ಚಂದಮುತ್ತ ಒಳಗೆ ಹೋಗಲು ಧೈರ್ಯಸಾಲದೆ ಮಹಾನುಭಾವ ಹೊರಗೆ ಬಂದಾನೆಂದು, ಬಾರದಿರನೆಂದು, ಬಂದೇ ಬರುವನೆಂದು, ಯಾವಾಗ ಬರುವನೋ ಮಹಾರಾಯನೆಂದು, ಬಂದಾಗ ಬರಲೆಂದು ಗರ್ಭಗುಡಿಯ ದ್ವಾರಬಾಗಿಲು ಕಣ್ಣಾಗಿ ಕಾಯುತ್ತ ಕೂತ. ಬರುವಂತೆ ಮಾಡೆಂದು ಶಿವನಾಮವ ನಾಲಗೆಯ ಮ್ಯಾಲೆ ತೇಯುತ್ತ ಸಮಯದ ಪರಿವೇ ಮರೆತು ಕೂತ. ಹೆಗಲ ಕಂಬಳಿ ಕೈಯ ಕೋಲು ಹಿಡಿದ ಹಾಗೇ ಕುಳಿತು ಕಣ್ಣು ಮುಚ್ಚಿದ. ಕಂಬಳಿ ವಾಸನೆಗೆ ಕಣ್ಣಲ್ಲಿ ಸ್ವಪ್ನವಾಗಿ –

ಓಡೋಡಿ ಬಂದವು
ಕುರಿಮಂದೆ, ದನಕರು ಅಟ್ಟಿಸಿಕೊಂಡವರಂತೆ,
ಚಂದಮುತ್ತ ಗಕ್ಕೆನೆ ಎಳೆಹುಲ್ಲು ಬೆಳೆದ ಗೋಮಾಳವಾಗಿ
ಅಲುಗದೆ ಮಲಗಿದ.
ಓಡೋಡಿ ಬಂದವು ಏಳೇಳು ಹಿಂಡು ಕುರಿ
ಏಳೇಳು ಹಿಂಡು ದನ.
ಕೆಂದಾಕಳು ಕಪಿಲೆ
ಹಣಿಚಿಕ್ಕೆ ಹೋರಿ ನಂದಿ
ಕಾಳೆಮ್ಮೆ ಜಕ್ಕಿ
ಕಂದುನಾಯಿ ಕರಿಬಿಳಿ ನಾಯಿ
ತನ್ನ ಮ್ಯಾಲೆ ಬೆಳೆದಿದ್ದ ಗರಿಗರಿ ಗರುಕೆಯ ತುಳಿಯುತ್ತ
ಮಿರುಮಿರುಗುವ ಇಬ್ಬನಿಯ ನೆಕ್ಕುತ್ತ
ಬಂದವು.
ಹಿಂದಿನಿಂದ ತಾಯಿ ಜಗಳವಾಡುತ್ತಾ
ಶಿವನಿಗೆ ಶಾಪ ಹಾಕುತ್ತಾ ಕಳೆದ ಕರುವಿನ ಈದ ಹಸುವಿನಂತೆ ಬರುತ್ತಿದ್ದರೆ,
ಅವಳಿಗೂ ಹಿಂದೆ ಮುದಿಜೋಗ್ತಿ
ಬೆಂಕಿ ಹತ್ತಿದ ಕಾಡಿನಂತೆ
ಸುಡುತ್ತಾ, ಸುತ್ತ ಬೆಳಗುತ್ತಾ
ಬರುತ್ತಿರುವಲ್ಲಿ
ಅವಳ ಬೆಂಕಿಯಲ್ಲಿ ಮಹಾನುಭಾವ
ಕೀಡೆಯಂತೆ ಹುರುಪಳಿಸುತ್ತಾ ಕಿರುಚುತ್ತಾ
ಹೊರಳಾಡುತ್ತಿರುವುದ ಕಂಡು
ಸ್ಮೃತಿಗೆ ಬಂದ.

ಸ್ಮೃತಿಗೆ ಬಂದು ನೋಡಿದರೆ ಗರ್ಭಗುಡಿಯ ಒಳಗಡೆಯಿಂದ ಮಹಾನುಭಾವ ನಿಜವಾಗಿ ಕಿರುಚುತ್ತಿದ್ದಾನೆ! “ಕಾಪಾಡಿರೋ” ಎಂದು, “ಶಿವಧೋ” ಎಂದು ಗೋಳು ಗೋಳೆಂದು ದುಃಖವ ಮಾಡುತ್ತಿದ್ದಾನೆ! ಅವನ ಆರ್ತಧ್ವನಿಗೆ ಪ್ರತಿಧ್ವನಿಸಿ ಇಡೀ ಶಿವಾಲಯದ ಅಷ್ಟೂ ಕಂಬಗಳು ಸಾವಿರಪಟ್ಟು ಜೋರಾಗಿ ಕಿರಿಚಿ ಮ್ಯಾಲೆ ಕೆಳಗಿನ ಏಳೇಳು ಒಟ್ಟು ಹದಿನಾಕು ಲೋಕಂಗಳು ನಡುಗುತ್ತಾ ಇವೆ. ಒಳಗೆ ಈಗ ಕತ್ತಲೆ ಬದಲು ಬೆಂಕಿ ಹತ್ತಿ ಉರಿಯುತ್ತಾ ಇದೆ. ಅಯ್ಯೋ ಮಹಾನುಭಾವನಿಗೇನೋ ಬರಬಾರದ ಕಷ್ಟ ಒದಗಿ ಬಂದಿದೆಯೆಂದು ವೇದ್ಯವಾಗಿ ಹಿಂದೆಮುಂದೆ ನೋಡದೆ ಚಂದಮುತ್ತ ಒಳಗೆ ಹೊಕ್ಕ. ನೋಡಿದರೆ ಶಿವ ಶಿವಾ, –

ಜಗ ಜಗ ಬೆಂಕಿಯ ಜ್ವಾಲೆಯ ಚಿಲುಮೆ
ಎತ್ತರೆತ್ತರ ಚಿಮ್ಮುತ್ತಾ ಇವೆ.
ಸ್ಥಾಪನೆಗೊಂಡ ಶಿವಲಿಂಗದ ಪಕ್ಕದಲ್ಲಿ ಮಹಾನುಭಾವ
ಅಂಗಾತಾಗಿ ಅಸಹಾಯನಗಿ ಆಕಾಶದ ಕಡೆ ನೋಡುತ್ತಾ
ಶಿವದುಃಖ ಶೋಕವ ಮಾಡುತ್ತಾ ಒದ್ದಾಡುತ್ತಿದ್ದಾನೆ.
ಅವನ ಬೊಜ್ಜಿನ ಮ್ಯಾಲೆ
ಹಿಂದೆ ಕಂಡ ವಿಕಾರ ಜೀವಂಗಳು, ಪಿಶಾಚಿ ಗಣಂಗಳು
ನಿರ್ದಯವಾಗಿ ತುಳಿಯುತ್ತಾ,
ಕಾಡುಪ್ರಾಣಿಗಳಂತೆ ಕೇಕೆ ಹಾಕುತ್ತಾ, ಕುಣಿಯುತ್ತಾ ಇವೆ!
ಅವನು ನೋವಿನಿಂದ ನೊಂದು
ಬೆಂಕಿಯಲ್ಲಿ ಬೆದ ಬೆದ ಬೆಂದು
ಎಷ್ಟೆಷ್ಟು ಕಿರಿಚಿದರೆ ಅಷ್ಟಷ್ಟೂ ಉತ್ತೇಜನಗೊಂಡು
ಕುಣಿಯುತ್ತಾ ಇವೆ!
ತಕ್ಷಣ ಚಂದಮುತ್ತ ಮಹಾನುಭಾವನ ಮುಖದ ಬಳಿ ಹೋಗಿ ಮೊಳಕಾಲೂರಿ ಕುಂತು,

“ಶಿವಪಾದವೇ ನಾನೇನು ಮಾಡಲಿ?”
ಅಂದ. ಇವನ ಕಡೆ ನೋಡಲೂ ಸಾಧ್ಯವಾಗದೆ ಮಹಾನುಭಾವ
“ಹಾಡು ಹಾಡು, ಬರುತ್ತಿದ್ದರೆ ಬೇಗ ಹಾಡು”

– ಎಂದು ನೋವು ತಾಳದೆ ಒದ್ದಾಡಿದ. ಚಂದಮುತ್ತ ಇನ್ನೊಂದು ಚಿಂತಿಸದೆ ಸೊಂಟದ ಕೊಳಲು ತೆಗೆದು ತಾನು ಬಲ್ಲ ರಾಗಂಗಳ ಬಲ್ಲಂತೆ ನುಡಿಸತೊಡಗಿದ.ತುಳಿಯುತ್ತಿದ್ದ ಪಿಶಾಚಿಯ ಕಣ್ಣುಗಳಲ್ಲಿಯ ಕ್ರೌರ್ಯದ ರಭಸ ನಿಧಾನವಾಗಿ ಕಮ್ಮಿಯಾಯಿತು. ಉನ್ಮಾದವಿಳಿದು ಬಂತು. ಪರಸ್ಪರ ನೋಡಿಕೊಂಡು ನಮ್ಮ ಮದೋನ್ಮತ್ತ ಅವಸ್ಥೆಯ ಬಗ್ಗೆ ತಮಗೇ ನಾಚಿಕೆಯಾಗಿ ಮೆಲ್ಲಗೆ ಮಹಾನುಭಾವನ ಬೊಜ್ಜು ಬಿಟ್ಟು ಕೆಳಕ್ಕಿಳಿದು ಬೆಂಕಿಯಾಚೆಯ ಕಗ್ಗತ್ತಲಲ್ಲಿ ಮಾಯವಾದವು.

ಮಹಾನುಭಾವ ಇನ್ನೂ ನರಳುತ್ತಿದ್ದ. ಚಂದಮುತ್ತನ ಕೊಳಲುಲಿಯ ಮಾಯೆಯನ್ನು ಕೃತಜ್ಞತೆಯಿಂದ ಸ್ಮರಿಸಿ ಎದ್ದಾಗ ಪಾದದ ಕಡೆ ಚಂದಮುತ್ತ ಕೈಮುಗಿದು ಕುಂತಿದ್ದ. ಪ್ರೀತಿಯಿಂದ ಬಾಲಕನ ತಲೆ ನೇವರಿಸಿದ. “ನಿನಗೆ ಅಕ್ಷಯವಾಗ್ಲಿ ನನ್ನಪ್ಪ” ಎಂದು ಹೇಳುತ್ತ ಗದ್ದ ಕೆನ್ನೆ ತೀಡಿ, ಬೆವರ ಜಲ ಒರೆಸಿ “ವಯಸ್ಸೆಷ್ಟಾಯ್ತು?” ಅಂದ.

“ಹದಿನೆಂಟು”

“ಸಾಲದು ಸಾಲದು, ನೀನಿನ್ನೂ ಹಾಲು ಹೂವಿನಂಥ ಮಗ. ಇಷ್ಟು ಸಣ್ಣ ವಯಸ್ಸಿಗಾಗಲೇ ಮುದಿಜೋಗ್ತಿಯ ಗಾಳಿಗೆ ಒಳಗಾದೆಯಾ ಕಂದ?” ಎಂದು ಕಾವಿ ಬಣ್ಣದಲ್ಲಿ ಮಿಂಚುವ ಹಲ್ಲು ತೋರಿಸುತ್ತ ಜೊಲ್ಲು ಸುರಿಸುತ್ತ ಕೇಳಿದ. ಮುದಿಜೋಗ್ತಿಯ ವಿಷಯ ಕೇಳಿದ್ದೇ ಚಂದಮುತ್ತ ರೋಮಾಂಚನನಾಗಿ

“ಶಿವಪಾದವೇ ಅವಳಿರುವ ಠಿಕಾಣ ಹೇಳಿ ಕಾಪಾಡು” ಎಂದು ಮಹಾನುಭಾವನ ಪಾದ ಗಟ್ಟಿಯಾಗಿ ಹಿಡಿದುಕೊಂಡ. ಮಹಾನುಭಾವ ಬಾಲಕನನ್ನ ಒಂದು ಬಾರಿ ಇಡಿಯಾಗಿ ನೋಡಿ ಕರುಣೆಯಿಂದ ಹೇಳಿದ:

“ಎಳೆತನದಿಂದ ಈಗಷ್ಟೆ ಕದ್ದು ತಪ್ಪಿಸಿಕೊಂಡು ಬಂದಿದ್ದೀಯಾ, ತುಸು ನಿಧಾನವಾಗಿ ನಡಿಯೊ ಹುಡುಗಾ, ನೀನು ಕೇಳಿದ ಮಾತ್ರಕ್ಕೆ ಸಿಕ್ಕೋದಕ್ಕೆ ಅವಳು ಲೋಕ ಲೌಕಿಕದ ಪುಡಗೋಶಿ ವಸ್ತು ಅಂದುಕೊಂಡಿಯಾ? ತಪಸ್ಸು ಮಾಡಿದವರಿಗೇ ಸಿಕ್ಕದವಳು ನಿನ್ನಂಥ ಬಾಲಕನಿಗೆ ಸಿಗುತ್ತಾಳೇನೋ? ಆಯಿತಾಯಿತು. ಅಷ್ಟೋ ಇಷ್ಟೋ ಕಲಿತಿದ್ದೀಯಾ, ಬೆಳಿಸಿಕೊ. ನೀನು ಬೆಳಿ. ಆವಾಗ ಪ್ರಯತ್ನಮಾಡು. ಸಿಕ್ಕರೆ ಶಿಕಾರಿ! ಸಿಗದಿದ್ದರೆ ಭಿಕಾರಿಯಾಗು – ನನ್ನ ಹಾಗೆ”

“ನನಗೆ ಮುದಿಜೋಗ್ತಿಯ ದರ್ಶನವಾಗಿದೆಯೆಂತ ನಿನಗೆ ಹ್ಯಾಗೆ ತಿಳಿಯಿತು ಶಿವನೆ?”

“ನೀನು ನುಡಿಸಿದ ರಾಗದಲ್ಲಿ ಮುದಿಜೋಗ್ತಿಯ ಹಾಡಿನ ಛಾಯೆಯಿತ್ತು. ಅದನ್ನು ಅನುಕರಿಸೋದು ಅವರಿವರಿಂದ ಶಕ್ಯವಿಲ್ಲ. ಆದರೆ ನಿನ್ನ ಶಕ್ತಿಯೂ ಸಾಲದು. ಆಕೆಯ ಹಾಡು ಹಿಂಗಿತ್ತೆ?” ಎಂದು ಮುದಿಜೋಗ್ತಿಯ ಹಾಡನ್ನು ಹಾಡಿ ತೋರಿಸಿದ. ಚಂದಮುತ್ತನಿಗೆ ರೋಮಾಂಚನವಾಗಿ ಕರಮುಗಿದು “ಹೌದು ಶಿವನೆ!” ಅಂದ. “ಹಾಂಗಲ್ಲ ಹಿಂಗಿತ್ತೆ ನೋಡೊ” ಎಂದು ಅದೇ ರಾಗವನ್ನು ಬೇರೆ ರೀತಿ ಹಾಡಿ ತೋರಿಸಿದ. ಚಂದಮುತ್ತ “ಹೌಂದು ಶಿವನೇ” ಅಂದ. “ಹಾಂಗಲ್ಲ ಹಿಂಗಿತ್ತೆ ನೋಡು” ಎಂದು ಆ ರಾಗವನ್ನ ಇನ್ನೊಂದು ರೀತಿ ಹೇಳಿದ. ಚಂದಮುತ್ತ ಅದಕ್ಕೂ “ಹೌಂದು ಶಿವನೇ” ಅಂದ.

“ಮೂರೂ ಮುದಿಜೋಗ್ತಿಯ ಹಾಡುಗಳೇನೋ ಕಂದಾ?”

“ಅಲ್ಲ, ಮೊದಲನೇದ್ದು ಅವಳ ಹಾಡು, ನಂತರದ ಎರಡು ನಿನ್ನ ಅನುಕರಣೆ” ಅಂದ.

ಬಾಲಕನ ಮಾತು ಕೇಳಿ ಮಹಾನುಭಾವನಿಗೆ ಮೆಚ್ಚುಗೆ, ಅಸೂಯೆ ಎರಡೂ ಆದವು. ಚಂದಮುತ್ತನ್ನ ತಬ್ಬಿ, ಎದೆಗವಚಿಕೊಂಡು ನೆತ್ತಿಯ ಮೂಸಿ ತಲೆ ಬೆನ್ನು ತೀಡಿ ಹೃತ್ಪೂರ್ವಕ ಹರಸಿ “ಬರೋಬ್ಬರಿ ಹೇಳಿದೆ ಕಂದ” ಎಂದ.

“ಪಿಶಾಚಿಗಳ್ಯಾಕೆ ನಿನ್ನ ಬೊಜ್ಜಿನ ಮ್ಯಾಲೆ ಕುಣಿದವು ಶಿವನೆ?”

“ಅದೊಂದು ದೊಡ್ಡ ಕಥೆ ಕಂದಾ. ಚಿಕ್ಕಂದು ನಾನು ಅಷ್ಟೋ ಇಷ್ಟೋ ಹಾಡುತ್ತಿದ್ದೆ. ನಾನು ಹಾಡುತ್ತಿದ್ದ ಸಭೆಗೆ ನುಗ್ಗಿ ಮುದಿಜೋಗ್ತಿ ಅಗಳೆ ನೀನು ನುಡಿಸಿದೆಯಲ್ಲ ಆ ಹಾಡನ್ನ ಹಾಡಿ ನನಗೆ ಅಣಗಿಸಿ ಮಾಯವಾದಳು. ಅಂದಿನಿಂದ ಅವಳ ಕಂಡು ಅವಳಿಂದ ಹೆಚ್ಚಿನ ವಿದ್ಯವ ಕಲಿವ ಹುಚ್ಚು ಹತ್ತಿತು. ಬೇಕಾದಷ್ಟು ಅಲೆದಾಡಿದೆ. ಈ ಮಧ್ಯೆ ಅಭ್ಯಾಸವಾಗಿ ತುಸು ಹಾಡುತ್ತಿದ್ದೆ. ಅಷ್ಟಕ್ಕೆ ರಾಜಮನ್ನಣೆ, ವಿದ್ವನ್ಮನ್ನಣೆ ದೊರೆತು ಅದರ ಅಮಲಿನಲ್ಲಿ ಮುದಿಜೋಗ್ತಿಯ ಹುಚ್ಚನ್ನೇ ಮರೆತುಬಿಟ್ಟೆ.

ಮನ್ನಣೆಗಳ ಅಹಂಕಾರ ತಲೆಗೇರಿ ಕೀರ್ತಿಯ ಕಾಮನೆಗಳಿಂದ ಖಾಯಿಲೆ ಬಿದ್ದೆ. ನಾನು ಹಾಡಿದ್ದೇ ರಾಗ ಹೇಳಿದ್ದೇ ವಿದ್ಯೆಯಾಗಿ ಅನೇಕ ರಾಗಂಗಳ ಕೆಡಿಸಿ ಹಾಡಿದೆ. ಅವೆಲ್ಲ ವಿಕಾರಗೊಂಡು ಪಿಶಾಚಿ ಗಣಂಗಳಾಗಿ ಈಹಿಂಗೆ ಅಲೆದಾಡುತ್ತಿವೆ. ಪ್ರತಿ ಅಮವಾಸ್ಯೆಯೆಂದು ನನ್ನ ಬೊಜ್ಜಿನ ಮ್ಯಾಲೆ ಕುಣಿದು ಹಿಂಸೆ ಕೊಡುತ್ತವೆ.”

“ಇವುಗಳಿಂದ ನಿನಗೆ ಮುಕ್ತಿ ಇಲ್ಲವೆ ಶಿವನೆ?”

“ಇದೆ. ಅವುಗಳನ್ನು ಶುದ್ಧ ರೂಪದಲ್ಲಿ ಹಾಡಿದರೆ ಅವುಗಳಿಗೆ ಮುನ್ನಿನ ರೂಪ ಬಂದು ನನ್ನನ್ನು ಬಿಡುಗಡೆಗೊಳಿಸುತ್ತವೆ”

“ಶುದ್ಧ ರೂಪ ಸಿದ್ಧಿಸಿದ್ದು ಹೆಂಗೆ ತಿಳಿಯುತ್ತದೆ?”

“ಭೃಂಗಿ ಬಂದು ಕುಣಿಯಬೇಕು”

“ಅವನ್ಯಾರು ಶಿವನೆ?”

“ಶಿವನ ಖಾಸಾ ಶಿಷ್ಯ, ಮೂಳೆ ರೂಪದ ಭಕ್ತ, ನೋಡಿದಾಗ ನಿನಗೇ ತಿಳಿಯುತ್ತದೆ. ಹಾಡು ಕೇಳಿ ಆನಂದವಾಗಿ ಅವನು ಬಂದು ಕುಣಿದ ಅಂದರೆ ವಿಕಾರ ರಾಗಂಗಳಿಗೆ ಅವುಗಳ ಮೂಲರೂಪ ಬರುತ್ತದೆ, ಆಗಲೇ ನಾನು ಮುಕ್ತ”.

“ಅಯ್ಯೋ ನಾನೇ ನಿನ್ನ ಮುಕ್ತಿಗೆ ಅಡ್ಡಿಯಾದೆನಲ್ಲ ಶಿವನೆ!”

“ಇಲ್ಲ, ತಪ್ಪುಗಳ ಸರಿಪಡಿಸಲು ನನ್ನೊಬ್ಬನಿಂದಲೇ ಆಗದೆಂದು ನನಗೆ ಗೊತ್ತಾಯಿತು. ನನ್ನ ಮುಕ್ತಿ ಮುಖ್ಯವಲ್ಲ. ರಾಗಂಗಳಿಗೆ ಶುದ್ಧರೂಪ ಬರಬೇಕು. ಈಗ ನನ್ನೊಂದಿಗೆ ನೀನೂ ಇದ್ದೀಯಲ್ಲ. ಇಬ್ಬರೂ ಯತ್ನಿಸುವ ಬಾ”.