ಮಂತ್ರಿ :

ರಾಜೇಂದ್ರ ನಿಮ್ಮ ಹುಕುಮಿನ ಅಮಲ ಮಾಡುವೆ ॥ಪಲ್ಲ ॥

ಈಗಿಂದೀಗ ಹುಕುಮ ಕೊಡುವೆ
ಭೂಪಾಲ ರಾಜಾಗ ತಪಾಶ ಮಾಡುವೆ
ಮತ್ತೊಂದು ರಾಜ್ಯಕ್ಕೆ ಕೈ ಹಾಕುವೆ
ದಂಡು ಮತ್ತಷ್ಟು ಬೆಳಸುವೆ ॥1 ॥

ನಿಮ್ಮ ಮುಂದ ಯಾರದು ನಡಿವಲ್ದು ಛಕಾ
ಡೊಂಗರ ಹೊಡಸಿ ಸುದ್ದಿ ಹೇಳುವೆ ಪಕ್ಕಾ
ಭೂಪಾಲನ ಗಾದಿಗೆ ನಮದ ಅದ ಹಕ್ಕಾ
ದೇವೀಂದ್ರ ರಾಜಾ ಬಂದ ಗಾದಿ ಆಳದಕಾ ॥2 ॥

ಮಹಾರಾಜರಿಗೆ ಈಗಿಂದೀಗೆ ಆ ಭೂಪಾಲಗೆ ತಪಾಸ ಮಾಡಿ ತರುವೆನು. ತಾವು ಈ ಗಾದಿಮೇಲೆ ಕೂಡುವಂತವರಾಗ್ರಿ ಇಕೋ ಮಹಾರಾಜರೆ ಭೂಪಾಲನು ಬಂದನು.

ದೇವೀಂದ್ರ :

ಭಪ್ಪರೆ ಭೂಪಾಲ ಭಲೆ ಸಿಕ್ಕಿ ಬಾಯಿನ್ನ ಕದನಕ್ಕೆ ॥ಪಲ್ಲ ॥

ನಿನ್ನ ಫೌಜಿಯೆಲ್ಲಾ ಆಯಿತು ಅಡಿ ಪಾಲಾ
ನಿನಗ ಕೈದ ಖಾನೆಯೊಳಗೆ ಇಡುವೆನು ಮೊದಲಾ
ಎಲ್ಲಿಗೆ ಓಡಿದರೆ ಬಿಡುವವನಲ್ಲಾ
ಬೆನ್ನಿಗೆ ಹಾಕಿಕೊಂಡವನಿಗೆ ತೆಗಿವೆ ತೊಗಲಾ ॥1 ॥

ಪೃಥ್ವಿ ಮೇಲೆ ಯಾರು ಇಲ್ಲ ನನ್ನ ಸರಿ
ಹಿಡಿ ಹಿಡಿ ಮಂತ್ರಿ ಮುರುದು ಕಟ್ಟರಿ
ಬೇಕಾದಷ್ಟು ನೀ ಫಂದ ಮಾಡಿದರೆ
ಸಿಗೋದಿಲ್ಲಾ ನೋಡೋ ರಾಜಾ ಐಶ್ವರಿ ॥2 ॥

ನಾನು ಹೇಳಿದಂಗ ನಡಿಬೇಕು ನೀನು
ರಕಮ ಕೊಡುವೆನು ಖರ್ಚಿಗಿ ನಾನು
ಲಕ್ಷ್ಮಿ ಹೋದ ಮೇಲೆ ರಾಜ್ಯ ನಿಲ್ಲುವದಿಲ್ಲಾ
ಆಳಾಗಿ ಇರಬೇಕೋ ತಿಳಿ ನಿನ್ನ ಮನಕೆ ॥3 ॥

ಎಲಾ ಭೂಪಾಲ ನಾ ಹೇಳಿದ ಪ್ರಕಾರ ಇದ್ದರೆ ನಿನ್ನ ಹಣೆಬಾರ ನೆಟ್ಟಕವು. ಇಲ್ಲದಿದ್ದರೆ ನೋಡು.

ಭೂಪಾಲ : ದೇವೀಂದ್ರ ಮಹಾರಾಜರೆ ನಮ್ಮ ಗಾದಿಯು ನೀವು ಗೆದ್ದ ಬಳಿಕ ಮುಗಿತು. ನನಗೆ ಕೈದಖಾನೆ ಯಾಕೆ ? ಮುರದು ಕಟ್ಟುವದು ಯಾಕೆ ? ಸ್ವಲ್ಪ ಸಮಾಧಾನವಾಗಿ ನಂದೊಂದು ಮಾತು ಕೇಳರಿ.

ಬಿಡು ಬ್ಯಾಡ ನೀ ಹಿಡಿಯೊ
ಆಜ್ಞಾ ಎಂಬ ಹುಲಿಗಿ ನೀ ಕಟ್ಟೋ ॥ಪಲ್ಲ ॥

ಈ ಮನಸಿಂದು ಯಾತರ ಖ್ಯಾಲಾ
ನಂದೇ ಅನ್ನುವದು ಇನ್ನೊಬ್ಬರ ಹಿತ್ತಲ
ನೆರಮನಿಯವರು ಹೋಳಿಗಿ ಮಾಡಿ ಉಂಡ್ರ
ತನ್ನ ಹೆಂಡತಿ ಮೇಲೆ ತೆಗಿವದು ಸಿಟ್ಟೋ ॥1 ॥

ಛೊಲೊಂದು ಬೇಡಿ ಬಡವನಾಗುತಾನ
ಇನ್ನೊಂದು ರಾಜ್ಯಾ ಘಳಸುವೆ ಅಂತಾನ
ನರಿ ಕಕ್ಕಿಕಾಯಿ ತಿಂದು ಟಿಣಕತಾದ
ದಮ್ಮ ಹಿಡಿಯೋ ನಿನ್ನ ಹಮ್ಮಿನ ಸಿಟ್ಟೋ ॥2 ॥

ಈ ಮನಸಿಂದ ಯಾತರ ಬೈಕಿ
ಬೇಡಿ ಅಳುತಾದ ಚಂದ್ರನ ಚುಕ್ಕಿ
ತಡಾ ಯಾಕ ಬಾ ಇನ್ನೊಂದು ಹಾರಕಿ
ಬೆನ್ನಿಗಿ ಬರುವದು ಶಿರೋಮಣಿ ಧಡಕಿ ॥3 ॥

[ಚಂದ್ರಶಿರೋಮಣಿ, ಬಾಳೋಜಿ ಮತ್ತು ಚಂದ್ರಾವತಿ ಬರುವರು]

ಚಂದ್ರಾವತಿ : ಮಗುವೆ ಶಿರೋಮಣಿ ಬಹಳ ಹುಶಾರಲಿಂದ ಕೆಲಸ ಮಾಡು. ಆ ದುಷ್ಟ ದೇವೀಂದ್ರನ ವಧಾ ಮಾಡುವಂತವನಾಗು.

ಚಂದ್ರಶಿರೋಮಣಿ : ಅಮ್ಮಾ ತಾಯಿ ಮುತ್ಯಾ ಬಾಳೋಜಿ ನೀವು ಇಲ್ಲೆ ನಿಲ್ಲುವಂತವರಾಗಿರಿ ಆ ದೇವೀಂದ್ರನ ಶೌರ್ಯ ನೋಡುವೆ.

ನಿಲ್ಲು ನಿಲ್ಲು ಅಧಮನೆ
ನಿಲ್ಲು ಪಾಪಿ ನೇತ್ರನೆ ॥ಪಲ್ಲ ॥

ಪರಧನ ಪರ ಭೂಮಿ ಕಂಡು
ಕುಸ್ತಿ ಆಡುವ ಹೀನನೇ ॥1 ॥

ಎಲಾ ದೇವೀಂದ್ರನೇ ನಿನ್ನಂತ ಮೂರ್ಖನನ್ನು ಎಲ್ಲಿಯೂ ಕಾಣೆ. ಇಲ್ಲಿ ಈಗ ಸರಿಯಾಗಿ ಸಿಕ್ಕಿರುವಿ. ಈ ಬಾಣಿನ ರುಚಿ ನೋಡಿರುವಿಯಾ ?

ದೇವೀಂದ್ರ :

ಸಕು ಮಾಡು ಹುಡುಗನೇ
ಕೋಕು ಬುದ್ಧಿ ಪೋರನೇ ॥ಪಲ್ಲ ॥

ಬಾಣಿನ ಅಂಜಕಿ ನನಗ ಇಲ್ಲಾ
ಹಿಡಿದು ಬಡಿವೆ ಗಲ್ಲಾನೆ ॥1 ॥

ಎಲಾ ಹುಚ್ಚ ಪೋರನೇ ಕೇಳು. ಈ ದೇವೀಂದ್ರನ ದಾಳಿಗೆ ದಾರು ಈಡ ಇಲ್ಲಾ. ಇಲ್ಲದಿದ್ದರೆ ನಿನ್ನ ಗತಿ ಅಭಿಮನ್ಯುವಿನಂತೆ ಆಗುವುದು. ಸುಮ್ಮನೆ ವ್ಯರ್ಥ ಪ್ರಾಣ ಕೊಡಬ್ಯಾಡ ಇಲ್ಲಿಂದ ಹೊರಡು.

ಚಂದ್ರಶಿರೋಮಣಿ :

ಕೇಳು ಕೇಳು ನೀಚನೆ
ನೀಚ ಗುಣದ ಹುಚ್ಚನೆ
ತನ್ನ ಅಗಲ ಬಿಟ್ಟು
ಮುಗಲ ಬಾಯಿ ತೆರೆದ ಶ್ವಾನನೇ ॥2 ॥

ದೇವೀಂದ್ರ :

ಬಾರೋ ಮಂತ್ರಿವರನೆ
ಕಸಕೋ ಇವನ ಬಾಣನೆ
ಧಮ್ಮು ಮಾತನಾಡುತಾನ
ಮುರದ ಕಟ್ಟೋ ಪೋರನೇ ॥2 ॥

ಎಲಾ ಹುಡುಗನೆ ಇಕೋ ನೋಡು ಈ ಖಡ್ಗಲಿಂಗ ನಿನ್ನ ವಧಾ ಮಾಡುವೆ.

ಮಂತ್ರಿ :

ಸಾಕು ಮಾಡೋ ಹುಡುಗ
ನಿಂದು ಸಾಕು ಮಾಡೋ ॥ಪಲ್ಲ ॥

ಹೆಚ್ಚಿನ ಮಾತು ಇನ್ನೊಮ್ಮೆ ಆಡುಬ್ಯಾಡೋ
ಬಚ್ಚಿಕೊಂಡು ಸುಮ್ಮನೇ ನೀನು ಕೂಡುಬ್ಯಾಡೋ
ಸಿಟ್ಟಿನ ಯಾಳೆ ಒಂದ ಪೆಟ್ಟ ಬಿದ್ದರೆ ಎಲು ಮುರದತ್ತು ನೋಡೊ ॥1 ॥

ಎಲಾ ಹುಚ್ಚಾದ ಹುಡುಗನೆ ಸುಮ್ಮನೇ ಅನರ್ಥ ಬೊಗಳುವ ನಿನ್ನ ಚಾಲಬಿಟ್ಟು ಸರಿಯಾಗಿ ಮಾತನಾಡಿ ಇಲ್ಲಿಂದ ಹೊರಡು.

ಚಂದ್ರಶಿರೋಮಣಿ :

ಹುಡುಗ ಹುಡುಗ ಅನುಬ್ಯಾಡ
ಮಂತ್ರಿ ಬೆಡಗ ನೀ ಕೇಳೊ ॥ಪಲ್ಲ ॥

ಮಂತ್ರಿಯ ಗುಣಗಳು ಹ್ಯಾಂಗ ಇರಬೇಕು
ಕಂತ್ರಿಯ ಗುಣಗಳು ಅಳಿದಿರಬೇಕು
ಜಂತ್ರಿ ಓದಿಕೊಂಡು ಅಂತ್ರ ಮಾರ್ಗದಿಂದ
ಪರಧನ ಅತಂತ್ರ ಕೇಳೋ ॥1 ॥

ಚಂದ್ರಾವತಿ : ಎಲಾ ಮದ ಸೊಕ್ಕಿದ ದೇವೀಂದ್ರನ ಮಂತ್ರಿಯೇ ನೀವು ಮರ್ತ್ಯಕ್ಕೆ ಬಂದ ಮೇಲೆ ಇನ್ನೊಬ್ಬರ ರಾಜ್ಯಕ್ಕೆ ಧಣಿ ಆಗಬೇಕು ಎಂಬ ಶಾಸ್ತ್ರ ಓದಿಕೊಂಡಂತೆ ಕಾಣುತ್ತದೆ. ಎಲಾ ಮೂರ್ಖರೆ ಸ್ವಲ್ಪ ವಿಚಾರ ಮಾಡಿರಿ.

ದೇವೀಂದ್ರ :

ಹೆಣ್ಣು ಬರಬಾರದು ಕಣ್ಣ ತೆರೆದು ಪುರುಷನ ಮೇಲೆ ॥ಪಲ್ಲ ॥

ಹೆಣ್ಣಿನ ಬುದ್ಧಿ ಮೊಳಕಾಲ ಕೆಳಗೆ
ಜ್ಞಾನ ಇಲ್ಲದೆ ಬೊಗಳದು ತಾನೆ
ಸಣ್ಣ ಮಾತನಾಡಿ ಶರ್ಣಾಗಿ ಹೋಗು
ಪ್ರಾಣ ಹಾನಿ ಮಾಡಕೋಬ್ಯಾಡ ಸುಮ್ಮನೆ ॥1 ॥

ದ್ರೋಪದಿ ಸೀರಿ ಸೆಳೆಯುವಾಗ
ಪಾಂಡವರು ವೀರಶೂರರು ಕುಂತಿರು ಸುಮ್ಮನೆ
ಬಲ ಮುಗದು ಮೂಗುದ್ದು ಹಾರವರಿಗೆ
ಮುಗರಾಣಿ ಹಾಕುವೆ ತಿಳಿ ನೀನೇ ॥2 ॥

ಚಂದ್ರಾವತಿ :

ಕುವಿಚಾರಿ ಮುಠ್ಠಾಳನೇ ಹಮ್ಮಿನ ಮಾತನಾಡಬ್ಯಾಡ ॥ಪಲ್ಲ ॥

ಒಯ್ದು ದುಷ್ಟನ ಕೊಯ್ದು ಪಟ್ಲ
ಹಿಡಿದು ಸಿರಗಳು ಕೊಯ್ದು ಹಾಕುವೆ
ಹಚ್ಚೋ ಶಿರೋಮಣಿ ಬಾಣ ಹಚ್ಚು
ಈ ನೀಚನಿಗೆ ಗುರಿ ಇಡೋ ॥1 ॥

ಬಾಳೋಜಿ : ಎಲಾ ಶಿರೋಮಣಿಯೆ ಸೂರ್ಯ ತೇಜ ಬಾಣ ಹಚ್ಚಿ ಈ ನೀಚನ ಶಿರ ತೆಗಿಲಿಕ್ಕೆ ಅಪ್ಪಣೆ ಕೊಡುವೆನು. ತಡಮಾಡದೆ ಬಾಣ ಹಚ್ಚು. ಏಕೆಂರೆ ಸೃಷ್ಟಿದೊಳಗೆ ಹೀನ ಜ್ಞಾನದ ದೃಷ್ಟಿಯು ಬ್ಯಾಡದು. ರಾಮನು ಸುಗ್ರೀವನ ಅಣ್ಣನಾದ ವಾಲಿಗೆ ಎಷ್ಟು ಬೇಡಿಕೊಂಡರು ವಧಾ ಮಾಡಲಿಲ್ಲವೆ. ಆದರ ಸಲುವಾಗಿ ಈ ಮೂಳನಾದ ದೇವೀಂದ್ರನಿಗೆ ವಧಾ ಮಾಡಲಿಕ್ಕೆ ಬೇಕು.

ಚಂದ್ರಶಿರೋಮಣಿ :

ತಡಿಯೊ ತಡಿಯೋ ದೇವೀಂದ್ರ
ನಿನ್ನ ಹಮ್ಮ ಇಳಿಸುವೆ ॥ಪಲ್ಲ ॥

ಎಲ್ಲಿ ಹೋದರೆ ಬಿಟ್ಟವನಲ್ಲಾ
ಬಿಟ್ಟು ಬಿಡುವನಲ್ಲಾ ರಾಜ್ಯಗಾದಿಯು
ನೋಡೋ ನಿನ್ನ ಭುಜಕೆ ಬಾಣ ಹೊಡಿವೆ ॥1 ॥

ಎಲಾ ದೇವೀಂದ್ರನ ಮಂತ್ರಿ ನಿಲ್ಲು ನಿನಗೆ ಮುರದು ಕಟ್ಟುವೆ.

[ದೇವೀಂದ್ರನು ಧಪ್ಪಂತ ಬೀಳುವನು, ಮಂತ್ರಿ ಎಬ್ಬಿಸುವದಕ್ಕೆ ಹೋಗುವನು]

ಮಂತ್ರಿ : ದೇವೀಂದ್ರ ರಾಜರೆ ಇನ್ನು ಮಾತ್ರ ತಡಮಾಡದೆ ಶಿರೋಮಣಿಗೆ ಶರಣು ಹೋಗನು ನಡಿಯರಿ.

ದೇವೀಂದ್ರ : ರಾಜಾಧಿರಾಜಾ ಶಿರೋಮಣಿಯೆ, ಇನ್ನು ಮಾತ್ರ ಶರಣ ಬಂದ ಮೇಲೆ ಬಾನ ಹೊಡಿಬ್ಯಾಡರಿ. ನಮಗೆ ಜೀವದಾನ ಬಿಡು. ನಿಮ್ಮ ಗುಲಾಮನಾಗಿ ಸೇವೆಯಲ್ಲಿ ದುಡಿಯುವೆನು. ನಾನು ಮಹಾ ಅಪರಾಧಿಯಾದೆನು. ಎನ್ನ ರಾಜ್ಯಗಾದಿಯು ನಿಮಗೆ ಕೊಡುವೆನು. ಇಷ್ಟೇ ಬೇಡಿಕೊಂಬುವೆನು.

[ಒಬ್ಬ ಸೈನಿಕ ಬರುವನು]

ಸೈನಿಕ : ದೇವೀಂದ್ರ ಮಹಾರಾಜರೆ ನಾನು ಏನು ಹೇಳಲಿ ಯುದ್ಧದ ಸುದ್ದಿಯು.ಶ್ರೀಮಾನ ಜಗನ್ನಾಥ ಮಹಾರಾಜರ ಫೌಜ ಬಂದು ನಮ್ಮ ಸೈನಿಕರಿಗೆ ಕೈದ ಮಾಡಿ ಬಹಳ ಭೀಕರಲಿಂದ ಯುದ್ಧ ಮಾಡುತ್ತಿದ್ದಾರೆ. ಇನ್ನು ಮೇಲೆ ನಮ್ಮ ಗತಿ ಛೊಲೋ ಇಲ್ಲಾ. ಇಲ್ಲಿಂದ ಓಡಿ ಹೋಗಮಿ ನಡಿರಿ.

ದೇವೀಂದ್ರ : ತಮ್ಮಾ ಓಡಿ ಎಲ್ಲಿಗೆ ಹೋಗಬೇಕು. ನಮ್ಮ ಹಮ್ಮ ನಮಗೆ ಮುರಿವದು. ಇನ್ನು ಮೇಲೆ ನಮಗೆ ಶಿವನೇ ಗತಿ.

ಚಂದ್ರಶಿರೋಮಣಿ : ಎಲಾ ಮುರಲೀಧರ, ಹರಿಹರಾ ಈ ಮೂಗರಿಗೆ ಕಂಬಕ್ಕೆ ಬಿಗಿದು ಕಟ್ಟಿರಿ (ಅಪ್ಪನೆ).

[ಮೂಗರು ಪದಾ ಹಾಡುವರು]

ಮನದಣಿಯೆ ಗುಣಮಣಿಯೆ ಶಿರೋಮಣಿಯೆ
ಕೇಳ ನಮ್ಮ ಅಪರಾಧಿ ಕ್ಷಮಾ ಮಾಡು ಮಹಾರಾಜಾ ॥ಪಲ್ಲ ॥

ಬೇಡಿಕೊಂಬುವೆ ನಿಮಗ ಮಹಾರಾಜಾ
ಅಪಕೀರ್ತಿವಾದೆನು ಮುಗಿವೆನು ಕೈಯಾ
ತ್ರಾಯ ತ್ರಾಯ ನಮ್ಮ ಬುದ್ಧಿಯು ಅಡಿಪಾಲಾ
ಮುರದು ಕಟ್ಟಿಸುಬ್ಯಾಡ ರಾಜಾ ॥1 ॥

ಈ ಮನಸಿನ ಹವಣಕಿ ಛೊಲೋದಲ್ಲಾ
ಗರ್ವಿನ ಮಾತಾಡಸಿ ಮಾಡದು ದಿಕ್ಕಂಪಾಲಾ
ಮನಸಿನ ಅವಗುಣ ಓಡಿ ಹೋಯಿತು ತಾನೆ
ಸೂಲಿಗಿ ತಂದಿಟ್ಟ ನಮಗ ರಾಜಾ ॥2 ॥

ಅಮ್ಮ ಕೇಳಮ್ಮ ನಾವು ನಿಮ್ಮ ಕೂಸ
ನಿಮ್ಮ ಸರಿ ವಾದ ಮಾಡಬ್ಯಾಡ ಈ ಮನಸ
ದೊಡ್ಡ ಮನಸ್ಸು ಮಾಡಿ ಬಿಡಿಸಮ್ಮ ಈ ಝೋಲಿ
ಧಡ್ಡಂದು ಹಿಡಿ ತಾಯಿ ಈ ಅರಜಾ ॥3 ॥

ಜಯಸಿಂಗ ವಾಶಾ ಗುರು ವೀರಭದ್ರ
ಭದ್ರಿಕಾಳಿ ಮನೋಹರ ಮಹಾರುದ್ರ
ಬಲಭೀಮ ನಿಮ್ಮ ಚರಣ ಮರಿಯದೆ ಸ್ಮರಿಸುವೆ
ತಾ ಮಾಡಿದ ಕರ್ಮವು ತನಗ ಬೇಜಾ ॥4 ॥

ದೇವೀಂದ್ರ : ಮಹಾರಾಜ ಶಿರೋಮಣಿಯೆ ನೀವು ಹೇಳಿದ ಪ್ರಕಾರ ನಾನು ನಡಿತಿನಿ. ನಮಗೆ ಈ ಯಮಬಂಧನವನ್ನು ಬಿಡಿಸಿ ತಮ್ಮ ಸೇವೆಯಲ್ಲಿ ಇಟ್ಟುಕೊಳ್ಳುರಿ. ನನ್ನ ಅಜ್ಞಾನವು ಈಗ ದೂರವಾಯಿತು. ಯಾಕಂದರೆ ನೀವು ನನಗೆ ಪರಮಾತ್ಮನ ಸ್ವರೂಪ ಕಂಡಿದಂತೆ ಆಯ್ತು.

ಚಂದ್ರಶಿರೋಮಣಿ : ಮುತ್ಯಾ ಬಾಳೋಜಿ, ಜಗನ್ನಾಥ ರಾಜರು ಹೇಳಿದ ಪ್ರಕಾರ ಇವತ್ತು ಯಾಕೆ ಬರಲಿಲ್ಲ.

[ಜಗನ್ನಾಥ ರಾಜರು ಬರುವರು]

ಚಂದ್ರಶಿರೋಮಣಿ : ಜಗನ್ನಾಥ ಮಹಾರಾಜರೆ ನೀವು ಹೇಳಿದ ಪ್ರಕಾರ ದೇವೀಂದ್ರನನ್ನು ಕಟ್ಟಿರುವೆನು. ಇನ್ನು ಮೇಲೆ ರಾಜನೀತಿ ಹೇಳಿ ಬಿಡುವಂತವರಾಗಿರಿ.

ಜಗನ್ನಾಥ : ಶಬ್ಬಾಸ್ ಶಿರೋಮಣಿ ಬಹಳ ಪರ ಉಪಕಾರ ಮಾತನಾಡುವಿ. ಎಲಾ ದೇವೀಂದ್ರನೇ ಕೇಳೋ.

ಜಗನ್ನಾಥ :

ದೇವೀಂದ್ರ ರಾಜ ನೀತಿ ಮುಂದ ಕೇಳೋ
ಹಿಂದಿನವರು ನಿನ್ನಂತೆ ಆಗ್ಯಾರೋ ಹಾಳೋ ॥ಪಲ್ಲ ॥

ರಾಜಾ ಮಂತ್ರಿ ಇರುವದು ಒಂದೇ ಮನಸ
ಪ್ರಜಾಗಳಿಗೆ ಇರುವದು ಉಲ್ಲಾಸ
ದೂರ ಇಲ್ಲೊ ತನ್ನ ಬಲ್ಲಿ ಕೈಲಾಸ
ಒಳ್ಳೆ ಗುರುವಿಂದು ತೊಗೊಬೇಕೋ ಉಪದೇಶ ॥1 ॥

ಪರಧನ ಪರಭೂಮಿ ಆಸಿ ಬಿಟ್ಟು
ನಾಯೆಂಬೋ ಹೀನ ಮೊಳಕಿಯ ಸುಟ್ಟು
ಇಂದ್ರಜಿತ ಕುಂಭಕರಣ ಹೋಗ್ಯಾರ ಹೊಂಟು
ಓದಿ ನೋಡೋ ಪುರಾಣ ಹದಿನೆಂಟು ॥2 ॥

ರಾಮನಂತೆ ನೀತಿಲಿ ನಡಿ ಮುಂದಾ
ದೇಶಕೆಲ್ಲಾ ಕೀರ್ತಿ ಬರುವದು ಆನಂದಾ
ಜಯಸಿಂಗ ವಾಶಾ ಬಲಭೀಮನ ದಯದಿಂದಾ
ದೇವಿದಾಸ ಬರದಿಟ್ಟಾನ ಕವಿ ಛಂದಾ ॥3 ॥

ತಮ್ಮಾ ಹರಿಹರಾ, ಮುರಲಿಧರಾ ಈ ದೇವೀಂದ್ರನಿಗೆ ಬಿಟ್ಟು ಬಿಡಿರಿ. ಎಲಾ ಶಿರೋಮಣಿ ನನ್ನ ಆಜ್ಞಾ ಪ್ರಕಾರ ಕೆಲಸವಾಯ್ತು.

ದೇವೀಂದ್ರ : ಜಗನ್ನಾಥ ಮಹಾರಾಜಾ ಈ ಶಿರೋಮಣಿಲಿಂದೆ ನಮ್ಮ ರಾಜ್ಯ ಕಾರಭಾರ ನಡೆಸುವದಕ್ಕೆ ಅಪ್ಪಣೆ ಆಗಲಿ. ನಾನು ಶಿರೋಮಣಿ ಹೇಳಿದ ಪ್ರಕಾರ ನಡಿವೆನು. ನಿಮ್ಮಂಥ ಪರ ಉಪಕಾರಿ ಎಲ್ಲಿಯೂ ಕಾಣೆನು. ದಯಾಮಾಡಿ ಶಿರೋಮಣಿ ನಮ್ಮ ರಾಜ್ಯಗಾದಿ ಅಧಿಕಾರ ಮಾಡುವಂತವರಾಗಿರಿ ಇಷ್ಟೇ ಬೇಡಿಕೊಳ್ಳುವೆ.

ಭೂಪಾಲ : ಜಗನ್ನಾಥ ಮಹಾರಾಜರೆ ನನ್ನ ಮಾತೊಂದು ನಡೆಸಿ ಕೊಡಿರಿ. ಶಿರೋಮಣಿಗೆ ನನ್ನ ರಾಜ್ಯ ಪಟ್ಟಾಭಿಷೇಕ ಮಾಡಿ, ನಗರವೆಲ್ಲಾ ಶೃಂಗಾರ ಮಾಡಿ ಆನಂದದಿಂದ ಹೋಗುವಂತವರಾಗಿರಿ. ಈತನು ರಾಜ್ಯಗಾದಿಗೆ ಒಪ್ಪುವನು.

ಚಂದ್ರಾವತಿ : ಮಹಾರಾಜ ಭೂಪಾಲ ರಾಜರೆ ಈ ಶಿರೋಮಣಿಯು ತಮ್ಮ ಪುತ್ರನು.ನಾನು ನಿಮ್ಮ ಪತ್ನಿ ಚಂದ್ರಾವತಿಯು ಸ್ವಲ್ಪ ವರ್ತಮಾನ ಕೇಳಿರಿ.

ಪತಿರಾಯ ತಪ್ಪಿಲ್ಲಾ ನಿಮ್ಮ ಕಡಿ ರಾಜಾ
ಎನ್ನ ಹಣಿಬಾರ ಬರಿದ ವ್ಯಾಸಮಹಾರಾಜಾ ॥ಪಲ್ಲವಿ ॥

ಕಲಾವತಿ ಸುಳ್ಳ ಮಾತಿಗಿ ಆದಿ ಸಿಟ್ಟಾ
ಮನ್ಯಾಗ ಕುಂತಿರಿ ಚಾಂಡಾಲರ ಕೈಯಾಗ ಕೊಟ್ಟ
ಪುಣ್ಯವಂತರು ಚಾಂಡಾಲರು ಹೋದರು ಬಿಟ್ಟ
ಬಾಳೋಜಿ ಮುತ್ಯಾನಲ್ಲಿ ಉದ್ಧಾರ ಶಿರೋಮಣಿ ಬೇಟಾ ॥

ಪತಿರಾಯ ಈ ಬಾಳೋಜಿ ಮುತ್ಯಾನ ಉಪಕಾರ ನಮ್ಮ ಮೇಲೆ ಬಹಳ ಆಯ್ತು.ಇದಲ್ಲದೆ ಜಗನ್ನಾಥ ರಾಜರ ಆಧಾರಲಿಂದ ಇಲ್ಲಿಗೆ ಬರೋಣವಾಯ್ತು.

ಭೂಪಾಲ :

ಮಂತ್ರಿ ಕರಿಯೋ ಲಗೂ ಹೋಗಿ ಕಲಾವತಿಯಾ
ಹೆಂತಾ ಸುಳ್ಳ ಹೇಳಿ ಕೆಡಸಿಟ್ಟಾಳ ನಮ್ಮ ಮನಿಯಾ ॥ಪಲ್ಲವಿ ॥

ಶಕುನಿ ಸುಳ್ಳ ಆಡಿ ಕೌರವರ ನಾಶ ಮಾಡಿದಾ
ಸುಳ್ಳ ಮಾತಿಗಿ ಧರ್ಮರಾಜಾ ಕುಂತಿದ ಮುನಿದಾ
ತಡವಿಲ್ಲದೆ ಕರತಂದು ಏರಿಸು ಸೂಲಿಯಾ ॥

ತಮ್ಮಾ ಮಂತ್ರಿವರಾ ಲಗೂ ಕಲಾವತಿಗೆ ಕರಿಸೂ ಈ ಸಭಾದೊಳು ಜಗನ್ನಾಥ ಮಹಾರಾಜೆರ ಎದುರು ಆಕಿಗೆ ಸುಳ್ಳು ಹೇಳಿದ ಶಿಕ್ಷಾ ಆಗಲಿಕ್ಕೆ ಬೇಕು.

ಮಂತ್ರಿ : ತಮ್ಮ ಅಪ್ಪಣೆಯಂತೆ ಕರೆತರುವೆನು.

[ಕಲಾವತಿ ಪದಾ ಹಾಡುತ್ತ ಬರುವಳು]

ಕಲಾವತಿ :

ಪತಿರಾಯ ನನ್ನ ಕಡಿ ಆಗ್ಯಾದ ಬೇಜಾ
ಸುಳ್ಳ ಮಾತಿಗಿ ಹಿಂತಾದು ಬಂತು ನತೀಜಾ

ನಾ ಮಾಡಿದ ಫಂದ ಆಯಿತು ಎಲ್ಲಾ ಖಾಲಿ
ಈಗಿಂದೀಗೆ ಯಮಾ ಸಾಕ್ಷಿ ಬಂತು ಸೂಲಿ
ಮಹಾಪಾಪಿಗಿ ಬೇಕಾದು ಮಾಡೋ ರಾಜಾ ॥

ಮಹಾರಾಜರೆ ಪಂಚ ಇದ್ದಲ್ಲಿ ಪರಮೇಶ್ವರ ಇರುವನೆಂದು ಸ್ರುತಿ ಇರುವದು.ನಾನು ಮಹಾದೋಷಿಯು.ತಮಗೆ ತಿಳಿದ ಶಿಕ್ಷಾ ಕೊಡುವಂತವರಾಗಿರಿ.

ಚಂದ್ರಶಿರೋಮಣಿ :

ಕೇಳ ತಂದಿ ಕಲಾವತಿಗಿ ಕೊಡಬಾರದು ಸೂಲಿ
ನಮ್ಮ ಹಣಿಬಾರಕ ಬಂದಿದ್ದು ಎಲ್ಲಾ ಬರಲಿ ॥ಪಲ್ಲವಿ ॥

ರಾಮ : ಲಕ್ಷ್ಮಣ ಮೊದಲಾದ ಹರಿಶ್ಚಂದ್ರ
ಹೆಂತಾ ವನವಾಸ ಗಳದಾರೋ ರಾಜೇಂದ್ರ
ಖುಸಿಲಿಂದ ತಾಯಿ ಇರಲಿ ಮನಿಯಲ್ಲಿ॥

ಜಗನ್ನಾಥ ಮಹಾರಾಜರೆ ನಾನಾಡಿದ ಮಾತು ತಮ್ಮ ಮನಸ್ಸಿನಲ್ಲಿ ಏನಾದರೂ ಸಂಶಯ ತರುವದೆ ? ತಮಗೆ ನನ್ನ ಮಾತು ಒಪ್ಪಿಗೆ ಆಗಿರುವದಾ ?

ಜಗನ್ನಾಥ : ಮಗುವೆ ಶಿರೋಮಣಿ, ನಿನ್ನಂತ ಜ್ಞಾನವುಳ್ಳ ಮನುಷ್ಯ ಜಗದೊಳಗೆಇರುವದೆ ಸತ್ಯ.ಎಲಾ ಭೂಪಾಲನೇ ಶಿರೋಮಣಿ ಹೇಳಿದ ಪ್ರಕಾರ ನಡಿವಂತವನಾಗು.ಎಲಾ ಕಲಾವತಿಯೆ ನೀನು ಒಳ್ಳೆ ರೀತಿಲಿಂದ ಶಿರೋಮಣಿ ಅಜ್ಞಾದ ಪ್ರಕಾರ ಇರುವಂತವಳಾಗು.

ಕಲಾವತಿ : ಮಗುವೆ ದೊಡ್ಡ ಮನಸ್ಸಿನ ಮಹಾದೇವಾ ನಾನು ಇರುವತನಕಾ ನಿನ್ನ ಆಜ್ಞಾ ಪ್ರಕಾರ ಇರುತ್ತೇನೆ.

ಚಂದ್ರಶಿರೋಮಣಿ : ತಾಯಿ ಚಂದ್ರಾವತಿ, ಮುತ್ಯಾ ಬಾಳೋಜಿ ನಿಮ್ಮೆಲ್ಲರ ಶುಭ ಆಶೀರ್ವಾದ ನನಗೆ ಸದಾ ಇರಲಿ.

ಮಂಗಲ :

ಜಯ ಜಯ ಮಂಗಳಾರತಿ
ಬೆಳಗುವೆ ದೇವಾ ಶಂಭೊ ಮಹಾದೇವಾ ॥ಪಲ್ಲವಿ ॥

ರಜತಮ ದ್ವೈತ ಬಿಟ್ಟು
ಸತ್ವ ಚರಣ ನೇಮ ಇಟ್ಟು
ಕೋಟಿ ರವಿ ಪ್ರಭಾಕರಗೆ
ದೀವಟಿಗಿ ಜೀವಾ ಬೆಳಗುವೆ ದೀವಾ ॥

ನಾನಾ ಜಲ್ಮದ ಅಂಧಕಾರ
ಮಾನವ ಜಲ್ಮಕೆ ದೂರ
ಮೂರು ಗುಣ ಅರ್ಪಿತ ನಿಮಗೆ
ಮಾಡಿಕೊಳ್ಳೊ ಅನುಭಾವ
ಪರಂಪೂಜಿ ದೇವಾ ಬೆಳಗುವೆ ದೀವಾ ॥

ಹರಪ್ರೇಮ ನಾಮದ ಲಾಭ
ದೊರಿವದು ಮಹಾ ದುರ್ಲಭ
ಸಿದ್ಧ ಪ್ರಭು ಸ್ಥಾಪನಾ ಮಾಡಿ
ಮಡಿವಾಳ ಘಳಸಿದ ಧನವಾ
ಲಾಭದ ಜನವಾ ಬೆಳಗುವೆ ದೇವಾ ॥

***