ಹುಡುಗರು :

ನಿರ್ಬೈಲ ನಿಜಗುಣ ಸಗುಣ ನಿರ್ಗುಣ
ಬ್ರಹ್ಮಾ ನಿನ್ನ ಬಿಟ್ಟು ಇನ್ಯಾರು ಗತಿ ನಮಗೆ ॥ಪಲ್ಲ ॥

ಸಾಕ್ಷಿ ಹೇಳಲಿ ಗುರುವೆ ಇನ್ಯಾರಿಗೆ
ನಮಗೆ ಹೋಗದು ಬಂತು ರಾಕ್ಷಿ ಬಾಯದೊಳಗೆ
ಕ್ಷಣ ಕ್ಷಣಕ್ಕೆ ನಿಮ್ಮ ಮಹಿಮಾವು ತಿಳಿಲಾರದೆ
ಕಡಿಯಾಕ ಮಾಡೋ ಸ್ವಾಮಿ ಹಿಂತಾ ಹೊತ್ತಿಗೆ ॥1 ॥

ಪ್ರಲ್ಹಾದ ಭಕ್ತಗೆ ಅಗ್ನಿದೊಳು ಉಳಸಿದಿ
ಭಾರಿ ಸಭಾದಾಗ ದ್ರೋಪದಿಗಿ ಮಾನ ಕಾಯ್ದಿದಿ
ತ್ರಾಯ ತ್ರಾಯ ನಿಮ್ಮ ವರ್ಣಕೆ ನಿಲಕಿಲ್ಲಾ
ಬಾ ಅಣ್ಣಾ ಬೀಳರಿ ಇನ್ನಾ ತಾಯಿ ಕೊರಳಿಗೆ ॥2 ॥

ಹರಿಹರ : ಅಪ್ಪಾ ರಾಕ್ಷಸರೆ ಪೈಲೆ ನನಗೆ ತಿನ್ನರಿ. ಹಿಂದಿನ ಸರಿ ಅಣ್ಣನಿಗೆ ತಿನ್ನರಿ.

ಗೋದಾವರಿ :

ಬಂಜಿ ಅನಸದಿತ್ತೋ ಜಗದೊಳಗೆ
ರಂಜ ಮಾಡಿಟ್ಟಿ ಮಕ್ಕಳು ಕೊಟ್ಟು ನನಗೆ
ಮೂವರು ರಾಕ್ಷಸರ ಆಹಾರ ಆಗೋಣ
ತಾನೇ ಬೀಳುವದು ಬಲಭೀಮಗ ಹೈರಾಣ ॥1 ॥

ಮುರಲಿಧರ : ಅಪ್ಪಾ ರಾಕ್ಷಸರೆ ನನಗೆ ಮೊದಲು ತಿನ್ನರಿ. (ರಾಕ್ಷಸರ ತೆಕ್ಕಿಗೆ ಬಿಳುವನು).

ಬ್ರಹ್ಮರಾಕ್ಷಸಿ : ಏನೋ ಮಹಿಷ್ಯಾ ಈ ಮೂವರಿಗೆ ನಾನೇ ತಿಂತಿನಿ. ಇದಕ್ಕೆ ನೀ ಏನಂತೋ?

ಮಹಿಷ್ಯಾ ರಾಕ್ಷಸಿ : ಎಲಾ ಹುಚ್ಚ ರಾಕ್ಷಿ ನನ್ನ ಸಂಗಡ ಬಂದು ನಿನ್ನ ತೆಲಿಗಿ ಏರೇದ.

[ನಾ ತಿಂತೀನಿ, ನಾ ತಿಂತೀನಿ ಎಂದು ಬಡಿದಾಡುವವು]

[ಚಂದ್ರಶಿರೋಮಣಿ ಬರುವನು]

ಚಂದ್ರಶಿರೋಮಣಿ : ಅಮ್ಮಾ ತಾಯಿ ಮುತ್ಯಾ ಬಾಳೋಜಿ ಸಂಗಡ ನೀನು ಇಲ್ಲೆ ನಿಲ್ಲಬೇಕು. ಈ ರಾಕ್ಷಸರ ಶೌರ್ಯವನ್ನು ನೋಡುತ್ತೇನೆ. ಎಲಾ ರಾಕ್ಷಸರೆ ನೀವು ಇಷ್ಟು ದಿವಸ ನಿಮ್ಮ ಮನ ಬಲ್ಲಂಗೆ ಮಾಡಿದ್ದೀರಿ. ಈಗ ಈ ಹುಡುಗರಿಗೆ ಬಿಟ್ಟು ನಿಮ್ಮ ಪ್ರಾಣ ಉಳಿಸಿಕೊಂಡು ಹೋಗರಿ. ಇಲ್ಲದಿದ್ದರೆ ನಿಮ್ಮನ್ನು ಸಂಹರಿಸಿಬಿಡುತ್ತೇನೆ.

ಬ್ರಹ್ಮರಾಕ್ಷಸಿ : ಏನೋ ಮಹಿಷ್ಯಾ ಈ ಹುಡುಗ ಬಹಳ ಮಾತು ಆಡುತ್ತಿದ್ದಾನೆ. ಇವನನ್ನು ಹಿಡಿದು ತಾರೋ ಹೋಗಿ.

ರಾಕ್ಷಸರು :

ಹಿಡಿ ಹಿಡಿಯೋ ಮಹಿಷ್ಯಾ
ಆ ಹುಡುಗನ ಏಳತಾರೋ ॥ಪಲ್ಲ ॥

ಸಣ್ಣ ಬಾಯಿದೊಳು ದೊಡ್ಡ ತುತ್ತುಮಾಡಿ
ಧಮ್ಮನ ಮಾತ ಆಡುತಿಯಾ
ಸುಮ್ಮನ ಕೂಡ ಇನ್ನು ಬ್ರಹ್ಮಪಿಶಾಚಿ
ಖಂಡಗ ಒಮ್ಮಿಗೆ ಹೋಗುವದು ಬಾಯಾಗ ॥1 ॥

ಚಂದ್ರಶಿರೋಮಣಿ :

ದೂರೊ ದೂರೊ ದುಷ್ಟ ಮೂರ್ಖ
ದೂರ ನಿಲ್ಲವೋ ॥ಪಲ್ಲ ॥

ಒಮ್ಮಿಗೆ ನಿನ್ನ ಹಮ್ಮ ಇಳಸುವೆ
ದಮ್ಮಿನೊಳಗೆ ನಿನ್ನ ಪ್ರಾಣ ತೆಗಿವೆ
ಶರ್ಮ ಇಲ್ಲ ನಿನ್ನ ಖರ್ಮ ಹೆಚ್ಚಾಗಿದೆ
ಮನುಷ್ಯ ತಿಂಬುದು ಅನ್ಯಾಯವ ॥1 ॥

ರಾಕ್ಷಸ :

ಬಾಣಿನ ಅಂಜಕಿ ನನ್ನ ಪ್ರಾಣಕ ಇಲ್ಲಾ
ನೊಣ ಕಚ್ಚಿದಂತೆ ನಾ ತಿಳಿವೆ
ಸಣ್ಣ ಪಾರ ನೀನು ಕಣ್ಣ ಕಸ ಏನು
ಕಾಲು ಹಿಡಿದು ನೆಲಕ ಬಡಿವೆ ॥2 ॥

ಚಂದ್ರಶಿರೋಮಣಿ :

ಹೆಚ್ಚಿನ ಮಾತ ಬ್ಯಾಡ ಹುಚ್ಚ ರಾಕ್ಷಸಿಯೆ
ಶಿಕ್ಷಾ ಅದಾ ನೋಡು ದಕ್ಷಬ್ರಹ್ಮವೆ
ಮೋಕ್ಷದಾಯಿಕ ಬಲಭೀಮನ ದಯದಿಂದ
ಈಗಿಂದೀಗ ನಿನಗ ಕೊಲ್ಲಿಬಿಡುವೆ ॥3 ॥

ಮಹಿಷ್ಯಾರಾಕ್ಷಸಿ : ಎಲಾ ಬ್ರಹ್ಮಪಿಶಾಚಿ ನನಗ ಮೈಯೆಲ್ಲಾ ಬಾಣನಟ್ಟು ಬಹಳ ನೋವಾಗಿದೆ. ನಾ ಓಡಿಹೋಗುತ್ತೇನೆ.

ಬ್ರಹ್ಮಪಿಶಾಚಿ : ಎಲೋ ಮಹಿಷ್ಯಾ ಓಡಿಹೋಗಬೇಡ, ಎಲ್ಲಿತನಕ ಹೋದರು. ಇವರು ಬಿಡುವದಿಲ್ಲಾ. ಶರಣವಾಗಿ ಅವರ ಚರಣಕ್ಕೆ ಬೀಳೋಣ ಬಾ. ನನ್ನ ಮೈಯೆಲ್ಲಾ ಬಾಣ ಹತ್ತಿ ನಡಿಲಕ್ಕೆ ಅವಸಣ ಇಲ್ಲಾ.

[ಧಪ್ಪಂತೆ ಶಿರೋಮಣಿ ಪಾದಕ್ಕೆ ಬಿದ್ದು ಹಾಡುವವು]

ಶರಣು ಬಂದೇವು ನಿಮ್ಮ ಚರಣಕ್ಕೆ
ಬಾಣ ಹೊಡಿಬ್ಯಾಡರಿ ॥ಪಲ್ಲ ॥

ನಮ್ಮ ಪಾಪ ನಮಗ ಹೆಚ್ಚಾಯ್ತು
ತಪ್ಪಾಯ್ತು ಜೀವದಾನ ಬಿಡರಿ
ವಾಲಿ ಹೋಗಿ ವಾಲ್ಮೀಕ ಋಷಿ ಅನಸಿದ
ನಾರಂದನಂತೆ ಪುಣ್ಯಪಡಿರಿ ॥1 ॥

ಬ್ರಹ್ಮಪಿಶಾಚಿ : ಮಹಾರಾಜರೆ ನಮ್ಮ ಅಪವಾದಕ್ಕೆ ಕ್ಷಮಾ ಮಾಡುವಂತವರಾಗಿರಿ.

ಚಂದ್ರಶಿರೋಮಣಿ : ಎಲಾ ಮುರಲೀಧರ : ಹರಿಹರ ಈ ಎರಡು ರಾಕ್ಷಸರಿಗೆ ಒಯ್ದು ಕಟ್ಟುವಂತವರಾಗಿರಿ.

[ಜಗನ್ನಾಥರಾಜ ಮಂತ್ರಿ ಬರುವನು]

ಮಂತ್ರಿ : ರಾಜಾಧಿರಾಜಾ ಮಹಾರಾಜಾ ಶಿರೋಮಣಿಯೆ ನಾನು ಜಗನ್ನಾಥ ರಾಜೆರ ಮಂತ್ರಿ ಇರುವೆನು. ನಮಸ್ಕಾರವು.

ನಡಿ ರಾಜಾ ಹೋಗನು ದರ್ಬಾರಕೆ ॥ಪಲ್ಲ ॥

ದುಷ್ಟ ರಾಕ್ಷಿ ವಧಾ ನೀ ಮಾಡದಿ
ಎಷ್ಟೋ ಪುಣ್ಯ ನೀ ಮಾಡದಿ
ಎಷ್ಟೋ ಪುಣ್ಯ ನೀನೆ ಪಡದಿ
ಜನರ ಕಷ್ಟ ದೂರ ಮಾಡದಿ
ಶ್ರೇಷ್ಠ ತಯಿ ಉದರದಿ ಜನಸಿದಿ ॥1 ॥

ರಾಕ್ಷಸಿ ವಧಾ ಸುದ್ದಿ ದರ್ಬಾರಕೆ
ಜಗನ್ನಾಥ ರಾಜಾ ಹಿಗ್ಗಿದ ಮನಕೆ
ಖಳುವ್ಯಾರಪ್ಪ ಇದೇ ಕ್ಷಣಕೆ
ಬಂತು ರಾಜ್ಯಗಾದಿ ನಿನ್ನ ಪಾಲಕೆ ॥2 ॥

ಅಮ್ಮಾ ಚಂದ್ರಾವತಿ, ಬಾಳಾಜಿ ಮುತ್ಯಾ, ಹರಿಹರ ಮುರಲೀಧರ ಮತ್ತು ಓಲೆಕಾರ ಸರ್ವರೆಲ್ಲಾ ಮನ ಉಲ್ಲಾಸದಿಂದ ರಾಜ ದರ್ಬಾರಕ್ಕೆ ನಡಿವಂತವರಾಗಿರಿ (ಎಲ್ಲರೂ ಹೋಗುವರು).

[ಜಗನ್ನಾಥ ರಾಜರ ದರ್ಬಾರ ಸಭಾಸದರೆಲ್ಲಾ ಕುಳಿತಿರುವರು]

ಮಂತ್ರಿ : ಮಹಾರಾಜೆರೆ ರಾಕ್ಷಸರ ವಧಾ ಮಾಡಿದ ಶಿರೋಮಣಿ ಎಂಬುವರು ಇವರೆ ಇರುವರು.

ಜಗನ್ನಾಥ :

ಶಿರೋಮಣಿಯೆ ನಿನ್ನಂತ ಶೂರ ಕಾಣೆ ॥ಪಲ್ಲ ॥

ಹನ್ನೆರಡು ವರ್ಷ ಉಮ್ಮರದೊಳಗೆ
ವಧಾ ಮಾಡಿದಿ ರಾಕ್ಷಸಗಳಿಗೆ
ಅರ್ಜುನನಂತೆ ನಡಿಲಕ್ಕೆ ನಿನಗೆ
ವರ ಬೇಡುವೆ ಪರಶಿವನಿಗೆ ॥1 ॥

ತಡಾ ಯಾಕೋ ಮಂತ್ರಿ ಇನ್ನಾ
ಕರಸೋ ಮೊದಲು ಮುತ್ತೈದೆರನಾ
ಲಗ್ನ ತೆಗಿಸು ಕರಿಸಿ ಬ್ರಾಹ್ಮಣನಾ
ಹಂದ್ರ ಹಾಕೋ ಚಂದ್ರನ ವರ್ಣ ॥2 ॥

ಚಂದ್ರಾವತಿ ನಿನ್ನ ಕಷ್ಟಾ
ಬಲಭೀಮ ಗೆದಿಸಿ ಬಿಟ್ಟಾ
ಬಾಳೋಜಿ ಮುತ್ಯಾ ನೀನೆ ಶ್ರೇಷ್ಠ
ಮಂತ್ರಿ ರಚಿಸೋ ಮಂಟಪ ಧಾಟಾ ॥3 ॥

ಎಲಾ ಮಂತ್ರಿಯೆ ನಗರವೆಲ್ಲಾ ಶೃಂಗಾರಮಾಡಿ ಲಗ್ನ ಸಮಾರಂಭ ಈಗಿಂದೀಗೆ ರಚಿಸು. ಸರ್ವ ರಾಜ ರಾಜೆರಿಗೆ ಹಾಗೂ ಪ್ರಜಾಕೋಟಿಗೆ ಅಮಂತ್ರಣ ಕೊಟ್ಟು ಕರಿಸುವಂತವನಾಗು.

ಮಂತ್ರಿ : ತಮ್ಮ ಆಜ್ಞಾ ಪ್ರಕಾರ ಆಗಿಂದಾಗ ಲಗ್ನ ತೈಯಾರಿ ಮಾಡಿಸುವೆನು.

ಮಂತ್ರಿ : ಬರ‌್ರಿ ಸಖುಬಾಯಿ, ಮುಕ್ತಾಬಾಯಿ, ರೇಣುಬಾಯಿ, ಜನಾಬಾಯಿ, ವಿಜಯಲಕ್ಷ್ಮಿಬಾಯಿ ಪಂಚಕಳಸ ಹಿಡಿರಿ. ಎಲಾ ವೆಂಕಟರಮಣ ಲಗೂ ಬ್ರಾಹ್ಮಣಗೆ ಕರಕೊಂಡು ಬಾ.

[ಪಂಚ ಕಳಸ ಹೂಡಿ ಮುತ್ತೈದೆರು ಎಣ್ಣಿ ಹಚ್ಚಾ ಪದಾ ಹಾಡುವರು]

ಪಂಚ ಮುತ್ತೈದೆರು ಪಂಚಕಳಶದವರು
ಮುಂಚ ನೀವು ಬನ್ನಿರೆ
ಸಂಚಿತ ಆಗಮಭೋಗ ಮಿಂತ ಶಿರೋಮಣಿಗೆ
ಎಣ್ಣಿ ಹಚ್ಚಾ ಬನ್ನಿರೇ ॥1 ॥

ಇಂದ್ರ ಪದವಿಯಂತ ಹಂದ್ರದೊಳಗ ನಿಂತು
ಚೆಂದುಳ್ಳ ಚಲುವೆರೇ
ಅಗಣಿತ ಆನಂದರಾಣಿ ಸುಗುಣಿ ರುಕ್ಮೀಣಿಗೆ
ಎಣ್ಣಿ ಹಚ್ಚೂನು ಬನ್ನಿರೇ ॥2 ॥

ಜೈಸಿಂಗವಾಶಾ ದೇವಾ ಈರೇಶ
ಜಗವ ಪೋಶಿಸಾ ಹನುಮನ ಸೇವಕರೆ
ದೇವಿದಾಸನ ಧ್ಯಾಸ ರುಕ್ಮಿಣಿ ಶಿರೋಮಣಿಗೆ
ಎಣ್ಣಿ ಹಚ್ಚೂನು ಬನ್ನಿರೇ ॥3 ॥

ರೇಣುಕಾಬಾಯಿ : ಅಕ್ಕಾ ವಿಜಯಲಕ್ಷ್ಮೀ ಇನ್ನೊಂದು ಜೋಡಿ ಪದ ಹಾಡೋಣ.

ಹೊತ್ತು ಮೇಲಕ ಬಂತು
ಅಕ್ಷತಾ ಘಡಿ ಬಂತು
ಮುತ್ತೈದೆರು ನೀವು ನಿಂತು
ಹಚ್ಚಿರೇ ನೈಯೆಣ್ಣಿ ॥1 ॥

ಅಂಗಳ ಶೃಂಗಾರ
ಗಂಗಾ ಯಮುನಾ ಮಾಡ್ಯಾರ
ರಂಗ ಮಂಟಪ ಹಂದ್ರದೊಳಗ
ನೀವು ಹಚ್ಚೀರೇ ನೈಯೆಣ್ಣಿ ॥2 ॥

ಮಂತ್ರಿ : ಅವ್ವದೆರೆ ಲಗೂ ಮುಗಸಿ ಐಯೇರಿ ಮಾಡ್ರಿ. ಬ್ರಾಹ್ಮಣ ಬರುವ ವೇಳೆ ಆಗಿದೆ. ಒಳ್ಳೇದು ಹರಿಹರ ಲಗೂ ಬ್ರಾಹ್ಮಣಗ ಕರಿವಂತವನಾಗು.

[ಬ್ರಾಹ್ಮಣ ಬರುವನು]

ಬ್ರಾಹ್ಮಣ : ಬಾರೋ ಶ್ಯಾಮಾ ರಾಜೆರ ಮನಿಗಿ ಲಗ್ನಕ್ಕೆ ಬಾ ರಂಡೆ ಗಂಡ ನಿನ್ನ ಮುಂಜಿ ಖರ್ಚ ಸಿಗುವುದು.

ಶ್ಯಾಮ್ಯಾ : ಏ ಬಾಬಾ ವಿಠಲ್‌ಭಟ್ಟನ ಮಗಳು ನನಗ ಕುಡುತಾರಂತ ಲಗ್ನ ಖರ್ಚು ಬೇಡು.

ಬ್ರಾಹ್ಮಣ : ತರ‌್ರಿ ತರ‌್ರಿ, ಮಂತ್ರಿ ಆಯ್ಯರಿ ತರ‌್ರಿ, ನಾನು ಶ್ಲೋಕ ಅನ್ನುತ್ತೇನೆ.

ಬ್ರಾಹ್ಮಣ :

ಬಹಳ ದಿನಕ ಬಂದೇವು ರಾಜಾ ನಿಮ್ಮ ತನಕ
ಪಂಚಾಂಗ ತೆಗೆದು ಶುಭಲಗ್ನ ಕಾರ್ಯ ಮಾಡದಕ ॥ಪಲ್ಲ ॥

ಸಾಮ್ಯಾ ದಾಮ್ಯಾ ಇಬ್ಬರು ಕುಂತರ ಮುಂಜಿ ಆಗಲಿಕ
ಸರ್ವ ಸಾಹಿತ್ಯ ಕೊಡಬೇಕು ರಾಜಾ ಮನಸಿನ ತಕ್ಕ ॥1 ॥

ನಮ್ಮ ರಾಜದರ್ಬಾರ ಆನಂದ ಇರಲಿ ಕಡಿತನಕ
ಚಂದ್ರಶಿರೋಮಣಿ ಹಂಗ ಬಿದ್ದದ ಸಿದ್ಧನ ಬೆಳಕ ॥2॥

ಬ್ರಾಹ್ಮಣ : ಏ ಶ್ಯಾಮ್ಯಾ ನಗಬ್ಯಾಡಾ ನಾನು ಮಣ್ಣಿನ ಪಾವು, ಮಣ್ಣಿನ ಛಟಾಕ, ಮಣಿನ ವಮ್ಮನ ಎಲ್ಲಾ ಬೇಡತಿನಿ ನಿನಗ ಯಾಕ ಕುದಿಯೋದಾ ರಂಡೆಗಂಡಾ.

ಶ್ಯಾಮಾ : ಅಮ್ಮಾ ಮುದ್ದಿ ಪಲ್ಲೇದಸಿಂದಾ ಶಾಂವಿ ಪಲ್ಯಾ ಹೇಳ್ಯಾಳ ನೀ ಮರತೆಲ್ಲಾ !

ಬ್ರಾಹ್ಮಣ : ಹುಚ್ಚ ರಂಡೆಗಂಡ ಹಸು ಆದರ ಅಳ್ಳಿಟ್ಟು ತಿನ್ನು. ಆಯ್ಯರಿ ತರ‌್ರಿ ಲಗೂ ಆಯ್ಯರಿ ತರ‌್ರಿ.

[ಬ್ರಾಹ್ಮಣ ಅಯ್ಯರಿ ಮಾಡುತ್ತ ಮಂತ್ರ ಹೇಳುವನು]

ಶುಭ ನಕ್ಷತ್ರ ಶುಭ ಲಗ್ನ ಶುಭ ಮಂಗಲ !
ಶುಭ ಕಾರ್ಯ ಶುಭ ಓಂ ಅಮೃತ ಘಟಕಾ
ಸಾರ್ವಭೌಮ ಸರ್ವದಾ ಸಾಮಧಾಮ ॥

[ಲಗ್ನ ಮುಗಿಸಿ ಎಲ್ಲರೂ ಹೊರಟು ಹೋಗುವರು]

[ಭೂಪಾಲ ರಾಜನ ಸಭಾ]

ಭೂಪಾಲ : ಎಲಾ ದ್ವಾರ ಪಾಲಕನೆ ಇತ್ತ ಬರುವಂತವನಾಗು.

ದ್ವಾರಪಾಲಕ : ಮಹಾರಾಜರೆ ಹಾಜರಿರುವೆನು.

ಭೂಪಾಲ : ಮಂತ್ರಿಗೆ ಬರುವದಕ್ಕೆ ಹೇಳು.

ದ್ವಾರಪಾಲಕ : ತಮ್ಮ ಆಜ್ಞೆಯಂತೆ ಆಗಲಿ [ಮಂತ್ರಿ ಬರುವನು]

ಮಂತ್ರಿ : ಮಹಾರಾಜರೆ ನಮಸ್ಕಾರವು.

ಭೂಪಾಲ :

ಮಂತ್ರಿವರ್ಯನೆ ಗ್ರಾಮದ ವಿಸ್ತಾರ ಹೇಳೋ
ಬಡು ಜನರದು ಬರಬಾರದು ನೋಡು ಗೋಳೋ ॥ಪಲ್ಲ ॥

ಅರ್ಧಾ ತಹಸೀಲ ಮಾಡಬೇಕೊ ಈ ವರ್ಷ ಕಮ್ಮ
ಗೌಡ ಕುಲಕರ್ಣಿಗಿ ಲಗೂ ಕುಡಬೇಕೊ ಹುಕುಮ
ಮಳಿ ಕಮ್ಮಿತ್ತು ಹೊಲ ಬಿದ್ದಿರಬೇಕೂ ಬೀಳೋ
ಒಕ್ಕಲಿಗೆರು ಮಾಡಬಾರದು ಕಳಕಳೋ ॥1 ॥

ರಾಜಾ ಪ್ರಜಾಗಳಿಗೆಲ್ಲಾ ಹೈರಾಣ
ಕಾಲಜ್ಞ ದಿನ ಬರದ ಬಹು ಕಠಿಣ
ಘಟ್ಟ ಉಳಿದು ಹಾರಿ ಹೋಗುವದು ಸುಳ್ಳೋ
ಬಲಭೀಮ ನಿಂದೇ ಇರಲಿ ನೆರಳೋ ॥2 ॥

ತಮ್ಮಾ ಮಂತ್ರಿಯೇ, ನಮ್ಮ ರಾಜ್ಯದಲ್ಲಿಯ ಹೊಸ ಸುದ್ದಿಯೇನು.

ಮಂತ್ರಿ : ಮಹಾರಾಜರೆ ಈ ದಿವಸ ಒಂದು ಹೊಸ ಸುದ್ದಿ ಕೇಳಿರುವೆನು.

ಭೂಪಾಲ : ತಮ್ಮಾ ಮಂತ್ರಿ ಅದೇನು ಹೊಸ ಸುದ್ದಿ ಇರುವದು.

ಮಂತ್ರಿ :

ಏನು ಹೇಳಲಿ ರಾಜೇಂದ್ರ ವಿಸ್ತಾರ
ಖರ್ಮಾ ಹೆಚ್ಚ ಆಗ್ಯಾದ ಅನಿವಾರ‌್ಯ ॥ಪಲ್ಲ ॥

ಧರ್ಮದ ಗಾದಿಗಿ ಬಂತಪ್ಪಾ ಹೆಂತಾ ವೇಳ್ಯಾ
ದೇವೀಂದ್ರ ಖಳುವ್ಯಾನ ದಂಡುದಾಳ್ಯಾ
ಗೆದಿವೆನೆಂದು ಎತ್ತಿ ಹೊಂಟಾರ ಪಂತದ ವಿಳ್ಯಾ
ಕಾಯಾಂವ ತಾನೇ ದಕ್ಷ ಬ್ರಹ್ಮನ ಅಳಿಯಾ ॥1 ॥

ನಮ್ಮ ಸರದಿನ ಊರೆಲ್ಲಾ ಲೂಟಿ ಮಾಡಿ
ಅರ್ಭಟದಿಂದ ಹೊಂಟಾವ ರಣಗಾಡಿ
ಪಟ್ಟಣದೊಳಗೆ ನಡೆದಾದ ಗಡಬಿಡಿ
ಬಹಳ ಜನರು ನಡೆದಾರ ಓಡೋಡಿ ॥2 ॥

ಮಹಾರಾಜರೆ ದಿಲ್ಲಿ ಇಲಾಖಾದೊಳಗಿನ ಒಬ್ಬ ರಾಜಾ ದೇವೀಂದ್ರ ಎಂಬುವನು ತನ್ನ ದಂಡು ಸಮೇತ ನಮ್ಮ ರಾಜ್ಯದ ಮೇಲೆ ದಾಳಿ ಮಾಡಿ ಮನಬಲ್ಲಂಗ ಲೂಟಿ ನಡಿಸ್ಯಾನೆಂದು ಜನರೆಲ್ಲ ದಿಕ್ಕೆಟ್ಟ ಓಡುತ್ತಿದ್ದಾರಂತೆ.

ಭೂಪಾಲ : ತಮ್ಮಾ ಮಂತ್ರಿಯೆ ಇದಕ್ಕೆ ಉಪಾಯವೇನಿರುವದು? ನಮ್ಮ ಚಂದ್ರಾವತಿಗೆ ಅರಣ್ಯಕ್ಕೆ ಖಳುವಿದ ಮೇಲೆ ಒಂದರ ಹಿಂದೊಂದು ಬಹಳ ಸಂಕಟ ಬರುತ್ತಿವೆ. ಈಗ ಮುಂದೇನು ಮಾಡಬೇಕು?

ಮಂತ್ರಿ : ಮಹಾರಾಜರೆ ದಿಲ್ಲಿ ಇಲಾಖೆದೊಳಗಿರುವ ಜಗನ್ನಾಥ ರಾಜರು ರಾಜ್ಯಕ್ಕೆ ಕಂಟಕವಾಗಿ ಹತ್ತಿದ ಎರಡು ರಾಕ್ಷಸಗಳನ್ನು ವಧಾ ಮಾಡಿದ ಸುದ್ದಿ ಹಬ್ಬಿದೆ. ಹಂತವರ ಬೆನ್ನಿಗೆ ಬೀಳುವದು ಒಳ್ಳೆಯದು.

ಭೂಪಾಲ : ಒಳ್ಳೇದು ಮಂತ್ರಿ ನಿನ್ನಂತೆ ಆಗಲಿ ಲಗೂ ಹೋಗೋಣ ನಡೆ.

[ಇಬ್ಬರು ಹೋಗುವರು]

[ಜಗನ್ನಾಥ ರಾಜನ ದರ್ಬಾರು ಭೂಪಾಲ ರಾಜಾ ಬರುವನು]

ಭೂಪಾಲ : ನಮಸ್ಕಾರ ಜಗನ್ನಾಥ ಮಹಾರಾಜರೆ.

ಜಗನ್ನಾಥ : ನಮಸ್ಕಾರ ಭೂಪಾಲ ರಾಜರೆ ಬರ‌್ರಿ. ಏನು ಕಾರಣ ನಮ್ಮ ಕಡೆ ಬರೋಣವಾಯಿತು.

ಭೂಪಾಲ :

ಜಗನ್ನಾಥ ರಾಜಾ ಕೇಳೋ ನೀನು
ದೇವೀಂದ್ರನ ದಾಳಿಗೆ ಓಡಿ ಬಂದೆನು ॥ಪಲ್ಲ ॥

ಹಿಂದ ಮದ್ದತ ಇಲ್ಲಾ ನಮಗೆ
ಬಂದ ಬಿದ್ದಾ ನಿಮ್ಮ ಕೊರಳಿಗೆ
ಎನ್ನ ರಾಜ್ಯಾ ಕೊಡುವೆ ನಿನಗೆ
ತಡವಿಲ್ಲದೆ ಖಳಸಪ್ಪಾ ಶೂರ ವೀರಗೆ ॥1 ॥

ಮಹಾರಾಜರೆ ದೇವೀಂದ್ರನು ಸುಮ್ಮನೆ ನಮ್ಮ ರಾಜ್ಯವನ್ನೆಲ್ಲಾ ಹಾಳು ಮಾಡುತ್ತಿದ್ದಾನೆ. ಇದರಿಂದ ನಮ್ಮನ್ನು ರಕ್ಷಿಸಬೇಕು.

ಜಗನ್ನಾಥ :

ಅಂಜುಬ್ಯಾಡೋ ಭೂಪಾಲ ರಾಜೇಂದ್ರಾ
ಈಗಿಂದೀಗೆ ಓಡಿಸುವೆ ದೇವೀಂದ್ರಗಾ ॥ಪಲ್ಲ ॥

ಬೆನ್ನಿಗಿ ಬಿದ್ದವರ ಪಂತ ಹಿಂಗಾ
ಪ್ರಾಣ ಹೋಗಲಿ ಕೂಡೊದಿಲ್ಲ ನಿನಗಾ
ಅವನ ಚೌಪಟ್ಟ ದಂಡು ಕಳಿಸುವೆ
ಈಗಿಂದೀಗೆ ದೇವೀಂದ್ರಗೆ ಹಿಡಿಸುವೆ ॥1 ॥

ತಮ್ಮ ಭೂಪಾಲ, ನೀನು ಸರ್ವಥಾ ಚಿಂತೆ ಬಿಡು. ಏನು ತಪ್ಪಿಲ್ಲದೆ ತಪ್ಪು ಹಚ್ಚುವ ಅಜ್ಞಾನಿಗೆ ಯಮ ನಕರವೆ ತಿಳಿ.

ಭೂಪಾಲ :

ರಾಜೇಂದ್ರ ನಿಮ್ಮ ವಾಕ್ಯ ಸತ್ಯ ವಾಣಿ
ಘಾತಕರಿಗೆ ಘಾತ ಇರುವುದು ಪಾಪದ ಭೂಗಣಿ ॥ಪಲ್ಲ ॥

ನಮ್ಮ ದೇಶವೆಲ್ಲಾ ಭಜನ
ಅನೇಕ ಮಂದಿರ ರಾಮಕೀರ್ತನ
ಹೆಂತಾ ಯಾಳ್ಯಾ ತಂದಿಟ್ಟಿ ಭಗವಾನ
ರಾಜೇಂದ್ರಾ ಲಗೂ ಕಳಿಸು ದಂಡಿನಾ ॥1 ॥

ಮಹಾರಾಜರೆ ತಮ್ಮ ಮಂತ್ರಿಗೆ ಲಗೂ ರಣಕ್ಕೆ ಹೋಗುವ ತೈಯಾರಿ ಮಾಡುವಂತೆ ಹೇಳಿರಿ.

ಜಗನ್ನಾಥ : ಎಲಾ ಮಂತ್ರಿಯೆ, ಬೇಗ ಶಿರೋಮಣಿಗೆ ಕರಿವಂತವನಾಗು.

ಮಂತ್ರಿ : ತಮ್ಮ ಅಪ್ಪಣೆಯಂತೆ ಆಗಲಿ.

[ಚಂದ್ರಶಿರೋಮಣಿ ಬರುವನು]

ಚಂದ್ರಶಿರೋಮಣಿ :

ಕರಸಿದ ಕಾರಣ ಏನು
ರಾಜಾದಿ ರಾಜಾ ಕರಸಿದ ಕಾರಣವೇನು ॥ಪಲ್ಲ ॥

ಕರಸಿದ ಕಾರಣವೇನುಹರ್ಷಾದಿ ಪೇಳು ನೀನು
ಅರಸಾ ನಿಮ್ಮ ಆಜ್ಞಾ ಪ್ರಕಾರಆಲೈಸಿ ಬಂದೆನು ॥1 ॥

ನಿಮ್ಮ ನಿಂದ್ಯೆ ಕುಟೀಲನಿಗೆ
ದುಂಧ ಇಳಸುವೆ ಒಂದ ಘಳಗ್ಯಾಗೆ
ಹೆಚ್ಚಿಂದ ಬಗಸುವ ಹುಚ್ಚ ಮನುಷ್ಯಾಗೆ
ಬಾಣ ಹಚ್ಚಿ ಗೋನ ತೆಗೆವೆ ಈಗೆ ॥2 ॥

ಭೂಪಾಲ : ಜಗನ್ನಾಥ ಮಹಾರಾಜರೆ ಸಣ್ಣ ವಯಸಿದ್ದರೆ ಇರಲಿ ಇವರ ನುಡಿ ಕೇಳಿ ನಾನು ಬಹಳ ಸಂತೋಷವಾದೆನು.

ಜಗನ್ನಾಥ : ಎಲಾ ಶಿರೋಮಣಿಯೆ ನಿನಗೆ ಕರೆಸಿದ ಕಾರಣವೇನೆಂದರೆ ಇಕೋ ಈ ರಾಜಾ ಭೂಪಾಲನ ಗಾದಿ ಗೆದಿಬೇಕಂತ ಬಂದ ದೇವೀಂದ್ರನ ಫೌಜೆಲ್ಲಾ ಓಡಿಸಿ ಅವನಿಗೆ ಮುರಿದು ಕಟ್ಟಿ ರಾಜನೀತಿ ಚೆನ್ನಾಗಿ ತಿಳಿಸುವಂತವನಾಗು. ನಿನಗೆ ಬೇಕಾದಷ್ಟು ದಂಡು : ಗುಂಡುಗಳನ್ನು ತೆಗೆದುಕೊಂಡು ಹೋಗು.

ಚಂದ್ರಶಿರೋಮಣಿ : ಮಹಾರಾಜರೆ ತಮ್ಮ ಅಪ್ಪಣೆ ಪ್ರಕಾರ ಈಗಿಂದೀಗೆ ಹೋಗುವೆನು.

[ಭೂಪಾಲ ಜಗನ್ನಾಥ ರಾಜೆರು ಹೋಗುವರು]

[ಇನ್ನೊಂದು ಕಡೆಯಿಂದ ಚಂದ್ರಾವತಿ ಬಾಳೋಜಿ ಬರುವರು]

ಚಂದ್ರಾವತಿ : ಮಗಾ ಶಿರೋಮಣಿ ಇಷ್ಟೊಂದು ಬಾಣ ಕಟ್ಟಿಕೊಂಡು ಎಲ್ಲಿಗೆ ತೈಯಾರವು.

ಚಂದ್ರಶಿರೋಮಣಿ : ಅಮ್ಮಾ ಜನನಿ ಜಗನ್ನಾಥ ರಾಜೆರ ಆಜ್ಞೆ ಪ್ರಕಾರ ಭೂಪಾಲ ರಾಜೇರ ನಗರಕ್ಕೆ ನಡೆದಿರುವೆನು. ಬಾಳೋಜಿ ಮುತ್ಯಾ ಹಾಗೂ ನೀನು ಇಲ್ಲೆ ಇರುವಂತವರಾಗಿರಿ. ನಾನು ಹೋಗಿ ದೇವೀಂದ್ರನ ದಂಡೆಲ್ಲಾ ಓಡಿಸಿ ಬರುವೆನು.

ಬಾಳೋಜಿ : ಶಬ್ಬಾಯಿಸ್ ಶಿರೋಮಣಿಯೆ ಪರದ್ರವ್ಯಾ, ಪರಭೂಮಿ, ಪರರಾಜ್ಯ, ಅಪಹರಣ ಮಾಡುವಂತಾ ಅಧಮನಿಗೆ ಬೇಗ ಶಿಕ್ಷಾ ಮಾಡುವದೆ ಉಚಿತವು. ಇದೇ ಪರೋಪಕಾರ.

ಚಂದ್ರಾವತಿ : ಮಗುವೆ ನಿನಗ ಅಗಲಿ ಅರ್ಧ ಘಳಿಗೆ ಇರಲಾರೆನು ನಾನು. ನಿನ್ನ ಹಿಂದೆ ಬರುವೆನು.

ಚಂದ್ರಶಿರೋಮಣಿ : ಅಮ್ಮಾ ತಾಯಿ ಬಾಳೋಜಿ ಮುತ್ಯಾ ಹಾಗೂ ನೀವು ನಡಿವಂತವರಾಗಿರಿ.

[ಹೋಗುವರು]

[ದೇವೀಂದ್ರ ರಾಜಾ, ಮಂತ್ರಿ ಹಾಗು ಸೈನ್ಯ ಸಮೇತ ಭೂಪಾಲನ ರಾಜ್ಯ ಸಭೆಗೆ ಬರುವರು]

ಮಂತ್ರಿ : ದೇವೀಂದ್ರ ಮಹಾರಾಜರೆ ಇದೆ ಆ ಭೂಪಾಲ ರಾಜನ ಸಿಂಹಾಸನವು. ನಮ್ಮ ಅಂಜಿಕೆಗೆ ಓಡಿ ಹೋಗಿದ್ದಾನೆ.

ದೇವೀಂದ್ರ :

ಶಬ್ಬಾಯಿಸ್ ಮಂತ್ರಿ ಕೆಲಸ ಮಾಡದಿ ಜ್ಯಾಮರ್ದ ॥ಪಲ್ಲ ॥

ಭೂಪಾಲ ರಾಜಾಗ ಓಡಿಸಿ ಬಿಟ್ಟಿ
ಒವ್ಹಾರೆ ನನ್ನ ಬೀರಬಲ್ಲ ಜಟ್ಟಿ
ಶಂಬೋರ ಹಳ್ಳಿ ನಂಬರ ಮಾಡಿಕೊ
ದೊಡ್ಡ ವತನ ಘಳಿಸಿಟ್ಟ ಮಂತ್ರಿ ॥1 ॥

ಮಜಕುರಿಗೆ ಎರಡು ಹಳ್ಳಿ ಇನಾಮ ಕೊಡುವೆ
ರಾಜಿ ಬಿಡುವೆ ನಿನಗೆ ಬೇಕಾಗಿದ್ದು ಮಾಡು
ರಾಜ ಬೀದಿಯೆಲ್ಲಾ ಮೌಜ ಕಾಣುವಂತ
ತೇಜ ಬಿಜಲಿಗಳಿ ಬೆಳಕು ಇಡು, ಮಂತ್ರಿ ॥2 ॥

ಇಷ್ಟೆ ಎನ್ನ ಆಪೇಕ್ಷಾ ಉಳಿತು
ಭೂಪಾಲ ರಾಜಾಗ ಕರದಿತ್ತು
ಸೃಷ್ಟಿಯೆಲ್ಲಾ ಮೃಷ್ಟಾನ್ನ ಆಗಲೆಂದು
ಪ್ಯಾಟಿ ಪಟ್ಟಣ ಹುಕುಮ ಮಾಡು ॥3 ॥

ತಮ್ಮಾ ಮಂತ್ರಿಯೇ ಆ ಭೂಪಾಲನು ಎಲ್ಲಿ ಇರುವನು ಆತನಿಗೆ ಲಗೂ ತಪಾಶ ಮಾಡಿ ತರುವಂತವನಾಗು. ದೇಶ ದೇಶದ ರಾಜರಿಗೆಲ್ಲಾ ಇತಾಲಾ ಕೊಡು ಅವನಿಗೆ ಬೆನ್ನಿಗೆ ಹಾಕೋಬಾರದೆಂದು.