ಪತನಗೊಂಡ ಚಂದ್ರಮುತ್ತನಿಗೆ
ಬೋಧೆ ಬಂದು ಸ್ಮೃತಿಯಾಗಿ ಕಣ್ಣು ತೆರೆದರೆ
ಶಿವ ಶಿವಾ ಎದುರಿಗೆ ಎಂಥಾ ಲೋಕವಯ್ಯಾ!

ಮ್ಯಾಲೆ ಸೂರ್ಯನಾರಾಯಣಸ್ವಾಮಿಯಿಲ್ಲ
ಮನೆದೇವರು ಚಂದಪ್ಪನಿಲ್ಲ
ಹೇಳ ಕೇಳುವುದಕ್ಕೆ ಯಾರೂ ಇಲ್ಲ.

ಬಯಲ ಬಸಿರಲ್ಲಿ ನೆಲೆಗೊಂಡ ಸಾವಿನಂಥ
ಘನಾಂದಾರಿ ಮೌನದ ಲೋಕವಯ್ಯಾ!
ಹಗಲೆಂದರೆ ಹಗಲಲ್ಲ ರಾತ್ರಿಯೆಂದರೆ ರಾತ್ರಿಯಲ್ಲ
ಹಸಿರು ಹಸಿರಂತಿಲ್ಲ, ಮರವು ಮರದಂತಿಲ್ಲ,
ಬೀಸದ ಗಾಳಿಯಿದೆ, ಹರಿಯದ ನೀರಿದೆ.
ಕದಡಿದ ಕನಸಿನ ಹಾಗೆ ಮ್ಯಾಲೆ ಆಕಾಶವಿದೆ
ಲೋಕದ ಶಾಪಂಗಳು ಆಕಾರಗೊಂಡು
ವಿಕಾರಗೊಂಡು ಕೆಳಗೆ ಬಂದೈದಾವೆ.
ಹರ್ಷಂಗಳು ಇದ್ದಿಲಾಗಿವೆ.
ಆನಂದಗಳು ಭಸ್ಮವಾಗಿವೆ.
ಮೂಲೆ ಮೂಲೆಗೆ ಕಾಮನಬಿಲ್ಲು ಮುರಿದು
ಒಟ್ಟಿದ ಗೊಬ್ಬರ ಹಾಂಗೇ ಇದೆ.

ಕಣ್ಣು ತೆರೆದರೆ ಕಣ್ಣಿಗೊತ್ತುವ ಲೋಕ
ಮುಚ್ಚಿದರೆ ಎದೆಗಡರಿ ನೋಯಿಸುವ ಲೋಕ
ಬಂದ ದಾರಿ ಯಾವುದು ಶಿವನೇ
ಹೋಗುವ ದಾರಿ ಯಾವುದೆಂದು
ಎಲ್ಲಿಂದೆಲ್ಲಿಗೆ ಬಂದೆನೆಂದು
ಇದ್ಯಾವ ದೇಶ ಯಾವ ಲೋಕ ಯಾವ ನರಕವೆಂದು
ಹಿಂಡನಗಲಿದ ಕರುವಿನಂತೆ ಚಂದಮುತ್ತ
ಗಾಬರಿಯಲ್ಲಿ ಅತ್ತಿತ್ತ ಓಡಾಡಿದ.
ಅಡರಿದ ಭಯದಲ್ಲಿ ನಿಂತಲಲಿ ನಿಲ್ಲಲಾರದೆ ಕೂತಲ್ಲಿ
ಕೂರಲಾರದೆ ಗೊತ್ತುಗುರಿ ಗೊತ್ತಾಗದೆ ನಡೆಯಲಾರದೆ
ಬದುಕಿರುವೆನೋ ಸತ್ತಿರುವೆನೋ ಎಂದು
ತನ್ನ ತಾನು ಗುದ್ದಿ ನೋಡಿಕೊಂಡ.
ತನ್ನ ತಾನು ಚಿವುಟಿ ನೋಡಿಕೊಂಡ.
ಸತ್ಯುಳ್ಳ ಸದಾ ಶಿವಲಿಂಗದೇವಾ ಎಂದು
ಕರುಳು ಕಿತ್ತು ಬಾಯಿಗೆ ಬರುವಂತೆ ಕಿರಿಚಿದ.
ಕಿರಿಚಿದ್ದು ತನಗೇ ಕೇಳಿಸದೆ, ತಾನು ಸತ್ತಿರುವೆನೆಂದು ಖಾತ್ರಿಯಾಗಿ
ಭೂಮಿ ಆಕಾಶ ಅದಲು ಬದಲಾದ
ಯಮಧರ್ಮರಾಯನ ಲೋಕವಿದೆಂದು
ಹತಾಶನಾಗಿ ಬಿದ್ದ.

ಶಿವನ ದಯೆ, ತಂಗಾಳಿ ಬೀಸಿ ನಿರ್ಜೀವ ಲೋಕದಲ್ಲಿ ಜೀವ ಸಂಚಾರವಾದಂತೆ ದೂರದಿಂದ ಯಾರೋ ಹಾಡುತ್ತಿದ್ದದ್ದು ಕೇಳಿಸಿತು. ಎಳೆಎಳೆಯಾಗಿ ಬರುತ್ತಿದ್ದ ದನಿಯ ಸುಳಿ ಹಿಡಿದು ಚಂದಮುತ್ತ ಹೊರಟ.

ಕ್ಷಿತಿಜದೀಚೆ ಎತ್ತರದ ಬೆಟ್ಟಕ್ಕಂಟಿ ಸಾವಿರದೆಂಟು ಕಂಬಗಳ ಶಿವದೇವಾಲಯ, ಕಂಬಗಳ ಮ್ಯಾಲೆ ಛಾವಣಿಯಾಗಿ ನೀಲಿಮ ಆಕಾಶವನ್ನೇ ಹೇರಿದ್ದಾರೆ. ಒಮ್ಮೆ ಒಳಹೊಕ್ಕರಾಯ್ತು ಎತ್ತ ನೋಡಿದತ್ತ ಎತ್ತರವಾದ, ಆಕಾಶವ ಹೊತ್ತ ಕಂಬಗಳೇ ಕಾಣಿಸುತ್ತಿದ್ದಾವೆ. ಗರ್ಭಗುಡಿಯ ಗಂಭದಲ್ಲಿ ಕತ್ತಲೆ ವಿನಾ ಮತ್ತೇನೂ ಕಾಣುತ್ತಿಲ್ಲ. ಅದರ ಮುಂದೆ ಶಾಂತಿಚಿತ್ತ ನಂದಿ ಮಾತ್ರ ಮೆಲುಕಾಡಿಸುತ್ತ ಮಲಗಿದೆ. ಅದರೀಚೆ ಡೊಳ್ಳು ಹೊಟ್ಟೆಯ ದಡಿಯನೊಬ್ಬ ಹಾಡಿನೆಳೆಯ ಹಿಡಿದೆಳೆಯುತ್ತ ಶಾವಿಗೆಯೆಳೆದಂತೆ ಸಣ್ಣದಾಗಿ ಹೊಸೆಯುತ್ತ ಬಹಳ ಹೆಚ್ಚಳದಿಂದ ಕುಂತಿದ್ದಾನೆ. ಈಚಲಮರದಂತೆ ತಲೆಕೆದರಿ ಕಾದಕಬ್ಬಿಣದ ಉಂಡೆಗಾತ್ರದ ಕಣ್ಣು, ಮುಖವು ತುಸು ಅಲುಗಿದರೂ ಕಳಚಿ ಬೀಳುವಂತಿದ್ದಾವೆ. ಎಲಡಿಕೆಯ ಸೀರ್ಪನಿಯಲ್ಲಿ ದನಿ ಒದ್ದೆಯಾಗಿ ಒಡೆದು ಬರುತ್ತ ಇದೆ. ಮೈಮ್ಯಾಲೆ ಸೊಂಟ ವಿನಾ ಚಿಂದಿ ಬಟ್ಟೆಯಿಲ್ಲ. ಹಾಡಿನೆಳೆ ಅವನ ನಾಭಿಕುಹರದ ಆಳದಲ್ಲಿ ಅಡಗಿದ್ದದ್ದು ಸಿಕ್ಕರೆ ಚಿತ್ತವ ಏಕೀಭವಿಸಿ ಒಳಕ್ಕೆ ಹೆಕ್ಕಿಹೆಕ್ಕಿ ಹುಡುಕುತ್ತಿದ್ದಾನೆ. ಇಡೀ ಶಿವಾಲಯದ ಗುಂಭ ತಂಬೂರಿಯ ಮಿಡಿದಂತೆ ಆಧಾರಶೃತಿಯ ನುಡಿಯುತ್ತಾ ಇದೆ.

ಇಂತೀಪರಿ ಸಂಗೀತದ ತಯಾರಿ ನಡೆದಿರುವಲ್ಲಿ ಕಂಬಕಂಬಗಳ ಸಂದಿಯಲ್ಲಿ ಬಚ್ಚಿಡಲಾಗದ ತಪ್ಪುಗಳಂಥ ಬಗೆಬಗೆ ಜೀವಂಗಳು, ಅವಯವಳು ಅದಲು ಬದಲಾಗಿ ವಿಕಾರಗೊಂಡ ಜೀವಂಗಳು, ನೀರುಗುಳ್ಳೆಯಂಥ ಕಣ್ಣು ಪಿಳಿಪಿಳಿ ಬಿಡುತ್ತಿದ್ದ ಅಸಹಾಯ ಜೀವಂಗಳು ಮಹಾನುಭಾವನ ಸಂಗೀತಕ್ಕಾಗಿ ಕಾಯುತ್ತಾ ಇವೆ. ಯಾವುದೋ ದೇವತೆಗೆ ಶರಣಾಗಿ ಮಂತ್ರಭಾವಿತದಿಂದ ಕರೆದು, ಬಾರದ ಹಾಡಿಗೆ ಬಂದೊದಗೆಂದು ಅಂಗಲಾಚುವಂತೆ. ಒಲಿದು ಬಂದು ಅನುಗ್ರಹಿಸಬೇಕೆಂದು ವಿನಂತಿಸುವಂತೆ ಆಲಾಪವ ಸುರು ಮಾಡಿದ. ಚಂದಮುತ್ತ ಮೆಲ್ಲಗೆ ಶಿವಾಲಯವ ಪ್ರವೇಶಿಸುತ್ತಲೂ ಅಲ್ಲಿದ್ದ ವಿಕಾರ ಜೀವರಾಶಿ ಹುಬ್ಬೇರಿಸಿ ಏರಿದ ಹುಬ್ಬು ಏರಿದ ಹಾಗೆ ಕಿರುಗಣ್ಣಲ್ಲಿ ಅರೆಗಣ್ ಬಿಟ್ಟು ಇವನನ್ನೇ ಕಣ್ಣಿಂದಿರಿಯತೊಡಗಿದವು. ಕದ್ದವನಲ್ಲ. ಕನ್ನ ಹಾಕಿದವನಲ್ಲ ಶಿವ ಶಿವ ಇವ್ಯಾಕೆ ತನ್ನ ಹಿಂಗೆ ನೋಡುತ್ತಾವೆಂದು ಚಂದಮುತ್ತನ ಜೀವ ಜಲ್ಲೆಂದವು. ಕಂಪಿತನಾಗಿ ಮುದುಡಿ ಕಂಬವೊಂದರ ಮರೆಯಲ್ಲಿ ಹುದುಗಿದ.

ಮಹಾನುಭಾವನ ಧ್ವನಿ ಆಗಲೇ ಹದಕ್ಕೆ ಬಂದು ಪರಿಚಿತ ಸೀಮೆಗಳಲ್ಲಿ ಸಹಜವಾಗಿ ಸಂಚರಿಸುತ್ತ ಆನಂದಲೋಕಂಗಳ ಸೃಷ್ಟಿ ಮಾಡತೊಡಗಿತು. ಈ ಹೊಸ ಸೃಷ್ಟಿಗೆ ಕ್ಷಿತಿಜದಾಚೆಗೆ ಯಾವುದೋ ಶಕ್ತಿಕೇಂದ್ರವಿದೆಯೆಂದು ಹಾಡು ಕೇಳಿದವರಿಗೆ ತಿಳಿಯುವಂತಿತ್ತು. ಹಾಡುಗಾರಿಕೆ ತೀವ್ರವಾದಂತೆ ಶಿವ ಶಿವಾ, ಶಿವಾಲಯದ ಕಂಬಗಳು ಬಗೆ ಬಗೆ ವಾದ್ಯಗಳ ದನಿ ಮಾಡಿ ಹಾಡಿಗೆ ಸ್ವರಮೇಳ ಒದಗಿಸಿದವು.

ಇಂತೀಪರಿ ಹಾಳುಲೋಕ ಕೈಲಾಸವಾಗುತ್ತಿರುವಲ್ಲಿ ಚಂದಮುತ್ತ ಮೈಯೆಲ್ಲ ಕಿವಿಕಣ್ಣಾಗಿಸಲು ಮಹಾನುಭಾವ ಥಟ್ಟನೆ ಹಾಡು ನಿಲ್ಲಿಸಿ,

“ಆ ಕಂಬಕ್ಕೇನು ಧಾಡಿಯಾಗಿದೆ? ಅದ್ಯಾಕೆ ದನಿಗೂಡುತ್ತಿಲ್ಲ?” ಎಂದು ರವರುದ್ರಗೋಪದಲ್ಲಿ ಕಿರಿಚಿ ಚಂದಮುತ್ತ ಮರೆನಿಂತ ಕಂಬವ ಗುರಿ ಮಾಡಿ ಕಣ್ಣಿಂದಿರಿದ. ಹಾಡು ಹರಿಗಡಿದು ಇಡೀ ಶಿವಲೋಕ ನಿಶ್ಶಬ್ದವಾಗಿ ಕಟ್ಟಿದ್ದ ಕೈಲಾಸ ಕುಸಿದು ಮತ್ತೆ ಹಾಳು ಲೋಕವಾಯಿತು.

“ನರಮಾನವನೊಬ್ಬ ಮುಟ್ಟಿ ಆ ಕಂಬ ಮೈಲಿಗೆಯಾಗಿದೆಯಾಗಿ ಅದು ಮಹಾ ಸಂಗೀತದಲ್ಲಿ ಭಾಗಿಯಾಗುತ್ತಿಲ್ಲ ಶಿವಪಾದವೇ”

– ಎಂದು ಯಾರೊ ದನಿಯೆತ್ತಿದರು.

“ಯಾರು ಆ ಪಾಪಿ?”

ಅಲ್ಲಿದ್ದ ಜೀವರಾಶಿಗಳ ನೀರುಗುಳ್ಳೆ ಕಣ್ಣುಗಳೆಲ್ಲ ಈಗ ಚಂದಮುತ್ತನ್ನ ಇರಿಯತೊಡಗಿದವು. ಹುಡುಗ ಗಾಬರಿಯಲ್ಲಿ ಕರುವಿನಂತೆ ಥರಥರಗುಡುತ್ತ ಸದರಿ ಕಂಬದ ಮರೆಯಿಂದ ಹೊರಬಂದು ಕರುವಿಗಿರುವಂಥ ದೊಡ್ಡ ಕಣ್ಣು ತೆರೆದು ಶಿರಬಾಗಿ ಕರಮುಗಿದು ಹ್ಯಾಗೋ ಕಾಲೂರಿ ನಿಂತ. ಮಹಾನುಭಾವ ಉರಿದುರಿದು ಇನ್ನೇನು ಸಿಡಿಯಲಿದ್ದ ಕಣ್ಣುಗಳಿಂದ ಇವನ ನೋಡಿದ. ಹೊತ್ತಿಕೊಂಡ ಹುಬ್ಬು ಹೊಗೆಯಾಡುತ್ತಿದ್ದವು. ಗುಡುಗಿದ:

“ಯಾರು ನೀನು?”

“ದಯವಾಗು ಶಿವಪಾದವೇ. ಕುಲದಲ್ಲಿ ಗೊಲ್ಲ, ಜಾತಿಯಲ್ಲಿ ಹಾಲುಮತ, ಶಿವಾಪುರ ಅನ್ನತಕ್ಕ ಘನವಾದ ಹಟ್ಟಿಯ ಚಂದಮುತ್ತ ನಾನು” ಎಂದು ನಿಂತಲ್ಲೇ ಧರಣಿಗೆ ಬಿದ್ದು ಸಾಷ್ಟಾಂಗ ಬಿನ್ನಪ ಎರಗಿದ.

“ಥೂ ಚಂಡಾಲ ನನ್ನ ಒಂದು ವರ್ಷದ ತಪವ ಹಾಳು ಮಾಡಿದೆ” ಎಂದು ನಿಂದಕದ ನುಡಿಯಾಡುತ್ತ ತೊಪಕ್ಕೆಂದು ಚಂದಮುತ್ತನ ಮ್ಯಾಲೆ ಉಗಿದು ಅದೂ ಸಾಲದೆಂದು ತಿರಸ್ಕಾರದಿಂದ ನೋಡುತ್ತ ಗರ್ಭಗುಡಿಯ ಕರಿಘನಲಿಂಗದಂಥ ಕಗ್ಗತ್ತಲಲ್ಲಿ ಮಾಯವಾದ. ಶಿವಾಲಯ ವಿನಾ ಉಳಿದೆಲ್ಲ ವಿಕಾರ ಜೀವಲೋಕ ಅವನೊಂದಿಗೇ ನಿಂತ ನಿಂತಲ್ಲೇ ಮಾಯವಾಯಿತು.