ಚಂಬೈ ವೈದ್ಯನಾಥ ಭಾಗವತರುಕರ್ನಾಟಕ ಸಂಗೀತ ಜಗತ್ತಿನಲ್ಲಿ ಹೆಸರಾದವರು. ಎಳೆಯ ವಯಸ್ಸಿನಲ್ಲೇ ಸಂಗೀತ ಕಛೇರಿ ಮಾಡಿದರು. ನಿರ್ವಂಚನೆಯಿಂದ ಇತರರಿಗೆ ವಿದ್ಯಾದಾನ ಮಾಡಿದರು. ದೈವಭಕ್ತಿ, ಸೌಜನ್ಯ, ಸರಳ ಜೀವನ ಇವರ ಪ್ರತಿಭೆಗೆ ಮೆರುಗನ್ನಿತ್ತವು.

ಚಂಬೈ ವೈದ್ಯನಾಥ ಭಾಗವತರ್

ಕೇರಳದ ಪಾಲಘಾಟ್ ಜಿಲ್ಲೆಗೆ ಸೇರಿದ ಚಂಬೈ ಎಂಬ ಊರು ಸಂಗೀತ ಪ್ರಪಂಚದಲ್ಲಿ ಚಿರಪರಿಚಿತ ವಾಗಿದೆ. ಚಂಬೈಗೆ ಹೋಗುವ ಮಾರ್ಗದಲ್ಲಿ ಸುತ್ತಲೂ ಹಚ್ಚ ಹಸುರಾಗಿರುವ ಗಿಡಮರಗಳು, ತೆಂಗು, ಅಡಿಕೆ, ಬಾಳೆ, ಮಾವು ಇತ್ಯಾದಿ ಫಲವೃಕ್ಷಗಳು ನಿಬಿಡವಾಗಿ ಬೆಳೆದು ಕಣ್ಮನಗಳಿಗೆ ತಂಪನ್ನುಂಟುಮಾಡುತ್ತವೆ. ಹತ್ತಿರದಲ್ಲೇ ಒಂದು ನದಿಯೂ ಹರಿಯುವುದರಿಂದ ಎಲ್ಲ ಬಗೆಯ ವ್ಯವಸಾಯಕ್ಕೂ ಅನುಕೂಲವಾಗಿದೆ. ಒಟ್ಟಿನಲ್ಲಿ, ಸುಭಿಕ್ಷ ವಾದ ಪ್ರದೇಶ.

ಆ ಊರಿನಲ್ಲಿ ಎರಡು ಮುಖ್ಯವಾದ ದೇವಾಲಯ ಗಳಿವೆ. ಒಂದು ಶ್ರೀ ಪಾರ್ಥಸಾರಥಿಯದು, ಇನ್ನೊಂದು ಈಶ್ವರನದು. ಪ್ರತಿವರ್ಷವೂ ಫಾಲ್ಗುಣ ಮಾಸದಲ್ಲಿ ವೈಭವದ ಉತ್ಸವಗಳು ಜರುಗುತ್ತವೆ. ಚಂಬೈಯಲ್ಲಿ  ಸುಮಾರು ೧೫೦ ವರ್ಷಗಳ ಹಿಂದೆ ಸುಬ್ಬಯ್ಯರ್ ಎಂಬುವವರೊಬ್ಬರು ಸಂಗೀತಕ್ಷೇತ್ರದಲ್ಲಿ ಬಹಳ ಪ್ರಸಿದ್ಧ ರಾಗಿದ್ದರು. ತಿರುವಾಂಕೂರು ಮಹಾರಾಜ ರಿಂದ ಗೌರವ ಪ್ರಶಸ್ತಿಗಳನ್ನು ಪಡೆದರು.

ಜನನ, ಬಾಲ್ಯ

ಇವರ ಕುಟುಂಬದಲ್ಲಿ ಚಂಬೈ ವೈದ್ಯನಾಥಯ್ಯರ್ ಜನಿಸಿದರು. ಇವರು ಸುಬ್ಬಯ್ಯರವರ ಮರಿಮಗ. ತಮ್ಮ ಇಡೀ ಜೀವಮಾನವನ್ನೇ ಸಂಗೀತಕ್ಕಾಗಿ ಮುಡುಪಾಗಿ ಇಟ್ಟವರು. ಅಪಾರ ಕೀರ್ತಿಯನ್ನು ಗಳಿಸಿದ್ದಲ್ಲದೆ, ತಮ್ಮ ಜೀವನವನ್ನು ಆದರ್ಶವಾಗಿ ಮತ್ತು ಬಹು ಸರಳವಾಗಿ ನಡೆಸಿದವರು. ವಿಶೇಷವಾದ ದೈವಭಕ್ತಿ, ನಿತ್ಯ ಕರ್ಮಾನುಷ್ಠಾನ, ಗುರುಹಿರಿಯರಲ್ಲಿ ಗೌರವ, ಬಂಧುಗಳಲ್ಲಿ ಪ್ರೀತಿ ಇವು ಅವರಲ್ಲಿದ್ದ ಮುಖ್ಯ ಗುಣಗಳು.

ಇವರ ತಂದೆ ಅನಂತ ಭಾಗವತರು. ಸ್ವತಃ ಗಾಯಕರು ಮತ್ತು ಪಿಟೀಲುವಾದಕರು. ಇವರೂ ಒಳ್ಳೆಯ ದೈವಭಕ್ತರಾಗಿದ್ದರು. ಸ್ವಂತ ಮನೆ, ಜಮೀನು ಇದ್ದುವು. ಅವರ ಜೀವನ ಸುಖಮಯವಾಗಿತ್ತು. ಅಲ್ಲದೆ ಅವರು ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿದ್ದರು.

ಇವರ ಮನೆಯಲ್ಲಿ ಸದಾ ತಂಬೂರಿ ಶ್ರುತಿಯು ಝೇಂಕರಿಸುತ್ತಲೇ ಇತ್ತೆಂದು ಹೇಳಬಹುದು. ಏಕೆಂದರೆ, ಅನಂತ ಭಾಗವತರು ಸಂಗೀತವನ್ನು ಕೇವಲ ಮನರಂಜನೆಗೆ ಮಾತ್ರ ಇಟ್ಟುಕೊಂಡಿರಲಿಲ್ಲ. ದೇವರ ಪೂಜೆಯನ್ನೂ ಅದರ ಮೂಲಕವೇ ಮಾಡುತ್ತಿದ್ದರು. ಎಷ್ಟೋ ಸಾರಿ, ದೇವರ ಸನ್ನಿಧಿಯಲ್ಲಿ ಕುಳಿತು ಭಕ್ತಿಪರವಶ ರಾಗಿ ಹಾಡುತ್ತಿರುವಾಗ ಮೈಮರೆತುದೂ ಉಂಟು.

ತಾಯಿ ಶ್ರೀಮತಿ ಪಾರ್ವತಿ ಅಮ್ಮಾಳ್ ಅವರು ಗಂಡನಂತೆಯೇ ದೈವಭಕ್ತಿಯುಳ್ಳವರು. ಗಂಭೀರಸ್ವಭಾವ ಉಳ್ಳವರು.

ಈ ಆದರ್ಶ ದಂಪತಿಗಳಿಗೆ ಜೇಷ್ಠಪುತ್ರನಾಗಿ ೧೮೯೬ರಲ್ಲಿ ವ್ಯೆದ್ಯನಾಥನು ಜನಿಸಿದನು.

ಬಾಲಕ ವ್ಯೆದ್ಯನಾಥ ತಂಬೂರಿ ಶ್ರುತಿ ಕೇಳುವುದೇ ತಡ. ಕಿವಿ ನೆಟ್ಟಗಾಗುತ್ತಿತ್ತು, ದೃಷ್ಟಿ ಆ ಕಡೆಗೆ ಹರಿಯುತ್ತಿತ್ತು. ಆಡವಾಡುತ್ತಿದ್ದರೆ, ಅದನ್ನು ಬಿಟ್ಟು ತಂದೆಯ ಹತ್ತಿರ ಓಡಿಬಂದು ಕುಳಿತುಕೊಳ್ಳುತ್ತಿದ್ದ. ಹಾಡುವುದನ್ನು ಕೇಳುತ್ತಿದ್ದ. ಮುಗಿಯುವವರೆಗೂ ಏಳುತ್ತಿರಲಿಲ್ಲ.

ಅನಂತ ಭಾಗವತ ದಂಪತಿಗಳಿಗೆ ಇನ್ನೊಂದು ಗಂಡು ಮಗುವಿನ ಜನನವಾಯಿತು. ಅದಕ್ಕೆ ಸುಬ್ರಹ್ಯಣ್ಯ ಎಂದು ಹೆಸರಿಟ್ಟರು.

ಅನಂತ ಭಾಗವತರು ಅನೇಕರಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅವರಿಗೆ ಪಾಠ ನಡೆಯುತ್ತಿದ್ದಾಗ ಇಬ್ಬರೂ ಕುಳಿತು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಪಾಠ ಮುಗಿದ ಮೇಲೆ, ಗುರುಶಿಷ್ಯರಂತೆಯೇ ಇಬ್ಬರೂ ನಟಿಸಿ ಆಟವಾಡುತ್ತಿದ್ದರು. ಈ ರೀತಿ ಸದಾ ಸಂಗೀತದಲ್ಲೇ ಮನಸ್ಸಿಟ್ಟು ಬಾಲ್ಯಾವಸ್ಥೆಯನ್ನು ದಾಟುತ್ತ ಬಂದರು.

ಸಂಗೀತ ಶಿಕ್ಷಣ

ಮಕ್ಕಳಿಗಿದ್ದ  ಈ ಸಂಗೀತಪ್ರೇಮವನ್ನರಿತ ಅನಂತ ಭಾಗವತರು ಆ ವಿದ್ಯೆಯಲ್ಲೇ ಅವರಿಗೆ ಒಳ್ಳೆ ಭವಿಷ್ಯ ಎಂಬುದನ್ನು ಮನಗಂಡರು. ಆ ಕಾರಣದಿಂದ, ವ್ಯೆದ್ಯನಾಥನಿಗೆ ಮೂರನೇ ವಯಸ್ಸಿನಿಂದಲೇ ಸಂಗೀತ ಶಿಕ್ಷಣ ಕೊಡಲು ಪ್ರಾರಂಭಿಸಿದರು. ಶುಭದಿನ ಒಂದರಲ್ಲಿ ಪಾಠ  ಹೇಳಿಕೊಡಲು ಶುರುಮಾಡಿದರು. ಮಗುವಿನ ಕೋಮಲ ಕಂಠದಿಂದ ಶ್ರುತಿ ಶುದ್ಧವಾದ ನಾದ ತಾನೇತಾನಾಗಿ ಹೊರಹೊಮ್ಮಿತು. ಹೇಳಿಕೊಟ್ಟದ್ದನ್ನು ಗ್ರಹಿಸುವ ಶಕ್ತಿ ಚೆನ್ನಾಗಿದ್ದುದರಿಂದ ಕಲಿಕೆ ತೀವ್ರಗತಿಯಲ್ಲಿ ಮುಂದೆ ಸಾಗಿತು. ಬೆಳಗಿನಜಾವ ಎದ್ದು ಸಾಧನೆ ಮಾಡುವ ಅಭ್ಯಾಸವು ಸ್ವಪ್ರೇರಣೆಯಿಂದಲೇ ರೂಢಿಗೆ ಬಂತು. ಸ್ವಾಭಾವಿಕವಾಗಿಯೇ ಮಧುರವಾದ ಕಂಠ ಕ್ರಮವರಿತ ಸಾಧನೆಯಿಂದ ಮೆರುಗನ್ನು ಪಡೆಯಿತು. ಹಾಡಲು ಕುಳಿತಾಗಲೆಲ್ಲ ತನ್ನನ್ನು ತಾನೇ ಮರೆಯುವ ಸ್ವಭಾವ ವ್ಯೆದ್ಯನಾಥನದು. ಒಂದು ಸಾರಿ ಶಿವರಾಮಕೃಷ್ಣ ಭಾಗವತರೆಂಬ ದೊಡ್ಡ ವಿದ್ವಾಂಸರು ಆ ಮಗು ಸಾಧನೆ ಮಾಡುತ್ತಿದ್ದಾಗ ಬಂದರಂತೆ. ಆ ಗಾನ ಕಿವಿಗೆ ಬಿದ್ದದ್ದೇ ತಡ ಅವರು ಮೈಮರೆತು ನಿಂತರಂತೆ. ‘ಈ ಮಗುವಿಗೆ ದೈವಿಕಶಕ್ತಿ ಇರುವುದು ಖಂಡಿತ’ ಎಂದು ಹೇಳಿದರಂತೆ. ಮುಂದುವರಿದು ‘ಕರ್ನಾಟಕ ಸಂಗಿತ ಪ್ರಪಂಚದಲ್ಲಿ ಆ ಮಗುವಿಗೆ ಉನ್ನತಸ್ಥಾನ ಮೀಸಲಾಗಿದೆ’ ಎಂದು ಹೇಳಿ, ಮಗುವನ್ನು ಹೃತ್ಪೂರ್ವಕವಾಗಿ ಆಶೀರ್ವದಿಸಿದರಂತೆ.

ಮಗುವಿಗೆ ೫ ವರ್ಷ ತುಂಬಿದ ಕೂಡಲೇ ಅವನನ್ನು ಆ ಊರಿನಲ್ಲಿದ್ದ ಪಾಠಶಾಲೆಗೆ ಸೇರಿಸಿದರು. ಎರಡನೇ ಮಗ ಸುಬ್ರಹ್ಮಣ್ಯನಿಗೂ ಸಂಗೀತಶಿಕ್ಷಣ ಮನೆಯಲ್ಲೇ ಆರಂಭವಾಯಿತು. ಸ್ವಲ್ಪಕಾಲದ ನಂತರ ಅವನೂ ಪಾಠಶಾಲೆಗೆ ಸೇರಿಸಲ್ಪಟ್ಟನು. ಹೀಗೆ ಸಹೋದರರಿಬ್ಬರೂ ಜೊತೆಯಲ್ಲಿ ಎರಡು ಬಗೆ ವಿದ್ಯೆ ಕಲಿಯತೊಡಗಿದರು. ಮನೆಯಲ್ಲಿ ಸಂಗೀತಶಿಕ್ಷಣ ಇಬ್ಬರಿಗೂ ಏಕಕಾಲದಲ್ಲಿ ನಡೆಯುತ್ತಿತ್ತು. ಹೊರಗಡೆ ಎಲ್ಲಾದರೂ ಹಾಡಬೇಕಾದಲ್ಲಿ ಇಬ್ಬರೂ ಸೇರಿಯೇ ಹಾಡುವುದು ಮೊದಲಾಯಿತು. ಎರಡು ಶಾರೀರಗಳು ಬೆರೆತಾಗ ಒಂದೇ ಶಾರೀರದಂತೆ ಇದ್ದವು. ಇಬ್ಬರದೂ ಕಂಚಿನಂಥ ಕಂಠಗಳು. ಇವೆರಡೂ ಬೆರೆತಾಗ ಮಾಧುರ್ಯ ಇಮ್ಮಡಿಸುತ್ತಿತ್ತು.

ಅನಂತ ಭಾಗವತರ ಮನೆಗೆ ಅನೇಕ ವಿದ್ವಾಂಸರು ಆಗಿಂದಾಗ್ಗೆ ಬಂದು ಹೋಗುವ ವಾಡಿಕೆ. ಅಂಥವರು ಬಂದಾಗಲೆಲ್ಲ ಮಕ್ಕಳ ಹಾಡಿಕೆ ಕೇಳಿಸುವ ಅವಕಾಶ ಭಾಗವತರಿಗೆ ಇರುತ್ತಿತ್ತು. ಮಕ್ಕಳಿಗೂ ಆ ವಿದ್ವಾಂಸರ ಸಂಗೀತವನ್ನು ಕೇಳುವ ಅವಕಾಶ ಇರುತ್ತಿತ್ತು. ಹೀಗಾಗಿ ಸದಾಕಾಲ ಸಂಗೀತ ಅವರ ಕಿವಿಗೆ ಬೀಳುತ್ತಲೇ ಇತ್ತು. ಇಡೀ ವಾತಾವರಣವೇ ಸಂಗೀತಮಯವಾಗಿತ್ತು. ವಿದ್ವಾಂಸರ ಸಂಭಾಷಣೆಯೂ ಸಂಗೀತಕ್ಕೆ ಸಂಬಂಧ ಪಟ್ಟದ್ದೇ ಆಗಿರುತ್ತಿತ್ತು. ಅಪರಿಚಿತ ವ್ಯಕ್ತಿಗಳ ಸಮ್ಮುಖದಲ್ಲಿ ಹಾಡುವ ಅವಕಾಶ ಸಣ್ಣ ವಯಸ್ಸಿನಲ್ಲೇ  ಲಭಿಸಿದರೆ ಅದರಿಂದ ಉಂಟಾಗುವ ಪ್ರಯೋಜನ ಮಹತ್ವಪೂರ್ಣ ವಾದುದು. ಮುಖ್ಯ ಅವರಲ್ಲಿ ಧೈರ್ಯ ಬೆಳೆಯುತ್ತದೆ. ಇದು ಸಂಗೀತಗಾರನಿಗೆ ಅತ್ಯಾವಶ್ಯಕವಾದ ಗುಣ ಎಂಬುದನ್ನು ಮರೆಯಬಾರದು. ಅಲ್ಲದೆ, ಬೇರೊಬ್ಬರಿಂದ ‘ಶಹಬಾಷ್’ ಎನ್ನಿಸಿಕೊಂಡರೆ ಹಾಡುವವನಿಗೆ ಉತ್ಸಾಹ ಹೆಚ್ಚುತ್ತದೆ. ಅದರಲ್ಲೂ ಕಿರಿಯ ಕಲಾವಿದನಿಗೆ ಅದು ಹೆಚ್ಚಿನ ಸ್ಫೂರ್ತಿಯನ್ನು ಕೊಡುತ್ತದೆ. ಈ ಕಾರಣಗಳಿಂದ ಚಂಬೈ ಸಹೋದರರ ಸಂಗೀತ ಅವ್ಯಾಹತವಾಗಿ ಮುಂದೆ ಸಾಗಿತು. ಅವರ ಕೀರ್ತಿಯೂ ಹೆಚ್ಚುತ್ತಾ ಬಂತು. ಊರಿನಲ್ಲಿ ನಡೆಯುವ ಸಂಭ್ರಮ ಸಮಾರಂಭಗಳಲ್ಲೆಲ್ಲ ಅವರ ಹಾಡಿಕೆಯನ್ನು ಏರ್ಪಡಿಸಬೇಕೆಂಬ ಆಕಾಂಕ್ಷೆ ಜನರಲ್ಲಿ ಮೂಡತೊಡಗಿತು. ಆದರೆ ಅನಂತ ಭಾಗವತರಿಗೆ ಅಷ್ಟು ಬೇಗ ಕಛೇರಿ ಮಾಡುವುದಕ್ಕೆ ಮಕ್ಕಳನ್ನು ಕಳುಹಿಸುವುದು ಇಷ್ಟವಾಗಿರಲಿಲ್ಲ. ಆದರೆ ಜನಗಳೇ ಒತ್ತಾಯ ಪಡಿಸುತ್ತಿರುವಾಗ ‘ಒಲ್ಲೆ’ ಎಂದರೆ ಬೇಸರಪಟ್ಟು ಕೊಳ್ಳುತ್ತಾರೆ. ಈ ರೀತಿ ಇಕ್ಕಟ್ಟಿಗೆ ಸಿಕ್ಕಿಕೊಂಡರು.

ಮೊದಲನೆಯ ಕಛೇರಿ

ಆಗ ಅವರು ಒಂದು ತೀರ್ಮಾನಕ್ಕೆ ಬಂದರು. ಮಕ್ಕಳನ್ನು ಶುಭದಿನದಂದು ದೇವರ ಸನ್ನಿಧಿಯಲ್ಲಿ ಹಾಡಿಸಿ, ನಂತರ ಬೇರೆ ಸಂದರ್ಭಗಲ್ಲಿ ಹಾಡಿಸುವುದೆಂದು. ಅದೇ ಪ್ರಕಾರ, ಗೊತ್ತಾದ ದಿನ ದೇವರ ಸನ್ನಿಧಿಯಲ್ಲಿ ಕಛೇರಿ ನಡೆಯುವ ಏರ್ಪಾಡಾಯಿತು. ಊರಿನ ಜನ ಬಹಳ ಉತ್ಸಾಹದಿಂದ ಬಂದು ನೆರೆದರು. ಎಳೆಯ ವಿದ್ವಾಂಸ ರಿಬ್ಬರು ಪೀಠದ ಮೇಲೆ ಕುಳಿತಿರುವುದನ್ನು ನೋಡುವುದಕ್ಕೇ  ಒಂದು ಆನಂದ. ಇನ್ನು ಅವರು ಹಾಡಿದರೆಂದರೆ ಆ ಆನಂದ ಉಕ್ಕುತ್ತಿತ್ತು. ಆ ಸಂದರ್ಭದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸುಶ್ರಾವ್ಯವಾಗಿ ಹಾಡಿದರಂತೆ. ಸಭಿಕರಿಗೆ ಅವರ ಸಂಗೀತದಿಂದ ತುಂಬಾ ಸಂತೋಷ ಆಯಿತು. ಕಛೇರಿ ಮುಗಿದ ಕೂಡಲೇ ಮಕ್ಕಳಿಬ್ಬರೂ ಸಭೆಯಲ್ಲಿದ್ದ ಹಿರಿಯರಿಗೆಲ್ಲ ನಮಸ್ಕರಿಸಿ, ಮನಸಾರ ಹರಸಲ್ಪಟ್ಟರಂತೆ. ಇದೇ ಅವರ ಪ್ರಥಮ ಕಛೇರಿ.

ಇದಾದ ಕೂಡಲೇ ಅನೇಕ ಕಡೆಗಳಿಂದ ಆಹ್ವಾನ ಬರತೊಡಗಿದವು. ಕಛೇರಿಗಳು ಒಂದಾದಮೇಲೊಂದು ಜರುಗಿದವು. ಚಂಬೈ ಸಹೋದರರ ಹೆಸರು ಮನೆ ಮಾತಾಯಿತು.

ವೈದ್ಯನಾಥನಿಗೆ ಒಂಬತ್ತು ವರ್ಷ, ಸುಬ್ರಹ್ಮಣ್ಯನಿಗೆ ಏಳು ವರ್ಷ ಆಗಿದ್ದಾಗ ಇಬ್ಬರಿಗೂ ಉಪನಯನ ಆಯಿತು. ಈ ದಿನಗಳಲ್ಲಿ ಸಹೋದರರು ಸ್ವತಃ ಕಛೇರಿಗಳನ್ನು ಮಾಡುವುದಲ್ಲದೆ, ತಂದೆಯವರ ಸಂಗಡ ಬೇರೆ  ಊರುಗಳಿಗೂ ಹೋಗಿ ಬರುತ್ತಿದ್ದರು. ತಂದೆ ಪಿಟೀಲು ನುಡಿಸುವಾಗ ಕುತೂಹಲದಿಂದ ಕೇಳಿ ಅನೇಕ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಇದೇ ರೀತಿ ಇನ್ನೊಬ್ಬ ವಿದ್ವಾಂಸರ ಕಛೇರಿ ಕೇಳುವಾಗಲೂ ಮಾಡುತ್ತಿದ್ದುದರಿಂದ ಇವರ ಸಂಗೀತಜ್ಞಾನ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿತ್ತು. ಎಷ್ಟೋ ಕಡೆ ತಂದೆಯೇ ಪಕ್ಕವಾದ್ಯವನ್ನು ನುಡಿಸುತ್ತಿದ್ದರು. ಕಾರ್ಯಕ್ರಮ ಮುಗಿದು ಮನೆಗೆ ಬಂದಮೇಲೆ ತಂದೆ ಮಕ್ಕಳಿಗೆ ಕಛೇರಿ ವಿಷಯವಾಗಿ ಪ್ರಶ್ನೋತ್ತರಗಳು ನಡೆಯುತ್ತಿದ್ದವು. ಹೀಗೆ ಮಾಡುತ್ತಿದ್ದುದರಿಂದ ಮಕ್ಕಳ ಸಂಗೀತ ಮತ್ತು ವ್ಯವಹಾರಜ್ಞಾನ ಹೆಚ್ಚುತ್ತಿತ್ತು. ಸಂದೇಹಗಳೆಲ್ಲ ಬಗೆಹರಿಯುತ್ತಿದ್ದವು.

ಚಂಬೈ ಸಹೋದರರು ಕಛೇರಿಗಳನ್ನು ಮಾಡುತ್ತಿದ್ದುದು  ಹೆಚ್ಚಿದಂತೆ ಅವರು ಇತರರ ಕಛೇರಿಗಳನ್ನು  ಕೇಳುವುದೂ ಹೆಚ್ಚಿತು. ಉತ್ತಮ ಸಂಗೀತಗಾರನಾಗಬೇಕಾದರೆ ಇವೆರಡು ಚಟುವಟಿಕೆಗಳೂ ಚುರುಕಾಗಿ ಇರಬೇಕು. ಅನ್ಯ ವಿದ್ವಾಂಸರ ಸಂಗೀತದಿಂದ ಉತ್ತಮವಾದ ಅಂಶಗಳನ್ನು ಗ್ರಹಿಸಿಕೊಂಡು ತಮ್ಮ ಸಾಧನೆ ಯಿಂದ ಅವುಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕು. ಚಂಬೈ ಸಹೋದರರು ಈ ಕೆಲಸವನ್ನು ತಪ್ಪದೇ ಮಾಡುತ್ತಿದ್ದರು. ಆದುದರಿಂದಲೇ ಅವರ ಸಂಗೀತ ಹೆಚ್ಚು ಹೆಚ್ಚು ರಸಿಕರಿಗೆ ರುಚಿಸುತ್ತ ಬಂದಿತು.

ಈ ಮಧ್ಯೆ ಚಂಬೈ ಸಹೋದರರಿಗೆ ಒಂದು ಅಪೂರ್ವ ಸನ್ನಿವೇಶದಲ್ಲಿ ಹಾಡುವ ಅವಕಾಶ ಒದಗಿಬಂತು. ವೈಕ್ಕಂ ಎಂಬುದೊಂದು ಪುಣ್ಯಸ್ಥಳ. ಆ ಊರಿನ ಈಶ್ವರ ದೇವಸ್ಥಾನದಲ್ಲಿ ಪ್ರತಿವರ್ಷವೂ ಕಾರ್ತೀಕಮಾಸದಲ್ಲಿ ದೊಡ್ಡ ಉತ್ಸವ ನಡೆಯುತ್ತದೆ. ಅದನ್ನು ಸಂದರ್ಶಿಸಲು ಸಾವಿರಾರು ಯಾತ್ರಾರ್ಥಿಗಳು ಬಂದು ಸೇರುತ್ತಾರೆ. ೧೯೦೭ನೇ ಇಸವಿಯಲ್ಲಿ ಉತ್ಸವದ ಸಮಯದಲ್ಲಿ ಚಂಬೈ ಸಹೋದರರ ಹಾಡಿಕೆ ಗೊತ್ತುಮಾಡಲ್ಪಟ್ಟಿತು. ಬಾಲಕರು ಬಹಳ ಭಯಭಕ್ತಿಯಿಂದ ಪೀಠವನ್ನೇರಿ, ತಂದೆಯವರ ಪಕ್ಕವಾದ್ಯಗಳೊಡನೆ ಹಾಡತೊಡಗಿದರು. ಭಕ್ತಿರಸದಿಂದ ತುಂಬಿತುಳುಕುತ್ತಿದ್ದ ಆ ಕಛೇರಿ ಬಹು ಯಶಸ್ವಿಯಾಗಿ ನಡೆಯಿತು. ಅವರ ಕೀರ್ತಿ ಮತ್ತೂ ಹೆಚ್ಚಿತು.

ವೈಕ್ಕಂ ಕ್ಷೇತ್ರದಷ್ಟೆ ಪವಿತ್ರವಾದದ್ದು ಗುರುವಾಯೂರು. ಬಾಲರೂಪಿಯಾದ ಕೃಷ್ಣ ಪರಮಾತ್ಮ ಭಕ್ತರಿಗೆ ಕೇಳಿದ ವರವನ್ನು ಕೊಡತಕ್ಕವನೆಂದು ಪ್ರಸಿದ್ಧಿ. ಅಲ್ಲೂ ಕಾರ್ತೀಕಮಾಸದಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ. ಅಲ್ಲಿಂದಲೂ ಆಹ್ವಾನ ಬಂದದ್ದರಿಂದ ಸಹೋದರರು ತಂದೆಯೊಡನೆ ಪ್ರಯಾಣ ಮಾಡಿದರು. ಅನಂತ ಭಾಗವತರಿಗೆ ಗುರುವಾಯೂರು ದೇವರಲ್ಲಿ ಅನನ್ಯಭಕ್ತಿ, ಮಕ್ಕಳಿಗೂ ಅಷ್ಟೆ. ಎಳೆತನದಲ್ಲಿ ಅಂಕುರಿಸಿದ ಭಕ್ತಿ ಬಾಲಕ ವ್ಯೆದ್ಯನಾಥನಿಗೆ ಜೀವಿತದ ಕೊನೆಯ ಘಳಿಗೆಯವರೆಗೂ ಏಕಪ್ರಕಾರವಾಗಿ ಉಳಿಯಿತು. ವ್ಯೆದ್ಯನಾಥನಿಗೆ ಅಂದಿನಿಂದ ಗುರುವಾಯೂರಪ್ಪನಲ್ಲಿ ವಿಶೇಷವಾದ ಭಕ್ತಿ ಉಂಟಾದುದರಲ್ಲಿ ಆಶ್ಚರ್ಯವೇನಿಲ್ಲ. ಪ್ರತಿವರ್ಷವೂ ಉತ್ಸವಕಾಲದಲ್ಲಿ ಹಾಡುವ ಅವಕಾಶ ಅವರಿಗೆ ಕಾದಿರಿಸಲ್ಪಟ್ಟಿತು. ೧೯೪೧ರಲ್ಲಿ ಆ ಊರಿನಲ್ಲೇ ಒಂದು ಮನೆಯನ್ನು ಕೊಂಡುಕೊಂಡು ಉತ್ಸವ ಕಾಲ ಪೂರ್ತಿ ಅಲ್ಲಿ ಸಂಸಾರ ಸಮೇತ ತಂಗಿರುವುದು ಅವರ ಕರ್ತವ್ಯವಾಯಿತು.

ಎಂಬತ್ತನೆಯ ವಯಸ್ಸಿನಲ್ಲಿ ಅವರು ಹಾಡುತ್ತಲೇ ಗುರುವಾಯೂರು ದೇವರ ಸನ್ನಿಧಿಯಲ್ಲಿ ಕೊನೆಯ ಉಸಿರನ್ನು ಎಳೆದರು.

ಸಂಚಾರ

ಒಮ್ಮೆ ನಟೇಶ ಶಾಸ್ತ್ರಿ ಎಂಬ ಹರಿಕಥಾ ವಿದ್ವಾಂಸರ ಪರಿಚಯ ಆಯಿತು. ಅವರು ವೇದ ಶಾಸ್ತ್ರಗಳಲ್ಲಿ ಮಹಾಪಂಡಿತರು. ಒಳ್ಳೆಯ ಸಂಗೀತ ಜ್ಞಾನವುಳ್ಳವರು. ತಮಿಳುನಾಡಿನ ಹಳ್ಳಿ ಹಳ್ಳಿಗಳಲ್ಲೂ ಜನ ಇವರ ಕಥಾಕಾಲಕ್ಷೇಪವನ್ನು ಕೇಳಲು ಹಾತೊರೆಯುತ್ತಿದ್ದರು. ಅನೇಕ ಕಡೆ ಸಂಚರಿಸಿ ಕಥಾಕಾಲಕ್ಷೇಪಮಾಡಿ ಜನಗಳ ಮನಸ್ಸನ್ನು ಸೂರೆಗೊಳ್ಳುತ್ತಿದ್ದುದನ್ನು ಕೇಳಿ ಚಂಬೈ ಜನಗಳೂ ಅವರನ್ನು ಊರಿಗೆ ಬರಮಾಡಿಕೊಂಡರು. ಅಲ್ಲಿಯೂ ಅವರ ಕಥಾಕಾಲಕ್ಷೇಪ ಅಮೋಘವಾಗಿ ನಡೆಯಿತು. ಅನಂತ ಭಾಗವತರು ಕುಟುಂಬ ಸಮೇತರಾಗಿ ಹರಿಕಥೆಯನ್ನು ಕೇಳಲು ಹೋದರು. ಅವರಿಗೆ ಹರಿಕಥೆಯನ್ನು ಕೇಳಿ ರೋಮಾಂಚನಕಾರಿಯಾದ ಅನುಭವ ಆಯಿತು. ಶಾಸ್ತ್ರಿಗಳನ್ನು ತಮ್ಮ ಮನೆಗೆ ಕರೆದು ತಂದು ಎಲ್ಲ ಉಪಚಾರಗಳನ್ನು ಮಾಡಿದರು. ತಮ್ಮ ಮಕ್ಕಳನ್ನು ಅವರ ಮುಂದೆ ಹಾಡಿಸಿದರು. ‘ಅದ್ಭುತವಾಗಿದೆ’ ಎಂದು ಶಾಸ್ತ್ರಿಗಳು ಮುಕ್ತಕಂಠದಿಂದ  ಹೊಗಳಿದರು. ಅನಂತರ ಅನಂತ ಭಾಗವತರನ್ನು ಕುರಿತು, ‘ನಿಮ್ಮ ಮಕ್ಕಳನ್ನು ಸ್ವಲ್ಪಕಾಲ ನನ್ನ ಸಂಗಡ ಕಳುಹಿಸಬೇಕು, ಇದು ನನ್ನ ಹೆಬ್ಬಯಕೆ’ ಎಂದು ಹೇಳಿದರು. ಅದನ್ನು ಕೇಳಿ ಅನಂತ ಭಾಗವತರು ಸ್ವಲ್ಪವೂ ಹಿಂದು ಮುಂದೆ ಆಲೋಚಿಸದೆ ಅನುಮತಿ ಕೊಟ್ಟರು. ಮಕ್ಕಳಿಗಂತೂ ಹಿಡಿಸದಷ್ಟು ಸಂತೋಷ, ಕೆಲವು ದಿನಗಳ ನಂತರ ಶಾಸ್ತ್ರಿಗಳ ಜೊತೆಯಲ್ಲಿ ಹೊರಟರು.

ಬಹಳ ಉಪಕಾರಮನೋಭಾವವುಳ್ಳ ಶಾಸ್ತ್ರಿಗಳು ಹೇಗಾದರೂ ಮಾಡಿ ಈ ಸಹೋದರರನ್ನು ಮುಂದೆ ತರಬೇಕೆಂದು ನಿಶ್ವಯಿಸಿದರು. ಆದುದರಿಂದ ತಮ್ಮ ಕಥಾ ಕಾಲಕ್ಷೇಪ ನಡೆಯುತ್ತಿದ್ದಾಗ ಬರುವ ಮುಖ್ಯ ಘಟ್ಟಗಳಲ್ಲಿ ಸ್ವಲ್ಪಹೊತ್ತು ಚಂಬೈ ಸಹೋದರರಿಂದ ಹಾಡಿಸುತ್ತಿದ್ದರು. ಉದಾಹರಣೆಯಾಗಿ, ಸೀತಾ ಜನನ, ರಾಧಾ ಕಲ್ಯಾಣ, ರುಕ್ಮಿಣಿ ಕಲ್ಯಾಣ ಇತ್ಯಾದಿ ಘಟ್ಟಗಳು. ಇದು ಒಂದು ಹೊಸ ಮಾದರಿ ಕಾಲಕ್ಷೇಪ ಎಂದು ಪ್ರಸಿದ್ಧಿ ಆಯಿತು. ಜನಗಳಲ್ಲಿ ಮತ್ತೆ ಮತ್ತೆ ಕೇಳಬೇಕೆಂಬ ಆಸೆಯನ್ನು ಕೆರಳಿಸಿತು. ಹೀಗೆ ಶಾಸ್ತ್ರಿಗಳು, ಸಹೋದರರು ಪರಸ್ಪರ ಒಬ್ಬರಿಗೊಬ್ಬರ ಕೀರ್ತಿಯನ್ನು ಹೆಚ್ಚಿಸಿದಂತೆ ಆಯಿತು.

ಹೀಗೆ ಒಂದು ವರ್ಷಕಾಲ ಅನೇಕ ಊರುಗಳಲ್ಲಿ ಈ ಕಾರ್ಯಕ್ರಮವು ನಡೆಯಿತು. ಎಷ್ಟೋ ಊರುಗಳಲ್ಲಿ ಸಹೋದರರ ಕಛೇರಿಗಳು ದೇವಾಲಯಗಳಲ್ಲಿ ಹಾಗೂ ಕಲ್ಯಾಣ ಮಂಟಪಗಳಲ್ಲಿ ಪ್ರತ್ಯೇಕವಾಗಿ ನಡೆದವು. ಅವರಿಗೆ ಕೈತುಂಬ ಹಣವೂ ಸಂಪಾದನೆಯಾಯಿತು, ಹೆಸರೂ ಬಂತು. ಪ್ರವಾಸ ಮುಗಿದನಂತರ ಚಂಬೈಗೆ ಮರಳಿಬಂದು ಸೇರಿದರು.

ಮಠಪ್ಪುರಂ ಗುರುಪೂಜೆ

ತಿರೂವಾರೂರು ಎಂಬೊಂದು ಪುಣ್ಯಕ್ಷೇತ್ರ. ಅಲ್ಲಿ ಮಠಪ್ಪುರಂ ಎಂಬ ಸ್ಥಳದಲ್ಲಿ ಗುರುಪೂಜೆ ಬಹಳ ವಿಶೇಷವಾಗಿ ನಡೆಯುತ್ತದೆ. ಆ ಸಂದರ್ಭದಲ್ಲಿ ಸಂಗೀತ ಕಛೇರಿಗಳೂ ಏರ್ಪಾಡಾಗುತ್ತಿದ್ದವು. ಮಹಾ ವಿದ್ವಾಂಸರೆಲ್ಲ ಬಂದು ಹಾಡಿ ಗುರುಸೇವೆ ಮಾಡುತ್ತಿದ್ದರು. ಅಲ್ಲಿ ಹಾಡುವುದೇ ಒಂದು ಗೌರವ ಎಂಬ ಭಾವನೆ. ನಟೇಶಶಾಸ್ತ್ರಿಗಳ ಕಥಾಕಾಲಕ್ಷೇಪ ಆಗಾಗ್ಗೆ ನಡೆಯುತ್ತಿತ್ತು. ಶಾಸ್ತ್ರಿಗಳು ಒಮ್ಮೆ ಈ ಸಹೋದರರನ್ನು ಕರೆದುಕೊಂಡು ಹೋಗಿದ್ದರು. ದೊಡ ಸಭೆ, ಅನೇಕ ಹಿರಿಯ ಸಂಗೀತ ವಿದ್ವಾಂಸರು ಸೇರಿದ್ದರು. ಆ ಸಭೆಯಲ್ಲಿ ಸಹೋದರರು ಅಮೋಘವಾಗಿ ಹಾಡಿದರು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅಂಥ ಸಭೆಯ ಮುಂದೆ ದಿಟ್ಟತನದಿಂದ ಕಛೇರಿ ಮಾಡಿದ್ದು ಪಂಡಿತ ಪಾಮರರೆಲ್ಲರಿಗೂ ಅತ್ಯಾಶ್ಚರ್ಯ ಆನಂದಗಳನ್ನು ಉಂಟುಮಾಡಿತು. ಅಲ್ಲಿ ನೆರೆದಿದ್ದ ವಿದ್ವಾಂಸರ ಪೈಕಿ ಪುದುಕೋಟೈ ದಕ್ಷಿಣಾಮೂರ್ತಿ ಪಿಳ್ಳೆ ಎಂಬುವರೊಬ್ಬರು ಪ್ರಸಿದ್ಧ ಮೃದಂಗವಾದಕರು. ‘ಲಯಬ್ರಹ್ಮ’ ಎಂದು ಹೆಸರು ಪಡೆದವರು. ಸಂಗೀತ ಪ್ರಪಂಚದಲ್ಲಿ ಬಹಳ ಗೌರವಕ್ಕೆ ಪಾತ್ರರಾದ ವ್ಯಕ್ತಿ. ಸಹೋದರರ ಕಛೇರಿಯನ್ನು ಅವರು ಮೊಟ್ಟಮೊದಲು ಕೇಳಿ ಸಂತೋಷಪಟ್ಟರು. ಕಛೇರಿ ಮುಗಿದಮೇಲೆ ಶಾಸ್ತ್ರಿಗಳ ಬಳಿಹೋಗಿ ಬಾಲಕರ ವಿಷಯವಾಗಿ ಎಲ್ಲ ವಿವರಗಳನ್ನು ತಿಳಿದುಕೊಂಡರು. ಪಿಳ್ಳೆಯವರಿಗೆ ಶಾಸ್ತ್ರಿಗಳು ಸಹೋದರರನ್ನು ಪರಿಚಯ ಮಾಡಿಕೊಟ್ಟರು. ತಮ್ಮ ಕೈಲಾದಷ್ಟು ಪ್ರೋತ್ಸಾಹ ಕೊಟ್ಟು, ಅವರನ್ನು ಮುಂದೆ ತರಬೇಕೆಂದು ಪಿಳ್ಳೆಯವರನ್ನು ಪ್ರಾರ್ಥಿಸಿಕೊಂಡರು. ಅದಕ್ಕೆ ಉತ್ತರವಾಗಿ ಪಿಳ್ಳೆಯವರು, ‘ತಮ್ಮಿಂದ ಸಾಧ್ಯವಾದದ್ದನ್ನೆಲ್ಲಾ ಮಾಡುತ್ತೇನೆ.’ ಎಂದು ಹೇಳಿದರು. ಒಟ್ಟಿನಲ್ಲಿ, ಪಿಳ್ಳೆಯವರ ಪರಿಚಯ ಬಾಲಕರ ಜೀವನದಲ್ಲಿ ಒಂದು ಮುಖ್ಯ ಘಟನೆ.

ತಮಗಿಂತ ಹಿಂದಿನ ತಲೆಮಾರಿಗೆ ಸೇರಿದ ಮಹಾವಿದ್ವಾಂಸರ ಪೈಕಿ ದಕ್ಷಿಣಾಮೂರ್ತಿ ಪಿಳ್ಳೆಯವರೂ ಒಬ್ಬರು. ಅವರ ಸ್ನೇಹ ತಾನಾಗಿಯೇ ಉಂಟಾದದ್ದು ಸಹೋದರರ ಸುಯೋಗವೆಂದೇ ಹೇಳಬೇಕು. ಇದೇ ರೀತಿ ಇನ್ನೂ ಅನೇಕ ಹಿರಿಯ ವಿದ್ವಾಂಸರು ಆಗ ಜನರ ಮೆಚ್ಚುಗೆ ಮನ್ನಣೆಗಳಿಗೆ ಪಾತ್ರರಾಗಿದ್ದರು. ನಟೇಶ ಶಾಸ್ತ್ರಿಗಳೊಡನೆ ಸಂಚರಿಸುತ್ತಿದ್ದಾಗ ಅವರ ಕಛೇರಿಗಳನ್ನು ಕೇಳತಕ್ಕ ಅವಕಾಶ ಬಾಲಕರಿಗೆ ಸಿಕ್ಕಿತು. ಸಂಗೀತ ಕೇಸರಿ ಕಲ್ಲಿಡೈಕುರಿಬ್ಚಿ ವ್ಯೆದ್ಯನಾಥ ಭಾಗವತರ್, ರಾಮನಾಡ್ ಶ್ರೀನಿವಾಸಯ್ಯಂಗಾರ್, ಗಾಯಕ ಶಿಖಾಮಣಿ ಮುತ್ತಯ್ಯ ಭಾಗವತರ್, ಮಧುರೈ ಪುಷ್ಟವನಂ, ವೇಣುಗಾನ ಶರಭಶಾಸ್ತ್ರಿಗಳು, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್, ಗೋವಿಂದಸ್ವಾಮಿ ಪಿಳ್ಳೆ ಇಂತಹ ಶ್ರೇಷ್ಠ ಸಂಗೀತ ವಿದ್ವಾಂಸರ ಸಂಗೀತವನ್ನು ಅವರು ಕೇಳಿದರು.

ಹಿರಿಯ ವಿದ್ವಾಂಸರ ಮೆಚ್ಚುಗೆ

ವ್ಯೆದ್ಯನಾಥನ ೧೫ನೇ ವಯಸ್ಸಿನಲ್ಲಿ ನಡೆದ ಒಂದು ಸಂಗತಿ ಸ್ಮರಣಾರ್ಹವಾಗಿದೆ. ಅದೇನೆಂದರೆ, ಆ ವರ್ಷ ಪಾಲಘಾಟ್ ಡಿಸ್ಟ್ರಿಕ್ಟ್‌ಗೆ ಸೇರಿದ ಶೇಖರೀಪುರದಲ್ಲಿ ನಡೆದ ಕಛೇರಿ. ಮೂಮೂಲಿನಂತೆ ತುಂಬಿದ ಸಭೆ. ದೊಡ್ಡ ದೊಡ್ಡ ಸಂಗೀತ ವಿದ್ವಾಂಸರೂ ಅಲ್ಲಿ ಹಾಜರಿದ್ದರು. ಅಂಥ ಸಭೆಯ ಮುಂದೆ ಹಾಡುವುದೆಂದರೆ ಸಹೋದರರಿಗೆ ವಿಶೇಷ ಉತ್ಸಾಹ. ಪ್ರಾರಂಭದಿಂದಲೇ ಜನ ಸೇರಿದರು. ವ್ಯೆದ್ಯನಾಥನ ಶಾರೀರ ಅಷ್ಟು ಮೋಹಕ. ಸಾಮಾನ್ಯವಾಗಿ ಸಂಗೀತಗಾರನಿಗೆ ಅರ್ಧ ಅಥವಾ ಮುಕ್ಕಾಲು ಗಂಟೆ ಆದಮೇಲೆ ಉತ್ಸಾಹ ಏರುತ್ತದೆ. ಅಲ್ಲಿಂದಾಚೆ ಕಛೇರಿ ಕಳೆಗಟ್ಟುತ್ತದೆ. ಅಂದರೆ, ಕೇಳುವವರ ಮನಸ್ಸನ್ನು ಕಲಕುತ್ತದೆ. ವ್ಯೆದ್ಯನಾಥನ ಹಾಡಿಕೆಯಾದರೋ, ಪ್ರಾರಂಭದಿಂದಲೇ ಆ ಮಟ್ಟದಲ್ಲಿರುತ್ತಿತ್ತು. ಕಾರಣ, ಆತನ ಶಾರೀರ ಸಂಪತ್ತು. ಅಂಥ ಶಾರೀರ ದೈವಾನುಗ್ರಹದಿಂದ ಪಡೆಯಬೇಕೇ ವಿನಾ ಮನುಷ್ಯ ಪ್ರಯತ್ನದಿಂದಲ್ಲ. ಅಂತೂ ಆ ದಿನದ ಕಛೇರಿ ಬಹು ಚೆನ್ನಾಗಿ ನಡೆಯಿತು. ಸಭೆಯಲ್ಲಿದ್ದವರೆಲ್ಲ ಆನಂದಪರವಶರಾಗಿದ್ದರು. ಅಲ್ಲಿ ಹಾಜರಿದ್ದ ಘನವಿದ್ವಾಂಸರಲ್ಲಿ ಒಬ್ಬರಾದ ಅನಂತ ರಾಮಭಾಗವತರು ವಯೋವೃದ್ಧರೂ, ಜ್ಞಾನವೃದ್ಧರೂ ಆಗಿದ್ದರು. ಕಛೇರಿ ಮುಗಿದ ಮೇಲೆ ಎದ್ದುನಿಂತು, ಸಭೆಯನ್ನುದ್ದೇಶಿಸಿ ಈ ಮಾತುಗಳನ್ನಾಡಿದರು: ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತು ಚಂಬೈ ಸಹೋದರರಿಗೆ ಅನ್ವರ್ಥವಾಗಿದೆ. ಆಟವಾಡುವ ವಯಸ್ಸಿನಲ್ಲಿ ಇಷ್ಟು ಸೊಗಸಾಗಿ ಪಾಂಡಿತ್ಯ ಪೂರ್ಣವಾಗಿ ಹಾಡುವುದೆಂದರೆ ಅದು ದೈವಾನುಗ್ರಹವೇ ಹೊರತು ಬೇರೆ ಅಲ್ಲ. ಇಂಥ ಶಾರೀರವನ್ನು ನಾನು ಹಿಂದೆಂದೂ ಕೇಳಿಯೇ ಇಲ್ಲ. ಈ ಸಹೋದರರು ಬರುವ ದಿನಗಳಲ್ಲಿ ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಅಗ್ರಗಣ್ಯರೆನಿಸುತ್ತಾರೆಂಬುದರಲ್ಲಿ ನನಗೆ ಪೂರ್ಣ ನಂಬಿಕೆಯಿದೆ.’

ವಿವಾಹ

ಅದೇ ಸಮಯದಲ್ಲಿ ವ್ಯೆದ್ಯನಾಥರಿಗೆ ವಿವಾಹ ವಾಯಿತು. ಹುಡುಗಿ ಅದೇ ಊರಿನ ವಾಸುದೇವ ಶಾಸ್ತ್ರಿಗಳ ಮಗಳು. ಹೆಸರು ಮೀನಾಕ್ಷಿ. ವಿವಾಹದ ನಂತರ ವ್ಯೆದ್ಯನಾಥರಿಗೆ ಜವಾಬ್ದಾರಿ ಹೆಚ್ಚಿತೆನ್ನಬಹುದು. ತಂದೆಯವರು ಮನೆಯಲ್ಲೂ ಅನೇಕಮಂದಿ ಶಿಷ್ಯರಿಗೆ ಪಾಠ ಹೇಳಿಕೊಡುತ್ತಿದ್ದರೆಂದು ಹಿಂದೆಯೇ ತಿಳಿಸಿದೆ. ಈಗ ಅವರಿಗೆ ತಮ್ಮ ಭಾರ ಕಡಿಮೆ ಮಾಡಿಕೊಳ್ಳಬೇಕೆಂಬ ಆಲೋಚನೆ ಉಂಟಾಯಿತು. ಅದೇ ಪ್ರಕಾರ ತಮ್ಮ ಶಿಷ್ಯರಿಗೆ ಪಾಠ ಹೇಳಿಕೊಡುವ ಕೆಲಸವನ್ನು ವ್ಯೆದ್ಯನಾಥರಿಗೆ ವಹಿಸಿ ಕೊಟ್ಟರು. ಅಂದಿನಿಂದ ಅಂದರೆ, ತಮ್ಮ ೧೬ನೆ ವಯಸ್ಸಿ ನಿಂದ ಪ್ರಾರಂಭಿಸಿದ ವಿದ್ಯಾದಾನ ಕಾರ್ಯವನ್ನು ೮೦ನೇ ವಯಸ್ಸಿನವರೆಗೂ ನಿರ್ವಿಘ್ನವಾಗಿ ನಡೆಸಿದರು. ನೂರಾರು ಜನ ಅವರಿಂದ ಸಂಗೀತ ಕಲಿತು ಇಂದು ಪ್ರಸಿದ್ಧರಾಗಿದ್ದಾರೆ.

ಗಂಟಲಿಗೆ  ಗ್ರಹಣ

ಈ  ಸಂದರ್ಭದಲ್ಲಿ ವ್ಯೆದ್ಯನಾಥರಿಗೆ ಗಂಟಲು ಬೇನೆ ಪ್ರಾರಂಭವಾಯಿತು. ಈ ವ್ಯಾಧಿಯನ್ನು ಗುಣಪಡಿಸಲು ಎಲ್ಲ ಬಗೆಯ ಪ್ರಯತ್ನಗಳೂ ನಡೆದವು. ಆದರೂ ಸ್ವಲ್ಪವೂ ಗುಣವಾಗಲಿಲ್ಲ. ಅವರಿಗೆ ಹಾಡಲು ಸಾಧ್ಯವಾಗುತ್ತಿರಲಿಲ್ಲ. ವ್ಯೆದ್ಯನಾಥರಿಗೆ ಕತ್ತಲೆ ಕವಿದಂತಾಯಿತು. ಬಗೆ ಹರಿಯದ ಸಂಕಟ ಅನುಭವಿಸಿಯೇ ತೀರಬೇಕಾಯಿತು.

ಹೀಗಿರುವಲ್ಲಿ ವ್ಯೆದ್ಯನಾಥರಿಗೆ ಒಂದು ಹೊಸ ಮಾರ್ಗ ಹೊಳೆಯಿತು. ಅದೇನೆಂದರೆ, ಪಿಟೀಲು ವಾದ್ಯ ವನ್ನು ಅಭ್ಯಾಸಮಾಡುವುದು. ತಂದೆ ಅನಂತಭಾಗವತರು ಪಿಟೀಲು ವಾದನದಲ್ಲಿ ನಿಪುಣರು. ವ್ಯೆದ್ಯನಾಥರು ತಾವೂ ಆ ವಾದ್ಯವನ್ನು ಸಾಧನೆ ಮಾಡಬೇಕೆಂದು ಈಗ ನಿಶ್ಚಯಿಸಿದರು. ಇಷ್ಟು ದಿನ ಆಗಾಗ ಹೊತ್ತು ಕಳೆಯುವ ಸಲುವಾಗಿ ಆ ವಾದ್ಯವನ್ನು ವ್ಯೆದ್ಯನಾಥರು ನುಡಿಸುತ್ತಿದ್ದುದೂ ಉಂಟು. ಈಗ ನಿರಂತರ ಸಾಧನೆಯಲ್ಲಿ ತೊಡಗಿದರು. ನುರಿತ ಗಾಯಕನಾದ್ದರಿಂದ ಸ್ವಲ್ಪಕಾಲದಲ್ಲೇ ಆ ವಾದ್ಯದ ಮೇಲೆ ಹತೋಟಿ ಬಂದಿತು. ಆ ವೇಳೆಗೆ ಸಹೋದರಿ ನಾರಾಯಣಿಯಮ್ಮನಿಗೆ ಮದುವೆಯಾಗಿತ್ತು. ಆಕೆಯ ಗಂಡನ ಹೆಸರು ಅನಂತ ಭಾಗವತರೆಂದು. ಅವರು ವೇಣುವಾದಕರಾಗಿದ್ದರು. ಕಛೇರಿಗಳೂ ನಡೆಯುತ್ತಿದ್ದವು. ವ್ಯೆದ್ಯನಾಥನಿಗೆ ಇದೊಂದು ಸುಸಮಯ ಸಿಕ್ಕಿತು. ಭಾವನೊಡನೆ ಪಕ್ಕವಾದ್ಯ ನುಡಿಸುವ ಹವ್ಯಾಸ ಉಂಟಾಯಿತು. ಒಳ್ಳೆಯ ಹೆಸರೂ ತಕ್ಕಮಟ್ಟಿಗೆ ಸಂಪಾದನೆಯೂ ಆದವು. ಹೀಗೆ ಒಂದು ವರ್ಷ ಕಳೆಯಿತು.

ಇದ್ದಕ್ಕಿದ್ದಂತೆಯೇ ಕಟ್ಟಿದ್ದ ಗಂಟಲು ಸ್ವಲ್ಪ ಸ್ವಲ್ಪವಾಗಿ ಬಿಡುತ್ತಾ ಬಂತು. ಕೊಂಚ ಕಾಲದಲ್ಲಿಯೇ ಮೊದಲಿನ ಸ್ಥಿತಿಗೆ ಬಂತು. ಆಗ ಉಂಟಾದ ಸಂತೋಷ ಹೇಳತೀರದು.

ಕರೂರು ಎಂಬ ಊರಿನಲ್ಲಿ ಒಬ್ಬ ಶ್ರೀಮಂತ ರಿದ್ದರು. ಅವರ ಹೆಸರು ಪೆದ್ದಾಚ್ಚಿ ಚೆಟ್ಟಿಯಾರ್ ಎಂದು. ಅವರಿಗೆ ಸಂಗೀತ ಎಂದರೆ ಬಹಳ ಇಷ್ಟ. ಯಥೇಚ್ಛವಾಗಿ ಹಣ ಇದ್ದುದರಿಂದ ಪ್ರತಿವರ್ಷವೂ ತಮ್ಮ ಸ್ವಂತ ಖರ್ಚಿನಲ್ಲಿ ಸಂಗೀತೋತ್ಸವವನ್ನು ನಡೆಸುತ್ತಿದ್ದರು. ದೊಡ್ಡ ವಿದ್ವಾಂಸರುಗಳನ್ನು ಕರೆಸಿ ಕಛೇರಿಗಳನ್ನು ಮಾಡಿಸುತ್ತಿದ್ದರು. ಈ ಉತ್ಸವದಲ್ಲಿ ಸಾವಿರಾರು ಸಂಗೀತಪ್ರೇಮಿಗಳು ಸೇರುತ್ತಿದ್ದರು. ಚೆಟ್ಟಿಯಾರ್ ಅವರಿಗೆ ಉತ್ಸವ ನಡೆಸುವುದರಲ್ಲಿ ಸಹಾಯ ಮಾಡುತ್ತಿದ್ದವರು ಗಾಯಕ ಶಿಖಾಮಣಿ ಮುತ್ತಯ್ಯ ಭಾಗವತರು.

ಅಲ್ಲಿ ನಡೆಯುವ ಸಂಗೀತ ಕಛೇರಿಗಳ ಬಗ್ಗೆ ಚಂಬೈ ಸಹೋದರರು ಕೇಳಿಬಲ್ಲರು, ಅಷ್ಟೆ. ಅಲ್ಲಿಗೆ ಹೋಗುವ ಅವಕಾಶ ಇದುವರೆಗೆ ಸಿಕ್ಕಿರಲಿಲ್ಲ. ಈ ವರ್ಷ (೧೯೧೩) ಹೋಗಲೇಬೇಕೆಂದು ತೀರ್ಮಾನಿಸಿ ಆ ಸಮಯಕ್ಕೆ ಸರಿಯಾಗಿ ಕರೂರಿಗೆ ಹೋದರು. ಅಲ್ಲಿನ ವೈಭವಗಳನ್ನೆಲ್ಲ ನೋಡಿ ಅವರಿಗೂ ಹಾಡಬೇಕೆಂಬ ಆಸೆ ಹುಟ್ಟಿತು.

‘ತಮ್ಮ ಉದ್ದೇಶ ನೆರವೇರುವುದೋ ಇಲ್ಲವೋ, ಕೇಳುವುದರಲ್ಲಿ ತಪ್ಪೇನು?’ ಎಂದು ಯೋಚಿಸಿ, ಮುತ್ತಯ್ಯ ಭಾಗವತರನ್ನು ಪ್ರಾರ್ಥಿಸಿಕೊಂಡರು. ಅವರು ಕೊಟ್ಟ ಉತ್ತರ ನಿರಾಸೆ ಉಂಟುಮಾಡಿತು. ಆದರೂ ಎಡೆಬಿಡದೆ ಅವರ ಹಿಂದೆ ಸುತ್ತಿದರು. ಕಡೆಗೆ ಅವರು ‘ಈ ವರ್ಷಕ್ಕೆ ಏರ್ಪಾಡುಗಳೆಲ್ಲ ಆಗಿಹೋಗಿವೆ. ಮುಂದಿನ ವರ್ಷ  ನೋಡೋಣ’ ಎಂದುಬಿಟ್ಟರು.

ಅದೇ ದಿನ ಸಾಯಂಕಾಲ ಒಬ್ಬರು ಜಲತರಂಗ್ ವಾದ್ಯ ಕಛೇರಿ ಮಾಡಬೇಕಿತ್ತು. ಅವರಿಗೆ ಪಕ್ಕವಾದ್ಯ ಬಾರಿಸುವ ಪಿಟೀಲು ವಿದ್ವಾಂಸರು ಕಾರಣಾಂತರದಿಂದ ಬರಲಾಗಲಿಲ್ಲ. ಅವರ ಬದಲು ತಾವೇ ನುಡಿಸುವುದಾಗಿ ವ್ಯೆದ್ಯನಾಥರು ಮಾತುಕೊಟ್ಟರು. ಎಂದಿನಂತೆ ಜನರು ಸೇರಿದರು. ಕಛೇರಿ ಚೆನ್ನಾಗಿ ನಡೆಯಿತು. ಎಲ್ಲರೂ ಹರ್ಷೋದ್ಗಾರ ಮಾಡಿದರು. ಕೊನೆಯಲ್ಲಿ ಸನ್ಮಾನ ಮಾಡುವುದಕ್ಕೆ ಮುಂಚೆ ನಾಲ್ಕು  ಮಾತನಾಡಬೇಕೆಂದು ವ್ಯೆದ್ಯನಾಥರು ಕೇಳಿಕೊಂಡರು. ಅವರು, ‘ನಾನು ವೃತ್ತಿ ಯಲ್ಲಿ ಪಿಟೀಲು ವಾದಕನಲ್ಲ, ಬಾಯಿ ಹಾಡುಗಾರಿಕೆ ಯವನು. ಈ ದಿನ ಖಾಲಿ ಬಿದ್ದ ಜಾಗವನ್ನು ಭರ್ತಿ ಮಾಡುವುದಕ್ಕೋಸ್ಕರ ಬಾರಿಸಿದೆ, ಅಷ್ಟೇ. ಆದರೆ ಈ ಸಭೆಯ ಮುಂದೆ ನನಗೆ ಹಾಡುವ ಅವಕಾಶ ಕೊಡ ಬೇಕೆಂದು ಪ್ರಾರ್ಥಿಸುತ್ತೇನೆ’ ಎಂದರು. ಮುತ್ತಯ್ಯ ಭಾಗವತರು ಈಗಾಗಲೇ ಆತನ ವಾದನ ಕೇಳಿ ಸಂತೋಷ ಗೊಂಡಿದ್ದರು. ತನ್ನನ್ನು ಅವಕಾಶ ಕೊಡಿ ಎಂದು ಕೇಳಿದ ಹುಡುಗ ಇವನೇ ಎಂಬುದು ಈಗ ಜ್ಞಾಪಕ ಬಂತು. ಚೆಟ್ಟಿಯಾರ್ ಸಂಗಡ ಸ್ವಲ್ಪ ಸಮಾಲೋಚನೆ ಮಾಡಿದರು. ನಂತರ ಸಭೆಯನ್ನುದ್ದೇಶಿಸಿ ‘ನಾಳೆ ಸಾಯಂಕಾಲ ಚಂಬೈ ಸಹೋದರರ ಕಛೇರಿ ನಡೆಯುವ ಏರ್ಪಾಡಾಗಿರುತ್ತದೆ’ ಎಂದು ಹೇಳಿದರು.

ಸಹೋದರರ ಕಛೇರಿ ಅಮೋಘವಾಗಿ ಜರುಗಿತು. ಸಭೆಯಲ್ಲಿದ್ದವರೆಲ್ಲ ತಲೆದೂಗಿ ಮೆಚ್ಚಿದರು.

ಇದಾದ ಮೇಲೆ, ಮಲಬಾರಿನಲ್ಲಿರುವ ಕರ್ತನಾಡು ಸಂಸ್ಥಾನದ ರಾಜರ ಕುಟುಂಬದಲ್ಲಿ ನಡೆದ ಮದುವೆ ಸಂದರ್ಭದಲ್ಲಿ ಸಹೋದರರ ಕಛೇರಿ ಏರ್ಪಾಡಾಯಿತು. ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟ ಸಭಾಮಂಟಪದಲ್ಲಿ ಒಂದು ಕಡೆ ಸಂಗೀತಕಛೇರಿಗೂ, ಇನ್ನೊಂದು ಕಡೆ ಭರತನಾಟ್ಯಕ್ಕೂ ಸಿದ್ಧತೆ ಮಾಡಲ್ಪಟ್ಟಿತು. ಕಿಕ್ಕಿರಿದ ಜನಸ್ತೋಮದ ಮಧ್ಯೆ ೧೫-೧೭ ವಯಸ್ಸಿನ ಸಹೋದರರು ಧೈರ್ಯವಾಗಿ ಕಛೇರಿ ಮಾಡಿದರು. ಇವರ ಕಛೇರಿ ಸಂಗೀತಪ್ರಿಯರನ್ನು ಬೆರುಗುಗೊಳಿಸಿತ್ತು.

೧೯೧೫ರಲ್ಲಿ ಸಹೋದರರಿಗೆ ಮತ್ತೊಂದು ಮಹತ್ವಪೂರ್ಣ ಅವಕಾಶ ಸಿಕ್ಕಿತು. ಎರ್ನಾಕುಲಂನಲ್ಲಿ ಪ್ರತಿವರ್ಷವೂ ತ್ಯಾಗರಾಜರ ಪುಣ್ಯದಿನಾಚರಣೆ ವೈಭವದಿಂದ ಆಚರಿಸಲ್ಪಡುತ್ತಿತ್ತು. ಆ ಸಮಾರಂಭದಲ್ಲಿ ದಕ್ಷಿಣ ದೇಶದ  ಸಂಗೀತ ವಿದ್ವಾಂಸರೆಲ್ಲ ಬಂದು ಸೇವೆ ಸಲ್ಲಿಸುವ ಪದ್ಧತಿಯಿತ್ತು. ಬಂದವರೆಲ್ಲರೂ ಹಾಡಬೇಕಾಗಿದ್ದುದರಿಂದ ಒಬ್ಬೊಬ್ಬರಿಗೂ ಅರ್ಧಗಂಟೆ ಮಾತ್ರ ಕಾಲಾವಕಾಶ ಸಿಕ್ಕುತ್ತಿತ್ತು. ಅಷ್ಟರಲ್ಲಿ ಪ್ರತಿಯೊಬ್ಬರೂ ತ್ಯಾಗರಾಜರ ಎರಡು ಮೂರು ಕೃತಿಗಳನ್ನು ಹಾಡಿ ಇನ್ನೊಬ್ಬರಿಗೆ ಅವಕಾಶ ಕೊಡಬೇಕಾಗಿತ್ತು.

ಆ ವರ್ಷ ಚಂಬೈ ಸಹೋದರರಿಗೂ ಅವಕಾಶ ಕೊಡಲ್ಪಟ್ಟಿತ್ತು. ಅಂಥ ವಿದ್ವತ್ಸಭೆಯ ಮುಂದೆ ಹಾಡುವುದೇ ಒಂದು ಭಾಗ್ಯ. ಅಷ್ಟೇ ಅಲ್ಲ, ಹಾಡುವವರ ಗೌರವ ಪ್ರತಿಷ್ಠೆಗಳು ಹೆಚ್ಚಾಗುವುದು ಖಂಡಿತ. ಇದನ್ನೆಲ್ಲ ಮನಗಂಡ ಸಹೋದರರು ಬಹಳ ನಮ್ರತೆಯಿಂದ, ಭಕ್ತಿಯಿಂದ, ದೃಢ ಸಂಕಲ್ಪದಿಂದ ಹಾಡಿದರು. ಸಭೆ ವಿಸ್ಮಯಗೊಂಡಿತು. ಅಷ್ಟು ಹೊತ್ತಿಗೆ ಕಾಲಾವಕಾಶ ಮುಗಿದಿತ್ತು. ಮುಂದೆ ಹಾಡತಕ್ಕವರಿಗೆ ತೊಂದರೆಯಾಗಬಾರದೆಂದು, ಅಲ್ಲಿಂದ ನಿರ್ಗಮಿಸುವುದಕ್ಕೆ ಸಿದ್ಧರಾದರು. ಆದರೆ, ಅಲ್ಲಿ ನೆರೆದಿದ್ದ ಜನರೆಲ್ಲ, ‘ಇನ್ನೊಂದು ಕೀರ್ತನೆ ಹಾಡಬೇಕು’ ಎಂದು ಕೇಳಿಕೊಂಡರು. ಆದರೆ ಸಮಯವಿರಲಿಲ್ಲ. ಸಹೋದರರು ಸ್ವಲ್ಪ ಹೊತ್ತು ದಿಕ್ಕುತೋಚದಂತಾದರು. ವ್ಯವಸ್ಥಾಪಕರ ಕಡೆ ನೋಡಿದರು. ಅವರು ಸನ್ನೆಯ ಮೂಲಕ ಅನುಮತಿ ಕೊಟ್ಟರು. ನಂತರ ಹಾಡಿಕೆ ಸ್ವಲ್ಪಹೊತ್ತು ಮುಂದುವರೆಯಿತು.

ತಿರುವಾಡುದುರೈ ಮಠದಲ್ಲಿ ಕಛೇರಿ

ತಿರುವಾಡುದುರೈ ಎಂಬ ಊರಿನಲ್ಲಿ ಒಂದು ದೊಡ್ಡ ಮಠವಿತ್ತು. ಆ ಮಠಕ್ಕೆ ಅಧಿಪತಿಗಳೂ ಮಹಿಮೆಯುಳ್ಳ ಗುರುಗಳೂ ಆಗಿದ್ದವರು ಅಂಬಲವಾಣ ದೇಶಿಕರ್ ಎಂಬವರು. ತಮ್ಮ ಶಾಸ್ತ್ರಪಾಂಡಿತ್ಯದ ಜೊತೆಗೆ, ಒಳ್ಳೆಯ ಸಂಗೀತಜ್ಞಾನವೂ ಅವರಿಗಿತ್ತು. ಸಂಗೀತ ವಿದ್ವಾಂಸರನ್ನು ಕರೆಸಿ, ಕಛೇರಿ ಏರ್ಪಡಿಸಿ, ಬೇಕಾದಷ್ಟು ಸನ್ಮಾನ ಮಾಡುವುದು ಆ ಮಠದ ಸಂಪ್ರದಾಯ. ಆ ವಿಷಯ ತಿಳಿಸಿದಿದ್ದರಿಂದಲೇ ಸಹೋದರರು ಅಲ್ಲಿಗೆ ಹೋದದ್ದು. ಗುರುದರ್ಶನಕ್ಕೆಂದು ಬರುವ ಭಕ್ತಾದಿಗಳಿಗೆಲ್ಲ ಒಳ್ಳೆಯ ವಸತಿ, ಊಟ ಉಪಚಾರಗಳು ಉದಾರವಾಗಿ ನಡೆಯುತ್ತಿದ್ದವು. ಹೋದಕೂಡಲೇ ಸಹೋದರರಿಗೆ ಇಳಿದುಕೊಳ್ಳುವುದಕ್ಕೆ ಸೌಕರ್ಯ ಏರ್ಪಟ್ಟಿತು. ಊಟ ತಿಂಡಿ ಎಲ್ಲಕ್ಕೂ ವ್ಯವಸ್ಥೆಯಾಗಿತ್ತು. ಆದರೆ ಗುರುದರ್ಶನದ ಬಗ್ಗೆ ಯಾರೂ ಮಾತಾಡಲಿಲ್ಲ. ವೈದ್ಯನಾಥನಿಗೆ ಮುಖ್ಯ ವಾಗಿದ್ದುದು ಅದೇ. ಒಬ್ಬ ಅಧಿಕಾರಿಯನ್ನು ವಿಚಾರಿಸಿದ್ದಕ್ಕೆ ಆತ ಉತ್ತರವನ್ನೇ ಕೊಡದೆ ಮೌನವಾಗಿ ಹೊರಟು ಹೋದ. ಮತ್ತೊಬ್ಬನನ್ನು ಕೇಳಿದಾಗ ಸ್ವಲ್ಪ ಆಶಾದಾಯಕವಾದ ಉತ್ತರ ಬಂತು. ಗುರುಗಳಿಗೆ ಇವರ ಆಗಮನದ ವಿಷಯ ತಿಳಿಸುವವರೇ ಯಾರೂ ಇರಲಿಲ್ಲ. ಅವರನ್ನು ಹೇಗೆ ಕಾಣಬೇಕೆಂಬುದನ್ನೂ ಯಾರೂ ತಿಳಿಸಲಿಲ್ಲ. ಈ ಪರಿಸ್ಥಿತಿಯಲ್ಲಿ ಐದು ದಿನಗಳು ಕಳೆದವು. ಕೊನೆಯ ದಿನ, ತಮ್ಮ ಆಸೆ ಈಡೇರುವುದಿಲ್ಲವೆಂಬುದು ಗಟ್ಟಿಯಾದ ಮೇಲೆ, ಗಂಟುಮೂಟೆ ಕಟ್ಟಿಕೊಂಡು ಹೊರಡಲು ಸಿದ್ಧರಾದರು. ಆಗಲೂ ವೈದ್ಯನಾಥರಿಗೆ ಚಪಲ ತಪ್ಪಿರಲಿಲ್ಲ. ಇನ್ನೊಂದುಬಾರಿ ಪ್ರಯತ್ನ ಮಾಡಿಬಿಡೋಣ ಎಂದು ತಾವೇ ಮಠದ  ಬಾಗಿಲಿಗೆ ಹೋದರು. ಅದೃಷ್ಟವಶಾತ್ ಕಾವಲುಗಾರನಿರಲಿಲ್ಲ. ಒಳ್ಳೆಯ ದಾಯಿತೆಂದು ಧೈರ್ಯ ತಂದುಕೊಂಡು ಒಳಹೊಕ್ಕರು. ಪ್ರವೇಶಿಸಿದ ಮೇಲೆ ಕಂಡದ್ದು ಕಟ್ಟಡದೊಳಗೆ ಕಟ್ಟಡ. ದಿಙ್ಮೂಢರಾದರು. ಎದೆ ಹೊಡೆದುಕೊಳ್ಳಲಾರಂಭಿಸಿತು. ಯಾವ ನಿಮಿಷದಲ್ಲಿ ಕಾವಲುಗಾರ ಬಂದು ಹೊರದೂಡುತ್ತಾನೋ ಎಂಬ ಭಯ. ಆ ಕಾರಣ ಅಲ್ಲಲ್ಲೇ ಕಂಬದ ಮರೆಯಲ್ಲಿ ಅವಿತುಕೊಂಡು, ಓಡಾಡುತ್ತಿದ್ದ ಮಠಾಧಿಕಾರಿಗಳಿಂದ ಮರೆಯಾದರು. ಹೀಗೆ ಬಹಳ ಹೊತ್ತು ಕಾದಮೇಲೆ, ಒಂದು ಬಾಗಿಲಿನಿಂದ ಗುರುಗಳು ಬಿಜಯಮಾಡುತ್ತಿದ್ದುದು ಗೋಚರವಾಯಿತು. ಶಿಷ್ಯರು ಅವರ ಸುತ್ತ ಇದ್ದರು. ವೈದ್ಯನಾಥರು ಮತ್ತೊಮ್ಮೆ ಧೈರ್ಯ ತಂದುಕೊಂಡು, ಗುರುಗಳ ಎದುರೇ ಹೋಗಿ ನಿಂತರು. ಪ್ರಶ್ನೋತ್ತರಗಳಾದವು. ಎಲ್ಲವನ್ನೂ ಬಿನ್ನವಿಸಿಕೊಂಡದ್ದಾದ ಮೇಲೆ, ಅಲ್ಲಿಯೇ ಇರುವಂತೆ ಗುರುಗಳ ಅಪ್ಪಣೆ ಯಾಯಿತು. ಸುಮಾರು ಒಂದು ಗಂಟೆ ಕಾಲ ನಂತರ, ಅವರು ಮತ್ತೆ ಅಲ್ಲಿಗೆ ಬಂದರು. ವೈದ್ಯನಾಥರನ್ನು ಕೂರಿಸಿ, ಒಂದು ಶ್ಲೋಕವನ್ನು ಹಾಡು ಎಂದರು. ಅವರು ಬಯಸಿದ ತಮಿಳು ಶ್ಲೋಕವೊಂದನ್ನು ಶಂಕರಾಭರಣ ರಾಗದಲ್ಲಿ ಪ್ರಾರಂಭಿಸಿ ಆ ರಾಗವನ್ನು ಚೆನ್ನಾಗಿ ಹಾಡಿ ಇನ್ನೇನು ಮುಗಿಸಬೇಕೆಂದಿದ್ದಾಗ, ಕಲ್ಯಾಣಿರಾಗದಲ್ಲಿ ಹಾಡಬೇಕೆಂದು ಅಪ್ಪಣೆಯಾಯಿತು. ಇದು ಸ್ವಲ್ಪ ಕಷ್ಟವಾದದ್ದೇ. ಉದ್ದೇಶ ಪೂರ್ವಕವಾಗಿ ಗುರುಗಳು ಹೀಗೆ ಕೇಳಿದ್ದು ವೈದ್ಯನಾಥರು ಸ್ವಲ್ಪವೂ ಹಿಂದು ಮುಂದು ನೋಡದೆ ಕಲ್ಯಾಣಿರಾಗದಲ್ಲಿ ಶ್ಲೋಕವನ್ನು ಮುಂದುವರಿಸಿ ಮುಗಿಸಿದರು. ಅನಂತರ ಭೈರವಿರಾಗದಲ್ಲಿ ಹಾಡಬೇಕೆಂದು ಗುರುಗಳು ಹೇಳಿದರು. ಅದಾದಕೂಡಲೇ ಖರಹರಪ್ರಿಯ. ಪುನಃ ಅದೇ ಅಗ್ನಿ ಪರೀಕ್ಷೆ. ಆದರೆ ವೈದ್ಯನಾಥರು ಸುಲಲಿತವಾಗಿ ಆ ಎರಡು ರಾಗಗಳನ್ನು ಹಾಡಿ ಪರಿಸಮಾಪ್ತಿ ಮಾಡಿದಾಗ ಗುರುಗಳಿಗೆ ಆದ ಆನಂದ ಹೇಳತೀರದು.

ಮಾರನೆ ದಿನ ಕಛೇರಿ ಏರ್ಪಾಡಾಯಿತು. ದೊಡ್ಡ ಸಭೆ. ಅದರ ಮೇಲೆ ಗುರು ಸಾನ್ನಿಧ್ಯ. ಅತ್ಯಮೋಘವಾಗಿ ಕಛೇರಿ ನಡೆಯಿತು. ಗುರುಗಳು ಸಹೋದರರನ್ನು ತುಂಬುಹೃದಯದಿಂದ ಶ್ಲಾಘಿಸಿ, ಮುಕ್ತಹಸ್ತದಿಂದ ಸನ್ಮಾನ ಮಾಡಿದರು.

ಪಕ್ಕವಾದ್ಯ ಧುರೀಣರ ಸ್ನೇಹ ಸಹಕಾರ

ಪಾಲಘಾಟ್‌ನಲ್ಲಿ ನಡೆಯುವ ಶ್ರೀರಾಮನವಮಿ ಉತ್ಸವದಲ್ಲಿ ಅವರ ಕಛೇರಿ ಏರ್ಪಾಡಾಯಿತು. ನಡೆದ ಕಛೇರಿಗಳಲ್ಲೆಲ್ಲ ಅವರದೇ ಮೇಲುಗೈ ಎನಿಸಿತು. ಆ ಕಛೇರಿ ಕೇಳಲು ದಕ್ಷಿಣಾಮೂರ್ತಿ ಪಿಳ್ಳೆಯವರೂ ಬಂದಿದ್ದರು. ಇವರು ಆ ಕಾಲದಲ್ಲಿದ್ದ ಮೃದಂಗವಾದಕರ ಪೈಕಿ ಅಗ್ರಗಣ್ಯರು. ಅವರಿಗೆ ಸಹೋದರರ ವಿಚಾರದಲ್ಲಿದ್ದ ಅಭಿಮಾನ ಬೆಳೆಯಿತು. ಹಿಡಿಸಲಾರದಷ್ಟು ಸಂತೋಷ ಉಂಟಾಯಿತು. ಕೂಡಲೇ ತಮ್ಮ ಆಪ್ತಮಿತ್ರರಾದ ಪಿಟೀಲು ವಿದ್ವಾಂಸ ಗೋವಿಂದಸ್ವಾಮಿ ಪಿಳ್ಳೆಯವರ ಬಳಿ ಹೋಗಿ ಅವರು ಮಲೆಕೋಟೆ ಎಂಬ ಊರಿನಲ್ಲಿದ್ದರು- ತಮಗೆ ಉಂಟಾದ ಅನುಭವವನ್ನು ಮನಸ್ಸಿಗೆ ಹಿಡಿಸುವಂತೆ ವಿವರಿಸಿದರು. ಗೋವಿಂದಸ್ವಾಮಿಯವರಿಗೆ ಆಶ್ಚರ್ಯ ವಾಯಿತು. ಏಕೆಂದರೆ, ಮಿತಭಾಷಿಗಳಾದ ದಕ್ಷಿಣಾಮೂರ್ತಿ ಪಿಳ್ಳೆಯವರು, ಒಬ್ಬರ ಸಂಗೀತವನ್ನು ಇಷ್ಟು ಕೊಂಡಾಡುತ್ತಿದ್ದಾರಲ್ಲ’ ಎಂದು. ಅಷ್ಟೇ ಅಲ್ಲದೆ, ಅವರದು ಪೂರ್ಣಾನುಭವ. ಚೆನ್ನಾಗಿದೆಯೆಂದು ಹೇಳಿದ ಮೇಲೆ ಅದು ಚೆನ್ನಾಗಿದ್ದೇ ಇರಬೇಕು ಎಂದು ಅವರಿಗೆ ಅನ್ನಿಸಿತು. ಅಂಥ ಸಂಗೀತವನ್ನು ಆದಷ್ಟು ಬೇಗ ಕೇಳಲೇಬೇಕೆಂಬ ಉದ್ದೇಶದಿಂದ, ಸಹೋದರರ ಕಛೇರಿಯನ್ನು ತಮ್ಮೂರ ಸಭೆಯಲ್ಲಿ ಏರ್ಪಾಡು ಮಾಡಿಯೇ ಬಿಟ್ಟರು. ತಮ್ಮ ಪಿಟೀಲು, ದಕ್ಷಿಣಾ ಮೂರ್ತಿಯವರ ಮೃದಂಗ ಪಕ್ಕವಾದ್ಯ ಗಳಾಗಿ ಗೊತ್ತಾದುವು. ಕಛೇರಿಯು ಅತ್ಯದ್ಭುತವಾಗಿ ನಡೆಯಿತು. ಗೋವಿಂದಸ್ವಾಮಿಯವರು ಸಂಗೀತವನ್ನು ಹೊಗಳುವುದಲ್ಲದೇ, ತಮ್ಮ ಮಿತ್ರರ ಸತ್ವಪರೀಕ್ಷಾ ಸಾಮರ್ಥ್ಯವನ್ನು ಕೊಂಡಾಡಿದರು.

ಅಂದಿನಿಂದ, ಸಹೋದರರ ಕಛೇರಿಗಳಿಗೆಲ್ಲ  ಆ ಇಬ್ಬರು ಘನವಿದ್ವಾಂಸರ ಪಕ್ಕವಾದ್ಯಗಳೇ ಸ್ಥಿರಪಟ್ಟವು. ಅವರ ಮೂಲಕ ಅನೇಕ ಊರುಗಳಲ್ಲಿ ಕಛೇರಿಗಳು ಏರ್ಪಾಡಾದವು. ಸಂಗೀತಪ್ರಪಂಚದಲ್ಲಿ ಚಂಬೈ ಸಹೋದರರ ಸ್ಥಾನಮಾನ ವೃದ್ಧಿಯಾಯಿತು.

ಮದರಾಸಿನಲ್ಲಿ ಕಛೇರಿ

ಮದರಾಸ್ ನಗರದಲ್ಲಿ ಸಹೋದರರ ಮೊಟ್ಟಮೊದಲನೇ ಕಛೇರಿ ನಡೆದುದು ಇದೇ ಕಾಲದಲ್ಲಿ. ಮೇಲೆ ಹೇಳಿದ ಪಕ್ಕವಾದ್ಯಗಳೊಡನೆ ನಡೆದುದು ಗಮನಿಸಬೇಕಾದ ಅಂಶ. ತಿರುವಲ್ಲಿಕೇಣಿ (ಟ್ರಿಪ್ಲಿಕೇನ್) ಎಂಬ ನಗರದ ಬಡಾವಣೆಯಲ್ಲಿ ಒಂದು ಸಂಗೀತಸಭೆ ಇತ್ತು. ಅದರ ಆಶ್ರಯದಲ್ಲಿ ಏರ್ಪಾಡು ಮಾಡಲ್ಪಟ್ಟಿತ್ತು. ಕಛೇರಿ ನಡೆಯುವ ಜಾಗ ‘ಗೋಖಲೆಹಾಲ್’. ಚಂಬೈ ಸಹೋದರರ ಹೆಸರು ಈಗಾಗಲೇ ಮದರಾಸ್ ರಸಿಕರ ಕಿವಿಯನ್ನು ಮುಟ್ಟಿತ್ತಾದ್ದರಿಂದ, ಕಛೇರಿ ಕೇಳಬೇಕೆಂಬ ಕುತೂಹಲ ಹೇಳತೀರದು. ಗೊತ್ತಾದ ವೇಳೆಯಲ್ಲಿ ಕಛೇರಿ ಪ್ರಾರಂಭವೂ ಆಯಿತು. ಆದರೆ ಅಷ್ಟು ಹೊತ್ತಿಗೆ ಸಭಾಭವನದೊಳಗೆ ಒಂದು ಜಾಗವೂ ಖಾಲಿಯಿರಲಿಲ್ಲ. ಅಲ್ಲದೆ ಒಳಗೆ ಎಷ್ಟು ಜನ ಸೇರಿದ್ದರೋ ಸಭೆ ಹೊರಗೆ ಅಷ್ಟೇ ಜನ ಸೇರಿಬಿಟ್ಟಿದ್ದರು. ‘ಒಳಗೆ ಸ್ಥಳವೂ ಇಲ್ಲ, ಟಿಕೆಟ್ ಮಾರಾಟವೂ ಇಲ್ಲ’ ಎಂದು ನಿರ್ವಾಹಕರ ವಾದ. ಆದರೆ ಜನರು ಸುಮ್ಮನಿರಲಿಲ್ಲ. ಗಲಾಟೆ ಮಾಡಲಾರಂಭಿಸಿದರು. ಉದ್ರಿಕ್ತರಾದರೆ, ಭವನದಲ್ಲಿರುವ ಗಾಜಿನ ಕಿಟಕಿಗಳಿಗೆ ಅಪಾಯ. ಅಷ್ಟೇ ಅಲ್ಲ, ಒಳಗಿರುವ ಜನಗಳಿಗೂ ಅಪಾಯವಾಗಬಹುದು. ಕಛೇರಿಯಂತೂ ಮುಂದು ವರಿಯಲು ಸಾಧ್ಯವಿಲ್ಲ. ಇದನ್ನೆಲ್ಲ ಯೋಚಿಸಿದ ವ್ಯವಸ್ಥಾಪಕರು ಭವನದ  ಮುಖದ್ವಾರವನ್ನು ತೆಗೆದು ಬಿಡಬೇಕೆಂದು ತೀರ್ಮಾನಿಸಿದರು. ಬಹಳ ಹುರುಪಿನಿಂದ ಹಾಡಿಕೆ ಸಾಗಿತು. ರಸಿಕರ ಆನಂದಕ್ಕೆ ಮಿತಿಯೇ ಇಲ್ಲವಾಯಿತು. ಅಂತೂ ಸಂಗೀತಕೇಂದ್ರ ಎನಿಸಿದ ಮಹಾನಗರದಲ್ಲಿ ಸಹೋದರರ ಖ್ಯಾತಿ ಬೇರು ಬಿಟ್ಟಿತು.

ಕಹಿ ಅನುಭವ

ಒಂದು ಸಾರಿ ಸಹೋದರರಿಗೆ ಒಬ್ಬ ಅಪರಿಚಿತ ವಿದ್ವಾಂಸರ ಸಂಗೀತ ಕೇಳುವ ಅವಕಾಶ ದೊರಕಿತು. ಅವರು ತಮ್ಮ ಕಛೆರಿಯಲ್ಲಿ ಅನೇಕ ಹೊಸ ಕೀರ್ತನೆಗಳನ್ನು ಹಾಡಿದರು. ಅವುಗಳಲ್ಲಿ ಒಂದು ಕೀರ್ತನೆ ಇವರ ಮನಸ್ಸನ್ನು ಬಹಳವಾಗಿ ಆಕರ್ಷಿಸಿತು. ಅದನ್ನು ಏನಾದರೂ ಮಾಡಿ ಕಲಿಯಬೇಕೆಂಬ ಚಪಲ ಬಾಧಿಸತೊಡಗಿತು. ಕೇಳುತ್ತಿದ್ದಂತೆಯೇ ಅರ್ಧಭಾಗವನ್ನು ಮನನ ಮಾಡಿಕೊಂಡರು. ಆದರೆ ಮಿಕ್ಕ ಭಾಗ ಕೈತಪ್ಪಿಹೋಯಿತು. ಕಛೇರಿ ಮುಗಿದ ಮೇಲೆ ಆ ವಿದ್ವಾಂಸರನ್ನು ಭೇಟಿಮಾಡಲು ಸಾಧ್ಯವೇ ಆಗಲಿಲ್ಲ. ನಿರಾಸೆಯಿಂದ ಹಿಂತಿರುಗಿದರು. ಕೆಲವು ದಿನಗಳ ನಂತರ, ಮತ್ತೊಂದು ಕಡೆ ಅದೇ ವಿದ್ವಾಂಸರ ಕಚೇರಿ ಏರ್ಪಡಿಸಲ್ಪಟ್ಟಿತು. ಕುತೂಹಲದಿಂದ ಸಹೋದರರು ಅಲ್ಲಿಗೆ ಹೋಗಿ, ಅವರನ್ನು ಕಂಡು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ‘ಯಾವ ಕೀರ್ತನೆ?’ ಎಂದು ಅವರು ಕೇಳಿದಾಗ ತಮಗೆ ಜ್ಞಾಪಕವಿದ್ದಷ್ಟು ಭಾಗವನ್ನು ಮೆಲುದನಿಯಲ್ಲಿ ಹಾಡಿ ತೋರಿಸಿದರು. ಕಂಠ ಧ್ವನಿ ಕಿವಿಗೆ ಬಿದ್ದೊಡನೆ, ಆ ವಿದ್ವಾಂಸರ ಕಿವಿ ನೆಟ್ಟಗಾಯಿತು. ಹಾಡುವುದು ಮುಗಿದೊಡನೆ, ‘ನಿಮ್ಮ ಶಾರೀರ ಬಹು ಇಂಪಾಗಿದೆ. ಹಾಡುವ ರೀತಿ ಅಚ್ಚುಕಟ್ಟಾಗಿದೆ. ಆದರೆ, ಈಗ ನನಗೆ ಆ ಕೀರ್ತನೆಯ ಕೊನೆಯ ಭಾಗ ಜ್ಞಾಪಕ ಬರುತ್ತಿಲ್ಲ. ಕ್ಷಮಿಸಿ. ಮತ್ತೊಂದು ಸಾರಿ ನೋಡೋಣ’ ಎಂದು ಹೇಳಿ ಅಲ್ಲಿಂದ ಹೊರಟೇ ಹೋದರು. ವೈದ್ಯನಾಥರಿಗೆ ಅವರ ಉದಾಸೀನತೆಯನ್ನು ಕಂಡು ಬಹಳ ವ್ಯಥೆಯಾಯಿತು. ಆದರೂ, ಅಲ್ಲಿಯೇ ಇದ್ದು ಅವರ ಸಂಗೀತವನ್ನು ಕೇಳುವುದಕ್ಕಾಗಿ ಇಬ್ಬರೂ ಕುಳಿತರು. ಅನಿರೀಕ್ಷಿತವಾಗಿ ಇಷ್ಟಪಟ್ಟ ಕೀರ್ತನೆಯನ್ನೇ ವಿದ್ವಾಂಸರು ಹಾಡಲು ಪ್ರಾರಂಭಿಸಿದರು. ಸುವರ್ಣಾವಕಾಶ ಸಿಕ್ಕಿತೆಂದು, ಇಬ್ಬರೂ ಏಕಾಗ್ರತೆಯಿಂದ ಕೊನೆಯ ಭಾಗವನ್ನು ಮನನ ಮಾಡಿಕೊಂಡರು. ಈಗ ಒಂದು ಆಸ್ತಿ ಕೈವಶವಾದಷ್ಟು ಸಂತೋಷ ಆಯಿತು. ಅದರೊಡನೆ ಆ ವಿದ್ವಾಂಸರ ಸಂಕುಚಿತ ಭಾವನೆ ಮನಸ್ಸನ್ನು ಚುಚ್ಚುತ್ತಿತ್ತು.

ಆಗಲೇ ಒಂದು ಹೊಸ ಆಲೋಚನೆ ಮನಸ್ಸಿನಲ್ಲಿ ಮೂಡಿತು. ಅದೇನೆಂದರೆ, ಮುಚ್ಚುಮರೆಯಿಲ್ಲದೆ ತನಗೆ ಕೈವಶವಾದಷ್ಟು ವಿದ್ಯೆಯನ್ನು ಇನ್ನೊಬ್ಬರಿಗೆ ಹೇಳಿಕೊಡಬೇಕೆಂದು. ಅತಿ ಶೀಘ್ರದಲ್ಲಿಯೇ ಈ ಕನಸು ನನಸಾಯಿತು. ಚಂಬೈಯಲ್ಲಿ ಅನಂತ ಭಾಗವತರ ನೇತೃತ್ವದಲ್ಲಿ ಸಂಗೀತ ಪಾಠಶಾಲೆ ಸ್ಥಾಪನೆಯಾಗಿಯೇ ಬಿಟ್ಟಿತು. ಚಂಬೈ ಸಹೋದರರು ವಿದ್ಯಾಗುರುಗಳಾದರು. ಊರಿನ ಉತ್ಸಾಹಿ ಮಕ್ಕಳು, ತರುಣ ತರುಣಿಯರು ಸಂಗೀತ ಕಲಿಯಲು ಬಂದು ಸೇರಿದರು.

ಸಂಗೀತದ ಮಹಿಮೆ

ಕಲ್ಪಾತಿ ಎಂಬ ಊರಿನಲ್ಲಿ ಒಬ್ಬ ಪೋಸ್ಟ್‌ಮಾಸ್ಟರ್ ಮನೆಯಲ್ಲಿ ಮದುವೆ. ಆ ಸಂದರ್ಭದಲ್ಲಿ ಸಹೋದರರ ಕಛೇರಿ. ದೊಡ್ಡ ಚಪ್ಪರದಲ್ಲಿ ಎರಡು ಕಡೆಯ ನೆಂಟರಿಷ್ಟರು, ಸಾರ್ವಜನಿಕರು ಸೇರಿದ್ದರು. ಒಳ್ಳೆ ರಸಿಕರಿದ್ದ ಸಭೆ. ಅಂಥ ಸಭೆಯಿಂದ ಸ್ಫೂರ್ತಿ ಪಡೆದ ಗಾಯಕರು ಅಮೋಘವಾಗಿ ಹಾಡುತ್ತಿದ್ದರು. ಆಗ ಅಲ್ಲಿದ್ದವರೊಬ್ಬರು ತ್ಯಾಗರಾಜರ ‘ಎವರನಿ’ ಎಂಬ ಕೀರ್ತನೆಯನ್ನು ಹಾಡಬೇಕೆಂದು ಕೇಳಿದರು. ಇತರರೂ ಅವರ ಕೋರಿಕೆಯನ್ನು ಅನುಮೋದಿಸಿದರು. ಆಗ ವೈದ್ಯನಾಥ ಭಾಗವತರು ಸಭೆಯನ್ನು ಕುರಿತು ಹೀಗೆ ಹೇಳಿದರು. ‘ಆ ಕೀರ್ತನೆ ಭಕ್ತಿಯಿಂದ, ಶ್ರದ್ಧೆಯಿಂದ ಹಾಡಲ್ಪಟ್ಟಿದ್ದೇ ಆದರೆ ಮಳೆ ಬಂದೇ ಬಿಡುವುದಲ್ಲ.’ ಅವರು ಈ ಮಾತುಗಳನ್ನು ಹೇಳುವಾಗ ಮನಸ್ಸಿನಲ್ಲಿದ್ದ ಆಲೋಚನೆ ಏನೆಂದರೆ ಜನಗಳಿಗೆ ತೊಂದರೆ ಆಗುತ್ತಲ್ಲ ಎಂಬುದು. ಈ ಮಾತುಗಳನ್ನು ಕೇಳಿಯೂ ಜನ ಮತ್ತೊಮ್ಮೆ ಹಾಡಲೇಬೇಕೆಂದು ಕೂಗಿದರು. ಅದೇ ಪ್ರಕಾರ ಕೀರ್ತನೆ ಪ್ರಾರಂಭವಾಗೇ ಬಿಟ್ಟಿತು. ಭವ್ಯವಾಗಿ ಹಾಡಲ್ಪಟ್ಟಿತು. ಕಛೇರಿ ಮುಗಿಸಿದ ಕೂಡಲೇ, ತುಂತುರು ಮಳೆ ಬರತೊಡಗಿತು. ಕಛೇರಿಗೆ ಮುಂಚೆ ಆಗಲಿ, ಅದು ನಡೆಯುತ್ತಿದ್ದಾಗಲಾಗಲಿ, ಮಳೆ ಬರುವ ಸೂಚನೆಯೇ ಇರಲಿಲ್ಲ. ನಿರ್ಮಲವಾದ ಆಕಾಶವಿತ್ತು. ಆದರೆ ಅಂಥ ಸಮಯದಲ್ಲಿ ಮಳೆ ಬಂದದ್ದು ಎಲ್ಲರನ್ನೂ ವಿಸ್ಮಯಗೊಳಿಸಿತು. ಅಂತೆಯೇ ಗಾಯಕರ ಶ್ರದ್ಧಾಭಕ್ತಿಯೂ, ಅವರ ನಾದೋಪಾಸನೆಯ ಶಕ್ತಿಯೂ ಮನದಟ್ಟಾದವು.

ಧ್ವನಿಮುದ್ರಣ

೧೯೩೨ರಲ್ಲಿ ಚಂಬೈ ವೈದ್ಯನಾಥ ಭಾಗವತರ ಸಂಗೀತ ಗ್ರಾಮಾಫೋನ್ ಕಂಪೆನಿಯಿಂದ ಧ್ವನಿಮುದ್ರಿತ ವಾಯಿತು. ಅನೇಕ ರಿಕಾರ್ಡ್‌ಗಳು ತಯಾರಿಸಲ್ಪಟ್ಟವು. ಅವುಗಳ ಮಾರಾಟ ಬಿರುಸಾಗಿಯೇ ಸಾಗಿತು. ಅಂತೆಯೇ ಗಾಯಕರ ಹೆಸರೂ ದೇಶದ್ಯಾಂತ ಹರಡಿತು.

೧೯೩೭ರಲ್ಲಿ ಅನಂತ ಭಾಗವತರು ತೀರಿ ಕೊಂಡರು. ಅದೇ ವರ್ಷ ವೈದ್ಯನಾಥ ಭಾಗವತರಿಗೆ ಮೈಸೂರು ಮಹಾರಾಜರಿಂದ ತಮ್ಮ ಆಸ್ಥಾನಕ್ಕೆ ಬಂದು ಕಚೇರಿ ಮಾಡಬೇಕೆಂದು ಆಹ್ವಾನ ಬಂತು. ಆಗ ಶ್ರೀಕೃಷ್ಣರಾಜೇಂದ್ರ ಒಡೆಯರ್‌ರವರು ಮಹಾರಾಜ ರಾಗಿದ್ದರು. ಅವರು ಸಂಗೀತ ಪ್ರೇಮಿಗಳು. ಕರ್ನಾಟಕ ಮತ್ತು ಉತ್ತರಾದಿ ಸಂಗೀತ ಕ್ಷೇತ್ರಗಳಲ್ಲಿ ಹೆಸರಾಂತ ವಿದ್ವಾಂಸರೆಲ್ಲ ಅವರ ಆಶ್ರಯಕ್ಕೆ ಪಾತ್ರರಾಗಿದ್ದರು. ಚಂಬೈರವರ ಸಂಗೀತವನ್ನು ಕೇಳಿ ಮಹಾರಾಜರು ತುಂಬಾ ಸಂತೋಷಪಟ್ಟರು. ಆಸ್ಥಾನ ವಿದ್ವಾಂಸರಾಗಿರಬೇಕೆಂದು ಕೇಳಿದರು. ಹಿಂದಿನ ಮೈಸೂರು ರಾಜ್ಯದಲ್ಲಿ ರಾಜರಿದ್ದ ಕಾಲದಲ್ಲಿ ದಸರಾ ಹಬ್ಬವನ್ನು ಬಹು ವೈಭವದಿಂದ ಆಚರಿಸುತ್ತಿದ್ದರು. ಮೈಸೂರು ನಗರ ಅತಿಶಯವಾದ ಸೌಂದರ್ಯದಿಂದ ಬೆಳಗುತ್ತಿತ್ತು. ಹತ್ತು ದಿನಗಳೂ ಅರಮನೆಯಲ್ಲಿ ಸಾಯಂಕಾಲ ದರ್ಬಾರ್ ನಡೆಯುತ್ತಿತ್ತು. ಆಸ್ಥಾನ ವಿದ್ವಾಂಸರೆನಿಸಿಕೊಂಡವರು ಆ ದರ್ಬಾರ್ ನಡೆಯುವಾಗ ಕಚೇರಿ ಮಾಡಬೇಕಾಗಿತ್ತು. ಈ ನಿಬಂಧನೆಗೆ ಒಳಪಡುವುದು ಚಂಬೈ ಅವರಿಗೆ ಕಷ್ಟವೆನಿಸಿತು. ಏಕೆಂದರೆ, ಅದೇ ಕಾಲದಲ್ಲಿ ಅವರು ತಮ್ಮೂರಿನಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸುವ ಪದ್ಧತಿ ಬಹಳ ವರ್ಷಗಳಿಂದ ನಡೆದು ಬಂದಿತ್ತು. ದುಡ್ಡಿಗೋಸ್ಕರ ಅದನ್ನೆಲ್ಲ ಬಿಡಲು ಮನಸ್ಸು ಬರಲಿಲ್ಲ. ಆದ್ದರಿಂದ ಆ ಪದವಿಯು ತಮಗೆ ಬೇಡವೆಂದು ಬಿಟ್ಟುಬಿಟ್ಟರು.

ಭಕ್ತಿಯ ಶಕ್ತಿ

ಕಲ್ಲೀಕೋಟೆ ಅರಮನೆಯಲ್ಲಿ ಮದುವೆ. ಆ ಸಂದರ್ಭದಲ್ಲಿ ಚಂಬೈರವರ ಕಛೇರಿ. ಕಿಕ್ಕಿರಿದ ಜನಸ್ತೋಮ, ಭಾಗವತರು ಹಾಡುವುದಕ್ಕೆ ಪ್ರಾರಂಭಿಸಿದರು. ಆದರೆ ನಾದವೇ ಹೊರಡಲಿಲ್ಲ. ದಿಗ್ಭ್ರಾಂತರಾದರು. ಏನೇನೋ ಪ್ರಯತ್ನಗಳೆಲ್ಲ ನಡೆದವು. ಎಲ್ಲ ವ್ಯರ್ಥ. ಒಡನೆ ಭಾಗವತರು ಅಲ್ಲಿಂದ ಮಹಾರಾಜರ ಹತ್ತಿರ ಹೋದರು. ಸ್ವಲ್ಪ ಹೊತ್ತಿನಲ್ಲೆ ಕಾರಿನಲ್ಲಿ ಕುಳಿತು ಗುರುವಾಯೂರಿಗೆ ಧಾವಿಸಿದರು. ಕಾರಣ ಇಷ್ಟೇ. ಆ ದಿನ ಕಾರ್ತೀಕ ಮಾಸ ಶುಕ್ಲ ಪಕ್ಷದ ಏಕಾದಶಿ, ಗುರುವಾಯೂರಿನಲ್ಲಿ ದೇವರಿಗೆ ವಿಶೇಷ ಪೂಜೆ. ಊರು ತಲುಪಿದ ಕೂಡಲೆ ಭಾಗವತರು ಕೊಳದಲ್ಲಿ ಸ್ನಾನಮಾಡಿ ದೇವರ ಸನ್ನಿಧಿಯಲ್ಲಿ ಹಾಡಲಾರಂಭಿಸಿದರು. ಕಟ್ಟಿದ್ದ ಶಾರೀರ ತಕ್ಷಣ ಬಿಟ್ಟು, ಗಂಭೀರ ನಾದ ಹೊರ ಹೊಮ್ಮಿತು. ಸಾಯಂಕಾಲ ಕುಳಿತವರು ರಾತ್ರಿ ೧೧ ಗಂಟೆಯಾದರೂ ಭಕ್ತಿ ಪರವಶರಾಗಿ ಹಾಡುತ್ತಲೇ ಇದ್ದರು. ಸುತ್ತಮುತ್ತಲಿದ್ದ ಜನ ಅವರನ್ನು ಎಚ್ಚರಿಸಿದ್ದರಿಂದ ಕಛೇರಿ ಮುಕ್ತಾಯವಾಯಿತು. ಉಟ್ಟಿದ್ದ ಒದ್ದೆ ಬಟ್ಟೆಯನ್ನೂ ಕಟ್ಟಿದ್ದ ಶಾರೀರವನ್ನೂ ಲಕ್ಷಿಸದೆ ೫-೬ ಗಂಟೆಗಳ ಕಾಲ ಮೈಮರೆತು ಕೇಳುವವರನ್ನು ಮೈಮರೆಸಿ ಹಾಡುವುದೆಂದರೆ ಭಕ್ತಿಯ ಶಕ್ತಿಯೇ ಹೊರತು ಬೇರೆಯಲ್ಲ.

ಸಮ್ಮಾನ

೧೯೪೦ರಲ್ಲಿ ಚಂಬೈಯವರ ಕಚೇರಿ ಎರ್ನಾಕುಲಂನಲ್ಲಿ ನಡೆಯಿತು. ಆ ಸಂದರ್ಭದಲ್ಲಿ  ಅಧ್ಯಕ್ಷತೆ ವಹಿಸಿದ್ದ ಮುತ್ತಯ್ಯ ಭಾಗವತರು ಚಂಬೈಯವರಿಗೆ ‘ಗಾಯನ ಗಂಧರ್ವ’ಎಂಬ ಬಿರುದನ್ನು ಮಹಾಜನಗಳ ಪರವಾಗಿ ಕೊಟ್ಟು ಗೌರವಿಸಿದರು. ೧೯೪೫ರಲ್ಲಿ ಭಾಗವತರು ಚಂಬೈಯನ್ನು ಬಿಟ್ಟು ಮದರಾಸ್ ಪಟ್ಟಣದಲ್ಲಿ ನೆಲೆಸಿದರು. ಊರಿನಲ್ಲಿದ್ದ ಸಂಗೀತ ಪಾಠಶಾಲೆಯನ್ನು ತಮ್ಮ ಸುಬ್ರಹ್ಮಣ್ಯ ಭಾಗವತರಿಗೆ ವಹಿಸಿ, ತಾವು ತಮ್ಮ ಹೊಸ ನಿವಾಸದಲ್ಲಿ ಮತ್ತೊಂದು ಪಾಠಶಾಲೆಯನ್ನು ಪ್ರಾರಂಭಿಸಿದರು. ೧೯೫೧ರಲ್ಲಿ ನಡೆದ ಮದರಾಸಿನ ಸಂಗೀತ ವಿದ್ವತ್ಸಭೆಯ ಅಧಿವೇಶನದಲ್ಲಿ ಚಂಬೈಯವರಿಗೆ ‘ಸಂಗೀತ ಕಲಾನಿಧಿ’ ಎಂಬ ಗೌರವ ಪ್ರಶಸ್ತಿ ದೊರಕಿತು. ಇದು ಸಂಗೀತ ಕ್ಷೇತ್ರದಲ್ಲಿನ ಅತಿ ದೊಡ್ಡ ಪ್ರಶಸ್ತಿ. ೧೯೪೮ರಲ್ಲಿ ಚಂಬೈಯವರಿಗೆ ‘ಸಂಗೀತ ಸಾಮ್ರಾಟ್’ ಎಂಬ ಬಿರುದು ಕೊಡಲ್ಪಟ್ಟಿತು.

ಚಲನಚಿತ್ರದಲ್ಲಿ ಪಾತ್ರ

೧೯೪೦ರಲ್ಲಿ ವೈದ್ಯನಾಥ ಭಾಗವತರು ‘ವಾಣಿ’ ಎಂಬ ಚಲನಚಿತ್ರದಲ್ಲಿ ಭಾಗವಹಿಸಿದರು. ಅದರಲ್ಲಿ ಒಂದು ಕಛೇರಿಯನ್ನೆ ಮಾಡಿದ್ದಾರೆ. ಮೈಸೂರು ಟಿ. ಚೌಡಯ್ಯನವರ ಪಿಟೀಲು, ಪಾಲಘಾಟ್ ಮಣಿಅಯ್ಯರ್ ಅವರ ಮೃದಂಗ-ಇವೇ ಪಕ್ಕವಾದ್ಯಗಳಾಗಿರುವ ಆ ಕಛೇರಿ ಬಹಳ ಹೃದಯಂಗಮವಾಗಿದೆ. ಇದಕ್ಕಾಗಿ ಭಾಗವತರಿಗೆ ಕೊಟ್ಟ ಸಂಭಾವನೆ ೫೦೦೦ ರೂಪಾಯಿಗಳು. ಆ ಹಣವನ್ನೆಲ್ಲ ದೇವರ ಸೇವಾಕಾರ್ಯಕ್ಕೆ ಅರ್ಪಿಸಿದರು.

ನಿಜಕ್ಕೂ ವೈದ್ಯನಾಥರ ಜೀವನ ಸಂಗೀತಗಾರರಿಗೆ ಮೇಲ್ಪಂಕ್ತಿಯಾಗಿದೆ. ಏಕೆಂದರೆ, ಅವರಲ್ಲಿ ಶ್ರೇಷ್ಠಮಟ್ಟದ ಸಂಗೀತದ ಜೊತೆಗೆ ಶ್ರೇಷ್ಠ ಗುಣಗಳೂ ಸೇರಿದ್ದವು. ಅವರ ಹಾಗೆ, ದೊಡ್ಡ ಸಂಗೀತ, ದೊಡ್ಡ ನಡವಳಿಕೆ ಎರಡರಿಂದಲೂ ಜನಪ್ರಿಯರಾದ ವ್ಯಕ್ತಿಗಳು ಬಹಳ ವಿರಳ