ಚಂದ್ರ ಗ್ರಹಣ:

ಒಂದು ಆಕಾಶಕಾಯ ಮತ್ತೊಂದು ಆಕಾಶಕಾಯದ ನೆರಳಿನಲ್ಲಿ ಸಾಗುವಾಗ ಸಾಮಾನ್ಯವಾಗಿ ಗ್ರಹಣ ಉಂಟಾಗುತ್ತದೆ. ಭೂಮಿಯನ್ನು ಸುತ್ತುವ ಚಂದ್ರ ಕೆಲವು ಸಲ ಭೂಮಿಯ ನೆರಳಿನೊಳಗೆ ಹಾಯುತ್ತದೆ. ಆಗ ಚಂದ್ರಗ್ರಹಣವಾಗುತ್ತದೆ. ಸೂರ್ಯ-ಚಂದ್ರರ ನಡುವೆ ಭೂಮಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ನಮ್ಮಿಂದ ಮರೆಯಾಗುತ್ತಾನೆ. ಅದೇ ಚಂದ್ರಗ್ರಹಣ – ಎಂದು ಆಧುನಿಕ ವಿಜ್ಞಾನ ವಿವರಿಸುತ್ತದೆ.

ಚಂದ್ರಗ್ರಹಣ ಹುಣ್ಣಿಮೆಗಳಂದು ಮಾತ್ರ ಸಂಭವಿಸುತ್ತದೆ. ಏಕೆಂದರೆ ಆಗ ಮಾತ್ರ ಚಂದ್ರನು ಭೂಮಿಗೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿರುತ್ತದೆ. ಸೂರ್ಯ-ಚಂದ್ರ ಎದುರುಬದುರಾಗಿ ಸಂಧಿಸುವುದು ರಾಹು-ಕೇತು ಎಂಬ ಎರಡು ಬಿಂದುಗಳಲ್ಲಿ ಚಂದ್ರ ರಾಹುವಿನ ಬಳಿ, ಸೂರ್ಯ ಕೇತುವಿನ ಬಳಿಯಿದ್ದಾಗ ಅಂದರೆ ಅವೆರಡೂ ಒಂದಕ್ಕೊಂದು ಎದುರಾದಾಗ ನಡುವೆ ಭೂಮಿ ಬಂದು ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತದೆ. ಇದಕ್ಕೆ ವ್ಯತಿರಿಕ್ತವಿದ್ದಾಗ ಕೇತುಗ್ರಸ್ಥ ಚಂದ್ರಗ್ರಹಣವಾಗುತ್ತದೆ. ಚಂದ್ರಗ್ರಹಣ ಸಾಮಾನ್ಯವಾಗಿ ಎರಡು ರೀತಿಯಿಂದ ಸಂಭವಿಸುತ್ತದೆ. ಪೂರ್ಣ ಹಾಗೂ ಪಾರ್ಶ್ವ ಗ್ರಹಣ. ಪೂರ್ಣ ಚಂದ್ರಗ್ರಹಣವು ಸುಮಾರು ಎರಡು ಗಂಟೆಗಳ ವರೆಗೆ ನಡೆಯಬಹುದು. ಚಂದ್ರಗ್ರಹಣ ವರ್ಷದಲ್ಲಿ ಮೂರು ಸಲ ಸಂಭವಿಸಬಹುದಾಗಿದೆ.

ಸೂರ್ಯ-ಚಂದ್ರರನ್ನು ರಾಹು-ಕೇತುಗಳೆಂಬ ದುಷ್ಟಗ್ರಹಗಳು ಹಿಡಿಯುವುದನ್ನೇ (ನುಂಗುವುದಕ್ಕೆ) ’ಗ್ರಹಣ’ವೆನ್ನುವ ನಂಬಿಕೆ ಭಾರತೀಯ ಸಮಾಜದಲ್ಲಿ ಬೆಳೆದು ಬಂದಿದೆ. ಗ್ರಹಣದ ಸಮಯದಲ್ಲಿ ಯಾವುದೋ ದೈತ್ಯ ಮೃಗವೊಂದು ಆಕಾಶಕಾಯಗಳನ್ನು ಕಬಳಿಸುತ್ತದೆಂದೂ, ಅದನ್ನು ಹೊಡೆದೋಡಿಸಲು ಆಕಾಶದೆಡೆಗೆ ಬಾಣಗಳನ್ನು ಎಸೆಯುತ್ತಿದ್ದರೆಂದೂ ಅಭಿಪ್ರಾಯಗಳಿವೆ. ರಾಹು ಎಂಬ ಸರ್ಪ ಗ್ರಹಣಕಾಲದಲ್ಲಿ ಸೂರ್ಯ ಚಂದ್ರರನ್ನು ನುಂಗುವನೆಂಬ ಪ್ರಬಲವಾದ ನಂಬಿಕೆಯೂ ಇದೆ.

’ಅಮೃತ ಮಂಥನಾನಂತರ ದೇವದಾನವರು ಅಮೃತಪ್ರಾಶನಕ್ಕಾಗಿ ಕುಳಿತಿದ್ದ ಸಮಯದಲ್ಲಿ ರಾಹುವು ದೇವತೆಗಳೊಂದಿಗೆ ಕುಳಿತು ಅಮೃತ ಪ್ರಾಶನ ಮಾಡುತ್ತಿದ್ದ. ಇದನ್ನು ಕಂಡು ಸೂರ್ಯಚಂದ್ರರು ವಿಷ್ಣುವಿಗೆ ಹೇಳಲಾಗಿ ವಿಷ್ಣು ಚಕ್ರಾಯುಧದಿಂದ ಅವನ ಕೊರಳನ್ನು ಕೊಯ್ದರು. ಆದರೆ ಅಮೃತವನ್ನು ಕುಡಿದಿದ್ದನಾಗಿ ರಾಹುವಿನ ರುಂಡ-ಮುಂಡಗಳೆರಡೂ ರಾಹು-ಕೇತುಗಳೆಂಬ ಹೆಸರಿನಿಂದ ಸಜೀವಗಳಾದವು. ಸೂರ‍್ಯ ಚಂದ್ರರು ತನ್ನ ಮೇಲೆ ದೂರು ಹೇಳಿದರೆಂಬ ದ್ವೇಷದಿಂದ ರಾಹು ಆಗಾಗ್ಗೆ ಸೂರ್ಯ-ಚಂದ್ರರನ್ನು ಪೀಡಿಸುತ್ತಾನೆ” ಎಂಬುದು ಪುರಾಣದ ಕತೆ.

’ರಾಹು, ಸೂರ್ಯಚಂದ್ರರನ್ನು ಹಿಡಿದು ಗ್ರಹಣ ಉಂಟುಮಾಡುವ ಒಬ್ಬ ದೈತ್ಯ ವಿಪ್ರಚಿತ್ತ ಸಿಂಹಿಕೆಯರ ಮಗ. ಅವನಿಗೆ ಹಾವಿನ ಬಾಲವಿದೆ. ಸಮುದ್ರ ಮಂಥನಾ ನಂತರ ಅವನು ವೇಷತೊಟ್ಟು ದೇವತೆಗಳ ಮಧ್ಯ ಕುಳಿತು ಅಮೃತ ಕುಡಿದ; ಅವನ ಈ ಮೋಸತನವನ್ನು ಗಮನಕ್ಕೆ ತಂದಾಗ ವಿಷ್ಣು ಅವನ ತಲೆಯನ್ನು ಕತ್ತರಿಸಿಬಿಟ್ಟ. ಅದು ಹೋಗಿ ಆಕಾಶಕ್ಕೆ ಸೇರಿಕೊಂಡಿತು. ಅಮರತ ಕುಡಿದಿದ್ದರಿಂದ ಪ್ರಾಣ ಹೋಗಲಿಲ್ಲ. ಪ್ರತೀಕಾರ ಬುದ್ಧಿಯಿಂದ ರಾಹು ಆಗಾಗ್ಗ ಸೂರ‍್ಯ ಚಂದ್ರರನ್ನು ನುಂಗುತ್ತಾನೆ. ಆ ದೈತ್ಯನ ಬಾಲ ’ಕೇತು’ವಾಗಿ ಅನೇಕ ಉಲ್ಕೆ, ಧೂಮಕೇತುಗಳಿಗೆ ಕಾರಣವಾಗಿದೆ.’ ಎಂದು ಮೋನಿಯರ್ ವಿಲಿಯಮ್ಸ್ ತಮ್ಮ ಸಂಸ್ಕೃತ ಇಂಗ್ಲಿಷ್ ಶಬ್ದಕೋಶದಲ್ಲಿ ರಾಹುವಿ ತಕೆಯನ್ನು ಕೊಟ್ಟಿದ್ದಾರೆ.

ಗ್ರಹಣಕೆ ಸಂಬಂಧಿಸಿದಂತೆ ವಿಭಿನ್ನ ಸಂಸ್ಕರತಿಗಳಲ್ಲಿರುವ ಪುರಾಣ ಮತ್ತು ನಂಬಿಕೆಗಳು ಸ್ವಾರಸ್ಯಕರವಾಗಿವೆ. ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಯಾವುದೇ ಜೀವ ಅಥವಾ ನಿರ್ಜೀವ ವಸ್ತುಗಳನ್ನು ಮುರಿಯುವುದಾಗಲಿ, ಪದಾರ್ಥಗಳನ್ನು ತಿನ್ನುವುದಾಗಲೀ, ಕತ್ತರಿಸುವುದಾಗಲಿ, ಸೂಜಿಯಿಂದ ಬಟ್ಟೆಗಳನ್ನು ಹೊಲಿಯುವುದಾಗಲಿ ಮಾಡಕೂಡದು. ಯಾಕೆಂದರೆ ಸೂರ್ಯ-ಚಂದ್ರಗ್ರಹಣಗಳು ಗರ್ಭಸ್ಥ ಶಿಶುವಿನ ಮೇಲೆ ದುಷ್ಟ ಪರಿಣಾಮವನ್ನುಂಟು ಮಾಡುವನೆಂಬ ಭಾವನೆ ಗಳಿರುವುದರಿಂದ ಈ ಅವಧಿಯಲ್ಲಿ ಅಂಥ ಸ್ತ್ರೀಯರನ್ನು ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ಗ್ರಹಣ ಕಾಲಾವಧಿಯಲ್ಲಿ ಸಾಮಾನ್ಯವಾಗಿ ಯಾರೂ ಊಟ ವಗೈರೆ ಮಾಡಲಾರರು. ಸೂರ್ಯ-ಚಂದ್ರರನ್ನು ಒಂದು ವಿಷ ಸರ್ಪ ನುಂಗುವ ಈ ಅವಧಿಯಲ್ಲಿ ಏನನ್ನೂ ಸೇವಿಸಬಾರದೆಂದು ಭೀತಿ ಜನರಲ್ಲಿ ಅಡಗಿದೆ. ಗ್ರಹಣದ ಸಮಯದಲ್ಲಿ ಸೂಕ್ಷ್ಮವಾದ ವಿಷ ಜಂತುಗಳು ಅಡಿಗೆ, ನೀರು ಮುಂತಾದವುಗಳಲ್ಲಿ ಸೇರುವದೆಂಬ ಭಾವನೆಯಿಂದ ಗ್ರಹಣ ಬಿಟ್ಟ ಮೇಲೆ ಅವುಗಳನ್ನು ಚೆಲ್ಲಿ ಮನೆ ಸಾರಿಸಿ ಹೊಸ ನೀರು ತಂದು, ಸ್ನಾನ ಮಾಡಿ ಹೊಸದಾಗಿ ಅಡುಗೆ ಮಾಡಿದ ಮೇಲೆಯೇ ಊಟ ಮಾಡುವರು. ಗ್ರಹಣದ ದಿನ ಸ್ನಾನ, ದಾನ, ಜಪ-ತಪ, ಶ್ರದ್ಧಾದಿಗಳಿಂದ ಅಮಿತ ಪುಣ್ಯ ಲಭವಿಸುವುದೆಂದು ನಂಬಿ ಹೀಗೆ ಮಾಡುವುದುಂಟು.

ಸೂರ್ಯ-ಚಂದ್ರಗ್ರಹಣಗಳು ಸಂಭವಿಸುವ ನಕ್ಷತ್ರಗಳಂದು ಹುಟ್ಟಿದವರು ತಮ್ಮ ಕರ್ಮಾದಿಗಳಿಗೆ ಸಂಬಂಧಿಸಿದಂತೆ ಎಳ್ಳುದಾನ, ಹಣದಾನ, ಗೋದಾನ, ಬಟ್ಟೆದಾನ, ಮುಂತಾದ ಶಾಂತಿಕಾರ‍್ಯ ಮಾಡದಿದ್ದರೆ ತೊಂದರೆಗೊಳಗಾಗುವರೆಂಬ ನಂಬಿಕೆ ಇದೆ. ಜಪ, ತಪ, ದೀಕ್ಷಾ ಕಾರ್ಯಗಳಿಗೆ ಗ್ರಹಣಗಳು ಉತ್ತಮ ದಿನಗಳಾಗಿವೆ.

ಗ್ರಹಣ ಫಲ:

ಚೈತ್ಯ, ಅಶ್ವಿನ, ಕಾರ್ತಿಕ ಮಾಸಗಳಲ್ಲಿ ಚಂದ್ರಗ್ರಹಣವಾದರೆ ಆ ಸಂವತ್ಸರದಲ್ಲಿ ಅಧಿಕ ಮಳೆಯಾಗಿ ಬೆಳೆಗಳು ಸಮೃದ್ಧಿಯಿಂದ ಫಲಿಸುತ್ತವೆ. ರಾಜ್ಯ ಕಾರ್ಯಗಳು ಸುಸೂತ್ರವಾಗಿ ಜರುಗುತ್ತವೆ. ಆದರೆ ಜೇಷ್ಠ, ಆಷಾಡ, ಮಾರ್ಗಶಿರ ಮಾಸದಲ್ಲಿ ಚಂದ್ರ-ಗ್ರಹಣವಾದರೆ ಪ್ರಜೆಗಳಿಗೆ ನಾನಾ ವಿಧವಾದ ಕಷ್ಟ ನಷ್ಟಗಳು ಎದುರಾಗುತ್ತವೆ.

ಒಂದೇ ತಿಂಗಳಲ್ಲಿ ಸೂರ್ಯ-ಚಂದ್ರಗ್ರಹಣಗಳು ಬರುವುದು ತೀರ ವಿರಳವಾದರೂ ಅನಿರೀಕ್ಷಿತವಾಗಿ ಬಂದರೆ ಆ ಸಂವತ್ಸರದಲ್ಲಿ ಕ್ಷಾಮ ಪೀಡೆಯಿಂದ ಪ್ರಜೆಗಳು ಕಂಗೆಡುವರು. ಹಾಗೂ ನಾನಾ ಬಗೆಯ ಕಷ್ಟನಷ್ಟಗಳಿಗೆ ಒಳಗಾಗುವರು. ಮೊದಲು ಸೂರ‍್ಯ ಗ್ರಹಣವಾಗಿ ಅನಂತರ ಚಂದ್ರಗ್ರಹಣವಾದರೆ ಅಂದರೆ ಶಿವರಾತ್ರಿ ಅಮಾವಾಸ್ಯೆಯಲ್ಲಿ ಸೂರ್ಯಗ್ರಹಣವಾಗಿ ಹೋಳಿಹುಣ್ಣಿಮೆಯಲ್ಲಿ ಚಂದ್ರಗ್ರಹಣವಾದರೆ ಮುಂದಿನ ವರ್ಷವೆಲ್ಲವೂ ಮಳೆಬೆಳೆಯಿಂದಲೂ, ವ್ಯಾಪಾರದಿಂದಲೂ, ಆರೋಗ್ಯ ಭಾಗ್ಯಾದಿಗಳಿಂದಲೂ ಪ್ರಜೆಗಳು ಸುಖಿಗಳಾಗಿರುವರು. ಆದರೆ ಭಾರತ ಹುಣ್ಣಿಮೆಗೆ ಚಂದ್ರಗ್ರಹಣವಾಗಿ ಶಿವರಾತ್ರಿಯಲ್ಲಿ ಸೂರ್ಯಗ್ರಹಣ ಸಂಭವಿಸಿದರೆ ಪ್ರಜೆಗಳು ನಾನಾ ರೀತಿಯಿಂದ ಕಂಗಾಲಾಗುತ್ತಾರೆ. ಎಂದು ರಟ್ಟಮತ ಶಾಸ್ತ್ರವು ಹೇಳಿದರೆ, ವಿಷ್ಣು ಧರ್ಮೋತ್ತರ ಪುರಾಣವು ಮೊದಲು ಚಂದ್ರಗ್ರಹಣ, ಬಳಿಕ ಒಂದು ತಿಂಗಳಲ್ಲಿಯೇ ಸೂರ‍್ಯಗ್ರಹಣ ಸಂಭವಿಸಿದರೆ ಬ್ರಾಹ್ಮಣ-ಕ್ಷತ್ರಿಯರಿಗೆ ಜಗಳಗಳು ಪ್ರಜಾನಾಶವಾಗುತ್ತದೆಂದು ಹೇಳುತ್ತದೆ.

ಚಂದ್ರನ ಸುತ್ತಲೂ ಗುಡಿ, ಕಣ, ಕಿರೆ ಕಟ್ಟುವುದು:

ಚಂದ್ರನ ಸುತ್ತಲೂ ಬಂಡಿಗಾಲಿ ಆಕಾರದ ಚಕ್ರಾಕಾರವಾಗಿ ತ್ರಿವರ್ಣಗಳಿಂದ ಕೂಡಿರುಪ, ಕೆಂಪು ಛಾಯೆ ಅಧಿಕವಾಗಿ ಕಾಣಿಸುವುದಕ್ಕೆ ’ಕಣ’ವೆಂದೂ, ಅದೇ ಆಕಾರದ ಆದರೆ ಸ್ವಲ್ಪ ಚಿಕ್ಕದಾಗಿ ಕಾಣಿಸುವುದಕ್ಕೆ ’ಗುಡಿ’ ಎಂದೂ, ಗುಡಿ ಹಾಗೂ ಕಣಕ್ಕಿಂತ ದೊಡ್ಡದಾಗಿ ಕಾಣಿಸುವುದಕ್ಕೆ ’ಕೆರೆ’ ಎಂದೂ ಹೆಸರು. ಹೀಗೆ ಚಂದ್ರನ ಸುತ್ತಲೂ ಕಾಣಿಸುವ ಕಣ, ಗುಡಿ, ಕೆರೆಗಳಿಗೆ ’ಪರಿವೇಷ’ ಕಟ್ಟುವುದು ಎನ್ನುತ್ತಾರೆ.

ಪರಿವೇಷದ ನಂಬಿಕೆಗಳು: ಹೊತ್ತು ಮುಳುಗಿದ ಒಂದನೆಯ ಯಾಮದಲ್ಲಿ (೩ ತಾಸಿಗೆ ಒಂದು ಯಾಮ) ಚಂದ್ರನಿಗೆ ಪರಿವೇಷವುಂಟಾದರೆ ಆ ಮಾಸದಿಂದ ರಾಜರಿಗೆ, ಪ್ರಜೆಗಳಿಗೆ ಪೀಡೆಗಳು: ಫಲವೃಕ್ಷಗಳ ನಾಶವು; ವೃಷ್ಟಿನಾಶವು, ಎರಡನೆಯ ಯಾಮದಲ್ಲಿ ಪರಿವೇಷವುಂಟಾದರೆ ಮಳೆ ಬೆಳೆ ಉತ್ತಮ. ರಾಜ ಹಾಗೂ ಪ್ರಜೆಗಳಿಗೆ ಸೌಖ್ಯವು ಮೂರನೆಯ ಯಾಮದಲ್ಲಿ ಪರಿವೇಷವುಂಟಾದರೆ ಅತಿದೃಷ್ಟಿಯಿಂದ ಕೆಲವು ಪ್ರದೇಶಗಳಲ್ಲಿ ಕಷ್ಟವುಂಟಾಗುವುದು. ನಾಲ್ಕನೆಯ ಯಾಮದಲ್ಲಿ ಪರಿವೇಷವುಂಟಾದರೆ ಪ್ರಪಂಚಕ್ಕೆ ಎಲ್ಲ ರೀತಿಯಿಂದಲೂ ಕಷ್ಟ ನಷ್ಟಗಳು. ಪ್ರಜೆಗಳಿಗೆ ಹಲವು ಪ್ರಕಾರದ ಉಪದ್ರವಗಳು ಮತ್ತು ಬರಗಾಲ ಭಯವು.

ಶುಕ್ಲ ಪಕ್ಷದ ತ್ರಯೋದಶಿ, ಚತುರ್ದಶಿ ತಿಥಿಗಳಲ್ಲಿ ಯಾವುದೇ ಯಾಮದಲ್ಲಿ ಚಂದ್ರನಿಗೆ ಪರಿವೇಷ ಉಂಟಾದರೆ ಪತಿವ್ರತಾ ಸ್ತ್ರೀಯರಿಗೆ, ರಾಜರ ಪತ್ನಿಯರಿಗೆ ಅನಿಷ್ಟವು; ಅಪಮಾನವು, ಹುಣ್ಣಿಮೆ-ಅಮವಾಸ್ಯೆಗಳಲ್ಲಿ ಯಾವುದೇ ಯಾಮದಲ್ಲಿ ಪರಿವೇಷವುಂಟಾದರೆ ಎಲ್ಲ ಕಡೆಗೆ ಪ್ರಜೆಗಳಿಗೆ ರೋಗಬಾಧೆಯಿಂದ ಮರಣ ಸಂಖ್ಯೆಯು ಹೆಚ್ಚಾಗುವುದು. ಯಾವ ಮಾಸದಲ್ಲಿಯೇ ಆಗಲಿ ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಪಂಚಮಿಯವರೆಗೆ ಪ್ರತಿದಿನ ಯಾವುದೇ ಯಾಮದಲ್ಲಿ ಪರಿವೇಷವುಂಟಾದರೆ ಉಚ್ಚಜಾತಿಯ ಜನರಿಗೆ ಪೀಡೆಯು. ಕ್ಷತ್ರಿಯರಿಗೆ ಸುಖ-ಸಂತೋಷವು, ಸತತವಾಗಿ ಏಳು ದಿನಗಳವರೆಗೆ ಅಥವಾ ಹದಿನೈದು ದಿನಗಳವರೆಗೆ ಚಂದ್ರನಿಗೆ ಪರಿವೇಷವುಂಟಾದರೆ ಸಮಸ್ತದೇಶಗಳ ಅರಸರಿಗೆ ಹಾಗೂ ಪ್ರಜೆಗಳಿಗೆ ಕಷ್ಟನಷ್ಟಗಳು ಹಾಗೂ ಅಳಿಗಾಲವುಂಟು.

ಆಷಾಢ, ಮಾಸದಲ್ಲಿ ಚಂದ್ರನಿಗೆ ಪರಿವೇಷವುಂಟಾದರೆ ಅಧಿಕ-ಮಳೆಯಾಗುವುದು. ಪರಿವೇಷವು ಬಿಳಿಛಾಯೆಯಿಂದ ಕೂಡಿದ್ದರೆ ಮಹಾಸುಖವು. ಹಳದಿ ವರ್ಣವಾಗಿದ್ದರೆ ಅತಿವೃಷ್ಟಿಯು. ಕಪ್ಪುವರ್ಣವಿದ್ದರೆ ಪ್ರಜಾನಾಶವು. ಕೆಂಪು ವರ್ಣವಿದ್ದರೆ ಕಲಹವು, ರಾಜರಿಗೆ ಯುದ್ಧ ಭಯವು, ವೃಷ್ಟಿನಾಶವು, ಫಲಗಳ ನಷ್ಟವು. ಪಶುಗಳಿಗೆ ಪೀಡೆಯು, ಎಲ್ಲ ಕಡೆಗೆ ಬರಗಾಲ ಕಾಣಿಸುವುದು.

ಚಂದ್ರನಿಗೆ ಕಟ್ಟಿರುವ ಕೆರೆಯು ಬಿಳಿ ಬಣ್ಣ ಅಧಿಕವಾಗಿದ್ದು, ಮೋಡಗಳಿಂದ ಕೂಡಿಕೊಂಡು ಪೂರ್ವದಿಕ್ಕಿಗೆ ಒಡೆದಿದ್ದರೆ ಮೂರು ದಿವಸಗಳಲ್ಲಿ ಮಳೆಯಾಗುವುದು. ಆಗ್ನೆ ದಿಕ್ಕಿಗೆ ಒಡೆದಿದ್ದರೆ ಅದೇ ದಿವಸ ಅಥವಾ ಮರುದಿವಸ ಮಳೆಯಾಗುವುದು. ದಕ್ಷಿಣ ದಿಕ್ಕಿಗೆ ಒಡೆದಿದ್ದರೆ ಮೂರು ದಿನಗಳಲ್ಲಿ ಮಳೆಯು; ಇಲ್ಲದಿದ್ದರೆ ಮೂರು ತಿಂಗಳವರೆಗೆ ಮಳೆಯಾಗುವುದಿಲ್ಲ. ನೈಋತ್ಯ ದಿಕ್ಕಿಗೆ ಒಡೆದಿದ್ದರೆ ಶೀತಗಾಳಿಯು ಅಧಿಕವಾಗಿ ಬೀಸುವುದರಿಂದ ಮುಂದಿನ ಮೂರು ಮಳೆಗಳವರೆಗೆ ಖಂಡ ಮಂಡಲ ಮಳೆಯು. ಪಶ್ಚಿಮ ದಿಕ್ಕಿಗೆ ಒಡೆದಿದ್ದರೆ ಮೂರು ದಿವಸದೊಳಗೆ ಎಲ್ಲ ಕಡೆಗೆ ಮಳೆಯು. ವಾಯುವ್ಯ ದಿಕ್ಕಿನಲ್ಲಿ ಒಡೆದಿದ್ದರೆ ಮಳೆಯಾಗುವುದು. ಆದರೆ ಬೆಳೆಗಳಿಗೆ ಹುಳಗಳ ಕಾಟವು. ಪಶುಗಳಿಗೆ ರೋಗ ಪೀಡೆಯು. ಪ್ರಜೆಗಳಿಗೆ ಅರಿಷ್ಟವು. ಉತ್ತರ ದಿಕ್ಕಿಗೆ ಒಡೆದಿದ್ದರೆ ಅತಿವೃಷ್ಟಿ ಯಿಂದ ಬೆಳೆಗಳಿಗೆ ನಷ್ಟವು.

ಜೇಷ್ಠ ಮಾಸದ ಶುಕ್ಲಪಕ್ಷದ ಅಷ್ಟಮಿಯಿಂದ ಕಾರಹುಣ್ಣಿಮೆಯವರೆಗೆ ಯಾವುದೇ ದಿವಸ ಚಂದ್ರನಿಗೆ ’ಕಣ’ ಕಟ್ಟಿದರೆ ಮುಂದೆ ಮೂರು ತಿಂಗಳವರೆಗೆ ಮಳೆಯಾಗುವುದಿಲ್ಲ. ಚಂದ್ರನಿಗೆ ’ಗುಡಿ’ ಕಟ್ಟಿದರೆ ಮುಂದಿನ ಮೂರು ಹುಣ್ಣಿಮೆಗಳವರೆಗೆ ಖಂಡಮಂಡಲ ಮಳೆಯು. ಆದರೆ ಚಂದ್ರನಿಗೆ ’ಕೆರೆ’ ಕಟ್ಟಿದರೆ ಮೂರು ವಾರಗಳಲ್ಲಿ ಮಳೆಯಾಗುವುದು.

ಕೆರೆ, ಗುಡಿ, ಕಣಗಳು ಯಾವುದಾದರೊಂದು ಭಾಗಕ್ಕೆ ಮೇಘದಿಂದ ಕೂಡಿ ಬಿಳಿ ಬಣ್ಣ ಅಧಿಕವಾಗಿದ್ದು ಒಡೆದಿದ್ದರೆ ಮೂರು ದಿವಸಗಳಲ್ಲಿ ಮಳೆಯಾಗುವುದು. ಯಾವ ಮಳೆಯಲ್ಲಿಯೇ ಆಗಲಿ ಚಂದ್ರನು ಕೆಂಪು ಛಾಯಾ ಅಧಿಕವುಳ್ಳವನಾಗಿ ಪ್ರಕಾಶಮಾನವಾಗಿದ್ದು ಶೀತವಾಯು ಯಾವ ಮಳೆಯವರೆಗೆ ಬೀಸುವುದೋ ಆ ಮಳೆಯವರೆಗೆ ಮಳೆಯು ಬೀಳುವುದಿಲ್ಲ. ಚಂದ್ರನಿಗೆ ಹಸಿರು ಬಣ್ಣದ ಪರಿವೇಷ (ಕೆರೆ) ಉಂಟಾದರೆ ಕೂಡಲೇ ಮಳೆಯಾಗುವುದು. ಮಳೆಗಾಲದಲ್ಲಿ ಆಕಾಶದಲ್ಲಿ ಮೋಡಗಳಿಲ್ಲದಿದ್ದರೂ ಪರಿವೇಷವುಂಟಾದರೆ ಮಳೆಯಾಗುವುದು.

ಮುಸ್ಲಿಂ ಧರ್ಮದಲ್ಲಿ ಚಂದ್ರ:

ಮುಸ್ಲೀಂ ಧರ್ಮದಲ್ಲಿ ಚಂದ್ರ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದಿದ್ದಾನೆ ಚಂದ್ರ, ಸುಂದರ, ಶಾಂತ, ನಿಧಾನ, ದಯಾಳುಮೂರ್ತಿ. ಸೂರ್ಯ ಪ್ರಖರ, ಉಗ್ರ ಮೂತಿ, ಮನುಷ್ಯ ಉಗ್ರಮೂರ್ತಿಯಲ್ಲ; ಚಂದ್ರನ ಸ್ವಭಾವದವನು. ಹೀಗಾಗಿ ಚಂದ್ರನನ್ನು ಪೂಜಿಸಿದಲಲ್ಲಿ ಕಲ್ಯಾಣವಾಗುತ್ತದೆಂದು ಅವರ ಗ್ರಹಿಕೆ. ಅವರ ಧರ್ಮ ಸಂಕೇತದಲ್ಲಿ ಹಸಿರು, ನಕ್ಷತ್ರ, ಚಂದ್ರಗಳಿರುವುದನ್ನು ಕಾಣುತ್ತೇವೆ. ಮುಸ್ಲಿಂ ಧರ್ಮ ಹುಟ್ಟಿದ್ದು ಅರಬಸ್ತಾನದ ಮರಳುಗಾಡು ಪ್ರದೇಶದಲ್ಲಿ, ಅಲ್ಲಿಯ ಜನ ಶೀತಳ ಬೆಳಕನ್ನೀಯುವ ಚಂದ್ರನನ್ನು ಬಯಸುವುದು ಸಹಜವಾಗಿದೆ.

ಮಹಾಪ್ರವಾದಿ ಮಹಮ್ಮದ ಪೈಗಂಬರನ ಪ್ರವಾದಿತ್ವವನ್ನು ಪರೀಕ್ಷಿಸುವುದಕ್ಕಾಗಿ ಕೆಲ ಮೂರ್ತಿ ಪೂಜಕರು, ಹಾಗೂ ಯಹೂದಿಗಳು ಹುಣ್ಣಿಮೆಯ ರಾತ್ರಿ ಬೆಳಗುತ್ತಿದ್ದ ಚಂದ್ರನನ್ನು ತೋರಿಸಿ, ಅದು ಎರಡು ಹೋಳಾಗುವಂತೆ ಸೀಳಿ ಪ್ರವಾದಿತ್ವವನ್ನು ಸಿದ್ದಮಾಡಿ ತೋರಿಸಿಕೊಡು ಎಂದಾಗ ಮಕ್ಕಾದ ’ಮೀನಾ’ ಎಂಬಲ್ಲಿ ಹುಣ್ಣಮೆಯ ಚಂದ್ರನತ್ತ ಪ್ರವಾದಿಗಳು ಬೆರಳು ಮಾಡಿದಾಗ ಅದು ಹೋಳಾದುದನ್ನು ತೋರಿಸುತ್ತ ’ಇದು ಬರಲಿರುವ ಮಹಾಪ್ರಳಯದ (ಕಯಾಮತ ಸಂಕೇತ’ ಎಂದು ಅಲ್ಲಿ ಉಪಸ್ಥಿತರಿದ್ದವರಿಗೆ ಮುನ್ಸೂಚನೆ ನೀಡಿದ್ದರೆಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಈ ಘಟನೆ ಪ್ರವಾದಿಗಳ ಒಂದು ಪವಾಡವೆಂದು ಪರಿಗಣಿಸಲಾಗುತ್ತದೆ.

ಮುಸ್ಲೀಂರಿಗೆ ಚಂದ್ರ ಮುಖ್ಯನಾಗಿರುವುದು ಕಾಲದ ದೃಷ್ಟಿಯಿಂದ. ಅವರ ಪ್ರತಿಯೊಂದು ಹಬ್ಬಕ್ಕೂ ಚಂದ್ರ ಪ್ರಮುಖನಾಗಿದ್ದಾನೆ. ಅವನ ದರ್ಶನವಿಲ್ಲದೆ ಯಾವ ಹಬ್ಬಗಳ ಆಚರಣೆ ನಡೆಯಲಾರವು. ಚಂದ್ರನನ್ನು ನೋಡಿಯೇ ಅವರಲ್ಲಿ ತಾರೀಖು, ಹಿಜರಿ ಇತ್ಯಾದಿಗಳನ್ನು ಗುರುತಿಸುವ ರೂಢಿಯಿದೆ. ಅವರು ವರ್ಷಕ್ಕೊಮ್ಮೆ ಆಚರಿಸುವ ರಂಜಾನ್ ತಿಂಗಳ ಉಪವಾಸ ವ್ರತವನ್ನು ಚಂದ್ರನಿಂದ ಪ್ರಾರಂಭಿಸಿ ಚಂದ್ರನು ಪುನಃ ಹುಟ್ಟಿದ ಮೇಲೆ ಉಪವಾಸ ನಿಲ್ಲಿಸುತ್ತಾರೆ. ಈ ಕಾಲಾವಧಿಯ ಚಂದ್ರನನ್ನು ಈದ್ ಕಾ ಚಾಂದ್ ಎಂದು ಕರೆಯುತ್ತಾರೆ. ಮುಸ್ಲೀಂರು ತಮ್ಮ ಒಂದು ನಂಬಿಕೆಯ ಪ್ರಕಾರ ಪಾತ್ರೆಯಲ್ಲಿ ನೀರು ಹಾಕಿ ಪೂರ್ಣಚಂದ್ರನನ್ನು ಪ್ರತಿಬಿಂಬಿಸಿ ಅದನ್ನು ಕುಡಿಯುತ್ತಾರೆ.

ಸಮಾರೋಪ:

ಈವರೆಗಿನ ವಿವರಣೆಯಲ್ಲಿ ಚಂದ್ರನು ಪಡೆದಿರುವ ಪ್ರಾಧಾನ್ಯತೆಯನ್ನು ಹೇಳುತ್ತಿರುವಾಗ ಶಾಸನಗಳಲ್ಲಿಯೂ ಚಂದ್ರ ಅಗ್ರಸ್ಥಾನವನ್ನು ಪಡೆದಿದ್ದಾನೆ ಎಂದು ಹೇಳದೇ ಹೋದರೆ ತಪ್ಪಾದೀತು. ಶಾಸನಗಳಲ್ಲಿ ಚಂದ್ರ ಸೂರ್ಯನ ಜೊತೆ ಜೊತೆಗೆ ಕಾಣಸಿಗುತ್ತಾನೆ. ಅಲ್ಲಿ ಈ ಸೂರ್ಯ-ಚಂದ್ರರು ಶಾಶ್ವತತೆಯ ಹಾಗೂ ನಿರಂತರತೆಯ ಸಂಕೇತಗಳಾಗಿದ್ದಾರೆ. ವಿಶ್ವದ ವ್ಯವಹಾರಕ್ಕೆ ಸೂರ್ಯ ಚಂದ್ರರಿಬ್ಬರೇ ಸಾಕ್ಷಿ ಎಂಬ ಅಂಶಕ್ಕೆ ಇಲ್ಲಿ ಅಗ್ರಪಟ್ಟ.

ಚಂದ್ರನು ಗುರುಪತ್ನಿ ತಾರೆಯನ್ನು ಅಪಹರಿಸಿದ್ದು, ಋಷಿ ಪತ್ನಿ ಅಹಲ್ಯೆಯ ಸೌಂದರ್ಯಕ್ಕೆ ಮಾರು ಹೋಗಿ ಭೋಗಿಸಲು ಅಪೇಕ್ಷಿಸಿದ್ದು, ಗಣಪತಿಯನ್ನು ನೋಡಿ ನಕ್ಕದ್ದು, ರಾಹು ಅಮೃತ ಸೇವನೆ ಮಾಡಿದುದನ್ನು ವಿಷ್ಣುವಿಗೆ ಚಾಡಿ ಹೇಳಿದ್ದು, ಹಾಗೂ ಅಶ್ವಿನೀ ಮೊದಲಾದ ೨೭ ಜನ ದಕ್ಷಪ್ರತಿಯರನ್ನು ಮದುವೆಯಾಗಿ ರೋಹಿಣಿಯಲ್ಲಿ ಮಾತ್ರ ವಿಶೇಷಾನುಪಕ್ತನಾದದ್ದು ಈ ಮುಂತಾದ ಸಂಗತಿಗಳು ಚಂದ್ರನಲ್ಲಿ ಮಾನವ ಸಹಜ ಸ್ವಭಾವಗಳನ್ನು ಜನತೆ ಕಂಡುಕೊಳ್ಳಲು ಯತ್ನಿಸಿದಂತಿದೆ. ಇದರೊಡನೆ ಚಂದ್ರನಿಂದೊದಗುವ ಪ್ರಯೋಜನಗಳನ್ನು ಪರಿಭಾವಿಸುವಾಗ, ದೈವೀ ಅಂಶವನ್ನು ಕಂಡಿರುವುದು ಸ್ಪಷ್ಟವಾಗಿದೆ.

ಈ ಹಿಂದೆ ನಿರೂಪಿಸಲಾದ ಸಂಗತಿಗಳಲ್ಲಿ ಚಂದ್ರನನ್ನು ಸೀಳಿದ ಅಂಶಗಳು ಹಿಂದೂಗಳಲ್ಲಿ ಹಾಗೂ ಮುಸ್ಲೀಂರಲ್ಲಿ ಕಂಡುಬರುವುದಾದರೂ ದೃಷ್ಟಿವ್ಯತ್ಯಸ ಗಮನಾರ್ಹವಾದುದು. ಕ್ಷಯದ ಶಾಪಕ್ಕೆ ತುತ್ತಾದ ಚಂದ್ರನನ್ನು ಎರಡಾಗಿಸಿ ಶಿವನ ಜಡೆಯಲ್ಲಿ ಇರಿಸುವ ಮತ್ತು ಸಸ್ಯಾದಿಗಳಿಗೆ ಪೂರಕ ಶಕ್ತಿಯಾಗಿ ನಿಲ್ಲುವಂತೆ ಮಾಡಿದದು ಹಿಂದೂ ಪುರಾಣಗಳಲ್ಲಿ ಕಾಣುವ ಸಂಗಾತಿಯಾದರೆ, ಪೈಗಂಬರರು ಪವಾಡ ಮೆರೆಯುವಾಗ ಚಂದ್ರನನ್ನು ಸೀಳಿತೋರಿ ಇದು ಮುಂದಿನ ಪ್ರಳಯದ ಸೂಚನೆ ಎನ್ನುವಲ್ಲಿ ಈ ದೃಷ್ಟಿ ವ್ಯತ್ಯಾಸ ವ್ಯಕ್ತವಾಗಿದೆ.

ನಮ್ಮ ವೇದ ಪುರಾಣಗಳಲ್ಲಿ ಸಸ್ಯಾಧಿಪತಿಯಾಗಿಯೂ, ಸಾಹಿತ್ಯದಲ್ಲಿ ಸೌಂದರ್ಯದ ಪ್ರತೀಕವಾಗಿಯೂ, ಜನಪದ ವಾಙ್ಮಯದಲ್ಲಿ ಮಳೆ-ಬೆಳೆಗಳಿಗೆ ಕಾರಕನಾಗಿಯೂ ಹಾಗೂ ರಜತಾದಿ ಲೋಹಗಳಿಗೆ ಕಾರಕನಾಗಿರುವ ಚಂದ್ರ ಇಂದು ವಿಜ್ಞಾನಿಗಳಿಗೆ ಸವಾಲಾಗಿದ್ದಾನೆ. ಸೃಷ್ಟಿಯ ಚರಾಚರ ವಸ್ತುಗಳ ಮೇಲೆ ಪರಿಣಾಮ ಬೀರುವ ಚಂದ್ರನನ್ನು ಮೆಟ್ಟಿಬಂದಿರುವುದಾದರೂ ಅವನ ಚಿದಂಬರ ರಹಸ್ಯವನ್ನು ಭೇದಿಸುವಲ್ಲಿ ವಿಜ್ಞಾನವು ಅಸಮರ್ಥವಾಗಿದೆ. ಜಾನಪದರಲ್ಲಿ ಚಂದ್ರನಿಗೆ ಗುಡಿ, ಕಣ, ಕೆರೆ ಕಟ್ಟುವುದು ಮಳೆಬೆಳೆಗಳಿಗೆ ಸಂಬಂಧಿಸಿದ ಫಲಾಫಲ ಹಾಗೆಯೇ ಚಂದ್ರನನ್ನು ಹಾಲು ಇಲ್ಲವೆ ನೀರಿನಲ್ಲಿ ಪ್ರತಿಬಿಂಬಿಸಿ ಕುಡಿಯುವ ಕೆಲವು ಜನಾಂಗಗಳ ನಂಬಿಕೆ ಇವುಗಳ ವಿಶ್ಲೇಷಣೆ ಯತ್ತ ಈವರೆಗೆ ಗಮನಹರಿದಂತಿಲ್ಲ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ವಿಶ್ಲೇಷಣೆ- ಪ್ರಯೋಗಗಳು ನಡೆಯುವುದು ಮತ್ತು ವೈಜ್ಞಾನಿಕ ಸತ್ಯವನ್ನು ಕಂಡುಕೊಳ್ಳಬೇಕಾದುದು ಅವಶ್ಯವಾಗಿದೆ.

 ಗ್ರಂಥ ಋಣ:

 

ಡಾ. ಎಂ. ಚಿದಾನಂದಮೂರ್ತಿ ಪೂರ್ಣಸೂರ್ಯಗ್ರಹಣ, ೧೯೮೨, ಐಬಿಎಚ್ ಪ್ರಕಾಶನ, ಬೆಂಗಳೂರು,
ಅಗ್ರಹಾರ ಕೃಷ್ಣಮೂರ್ತಿ ಬೆಳ್ದಿಂಗ್ಳಪ್ಪನ ಪೂಜೆ ೧೯೭೬, ಮುಂಗಾರು ಪ್ರಕಾಶನ, ಬೆಂಗಳೂರು.
ಎಮ್. ಸುಬ್ರಾಯನ್ ಚಂದ್ರ, ೧೯೮೩, ಗಜಾನನ ಪ್ರಕಾಶನ, ಮಂಗಳೂರು,
ವೇ. ಬಸವಯ್ಯ ಶಾಸ್ತ್ರಿಗಳು ಹಿರೇಮಠ ರಟ್ಟಮತ ಶಾಸ್ತ್ರ, ಬೆನಗಲ್ ರಾಮರಾವ್ ಹಾಗೂ
ಪಾನ್ಯಂ ಸುಂದರಶಾಸ್ತ್ರಿ ಉತ್ತರ ಕರ್ನಾಟಕದ ಒಗಟುಗಳು, ೧೯೭೪. ರವೀಂದ್ರ ಪ್ರಕಾಶನ, ಕಲಬುರ್ಗಿ.
ಎಸ್.ಕೆ.ರಾಮಚಂದ್ರರಾವ್ ಮೂರ್ತಿಶಿಲ್ಪ ನೆಲೆ-ಹಿನ್ನೆಲೆ, ಬೆಂಗಳೂರು ವಿವಿ ಬೆಂಗಳೂರು,
ಡಾ. ಪಿ.ವಿ. ನಾರಾಯಣ ವಚನ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ.
ಜಿ.ಎಸ್.ಶಿವರುದ್ರಪ್ಪ ಸೌಂದರ್ಯ ಸಮೀಕ್ಷೆ, ೧೯೭೦
William Crooke Religion and Folklore of Northern India, 1925
ಕಿರಿಯರ ವಿಶ್ವಕೋಶ ಭಾಗ-೩ ಜ್ಞಾನಗಂಗೋತ್ರಿ
ಕನ್ನಡ ನಿಘಂಟು ಭಾಗ-೩ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.