಲದು.

ಬುದ್ಧಾಜಿ : ಹೌದು ನನ್ನ ಕೈಕೂಡಾ ಏಳೇವಲ್ಲದು. ಇವರ ಕೈಲಿಂದ ಮಸ್ತ ಉಂಡಿದೇವು. ರಾಜೇರ ಬುದ್ದಿ ಏನೋ ಏನು ಸುದ್ಧಿಯೋ. ತಾಯಿ ಚಂದ್ರಾವತಿ ತಮಗೆ ನಾವು ಬಿಡುವೆವು. ನೀವು ಮಾತ್ರ ಈ ಊರಿಗೆ ಈಗೆ ಬರಬಾರದು ತಾಯಿ. ಚಾಂಡಾಲರಾದ ನಮ್ಮ ಮೇಲೆ ನಿಮ್ಮ ದಯಾ ಇರಲಿ.

ಚಂದ್ರಾವತಿ : ಒಳ್ಳೇದು ಮಕ್ಕಳೇ ಚಾಂಡಾಲರೇ ನಿಮ್ಮಗೆ ಜಯವಾಗಲಿ.

[ಚಾಂಡಾಲರು ಹೋಗುವರು]

ಚಂದ್ರಾವತಿ : ಹೇ ಸದ್ಗುರುನಾಥಾ ಈ ಕಾಂತಾರದಲ್ಲಿ ಹ್ಯಾಂಗೆ ಜೀವನ ಪಾರ ಮಾಡಲಿ, ದೇವಾ.

[ಮೋಹನ ರಾಜಾ ಕುದರಿ ತೊಕೊಂಡು ಬ್ಯಾಟಿಗೆ ಬರುವನು]

ಮೋಹನ : ಇದೇನು ನಾನು ಬೇಟೆಗೆ ಬಂದಿದ್ದ ಫಲವಾಯಿತು. ಪರಮೇಶ್ವರನು ನನ್ನ ಪಾಲಕ್ಕೆ ಹೆಂತಾ ಸುಂದರವಾದ ಹೆಣ್ಣು ಖಲವಿದನು. ಇರಲಿ ನಾನು ಮಾತನಾಡಿಸಿ ನೋಡುವೆ. ಎಲಾ ಸುಂದರಿಯೆ ನೀನು ಯಾರು ? ಇಲ್ಲಿಗೆ ಬಂದ ಕಾರಣವೇನು ?

ಚಂದ್ರಾವತಿ : ಅಣ್ಣಾ ರಾಜೇಂದ್ರ ನನ್ನ ವನವಾಸಕ್ಕೆ ಏನು ಕಾರಣವೆಂಬುದು ನೀನು ದಾರೆಂದು ಹೇಳಲಿ.

ಮೋಹನ :

ಸುಂದರ ಸುಖಜಾಣಿ ಚಂದ್ರಮನಂತೆ ಖಳಿವಂತಿ
ಆರ‌್ಯಾಣಕೆ ಯಾಕ ಬಂದು ನಿಂತಿ ॥ಪಲ್ಲ ॥

ನಿನ್ನ ಮೈಯ ಹೊಳಪಾ
ಚಂದ್ರ ಜ್ಯೋತಿ ಬೆಳಪಾ
ರಂಗಮಹಲಕ ಹೋಗಮಿನಡಿ ಮಾಡಬ್ಯಾಡ ಚಿಂತಿ
ಪೂರ್ವ ಜನ್ಮದ ಎನ್ನಕಾಂತಿ ॥1 ॥

ಬೇಕಾದಷ್ಟು ಭಂಗಾರ ಇಡುವೆ
ದಾಸ ದಾಸಿಯರನ್ನು ಕೊಡುವೆ
ದೇಶದ ಧೊರಿ ನಾನು ರಾಣಿ ಆಗಿ ಕುಂತಿ
ಇಷ್ಟ ಮಾತಿಗೆ ಏನಂತಿ ॥2 ॥

ಎಲಾ ಸುಂದರಾಂಗಿ ನೀನು ನನ್ನ ಬದಿಲಿ ಅಷ್ಟ ಐಶ್ವರಿವನ್ನು ಭೋಗಿಸುವದಕ್ಕೆ ನಡಿ.

ಚಂದ್ರಾವತಿ : ಸದ್ಗುರುನಾಥ ಈ ಅರಣ್ಯದೊಳು ಹೆಂಥಾ ಯಾಳ್ಯಾ ತಂದಿ. ಒಳ್ಳೇದು ಧೈರ್ಯಮಾಡಿ ಈತನ ಕೂಡ ಎರಡು ಮಾಡನಾಡುವದೆ ನಿಜ. ಅಣ್ಣಾ ರಾಜೇಂದ್ರ ಹಿಂತಾ ಮಾತನಾಡಲಿಕ್ಕೆ ನಿಮ್ಮ ಮನಸ್ಸಾದರೂ ಹೇಗೆ ಆಯಿತು.

ಅಕ್ಕಲ್ ಇಲ್ಲದ ಮಾತು ಆಡುಬ್ಯಾಡ ಮೂಳಾ
ಪರ ಹೆಣ್ಣಿನ ಖ್ಯಾಲಾ ಬ್ಯಾಡಾ ॥ಪಲ್ಲ ॥

ವಿಚಾರ ಮಾಡಿ ನೋಡೋ ಮೂರ್ಖಾ
ಅನಾಚಾರಿ ಗುಣ ಯಾತಕ
ಕಚ್ಚಾ ಮಾತನಾಡಿದರೆ ಉಚ್ಚಿ ಹೊಡದಾರೋ ಮೂಳಾ
ಹೆಚ್ಚಿನ ಮಾತನಾಡುಬ್ಯಾಡ ॥1 ॥

ಹೆಣ್ಣಿಗಾಗಿ ಕೆಟ್ಟರೋ ಕೋಟಿ
ವೀರ ಶೂರ ಮುನಿಗಳು ಜಟ್ಟಿ
ಹಂತವರೆಲ್ಲಾ ಮಡದ ಹೋಗ್ಯಾರ ಹಿಂತಾ ಮಾತಿಗೆ ಮೂಳಾ
ಬೇಕಂತ ತೊಗೋಬ್ಯಾಡ ಪೀಡಾ ॥2 ॥

ಎಲಾ ಹುಚ್ಚ ಮನುಜನೆ ಅರಣ್ಯದೊಳು ದಾರಾದರು ವನವಾಸ ಭೋಗಿಸಲಿಕ್ಕೆ ಬಂದರೆ ನೀನು ತಂಗಿಯಂತೆ ತಿಳಿದು ಮಾತನಾಡಬೇಕು. ನಿನ್ನ ಮನಸ್ಸಿಗೆ ತಿಳಿದು ನೋಡು.

ಮೋಹನ : ಎಲಾ ಚದುರಿಯೆ ಬೇಟೆಗಾರನ ಬಲಿದೊಳು ಬಿದ್ದ ಮೊಲವು ಎಂದಿಗಿ ಪಾರ ಆಗುವದಿಲ್ಲ ತಿಳಿ. ಬೇರೆ ಶಾಸ್ತ್ರ ಹೇಳಬ್ಯಾಡ.

ಸಾಕುಮಾಡೆ ಶಾಸ್ತ್ರ ಮತ ಗರತಿ
ಪತಿವರತಿ ನನಗೂಡ ಬ್ಯಾಡ ಶರತಿ ॥ಪಲ್ಲ ॥

ಅಗಲಿಗೆ ಬಂದಿದ ಊಟ
ಉಣಬೇಕು ಇದಕೇನು ಸಿಟ್ಟಾ
ಎನ್ನ ಪಾಲಕ ನೀ ಬಂದ ಹೆಣ್ಣ
ಗಿಳಿ ಬಂದಂತೆ ತಿಳಿಯೆ ಹೆಣ್ಣ
ತೆರದು ನೋಡು ಆತ್ಮದ ಕಣ್ಣ
ಪರಮಾತ್ಮ ಹಚ್ಚಿ
ಎಣ್ಣಿ ಆದ ಮೇಲೆ ನಿಲ್ಲುವದು ಗಾಡಿ
ಸುಳ್ಳೆ ಯಾಕ ಶರ್ತಿ, ಎಲ್ಲಿ ತಾನ ಹಾರತಿ ॥1 ॥

ನೀ ಏನ ಶರಣಮ್ಮಾ ಅಲ್ಲಾ
ಸುಳ್ಳೆ ಯಾಕೆ ಆರ‌್ಯಾಣ ಪಾಲಾ
ಸುಮ್ಮನೆ ನಡಿ ನನ್ನ ಹಿಂದಾ
ನಿನ್ನ ತಕ್ಕ ಪುರುಷ ನಾ ಛಂದಾ
ರಂಗಮಹಲದೊಳು ಆನಂದ
ಬಿಡು ಪಂತ ಶಾಸ್ತ್ರ ತರ್ಕಾ
ಬಲಬಲೇವರ ಆಗ್ಯಾರ ಹರಕ
ಇಲ್ಲಿ ಯಾರು ಉಂಟು ನಿನಗ ದಿಕ್ಕ
ನಿನ್ನ ಮೇಲೆ ಪ್ರೀತಿ, ಪದ್ಮಿಣಿ ಜಾತಿ ॥2 ॥

ಎಲಾ ಸುಂದರಿ ಒಳ್ಳೆ ಮಾತಿನಿಂದ ನಡಿವಂತವಳಾಗು. ಈ ಆರಣ್ಯ ದೊಳು ಹೆಚ್ಚಿನ ಆರಣ್ಯ ಆದತ್ತು ನೋಡು.

ಚಂದ್ರಾವತಿ : ಹೇ ಸಚ್ಚಿದಾನಂದ ಪರಬ್ರಹ್ಮನೆ, ಹಿಂತಾ ಸಂಕಟ ಎನ್ನ ಮೇಲೆ ತರುವದು ಅನ್ಯಾಯವೆ. ಒಳ್ಳೇದು ರಾಜೇಂದ್ರ ನಿನಗೆ ಒಳ್ಳೆ ಮಾತು ಹೇಳಿದರೆ ಜ್ಞಾನ ಬರಲಿಲ್ಲಾ. ನರಿಯು ಹುಲಿನಾಗಬೇಕೆಂದು ಕಂಬಾರನ ಕಪಲಿ ಕಾಯ್ದ ಕಬ್ಬಿಣದಿಂದ ಪಟ್ಟಿ ಎಳಸಿಕೊಂಡು ಸುಟ್ಟುಕೊಂಡು ಸತ್ತಿತು. ಅದರಂತೆ ನಿನಗೆ ಪಟ್ಟಿ ಎಳಿಬೇಕಾಯಿತು. ಹುಚ್ಚಪ್ಪಾ ನಿದ್ದಿಗಣ್ಣಾಗ ಎದ್ದು ಎಚ್ಚರಲಿಂದ ಮಾತಾಡು.

ಘಳಗಿ ಸುಖಕೆ ಮಳಗಿ ಸುಡುವದೋ
ಕೇಳ ಬೋಧೊಘಾಳಿಗಿ ಬಾಯಿ ತೆರದೋ ॥ಪಲ್ಲ ॥

ದ್ರೋಪತಿಗಾಗಿ ಕೌರವರು ಸೋತು
ಸೀತಾಗಾಗಿ ಲಂಕಾ ಸುಟ್ಟಿತ್ತು
ಒಳ್ಳೆ ಗುರುವಿಂದು ತೊಕೋ ಬೋಧೊ
ನಿಜಗುಣ ಜ್ಞಾನಸಿಂಧು ಓದೋ
ಖರೇ ಮಾತಿಲಿ ನನ್ನಗ ವೈಗೆದ್ದೊ
ಶಬ್ಬಾಯಿಸ ಅಂತಿನಿ ನಿನ್ನಗ ಹುಲಿಯೋ
ಒಳ್ಳೆ ಶಾಸ್ತ್ರದ ಸಾಲಿಯ ಕಲಿಯೊ
ಸಿಗುವದು ಶಾಸ್ತ್ರದ ನೆಲಿಯೋ
ಮೋಕ್ಷಕ್ಕೆ ಹೊಂದೊ
ಮಾಯಾ ಮೋಹ ಹರಿದೋ ॥1 ॥

ಯಾರು ಇಲ್ಲಾ ಅನುಬ್ಯಾಡ ನೀನು
ಎಲ್ಲಾ ಥಾವಲಿ ಆ ಪರಶಿವನು
ಬಿಡುಬ್ಯಾಡ ಕಾಮನ ಕೋಣ
ಮುರದ ಹೋಗೆತ್ತು ನಿನ್ನ ಗೋಣ
ಮಡದ ಹೋದ ಐರಾವಣ
ಸುಮ್ಮನ ಹೋಗೊ ನಡಿ ಮುಂದ
ಬ್ಯಾಡ ನನ್ನ ಸರಿ ವಾದಾ
ಪತಿವ್ರತಾ ಹೆಣ್ಣು ಸುಗಂಧಾ
ಬಲಭೀಮಗ ನೆನದೋ
ನೀ ಹೋಗೋ ಸರದೋ ॥2 ॥

ಅಣ್ಣಾ ಸ್ವಲ್ಪ ಲಕ್ಷವಿಟ್ಟು ಕೇಳು. ಹೆಣ್ಣಿನ ವಿಷಯಕ್ಕಾಗಿ ಆರು ಕೋಟಿ ಆಯುಷ್ಯ ಪಡದಂತಾ ರಾವಣ ನಾಶವಾಗಲಿಲ್ಲವೆ? ಒಂದ ಬೆರಳಿನಾಗ ಏಳ ಆನಿ ಶಕ್ತಿ ಇದ್ದ ಕೀಚಕನು ಮಡಿಲಿಲ್ಲವೆ? ಕಾಮ ಕ್ರೋಧ ಮದ ಮತ್ಸರಮೊದಲಾದ ಅಷ್ಟಮದಗಳನ್ನು ಗೆದ್ದುಕೊಂಡು ನಡವದನೆ ಜಾಣನು.

ಮೋಹನ :

ಒಳ್ಳೆ ಮಾತಿಲಿ ಎನ್ನ ಮಂದಿರಕ್ಕೆ ನಡಿ
ಸುಳ್ಳೆ ಇಲ್ಲದೊಂದು ಹೇಳಬ್ಯಾಡ ಪದಹಾಡಿ ॥ಪಲ್ಲ ॥

ನಿನ್ನ ಸಲುವಾಗಿ ಹೋಗಲಿ ರಾಜಸ್ಥಾನ
ಚೌದ ಕಲ್ಪ ನಡಿವಂತಾ ಸಂವಸ್ಥಾನ
ಇರಲಿಕ್ಕೆ ಬಂದಿಲ್ಲ ಈ ದೇವಡಿ
ಒಂದೀನ ಬೈಲಾದುವದು ಹಿಂತಾ ಜಾಡಿ ॥1 ॥

ಅಳತಿ ಪ್ರಮಾಣೆ ಮಡದಾನೆ ದಶಕಂಠಾ
ಹಿಂತ ಆರಣ್ಯದೊಳು ಶಿವ ಹಾಕ್ಯಾನ ನಮಗ ಗಂಟ
ನಿನಗ ಬಿಟ್ಟರ ಶಿವನ ಆಣಿ ತಿಳಿಖೋಡಿ
ಹಿಂತಾ ಪಂತಾ ಎತ್ತಿ ನಿನ್ನಗ ನೋಡಿ ॥2 ॥

ಎಲಾ ಸುಂದರಿಯೇ ಹೀಗೆ ಹೇಳುವದು ಸರಿಯಲ್ಲಾ. ಎಲಾ ಹುಚ್ಚ ಮೂಳಿಯೆ ಸುಭದ್ರಾ ಅರ್ಜುನನ ಮೇಲೆ ಮನಸಿಟ್ಟು ದಾರಿಗೆ ಹೇಳಲಾರದೆ ಹೋಗಲಿಲ್ಲವೆ? ಪ್ರಾರಬ್ಧ ಭೋಗಕ್ಕೆ ದಾರು ಈಡೇ ಇಲ್ಲಾ. ಸಾಕು ಮಾಡು ನಿನ್ನ ಕೋಕ ಶಾಸ್ತ್ರ.

ಚಂದ್ರಾವತಿ :

ಪಂತ ಯಾತಕ ಹುಚ್ಚನಾಯಿ ಪ್ರಕಾರ ಗಣಸಾ
ಶಾಂತನಾಗು ಮಣಿವಲ್ಲದು ನಿಮ್ಮ ಮನಸಾ ॥ಪಲ್ಲ ॥

ನಾಯಿ ಎಲುವ ಮೆಲಿವದು ಹಲ್ಲುಕಚ್ಚಿ
ತನ್ನ ಹಲ್ಲ ಜೊಲ್ಲ ತನಗ ಆಗುವದು ರುಚಿ
ನಿದ್ರಿದೊಳಗಿಂದ ಏಳಪ್ಪಾ ಬಿದ್ದಾದ ಕನಸಾ
ಕನಸಿನೊಳು ಸಿಗುವದು ಏನು ಪರಸ ॥1 ॥

ಕಾಮಯೆಂಬ ಕೋಣಗ ಹಾಕಲಿಲ್ಲಾ ಮುಗರಾಣಿ
ಯಮರಾಜನ ಬಲ್ಲಿ ಏನ ಝಡತಿ ಕುಡತಿ ಹಗರಾಣಿ
ರಾಜೆನ ಪದವಿ ನಿನ್ನ ಬಲ್ಲಿ ಇಲ್ಲ ದಿನಸ
ಪರ ಹೆಣ್ಣು ನರಕದ ಸಹವಾಸ ॥2 ॥

ನಿಮ್ಮಂಥವರು ಇರೋದಿಲ್ಲಾ ಇನ್ನ ಮುಂದ
ಏಕ ವಚಿಸಿ ಏಕ ಪತನಿ ಆನಂದ
ಶಾಣೇರ ಕೆಡಸಿಟ್ಟಿರಿ ಮರ್ಥ್ಯೆದ ಮನಸ
ತಿಳಿದು ನೋಡು ಪದ ಮಾಡ್ಯಾನ ದೇವಿದಾಸ ॥3 ॥

ಅಪ್ಪಾ ರಾಜೇಂದ್ರ ಲಂಕಾ ಪಟ್ಟಣದ ರಾವಣನು ಪರಮೇಶ್ವರನ ಬದಿಲಿ ಹೋಗಿ ಜುಲ್ಮಿಲಿಂದ ಶ್ರೀ ಪಾರ್ವತಿಗೆ ತಂದು ಅಪಮಾನವಾಗಲಿಲ್ಲವೆ. ಇನ್ನ ಮೇಲೆ ತಿಳಿದು ನಿನ್ನ ನಗರಕ್ಕೆ ಹೋಗು. ನನ್ನ ಗತಿ ಆ ಶಿವನೇ ಬಲ್ಲ.

ಮೋಹನ :

ಬಲ್ಲ ಗರತಿ ಎಂದು ಬಡಿವಾರ ಹೇಳುಬ್ಯಾಡ
ಬಡದು ಹೇಳುವೆ ತುರುಬ ಹಿಡದು ಹೇಳುವೆ
ಸೀರಿ ಸೆಳದು ಬಿಡುವೆ, ಹಾಂ ಬಲ್ಲಗರತಿಯೆ ॥1 ॥

ಉಮಾದೇವಿಯಂತ ಪುರುಷ
ಪ್ರೇಮ ಆಗಮನದಲ್ಲಿ ಹರುಷ
ತಮಾಮ ಬಂಧು ಬಳಗಕ ಬಿಡುವೆ
ಕಮಲಗಂಧಿ ನಿನ್ನ ಒಯ್ಯುವೆ
ನಿನ್ನ ಬಿಟ್ಟೆನಂದರ ಆಯಿತು ಧಗಿಯೆ
ಸುಮಾರ ಆದತ್ತು ಕೆಣಕಿ ಬಿಟ್ಟಿದ ಮೇಲೆ ನಗಿಯೆ ॥2 ॥

ಬಲ್ಲಕಿನಾದರೆ ಬಲ್ಲ ಅನುಬ್ಯಾಡ
ಕಲ್ಲಿಗಿ ಕರುಣ ಬರುತಾದ ನೋಡ
ಮಹಾಮಾಯಿ ಕುಚದೊಳು ವಿಷಾ
ರೇವಣಸಿದ್ಧ ಕುಡದ ಸರಾಸ
ಮಹಾಮಾಯಿ ಪಂಥ ಮುರಿಲಿಲ್ಲವೆ
ಇದರಂತೆ ತಿಳಿದು ಎನ್ನ ಮಂದಿರಕೆ ನಡಿಯೆ
ಇನ್ನು ಮೇಲೆ ಹೇಳಬ್ಯಾಡ ಶಾಸ್ತ್ರದ ನುಡಿಯೆ ॥3 ॥

ಮೋಹನ : ಎಲಾ ಸುಂದರಿ ಇನ್ನು ತಡಾ ಮಾಡದೆ ಈ ಕುದರಿ ಮೇಲೆ ಕೂಡುವಂತವಳಾಗು.

ಚಂದ್ರಾವತಿ : ಹೇ ಸದ್ಗುರುನಾಥ ಈ ಕಾಂತಾರದೊಳು ಹೆಂತ ಸಂಕಷ್ಟ ತಂದಿಟ್ಟಿ. ಇರಲಿ ಈ ಕುದರಿ ಮೇಲೆ ಕುಂತ ಕ್ಷಣಕೆ ವಿಕ್ರಮ ರಾಜೇರ ಕುದರಿ ನೂರ ಗಾವುದ ಹಾರಿದಂತೆ ಹಾರಿಸುವದೆ ನಿನ್ನ ಸತ್ಯವು. ಒಳ್ಳೇದು ರಾಜೇಂದ್ರ ನಿನ್ನಂತೆ ಆಗಲಿ ನನಗೆ ಕುದರೆ ಮೇಲೆ ಕೂಡಿಸು.

[ಚಂದ್ರಾವತಿಯನ್ನು ಹೊತ್ತ ಕುದರಿ ಮಾಯವಾಗುವದು]

ಮೋಹನ : ಆಹಾ ಹೆಂತಾ ಚಮತ್ಕಾರವು. ಒಮ್ಮಿಂದೊಮ್ಮೆ ಕುದರಿ ಟಂಣಂತೆ ಹಾರಿ ಮಾಯವಾಯಿತು. ಹೇ ದೇವಕಿ ನೀನು ಲಕ್ಷ್ಮಿಯೊ, ಸರಸ್ವತಿಯೋ ಏನು ಪಾರ್ವತಿಯೋ ನಾನು ಅರಿಯೆನು. ತಿಳಿಯದೆ ಅಪರಾಧ ಮಾಡಿದೆ ಕ್ಷಮಾ ಮಾಡು ತಾಯಿ.

[ಹೊಗುವನು, ಗೌಳಿಗರು ಎಮ್ಮೆ ಮೇಯಿಸುತ್ತ ಇರುವರು, ಚಂದ್ರಾವತಿ ಬರುವಳು]

ಬಾಳಾಜಿ : ಏನೋ ಖಂಡಪ್ಪಾ ಸಣ್ಣ ಹೆಣ್ಣ ಮಗಳು ಒಬ್ಬಕಿ ಅರಣ್ಯದೊಳು ಹೊಂಟ ಕಾರಣವೇನು? ಮಾತಾಡಿಸಿ ಬರುವೆ. ಯಾರಮ್ಮ ತಾಯಿ, ಈ ಅರಣ್ಯಕ್ಕೆ ಬಂದ ಕಾರಣವೇನು ?

ಚಂದ್ರಾವತಿ : ಬಾಳಾಜಿ ಮುತ್ಯಾ ಎನ್ನ ಗುರುತೆ ಹಿಡಿಲಿಲ್ಲವೆ. ನಾನು ರಾಜಾ ಭೂಪಾಲನ ಸತಿ. ನನ್ನ ತಾಯಿ ನಿರ್ಮಲದೇವಿ ಎನ್ನ ತಂದೆ ನೀಲಕಂಠರಾಜಾ. ಬ್ರಹ್ಮ ನಗರ ನಮ್ಮ ಊರು. ಇನ್ನು ನನ್ನ ವನವಾಸ ಹೇಳಲಾರೆ. ತಮ್ಮ ಮನೆಗೆ ಕರಕೊಂಡು ಒಯ್ಯುವಂತವರಾಗಿರಿ. ನೀನೇ ತಂದಿ ನೀನೇ ಬಂಧು ಬಳಗ.

ಬಾಳಾಜಿ : ಅಮ್ಮಾ ಚಂದ್ರಾವತಿ ಮಗುವೆ ನಿನಗೆ ಹಿಂತ ವನವಾಸವು ಯಾಕೆ ಬಂತು. ತುಂಬಿದ ದಿನದಂತೆ ಕಾಣುವುದು. ನನ್ನ ಮನೆಯೆಂದರೆ ಆ ನಿನ್ನ ತಾಯಿ ತಂದೆ ಮನೆಯಂತೆ ತಿಳಿದು ನಡಿಯಮ್ಮ. ಮುಂದೆ ದೇವರೆ ಗತಿಯು. ತಮ್ಮ ಖಂಡಪ್ಪ ಈಕಿಯ ಮನೆಗೆ ಕರೆದೊಯ್ಯುತ್ತೇನೆ, ಸಂಜೆ ಮುಂದೆ ಎಮ್ಮಿಗಳ ಹೊಡಕೊಂಡು ಬಾ.

ಖಂಡಪ್ಪ : ನೀವು ಹೇಳಿದಂತೆ ಆಗಲಿ ನಾನು ಸಂಜೆಗೆ ಎಮ್ಮೆ ಹೊಡೆದುಕೊಂಡು ಬರುವೆ.

[ಚಂದ್ರಾವತಿ ಗೌಳಿಗೇರ ಮನೆಯಲ್ಲಿರುವಳು]

[ಎರಡು ರಾಕ್ಷಸಿಗಳು ಪದ ಹಾಡುತ್ತ ಬರುವವು]

ಮನುಷ್ಯ ಜಾನವರಕ್ಕೆ ನಾವು
ಭಕ್ಷಿಸಿ ಬಿಡುವಂತಾ ರಾಕ್ಷಸಿ
ಜಲ್ಮಾ ನಮ್ಮದು ಭುಪ್ ಭುಪ್ ಭುಪ್ ॥1 ॥

ಎರಡು ಗಾಡಿಯ ಅನ್ನಾ
ಎರಡು ಮನುಷ್ಯ ಪ್ರಾಣ
ನಿತ್ಯ ತಿನ್ನುವದು ನಾವು ಗಪ್ ಗಪ್ ಗಪ್ ॥2 ॥

ರಾಜಾ ಪ್ರಜಾಗಳೆಲ್ಲಾ
ಥರ ಥರ ನಡಗಿ ಸುಮ್ಮನೆ
ಕೂಡುವರು ಚುಪ್ ಚುಪ್ ಚುಪ್ ॥3 ॥

1ನೇ ರಾಕ್ಷಿಸಿ : ಯಾಕಲೇ ಬ್ರಹ್ಮ ಪಿಶಾಚಿ ಇವತ್ತು ಮಧ್ಯಾನ ಹೊಳ್ಳತು ಗಾಡಿ ಕಾಣೇವಲ್ಲದು.

2ನೇ ರಾಕ್ಷಿಸಿ : ಹೊಂದೋ ಮಹಿಷ್ಯಾ ನಮ್ಮ ಹೊಟ್ಟಿ ಒಳಗ ಅರ್ಭಾಟ ಬೆಂಕಿ ಹತ್ತಿ ಹೋಗ್ಯಾದ.

1ನೇ ರಾಕ್ಷಿಸಿ : ನಡಿ ನಡಿಯೋ ನಮಗೆ ಯಾರ ಅಂಜಿಕಿ. ನಗರದೊಳಗೆ ಹೊಕ್ಕಿ ಮನಸಿಗೆ ಬಂದಿದ ವಸ್ತು ತಿಂಬೋಣ ನಡಿ.

2ನೆ ರಾಕ್ಷಿಸಿ : ಖರೆನೆ ನಿನ್ನ ಮಾತು ಖರೇನೆ. ಇಷ್ಟು ದಿವಸ ಮುದುಕರಿಗೆ ತಿಂದು ಬಾಯಿ ಕೊಳಿಕ ಆಗ್ಯಾದ. ನಮ್ಮ ಮನಸಿನಂತೆ ಮಾಡೋಣ ನಡಿ.

[ಹೋಗುವವು, ಡಂಗುರ ಹೊಡಿಯುವರು]

ಹಲಗ್ಯಾ : ಹೇಳಿಲಂದಿರಿ ಕೇಳಿಲಂದಿರಿ ರಾಜಾ ಭೂಪಾಲನ ಸತಿಯಾದ ಚಂದ್ರಾವತಿಗೆ ಗಂಡಸ ಮಗ ಹುಟ್ಟಿದ್ದಾನೆ. ಕೂಸಿಗೆ ಚಂದ್ರಶಿರೋಮಣಿ ಹೆಸರು ಇಟ್ಟಿದ್ದಾರಯ್ಯಾsss.

[ಸಕ್ಕರೆ ಹಂಚುವರು]

[ಜಗನ್ನಾಥ ರಾಜಾ ಕೂಡುವನು, ಮಂತ್ರಿ ಪದ ಹಾಡುತ್ತ ಬರುವನು]