ಶಿವಪುರದ ಸಮಸ್ತ ಹಿರಿಕಿರಿಯರು ಮಂದಿಮಾರ್ಬಲ ಸಹಿತ ಮಿಂದು ಮುಡಿಯುಟ್ಟು, ಹಾಡಿಗೂಡುಗಳಲ್ಲಿ ಹಬ್ಬದ ಬೆಳಕಿಟ್ಟು ಕುಲದೇವರ ಪೂಜಿಸಿದರು; ತಂತಮ್ಮ ದನಕರು, ಕುರಿಮೇಕೆ ಮುಂತಾದ ಬದುಕಿನ ಭಾಗ್ಯಗಳನ್ನ ಹೂಹಿಂಗಾರುಗಳಿಂದ ಶೃಂಗರಿಸಿದರು. ಕುಲಗುರು ಮತ್ತು ಹೆಗಡೇನ ಹಿರಿತನದಲ್ಲಿ ಕೊಂಬು, ಕಹಳೆ, ನಗಾರಿ, ನೌಬತ್ತು ಮುಂತಾದ ಯಾವತ್ತು ವಾದ್ಯಂಗಳ ನಡುಸುತ್ತ ಯಕ್ಷಿಯ ಗುಡಿಗೆ ಹೋದರು. ಚಂದಮುತ್ತ ಈ ದಿನ ಅಬ್ಬೆಯ ಆದೇಶದಂತೆ ಮಿಂದು ಲಂಗೋಟಿಗಳಲ್ಲಿ ಮೇಲಾದ ಮುತ್ತಿನ ಗೊಂಡೆ ಜರತಾರಿ ಅಂಚಿನ ಲಂಗೋಟಿಯ ಧರಿಸಿ, ಮುಂಗೈಗೆ ಬೆಳ್ಳಿಯ ಕಡಗ ಇಟ್ಟು ಶೃಂಗಾರವಾಗಿ ಬೆಳ್ಳಿ ಕೊಳಲು ಸೊಂಟಕ್ಕೆ ಸಿಕ್ಕಿಸಿಕೊಂಡು ನಡೆದ. ಚಿನ್ನಮುತ್ತ ಅಂಚಿರುವ ಧೋತ್ರವುಟ್ಟು ಬಂಗಾರದಲ್ಲಿ ಶೃಂಗಾರವಾಗಿ ಮುತ್ತಿನ ಮುದ್ರೆಯಿರುವ ಉಂಗುರವಿಟ್ಟುಕೊಂಡ. ಕೈಗೆ ಚಿನ್ನದ ಕಡೆ ತೋಡೆಯಿಟ್ಟುಕೊಂಡು ಗೆಜ್ಜೆ ಕಟ್ಟಿದ ಪಿಳ್ಳಂಗೋವಿಯ ಹಿಡಿದುಕೊಂಡು ನಡೆದ.

ಯಕ್ಷಿಗುಡಿಯ ಅಂಗಳವ ಸೆಗಣಿ ಸಾರಿಸಿ ಕಬ್ಬಿನ ಕೋಲಿನ ಕಂಬ, ಪಂಚವಳ್ಳಿ ವೀಳ್ಯದೆಲೆಯ ಚಪ್ಪರ ಹಾಕಿ ನಂದಾದೀಪ ಹಚ್ಚಿದರು. ಹಟ್ಟಿಯ ದೇವರು ಬೆಟ್ಟದ ದೇವರು ಹಾಡಿ ಗೂಡಿನ ಸುತ್ತೂ ಸೀಮೆಯ ಸಮಸ್ತ ದೇವದೈವಂಗಳ ಕರೆಸಿ, ಧೂಪ ದೀಪ ಬೆಳಗಿ ಪಾದಕಾಣಿಕೆ ನೀಡಿ ಮರ್ಯಾದೆ ಮಾಡಿದರು.

ಚಂದಮುತ್ತ ಯಕ್ಷಿಯ ವಿಗ್ರಹವ ಮೀಯಿಸಿ ಮಡಿದಟ್ಟಿ ಉಡಿಸಿ, ಬೆಳ್ಳಿ ಬಂಗಾರದಲ್ಲಿ ಶೃಂಗಾರ ಮಾಡಿ, ಕುಂಕುಮವಿಟ್ಟ. ಬಲಬದಿಗೆ ಸಿರಿಸಂಪಿಗೆ, ಎಡಬದಿಗೆ ಎಳೆಹಿಂಗಾರಿಟ್ಟು ಸಾಷ್ಟಾಂಗವೆರಗಿದ. ಗುಡಿ ಬಾಗಿಲಲ್ಲಿ ಕಟ್ಟಿದ್ದ ಹಿಂಡುಕುರಿ ಬಲಿಕೊಟ್ಟು ಬಲಿ ಬಡಿಸಿ ಧೂಪ ದೀಪದಾರತಿಯ ಹೊಗೆ ಎಬ್ಬಿಸಿದರು. ಆಮೇಲೆ ಸರ್ವರೂ ಮುಂದೆ ಬಂದು ಶಕ್ತಿನಾಮಕಳಾದ ಯಕ್ಷಿಗೆ ಮೈಚೆಲ್ಲಿ ನಮಸ್ಕಾರವ ಮಾಡಿ –

ಹಿಂಡುವ ಹಸುಕುರಿ ಕೊಡು
ಮೇಯಿಸುವಷ್ಟು ಕಾಡು ಕೊಡು

ಎಂದು ಬೇಡಿಕೊಂಡರು. ಆಶೀರ್ವಾದ ಪ್ರಸಾದ ಪಡಕೊಂಬಾಗ ಗೋಧೂಳಿ ಲಗ್ನದ ಸಮಯವಾಯಿತು.

ಈಗ ಒಬ್ಬೊಬ್ಬರೇ ಮುಂದೆ ಬಂದು ತಂತಮ್ಮ ಕಲೆ ಕೈಚಳಕ ಚಮತ್ಕಾರಗಳ ತೋರತೊಡಗಿದರು. ಕೋಲಾಟದವರು ಹಾಡು ಹಾಡುತ್ತ ಕೋಲು ಕುಣಿಯುತ್ತ ತೆಂಗಿನ ಮರದಷ್ಟುದ್ದ ಧೂಳೆಬ್ಬಿಸಿದರು:

ಬಂತಣ್ಣ ಪರಿಸೆ ಬಂತೋ
ಮಾಯಕಾರ್ತಿ | ಯಕ್ಷಿಯ ಪರಿಸೆ ಬಂತೊ
ತಾವು ತಾವಿನ ಮಾವು ಚಿಗರ್ಯಾವು | ಗಿಣಿರಾಮ
ಪದಹಾಡಿ ಪರಿಸೆ ಬಂತೋ ||

ಯಾರಿಗೂ ಶಿವಾಪುರಕ್ಕೆ ಹಿಂದಿರುಗುವ ನೆನಪೇ ಆಗಲೊಲ್ಲದು. ಹಿರಿಯನೊಬ್ಬ “ಈಗ ಕುಲಗುರುವಿನ ಶಿಶುಮಕ್ಕಳು ಕಲಿತವಿದ್ಯೆಯ ಒಂದೆರಡು ವರಸೆ ತೋರಿಸಲಿ ಎಂದ. ಇದಕ್ಕಾಗಿಯೇ ಕಾಯುತ್ತಿದ್ದನೆಂಬಂತೆ ಚಿನ್ನಮುತ್ತ ಸೊಂಟದಲ್ಲಿ ಸಿಕ್ಕಸಿದ್ದ ಚಿನ್ನದ ಗೆಜ್ಜೆಯ ಕೊಳಲು ತೆಗೆದು ನಿಧಾನವಾಗಿ ರಾಗ ಎತ್ತಿ ನುಡಿಸತೊಡಗಿದ. ಸಹಜ ಸಂಚಾರಗಳ ತಕ್ಕ ಸ್ಥಾಯಿಗಳನೆಬ್ಬಿಸಿ, ಕಾಳಜಿಯಿಂದ ನಿಯಂತ್ರಿಸಿ ಆಕಾರಗೊಂಬ ಹಾಗೆ ಮಾಡಿದ. ಜನ ಸಂತೋಷಗೊಂಡು ಹೊಳೆಯುವ ಮಾತುಗಳಿಂದ ಕುಲಗುರುವಿನ ಕೌಶಲ ಹೊಗಳಿ, ಈಗ ಚಂದಮುತ್ತನ ಸರದಿಯೆಂದರು.

ಚಂದಮುತ್ತ ಗುರುಪಾದದ ಕಡೆ ನೋಡಿದ. ಕುಲಗುರುವಿನ ಸನ್ನೆಯಿಂದ ಅಪ್ಪಣೆ ಸಿಕ್ಕುತ್ತಲೂ ನೆತ್ತಿ ಕೇಶಗಳ ಸುತ್ತಿಕಟ್ಟಿ, ಎದ್ದು ಬಂದು ಗುರುಪಾದಕ್ಕೆ ಬಾಗಿ ಸತ್ಯದ ಶಿವದೇವರು, ಹೆತ್ತಯ್ಯ, ಮುತ್ತಯ್ಯರ ನೆನೆದು ಸೊಂಟದ ಬೆಳ್ಳಿಕೊಳಲು ತೆಗೆದು ತುಟಿಗಿಟ್ಟುಕೊಂಡ –

ಮಧುರವಾದ ನಾದಗಳ
ಹದವಾಗಿ ತೆಗೆದು ರಾಗಕ್ಕೆ ಮೊದಲಾದಾಗ
ಮೂಡುಮಲೆಯಲ್ಲಿ ಚಂದ್ರಮೂಡಿ
ಆವರಿಸಿಬಿಟ್ಟಿತು ಎಳೆಬೆಳ್ದಿಂಗಳ ಮಾಯೆ
ಅನಾಯಾಸ.
ಹರುಷದ ಬಳ್ಳಿ ಹಬ್ಬಿತು
ಕೆಳಗೆ ಕ್ಷಿತಿಜದ ತನಕ
ಮ್ಯಾಲೆ ಚಂದ್ರನ ತನಕ.
ಹಾಡು ಅಲೆ ಅಲೆಯಾಗಿ
ಬೆಳ್ತಿಂಗಳಗುಂಟ ತೇಲಿ ತೇಲಿ ಬಂದಾಗ
ಭಾವಪರವಶ ಮಂದಿ ಹಾ ಎಂದರು.

ಚಿನ್ನಮುತ್ತ ಹೊಟ್ಟೆಯುರಿಯಿಂದ ಸುಟ್ಟು ಭಸ್ಮವಾದ. ಇದು ಚಂದಮುತ್ತನ ಗಮನಕ್ಕೆ ಬಂದುದೇ, ಸೇಡು ಆವರಿಸಿಬಿಟ್ಟಿತು. ಪಂತಪೌರುಷಕ್ಕೆ ಬಿದ್ದು ಚಿನ್ನಮುತ್ತ ನುಡಿಸಿದ್ದನ್ನೆಲ್ಲ ತಾನೂ ನುಡಿಸಿ ಅವನ ದೌರ್ಬಲ್ಯಗಳ ಬೆಳಕಿಗೆ ತಂದ.

ಛಲವೇರಿ ಚಾಪಲ್ಯ ಬಲವೇರಿ
ಒಂದಾದ ಮ್ಯಾಲೊಂದು
ರಾಗಂಗಳ ನುಡಿಸಿ
ಜನ ತಲೆಗೊಂದು ಹೊಗಳುವಂತೆ ಮಾಡಿದ.
ಚಂದ್ರನ ಕಿರಣ ಹೆಚ್ಚು ಹೆಚ್ಚು
ಪ್ರಖರವಾಗಿ ಸುಡುತ್ತಿರುವಂತೆ
ಚಿನ್ನಮುತ್ತ ಖಿನ್ನನಾದ.
ಅದು ಕಂಡು ಉತ್ತೇಜಿತವಾಯಿತು
ಚಂದಮುತ್ತನ ಹರ್ಷ

ಇನ್ನೊಂದು ಹೀಗೇ ಮತ್ತೊಂದು ರಾಗ ಎತ್ತುವಷ್ಟರಲ್ಲಿ ಹಾಡಿನೆಳೆ ಕಿತ್ತಂತೆ ಥಟ್ಟನೆ ಕಟ್ಟಾಯಿತು. ಗುಡ್ಡ ನಕ್ಕಂತೆ ಕೇಳಿಸಿ ಎಲ್ಲ ಮಂದಿ ಆಘಾತಗೊಂಡು ದಿಗ್ಭ್ರಾಂತರಾಗಿ ಹಿಂದಿರುಗಿ ನೋಡಿದರೆ,

ಎಲ್ಲರ ಹಿಂದೊಂದು ಮುದುಕಿ,
ಹಾಳು ಮುದುಕಿ, ಕೊಳಕು ಮುದುಕಿ
ಚಂದಮುತ್ತನ ಕಡೆ ತಿರಸ್ಕಾರದಿಂದ ನೋಡುತ್ತ,
ಬಾಯಿ ತುಂಬ ಹಲ್ಲಿನ ನಗೆಯ ಗಹಗಹಿಸಿ ನಗುತ್ತ,
ನಿಂತಿದ್ದಾಳೆ! ಭೂಮಿ ಆಕಾಶಕ್ಕೆ ಏಕಾಗಿ ಕೀಲಿಸಿದಂತೆ!
ಮುಸುರೆ ಮೂಗು ಕೆಂಡಗಣ್ಣು ಕೆಂಪಗೆ ಬಿಟ್ಕೊಂಡು
ಕೆಂಜೆಡೆ ಕೆದರ್ಕೊಂಡು
ಕೆಂಜೆಡೆ ತುಂಬ ನಕ್ಷತ್ರದಂಥ ಮಣಿಗಳ ಮಡಿಕ್ಕೊಂಡು
ಕತ್ತಿನ ತುಂಬ ರುದ್ರಾಕ್ಷಿ ಧರಿಸ್ಕೊಂಡು
ಛಿದ್ರಕುಬುಸ ತೊಟ್ಟು ಚಿಂದಿ ಸೀರೆ ಉಟ್ಟು,
ಲಂಬ ಕುಚ ಜೋತ ಕರ್ಣ, ಕೈಯಲ್ಲಿ ಬಿದಿರ ಕೋಲಿನ ಚೌಡಿಕೆ ಹಿಡಿದುಕೊಂಡು
ರುದ್ರಗೋಪವ ತಾಳಿ
ಮನಸ್ಸಿಗೆ ಬಂದ ಹಾಗೆ ಧ್ವನಿ ಮಾಡಿ ಕೈಬೀಸಿ ಕಣ್ಣು ತಿರುವುತ್ತ,
ಗೊತಗೊತ ನಾರುತ್ತ ಕಂಡವರು ಕಾರಿಕೊಳ್ಳುವ ಹಾಗೆ, ನಿಂತವರು ಹೇಸಿಕೊಳ್ಳುವ ಹಾಗೆ
ಅಕರಾಳ ವಿಕರಾಳ ನಿಂತಿದ್ದಾಳೆ!

ನೋಡಿ ಹಿರಿಯರಿಂದ ಕಿರಿಯರತನಕ ಗಾಬರಿಯಾದರು. ಕಾಡು, ಬೆಟ್ಟ, ಗುಡಿಗುಂಡಾರ ಮುಗುಚಿ ಬಿದ್ದಂಗಾಯ್ತು. ಸದ್ದು ಗದ್ದಲವಾಗಿ ಇದ್ಯಾವ ಲೋಕದ ರಾಕ್ಷಸಿಯೆಂದು, ಇನ್ನು ಜೀವಸಹಿತ ವಾಪಸಾಗುವುದು ಶಕ್ಯವಿಲ್ಲೆಂದು ಕೆಲವರು ಬೋಧೆ ತಪ್ಪಿ ಬಿದ್ದರು. ಕೆಲವರು ಜೀವ ಹೆಪ್ಪುಗಟ್ಟಿಸಿಕೊಂಡು ನಿಶ್ಚಲ ಕುಂತರು.

ಚಂದಮುತ್ತನನ್ನ ಕೋಲಿನಿಂದ ತೋರಿಸುತ್ತ ಗುಡ್ಡ ಗುಡುಗುವ ಹಾಗೆ ಗುಡುಗಿದಳು – ಯಾರು? ಆ ಕೊಳಕು ಮುದುಕಿ!

“ಆ ಹಾಹಾ.
ಈ ಕ್ರಿಮಿ ನುಡಿಸಿದ್ದೆ ಸಂಗೀತವೆಂದಾದರೆ
ಸತ್ಯ ಸಂಗೀತ ಅಂಬೋದು ಸತ್ತು ಹೋಗದ?
ನಿತ್ಯ ನ್ಯಾಯ ಅಂಬೋದು ನಿಂತು ಹೋಗದ?
ಮ್ಯಾಲಿನ ಮಳೆ ಮ್ಯಾಲೇ ಇಂಗಿ
ಕೆಳಗಿನ ಬೆಳೆ ಸುಟ್ಟು ಹೋಗದ?

– ಎಂದು ಒರಟು ಮಾತುಗಳ ಅಲೆಯೆಬ್ಬಿಸಿ ಹೃದಯಗಳಿಗಪ್ಪಳಿಸಿ ಹರಿದಾಡಿದಳು.

ಈಗ ಧೈರ್ಯ ತಗೋಬೇಕಾದವನು ಕುಲಗುರುವೊಬ್ಬನೇ. ಉಳಿದವರೆಲ್ಲ ಗಾಬರಿಯಲ್ಲಿ ಉಸಿರಾಟವನ್ನೇ ನಿಲ್ಲಿಸಿದ್ದರು. ಕುಲಗುರು ಬೆವರುಜಲವ ಒರೆಸಿಕೊಂಡು ಕರವೆತ್ತಿ ಕೈಮುಗಿದು ತೊದಲುತ್ತ ಬಾಯಿಬಿಟ್ಟ.

ಕುಲಗುರು : ತಾಯಿ ನಮ್ಮ ಸಾವಿರ ತಪ್ಪು ಒಪ್ಪಿಕೊಂಡು ನೀನು ಯಾರಂತ ಹೇಳಿದರೆ…

ಮುದಿಜೋಗ್ತಿ : ನಮಗೆ ನಾಮಕರಣ ಮಾಡಿದವರಿಲ್ಲ. ನಾನಿದ್ದೇನೆ.
ನನ್ನ ಸತ್ಯವೂ ಇದೆ. ಕಣ್ಣಿದ್ದರೆ ನೋಡಿಕೊ. ನೆತ್ತರಲ್ಲಿ
ಹುಟ್ಟಿದವಳಲ್ಲ. ನೀರಲ್ಲಿ ನೆನೆದವಳಲ್ಲ. ಆಕಾಶವೆಂಬ
ಬಯಲ ಕೆರೆಯಲ್ಲಿ ಬಿಳಿತಾವರೆಯೆಂಬ ಮೂರೆಸಳಿನ
ಹೂವಿನಲ್ಲಿ ಹುಟ್ಟಿದವಳು; ನಾನು ಕಾಲನ ಸೂಳೆ,
ನೀ ಯಾರು ಮುದಿಯ?

ಕುಲಗುರು : ನಾನು ನಿನ್ನ ಪಾದದ
ಧೂಳು; ಕುಲಗುರು, ಈ ಶಿಶುಮಕ್ಕಳಿಗೆ
ಸಂಗೀತ ಕಲಿಸಿದವನು.

ಆವಾಗ ಥೂ ಎಂದು ಕುಲಗುರುವಿನ ಮುಖದ ಕಡೆಗೆ ಉಗಿದು ಹೀಂಕಾರವಾಗಿ ಜರಿದು ನುಡಿದಳು ನೋಡು, ಯಾರು? ಹೊತ್ತಿಕೊಂಡುರಿವ ಕಣ್ಣಿನ ಆ ಕೊಳಕು ಮುದುಕಿ –

ಮುದಿಜೋಗ್ತಿ : ಥೂ ನಿನ್ನ ಮುದಿ ಯೋಗ್ಯತೆಗೆ ಬೆಂಕಿ ಹಾಕ
ಇಂಥ ಕಚಡ ಸಂಗೀತಕ್ಕೆ ಗುರುವಾ ನೀನು?
ನಾಳೆ ಪಶ್ಚಿಮದಿಂದ ಬರುವ ಕಲಿಯುಗಕ್ಕೆ
ತಕ್ಕಡಿಯಲ್ಲಿ ತೂಗಿ ಈ ಸಂಗೀತ
ಮಾರಿಕೊ!

ಅಗೋ ಅಗೋ ಅಲ್ಲೊಂದು ಕೋತಿ ಕುಂತಿದೆ
ನೋಡಿರಯ್ಯಾ,
ಆಹಾಹಾ ಗೊಲ್ಲ ಕುಲದ ಜ್ಯೋತಿಯ
ನೋಡಿರಯ್ಯಾ,
ಅರೇರೇ ನಿಮ್ಮ ಹಟ್ಟಿಯ ಕೀರ್ತಿ ಶಿಖರವ
ನೋಡಿರಯ್ಯಾ

– ಎಂದು ಚಂದಮುತ್ತನ್ನ ತೋರಿಸಿ ಅವನಿದ್ದಲ್ಲಿಗೆ ಗುಡುಗುಡುನೆ ಓಡಿಬಂದಳು. ಚಂದಮುತ್ತ ಎದ್ದು ನಿಂತು ಗಡಗಡ ನಡುಗುತ್ತಿದ್ದ. ಆ ಮುದಿ ಸೇಡುಮಾರಿ ನೊರನೊರನೆ ಹಲ್ಲು ಕಡಿದು ಕೈತಿರುವಿ ಕೇಳಿದಳು:

ಹೆಚ್ಚಳ ಪಡಬೇಡವೋ ಏ ಕಡಿಮೆಯವನೇ
ನಿನ್ನ ಸತ್ಯ ನನಗೆ ಚೆನ್ನಂಗೊತ್ತು.
ಸತ್ಯ ಇದ್ದರೆ ಹೀಗೆ ನುಡಿಸಬಲ್ಲೆಯಾ?

– ಎಂದು ಚಿಂದಿ ಸಿರೆ ತೆಗೆದು ಕಚ್ಚೆ ಹಾಕಿಕೊಂಡು ಬಗಲಲ್ಲಿದ್ದ ಚೌಡಿಕೆ ಮುರಿದು ಅದರ ಕೋಲು ಹಿರಿದು ಅದನ್ನೇ ಕೊಳಲಿನಂತೆ ತುಟಿಗಿಟ್ಟು ನುಡಿಸಿದರೆ – ಶಿವ ಶಿವಾ! ಸರ್ವಲೋಕ ಸಮಸ್ತ ಜನ ಇರಿವೆಂಬತ್ತು ಕೋಟಿ ಜೀವರಾಶಿಗಳೆಲ್ಲ ಭಾವಪರವಶರಾಗಿ, ಮೂಕವಿಸ್ಮಿತರಾಗಿ ಕೊಳಲ ಸಂಗೀತದ ಬೆಳ್ದಿಂಗಳಲ್ಲಿ ಅದ್ದಿ ಹೋದರು! ಏಸೊ ಜನ್ಮದ ಸುಖದ ನೋವು ನೆನಪಾದವು. ಗಾಳಿ ದೇಹದ ದೈವಂಗಳನು ನಾದದಲ್ಲಿ ಸುಳಿವುದೋರಿಸಿ ಹಾಡಿನ ರೂಪ ಕೊಟ್ಟು ಸಾಕ್ಷಾತ್ಕಾರ ಮಾಡಿ ತೋರಿಸಿದಳು. ಜನ ಧನ್ಯರಾಗಿ, ತನ್ಮಯರಾಗಿ ಮೈಮರೆತು ಮಾತು ಮರೆತಿರುವಾಗಲೇ ಗಕ್ಕನೆ ಕೊಳಲುಲಿ ನಿಲ್ಲಿಸಿ ದುಡುದುಡುನೆ ಓಡಿಬಂದು ಚಂದಮುತ್ತನ ಕೈಕೊಳಲನ್ನು ಕಸಿದು ಲಟ್ಟನೆ ಮುರಿದು ಅವನ ಮುಖದ ಮ್ಯಾಲೆಸೆದು ಏನೆಂದು ಯಾಕೆಂದು ಹ್ಯಾಗೆಂದು ಜನ ತಿಳಿಯುವ ಮುನ್ನವೇ ಕಾಡಿನಲ್ಲಿ ಕಣ್ಮರೆಯಾದಳು. ಯಾರು? ಆ ಮುದಿಜೋಗ್ತಿ!