ಮೂರೂ ಕಣ್ಣು ಮುಕ್ಕಣ್ಣು ಮುಚ್ಚಿಕೊಂಡು
ಮುಖದ ಮ್ಯಾಲೆ ಜುಟ್ಟುಜಡೆ ಚೆಲ್ಲಿಕೊಂಡು
ಜಪತಪವ ಮಾಡುವ ಶಿವನೇ,
ಒಂದಾದರು ಕಣ್ಣು ತೆರೆದು
ಕೆಳಗೆ ದಿಟ್ಟಿಸಿ ನೋಡು,
ಶಿವಾಪುರದ ಕಾಡಿನಲ್ಲಿ ಏನೇನು ನಡೆಯುತ್ತಿದೆ?

ಈದ ಹಸು ಪುಣ್ಯಕೋಟಿ
ಕರು ಕಳೆದುಕೊಂಡು
ಅನ್ನಾಹಾರ ಬಿಟ್ಟು ನಿದ್ರೆ ನೀರು ಬಿಟ್ಟು
ಅಂಬಾ ಎಂದು ಹಂಬಲಿಸುತ್ತ
ಧಾರಾವತಿ ಕಣ್ಣೀರು ಜಲವ ಸುರಿಸುತ್ತ
ಕರುಳು ಬಾಯಿಗೆ ಬರುವಂತೆ
ಬಾಯಿ ಬಾಯಿ ಬಿಡುತೈದಾಳೆ ತಾಯಿ.

ರೂಪುರೇಖೆ ಸುದ್ದುಳ್ಳ ಸುಳಿಯ ನನ
ಹಾಲು ಹಸುಳೆ ಕರುವೇ
ನೇರ ಹಾರಿದೆಯ ಹುಲಿಯ ಬಾಯಿಗೇ
ಗಾಳಿ ತುಂಬಿ ಕಿವಿಗೆ |
ಬೇಲಿ ಹಾರಿ ಹೌಹಾರಿ ಧುಮುಕಿದೆಯೊ
ನೀರಿನ ತಿರುಗಣಿಗೆ ||
– ಎಂದು,
ಬರಿದಾದ ನನ್ನ ಭಾಗ್ಯವ ಹಿಂದಿರುಗಿ
ಕೊಡು ಶಿವನೇ ಎಂದು,
ಕೊಡದಿದ್ದ ಪಕ್ಷದಲ್ಲಿ
ನಾಲಗೆ ಹಿರಿದು ಪ್ರಾಣ ಬಿಡುವನೆಂದು,
ಪ್ರಾಣ ಬಿಟ್ಟ ಪಕ್ಷದಲ್ಲಿ
ನಿನಗ್ಯಾರೂ ಕಾಸಿನ ದೀಪ ಹಚ್ಚದಿರಲೆಂದು
ಕೈಯೆತ್ತಿ ಕರ ಮುಗಿಯದಿರಲೆಂದು
ಶಪಿಸುತ್ತ
ಗೋಳು ಗೋಳೆಂದು ಗೋಳಾಡುತಾಳೆ ತಾಯಿ
ಬಾನು ಕರಗುವಂತೆ
ಬನ ಮರಗುವಂತೆ.
ಕಣ್ಣು ತೆರೆದು ನೋಡು ಶಿವನೇ.