ಸೃಷ್ಟಿಯ ಇನ್ನುಳಿದ ಚರಾಚರ ವಸ್ತುಗಳಿಗಿಂತ ಸೂರ್ಯ ಚಂದ್ರ ತುಂಬಾ ವಿಸ್ಮಯಕಾರಿ ಹಾಗೂ ಅದ್ಭುತ ವಸ್ತುಗಳಾಗಿವೆ. ಪ್ರಕೃತಿಯ ಈ ಅದ್ಭುತ ಸೃಷ್ಟಿಯಿಂದ ಪ್ರಪಂಚದಾದ್ಯಂತ ನೈಸರ್ಗಿಕ ಬದಲಾವಣೆಗಳಾಗುವುದನ್ನು ಕಾಣುತ್ತೇವೆ. ಸೂರ್ಯ ಹುಟ್ಟಿದಾಗ ಬೆಳಕು, ಮುಳುಗಿದಾಗ ಕತ್ತಲೆ, ಚಂದ್ರನ ಶೀತಳ ಬೆಳಕು, ಮೋಡ-ಮಳೆ, ನಕ್ಷತ್ರಗಳ ಮಿನುಗುವಿಕೆ- ಇಂಥ ಅಸಂಖ್ಯಾತವಾದ ನೈಸರ್ಗಿಕ ವ್ಯಾಪಾರವು ಯಾಂತ್ರಿಕವೆನ್ನುವ ರೀತಿಯಲ್ಲಿ ನಡೆದಿರುತ್ತದೆ. ಈ ಬಗೆಯ ನೈಸರ್ಗಿಕ ಬದಲವಣೆಯು ಮಾನವನ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನುಂಟು ಮಾಡುತ್ತದೆ. ಪ್ರಾಚೀನ ಕಾಲದಿಂದಲೂ ಮಾನವ ಈ ಬದಲಾವಣೆಯನ್ನು ನಿರಂತರವಾಗಿ ಗಮನಿಸುತ್ತಾ, ಅನುಭವಿಸುತ್ತಾ ಬಂದಿದ್ದಾನೆ. ಕಣ್ಣಿಗೆ ಕಾಣುವ, ಕೈಗೆಟ್ಟುಕದ, ಭೂಮಿಗೆ ಹತ್ತಿರವಾದ, ನಿರ್ಜೀವವಾದರೂ ಭೂಮಿಯನ್ನು ಸುತ್ತುವ ಜೀವಶಕ್ತಿಯನ್ನು ಪಡೆದಿರುವ ಚಂದ್ರ ಸೌರವ್ಯೂಹದ ಎಲ್ಲ ಗ್ರಹಗಳಿಗಿಂತಲೂ ಆಕರ್ಷಕನಾಗಿದ್ದಾನೆ. ಭೂಮಿಯ ಏಕೈಕ ಉಪಗ್ರಹ ಇದಾಗಿದೆ. ಚಂದ್ರನ ಬಗೆಗೆ ಮೊದಲಿನಿಂದಲೂ ಸಾಕಷ್ಟು ಕುತೂಹಲ ಬೆಳೆಯಿಸಿ ಕೊಂಡ ಮಾನವ ಇತ್ತೀಚೆಗೆ ಈ ಗ್ರಹದ ಮೇಲೆ ಪಾದಾರ್ಪಣೆ ಮಾಡಿ, ಅವನ ಬಗೆಗೆ ಈವರೆಗಿದ್ದ ಮಾನವನ ಅನೇಕ ಕಲ್ಪನೆ ನಂಬಿಕೆಗಳಿಗೆ ಹೊಸ ತಿರುವುದು ಕೊಟ್ಟಂತಾಗಿದೆ. ಚಂದ್ರನ ಬಗೆಗೆ ವೈಜ್ಞಾನಿಕವಾಗಿ ಹಾಗೂ ಸೈದ್ಧಾಂತಿಕವಾಗಿ ನಡೆದಿರುವ ಅಭ್ಯಿಯನ ತುಂಬಾ ಪರಿಣಾಮಕಾರಿಯಾಗಿದೆ.

ವೇದ, ಪುರಾಣ, ಐತಿಹ್ಯಗಳಲ್ಲಿ ಚಂದ್ರ:

ಚಂದ್ರನಿಗೆ ಸಂಬಂಧಿಸಿದಂತೆ ನಮ್ಮ ವೇದ, ಪುರಾಣ, ಹಾಗೂ ಐತಿಹ್ಯಾದಿಗಳಲ್ಲಿ ವಿಭಿನ್ನ ಉಲ್ಲೇಖಗಳು ಕಂಡು ಬರುತ್ತವೆ. ಅವುಗಳು ಚಂದ್ರನ ಬಗೆಗೆ ವಿವಿಧ ನಂಬಿಕೆ, ಕತೆ-ಕಲ್ಪನೆಗಳನ್ನೊಳಗೊಂಡಿವೆ. ಭಗ್ನಾತ್ಮಾ, ಇಂದು, ಕುಮುದಪತಿ, ಮೃಗಾಂಕಾ, ನಿಶಾಕರಾ, ಶಶಿನ್, ಶಿವಶೇಖರ, ನಕ್ಷತ್ರನಾಥ, ಔಷಧಿಪತಿ, ಶಿತಾಗು, ಸೋಮ, ಶ್ವೇತವಾಜಿ, ಮಂಗಳ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಚಂದ್ರ ತುಂಬಾ ಪ್ರಭಾವಶಾಲಿಯಾಗಿದ್ದಾನೆ.

ಸೂರ್ಯನಿಗೆ ಈಶಾನ್ಯಕೋನದಲ್ಲಿ ಚಂದ್ರನಿರುತ್ತಾನೆ. ಇವನು ನವಗ್ರಹಗಳಲ್ಲಿ ಒಬ್ಬ. ಈ ದೇವತೆಗೂ ವೈದಿಕ ಹಿನ್ನೆಲೆಯಿದೆ. ಜಾತಿಯಲ್ಲ ಅವನು ಪೈಶ್ಯನಾಗಿದ್ದು, ರೋಹಿಣಿಯು ಅವನ ಹೆಂಡತಿಯಾಗಿದ್ದಾಳೆ. ಅವನ ವಾಹನ ಚಿಂಕೆ. ಅವನ ರಥಕ್ಕೆ ಎರಡು ಗಾಲಿಗಳು. ಮೂರೆಂಬ ಅಭಿಪ್ರಾಯವೂ ಇದೆ. ಅದನ್ನು ಬಿಳಿಬಣ್ಣದ ಹತ್ತು ಕುದುರೆಗಳು ಎಳೆಯುವವು. ಇಬ್ಬರು ಸಾರಥಿಗಳು. ಚಂದ್ರನ ತಂದೆ ಅತ್ರಿ ಎಂದೂ, ತಾಯಿ ಅನಸೂಯೆ ಎಂದೂ, ಇವನದು ಬಿಳಿಯ ಮಂಡಲವೆಂದೂ ಪುರಾಣದ ವಿವರ.

ಚಂದ್ರನ ಉಗಮ, ನಿಲವುಗಳ ಬಗೆಗೆ ಅನೇಕ ವಾದವಿವಾದಗಳಿವೆ. ಬ್ರಹ್ಮ ಅತ್ರಿ ಮುನಿಯನ್ನು ಸೃಷ್ಟಿಕಾರ್ಯದಲ್ಲಿ ನಿಯಮಿಸಿದ. ಅತ್ರಿ ತಪೋನಿರತನಾದಾಗ ಆತನ ಕಣ್ಣಿಂದ ದಿವ್ಯ ತೇಜಸ್ಸು ಹೊರಟಿತು. ಆ ತೇಜಸ್ಸನ್ನು ದಶದಿಕ್ಕುಗಳೂ ಧರಿಸಿದುವು. ಆದರೆ ಆ ತೇಜಸ್ಸಿನ ವೇಗವನ್ನು ಸಹಿಸಲಾರದೆ ಕ್ಷೀರಸಮುದ್ರದಲ್ಲಿ ಬಿಟ್ಟವು. ಬ್ರಹ್ಮ ಆ ತೇಜಸ್ಸನ್ನೆಲ್ಲ ಒಟ್ಟುಗೂಡಿಸಿ, ಪುರುಷಾಕಾರದಿಂದ ಒಂದು ವ್ಯಕ್ತಿಯಾಗುವಂತೆ ಮಾಡಿ, ಚಂದ್ರನೆಂಬ ಹೆಸರಿಟ್ಟು ಗ್ರಹಮಂಡಲದಲ್ಲಿ ಒಬ್ಬನಾಗಿರುವಂತೆ ನಿಯಮಿಸಿದ.

ಚಂದ್ರ, ತನ್ನ ಗುರುವಾದ ಬೃಹಸ್ಪತಿಯ ಹೆಂಡತಿ ತಾರೆಯನ್ನು ಅಪಹರಿಸಿ, ಅವಳಿಂದ ’ಬುಧ’ (ಗ್ರಹ)ನೆಂಬ ಮಗುವನ್ನು ಪಡೆದನೆಂದು ಪುರಾಣದ ಕಥೆ. ಚಂದ್ರನು ದಕ್ಷ ಪುತ್ರಿಯರಲ್ಲಿ ಅಶ್ವಿನೀ ಮೊದಲಾದ ಇಪ್ಪತ್ತೇಳು ಜನರನ್ನು ಮದುವೆಯಾಗಿದ್ದ. ಆದರೆ ಅವನು ರೋಹಿಣಿಯಲ್ಲಿ ವಿಶೇಷವಾಗಿ ಲೋಲನಾಗಿದ್ದನೆಂಬ ಕಾರಣಕ್ಕಾಗಿ ದಕ್ಷನಿಂದ ಕ್ಷಯರೋಗ ಪೀಡಿತನಾಗಿರುವಂತೆ ಶಾಪವುಂಟಾಯಿತು. ಶಾಪಗ್ರಸ್ಥನಾದ ಚಂದ್ರ ಸಂಪತ್ತು ನಾಶವಾಗುವಂತೆ ಶಾಪವಿತ್ತು ಕ್ಷೀರಸಮುದ್ರದಲ್ಲಿ ಅಡಗಿಕೊಂಡನು. ಔಷಧಿಗಳಿಗೆ ಅಧಿಪತಿಯಾದ ಚಂದ್ರನಿಲ್ಲದುದರಿಂದ ಪೈರು, ಪಚ್ಚೆ, ಗಿಡ, ಮರ, ಬಳ್ಳಿಗಳೆಲ್ಲವೂ ಸಾರಹೀನವಾದವು. ಬ್ರಹ್ಮನ ಸೂಚನೆಯ ಮೇರೆಗೆ ದೇವತೆಗಳೆಲ್ಲರೂ ಔಷಧಿಗಳನ್ನೆಲ್ಲ ತಂದು ಪಾಲ್ಗಡಲಲ್ಲಿ ಹಾಕಿ ಕಡೆಯಲಾಗಿ ಚಂದ್ರನು ಅಲ್ಲಿಂದ ಹರಬಂದನು. ದೇವತೆಗಳು ಕ್ಷೀರಸಮುದ್ರವನ್ನು ಮಥನಮಾಡಿದಾಗ ಚಂದ್ರ ಅಲ್ಲಿಂದ ಹುಟ್ಟಿದನೆಂದು ಪುರಾಣದ ವಿವರ.

ವೇದಗಳಲ್ಲಿ ಸೂರ್ಯನ ಬಗೆಗೆ ದೊರಕುವಷ್ಟು ಮಾಹಿತಿ ಚಂದ್ರನ ಬಗೆಗೆ ದೊರಕುವುದಿಲ್ಲ. ಯಾಕೆಂದರೆ ಚಂದ್ರ ಆರ್ಯೇತರ ಜನಾಂಗದ ದೇವತೆಯಾದ್ದರಿಂದ ಇದರ ಉಲ್ಲೇಖ ವೇದಗಳಲ್ಲಿ ಅಷ್ಟಾಗಿ ಕಂಡುಬರುವುದಿಲ್ಲ.

ಕಾವ್ಯಗಳಲ್ಲಿ ಚಂದ್ರ:

ಕಾವ್ಯ ಪ್ರಪಂಚದಲ್ಲಿ ಆಕಾಶದ ಇನ್ನುಳಿದ ವಸ್ತುಗಳಿಗಿಂತ ಚಂದ್ರನಿಗೆ ತುಂಬಾ ಮಹತ್ವದ ಸ್ಥಾನವಿದೆ. ನಮ್ಮ ಹಳಗನ್ನಡ ಕಾವ್ಯಗಳಲ್ಲಂತೂ ಚಂದ್ರನ ವರ್ಣನೆ ಮಾಡದೆ ಗತ್ಯಂತರವಿಲ್ಲ. ಯಾಕೆಂದರೆ ಅಷ್ಟಾದಶ ವರ್ಣನೆಗಳಲ್ಲಿ ಚಂದ್ರೋದರ ವರ್ಣನೆಯೂ ಒಂದಾಗಿದೆ. ಚಂದ್ರನ ಶೀತಲ ಬೆಳಕು ಸೌಂದರ್ಯದ ಪ್ರತೀಕವಾಗಿರುವುದರಿಂದ ಸೌಂದರ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ನಮ್ಮ ಕವಿಗಳು ಸ್ತ್ರೀಯರನ್ನು ಹೋಲಿಸುವುದುಂಟು. ಸ್ತ್ರೀಯ ಮುಖಲಾವಣ್ಯವನ್ನು ಬಣ್ಣಿಸುವಾಗ ಚಂದ್ರ ಮುಖಿ, ಚಂದ್ರವದನೆ, ಶಶಿವದನೆ, ಇತ್ಯಾದಿಯಾಗಿ ಬಳುಸುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅನೇಕ ಜನ ಸಂಸ್ಕೃತ ಕವಿಗಳು ಸೌಂದರ್ಯಕ್ಕೆ ಪ್ರತಿಯಾಗಿ ಶ್ರೀ ಲಕ್ಷ್ಮೀ, ಕಾಂತಿ, ರಶ್ಮಿ ಇತ್ಯಾದಿಯಾಗಿ ಬಳಸಿರುವುದು ಗಮನಾರ್ಹ. ಹೆಣ್ಣು, ಕವಿಯ ದೃಷ್ಟಿಯಲ್ಲಿ ಸಮಸ್ತ ಪ್ರಕೃತಿ ಸೌಂದರ್ಯದ ಆಗರ. ಕಾವ್ಯಗಳಲ್ಲಿ ಬರುವ ಚಂದ್ರೋದಯದ ವರ್ಣನೆ ಸಾಮಾನ್ಯವಾಗಿ ಸ್ತ್ರೀ ಚೈತನ್ಯಾರೋಪಣೆಯಾಗಿರುತ್ತದೆ. ಮನುಷ್ಯನ ಭಾವನೆಗಳೊಂದಿಗೆ ಹೆಚ್ಚಿನ ಸಂಬಂಧವನ್ನು ಪಡೆದಿರುವ ಚಂದ್ರ ಕಾವ್ಯಕ್ಕೆ ಪ್ರೇರಕ ಶಕ್ತಿಯಾಗಿದ್ದಾನೆ.

ಕಾವ್ಯಗಳಲ್ಲಿ ಕವಿಸಮಯಗಳನ್ನು ಬಳಸುವುದು ಸ್ವಾರಸ್ಯಕರವಾದ ಸಂಗತಿ. ಚಂದ್ರ-ಅಬುಧಿ, ಮಾಮರ-ಕೋಗಿಲೆ, ಚಕೋರ-ಚಂದ್ರಮ, ಅಂಬುಜ-ಭಾನು, ಪರಿಮಳ-ದುಂಬಿ, ಬೆಳ್ಗೊಡೆ-ಆಗಸ, ಚಂದ್ರ-ತಿಲಕ ಈ ಜೋಡಿಗಳು ಮಧುರ ಬಾಂಧವ್ಯದ ಸಂಕೇತಗಳಾಗಿ ನಮ್ಮ ವಚನಕಾರರ ವಚನಗಳಲ್ಲಿ ಬಳಕೆಗೊಂಡಿರುವುದನ್ನು ಕಾಣಬಹುದಾಗಿದೆ. ’ಗಗನವೇ ಗುಂಡಿಗೆ, ಆಕಾಶವೇ ಅಗ್ಭವಣಿ, ಚಂದ್ರ-ಸೂರ್ಯರಿಬ್ಬರೂ ಪುಷ್ಪನೋಡಾ!’ (ಅಲ್ಲಮ, ವ. ೨೦೮ ಪು. ೧೨೩) ಎಂಬ ವಚನದಲ್ಲಿ ಬರುವ ವರ್ಣನೆ ತುಂಬಾ ಸೊಗಸಾಗಿದೆ. ಸಕಲಜನಪ್ರಿಯನಾದ ಚಂದ್ರನನ್ನು ಕುರಿತು ಕವಿ ಕುವೆಂಪು ’ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೊ’ ಎಂದೂ, ಲಕ್ಷ್ಮೀಶನು ’ಜನಾವಲೋಕಪ್ರಿಯಂ’ ಎಂದು ಬಣ್ಣಿಸಿದ್ದಾನೆ’. ’ಇರುಳ್ಗಣ್ಣನೆಂದು ಚೆಂದವನಕ್ಕುಂ’ (ರಾಮಾಶ್ವ ೮೯-೨೮) ’ಬೆಳ್ಗೊಡೆಯಾಗಸಕೇರ‍್ದಿ ಚಂದವಂ ಗಡ (ಕಬ್ಬಿಕಾ ೧೮೩), ’ಚಂದ್ರಕಳೆ ಕಣ್ದೆಱೆದಂತೆ ನೆಱೆ ಮೆಱೆದು ನಡೆತಂದು ನಗತನೂಜೆ, ಚಂದ್ರಧರನ ಮುಂದೆ ನಿಂದು’ (ಗಿರಿಕ ೫-೭ ೬ವ), ’ಈ ಚಂದ್ರವೀಧಿಗೆ ರಸಿಕರೆ ವಿಬುಧರೆ ಬನ್ನಿರಿ ಕವಿ ಸಹೃದಯರೆ’ (ಚಂದ್ರವೀ ೧-೬) ಹೀಗೆ ಕಾವ್ಯಗಳಲ್ಲಿ ಚಂದ್ರ ಹಾಗೂ ಚಂದ್ರನ ಬೆಳಗಿನ ಚಿಂತೆ’ (ಬಸವ. ೩೬೪). ತಿಂಗಳ ಬೆಳಕಿನ ಸಿರಿಯಂ ಕಂಡು ನಾಯಿ ಹರುಷಗೊಂಡ ಬಳ್ಳಿಟ್ಟು ಬೊಗಳಿದಂತಾಯಿತು’ (ಘನವ ೩೬), ’ಹೊಳೆವ ಕೆಂಜೆಡೆಗಳ ಮೇಲೆ ಎಳೆವಳುದಿಂಗಳು (ಅಕ್ಷಮ), ’ನಂದಿಯನು ಏಱೆದನ ಚಂದಿರನ ಸೂಡಿದನ’ (ಸರ್ವಜ್ಞ – ೧) ಮುಂತಾದ ವಚನಗಳಲ್ಲಿ ವ್ಯಕ್ತವಾಗಿರುವ ಬೆಳದಿಂಗಳ ವರ್ಣನೆ ಸ್ವಾರಸ್ಯಪೂರ್ಣವಾಗಿದೆ.

ಜಾನಪದ ವಾಙ್ಮಯದಲ್ಲಿ ಚಂದ್ರ:

ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಹಾಡು, ಗಾದೆ, ಒಗಟು ಮೊದಲಾದವುಗಳಲ್ಲಿ ಚಂದ್ರನ ಅನೇಕ ವಿವರಗಳು ಕಂಡುಬರುತ್ತವೆ. ಜನಪದ ಕತೆ ಹಾಗೂ ಹಾಡುಗಳಲ್ಲಿ ರೂಪುಗೊಂಡ ಚಂದ್ರನ ಕಲ್ಪನೆಗಳಿಗೂ, ಪುರಾಣಗಳಲ್ಲಿ ರೂಪುಗೊಂಡ ಕಲ್ಪನೆಗಳಿಗೂ ಸಾಕಷ್ಟು ಸಾಮ್ಯತೆಗಳಿವೆ. ಬಹುಶಃ ಜಾನಪದ ಸಂಪ್ರದಾಯದ ವಿಕಸಿತ ಹಾಗೂ ವಿಸ್ತೃತರೂಪವೇ ಪುರಾಣಗಳಾಗಿರಬೇಕು.

ಮೋದಕ ಪ್ರಿಯನಾದ ಗಣಪತಿಯು ಒಂದು ದಿನ, ತನ್ನ ಭಕ್ತರ ಮನೆಯಲ್ಲಿ ಯಥೇಷ್ಟವಾಗಿ ಬೆಳೆಯಿಸುತ್ತಿರುವಾಗ, ಮಾರ್ಗ ಮಧ್ಯದಲ್ಲಿ ಹುತ್ತದೊಳಗಿಂದ ಒಂದು ಸರ್ಪವು ಬುಸುಗುಟ್ಟುತ್ತ ಎದುರಾಯಿತು. ಸರ್ಪಕ್ಕೂ ಇಲಿಗೂ ತುಂಬಾ ವೈರತ್ವ. ಸರ್ಪವನ್ನು ಕಂಡ ಇಲಿ ಒಮ್ಮೆಲೇ ಓಡಿತು. ಅದರ ಮೇಲೆ ಕುಳಿತಿದ್ದ ಗಣಪತಿ ಜೋಲಿ ಸಾಲದೆ ಕೆಳಗುರುಳಿ ಬಿದ್ದನು. ಯಥೇಷ್ಟವಾಗಿ ಉಂಡು ಬಿರಿದ ಅವನ ಹೊಟ್ಟೆ ಹರಿದು ಒಳಗಿನ ಕಡುಬುಗಳೆಲ್ಲ ಹೊರಚೆಲ್ಲಿದುವು. ಮೂಷಕವು ಓಡಿ ಹೋದುದನ್ನು ಲೆಕ್ಕಿಸದೆ ಹೊಟ್ಟೆಯಿಂದ ಹೊರಚೆಲ್ಲಿದ ಕಡಬುಗಳನ್ನೆಲ್ಲ ಸಂಗ್ರಹಿಸಿ ಮತ್ತೆ ಹೊಟ್ಟೆಗೆ ಸೇರಿಸಿಕೊಂಡು ಅಲ್ಲಿದ್ದ ಹಾವನ್ನೇ ಹೊಟ್ಟೆಗೆ ಬಿದಿಗುಕೊಂಡನಂತೆ. ಗಣಪತಿಯ ಈ ಅತಿ ಆಶೆಯನ್ನು ಕಂಡ ಚಂದ್ರ ಅವನಿಗೆ ಕೇಳಿಸುವಂತೆ ಅಪಹಾಸ್ಯಗೈದು ನಕ್ಕನು. ಇದರಿಂದಾಗಿ ಗಣಪತಿಗೆ ಅವಮಾನವುಂಟಾಗಿ ಕೆರಳಿ ’ಭಾದ್ರಪದ ಚವತಿಯ ದಿನ ನನ್ನ ದರ್ಶನವಿಲ್ಲದೆ ನಿನ್ನನ್ನು ನೋಡಿದವರಿಗೆ ವಿಘ್ನವುಂಟಾಗಲೆಂದು’ ಶಾಪ ಕೊಟ್ಟನು. ಈಗಲೂ ಚವತಿಯ ದಿನ ಗಣಪತಿಯ ದರ್ಶನವಿಲ್ಲದೆ ಚಂದ್ರನನ್ನು ಯಾರೂ ನೋಡುವುದಿಲ್ಲ. ನೋಡಿದರೆ ಅನಿಷ್ಟ ಒದಗುವುದೆಂದು ಜನಪದರು ನಂಬುತ್ತಾರೆ. ಇದು ಚಂದ್ರನನ್ನು ಕುರಿತು ಜನ ಪ್ರಿಯ ಕತೆಗಳಲ್ಲಿ ಒಂದಾಗಿದೆ. ಈ ಕಥೆ ಜಾನಪದ ನಂಬುಗೆಯಾಗಿ ಜನಮನದ ಆಳದಲ್ಲಿ ನೆಲೆನಿಂತಿದೆ.

ಇನ್ನೊಂದು ಕಥೆಯ ಪ್ರಕಾರ ಚಂದ್ರನ ವಿವರ ಹೀಗಿದೆ, ಸಪ್ತರ್ಷಿಗಳಲ್ಲಿ ಗೌತಮ ಒಬ್ಬ. ಇವನು ಗೋತ್ರಪ್ರವರ್ತಕನಾಗಿದ್ದನು. ಬ್ರಹ್ಮದೇವನ ಮಗಳಾದ ಅಹಲ್ಯೆಯು ತುಂಬಾ ಸುಂದರಿಯೂ, ಚೆಲುವೆಯೂ ಆಗಿದ್ದಳು. ಯಾರು ಪೃಥ್ವಿಪ್ರದಕ್ಷಿಣೆಯನ್ನು ಬೇಗನೆ ಹಾಕಿ ಬರುವರೊ ಅವರಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡುವುದಾಗಿ ಬ್ರಹ್ಮದೇವನು ಹೇಳಿದನು. ಆಗ ಇಂದ್ರ-ಚಂದ್ರರಿಬ್ಬರೂ ಅವಳ ಸೌಂದರ್ಯಕ್ಕೆ ಮಾರು ಹೋಗಿ ಅವಳನ್ನ ಪಡೆಯಬೇಕೆಂಬ ಪ್ರಬಲ ಇಚ್ಛೆಯಿಂದ ಪೃಥ್ವಿ ಪ್ರದಕ್ಷಿಣೆ ಹಾಕತೊಡಗಿದರು. ಗೌತಮ ಋಷಿಯು ಗೋವು ಸೃಷ್ಟಿಸಿ ಅದನ್ನು ಪ್ರದಕ್ಷಿಣೆ ಹಾಕಿ ಬ್ರಹ್ಮದೇವನಿಂದ ಅಹಲ್ಯೆಯನ್ನು ಪಡೆದನು. ಪೃಥ್ವಿ ಪ್ರದಕ್ಷಿಣೆ ಹಾಕಿ ಬಂದ ಇಂದ್ರ ಚಂದ್ರರು ಈ ಘಟನೆಯನ್ನು ಕಂಡು ಕೆರಳಿ ಅಹಲ್ಯೆಯನ್ನು ಹೇಗಾದರೂ ಮಾಡಿ ಭೋಗಿಸಬೇಕೆಂದು ಆಲೋಚಿಸಿ, ಒಂದು ದಿನ ರಾತ್ರಿ ಇಂದ್ರ ಕೋಳಿಯಾಗಿ ಬಂದು ಕೂಗಿದಾಗ ಬೆಳಗಾಯಿತೆಂದು ಭಾವಿಸಿದ ಗೌತಮ ಋಷಿ ಸ್ನಾನಕ್ಕೆಂದು ನದಿಗೆ ಬರುತ್ತಾನೆ. ಆ ಸಮಯದಲ್ಲಿ ಚಂದ್ರ ಅಹಲ್ಯೆಯನ್ನು ಭೋಗಿಸಲು ಹೋಗುತ್ತಾನೆ. ಈ ಅಕೃತ್ಯವನ್ನು ಗೌತಮನು ಅಂತರ್ಜ್ಞಾನದಿಂದ ತಿಳಿದು ಇಂದ್ರನಿಗೆ ಮೈತುಂಬ ಯೋನಿಗಳಾಗಲೆಂದೂ ಚಂದ್ರನಿಗೆ ಕ್ಷಯರೋಗ ಒದಗಲೆಂದು ಅಲ್ಲದೆ ಇನ್ನು ಪೃಥ್ವಿಯ ಮೇಲೆ ಮೂಡುವುದು ದುಸ್ತರವಾಗಲೆಂದು ಶಾಪ ಹಾಕಿದ. ಚಂದ್ರ ಮೂಡದೇ ಹೋದರೆ ಜಗತ್ತು ಕತ್ತಲೆಯಲ್ಲಿ ಮುಳುಗಬೇಕಾಗುವುದೆಂದೂ ದೇವತೆಗಳು ಮೊರೆಹೋದಾಗ, ಚಂದ್ರನು ತಿಂಗಳವರೆಗೆ ಹಾಗೆಯಶ ಸವೆಯುತ್ತ ಸವೆಯುತ್ತ ಬಂದು ಹುಣ್ಣಿಮೆಯಂದು ಮಾತ್ರ ಒಂದು ದಿನ ಪೂರ್ಣಚಂದ್ರ ಮೂಡಲೆಂದು ಅನುಗ್ರಹಿಸಿದ. ಹಾಗೆಯೇ ಅಹಲ್ಯೆಗೆ ಕಲ್ಲು ಶಿಲೆಯಾಗಿ ಬೀಳುವಂತೆ ಶಾಪಹಾಕಿದ.

ಶಿವ ತಲೆಯಲ್ಲಿ ಚಂದ್ರನನ್ನು ಧರಿಸಿದ್ದು:

ಅಮೃತ ಮಂಥನಾದನಂತರ ದೊರೆತ ಅಮೃತ ಮತ್ತು ವಿಷವನ್ನು ದೇವದಾನವರಿಗೆ ಹಂಚಿದ ಮೇಲೆ ಶಿವ ಉಳಿದುದನ್ನು ಭೂಮಿಗೆ ಚೆಲ್ಲಿದರೆ ಸರ್ವನಾಶವುಂಟಾಗುವುದೆಂದು ಬಗೆದು ಅದನ್ನು ಚೆಲ್ಲದೆ ತಾನೇ ಕುಡಿದ ಕಂಠದಲ್ಲಿರಿಸಿಕೊಂಡನು. ಹೀಗಾಗಿ ಅವನಿಗೆ ವಿಷಕಂಠ ಎಂಬ ಹೆಸರು ಬಂದಿತು. ವಿಷವನ್ನು ಕಂಠದಲ್ಲಿರಿಸಿಕೊಂಡಿದ್ದರಿಂದ ಶಿವನಿಗೆ ತುಂಬಾ ಸಂಕಟವಾಗತೊಡಗಿತು. ಸಹಿಸಲಸಾಧ್ಯವಾಯಿತು. ಈ ಮೊದಲೆ ಗಂಗೆಯನ್ನು ತನ್ನ ತಲೆಯಲ್ಲಿ ಧರಿಸಿದ್ದ ಶಿವ ಚಂದ್ರನೊಬ್ಬನನ್ನು ಇರಿಸಿಕೊಂಡರೆ ಇಮ್ಮಡಿ ಸಮಾಧಾನವುಂಟಾಗುವುದೆಂದು ಭಾವಿಸಿ ಚಂದ್ರನನ್ನು ತನ್ನ ತಲೆಯಲ್ಲಿ ಧರಿಸಿಕೊಂಡನೆಂಬ ಕತೆಯಿದೆ.

ಇಂಥ ಅನೇಕ ಜನಪದ ಪುರಾಣಕತೆಗಳಲ್ಲಿ ಚಂದ್ರನು ದಾಖಲೆಗೊಂಡು ಜನಮನದಲ್ಲಿ ನೆಲೆಯಾಗಿದ್ದಾನೆ. ಜನಪದ ಕತೆಗಳಂತೆ ಜನಪದ ಹಾಡುಗಳಲ್ಲಿಯೂ ಚಂದ್ರ-ದಾಖಲುಗೊಂಡಿರುವುದನ್ನು ಪರಿಶೀಲಿಸಬಹುದಾಗಿದೆ.

ಸೂರ್ಯ-ಚಂದ್ರನನ್ನು ಬೇಡಿ ಬೋರ್ಯಾಡಿ ಅಳುವ ಕಂದನ ಚಿತ್ರಣ ಜನಪದ ಜೋಗುಳ ಹಾಡುಗಳಲ್ಲಿ ತುಂಬಾ ಸೊಗಸಾಗಿ ಮೂಡಿನಿಂತಿದೆ:

’ನೀರಾಗ ನೆರುಳ್ಹಾಕಿ
ಸೂರ್ಯಚಂದ್ರನ ಬೇಡಿ|
ಅದರಂತೆ ತಾ ಬ್ಯಾಡಿ
ಬೋರ‍್ಯಡಿ ಅಳತಾನ ಜೋ…|
ಹಸರಂಗಿ ಹಾಲ್ಗಡಗ
ಕುಸುಲಾದ ಟೊಪ್ಪೀಗಿ|
ಮಸರ ಗಡಿಗಿ ತಾಬೇಡಿ
ಬೋರ್ಯಾಡಿ ಅಳತಾನ ಜೋ…|”

ಬೆಳದಿಂಗಳ ಪೂಜೆಯ ಸಂದರ್ಭದಲ್ಲಿ ತಿಂಗಳು ಮಾವನಿಗೆ ಮಾಡುವ ಅಣುಕು ಮದುವೆಗೆ ಆಹ್ವಾನಿಸುವ ದೃಶ್ಯ ಹಾಗೂ ಈ ಸಂದರ್ಭದಲ್ಲಿ ಹಾಡುವ ಹಾಡುಗಳು ತುಂಬಾ ವಿಸ್ಮಯಾಕಾರಿಯಾಗಿವೆ.

ಹೊಳೆಯ ದಂಡ್ಯಾಗ ಎಳಿಯ ತಿಂಗಳುಮಾವ
ಮಾವ ಬಾ ನಿನಗೆ ಮದುವಿಲ್ಲ|| ತಿಂಗಳು ಮಾವ
ಚೆಲುವ ನಾ ನಿನಗೆ ಮದುವಿಲ್ಲ|’”

ಚಂದ್ರನ ಬೆಳದಿಂಗಳ ಬೆಳಕಿನಲ್ಲಿ ಮಕ್ಕಳು ಮನದಣಿಯುವಂತೆ ಆಡುತ್ತಾರೆ. ಹಾಡುತ್ತಾರೆ. ಚಂದ್ರನಿಗೆ ಸಂಬಂಭೆಸಿದಂತೆ ಅನೇಕ ಹಾಡುಗಳಿವೆ. ಮಕ್ಕಳು ಮನರಂಜನೆಗೆಂದು ಇವುಗಳನ್ನು ಹಾಡಿಕೊಳ್ಳುತ್ತಾರೆ.

“ಚಂದ್ರಪ್ಪ ಚಂದಪ್ಪ ಚೆಲುವ
ಚುಂಗ್ ಬಿಟಕೊಂಡು ಬರುವ
ಎಂಟೆತ್ತಿನ ಬಂಡಿ
ಬಂಡಿಮ್ಯಾಲ ನಾನು
ನನ್ನ ಮ್ಯಾಲ ನಿವಿಲು
ನವಿಲಿನ ಪುಚ್ಚ ಹರದು
ಚಿಗರಿ ಕೋಡಿಗ ಹಾಕಿ
ಚಿಗರಿ ಚಿಗರಿ ಚಿಕ್ಕಪ್ಪ
ಅವರಿಗ್ಗುಗ್ಗರಿ ಮುಕ್ಕಪ್ಪ”

ಈ ಮೇಲಿನ ಹಾಡು ತುಂಬಾ ಸ್ವಾರಸ್ಯಕರವಾಗಿದೆ. ಚಂದ್ರನ ಚೆಲುವು, ಸೌಂದರ್ಯ, ಅವನ ಠೀವಿ, ರಥ, ಚಿಗರೆ, ಇತ್ಯಾದಿಗಳನ್ನು ವರ್ಣಿಸಲಾಗಿದೆ. ಚಿಗರಿ ಚಿಕ್ಕಪ್ಪನನ್ನು ಅವರಿಗುಗ್ಗರಿ ಮುಕ್ಲು ಆಹ್ವಾನಿಸುತ್ತಿರುವುದು ಮಕ್ಕಳ ಮುಗ್ದಮನೋಭಾವವನ್ನು ಚಿತ್ರಿಸುತ್ತದೆ. ಮಕ್ಕಳ ಲೋಕದಲ್ಲಿ ಚಂದ್ರನ ಕಲ್ಪನೆ ಆಗಾಧವಾದುದು. ಅಳುವ ಮಕ್ಕಳನ್ನು ಸಮಾಧಾನಗೊಳಿಸಲು ಚಂದ್ರ ಒಂದು ಸಾಧನ ವಸ್ತುವಾಗಿರುವುದು ಗಮನಾರ್ಹ. ಹಿರಿ-ಕಿರಿಯರು ಚಂದ್ರನ ಕಡೆಗೆ ಕೈಮಾಡುತ್ತ;

“ಚಂದಪ್ಪ ಚಂದಪ್ಪ ಚೌರಿಕಾಯಿ
ಬಟ್ಟಲ ತುಂಬ ಬಾರಿಕಾಯಿ
ನಮ್ಮ ಹನಮಪ್ಪಗ ಒಂದ್ಹಣ್ಣ ಒಗಿಯಪ್ಪೊ”

ಎಂದಾಗ ಅಳುವ ಮಕ್ಕಳ ಕಣ್ಣರಳುತ್ತವೆ. ಚೌರಿಕಾಯಿ, ಬಾರಿಕಾಯಿ, ಚಂದ್ರನಿಂದ ಬೀಳುವುದೆಂಬ ಕಲ್ಪನೆ ಮಕ್ಕಳಲ್ಲಿ ತುಂಬಾ ಸೋಜಿಗವನ್ನುಂಟು ಮಾಡುತ್ತದೆ.

ಬೆಳದಿಂಗಳ ಚಂದ್ರನನ್ನು ಪೂಜಿಸಲೆಂದು ಹೆಣ್ಣು ಮಕ್ಕಳು ಕೈಯಲ್ಲಿ ಆರತಿ ಹಿಡಿದು ಕೊಂಡು ಮಂಗಳಾರತಿ ಹಾಡುತ್ತಾರೆ. ಈ ಹಾಡು ತುಂಬಾ ವೈಶಿಷ್ಟಪೂರ್ಣವಾಗಿದೆ.

“ಮಂಗಳಾರ ಉದಯಕ| ಮಂಗಳ ನಿನ್ನ ಸಡಗರ
ಕಂಡ ಕಣಗಲದ ಹೂವ| ಉಂಡಾಡು ದಾಸಾಳ
ಮಂಡಲ ಚಂದ್ರ ಪಾನ| ಎಳ ಸಮುದರಣ್ಣ
ಪಾರಿಜಾತದ ಹೂವ| ಕರಿಯ ಕಂಚೀಯಹೂವ
ಕರಿಯ ತುರುಬಿ ಹೂವ| ಕರ್ಕೀಯ ಪತ್ತೂರಿ
ಪರಿಮಳ ಪಚ್ಚ| ಕ್ಯಾದೀಗಿ ಗರಿಯ ಒಂದಯ್ಯನೋರು
ಜಯಮಂಗಳ ನಿತ್ಯ ಶ್ರೀಮಂಗಳ”.

ಹೀಗೆ ಮಂಗಳಾರತಿ ಎತ್ತುವಾಗ ಮಕ್ಕಳು ವಿನೋಧಕ್ಕಾಗಿ ಗಂಗಾಳ ಇಲ್ಲವೆ ಗಂಟೆ ಕೈಯಲ್ಲಿ ಹಿಡಿದುಕೊಂಡು ಉತ್ಸುಕರಾಗಿ

“ಹೊರಗಿನ ದೇವರು ಒಳಗ
ಒಳಗಿನ ದೇವರು ಹೊರಗ”

ಎಂದು ಹಾಡಿ ಕುಣಿದು ಕುಪ್ಪಳಿಸುತ್ತಾರೆ. ಚಂದ್ರನಿಗೆ ಸಂಬಂಧಿಸಿದಂತೆ ಜನಪದರಲ್ಲಿ ಸೃಷ್ಟಿಗೊಳ್ಳುವ ಹಾಡುಗಳಲ್ಲಿ ಒಂದು ನಿರ್ದಿಷ್ಟತೆ ಕಂಡುಬರುವುದಿಲ್ಲ. ಪ್ರಾದೇಶಿಕವಾಗಿ ಭಿನ್ನತೆಗಳು ಕಂಡುಬರುತ್ತವೆ. ಅವರಿಗೆ ಆಚರಣೆ ಮುಖ್ಯವೇ ಹೊರತು ಹಾಡುಗಳೆಲ್ಲ ಎಂಬುದನ್ನು ಗಮನಿಸಬೇಕು.

ಜನಪದ ಸಾಹಿತ್ಯ ಇನ್ನುಳಿದ ಪ್ರಕಾರಗಳಾದ ಗಾದೆ, ಒಗಟುಗಳಲ್ಲಿಯೂ ಚಂದ್ರನ ಬಗೆಗೆ ಅನೇಕ ಅಂಶಗಳು ದಾಖಲೆಗೊಂಡಿರುವುದನ್ನು ಕಾಣುತ್ತೇವೆ.

“ಬೆಳದಿಂಗಳ ಬೆಳಕು
ಕಲಸಕ್ಕರಿ ಹೊಳುಪು
ನಕ್ಷತ್ರ ಬೆಳಕೀಲಿ ಅಕ್ಷರ ಬರುತಾನ….|”

ಇದು ಹೆಣ್ಣು ಮಕ್ಕಳು ತಮ್ಮ ಗಂಡಂದಿರ ಹೆಸರು ಹೇಳಲು ಬಳಸಿಕೊಳ್ಳುವ ಒಂದು ಸಾಮಾನ್ಯ ಒಗಟು. ಸಾಮಾನ್ಯವಾಗಿ ಹೆಂಗಸರು ತಮ್ಮ ಗಂಡಂದಿರ ಹೆಸರನ್ನು ನೇರವಾಗಿ ಹೇಳದೆ ಒಂದಿಷ್ಟು ಅಲಂಕಾರಿಕವೆನ್ನುವ ರೀತಿಯಲ್ಲಿ ಹೇಳುವುದು ಒಂದು ಸಂಪ್ರದಾಯ. ಮೇಲಿನ ಒಗಟಿನಲ್ಲಿ ಚಂದ್ರನ ಬೆಳದಿಂಗಳ ಬೆಳಕನ್ನು ಕಲಸಕ್ಕರಿಯ ಹೊಳಪನ್ನು, ಹಾಗೂ ನಕ್ಷತ್ರಗಳ ಮಿನುಗುವಿಕೆಯನ್ನು ತನ್ನ ಗಂಡನ ನಯ-ನಾಜೂಕುಗಳನ್ನು, ಸೌಂದರ್ಯವನ್ನು ಬಣ್ಣಿಸುವಲ್ಲಿ ಬಳಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಇಲ್ಲಿಯ ಸಾದೃಶ್ಯ ಗಮನಾರ್ಹವಾಗಿದೆ.

’ಅಂಗಳದಾಗ ಒಂದ ಗಿಡ
ತಿಂಗಳಿಗೊಂದ ಕಾಯಿ ಬಿಡ್ತದ”

ಎನ್ನುವುದು ಚಂದ್ರನನ್ನು ಕುರಿತು ಒಂದು ಸೊಗಸಾದ ಒಗಟು. ನಿಸರ್ಗದ ಯಾವ ಗಿಡ-ಮರಗಳೂ ತಿಂಗಳಿಗೊಂದು ಕಾಯಿ ಬಿಡಲು ಸಾಧ್ಯವಿಲ್ಲ. ಆದರೆ ಈ ಅಂಗಳದ (ಆಕಾಶದ) ಗಿಡ ತಿಂಗಳಿಗೊಂದು ಕಾಯಿ ಬಿಡುವುದೆಂದರೆ ವಿಚಿತ್ರವಲ್ಲವೆ? ಪೌರ್ಣಿಮೆ ಗೊಮ್ಮೆಯೆ ಪೂರ್ಣಚಂದ್ರ ಮೂಡುವುದನ್ನು ಈ ಒಗಟಿನಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಇಲ್ಲಿ ಚಂದ್ರ ಸಸ್ಯಾಧಿಪತಿ ಎಂಬ ಅಂಶ ಧ್ವನಿತಗೊಂಡಿದೆ.

ಬೆಳದಿಂಗಳ ಊಟ ಬಯಲು ಸೀಮೆಗಳಲ್ಲಿ ಒಂದು ಸಂಭ್ರಮದ ಸನ್ನಿವೇಶ. ಊರು ಕೇರಿಯ ಜನ ಊಟ ಕಟ್ಟಿಕೊಂಡು ಸಮೀಪದ ಹೊಲ-ಗದ್ದೆಗಳಿಗೆ ಹೋಗಿ ಬೆಳದಿಂಗಳ ಊಟ ಮಾಡುವುದು ಒಂದು ಸಾಂಪ್ರದಾಯಕ ಸನ್ನಿವೇಶ. ಈ ದೃಶ್ಯವನ್ನು ಬಯಲು ಸೀಮೆಯ ಒಂದು ಒಗಟು ದೃಶ್ಯವತ್ತಾಗಿ ಚಿತ್ರಿಸುತ್ತದೆ.

“ಒಂದು ರೊಟ್ಟಿಯಲ್ಲಿ
ಊರಿಗೆಲ್ಲಾ ಊಟವಾಯ್ತು”

ಒಂದೇ ರೊಟ್ಟಿಯಲ್ಲಿ ಊರಿಗೆಲ್ಲ ಊಟವಾಗುವುದು ಅಸಂಭವ. ಆದರೆ ಜನಪದರು ಇಲ್ಲಿ ರೊಟ್ಟಿಯನ್ನು ಚಂರನಿಗೆ ಸಂಕೇತವಾಗಿಟ್ಟುಕೊಂಡು ಈ ಒಗಟನ್ನು ಬಳಸುತ್ತಾರೆ. ಇಲ್ಲಿಯ ಸುಂದರವಾದ ಉಪಮಾನ-ಉಪಮೇಯಗಳು ಆಶ್ಚರ್ಯವನ್ನುಂಟು ಮಾಡುತ್ತವೆ.

ಹಾಗೇಯೇ “ಅಂಗೈ ಅಗಲದ ರೊಟ್ಟಿಗೆ
ಲೆಕ್ಕಿಲ್ಲದಷ್ಟು ಉಪ್ಪಿನಕಾಯಿ”

ಎನ್ನುವ ಒಗಟು ತುಂಬಾ ಸ್ವಾರಸ್ಯಕರವಾಗಿದೆ ಈ ಒಗಟು ಚಂದ್ರ ಮತ್ತು ಚಂದ್ರನ್ನ ಸುತ್ತಲೂ ಇರುವ ಅಸಂಖ್ಯಾತ ನಕ್ಷತ್ರಗಳನ್ನು ಚಿತ್ರಿಸುತ್ತದೆ.

’ನೀಲಿ ಸಮುದ್ರದಾಗ
ಬೆಳ್ಳಿ ತಾಟು ತೇಲತೈತಿ”

ಎನ್ನುವ ಒಗಟು ಆಕಾಶ ಮತ್ತು ಚಂದ್ರನನ್ನು ಸಮರ್ಥವಾಗಿ ಹೇಳುತ್ತದೆ. ಆಕಾಶವನ್ನು ನೀಲಿ ಸಮುದ್ರಕ್ಕೆ ಹಾಗೂ ಚಂದ್ರನನ್ನು ಬೆಳ್ಳಿ ತಾಟಿಗೆ ಹೋಲಿಸಿರುವುದು ತುಂಬಾ ಔಚಿತ್ಯಪೂರ್ಣವಾಗಿದೆ. ಜನಪದರ ಇಂಥ ಅನೇಕ ಒಗಟುಗಳಲ್ಲಿ ಚಂದ್ರ-ಬೆಳದಿಂಗಳು ಬಳಕೆಗೊಂಡಿರುವುದು ಗಮನಾರ್ಹವಾಗಿದೆ.

ಚಂದ್ರನ ಪರಿಕಲ್ಪನೆ ಹಾಗೂ ಪ್ರಯೋಜನ:

ನವಗ್ರಹಗಳಲ್ಲಿ ಚಂದ್ರನು ಆಕರ್ಷಕ ಗ್ರಹ. ಸಕಲ ಜೀವರಾಶಿಗಳ ಮೇಲೆ ಇವನ ಪ್ರಭಾವ ಅಪಾರ. ಜೀವಿಯ ಹುಟ್ಟಿನಿಂದ ಸಾವಿನವರೆಗೆ ಚಂದ್ರ ತನ್ನ ಪ್ರಭಾವಬೀರುತ್ತಾನೆ. ಸೃಷ್ಟಿಯ ಚರಾಚರ ವಸ್ತುಗಳ ಮೇಲೆ ಚಂದ್ರನಿಗಿರುವಷ್ಟು ಶಕ್ತಿ ಅನ್ಯ ಗ್ರಹಗಳಿಗಿರುವುದಿಲ್ಲ. ಚಂದ್ರನ ವೃದ್ಧಿಕ್ಷಯಗಳಿಗೆ ಸಂಬಂಧಿಸಿದಂತೆ ನಮ್ಮ ಪುರಾಣಗಳು, ನಂಬಿಕೆಗಳು ತುಂಬಾ ವಿಚಿತ್ರ ಸಂಗತಿಯನ್ನೊಳಗೊಂಡಿವೆ. ನಮ್ಮ ಪುರಾಣದ ಪ್ರಕಾರ ವೃದ್ಧಿಕ್ಷಯಗಳಿಂದ ಕೂಡಿದ ಚಂದ್ರನು ಆಕಾಶದಲ್ಲಿಯೂ, ವೃದ್ಧಿಕ್ಷಯಗಳಿಲ್ಲದ ಚಂದ್ರನು ಶಿವನಲ್ಲಿರುವನೆಂದೂ, ಇದರಿಂದ ಶಿವನಿಗೆ ಚಂದ್ರಶೇಖರನೆಂಬ ಹೆಸರು ವಾಡಿಕೆಯಲ್ಲಿ ಬಂತೆಂದೂ ಹೇಳಿದೆ. ಮನುಷ್ಯನ ಯಾವತ್ತೂ ಉತ್ಸಾಹ-ಜಡತನಗಳಿಗೆ ಚಂದ್ರನ ವೃದ್ಧಿಕ್ಷಯಗುಣವೇ ಕಾರಣವಾಗಿದೆ.

ಚಂದ್ರನಲ್ಲಿ ಒಂದು ಬಗೆಯ ಆಕರ್ಷಣಾಶಕ್ತಿ ಇರುವುದರಿಂದ ಜೀವಿಗಳ ಜೀವನದಲ್ಲಿ ಮಹತ್ವದ ಪರಿಣಾಮ ಸಿದ್ಧಿಯಾಗುತ್ತದೆ. ಮುಖ್ಯವಾಗಿ ಜೀವಿ ಹಾಗೂ ಪ್ರಕೃತಿಯಲ್ಲಿ ಇವನ ಅನುಕೂಲ ಪ್ರತಿಕೂಲದ ಪರಿಣಾಮ ಫಲವನ್ನು ಕಾಣುತ್ತೇವೆ. ಮಾನವನ ಮನಸ್ಸು ಚಂದ್ರನಂತಿದ್ದ ಆತನ ಜೀವನದ ಸುಖ ದುಃಖಗಳು ಯಾವತ್ತೂ ಮನಸ್ಸನೇ ಅವಲಂಬಿಸಿರುತ್ತವೆ. ಹೀಗಾಗಿ ಇವನನ್ನು ಮನೋಕಾರಕನೆಂದು ಕರೆಯುತ್ತಾರೆ. ಮನುಷ್ಯ ಮನಸ್ಸು, ಬುದ್ಧಿ, ಗುಣ, ತಾಯಿ, ವ್ಯಸನ ಮುಂತಾದವುಗಳನ್ನು ಚಂದ್ರ ಸೂಚಿಸುತ್ತಾನೆಂಬುದು ಜ್ಯೋತಿಷ್ಯ ಶಾಸ್ತ್ರಜ್ಞರ ಅಭಿಪ್ರಾಯ.

ಚಂದ್ರನು ಸಸ್ಯಕಾರಕನು. ಅವನು ಸಸ್ಯಗಳ ಬೆಳವಣಿಗೆಗೆ ಉತ್ತೇಜನಕಾರಿ ಎಂಬ ಗ್ರಹಿಕೆಯಿದೆ. ಕೃಷಿಕರು ಚಂದ್ರನ ಬೆಳಕಿನಲ್ಲಿ ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆಂಬ ಭಾವನೆಯಿಂದ ಶುಕ್ಲಪಕ್ಷದಲ್ಲಿ ಬಿತ್ತನೆ ಕಾರ್ಯ ಮಾಡುತ್ತಾರೆ. ಕೃಷ್ಣಪಕ್ಷದಲ್ಲಿ ಬಿತ್ತನೆ ಮಾಡಿದರೆ ಬೆಳೆಗಳು ಸಮೃದ್ಧವಾಗುವುದಿಲ್ಲವೆಂದೂ, ಬೆಳೆಗಳಿಗೆ ರೋಗಗಳು ಅಂಟಿಕೊಳ್ಳುತ್ತವೆಂದು ನಂಬುತ್ತಾರೆ. ಕೃಷಿ ಮತ್ತು ಔಷಧಾದಿ ಸಸ್ಯಗಳ ಶಕ್ತಿಕಾರ್ಯ ಚಂದ್ರನಿಂದ ನಡೆಯುತ್ತದೆಂಬುದನ್ನು ಅವರು ಬಲವಾಗಿ ನಂಬಿದ್ದಾರೆ.

ಚಂದ್ರನ ಬೆಳದಿಂಗಳು ಕೃಷಿಕರಿಗೆ ತುಂಬಾ ಉಪಕಾರಿಯಾಗಿದೆ. ಅವರು ರಾಶಿ-ಮಾಡುವುದು, ಹೊಟ್ಟು, ಮೇವು ಹೇರುವುದು ಸಾಮಾನ್ಯವಾಗಿ ಬೆಳ್ದಿಂಗಳ ರಾತ್ರಿಯಲ್ಲಿಯೇ. ಬಹುಶಃ ಬೆಳ್ದಿಂಗಳ ಬೆಳಕಿನಂತೆ ತಮ್ಮ ದವಸಧಾನ್ಯಗಳು ವೃದ್ಧಿಗೊಳ್ಳಲಿ ಎಂಬ ಭಾವವಿದ್ದಂತಿದೆ.

ರಜತಾದಿ (ಬೆಳ್ಳಿ ಇತ್ಯಾದಿ) ಲೋಹಗಳಿಗೆ ಚಂದ್ರನೇ ಕಾರಕನೆಂಬ ಅಭಿಪ್ರಾಯವಿದೆ.. ಚಂದ್ರನು ಬೆಳ್ಳಿಯಂತೆ ಶುಭ್ರವಾಗಿರುವುದರಿಂದಲೇ ಬಹುಶಃ ಈ ನಂಬಿಕೆ ಬಂದಿರಬೇಕು. ಬೆಳ್ಳಿ ಬಿಳುವಾದದ್ದು; ಬೆಳದಿಂಗಳು ಬಿಳುವಾದದ್ದು, ಚಂದ್ರನೂ ಬಿಳುವಾಗಿರುವುದರಿಂದ ಮುಸಲ್ಮಾನರು ಬೆಳ್ಳಿಗೆ ’ಚಾಂದಿ’ ಎಂತಲೂ, ಚಂದ್ರನಿಗೆ ’ಚಾಂದ್’ ಎಂತಲೂ ಕರೆದಿರಬೇಕು.

ಚಂದ್ರನ ಗರ್ಭರಕ್ಷಕ ದೇವತೆಯೆಂಬ ಗ್ರಹಿಕೆಯಿದೆ. ಸ್ತ್ರೀಯರ ಗರ್ಭದ ಉತ್ಪಾದನೆಗೆ ರಜಸ್ವಲೆಯಾಗುವುದೇ ಇದಕ್ಕೆ ಮೂಲ ಕಾರಣವಾಗಿರಬೇಕು. ಏಕೆಂದರೆ ಸ್ತ್ರೀಯರಿಗೆ ಉಂಟಾಗುವ ರಜೋದರ್ಶನ ಕಾಲವನ್ನು ಚಂದ್ರನು ಸೂಚಿಸುತ್ತಾನೆ. ಚಂದ್ರನ ಮಾಸಚಕ್ರ ಹಾಗೂ ಸ್ತ್ರೀಯರ ಋತುಚಕ್ರ ಎರಡೂ ೨೮ ದಿನಗಳು. ಕೆಲವರು ಚಂದ್ರಕಿರಣ ಮಾಸಚಕ್ರವನ್ನು ನಿಯಂತ್ರಿಸುತ್ತದೆಂದು ನಂಬಿದ್ದಾರೆ.

ಚಂದ್ರನ ಹದಿನಾರು ಕಲೆಗಳು:

ಪೂಷಾ, ಯದಸ್ಸು, ಮನಸಾ, ರತಿ, ಪ್ರಾಪ್ತಿ, ಧೃತಿ, ಋದ್ಧಿ, ಸೌಮ್ಯ, ಮರೀಚಿ, ಮಾಲಿನಿ, ಅಂಗೀರಾ, ಶಶಿನಿ, ಚೇತಿ, ಛಾಯಾ, ತುಷ್ಟಿ, ಮತ್ತು ಅಮೃತ-ಕಾಮಸೂತ್ರದಲ್ಲಿ ಹೆಸರಿಸಲಾದ ಈ ಹದಿನಾರು ಕಾಮಕಲೆಗಳು ಶುಕ್ಲ ಪಕ್ಷದಲ್ಲಿ ಸ್ತ್ರೀಯರು ದೇಹದ ಬಲಭಾಗದಲ್ಲಿಯೂ, ಕೃಷ್ಣಪಕ್ಷದಲ್ಲಿ ಸ್ತ್ರೀ ದೇಹದ ಎಡಭಾಗದಲ್ಲಿಯೂ ಉಪಸ್ಥಿತವಾಗಿದ್ದು ಅದಕ್ಕನುಗುಣವಾಗಿಯೇ ಆ ಸ್ತ್ರೀಯು ಸಂಭೋಗ ತೃಪ್ತಿಯನ್ನನುಭವಿಸುತ್ತಾಳೆನ್ನುವುದು ಕಲ್ಯಾಣಮಲ್ಲನೆಂಬ ಕಾಮಶಾಸ್ತ್ರಕಾರನ ವಿವರಣೆಯಾಗಿದೆ. ಚಂದ್ರನಿಗೆ ಸಂಬಂಧಿಸಿದಂತೆ ಪುರಾಣಕತೆಗಳಲ್ಲಿ ಕಂಡುಬರುವ ಅವನ ಕಾಮೇಚ್ಛೆಗೂ ಈ ಸಂಗತಿಗೂ ಸಂಬಂಧವನ್ನು ಕಲ್ಪಿಸಬಹುದೇನೊ!

ಚಂದ್ರನಲ್ಲಿರುವ ಕಪ್ಪು ಕಲೆಗಳು:

ರಾತ್ರಿ ಆಕಾಶದಲ್ಲಿ ಶುಭ್ರವಾಗಿ ಬೆಳಗುವ ಚಂದ್ರ ಪ್ರಪಂಚದ ಜನಜೀವನದ ಮೇಲೆ ತನ್ನ ಪ್ರಭಾವ ಬೀರಿದೆ. ಉಜ್ವಲವಾಗಿ ಬೆಳಗುವ ಈ ಚಂದ್ರನಲ್ಲಿ ಕಾಣುವ ಕಪ್ಪು ಕಲೆಗಳು, ವೃದ್ಧಿಕ್ಷಯ ಗುಣಗಳು ಜನಪದರಲ್ಲಿ ಅನಂತ ಬಗೆಯ ಮೂಢನಂಬಿಕೆಗಳಿಗೆ ಮತ್ತು ದಂತಕಥೆಗಳಿಗೆ ಎಡೆಮಾಡಿಕೊಟ್ಟಿವೆ.

ಪ್ರಪಂಚದ ವಿಭಿನ್ನ ಜನಾಂಗಗಳು ಚಂದ್ರನಲ್ಲಿರುವ ಕಪ್ಪುಕಲೆಗಳನ್ನು ತಮ್ಮ ಕಲ್ಪನೆಗನುಗುಣವಾಗಿ ವಿಭಿನ್ನ ರೀತಿಯಿಂದ ಗುರುತಿಸಿದ್ದಾರೆ. ಅವನಲ್ಲಿ ಕಾಣಿಸುವ ಕಪ್ಪು ಕಲೆಗಳಿಗೆ ಸಂಬಂಧಿಸಿದಂತೆ ಆಯಾ ಜನಾಂಗಗಳು ತಮ್ಮದೇ ಆದ ನಂಬಿಕೆ ಹಾಗೂ ಕತೆಗಳನ್ನೊಳಗೊಂಡಿವೆ. ಒಂದು ಜನಾಂಗದವರು ಚಂದ್ರನಲ್ಲಿರುವ ಕಪ್ಪುಕಲೆಯನ್ನು ಜಿಂಕೆ, ಚಿಗರೆ ಎಂದು ಭಾವಿಸಿದರೆ, ಮತ್ತೊಂದು ಜನಾಂಗದವರು, ಮೊಲ, ನಾಯಿ ಇತ್ಯಾದಿಗಳಿವೆ ಎಂದು ಗ್ರಹಿಸುತ್ತಾರೆ. ಇನ್ನೂ ಕೆಲವರು ಚಂದ್ರನಲ್ಲಿರುವುದು ಅದೇನೊ ಒಂದು ದೊಡ್ಡ ಪರ್ವತ. ಆ ಪರ್ವತ ಅತಿ ಎತ್ತರದ ಮೇಲಿದ್ದು, ಅದರ ಛಾಯೆ ಚಂದ್ರನ ಮೇಲೆ ಬೀಳುವುದರಿಂದ ಅದು ಕಪ್ಪು ಕಲೆಯಾಗಿರಬೇಕೆನ್ನುತ್ತಾರೆ. ಮತ್ತೆ ಕೆಲವರು ಚಂದ್ರನಲ್ಲಿ ನೂಲುವ ಮುದುಕಿ ಇರುವಳೆಂದೂ, ಮಾನವನಾಕೃತಿ ಇರುವುದೆಂದೂ ಭಾವಿಸುತ್ತಾರೆ. ಒಂದು ಐತಿಹ್ಯದ ಪ್ರಕಾರ ಅಹಲ್ಯೆಯಿಂದ ಆಕರ್ಷಿತನಾದ ಚಂದ್ರ ಒಂದು ಸಲ ಅವಳೊಂದಿಗೆ ಇದ್ದುದನ್ನು ಕಂಡು ಪತಿದೇವ ಗೌತಮನು ಅಹಲ್ಯೆಗೆ ಕಲ್ಲು ಶಿಲೆಯಾಗಿ ಬೀಳುವಂತೆ ಶಾಪ ಹಾಕಿದ. ಹಾಗೆಯೇ ಕುಪಿತನಾದ ಗೌತಮ ಚಂದ್ರನನ್ನು ಕ್ಷಯರೋಗ ಪೀಡಿತನಾಗೆಂದು ಶಾಪ ವಿಧಿಸಿದ. ಇದರಿಂದ ಚಂದ್ರನಿಗೆ ಕಳಂಕವುಂಟಾಯಿತು. ಎಂಬ ಅಭಿಪ್ರಾಯವಿದೆ.

ಚಂದ್ರನ ಕಪ್ಪು ಕಲೆಗಳಿಗೆ ಸಂಬಂಧಿಸಿದಂತೆ ಜನಪದರಲ್ಲಿ ಇನ್ನೊಂದು ವಿಚಿತ್ರ ಕಲ್ಪನೆ ಇದೆ. ಅದೇನೆಂದರೆ ತಾಯಂದಿರು ತಮ್ಮ ಮಕ್ಕಳಿಗೆ ದೃಷ್ಟಿದೋಷವಾಗದಿರಲೆಂದು ಹಣೆ, ಗಲ್ಲ, ಗದ್ದಗಳಿಗೆ ಕಪ್ಪು ಕಾಡಿಗೆ ಹಚ್ಚುವುದು ಒಂದು ವಾಡಿಕೆ. ಅದೇ ಪ್ರಕಾರ ಸೌಮ್ಯನೂ, ಸುಂದರನೂ, ಮೃದುಶರೀರಿಯೂ, ಶುಭ್ರನೂ ಆದ ಚಂದ್ರನಿಗೆ ಪ್ರಪಂಚದ ಜೀವಿಗಳ ದೃಷ್ಟಿದೋಷವಾಗದಿರಲೆಂದು ಹೀಗೆ ಕಾಡಿಗೆ ಹಚ್ಚಿರಬೇಕೆಂಬುದು ಅವರ ಗ್ರಹಿಕೆಯಾಗಿದೆ.

ಚಂದ್ರನ ಬೆಳದಿಂಗಳ ಪೂಜೆ

ಚಂದ್ರನ ಬೆಳದಿಂಗಳ ಪೂಜೆ ಒಂದು ಶುದ್ಧ ಜನಪದ ಸಂಪ್ರದಾಯ, ನವಗ್ರಹಗಳ ಪೂಜೆ ಸ್ಮೃತಿಗಳ ಕಾಲದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಯಾವುದೇ ಒಂದು ಧಾರ್ಮಿಕ ಆಚರಣೆ ಎನ್ನುವುದ ಆಯಾ ಜನಾಂಗದ, ಸಂಸ್ಕೃತಿಯ ಒಂದು ಬಹು ಮುಖ್ಯ ಸಂಪ್ರದಾಯವಾಗಿರುತ್ತದೆ.  ಈ ಹಿನ್ನೆಲೆಯಲ್ಲಿ ಚಂದ್ರನು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೂಪದಲ್ಲಿ ಆರಾಧಿಸಲ್ಪಡುತ್ತಿದ್ದಾನೆ. ಒಂದೆಡೆಗೆ ಪ್ರೇಮದೇವತೆಯ ರೂಪದಲ್ಲಿ, ಇನ್ನೊಂದೆಡೆಗೆ ರಕ್ಷಕ ದೇವತೆಯ ರೂಪದಲ್ಲಿ, ಮತ್ತೊಂದೆಡೆಗೆ ಆರಾಧ್ಯ ದೇವತೆಯ ರೂಪದಲ್ಲಿ, ಇನ್ನೂ ಹಲವು ಕಡೆಗಳಲ್ಲಿ ಸುಖ-ಸಂತೋಷದ ದೇವತೆಯ ರೂಪದಲ್ಲಿ, ಅಧಿಪತಿಯ ರೂಪದಲ್ಲಿ ಚಂದ್ರ ಆರಾಧಿಸಲ್ಪಡುತ್ತಿರುವುದು ಗಮನಾರ್ಹವಾದ ಸಂಗತಿ.

ಕರ್ನಾಟಕದ ಕೆಲವು ಭಾಗಗಳಲ್ಲಿ ಚಂದ್ರನನ್ನು ಬೆಳದಿಂಗಳ ರೂಪದಲ್ಲಿ ಪೂಜಿಸುತ್ತಾರೆ. ಸಾಮಾನ್ಯವಾಗಿ ಈ ಬಗೆಯ ಆರಾಧನೆಯನ್ನು ಚಂದ್ರಾಮನ ಪೂಜೆ, ತಿಂಗಳು ಮಾವನ ಪೂಜೆ, ಬೆಳದಿಂಗಳ ಪೂಜೆ, ಚಂದ್ರಮ್ಮನ ಪೂಜೆ, ಬೆಳದಿಂಗಳ ಇಡುವುದು, ಬೆಳ್ದಿಂಗಳಪ್ಪನ ಪೂಜೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಜನಪದರಲ್ಲಿ ಬಳಕೆಯಲ್ಲಿರುವ ಈ ಆಚರಣೆಯ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಮನರಂಜನೆಯ ಇಣುಕು ನೋಟವನ್ನೂ ಕಾಣಬಹುದಾಗಿದೆ. ಬೆಳದಿಂಗಳ ಪ್ರಶಸ್ತಿ ಬೆಳಕಿನಲ್ಲಿ ಹೆಂಗಸರು ಆಚರಿಸುವ ಈ ಪೂಜೆಯಿಂದ ಗ್ರಾಮೀಣ ಜನತೆಯಲ್ಲಿ ಒಂದು ಬಗೆಯ ಅಮಿತಾನಂದ ಹಾಗೂ ಮಕ್ಕಳಲ್ಲಿ ಕುತೂಹಲ ಕಾಣಿಸಿಕೊಳ್ಳುತ್ತದೆ. ಚಂದ್ರನ ಬೆಳಕು  ಹಳ್ಳಿಯ ಬದುಕನ್ನು ಸ್ವಚ್ಛಂದಗೊಳಿಸುತ್ತದೆ. ಅದರ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಉತ್ತೇಜನವನ್ನು ನೀಡುತ್ತದೆ.

ಊರು-ಕೇರಿ, ಮಳೆ-ಬೆಳೆ, ಜನರ ಆಯುಷ್ಯ, ಸ್ಥಿತಿ-ಗತಿ ಹಾಗೂ ಸಂಕಟ-ಸಂತೋಷಗಳಿಗೆ ಚಂದ್ರನ ಶೀತಳ ಬೆಳಕು ಕಾರಣವೆನ್ನುವ ನಂಬಿಕೆಯಿಂದ ಇಂದಿಗೂ ಕೆಲವೆಡೆ ಹಳ್ಳಿಗಳಲ್ಲಿ ಜನ ಚಂದ್ರನ ಬೆಳದಿಂಗಳ ಪೂಜೆಯನ್ನು ಸಾಮೂಹಿಕ ರೂಪದಲ್ಲಿ ಆಚರಿಸುತ್ತಾರೆ. ಈ ಬಗೆಯ ಆಚರಣೆಯ ಹಿನ್ನೆಲೆಯಲ್ಲಿರಬಹುದಾದ ನಿರ್ದಿಷ್ಟ ನಂಬಿಕೆಗಳನ್ನು ಖಚಿತಪಡಿಸಿಕೊಳ್ಳುವುದು ಕಷ್ಟ. ಬೆಳದಿಂಗಳ ಪೂಜೆಯ ಆಚರಣೆಯಲ್ಲಿ ಬಹುತರವಾಗಿ ಪ್ರಾದೇಶಿಕ ವ್ಯತ್ಯಾಸ ಕಂಡು ಬರುತ್ತದೆ. ಪೂಜಾ ವಿಧಾನ, ಆಚರಣೆ, ನಂಬಿಕೆ ಹಾಗೂ ಸಂಪ್ರದಾಯಗಳಲ್ಲಿ ಏಕತೆ ಕಂಡುಬರುವುದಿಲ್ಲ. ಉದಾ: ದಕ್ಷಿಣ ಕರ್ನಾಟಕದ ಕೆಲವು ಭಾಗಗಳಲ್ಲಿ ತಿಂಗಳು ಮಾವನಿಗೆ ಮಾಡುವ ಅಣುಕು ಮದುವೆ ಸಂಪ್ರದಾಯ ಹಾಗೂ ನೈವೇದ್ಯಕ್ಕೆಂದು ಮಾಡುವ ಸಪ್ಪೆರೊಟ್ಟಿಯನ್ನು ಚಂದ್ರನಿಗೆ ಆರೋಪಿಸಿ ವಿಸರ್ಜಿಸುವ ಪದ್ಧತಿ ಉತ್ತರ ಕರ್ನಾಟಕದ ಯಾವ ಭಾಗದಲ್ಲಿಯೂ ಕಂಡು ಬರುವುದಿಲ್ಲ.

ಬೆಳದಿಂಗಳ ಪ್ರಶಸ್ತ ವಾತಾವರಣದಲ್ಲಿ ಹಳ್ಳಿಯ ಹೆಣ್ಣುಮಕ್ಕಳು ಬೆಳದಿಂಗಳ ಪೂಜೆ ಮಾಡಲು ನೆರವೇರುತ್ತಾರೆ. ಸಾಮಾನ್ಯವಾಗಿ ಅಂದು ಹೆಣ್ಣು ಮಕ್ಕಳು ಉಪವಾಸ ವ್ರತ ಕೈಕೊಂಡು, ತೊಳೆದು ಬೆಳಗಿದ ಬಿಂದಿಗೆಗಳಲ್ಲಿ ಗಂಗೆಯನ್ನು ತುಂಬಿಕೊಂಡು ಬಂದು, ಅಂಗಳ ಇಲ್ಲವೆ ಮನೆಯ ಗೋಡೆಗಳ ಮೇಲೆ ಚಂದ್ರನ ಹಸೆ ಬರೆಯುವುದಕ್ಕಾಗಿ ಸಗಣಿಯಿಂದ ಸಾರಿಸಿ ಸ್ವಚ್ಛಗೊಳಿಸುತ್ತಾರೆ. ಸಾರಿಸಿ ಸ್ವಚ್ಛಗೊಳಿಸಿದ ಸ್ಥಳದಲ್ಲಿ ವೈವಿಧ್ಯಮಯವಾಗಿ ರಂಗೋಲೆ ಬರೆಯುತ್ತಾರೆ. ರಂಗೋಲೆಗೆ ಕೆಮ್ಮಣ್ಣು, ಸುಣ್ಣ, ಅಕ್ಕಿ, ಅರಿಷಿಣ, ಕುಂಕುಮ, ಹೂ ಇತ್ಯಾದಿಗಳನ್ನು ಬಳಸುತ್ತಾರೆ. ಎಲೆ ಬಳ್ಳಿ, ತೇರು, ರಾಮನ ತೊಟ್ಟಿಲು, ಗಿಣಿ, ಜಿಂಕೆ, ತುಳಸಿಕಟ್ಟೆ ಹಾಗೂ ಮಧ್ಯದಲ್ಲಿ ಸೂರ್ಯ ಅದರ ಪಕ್ಕದಲ್ಲಿ ಚಂದ್ರ ಮುಂತಾದವುಗಳನ್ನು ಬಹು ಆಕರ್ಷಕವಾಗಿ ಬರೆಯುತ್ತಾರೆ. ಗೋಡೆಗಳ ಮೇಲೆ ಸುಣ್ಣದ ಚಿಕ್ಕೆಗಳನ್ನಿಟ್ಟು ತೇರು, ಎಲೆಬಳ್ಳಿ ಇತ್ಯಾದಿಗಳನ್ನು ಬಹು ಅಂದವಾಗಿ ಬರೆಯುತ್ತಾರೆ. ಪೂಜೆಗೆಂದು ತೆಂಗಿನ ಗರಿ, ಬಾಳೆಕಂಬ, ಇತ್ಯಾದಿಗಳಿಂದ ಒಂದು ಚಿಕ್ಕ ಚಪ್ಪರ ಸಿದ್ಧಪಡಿಸುತ್ತಾರೆ. ಕಳಶಕ್ಕೆಂದು ಅಡಿಕೆ ಹೊಂಬಾಳೆ, ಕಣಿಗಲು ಹೂ ತಂದಿರುತ್ತಾರೆ. ಅಲಂಕೃತವಾದ ಮಂಡಲದ ಮಧ್ಯೆ ತುಂಬಿದ ಕಳಸವನ್ನಿಟ್ಟು, ಹೂ ಪತ್ರೆ, ಬೆಲ್ಲ, ತೆಂಗಿನಕಾಯಿ ಬಾಳೆಹಣ್ಣು ಇತ್ಯಾದಿ ಪೂಜಾಸಾಮಗ್ರಿಗಳನ್ನಿಟ್ಟು ಸಿಹಿ ನೈವೇಧ್ಯ ಅರ್ಪಿಸಿ ಐದು ಜನ ಮುತ್ತೈದೆಯರು ಚಂದ್ರನಿಗೆ ಆರತಿ ಎತ್ತುತ್ತಾರೆ. ಸಾಮಾನ್ಯವಾಗಿ ಈ ಹಬ್ಬವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಭಾರತ ಹುಣ್ಣಿಮೆ ಇಲ್ಲವೆ ಚಾಂದ್ರಮಾನ ಯುಗಾದಿ ಸಂದರ್ಭಗಳಲ್ಲಿ ಆಚರಿಸುತ್ತಾರೆ.

ಬೆಳದಿಂಗಳ ಪೂಜೆಯನ್ನು ಮಹಾರಾಷ್ಟ್ರದಲ್ಲಿ ಶರದ್ ಪೂರ್ಣಿಮಾ ಪೂಜಾ ರೂಪದಲ್ಲಿ ಆಚರಿಸುತ್ತಾರೆ. ಹುಣ್ಣಿಮೆಯ ದಿನ ದೇವತೆಗಳು ಚಂದ್ರನ ಮುಖಾಂತರವಾಗಿ ಪ್ರತಿಬಿಂಬಿಸುವರೆಂದು ನಂಬುತ್ತಾರೆ. ಹೀಗಾಗಿ ಪಾತ್ರೆಯಲ್ಲಿ ಹಾಲು ಹಾಕಿ ಅದರಲ್ಲಿ ಪೂರ್ಣ ಚಂದ್ರನನ್ನು ಪ್ರತಿಬಿಂಬಿಸಿ ಅದು ದೇವರ ಪ್ರಸಾದವೆಂದು ಸಂತೋಷದಿಂದ ಸ್ವೀಕರಿಸುತ್ತಾರೆ.