ತುಂಬಿದ ಸೋಮವಾರ, ಸಪ್ಪಟ ಸರಿರಾತ್ರಿ ಶಿವನೇ ಎಂದು ಚಂದಮುತ್ತ ಹೊರಟ. ಜೋಗ್ತಿ ಕಣ್ಮರೆಗೊಂಡ ದಿಕ್ಕನ್ನ ಅಂದಾಜು ಮಾಡಿ ಅದೇ ದಿಕ್ಕಿಗೆ ಅಕ್ಕಪಕ್ಕ ನೋಡುತ್ತಾ ಗುಡ್ಡಗ್ವಾರಣ್ಯ ಬೆಟ್ಟ ಕಾಡು ಅಲೆದಾಡಿ ಹುಡುಕುತ್ತ ನಡೆದ. ದಾರಿಯಲ್ಲಿ ಸಿಕ್ಕ ಖಗಮೃಗಾದಿಗಳ ನೋಡುತ್ತ ಬೆಳ್ದಿಂಗಳಲ್ಲಿ ದಟ್ಟ ನೆರಳು ಚೆಲ್ಲಿದ್ದ ಬಂಡೆಗಳ ಬುಡದಲ್ಲಿ ಮರಗಳಲ್ಲಿ ತುದಿಯಲ್ಲಿ ಅವಿತಿರುವಳೋ ಎಂದು ಕಣ್ಣಿಂದ ಕೆದಕಿ ಬೆದಕಿ ನೋಡುತ್ತ ನಡೆದ. ಬೆಳ್ಳಂಬೆಳಕಾಗಿ ಚಿಲಿಪಿಲಿ ಜಗತ್ತು ಎಚ್ಚರವಾಗಿ ಮೂಡುಮಲೆಯಲ್ಲಿ ಸೂರ್ಯನಾರಾಯಣ ದೇವರು ಉದಯವಾಗಿ “ಅಯ್ಯೋ ಯಕ್ಷಿಯ ನಿತ್ಯದ ಪೂಜೆ ತಪ್ಪಿತಲ್ಲೋ ಶಿವನೆ!” ಎಂದು ಅರಿವಾಗಿ ತಲೆಮ್ಯಾಲೆ ಕೈಹೊತ್ತು ಕುಂತ. ನಂಬಿಗೆಯಿಟ್ಟು ದೈವವ ತನಗೊಪ್ಪಿಸಿದ ಕುಲಗುರುವಿಂಗೆ, ಹಟ್ಟಿಯ ಸಮಸ್ತ ದೈವಕ್ಕೆ, ಬೂತಾಯಿಗೆ ಸಮ ಅಬ್ಬೆಗೆ, ಮ್ಯಾಲೆ ಯಕ್ಷಿಗೆ ದ್ರೋಹ ಮಾಡಿದನೆಂದು ಕೋಲಿನಿಂದ ತಲೆತಲೆ ಹೊಡೆದುಕೊಂಡು ಕುಂತ. ಈ ಹಿಂಗೆ ಪರಿಪರಿ ರೀತಿಯಲಿ ಪಶ್ಚಾತ್ತಾಪ ಪಡುವಲ್ಲಿ ಗಿಣಿಮರಿಯೊಂದು ತಲೆತಟ್ಟಿ ಹಾರಿಹೋಯಿತು. ತಕ್ಷಣವೆ ಜೋಗ್ತಿಯ ಹಾಡಿನ ನೆನಪು ಕೆರಳಿ ಹಾಡು ಕಲಿಯದಿದ್ದಲ್ಲಿ ಈ ಬಡ್ಡೀ ಜಲ್ಮ ಯಾಕಿರಬೇಕೆಂದು ದೃಢ ನಿಶ್ಚಯವ ಮಾಡಿಹೊರಟ.

‘ಹಾಡಿನ ಮುದುಕೀ’ ಎಂದು ಕೂಗು ಹೊಡೆದು ಹುಡುಕಿದ. ‘ಹಾಡಿನ ಜೋಗ್ತೀ’ ಎಂದು ಕಾಕು ಹೊಡೆದು ಹುಡುಕಿದ. ಬೆಟ್ಟ ಏರಿ ಬೆಟ್ಟ ಇಳಿದು ದಟ್ಟ ಕಾಡು ಬೆಟ್ಟ ಬಯಲುಗಳಲ್ಲಿ ಜೋಗ್ತಿಯ ಪರಿಶೋಧನೆ ಮಾಡಿದ. ಅಸರು ಬ್ಯಾಸರೆನ್ನದೆ, ಹಸಿವೆ ನಿದ್ದೆ ನೀರಡಿಕೆ ಎನ್ನದೆ ಮೂಡುಮಲೆ, ಪಡುಮಲೆ, ತೆಂಕುಬಡಗುಮಲೆ, ಹುಲಿಯಮಲೆ, ಆನೆಮಲೆಗಳಲ್ಲಿ ಅಲೆದಾಡಿ ಹುಡುಕಿದ. ಸುತ್ತೂ ಸೀಮೆಯ ಹಟ್ಟಿ ಹಾಡಿ ಗೂಡುಗಳಲ್ಲಿದ್ದವರ ನಿಲ್ಲಿಸಿ ಮುದಿ ಜೋಗ್ತಿಯ ಗುರುತು ಹೇಳಿ ಕಂಡಿರಾ? ಅಂದ. ಬೇಟೆಗಾರ ಗುಡ್ಡ ಗೊರವ ದಾಸಯ್ಯ ಜೋಗಯ್ಯಗಳ ಕೇಳಿದ. ನರಮಾನವರ ಅವರಂಥವರ ಅಂಗಲಾಚಿ ಕಂಡಿರಾ? ಅಂದ. ಎಲ್ಲರೂ –

ಕಾಡು ಹುಟ್ಟಿದಾಗಳಿಂದ
ಗೂಡು ಕಟ್ಟಿದಾಗಳಿಂದ

ಇಂತೆಂಬ ಜೋಗ್ತಿಯ ಕಂಡಿಲ್ಲವಲ್ಲೋ ಶಿವನೆ! ಎಂದರು.

ನಡೆದು ನಡೆದು ಎಡಗಾಲಿಗೆ ಎಗ್ಗಾಲಮುಳ್ಳು, ಬಲಗಾಲಿಗೆ ಬಗ್ಗಾಲಮುಳ್ಳು ಚುಚ್ಚಿ ಬಾಲಕನ ಎಳೆಪಾದ ನಲುಗಿದವು. ಕಾಲೆಲ್ಲ ಕಲ್ಲಪ್ಪಳಿಸಿ ಉಪ್ಪಳಿಕೆ ಆದವು. ಧರಣಿಯ ಮ್ಯಾಲೆ ಬಿದ್ದೂ ಕೆಡೆದೂ ಒದ್ದಾಡಿಕೊಂಡು ಮುಂದೆ ಸಾಗಲಾರದೆ ಶಿವಧೋ ಎಂದು ತೆವಳುತ್ತ ಬೆಟ್ಟದಡಿಯ ಬಂಡೆಯ ಕೆಳಗಿ ಸುಸ್ತಾಗಿ ಉಸ್ಸೆಂದು ಮೈ ಚೆಲ್ಲಿದ. ಹೊತ್ತು ಬಹಳ ಹೀಗೇ ಮಲಗಿ ಎಚ್ಚರಾದಾಗ ಹಾಯೆನಿಸಿ ಜೋಗ್ತಿಯ ಹಾಡು ಗುನುಗಿದ. ಹಾಡು ಬರಲಿಲ್ಲ. ದನಿ ಏಳಲಿಲ್ಲ. ಒಳಗಿನ ಶೃತಿಪೆಟ್ಟಿಗೆ ಒಡೆದ ಹಾಗಿತ್ತು. ಶಿವನೇ ತನ್ನ ಹಾಡೆಲ್ಲಿ ಹೋಯಿತೆಂದ. ಸೊಂಟದಲ್ಲಿ ಗಣೆಯಿರಲಿಲ್ಲವಾಗಿ ಇಟ್ಟು ಮರೆತವರಂತೆ ಕೈ ಮೈ ತಟ್ಟಿ ನೋಡಿಕೊಂಡ. ಹಿಂದೆ ಮುಂದೆ ಆಸುಪಾಸು ನೋಡಿಕೊಂಡ. ಆಮ್ಯಾಕೆ ನೆನಪಾಗಿ ಗಣೆ ಮುರಿದಳೋ ಗೋನು ಮುರಿದಳೋ! ತನ್ನ ಹಾಡು ಕಳವಾಗಿ ಹೋಯಿತೆಂದು ಉಮ್ಮಳಿಸಿ ತಳ್ಳಂಕಗೊಂಡ.

ಮಣ್ಣಲಾಡುವ ಸಣ್ಣ ಬಾಲಕನ ಹಿಗ್ಗಿ ಹಿಗ್ಗಲಿಸಿದ ಹಾಡೇ,
ಬಿಸಿಲ ಬಂಗಾರದಲಿ, ಬೆಳ್ಳಿ ಬೆಳ್ದಿಂಗಳಲಿ
ಕರುಕುರಿಗಳೊಂದಿಗೆ ಬಾಲಕನ ಮೀಯಿಸಿ ನಲಿದ ಹಾಡೇ,
ಕ್ಷಿತಿಜದಾಚೆಯ ಮಾಯದ ಜಹಜುಗಳ ತೇಲಿಸಿ ತರುತ್ತಿದ್ದ
ಮಾದಕದ ಹಾಡೇ
ಎಲ್ಲಿ ಹೋದೆ?

ಕಾಲರಾಯನ ಗಾಳಿ ಹಾರಿಸಿಕೊಂಡು ಹೋದ ಹಾಡು
ಮತ್ತೆ ಸಿಕ್ಕೋದಿಲ್ಲವೋ ಬಾಲಕಾ

ಒಮ್ಮೆ ಹೋದರೆ ಇನ್ನೊಮ್ಮೆ – ಹಾಗೆಂದು
ಮತ್ತೆ ಅದೇ ಹಾಡು ಕಲಿಯಲಾದೀತೆ?
ಕಲಿತುಕೋಬೇಕಪ್ಪ ಖಾಲಿಯಾಗುವುದನ್ನ.
ಹಾಗೆಯೇ ಬೇರೊಂದು ಬೆಳಕು ನುಗ್ಗಿದಾಗ
ತುಂಬಿಕೊಳ್ಳೋದನ್ನ.

ಆದರೂ
ಎಳೆಯ ಕತ್ತಿನ ಮ್ಯಾಲೆ ಎಂಥ ಭಾರದ
ಅರಿವನಿಟ್ಟೆ ಶಿವನೆ!

ಇದೇ ಚಿಂತೆಯಲ್ಲಿ ಚಂದಮುತ್ತ ಮತ್ತೆ ಕಣ್ಣು ಮುಚ್ಚಿದ. ಎಚ್ಚರಾಗಿ ಕಣ್ಣು ತೆರೆದಾಗ ಎದುರಿಗೆ ಎಂಥ ಹೋಯ್ಕಿದೆ ಶಿವನೆ! ಎಳೆಯ ಮಿಡಿ ನಾಗರ ಜಡೆಗಳ ಸುತ್ತಿಕೊಂಡು ಹೆಣ್ಣು ಶಿವನ ಹಾಗೆ ಕಣ್ಣು ಮುಚ್ಚಿಕೊಂಡು ಎದುರಿಗೇ ಕುಂತಿದ್ದಾಳೆ; ಯಾರು? ಆ ಮುದಿ ಜೋಗ್ತಿ! ‘ಜೋಗ್ತೀ’ ಎಂದು ಕಿರಿಚಿ ಚಂದಮುತ್ತ ಹಾರಿ ಅವಳಿದ್ದಲ್ಲಿಗೆ ಹೋಗುವಷ್ಟರಲ್ಲಿ ಇವನ ಗುರುತು ಹಿಡಿದು ಅಪಾಯವನರಿದು ಪಾರಾಗುವ ಉಪಾಯವ ನಿಶ್ಚಿಯಿಸಿಕೊಂಡೇ

ಗವಿಯ ಬಾಗಿಲ ಬಳಿ ನಿಂತು ಬಾಯಿಭಾಷೆ ತಾಳಮೇಳದಲ್ಲಿ |
ಕೈಸನ್ನೆ ಕಣ್ಣು ಸನ್ನೆಯ ಮಾಡಿ ಕರೆದಳು |
ಕರದದ್ದೇ ಚಂದಮುತ್ತ ಓಡೋಡಿ ಬಂದು –

“ನನಗೆ ನಿನ್ನ ಹಾಡು ಕಲಿಸಿಕೊಡು ಜೋಗ್ತೀ” – ಎಂದು ಕೈಮುಗಿದು ಮುಂದೆ ನಿಂತರೆ ತನ್ನ ಕೋಲಾಡಿಸಿ ಅವನ ದೂರ ನಿಲ್ಲಿಸಿ –

“ಎಲವೆಲವೋ ಗೊಲ್ಲ ಗೋಕುಲರ ಪಿಳ್ಳೆ ಯಾವ ಹಾಡು?

ಯಾರು ನೀನು? ನಡೆ ನಡೆ” ಎಂದು ಗದರಿದಳು.

ಕುಲದೋಷಣೆ ಮಾಡಿದಳಲ್ಲಾ ಹಾಳು ಮುದುಕಿ ಎಂದು ಉಕ್ಕುವ ಕೋಪವ ನಿಯಂತ್ರಿಸಿ,

“ನನ್ನ ಗೆಣೆ ಮುರಿಯಲಿಲ್ಲವೆ ನೀನು?” ಎಂದ.

“ಗಣೆ ಬೇಕಾಗಿ ಬಂದೆಯಾ? ಹಾಗಿದ್ದರಿಗೊ ಬಾ” – ಎಂದು ಆಡಾಡುತ್ತ ನಿರಾಶೆಗೊಂಡ ಚಂದಮುತ್ತನ ಆಳವಾದ ಕಂದಕದ ಬಳಿಗೊಯ್ದು ಕೆಳಗೆ ನೋಡೆಂದಳು. ನೋಡಿದ.

“ಏನು ಕಂಡೆ?”

“ಆಳವಾದ ಕೊಳ್ಳ ಕಂಡೆ”

ಅದು ನಿನ್ನ ಪೂರ್ವಜರ ಲೋಕ. ಅಲ್ಲಿದೆ ನಿನ್ನ ಗಣೆ ಹೋಗೆಂದು ಕೊಳ್ಳಕೆ ಅವನ ತಳ್ಳಿ ನಿರುಮ್ಮಳದಿಂದ ಮಾಯವಾದಳು ನೋಡು, ಯಾರು? ಆ ಮಾಯಕಾರ್ತಿ ಮುದಿಜೋಗ್ತಿ!

ಪುಣ್ಯ ಚೆನ್ನಾಗಿತ್ತು ಬಿದ್ದಮ್ಯಾಲೆ ಬೋಧೆತಪ್ಪಿ ಜೀವಂತವಿದ್ದ. ಎಚ್ಚರಾದ ಮ್ಯಾಲೆ ತಾನು ಕೆಸರ ನೀರಲ್ಲಿದ್ದುದು ಅರಿವಿಗೆ ಬಂತು. ಸುತ್ತ ಮಾಯದ ಕಗ್ಗತ್ತಲು. ಕೈತುಂಬ ನೋವು, ಸಂದು ಕೀಲುಗಳಲ್ಲಿ ನೋವು ಗಾಯಗಳಾಗಿ ‘ಎವ್ವಾಬೇ’ ಎಂದು ನರಳಿದ. ಆಸುಪಾಸು ಮಾನವರಿರಲಿ, ಒಂದು ಮೃಗಜಾತಿ ಒಂದು ಕೀಟ ಜಾತಿಯ ಸುಳಿವೂ ಕೇಳಿಸಲಿಲ್ಲ. ಎಲ್ಲ ಸಹಿಸ್ಕೊಂಡೇ ಕಷ್ಟಪಟ್ಟು ತೆವಳಿಕೊಂಡು ದಂಡೆಗೆ ಬಂದುಬಿದ್ದ. ಯಾರಾದರೂ ಬಂದು ಎತ್ತಿ ಉದ್ಧಾರ ಮಾಡ್ಯಾರೆಂದು ಜೋರಾಗಿ ನರಳಿದ. ಯಾರೂ ಬಾರದ್ದಕ್ಕೆ ಮಾಯದಲ್ಲಿ ಬೆಳೆಸಿದ ಅಬ್ಬೆಯ ನೆನೆದು ಗಳಗಳನೆ ಅತ್ತ.

ಕಣ್ಣಮುಂದೆ ನೆನಪಿನಲ್ಲಿ ಮುದಿಜೋಗ್ತಿ ಸುಳಿದಳಾಗಿ ಕಣ್ಣಿಗೆ ಕಾರ ಎರಚಿದಂತಾಯ್ತು. ಅದೇ ಘನವಾದ ಕಗ್ಗತ್ತಲು ಕರಗದೆ ಹಾಗೇ ಇದೆ. ಎಲಾ ಕೃತಕಿ ಮುದಿರಂಡೆ ನೆನಪಿಗೆ ಸುಳಿದಳಲ್ಲಾ ಎಂದು ರವರುದ್ರಗೋಪಗೊಂಡ.

ಜೋಗ್ತಿ ಫಾತಿಸಿದ ಕತಿ
ಹ್ಯಾಂಗ ಹೇಳಲೋ ಶಿವನೇ,
ಆ ಕಪಟಿಯ ಉಪಟಳದಲ್ಲಿ
ನನ್ನ ದುನಿಯಾ ಧೂಳಿಪಟವಾಯ್ತು,
ಗಣೆ ಮುರಿದು ಹಾಡು ಕಸಿದುಕೊಂಡಳಲ್ಲೋ ಬೋಳೇಶಂಕರಾ,
ಎಂದು ಹುಚ್ಚಗೋಪದಲ್ಲಿ ಕೊತಕೊತ ಕುದ್ದು
ನೊರನೊರನೆ ಹಲ್ಲು ಕಡಕೊಂಡ.
ಆದರೆ ಮಾರನೆ ಕ್ಷಣವೆ
ಮನವಿಡೀ ಮುತ್ತಿತು ಅವಳ ಹಾಡು ಮುದಿಜೋಗ್ತಿ.
ಕಚ್ಚಿದಲ್ಲಿಂದ ಮ್ಯಾಲೇರುತ್ತದೆ.
ತನುವಿನ ಮನದ ಉದ್ದಗಲಕ್ಕು ವ್ಯಾಪಿಸಿ
ನಿದ್ದೆ ಬರಿಸಿ ನನ್ನ ಕೊಲ್ಲುತ್ತದೆ.
ಕಳೆದುಕೊಂಡಿದೆ ನನ್ನಕನಸು,
ಈಗ ಉಳಿದಿರೋದು
ಅದು ತಪ್ಪಿಸಿಕೊಂಡ ದಾರಿ
ಹತಾಶೆಯ ಕಗ್ಗತ್ತಲು
ಹಾದಿ ನೋಡುವ ಎರಡು ಕಣ್ಣು,

– ಎಂದು ಆರುಮೂರೆಂಬತ್ತು ಚಿಂತಿಸಿ ಧಾರಾವತಿ ಕಣ್ಣೀರು ಸುರಿಸಿದ.

ಕಾಲವೆಷ್ಟೋ ಸಂದಾಯವಾದರೂ ಕಗ್ಗತ್ತಲು ಸರಿಯಲಿಲ್ಲ. ಇದ್ಯಾವುದೋ ನಾಯಿ ನರಕವಿರಬೇಕು. ತಮಂಧಘನ ಘನಾಂದಾರಿ ಕಗ್ಗತ್ತಲು. ಕೈಗೆ ತಾಗುವ ಕತ್ತಲು. ಮೈಗೆ ಮೆತ್ತುವ ಕತ್ತಲು, ಕತ್ತಲೆಗೆ ನಕ್ಷತ್ರಗಳು ನಂದಿಹೋಗಿವೆ. ಜಗತ್ತು ಸುಟ್ಟು ಕರಕಾಗಿ ಬಿದ್ದಿದೆ. ಮನೆ ಸ್ವಾಮಿ ಚಂದಪ್ಪನ ನೆನೆದ. ನೆನೆದೊಡನೆ ಮನಸ್ಸಿನಲ್ಲಿ ಬೆಳ್ಳಗೆ ಮೂಡಿದನಲ್ಲ. ಕ್ಷಣಮಾತ್ರದಲ್ಲಿ ಮನಸ್ಸಿಗೂ ಕತ್ತಲಾವರಿಸಿ ಚಂದಪ್ಪನೂ ಇದ್ದಿಲಾದ. ಹತಾಶನಾಗಿ ಚಂದಮುತ್ತ ಕಣ್ಣೆಂಬ ನಿರಿಂದ್ರಿಯ ಮುಚ್ಚಿಕೊಂಡು ಬಿದ್ದ. ಮುಚ್ಚಿಕೊಂಡರೆ ಒಳಗೂ ಕತ್ತಲು. ತಾನೆಂಬ ಸಣ್ಣಹಂಕಾರವಿನಾ ಬೇರೇನೂ ಉಳಿಯದೆ, ಇಷ್ಟಾದ ಮ್ಯಾಕೆ ಅದಿನ್ಯಾಕೆಂದು ಅದನ್ನೂ ಶಿವನಡಿಗೆ ಅರ್ಪಿತ ಮಾಡಬೇಕೆಂದು ಸುತ್ತ ಕೈಯಾಡಿಸಿದ. ಮಾರುದ್ದ ಕೋಲು ಸಿಕ್ಕಿತು. ಮಸೆದ ಹಾಗೆ ತುದಿ ಚೂಪಾಗಿತ್ತು. ಸಾಕೆಂದು ಚುಚ್ಚಿಕೊಳ್ಳಲು ಉದರಕ್ಕೆ ಗುರಿ ಹಿಡಿದು ತಂದೆತಾಯಿಯ ನೆನೆದ, ಬಂಧುಬಳಗವ ನೆನೆದ, ಜಾತಿ ಕುಲದವರ ನೆನೆದ, ವಾರಿಗೆಯವರ ನೆನೆದ, ಸತ್ತ ಮುದಿ ಹಸು ಪುಣ್ಯಕೋಟಿಯ ನೆನೆದ, ಕಪಿಲೆಯ ನೆನೆದ, ಕಾಳ್ನಾಯಿ ಬಿಳಿನಾಯಿಗಳ ನೆನೆದು ನಮ್ಮ ಋಣ ಇಂದಿಗೆ ಸಂದಾಯವಾಯಿತೆಂದು ಮನೆಸ್ವಾಮಿ ಚಂದಪ್ಪನ ನೆನೆದು ರಭಸದಿಂದ ಇರಿದುಕೊಳ್ಳುವಷ್ಟರಲ್ಲಿ, “ತಡಿ ತಡಿ ಯಾಕವಸರ?” ಎಂದು ಘನವಾದ ಮೌನವ ಸೀಳಿದ ದನಿ ಕೇಳಿಸಿತು. ಜೊತೆಗೇ ಗಲಿರು ಗಲಿರು ಅಂತ ಜಂಗಿನ ಸದ್ದು ಕೇಳಿಬಂತು. ನೋಡಿದರೆ ಕತ್ತಲೆಗೆ ಕಣ್ಣು ಮೂಡುವಂತೆ ಎದುರಿಗೆರಡು ಹಸಿರು ಜ್ಯೋತಿ ನಡೆದು ಬರುವಂತೆ ಕಂಡವು. ಅವು ಸಮೀಪ ಬಂದ ಬಂದ ಹಾಗೆ ತನಗೇ ಕಣ್ಣು ಬಂದಂತೆ ಬೆಳಗಾಯಿತು. ನೋಡಿದರೆ ಎದುರಿಗೆ ಮೂಜಗ ಸೋಜಿಗ ಮೂರು ಕಾಲಿನ ಪ್ರಾಣಿಯಿದೆ! ಮುಖದಲ್ಲೆರಡು ಕಣ್ಣುಬಿಟ್ಟರೆ ಉಳಿದೆಲ್ಲ ಮೂಳೆಮೂಳೆಯಾದ, ಮೂಳೆಯ ರೇಖೆಗಳಿಂದ ಅಸ್ಥಿಪಂಜರ ರೂಪಿಯಾದ ಈ ಪ್ರಾಣಿ ಅಥವಾ ಗೋರಿಯಿಂದೀಗಷ್ಟೇ ಎದ್ದುಬಂದಂಥ ಅಲೌಕಿಕ ಜೀವ ಎದುರು ನಿಂತಿದೆ! ಚಂದಮುತ್ತನ ಹೃದಯ ಎದೆಗೆ ಡಬ ಡಬ ಹೊಡೆಯಿತು. ತುಟಿಗಳಿಲ್ಲವಾಗಿ ಸದಾ ನಗುವಂತಿದ್ದ ಅದರ ಮಾತು ಕೇಳಿಯೇ ಜೀವ ಬಂತು.

“ನಿನ್ನ ಕೈಲಿರೋದು ಏನಂದುಕೊಂಡೆ?”

– ಎಂದಿತು ಪ್ರಾಣಿ. ತಕ್ಷಣ ನೋಡಿಕೊಂಡ. ಕೈಯಲ್ಲಿ ದೀರ್ಘವಾದ ನೀಳವಾದ ಕೊಂಬಿದೆ.

“ಅದು ಯಾರ ಕೊಂಬೆಂದು ಬಲ್ಲೆಯಾ?

“ಗೊತ್ತಿಲ್ಲ ಶಿವಪಾದವೆ”

“ಅದು ನಿನ್ನ ಸತ್ತ ಪುಣ್ಯಕೋಟಿಯ ಕೊಂಬು”.

ತಿಂಗಳ ರಾಗ ನುಡಿಸಲು ಅದಕ್ಕಿಂತ ಉತ್ತಮ ಗಣೆ ಬೇಕೇನೋ ಬಾಲಕ?”

– ಎಂದು ಹೇಳಿ ಗಾಳಿಯಲ್ಲಿ ಆ ಪ್ರಾಣಿ ಕರಗಿ ಹೋಯಿತೆ!

ನೀಲಿ ವಜ್ರದಂಥ ಕಣ್ಣು, ರೇಖುಗಂಧಗಳ ಭಸಿತವ ಧರಿಸಿದ್ದ ರೇಖಾಕೃತಿಯಂಥ ಅದರ ಆಕಾರ ಮತ್ತು ಮಾತಿನಿಂದ ನಿಬ್ಬೆರಗಾದ ಹುಡುಗ ಮೆಲ್ಲಗೆ ನಮ್ಮ ಲೋಕಕ್ಕೆ ಬಂದ.

ಮಾರುದ್ದ ಕೊಂಬು ಓರೆಕೋರೆ ಗಂಟುಗದಡಿಲ್ಲದೆ ತೆಳ್ಳಗೆ ನೀಳವಾಗಿ ಮಾಟವಾಗಿ ಬೆಳೆದಿತ್ತು. ಅದು ತನ್ನ ಗೊಲ್ಲ ಗೋಕುಲ ಕುಲದ ಪುಣ್ಯಕೋಟಿಯ ಕೊಂಬೆಂದು ತಿಳಿದು ಅಭಿಮಾನವಾಯಿತು.

ಕೊಂಬು ನುಣ್ಣಿಸಿ ಉಸಿರಾಡುವ ರಂಧ್ರವ ಕೊರೆದು
ಗಣೆ ಮಾಡಿದ ಚಂದಮುತ್ತ,
ಗಣೆಯಲ್ಲಿ ಇನ್ನೆಂಟು ರಂಧ್ರಗಳ ಕೊರೆದು
ಒಟ್ಟು ನವನಾಳಗಳಿಂದ ಪ್ರಾಣ ಹರಿವಂತೆ ಮಾಡಿ
ಹೆಣ್ಣು ಕೊಳಲು ಮಾಡಿದ ಚಂದಮುತ್ತ,
ಹಚ್ಚೆಯ ಬರೆದು, ಹೂಮುಡಿಸಿ
ಕಳೆದ ಹಾಡನ್ನ ಅನುಗ್ರಹಿಸು ತಾಯೇ ಎಂದು
ಭಕ್ತಿಯ ಮಾಡಿ
ಕೊಳಲನ್ನ ತುಟಿಗಿಟ್ಟುಕೊಂಡ ಚಂದಮುತ್ತ,
ಹದಮೀರದ ಹಾಗೆ ಉರಿಸನ್ನ ನಾಭಿಯಲ್ಲಿ ನಿಯಂತ್ರಿಸಿ
ಕಟ್ಟಿ ಮೆಲ್ಲಗೆ ಉಸಿರು ತುಂಬಿ
ಓಂಕಾರವನೂದಿದ ಚಂದಮುತ್ತು,
ದುಃಖತಪ್ತ ತಾಯಿ ತಪ್ಪಿಸಿಕೊಂಡ ಮರಿಯ ಕರೆವಂತೆ
ಮೆಲ್ಲಗೆ ಕೊಳಲೂದಿದ ಚಂದಮುತ್ತ.

ಅನತಿದೂರ ಕಾಡಿನಲ್ಲಿ ತಪ್ಪಿಸಿಕೊಂಡ ಜಿಂಕೆಮರಿಯಂತೆ ನಿಂತುಕೊಂಡಿದ್ದ ಹಾಡು ಕಂಡಿತು. ಹೃದಯ ಭಗ್ಗನೆ ಹೊತ್ತಿಕೊಂಡಿತು. ಮತ್ತೆ ನುಡಿಸಿದ. ಕೊಳಲುಲಿ ಮೈಗೆ ತಾಗಿ ಜಿಂಕೆಮರಿ ಥರಥರ ನಡುಗಿತು. ಇನ್ನಷ್ಟು ಸಮೀಪಕ್ಕೆ ಸರಿದ. ಜಿಂಕೆಮರಿ ಅಪಾಯದ ಗಾಬರಿಯಲ್ಲಿ ಓಡಲಾರದೆ ಭಯ ಬೆರೆತ ಬೆರಗಿನಲ್ಲಿ ನಿಂತುಕೊಂಡಿತ್ತು. ಹಾಲುಂಡ ನೆನಪು ಮರುಕಳಿಸುವಂತೆ ಕೊಳಲು ನುಡಿಸಿ, ಕಳ್ಳ ಹೆಜ್ಜೆಯನಿಡುತ್ತ ಮೆಲ್ಲಗೆ ಹಿಂದಿನಿಂದ ಹೋಗಿ ಗಪ್ಪನೆ ಹಿಡಿದುಕೊಂಡ. ಬೆಚ್ಚಗಿತ್ತು ಜಿಂಕೆ, ಮೃದುವಾಗಿತ್ತು ಮರಿ; ಅಕ್ಕರೆಯಿಂದ ಆಕ್ರಮಿಸಿ ಎದೆಗಪ್ಪಿಕೊಂಡು ಮೂಸಿ ಮುದ್ದಿಸಿ ಸ್ಪರ್ಶ ಸುಖವುಂಡ. ಸಂತೋಷ ಮೀರಿ ವಿಸ್ತಾರವಾದವು ಹೃದಯ, ಬಿಗಿದಪ್ಪುಗೆಯಲ್ಲಿ ಉಸಿರಿನ ಲಯ ತಪ್ಪಿ ಗಕ್ಕನೆ ಹಾಡು ತಪ್ಪಿಸಿಕೊಂಡು ಕಾಡಿನಲ್ಲಿ ಮತ್ತೆ ಕಣ್ಮರೆಯಾಯಿತು.

ಇಂತೀಪರಿ ಅಡಗುವ ಹಾಡು, ಹುಡುಕುವ ಚಂದಮುತ್ತ – ಇಬ್ಬರ ಆಟ ದಿನಾ ನಡೆದು ಒಂದು ದಿನ ಅಡಗಿದ ಹಾಡನ್ನು ಕಾಡಲ್ಲಿ ಹುಡುಕುತ್ತಿರಬೇಕಾದರೆ ಬಳ್ಳಿಯ ಆಳ ತಿಳಿಯದೆ ಕಾಲಿಟ್ಟು ಪಾತಾಳದ ಕಮರಿಗೆ ಪತನವಾದ.