ಮಂತ್ರಿ : ಕೇಳೆನ್ನ ರಾಜಾ ರಾಕ್ಷಸಿ ಉಪದ್ರ ನಗರಕೆ ॥ಪಲ್ಲ ॥

ಮುಂಜಾನೆ ಹಿಡದು ಸಂಜೆಯತನ
ಅಂಜಕಿ ಇಲ್ಲದಂಗಊರಾಗ
ದುಂಧ ಎಬ್ಬಸ್ಯಾವ ತಿರುಗಾಡಿ
ಏಸೋ ಮಂದಿಗಿ ತಿಂದು ಏಸೋ
ಮಂದಿಗಿ ಮಾಡ್ಯಾವ ಹೊಡಿ ಬಡಿ
ನಗರವೆಲ್ಲಾ ಖಾಲಿ ಜನಾ ನಡದಾರಪ್ಪ ಓಡೋಡಿ ॥1 ॥

ಜಗನ್ನಾಥ : ಆಹಾ ಮಂತ್ರಿ ಹೆಂಥಾ ಸುದ್ದಿ ತಂದಿ ದರ್ಬಾರಕೆ ॥ಪಲ್ಲ ॥

ಜಗನ್ನಾಥ ರಾಜೇನ ಊರಿಗಿ ರಾಕ್ಷಿಸಿ ಹತ್ತಿ
ಹೆಂಥಾ ಅಪಕೀರ್ತಿ ಬೆಳಿತು
ಶಿವಶರಣರ ನಗರ ಹಾಳಾಗ ಯಾಳೆ ಬಂತು
ಇದಕ್ಕೇನು ಉಪಾಯ ಮಂತ್ರಿ ಹೇಳು ಲಗೂ ಕುಂತು ॥1 ॥

ತಮ್ಮಾ ಮಂತ್ರಿ ನಮ್ಮ ಘೌಜ ಖಳಸಿ ಆ ರಾಕ್ಷಸರ ವಧಾ ಯಾಕ ಮಾಡಲಿಲ್ಲಾ ?

ಮಂತ್ರಿ :

ಏನು ಹೇಳಲಿ ರಾಜಾ ಫೌಜೆಲ್ಲಾ ಆಯಿತು
ಅಡಿ ಪಾಲಾ ॥ಪಲ್ಲ ॥

ರಾಕ್ಷಸಿ ಅಂದರ ಹೆಂತಾ ರಾಕ್ಷಸಿ
ಒದಿತಂದರ ಗೋಡಿಗಿ ಝಾಡಿಸಿ
ಆವಾರ ಬಿದ್ದು ಹೋಯಿತು ಧಡಾ ಧಡಾ
ನಮ್ಮ ದಂಡದಾಳೆ ದಿಕ್ಕತಪ್ಪಿ ಭಡಾ ಭಡಾ ॥1 ॥

ಅಣ್ಣಾ ರಾಜೇಂದ್ರನೆ ಬಡಗಿ ಸಿಟ್ಟವು ಗಡಗಿಗೆ ಕಾಳವು ಕಬ್ಬಿಣಕ್ಕೆ ಈಡೆ ಇಲ್ಲಾ. ಅಕೋ ನಮ್ಮ ಸೀಮಿ ಗುಡ್ಡದ ಮೇಲೆ ನಿಂತು ಧ್ವನಿ ಮಾಡುತ್ತಿವೆ ಕೇಳು.

ಜಗನ್ನಾಥ :

ಮಂತ್ರಿವರ್ಯನೆ ಬರಿ ಪತ್ರ ಲಗೂವಿನ್ನ
ಅಂತ್ರ ಮಾರ್ಗದಿಂದ ಬರಬೇಕು ಉತ್ತರಯೆನ್ನ ॥ಪಲ್ಲ ॥

ಗ್ರಾಮದೊಳಗ ಹೊಡಸಪ್ಪ ಡೊಂಗುರ
ಬ್ರಹ್ಮ ರಾಕ್ಷಸಿಗಿ ಹೊಡದವನ ಶೃಂಗಾರ
ಮಗಳಕೊಟ್ಟು ಮನಿಮುಂದ ಮಾಡುವೆ ಲಗ್ನ
ಅರ್ಧರಾಜ್ಯ ಕೊಡುವೆನು ರಾಜೆಸ್ಥಾನ ॥1 ॥

ಜಯಸಿಂಗ ವಾಶಾ ಶಿವಪುರ ಬಲಭೀಮ
ಎನ್ನಾ ಪಂತ ಗೆಲ್ಲಿಸು ನಿಷ್ಕಾಮ
ತಮ್ಮ ಮಂತ್ರಿ ಲಗೂ ಹೊಡಿಸೊ ಡಂಗೂರವಿನ್ನ
ಸಂತವಾಣಿ ದೇವಿದಾಸ ಬರದ ಕಥನ ॥2 ॥

ಜಗನ್ನಾಥ : ತಮ್ಮಾ ಮಂತ್ರಿಯೇ ಸದ್ಗುರು ಬಲಭೀಮ ಎನಗೆ ಇದ್ದ ಬಳಿಕ ಹಿಂಥಾ ರಾಕ್ಷಸರು ಈಡೇ ಇಲ್ಲಾ. ಹಿಂದಕ್ಕೆ ಹಿಂಥಾ ಎಷ್ಟೋ ರಾಕ್ಷಸರು ಮಾರುತಿಲಿಂದ ಮಡಿಲಿಲ್ಲವೆ ?ಲಗೂ ನಾನು ಹೇಳಿದ ಪ್ರಕಾರ ಡೊಂಗರ ಹೊಡಿಸುವಂತವನಾಗು.

ಮಂತ್ರಿ : ತಮ್ಮ ಅಪ್ಪಣೆಯಂತೆ ಆಗಲಿ

[ಡೊಂಗುರ ಹೊಡೆಯುವರು]

ಹಲಗ್ಯಾ : ಹೊಸ ಸುದ್ದಿ ಕೇಳಿಲಮದಿರಿ ಜಗನ್ನಾಥ ರಾಜನ ಊರಿಗೆ ರಾಕ್ಷಸಿ ಹತ್ತಿವೆ. ಆ ರಾಕ್ಷಸರನ್ನು ಹೊಡೆದ ಶೂರರಿಗೆ ಮಗಳ ಕೊಟ್ಟು ಲಗ್ನ ಮಾಡುತ್ತಾರಪ್ಪೊ.

[ಚಂದ್ರವತಿ, ಚಂದ್ರ ಶಿರೋಮಣಿ ಬಗೀಚಾದೊಳಗೆ ಪದ ಹಾಡುತ್ತ ಬರುವರು]

ಚಂದ್ರಶಿರೋಮಣಿ :

ಸ್ವಲ್ಪ ಇಲ್ಲೆ ಕೂಡಮ್ಮ ತಾಯಿ ಜನನಿ
ಕಲ್ಪವೃಕ್ಷ ಬಾಗ ತಿರುಗಿ ಬರತೀನಿ ॥ಪಲ್ಲ ॥

ಪರಬ್ರಹ್ಮ ಮಾಡಿಟ್ಟಾನ ಆನಂದ
ಬೇರೆ ಬೇರೆ ಪುಷ್ಪವು ಸುಗಂಧ
ಮದನ ಮಸ್ತ ಇದು ನೋಡು ಖ್ಯಾದಿಗಿ ತೆನಿ
ದಿನಕಾ ಪ್ಯಾಸಾ ನೋಡಮ್ಮಾ ರಾತಕಿ ರಾಣಿ ॥1 ॥

ಅಮ್ಮಾ ಜನನಿ ಅಕೋ ಅಲ್ಲಿ ನೋಡು ಒಂದೇ ಗಿಡಕ್ಕೆ ಸಾವಿರಾರು ಬಣ್ಣದಪುಷ್ಪಗಳು ಕಾಣಿಬರುತ್ತವೆ. ನಾನು ಹೋಗಿ ತರುವೆನು.

ಚಂದ್ರಾವತಿ :

ಅತ್ತ ಇತ್ತ ತಿರುಗು ಬ್ಯಾಡ ಕಂದ !
ಹೊತ್ತ ಆಗುವದು ಬಾ ಮಗ ಮುಕುಂದ ॥ಪಲ್ಲ ॥

ಮಹಾದೇವನ ಪೂಜಾ ಮಾಡಿ ಹೋಗುಮಿ ನಡಿಯೋ
ಮುತ್ಯಾ ಬಾಳಾಜಿ ನೋಡುತಾನ ನಮ್ಮ ದಾರಿಯೋ
ಚಂದ್ರಶಿರೋಮಣಿ ಹಟಾ ಬ್ಯಾಡೋ ಗೋವಿಂದ ॥1 ॥

ಚಂದ್ರಶಿರೋಮಣಿ :

ಬಿಡು ಅಮ್ಮಾ ಒಂದು ಹೂವಾ ತರತಿನಿ
ತಡ ಮಾಡೋದಿಲ್ಲಾ ಅಮ್ಮಾ ತಾಯಿ ಜನನಿ ॥ಪಲ್ಲ ॥

ತಂದ ಮೇಲೆ ಪೂಜಿಗಿ ಹೋಗೂಣ ತಾಯಿ
ಬರುವಸ್ಥನಕ ನೀ ಇಲ್ಲೆ ಕೂಡೆ ತಾಯಿ
ಹೆಂತಾ ಮಾಲಿಕ ಮಾಡ್ಯಾನ ಹೂವು ಕಾಯಿ
ದೇವಿದಾಸ ಕಿ ಕಸಂ ವೈಸೆ ಲಿಖವಾಯಿ ॥1 ॥

ಚಂದ್ರಾವತಿ : ಚಂದ್ರಶಿರೋಮಣಿ ಕಂದನು ಆ ಹೂವಿನ ಗಿಡಕ್ಕೆ ಮುಟ್ಟಿದ ಕೂಡಲೆ ನನ್ನ ಬಲಗಣ್ಣ ಯಾಕೆ ಹಾರಿತು ? ಇದೇನು ಅಪಶಕುನವಾಯ್ತು.

[ಚಂದ್ರಶಿರೋಮಣಿಗೆ ಹಾವು ಕಡಿದು ಅಮ್ಮಾ ಅಮ್ಮಾ ಎಂದು ಒದರುವನು]

ಚಂದ್ರಾವತಿ : ಯಾಕ ಮಗುವೆ ಯಾಕ? ಅಯ್ಯೋ ಅಯ್ಯೋ ಶಿವನೆ ಮಗನಿಗೆ ಸರ್ಪ ಮುಟ್ಟಿದಂತೆ ಕಾಣುವುದು. ಇನ್ಯಾಂಗ ಮಾಡಲಿ ಮಗಾ ಚಂದ್ರಶಿರೋಮಣಿ ಇದು ಹೆಂತಾ ಅನ್ಯಾಯವಾಯಿತಲ್ಲಾ.

ಚಂದ್ರಶಿರೋಮಣಿ :

ಅರೆರೆರೇ ಕಡಿತಮ್ಮಾ ಮಿಡಿನಾಗರ
ನಮ್ಮ ಮೇಲೆ ಮುಸಿದ ದಯಾಸಾಗರ ॥ಪಲ್ಲ ॥

ಏ ತಾಯಿ ನಿನ್ನ ಮಾರಿ ಎರವಾಯಿತೆ
ನಿನ್ನ ಪಾಲಕ ನಡು ಮಧ್ಯಾನ್ನಕ ಹೊತ್ತ ಹೋಯಿತೆ
ಎನ್ನ ನ್ಯಾಲಗಿ ಎಳಿವದು ಸರಸರ
ಹೆಂತ ಹಣಿಬಾರ ಬರದಿಟ್ಟ ಕವಿಗಾರ ॥1 ॥

ಅಮ್ಮ ತಾಯಿ ನನ್ನ ಚಿಂತಿ ಬಿಡು. ನನ್ನನ್ನು ಎತ್ತಕೊಂಡು ಮಹಾದೇವನ ಕಡೆಗೆ ಒಯ್ಯು. ನಿನ್ನನ್ನು ಮುತ್ಯಾ ಬಾಳಾಜಿ ನೋಡಿ ಕೊಳ್ಳುವನು.

ಚಂದ್ರಾವತಿ : ಬಾ ಮಗುವೆ ನಿನ್ನಗೆ ಎತ್ತಿಕೊಂಡು ಮಹಾದೇವನ ಬಲ್ಲಿ ಒಯ್ಯುವೆನು. ಹೇ ಮಹಾದೇವ ಇದು ಹೆಂತಾ ವಿಚಿತ್ರ. ನಿನ್ನ ಪಿಂಡಕ್ಕೆ ನನ್ನ ತೆಲಿ ಹೊಡಿದು ಪ್ರಾಣ ಕೊಟ್ಟರೆ ನನ್ನ ಚಿಂತೆ ದೂರವಾಗುವದು. ಬದುಕಿದ್ದರೆ ಇದು ಹೆಂತಾ ಚಿಂತಿಯು ಅಯ್ಯೋ ಮಗನ ಪ್ರಾಣ ಹೋಯಿತಲ್ಲಾ.

ಚಂದ್ರಶಿರೋಮಣಿ ನಿನ್ನ ಮರಿತು ನಾ :
ಹ್ಯಾಂಗ ಕೂಡಲಿ ॥ಪಲ್ಲ ॥

ಹೋದಿ ಮಗಾ ಹೂವು ಕಡಿಲಾಕ
ಎರವಾಯಿತು ನಿನ್ನ ಮುಖ
ಎಲ್ಲಿ ಗಿಡ ಹುಡುಕಲಿ
ಭೂಮಿ ಮೇಲೆ ಇರಬಾರದುವಿನ್ನಾ
ಕೂಡುವೆನು ನಿನ್ನ ಸರಿ ಪ್ರಾಣ
ಉಡಿ ಆಯಿತೆ ನಂದು ಖಾಲಿ
ಬೀಳಲೇನು ಗಿಡಕ ಸೂಲಿ
ತೆಲಿ ವಡಕೋಲೇನು ಕಲ್ಲಿಲಿ
ಬಲಭೀಮ ನೋಡ ಕಣ್ಣೀಲಿ ॥1 ॥

[ಬಾಳಾಜಿ ಮುತ್ಯಾ ಬರುವನು]

ಬಾಳಾಜಿ : (ಚಂದ್ರಾವತಿ, ಚಂದ್ರಶಿರೋಮಣಿ ಬಗೀಚಾಕ್ಕೆ ಹೋಗಿ ಬಹಳ ಹೊತ್ತಾಯಿತು ಏಕೆ ಬರಲಿಲ್ಲ ? ಅಕೋ ಅತ್ತಕಡೆ ಅಳುವ ಶಬ್ದ ಕೇಳಿ ಬರುತ್ತಿದೆ. ಮುಂದಕ್ಕೆ ಹೋಗಿ ನೋಡುವೆನು). ಅಮ್ಮಾ ಚಂದ್ರಾವತಿ ಇದೆನು ಘಾತವಾಯಿತು. ನಾನು ಎಷ್ಟು ಮಾಡಿದೆಲ್ಲಾ ದಂಡವಾಯಿತು. ಇನ್ನು ಈ ಭೂಮಿ ಮೇಲೆ ಯಾಕೆ ಇರಬೇಕು. ಚಂದ್ರಾವತಿ ನಾನು ಈ ಮಹಾದೇವಗೆ ತೆಲಿ ಹೊಡೆದು ಪ್ರಾಣ ಕೊಡುವೆನು.

ಚಂದ್ರಾವತಿ : ಅಯ್ಯೋ ಮುತ್ಯಾ ನೀನೂ ಈ ಧರಣಿ ಮೇಲಿಂದ ಹೋದ ಮೇಲೆ ನಾನು ಹೇಗೆ ಬಾಳಲಿ ಹುಟ್ಟಿದ ಮಗ ಸಲುಹಿದ ತಂದೆ ಹೋದ ಮೇಲೆ ನಾನು ಇರಲಾರೆನು.

ಹೆಂತಾ ದಗಾ ಆಯಿತು ಶಿರೋಮಣಿಯೆ
ನಿನ್ನ ಸುಂದರ ರೂಪ ಎಲ್ಲಿ ಬಿಟ್ಟು ಹೋಗಲಿ ಗುಣಮಣಿಯೆ

ಡಾಗ ಕುಂತು ಈ ಮನಸಿಗಾ
ಮಗ ನಿನ್ನ ಬಿಟ್ಟಿರಲಿ ಹ್ಯಾಂಗ
ಎಲ್ಲಿ ಕುಂತಿತು ಸರ್ಪ ನಿನ್ನ ಪಾಲೀಗಾ
ಬೈಯಲಿ ಹ್ಯಾಂಗ ಆ ಸರ್ಪಿಗಾ ॥1 ॥

ಅಯ್ಯೋ ಶಿವನೆ ! ಮಗನು ಇನ್ನೇನು ಮಾತನಾಡುವನು. ನಾನು ಇಲ್ಲೆ ಬಿದ್ದು ಪ್ರಾಣಕೊಡುವೆನು.

ಪರಮಾತ್ಮ :

ಪಿಂಡದೊಳಗಿಂದ ಪ್ರಕಟವಾಗಿ
ಭಕ್ತರ ಸಲುವಾಗಿ ಮರ್ತ್ಯೆಕ ಬರಬೇಕ
ನಿಜಭಕ್ತರ ಉದ್ಧಾರ ಮಾಡಲಿಕ ॥ಪಲ್ಲ ॥

ಚೌದ ಕಲ್ಪ ಮಾರ್ಖಂಡಗ ಆಯುಷ್ಯ ಕೊಟ್ಟ
ಕಮಲದಾಸಗ ಕುತ್ತಗಿ ಹಚ್ಚಿ ಬಿಟ್ಟಾ
ಚಂಗಳವ್ವನ ಕೂಸಿಗಿ ಒಳ್ಳಾಗ ಕುಟ್ಟಿಸಿ ಬಿಟ್ಟಾ
ಗೋರಾ ಕುಂಬಾರನ ಮಗನಿಗಿ ಎಬ್ಬಿಸಿಟ್ಟಾ ॥1 ॥

ಮಿತಿ ಮೀರಿದವರಿಗೆ ಹಿಡಸಿ ಸುಟ್ಟ
ನೀತಿ ನಡಿರಿ ಜಗವೆಲ್ಲಾ ಅಳಿರಿ ಸಿಟ್ಟಾ
ಪಂಚತತ್ವ ಒಂದೀನಾ ಆಗುವದು ಹಿಟ್ಟಾ
ಬೈಲಿಗಿ ಬೈಲಾ ನಿರ್ಬೈಲಾದು ಆಟಾ ॥2 ॥

[ಆ ಪಿಂಡದೊಳಗಿಂದ ಶಿವನು ಪ್ರಕಟವಾಗುವನು]

ಶಬ್ಬಾಸ್ ಎಲಾ ಬಾಳಾಜಿ ಅಮ್ಮ ಚಂದ್ರಾವತಿ ನಿಮ್ಮ ಭಕ್ತಿಗೆ ಮೆಚ್ಚಿದೆನು. ಹಿಂತಾ ಮೂಢ ಭಕ್ತಿಗೆ ನಾನು ಕಲ್ಲೊಳಗಿಂದ ಪ್ರಕಟವಾಗುವೆನು. ಭಕ್ತರ ಮನ ತೃಪ್ತ ಮಾಡಿಸುವೆನು. ಏಳೇಳು ಬಾಲಕ ಚಂದ್ರ ಶಿರೋಮಣಿ ನಿಮಗೆ ಜಯವಾಗಲಿ.

[ಎಲ್ಲರೂ ತಮ್ಮ ಸ್ಥಾನಕ್ಕೆ ಹೋಗುವರು]

[ಬಾಳೋಜಿ ಚಂದ್ರಶಿರೋಮಣಿ ಬರುವರು]

ಬಾಳೋಜಿ : ಎಲಾ ಚಂದ್ರ ತೇಜವುಳ್ಳ ಚಂದ್ರಶಿರೋಮಣಿಯೆ ಇತ್ತ ಬರುವಂತಹನಾಗು. ನೀನು ಬಾಣ ಹೊಡಿಯುವದರಲ್ಲಿ ನಿಪುಣನಾಗಿದಲ್ಲೊ ! ಈಗ ನಾನು ಒಂದು ಖೂನ ಇಡುವೆನು. ಬಾಣ ಹೊಡಿಯುವಂತವನಾಗು ನೋಡುವಾ.

ಚಂದ್ರಶಿರೋಮಣಿ :

ಒಳ್ಳೇದು ಮುತ್ಯಾ ನಿನ್ನಂತೆ ಆಗಲಿ.
ಧೈರ್ಯ ಖಡ್ಗ ಎಂಬೋ ಬಿಲ್ಲು
ಹಿಡದು ಬಾಣ ಹೊಡಿಯುವೆ
ಇಟ್ಟ ಖೂನಾ ಕೆಡಹುವೆ ॥ಪಲ್ಲ ॥

ನೋಡು ನೋಡು ಬಾಳೋಜಿ ಮುತ್ಯ
ಬಾಣಿನೊಳಗ ಹೆಂತಾ ಸತ್ಯ
ಅರ್ಜುನನ ಧನುರ್ವಿದ್ಯ
ನೀಕಲಿಸಿದ ನುಡಿವೆ; ಖಾಲಿ ಇಲ್ಲಾ ಗುರುವೆ ॥1 ॥

ಅಡಿ ಮಿಕ ಓಡುತ ಇರಲಿ
ಹರದಾರಿ ದೂರ ಇರಲಿ
ಗುರಿ ಹಚ್ಚಿ ನಿಶಾನ ಕಟ್ಟಿ
ಬಲಕಿಂವಿಗೆ ಹೊಡಿವೆ, ನಿಂತಲ್ಲೆ ನಿಲ್ಲುವೆ ॥2 ॥

ನಿಮ್ಮ ಅಜ್ಞಾ ಪ್ರಕಾರ ಇರುವೆ
ಹಮ್ಮ ಬಂದವರ ಜಮ್ಮ ಇಳಸುವೆ
ಜೈದ್ರಥಂದು ತೆಲಿಹಾರಿದಂತೆ
ಹಿಂತಾ ಧ್ಯಾಯಾ ಬೆಳಿಸುವೆ, ಬಲಭೀಮನ ನೆನಹುವೆ ॥3 ॥

ಮುತ್ಯಾ ನೀ ಕಲಸಿದ ಧರ್ನುರ್ವಿದ್ಯೆ ಚೆನ್ನಾಗಿ ಕಲ್ತು ಬಿಟ್ಟಿರುವೆನು. ನೀನು ಇಟ್ಟ ಖೂನಕ್ಕೆ ಪೆಟ್ಟ ಬಡದು ಖೂನವು ಕೆಳಗೆ ಬಿದ್ದಿತಲ್ಲಾ !

ಬಾಳೋಜಿ : ಶಬ್ಬಾಸ್ ಶಿರೋಮಣಿ ಜ್ಞಾನ ಬಂದ ಬಳಿಕ ನೇಮಕ ತಾನೇ ಗುರು ಇರುವನು.

ಬಾಳೋಜಿ :

ಒವ್ಹಾರೆ ಶಿರೋಮಣಿಯೆ !
ಭಲೇ ಹೊಡದಿ ಖೂನಕ ನೇಮ ಹಿಡದು ॥ಪಲ್ಲ ॥

ಮತ್ತೊಂದು ವಿದ್ಯಾ ಕೇಳ ತರ್ಕ ಹಿಡಿದು
ಅರುಯೆಂಬೋ ಈ ಚಡ್ಡಿಯ ಬಿಗಿದು
ಪಿಂಡದೊಳಗೆ ನೀ ದಿಂಡನೆ ಹೊಡಿದು
ಹಿಂಡ ದೈತ್ಯರ ಕಂಡು ಮುಂಡ್ಯಾ ಹೊಡೆದು ॥1 ॥

ಗರ್ವಿನ ಮೊಳಕಿ ಎಡಗೂಡ ಬಾರದು
ಕಾಮ ಕ್ರೋಧ ಎಂಬೋ ಹುಲಿಗಿ ತಡೆದು
ರಂಗ ರಂಗದೊಳು ಟಣ್ಣಂತ ಛಿಡಿದು
ವೈರಿ ಸಂವ್ಹಾರ ಮಾಡು ಭೀಮಗ ನೆನದು ॥2 ॥

ಮಗುವೆ ನಾನು ಹೇಳಿದ ಪ್ರಕಾರ ನಡೆದರೆ ಜಗದೊಳು ಅಮರ ಕೀರ್ತಿ ಇರುವದು.

ಚಂದ್ರಶಿರೋಮಣಿ : ಮುತ್ಯಾ ನೀನು ಹೇಳಿದ ಪ್ರಕಾರ ಸರಿಯಾಗಿ ನಡೆಯುವೆನು. ನಮ್ಮ ತಾಯಿ ದಾರಿ ನೋಡುವಳು ಬರುತ್ತೇನೆ.

[ಓಲೆಕಾರ ಪತ್ರ ಹಂಚುತ್ತ ಬರುವನು]

ಓಲೆಕಾರ : ಆಕೋ ನಾನು ಮಾತಿನ ದುಂಧಿನೊಳು ಮುಂದಕ್ಕೆ ನಡೆದೆನು. ಬಾಳೋಜಿ ತಾತಾನ ಮನಿಗೆ ಹೋಗುವೆನು. ಬಾಳಾಜಿ ತಾತಾನಿಗೆ ಶರಣು.

ನಮೋ ನಮೋ ಬಾಳೋಜಿ ತಾತಾ
ಪತ್ರವು ಹಿಡಿಯರಿ ॥ಪಲ್ಲ ॥

ಪತ್ರ ಬಂದಾದ ಬಹಳ ದೂರಿಂದಾ
ದಿಲ್ಲಿ ಇಲಾಖಾ ಶಹರ ಆನಂದ
ತಾಜಮಹಲ ಖಿಲ್ಯಾ ಆನಂದ
ಪತ್ರ ಬಂದಾದ ನೋಡ ಅಲ್ಲಿಂದ ॥1 ॥

ಬಂದಾದಪ್ಪಾ ಹೊಸ ಸುದ್ಧಿ
ದೇಶ ದೇಶ ಖಳುವ್ಯಾರ ವರದಿ
ಪತ್ರ ಓದಿ ನೋಡರಿ ಬುದ್ಧಿ
ಗೆದ್ದವರಿಗೆ ಬಂಗಾರ ಮುದ್ದಿ ॥2 ॥

ಪತ್ರದಲ್ಲಿ ಹೆಣ್ಣು ಉಂಟು
ಪತ್ರದೊಳು ರಾಜುಟಕಿವುಂಟು
ಘಳಸಕೋರಿ ಹಿಂತಾ ಗಂಟು
ಬಲಭೀಮನ ದಯದಿಂದ ಹೊಂಟು ॥3 ॥

ತಾತಾ ಈ ಪತ್ರ ಬಿಚ್ಚಿ ನೋಡರಿ.

ಬಾಳೋಜಿ : ತಮ್ಮ ಈ ಪತ್ರಿಕಾದೊಳು ಏನು ಇರುವದು.

ಓಲೆಕಾರ : ಬಾಳೋಜಿ ಜಗನ್ನಾಥ ರಾಜೇರು ಬಹಳ ಪತ್ರಗಳು ಛಾಪಿಸಿ ದೇಶದೊಳಗೆಲ್ಲಾ ಖಳಸಿದ್ದಾರೆ. ಇದು ಅಲ್ಲದೆ ದೊಡ್ಡ ದೊಡ್ಡ ಮನಿಗೆ ಮುಟ್ಟಿಸಬೇಕೆಂದು ಟಪಾಲು ಮಾರ್ಗದಿಂದ ಖಳವಿದ್ದಾರೆ ನೋಡಿರಿ.

ಬಾಳೋಜಿ : ಮಗುವೆ ಶಿರೋಮಣಿಯೆ ಪತ್ರ ಓದಿ ಹೇಳು ನೋಡೋಣ.

[ಶಿರೋಮಣಿ ಪತ್ರ ಕೈಗೆ ತೆಗೆದುಕೊಳ್ಳುವನು ಅಷ್ಟರಲ್ಲಿ ಚಂದ್ರಾವತಿ ಬರುವಳು]

ಚಂದ್ರಾವತಿ : ಬಾಳೋಜಿ ಮುತ್ಯಾ ನೀನು ಹಾಗೂ ಶಿರೋಮಣಿ ಬಹಳ ಹೊತ್ತಿನಿಂದ ಬರಲಿಲ್ಲಾ ಎಂದು ನಾನು ಬಂದೆನು. ಶಿರೋಮಣಿಯ ಕೈಯಲ್ಲಿಯ ಪತ್ರ ಎಲ್ಲಿಂದ ಬಂದಿತು. ಅದರಲ್ಲಿ ವರ್ತಮಾನವೇನು ? ಮಗು ಶಿರೋಮಣಿ ಪತ್ರ ಓದು ನೋಡೋಣ.

ಚಂದ್ರಶಿರೋಮಣಿ : ಅಮ್ಮಾ ಈ ಪತ್ರದ ಮತಲಪ ಹೀಂಗ ಇರುವದು. ಶ್ರೀಮಾನ ಜಗನ್ನಾಥ ರಾಜೆರ ನಗರಕ್ಕೆ ರಾಕ್ಷಸರ ಉಪದ್ರವು ಹೆಚ್ಚಾದ ಕಾರಣ, ಆ ರಾಕ್ಷಸರಿಗೆ ವಧಾ ಮಾಡಿದವರಿಗೆ ಮಗಳು ಕೊಟ್ಟು ಲಗ್ನ ಮಾಡಿ ನನ್ನ ಅರ್ಧ ರಾಜ್ಯ ಕೊಡುವೆನೆಂದು ಪತ್ರಿಕಾ ಖಳುವಿದ್ದಾರೆ. ಇರಲಿ ಮುತ್ಯಾ ನಿನ್ನ ದಯಾ ನನ್ನ ಮೇಲೆ ಇರಲಿ. ಆ ರಾಕ್ಷಸರ ಶೌರ್ಯ ನೋಡುವೆ. ಅಮ್ಮಾ ನಿನ್ನ ಅಪ್ಪಣೆ ಆಗಲಿಕ್ಕೆ ಬೇಕು. ಏಕೆಂದರೆ ಪತ್ರ ನೋಡಿ ಸುಮ್ಮನೆ ಇರುವದು ಕ್ಷತ್ರಿಯ ವಂಶಕ್ಕೆ ಕುಂದಲ್ಲವೆ ? ಮುತ್ಯಾ ನೀನು ತಾಯಿಯನ್ನು ಕರೆದುಕೊಂಡು ಮನೆಗೆ ಹೋಗಬೇಕು. ನಾನು ರಾಕ್ಷಸರ ಕಡೆಗೆ ಹೋಗುವೆನು.

ಚಂದ್ರಾವತಿ :

ಹೆಂತಾ ಪತ್ರ ಬಂತು ಹಿಂತಾ ಸಂಕಷ್ಟ ಪ್ರಸಂಗ
ಶಿರೋಮಣಿ ಸಂಗ, ಹಿಂತಾ ಪತ್ರ ಸುದ್ಧಿ ಕೇಳಿ ಮನ ಆಯಿತು ಧಮಗ ॥ಪಲ್ಲ ॥

ಹೆಂತಾ ಚಿಂತಿ ತರುತಿ ಮಹಾರಾಯಾ
ಅಂತ ಪಾರವಿಲ್ಲಾ ಪ್ರಭುರಾಯಾ
ಎಷ್ಟಂತ ಹಚ್ಚಿಟ್ಟಿದ್ದಿ ಮಾಯಾ
ಫಳ ಫಳದಲ್ಲಿ ಮಾಡುತಿ ಬ್ಯಾರೆ ಬ್ಯಾರೆ ರಂಗ ॥1 ॥

ಲಗೂ ಗಡಬಡ ಬ್ಯಾಡೋ ಹೇ ಕಂದ
ಸಮಾಧಾನ ಆಗೋ ಮುಕುಂದಾ
ಎನಗ ನೆನಪ ಬರುವದು ಎನ್ನೊಂದ
ಜಗಪಾಲಿಕಾ ಕಾಯೋ ಎನಗ ಮಾಡುಬ್ಯಾಡ ಮಂಗ ॥2 ॥

ಮಗುವೆ ಶಿರೋಮಣಿ ಗಡಬಡ ಬ್ಯಾಡಾ ಎನಗೆ ಒಮ್ಮಿಂದೊಮ್ಮೆಗೆ ವೀರ ಅಭಿಮಾನ್ಯನ ಮಾತು ನೆನಪಾಗಿ ಚಿಂತೆಯುಂಟಾಗಿದೆ. ಒಳ್ಳೇದು ಮುತ್ಯಾ ನಿಮ್ಮ ವಿಚಾರ ಏನಿರುವದು?

ಬಾಳೋಜಿ : ಮಗಾ ಚಂದ್ರಾವತಿ, ನೀನು ಮನಸ್ಸಿನ ಚಿಂತಿಬಿಡು. ಶಿರೋಮಣಿಯ ಮನಸ್ಸಿನಂತೆ ಆಗಲಿ. ಬೇಕಾದರೆ ನಾನು ನೀನು ಅವನ ಹಿಂದೆ ಹೋಗೋಣ.

ಓಲೆಕಾರ : ಬಾಳೋಜಿ ತಾತಾ ಒಳ್ಳೆ ಮಾತು ಆಡಿದ್ದೀರಿ. ನಾನು ನಿಮ್ಮ ಹಿಂದೆ ಬರುವೆನು. ಈಗ ಪತ್ರ ಕೊಡುವುದು ಸಾಕು.

ಚಂದ್ರಾವತಿ :

ತಾಪ ಆಗುವದು ಎನಗೆ
ಹೃದಯದೊಳಗೆ ॥ಪಲ್ಲ ॥

ಗತಿ ನಮಗ ಯಾರಿಲ್ಲವೇನು
ಮತಿಕೊಟ್ಟ ಶಿವನೆ ಬಂದು
ಮಾತಾ ನೀನೇ ಪಿತಾ ನೀನೇ
ಗತಿ ನೀನೇ ಹಿತ ನೀನೇ
ಹೇ ಗುರುರಾಯಾ ಮಾರುತಿರಾಯಾ
ಇರಲಿ ನಿಮ್ಮ ದಯಾ ದಾಸನಕವಿತಾ ॥1 ॥

ಬಾಳೋಜಿ ಮುತ್ಯಾ ನಿಮ್ಮ ಉಪಕಾರ ನಮಗೆ ಬಹಳ ಆಯಿತಲ್ಲಾ. ಮಗುವೆ ಶಿರೋಮಣಿ ಮುತ್ಯಾ ನಾನು ನೀನು ಕಲತು ಊಟಮಾಡಿ ಹೋಗಾಮಿ ನಡಿ.

ಚಂದ್ರಶಿರೋಮಣಿ : ಅಮ್ಮಾ ನಿನ್ನಂತೆ ಆಗಲಿ ನಡಿ. ವೀರ ಅಭಿಮನ್ಯನು ಚಕ್ರವ್ಯೆಹ ಭೇದಿಸಿದ ಕೀರ್ತಿ ಉಳಿಲಿಲ್ಲವೆ. ಇನ್ನು ಮೇಲೆ ಚಿಂತೆ ಏಕೆ ತಾಯಿ ಹೋಗಾಮಿ ನಡಿ. [ಸರ್ವರು ಹೋಗುವರು.]

[ಎರಡು ರಾಕ್ಷಸಿಗಳು ಇಬ್ಬರು ಹುಡುಗರನ್ನು ತೆಗೆದುಕೊಂಡು ಬರುವವು.
ಆ ಮಕ್ಕಳ ತಾಯಿ ಕೂಡಾ ಬರುವಳು.]

ಗೋದಾವರಿ : ಎಪ್ಪಾ ರಾಕ್ಷಸರೆ ಒಂದ ಮಾತ ನಂದ ನಡಸಿಕೊಡರಿ. ನಾನು ಮುಪ್ಪಿನವಳು ನಿಮ್ಮ ತಾಯಿ ಸರಿ. ಈಗ ಉಪಾಯವಿಲ್ಲಾ. ಒಂದು ಮಗನಿಗೆ ತಿನರ‌್ರಿ. ಒಂದ ಮಗನಿಗೆ ಸಂರಕ್ಷಣ ಸಲುವಾಗಿ ನನಗೆ ದಾನ ಬಿಡರಿ. ಇಷ್ಟೇ ನಿಮ್ಮ ಪಾದಕ್ಕೆ ಬಿದ್ದು ಬೇಡಿಕೊಂಬುವೆ.

ಬ್ರಹ್ಮರಾಕ್ಷಸಿ : ಎಲಾ ಮುದುಕಿ ನಿನ್ನ ಜೀವಾ ಬದುಕಿಸಿಕೊಂಡು ಸುಮ್ಮನೆ ಹೋಗು. ನಾವು ಈ ಎರಡು ಗಾಡಿ ಅನ್ನಾ ಮತ್ತು ನುಚ್ಚು ತಿಂಬೋತನ ನಿನ್ನ ಮಕ್ಕಳ ಸರಿ ಬೇಕಾದಷ್ಟು ಮಾತನಾಡಕೋ ಹೋಗು.

ಮಹಿಷ್ಯಾ ರಾಕ್ಷಸಿ : ಏನೋ ಬ್ರಹ್ಮಪಿಶಾಚಿ ಈ ಮುದುಕಿಗೆ ಪೈಲೆ ತಿಂಬೋಣ ಹಿಡಿ. ಸುಮ್ಮನೆ ಹೋಗಲ್ದು. ಏ ಪೋರಗಳೆ ಈ ಮುದುಕಿಗೆ ಸುಮ್ಮನೆ ಕೂಡಂತಾ ಹೇಳಿರಿ. ಏನೋ ಬ್ರಹ್ಮ್ಯಾ ಆ ಪೋರಗಳಿಗಿ ಎರಡ ಮಾತ ಹೇಳೋದರೊಳಗೆ ಒಂದ ಗಾಡಿ ಅನ್ನಾ ವೃತ್ತಿ ಹಾಕಿದಿ ಒಳ್ಳೇದು.

ಮುರಲಿಧರ : ಅಮ್ಮಾ ತಾಯಿ ಸುಮ್ಮನೆ ಇತ್ತಕಡೆ ಬಂದು ಕೂಡಮ್ಮ.

ಹರಿಹರ : ಅಮ್ಮಾ ತಾಯಿ ನಮ್ಮ ಭೋಗಕ್ಕೆ ಏನು ಮಾಡುವಿ.