ನೊರೆ ನೊರೆ ಹಾಲಲ್ಲಿ ಹುಳಿಯ ಹಿಂಡಿದರ್ಯಾರು?
ಬೆಳ್ದಿಂಗಳು ಹೆಪ್ಪುಗಟ್ಟಿ
ಶಿವಾಪುರದ ಬಯಲಿನ ತುಂಬ ಭರಿತವಾಯ್ತು.
ಮುಕ್ತಾಯವಾಯಿತು ಅಸ್ತವ್ಯಸ್ತ ಪರಿಸೆ.
ಜೋಗ್ತಿಯ ಹಾಡಿನ ಅಮಲಿನಲ್ಲಿ
ಅದ್ದಿಹೋಯಿತು ನಾಡು ನರಲೋಕ.
ತೇಲುಗಣ್ಣಲ್ಲಿ ತೇಲಿ ಮಾಯದ ನಿದ್ದೆಯಲ್ಲಿ
ಮಲಗಿಬಿಟ್ಟಿತು ಹಟ್ಟಿ.

ತನ್ನ ಹಾಡುಗಳ ತನಗಿಂತ ಚಂದ ನುಡಿಸಿ ತನ್ನ ತಪ್ಪುಗಳ ಕಿವಿಗಪ್ಪಳಿಸುವಂತೆ ಮಾಡಿದ ಚಂದಮುತ್ತನ ಮ್ಯಾಲೆ ಚಿನ್ನಮುತ್ತನಿಗೆ ರವರವ ರುದ್ರಗೋಪ ಬಂದಿತ್ತು. ತನ್ನ ಪರವಹಿಸಿ ಜೋಗ್ತಿಯೇ ಆ ಸೇಡು ಚುಕ್ತ ಮಾಡಿದ್ದಕ್ಕಾಗಿ ಚಿನ್ನಮುತ್ತ ಆನಂದದ ಅಮಲೇರಿ ನಿದ್ರಿಸಲಿಲ್ಲ.

ಜೋಗ್ತಿಯ ಸಂಗೀತದ ಅನುಭವವನ್ನು ಮೆಲುಕು ಹಾಕುತ್ತ ಶಿವಸುಖದ ಅಮಲೇರಿ ಕುಲಗುರು ನಿದ್ರಿಸಲಿಲ್ಲ.

ಜೋಗ್ತಿಯ ಪಾದ ಹಿಡಕೊಂಡು ಸಂಗೀತ ವಿದ್ಯವ ಕಲಿಯಬೇಕೆಂಬ ದಿವೋತ್ಸಾಹದಲ್ಲಿ ಚಂದಮುತ್ತ ನಿದ್ರಿಸಲಿಲ್ಲ. ಜೋಗ್ತಿಯ ದರ್ಶನಕ್ಕೆ ಈಗಲೇ ಹೋಗಬೇಕೆಂದು ನಿಶ್ಚಯವ ಮಾಡಿ ಹೆತ್ತಯ್ಯ ಮುತ್ತಯ್ಯರ ನೆನೆದು ಶಿವಧೋ ಎಂದು ಶಿವದೇವರ ಸ್ಮರಣೆಯ ಮಾಡಿ ಹೆಗಲಿಗೆ ಕಂಬಳಿ ಕೈಗೆ ಬೆತ್ತ ತಗೊಂಡು ಅಬ್ಬೆಯ ಪಾದ ಪಡಕೊಳ್ಳಲು ಹೊರಟ.

ಅಂಗಳದಲ್ಲಿ ಅಬ್ಬೆ ಕಲ್ಲು ಬಂಡೆಗೊರಗಿ ಕುಂತಿದ್ದಳು.
ಮುಂದೊಂದು ಹರಿವಾಣವಿತ್ತು.
ಹರಿವಾಣದಲ್ಲಿ ನೀರಿತ್ತು.
ನೀರಿನಲ್ಲಿ ಮೂಡಿ ಚೆಲ್ಲಾಟವಾಡುತ್ತಿದ್ದ ಚಂದ್ರ.
ಚಂದಮುತ್ತ ಸದ್ದಿಲ್ಲದೆ ಹೋಗಿ
ಅಬ್ಬೆಯ ಬಳಿ ಕುಂತ.
ಮೂಡಿದ್ದ ಚಂದ್ರ
ಅಬ್ಬೆಯ ಜೊತೆ ಮಾತಾಡಿದಂತಿತ್ತು.
ಅಬ್ಬೆಯ ಕದ್ದು ನುಡಿದಾಡಿ
ಚಂದ್ರನಿಗೆ ಚಾಡಿ ಹೇಳಿದಂತಿತ್ತು.
ಆ ಭಾಷೆ ತನಗೆ ತಿಳಿಯದಾಗಿತ್ತು.

ಅಬ್ಬೆ ಇಂತೆಂದಳು:

ನೆನಪಿದೆಯ ಕಂದ?
ಚಿಕ್ಕಂದು
ಮಡುವಿನಲ್ಲಿ ಮೂಡಿ ಮುರಿದಾಡುವ ಚಂದ್ರನ ನೋಡಿ
ಅದು ಬೇಕೆಂದು ಕಾಡಿ ಬೇಡಿ ನೀನತ್ತೆ.
ಹಟಮಾಡಿ
ಆಭರಣ ಕಿತ್ತೆಸೆದೆ, ಹಸ್ತ ಕಡಗವ ಎಸೆದೆ
ಅನ್ನೋದಕ ಬಿಟ್ಟು ಹಾಸಿಗೆಗೆ ಬೆನ್ನು ಹಚ್ಚದೆ
ಹಾಗೇ ಕೂತೆ.

ಭೀತ ಬೆರಗಿನ ಅಬ್ಬೆ ನಾನು –
ಚಂದ್ರ ತನ್ನ ಕಥೆಯ ಮರಿಮೀನುಗಳಿಗೆ
ಅಭಿನಯಿಸಿ ತೋರುತ್ತಾನೆ.
ನೋಡು ಕಂದಾ ಎಂದೆ.

ನೀನು ಮಾಡಿದ್ದೇನು?
ಹರಿವಾಣದಲ್ಲಿ ನೀರಿಟ್ಟು, ಮೂಡಿದ ಚಂದ್ರನಿಗೆ
ನನಗೂ ಕಥೆ ಹೇಳೆಂದು ಅಳುತ್ತ ಕೂತೆ.
ಅತ್ತು ಅತ್ತು ನನ್ನ ಮಡಿಲಲ್ಲಿ ಮಲಗಿ ನಿದ್ದೆಹೋದೆ.
ನಿನ್ನ ಮುಂಗುರುಳಲ್ಲಿ ಆಟವಾಡುತ್ತ
ಚಂದ್ರ ನಿದ್ದೆ ಹೋದ.

ಬೆಳಿಗ್ಗೆ
ಹಿತ್ತಲಲ್ಲಿ ಅರಳಿದ್ದ ಮಲ್ಲಿಗೆಯ ತೋರಿಸಿ
ನೋಡು ನೋಡಬ್ಬೇ
ಹಗಲ ಚಂದ್ರನಿಗೆ ಅಣಕಿಸುತ್ತಾವೆ
ನಮ್ಮ ಹಿತ್ತಲ ಮಲ್ಲಿಗೆ

– ಅಂತ ನೀನಂದೆ. ನೆನಪಿದೆಯಾ ಕಂದಾ?

ಚಂದಮುತ್ತ ಮಾತಿಲ್ಲದೆ ಪ್ರೀತಿಯಿಂದ ಅಬ್ಬೆಯ ಬೆನ್ನಿಗೆ ಮುಖ ಉಜ್ಜುತ್ತ ಒರಗಿದ.

“ಇಂದು ದೊಡ್ಡ ಹುಣ್ಣಿವೆಯಲ್ಲವೆ? ಚಂದ್ರನ್ನ ಕುಡಿ”

– ಎಂದು ಬಲ ಬರಲೆಂದು ಹರಿವಾಣದಲ್ಲಿ ಚಂದ್ರನನ್ನ ಮೂಡಿಸಿ ಮಕ್ಕಳಿಗೆ ಕುಡಿಸುವ ಕುಲಾಚಾರದಂತೆ ಹರಿವಾಣವನ್ನ ಎತ್ತಿ ಮಗನ ಮುಂದೆ ಹಿಡಿದಳು.

“ನಾನು ಮೊಲೆ ಕುಡಿಯೊ ಕೂಸೇನಬೇ?”

ಎಷ್ಟು ದೊಡ್ಡವನಾದರೂ ಅಬ್ಬೆಗೆ ಮಗನೇ”

– ಎಂದು ಹರಿವಾಣವ ಮಗನ ತುಟಿಗಿಟ್ಟಳು. ಅದರಲ್ಲಿ ಮೂಡಿದ್ದ ಚಂದ್ರನ ಸಮೇತ ಚಂದಮುತ್ತ ಗಟಗಟ ಕುಡಿದ. ಚಂದ್ರನ ಕುಡಿದೆಯೊ ಚಂದ್ರನ ಬೆಳಕು ಕುಡಿದೆಯೊ! ಮೈ ಮನಸ್ಸಿನ ಕುದಿ ಕಮ್ಮಿಯಾಗಿ ತಂಪಾದವು. ಚಿನ್ನಮುತ್ತನೊಂದಿಗಿನ ಪಂತ, ಕೊಳಕು ಜೋಗ್ತಿಯ ಅವತಾರ, ಅವಳ ಹಾಡು, ತನಗಾದ ಹಾಡಿನ ಹಸಿವು, ಕೊಳಲು ಕಳೆದು ಕೊಂಡಿದ್ದು, ಕುಡಿದ ಬೆಳ್ದಿಂಗಳು ಇವೆಲ್ಲವುಗಳಿಗೆ ಅಬ್ಬೆಯ ಪ್ರೀತಿಯ ಮಾಯೆ ಆವರಿಸಿ ಹಾಯೆನಿಸಿ ಹಾ ಎಂದು ಅಬ್ಬೆಯ ತೊಡೆಯ ಮ್ಯಾಲೊರಗಿದ.

“ಎವ್ವಾಬೇ ಚಿಕ್ಕಂದು ನೀ ಹೇಳುತ್ತಿದ್ದ ಜೋಗುಳ ಹಾಡಬೇ” ಎಂದ. ಮಗನ ನುಡಿ ಕೇಳಿ ಸಕ್ಕರೆ ಮುಕ್ಕಿಧಂಗಾಗಿ ಅಬ್ಬೆಯ ಹೃದಯ ಅಕ್ಕರೆಯಿಂದ ಅರಳಿ ವಿಸ್ತಾರವಾಯಿತು. ಹಾಡಿದಳು:

ಬೆಳ್ಳಿ ಬೆಟ್ಟದ ಮ್ಯಾಲೆ ಕಾಡು ಹೂಗಳ ತೇರು
ಹಾಲು ಹೊಳೆ ತುಂಬಿ ಹರಿದಾವು | ನೋಡಿದರ
ಚಂದ್ರ ಅಲ್ಲಿಂದೆರಡು ಮಾರು ||
ಕದ ಮುಚ್ಚಿರೇ ಬ್ಯಾಗ ಕನ್ನ ಹಾಕುತ್ತಾಳೆ
ಚಂದ್ರಲೋಕದ ಯಕ್ಷಿ ಬಂದು | ಕಂದನ್ನ
ಕಿನ್ನರ ಲೋಕಕೊಯ್ದಾಳು||

ತನ್ನ ಬಿಟ್ಟನ್ಯರನು ನೀನು ನೋಡದ ಹಾಂಗ
ಮಾಡುವಳು ಮಾಯಕಾರ್ತಿ ಯಕ್ಷಿ | ನನ ಕಂದ
ಕಣ್ಣ ತೆರಿಬ್ಯಾಡ ಮೈಮರತು ||

ಅಬ್ಬೆಯ ಅಕ್ಕರೆಯ ಅಮಲಿನಲ್ಲಿ ಚಂದಮುತ್ತನಿಗೆ ಯಾವಾಗ ನಿದ್ದೆ ಹತ್ತಿತೊ, ಎಚ್ಚರವಾದಾಗ ಅಂಗಳದಲ್ಲಿ ಅಬ್ಬೆಯ ತೊಡೆಯ ಮ್ಯಾಲೆಯೇ ಮಲಗಿದ್ದ. ಚಂದ್ರ ಬೆಳ್ಳಿಯ ಬೆಳಕನ್ನ ಸುರಿಯುತ್ತಲೇ ಇದ್ದ. ಈ ದಿನ ಅಬ್ಬೆ ಕುಡಿಸಿದ ಚಂದ್ರ ಕಾರಣವಾಗಿಯೋ ಏನೋ ಬೆಳಕಿನ ಹಸಿವಾಗಿ ಥಟ್ಟನೆ ಎದ್ದು ಕೂತ. ಅಬ್ಬೆ ಬಂಡೆಗೊರಗಿ ನಿದ್ರಿಸುತ್ತಿದ್ದಳು. ಪಾದಮುಟ್ಟಿ ಧೂಳನ್ನು ತಲೆಗೊರೆಸಿಕೊಂಡು ಸಪ್ಪಳಾಗದ ಹಾಗೆ ಹೆಗಲ ಕಂಬಳಿ ಕೈಬೆತ್ತದ ಕೋಲು ತಗೊಂಡು ಜೋಗ್ತಿಯ ಹುಡುಕಿಕೊಂಡು ಹೊರಟ. ಅಬ್ಬೆ ಕನವರಿಸುತ್ತಿದ್ದಳು:

ಚಂದ್ರಲೋಕದ ಯಕ್ಷಿ ಬಂದು
ಬೊಗಸೆಯಲ್ಲಿ ಬೆಳ್ದಿಂಗಳ ತುಂಬಿಕೊಂಡು
ಚೆಲ್ಲಾಡಿದಳು
ಕೇರಿದಳು ಎಸೆದಳು
ಮುಖಕ್ಕೆ ಮೆತ್ತಿಕೊಂಡು
ತಿಂದಳು ಕುಡಿದಳು ತೇಗಿದಳು
ಈಜಿದಳು ಮ್ಯಾಲೆ ಹಾರಾಡಿದಳು
ಕಣ್ಣಲ್ಲಿ ಎದೆಯಲ್ಲಿ ತುಂಬಿಕೊಂಡಳು
ಒದ್ದೆ ಹಸಿರಿನ ಮ್ಯಾಲೆ ಹಾಡನ್ನ ಮಲಗಿಸಿ
ತಾನು ಮಲಗಿದಳು.