ಇಂತೀ ರೀತಿ ಮಾಯಕಾರ್ತಿ ಯಕ್ಷಿ ಚಂದಮುತ್ತನಿಗೊಲಿದು ಅವನ ಭಯಭಕ್ತಿಯಲಿ ಮುಳುಗೆದ್ದು ವಾಲಾಡುತ್ತ ಇರುವಲ್ಲಿ,

ಇತ್ತ ಚಿನ್ನಮುತ್ತನ ಹೃದಯದಲ್ಲಿ ಹಗೆಯ ಹೊಗೆಯಾಡತೊಡಗಿದವು. ಯಾವಳೋ ಮಾಯದ ಯಕ್ಷಿ ಅವನಿಗೆ ಒಲಿದಿರುವಳೆಂದು, ದಿನಾ ಮೈಲಿಗೆ ಕಳಚಿ ಇವ ಕೊಟ್ಟ ಮಡಿಯನುಡುವಳೆಂದು, ದಿನಕೊಂದು ವಿದ್ಯ ಸಿದ್ಧಿಗಳ ಕೊಡುವಳೆಂದು ಕತೆಗಳ ಕೇಳಿ ಅಸೂಯೆಯಿಂದ ಕಂಗಾಲಾಗಿ ಹೋದ.

ಚಂದಮುತ್ತನ ಬಗ್ಗೆ ನಿಂದಕದ ಮಾತಾಡಿ
ಆನಂದಪಟ್ಟ.
ಹುಸಿಕಳಂಕಗಳ ಹುಟ್ಟಿಸಿ
ಹಾದಿಬೀದಿಗಳಲ್ಲಿ ಅತಿರಂಜಿಸಿ ಹೇಳಿದ.
ಚಿನ್ನಮುತ್ತನ ದುರ್ಗಣಗಳ ಸಾವಿರ ಸಾರಿ
ಜಪಿಸಿ ಸೇಡಿನ ಕಿಡಿಯಾದಲ್ಲಿ
ಯಕ್ಷಿಯ ಮೊದಲ ಪರಿಸೆ ಬಂತು ….

ನಮಗೆ ಚಿನ್ನಮುತ್ತನ್ನ ಕಂಡರಾಗುವುದಿಲ್ಲ. ಯಾಕೆಂದರೆ ಚಿನ್ನಮುತ್ತನಿಗೆ ಕನಸು ಕಂಡರಾಗುವುದಿಲ್ಲ. ಕತೆಯಲ್ಲಿ ಕಾಲಿಟ್ಟವನಾದ್ದರಿಂದ ಬಿಡುವಂತಿಲ್ಲ. ಇಂತಾಗಿ ನಾವು ಕಂಡ ಸೋಜಿಗದ ಸಂಗತಿಯೊಂದನ್ನು ಹೇಳಿ ಅವನನ್ನು ಕತೆಯಲ್ಲಿ ಕರೆದುಕೊಳ್ಳುತ್ತೇವೆ.

ತಾಯಿಯಿಲ್ಲದ ಒಬ್ಬನೆ ಮಗನ್ನ ಹೆಗಡೆ ಕೊಂಡಾಟದಲ್ಲಿ ಬೆಳೆಸಿದನಾಗಿ ಸಿರಿಸಂಪತ್ತು ಅದ್ಧೂರಿ ದೊರೆತನದ ಸುಖಸಾಗರದಲ್ಲಿ ಬಾಳಾಡ್ತ ಇದ್ದ ಚಿನ್ನಮುತ್ತ. ಎತ್ತರವಾದ ಆಳು. ವ್ಯಾಯಾಮ ಮಾಡಿ ಕುಸ್ತೀ ಹಿಡಿದು ಗಟ್ಟಿಮುಟ್ಟಾಗಿದ್ದ ಅವನ ದೇಹ ಮನಸ್ಸುಗಳಲ್ಲಿ ಮೃದುವಾದ ಭಾಗಗಳೇ ಇರಲಿಲ್ಲ. ಬಹಳ ಕಾಲ ದೇಹವನ್ನ ಸೂರ್ಯನ ಸನ್ನಿಧಿಯಲ್ಲಿಟ್ಟಿದ್ದರಿಂದ ಅದು ಸುಟ್ಟ ಇಟ್ಟಿಗೆಯಂತಾಗಿತ್ತು. ಸರಿಕರೊಂದಿಗೆ ಕೂಡ ಸರಸವಾಡುವವನಲ್ಲ. ಚಿನ್ನಿಕೋಲು ಗೋಲಿಗುಂಡು ಲಗ್ಗೆ ಚೆಂಡಿನಲ್ಲಿ ಕೂಡ ತಾನೇ ಗೆಲ್ಲಬೇಕೆಂಬಾತ. ಬರಿ ಒಂದು ಹುಬ್ಬಿನ ಗಂಟಿನಿಂದ ಎದುರು ನಿಂತವನ ಬಾಯಿ ಮುಚ್ಚಬಲ್ಲವನಾಗಿದ್ದ. ಇನ್ನೇನು, ರಾತ್ರಿ ಅವನ ಕಣ್ಣು ಕಾಣುತ್ತಿರಲಿಲ್ಲ. ಇರುಳ ಸತ್ಯಗಳ ಕಾಣುವ ವಿವೇಕ ಮತ್ತು ತಾಳ್ಮೆ ಬಿಸಿಲಬೆಡಗಿನವರಲ್ಲಿ ಇರಲಿಲ್ಲವಾಗಿ ಇದೊಂದು ಸೋಜಿಗದ ಮಾತಲ್ಲ.

ಇಂತಿರಲು ಒಂದು ದಿನ ಮಡುವಿನಾಚೆ ದಡದಲ್ಲಿ ನಸುಕಿನಲ್ಲಿ ಯಕ್ಷಿಯ ಪೂಜೆ ಮುಗಿಸಿ ಚಂದಮುತ್ತ ಅದೇನು ಮೂಡು ಬಂತೋ ಕೊಳಲು ನುಡಿಸುತ್ತಿದ್ದ. ನಸುಕಿನ ಮಂಜು ಮಡುವಿನ ಮ್ಯಾಲೆ ಉಗಿಯ ಹಾಗಾಡುತ್ತಿತ್ತು. ಸವಿಗೊರಳ ಹಕ್ಕಿಗಳು ಬೆಳಗಿನ ಚಿಲಿಪಿಲಿ ನಿಲ್ಲಿಸಿ ಕೊಳಲು ಆಲಿಸುತ್ತಿದ್ದವು. ಎಳೆಯ ಹಂಸಹಂಸಿಯರ ಜೋಡಿಯೊಂದು ಮಡುವಿನ ಕನಸಿನ ಹಾಗೆ ಅರೆಗಣ್ಣಾಗಿ ತೇಲುತ್ತ ಕೊಳಲಾಲಿಸುತ್ತ ಮೈಮರೆತಿದ್ದವು. ನಾವು ಇಬ್ಬನಿಯಿಂದ ಥಳಥಳ ಹೊಳೆವ ಹಸರಿನಲ್ಲಿ ಕಾಲೂರಿ ಸುತ್ತಲಿನ ಶೀತಲ ಶಿವಶಾಂತಿಯನ್ನು ತೀಡಿ ಬರುವ ಕೊಳಲಿಗೆ ಶಬ್ಧಮುಗ್ಧರಾಗಿ ನಿಂತಿದ್ದೆವು. ಅಷ್ಟರಲ್ಲಿ ಯಾರೋ ನೀರಲ್ಲಿ ಜಿಗಿದ ಸದ್ದಾಗಿ ಆತಂಕವಾಯಿತು. ಯಾಕೆಂದರೆ ಹಂಸದ ಜೋಡಿ ಮನಸ್ಸು ಕದಡುವುದು ನಮಗೆ ಬೇಕಿರಲಿಲ್ಲ. ಆದರೆ ನಮ್ಮ ಊಹೆ ಮೀರಿ ಹಂಸಹಂಸಿಯರು ಕೊಳಲ ಹಾಡಿನಲ್ಲಿ ಸುಖರಂಜಿತರಾಗಿ ತನ್ಮಯರಾಗಿದ್ದರು. ನೀರಿನ ಸದ್ದಿನಿಂದ ಅವರ ಸಮಾಧಿ ಭಂಗವಾಗಲೇ ಇಲ್ಲ.

ನೀರಿಗಿಳಿದವನು ಚಿನ್ನಮುತ್ತ, ಕೊಳಲುಲಿ ಚಂದಮುತ್ತನೆಂದು ಗೊತ್ತಾಗಿ ಅಸೂಯೆಯಿಂದ ಸುಖವಂಚಿತನಾದ. ನೀರಿನಲ್ಲಿದ್ದರೂ ಮಾರಾಯನ ಮುಖ ಕಪ್ಪಿಟ್ಟಿತು. ಜಳಕವ ಮಾಡಿ ಅವಸರದಲ್ಲೆದ್ದು ಮೈಲಿಗೆ ಕಳೆದು ಲಂಗೋಟಿ ಹಾಕಿದ. ಜಡೆಕಟ್ಟಿ ಅಂಚಿನ ಮಡಿಯುಟ್ಟ, ಕೊಳಲದನಿ ತಡೆಯಿಲ್ಲದೆ ಹರಿದು ಬರುತ್ತಿರುವಾಗ ಹಂಸ ಜೋಡಿಯ ತನ್ಮಯತೆ ನೋಡಿ ಕಣ್ಣಿಗೆ ಖಾರ ಉಗ್ಗಿದಂತಾಯ್ತು ಅವನಿಗೆ.

ಸುಡಗಾಡ ಬೆಂಕಿಯ ಥರ ಕಣ್ಣುರಿದವು,
ರವರುದ್ರಗೋಪದಲ್ಲಿ ಕೊತಕೊತ ಕುದ್ದು
ಬುದ್ಧಿತಪ್ಪಿ ಅನುಚಿತವ ನೆನೆದು
ಬೆಣಚುಗಲ್ಲು ತಗೊಂಡು
ಸದ್ದಿಲ್ಲದೆ ಹೊಂಚಿಹೊಂಚಿ ಹೆಜ್ಜೆಯ ಹಾಕಿ ಸಂಚರಿಸಿ
ಆಯಕಟ್ಟಿನ ಜಾಗದಲ್ಲಿ ನಿಂತು, ಗುರಿಹಿಡಿದು
ತೇಲುವ ಜೋಡಿಗೆ  ಎಸೆದುಬಿಟ್ಟ ಶಿವನೆ!

ಶಿವ ಶಿವಾ
ಗಂಡು ಹಂಸದ ಕತ್ತಿನ ಕಳಸ ಮುರಿದು
ಒದರಲೂ ಆಗದೆ ಒದ್ದಾಡಿ ಪಟಪಟ ರೆಕ್ಕೆಯ ಬಡಿದು
ನೀರಲ್ಲಿ ಮುಳಿಗಿತು!
ಕಂಪಿತೆ ಹಂಸಿ ಏನೆಂದು ತಿಳಿಯದೆ
ಪ್ರಿಯಕರ ಮುಳುಗಿದುದ ನೋಡಿ
ಕಿಟಾರ್ನೆ ಕಿರಿಚಿದಳು.
ತರುಮರಗಳಲ್ಲಿದ್ದ ಹಕ್ಕಿಗಳು ಕಿತ್ತಾಡಿ
ಅಪರಿಚಿತ ವಿಕಾರ ಸದ್ದು ಮಾಡಿ
ಕಿರಿಚಿ ಚೀತ್ಕಾರ ಮಾಡಿದವು.
ಉಗುರಿನಿಂದ
ತಂತಾವೇ ಪರಚಿಕೊಂಡು
ರೆಕ್ಕೆಗಳಿಂದ ತಿವಿದಾಡಿದವು.
ಗಾಬರಿಯಲಿ ಹಂಸಿ
ಅಗಲವಾಗಿ ಕೆಂಗಣ್ಣು ತೆರೆದು ಚಿನ್ನಮುತ್ತನ
ನೋಡಿ, ನೋಟಗಳಿಂದ ಇರಿದು
ಅವನಿದ್ದ ಕಡೆಗೆ
ಬಿಟ್ಟ ಬಾಣದ ಹಾಗೆ
ಹಾರಿದಳು.
ಭಯದಲ್ಲಿ ಚಿನ್ನಮುತ್ತ ಸರಸರ್ನೆ ಮರೆಯಾದ.
ನಮ್ಮ ಕರುಳಿಗೆ ಗಾಯವಾಗಿ
ಹಂಸಿಯ ಅಲಾಪ ನೋಡಲಾರದೆ
ಚಿನ್ನಮುತ್ತನ, ಅವನ ಹುಚ್ಚಿನ ಸಮೇತ
ಅಲ್ಲೇ ಬಿಟ್ಟು ಬಂದೆವು ಶಿವಾ.

ಆಮೇಲೆ ಹಂಸಿ ಹಾರಲಿಲ್ಲ, ಕೂಗಲಿಲ್ಲ. ಬೇರೆ ಹಕ್ಕಿಗಳೊಂದಿಗೆ ಬೆರೆಯಲಿಲ್ಲ. ತಿನ್ನಲಿಲ್ಲ. ನೀರು ಮುಟ್ಟಲಿಲ್ಲ, ಪ್ರಿಯಕರನ ಕಗ್ಗೊಲೆಯಾದ ದಡದ ಬಳಿ ಹುಣ್ಣಿವೆ ನಂತರ ಚಂದ್ರನಂತೆ ದಿನಾ ಕ್ಷೀಣಿಸುತ ನಿಂತಳು. ದುಃಖ ತಡೆಯದೆ ಒಮ್ಮೆ ನಾವೇ ಸಮಾಧಾನ ಹೇಳಹೋದಾಗ ಅವಳು ಅಂಗಲಾಚಿದಳು:

“ದಯಮಾಡಿ ಒಮ್ಮೆ, ಒಂದೇ ಬಾರಿ ಅವನನ್ನ ಇಲ್ಲಿಗೆ ಕರೆದು ತರುತ್ತೀರಾ? ಅವನಿಗೆ ನಾನೇನೂ ಮಾಡುವುದಿಲ್ಲವೆಂದು ಭಾಷೆ ಕೊಡುತ್ತೇನೆ”.

– ಇಂತೆಂಬ ನುಡಿ ಕೇಳಿ ಒಪ್ಪಿಕೊಂಡು ಬಂದೆವು.

ರಾತ್ರಿ ಚಿನ್ನಮುತ್ತನ ಕನಸಿನಲ್ಲಿ ಹಂಸಿಯ ತೋರಿಸಿ “ಅವಳದ್ದಲ್ಲಿಗೆ ಒಮ್ಮೆ ಹೋಗಿ ಬಾ” ಎಂಬ ಸಂದೇಶ ಕೊಟ್ಟೆವು. ತಕ್ಷಣ ಎದ್ದು ಕೂತ. ಹೆದರಿದ್ದ. ಜಲಜಲ ಬೆವರೊರಿಸಿಕೊಂಡು ಮತ್ತೆ ಮಲಗಿದ. ಆದರೆ ಬೆಳಿಗ್ಗೆ ಬರಲಿಲ್ಲ.

ಮಾರನೇ ರಾತ್ರಿ ಮತ್ತೆ ಅದೇ ಕನಸು ತೋರಿದೆವು. ಈಗಲೂ ಹೆದರಿ ಎದ್ದು ಕೂತ. ಆದರೆ ಬರಲಿಲ್ಲ. ಹೀಗೆ ನಾಕೈದು ದಿನ ತೋರಿದರೂ ಬರಲಿಲ್ಲ. ಈಗ ಒಂದೆ ಕನಸನ್ನ. ಒಂದೇ ರಾತ್ರಿ ಅನೇಕ ಬಾರಿ ತೋರಿಸಿದೆವು. ಬರಬರುತ್ತ ಕಣ್ಣು ಮುಚ್ಚಿದಾಗೆಲ್ಲ ತೋರಿಸಿದೆವು. ಇನ್ನು ಈ ಕನಸಿಂದ ಮುಕ್ತಿಯಿಲ್ಲವೆಂದು ಗೊತ್ತಾಗಿ ತುಂಬಿದ ಸೋಮವಾರ ಬೆಳಿಗ್ಗೆ ನಡಿಯಲಿ ಚಿಕ್ಕ ಚೂರಿ ಸಿಕ್ಕಿಸಿಕೊಂಡು, ಕೈಯಲ್ಲಿ ಕಕ್ಕೆ ದೊಣ್ಣೆ ಹಿಡಕೊಂಡು ಬಂದ ನೋಡು –

ಶಿವ ಶಿವಾ –

ಅಷ್ಟು ದೂರದಿಂದಲೇ ಹಂಸಿ ಅವನ ಗುರುತಿಸಿ ಅವಳ ಕಣ್ಣು ಫಳಫಳ ಹೊಳೆದವು. ಚಿನ್ನಮುತ್ತ ಕೋಲು ಗಟ್ಟಿಯಾಗಿ ಹಿಡಿದುಕೊಂಡು ನಿಂತ. ಹಂಸಿ ಕಾಲೂರಿ ಎದುರೆದುರೇ ನಡೆಯುತ್ತ ಬಂದು ಅವನೆದುರು ಸಮೀಪದಲ್ಲಿ ನಿಂತಳು.

“ನನ್ನ ಪ್ರಿಯಕರನ ಪ್ರಾಣ ತಗೊಂಡೆಯಲ್ಲವೆ?
ನನ್ನ ಪ್ರಾಣವನ್ನೂ ತಗೋ ನನ್ನಪ್ಪಾ”

– ಎಂದು ಮನುಷ್ಯರಂತೆ ಮಾತಾಡಿ, ದೇಹ ಹಿಂಭಾಗದ ಮ್ಯಾಲೆ ಕುಂತು ಎರಡೂ ಕಾಲುಗುರುಗಳನ್ನು ಜೋರಿನಿಂದ ಎದೆಯಲ್ಲಿ ತುರುಕಿ ಎದೆಯನ್ನ ಹರಿದುಕೊಂಡುಬಿಟ್ಟಳು ಶಿವನೆ! ಶಿವ ಶಿವ ಅವಳ ಶುಭ್ರ ಎದೆ ಹರಿದು ನೆತ್ತರು ಚಿಲ್ಲನೆ ಚಿನ್ನಮುತ್ತನ ಮುಖಕ್ಕೆ ಸಿಡಿಯಿತು. ಹಾ ಎಂದು ನೋಡಿದರೆ ಅಷ್ಟರಲ್ಲೇ ಹಂಸಿಯ ಕತ್ತಿನ ಕಳಸ ಮುರಿದು ಗೋಣು ಚೆಲ್ಲಿ ಸತ್ತಾಗಿತ್ತು. ನಮ್ಮಲ್ಲಿಯ ಕೆಲವರು ದೃಶ್ಯವ ನೋಡಲಾರದೆ ಕಿಟಾರ್ನೆ ಕಿರಿಚಿಕೊಂಡರು. ಎದೆ ಪರಚಿಕೊಂಡರು. ಮುಖಮುಚ್ಚಿಕೊಂಡರು!

ಚಿನ್ನಮುತ್ತನ ಬಗ್ಗೆ ನಮಗೆ ಗೊತ್ತಿದ್ದ ಸಂಗತಿ ಇದು ಮಾತ್ರ. ನಾವಿಂದು ಈ ಕಥೆಯ ಹೇಳಿ ಮುಗಿಸುವುದರೊಳಗಾಗಿ ಯಕ್ಷಿಯ ಪರಿಸೆ ಬಂತು….