ಚಂಪಕರಾಮನ್ ಪಿಳ್ಳೈಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿ ಮುಖಂಡನಾಗಿ ಬ್ರಿಟಿಷರ ವಿರುದ್ಧ ಚಳುವಳಿಯನ್ನು ನಡೆಸಿದ ದೇಶಭಕ್ತ. ಇಡೀ ಜೀವನವನ್ನು ಭಾರತಕ್ಕೆ ಅರ್ಪಿಸಿದರು. ಹದಿನೆಂಟನೆಯ ವಯಸ್ಸಿಗೆ ಭಾರತಬಿಟ್ಟು ಹೋದವರು ಪಾಶ್ಚಾತ್ಯ ದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವನ್ನು ಗಳಿಸಲು ಶ್ರಮಿಸಿದರು.

ಚಂಪಕರಾಮನ್ ಪಿಳ್ಳೈ

 

ಹದಿನೈದನೆಯ ವಯಸ್ಸಿನಲ್ಲಿ ತಿರುವನಂತಪುರ ವನ್ನು ಬಿಟ್ಟು ಪರರಾಷ್ಟ್ರಗಳಲ್ಲೆ ಸುತ್ತಾಡುತ್ತ ಆಯುಷ್ಯವಿಡೀ ಭಾರತಾಂಬೆಯ ಬಂಧನ ವಿಮುಕ್ತಿಗಾಗಿ ಹೋರಾಡಿದ ಗಂಡುಗಲಿ!

ಐರೋಪ್ಯ ರಾಷ್ಟ್ರಗಳ ಎಲ್ಲ ಕಡೆಗಳಲ್ಲೂ ಇದ್ದ ಭಾರತೀಯರನ್ನು ಒಂದುಗೂಡಿಸಿ ಭಾರತವನ್ನು ಅಧೀನದಲ್ಲಿರಿಸಿಕೊಂಡಿದ್ದ ಬ್ರಿಟಿಷರ ವಿರುದ್ಧ ಕತ್ತಿ ಮಸೆದ ಕ್ರಾಂತಿಕಾರ!

ವಜ್ರದಿಂದಲೇ ವಜ್ರವನ್ನು ಪುಡಿ ಮಾಡಬೇಕು-

ಕತ್ತಿಗೆ ಕತ್ತಿ, ಬಂದೂಕಿಗೆ ಬಂದೂಕು. ಬ್ರಿಟಿಷರಿಗೆ ದುರಾಗಿ ಶಸ್ತ್ರಾಸ್ತ್ರಗಳಿಂದಲೇ ಹೋರಾಡಿ ಭಾರತ ವನ್ನು ಸ್ವತಂತ್ರಗೊಳಿಸಬೇಕೆನ್ನುವ ಧ್ಯೇಯವನ್ನಿರಿಸಿ ಕೊಂಡಿದ್ದ ಛಲವಾದಿ!

ಭಾರತಕ್ಕೆ ಸ್ವಾತಂತ್ರ್ಯ ದೊರೆತು ಭಾರತ ಸರ್ಕಾರ ರಚನೆಯಾಗುವುದಕ್ಕೆ ಮೊದಲೇ ಕಾಬೂಲ್‌ನಲ್ಲಿ ಸ್ವತಂತ್ರ ಭಾರತದ ಸರ್ಕಾರವನ್ನು ರಚಿಸಿ ಅದರ ವಿದೇಶಾಂಗ ಮಂತ್ರಿಯಾಗಿದ್ದ ಆಡಳಿತಗಾರ!

ತಿರುವನಂತಪುರದ ಬೀದಿಯಲ್ಲಿ ಇಂಗ್ಲೆಂಡಿನ ಬಹುದೊಡ್ಡ ಶ್ರೀಮಂತ ನಡೆದು ಹೋಗುತ್ತಿದ್ದ. ಬಿಳಿಯ ನಿಲುವಂಗಿ, ಕೆಂಪು ತಲೆಗೂದಲು, ಹೊಳೆಯುವ ನೀಲಿಯ ಕಣ್ಣುಗಳು, ಆಕರ್ಷಕ ಮುಖ. ಎತ್ತರವಾದ ಆಕೃತಿ. ಒಬ್ಬ  ಬಿಳಿಯ. ಆತ ಯಾರು? ಎಲ್ಲಿಂದ ಬಂದ? ಏತಕ್ಕಾಗಿ ಬಂದಿದ್ದಾನೆ? ಎಂದು ಎಲ್ಲರೂ ಕಣ್ಣರಳಿಸಿಕೊಂಡು ನೋಡುತ್ತಿದ್ದರು. ಅವನೊಬ್ಬ ಪ್ರಾಣಿಶಾಸ್ತ್ರಜ್ಞ. ಹೆಸರು ಎರಲ್ ಸ್ಟ್ರ್ರೀಕ್‌ಲೆಂಡ್. ಪ್ರಾಣಿಶಾಸ್ತ್ರದ ಅಧ್ಯಯನಕ್ಕಾಗಿ ಇಂಗ್ಲೆಂಡಿನಿಂದ ಭಾರತಕ್ಕೆ ಬಂದಿದ್ದ. ಕೆಲವು ದಿನಗಳು ತಿರುವನಂತಪುರದಲ್ಲಿ ಇಳಿದುಕೊಂಡಿದ್ದು ಅಧ್ಯಯನ ನಡೆಸುವ ಉದ್ದೇಶ ಅವನಿಗಿತ್ತು. ಚಿಟ್ಟೆ, ಚೇಳು, ಹಲ್ಲಿ, ಹಾವುರಾಣಿ, ಕಪ್ಪೆ-ಮಂತಾದ ಜೀವಿಗಳನ್ನು ಗಾಜಿನ ಪೆಟ್ಟಿಗೆಗಳಲ್ಲಿ ಕೂಡಿ ಹಾಕಿ ಸಾಕುತ್ತ, ಗಂಟೆಗಟ್ಟಲೆ ನೋಡುತ್ತ ಕುಳಿತುಕೊಂಡು ಅಧ್ಯಯನ ನಡೆಸುತ್ತಿದ್ದ. ಆತನಿಗೆ ಬೇಕಾದ ಪ್ರಾಣಿಗಳನ್ನು ಹಿಡಿದುಕೊಡಲು ಶಾಲೆಯ ವಿದ್ಯಾರ್ಥಿಗಳ ಸಹಾಯವನ್ನು ಪಡೆಯುತ್ತಿದ್ದ. ಅಂತಹ ವಿದ್ಯಾರ್ಥಿಗಳಲ್ಲಿ ಸ್ಟ್ರೀಕ್‌ಲೆಂಡ್‌ಗೆ ತುಂಬ ಮೆಚ್ಚಿಕೆಯಾದ ಬಾಲಕ ಚಂಪಕರಾಮನ್ ಪಿಳ್ಳೈ.

ಜನನ- ಬಾಲ್ಯ -ವಿದ್ಯಾಭ್ಯಾಸ

ಇಂದು  ತಿರುವನಂತಪುರದ ಅಕೌಂಟೆಂಟ್ ಜನರಲ್ ಆಫೀಸ್ ಎಲ್ಲರಿಗೂ ಎದ್ದು ಕಾಣುವಂತಹ ಕಟ್ಟಡ. ಎಪ್ಪತ್ತೈದು ವರ್ಷಗಳ ಹಿಂದೆ ಅಲ್ಲಿದ್ದದ್ದು ತೆಂಗಿನ ಗರಿ ಹೊದಿಸಿದ್ದ ಚಿಕ್ಕ ಮನೆ. ತಮಿಳುನಾಡಿನಿಂದ  ಬಂದು ನೆಲಸಿದ ವೆಳ್ಳಾಳ ಮನೆತನದ ಚಿನ್ನಸ್ವಾಮಿ ಪಿಳ್ಳೈ ಆ ಮನೆ ಯಲ್ಲಿ ವಾಸವಾಗಿದ್ದರು. ಹೆಡ್‌ಕಾನ್‌ಸ್ಟೇಬಲ್ ಹುದ್ದೆಯಲ್ಲಿದ್ದ ಚಿನ್ನಸ್ವಾಮಿ ಪಿಳ್ಳೈಯ ಧರ್ಮಪತ್ನಿ, ಶ್ರೀಮತಿ ನಾಗಮ್ಮಾಳ್ ತಿರುವನಂತಪುರದ ಅರಮನೆ ವೈದ್ಯರಾಗಿದ್ದ ಪದ್ಮನಾಭ ಪಿಳ್ಳೈಯ ಪುತ್ರಿ. ೧೮೯೧ರ ಸೆಪ್ಟೆಂಬರ್ ೧೫ನೇ ತಾರೀಖಿನಂದು ಚಿನ್ನಸ್ವಾಮಿ  ಪಿಳ್ಳೈ ನಾಗಮ್ಮಾಳರ ಚೊಚ್ಚಿಲು ಮಗನಾಗಿ ಚಂಪಕರಾಮನ್ ಪಿಳ್ಳೈ ಜನ್ಮವೆತ್ತಿದರು.

೧೮೯೬ ರಲ್ಲಿ ಬಾಲಕ, ಚಂಪಕರಾಮನ್ ಪಿಳ್ಳೈಯ ವಿದ್ಯಾಭ್ಯಾಸ ಪ್ರಾರಂಭವಾಯಿತು. ಗಣಿತ ವೊಂದನ್ನು ಬಿಟ್ಟು ಉಳಿದೆಲ್ಲ ವಿಷಯಗಳಲ್ಲೂ ಅಸಾಧಾರಣ ಬುದ್ಧಿವಂತನಾಗಿದ್ದ. ಪಾಠಕ್ಕಿಂತಲೂ ಹೆಚ್ಚು ಶ್ರದ್ಧೆಯನ್ನು ದೈಹಿಕ ಶಿಕ್ಷಣದ ಕಡೆಗೆ ಕೊಡುತ್ತಿದ್ದ. ೧೯೦೧ ರಲ್ಲಿ ಮಹಾರಾಜಾರವರ ಪ್ರೌಢಶಾಲೆ ಸೇರಿದ. ಚಂಪಕರಾಮನ್‌ಗೆ ಪದ್ಮನಾಭ ಪಿಳ್ಳೈ ಎನ್ನುವ ಅತ್ಯಂತ ಆತ್ಮೀಯ ಸಹಪಾಠಿ ದೊರೆತಿದ್ದ.

ಹೈಸ್ಕೂಲಿನ ವಿದ್ಯಾರ್ಥಿಯಾಗಿದ್ದಾಗಲೇ ಚಂಪಕ ರಾಮನ್ ಅಂದಿನ ಭಾರತದ ರಾಜಕೀಯ ಸ್ಥಿತಿಗಳನ್ನು ಕುರಿತು  ಚಿಂತಿಸುತ್ತಿದ್ದ. ‘ಭಾರತದಲ್ಲಿ ಭಾರತದ ಬಾವುಟ ಹಾರಾಡಬೇಕು, ಇಂಗ್ಲೆಂಡಿನದಲ್ಲ’ ಎನ್ನುವ ಜಾಗೃತಿ ಚಂಪಕ ರಾಮನ್‌ನಲ್ಲಿ ಉಂಟಾಗಿತ್ತು. ೧೯೦೨ ರಲ್ಲಿ ಲಾರ್ಡ್ ಕರ್ಜನ್ ಹೇಗಾದರೂ ಬಂಗಾಳವನ್ನು ವಿಭಜಿಸ ಬೇಕೆಂದು ತೀರ್ಮಾನಿಸಿದ. ತನ್ನ ಯೋಜನೆಗೆ ಮುಸಲ್ಮಾನರ ಬೆಂಬಲವಿದೆಯೆಂದು ಸರಕಾರವೂ ಸಾರಿತು. ಆದರೆ ‘ಈ ಕ್ರಮವು ಲಕ್ಷಾಂತರ ಮಾನವರ ಸಾಮಾಜಿಕ ಹಾಗೂ ಔದ್ಯೋಗಿಕ ಭದ್ರತೆಗೆ ಕುತ್ತಾಗಿದೆ’ ಎಂದು ಪತ್ರಿಕೆಗಳು ಪ್ರಕಟಿಸಿ ಪ್ರತಿಭಟಿಸಿದವು. ಇಷ್ಟಾದರೂ ೧೯೦೫ರ ಅಕ್ಟೋಬರ್ ೧೯ರಿಂದ ವಿಭಜನೆ ಜಾರಿಗೆ ಬಂದಿತು! ವಾಸ್ತವವಾಗಿ ಬಂಗಾಳದ ವಿಭಜನೆಯ ಉದ್ದೇಶ ರಾಷ್ಟ್ರದಲ್ಲಿನ ಏಕತೆಯನ್ನು ಹಾಳುಗೆಡಹುವುದೇ ಆಗಿದ್ದಿತು. ಬಂಗಾಳದ ವಿಭಜನೆಯಿಂದಾಗಿ ಭಾರತಕ್ಕೆ ಬಂದೊದಗಿದ ಸ್ಥಿತಿ, ಚಂಪಕರಾಮನ್ ಮೇಲೆ ತೀವ್ರವಾದ ಪರಿಣಾಮವನ್ನುಂಟುಮಾಡಿತ್ತು. ಬ್ರಿಟಿಷರ ದಬ್ಬಾಳಿಕೆ ಯನ್ನು ಕಂಡು ಕಿಡಿಕಿಡಿಯಾಗಿದ್ದ. ಪೊಲೀಸ್ ನೌಕರನಾದ ತನ್ನ ತಂದೆಗೂ ತಿಳಿಯದಂತೆ ತಾನು ರೂಪಿಸಿಕೊಂಡಿದ್ದ ಧ್ಯೇಯ ಧೋರಣೆಗಳನ್ನು ಯುವ ಜನಾಂಗಕ್ಕೆ ತಿಳಿಸುತ್ತಿದ್ದ. ಕ್ರಮೇಣ ಬ್ರಿಟಿಷ್ ವಿರೋಧಿ ಚಟುವಟಿಕೆಗಳಲ್ಲಿ ಸ್ಪಷ್ಟವಾಗಿ ಪಾತ್ರವಹಿಸಲು ಪ್ರಾರಂಭಿಸಿದ. ಓರಗೆಯ ಹುಡುಗರನ್ನು ಸೇರಿಸಿಕೊಂಡು ಬ್ರಿಟಿಷರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಮೆರವಣಿಗೆಗಳನ್ನು ನಡೆಸಿದ. ‘ಸರಕಾರಕ್ಕೆ ಕಂದಾಯ ಸಲ್ಲಿಸಬೇಡಿ’ ಎಂದು ದೇಶದ ನಾಯಕರು ಕರೆಕೊಟ್ಟರು. ಈ ದೇಶದ ಜನ ಕಂದಾಯ ಕೊಟ್ಟರೆ ತಾನೆ ಸರ್ಕಾರ ನಡೆಯುವುದು? ದೇಶನಾಯಕರ ಕರೆ ಚಂಪಕ ರಾಮನ್‌ಗೆ ಹಿಡಿಸಿತು. ಮತ್ತೆ ವಿದ್ಯಾರ್ಥಿಗಳನ್ನು ಸೇರಿಸಿದ, ಮೆರಣಿಗೆಗಳನ್ನು ನಡೆಸಿದ, ರಸ್ತೆಗಳಲ್ಲಿ, ’ಬ್ರಿಟಿಷ್ ಸರ್ಕಾರಕ್ಕೆ ಕಂದಾಯ ಕೊಡಬೇಡಿ’ ಎಂದು ಘೋಷಣೆಗಳನ್ನು ಎಬ್ಬಿಸಿದ. ಪೊಲೀಸರಿಗೂ ಅವನ ಮೇಲೆ ಕಣ್ಣು ಬಿತ್ತು. ಸಮಯ ಬಂದಾಗ ಅವನನ್ನು ಹಿಡಿದು ಹಾಕಲು ಅವರು ತೀರ್ಮಾನಿಸಿದರು.

’ನನ್ನ ಜೊತೆ ಬರ‍್ತೀಯಾ?’

೧೯೦೮ನೇ ಇಸವಿ. ಸ್ಟ್ರೀಕ್‌ಲೆಂಡ್ ತಮ್ಮ ತಾಯ್ನಾಡಿಗೆ ಹಿಂದಿರುಗಲು ನಿರ್ಧರಿಸಿದರು. ಹದಿನೇಳು ವರ್ಷದ  ಚಂಪಕರಾಮನ್ ಪಿಳ್ಳೈಯ ಬುದ್ಧಿಶಕ್ತಿ, ಧೈರ್ಯ, ಉತ್ಸಾಹಗಳು ಸ್ಟ್ರೀಕ್ಲೆಂಡರನ್ನು ತುಂಬ ಆಕರ್ಷಿಸಿ ದ್ದುವು. ಆತನ ಸಂಶೋಧನೆಗೆ ಅಗತ್ಯವಿದ್ದ ಪ್ರಾಣಿಗಳನ್ನು ಹಿಡಿದು ಕೊಡುತ್ತ ತುಂಬ ಆತ್ಮೀಯನಾಗಿಬಿಟ್ಟಿದ್ದ. ಅದರಿಂದಾಗಿ

ಒಂದು ದಿನ-

’ಚಂಪಕರಾಮನ್, ನಾನು ಊರಿಗೆ ಹಿಂತಿರು ಗುತ್ತೇನೆ. ನೀನೂ ನನ್ನ ಜೊತೇಲಿ ಬರ‍್ತೀಯಾ?’ ಸ್ಟ್ರೀಕ್ ಲೆಂಡ್ ಕೇಳಿದರು.

‘ಬರ‍್ತೀನಿ’

‘ನಿನ್ನ ತಂದೆಯ ಅನುಮತಿ ಬೇಡವೇ?’

‘ನೀವು ಕೇಳಿದರೆ ಒಪ್ತಾರೆ’.

ಹೊಸ ಬಾಳಿನತ್ತ

ಸ್ಟ್ರೀಕ್‌ಲೆಂಡ್‌ರ ಮನಸ್ಸಿನಲ್ಲಿದ್ದ ಭಾರ ಅರ್ಧ ಇಳಿದಂತಾಗಿತ್ತು. ಅದೇ ದಿನ ಚಿನ್ನಸ್ವಾಮಿ ಪಿಳ್ಳೈಯನ್ನು ಭೇಟಿ ಮಾಡಿ ಸ್ಟ್ರೀಕ್‌ಲೆಂಡ್ ತಮ್ಮ ಅಭಿಲಾಷೆಗಳನ್ನು ಅವರ ಮುಂದಿಟ್ಟರು.

‘ನನ್ನ ಹಿರಿಯ ಮಗ. ಅವನನ್ನು ತುಂಬು ವಿದ್ಯಾವಂತನನ್ನಾಗಿ ಮಾಡಬೇಕು ಅನ್ನೋದು ನನ್ನ ಆಶೆ. ಕಾಣದ, ಕೇಳದ ನಾಡಿಗೆ ಹೇಗೆ ಕಳಿಸಲಿ? ಅವನನ್ನು ಬಿಟ್ಟಿರೋದಾದ್ರೂ ಹೇಗೆ?’

‘ಚಂಪಕರಾಮನನ್ನು ನನ್ನ ಮಗನಂತೆ ಸಾಕಿ, ತುಂಬು ವಿದ್ಯಾವಂತನನ್ನಾಗಿ ನಾನು ಮಾಡ್ತೀನಿ. ಈ ವಿಚಾರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಏನು ಹೇಳ್ತಾರೆ ಕೇಳಿ ನೋಡೋಣ’ ಎಂದರು ಸ್ಟ್ರೀಕ್‌ಲೆಂಡ್.

ಆಗುಂತಕನಾಗಿ ತಿರುವನಂತಪುರಕ್ಕೆ ಬಂದ ಪ್ರಾಣಿಶಾಸ್ತ್ರಜ್ಞ ಸ್ಟ್ರೀಕ್‌ಲೆಂಡ್, ಚಂಪಕರಾಮನ್ ಪಿಳ್ಳೈಯನ್ನು ತನ್ನ ನಾಡಿಗೆ ಕರೆದುಕೊಂಡು ಹೋಗುವ ಸುದ್ದಿ, ಪಿಳ್ಳೈಯ ಸಹಪಾಠಿಯಾಗಿದ್ದ ಪದ್ಮನಾಭ ಪಿಳ್ಳೈಗೆ ತಿಳಿಯಿತು. ತಾನೂ ಅವರ ಜತೆಯಲ್ಲಿ ಹೊರಡಲು ಸಿದ್ಧನಾದ. ಸ್ಟ್ರೀಕ್‌ಲೆಂಡ್ ಅವರಿಬ್ಬರನ್ನೂ ಕರೆದುಕೊಂಡು ಹಡಗು ಹತ್ತಿದರು.

ಹಡಗು ಕೊಲೊಂಬೊವನ್ನು ತಲುಪಿತು. ಅಷ್ಟರಲ್ಲಿ ಪದ್ಮನಾಭ ಪಿಳ್ಳೈಗೆ ಊರಿನ ಚಿಂತೆ ಹತ್ತಿಕೊಂಡಿತು. ‘ನನ್ನನ್ನು ಊರಿಗೆ ಕಳಿಸಿಕೊಡಿ’ ಎಂದು ಒಂದೇ ಸಮನೆ ಅಂಗಲಾಚತೊಡಗಿದ. ಸ್ಟ್ರೀಕ್‌ಲೆಂಡ್ ತುಂಬ ಬೆಲೆ ಬಾಳುತ್ತಿದ್ದ ಭೂತಗನ್ನಡಿ ಯೊಂದನ್ನು ಉಡುಗೊರೆಯಾಗಿ ಕೊಟ್ಟು ಊರಿಗೆ ಕಳುಹಿಸಿಕೊಟ್ಟರು.

ಭಾರತದ ಸ್ವಾತಂತ್ರ್ಯಕ್ಕಾಗಿ

ವಿಶಾಲವಾದ ಸಮುದ್ರ, ನಾನಾ ರಾಷ್ಟ್ರಗಳ ಜನರು, ನಾನಾ ಭಾಷೆಗಳು, ಹಡಗಿನ ಯಾತ್ರೆ-ಚಂಪಕರಾಮನ್‌ಗೆ ಹೊಸ ಅನುಭವಗಳನ್ನು ತಂದು ಕೊಟ್ಟಿತು. ಸ್ಟ್ರೀಕ್‌ಲೆಂಡರ ಅನುಚರನಾಗಿ ಚಂಪಕ ರಾಮನ್ ಯುರೋಪನ್ನು ತಲುಪಿದ. ೧೯೦೭ ರ ನವೆಂಬರ್ ತಿಂಗಳಿನಲ್ಲಿ ಇಟಲಿಯ ‘ಸ್ಕೂಲ್ ಆಫ್ ಲಾಂಗ್ವೇಜಿಗೆ’ ಚಂಪಕರಾಮನನ್ನು ಸೇರಿಸಿದರು. ಅಲ್ಲಿಯ ವಿದ್ಯಾಭ್ಯಾಸ ಮುಗಿದ ನಂತರ ಆತನನ್ನು ಸ್ವಿಟ್ಜರ್ಲೆಂಡಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದರು. ಅನಂತರ ಜರ್ಮನಿಗೆ ಕರೆತಂದು ಬರ್ಲಿನ್ ವಿಶ್ವವಿದ್ಯಾನಿಲಯಕ್ಕೆ ಸೇರಿಸಿದರು.

ಚಂಪಕರಾಮನ್ ಪಿಳ್ಳೈ ವಿದ್ಯಾಭ್ಯಾಸದ ಪ್ರತಿಘಟ್ಟ ದಲ್ಲೂ ಚುರುಕು ಬುದ್ಧಿಯ ವಿದ್ಯಾರ್ಥಿ ಎನ್ನಿಸಿಕೊಂಡರು. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಎಂಜಿನಿಯರಿಂಗ್ ವಿಷಯಗಳನ್ನು ಆರಿಸಿಕೊಂಡು ಅಧ್ಯಯನ ನಡೆಸುತ್ತಿದ್ದ ಕಾಲದಲ್ಲೇ ಚಂಪಕರಾಮನ್ ಬರ್ಲಿನ್‌ನಲ್ಲಿದ್ದ  ಭಾರತೀಯರೆಲ್ಲರ ಪರಿಚಯವನ್ನು ಮಾಡಿಕೊಂಡರು. ಡಾಕ್ಟರೇಟ್ ಪದವಿಯನ್ನು ಪಡೆದ ನಂತರ ಚಂಪಕರಾಮನ್‌ರ  ಕ್ಷೇತ್ರ ವಿಶಾಲವಾಯಿತು. ಭಾರತದಲ್ಲಿ ಆಂಗ್ಲರ ಆಡಳಿತವನ್ನು ಅಂತ್ಯಗೊಳಿಸಬೇಕು ಎನ್ನುವ ಏಕೈಕ ಗುರಿಯನ್ನು ತಮ್ಮ ಮುಂದಿರಿಸಿಕೊಂಡು ಆತ ರಾಜಕೀಯ ರಂಗಕ್ಕೆ ಪ್ರವೇಶಿಸಿದರು.

ಯುರೋಪಿನಲ್ಲಿದ್ದ ವೀರೇಂದ್ರನಾಥ ಚಟ್ಟೋ ಪಾಧ್ಯಾಯ, ಲಾಲಾ ಹರದಯಾಲ್  ಮೊದಲಾದ ಕ್ರಾಂತಿಕಾರರ ಬೆಂಬಲ ಚಂಪಕ ರಾಮನ್‌ರಿಗೆ ದೊರಕಿತ್ತು. ೧೯೧೩ರಲ್ಲಿ ಇಂಗ್ಲೆಂಡ್, ಪ್ಯಾರಿಸ್, ಪೋಲೆಂಡ್ ಮೊದಲಾದ ಸ್ಥಳಗಳನ್ನೆಲ್ಲ ಸಂದರ್ಶಿಸಿ ಆಯಾ ಸ್ಥಳಗಳಲ್ಲಿದ್ದ ಭಾರತೀಯರೊಡನೆ ಸಂಪರ್ಕವನ್ನು ಬೆಳೆಸಿಕೊಂಡರು. ಆ ವರ್ಷದ ಅಂತ್ಯದಲ್ಲಿ ಪ್ಯಾರಿಸ್‌ನಿಂದ ತಂದೆಗೆ ಬರೆದ ಪತ್ರದಲ್ಲಿ ‘ನನ್ನನ್ನು ಕುರಿತು ಹೆಚ್ಚು ಚಿಂತಿಸಬೇಡಿ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ’ ಎಂದಷ್ಟೇ ವಿನಂತಿಸಿಕೊಂಡಿದ್ದರು.

ಕ್ರಾಂತಿಯ ಕಿಡಿ

ಬ್ರಿಟಿಷರು ಭಾರತದಲ್ಲಿ ಎದುರಿಸಬೇಕಾಗಿ ಬಂದ ಬಹುದೊಡ್ಡ ಪರೀಕ್ಷೆ ೧೮೫೭ರ ಸ್ವಾತಂತ್ರ್ಯ ಸಮರ. ಆ ಜ್ವಾಲೆ ಇನ್ನೂ ಪೂರ್ಣವಾಗಿ ಆರಿರಲಿಲ್ಲ. ರಾಣಿ ಲಕ್ಷ್ಮೀಬಾಯಿ, ತಾಂತ್ಯಾಟೋಪಿ ಮೊದಲಾದವರ ಆತ್ಮಾರ್ಪಣೆಯಿಂದಾಗಿ ಬ್ರಿಟಿಷರ ವಿರುದ್ಧ ಭಾರತೀಯರು ಸಿಡಿದೆದ್ದಿದ್ದರು. ಪರಸ್ಪರ ವೈಮನಸ್ಯಗಳನ್ನು ಬದಿಗೊತ್ತಿ ಭಾರತೀಯರು ಸುಸಂಘಟಿತರಾಗುತ್ತಿದ್ದರು. ಇಪ್ಪತ್ತನೆಯ ಶತಮಾನದ ಉದಯದೊಂದಿಗೆ ಏಷ್ಯದ ರಾಷ್ಟ್ರಗಳು ಜಡನಿದ್ರೆಯಿಂದ ಜಾಗೃತಗೊಂಡವು. ಭಾರತದಲ್ಲಿ ಉದಾತ್ತ ಧ್ಯೇಯಗಳ ಮಹಾಮಹಿಮರು ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ತನುಮನಧನಗಳನ್ನು ಧಾರೆಯೆರೆಯಲು ಟೊಂಕ ಕಟ್ಟಿ ನಿಂತರು. ‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು’ ಎಂದು ಘೋಷಿಸಿದ ಬಾಲಗಂಗಾಧರ ತಿಲಕ್, ಲಾಲಾಲಜಪತ ರಾಯ್, ಬಿಪಿನಚಂದ್ರಪಾಲ್, ಗೋಪಾಲ ಕೃಷ್ಣಗೋಖಲೆ, ಅರವಿಂದ ಘೋಷ್ ಮೊದಲಾದ ನವಭಾರತ ಶಿಲ್ಪಿಗಳು ಭಾರತ ಮಾತೆಯ ಬಂಧನ ವಿಮುಕ್ತಿಗಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿ ನಿಂತರು. ೧೮೮೫ ರಲ್ಲಿ ಸ್ಥಾಪನೆ ಗೊಂಡ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಸ್ವಾತಂತ್ರ್ಯ ಕ್ಕಾಗಿ ಹೋರಾಡಲು ಪರಿಣಾಮಕಾರಿಯಾದ ಕಾರ್ಯಕ್ರಮ ಗಳನ್ನು ಸಿದ್ಧಪಡಿಸುವಂತಾಯಿತು.

ಸ್ವಾತಂತ್ಯಕ್ಕಾಗಿ ಸತ್ತವರ ಸಂಖ್ಯೆ ಅಪರಿಮಿತ. ೨೪ನೆಯ ವಯಸ್ಸಿನಲ್ಲೆ ದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲಿಗೆ ಬಾಂಬೆಸೆದ ಕೇಸಿನಲ್ಲಿ ಗಲ್ಲಿಗೇರಿಸಲ್ಪಟ್ಟ ಭಗತ್ ಸಿಂಗ್, ರಾಜಗುರು, ಸುಖದೇವ್ ಮೊದಲಾದವರು, ಬ್ರಿಟಿಷ್‌ರ ಗುಂಡಿಗೆ ಆಹುತಿಯಾದವರು, ಮನೆ, ಮಠ, ಮಡದಿ ಮಕ್ಕಳು ಒಟ್ಟಿನಲ್ಲಿ ಸರ್ವಸ್ವವನ್ನೂ ಕಳೆದು ಕೊಂಡವರು   ಇಂತಹ ವೀರಪರಂಪರೆಯ ಇತಿಹಾಸ ಭಾರತಕ್ಕಿದೆ.

ಭಾರತದೊಳಗೆಂತೋ ಅಂತೆಯೇ ವಿದೇಶ ಗಳಲ್ಲೂ ಸ್ವಾತಂತ್ರ್ಯ ವೀರರನ್ನು ಸಂಘಟಿಸುವ ಮುಂದಾಳು ಗಳ ಅಗತ್ಯವಿತ್ತು, ಅಂತಹ ಸಂದರ್ಭದಲ್ಲಿ ಚಂಪಕ ರಾಮನ್ ಪಿಳ್ಳೈ ವಿದೇಶಗಳಲ್ಲಿದ್ದ ಭಾರತೀಯರ ನಾಯಕತ್ವವನ್ನು ವಹಿಸಿಕೊಂಡರು.

ಸಮರ ಸನ್ನಾಹ

ಚಂಪಕರಾಮನರು ನೇಪಲ್ಸ್‌ನಲ್ಲಿ ಇಂಗ್ಲಿಷಿನಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ಕುರಿತು ಮಾಡಿದ ಭಾಷಣ ಸಭಿಕರಲ್ಲಿ ಹೊಸ ಸ್ಫೂರ್ತಿಯನ್ನು ತಂದಿತ್ತು. ‘ಇಂಟರ್ ನ್ಯಾಷನಲ್ ಸೊಸೈಟಿ’ ಅವರಿಗೆ ಒಂದು ಮೆಡಲ್ ನೀಡಿ ಪುರಸ್ಕರಿಸಿತು. ಆ ಸೊಸೈಟಿಗೆ ಭಾರತದ ಪ್ರತಿನಿಧಿಯನ್ನಾಗಿ ಅವರನ್ನು ಆಯ್ಕೆ ಮಾಡಿದರು. ಮೊದಲನೆಯ ಮಹಾಯುದ್ಧದಲ್ಲಿ ಚಂಪಕರಾಮನರು ಮಹತ್ವದ್ದಾದ ಪಾತ್ರವನ್ನು ವಹಿಸಿದ್ದರು.

ಮಹಾಯುದ್ಧ ನಡೆಯುತ್ತಿದ್ದಾಗ ಚಂಪಕ ರಾಮನ್ ಪಿಳ್ಳೈ, ಜ್ಯೂರಿಚ್‌ನಲ್ಲಿ  ’ಇಂಟರ್ ನ್ಯಾಷನಲ್ ಪ್ರೊ ಇಂಡಿಯಾ ಕಮಿಟಿ’ ಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಅದೇ ಕಾಲದಲ್ಲಿ ’ಪ್ರೊ-ಇಂಡಿಯ’ ಎನ್ನುವ ಪತ್ರಿಕೆಯನ್ನೂ ಹೊರಡಿಸಿದರು. ಜರ್ಮನಿಗೆ ಬಂದು ಜರ್ಮನ್ ವಿದೇಶ ಕಾರ್ಯಾಂಗದ ಸಹಾಯ ದೊಂದಿಗೆ ಬ್ರಿಟಿಷರ ಪ್ರಾಬಲ್ಯವನ್ನು ದುರ್ಬಲ ಗೊಳಿಸುವುದಕ್ಕಾಗಿ ಎಲ್ಲ ಸಿದ್ಧತೆಗಳನ್ನೂ ನಡೆಸಿದರು.

ವೀರೇಂದ್ರನಾಥ ಚಟ್ಟೋಪಾಧ್ಯಾಯ, ಅಬ್ದುಲ್ ಹಾಫೀಜ್, ಡಾಕ್ಟರ್ ಪ್ರಭಾಕರ್, ಭೂಪೇಂದ್ರನಾಥ ದತ್ ಮೊದಲಾದ ಕ್ರಾಂತಿಕಾರರ ಸಹಾಯದೊಂದಿಗೆ ‘ಇಂಡಿಯನ್ ಇಂಡಿಪೆಂಡೆನ್ಸ್ ಕಮಿಟಿ’ ಯನ್ನು ಸ್ಥಾಪಿಸಿದರು. ೧೯೧೫ ರಲ್ಲಿ ಹರದಯಾಳ್ ಆ ಸಂಘಕ್ಕೆ ಸೇರಿದರು. ಭಾರತಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳಲ್ಲೂ ಜರ್ಮನ್ ನಾಯಕರ ಜೊತೆಯಲ್ಲಿ ಸಮಾಲೋಚನೆ ನಡೆಸುತ್ತಿದ್ದರು. ನ್ಯೂಯಾರ್ಕ್, ಷಿಕಾಗೋ, ಆಂಸ್ಟರ್‌ಡಾಂ, ಜ್ಯೂರಿಚ್, ಜಿನೀವಾ, ಟೋಕಿಯೋ, ಮನಿಲಾ, ಹಾಂಕಾಂಗ್ ಮೊದಲಾದ ಪ್ರಧಾನ ಕೇಂದ್ರಗಳಲ್ಲಿ ಬ್ರಿಟಿಷ್‌ರಿಗೆದುರಾಗಿ ಹೋರಾಡಲು ಸಿದ್ಧತೆಗಳು ನಡೆದುವು.

‘ಇಂಟರ್ ನ್ಯಾಷನಲ್ ಪ್ರೊ-ಇಂಡಿಯ ಕಮಿಟಿ’ಯ ಉದ್ದೇಶ ಮತ್ತು ಗುರಿ, ಭಾರತದ ಸ್ವಾತಂತ್ರ್ಯಕ್ಕಾಗಿ ವಿದೇಶದಲ್ಲಿದ್ದ ಭಾರತೀಯರನ್ನು ಸಂಘಟಿಸುವುದಾಗಿತ್ತು.

ಹೀಗೆ ಮಾಡಿ

೧೯೧೯ರ ಅಕ್ಟೋಬರ್ ೧೯ ರಲ್ಲಿ ‘ಪ್ರೊ-ಇಂಡಿಯ’ದಲ್ಲಿ ಡಾ.ಪಿಳ್ಳೈ ಅವರು ಬರೆದ ‘ಭಾರತದ ತುರ್ತು ಅವಶ್ಯಗಳು’ ಎನ್ನುವ ಲೇಖನದ ಸಾರಾಂಶ ಹೀಗಿದೆ-

“ಭಾರತದಲ್ಲಿ ರಕ್ತದ ಹೊಳೆ ಹರಿಯುವುದನ್ನು ತಪ್ಪಿಸಬೇಕಾಗಿದ್ದರೆ ಕೆಳಗಿನ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತನ್ನಿ:

೧. ಇಂಗ್ಲೆಂಡ್ ಭಾರತದಿಂದ ತನ್ನ ಸೈನ್ಯವನ್ನು ಹಿಂದಕ್ಕೆ  ಕರೆಯಿಸಿಕೊಳ್ಳಬೇಕು.

೨. ಆಡಳಿತ ಕಛೇರಿಗಳಲ್ಲಿರುವ ಇಂಗ್ಲಿಷರ ಸ್ಥಾನದಲ್ಲಿ   ಭಾರತೀಯರನ್ನೇ ನೇಮಿಸಬೇಕು.

೩. ಭಾರತದಲ್ಲೇ ಉದ್ಯೋಗದಲ್ಲಿ ಮುಂದುವರಿಯಲು ಇಚ್ಛಿಸುವ ಆಂಗ್ಲರು ಭಾರತದ ಜನತೆಯೊಂದಿಗೆ ಸಂಪೂರ್ಣವಾಗಿ ಸಹಕರಿಸ ಬೇಕು.

೪. ಭಾರತ ಮತ್ತು ಇಂಗ್ಲೆಂಡ್ ಸಂಧಿಮಾಡಿಕೊಂಡು    ಉಭಯ ರಾಷ್ಟ್ರಗಳೂ ಸಹಿ ಹಾಕಬೇಕು.

೫. ಭಾರತದ ಆಡಳಿತವನ್ನು ಕುರಿತು ತೀರ್ಮಾನಿಸು ವವರು ಅಲ್ಲಿಯ ಜನತೆಯ ಪ್ರತಿನಿಧಿಗಳಾಗಿರಬೇಕು.

೬. ಶಾಂತಿಸಮ್ಮೇಳನಗಳಿಗೆ ಸ್ವಂತ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಭಾರತಕ್ಕೆ ಸ್ವಾತಂತ್ರ್ಯವಿರಬೇಕು.

೭. ಫ್ರೆಂಚರು ಮತ್ತು ಪೋರ್ಚುಗೀಸರು ಭಾರತವನ್ನು   ಬಿಡಬೇಕು.

೮. ಭಾರತದ ಸ್ವಯಂ ನಿರ್ಣಯಾವಕಾಶವನ್ನು ವಿಶ್ವ ರಾಷ್ಟ್ರಗಳು  ಒಪ್ಪಿಕೊಳ್ಳಬೇಕು”.

ಭಾರತ ಸ್ವಾತಂತ್ರ್ಯವನ್ನು ಪಡೆಯುವ ಮೂವತ್ತೆರಡು ವರ್ಷಗಳ ಮೊದಲೇ ಚಂಪಕ ರಾಮನ್ ಮೇಲಿನ ಅಭಿಪ್ರಾಯಗಳನ್ನು ಹೊರಗೆಡಹಿದ್ದುದು ಅವರ ದೂರದೃಷ್ಟಿ ಎಂತಹುದಾಗಿತ್ತು ಎನ್ನುವುದನ್ನು ತಿಳಿಸುತ್ತದೆ.

ನೌಕಾಸೇನಾನಿ

ಮೊದಲನೆಯ ಮಹಾಯುದ್ಧ ಕಾಲದಲ್ಲಿ ‘ಎಮ್‌ಡನ್’ಎನ್ನುವ ಜರ್ಮನ್ ಜಲಾಂತರ್ಗಾಮಿ ನೌಕೆ ಬ್ರಿಟಿಷ್ ಸೈನ್ಯವನ್ನೇ ನಡುಗಿಸಿಬಿಟ್ಟಿತು. ಚಂಪಕರಾಮನ್ ಪಿಳ್ಳೈ ಅದರ ಮುಖ್ಯಾಧಿಕಾರಿಯಾಗಿದ್ದರು. ಆ ಯುದ್ಧದಲ್ಲಿ ಎಮ್‌ಡನ್ ನಾಲ್ಕು ತಿಂಗಳ ಸತತ ಪರಿಶ್ರಮದಿಂದ ಬ್ರಿಟಿಷರ ಅನೇಕ ಹಡಗುಗಳನ್ನು ನಾಶಪಡಿಸಿತು. ಬ್ರಿಟಿಷ್ ನೌಕಾಪಡೆಗೆ ದಿಕ್ಕು ತೋಚದಾಯಿತು. ಎಮ್‌ಡನ್ ನೌಕೆ ಯನ್ನು ನಾಶಪಡಿಸದೆ ಉಳಿಗಾಲವಿಲ್ಲವೆನ್ನಿಸಿತು. ಒಂದು ದಿನ ನಾಲ್ಕು ದಿಕ್ಕಿನಿಂದಲೂ ಬ್ರಿಟಿಷ್ ನೌಕೆಗಳು ಎಮ್ ಡನ್ ಅನ್ನು ಆಕ್ರಮಿಸಿ ಪುಡಿ ಪುಡಿ ಮಾಡಿದವು. ಅಂತಹ ಕ್ರೂರ ವಿಪತ್ತಿನಿಂದಲೂ ಪಾರಾಗಿ ತಲೆಮರೆಸಿಕೊಂಡು ಚಂಪಕರಾಮನ್ ದಡ ಸೇರಿದ್ದರು.

೧೯೧೪ ರ ಜೂನ್ ತಿಂಗಳಿನಲ್ಲಿ ‘ಪ್ರೊ-ಇಂಡಿಯ’ದಲ್ಲಿ ಡಾಕ್ಟರ್ ಪಿಳ್ಳೈ ಹೀಗೆ ಬರೆದರು:

ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಒಂದು ರಾಷ್ಟ್ರೀಯ ಸಂಘ ಬೆಳೆದು ಬಲಗೊಂಡಿದೆ. ಧೀರರಾದ ಅನೇಕ ಲಕ್ಷ ಯುವಕರು ಆ ಸಂಘಟನೆಯ ಹಿಂದಿದ್ದಾರೆ. ಅಸಂಖ್ಯಾತ ವೀರರನ್ನು ಆ ಸಂಘ ಸೃಷ್ಟಿಸಿದೆ. ಸಮರ್ಥರೂ ನಿಸ್ವಾರ್ಥರೂ ಆದ ಮುಂದಾಳುಗಳು ಆ ಸಂಘದ ನೇತಾರ ರಾಗಿದ್ದಾರೆ. ಆ ರಾಷ್ಟ್ರೀಯ ಸಂಘ ವಿಜಯವನ್ನು ಸಾಧಿಸಿಯೇ ತೀರುತ್ತದೆ. ಹೆಚ್ಚು ತಡವಿಲ್ಲದೆ ಬ್ರಿಟಿನ್‌ಗೆ ಇಂಡಿಯ ಕೈಬಿಟ್ಟುಹೋಗುತ್ತದೆ. ಬ್ರಿಟಿಷ್ ಸಾಮ್ರಾಜ್ಯ ಒಂದು ಗತಕಾಲದ ನೆನಪಾಗಿ ಉಳಿಯುತ್ತದೆ. ಹೊಸ ರಾಜಕೀಯ ಶಕ್ತಿಗಳೂ ಸಂಘಟನೆಗಳೂ ಜನ್ಮವೆತ್ತುತ್ತವೆ.

ಚಂಪಕರಾಮನರು ೬೪ ವರ್ಷಗಳ ಹಿಂದೆ ಬರೆದ ವಾಕ್ಯಗಳನ್ನು ಓದುವಾಗ ಎಂಥವನಿಗೂ ಅವರ ಭವಿಷ್ಯ ವಾಣಿಯನ್ನು ಕುರಿತು ಆಶ್ಚರ್ಯವುಂಟಾಗುತ್ತದೆ. ಚಂಪಕರಾಮನರ ಕೀರ್ತಿ ಯುರೋಪಿನ ಎಲ್ಲೆಡೆಗಳಲ್ಲೂ ವ್ಯಾಪಿಸಿತು. ಯಾವ ರಾಜಕೀಯ ರಂಗದಲ್ಲೂ ಭಾರತದ ಹೆಸರು ಕೇಳಿಬರುವಂತೆ ಅವರು ಮಾಡಿದರು.

ಗದರ್ ಪಾರ್ಟಿ

೧೯೧೪-೧೯೧೬ ರಲ್ಲಿ ನಡೆದ ರಾಷ್ಟ್ರೀಯ ಸೇನಾ ಸಂಘಟನೆ ಅವಿಸ್ಮರಣೀಯವಾದದ್ದು. ಬ್ರಿಟಿಷ್ ಆಡಳಿತವನ್ನು ದುರ್ಬಲಗೊಳಿಸುವುದು ರಾಷ್ಟ್ರೀಯ ಸೇನೆಯ ಮುಂದಿದ್ದ ಮೊದಲ ಕಾರ್ಯ. ವಿಶ್ವದ ವಿವಿಧ ಕೇಂದ್ರಗಳಲ್ಲಿ ಬ್ರಿಷಿಷ್ ಸರ್ಕಾರದ ವಿರುದ್ಧ ಕ್ರಾಂತಿಯೆಬ್ಬಿಸು ವುದಕ್ಕಾಗಿ ಹೊರಟ ಸಂಘವನ್ನು ’ಗದರ್ ಪಾರ್ಟಿ’ ಎಂದು ಕರೆಯಲಾಗಿತ್ತು. ಡಾಕ್ಟರ್  ಪಿಳ್ಳೈ ಮತ್ತು ಹರದಯಾಳ್ ಆ ಪಾರ್ಟಿಯ ಮುಂದಾಳುಗಳಾಗಿದ್ದರು. ಅಮೇರಿಕ, ತುರ್ಕಿ, ಆಫ್ಘಾನಿಸ್ತಾನ್ ಮೊದಲಾದ ಕಡೆಗಳಲ್ಲೆಲ್ಲ ತುಂಬ ರಹಸ್ಯವಾಗಿ ಪಕ್ಷವನ್ನು ಸಜು ಗೊಳಿಸುತ್ತಿದ್ದರು. ಜರ್ಮನಿಯನ್ನು ಕೇಂದ್ರವಾಗಿರಿಸಿಕೊಂಡು ಎಲ್ಲ ರಾಷ್ಟ್ರಗಳಿಂದಲೂ ಜನತೆಯನ್ನು ಸಂಘಟಿಸುವ, ಧನವನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದರು. ಬ್ರಿಟಿಷರಿಗೆ ಎದುರಾಗಿ ಸಶಸ್ತ್ರ ಸಮರವನ್ನೇ ನಡೆಸಲು ವ್ಯಾಪಕವಾದ ಯೋಜನೆಯೊಂದನ್ನು ಹಾಕಿಕೊಂಡರು.

“ಪಶ್ಚಿಮ ತೀರದಲ್ಲಿ ಪರ್ಷಿಯ ಮತ್ತು ಆಫ್ಘಾನಿಸ್ತಾನಗಳ ಮೂಲಕ ಭಾರತಕ್ಕೆ ಪ್ರವೇಶಿಸಬೇಕು. ಮನಿಲ, ಜಪಾನ್ ಮತ್ತು ಚೀನಾಗಳಲ್ಲಿರುವ ಸಂಘಗಳು ಬರ್ಮವನ್ನು ತಮ್ಮ ವ್ಯವಹಾರ ಕೇಂದ್ರವನ್ನಾಗಿ ಮಾಡಿಕೊಳ್ಳಬೇಕು. ಕ್ರಮೇಣ ಕಲ್ಕತ್ತದಲ್ಲಿರುವ ಕ್ರಾಂತಿಕಾರ ರೊಡನೆ ಸಂಪರ್ಕವನ್ನು ಬೆಳೆಸಿಕೊಳ್ಳಬೇಕು. ಸಮಗ್ರ ಭಾರತದ ಮೂಲೆಮೂಲೆಗಳಲ್ಲಿಯೂ ಸ್ವಾತಂತ್ರ್ಯದ ಕ್ರಾಂತಿ ಯನ್ನೆಬ್ಬಿಸಬೇಕು” ಇವೇ ಮುಂತಾದ ಕಾರ್ಯ ಕ್ರಮಗಳನ್ನು ರೂಪಿಸಿಕೊಂಡರು.

ಹರದಯಾಳ್, ಫ್ರಾನ್ಸಿನಲ್ಲೂ ಅಮೆರಿಕದಲ್ಲೂ ಬ್ರಿಟಿಷರ ವಿರುದ್ಧವಾಗಿ ಪ್ರಚಾರವನ್ನು ಕೈಗೊಂಡರು. ಗದರ್ ಪಾರ್ಟಿಯ ಸಂಘಟನೆಗಾಗಿ ಅಮೆರಿಕಕ್ಕೆ  ಹೋದಾಗ ಅಲ್ಲಿದ್ದ ಭಾರತೀಯರು ಬೇಕಾದ ಸಹಾಯಗಳನ್ನೊದಗಿಸಿ ಕೊಟ್ಟರು. ಅಮೆರಿಕದಲ್ಲಿ ಅಭಯಾರ್ಥಿಗಳಾಗಿದ್ದ ಐರಿಷ್ ಕ್ರಾಂತಿಕಾರರನ್ನೂ ಭೇಟಿಯಾದರು. ಐರಿಷ್ ಕ್ರಾಂತಿಕಾರರ ನೇತಾರರಾಗಿದ್ದ ಡಿವಾಲರಾಗೆ ಹರದಯಾಳ್ ಒಂದು ಕತ್ತಿಯನ್ನು ಉಡುಗೊರೆಯಾಗಿ ಕೊಟ್ಟರು.

ತಡ ಮಾಡದಿರಿ

೧೯೧೫ ರಲ್ಲಿ ಭಾರತೀಯ ರಾಷ್ಟ್ರೀಯ ಸಂಘದ ಸಮ್ಮೇಳನ ಬರ್ಲಿನ್‌ನಲ್ಲಿ ಸೇರಿತು. ಗದರ್ ಪಾರ್ಟಿಯ ಹರದಯಾಳ್, ಹೇರಾಮ್ ಬಲರಾಮ್ ಗುಪ್ತ, ಚಂದ್ರ ಕೆ. ಚಕ್ರವರ್ತಿ, ತಾರಕನಾಥದಾಸ್, ಚಂಪಕರಾಮನ್ ಪಿಳ್ಳೈ, ವೀರೇಂದ್ರನಾಥ ಚಟ್ಟೋಪಾಧ್ಯಾಯ ಮೊದಲಾದ ಸ್ವಾತಂತ್ರ್ಯ ವೀರರನ್ನು ಒಳಗೊಂಡಿದ್ದ ಸಭೆಯಲ್ಲಿ ಭಾರತದ ಪೂರ್ಣ ಸ್ವಾತಂತ್ರ್ಯ ತಮ್ಮ ಗುರಿಯೆಂದು ಸಾರಲಾಯಿತು.

೧೯೧೫ ರ ಜುಲೈ ಮೂವತ್ತೊಂದರಂದು ಬರ್ಲಿನ್‌ನಿಂದ ಸೈನ್ಯ ಶಿಬಿರಗಳಿಗೆ ಹಂಚಿದ ಕರಪತ್ರ ಗಳಲ್ಲಿದ್ದ ಸಂದೇಶದ ಸಾರಾಂಶ ಹೀಗಿದೆ:

‘ಓ,ನನ್ನ ಭಾರತೀಯ ಯೋಧರೇ, ದಾಸ್ಯದ ಸಂಕೋಲೆಗಳನ್ನು ಕಿತ್ತೆಸೆಯಲು ಸಜ್ಜುಗೊಳ್ಳಿ. ಅದಕ್ಕೆ ಸರಿಯಾದ ಮುಹೂರ್ತ ಬಂದೊದಗಿದೆ.’

ಹಿಂದೂಸ್ಥಾನದಲ್ಲೂ ನಿಮ್ಮ ಸಹೋದರರು ಕ್ರೂರವಾದ ವಿದೇಶಾಧಿಪತ್ಯಕ್ಕೆ ಎದುರಾಗಿ ಸಮರವನ್ನು ಆರಂಭಿಸಿದ್ದಾರೆ. ಮಾತೃಭೂಮಿಯ ವಿಮೋಚನೆಗಾಗಿ ಅವರು ಒಗ್ಗಟ್ಟಾಗಿ, ಒಮ್ಮತದಿಂದ ಸನ್ನದ್ಧರಾಗಿದ್ದಾರೆ.

ವಿದೇಶಿಯರ ಸ್ವಾರ್ಥಕ್ಕಾಗಿ ಶಸ್ತ್ರಾಸ್ತ್ರಗಳ ನ್ನೆತ್ತಿಕೊಂಡು ಯುದ್ಧ ಮಾಡುವ ನೀವು ನಿಮ್ಮ ಮಾತೃಭೂಮಿಯನ್ನು ತಮ್ಮ ಕೈವಶಮಾಡಿಕೊಂಡಿರುವ ದುರಾಕ್ರಮಿಗಳ ವಿರುದ್ಧ ಹೋರಾಡಲು ಸಿದ್ಧರಾಗಿ.

ನೀವು ಅಂತಹ ನಿರ್ಧಾರ ಮಾಡದಿದ್ದರೆ, ನಿಮಗೂ ನಿಮ್ಮ ಮುಂದಿನ ತಲೆಮಾರಿಗೂ ಶಾಪ ತಟ್ಟುತ್ತದೆ.

ಮಹಮದೀಯ ಸಹೋದರರೇ, ದೆಹಲಿ ಚಕ್ರವರ್ತಿಗಳ ಆಡಳಿತ ಕಾಲದಲ್ಲಿ ಸುವರ್ಣ ದೆಸೆಯನ್ನನುಭವಿಸಿದಿರಿ. ಈಗ ಬಿಳಿಯರ ಕೈಕೆಳಗೆ ದಾಸ್ಯವನ್ನನುಭವಿಸುತ್ತಿರುವುದನ್ನು ಮರೆಯಬೇಡಿ.

ಹಿಂದೂ ಸಹೋದರರೊಡನೆ ಒಂದಾಗಿ ಅವನತಿಯಿಂದ, ಅಪಮಾನದಿಂದ ಜನ್ಮಭೂಮಿಯನ್ನು ವಿಮುಕ್ತ ಗೊಳಿಸುವುದಕ್ಕಾಗಿ ಪ್ರತಿಜ್ಞೆಯನ್ನು ಕೈಗೊಳ್ಳಿ.

ನನ್ನ ಸಿಖ್ ಸಹೋದರರೇ! ಪಂಜಾಬಿನ ಸಿಂಹ ರಣಜಿತ್ ಸಿಂಗನನ್ನು ಮರೆಯದಿರಿ. ನಿಮ್ಮ ನಾಡಿನ ಜನತೆ ಯನ್ನು ತುರಂಗ ಸ್ಥಾನದಲ್ಲಿರಿಸಿ ಗಲ್ಲುಗಂಬಕ್ಕೇರಿಸಿ, ಉಪವಾಸ ಹಾಕಿ, ಕಷ್ಟಕ್ಕೊಳಗುಮಾಡಿ, ನರಕಯಾತನೆ ಯನ್ನು ತಂದೊಡ್ಡುತ್ತಿರುವ ಬಿಳಿಯರೆದುರು ಹೋರಾಡಲು ಎದ್ದು ನಿಲ್ಲಿ!

ಇಂದಿನ ದುಃಸ್ಥಿತಿ ಮುಂದುವರಿಯಲು ಬಿಡಬೇಡಿ. ಆಲಸ್ಯದಿಂದ ಎಚ್ಚರಗೊಳ್ಳಿ.

ಐಶ್ವರ್ಯವನ್ನು ಕೊಳ್ಳೆ ಹೊಡೆಯುವುದೇ ಲೋಭಿಗಳಾದ ಆಂಗ್ಲೇಯರ ಗುರಿ. ಅವರು ಭಾರತೀಯ ರನ್ನು ನಿರ್ಬಂಧಕ್ಕೊಳಪಡಿಸಿ ಸೈನ್ಯಕ್ಕೆ ಸೇರಿಸಿ ಕೊಳ್ಳುತ್ತಿರು ವುದು ಭಾರತೀಯರಿಗಾಗಿ ಅಲ್ಲ, ಅವರಿಗಾಗಿ, ಬ್ರಿಟಿಷ್ ಸೇನೆಗೆ  ಸೇರಿದ ಬಿಳಿಯರಿಗೆ ಕೈತುಂಬ ಸಂಬಳ; ಸಕಲ ರೀತಿಯ ಅನುಕೂಲತೆಗಳು. ನಿಮಗೆ ಹೆಸರಿಗೆ ಮಾತ್ರ ಸಂಬಳ.

ಯುದ್ಧರಂಗದಲ್ಲಿ ಫಿರಂಗಿಗಳ ಮುಂದೆ ಮೊದಲ ಸಾಲಿನಲ್ಲಿ ನಿಮ್ಮನ್ನು ನಿಲ್ಲಿಸಿ ಬಿಳಿಯರು ಹಿಂದಿರುಗುತ್ತಾರೆ. ಮರಣ ನಿಮ್ಮದು, ಜಯ ಅವರದು ಎನ್ನುವುದನ್ನು ಮರೆಯಬೇಡಿ.

ಭಾರತಭೂಮಿಯಲ್ಲಿ ಕಷ್ಟದಲ್ಲಿ ಕಾಲಕಳೆಯುವ ತಾಯಂದಿರನ್ನು, ಸಹೋದರ ಸಹೋದರಿಯರನ್ನು ಕುರಿತು ನೆನೆಸಿಕೊಳ್ಳಿ.

೧೮೫೭ರ ಯುದ್ಧವನ್ನು ನೆನಪಿಡಿ. ಇದು ಪ್ರತೀಕಾರಕ್ಕೆ ತಕ್ಕ ಸಮಯ. ಮರಣವೆನ್ನುವುದು ಸಹಜ. ಅದು ಬರುವುದು ಒಂದೇ ಸಲ. ಮಹತ್ತಾದ ಉದ್ದೇಶಕ್ಕಾಗಿ, ಮಾತೃಭೂಮಿಯ ವಿಮೋಚನೆಗಾಗಿ ಅಭಿಮಾನದಿಂದ ಹೋರಾಡಿ ಸಾಯುವುದು ಒಂದು ಮಹಾಭಾಗ್ಯ.

ವಿದೇಶೀಯರಿಂದ ದೊರೆಯುತ್ತಿರುವ ತುಚ್ಛ ವಾದ ಸಂಬಳ ಮತ್ತು ಪೆನ್‌ಶನ್‌ಗಾಗಿ ಕೈಯೊಡ್ಡುತ್ತಿ ರುವುದು ಯಾರಿಗಾಗಿ?

ಇನ್ನಾದರೂ ತಡಮಾಡದಿರಿ. ನೀವು ಭಾರತ ವನ್ನು ಸ್ವತಂತ್ರಗೊಳಿಸಿದರೆ ಭಾರತಮಾತೆ ನಿಮ್ಮನ್ನು ಸಂರಕ್ಷಿಸುತ್ತಾಳೆ.’

ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿದ್ದ ಚಂಪಕರಾಮನ್ ಪಿಳ್ಳೈಯವರ ವಲಯ ವಿಸ್ತಾರ ವಾಗುತ್ತಿತ್ತು. ಬ್ರಿಟಿಷರಿಗೆ ನೇರವಾಗಿ ಚಂಪಕರಾಮನ್ ಪಿಳ್ಳೈ ಯವರನ್ನು ಎದುರಿಸುವುದು ಕಷ್ಟವೆನಿಸಿತು. ಒಂದು ಲಕ್ಷ ಡಾಲರ್ ಹೊನ್ನಿನ  ಆಸೆ ತೋರಿಸಿ ಪಿಳ್ಳೈಯವರನ್ನು ವಶಪಡಿಸಿ ಕೊಳ್ಳಲು ಪ್ರಯತ್ನಿಸಿದರು. ಆ ಪ್ರಯತ್ನದಲ್ಲಿ ಬ್ರಿಟಿಷರು ಜಯಶೀಲರಾಗಲಿಲ್ಲ. ಇದೇ ಸಂದರ್ಭದಲ್ಲಿ ‘ಲೀಗ್ ಆಫ್ ಅಪ್ರೆಸ್ಡ್ ನೇಷನ್ಸ್’ನ ಮುಂದಾಳಾಗಿ ಕಾರ್ಯ ನಿರ್ವಹಿಸಿದ್ದರು.

ಸ್ವಾತಂತ್ರ್ಯಯೋಧರ ಭೇಟಿ

ಡಾ. ಚಂಪಕರಾಮನ್  ತಮ್ಮ ರಾಜಕೀಯ ಚಟುವಟಿಕೆಗಳಿಗೆ ಬರ್ಲಿನ್‌ನನ್ನು ಕೇಂದ್ರವಾಗಿ ಮಾಡಿ ಕೊಂಡಿದ್ದದ್ದು ಭಾರತದ ಗಣ್ಯವ್ಯಕ್ತಿಗಳಿಗೆಲ್ಲ ತಿಳಿದಿತ್ತು. ಯುರೋಪನ್ನು ಸಂದರ್ಶಿಸಿದ ಭಾರತದ ಸ್ವಾತಂತ್ರ್ಯ ಹೋರಾಟಗಾರರೆಲ್ಲರೂ ಚಂಪಕರಾಮನ್‌ರ ಅತಿಥಿ  ಗಳಾಗಿರುತ್ತಿದ್ದರು. ೧೯೨೧ ರಲ್ಲಿ ಕೆ.ಪಿ.ಎಸ್. ಮೆನನ್ ಬರ್ಲಿನ್‌ಗೆ  ಭೇಟಿ ನೀಡಿದ ಸಂದರ್ಭದಲ್ಲಿ ಚಂಪಕರಾಮನ್‌ರ ಅತಿಥಿಗಳಾಗಿದ್ದರು. ೧೯೨೨ ರಲ್ಲಿ ಚಂಪಕರಾಮನ್‌ರ  ಸಹಪಾಠಿಯಾಗಿದ್ದ ಎ.ಎನ್.ತಂಬಿ ಉಳಿದುಕೊಂಡಿದ್ದುದು ಚಂಪಕರಾಮನ್‌ರ ವಸತಿಯಲ್ಲಿ. ಮೋತಿಲಾಲ್ ನೆಹರು, ಜವಹರಲಾಲ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್ ಮೊದಲಾದ ಭಾರತದ ಗಣ್ಯ ವ್ಯಕ್ತಿಗಳು ಬರ್ಲಿನ್‌ನಲ್ಲಿ  ಚಂಪಕರಾಮನ್‌ರನ್ನು ಭೇಟಿ ಯಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಚರ್ಚೆ ನಡೆಸಿದ್ದರು. ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ರೂಪಿಸಿ ಭಾರತದ ಗಡಿಗೆ ತಂದ ನೇತಾಜಿ ಕೂಡ ಡಾ. ಚಂಪಕರಾಮನ್‌ರನ್ನು ವಿಯೆನ್ನಾದಲ್ಲಿ ಭೇಟಿ ಮಾಡಿದ್ದರು. ನೇತಾಜಿಯ ನೇತೃತ್ವದ ‘ಇಂಡಿಯನ್ ನ್ಯಾಷನಲ್ ಆರ್ಮಿ’ ರೂಪುಗೊಳ್ಳುವುದಕ್ಕೆ ಮೂವತ್ತು ವರ್ಷಗಳ ಮೊದಲೇ ‘ಇಂಡಿಯನ್ ನ್ಯಾಷನಲ್ ವಾಲಂಟಿಯರ‍್ಸ್’ ಎನ್ನುವ ಸಂಘವನ್ನು ಚಂಪಕರಾಮನ್  ಅಸ್ತಿತ್ವಕ್ಕೆ ತಂದು ಅದರ ನಾಯಕರಾಗಿದ್ದರು.

ವಿವಾಹ

ತಿರುವನಂತಪುರಕ್ಕೆ ಒಬ್ಬ ಇಂಗ್ಲೆಂಡಿನ ಪ್ರಾಣಿಶಾಸ್ತ್ರಜ್ಞ ಬಂದದ್ದು ಚಂಪಕರಾಮನ್ ಬರ್ಲಿನ್‌ನಲ್ಲಿ ನೆಲೆಸಲು ಕಾರಣವಾಯಿತು. ಪಿಳ್ಳೈಯವರು ಜರ್ಮನ್ ಪಾರ್ಟಿಯಲ್ಲಿ ಸದಸ್ಯತ್ವವನ್ನು ಹೊಂದಿದ್ದ ಮೊದಲ ಭಾರತೀಯ. ೧೯೨೬ರಲ್ಲಿ ಜರ್ಮನಿಯನ್ನು ಸಂದರ್ಶಿಸಿದ ಸರ್ದಾರ್ ಕೆ.ಎಂ. ಪಣಿಕ್ಕರ್ ತಮ್ಮ ಆತ್ಮಕಥೆಯಲ್ಲಿ, ‘ಬಾಲ್ಯದಲ್ಲೇ ನಾಡನ್ನು ಬಿಟ್ಟುಹೋದ ಚಂಪಕರಾಮನ್‌ಗೆ ಸ್ವದೇಶವನ್ನು ಕುರಿತು ನೆನಸಿಕೊಂಡಾಗಲೆಲ್ಲ ಕಣ್ಣಿನಲ್ಲಿ ನೀರಾಡುತ್ತಿತ್ತು. ಜರ್ಮನಿಯ ಮುಖಂಡರ ಮಧ್ಯೆ ಉನ್ನತ ಸ್ಥಾನವನ್ನು ಪಡೆದಿದ್ದರು. ಅಲ್ಲಿಯ ದೊಡ್ಡ ಮನುಷ್ಯರ ಪರಿಚಯ ಮಾಡಿಕೊಟ್ಟು ನಮಗೆ ತುಂಬ ಸಹಕಾರವನ್ನು ನೀಡಿದರು’ ಎಂದು ಚಂಪಕರಾಮನ್ ಪಿಳ್ಳೈಯನ್ನು ಸ್ಮರಿಸಿಕೊಂಡಿದ್ದಾರೆ.

ರಷ್ಯದ ಮಹಿಳೆಯೊಬ್ಬಳು ಕಲ್ಕತ್ತಕ್ಕೆ ಬಂದು ಕೆಲವು ಕಾಲ ನೆಲೆಸಿದ್ದಳು. ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡಿದ್ದ ಲಕ್ಷ್ಮೀಬಾಯಿ ಎನ್ನುವ ಬಾಲಕಿಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಂಡಳು. ಕಲ್ಕತ್ತವನ್ನು ಬಿಟ್ಟು ಊರಿಗೆ ಹಿಂದಿರುಗುವ ಸಂದರ್ಭದಲ್ಲಿ  ಲಕ್ಷ್ಮೀಬಾಯಿಯನ್ನೂ ಜೊತೆಯಲ್ಲಿ ಕರೆದುಕೊಂಡು ಯುರೋಪಿಗೆ ಹೊರಟಳು. ರಾಜಕೀಯ ಕ್ರಾಂತಿಯ ಕತ್ತಿ ಮಸೆಯುತ್ತಿದ್ದ ಕಾಲ ಅದು. ರಷ್ಯದ ಮಹಿಳೆ, ಭಾರತೀಯ ಕನ್ಯೆಯನ್ನು ಜೊತೆಯಲ್ಲಿ ಕರೆದುಕೊಂಡು ಯುರೋಪಿನಲ್ಲಿ ತಿರುಗಾಡುತ್ತಿದ್ದುದು ರಷ್ಯದ ಗುಪ್ತ ಪೊಲೀಸು ದಳಕ್ಕೆ ಸಂಶಯವನ್ನುಂಟುಮಾಡಿತು. ಆಕೆಯನ್ನು ಬಂಧಿಸಿ, ಕಾರಾಗೃಹದಲ್ಲಿರಿಸಿದರು. ಆ ಮಹಿಳೆಗೆ ಕಷ್ಟಪಟ್ಟು ಸಾಕಿದ ತನ್ನ ಸಾಕುಮಗಳ ಗತಿ ಏನಾಗುವುದೋ ಎನ್ನುವ ಭಯವುಂಟಾಗಿ ಜೈಲಿನಿಂದ ಹೇಗೋ ತಪ್ಪಿಸಿಕೊಂಡು ಪಾರಾದಳು. ಆದರೆ ಚೀನಾಗಡಿಯಲ್ಲಿ ಪೊಲೀಸರು ಆಕೆಯನ್ನು ಹಿಂಬಾಲಿಸಿ ಗುಂಡಿಟ್ಟು ಕೊಂದರು.

ಮತ್ತೆ ಅನಾಥಳಾದ  ಲಕ್ಷ್ಮೀಬಾಯಿ, ಬಹಳ ಪ್ರಯಾಸದಿಂದ ಜರ್ಮನಿಯನ್ನು ತಲುಪಿದಳು. ಭಾರತ ಸ್ವಾತಂತ್ರ್ಯದ ಕೆಚ್ಚು, ಸಾಹಸಗಳು ತುಂಬಿ ತುಳುಕಿದ್ದ ಲಕ್ಷ್ಮೀಬಾಯಿಯನ್ನು ಚಂಪಕರಾಮನ್ ಮನಸಾರೆ ಮೆಚ್ಚಿಕೊಂಡಿದ್ದರು. ಸ್ವಾತಂತ್ರ್ಯವೀರ ಚಂಪಕರಾಮನ್ ಪಿಳ್ಳೈ ಮತ್ತು ಧೀರೆಯಾದ ಲಕ್ಷ್ಮೀಬಾಯಿಯ ಪರಸ್ಪರ ಪರಿಚಯ, ಅವರಿಬ್ಬರಲ್ಲೂ ಇದ್ದ ಭಾರತ ಸ್ವಾತಂತ್ರ್ಯ ಕ್ರಾಂತಿಯ ಕಹಳೆ ಮೊಳಗಿಸುವುದಕ್ಕೆ ಸಹಕಾರಿಯಾಯಿತು. ಪರಿಚಯವು ಪ್ರೇಮವಾಗಿ ಪರಿಣಮಿಸಿ, ಅವರಿಬ್ಬರೂ ಮದುವೆಯಾಗಲು ತೀರ್ಮಾನಿಸಿದರು.

ಡಾ. ಪಿಳ್ಳೈ ಮತ್ತು ಲಕ್ಷ್ಮೀಬಾಯಿ ೧೯೩೦ರಲ್ಲಿ ದಾಂಪತ್ಯ ಜೀವನದಲ್ಲಿ ಕಾಲಿರಿಸಿದರು. ಆ ಸಂದರ್ಭದಲ್ಲಿ ಪ್ಯಾರಿಸ್‌ನಲ್ಲಿದ್ದ ಮದನಮೋಹನ ಮಾಳವೀಯರು ದಂಪತಿಗಳಿಗೆ ಶುಭಸಂದೇಶವನ್ನು ಕಳುಹಿಸಿಕೊಟ್ಟಿದ್ದರು.

ಬ್ರಿಟಿಷರ ವಿರುದ್ಧ ಹೋರಾಟ ಪ್ರಬಲವಾಯಿತು

ಯಾವ ರಾಷ್ಟ್ರವೇ ಆಗಿರಲಿ, ತನ್ನನ್ನು ತಾನು ಆಳಬಲ್ಲ ಸರ್ಕಾರವನ್ನು ರಚಿಸಿಕೊಳ್ಳುವಷ್ಟು ಶಕ್ತವಾಗಿರ ಬೇಕು ಎನ್ನುವುದು ಚಂಪಕರಾಮನ್‌ರ ತತ್ವವಾಗಿತ್ತು. ಭಾರತೀಯರು ಬ್ರಿಟಿಷ್ ಸರ್ಕಾರಕ್ಕೆ ಮನ್ನಣೆ ಕೊಡಬಾರದು ಎಂದು ಹೇಳಿದರೆ, ಹಾಗಾದರೆ ಅವರು ಗೌರವಿಸಬೇಕಾದ, ತಮ್ಮದು ಎಂದು ಭಾವಿಸಬೇಕಾದ ಸರ್ಕಾರ ಯಾವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ, ಅಲ್ಲವೆ? ಅವರದೇ ಆದ ಸರ್ಕಾರ ಒಂದು ಇರಬೇಕು. ಆ ತತ್ವದ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿದ್ದ ಭಾರತೀಯ ಕ್ರಾಂತಿ ಕಾರರು ಸ್ವತಂತ್ರ ಭಾರತದ ಸರ್ಕಾರವನ್ನು ೧೯೧೫ರಲ್ಲಿಯೇ ಮೊತ್ತಮೊದಲಿಗೆ ಸ್ಥಾಪಿಸಿದರು. ಅದರ ವಿದೇಶಾಂಗ ಮಂತ್ರಿಯಾಗಿದ್ದ ಕೀರ್ತಿ ಚಂಪಕ ರಾಮನ್ ಅವರದು. ರಾಜಾಮಹೇಂದ್ರಪ್ರತಾಪ್ ಆ ಸರ್ಕಾರದ ಅಧ್ಯಕ್ಷರಾಗಿದ್ದರು. ನೇತಾಜಿಯವರು ಐ.ಎನ್.ಎ.ಎನ್ನುವ ಸ್ವಾತಂತ್ರ್ಯವೀರರ ಸಂಘವನ್ನು ರಚಿಸುವುದಕ್ಕೆ ಕಾಲು ದಶಕ ಮೊದಲೇ ‘ಇಂಡಿಯನ್ ನ್ಯಾಷನಲ್ ವಾಲಂಟೀರ‍್ಸ್’ ಸಂಘವನ್ನು ಸ್ಥಾಪಿಸಿ, ನೇತಾಜಿಯವರನ್ನೂ ಆ ಸಂಘಕ್ಕೆ ಸೇರಿಕೊಳ್ಳುವಂತೆ ಚಂಪಕರಾಮನ್‌ರು ವಿನಂತಿಸಿದ್ದರು. ಆದರೆ ಸುಭಾಷ್ ಚಂದ್ರಬೋಸರು ಆಗ ಆ ಸಂಘದಲ್ಲಿ ಸೇರಿಕೊಳ್ಳಲು ತೀರ್ಮಾನಿಸಲಿಲ್ಲ.

ಚಂಪಕರಾಮನ್ ಅವರ ಚಟುವಟಿಕೆಗಳನ್ನು ಬ್ರಿಟಿಷ್ ಸರ್ಕಾರ ಗಮನಿಸುತ್ತಲೇ ಇತ್ತು. ಮೊದಲ ಮಹಾಯುದ್ಧವಾಗುತ್ತಿದ್ದಾಗ, ಚಂಪಕರಾಮನ್ ವಿಮಾನ ಗಳಿಂದ ಭಾರತೀಯ ಸೈನಿಕರಿದ್ದ ಹಲವೆಡೆಗಳಲ್ಲಿ ಹಸ್ತಪತ್ರಿಕೆ ಗಳನ್ನು ಹಾಕಿಸಿದರು. ಭಾರತೀಯ ಸೈನಿಕರು ತಮ್ಮ ದೇಶವನ್ನು ತುಳಿಯುವ ಬ್ರಿಟಿಷ್ ಸರ್ಕಾರಕ್ಕಾಗಿ ಹೋರಾಡ ಬಾರದು, ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ಎಂದು ಮನವಿ ಮಾಡಿದರು. ಇದರಿಂದ ಕೋಪಗೊಂಡ ಬ್ರಿಟಿಷ್ ಸರ್ಕಾರ ಅವರನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಪ್ರಕಟಿಸಿತು. ಅವರನ್ನು ಸೆರೆ ಹಿಡಿಯಲು ಎಷ್ಟೋ ಪ್ರಯತ್ನ ಮಾಡಿತು. ಆದರೆ ಸಾಧ್ಯವಾಗಲಿಲ್ಲ.

ಜನ್ಮಭೂಮಿಗೆ ಬರಲು ಕಾತುರ

ಗಾಂಧೀಜಿಯ ನಾಯಕತ್ವದಲ್ಲಿ ಭಾರತದಲ್ಲಿ ಬೆಳೆದು ಬಂದ ಅಸಹಕಾರ ಚಳುವಳಿ, ಸ್ವದೇಶಿ ವಸ್ತುಗಳ ಪ್ರಚಾರ ಚಂಪಕರಾಮನ್‌ರನ್ನು ಹೆಚ್ಚು ಆಕರ್ಷಿಸಿತ್ತು. ‘ಮಹಾತ್ಮಾಗಾಂಧಿಯನ್ನು ತುಂಬ ಮೆಚ್ಚಿದ್ದೇನೆ. ಆದರೆ ಅವರ ಅಹಿಂಸಾ ಮಾರ್ಗವನ್ನು ನಾನು ಅನುಸರಿಸು ವುದಿಲ್ಲ’ ಎಂದು ಚಂಪಕರಾಮನರು ತಮ್ಮ ಸಹೋದರ ನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಚಂಪಕರಾಮನರು ಬರೆಯುತ್ತಿದ್ದ ಎಲ್ಲ ಪತ್ರಗಳೂ ಊರಿಗೆ ತಲುಪುತ್ತಿರಲಿಲ್ಲ. ಬ್ರಿಟಿಷ್ ಅಧಿಕಾರಿ ಗಳು ಆ ಪತ್ರಗಳನ್ನು ತಡೆಹಿಡಿಯುತ್ತಿದ್ದರು, ಇಲ್ಲವೇ ನಾಶ ಪಡಿಸುತ್ತಿದ್ದರು. ಅದರಿಂದಾಗಿ ಅವರು ತಾಯ್ನಾಡಿಗೆ ಬರೆಯುತ್ತಿದ್ದ ಕಾಗದಗಳಲ್ಲಿ ಕೆಲವು ಮಾತ್ರ ಉಳಿದುಕೊಂಡಿವೆ.

೧೯೨೪ ಜನವರಿ ೧೩ ರಂದು ಬರ್ಲಿನ್‌ನಿಂದ ತಂದೆಗೆ ಬರೆದ ಒಂದು ಪತ್ರದಲ್ಲಿ, ‘ಅನುಕೂಲ ಪರಿಸ್ಥಿತಿಗಳು ಕೂಡಿಬಂದರೆ ಒಂದು ನಿಮಿಷವೂ ನಾನು ನನ್ನ ಜನ್ಮಭೂಮಿಯಿಂದ ದೂರವಿರಲು ಇಚ್ಛಿಸುವುದಿಲ್ಲ. ಅಲ್ಲಿಗೆ ಬಂದು ನಿಮ್ಮನ್ನೆಲ್ಲ ಕಾಣುವ ಆಶೆ ನನಗೆ ಅತೀವವಾಗಿದೆ. ಬಹಳ ದಿನಗಳಿಂದ ಪತ್ರ ಬರೆಯಲು ಸಾಧ್ಯವಾಗದಿದ್ದುದಕ್ಕಾಗಿ ವಿಷಾದಿಸುತ್ತೇನೆ. ಭಾರತದ ದಾಸ್ಯವನ್ನು ತೊಲಗಿಸಲು ಕಷ್ಟಪಡುತ್ತಿರುವ ಅನೇಕ ಲಕ್ಷ ಸಹೋದರರ ಉದ್ದೇಶಕ್ಕಾಗಿ ನಾನು ಇಲ್ಲಿ ಪಡುತ್ತಿರುವ ಪ್ರಯಾಸಗಳೇನು ಎನ್ನುವುದು ನಿಮಗೆ ತಿಳಿದರೆ, ನಿಮಗೆ ನನ್ನ ಬಗ್ಗೆ ವ್ಯಸನವೇ ಉಂಟಾಗುವುದಿಲ್ಲವೆಂದು ಭಾವಿಸಿದ್ದೇನೆ. ನಾನು ಸಂಚರಿಸಿದ ರಾಷ್ಟ್ರಗಳು, ಅಲ್ಲಲ್ಲಿ ಪಡೆದ ಅನುಭವಗಳು ನನ್ನ ಇಲ್ಲಿಯ ಕಾರ್ಯಕ್ರಮಗಳು- ಮುಂತಾದವುಗಳನ್ನೆಲ್ಲ ಈ ಪತ್ರದಲ್ಲಿ ವಿವರಿಸಲು ಸಾಧ್ಯವಿಲ್ಲ. ಎಲ್ಲರಿಗೂ ನನ್ನ ನಮಸ್ಕಾರಗಳನ್ನು ತಿಳಿಸಿ’ -ಎಂದು ಬರೆದಿದ್ದರು.

ಕಷ್ಟ ಪರಂಪರೆ

ಅನಿರೀಕ್ಷಿತವಾಗಿ ‘ಗದರ್ ಪಾರ್ಟಿ’ಯ ವಿಕಾಸಕ್ಕೆ ಅನೇಕ ಆಘಾತಗಳುಂಟಾದವು. ‘ಗದರ್ ಪಾರ್ಟಿ’ಯಲ್ಲಿದ್ದ ರಾಮಚಂದ್ರನ್, ಧೀರನಾದ ಹೋರಾಟಗಾರನಾಗಿದ್ದ. ಸಾನ್‌ಫ್ರಾನ್ಸ್‌ಸ್‌ಕೋನಲ್ಲಿ ಪಿತೂರಿಯ ಕೇಸಿನ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಾರ್ಟಿಗೆ ಸೇರಿದ ಒಬ್ಬ ಸದಸ್ಯನೇ ಆತನನ್ನು ಗುಂಡಿಟ್ಟು ಕೊಂದ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಕಲ ರೀತಿಯಲ್ಲೂ ಅನುಕೂಲಕರ  ವಾಗಿದ್ದ ಜರ್ಮನಿ ಎರಡು ಮಹಾಯುದ್ಧಗಳಲ್ಲಿ ಸುಟ್ಟು ಬೂದಿಯಾಯಿತು.

ಮೊದಲನೆಯ ಮಹಾಯುದ್ಧದ ನಂತರ ಚಂಪಕರಾಮನ್ ಅವರು ಭಾರತ ಜರ್ಮನಿಗಳ  ನಡುವೆ ವ್ಯಾಪಾರ ಬೆಳೆಯುವಂತೆ ಮಾಡಲು ಪ್ರಯತ್ನಿಸಿದರು. ಲೀಪ್ ಜಿಗ್‌ನ ಅಂತಾರಾಷ್ಟ್ರೀಯ ಮೇಳದಲ್ಲಿ ಭಾರತದ ಸ್ವದೇಶಿ ವಸ್ತುಗಳದೇ ಒಂದು ಪ್ರದರ್ಶನವನ್ನು ಏರ್ಪಡಿಸಿದರು.

ಮಹಾಯುದ್ಧದ ನಂತರ ನಾಜಿಗಳು ಜರ್ಮನಿಯ ಅಧಿಕಾರವನ್ನು ವಹಿಸಿಕೊಂಡರು. ೧೯೩೦ರ ಅನಂತರ ನಾಜಿಗಳು ಚಂಪಕರಾಮನ್ ಪಿಳ್ಳೈಯನ್ನು ವಿರೋಧಿಸತೊಡಗಿದರು. ಭಾರತ ಸ್ವಾತಂತ್ರ್ಯಕ್ಕೆ ದೊರೆಯುವ ಸಹಾಯ ಯಾವ ಕಡೆಯದಾದರೂ ಸರಿಯೆ, ಸ್ವೀಕರಿಸಬೇಕೆನ್ನುವುದು ಚಂಪಕರಾಮನ್‌ರ ತತ್ವವಾಗಿತ್ತು. ಏಷ್ಯನ್ ರಾಷ್ಟ್ರಗಳು ತಮ್ಮವೇ ಆದ ಸರಕಾರ ಗಳನ್ನು ರೂಪಿಸಿಕೊಳ್ಳುವ ತತ್ವಕ್ಕೆ ಹಿಟ್ಲರ್  ವಿರೋಧಿ ಯಾಗಿದ್ದ. ಏಷ್ಯಾದ ಜನ ತಮ್ಮನ್ನು ತಾವು ಆಳಿಕೊಳ್ಳ ಬಾರದು ಎಂದು ಆತನ ಭಾವನೆ. ಆತನ ಕ್ರೂರವರ್ತನೆ, ಸ್ವೇಚ್ಛಾಚಾರ, ಸ್ವಾತಂತ್ರ್ಯ ನೀತಿಯನ್ನು ಪ್ರತಿಭಟಿಸುವುದು ಇವೇ ಮೊದಲಾದವುಗಳನ್ನು ಮನಗಂಡ ಚಂಪಕರಾಮನ್  ಬಹಿರಂಗ ಸಭೆಯಲ್ಲಿ ಹಿಟ್ಲರನ ನೀತಿಯನ್ನು ಕಟುವಾಗಿ ಟೀಕಸಿದರು. ಅದರಿಂದಾಗಿ ಚಂಪಕ ರಾಮನ್ ಹಿಟ್ಲರ್ ಮತ್ತು ನಾಜಿಗಳ ಶತ್ರುವಾಗಿ ಪರಿಣಮಿಸಿದರು.

ಚಂಪಕರಾಮನ್ ‘ಯಾವುದೇ ರಾಷ್ಟ್ರ, ಮತ್ತೊಂದು ರಾಷ್ಟ್ರದ ಮೇಲೆ ಎಲ್ಲಿಯವರೆಗೆ ದಮನ ನೀತಿ ಯನ್ನುನು ಸರಿಸುತ್ತದೆಯೋ ಅಲ್ಲಿಯವರೆಗೆ ಲೋಕದಲ್ಲಿ ಶಾಂತಿಸಮಾಧಾನಗಳುಂಟಾಗಲಾರವು’ ಎನ್ನುವುದನ್ನು ಎಲ್ಲೆಡೆಯಲ್ಲೂ ಸಾರಿದರು.

ವೀರ ಇನ್ನಿಲ್ಲ

ಇದೇ ಸಂದರ್ಭದಲ್ಲಿ ಚಂಪಕರಾಮನರ ಆರೋಗ್ಯ ಕೆಟ್ಟಿತು. ಬರ್ಲಿನ್‌ನಿಂದ ಇಟಲಿಗೆ ಬಂದು ಆಸ್ಪತ್ರೆಗೆ ಸೇರಿದರು. ಅನಾರೋಗ್ಯದಿಂದ ಸುಧಾರಿಸಿ ಕೊಳ್ಳುತ್ತಿರುವಷ್ಟರಲ್ಲಿ ನಾಜಿಗಳು ಚಂಪಕರಾಮನರು  ಸಂಗ್ರಹಿಸಿದ್ದ ವಸ್ತುಗಳನ್ನು ಸಿಕ್ಕಿದಷ್ಟಕ್ಕೆ ಮಾರಿದ ಸುದ್ದಿ ತಲುಪಿತು. ತೀರ ನಿರಾಶೆಯಿಂದ ಬರ್ಲಿನ್‌ಗೆ ಬಂದು ನಾಜಿಗಳು ಚಂಪಕರಾಮನ್  ವಸ್ತುಗಳನ್ನು ಅಪಹರಿಸಿ ದುದನ್ನು ಕುರಿತು ವಿಚಾರಣೆ ನಡೆಸಬೇಕೆಂದು ಸರ್ಕಾರಕ್ಕೆ ದೂರು ಕೊಟ್ಟರು. ಅದರಿಂದ ಯಾವ ಪ್ರಯೋಜನವೂ ದೊರೆಯಲಿಲ್ಲ. ಒಂದು ದಿನ ನಾಜಿಗಳು ಗುಂಪುಕೂಡಿ ಚಂಪಕರಾಮನರ ಮೇಲೆ ಆಕ್ರಮಣ ನಡೆಸಿದರು. ತಮ್ಮ ಎರಡನೆಯ ತಾಯ್ನಾಡು ಎಂದು ತಾವು ಭಾವಿಸಿದ್ದ ದೇಶದಲ್ಲಿ ಹೀಗಾದದ್ದು ಚಂಪಕರಾಮನ್ ಅವರಿಗೆ ದಿಗ್ಭ್ರಮೆಯನ್ನು ಉಂಟುಮಾಡಿತು. ಅದರಿಂದಾಗಿ ಪಿಳ್ಳೈ ಯವರು ದೈಹಿಕ ಹಾಗೂ ಮಾನಸಿಕ ಆಘಾತ ಕ್ಕೊಳಗಾಗಿ ಪರ್ಷಿಯನ್ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯು ತ್ತಿದ್ದರು. ದಿನದಿಂದ ದಿನಕ್ಕೆ ಚೇತರಿಸಿಕೊಳ್ಳಲಾರದೆ ೧೯೩೪ ಮೇ ೨೬ರಂದು ಅದೇ ಆಸ್ಪತ್ರೆಯಲ್ಲಿ ಇಹಲೋಕ ಯಾತ್ರೆ ಯನ್ನು ಪೂರೈಸಿದರು. ಆ ಹೊತ್ತಿನಲ್ಲಿ ಹತ್ತಿರದಲ್ಲೇ ಇದ್ದ ಚಂಪಕರಾಮನರ ಪತ್ನಿ ಅನಾಥಗಳಾಗಿ ಬಿಕ್ಕಿ ಬಿಕ್ಕಿ ಅಳುತ್ತ ಕುಳಿತಿದ್ದರು. ೮೬ ವರ್ಷದ ಸ್ಟ್ರೀಕ್‌ಲೆಂಡ್‌ಗೆ ಈ ಸುದ್ದಿ ತಿಳಿದಾಗ, ತಮ್ಮ ಸಾಕುಮಗನ ದಾರುಣ ಅಂತ್ಯಕ್ಕಾಗಿ ಕಣ್ಣೀರನ್ನು ಕರೆದರು.

ಕಲ್ಕತ್ತದಲ್ಲಿ ಅನಾಥಳಾಗಿ ರಷ್ಯನ್ ಮಹಿಳೆಯ ಸಾಕುಮಗಳಾಗಿ ಬರ್ಲಿನ್‌ನಲ್ಲಿ ಚಂಪಕರಾಮನ್ ಪಿಳ್ಳೈಯನ್ನು ವರಿಸಿದ ಲಕ್ಷ್ಮೀಬಾಯಿಯ ದಾಂಪತ್ಯ ಜೀವನ ಕೇವಲ ನಾಲ್ಕು ವರ್ಷಗಳು ತುಂಬುವಷ್ಟರಲ್ಲಿ ಮುಕ್ತಾಯಗೊಂಡಿತು.

ಎಂದೂ ತಲೆಬಾಗದ ವೀರ

೧೯೩೨ ರಲ್ಲಿ ಚಂಪಕರಾಮನರು ಮುಲ್‌ಖೇರ್ ಕರ್‌ಗೆ ಬರೆದಿದ್ದ ಒಂದು ಪತ್ರದಲ್ಲಿ ‘ನನ್ನ ಜೀವನದ ಅಮೂಲ್ಯ ದಿನಗಳನ್ನು ಭಾರತಭೂಮಿಯ ಸ್ವಾತಂತ್ರ್ಯಕ್ಕಾಗಿ ದುಡಿಯುತ್ತ ಕಳೆದೆ. ಭಾರತೀಯರ ದಾಸ್ಯ ವಿಮೋಚನೆಗಾಗಿ ಹಗಲಿರುಳು ಶ್ರಮಿಸಿದೆ. ಯಾವುದೇ ರಾಜಕೀಯ ಪಕ್ಷಗಳ ಪ್ರತ್ಯೇಕ ತತ್ವಗಳಿಗೆ ನಾನೆಂದೂ ತಲೆಬಾಗಲಿಲ್ಲ’ ಎಂದು ತಿಳಿಸಿದ್ದರು.  ಪಿಳ್ಳೈಯವರು ಆ ಮಾತುಗಳನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿದರು.

ಜರ್ಮನಿಯಲ್ಲಿದ್ದ ಭಾರತೀಯರು ಮತ್ತು ಜರ್ಮನಿಯ ಮಿತ್ರರ ಮೌನ ಮೆರವಣಿಗೆಯಲ್ಲಿ ಚಂಪಕರಾಮನ್‌ರ ಪಾರ್ಥಿವ ಶರೀರ ಅಂತ್ಯಯಾತ್ರೆಗಾಗಿ ಉಮೆನ್‌ಡೋರ್ ಸ್ಮಶಾನದ ಕಡೆಗೆ ಸಾಗಿತು. ಜರ್ಮನ್ ಛೇಂಬರ್ ಆಫ್ ಕಾಮರ್ಸ್‌ನ ಪ್ರತಿನಿಧಿಗಳು, ಚಂಪಕರಾಮನ್‌ರ ಮಿತ್ರವೃಂದ ಪುಷ್ಫಗುಚ್ಛವನ್ನರ್ಪಿಸಿ ತಮ್ಮ ಅಂತಿಮ ಗೌರವವನ್ನು ಸಲ್ಲಿಸಿ, ಆತ್ಮಶಾಂತಿಯನ್ನು ಕೋರಿದರು. ಕೇವಲ ೪೩ ವರ್ಷಗಳು ಜೀವಿಸಿದ್ದು, ಸ್ವಾತಂತ್ರ್ಯ ಸಮರದ ಚರಿತ್ರೆಯಲ್ಲಿ ಉನ್ನತ ಸ್ಥಾನವನ್ನು ಗಳಿಸಿ, ತಾಯ್ನಾಡಿಗಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸಿ ಚಂಪಕರಾಮನ್ ಅಮರರಾದರು.

ಲಕ್ಷ್ಮೀಬಾಯಿ ತಮ್ಮ ನಿತ್ಯಪೂಜಾವಸ್ತುವಾಗಿದ್ದ ಚಂಪಕರಾಮನ್‌ರ ಚಿತಾಭಸ್ಮದೊಂದಿಗೆ ದುಃಖದ ಭಾರವನ್ನೂ ಹೊತ್ತುಕೊಂಡು ೧೯೩೫ರಲ್ಲಿ ಮುಂಬಯಿ ಯನ್ನು ತಲುಪಿದರು. ಚಂಪಕರಾಮನರ ಹೆಸರಿನಲ್ಲಿ ಭಾರತದಲ್ಲಿ ಎಲ್ಲಿಯೂ ಸ್ಮಾರಕಗಳನ್ನು ರಚಿಸಿಲ್ಲ.

ಸ್ವತಂತ್ರ ಭಾರತದ ನಮನ

೧೯೫೪ರಲ್ಲಿ ಮುಂಬಯಿಯಲ್ಲಿ ಚಂಪಕ ರಾಮನರ ಭಾವಚಿತ್ರವನ್ನು ಎಸ್.ಕೆ.ಪಾಟೀಲರು ಅನಾವರಣ ಮಾಡಿದರು. ಅಂದು, ಬಾಬು ರಾಜೇಂದ್ರಪ್ರಸಾದರು ಕಳುಹಿಸಿದ್ದ ಸಂದೇಶ ಇದು:

‘ಇಂದು ನೀವು ಯಾರ ಸ್ಮರಣೆಗಾಗಿ ಸಭೆ ಸೇರಲು ನಿಶ್ಚಯಿಸಿದ್ದೀರೋ ಆ ಡಾಕ್ಟರ್ ಚಂಪಕರಾಮನ್ ಪಿಳ್ಳೈ ಜೀವಿಸಿದ್ದುದು, ಪ್ರಾಣಾರ್ಪಣೆ ಮಾಡಿದುದು- ಭಾರತ ಸ್ವಾತಂತ್ರ್ಯಕ್ಕಾಗಿ. ತನ್ನದೇ ಆದ ಧ್ಯೇಯಧೋರಣೆಗಳಿಂದ ಮೊದಲನೆಯ ಮಹಾಯುದ್ಧ ಕಾಲದಲ್ಲಿಯೇ ಸ್ವಾತಂತ್ರ್ಯ ಸಮರವನ್ನಾರಂಭಿಸಿದ ವ್ಯಕ್ತಿ ಚಂಪಕರಾಮನ್. ಅಂದಿನ ಕ್ರಾಂತಿಕಾರರಾದ ನೇತಾರರು ಯಾವ ರೀತಿಯಲ್ಲೇ ಸ್ವಾತಂತ್ರ್ಯ ಸಮರಕ್ಕಾಗಿ ಶ್ರಮಿಸಿರಲಿ, ಅವರ ಪ್ರಯತ್ನಗಳು, ಪ್ರಚೋದನೆಗಳು ಜನತೆಯಲ್ಲಿ ಸ್ವಾತಂತ್ರ್ಯದಾಹವನ್ನು ಹೆಚ್ಚಿಸಿದುವು ಎನ್ನುವುದರಲ್ಲಿ ಸಂಶಯವಿಲ್ಲ. ಅಂತಹ ಪ್ರಯತ್ನದಲ್ಲಿ ಡಾಕ್ಟರ್ ಚಂಪಕರಾಮನರ ಪಾತ್ರ ಅದ್ವೀತಿಯ ವಾದುದು.’ ೧೯೬೬ ರಲ್ಲಿ ಕೇರಳದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮ್ಮೇಳನದಲ್ಲಿ ಚಂಪಕರಾಮನ್ ಪಿಳ್ಳೈಯ ಚಿತಾಭಸ್ಮವನ್ನು ತಿರುವನಂತಪುರಕ್ಕೆ ತರಲು ತೀರ್ಮಾನವನ್ನು ಕೈಗೊಳ್ಳಲಾಯಿತು. ೧೯೬೬ ಸೆಪ್ಟೆಂಬರ್ ೧೭ ರಂದು ಮುಂಬಯಿಯ ಜನತೆ ಚಂಪಕರಾಮನ್‌ರ ಚಿತಾಭಸ್ಮವನ್ನು ಗೇಟ್ ವೇ ಆಫ್ ಇಂಡಿಯಾಕ್ಕೆ ತಂದು ಸ್ವತಂತ್ರ ಭಾರತದ ಬಾವುಟ ಹಾರಾಡುತ್ತಿದ್ದ ಹಡಗಿನಲ್ಲಿರಿಸಿ ತಮ್ಮ ಶ್ರದ್ಧಾಂಜಲಿಗಳನ್ನರ್ಪಿಸಿದರು. ಚಿತಾಭಸ್ಮದ ಪಕ್ಕದಲ್ಲಿ ಧ್ಯಾನನಿರತಳಾಗಿ ಕುಳಿತಿದ್ದ ಲಕ್ಷ್ಮೀಬಾಯಿ ಪಿಳ್ಳೈಯೂ ಇದ್ದರು. ಸೆಪ್ಟೆಂಬರ್ ೧೯ ರಂದು ಕೊಚ್ಚಿ ಬಂದರನ್ನು ತಲುಪಿದಾಗ ಕೇರಳದ ಗಣ್ಯವ್ಯಕ್ತಿಗಳೆಲ್ಲ ಚಂಪಕರಾಮನ್ ಪಿಳ್ಳೈಯವರ ಚಿತಾಭಸ್ಮಕ್ಕೆ ಪುಷ್ಪಗುಚ್ಛಗಳನ್ನಿರಿಸಿದರು. ಅಕ್ಟೋಬರ್ ಎರಡರಂದು ಆ ಮಹಾತ್ಮನ ಚಿತಾಭಸ್ಮವನ್ನು ಕನ್ಯಾಕುಮಾರಿಗೆ ತಂದು ಸಾಗರಸಂಗಮದಲ್ಲಿ ವಿಸರ್ಜಿಸಲಾಯಿತು.

ಸ್ವಾತಂತ್ರ್ಯಕ್ಕೆ ಮುಡಿಪಾದ ಬಾಳು

ಚಂಪಕರಾಮನ್ ಅವರು ಭಾರತಕ್ಕೆ ಮಾತ್ರ ಸ್ವಾತಂತ್ರ್ಯ ಬಯಸಿದ ವ್ಯಕ್ತಿಯಲ್ಲ. ಎಲ್ಲ ದೇಶಗಳ ಜನರಿಗೂ ತಮ್ಮನ್ನು ಆಳಿಕೊಳ್ಳುವ ಅಧಿಕಾರ ಇರಬೇಕು, ಯಾವ ದೇಶದವರೂ ಇನ್ನೊಂದು ದೇಶವನ್ನು ಆಳಲಾಗದು ಎಂದು ಅವರ ದೃಢ ನಂಬಿಕೆ. ಮತ್ತೊಂದು ದೇಶದವರ ಕೈಯಲ್ಲಿ ಸಿಕ್ಕಿದ ದೇಶ ಯಾವ ರೀತಿಯಲ್ಲಿಯೂ ಮುಂದುವರಿಯಲಾರದು, ಭಾರತದ ಜನ ಅಜ್ಞಾನ ಮತ್ತು ಬಡತನದಲ್ಲಿ ತೊಳಲುತ್ತಿರುವುದಕ್ಕೆ ವಿದ್ಯಾಭ್ಯಾಸವಿಲ್ಲದೆ, ಕೈಗಾರಿಕೆಗಳಲ್ಲಿ ಪ್ರಗತಿ ಇಲ್ಲದೆ, ಕೃಷಿಯಲ್ಲಿಯೂ ಹಿಂದುಳಿದಿರುವುದಕ್ಕೆ ಅದರ ದಾಸ್ಯವೇ ಕಾರಣ ಎಂದು ಸಾರಿದರು. ಭಾರತಕ್ಕಾದ ಅನ್ಯಾಯವನ್ನು ಪ್ರಪಂಚಕ್ಕೆಲ್ಲ ಸಾರಿ ಸಾರಿ ಹೇಳಿ ಹಲವು ದೇಶಗಳಲ್ಲಿ ಭಾರತದ ವಿಷಯ ತಿಳುವಳಿಕೆಯನ್ನು ಮೂಡಿಸಿ, ಅದರ ಸ್ವಾತಂತ್ರ್ಯದ ಹೋರಾಟಕ್ಕೆ ಬೆಂಬಲ ಗಳಿಸಲು ಅವರು ದೇಶದಿಂದ ದೇಶಕ್ಕೆ ಅಲೆದರು. ತಮ್ಮ ವೈಯಕ್ತಿಕ ಕಷ್ಟಗಳು, ಹಣದ ಖರ್ಚು, ದೇಹದ ಶ್ರಮ ಯಾವುದನ್ನೂ ಗಮನಕ್ಕೆ ತಂದುಕೊಳ್ಳದೆ ದೇಶ-ದೇಶಗಳಿಗೆ ಹೋಗಿ ಚಳುವಳಿ ಹೂಡಿದರು. ಅವರನ್ನು ಹಿಡಿದುಹಾಕಲು ಬ್ರಿಟಿಷರ ಗುಪ್ತ ಚರರು ಕಾಯುತ್ತಿದ್ದರು. ಆದರೆ ಚಂಪಕರಾಮನ್ ಅವರು ಯಾವುದಕ್ಕೂ ಬೆದರಲಿಲ್ಲ. ಅನ್ಯಾಯವನ್ನು ಪ್ರತಿಭಟಿಸುವ ಅವರ ಧೈರ್ಯ ಎಷ್ಟೆಂದರೆ, ಹಿಟ್ಲರನು ಜರ್ಮನಿಯ ಸರ್ವಾಧಿಕಾರಿಯಾಗಿ, ಯಾರ ವಿರೋಧವನ್ನೂ ಸಹಿಸ ದಿದ್ದಾಗ ಅವನ ವಿರುದ್ಧ ಸಾರ್ವಜನಿಕವಾಗಿ ಮಾತನಾಡಿ ದರು, ಏಷ್ಯದ ಜನರು ತಮ್ಮನ್ನು ತಾವು ಆಳಿಕೊಳ್ಳಬಾರದು ಎಂಬ ಅವನ ಅಭಿಪ್ರಾಯ ತಪ್ಪು ಎಂದು ಘೋಷಿಸಿದರು. ಬ್ರಿಟಿಷರ ನೌಕಾದಳವನ್ನೇ ನಡುಗಿಸಿದ ’ಎಮ್ಡನ್’ ನೌಕೆಯ ಅಧಿಕಾರಿಯಲ್ಲವೆ ಈ ಧೀರ!

’ಜೈ ಹಿಂದ್’ ಎಂಬ ಘೋಷಣೆಯನ್ನು ಮೊದಲು ಬಳಸಿದವರು ಚಂಪಕರಾಮನ್ ಪಿಳ್ಳೈಯವರೆ ಎಂದು ಹೇಳುತ್ತಾರೆ. ಹಲವು ವರ್ಷಗಳ ನಂತರ ನೇತಾಜಿ ಸುಭಾಷ್ ಚಂದ್ರಬೋಸರ ಭಾರತ ರಾಷ್ಟ್ರೀಯ ಸೈನ್ಯದಲ್ಲಿ ಇದರ ಬಳಕೆ ಹೆಚ್ಚಾದ ನಂತರ ಭಾರತದಲ್ಲಿ ಜನಪ್ರಿಯತೆಯನ್ನು ಗಳಿಸಿತು.

ಕೇರಳದ ತಿರುವನಂತಪುರದಲ್ಲಿ ಜನಿಸಿ, ಬರ್ಲಿನ್‌ನಲ್ಲಿ ನೆಲಸಿ, ವಿದೇಶಗಳಲ್ಲಿದ್ದ ಭಾರತೀಯರನ್ನೆಲ್ಲ ಸಂಘಟಿಸಿ, ಬ್ರಿಟಿಷರ ವಿರುದ್ಧ ಬಂಡಾಯ ಹೂಡಿ ಲೋಕಖ್ಯಾತಿಯನ್ನು ಪಡೆದ  ಸಮರ ಸೇನಾನಿ, ಸ್ವತಂತ್ರ ಭಾರತದ ಬಾವುಟ ಹಾರಾಡುವ ಹಡಗಿನಲ್ಲಿ ಕುಳಿತು ಭಾರತಕ್ಕೆ  ಬರುವ ಮಹದಾಶೆಯನ್ನಿರಿಸಿಕೊಂಡಿದ್ದ ವ್ಯಕ್ತಿ ಭಾರತಾಂಬೆ ಸ್ವತಂತ್ರಳಾಗುವುದಕ್ಕೆ ಮೊದಲೇ ಅಸುನೀಗಿದ ಭಾರತವೀರ ಡಾಕ್ಟರ್ ಚಂಪಕರಾಮನ್ ಪಿಳ್ಳೈ.