ಚಂದಮುತ್ತನ ಬಗ್ಗೆ ಹಟ್ಟಿಯವರಲ್ಲಿ ಪ್ರೀತಿ ಮತ್ತು ಚಿನ್ನಮುತ್ತನಲ್ಲಿ ಅಸೂಯೆ ಹೆಚ್ಚಾದವು. ಇಬ್ಬರೂ ಕುಲಗುರುವಿನಲ್ಲಿ ವಿದ್ಯಾಬುದ್ಧಿ ಕೊಳಲು ಗೀತ ಸಂಗೀತ ಕಲಿತವರು. ಅಸೂಯೆಯಿಂದ ಚಿನ್ನಮುತ್ತನ ಏಕಾಗ್ರತೆ ಮುರಿದು ಮನಸ್ಸು ವಿಕಾರ ಯೋಚನೆಗಳಲ್ಲಿ ಮುಳುಗಿತು. ಗುರುವಿನ ಬಳಿ ಇಬ್ಬರೂ ಸೇರುತ್ತಿದ್ದರು. ಕುಲಗುರು ಒಂದು ತೋರಿಸಿದರೆ ಚಂದಮುತ್ತ ಹತ್ತಾಗಿ ಹುಟ್ಟಿಸಿ ವಿಸ್ತರಿಸಿ ಗುರುವಿಗೇ ಚೋದ್ಯ ಮಾಡುತ್ತಿದ್ದ. “ಇದನ್ನೆಲ್ಲಿ ಕಲಿತೆ?” ಎಂದು ಕುಲಗುರು ಕೇಳಿದರೆ “ನಿನ್ನಲ್ಲಿ” ಎನ್ನುತ್ತಿದ್ದ. “ನಾನು ನಿನಗಿದನ್ನು ಕಲಿಸಲೇ ಇಲ್ಲವಲ್ಲ” ಎಂದರೆ “ಹಾಂಗಿದ್ದರೆ ನೀನೇ ಬಲ್ಲೆ ಗುರುಪಾದವೇ” ಎಂದು ಪಾದ ಮುಟ್ಟುತ್ತಿದ್ದ. ಕುಲಗುರುವಿಗಿದರಿಂದ ಇನ್ನಷ್ಟು ಆನಂದ ಆಶ್ಚರ್ಯ ಆಗುತ್ತಿತ್ತು.

ಚಂದಮುತ್ತ ಕೊಳಲು ನುಡಿಸುತ್ತಿದ್ದರೆ ಕುಲಗುರು ಮೈಮರೆಯುತ್ತಿದ್ದ. ಅಕ್ಕಪಕ್ಕ ಇದ್ದವರು ನಿಂತವರು ನಿಂತುಕೊಂಡೇ ಕೂತವರು ಕೂತುಕೊಂಡೇ ಮೈಮರೆಯುತ್ತಿದ್ದರು. ಹಾಗೆ ಮೈಮರೆಯುತ್ತಿದ್ದಾಗ ತಮಗೆ ಯಾವುದೋ ಸುಖದ ಸೀಮೆಯಲ್ಲಿ ಸಂಚರಿಸಿದಂತಾಗುತ್ತಿತ್ತು. ತಮಗೆ ಅಪರಿಚಿತವಾದ ಅನೇಕ ಅಸ್ತಿತ್ವಗಳ ಸಖತನ ಸಿಕ್ಕಹಾಗೆ ಅನಿಸುತ್ತಿತ್ತು. ಆತನ ಸಂಗೀತ ಮುಗಿದ ಮ್ಯಾಲೆ ಈ ಲೋಕ ಬದುಕೋದಕ್ಕೆ ಮೊದಲಿಗಿಂತ ಚೆನ್ನಾಗಿದೆಯೆಂದು ಅನಿಸುತ್ತಿತ್ತು.

ಈಗ ಚಂದಮುತ್ತ ದನಕಾವಲಿಗೆ ಹೋದರೆ ಹೋದ; ಬಿಟ್ಟರೆ ಬಿಟ್ಟ. ಅಬ್ಬೆ ಒತ್ತಾಯ ಮಾಡುತ್ತಿರಲಿಲ್ಲ. ಯಾಕೆಂದರೆ ಬೇರೆ ಹಟ್ಟಿಯಲ್ಲಿದ್ದ ತನ್ನ ತಮ್ಮನನ್ನು ಕರೆದು ದನಕರುಗಳ ಉಸ್ತುವಾರಿಗಿಟ್ಟುಕೊಂಡಳು. ದೈವದ ಕೃಪೆ ತನ್ನ ಮಗನ ಮೇಲಾದದ್ದಕ್ಕೆ ಆನಂದವಾಗಿತ್ತು. ಆತಂಕವೂ ಆಗಿತ್ತು.

ಚಂದಮುತ್ತ ದಿನಾ ಬೆಳಿಗ್ಗೆ ಕೋಳಿಯ ಕೂಗಿಗೆದ್ದು, ತಣ್ಣೀರು ಮಿಂದು, ಮಡಿಯುಟ್ಟು ಬಾಗಿನ ತಗೊಂಡು ದೇವಾಲಯಕ್ಕೆ ಹೋಗುತ್ತಿದ್ದ. ಪಾತಾಳಗಂಗೆಯ ಕುಂಕುಮನೀರಿನಿಂದ ವಿಗ್ರಹಕ್ಕೆ ಸ್ನಾನ ಮಾಡಿಸಿ ದೈವದ ಎಡಬದಿಗೆ ಮೊಗ್ಗುಸಂಪಿಗೆ, ಬಲಬದಿಗೆ ಎಳೆ ಹಿಂಗಾರಿಟ್ಟು, ಮುಂದೆ ಮಡಿ ಬಾಗಿನವನಿಟ್ಟು ಹೊರಬಂದು ಬಾಗಿಲು ಮುಂದೆ ಮಾಡಿ, ದೈವದ ಕಡೆ ಬೆನ್ನು ತಿರುಗಿಸಿ ನಿಂತುಕೊಳ್ಳುತ್ತಿದ್ದ. ಸ್ವಲ್ಪ ಸಮಯವಾಗುತ್ತಲೂ ಬಾಗಿಲು ತಂತಾನೆ ತೆರೆದು ನಿನ್ನೆಯ ಮೈಲಿಗೆಬಟ್ಟೆ ಹೊರಕ್ಕೆ ಬೀಳುತ್ತಿತ್ತು. ಇಂದು ಕೊಟ್ಟ ಮಡಿಬಟ್ಟೆ ವಿಗ್ರಹದ ಮೈಮ್ಯಾಲಿರುತ್ತಿತ್ತು. ಚಂದಮುತ್ತ ದೈವಕ್ಕೆ ಕಳ್ಳಿನ ನೊರೆ, ಈಚಲರುಚಿಯರ್ಪಿಸಿ, ಬಾಗಿದ ನಮಸ್ಕಾರವ ಮಾಡುತ್ತಿದ್ದ.

ಚಂದಮುತ್ತನಿಗೆ ದಿನಾ ಆಗಬಾರದ ಅನುಭವಗಳಾಗುತ್ತಿದ್ದವು. ಶಿಲಾಮೂರ್ತಿಯ ಸಮೀಪ ಇದ್ದಾಗ ಇಡೀ ದಿನ ದಿವ್ಯ ಉದ್ರೇಕದ ಚಿಲುಮೆಯಲ್ಲಿ ಇರುತ್ತಿದ್ದ.

ಒಂದು ದಿನ ದೈವದ ಪೂಜೆ ಮುಗಿಸಿ ಹೊರಬಂದಾಗ ಅಂಗಳದಲ್ಲಿ ಶೃಂಗಾರ ಹೂದೋಟ ಬೆಳೆಯಬೇಕೆಂದು ಮಲ್ಲಿಗೆ ಬಳ್ಳಿಯ ನೆಟ್ಟ; ನೆಟ್ಟ ಮರುದಿನವೇ ಬಳ್ಳಿ ಚಿಗುರಿ ನಳನಳಿಸಿ ಬೆಳೆಯಿತು. ಮಾರನೇ ದಿನ ಮೊಗ್ಗು ಮೂಡಿ ಸುತ್ತ ಸೀಮೆಯ ತುಂಬ ಪರಿಮಳದ ಗಾಳಿ ಘಮಘಮಿಸಿ ಚಂದಮುತ್ತನಿಗೆ ಆನಂದದ ದಿಗಿಲಾಯಿತು. ತಕ್ಷಣ ಕಂಬಳಿಯ ಸೆರಗಿನಲ್ಲಿ ಕಣ್ಣು ಕೋರೈಸುವ ತಾರೆಯಂಥ ಮಲ್ಲಿಗೆ ಮೊಗ್ಗು ಹರಿದು ಅವಸರದಲ್ಲಿ ಪೋಣಿಸಿ ಸರ ಮಾಡಿದ. ಒಡನೆ ಗುಡಿಯೊಳಕ್ಕೋಡಿ ವಿಗ್ರಹದ ಎದುರಿಗೆ ನಿಂತು ನೋಡಿ ತಗುಬಗೆಗೊಂಡ –

ಮಾಟಗಾರ್ತಿ ಯಕ್ಷಿ, ಮಾಯಕಾರ್ತಿ ಯಕ್ಷಿ
ತಂತ್ರಗಾರ್ತಿ ಯಕ್ಷಿ, ಮಂತ್ರಗಾರ್ತಿ ಯಕ್ಷಿ
ಚಿಕ್ಕವಳು ಯಕ್ಷಿ, ಎಳೆಬೈತಲೆಯ
ಸುದ್ದ ಸುಳಿಯೋಳು ಯಕ್ಷಿ!
ಇರುಳಿನ ಹಾಗೆ ಸುರಳಿಗೂದಲ
ಕರಚೆಲುವೆ ಯಕ್ಷಿ!
ಅವಳೊಂದು ಕಣ್ಣಿನ ಭಾವ ನೋಡಿದರೆ
ತುಪ್ಪದ ಜೋಡಿ ದೀವಿಗೆಯಂತೆ.
ಅವಳೊಂದು ನೀಳ ಮೂಗಿನ ಭಾವ ನೋಡಿದರೆ
ಸಂಪಿಗೆ ಎಸಳಂತೆ.
ಅವಳೊಂದು ಬಾಯ ಭಾವ ನೋಡಿದರೆ
ಬೆಳ್ದಿಂಗಳ ನಗೆ ಸುರಿಸುತ್ತ
ಒಲುಮೆಯ ಚಿಲುಮೆ ಚಿಮ್ಮುತ್ತ
ಇನ್ನೇನು ಕುಣಿಯಲಿರುವ ನವಿಲಂತೆ
ನಿಂತ ಮೂರ್ತಿಯ ನೋಡಿ

ಚಂದಮುತ್ತನಿಗೆ ಮೆಚ್ಚಾಗಿ
ಕೈ ಮೈ ಮನಕ್ಕೆ ಮೋಹದ ಹುಚ್ಚಡರಿ
ಶಿಲಾಮೂರ್ತಿಯ ತುರುಬಿನಲ್ಲಿ ಮಲ್ಲಿಗೆ ಮೊಗ್ಗಿನಸರ ತುರುಬಿದ.
ದಳದಳ ಅರಳಿ ಹೂವಾದವು ಮುಡಿಗೇರಿದ ಮೊಗ್ಗು!
ಅಂದಕ್ಕೊಂದು ಮೊಗ್ಗು ಚಂದಕ್ಕೊಂದು ಮೊಗ್ಗು ಏರಿಸಿದ.
ಕಂಡಹಾಗೆ ಕಾಣಿಸದ ಹಾಗೆ ಮೂರ್ತಿಯ ಕೆನ್ನೆಯ ಸ್ಪರ್ಶಿಸಿದ.
ಶಿವ ಶಿವಾ! ಕೆನ್ನೆ ಕತ್ತಿನ ಮ್ಯಾಲೆ
ಯಾರದೋ ಉದ್ರೇಕದ ಉಸಿರಾಟ ತಾಗಿತು!
ಮೈಯಲ್ಲಿ ಮಿಂಚಿನ ಹೊಳೆ ಹರಿದು
ಸೊಂಟದ ಕೊಳಲು ಕಿತ್ತು ತುಟಿಗಿಟ್ಟುದೇ ತಡ,

ಯಾರೋ ಕಾಡಹಕ್ಕಿಯ ಹಾಡುಗಳ ಹೆಕ್ಕಿ
ಹುಡುಗನ ಮ್ಯಾಲೆ ಚೆಲ್ಲಿ ಕಿಲಕಿಲ ನಕ್ಕರು.
ಗಾಳಿಯಲ್ಲಿ ತೇಲಾಡುವ ಹಾಡುಗಳ
ಗಕ್ಕನೆ ಕೊಳಲುಲಿಯಲ್ಲಿ ಹಿಡಿದು ನುಡಿಸುತ್ತ
ಹಾಡು ತೋರಿದ ತಾಳ ಅನುಸರಿಸಿ
ಕುಣಿಯತೊಡಗಿದ.

ರಾಗಗಳಿಗೆ ಸರಾಗ ಒಲಿದ ಯಕ್ಷಿ
ಕಲ್ಲಿನ ಬಂಧನದಿಂದ ಛಟ್ಟನೆ ಬಿಡುಗಡೆ ಹೊಂದಿ
ಗಡಬಡಿಸಿ ಉಟ್ಟ ಮಡಿಬಟ್ಟೆಯ ತೀಡಿಕೊಂಡಳು.

ಅಂಗೈಯ ಕನ್ನಡಿ ಮಾಡಿ ನೋಡಿಕೊಂಡು
ಕರುಳು ತಿದ್ದಿಕೊಂಡಳು.
ಸೋರ್ಮಡಿಯ ಹೂವಿನ ಸರವ
ಮತ್ತೆ ಮುಟ್ಟಿ ನೋಡುತ
ಕಣ್ಣನಲ್ಲಿ ದೀಪವುರಿದು ಬೆಳಕಿನಲ್ಲಿ ತೇಲುತ
ಸಡಗರಿಸಿದಳು.
ಚಂದದ ಹುಡುಗ ಚಂದಮುತ್ತ ಕಲ್ಲುಮುಳ್ಳೆನ್ನದೆ ಕುಣಿಯುತ್ತಿದ್ದ.
ರೂಪುರೇಖೆ ಸುದ್ದಳ್ಳ ಚಂದಮುತ್ತ ಮರಡಿ ಮಾಳ ಅನ್ನದೆ ಹೆಜ್ಜೆ ಹಾಕುತ್ತಿದ್ದ.

ಹಾಡಿ ಅಲೆ ಅಲೆಯಾಗಿ ನುಗ್ಗಿ ಯಕ್ಷಿಯ ತೇಲಿಸಿದಾಗ
ತೂಕ ತಪ್ಪಿದಂತಾಗಿ ಸಮತೂಕ ಸರಿಪಡಿಸಿಕೊಂಡಳು.
ಕ್ಷಣಕ್ಷಣಕೆ ಹುಟ್ಟುವ ಹೊಂದುವ ಬೆಳೆಯುವ
ಏನಿದೇನೇ ತಾಯಿ ಈ ಅನುಭವ!

– ಎನುತ ನವಿಲಿನ ಹೆಜ್ಜೆ ಹಾಕಿದಳು. ಚಿಗುರು ಪಾದದ ಯಕ್ಷೀ ಕಲ್ಲೊರಟು ಮಣ್ಣೊರಟು ಕುಂಕುಮ ಕಾಲಿಗೆ ತಾಕಿ ನೋವಾಗಿ ಹಾ ಎಂದು ನರಳಿ ಅಸಹಾಯಕಳಾಗಿ ಹೇಳಿದಳು ಎಳೆಯ ಪಾದದ ಯಕ್ಷಿ:

ಅಯ್ಯಾ ಆತುರದವನೆ, ಅಯ್ಯಾ ಕಾತರದವನೆ
ಹೂಬಿಟ್ಟ ಕಬ್ಬಿನ ಜಿಲ್ಲೆಯಂಥವನೆ
ಚೆಲುವನೆ, ಎಲ್ಲರೊಳಧಿಕನೆ
ನೆಲದಲ್ಲಿ ಕಾಲೂರಿ ಗೊತ್ತಿರದವಳು
ನಾ ಹ್ಯಾಗೆ ಕುಣಿಯಲಿ?
ಕುಣಿಯದೆ ಹ್ಯಾಗಿರಲಿ?
ನಿಲ್ಲಿಸೋ ನಿಲ್ಲಿಸಯ್ಯಾ

ಇದ್ಯಾವುದನ್ನೂ ಕೇಳಿಸಿಕೊಳ್ಳದೆ ಹಾಡಿನಲ್ಲಿ ತನ್ಮಯನಾಗಿದ್ದ, ಕುಣಿದು ಕುಣಿದು ಅಂಗಜಲದಲ್ಲಿ ಅದ್ದಿಹೋಗಿದ್ದ ಚಂದಮುತ್ತನ ಚೆಲ್ವಿಕೆಯ ಚೋದ್ಯವ ನೋಡಿ ಸೋಜಿಗಗೊಂಡಳು.

ಅವ್‌ ನೋಡ ಕೊಳಲೂದಿ ಕುಣಿಯುವ ಹುಡುಗ
ಹುಚ್ಚು ಕೆರಳಿಸತಾನ ಅಂಗಾಂಗದೊಳಗ
ಹೆಗಲಿನ ಗೊಂಗಡಿ ನೆತ್ತೀತುರಾಯಿ
ಗರಿಬಿಚ್ಚಿ ಕುಣಿಧಾಂಗ ಶ್ರಾವಣದ ಸೋಗಿ ||

ಕಲ್ಲೆಂದು ಮೆಲ್ಲಗೆ ಸೊಲ್ಲಿಲ್ಲದೆ ಬಂದಾ
ಎಡದ ಕೈಲಿ ಎನ್ನ ಸೋರ್ಮುಡಿಯ ಹಿಡಿದಾ
ಬಲಗೈಲಿ ಮುಡಿಗೆ ಮಲ್ಲಿಗೆ ಸುತ್ತಿ ನಲಿದಾ
ಮುಂಗುರುಳು ನ್ಯಾವರಿಸಿ ಕಣ್ಣು ಹಬ್ಬಾದ ||

ತಡೆಯಲಾಗಲೆ ಇಲ್ಲ ನಮ್ಮ ಮೈ ನವಿರಾ
ಮೈತುಂಬ ಸಳಸಳ ತುಳುಕ್ಯಾವ ಬೆವರಾ
ಮೈತುಂಬ ಸಳಸಳ ತುಳುಕ್ಯಾವ ಬೆವರಾ
ಹುಟ್ಟಿ ಸ್ವಾಮಿಯೆ ನಿನ್ನ ಕಟ್ಟಳೆಯ ಹೊರತಾ
ಅರೆಗಳಿಗೆ ಇರಲಾರೆ ನಾ ನಿನ್ನ ಮರೆತಾ ||

ನಿಲ್ಲೊ ಗೊಲ್ಲರ ಹುಡುಗ ಕೊಳಲೂದಬ್ಯಾಡ
ನಮ್ಮ ರಾಗದ ಹುಚ್ಚ ಕೆರಳಿಸಬ್ಯಾಡ
ಮಂದಿ ಏನಂದಾರು ನಾ ಹಿಂದೆ ಬರಲು
ವಾರೀಗಿ ದೇವರು ಕೋಪಗೊಂಡಾರು ||

ತಿಳಿಯಬಲ್ಲವರೆಲ್ಲ ತಿಳಿಹೇಳಿರವ್ವಾ
ಸುರರ ಜಾತಿಗೆ ನಾನು ಹೊರತಾದೆನವ್ವಾ
ನಾವು ಹಂಗಿಗರವ್ವ ಚೆಲುವನ ಕಲೆಗೆ
ಕಲೆಯೊಂದಿಗೇ ಇವನ ಮುಗ್ಧ ಒಲುಮೆಗೆ ||

ಅಷ್ಟರಲ್ಲಿ ಬೇರೆ ಯಾರದೋ ದನಿ ಕೇಳಿಸಿ ಯಕ್ಷಿ ಹಿಂಜರಿದು ಮತ್ತೆ ಶಿಲಾಮೂರ್ತಿಯಾಗಿ ಶಿಲೆಯಲ್ಲಿ ಅಡಕಗೊಂಡಳು.